ಕರ್ಣಾಟಕದ ಚಿತ್ರಕಲೆ
ಶಿವರಾಮ ಕಾರಂತ
ಕರ್ಣಾಟಕದ ಚಿತ್ರಕಲೆ
ಮೇಲಿನ ಶಿರೋನಾಮೆಯೇ ತುಸು ವಿಚಿತ್ರವಾಗಿ ಕಾಣಿಸಬಹುದು. ಕರ್ನಾಟಕ ಒಂದು ದೇಶ : ಕರ್ಣಾಟಕ ಇಲ್ಲವೆ ಕನ್ನಡ ಅಲ್ಲಿನ ಬಹುಜನರ ಭಾಷೆ. ಆ ಭಾಷೆಗೆ ಸಂಬಂಧಿಸಿದಂತೆ-ಸಾಹಿತ್ಯ ಎಂಬ ಮಾತನ್ನು ಬಳಸುವಾಗ ಯಾವ ಅಪಾರ್ಥವೂ ಕಾಣಿಸದು. ಆದರೆ ಭಾಷೆಯ ಇತಿಮಿತಿಗಳಿಲ್ಲದ ಕಲೆಯಾದ ‘ಚಿತ್ರ’ವನ್ನು ಕುರಿತು ಹೇಳುವಾಗ ಮೇಲಿನ ಮಾತು ತುಸು ವಿಚಿತ್ರವಾಗಿಯೇ ಕಾಣಿಸುವುದು ಸಹಜ. ಸಂಗೀತ-ಕೆಲವೊಮ್ಮೆ ಸಾಹಿತ್ಯದಿಂದ ಬದ್ಧವಾದಾಗ ಅದನ್ನು ನಾವು ‘ಕರ್ಣಾಟಕಿ’ ಎಂದು ಕರೆದರೆ ತಪ್ಪಾಗದು. ಆದರೆ ಹಾಗೆ ಬದ್ಧವಾಗದ ಸಂಗೀತವನ್ನು ‘ಕರ್ಣಾಟಕಿ’ ಎಂದು ಕರೆಯುವಾಗ ಅದು ಕನ್ನಡ ಮಾತನಾಡುವ ಜನರ ನಿವಾಸದ ಮೇರೆಯನ್ನು ಮೀರಿ ಹಬ್ಬಿಕೊಂಡಿರುವುದನ್ನು ಕಾಣುತ್ತೇವೆ. ಶಿಲ್ಪಕ್ಕೆ, ವಾಸ್ತುವಿಗೆ-ನಾಡಿನ ಇಲ್ಲವೆ ನುಡಿಯ ಇತಿಮಿತಿಗಳಿಲ್ಲ; ಅದರಂತೆ ಚಿತ್ರಕಲೆಯ ಸೀಮೆ; ಅದು ನಾಡು-ನುಡಿಗಳೆರಡರ ಸೀಮೆಯನ್ನೂ ಮೀರಿ ಪಸರಿಸಬಹುದಾದ ಒಂದು ಕಲೆ.
ಈ ಲೇಖಕ ತನ್ನ ಮಾತೃಭಾಷೆಯಿಂದ, ಅದೇ ಭಾಷೆಯನ್ನಾಡುವ ಒಂದು ವಿಶಾಲ ಜನವರ್ಗದೊಡನೆ ಬೆಳೆದು ಬಂದವ. ಅವನಿಗೆ ಅದರ ಹೊರಗಣ ಜನರೊಡನೆ ಸಂಪರ್ಕ ಕಡಿಮೆ-ಎಂಬುದರಿಂದ ಮೇಲಿನ ತಲೆ ಬರಹವನ್ನು ಇರಿಸಿಕೊಳ್ಳಬೇಕಾಯಿತು. ಇದು ನುಡಿಯು ಪ್ರಚಾರದಲ್ಲಿರುವ ಭೂಮಿಯನ್ನೇ ಅನುಸರಿಸಿಕೊಂಡಿರದ ಒಂದು ವಿಷಯವಾಗಿದ್ದರೂ, ಈ ಕಲೆಯಲ್ಲಿ ಬಳಕೆಯಾಗುವ ಮಾಧ್ಯಮ ರೇಖೆವರ್ಣಗಳಿಂದ ರೂಪುಗೊಂಡು ಭಾವ ಪ್ರಕಟಣೆಗೆ, ಪ್ರಚೋದನೆಗೆ ಕಾರಣವಾಗುವಂಥ ಒಡವೆ, ಭೌಗೋಲಿಕವಾದ ಮಿತಿ ಅದಕ್ಕಿರಲಾರದು. ಆದರೆ ಅದನ್ನು ಸೃಷ್ಟಿಮಾಡುವ ಜನಗಳ ಸಂಸ್ಕಾರದ ಮಿತಿ ಅದರಲ್ಲಿ ಕಾಣಿಸಿಕೊಳ್ಳುವುದು ಸಹಜ. ಆ ದೃಷ್ಟಿಯಿಂದ ನಮ್ಮ ಚಿತ್ರಕಲೆಯ ಮಿತಿ ಭಾರತದ ವಿಸ್ತಾರಕ್ಕೂ ಹಬ್ಬಬಹುದು. ಈ ಮಿತಿ ಚಿತ್ರಕಾರನು ಸೃಷ್ಟಿಸುವ ಚಿತ್ರಗಳ ವಸ್ತು ಇಲ್ಲವೆ ವಿಷಯಕ್ಕೆ ಅನ್ವಯಿಸುವುದು ; ಆತ ಇಲ್ಲಿನ ನೆಲ, ಇಲ್ಲಿನ ಗಿಡಮರ, ಮನುಷ್ಯರು, ಪ್ರಾಣಿಗಳು ಅವರು ಆಡಿದ ಜೀವನ ನಾಟಕ, ಅವರು ಕಲ್ಪಿಸಿಕೊಂಡ ದೇವಾನುದೇವತೆಗಳು ಇವುಗಳಿಂದ ಆರಿಸಿಕೊಳ್ಳುತ್ತಾನೆ ಎಂಬುದರಿಂದ. ಆಗ-.’ಕೃಷ್ಣ-ರಾಧೆಯರಂತಹ ಕಾಲ್ಪನಿಕ ಪ್ರಣಯಿಗಳನ್ನು ಚಿತ್ರಿಸುವಾಗ, ಆ ಕಲ್ಪನೆ ಅದಕ್ಕೆ ಮೂಲವಾದ ಭಾಗವತದ ಕತೆಯನ್ನು ಹೊಂದಿಕೊಳ್ಳಬಹುದು. ಅವುಗಳಲ್ಲಿ – ಕೃಷ್ಣ ಗೋವಳನೆಂದೋ, ದೇವರ ಅವತಾರವೆಂದೋ ಹೇಳಿರುವುದರಿಂದ ಅವನ ಉಡುಗೆ ಅಲಂಕಾರಗಳು ಭಾರತದ ಮುದ್ರೆ ತಾಳಬಹುದು. ಆದರೂ ಇದೇ ವಿಷಯವನ್ನು ಕಾಂಗ್ರಾದ ಒಬ್ಬ ಚಿತ್ರಕಾರನೋ, ಗುಜರಾತಿನವನೋ, ಬಾಂಶೋಳಿಯವನೋ ಆರಿಸಿಕೊಂಡರೆ ಆತ ಕೃಷ್ಣ-ರಾಧೆಯರಿಗೆ ತೊಡಿಸುವ ವೇಷ-ಭೂಷಣ ಬೇರೆ ಬೇರೆಯೇ. ಅಲ್ಲಿನ ಜನರಂತೆ ಅವರ ವೇಷ ಭೂಷಣಗಳು, ಕನ್ನಡ ಚಿತ್ರಕಾರನ ಕೈಯಲ್ಲಿ ಅವು ಕನ್ನಡ ನಾಡಿನ ಗಂಡು ಹೆಣ್ಣಿನಂತೆ ರೂಪುಗೊಳ್ಳುತ್ತವೆ.
ಆ ವ್ಯಕ್ತಿಗಳ ದೇಹ ಸೌಂದರ್ಯವನ್ನು ಕಲ್ಪಿಸಿಕೊಂಡಾಗ-ನಮ್ಮ ಸೌಂದರ್ಯ ಪ್ರಜ್ಞೆ, ಉತ್ತರ ಹಿಂದೂಸ್ಥಾನದವರಿಂದ ಬೇರೆಯಾಗಬಹುದು. ಇಷ್ಟು ಚಿತ್ರಕಾರನ ಭೌಗೋಲಿಕ ಆವರಣದ, ಐತಿಹಾಸಿಕ ಸಾಮಾಜಿಕ ಆವರಣದ ಇತಿಮಿತಿಗಳು, ಇವು ಆತನ ಚಿತ್ರಗತ ಮನುಷ್ಯರ ಮೇಲೆ ಪ್ರಭಾವ ಬೀರುತ್ತವೆ. ಆ ನಿರ್ಮಿತಿ-ಗಿಡಮರ, ಮುಗಿಲು, ಆಕಾಶ, ನವಿಲು, ಗಿಳಿಗಳಂಥ ವಸ್ತುಗಳಿಗೆ ಮಾತ್ರ ಅಷ್ಟಾಗಿ ಅನ್ವಯಿಸಲಾರವು.
ಭೌಗೋಲಿಕ ಮಿತಿ ಜನರಿಗೆ, ಜನರ ಉಡುಗೆ ತೊಡುಗೆಗಳಿಗೆ ಕಾರಣವಾದಾವು. ಅವೂ ಕೂಡ ಶತಮಾನ ಶತಮಾನಗಳಲ್ಲಿ ಬದಲಾಗುತ್ತಲೇ ಬಂದಿವೆ. ಹಾಗಾಗಿ ಚಾರಿತ್ರಿಕ ಸಂಗತಿಯೂ ಒಂದು ವಿಶಿಷ್ಟ ಪ್ರಭಾವ ಬೀರುತ್ತದೆ. ರಜಪೂತ ಕೃಷ್ಣ ರಾಧೆಯರನ್ನು ಕಂಡರೆ ಆ ವಿಷಯ ನನಗೆ ಸ್ಪಷ್ಟವಾದೀತು. ರಾಧೆ ಮುಸಲ್ಮಾನ್ ಬೀಬಿಯಂತೆ ಸುರವಾಲು ಅಥವಾ ಲಂಗ ಧರಿಸಿ, ರವಿಕೆಯ ಮೇಲೆ ಅರೆಮುಸುಕಿನ ಶಲ್ಯೆ ಸುತ್ತಿದರೆ ಕನ್ನಡ ನಾಡಿನ ನಮಗೆ ಹೀಗೇಕಾಯಿತು ಎನಿಸೀತು. ಅದೇ
ರಜಪುತಾನದ ಒಬ್ಬ ಚಿತ್ರಕಾರ ಮುಸಲ್ಮಾನರು ಭಾರತಕ್ಕೆ ಬರುವ ಮುಂಚೆ ಅದೇ ರಾಧಾಕೃಷ್ಣರ ಚಿತ್ರ ಬರೆಯುತ್ತಿದ್ದರೆ ಈ ಸಾಂಸ್ಕೃತಿಕ ಮುದ್ರೆ ಅವುಗಳ ಮೇಲೆ ಬೀಳುತ್ತಿರಲಿಲ್ಲ.
ಹಾಗಿದ್ದರೆ ‘ಕಲೆ ವಿಶ್ವವ್ಯಾಪಿ’ ಎಂಬ ಮಾತಿಗೆ ಅರ್ಥವೇನು? ಸಂಸ್ಕೃತಿ ಕಾಲದೇಶಗಳಿಂದ ಸೀಮಿತವಾದುದು. ಕಲೆ ಅದರ ಪರಿಸರದಲ್ಲಿ ಬೆಳೆಯುವಂಥದು. ಇಲ್ಲಿ ನಾವು ಉಡುಗೆ, ತೊಡುಗೆ, ದೇಶೀಯ ಜನಗಳ ಆಕಾರ ಇವುಗಳ ಕಲ್ಪನೆಯನ್ನು ಮರೆತು ಮತ್ತೊಂದು ಸಂಗತಿಯನ್ನು ನೆನೆಯುವ ಅವಶ್ಯಕತೆ ಬರುತ್ತದೆ. ಆದು-ಚಿತ್ರಗತರಾದ ಅದೇ ರಾಧಾ-ಕೃಷ್ಣರನ್ನು ಮನುಷ್ಯ ಕುಲಕ್ಕೆ ಸೇರಿಸಿಕೊಂಡು ಮಾಡಿಕೊಂಡ ನಮ್ಮ ಕಲ್ಪನೆಯಿಂದಾಗಿ ಬರುವ ಅನಿವಾರ್ಯ. ನನ್ನಂತೆ, ನಿಮ್ಮಂತೆ ಕಲಾವಿದನೂ ದೇವರನ್ನು ಕಂಡವನಲ್ಲ. ದೇವರು ಮನುಷ್ಯನಾಗಿ ಹುಟ್ಟಿದಂತೆ ಭಾವಿಸಿಕೊಂಡವ. ಆದುದರಿಂದ ಆತ ದೇವರಿಗೆ ನಮ್ಮ ನಿಮ್ಮಂತಿರುವ ಮನುಷ್ಯರ ಆಕಾರವನ್ನೇ ಕೊಟ್ಟ. ನಮ ನಿಮಗಿರುವ ಮಾನಸಿಕ ಗುಣಗಳನ್ನೇ ಆರೋಪಿಸಿದ. ರಾಧೆ-ಕೃಷ್ಣರ ಪ್ರಣಯ ಅದೆಷ್ಟೇ ಉದಾತ್ತ ಪ್ರಣಯವಾಗಿದ್ದರೂ, ಪ್ರಣಯದ ಕೋಟಲೆಗೆ ಗುರಿಯಾಗಲೇ ಬೇಕಿಲ್ಲದ ಅವರನ್ನು ಮಾನವೀ ಪ್ರಣಯಿಗಳಂತೆ ಶೃಂಗಾರ, ವಿರಹಗಳ ತೊಳಲಾಟಕ್ಕೆ ಗುರಿಪಡಿಸಿದ. ಆ ಕೋಟಲೆ ನಲುಗಳಿಂದ ತೊಳಲಾಡುವ ಚಿತ್ರಕಾರ ತನಗೆ ಅದರ ಚೆಲುವು, ನೋವುಗಳ ಪರಿಚಯವಿತ್ತೆಂಬುದರಿಂದ, ಅದಿರಬಹುದಾದ ನಮ ನಿಮಗೂ ಅಂಥ ಅನುಭವವಾಗಲಿ ಎಂದು ಚಿತ್ರದ ಮೂಲಕ ತೋರಿಸಿಕೊಟ್ಟ. ಈ ವಿಷಯಕ್ಕೆ ಬಂದಾಗ, ಗಂಡು ಹೆಣ್ಣುಗಳ ತೊಳಲಾಟ-ಅವನ್ನು ಆದರ್ಶ ದೈವಭಕ್ತರ ತೊಳಲಾಟವನ್ನಾಗಿ ಮಾಡಿ ತೋರಿಸಿದಾಗಲೂ ಕೂಡ-ಅದು ಜಗತ್ತಿಗೆಲ್ಲಾ ತಿಳಿಯಬಹುದಾದ ವ್ಯಾಪಕ ವಿಷಯವಾಗುತ್ತದೆ. ಕರ್ಣಾಟಕ ಭಾರತದಂಥ ನುಡಿ ದೇಶಗಳ ನಿರ್ಬಂಧವನ್ನು ಅದು ಕಳಚಿಕೊಳ್ಳುತ್ತದೆ.
ಇನ್ನು ಎರಡನೆಯದಾಗಿ, ಗೆರೆ ಬಣ್ಣ ಛಾಯೆ ಬೆಳಕು–ಇವಕ್ಕಂತೂ ಕಾಲ ದೇಶಗಳ ಪರಿಮಿತಿಯೇ ಇಲ್ಲ. ಅವುಗಳಿಗೆ ಮಿಡುಕಬಲ್ಲ ಮನಸ್ಸುಗಳು ಎಲ್ಲೆಲ್ಲಿಯೂ ಇರಬಹುದು. ಹಾಗಾಗಿ-ಕಲೆ ವಿಶ್ವವ್ಯಾಪಿ ವಸ್ತುವಾಗುತ್ತದೆ. ಈ ಮಾಧ್ಯಮದ ಪರಿಕರಗಳಿಗೆ ಮಿಡುಕಬಲ್ಲ ಸಂಸ್ಕಾರವುಳ್ಳವರಿಗೆ ದೇಶಕಾಲಗಳನ್ನು ಮೀರಿದಂಥ ಭಾವ ವಿನಿಮಯ ಸಾಧ್ಯವಾಗುತ್ತದೆ. ಆದರೆ ಅಲ್ಲಿಯ-ಆ ಮಾಧ್ಯಮದ ಬಣ್ಣ ರೇಖೆ ಛಾಯೆ ಬೆಳಕು ಅಂತರ ಪ್ರತ್ಯಂತರಗಳನ್ನು ಬೇರೆ ಬೇರೆ ದೇಶದ ಜನ, ಬೇರೆ ಬೇರೆ ಕಾಲದ ಜನ ಬಳಸಿಕೊಂಡ ರೀತಿ ಬೇರೆ ಬೇರೆಯೇ. ಅವು ಕೂಡ ತಮ್ಮ ತಮದೇ ಆದ ಸಂಪ್ರದಾಯವನ್ನು ಕಟ್ಟಿಕೊಂಡು ಬೆಳೆದು ಬಂದಿವೆ. ಚಿತ್ರಕಲೆಯನ್ನು ಮೆಚ್ಚುವುದಕ್ಕೆ
-ವಿವಿಧ ಶೈಲಿಗಳನ್ನು ಯಾರು ಏಕೆ ಬಳಸಿದರು, ಹೇಗೆ ಬಳಸಿದರು, ಒಂದೊಂದು ಶೈಲಿಯ ಪರಿಣಾಮಕಾರಕತ್ವ ಎಲ್ಲೆಲ್ಲಿ ಇದೆ ಎಂಬೆಲ್ಲ ತಿಳಿವಳಿಕೆ ಬೇಕಾಗುತ್ತದೆ.
“ನನಗೆ ಈ ಚಿತ್ರ ರುಚಿಸುವುದಿಲ್ಲ, ಇದಕ್ಕೆ ಅರ್ಥವಿಲ್ಲ” ಎಂಬ ವೈಯಕ್ತಿಕ ತೀರ‍್ಮಾನ ನಮ್ಮ ನಿರಭಿರುಚಿಯನ್ನು ಸೂಚಿಸಬಹುದೇ ಹೊರತು ಕಲೆಯನ್ನು ಅಳೆಯುವ ಮಾಪಕವಾಗಲಾರದು.
ಕರ್ಣಾಟಕದ ಚಿತ್ರಕಲೆಯನ್ನು ಕುರಿತು ತಿಳಿಯುವಾಗಲೂ ಇದೇ ಅಡಚಣೆ ಬರುತ್ತದೆ. ಈ ಕೆಲಸಕ್ಕೆ ಆಧುನಿಕ ಕ್ಯಾಲೆಂಡರು ಚಿತ್ರಗಳ ದೃಷ್ಟಿಯಾಗಲಿ, ಇದು ವಾಸ್ತವಿಕ ರೂಪವಲ್ಲ ಎಂಬ ಫೋಟೋಗ್ರಫಿ ದೃಷ್ಟಿಯಾಗಲಿ ನನಗೆ ಯಾವ – ಸಹಾಯವನ್ನೂ ಮಾಡಲಾರವು. ಅಂಥವರು ಪ್ರತಿ ಬಾರಿಯೂ ಕಲೆ ಅನುಕರಣೆಯಲ್ಲಿ “ಸೃಷ್ಟಿ” ಎಂಬ ಮಾತನ್ನು ನೆನೆಯಬೇಕು.
ಕಲಾವಿದ ತನ್ನ ಶೈಲಿಯಲ್ಲಿ ತನಗೆ ಒಪ್ಪಿಗೆಯಾದ ವಿಷಯವನ್ನು ಹೇಳುವ ಅಧಿಕಾರವುಳ್ಳವ; ಅವನ ಬದುಕಿನ ಯಾವುದೋ ಅನುಭವದ ಅಭಿವ್ಯಕ್ತಿ ಅವನ ಚಿತ್ರ; ನಮ್ಮನ್ನು ಮರುಳುಗೊಳಿಸಿ ನಮ್ಮಿಂದ ‘ಭಲೇ’ ಅನಿಸಿಕೊಳ್ಳುವುದೇ ಅವನ ಕಲೆಯ ಉದ್ದೇಶವಿರಲಾರದು-ಎಂಬುದೂ ತಿಳಿದಿರಬೇಕಾದ ವಿಷಯ
ಚಿತ್ರಕಲೆ ನೂರಾರು ದೇಶಗಳು ನೂರಾರು ಕಾಲಗಳಲ್ಲಿ ಸೃಷ್ಟಿಗೊಳ್ಳುತ್ತಲೇ ಬಂದಿದೆ. ಅವುಗಳೆಲ್ಲವೂ ನಮ್ಮ ಜನಗಳ ಮುಂದೆ ಒಂದೇ ರೀತಿ ಉಳಿದುಬಂದಿದ್ದರೆ, ಕಂಡು ರೂಢಿಸಿಕೊಳ್ಳುವ ಅನುಕೂಲತೆಯಾದರೂ ಇರುತ್ತಿತ್ತು. ವಾಸ್ತವವೇ ಸತ್ಯವೆಂಬ ಇವನಷ್ಟು ರುಚಿಹೀನ ಜನ ನಾವಾಗುತ್ತಿರಲಿಲ್ಲ. ಶಿಲ್ಪಕ್ಕಿಂತಲೂ ಮೊದಲು ತಲೆಯೆತ್ತಿದ ಈ ಕಲೆ ನಾಗರಿಕತೆ ಕಾಣಿಸುವ ಮೊದಲೇ ಮನುಷ್ಯನ ಮನಸ್ಸನು ಆಕರ್ಷಿಸಿತ್ತು. ಇಪ್ಪತ್ತು-ಮೂವತ್ತು ಸಾವಿರ ವರ್ಷಗಳ ಇತಿಹಾಸ ಅದರದ್ದು. ಆದರೆ ಯಾವ ದೇಶವನ್ನೇ ನೋಡಿದರೂ ಈ ದೀರ್ಘ ಇತಿಹಾಸದಲ್ಲಿ ಪ್ರತಿ ಸಾವಿರ ವರ್ಷದಲ್ಲಾಗಲೀ, ಶತಮಾನದಲ್ಲಾಗಲಿ ಅದು ಅಖಂಡವಾಗಿ ಬೆಳೆಯುತ್ತ ಉಳಿಯುಯಗಯ ಬಂದಿಲ್ಲ. ಸಾವಿರಸಾವಿರ ವರ್ಷ ಜನಗಳ ಗುಂಪು ಅದನ್ನು ಮರೆತೇ ಬಂದಿದ್ದೂ ಉಂಟು. ಮೇಲಾಗಿ ಕಾಲದ ಹಾವಳಿ ಬಹುಮಟ್ಟಿನ ಸೃಷ್ಟಿಗಳನ್ನು ಧ್ವಂಸ ಮಾಡಿದೆ.
ಈಗ ನಮ್ಮ ಕರ್ಣಾಟಕವನ್ನು ಕುರಿತು ಹೇಳುವುದಾದರೆ-ಕನ್ನಡ, ಕರ್ಣಾಟಕ ಎರಡೂ ಹುಟ್ಟುವ ಮೊದಲು ಚಿತ್ರಕಲೆ ಇಲ್ಲಿ ಕಾಣಿಸಿಕೊಂಡಿತ್ತು. ಉತ್ತರ ಕರ್ಣಾಟಕದ ಬಂಡೆಗಳ ಆಸರೆಯಲ್ಲಿ, ಅಲ್ಲಿ ಬದುಕಿದ್ದ ನವಶಿಲಾಯುಗದ ಮನುಷ್ಯರು ಚಿತ್ರ ಬರೆದು ಹೋಗಿದ್ದಾರೆ. ಅಂಥದು ಇದೆ ಎಂಬುದೇ ನಮಗೆ ತಿಳಿದಿಲ್ಲ.
ಅಲ್ಲಿಂದ ಮುಂದಕ್ಕೆ ಸರಿದರೆ, ಕನ್ನಡ ಸೀಮೆಯ ಒಳಗೆ ಚಾಲುಕ್ಯರ ಕಾಲದಲ್ಲಿ ಮಂಗಲೇಶ ಕಟ್ಟಿಸಿದ ಬಾದಾಮಿಯ ಮೂರನೆಯ ಗುಹೆಯಲ್ಲಿ ಮಾಡಿನ ವಸಾರೆಯ ಕಳಗಡೆ ಒಂದೆರಡು ಭಿತ್ತಿ ಚಿತ್ರಗಳು ಉಳಿದಿವೆ. ಇವತ್ತು ಅವು ಏನೂ ಗುರುತಿಸಲಾಗದಷ್ಟು ಕಡುಪುಗೊಂಡು ನಷ್ಟವಾಗಿವೆ. ಚಿತ್ರಕಲೆಯ ಮುಂದಿನ ಕುರುಹುಗಳನ್ನು ಗುಡಿ ಗೋಡೆಗಳಲ್ಲಿ ಕಾಣಲು ಹದಿನಾರನೆಯ ಶತಮಾನವೇ ಸರಿಯಬೇಕಾಗುತ್ತದೆ.
ಹದಿನೆಂಟು, ಹತ್ತೊಂಭತ್ತನೆಯ ಶತಮಾನಗಳು ನಿನ್ನೆ ಮೊನ್ನೆಯ ದಿನಗಳು. ಆ ಕಾಲದ ಕೆಲವಾರು ಭಿತ್ತಿ ಚಿತ್ರಗಳು ಬಿಜಾಪುರ ಕುಮ್ಮಟಗಿ ನಿಪ್ಪಾಣಿ ಸಿಬಿ ಶ್ರೀರಂಗ ಪಟ್ಟಣ ಶ್ರವಣಬೆಳಗೊಳಗಳಲ್ಲಿ ಕಾಣಸಿಗುತ್ತವೆ. ಎಂದರೆ, ಏಳನೆಯ ಶತಮಾನದಲ್ಲಿ ಅದು ಕಾಣಿಸಿದ ಕಾಲಕ್ಕೆ ನವಶಿಲಾಯುಗದಿಂದ ಒಂದೂವರೆ-ಎರಡು ಸಾವಿರ ವರ್ಷಗಳ ನಿಸ್ತಬ್ಧತೆಯನ್ನೇ ಕಾಣುತ್ತೇವೆ. ಬಾದಾಮಿಯ ಬಳಿಕ ತಿರುಗಿ ಏಳುನೂರು -ಎಂಟುನೂರು ವರ್ಷಗಳ ಅಸ್ತಮಾನಕಾಲ ಬರುತ್ತದೆ. ಭಿತ್ತಿಚಿತ್ರಗಳ ಮಟ್ಟಿಗಂತೂ ಈ ಅಸ್ತಮಾನ ತೀರ ನಿಜ.
ಇನ್ನು ಪುಟ್ಟ ಚಿತ್ರಗಳ ಇತಿಹಾಸವನ್ನು ಇಣುಕಿ ಹುಡುಕುವುದಾದರೆ ಆ ಕಾಲದಲ್ಲಿ ಅಲ್ಲಿ ಇಲ್ಲಿ ಚಿತ್ರ ಮಾಧ್ಯಮದ ಮೂಲಕ ತಮ್ಮ ಭಾವ ಜೀವನಕ್ಕೆ ಮುಖ ಕೊಟ್ಟವರಿಲ್ಲವೆಂದಲ್ಲ, ಆದರೆ ಬಲು ಬಲು ವಿರಳ.
ಜೈನಧರ್ಮಗ್ರಂಥವಾದ ಮಹಾಧವಳದಲ್ಲಿ ಕ್ರಿ.ಶ. ೧೧೨೦ರ ಸುಮಾರಿನ ಹತ್ತಿಪ್ಪತ್ತು ಚಿತ್ರಗಳನ್ನು ತಾಡವಾಲೆಯ ಮೇಲೆ ಬಣ್ಣಗಳಿಂದ ಬರೆದಿದ್ದಾರೆ. ಅದರ ರೇಖೆಗಳು ಬಹ್ಮತ್‌ಶಿಲ್ಪ, ದಂತಗಳ ಕೆತ್ತನೆ, ಆಫ್ಘಾನಿಸ್ತಾನದ ಬಾಮಿಯಾ ಭಿತ್ತಿ ಚಿತ್ರಗಳು- ಇವುಗಳ ರೇಖೆಗಳನ್ನು ಬಣ್ಣಗಳನ್ನು ನೆನಪಿಗೆತರುತ್ತವೆ. ಅದೇ ಅಜಂತದ ಗುಹೆಗಳಲ್ಲಿ ೬-೭ನೇ ಶತಮಾನಗಳಲ್ಲಿ ಬೆಳೆದಿದ್ದು ದನ್ನೂ ಕಾಣುತ್ತೇವೆ. ಅಲ್ಲಿಂದ ತಿರುಗಿ ೧೨ನೇ ಶತಮಾನದಲ್ಲಿ ಅದೇ ಕರ್ಣಾಟಕದ ಒಂದು ಸೆರಗಿನಲ್ಲಿ ಕಾಣಿಸಿಕೊಂಡಿತು ಎಂದರೆ ಈ ನಡುವಣ ಕಾಲ ಬಂಜೆಯಾಗಿತ್ತೆಂದು ತಿಳಿಯಬೇಕೆ-ಹೇಗೆ?
ಅಲ್ಲಿಂದ ಮುಂದೆ ಹದಿನಾರು-ಹದಿನೇಳನೆಯ ಶತಮಾನಗಳಿಗೇ ಕುಪ್ಪಳಿಸಬೇಕು, ಕಾಗದದ ಬರಹಗಳಲ್ಲಿ ಚಿತ್ರಗಳನ್ನು ಬರೆಯತೊಡಗಿದವರನ್ನು ಕಾಣಬೇಕಾದರೆ,
“ಮಹಾಧವಳ”ದ ತಾಡವಾಲೆಯಲ್ಲಿನ ವರ್ಣಚಿತ್ರಗಳ ಮಾದರಿ
ಕ್ರಿ. ಶ. ೧೨೦ ಕೃಪೆ : ಶಿವರಾನು ಕಾರಂತ
ಆದಿಲಶಾಹಿ ಸುಲ್ತಾನರ ಕಾಲವದು. ಅವರಿಗೆ ಫಾರಸಿ ಚಿತ್ರಕಲೆಯಿಂದ ಪ್ರೇರಣೆ ಬಂದಿತ್ತು. ವಿದೇಶೀ ಮೂಲದ್ದಾದ ಅದರ ಅತಿ ಉತ್ಕೃಷ್ಟ ಮಾದರಿ-೧೩೫೦ ರದ್ದು – ಬಿಜಾಪುರದಲ್ಲೇ ಕಾಣಸಿಗುತ್ತದೆ. ಆದರೆ ಅದು ದಕ್ಷಣದ ಶೈಲಿಯಾಗಿ ಮಾರ್ಪಟ್ಟು ಅನೇಕ ಚಿತ್ರಕಾರರ ಕೈಯಿಂದ ಹೊರಸೂಸಿತು. ಅದೇ ಕಾಲಕ್ಕೆ ವಿದೇಶದ ಪೋರ್ಚುಗೀಸರ ಪ್ರಭಾವದಿಂದಲೋ ಏನೋ, ಈ ಶೈಲಿ ಛಾಯಾತೇಜಗಳನ್ನು ಐರೋಪ್ಯರಂತೆ ಬಳಸಲು ತೊಡಗುವುದನ್ನು ಕಾಣುತ್ತೇವೆ. ಅಂತೂ ಈ ಅವಧಿಯಲ್ಲಿ ಉತ್ತರ ಕರ್ಣಾಟಕದಲ್ಲಿ ಎರಡು ಮೂರು ಶೈಲಿಗಳಲ್ಲಿ ಭಿತ್ತಿಚಿತ್ರಗಳು ಕಿರಿಯಚಿತ್ರಗಳು ಕಾಣಸಿಗುತ್ತವೆ. ಆದರೆ ಸಿಗುವಂಥವುಗಳ ಸಂಖ್ಯೆಯೇನೋ ದೊಡ್ಡದಲ್ಲ.
ಮೈಸೂರಿನ ಶ್ರೀರಂಗಪಟ್ಟಣ, ಬೆಳಗೊಳ ಮತ್ತು ಸಿಬಿಗಳಲ್ಲಿ ತಿರುಗಿ ಮೂರು ಭಿನ್ನ ಶೈಲಿಗಳು ರೂಪುಗೊಂಡು ಭಿತ್ತಿ ಚಿತ್ರಗಳಾಗಿ ಹಲವಾರು ನಿದರ್ಶನಗಳನ್ನೇ ಒದಗಿಸುತ್ತವೆ. ಇವುಗಳಲ್ಲಿ ಕೆಲ ಕೆಲವು ಮಾದರಿಗಳು ಸಾಕಷ್ಟು ಉತ್ತಮ ಕೃತಿಗಳೆಂದೇ ಹೇಳಬೇಕು. ಎಲ್ಲವೂ ಮಾತ್ರ ಹಾಗಿಲ್ಲ.
ಕಳೆದ ಶತಮಾನದ ಸಾಹಿತ್ಯ ಗ್ರಂಥಗಳಲ್ಲಿ ಕಾಣಿಸುವ ಚಿತ್ರಕಲೆಯನ್ನು ನೆನೆಯುವಾಗ ನಮ್ಮ ದೇಶೀಯ ಚಿತ್ರಕಲೆ ಉಳಿದುಕೊಂಡಿದ್ದ ತನ್ನ ಸತ್ವವನ್ನೂ ಅಲ್ಲಿಗೆ ಸಂಪೂರ್ಣವಾಗಿ ಕಳೆದುಕೊಂಡಿತೆಂದು ತೋರುತ್ತದೆ. ಪರಕೀಯ ಬಣ್ಣಗಳು ಪರಕೀಯ ಚಿತ್ರಗಳು ಅಷ್ಟು ಹೊತ್ತಿಗೆ ಬಂದು, ಇಲ್ಲಿದ್ದುದನ್ನು ತೋರಿಸುವ ಸಾಂಪ್ರದಾಯಿಕ ಚೇತನವಿಲ್ಲದವರಿಂದ ಚಿತ್ರಕಲೆ ಕೊನೆಯ ಉಸಿರನ್ನೆಳೆದಂತೆ ಕಾಣಿಸುತ್ತದೆ.
ಅಂತೂ ಕರ್ಣಾಟಕದ ವಿಸ್ತಾರ ಹೆಚ್ಚು, ಕಾಲದ ವ್ಯಾಪ್ತಿ ಅಧಿಕ, ಅನೇಕ ವಿಚಾರಗಳಲ್ಲಿ ಸಾಂಸ್ಕೃತಿಕ ಪರಂಪರೆ ದೊಡ್ಡದು-ಹೀಗಿದ್ದರೂ ಕೂಡ ಚಿತ್ರಕಲೆಯ ಮಟ್ಟಿಗೆ ಇಲ್ಲಿ ಶ್ರೀಮಂತಿಕೆಗಿಂತ ಬಡತನ ಒಡೆದು ಕಾಣುತ್ತದೆ. ಆ ಬಡತನದಲ್ಲೂ ಸಾಕಷ್ಟಿರುವ ಸತ್ವ ಚೆಲುವು ಇವುಗಳನ್ನು ನಾವು ಗುರುತಿಸಲು ಕಲಿತರೆ ಒಳ್ಳೆಯದಲ್ಲವೆ ಅನಿಸುತ್ತದೆ.
ಕೆಲವು ಕವನಗಳು
ಚಂದ್ರಕಾಂತ ಕುಸನೂರ
ಹಾಯಕು ಜಾತಿಗೆ ಸೇರಿದ ಕೆಲವು ಕವನಗಳು
೧
ಚಂದ್ರನುಗುರಿಗೆ ತಾಕಿ ಸೀರೆ ನಿರಿ ಸರಿದಾಗ
ನನ್ನ ರಾತ್ರಿಯ ತೊಡೆಯ ಮೇಲೆ ಬೆಳಕು.
ನೀಲಿ ಹಾಳೆಯ ಮೇಲೆ ಕಪ್ಪುಗೆರೆ ಎಳೆದಂತೆ
ಹಕ್ಕಿ ಹಾರಿತು ನನ್ನ ಕಣ್ಣು ಮುಂದೆ.
೩
ಕೆಂಪು ಬಣ್ಣದ ನಡುವೆ ಹಸಿರು ಅಕ್ಷರದಂತೆ
ಗುಲ್‌ಮೊಹರ್ ಗಿಡ ತುಂಬ ಲಕ್ಷ ಗಿಣಿಗಳ ವಾಸ.
೪
ಕೋಳಿ ಕೂಗಿಲ್ಲೆಂದು, ಬೆಳಕು ಹರಿದಿಲ್ಲೆಂದು
ಹಚ್ಚಡದ ಪದರಿನಲಿ ಮುಖ ಮುಚ್ಚಿಕೊಂಡು ನಾ-
ಹಗಲು ಹೆಗಲಿನ ಮೇಲೆ
ಮಲಗಿಕೊಂಡೆ.
೫
ನಿನ್ನ ನಗು-
ಕಾರ್ತಿಕದ ಬಿಸಿಲು ಬಂದಂತೆ.
೬
ಕೇಸರಿಯ ಮೈಬಣ್ಣ
ಪುಚ್ಚ ಕಾಡಿಗೆಯಂತೆ ಕೊಕ್ಕೆಯದು-ತಿಳಿನೀಲ
ಇಂಥ ಲಾವಣ್ಯದಾ ಹಕ್ಕಿ ಬಂದಾಗೊಮ್ಮೆ
ನನ್ನ ಮನೆಯೊಳಹೊರಗೆ
ಬೆಳಕೇ ಬೆಳಕು
ತಟಸ್ಥ ಸೃಷ್ಟಿ
ಎ. ವರದರಾಜ ಬಲ್ಲಾಳ
ತಟಸ್ಥ ಸೃಷ್ಟಿ
ವಿಶಾಲವಾದ ಸಭಾಭವನ. ದೂರದೂರದ ಊರುಗಳಿಂದ ಸುಮಾರು ಹದಿನೈದು ಸಾವಿರ ಪ್ರತಿನಿಧಿಗಳು ಬಂದಿದ್ದಾರೆ. ಸಮಾಜದ ನೇತಾರರೆನಿಸಿದ ಅನೇಕ ವಿದ್ವಾಂಸರು ತುಂಬ ಆವೇಶದಿಂದ ಹಿಂದೂ ಜನಾಂಗದ ಉದ್ಧಾರದ ಕುರಿತು ಭಾಷಣಗೈಯುತ್ತಿದ್ದಾರೆ. ಬಾಳಿಗೊಂದು ಬಲವಾದ ಆಧಾರದ ಆವಶ್ಯಕತೆಯನ್ನು ಮನಗಂಡ ಮತ್ತು ತಮ್ಮ ಮನದೊಳಗಿನ ವಿವಿಧ ಸಂಕಟಗಳಿಗೆ ಪರಿಹಾರವನ್ನಿತ್ತು ಬಾಳಿಗೊಂದು ಹೊಸ ಆಕರ್ಷಣೆಯನ್ನು ತೋರಬಲ್ಲ ಯಾವ ಆಧಾರವನ್ನೂ ಕಾಣದ ಜನತೆ ಯಾವುದೋ ಒಂದು ಮೂಕ ಆಸೆಯನ್ನು ತಾಳಿ ಭಕ್ತಿಯಿಂದ ಈ ಭಾಷಣಗಳನ್ನಾಲಿಸುತ್ತಿದೆ. ಇಂಥ ಜನರ ಮೇಲೆ ನನಗೆ ತಿರಸ್ಕಾರವಿಲ್ಲ, ಬದಲಾಗಿ ಗೌರವವಿದೆ. ಇಂಥ ಭಾಷಣಗಳ ವಿಷಯದಲ್ಲಿ ನನಗೆ ತಿರಸ್ಕಾರವಿಲ್ಲ. ಆದರೆ ಅಷ್ಟೊಂದು ಆಸಕ್ತಿ-ಉತ್ಸಾಹಗಳೂ ಇಲ್ಲ. ಹೀಗಿದ್ದರೂ ಇಷ್ಟು ಜನ ಇಂಥ ನಿಷ್ಠೆಯಿಂದ ಪಾಲುಗೊಳ್ಳುತ್ತಿರುವ ಈ ಗೊಂದಲದಲ್ಲಿ ಬೇರೆ ಕೆಲಸವಿಲ್ಲದುದರಿಂದ ನಾನೂ ಬಂದಿದ್ದೇನೆ. ಭವನದೊಳಗೆ ಭಾಷಣಗಳ ಗರ್ಜನೆ ತುಂಬಿದಂತೆಯೇ ನೆರೆದ ಜನರ ಮನದೊಳಗೆ ಮೂಕಭಕ್ತಿಯ ಲೀನತೆಯಿದೆ. ಇದ ರಿಂದಲೇ ಎಲ್ಲರೂ ಸ್ತಬ್ಧರಾಗಿ ಆಲಿಸುತ್ತಿದ್ದಾರೆ. ನಿಷ್ಠುರ ಅನುಭವಗಳ ಒತ್ತಡದ ಬದಲಾಗಿ ಬರಿಯ ಅಭ್ಯಾಸದ ಒತ್ತಡದಿಂದ ಉರುಳಿಬರುತ್ತಿರುವ ಈ ಶಬ್ದ ಜಾಲಕ್ಕೆ ಮರುಳಾಗಿ ಇಷ್ಟೆಲ್ಲ ಜನ ಕಣ್ಣರಳಿಸಿ, ಕತ್ತು ಚಾಚಿ ಯಾವುದೋ ಒಂದು ಸಾರ್ಥಕತೆಯನ್ನು ಪಡೆಯಲಿಕ್ಕಾಗಿ ಕ್ಲೇಶಪಡುತ್ತಿರುವುದನ್ನು ಕಾಣುವಾಗ ‘ಅಯ್ಯೋ ! ಮನುಷ್ಯ ಜೀವನದ ಪಾಡೇ !” ಎಂದು ಮನ ನೋಯುತ್ತದೆ. ದೊಡ್ಡ ಮನುಷ್ಯರ ದೊಡ್ಡ ದೊಡ್ಡ ಮಾತುಗಳನ್ನು ಎಷ್ಟು ಮೆಲುಕು ಹಾಕಿದರೂ ನಮ್ಮ ನಿತ್ಯ ಜೀವನದ ನಿಕಟ ವಾಸ್ತವಿಕತೆಗಳ ಅರಿವಿನ ಬೆಳಕು ನಮ್ಮ ಹೃದಯದಲ್ಲಿ ಮೂಡಿ ಬರಲಾರದೆಂದು ಅನಿಸುತ್ತಿದೆ. ಆದುದರಿಂದಲೇ, ಭವನದ ಹೊರಗೆ ಸುಮ್ಮನೆ ಕಾಲಕಳೆಯುತ್ತಿದ್ದೇನೆ. ಹೊರಗೆ ತೆರೆದ ವಾತಾವರಣ, ಸಂಜೆ ಆರರ ಹಿತವಾದ ಹೊಂಬಿಸಿಲು. ಮೀನಿಗೆ ನೀರು ಮೆಚ್ಚಿಗೆ, ನಾಯಿಗೆ ಬೂದಿಯ ರಾಶಿ ಮೆಚ್ಚಿಗೆ, ಅಂತೆಯೇ ಹೊರ ಹವೆಯ ಸ್ಪರ್ಶವನ್ನು ಅನುಭವಿಸುತ್ತಿದ್ದೇನೆ.
ಯಾವುದೋ ಒಂದು ಸುದ್ದಿಯನ್ನೆತ್ತಿಕೊಂಡು ಮಿತ್ರರು ಮಾತಾಡುತ್ತಿದ್ದಾರೆ. ಆವೇಶದ ಚರ್ಚೆಯೇನೂ ಅಲ್ಲ, ಸುಮ್ಮನೆ ನಾಲ್ಕು ಹೃದಯಗಳು ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಮಾಡುತ್ತಿದ್ದ ಸಭ್ಯ ಕಾಲಕ್ಷೇಪ. ಈ ಗುಂಪಿನಲ್ಲಿ ನಾನು ಅರ್ಧ ಸೇರಿದವನಾಗಿ, ಮೂಕ ಸಂಗಾತಿಯಾಗಿ ಇದ್ದೇನೆ. ಸ್ವಲ್ಪ ಹೊತ್ತಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಬಂದು ಸೇರಿದ್ದಾನೆ. ಮಿತ್ರರೊಬ್ಬರು ಆತನಿಗೆ ನನ್ನ ಪರಿಚಯ ಹೇಳಿದರು. ಆತ ಮಾತು ಮುಂದುವರಿಸಿದ. ‘ವ್ಯಾಸರ ಸಮದೃಷ್ಟಿ’ ಯೆಂಬ ನನ್ನ ಬರಹದ ಕುರಿತು ಹೇಳತೊಡಗಿದ.
ಸಹಜವಾಗಿ ಸುಮ್ಮನೆ ಸ್ಪಂದಿಸುತ್ತಿರುವ ತಟಸ್ಥ ಶಕ್ತಿಗಳ ಅಪಾರ ಪ್ರವಾಹವೇ ಈ ಸೃಷ್ಟಿ. ಈ ತುದಿ ಮೊದಲಿಲ್ಲದೆ ಪ್ರವಾಹದ ಯಾವುದೋ ಒಂದು ಮೂಲೆಯಲ್ಲಿ ಈಗ ಮೂಡಿ ಇನ್ನೊಂದು ಕ್ಷಣದಲ್ಲಿ ಕರಗಿ ಮಾಯವಾಗುವ ಕ್ಷಣಿಕ ತರಂಗವೇ ಈ ಮನುಷ್ಯ. ಈ ನಿರುದ್ದೇಶ ಸೃಷ್ಟಿಯಲ್ಲಿ ಒಂದು ಕ್ಷಣಿಕ, ಪ್ರಾದೇಶಿಕ ಅಭಿವ್ಯಕ್ತಿಯಾಗಿ ಮೂಡಿ ಬಂದ ಮನುಷ್ಯ ನಿರುದ್ದೇಶನಾಗಿ ಕರ್ತವ್ಯನಿಷ್ಠನಾದರೆ ಮಾತ್ರ ಈ ಸೃಷ್ಟಿ ಯೊಡನೆ ಸಮರಸತೆಯನ್ನನುಭವಿಸಲು ಸಾಧ್ಯ-ಎಂಬ ಧಾಟಿಯಲ್ಲಿ ನೀವು ಬರೆದಿದ್ದೀರಿ. ನಿರುದ್ದೇಶನಾಗಿ ಬಾಳುವುದು ಹೇಗೆ ಸಾಧ್ಯ? ಯಾರಿಗೂ ಎಟುಕದ ಈ ಆದರ್ಶದಿಂದ ಏನು ಉಪಯೋಗ? ಇತ್ಯಾದಿ.
ಇದಲ್ಲದೆ ಬೇರೆ ಪ್ರಶ್ನೆಗಳೂ ಈ ಹಿಂದೆ ಬಂದಿವೆ : ಈ ‘ಸಮದೃಷ್ಟಿ’ ವ್ಯಾಸರದ್ದಲ್ಲ. ಇದು ನಿಮ್ಮದೇ ಫಕ್ಕನೆ ಬಿಸಿಯೇರುವ ಮೆದುಳಿನ ಕಲ್ಪನೆ. ಸ್ವಂತದ ಅಹಂಕಿಯ ತೃಪ್ತಿಗಾಗಿ ನೀವೇನೋ ಜೀವನದ ಅರ್ಥ ಕಲ್ಪಿಸಿಕೊಂಡಿದ್ದೀರಿ, ಕಟ್ಟಿಕೊಂಡಿದ್ದೀರಿ, ನಿಮ್ಮ ಅಭಿಪ್ರಾಯವನ್ನೇ ಪ್ರಕಟಪಡಿಸುವಂತೆ ಕಂಡುಬರುವ ಕೆಲವು ವಾಕ್ಯಗಳನ್ನು ವ್ಯಾಸರ ಕೃತಿಯಿಂದ ಆರಿಸಿಕೊಂಡಿದ್ದೀರಿ. ನಿಮ್ಮ ಅಭಿಪ್ರಾಯಗಳನ್ನು ಸಮರ್ಥಿಸಲಾರದ ಹೆಚ್ಚಿನ ಬೇರೆ ವಾಕ್ಯಗಳ ವಿಷಯದಲ್ಲಿ ನೀವು ಕಣ್ಮುಚ್ಚಿಕೊಂಡಿದ್ದೀರಿ. ನಿಮ್ಮ ಸ್ವಂತದ ಅವಿವೇಕವನ್ನು ಅಲ್ಲಿ ಇಲ್ಲಿ ಹೆಕ್ಕಿ ತೆಗೆದ ವ್ಯಾಸರ ವಾಕ್ಯಗಳಿಂದ ಹೊರಡಿಸಲು ಯತ್ನಿಸುವುದು ಹೇಗೆ ಸರಿಯಾದೀತು ?
ಇಂಥ ಪ್ರಶ್ನೆಗಳಿಗೆ ಖಚಿತವಾದ, ಪೂರ್ಣ ತೃಪ್ತಿಕರವಾದ ಉತ್ತರ ಕೊಡಲು ಈ ಲೇಖ ಬರೆಯುತ್ತಿಲ್ಲ. ಹೀಗೆ ಹೇಳಿಕೊಳ್ಳಲು ಕಾರಣಗಳಿವೆ.
ಸಾವಿರಾರು ವರ್ಷ ಹಿಂದಿನ ಸನ್ನಿವೇಶಗಳ ನಡುವೆ ಬಾಳಿದ ತಪಸ್ವಿ ವೇದವ್ಯಾಸ. ಆಗ ಜನ ಹೇಗೆ ಬಾಳುತ್ತಿದ್ದರು ; ಆಗ ಸಮಾಜವನ್ನಾಳುತ್ತಿದ್ದ ನಂಬಿಕೆಗಳು, ಆಸೆಗಳು, ಚಾಳಿಗಳು, ರೀತಿನೀತಿಗಳು ಯಾವುವು ; ಇಂದಿನ ವೈಜ್ಞಾನಿಕ ಯುಗದ ಅನೇಕ ಭೌತಿಕ ಸಿದ್ಧಿಗಳಂತೆ ಮಹಾಭಾರತದಲ್ಲಿ ಕಂಡುಬರುವ ಅಂದಿನ ಜನ ಬೇರೆ ರೀತಿಯ ಅದ್ಭುತ ಸಿದ್ಧಿಗಳನ್ನು ಪಡೆದಿದ್ದ ಕತೆಗಳು ನಿಜವೇ ? ಅಥವಾ ಅವೆಲ್ಲ ಕೇವಲ ಕತೆಗಳೇ?; ಈ ಶತಕದಲ್ಲಿ ಸಮಾಜ ರಚನೆಯ ಸಂಕೀರ್ಣತೆಯಿಂದಾಗಿ ಹೊಸದಾಗಿ ಉದಿಸಿ ಬರುತ್ತಿರುವ ಜೀವನದ ವಿಶಿಷ್ಟ ಸಮಸ್ಯೆಗಳಂತೆ ಅಂದಿನ ಕಾಲದ ಬೇರೆ ರೀತಿಯ ಸಂಕೀರ್ಣತೆಯಿಂದ ಅಂದು ಮನುಷ್ಯನನ್ನು ಬಾಧಿಸುತ್ತಿದ್ದ ಸಮಸ್ಯೆಗಳು ಯಾವುವು?; ಅಂದಿನ ವೇದ-ವೇದಾಂತಗಳು ಶುದ್ಧ ಚಿಂತನವೆಂಬ ತಪಸ್ಸಿಗೆ ದೊರೆತ ಪುರಸ್ಕಾರವೇ ? ಅಥವಾ ಬರಿಯ ಅನ್ನವನ್ನು ಅರ್ಧಹೊಟ್ಟೆ ತಿನ್ನುತ್ತಿದ್ದ
ಪರಿಣಾಮವಾಗಿ ಸಾಕಷ್ಟು ಪೋಷಕ ಆಹಾರವನ್ನು ಪಡೆಯದ ರುಗ್ಣಚೇತನದ ನರಳಾಟವೇ ?-ಇಂಥ ಅನೇಕ ಪ್ರಶ್ನೆಗಳಿಗೆ ಅಂದಿನ ಸನ್ನಿವೇಶಗಳನ್ನು ಖಚಿತವಾಗಿ ತಿಳಿಯಲಾರದ ವ್ಯಕ್ತಿ ಉತ್ತರಕೊಡುವಂತಿಲ್ಲ. ಉತ್ತರ ಕೊಡಬಲ್ಲೆ ಎಂದು ಧೈರ್ಯ ತೋರುವ ವ್ಯಕ್ತಿಗಳು ಈ ಕಾರ್ಯದ ಗಹನತೆಯನ್ನು ಸಾಕಷ್ಟು ಕೂಲಂಕಷವಾಗಿ ಅರಿತಿರುವರೆಂದು ನನಗನಿಸುವುದಿಲ್ಲ.
ಅಂದಿನ ವಿಶಾಲ ಸಾಹಿತ್ಯವೇ ಆ ಕಾಲದ ಸನ್ನಿವೇಶಗಳನ್ನು ಸ್ಪಷ್ಟವಾಗಿ, ಸಮರ್ಪಕವಾಗಿ ಇಂದಿನ ಜನತೆಗೆ ತಿಳಿಸಿಕೊಡಬಲ್ಲುದೆಂದು ನಂಬಿಕೊಂಡವರೂ ಅನೇಕರಿದ್ದಾರೆ. ಆದರೆ ಅಂದಿನ ಶಬ್ದಗಳಿಗೆ ಇಂದಿನ ಪರಿಸರಗಳಿಂದ ಪ್ರಭಾವಿತರಾದ ನಾವು ಸಮರ್ಪಕವಾದ ಆಳ-ಅಗಲದ ಅರ್ಥವನ್ನು ಕಲ್ಪಿಸಿಕೊಳ್ಳಬಲ್ಲೆವೆಂಬ ಧೈರ್ಯ ನಮಗಿದೆಯೇ ? ಪ್ರಾಚೀನ ಸಾಹಿತ್ಯದಲ್ಲಿ ಕಂಡುಬರುವ ಅನೇಕ ಪವಾಡಗಳ ಕುರಿತು ನಮಗೆ ಇಂದು ಏನು ಗೊತ್ತಿದೆ ? ಉಪನಿಷತ್ತುಗಳು, ಮಹಾಭಾರತ, ಯೋಗವಾಸಿಷ್ಠ ಮೊದಲಾದ ಮಹಾಗ್ರಂಥಗಳಲ್ಲಿ ಸತ್ಯ (=ಸತ್, ಆತ್ಮ, ಬ್ರಹ್ಮ ಯಾ ವಾಸ್ತವಿಕತೆ)ವನ್ನು ವಿವರಿಸುವಾಗ ಪುನಃ ಪುನಃ ಬಳಸಲಾಗುತ್ತಿದ್ದ (ನಿರ್ಗುಣ, ನಿರಾಧಾರ, ನಿರಂಜನ, ನಿಷ್ಕ್ರಿಯ, ನಿಷ್ಕಲ, ಕ್ಷೇತ್ರಜ್ಞ, ಶಾಶ್ವತ, ಕೂಟಸ್ಥ, ಕೇವಲ, ಸನಾತನ ಅಪಾರ, ಆಕಾಶ, ಸಾಕ್ಷಿ, ಅಕ್ಷರ, ಸರ್ವಗ, ಅನಾದಿ, ಅನಂತ, ಅಮರ, ಧ್ರುವ ಮೊದಲಾದ) ಬಹು ವಿಚಿತ್ರ ಮತ್ತು ಪರಸ್ಪರ ವಿರೋಧಿಯಾದ ವಿಶ್ಲೇಷಣಗಳಿಗೆ ಯಾವುದೋ ಒಂದು ಅರ್ಥವನ್ನು ಕಲ್ಪಿಸಿಕೊಂಡು ವಿವರಿಸತೊಡಗಿದಾಗ ಅದು ನಮ್ಮ ಸತ್ಯದ ಅನುಭವಕ್ಕೆ ಸರಿಹೋಗದಿದ್ದುದು ಮತ್ತು ಅದಕ್ಕಾಗಿ ಏನೇನೋ ಪಾಂಡಿತ್ಯದ ಗಗನ ಗೋಪುರಗಳನ್ನು ರಚಿಸಿಕೊಂಡುದು ಬಹುಶಃ ಅಲ್ಲಲ್ಲಿ ಕಂಡುಬರುತ್ತಿಲ್ಲವೇ ? ನಮ್ಮ ನಿತ್ಯದ ಸಂವೇದನೆಗಳಲ್ಲಿ ಸಾಕ್ಷಾತ್ಕರಿಸಲಾಗದ ವಿಷಯಗಳನ್ನು ಒದರಿಕೊಳ್ಳುವ ಪುಸ್ತಕಗಳಿಂದ ನಮಗೇನು ಲಾಭ ? ಇಂಥ ಸನ್ನಿವೇಶದಲ್ಲಿ ತನ್ನ ವಿವರಣೆ ಸಮರ್ಪಕವೆಂದು ಭಾವಿಸುವ ಸಾಹಸ ಯಾರೂ ಮಾಡಕೂಡದು. ಕನಿಷ್ಠ ಪಕ್ಷ ಇಂಥ ಸಾಹಸವನ್ನು ತೋರುವ ಯೋಗ್ಯತೆಯನ್ನು ಸದ್ಯ ನಾನು ಪಡೆದಿಲ್ಲ.
ಇದಲ್ಲದೆ ವ್ಯಾಸಮಹರ್ಷಿ ಬಹುಮುಖಿ. ಅವರ ಕೃತಿಗಳಲ್ಲಿ ಸಾವಿರಾರು ಪಾತ್ರಗಳು ಸಾವಿರಾರು ಜೀವನದೃಷ್ಟಿಯನ್ನು ತಾಳಿಕೊಂಡಿದ್ದು ಬದುಕಿನ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಸಿರಿ-ಸಂಪತ್ತಿನ ಪರಿಸರದಲ್ಲಿ ಬೆಳೆದ ವ್ಯಕ್ತಿ ಕಾಣುವ ವಾಸ್ತವಿಕಯನ್ನು ಒಬ್ಬ ಅನಾಥ ಬಡಪಾಯಿ ಎಂದೆಂದೂ ಕಾಣಲು ಸಾಧ್ಯವಿಲ್ಲ; ಹುಟ್ಟಿನಿಂದಲೇ ಸ್ಥಿರಚಿತ್ತನಾದ ಸ್ವಸ್ಥ ವ್ಯಕ್ತಿ ಕಾಣುವ ಹಿತ-ಸುಖ ವಾಸ್ತವಿಕತೆಗಳನ್ನು ಸ್ವಭಾವತಃ ಚಂಚಲಚಿತ್ತನಾದ ವ್ಯಕ್ತಿಯಾಗಲೀ, ಸಂಶಯಸ್ವಭಾವದ ವ್ಯಕ್ತಿಯಾಗಲೀ, ಭೀರು ಸ್ವಭಾವದ ವ್ಯಕ್ತಿಯಾಗಲೀ ಕಾಣುವಂತಿಲ್ಲ ; ನಮ್ಮಲ್ಲಿ ಪ್ರತಿ ವ್ಯಕ್ತಿಯ ಚೇತನೆಯ ಹಿನ್ನಲೆಯೂ ಅನಂತ-ಅಜ್ಞಾತ ಪ್ರಭಾವಗಳ ಅಮೂರ್ತ ಗೊಂಚಲಾಗಿರುವುದರಿಂದಲೇ ಪ್ರತಿಯೊಬ್ಬನೂ ತನ್ನನ್ನಾವರಿಸಿರುವ ವಾಸ್ತವಿಕತೆಯ ವೇಗಗಳಿಗೆ ತನ್ನ ಮೆಚ್ಚಿನ ಅರ್ಥವನ್ನು ತಾನೇ ಕಟ್ಟುತ್ತ, ತನಗೆ ತಿಳಿಯದಂತೆ ತನ್ನ ಭಾಗ್ಯವನ್ನು ತಾನೇ ರೂಪಿಸಿಕೊಳ್ಳುತ್ತ ಜೀವನಪ್ರವಾಹದಲ್ಲಿ ತೇಲುತ್ತಾನೆ–ಎಂಬುದನ್ನು ವ್ಯಾಸರು ಚೆನ್ನಾಗಿ ಅರಿತಂತಿದೆ. ಆದುದರಿಂದ ಇಲ್ಲಿ ಕಂಡುಬರುವ ವಸ್ತು-ಜೀವನದೃಷ್ಟಿಗಳ ವಿವಿಧತೆ ಈ ಗ್ರಂಥವನ್ನು ಓದಿದಾಗ ಮಾತ್ರ ತಿಳಿಯಬಹುದಾದಷ್ಟು ಅಪಾರವಾಗಿದೆ. ಇಷ್ಟು ದೃಷ್ಟಿವೈವಿಧ್ಯಗಳನ್ನೊಳಗೊಂಡ ಕೃತಿಯಲ್ಲಿ ಒಂದು ದೃಷ್ಟಿ ಮುಖ್ಯ, ಇನ್ನೊಂದು ಗೌಣ ಎಂದು ನಾವು ಮಾಡಬಹುದಾದ ತೀರ್ಮಾನದಲ್ಲಿ ಸರ್ವದಾ ಮತಭೇದದ ಸಂಭಾವ್ಯತೆ ಅಪರಿಹಾರ್ಯವಾಗಿದೆ.
ಹೀಗಿದ್ದರೂ ವ್ಯಾಸರಲ್ಲಿ ನಾನು ಕಂಡ ಬೆಳಕನ್ನು ಒಬ್ಬ ಸಾಮಾನ್ಯ ಓದುಗನಂತೆ ಹೇಳತೊಡಗಿ ಹಿಂದಿನ ಲೇಖ ಬರೆದಿದ್ದೆ. ಸ್ವಲ್ಪ ಸ್ಪಷ್ಟತೆ ಹೆಚ್ಚಬಹುದೆಂಬ ಭಾವದಿಂದ ಇನ್ನೂ ಕೆಲವು ಮಾತುಗಳು. ಆದರೆ ಇಂಥ ವಿಷಯಗಳಲ್ಲಿ ಹೇಗೆ ವಿವರಣೆ ಕೊಡಲಿ ? ಸೌಂದರ್ಯದ ಅರಿವಿನಿಂದ ಉಬ್ಬುತ್ತ ವಿಕೃತಿಯ ದರ್ಶನದಿಂದ ಹೇಸಿಕೆಪಡುತ್ತ ಬಾಳುವ ಅಭ್ಯಾಸದ ನಮಗೆ, ರಾಗ-ದ್ವೇಷಗಳ ಸಂಸ್ಕಾರಗಳಲ್ಲಿ ಹರಿದಾಡುತ್ತಿರುವ ನಮಗೆ, ದ್ವಂದ್ವಗಳ ಇಕ್ಕಡೆಯ ಛಾಯಾಚಿತ್ರಗಳಿಗೆ ಅಂತಃಸ್ವೀಕೃತಿಯ ಮೌನ ಪ್ರತಿಕ್ರಿಯೆಯ ಮಾರ್ಗವನ್ನು ಬಾಳ ನಡುಬಿಂದುವಿನಲ್ಲಿ ಸ್ಥಿರವಾಗಿದ್ದು ಹೊರ ಪರಿಸ್ಥಿತಿ ಮತ್ತು ಒಳ ಪ್ರೇರಣೆಗಳ ಪ್ರವಾಹದಲ್ಲಿ ಸಹಜವಾಗಿ ತೇಲಿ ಸಾಗುವ ಮೂಕ ವಿವೇಕದ ಜೀವನವನ್ನು ಹೇಗೆ ಚಿತ್ರಿಸಲಿ ? ಎರಡು ನಾಯಿಗಳು ಜಗಳವಾಡುತ್ತಿದ್ದಾಗ ಇನ್ನೆರಡು ನಾಯಿಗಳು ಬಂದು ಸೇರಿದರೆ ಒಟ್ಟು ಸೇರಿದ ನಾಯಿಗಳ ಸಂಖ್ಯೆ ನಾಲ್ಕು-ಎಂಬ ವಿಷಯವನ್ನು ಸುಲಭವಾಗಿ ವಿವರಿಸಲಾದಂತೆ ಅಂತಃಶೂನ್ಯವಾಗಿದ್ದು ವಿಶ್ವಜೀವನದಲ್ಲಿ ಪಾಲ್ಗೊಳ್ಳುವ ಜೀವನದೃಷ್ಟಿಯನ್ನು ವಿವರಿಸಲಾಗುವುದಿಲ್ಲ. ಪ್ರಾಚೀನರೂ ಇಂಥ ಕಷ್ಟಕ್ಕೊಳಗಾದದ್ದು ಉಪನಿಷತ್ತುಗಳಲ್ಲಾಗಲೀ ಯಾ ಇತರ ಗ್ರಂಥಗಳಲ್ಲಾಗಲೀ ಹೆಜ್ಜೆ ಹೆಜ್ಜೆಗೂ ಕಂಡುಬರುವ ಇವರ ಪರಸ್ಪರ ವಿರೋಧಿಯಾದ ಮಾತುಗಳಿಂದ ಸ್ಪಷ್ಟವಾಗುತ್ತದೆ.
ನಿರುದ್ದೇಶವಾದ ಶೂನ್ಯ ಜೀವನದಲ್ಲಿ ವ್ಯಾಸರು ಸಹಜ-ಸ್ವಸ್ಥ ಜೀವನದ ಸೌಂದರ್ಯವನ್ನು ತೋರಿದರೆಂಬ ಮಾತು ನಂಬಲು ಕಷ್ಟವಾಗುತ್ತದೆ. ನಿಜ, ಯಜ್ಞ-ದಾನ-ತಪಸ್ಸು-ಎಲ್ಲವನ್ನೂ ಅವರು ಕಟ್ಟಿಕೊಂಡಿದ್ದಾರೆ. ಪೂಜೆ-ಭಜನೆ-ಭಕ್ತಿಗಳನ್ನು ಅವರು ಮೆಚ್ಚಿದ್ದಾರೆ. ನಾವು ಧರ್ಮವನ್ನು ಕಾಯ್ದು ಕೊಂಡರೆ ಧರ್ಮ ನಮ್ಮನ್ನು ರಕ್ಷಿಸುವುದೆಂದು ಸಾರಿದ್ದಾರೆ. ವಿಷವೃತ್ತದಲ್ಲಿ ಸಿಕ್ಕಿ ಬಿದ್ದ ನಮ್ಮ ಚೇತನೆಯನ್ನು ವಿವೇಕದ ಯತ್ನದಿಂದ ಮೇಲಕ್ಕೆತ್ತಿ ಸತ್ಕರ್ಮದ ಮಾರ್ಗದಲ್ಲಿ ತೊಡಗಿಸಬೇಕು. ಪುಣ್ಯಕರ್ಮದ ಪ್ರಕಾಶದಿಂದ ನಮ್ಮ ಅಂತಃಕರಣದ ಒಳಕೋಣೆಯನ್ನು ಬೆಳಗಿಸಬೇಕು-ಎಂದು ಅವರು ಎಚ್ಚರಿಸಿದ್ದಾರೆ. ಬದುಕಿಗೆ ಇಂಥ ನೂರಾರು ಕರ್ತವ್ಯಗಳನ್ನು ಸಂದರ್ಭಾನುಸಾರವಾಗಿ ಹೇಳಿರುವ ಬಹುಭಾಷಿಯಾದ ವ್ಯಾಸರು ಇದಕ್ಕೆ ವಿಪರೀತವಾದಂತೆ ಕಂಡುಬರುವ ಅನೇಕ ವಿಚಾರಗಳನ್ನೂ ತಿಳಿಸಿದ್ದಾರೆ. ಪರಸ್ಪರ ವಿರೋಧಿಯಾಗಿದ್ದಂತೆ ಕಂಡುಬರುವ ಅವರ ಹೇಳಿಕೆಗಳಿಗೆ ಸರಿಯಾದ ಸಂಗತಿಯನ್ನು ಕಂಡುಕೊಳ್ಳಲು ನಾವು ತುಂಬ ಯೋಚಿಸಬೇಕಾಗುತ್ತದೆ.
ನಮ್ಮೆಲ್ಲರ ಬದುಕು ಪ್ರವೃತ್ತಿಮಾರ್ಗದಲ್ಲಿ ಸಾಗುವ ನಿರಂತರವಾದ ಕಾರ್ಯಕ್ರಮ. ಪ್ರತಿಕ್ಷಣವೂ ನಾವು ವಿವಿಧ ರೀತಿಯಲ್ಲಿ ನಮ್ಮಾತ್ಮದ ಉತ್ಥಾನಕ್ಕಾಗಿ, ಬದುಕಿನ ಪ್ರಗತಿಗಾಗಿ ಯತ್ನಿಸುತ್ತೇವೆ. ಈಗ ಪಡೆದಿರುವ ಅಂತಃಸ್ಥಿತಿಗಿಂತಲೂ ಶ್ರೇಷ್ಠ ಶ್ರೇಷ್ಠತರ ಸ್ಥಿತಿಗಾಗಿ ನೂರಾರು ಹವ್ಯಾಸಗಳಲ್ಲಿ ತೊಡಗಿರುತ್ತೇವೆ. ಧರ್ಮಗ್ರಂಥಗಳು ಗುರೂಪದೇಶಗಳು, ಜಪ-ತಪಸ್ಸುಗಳು, ದೇವೀ-ದೇವತಾ ಉಪಾಸನೆಗಳು-ಇವೆಲ್ಲ
ನಾವು ಸ್ವಂತದ ಲಾಭಕ್ಕಾಗಿ ಕಟ್ಟಿಕೊಂಡ ಹವ್ಯಾಸಗಳು. ಆದುದರಿಂದಲೇ ಹಳೆಯ ನಂಬಿಕೆಗಳು ನಶಿಸಿಹೋಗುತ್ತಿರುವ ಇಂದಿನ ದಿನಗಳಲ್ಲೂ ಬಾಳಿಗೊಂದು ಬಲವಾದ ಆಧಾರ ಪಡೆಯಲಿಕ್ಕಾಗಿ ಹೊಸ ನಂಬಿಕೆಗಳ ಕಡೆಗೆ ಕೈ ಚಾಚುತ್ತಿದ್ದೇವೆ. ಹಳೆಯ ಮಹಾಪುರುಷರಿಂದ ನಮ್ಮ ಸಮಸ್ಯೆ ಬಗೆಹರಿಯದಿದ್ದುದನ್ನು ಕಂಡು latest ಮಹಾ ಪುರುಷರನ್ನು ಆರಿಸಿಕೊಳ್ಳುವಾಗಲೂ ನಾವು ಹಿಂದಿನ ಹವ್ಯಾಸವನ್ನೇ ಹೊಸ ರೀತಿಯಲ್ಲಿ ಬೆಳೆಸಿಕೊಳ್ಳುತ್ತಿದ್ದೇವೆ. ಹಳೆಯ ನಂಬಿಕೆಗಳನ್ನು ಹೊಸ ಶ್ರದ್ದೆಯಾಗಿ ಬದಲಾಯಿಸುವಾಗ ನಾವು ಹಳೆಯ ಸ್ವಾರ್ಥಿ ಪ್ರವೃತ್ತಿಗೆ ಹೊಸಬಣ್ಣ ಬಳಿದಂತಾಗುವುದೇ ಹೊರತು ಬೇರೇನೂ ಆಗುವುದಿಲ್ಲ. ಇವೆಲ್ಲ ಪ್ರವೃತ್ತಿ ಮಾರ್ಗದ ಕೊನೆಯಿಲ್ಲದ ಯಾತ್ರೆಗಳು. ಸಾಮಾನ್ಯ ಜನತೆಗೆ ಇಂಥ ಪ್ರವೃತ್ತಿಮಾರ್ಗ ದಾಟಿ ಸಾಗುವುದು ಬಹುಶಃ ಅಸಾಧ್ಯ. ಹೀಗಾಗಿ ಸಾವಿರಾರು ಹಿಂದುಗಳು ಈ ಸಭಾಭವನದೊಳಗೆ ಸೇರಿ ತುಂಬ ಪ್ರಾಮಾಣಿಕವಾದ ಉತ್ಕಂಠೆಯಿಂದ ಧರ್ಮದ ಹೆಸರಿನಲ್ಲಿ ಮೊಳಗುತ್ತಿರುವ ಈ ಗೊಂದಲದಲ್ಲಿ ತನ್ಮಯರಾಗಿರುವುದೂ, ಸಾಧ್ಯವಿದ್ದಷ್ಟು ಮಟ್ಟಿಗೆ ತಟಸ್ಥ ದೃಷ್ಟಿಯನ್ನು ಬೆಳೆಸಿಕೊಂಡು ತಮ್ಮ ಸಂಕುಚಿತ ಸ್ವರೂಪದ ಅರಿವಿನಿಂದ ಉಂಟಾಗುವ ದ್ವಂದ್ವ ವೇಗಗಳನ್ನು ಶಿಥಿಲಗೊಳಿಸಿಕೊಂಡು ನಮ್ಮೆಲ್ಲರನ್ನೂ ಆವರಿಸಿ ರೂಪಿಸುತ್ತಿರುವ ತಟಸ್ಥ ಸೃಷ್ಟಿಯೊಡನೆ ಸಮರಸರಾಗುವ ಯೋಗ್ಯತೆಯನ್ನು ಬೆಳೆಸಿಕೊಳ್ಳಬೇಕೆಂಬ ಮಾತಿನಿಂದ ಅಸಮಾಧಾನ ತಾಳುವುದೂ ಸಹಜವಾಗಿದೆ. ಆದುದರಿಂದ ಪ್ರವೃತ್ತಿ ಮಾರ್ಗದ ವಿವಿಧ ಉಪಾಯಗಳಿಂದ ಜನ ತಾತ್ಕಾಲಿಕ ಶಾಂತಿಯನ್ನು ಕಂಡುಕೊಳ್ಳುವುದನ್ನಾಗಲೀ, ಸಮಾಜ ಒಂದು ರೀತಿಯ ವ್ಯವಸ್ಥೆಯನ್ನು ಪಡೆಯುವುದನ್ನಾಗಲೀ ನಾವು ತಿರಸ್ಕಾರದಿಂದ ಕಾಣುವಂತಿಲ್ಲ. ಆದರೆ ಈ ಪ್ರವೃತ್ತಿ ಧರ್ಮಕ್ಕೆ ಒಂದು ಮಿತಿಯಿದೆ. ಈ ಮಾರ್ಗದಲ್ಲಿ ಎಷ್ಟು ಕ್ರಮಿಸಿದರೂ ಮನುಷ್ಯ ತನ್ನ ವಾಸ್ತವಿಕ ಉತ್ಕರ್ಷವನ್ನು, ತನ್ನಲ್ಲಿ ಪೂರ್ಣತೆಯ ಧನ್ಯಭಾವವನ್ನು ಪಡೆಯಲಾರ.1 ಸಣ್ಣ ಮಗುವಿನಂತಹ ಸರಳತೆ,
1 ಕರ್ಮಣಾ ಬದ್ಧ್ಯತೇ ಜಂತುರ್ವಿದ್ಯಯಾ ಪ್ರಮುಚ್ಯತೇ
ತಸ್ಮಾತ್ಕರ್ಮ ನ ಕುರ್ವಂತಿ ಯತಯಃ ಪಾರದರ್ಶಿನಃ
ಕರ್ಮಣಾ ಜಾಯತೇ ಪ್ರೇತ್ಯ ಮೂರ್ತಿಮಾನ್ ಷೋಡಶಾತ್ಮಕಃ
ವಿದ್ಯಯಾ ಜಾಯತೇ ನಿತ್ಯಮವ್ಯಕ್ತಂ ಹ್ಯವ್ಯಯಾತ್ಮಕಂ………
ಕರ್ಮಣಃ ಫಲಮಾಪ್ನೋತಿ ಸುಖದುಃಖೇ ಭವಾಭವೌ
ವಿದ್ಯಯಾ ತದವಾಪ್ನೋತಿ ಯತ್ರ ಗತ್ವಾ ನ ಶೋಚತಿ
ಯತ್ರ ಗತ್ವಾ ನ ಮ್ರಿಯತೇ ಯತ್ರ ಗತ್ವಾ ನ ಜಾಯತೇ
ನ ಪುನರ್ಜಾಯತೇ ಯತ್ರ ಯತ್ರ ಗತ್ವಾ ನ ವರ್ತತೇ.
-ಭಾರತ, ಶಾಂತಿಪರ್ವ, ಅ. ೨೪೧, ಶ್ಲೋ, ೭, ೮, ೧೧ .೧೨.
ಸಹಜತೆ, ಪ್ರಾಕೃತಿಕತೆ ಪಡೆಯದಿದ್ದರೆ ಬಾಳಿನ ಸಾರ್ಥಕತೆಯೇನು ಬಂತು ?1 ಹೀಗಾಗಿ, ಎರಡೂ ಧರ್ಮಗಳನ್ನು ಸಂದರ್ಭೋಚಿತವಾಗಿ ವಿವಿಧ ರೀತಿಯ ಸಮನ್ವಯ ತೋರುತ್ತ ವ್ಯಾಸರು ನಿರೂಪಿಸಬೇಕಾಯಿತು.
ಈ ನಿವೃತ್ತಿ ಧರ್ಮ ಬಹು ವಿಚಿತ್ರವೆಂದೆನಿಸುತ್ತದೆ: ಅಭ್ಯಾಸದಿಂದ ಬೆಳೆದು ಬಂದ ಅನಂತ ಸಂಸ್ಕಾರಗಳ ಬಿಡುಗಡೆ (ಅಪವರ್ಗ, ಮೋಕ್ಷ) ಹೇಗೆ? ನಮ್ಮ ಸಂಕುಚಿತ ಆತ್ಮದ ಮೇಲ್ಮೆಗಾಗಿ ಉಕ್ಕುತ್ತಿರುವ ಎಲ್ಲ ಹವಣಿಕೆಗಳೂ ನಂದುವ (ನಿರ್ವಾಣ) ಬಗೆ ಹೇಗೆ ? ಯಾವ ಪ್ರವೃತ್ತಿ, ಆಕೃತಿಗಳಿಗೂ ಒಳಪಡದೆ ಬರಿಯ ಅಸ್ತಿತ್ವದ ಸ್ಪಂದನ ಮಾತ್ರ (ಕೈವಲ್ಯ)ವಾಗಿ ಬಾಳುವ ಬಗೆ ಹೇಗೆ ? ಪುಣ್ಯಕರ್ಮಗಳನ್ನು ಮೆಚ್ಚುವ ಸಾತ್ವಿಕತೆ, ಪ್ರತಿಷ್ಠೆ-ಸಂಪತ್ತು-ಉತ್ಕರ್ಷಗಳಿಗಾಗಿ ಬಾಳ ಹೋರಾಟದಲ್ಲಿ ಸ್ಪರ್ಧಿಸುವ ರಾಜಸತೆ, ಅವಿವೇಕ-ಪ್ರಮಾದಗಳ ತಾಮಸಿಕತೆ–ಈ ತ್ರಿವರ್ಗದಲ್ಲಿ ಅಲಿಪ್ತನಾಗಿ ಹರಿದಾಡುವ ಯೋಗ್ಯತೆ ಬೆಳೆಸಿಕೊಳ್ಳುವ ಬಗೆ ಹೇಗೆ ? ಹೊರ ದ್ವಂದ್ವಗಳಲ್ಲಿ ಹರಿದಾಡಲು ತಡೆಯೊಡ್ಡುವ ಯಾವ ಒಳ ಬಂಧನಗಳೂ ಇರದ ಮಗುವಿನಂತೆ ಹೇಗೆ ಆಗೋಣ ?
ನಾವು ನಮ್ಮನ್ನು ಯಾವುದೋ ಒಂದು ಸಂಕುಚಿತ, ಸೀಮಿತ, ಸಣ್ಣ ರೂಪದಲ್ಲಿ ಕಲ್ಪಿಸಿಕೊಂಡು ಇದರ ಮೇಲೆ ಹೇಗೋ ಯತ್ನಿಸಿದರೆ ಆಗುವುದೆಂದೂ, ಇನ್ನು ಹೇಗೋ ಆದರೆ ಇದರ ಮೇಲ್ಮಗೆ ಧಕ್ಕೆ ಬಂದೀತೆಂದೂ ವಿವಿಧ ಕಲ್ಪನೆಗಳನ್ನು ಬೆಳೆಸಿಕೊಂಡು ಬಂದುದರಿಂದ ; ಬಾಲ್ಯದಿಂದ ನಾವು ಪಡೆದ ಶಿಕ್ಷಣ, ಪುಸ್ತಕಾಧ್ಯಯನ, ಸಾಮಾಜಿಕ ಪ್ರಭಾವಗಳು…………….ಇವೆಲ್ಲದರಿಂದಾಗಿ ನಮ್ಮ ಸೀಮಿತ ಅಹಂತೆಯ ಅರಿವು ದಿನ ದಿನವೂ ಅತಿಸೂಕ್ಷ್ಮವಾಗಿ, ಅತಿ ನಿಬಿಡವಾಗಿ ಬೆಳೆಯುತ್ತಿರುವುದರಿಂದ; ಮೂಲತಃ ಎಲ್ಲಿಯೂ ಇರದ ನೂರಾರು ದ್ವಂದ್ವಗಳನ್ನು ಕಲ್ಪಿಸಿಕೊಂಡು ಅದರ ಗುಲಾಮರಾಗಿ ಕುಣಿದು ದಣಿಯುತ್ತಿದ್ದೇವೆ. ಈ ಸೌಂದರ್ಯ-ವಿಕೃತಿಗಳು, ಸುಖ-ದುಃಖಗಳು, ಪುಣ್ಯ-ಪಾಪಗಳು, ಸಂಪತ್ತು-ವಿಪತ್ತುಗಳು ನಮ್ಮ ಸಂಕುಚಿತ ಆತ್ಮಾಸಕ್ತಿಗೆ ಕಾಣುವ ಚಿತ್ರಗಳೇ ಹೊರತು ಈ ಅಪಾರ ಸೃಷ್ಟಿಯಲ್ಲಿ ಇಂಥ ಯಾವ ಮಾಲುಗಳೂ ಇಲ್ಲ. ನಾವು ನಮ್ಮನ್ನು ಸಣ್ಣದಾಗಿ ನೋಡಿಕೊಳ್ಳುತ್ತಿರುವುದರಿಂದ ಇದರ ಹಿತಕ್ಕಾಗಿ ಒಂದು ಬೇಕಾಗಿದೆ, ಇನ್ನೊಂದು ಬೇಡವಾಗಿದೆ. ಈ ರಾಗದ್ವೇಷಗಳಿಂದ ಪ್ರೇರಿತರಾಗಿ
1 ಅಕೃತ್ರಿಮಮಸಂಹಾರ್ಯಂ ಪ್ರಾಕೃತಂ ನಿರುಪಸ್ಕೃತಂ
ಅಧ್ಯಾತ್ಮಂ ಸುಕೃತಂ ಪ್ರಾಪ್ತ: ಸುಖಮವ್ಯಯಮಶ್ನುತೇ
-ಭಾ, ಶಾಂತಿಪರ್ವ, ಅ. ೨೫೧ ಶ್ಲೋ, ೧೬
ನಾವು ನಮ್ಮೀ ಸಂಕುಚಿತ ಸ್ವಾರ್ಥದ ಪೂರ್ತಿಗಾಗಿ ಯಾರೊಡನೆಯೋ ಹೋರಾಡಲು ತೊಡಗಿದ್ದೇವೆ. ಆದರೆ ನಾವು ಯಾರೊಡನೆ ಹೋರಾಡಲು ಹೊರಟಿರುವೆವೋ, ಅವು ಈ ಸೃಷ್ಟಿಯ, ಶಾಶ್ವತಸತ್ತೆಯ ತಟಸ್ಥ, ಮೂಕ, ನಿರಪೇಕ್ಷ ಸ್ಪಂದನಗಳು. ನಂತರ ನಮ್ಮನ್ನೇ ನಾವು ನೋಡಿಕೊಂಡರೂ ಅಲ್ಲೂ ಕಾಣಸಿಗುವುದು ಸೃಷ್ಟಿಯ ತಟಸ್ಥ, ಮೂಕ, ನಿರಪೇಕ್ಷ ಸ್ಪಂದನಗಳು ಮಾತ್ರ. ನಮ್ಮಲ್ಲಿ ನಾವು ಬರಿಯ ನಿರ್ಗುಣಸ್ಪಂದನಗಳನ್ನು ಕಂಡುಕೊಳ್ಳುವ ಬದಲಾಗಿ ಯಾವುದೋ ಒಂದು ಭವ್ಯ ಬಲಿಷ್ಠ ವ್ಯಕ್ತಿತ್ವವನ್ನು ಕಲ್ಪಿಸಿಕೊಂಡು ಈ ನಾನು ದೊಡ್ಡ ಡಾಕ್ಟರನಾಗಬೇಕು, ಎಂಜಿನಿಯರ್ ಆಗಬೇಕು, ವಿದೇಶಕ್ಕೆ ಹೋಗಬೇಕು, ಮುಖ್ಯಮಂತ್ರಿಯಾಗಬೇಕು, ದೊಡ್ಡ ಸಮಾಜ ಸುಧಾರಕ-ಸಾಧು-ಸಂತನಾಗಬೇಕು, ಸ್ವರ್ಗಕ್ಕೂ ಮೋಕ್ಷಕ್ಕೆ ಹೋಗಿ ನಾಲ್ಕು ದಿನ ಗಮ್ಮತ್ತು ಮಾಡಬೇಕು ಎಂದು ಏನೇನೋ ಯೋಜನೆ ಹಾಕಿಕೊಂಡರೆ ಈ ಸೃಷ್ಟಿಯ ಸ್ಪಂದನಗಳು ನಮಗೆ ಇಂಥ ದೊಡ್ಡತನ ಬರಬಾರದೆಂದು ದ್ವೇಷ ತಾಳಿ ತಮ್ಮ ಸ್ಪಂದನದ ಪದ್ಧತಿಯನ್ನು ಬದಲಾಯಿಸಿ ನಮಗೆ ಕೇಡು ಬಗೆಯುವುದಿಲ್ಲ. ಆದರೆ ಅವುಗಳ ಶಾಶ್ವತ ಸ್ಪಂದನ ಪದ್ಧತಿಯ ಪರಿಣಾಮವಾಗಿ ನಮ್ಮ ಪ್ರೋಗ್ರಾಂ ಬುಡ ಮೇಲಾದರೆ, ನಾವು ‘ಅಯ್ಯೋ’ ಎಂದು ಸಂಕಟಪಡತೊಡಗಿದರೆ ನಮ್ಮ ಬೊಬ್ಬೆ, ನಮ್ಮ ಪ್ರಾರ್ಥನೆ, ನಮ್ಮ ಕಣ್ಣೀರು ಸೃಷ್ಟಿಯ ಈ ಮೂಕ ತಟಸ್ಥ ಸ್ಪಂದನಗಳಿಗೆ ಅರ್ಥವಾಗುವುದಿಲ್ಲ. ಅವುಗಳ ಶಾಶ್ವತ ಕ್ರಮ ಬದಲಾಗುವುದಿಲ್ಲ ಹಾಗಿದ್ದರೆ ನಮ್ಮನ್ನು ಯಾವುದೋ ಒಂದು ರೂಪದಲ್ಲಿ ಕಂಡುಕೊಳ್ಳುವ ಬದಲಾಗಿ ನಿಷ್ಟುರ ದೃಷ್ಟಿಯಿಂದ ನಮ್ಮ ನಮ್ಮ ನಿರ್ಗುಣ, ನಿರಪೇಕ್ಷ, ಶುದ್ಧ ಸ್ವರೂಪವನ್ನು ಕಂಡುಕೊಂಡರೆ ನಾವು ನಮ್ಮ ನಿಜಸ್ವರೂಪವನ್ನು ತಿಳಿದುಕೊಂಡಂತಾಗುತ್ತದೆ. ಆತ್ಮಲಾಭ ಪಡೆದಂತಾಗುತ್ತದೆ. ನಮ್ಮೊಳಗೆ ಒಂದು ಸಣ್ಣತನವನ್ನು ಕಂಡುಕೊಳ್ಳವ ಬದಲಾಗಿ ಈ ಅಪಾರ ಸೃಷ್ಟಿಯಷ್ಟು ವಿಶಾಲವಾದ ದೊಡ್ಡತನ ಯಾ ಮಹತ್ವವನ್ನು ಕಂಡುಕೊಂಡಂತಾಗುತ್ತದೆ. ನಮ್ಮ ತಟಸ್ಥ, ನಿರಪೇಕ್ಷ ಸ್ಪಂದನದ ನಿರ್ಗುಣಸ್ವರೂಪವನ್ನು ನೋಡಿ ಕೊಳ್ಳೋಣ. ಕೈವಲ್ಯ, ಮುಕ್ತತೆ ಸಿದ್ಧವಾಗಿ, ನಮಗಾಗಿ ಚಿರಕಾಲದಿಂದ ಕಾಯುತ್ತಿದೆ.
1 ತಥಾಹ್ಮಸೌ ಮುನಿರಿಹ ನಿರ್ವಿಶೇಷವಾನ್ ಸ ನಿರ್ಗುಣಂ ಪ್ರವಿಶತಿ ಬ್ರಹ್ಮ
ಚಾವ್ಯಯಂ.
-ಭಾ. ಶಾಂತಿಪರ್ವ. ಅ ೨೦೬, ಶ್ಲೋ. ೩೧.
ನಿವರ್ಶಯಿತ್ವಾ ರಸನಾಂ ರಸೇಭ್ಯಃ ಫ್ರಾಣಂ ಚ ಗಂಧಾಚ್ಛ್ರವಣೌ ಚ
ಶಬ್ದಾತ್
ಸ್ಪರ್ಶಾತ್ತ್ವಚ೦ ರೂಪಗುಣಾತ್ತು ಚಕ್ಷುಃ ತತಃ ಪರಂ ಪಶ್ಯತಿ ಸ್ವಂ ಸ್ವಭಾವಂ
-ಭಾ. ಶಾಂತಿಪರ್ವ ಅ. ೩೦೩. ಶ್ಲೋ. ೫.
ಹಾಗಿದ್ದರೆ ವ್ಯಾಸರ ಮೋಕ್ಷಧರ್ಮವನ್ನರಿಯಲು ಈ ನಿರುದ್ದೇಶ, ತಟಸ್ಥ ಸೃಷ್ಟಿಯ ಅರಿವು ಮುಖ್ಯ. ಆದರೆ ತಟಸ್ಥತೆಯನ್ನು ಹೇಗೆ ತಾನೇ ತಿಳಿದುಕೊಳ್ಳಲು ಸಾಧ್ಯ? 1 ದಿನದಿನವೂ ನಮ್ಮ ಕಣ್ಣ ಮುಂದೆ ಮೂಡಿ ಮಾಯವಾಗುವ ವಸ್ತುಗಳು ತೋರಿಕೆಗೆ ವಸ್ತುಗಳಾಗಿದ್ದರೂ ಮೂಲತಃ ಅನಂತ ಸ್ಪಂದನಗಳ ಗೊಂಚಲುಗಳು. ಇವು ಎಷ್ಟು ಕಾಲದವರೆಗೆ ಸ್ಪಂದಿಸುತ್ತಿದ್ದರೂ, ಎಷ್ಟು ವಿಧದ ಆಕೃತಿಗಳನ್ನು ನಿರ್ಮಿಸಿ ಅಳಿಸುತ್ತಿದ್ದರೂ ಎಷ್ಟು ಕಾಲ ಈ ಜಗಚ್ಚಕ್ರವನ್ನು ಉರುಳಿಸುತ್ತಿದ್ದರೂ ತಮ್ಮ ಸ್ವ-ರೂಪದ ಉತ್ಪತಿ-ನಾಶಗಳನ್ನಾಗಲೀ, ವೃದ್ಧಿ-ಕ್ಷಯಗಳನ್ನಾಗಲೀ ಯಾ ಇತರ ಯಾವುದೇ ದ್ವಂದ್ವವನ್ನಾಗಲೀ ಪಡೆಯುವುದಿಲ್ಲ. ಇದು ಸರ್ವದಾ ಇರುವ ತತ್ವವಾದುದರಿಂದ ಸತ್, ಸತ್ಯ, ವಸ್ತುವೆಂದೂ, ಮೂಲತಃ ಯಾವ ಗುಣಧರ್ಮವನ್ನು ಪಡೆಯದಿರುವುದರಿಂದ ನಿರ್ಗುಣ, ನಿರಾಕಾರ, ನಿರ್ವಿಶೇಷ ಎಂದೂ, ಇದಲ್ಲದೆ ಇದರ ಅನೇಕ ಮುಖಗಳನ್ನು ಹೇಳುವುದಕ್ಕಾಗಿ ಅನಾದಿ, ಅನಂತ, ಅಚಲ, ಧ್ರುವ, ಸನಾತನ ಶಾಶ್ವತ, ಶುದ್ಧ ಮೊದಲಾದ ವಿಶೇಷಣಗಳಿಂದಲೂ ವರ್ಣಿಸಲ್ಪಟ್ಟಿದೆ. ಭೌತಿಕ, ರಾಸಾಯನಿಕ, ಜೈವಿಕ ಮೊದಲಾದ ಬೇರೆ ಬೇರೆ ವಿಭಾಗಗಳಲ್ಲಿ ಇಂದಿನ ಮಾನವನು ಕಂಡುಕೊಂಡಿರುವ ನಿಯಮಗಳೆಲ್ಲಾ ಆ ಶಾಶ್ವತ ವಾಸ್ತವಿಕತೆಯ ನಿಯಮಗಳು. ಈ ನಿಯಮಬದ್ಧ ಸ್ಪಂದನಗಳಿರದಿದ್ದರೆ ವಸ್ತುವಿನ ಸತ್ತೆಯೇ ಇಲ್ಲವಾದುದರಿಂದ ಕೆಲವು ವಿಶಿಷ್ಟ ಬೆಳಕಿನ ನಿರಂತರ ಸ್ಪಂದನಗಳಲ್ಲಿ ಚಲನಚಿತ್ರ ತಾರೆಯರ ಹಾವ ಭಾವಗಳನ್ನು ಕಾಣುವಂತೆ ನಾವು ಶಾಶ್ವತ ಸತ್ತೆಯ ಪ್ರವಾಹದಲ್ಲಿ ಹೊಸ ಪ್ರಪಂಚವನ್ನು ಕಾಣುತ್ತಿದ್ದೇವೆ.2 ಈ ನಿಯಮಗಳು ತಾನೆಂಬ ಅಹಂತೆ-ಮಮತೆ, ಪರರೆಂಬ ದ್ವೇಷ-
1 ಅನಾದ್ಯಂತಮಜಂ ದಿವ್ಯಮಜರಂ ಧ್ರುವಮವ್ಯಯಂ ಅಪ್ರತರ್ಕ್ಯಮವಿಜ್ಞೇಯಂ ಬ್ರಹ್ಮಾಗ್ರೇ ಸಂಪ್ರವರ್ತತೇ
ಭಾ. ಶಾಂ. ಅ. ೨೩೧. ಶ್ಲೋ. ೧೧
ಕಲಾನಾಂ ಪೃಥಗರ್ಥಾನಾಂ ಪ್ರತಿಭೇದಃ ಕ್ಷಣೇ ಕ್ಷಣೇ
ವರ್ತತೇ ಸರ್ವಭೂತೇಷು ಸೌಕ್ಷ್ಮ್ಯಾತ್ತು ನ ವಿಭಾವ್ಯತೇ |
ನ ಚ್ಯೆಷಾಮತ್ಯಯೋ ರಾಜನ್ ಲಕ್ಷ್ಯತೇ ಪ್ರಭವೋ ನ ಚ
ಅವಸ್ಥಾ ಯಾಮವಸ್ಥಾ ಯಾಂ ದೀಪವಾರ್ಚಿಷೋ ಗತಿಃ |
ತಸ್ಯಾಪ್ಯೇವಂ ಪ್ರಭಾವಸ್ಯ ಸದಶ್ವಸ್ಯೇವ ಧಾವತಃ
ಅಜಸ್ರಂ ಸರ್ವಲೋಕಸ್ಯ ಕಃ ಕುತೋ ವಾ ನ ವಾ ಕುತಃl
ಕಸ್ಯೇದಂ ಕಸ್ಯವಾನೇದಂ ಕುತೋವೇದಂ ನ ವಾ ಕುತಃ
ಸಂಬಂಧಃ ಕೋ ಭೂತಾನಾಂ ಸ್ವೈರಪ್ಯವಯವೈರಿಹ।
ಭಾ. ಶಾ. ಅ. ೩೨೦. ಶ್ಲೋ. ೧೨೨-೧೨೫.
2
ಪಕ್ಷಪಾತಗಳನ್ನು ಅರಿಯದುದರಿಂದ ಈ ಸೃಷ್ಟಿ, ಸೃಷ್ಟಿಯ ಅಪಾರ ನಿಯತಿ ಸರ್ವದಾ ನಿರಪೇಕ್ಷವಾಗಿದೆ. ಅನಾದಿ ಕಾಲದಿಂದ ಅನಂತ ಕಾಲದವರೆಗೆ ಈ ಸೃಷ್ಟಿ ಸುಮ್ಮನೆ ಮಹಾಸಾಗರದಂತೆ ಸ್ಪಂದಿಸುತ್ತಿದ್ದುದು ಅಥವಾ ಸೌರ ಮಂಡಲದ ಮಹಾ ಜ್ವಾಲೆಯಂತೆ ಜ್ವಲಿಸಿ ಕಂಪಿಸುತ್ತಿದ್ದುದು ಯಾವ ಉದ್ದೇಶಕ್ಕಾಗಿಯೂ ಅಲ್ಲ; ನಿರೀಹ, ನಿರಪೇಕ್ಷ, ತಟಸ್ಥ, ಆಪ್ತಕಾಮ ಇತ್ಯಾದಿ ವಿಶೇಷಣಗಳು ಈ ಅರ್ಥದಲ್ಲಿ ಸೃಷ್ಟಿ ಸ್ವಯಂಸತ್ತೆಯೆಂದು ಹೇಳುತ್ತಿವೆ. ನಿಯತಿ-ಸ್ಪಂದಗಳಿಂದ ಬಾಹ್ಯವಾದ ವಸ್ತು- ಸತ್ತೆಯೇ ಊಹಿಸಲು ಅಸಾಧ್ಯವಾದುದರಿಂದ ಈ ಸ್ಪಂದ ಕಂಪಗಳೇ ವಸ್ತುಸತ್ತೆ, ವಸ್ತುಸತ್ತೆಯೇ ಈ ಸ್ಪಂದಕಂಪಗಳು. ಇಂಥ ಸ್ಪಂದ-ಕಂಪಗಳು ಸರ್ವದಾ ಇದ್ದುದರಿಂದಲೇ ಸೃಷ್ಟಿಯ ಎಲ್ಲ ಕ್ರಿಯೆಗಳೂ, ಇದರ ಎಲ್ಲ ಕೋಲಾಹಲಗಳೂ ಸಂಭವಿಸು ತಿರುವುದರಿಂದ ಇವು ಸತ್ತೆಯ ಇರುವಿಕೆಯ ನಿರಪೇಕ್ಷ ಮೌನದ ಅಭಿವ್ಯಕ್ತಿಯಾಗಿವೆ. ಆದುದರಿಂದಲೇ ಇಷ್ಟು ದೊಡ್ಡ ವಿಶ್ವದ ನಿರ್ಮಾಣಕ್ಕಾಗಿ ಯಾರೂ ಇಚ್ಛೆ-ಅಪೇಕ್ಷೆಗಳನ್ನು ತಾಳಿಲ್ಲ, ಯಾರೂ ಪ್ರಯತ್ನ ಮಾಡಿಲ್ಲ, ಇದರಿಂದ ಯಾವ ಫಲವನ್ನೂ ಪಡೆದಿಲ್ಲ. ಯಾವ ಪ್ರಯತ್ನವೂ ಇರದಿದ್ದುದರಿಂದ ಮನುಷ್ಯನಿಗೆ ತಿಳಿದಿರುವ ದಣಿವು ಆಯಾಸಗಳೂ ಈ ಶಾಶ್ವತ ಸತ್ತೆಗಿಲ್ಲ. ಈ ಭೂಮಿ, ಇದರಲ್ಲಿರುವ ವಿವಿಧ ದೇಶಗಳು, ಈ ರೀತಿಯ ಜನರು, ಇಂಥ ವೈಭವದ ಆಧುನಿಕ ಸಭ್ಯತೆ, ಇಂದು ಪ್ರಚಾರದಲ್ಲಿರುವ ವಿವಿಧ ಭಾಷೆ, ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯಗಳು–ಯಾವ ಕಾರ್ಯವೂ ನಾವು ತಿಳಿದಂಥ ಯೋಜನೆಯಿಂದ ರೂಪುಗೊಂಡಿಲ್ಲ. ಇವೆಲ್ಲ ಶಾಶ್ವತ ಸತ್ತೆಯ ಇರುವಿಕೆಯ ಮೂಕ ಪರಿಣತಿಗಳು. 1 ಈ ಸ್ಪಂದಗಳೆಲ್ಲ ಸತ್ತೆಯ ಇರುವಿಕೆಗೆ ಅಂತರ್ಗತವಾದುದರಿಂದಲೇ ಇದನ್ನು ಕೂಟಸ್ಥ, ವಿಭು, ಅಚಲ, ಧ್ರುವ, ನಿಷ್ಕ್ರಿಯ ಮೊದಲಾದ ಶಬ್ದಗಳಿಂದ ವಿವರಿಸಿದ್ದಾರೆ. ಇಷ್ಟೆಲ್ಲ ವಿಶ್ವದ ಶಿಲ್ಪವಿಧಾನ2 ಸಹಜವಾಗಿ ಚಿಮ್ಮಿ ಬರುವುದಾದರೆ ಅಂಥ ಸತ್ತೆಯನ್ನು ‘ಭೂಮಾ ವೈ ಸುಖಂ’ ಎಂದು ಮೆಚ್ಚಿದುದು ಸರಿಯಾಗಿದೆ. ಸತ್ತೆಯ ಸಹಜ ಮೌನ ಸ್ಥಿತಿಯಿಂದ ಇಷ್ಟೆಲ್ಲ ಗತಿಪ್ರವಾಹಗಳೂ, ಇಷ್ಟೆಲ್ಲ ನಾಮರೂಪ
1 ಜಗಚ್ಚಿ ದಿಕ್ಷುಮಾಧುರ್ಯ೦ ಚಿತ್‌ಕ್ಷೀರಸ್ನಿಗ್ಧತಾ ಜಗತ್
ಜಗಚ್ಚಿದ್ಧಿಮಶೀತತ್ವಂ ಚಿಜ್ಜ್ವಾಲಾಜ್ವಲನಂ ಜಗತ್…
ಜಗಚ್ಚಿತ್ಪುಷ್ಪಸೌಗಂಧ್ಯಂ ಚಿಲ್ಲತಾಗ್ರಫಲಂ ಜಗತ್
ಚಿತ್ಸತ್ತೈವ ಜಗತ್ಸತ್ತಾ ಜಗತ್ಸತ್ತೈವ ಚಿದ್ವಪುಃ
-ಯೋಗವಾಸಿಷ್ಠ
2 ಅನುತ್ಕೀರ್ಣೈವ ಭಾತೀವ ತ್ರಿಜಗಚ್ಚಾಲಭಂಜಿಕಾ
ಚಿತ್‌ಸ್ತಂಭೇನೈವ ಸೋತ್ಕಿರ್ಣಾ ನಚೋತ್ಕರ್ತಾತ್ರ ದೃಶ್ಯತೇ
ಯೋಗವಾಸಿಷ್ಠ
ವಿಸ್ತಾರಗಳೂ ಅರಳಿ ಬರುವುದಾದರೆ ಈ ಸೃಷ್ಟಿ ನಿಜವಾಗಿಯೂ ಶಾಶ್ವತ ಸತ್ತೆಯ ಒಂದು ಅದ್ಭುತ-ರಮ್ಯ ವ್ಯಾಖ್ಯೆಯಾಗಿದೆ. ಯಾರ ಪ್ರಯತ್ನವೂ ಇಲ್ಲದೆ ಅನಾಯಾಸವಾಗಿ ಎಷ್ಟು ವಿಶ್ವವಿಸ್ತರಣ ಕಾರ್ಯ ನಡೆಯುತ್ತಿದೆ !1
ಶಾಶ್ವತ ಸತ್ತೆ ನಿರುದ್ದೇಶವೆಂದಾಗ ನಮ್ಮ ಮನಸ್ಸು ಗೊಂದಲಕ್ಕೀಡಾಗುತ್ತದೆ. ನಿಜ. ಆದರೆ ಇದು ನಿರುದ್ದೇಶವಾಗಿರದಿದ್ದರೆ ನಮ್ಮಂತೆಯೇ ಅಪೂರ್ಣತೆ, ಅಲ್ಪತೆಗಳ ಒಳ ನೋವಿಗೆ ಗುರಿಯಾಗುತ್ತಿರಲಿಲ್ಲವೇ ? ಇದರ ನಿರುದ್ದೇಶತೆಯಲ್ಲೇ ಇದರ ಸ್ವಯಂ-ಸಂಪೂರ್ಣತೆಯಿದೆ. ಸೃಷ್ಟಿಯ ಪ್ರತಿಯೊಂದು ಕಣದಲ್ಲಿ ತುಂಬಿರುವಂತೆ ನಮ್ಮ ವ್ಯಕ್ತಿತ್ವದಲ್ಲೇ ಅಡಗಿಕೊಂಡಿರುವ ಈ ಪೂರ್ಣತೆ ನಮ್ಮ ಸಂಕುಚಿತ ಆತ್ಮಾಸಕ್ತಿಯಿಂದಾಗಿ ಕಾಣದಂತಾಗಿದೆ. ಆದರೆ ನಮ್ಮಲ್ಲಿ ಅಡಗಿಕೊಂಡಿರುವ ಸಂಪೂರ್ಣತೆಯನ್ನು ಪಡೆಯದೆ ಶಾಂತಿ-ಪ್ರಸನ್ನತೆಗಳ ಅನುಭವ ಮೂಡಿಬರುವಂತಿಲ್ಲ.
ನಾವು ಜ್ಞಾನ, ಚೈತನ್ಯಗಳನ್ನು ತುಂಬ ಅಮೂಲ್ಯವಾದುದೆಂದು ನಂಬಿ ಬಂದಿದ್ದೇವೆ. ಆದರೆ ಜ್ಞಾನವೂ ಒಂದು ವಿಧದ ಅಂತಃಸ್ಪಂದದ ಪರಿಣಾಮವೇ ಆದುದರಿಂದ ಇವೂ ಸಹ ಬೇರೆ ಸ್ಪಂದಗಳಂತೆ ನಿರಪೇಕ್ಷ (inert) ವಾಗಿವೆ. ಹೀಗಾಗಿ ಜಡ ನಿಯಮಗಳಿಂದ ಅಭಿವ್ಯಕ್ತಿ ತಾಳುವ ಚೈತನ್ಯ ತನ್ನ ರಾಜಸಿಂಹಾಸನದಿಂದ ಕೆಳಗಿಳಿದು ಶಾಶ್ವತ ಸತ್ತೆಯ ಜಡತೆಯ ಗರ್ಭದಲ್ಲಿ ಮಾಯವಾಗಬೇಕಾಗುತ್ತದೆ ಅಥವಾ ಹೀಗೆ ಹೇಳಿಕೊಳ್ಳಲು ನಮಗೆ ಇಷ್ಟವಿರದಿದ್ದರೆ ಜಡತೆಯ ರಾಜ್ಯವೆಲ್ಲ ನಿರಪೇಕ್ಷ ಚೈತನ್ಯದಿಂದ ತುಂಬಿದ ದಿವ್ಯಲೋಕವಾಗಿಬಿಡುತ್ತದೆ. ಇಂಥ ಶಾಶ್ವತ ಸತ್ತೆ ತನ್ನ ವ್ಯಕ್ತಿತ್ವದಲ್ಲಿ
1 That man is the product of causes which had no prevision of the end they were achieving; that his origin, his growth, his hopes and fears, his loves and beliefs, are but the outcome of accidental collocations of atoms; that no fire, no heroism, to intensity of thought and feeling can preserve an individual life beyond the grave; that all the labours of the ages, all the devotion, all the inspiration, all the noonday-brightness of human genius, are destined to extinction in the vast decath of the solar system and that the whole templc of Man’s achievement must inevitably be buried beneath the debris of a universe in ruins—all these things, if not quite beyond dispute, are yet so nearly certain, that no philosophy which rejects them can hope to stand.
-Bertrand Russell
ಜಾಡ್ಯ-ಚೈತನ್ಯಗಳನ್ನು ಕರಗಿಸಿ ಸಮರಸವಾಗಿರಿಸಿಕೊಂಡುದರಿಂದಲೇ ಇದರ ನಿರುದ್ದೇಶತೆ-ನಿರಪೇಕ್ಷತೆಗಳಲ್ಲಿ ಪೂರ್ಣತೆಯಿದೆ. ಆನಂದವಿದೆ; ಮೂಕ ಆನಂದದ ಇರುವಿಕೆಯ ಒತ್ತಡದಿಂದುಂಟಾದ ಸತ್ತೆಯ ಉಬ್ಬರ (ಭೂಮಾ) ವಿದೆ. ಆದುದರಿಂದಲೇ ವಿಶ್ವ ಲೀಲಾಜಾಲವಾಗಿ ಅರಳುತ್ತಿದೆ. ಇಲ್ಲಿಯ ಸೌಂದರ್ಯ-ವಿಕೃತಿ, ಉತ್ಥಾನ-ಪತನ ಮೊದಲಾದ ಎಲ್ಲ ದ್ವಂದ್ವಗಳೂ ಅಪಾರವಾದ ಶಕ್ತಿ ಸಾಗರದಲ್ಲಿ ‘ಅನಂತ’ ಕಾಲದಿಂದ ಇಂದಿನವರೆಗೂ, ಇನ್ನು ಮುಂದಕ್ಕೂ, ಸರ್ವದಾ ‘ಶಯನಗೈಯುತ್ತಿರುವ ಮಹಾ ಶಕ್ತಿಯ ಮೌನದ ಪರಿಣತಿಗಳು. ಇಂಥ ವ್ಯಾಪಕಸತ್ತೆಯ ವಿಶ್ವರೂಪವನ್ನು ಚೆನ್ನಾಗಿ ಕಂಡುಕೊಂಡರೆ ನಮ್ಮ ಅಲ್ಪತೆ ಕರಗದೆ ಇರಲಾರದು.
ಸತ್ತೆ ಮತ್ತು ಅದರ ಸ್ಪಂದಗಳು ಒಂದೇ, ಆದುದರಿಂದ ಸತ್ತೆಯ ಶುದ್ಧ ಸ್ಥಿತಿ ಮಾತ್ರದಿಂದಲೇ ವಿಶ್ವನಿರ್ಮಾಣದ ಅಪಾರ ಕಾರ‍್ಯ ನಡೆಯುತ್ತಿದೆಯೆಂಬ ಮಾತು ಓದುಗರಿಗೆ ವಿಚಿತ್ರವಾಗಿ ಕಾಣಬಹುದು. ಇದಕ್ಕಾಗಿ ಸ್ವಲ್ಪ ಕಾಲ ನಮ್ಮ ಸುತ್ತಲಿನ ಪರಿಸರದತ್ತ ದೃಷ್ಟಿ ಹರಿಸಿ ನೋಡೋಣ.
ಇದೀಗ ಮಳೆಗಾಲ. ಮಳೆಯ ತಂಪಿನಿಂದ ಗೆಲುವು ಪಡೆದು ಸೂಕ್ಷ್ಮ, ಸೂಕ್ಷ್ಮತರ ಕ್ರಿಮಿ-ಕೀಟಗಳು, ಪಕ್ಷಿಪತಂಗಗಳು ಆನಂದದಿಂದ ಝೇಂಕರಿಸುತ್ತಿವೆ. ಮೈದಾನಿನಲ್ಲಿ ಆಟವಾಡುತ್ತ ಕಿರಚುತ್ತಿರುವ ಶಾಲಾ ವಿದ್ಯಾರ್ಥಿಗಳಂತೆ ಈ ಕ್ರಿಮಿಕೀಟಗಳು ಆನಂದವನ್ನು ಸಹಿಸಲಾರದೆ ಕೂಗಾಡುತ್ತಿವೆ. ಸರಿಯಾಗಿ ಗಮನವಿತ್ತು ಆಲಿಸಿದರೆ ಎಷ್ಟು ನಮೂನೆಯ ಸಣ್ಣ, ದೊಡ್ಡ ಸ್ವರಗಳು ! ಎಷ್ಟು ಸೂಕ್ಷ್ಮವಾದ ನಿರಂತರ ಧ್ವನಿಗಳು. ಒಂದು ಕ್ಷಣವೂ ಸುಮ್ಮನಿರಲಾರದೆ ಇವು ಜೀವನದ ಆನಂದಯಾತ್ರೆಯಲ್ಲಿ ಮುಂದೆ ಮುಂದೆ ಧಾವಿಸುತ್ತಿವೆ. ೨೦ನೆಯ ಶತಕದಲ್ಲಿ ಓದಿ ಓದಿ ಮರುಳಾದ ಒಬ್ಬ ವಿಚಾರಕ ವಿಚಾರ ಮಾಡಿ ಮಾಡಿ ಬುದ್ಧಿಭ್ರಮಣವನ್ನು ಹೆಚ್ಚಿಸಿಕೊಂಡು ಬಾಳು ನಿರರ್ಥಕವೆಂಬ ನಿರಾಶೆಯ ತೀರ್ಮಾನ ತಂದುಕೊಂಡು ವಿಷಣ್ಣನಾಗಿದ್ದರೆ ಪ್ರಕೃತಿಯ ರಾಜ್ಯದಲ್ಲಿ ಒಂದು ಲಕ್ಷ ಜೀವಿಗಳು ನಲಿದಾಡುತ್ತಿದ್ದಾರೆ. ಈ ಕ್ರಿಮಿಕೀಟಗಳ ಎಲ್ಲ ಜೀವನಾನಂದಗಳೂ ಶಾಶ್ವತ ಸತ್ತೆಯಿಂದ ಚಿಮ್ಮಿ ತಾನಾಗಿ ಬರುತ್ತಿವೆ. ಇಷ್ಟೆಲ್ಲ ಜೀವನವನ್ನು ಯಾರು ಅರಳಿಸುತ್ತಿದ್ದಾರೆ ? ಈ ಮಳೆ-ಗಾಳಿಗಳು ಸಹಜವಾಗಿ ಬರುತ್ತಿಲ್ಲವೇ ? ಬಿದ್ದ ನೀರು ಸಹಜವಾಗಿ ಪೋಷಕತತ್ವಗಳನ್ನು ಕರಗಿಸಿಕೊಂಡು ಧಾವಿಸುತ್ತಿಲ್ಲವೇ ? ಸಸ್ಯಗಳು ಸಹಜವಾಗಿ ಸಾರವನ್ನು ಹೀರಿಕೊಳ್ಳುತ್ತಿಲ್ಲವೆ?
ಈ ಅಂತರಿಕ್ಷದ ಅಪಾರಶೂನ್ಯತೆಯ ಯಾವುದೋ ಒಂದು ಮೂಲೆಯಲ್ಲಿ ನಮ್ಮ ಸೂರ್ಯ ಸುಮ್ಮನೆ ಜ್ವಲಿಸುತ್ತಿರುವನಂತೆ. ಈ ಸೂರ್ಯನ ಕೇಂದ್ರವನ್ನೂ ಭೂಮಿಯ
ಕೇಂದ್ರವನ್ನೂ ಒಂದು ಸರಳರೇಖೆಯಿಂದ ಜೋಡಿಸಿ ಆ ರೇಖೆಯನ್ನು ಗರ‍್ರನೆ ತಿರುಗುವಂತೆ ಮಾಡಿದರೆ ಉಂಟಾಗುವುದೆಂದು ನಾವು ಕಲ್ಪಿಸಿಕೊಂಡ ತಲ (plane)ಕ್ಕೆ 23 2/1° ಯಷ್ಟು ಮಾಲಿಕೊಂಡು ಈ ಭೂಮಿಯೇತಕ್ಕಾಗಿ ಉರುಳುತ್ತಿದೆ ? ಭೂಮಿಯ ಸ್ಥಿತಿ ಹೀಗಾದರೆ ಉತ್ತರ ದಕ್ಷಿಣಾಯನಗಳಾಗದಿರಲು ಹೇಗೆ ಸಾಧ್ಯ ? ಈ ಅಯನಗಳಾದರೆ ನೇರವಾದ ಸೂರ್ಯಕಿರಣದ ಬಿಸಿ ಪಡೆದ ವಾತಾವರಣ ತನ್ನ ಒತ್ತಡದಲ್ಲಿ ಶಿಥಿಲಗೊಳ್ಳದಿರಲು ಹೇಗೆ ಸಾಧ್ಯ ? ದಕ್ಷಿಣದಲ್ಲಿ ಸಹಜವಾದ ಶೈತ್ಯದ ಘನತೆ ಸೂರ್ಯ ಕಿರಣಗಳ ವಕ್ರಪತನದ ಪ್ರಮಾಣ ಹೆಚ್ಚಿದಂತೆ ದಕ್ಷಿಣ ಮತ್ತು ಉತ್ತರಗಳ ಒತ್ತಡದ ಅಂತರ ಹೆಚ್ಚದಿರಲು ಹೇಗೆ ಸಾಧ್ಯ ? ಇಂಥ ಅಂತರವುಂಟಾದರೆ ಅಧಿಕ ಒತ್ತಡದ ಪ್ರದೇಶದಿಂದ ಕನಿಷ್ಠ ಒತ್ತಡದ ಪ್ರದೇಶಕ್ಕೆ ಹವೆ ಧಾವಿಸದಿರಲು ಹೇಗೆ ಸಾಧ್ಯ ? ಈ ಹವೆಯೊಡನೆ ಜಲಕಣಗಳು ತೂರಿಬಂದು ಉತ್ತರದಲ್ಲಿ ಬೇಕೆಂದಾಗ ಬಾರದಿದ್ದರೂ ಬೇಡವೆಂದಾಗ ಮಳೆಬಾರದಿರಲು ಹೇಗೆ ಸಾಧ್ಯ ? ಮಳೆಯ ನೀರು ತಗ್ಗನ್ನರಸುತ್ತ ಪಶುವನಸ್ಪತಿಗಳನ್ನು ಕೊಚ್ಚಿ ಸೆಳೆಯುತ್ತ, ಕೇರಿಗ್ರಾಮಗಳನ್ನು ನೀರುಪಾಲು ಮಾಡುತ್ತ, ತೊರೆಯಾಗಿ, ಗರ್ಜಿಸುವ ನದಿಯಾಗಿ ಸಮುದ್ರ ಸೇರದಿರಲು ಹೇಗೆ ಸಾಧ್ಯ? ಮಳೆಯ ತಂಪಿನಿಂದುಂಟಾದ ಹೊಸ ವಾತಾವರಣದಲ್ಲಿ ಸಿಕ್ಕಾಪಟ್ಟೆ ಹರಡಿ ಬಿದ್ದಿರುವ ಬೀಜಗಳು ಕಳೆ-ಬೆಳೆಯೆಂಬ ಭೇದವಿಲ್ಲದೆ ಚಿಗುರಿಬರಲು ಪ್ರಯತ್ನ ಬೇಕಾಗಿದೆಯೇ ? ಸುಖವಾಗಿ ಉಂಡುತಿಂದು ಕಷ್ಟ ಕಾಣದೆ ಕೊಬ್ಬಿಬೆಳೆದ ಕುಮಾರ ಕಂಠೀರವ ಅಪ್ಪನಿಗೆ ಚಪ್ಪಲಿ ತೋರಿಸುವ ಪ್ರಸಂಗ ಯಾರ ಪ್ರಯತ್ನವೂ ಇಲ್ಲದೆ ತಾನೇ ತಾನಾಗಿ ಬರುವುದಿಲ್ಲವೇ ? ಅನಾಥವ್ಯಕ್ತಿ ಆರೋಗ್ಯವಂತನಾಗಿದ್ದರೆ ಏರಿ ಶ್ರಮದಿಂದ ಪ್ರಗತಿಪಡೆಯದಿರಲು ಹೇಗೆ ಸಾಧ್ಯ ? ಬಡಪಾಯಿಯಾದ ವ್ಯಕ್ತಿ ಕೆಲವೊಂದು ರೋಗದೌರ್ಬಲ್ಯಗಳಿಂದ ಪೀಡಿತನಾಗಿದ್ದರೆ ಅನಾಯಾಸವಾಗಿ ಕೆಲವೊಂದು ರೀತಿಯಲ್ಲಿ ವೇದಾಂತಿಯಾಗುವುದಿಲ್ಲವೇ ? ಸೌಂದರ್ಯ, ಪಾಂಡಿತ್ಯ, ಅಧಿಕಾರ, ಕೀರ್ತಿ, ಪ್ರತಿಷ್ಠೆ, ಪುಣ್ಯ ಮೊದಲಾದ ಸಾತ್ವಿಕ ಸ್ಥಿತಿಗಳು ಸಂತೋಷವನ್ನರಳಿಸಿ, ಅಹ೦ತೆಯನ್ನುಬ್ಬಿಸಿ, ‘ತಾಮಸ’ ಸ್ಥಿತಿಯ ದಾರಿಯಲ್ಲಿ ಸಹಜವಾಗಿ ಹೇಗೆ ಸೆಳೆಯುತ್ತಿವೆ ? ರೋಗ, ಪಾಪ, ದುಃಖ, ವಿಕೃತ ಮೊದಲಾದ ತಾಮಸ ಸ್ಥಿತಿಗಳು ಪ್ರಯತ್ನ ಸಾಹಸಗಳನ್ನರಳಿಸಿ ಹೇಗೆ ಸಹಜವಾಗಿ ಉತ್ಥಾನಕ್ಕೆ ದಾರಿಮಾಡಿಕೊಡುತ್ತವೆ ? ನಮ್ಮ ಹೊರ ವಿಶ್ವದಲ್ಲಾಗಲೀ ಅಂತರ್ವಿಶ್ವದಲ್ಲಾಗಲೀ ಹಿನ್ನೆಲೆಯಲ್ಲಿರುವ ಒಟ್ಟು ಸನ್ನಿವೇಶಗಳ ಪರಿಣತಿ ಸಹಜವಾಗಿ ಅನಾಯಾಸವಾಗಿ ಯಾರ ಪ್ರಯತ್ನವೂ ಇಲ್ಲದೆ ನಡೆಯುತ್ತಿದೆ. ಮನುಷ್ಯನ ಅಹಂಕಾರಪ್ರೇರಿತವಾದ ಸಂಕಲ್ಪ-ವಿಕಲ್ಪಗಳ ಪ್ರಪಂಚದಲ್ಲಿ ಪ್ರಯತ್ನ, ಶ್ರಮ, ಚಿಂತೆ, ದಣಿವು ಮೊದಲಾದ ಸ್ಥಿತಿಗಳು ಕಾಣಿಸಿಕೊಳ್ಳುತ್ತಿದ್ದರೂ ಮನುಷ್ಯನನ್ನು ಒಮ್ಮೆ ಭವ್ಯತೆ ಉತ್ಕರ್ಷಗಳ ಶಿಖರಕ್ಕೇರಿಸಿ ಇನ್ನೊಮ್ಮೆ ನೆಲಕ್ಕಪ್ಪಳಿಸಿ ನೆರೆನೀರಿನಂತೆ ಮುಂದೆ ಸಾಗುತ್ತಿರುವ ಮನುಷ್ಯನ ಬಾಳಮೂಲದಲ್ಲಿ ಮಿಡುಕುತ್ತಿರುವ, ತಟಸ್ಥ ಸ್ಪಂದನಗಳ ಪ್ರಪಂಚದಲ್ಲಿ ಇವು ಯಾವುವೂ ಇಲ್ಲ. ವಿಶ್ವ ಸುಮ್ಮನೆ ಇದೆ.
ಸರಿಯಾದ ಸನ್ನಿವೇಶದಲ್ಲಿ ಬೆಂಕಿಯ ಇರುವಿಕೆಯೇ ದಹನಕ್ರಿಯೆ, ಸನ್ನಿವೇಶವಿಶೇಷದಲ್ಲಿ ಗಾಳಿಯ ಇರುವಿಕೆಯೇ ಬೀಸುವ ಗಾಳಿ ಅಥವಾ ಇನ್ನೊಂದು ತೆರನಾದ ಗಾಳಿ. ಸನ್ನಿವೇಶವಿಶೇಷದಲ್ಲಿ ನೀರಿನ ಇರುವಿಕೆಯೇ ನೀರಿನ ಹರಿಯುವಿಕೆ. ಸರಿಯಾದ ಸನ್ನಿವೇಶಗಳಲ್ಲಿ ಎರಡು ಅನಿಲಗಳ ಇರುವಿಕೆಯೇ ನೀರು. ಸರಿಯಾದ ಸನ್ನಿವೇಶದಲ್ಲಿ ಬೀಜದ ಇರುವಿಕೆಯೇ ಅಂಕುರ, ಮರ, ಫಲಪುಷ್ಪಗಳು, ಹುಟ್ಟಿಬಂದಾಗ ನಾವು ಪಡೆದಿದ್ದ ವ್ಯಕ್ತಿತ್ವದ ಮೊತ್ತಕ್ಕೆ ನಂತರ ಸೇರಿದ ಸನ್ನಿವೇಶಗಳಿಗನುಸಾರವಾದ ಫಲ ನನಗೆ ಸರಿಯಾಗಿ, ಸಹಜವಾಗಿ, ತತ್ಕಾಲದಲ್ಲಿ ಬಂದಿದೆ. ಇದರಿಂದ ಮನುಷ್ಯನ ಕಣ್ಣುಗಳು ಈ ಸೂಕ್ಷ್ಮ ಪ್ರಪಂಚದ ವಿರಾಟ್‌ಲೀಲೆಯನ್ನು ಸ್ವಲ್ಪವೂ ತಪ್ಪದೆ ಗಮನಿಸಿಕೊಳ್ಳುವ ಯೋಗ್ಯತೆಯನ್ನು ಪಡೆಯಲಾರದಾದರೂ ಶಾಶ್ವತ ಸತ್ತೆಯ ಸ್ಥಿತಿ ಮತ್ತು ಗತಿಗಳು ಬೇರೆಯಲ್ಲ ಎಂಬುದು ವಿದಿತವಾಗುತ್ತವೆ.
ಕೈಯಲ್ಲೊಂದು ಪುಸ್ತಕವನ್ನು ನಾನು ಹಿಡಿದಿರುತ್ತೇನೆ. ಆಗ ಅದು ಬೀಳುವುದಿಲ್ಲ. ಕ್ಷಣಾಂತರದಲ್ಲಿ ನನ್ನ ಮಿದುಳು ಬೆರಳ ನರಗಳಿಗೆ ಬೇರೆ ಆಜ್ಞೆಯನ್ನಿತ್ತುದರಿಂದ ಆ ಬೆರಳುಗಳು ಪುಸ್ತಕದ ಯೋಚನೆ ಬಿಟ್ಟು ಸಿಗರೇಟ್ ಪ್ಯಾಕೆಟ್ಟಿನ ಕಡೆ ಧಾವಿಸಿದರೆ ಕೈಯ ಹಿಡಿತವನ್ನು ಕಳೆದುಕೊಂಡ ಪುಸ್ತಕ ಬೀಳಬೇಕಾಗುತ್ತದೆ. ಈ ಬೀಳುವಿಕೆಯನ್ನು ನಾವು ಕ್ರಿಯೆಯನ್ನುತ್ತೇವೆ. ಆದರೆ ಇದು ನಿಜವಾಗಿಯೂ ಪ್ರತ್ಯೇಕ ಮತ್ತು ಸ್ವತಂತ್ರ ಅಸ್ತಿತ್ವವನ್ನು ಪಡೆದ ಕ್ರಿಯೆಯೆ ? ಅಥವಾ ಕೈಯ ಹಿಡಿತ ಕಳೆದುಕೊಂಡ ಕ್ಷಣದಲ್ಲಿ ವಸ್ತುವಿನ ಇರುವಿಕೆಯೇ ನಮ್ಮ ಪಾಲಿಗೆ “ಬೀಳುವಿಕೆ”ಯಾಗಿದೆಯೇ ? ಗುರುತ್ವಾಕರ್ಷಣ ಕಾರಣವೆನ್ನಲಾಗುತ್ತಿದೆ. ಈ ಆಕರ್ಷಣ ಮೊದಲೂ ಇತ್ತು, ನಂತರವೂ ಇದೆ. ಒಂದು ಸನ್ನಿವೇಶದಲ್ಲಿ ಅದೇ ಸ್ಥಿತಿ, ಇನ್ನೊಂದು ಸನ್ನಿವೇಶದಲ್ಲಿ ಅದೇ ಗತಿ, ವಸ್ತುವಿನ ಸತ್ತೆಯಲ್ಲೇ ಸನ್ನಿವೇಶಾನುಸಾರವಾಗಿ ಅಭಿವ್ಯಕ್ತಿ ಪಡೆಯಬಲ್ಲ ನಿಯತಿಗಳು ತುಂಬಿವೆ. ಆ ನಿಯಮಗಳೇ ಬೇರೆ ಬೇರೆ ಕ್ರಿಯೆಯಾಗಿ ಮಾರ್ಪಡುತ್ತಿವೆ. ಆದುದರಿಂದ, ವಸ್ತುವಿನ ಇರುವಿಕೆಯೇ ವಿಶ್ವದ ಸೃಷ್ಟಿ ವ್ಯಾಪಾರದ ಅಪಾರ ಕೋಲಾಹಲಗಳು.
ಭೂಮಿ ಸೂರ್ಯನಿಗೆ ಸುತ್ತು ಬರಲು ಶ್ರಮಿಸುತ್ತಿಲ್ಲ. ಇಲೆಕ್ಟ್ರಾನ್ ಅಣುಬೀಜಕ್ಕೆ ಪ್ರದಕ್ಷಿಣೆ ಬರಲು ಶ್ರಮಿಸುತ್ತಿಲ್ಲ. ಸೌರಮಂಡಲದಿಂದ ಬಿಡುಗಡೆ ಹೊಂದಿದ ಬೆಳಕಿನ ತರಂಗ-ಕಣಗಳು ಕ್ಷಣಕ್ಕೆ 1,86,000 ಮೈಲು ವೇಗದಿಂದ ಶೂನ್ಯದ ದಿಗಂತಗಳಲ್ಲಿ ಧಾವಿಸಲು ಶ್ರಮಿಸುತ್ತಿಲ್ಲ. ಲಂಡನ್ನಿನಿಂದ ಬಿತ್ತರಿಸಲ್ಪಟ್ಟ ರೇಡಿಯೋ ತರಂಗಗಳು ಭಾರತಕ್ಕೆ ಧಾವಿಸಲು ಒದ್ದಾಡುತ್ತಿಲ್ಲ. ವಿದ್ಯುಚ್ಛಕ್ತಿ ನಿಶ್ಚಿತವೇಗದಿಂದ ತಂತಿಗಳಲ್ಲಿ ಧಾವಿಸಲು ತವಕಪಡುತ್ತಿಲ್ಲ. ಎಚ್ಚರ ತಪ್ಪಿ ನೀವೆಲ್ಲಾದರೂ ಈ ತಂತಿಯನ್ನು ಸ್ಪರ್ಶಿಸಿದರೆ ನಿಮ್ಮ ಪ್ರಾಣ ಹೋಗುವುದು ಒಂದು ಪ್ರತ್ಯೇಕಕ್ರಿಯೆಯಲ್ಲ. ನಾವು ತಿಳಿದಿರುವ ಎಲ್ಲ ಭೌತಿಕ, ರಾಸಾಯನಿಕ, ಜೈವಿಕ ಕ್ರಿಯೆಗಳೂ ಸನ್ನಿವೇಶಾನುಸಾರವಾಗಿ ವಸ್ತುವಿನ ಇರುವಿಕೆಯ ಪರಿಣತಿಗಳು.
ಹೇಗೆ ನಿಶ್ಚಿತ ಗಾತ್ರದ ಭೂಮಿ ನಿಶ್ಚಿತ ಗಾತ್ರದ ಸೂರ‍್ಯನಿಗೆ ನಿಶ್ಚಿತ ದೂರದಲ್ಲಿರುವುದರಿಂದಲೇ ತನ್ನ ಸತ್ತೆಯ ಅಭಿವ್ಯಕ್ತಿಯನ್ನು ನಿಶ್ಚಿತ ವೇಗದ ಸುತ್ತುವಿಕೆಯಲ್ಲಿ ತೋರಿಸುತ್ತಿದೆಯೋ ಹಾಗೆಯೇ ನನ್ನ ನಿಮ್ಮ ಅಸ್ತಿತ್ವದ ಮೊತ್ತ ಕ್ಷಣಕ್ಷಣದಲ್ಲಿ ಬದಲಾಗುವ ಪರಿಸರಕ್ಕೆ ತಕ್ಕಂತೆ ಹೊಸಹೊಸ ಭಾವಸ್ಥಿತಿಗಳ ಪರಿಣತಿಯನ್ನು ಪಡೆಯುತ್ತಿದೆ. ಈ ದೃಷ್ಟಿಯಿಂದ ಸೂಕ್ಷ್ಮವಾಗಿ ಪರಿಶೀಲಿಸಿದರೆ ವಿಶ್ವ ಸುಮ್ಮನಿದೆಯೆನ್ನುವ ಮಾತು ವಿಶ್ವ ಚಲಿಸುತ್ತಿದೆಯೆನ್ನುವ ಮಾತಿನಷ್ಟೇ ಸತ್ಯವಾಗಿದೆ. ಗೀತೆಯಲ್ಲಿ ‘ಕರ್ಮಣ್ಯಕರ್ಮ ಯಃ ಪಶ್ಯೇದಕರ್ಮಣಿ ಚ ಕರ್ಮಯಃ’ ಎನ್ನುವ ವ್ಯಾಸರ ಮಾತು ತೋರಿಕೆಯ ಅರ್ಥದಲ್ಲೇ ಪೂರ್ಣ ಸರಿಯಾಗಿದೆಯೆಂದೂ ಮತ್ತು ಇದರಿಂದಲೇ ಸತತ ಪರಿವರ್ತನಶೀಲವಾದ ಶಾಶ್ವತ ಸತ್ತೆಯು ಅಚಲ, ಸ್ಥಿರ, ಧ್ರುವ, ಕೂಟಸ್ಥ, ಆಕಾಶ ಮೊದಲಾದ ಶಬ್ದಗಳಿಂದ ಕರೆಯಲ್ಪಡುತ್ತಿದೆಯೆಂದೂ ನಾನು
ಭಾವಿಸಿದ್ದೇನೆ.
ವಿವಿಧ ಉಪಾಯಗಳಿಂದ ತನ್ನತನದ ವಿಕಾರಗಳನ್ನು ಕಳೆದುಕೊಂಡು ಸಂಪೂರ್ಣ ಅಂತರ್ಮೌನದ ಕ್ಷಣಗಳಲ್ಲಿ ಪ್ರಾಚೀನರು ಈ ತಟಸ್ಥ ಸೃಷ್ಟಿಯನ್ನು, ಶಾಶ್ವತ ಸತ್ತೆಯನ್ನು, ಸರ್ವದಾ ಸರ್ವಥಾ ಅಭೇದ್ಯವಾದ ನಿಯತಿಗಳ ಮಹಾ ಸಾಗರದಂತಿರುವ ಜೀವನ ತತ್ವವನ್ನು ಕಂಡುಕೊಂಡರು. ತಮ್ಮ ಪ್ರತಿಯೊಂದು ಶಬ್ದವೂ ಇದರ ಒಂದೊಂದು ಸಂಭಾವ್ಯತೆಯನ್ನು ಪ್ರಕಟಪಡಿಸುತ್ತಿದ್ದುದರಿಂದ ಅನಂತ ಸಂಭಾವ್ಯತೆಗಳ ಸಮಷ್ಟಿಯಾದ ಈ ಸತ್ತೆಯನ್ನು ಯಾವ ಶಬ್ದದಿಂದಲೂ ಸಂಪೂರ್ಣವಾಗಿ ಹೇಳಲು ಅಸಾಧ್ಯವಾದುದರಿಂದ ಇದು ಅಚಿಂತ್ಯ, ಅಜ್ಞೇಯ, ಅವರ್ಣ್ಯ ಮೊದಲಾದ ಶಬ್ದಗಳನ್ನು ಅವರು ಬಳಸಬೇಕಾಯಿತು. ಯುಗ ಯುಗಾಂತರದಲ್ಲೂ, ಕಲ್ಪಕೋಟಿಗಳು ಸಂದರೂ ಇದರ ಇರುವಿಕೆಗೆ ಚ್ಯುತಿ ಬಾರದುದರಿಂದ ಇದನ್ನು ಸತ್ (=ಇರುವ ವಸ್ತು) ಎಂದೂ, ಸತತಗತಿ ಉಳ್ಳದಾದುದರಿಂದ ಆತ್ಮ ಎಂದೂ, ಅನಂತ ಸಂಭಾವ್ಯತೆ ಯಾ ಗುಣಗಳನ್ನು ಪಡೆದಿರುವುದರಿಂದ ಬ್ರಹ್ಮವೆಂದೂ, ಮನುಷ್ಯನ ಹಿಡಿತಕ್ಕೆ ಸಿಗಲಾರದ ಒಳ-ಹೊರ ದೂರಗಳಲ್ಲಿ ತುಂಬಿಕೊಂಡಿದ್ದು ಮನುಷ್ಯನ ಚಿಂತನದೃಷ್ಟಿ ಗಳ ಮಿತಿಗೆ ಸರ್ವಥಾ ಮೀರಿ ನಿಂತಿರುವುದರಿಂದ ಪರಬ್ರಹ್ಮವೆಂದೂ, ಇಂದಿನ ಅಂತರಿಕ್ಷ ವಿಜ್ಞಾನಿಗಳು ಕಂಡುಕೊಂಡಂತೆ ಅನಂತ ಜ್ಯೋತಿರ್ವರ್ಷಗಳ ವ್ಯಾಪ್ತಿಯನ್ನು ಮೀರಿ ಅರಳುತ್ತಿರುವ ಸತ್ತೆಯಾದುದರಿಂದ ವಿರಾಟ್ ಎಂದೂ, ಇಂಥ ವಿಶಾಲ ಅಸ್ತಿತ್ವಕ್ಕೆ ಇದು ಸ್ವಯಂ ನಿಯತಿ, ಸ್ವಯಂ ನಿಯಾಮಕ, ಸ್ವಯಂ ನಿಯಮದ ಅಭಿವ್ಯಕ್ತಿ-ಪರಿಣತಿಗಳಾದುದರಿಂದ ಸ್ವರಾಟ್ ಎಂದೂ ಕರೆದಿದ್ದಾರೆ. ಇದು ಯಾರಿಗಾಗಿಯೂ ಇರದೆ ತಾನೇ ತಾನಾಗಿ ವಿಜೃಂಭಿಸುತ್ತಿರುವ, ಅರಳುತ್ತಿರುವ ನಿರುದ್ದೇಶ ತತ್ವ (ಭೂಮಾ). ನನ್ನ-ನಿಮ್ಮ ಅಸ್ತಿತ್ವದ ಮೊತ್ತದಲ್ಲಿ ಇದೇ ಸತ್ತೆಯ ನಿಯತಿಗಳೇ ತುಂಬಿಕೊಂಡಿವೆ. ಹೊರಗಿನ ಸಂಪೂರ್ಣ ವಿಶ್ವದಲ್ಲಿಯೂ ಈ ನಿಯತಿಗಳನ್ನೊಳಗೊಂಡ ಇದೇ ಶಾಶ್ವತ ಸತ್ತೆ ಹೀಗೆಯೇ ನಿಜರೂಪ ವಿಸ್ತಾರವನ್ನು ಮಾಡುತ್ತಿದೆ. ಈ ತತ್ವವನ್ನು ನಿತ್ಯ ಜೀವನದ ಎಲ್ಲ ಸನ್ನಿವೇಶಗಳಲ್ಲೂ ಪ್ರಸನ್ನನಾಗಿ, ಮೌನವಾಗಿ ವಿಚಾರವಾಹಕಗಳಾಗಿ ಮನದೊಳಗೆ ಕಂಪಿಸುತ್ತಿರುವ ಎಲ್ಲ ಅಂತಃಶಬ್ದ ಗಳಿಂದಲೂ ಶೂನ್ಯವಾದ ಸ್ಥಿತಿಯಲ್ಲಿ ಕಂಡುಕೊಂಡು ತಟಸ್ಥ ಸೃಷ್ಟಿಯಂತೆ ನೀನೂ ತಟಸ್ಥ ದೃಷ್ಟಿಯನ್ನು ತಾಳಿದರೆ ತಟಸ್ಥ ಸತ್ಯದೊಡನೆ ಸಮರಸತೆ (ವಿಷ್ಣು ಸಾಯುಜ್ಯ) ಯನ್ನು ಪಡೆಯಬಲ್ಲೆಯೆಂದು ಪ್ರಾಚೀನರು ಘೋಷಿಸುತ್ತಾರೆ.
ಛೇ, ಇದೆಂಥ ವೇದಾಂತ ? ನಾವು ಜಗಿದು ಜೀರ್ಣಿಸಲಾಗದ ಬದನೇಕಾಯಿ ನಿಮ್ಮ ಅಂಗಡಿಯಲ್ಲಿ ಎಷ್ಟಿದ್ದರೇನು ಫಲ?
ನೀವು ಆಧುನಿಕ ವಿಜ್ಞಾನದ ವ್ಯಾಪ್ತಿಯನ್ನರಿತಿರುವಿರಾ ? ವಿಜ್ಞಾನ ತೋರಿಸಿ ಕೊಡುತ್ತಿದೆ : ‘What man can imagine, man can do’ (Reader’s Digest).
ನಾವೇಕೆ ತಿಳಿಗಣ್ಣಿನಿಂದ ಅಪಾರವಿಶ್ವವನ್ನು ನೋಡಿಕೊಳ್ಳಬಲ್ಲೆವೆಂದು ನಂಬಬಾರದು ? What man can imagine, man can be.
.
ಟೈಮ್ ಪತ್ರಿಕೆ-
ಭಾಷಾಂತರ
ಉತ್ತಮ ಭಾಷಾಂತರ ಹೆಂಗಸಿನಂತೆ. ನಿಷ್ಠೆಯಿಂದಿದ್ದರೆ ಸುಂದರವಾಗಿರುವುದಿಲ್ಲ; ಸುಂದರವಾಗಿದ್ದರೆ (ಮೂಲಕ್ಕೇ) ನಿಷ್ಠೆಯಿಂದಿರುವುದಿಲ್ಲ. ಭಾಷಾಂತರಕಾರನ ಸತ್ವ ಫರೀಕ್ಷೆಯೆಂದರೆ ಸತ್ಯ ಸೌಂದರ್ಯಗಳ ಸ್ಪರ್ಧೆಯಲ್ಲಿ – ಆಚರಣೀಯ ರಾಜಿ.
.
ಅಂತರಾತ್ಮನಿಗೆ
ವೀಚಿ
ಅಂತರಾತ್ಮನಿಗೆ
ಕುರುಡನ ಮಗ ಕಟ್ಟಬಂದಾಗ
ಕಂಬ ಕಂಬಕೆ ಬಿಂಬ ಬಿಂಬ ಮೂಡಿಸಿ ಧರ್ಮರಾಜದೂತ
ಬೇಸ್ತು ಬೀಳಿಸಿ ಮಾಯವಾದ ಹಾಗೆ :
ನಿನ್ನ ಹೊರದೂಡಬೇಕೆಂದು ಕಂಡದ್ದೆಲ್ಲ
ಖರ್ಚುಮಾಡುತ್ತಿರುವೆ.
ಪ್ರತಿಜ್ಞೆ ಬೊಂಬಡಿ ಹೊಡೆವೆ
ಹೋಗಾಚೆ ಹೊಗಾಚೆ ಹೊಗಾಚೆಗೆ.
ಕಣಕಣದ ಒಳಗು ನೀ ಕೆಲಸಮಾಡಿದೆ ಕುಳಿತು
ಈಚೀಚೆಗೆ.
ಕಾರೆಂಬೊ ಕತ್ತಲು ಒಂಟಗನ ಒಡನಾಡಿ
ಸಿಳ್ಳಿ ರೂಪಧಾರಿ ಸುಳುವು.
ಜೀರೆಂಬೋ ಜಡಿಮಳೆ ನೀನೆ ಎಂಬುವರು ಆ
ಕಲ್ಲು ಮುಳ್ಳಿನ ಹಾದಿ ಕಾಣದಿರಲು
ಎದುರಿಗಿರುವವರೆಲ್ಲ ನಟ್ಟ ನಡು ನೀರಿನಲಿ
ಹೇಳದೆ ಕೇಳದೆ ಕಯ್ಯ ಬಿಟ್ಟಿರಲು
ಆಗ ಜೊತೆಗುಳಿವವನು ನೀನೊಬ್ಬನೆ.
ಅಂಬಕ್ಕಿ ಬಾಯ್ದಿಡುವೆ ನಾನೊಬ್ಬನೆ.
೨
ಕಾಲನಡಿ ದೂಳಿಪಟ ನಿಷ್ಠುರವಿದೆಷ್ಟು ದಿನ
ಊರೂರ ಬಾಬುಗಳ ಕೇಳಿ ಮುಂದಾಗುವುದ
ತಿಳಿವ ಕುತೂಹಲ ಬೆಂಕಿಗೆದೆ ಹೊತ್ತುತಿರೆ
ನಾನು ಬಲಗಡೆಗೆದ್ದು ನೀನೆನ್ನ ಭಾಗಕೆ ಇದ್ದು
ಹಾಗಾಗುವುದು ತಜ್ಞ ಆಗಬೇಕಾದದ್ದು
ನಾನಾಗಿ ಮುಗಿದು
ನೆತ್ತಿಗೇನು ಒತ್ತಿಬಿಟ್ಟೆಯೋ ಕಾಣೆ.
ಹತ್ತಿದೆನು ಬೆಟ್ಟ ಮೆಟ್ಟಿಲು ಮೆಟ್ಟಲು
ಕಣ್ಣು ಸೋಲುವವರೆಗೆ ಗಗನಗೋಪುರ ಕಂಡು
ಮೆತ್ತಗಾದೆನು ಗಳಿಗೆ ಒಂದರೊಳಗೆ.
ಕಳ್ಳನ ಮನಸು ಹುಳ್ಳುಳ್ಳಗೆ
ಕಷ್ಟ ಕುಂಬಳ ಎನಲು ಹೆಗಲ ತಡಕುವುದು
ಎಷ್ಟೊಂದು ಯಕ್ಕಾಸು ಪೂರ್ವ ಸಂಸ್ಕಾರ ಬುಡ-
ಮೇಲುಗೊಳಿಸುವುದು.
೩
ಕಣ್ಣೀರ ಕರುಣಕಥೆ ಕರುಳ ಕತ್ತರಿಸುವುದು
ಎಡಗಡೆಗೆ ಬಲಗಡೆಗೆ ಒಡಲು ಒಡಲೊಳಗೆ
ನೋಡು ಹಂಪೆಯ ಪಾಡು ನಿತ್ಯ ಬಳುವಳಿಯಾಯ್ತು
ಸತ್ತರೇನಿದ್ದರೇನೆಂಬ ನಡಿಗೆ
ಎಂದಿನ ಪ್ರಭುತ್ವ ಶ್ರೀಸಾಮಾನ್ಯಗೆ.
ದಂತಪುಷ್ಪಕ್ಕೆ ಮರುಳಾದ ಜೇನಿನ ಬಳಗ
ಹಗಲೆಂದರೆ ಹಗಲು
ಇರುಳೆಂದರೆ ಇರುಳು
ಬಿದ್ದ ಅಮೃತವೃಷ್ಟಿ ಸುವರ್ಣ ಪುಷ್ಪವೃಷ್ಟಿ
ಎಲ್ಲ ಕುಂಡಿಗೆ ಹಚ್ಚಿಕೊಂಡ ಪುನುಗು.
ಚೆಂದಕ್ಕೆ ಬಳೆತೊಟ್ಟು ಕಯ್ಯ ಕೊಡವಿದರೇನು ?
ಊರೆಲ್ಲ ಹೋದಮೇಲೂರ ಬಾಗಿಲವಿಕ್ಕಿ
ಆಗತಕ್ಕದ್ದೇನು?
ತೀರ ಮುಳುಗಿರುವವಗೆ ಚಳಿಯೇನು ಮಳೆಯೇನು ?
೪
ಚನ್ನಕೇಶವ ಸುತ್ತ ಮೈ ತೆರೆದ ಬಾಲೆಯರ
ಹಾಗೆ ಮನವನು ತೆರೆ.
ಉಕ್ಕಲಂತಃಕರಣ ಹಾಲು ಸಕ್ಕರೆ ತೊರೆ.
ಒಗೆದಿಸ್ತ್ರಿ ಮಾಡಿರುನ ನೀಲಿ ಚೊಕ್ಕಟ ಬಾನ
ಮಡಿವಾಳ ಶೆಟ್ಟಿ ;
ತೋ ಬೆಚ್ಚನೆಯ ಬಿಸಿಲ ಬಂಗಾರ ಹೊಳೆಮೀಯ್ವ
ಮರ ಮಂಡಿ ಹೂ ಬೆಟ್ಟ ಚೆಲುವಿನುದಯ.
ಸೂರ್ಯ ಭೂಮಿ ಹಿಡಿದು
ಭೂಮಿ ಇರುವೆಂಭತ್ತು ಕೋಟಿ ಹಿಡಿದು
ನಾ ನಿನ್ನ ಹಿಡಿಯೆ
ನೀ ಕಾಣಿಸಿದ್ದೇನು ?
ಕಾಣಿಸದೆ ಇದ್ದದ್ದು ?
ಪಟ್ಟಿ ಹಚ್ಚಲು ಇದು ಸಂತೆ ಹೊತ್ತಿಗೆ ನೇಯ್ದ
ಮೂರು ಮೊಳವಲ್ಲ.
ಕಾಲನೊಡ ಸೆಣಸಾಡಿ ಒಳಗಿನಲಮಾರುಗಳ
ಬೀಗಮುದ್ರೆಯನೊಡೆದು ತರುವ ಕೊಳ್ಳೆ:
ತಟಪಟನೆ ಹೊಯ್ದು ಕೊಳುತಿರುವ ಅಳ್ಳೆ;
ಯಕ್ಕಾಸು ಯಕ್ಕಾಸು ಇರುಸು ಮುರಸು.
.
ಟೈಮ್ ಪತ್ರಿಕೆ
ಐರಿಷರ ಕೈಯಲ್ಲಿ ಇಂಗ್ಲಿಷ್
ಐರ‍್ಲಂಡ್ ಜನರ ಉತ್ತಮಿಕೆಯನ್ನೆಲ್ಲ ಇಂಗ್ಲಿಷ್ ಭಾಷೆ ಹೊರತಂದಿದೆ. ಅವರು ಸುಂದರಿಯಂತೆ ಅದನ್ನು ಒಲಿಸುತ್ತಾರೆ; ಕತ್ತೆ ನಗುವಿನಿಂದ ಅರಚಿಸುತ್ತಾರೆ; ಮಳೆ ಬಿಲ್ಲಿನ ಬಣ್ಣ ತುಂಬಿದ ಬಿಂದಿಗೆಯಂತೆ ಆಕಾಶಕ್ಕೆ ಎಸೆಯುತ್ತಾರೆ; ವಸಂತದ ಮಸುಕು ಮಳೆ ಉತ್ತ ನೆಲದ ಮೇಲೆ ಬೀಳುತ್ತ ಅಳುವಂತೆ, ಮಾನವನ ವಿಧಿಗೆ, ದೌರ್ಬಲ್ಯಕ್ಕೆ ಗೋಳ್ಗರೆಯುವಂತೆ ಮಾಡುತ್ತಾರೆ. ಆಳಲು ಬಂದವರ ಭಾಷೆಯನ್ನು ಮೋಹಕ ಮಂತ್ರವಾಗಿ ತಿರುಗಿಸಿ ಮುಯ್ಯಿ ತೀರಿಸಿಕೊಂಡು ಓರೆಯಾಗಿ ಆರಾಧನೆ ಮಾಡಿದ ಪ್ರಸಂಗವೇ ಇನ್ನೊಂದಿಲ್ಲ.
.
ವರ್ಣ ಮತ್ತು ವ್ಯವಸ್ಥೆ
ಜಾಗೋ
ವರ್ಣ ಮತ್ತು ವ್ಯವಸ್ಥೆ
೧. ಶ್ರೀಕೃಷ್ಣ ಮತ್ತು ವರ್ಣಸಮಸ್ಯೆ
ಶ್ರೀ ಕೃಷ್ಣಾವತಾರಕ್ಕೂ ನಮ್ಮಲ್ಲಿಯ ವರ್ಣಸಮಸ್ಯೆಗೂ ನಾವು ಸಾಮಾನ್ಯವಾಗಿ ತಿಳಿದಿರುವುದಕ್ಕಿಂತ ಮತ್ತು ಧಾರ್ಮಿಕವಾಗಿ ಮಾನ್ಯ ಮಾಡಿರುವುದಕ್ಕಿಂತ ಹೆಚ್ಚು ನಿಕಟವಾದ ಸಂಬಂಧವಿದೆಯೆಂದು ನನಗನಿಸುತ್ತದೆ. ಈ ವಿಷಯದಲ್ಲಿ ಈಗಾಗಲೇ ಕೆಲವೊಂದು ಐತಿಹಾಸಿಕ ಮತ್ತು ಸಮಾಜಶಾಸ್ತ್ರೀಯ ‘ಪುರಾವೆಗಳು (evidences) ನಮಗೆ ದೊರಕಿರುವವಾದರೂ, ಮುಂದೆ ಇನ್ನೂ ಅನೇಕ ಇಂತಹ ಪುರಾವೆಗಳು ನಮಗೆ ದೊರೆಯಬಹುದೆಂದು ನಾವು ಆಶಿಸಬಹುದಾದರೂ, ನಾನು ಈ ಬರಹದಲ್ಲಿ ಮುಖ್ಯವಾಗಿ ಕೆಲವು ಸರ್ವಸಮ್ಮತವಾದ ಸಾಮಾನ್ಯ (genera1) ಐತಿಹಾಸಿಕ ಮತ್ತು ಸಾಮಾಜಿಕ ‘ದಾಖಲೆ’ (records)ಗಳು ಮತ್ತು ಅವುಗಳಿಗಿಂತ ಹೆಚ್ಚಾಗಿ, ಕೆಲವು: ಮೂಲಭೂತವಾದ ಶಾರೀರ-ಮನೋವೈಜ್ಞಾನಿಕ(Physio-psychological) ವಿಷಯಗಳು ಮತ್ತು ವಿಚಾರಗಳು ಹಾಗೂ ಇತ್ತೀಚೆಗೆ ಅಮೇರಿಕೆಯ (ಸಂಯುಕ್ತ ಸಂಸ್ಥಾನಗಳು ದಕ್ಷಿಣ-ರಾಜ್ಯಗಳಲ್ಲಿ ನಾನು ಕಣ್ಣಾರೆ ಕಂಡ ಸ್ವಯಂ ಅನುಭವಿಸಿದ ವರ್ಣ ಭಾವನೆಗಳು ಮತ್ತು ಅವುಗಳನ್ನಾಧರಿಸಿದ ಅಲ್ಲಿಯ ಸಾಮಾಜಿಕ ರೂಢಿ-ಸಂಪ್ರದಾಯಗಳು ಮತ್ತು ಕಾನೂನುಗಳು ಇವುಗಳನ್ನು ಕುರಿತು ಮಾತ್ರ ಹೇಳುತ್ತೇನೆ.
ನಮ್ಮಲ್ಲಿಯ ವೈದಿಕ ವರ್ಣವ್ಯವಸ್ಥೆಗೂ ಕೇವಲ ‘ವರ್ಣ’ಕ್ಕೂ ಯಾವ ಸಂಬಂಧವೂ, ಕನಿಷ್ಠ ಪಕ್ಷ ಯಾವ ಮಹತ್ವದ ಸಂಬಂಧವೂ ಇಲ್ಲ ; ನಮ್ಮ ವರ್ಣವ್ಯವಸ್ಥೆಯು ನಮ್ಮ ವೇದಗಳಂತೆ ಮತ್ತು ಅವುಗಳಲ್ಲಿಯೇ ಹೇಳಿರುವಂತೆ (ಉದಾ : ಋಗೈದದ ಪರುಷಸೂಕ್ತ), ದೇವ ಸಂಜಾತವಾಗಿದ್ದು ಸಾಮಾಜಿಕವಾಗಿ ಧರ್ಮ ಮತ್ತು ಪರಮಾರ್ಥಗಳನ್ನು ಸಾಧಿಸುವುದಕ್ಕೆ ದೇವರು ವಿಧಿಸಿರುವ ಯೋಗ್ಯ ಸಾಧನವಾಗಿದೆಯೆಂದು ನಮ್ಮ ಧರ್ಮ ಶಾಸ್ತ್ರಗಳು ಸಾರುತ್ತವೆ. ನಾವು ಸಹ ಧಾರ್ಮಿಕವಾಗಿ ಈ ಪ್ಯಾಖ್ಯೆಯನ್ನು ಒಪ್ಪಿಕೊಂಡಿದ್ದೇವೆ. ಆದರೆ ಇತ್ತೀಚಿನ ಅನೇಕ ಇತಿಹಾಸಜ್ಞರು ಮತ್ತು ಸಮಾಜಶಾಸ್ತ್ರಜ್ಞರು ವೈದಿಕ ವರ್ಣವ್ಯವಸ್ಥೆಯು ಪ್ರಾರಂಭದಲ್ಲಿ ಆರ್ಯ ಮತ್ತು ಅಸಾರ್ಯರ ನಡುವಿನ ವರ್ಣಭೇದ, ವರ್ಣಕಲಹ ಮತ್ತು ಆಮೇಲೆ ಉಂಟಾದ ವರ್ಣಸಂಕರ ಇವುಗಳಿಗೆ ಸಂಬಂಧಿಸಿದ್ದಾಗಿರಬಹುದಾದರೂ ಅದು ಮುಖ್ಯವಾಗಿ ವೇದ ಮತ್ತು ಶಾಸ್ತ್ರಸಮ್ಮತವಾದ ಒಂದು ಸಾಮಾಜಿಕ ಕರ್ಮ-ವ್ಯವಸ್ಥೆ (social division of-labour) ಆಗಿದೆಯೆಂದು ಅಭಿಪ್ರಾಯಪಡುತ್ತಾರೆ. ಈ ವೈಜ್ಞಾನಿಕ ಅಭಿಪ್ರಾಯವು ನನಗನಿಸುವಂತೆ, ಹೆಚ್ಚು ಕಡಿಮೆ ಸರಿಯಾದದ್ದೇ ಆಗಿರುವುದಾದರೂ ಪ್ರಾರಂಭದ ವರ್ಣಭೇದ ಮತ್ತು ವರ್ಣಕಲಹ ಹಾಗೂ ಅವುಗಳಿಗೆ ಕಾರಣವಾದ ಕೆಲವು ಮೂಲಭೂತ ಶಾರೀರ-ಮನೋವೈಜ್ಞಾನಿಕ ವಿಷಯಗಳು ಮತ್ತು ತತ್ವಗಳು ಇವುಗಳಿಗೆ, ನಾವು ಸಮಾಜ ವಿಜ್ಞಾನದ ಪ್ರಕಾರ ಕೊಡಬೇಕಾದಷ್ಟು ಮಹತ್ವವನ್ನು ಆ ಅಭಿಪ್ರಾಯವು ಕೊಡುವುದಿಲ್ಲ. ಈ ಕೊರತೆಯನ್ನು ಕೆಲಮಟ್ಟಿಗೆ ತುಂಬುವದು ಮತ್ತು ನಮ್ಮ ಈ ಪ್ರಪಂಚದ ವಿಭಿನ್ನ ಮಾನವ ಸಮಾಜಗಳಲ್ಲಿನ ವರ್ಣಸಮಸ್ಯೆಯನ್ನು ಕುರಿತು ನನಗೆ ಅನಿಸುವ ಬೇರೆ ಕೆಲವು ವಿಚಾರಗಳನ್ನು ಪ್ರತಿಪಾದಿಸುವುದು ಹಾಗೂ ಚರ್ಚಿಸುವುದು ಪ್ರಸ್ತುತ ಲೇಖನದ ಉದ್ದೇಶ.
ಶ್ರೀ ಕೃಷ್ಣನನ್ನು ಕುರಿತು ಮತ್ತಷ್ಟು ವಿಚಾರ ಮಾಡೋಣ. ‘ಕೃಷ್ಣ’ ಎಂಬ ಹೆಸರು ಆ ಹೆಸರಾಂತ ಅವತಾರೀ ಪುರುಷನಿಗೆ ಬಹಳೇ ಅನ್ವರ್ಥಕವೂ ಸಾರ್ಥಕವೂ ಆಗಿತ್ತೆಂದು ನನಗನಿಸುತ್ತದೆ. ಕೃಷ್ಣನು ಜಾತ್ಯಾ ನಿಜವಾಗಿಯೂ ಕಪ್ಪು ಬಣ್ಣದ ಅನಾರ್ಯ ವಂಶಜನೇ ಆಗಿರಬೇಕು. ಅವನು ಆರ್ಯ ವಂಶದ ದೇವಕೀ-ವಸುದೇವರ ಸುತನೆಂದು ಮಹಾಭಾರತದಲ್ಲಿ ಮತ್ತು ಪುರಾಣಗಳಲ್ಲಿ ಹೇಳಲಾಗಿದ್ದರೂ, ಅವನ ಸೋದರಮಾವನಾದ ಕಂಸನಿಗೆ ಕೃಷ್ಣನು ಹುಟ್ಟಿದಾರಭ್ಯ (ಅವನು ಹುಟ್ಟುವುದಕ್ಕಿಂತ ಮೊದಲೇ, ಜ್ಯೋತಿಷ್ಯದ ಕಾರಣದಿಂದ ಎಂದು ಪುರಾಣದಲ್ಲಿ ಇದ್ದರೂ) ಅವನನ್ನು ಕೊಲ್ಲಬೇಕು ಎಂದು ಅನಿಸುವುದಕ್ಕೆ ಆ ಮಗುವು ಅನಾರ್ಯವಂಶದ್ದಾಗಿದ್ದುದು ಕಾರಣವಾಗಿದ್ದರೂ ಆಗಿರಬಹುದು (ಇದೇ ಕಾರಣವಾಗಿತ್ತೆಂದು ನಾನು ಖಂಡಿತವಾಗಿ ಹೇಳಲಾರೆ ನಾದರೂ), ಮುಂದೆ ಕೃಷ್ಣನು ಹೀನಕುಲದವರಾದ-ಗೋಪಾಲಕರಾದ-ನಂದ, ಯಶೋದೆಯರ ಮನೆಯಲ್ಲಿ ಬೆಳೆದು ಗೋಪಾಲನೆಂದು ಕರೆಯಿಸಿಕೊಳ್ಳುವುದು ಮತ್ತು ಅವನು ದೊಡ್ಡವ (ವಯಸ್ಸು, ಯೋಗ್ಯತೆ ಮತ್ತು ಕೀರ್ತಿ ಇವೆಲ್ಲದರಲ್ಲಿ) ನಾದ ಮೇಲೆ ಸಹ ದುರ್ಯೋಧನ ಮುಂತಾದ ಕೆಲವು ಆಸುರೀ ಸ್ವಭಾವದ ಆರ್ಯರು (ಆರ್ಯರಲ್ಲಿಯೂ ಅನೇಕ ಅಸುರರಿದ್ದರು) ಕೃಷ್ಣನನ್ನು ತಮ್ಮ ಸರಿಸಮಾನನೆಂದು ಪರಿಗಣಿಸದಿರುವುದು ಇತ್ಯಾದಿಗಳು ಪ್ರಾಯಃ ಕೃಷ್ಣನ ಅನಾರ್ಯವಂಶ ಮತ್ತು ಕಪ್ಪು ಬಣ್ಣ ಇವುಗಳಿಗೆ ಸಂಬಂಧಪಟ್ಟಿದ್ದಿರಬಹುದು. ಐತಿಹಾಸಿಕವಾಗಿ ಕೃಷ್ಣನ ಕಥೆ ಹೀಗೆಯೇ ಇದ್ದಿರಲಿ ಅಥವಾ ಪುರಾಣದಲ್ಲಿ ಹೇಳಿರುವಂತೆಯೇ ಇದ್ದಿರಲಿ, ಒಂದು ವಿಷಯದಲ್ಲಿ ಮಾತ್ರ ಯಾವ ಸಂದೇಹವೂ ಇಲ್ಲ. ಅದೆಂದರೆ, ಕೃಷ್ಣನ ಬಣ್ಣ ಕಪ್ಪಾಗಿದ್ದುದು ಮತ್ತು ಆರ್ಯಸಮಾಜದಲ್ಲಿನ ವರ್ಣವ್ಯವಸ್ಥೆಯನ್ನು ಕುರಿತು ಅವನು ಗಂಭೀರವಾಗಿ ಆಲೋಚಿಸಿದ್ದುದು.
ನಮ್ಮ ಆಧುನಿಕ ಜಗತ್ತಿನ ವರ್ಣ-ಸಮಸ್ಯೆಯನ್ನು ಬಿಡಿಸಲು ಇಂದು ನಮಗೆ ಅನೇಕ -ನೂರಾರು, ಸಾವಿರಾರು-ಕೃಷ್ಣರು ಬೇಕಾಗಿದ್ದಾರೆ. ಹೌದು; ನೂರಾರು, ಸಾವಿರಾರು ಕೃಷ್ಣರು ! ಅಚ್ಚ ಕರಿಬಣ್ಣದ ಕೃಷ್ಣರು ! ತಮ್ಮ ಮಿರಿಮಿರಿ ಮಿಂಚುವ ಕರಿಶರೀರದ ಕಾಂತಿಯಲ್ಲಿ ಕಂಗೊಳಿಸಿ ಬಿಳಿ ಹೆಂಗೆಳೆಯರನ್ನು ಸೋಲಿಸುವ, ಮನ ಸೋಲಿಸುವ, ಕೃಷ್ಣರು ! ಬಿಳಿಗಂಡುಗಳಿಗಿಂತ ಗಂಡುಗಳಾಗಿ, ಗಂಡುಗಲಿಗಳಾಗಿ, ಶುಭ್ರವಸನರಾಗಿ, ಶುಭ್ರಸ್ಮಿತರಾಗಿ, ವಿದ್ಯಾ-ವರ್ಚಸ್ವಿಗಳಾಗಿ, ಸಭ್ಯತಿರೋಮಣಿಗಳಾಗಿ, ತಮ್ಮ ಕರಿಬಣ್ಣದ ಕರಿತನವನ್ನು ಕರಗಿಸಿ, ಅದು ತಮ್ಮ ತೇಜಸ್ಸಿನಲ್ಲಿ ಮಿಂದು ಮಿರಿ-ಮಿರಿ ಮಿರುಗುವಂತೆ ಮಾಡಬಲ್ಲ ನೂರಾರು, ಸಾವಿರಾರು ಕೃಷ್ಣರು ಇಂದು ನಮಗೆ ಬೇಕಾಗಿದ್ದಾರೆ. ಅವರೇ ನಮ್ಮ ಪ್ರಪಂಚದ ವರ್ಣಸಮಸ್ಯೆಗೆ ನಿಜವಾದ ಪರಿಹಾರಕರ್ತರು-ನಮ್ಮ ರಾಜಕಾರಣಿ ಮುತ್ಸದ್ಧಿಗಳಲ್ಲ. ಧರ್ಮಸಂಸ್ಥೆಗಳಲ್ಲ ರಾಷ್ಟ್ರೀಯ-ಅಂತರಾಷ್ಟ್ರೀಯ ಕಾಯ್ದೆ-ಕಾನೂನುಗಳಲ್ಲ. ನಮ್ಮ ಶಾಲೆ-ಕಾಲೇಜು, ಯುನಿವರ್ಸಿಟಿಗಳಲ್ಲ ಅಥವಾ ಸಾಂಸ್ಕೃತಿಕ ಕೂಟ, ಶಿಷ್ಟ ಮಂಡಲಗಳಲ್ಲ. ಹೌದು, ಈ ಸಮಸ್ಯೆಗೆ ಬೇರೆ ಯಾವುದೇ ಮಾನವ ಸಮಸ್ಯೆಗೆ ಇರುವಂತೆ -ನಿಜವಾದ, ಅಂತಿಮವಾದ ಪರಿಹಾರವೆಂದರೆ ಗಂಡುಗಳು ಮತ್ತು ಹೆಣ್ಣುಗಳು. ವ್ಯಕ್ತಿಗಳೇ ಎಲ್ಲ ಸಮಸ್ಯೆಗಳಿಗೆ ಅಂತಿಮವಾದ ಪರಿಹಾರವಾದರೂ, ಸಮಾಜಗಳು-ಅವುಗಳಲ್ಲಿನ ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವ್ಯವಸ್ಥೆಗಳು–ವ್ಯಕ್ತಿಗಳಿಗೆ ಅವರ ಸಮಸ್ಯೆಗಳನ್ನು ಬಿಡಿಸುವಲ್ಲಿ ತಾರಕ ಅಥವಾ ಮಾರಕವಾಗಬಲ್ಲುವು. ಉದಾ :-ಇಂದು ಯಾರಾದರೂ ಅಮೇರಿಕೆಯಲ್ಲಿ ವರ್ಣಸಮಸ್ಯೆಯನ್ನು ಬಿಡಿಸಲೆತ್ನಿಸಿದರೆ ಅವರಿಗೆ ಸರ್ಕಾರದ (ಅರ್ಥಾತ್ ಫೆಡರಲ್ ಸರ್ಕಾರದ ; ಯಾಕೆಂದರೆ ಅಮೇರಿಕೆಯ ಅರ್ಧಕ್ಕರ್ಧ ಅಥವಾ ಅದಕ್ಕೂ ಹೆಚ್ಚು ರಾಜ್ಯ ಸರ್ಕಾರಗಳು ; ಅಲ್ಲಿ ‘ದಕ್ಷಿಣದ ರಾಜ್ಯಗಳು’ ಎಂದು ಅನ್ನಿಸಿಕೊಳ್ಳುವ ರಾಜ್ಯಗಳೇ ಅಧಿಕ ಸಂಖ್ಯೆಯಲ್ಲಿರುವಂತೆ ಕಾಣುತ್ತದೆ. ಅವು ವರ್ಣಭೇದ ಧೋರಣೆಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅನುಕೂಲವಾಗಿವೆ ಎಂದೇ ನನ್ನ ಅಭಿಪ್ರಾಯ). ಅಂದರೆ ‘ಸಿವಿಲ್‌ರೈಟ್ಸ್’ ಕಾಯ್ದೆಯ ಸಹಕಾರವುಂಟು-ಅಮೇರಿಕೆಯ ಸಾಮಾಜಿಕ ಪರಂಪರೆಯು ಇನ್ನೂ ಅದಕ್ಕೆ ಸಾಕಷ್ಟು ಪ್ರತಿಕೂಲವಾಗಿದ್ದರೂ. ಆದರೆ ಅದೇ ಯಾರಾದರೂ ಈ ಸಮಸ್ಯೆಯನ್ನು “ದಕ್ಷಿಣ ಆಫ್ರಿಕ’ದಲ್ಲಿ ಬಿಡಿಸಹೊರಟರೆ (ಇನ್ನೂ ಅಲ್ಲಿ ಅಂಥ ಯಾವ ‘ಇಮ್ಮಡಿ ಗಾಂಧಿ’ಯೂ ಆ ಕಾರ್ಯವನ್ನು ಕೈಕೊಂಡಂತೆ ಕಾಣುವುದಿಲ್ಲ) ಅವರಿಗೆ ಅಲ್ಲಿನ ಬಿಳಿಯರ ಸರ್ಕಾರ ಮತ್ತು ಸಮಾಜ ಇವೆರಡೂ ಪ್ರತಿಕೂಲವಾಗಿವೆ. ಇತ್ತೀಚಿನ ಆ ಸೌಥ್ ಆಫ್ರಿಕನ್ ಬಿಳಿಯ ಪ್ರೊಫೆಸರನ ಕತೆಯನ್ನು ಕೇಳಿರುವಿರಲ್ಲವೇ ? ಪಾಪ, ಅವನು ಹಿಂದುಸ್ತಾನದ ಒಬ್ಬ ಕರೀ ಮುಸ್ಲಿಮ್ ಸುಂದರಿಯನ್ನು ತಡೆಯಲಾರದೇ ಕೂಡಿದ್ದರಿಂದ ಸಾಮಾಜಿಕವಾಗಿ ಮತ್ತು ಕಾಯ್ದೆ ಯ ದೃಷ್ಟಿಯಲ್ಲಿ ಅವನು ಎಷ್ಟು ಕಷ್ಟಪಡಬೇಕಾಯ್ತು ! ಈ ಬಿಳಿಯರಿಗೆ–ಈ ಬಿಳಿಯರ ಬಿಳೀ ಕಾಯ್ದೆಗಳಿಗೆ–ನಿಜವಾಗಿಯೂ ನಾಚಿಕೆಯಿಲ್ಲ. ಈ ಬಿಳಿಯರು ನಿಜವಾಗಿಯೂ ತಮಗೆ ಕರಿಯರ ಆಕರ್ಷಣೆಯು ದೈಹಿಕವಾಗಿ ಮತ್ತು ಮಾನಸಿಕವಾಗಿ ಇಲ್ಲವೇ ಇಲ್ಲ ಎಂದು ತಮ್ಮ ಧರ್ಮಗ್ರಂಥಗಳ ಪ್ರಮಾಣವಾಗಿ, ತಮ್ಮ ಆತ್ಮಸಾಕ್ಷಿಯಾಗಿ ಹೇಳಬಲ್ಲರೋ ? ನೂರಾರು-ಸಾವಿರಾರು ಬಿಳೀ ಗಂಡಸರು ಆಫ್ರಿಕೆಯಲ್ಲಿ, ಏಶಿಯದಲ್ಲಿ ಯೂರೋಪಿನಲ್ಲಿ ಮತ್ತು ಅಮೇರಿಕೆಯಲ್ಲಿ ನೂರಾರು-ಸಾವಿರಾರು ಕರಿ ಹೆಣ್ಣುಗಳನ್ನು ಗೌಪ್ಯವಾಗಿ ಸಂಭೋಗಿಸಿದ್ದಾರೆ ಮತ್ತು ಸಂಭೋಗಿಸುತ್ತಿದ್ದಾರೆ. ಅವರ ಮೇಲೆ ಅನೇಕ ಬಲಾತ್ಕಾರಗಳನ್ನು ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ. ಆದರೆ ಸಮಾಜವ್ಯವಸ್ಥೆ, ಕಾಯ್ದೆಗಳು, ಆರ್ಥಿಕ ಪರಿಸ್ಥಿತಿ, ಇವೆಲ್ಲ ಬಿಳಿಯರಿಗೆ ಅನುಕೂಲವಾಗಿದ್ದುದರಿಂದ ಅವೆಲ್ಲ ನಡೆಯುತ್ತವೆ ಮತ್ತು ಮುಚ್ಚಿಕೊಂಡು ಹೋಗುತ್ತವೆ. ಅಷ್ಟೇ ಅಲ್ಲ, ತಾನು ಇಂತಿಷ್ಟು ಕರೀ-ಹೆಣ್ಣುಗಳನ್ನು ಸಂಭೋಗಿಸಿದ್ದೇನೆ ಅಥವಾ ಬಲಾತ್ಕರಿಸಿದ್ದೇನೆ ಎಂದು ಅನೇಕ ಬಿಳಿಯ ಗಂಡುಗಲಿಗಳು ಇವತ್ತು ಕೂಡ ಬಡಾಯಿಕೊಚ್ಚಿಕೊಳ್ಳುತ್ತಿದ್ದಾರೆ.
ಇನ್ನು ಕರಿಯರ ಬಗ್ಗೆ ಹೇಳಬೇಕೆಂದರೆ, ಅವರಿಗೆ ಸಾಮಾನ್ಯವಾಗಿ ಬಿಳಿಯರ (ಕರೀ – ಗಂಡುಗಳಿಗೆ ಬಿಳಿ ಹೆಣ್ಣುಗಳ ಮತ್ತು ಕರೀ ಹೆಣ್ಣುಗಳಿಗೆ ಬಿಳಿ ಗಂಡುಗಳ) ಆಕರ್ಷಣೆಯು ಮೊದಲಿನಿಂದ ಇದ್ದೇ ಇದೆ. ಅದನ್ನು ಅವರು (ಬಿಳಿಯರ ದೇಶಗಳಲ್ಲಿ) ಹೆದರಿಕೆಯಿಂದ ಸಾರ್ವಜನಿಕವಾಗಿ ಒಪ್ಪಿಕೊಳ್ಳುವುದಿಲ್ಲ ಅಷ್ಟೇ. ಅನೇಕ ಬಿಳಿ ಹೆಣ್ಣುಗಳಿಗೆ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಕರಿ ಗಂಡುಗಳ ಆಕರ್ಷಣೆ ಇರುವುದು ಹಾಗೂ ಅನುಕೂಲ ಸಾಮಾಜಿಕ ಪರಿಸ್ಥಿತಿಗಳಲ್ಲಿ ಅದು ಸಾರ್ವಜನಿಕವಾಗಿ
ವ್ಯಕ್ತವಾಗುವುದು-ಇವು ಈ ಕರಿ-ಬಿಳಿಯರ ಸಮಸ್ಯೆಯ ವಿಚಾರದಲ್ಲಿ ಮಹತ್ವದ ಅಂಶಗಳಾಗಿವೆ. ಬಿಳಿ ಹೆಣ್ಣುಗಳಲ್ಲಿ ಕರಿ ಗಂಡುಗಳ ಬಗ್ಗೆ ಇಂಥ ಸ್ವಾಭಾವಿಕ ಆಕರ್ಷಣೆ ಇದೆ ಅನ್ನುವುದನ್ನು ಬಹುಶಃ ಯಾವ ಬಿಳಿ ಗಂಡೂ ಮತ್ತು ಸಾರ್ವಜನಿಕವಾಗಿ ಯಾವ ಬಿಳಿ ಹೆಣ್ಣೂ ಒಪ್ಪಿಕೊಳ್ಳಲಿಕ್ಕಿಲ್ಲ. ಆದರೆ ಇಂಥ ಆಕರ್ಷಣೆ ನಿಜವಾಗಿಯೂ ಇದೆ ಅನ್ನುವುದಕ್ಕೆ ಅನೇಕ ಪುರಾವೆಗಳಿವೆ. ಉದಾ : ಏಶಿಯದಲ್ಲಿ ಮುಖ್ಯವಾಗಿ ಭಾರತ-ಪಾಕಿಸ್ತಾನಗಳಲ್ಲಿ ಅನೇಕ ಬಿಳಿ ಹೆಂಗಸರು ದಿನನಿತ್ಯ ಅನೇಕ ಕರೀ ಗಂಡಸರ ಪ್ರೇಮಪಾಶದಲ್ಲಿ ಸ್ವಾಭಾವಿಕವಾಗಿ, ಯಾವುದೇ ಬಲಾತ್ಕಾರ ಅಥವಾ ಸಾಮಾಜಿಕ ಅಥವಾ ಆರ್ಥಿಕ ಆಮಿಷಗಳಿಲ್ಲದೇ ಬೀಳುತ್ತಿರುವುದನ್ನು ನಾವು ಕಾಣುತ್ತೇವೆ ಮತ್ತು ಆಫ್ರಿಕೆ, ಯೂರೋಪು ಮತ್ತು ಅಮೇರಿಕಗಳಲ್ಲಿ ಪ್ರತಿವರ್ಷ ಅನೇಕ ಬಿಳಿ ಹೆಂಗಸರು ಕರಿ ಗಂಡುಗಳ ಆಕರ್ಷಣೆಗೆ ಒಳಗಾಗುತ್ತಾರೆ (ಇವುಗಳಲ್ಲಿ ಬೆಳಕಿಗೆ `ಬರುವ ಕೇಸು’ಗಳು ಕಮ್ಮಿಯಾದರೂ). ಇದರರ್ಥ ಕರಿ-ಬಿಳಿಯರ ಸಮಸ್ಯೆಗೆ ಶರೀರ-ಧರ್ಮದ ಮುಖವಿಲ್ಲವೇ ಇಲ್ಲ ಎಂದಲ್ಲ. ಆ ಮುಖ ಇದ್ದೇ ಇದೆ. ಸಾಮಾನ್ಯವಾಗಿ, ಬಿಳಿ ಹೆಂಗಸರು ಬಿಳಿ ಗಂಡಸರಿಂದಲೇ ಮತ್ತು ಬಿಳಿ ಗಂಡಸರು ಬಿಳಿ ಹೆಂಗಸರಿಂದಲೇ ಆಕರ್ಷಿತರಾಗುವರು ಅನ್ನುವುದು ನಿಜ. ಆದರೆ ಈ ಸಮಸ್ಯೆಗೆ ಶರೀರಧರ್ಮದ ಮುಖವಿರುವುದು ಇಷ್ಟರಮಟ್ಟಿಗೆ ಮಾತ್ರ. ಈ ಸಮಸ್ಯೆಯ ಉಳಿದೆಲ್ಲ ಮುಖಗಳು (ಮತ್ತು ನನ್ನ ಅಭಿಪ್ರಾಯದಲ್ಲಿ ಮುಖ್ಯ ಮುಖಗಳು) ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕವಾಗಿವೆ. ಆದ್ದರಿಂದ ಅವುಗಳಿಗೆಲ್ಲ ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಪರಿಹಾರಗಳು ಸಾಧ್ಯ. ಆದರೆ ಜನಗಳು (ಮುಖ್ಯವಾಗಿ ಬಿಳಿಯ ಜನಗಳು) ಮತ್ತು ಸಮಾಜಗಳು- ಕೇವಲ ಸರ್ಕಾರಗಳು ಮತ್ತು ಕಾಯ್ದೆಗಳಲ್ಲ-ಆ ಪರಿಹಾರಗಳನ್ನು ಬಯಸಬೇಕು, ಅಷ್ಟೆ ಹಾಗೆ ಬಯಸುವಂಥ ಕಾಲ, ವಾತಾವರಣ, ಬಿಳಿಯರ ಸಮಾಜದಲ್ಲಿ ಪರಿಣಾಮಕಾರಿಯಾಗಿ ಬರಲು ಇನ್ನೂ ಸ್ವಲ್ಪ ಸಮಯ ಬೇಕು (ಅದು ಅಮೇರಿಕೆಯಲ್ಲಿ ಈಗ ಬರುತ್ತಿದೆಯಾದರೂ ಸಾಕಷ್ಟು ಪ್ರಮಾಣದಲ್ಲಿ ಮತ್ತು ಸಾಕಷ್ಟು ಜೋರಿನಿಂದ ಇನ್ನೂ
ಬರುತ್ತಿಲ್ಲ. ಈ ಸಮಸ್ಯೆಗೆ, ನನಗನಿಸುವಂತೆ, ನಿಜವಾದ ಪರಿಹಾರ ದೊರಕುವುದು ಈ ಪ್ರಪಂಚದ ಕರಿಯರು ಈ ಪ್ರಪಂಚದ ಬಿಳಿಯರಷ್ಟೇ ಸ್ವತಂತ್ರರೂ (ರಾಜಕೀಯ ಮತ್ತು ಆರ್ಥಿಕ ಎರಡೂ ರೀತಿಯಲ್ಲಿ), ಬಲಾಡ್ಯರೂ ಆದಾಗಲೇನೆ. ಕೇವಲ ಶಿಕ್ಷಣ ಮತ್ತು ಸಾಂಸ್ಕೃತಿಕ ವಿಚಾರಗಳ ಪ್ರಸಾರದಿಂದ (ಅವು ಅತ್ಯವಶ್ಯವಾದರೂ) ಈ ಸಮಸ್ಯೆಗೆ ಅಂತರಾಷ್ಟ್ರೀಯವಾಗಿ ಮತ್ತು ಅಂತಸ್ಸಾಮಾಜಿಕವಾಗಿ ಪರಿಣಾಮಕಾರಿಯಾದ ಪರಿಹಾರ ದೊರೆಯುವುದು (ನನ್ನ ಅಭಿಪ್ರಾಯದಂತೆ) ಸಾಧ್ಯವಿಲ್ಲ. ಯಾಕೆಂದರೆ ಎಷ್ಟೇ ಸುಸಂಸ್ಕೃತವಾದ ಸಮಾಜದಲ್ಲಿ ಸಹ ಶಿಕ್ಷಣ ಮತ್ತು ಸಾಂಸ್ಕೃತಿಕ ವಿಚಾರಗಳ ಪ್ರಭಾವವು ಸಮಾಜದ ಕೆಲವೇ ಅಲ್ಪಸಂಖ್ಯಾತರಿಗೆ ಸೀಮಿತವಾಗಿರುವುದು ; ಆದರೆ ವರ್ಣಸಮಸ್ಯೆಯು ಅಲ್ಪ ಸಂಖ್ಯಾತರಾದ ಸುಸಂಸ್ಕೃತ ಮತ್ತು ಸುಶಿಕ್ಷಿತ ಜನರಿಂದ ಉದ್ಭವಿಸುವ ಸಮಸ್ಯೆಯಾಗಿರದೇ ಬಹುಸಂಖ್ಯಾಕರಾದ ಅಸಂಸ್ಕೃತ ಮತ್ತು ಅಶಿಕ್ಷಿತ (ಅಕ್ಷರಸ್ಥರಾಗಿದ್ದರೂ) ಬಿಳಿಜನರಿಂದ ಉದ್ಭವಿಸುವ ಸಾಮಾಜಿಕ ಸಮಸ್ಯೆಯಾಗಿರುತ್ತದೆ. ನಮ್ಮ ಆಧುನಿಕ ಜಗತ್ತಿನ ಮುಖ್ಯ ತಲೆನೋವುಗಳಲ್ಲೊಂದಾದ ವರ್ಣಸಮಸ್ಯೆಯನ್ನು ಇನ್ನಷ್ಟು ವಿಶದವಾಗಿ ಪರಿಶೀಲಿಸುವ ಮೊದಲು ಪ್ರಾಚೀನ ಭಾರತದಲ್ಲಿ ಉದ್ಭವಿಸಿದ್ದ ವರ್ಣಸಮಸ್ಯೆಯ ಸಂಕ್ಷಿಪ್ತ ಸಿಂಹಾವಲೋಕನವನ್ನು ಮಾಡೋಣ.
ಪ್ರಾಚೀನ ಭಾರತದಲ್ಲಿ ವರ್ಣಸಮಸ್ಯೆಯು ವೇದಯುಗದ ಪ್ರಾರಂಭದಲ್ಲಿಯೇ ಉದ್ಭವಿಸಿರಬೇಕು. ಐತಿಹಾಸಿಕವಾಗಿ ಹೇಳಬೇಕೆಂದರೆ, ಆರ್ಯರು ಭಾರತಕ್ಕೆ ಬಂದು ನೆಲಸಿದ ಕೂಡಲೇ ಪ್ರಾರಂಭವಾಗಿರಬೇಕು. ಆದ್ದರಿಂದಲೇ ವರ್ಣಗಳ ಉಲ್ಲೇಖವು ಋಗ್ವೇದ ಮತ್ತು ಇನ್ನಿತರ ಸಂಹಿತೆಗಳಲ್ಲಿ ಬರುತ್ತದೆ. ಆರ್ಯಾವರ್ತದಲ್ಲಿ ವರ್ಣ ಸಂಕರವು ಕ್ರೆ, ಪೂ. ೧೦೦೦ ದಿಂದ ೨೦೦೦ ವರ್ಷಗಳಷ್ಟು ಹಿಂದೆಯೇ ಮೊದಲಾಗಿತ್ತೆಂದು ನಮಗೆ ಅನೇಕ ಐತಿಹಾಸಿಕ ಮತ್ತು ಧರ್ಮಶಾಸ್ತ್ರೀಯ (ಮನು, ಪರಾಶರ ಮುಂತಾದ ಶಾಸ್ತ್ರಕಾರರಿಂದ) ಆಧಾರಗಳಿಂದ ತಿಳಿದುಬರುತ್ತದೆ. ವರ್ಣಗಳು ಹುಟ್ಟ ಕೊಂಡ ಅಲ್ಪಾವಧಿಯಲ್ಲಿಯೇ ವರ್ಣ-ಸಂಕರವೂ ಪ್ರಾರಂಭವಾಗಿರಬೇಕು. ಈ ವರ್ಣ ಸಂಕರವನ್ನು ತಡೆಗಟ್ಟಲು ನಮ್ಮ ಶಾಸ್ತ್ರಕಾರರು ಅನೇಕ ಧಾರ್ಮಿಕ ವಿಧಿ-ನಿಷೇಧಗಳನ್ನು ಬೇರೆ-ಬೇರೆ ವರ್ಣಗಳಿಗೆ (ಎಲ್ಲರಿಗಿಂತ ಹೆಚ್ಚಾಗಿ ಬ್ರಾಹ್ಮಣ-ವರ್ಣಕ್ಕೆ) ವಿಧಿಸಿದರು. ಈ ವಿಧಿ-ನಿಷೇಧಗಳಲ್ಲೆಲ್ಲ ಅತಿ ಮುಖ್ಯವಾದದ್ದೆಂದರೆ ಶರೀರ ಸಂಬಂಧಕ್ಕೆ ಸಂಬಂಧಪಟ್ಟ ವಿಧಿ-ನಿಷೇಧಗಳು. ಭಿನ್ನ-ವರ್ಣೀಯ ವಿವಾಹವು ಶಾಸ್ತ್ರವಿರುದ್ಧವಾಯ್ತು. ಅದು ಸಮಾಜದಲ್ಲಿ ವಾಸ್ತವಿಕವಾಗಿ ಸಹ ಅಸ್ತಂಗತವಾಯ್ತು. ಆದರೆ, ಅದರೊಂದಿಗೆ ಶಾಸ್ತ್ರವಿರುದ್ಧವಾದ ಅನೈತಿಕ ಭಿನ್ನವರ್ಣೀಯ ಶರೀರ ಸಂಬಂಧವು ಮಾತ್ರ ಆರ್ಯರ ಸಮಾಜದಲ್ಲಿ ಅಸ್ತಂಗತವಾಗಲಿಲ್ಲ. ಅಷ್ಟೇ ಅಲ್ಲ, ಅದು ಅಂದಿನಿಂದ ಇಂದಿನವರೆಗೆ ಅವ್ಯಾಹತವಾಗಿ ನಡೆದೇ ಇದೆ. ಒಟ್ಟಿನಮೇಲೆ, ನಮ್ಮ ಶಾಸ್ತ್ರಕಾರರು ಎಷ್ಟು ಲಾಗ ಹಾಕಿದರೂ ನಮ್ಮ ಭರತಖಂಡದಲ್ಲಿ-ಜಂಬೂ ದ್ವೀಪದಲ್ಲಿ-ವರ್ಣ ಸಂಕರವಾಗುವುದೇನು ಬಿಡಲಿಲ್ಲ. ಶಾಸ್ತ್ರಗಳ ವಿಧಿ-ನಿಷೇಧಗಳಿಂದ ಆದದ್ದೇನೆಂದರೆ, ಯಾವುದು ಶಾಸ್ತ್ರಗಳು ಪ್ರತಿಬಂಧಿಸದಿದ್ದಲ್ಲಿ ಬಹಿರಂಗವಾಗಿ, ನೈತಿಕವಾಗಿ, ‘ರಾಜಾಕೋಷ್’ ಆಗಿ ನಡೆಯುತ್ತಿತ್ತೋ ಅದು ಗೌಪ್ಯವಾಗಿ, ಅನೈತಿಕವಾಗಿ, ‘ಚುಪ್-ಚಾಪ್’ ಆಗಿ ನಡೆಯತೊಡಗಿತು. ಅಷ್ಟೇ. ಹೀಗೆ ಮೊದಲಾದ ವೈದಿಕ ಸಮಾಜದಲ್ಲಿನ ವರ್ಣ-ಸಂಕರವು ಭಾವೀ ಭಾರತದ ಸಮಾಜಕ್ಕೆ ಒಂದು ದೃಷ್ಟಿಯಿಂದ ಒಳ್ಳೆಯದೇ ಆಯ್ತೆನ್ನಬಹುದು. ಯಾಕೆಂದರೆ, ಆಗ ಹಾಗೆ ವರ್ಣ-ಸಂಕರವು ಆಗದೇ ಹೋಗಿದ್ದರೆ ಇವತ್ತು ಭಾರತದಲ್ಲಿ ಬೇರೆ-ಬೇರೆ ಅಮಿಶ್ರಿತ ವರ್ಣಗಳ (ಕನಿಷ್ಠ ಪಕ್ಷ ಬಿಳಿ ಮತ್ತು ಕರಿ ಎಂಬ ಎರಡು ವರ್ಣಗಳ) ಬೇರೆ-ಬೇರೆ ಸಾಮಾಜಿಕ ಗುಂಪುಗಳು ಪ್ರತ್-ಪ್ರತ್ಯೇಕವಾಗಿ ಇರುತ್ತಿದ್ದವು ಮತ್ತು ಆ ಗುಂಪುಗಳು ತಮ್ಮ-ತಮ್ಮ ವರ್ಣಶುದ್ಧಿಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಪರಸ್ಪರ ಹೋರಾಡುತ್ತಿದ್ದವು. ಆದರೆ ಸುದೈವವಶಾತ್ ಆಗ ಕಾಮದೇವನು ಕೃಷ್ಣದೇವರ ಆಣತಿಯಿಂದಲೋ ಎಂಬಂತೆ ವಿಭಿನ್ನ ವಣಿಗಳ ಅನೇಕ ಗಂಡು ಹೆಣ್ಣುಗಳನ್ನು ಯಾವುದೇ ವರ್ಣಭೇದವಿಲ್ಲದೆ, ತನ್ನ ಸೆರೆಯಾಳುಗಳನ್ನಾಗಿ ಮಾಡಿದ್ದರಿಂದ ನಮ್ಮ ಕ್ರಿಸ್ತಶಕದ ಇಪ್ಪತ್ತನೆಯ ಶತಮಾನದ ಭಾರತ ಅರ್ಥಾತ್ ಇಂಡಿಯಾದಲ್ಲಿ ಸದ್ಯ ಯಾವ ವರ್ಣಸಮಸ್ಯೆಯೂ (ಜಾತಿ, ಭಾಷೆ ಮುಂತಾದ ಬೇರೆ ಅನೇಕ ಭರ್ಜರಿ ಸಮಸ್ಯೆಗಳಿದ್ದರೂ) ಉದ್ಭವಿಸಿಲ್ಲ. ಇಂತು, ಬೇರೆ ಬೇರೆ ವರ್ಣಗಳ ಜನರ ಶರೀರ ಮತ್ತು ಮನೋಧರ್ಮಗಳ ಸ್ವಾಭಾವಿಕ ಗತಿ-ಒಲವುಗಳಿಂದಾಗಿ ಹಲವು ನೂರು ವರ್ಷಗಳ ಅವಧಿಯಲ್ಲಿ ಪ್ರಾಚೀನ ಭಾರತವು ಮಿಶ್ರ ವರ್ಣೀಯವಾದ ಮತ್ತು ವರ್ಣಾಶ್ರಮ ವ್ಯವಸ್ಥೆಯುಳ್ಳ ಸಮಾಜವಾಯ್ತು. ಈ ಮಿಶ್ರ ಮತ್ತು: ವ್ಯವಸ್ಥಿತವಾದ ಸಮಾಜವುಂಟಾಗಲು ನಿಸರ್ಗದ ಸಹಾಯದ ಜೊತೆಗೆ ಶ್ರೀ ಕೃಷ್ಣ, ವಿಶ್ವಾಮಿತ್ರ, ಮುಂತಾದ ಕೆಲವು ಮಹಾಪುರುಷರ ಪ್ರಯತ್ನವೂ ಕಾರಣವಾಗಿದ್ದಿರಬೇಕು.
೨ ಆಧುನಿಕ ವರ್ಣಸಮಸ್ಯೆ
ಬಹುಶಃ ಈಗ ನಮ್ಮ ದೇಶದಲ್ಲಿ ಇಲ್ಲದಿರುವ ಸಮಸ್ಯೆಯೆಂದರೆ ವರ್ಣ-ಸಮಸ್ಯೆಯೊಂದೇ ಎಂದು ಕಾಣುತ್ತದೆ. ಆದರೆ ಈ ಸಮಸ್ಯೆಯು ಪ್ರಪಂಚದ ಬೇರೆ ಕೆಲವು ದೇಶಗಳಲ್ಲಿ ಅತಿ ಮುಖ್ಯವಾದ ಸಮಸ್ಯೆಗಳಲ್ಲಿ ಒಂದಾಗಿದೆ. ವರ್ಣ-ಸಮಸ್ಯೆಯಿರುವ ರಾಷ್ಟ್ರಗಳೆಲ್ಲ ಸಾಮಾನ್ಯವಾಗಿ ಬಿಳಿಯರು ಬಹುಸಂಖ್ಯಾತರಾಗಿರುವ ರಾಷ್ಟ್ರಗಳು (ಉದಾ : ಅಮೇರಿಕಾ ಮತ್ತು ಇಂಗ್ಲಂಡ್). ಆದರೆ ಬಿಳಿಯರು ಬಹು ಸಂಖ್ಯಾತರಾಗಿರದಿದ್ದರೂ ರಾಜಕೀಯ, ಆರ್ಥಿಕ ಮತ್ತು ಸೈನಿಕ ಅಧಿಕಾರ-ಪ್ರಾಬಲ್ಯಗಳನ್ನು ಪಡೆದಿರುವವರಲ್ಲೆಲ್ಲ ಈ ವರ್ಣ-ಸಮಸ್ಯೆ ಉದ್ಭವಿಸಿಯೇ ಉದ್ಭವಿಸಿದೆ-ಉದಾ : ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತ ಮತ್ತು ಸದ್ಯ ದಕ್ಷಿಣ ಆಫ್ರಿಕ ಮತ್ತು ರ‍್ಹೊಡೀಶಿಯಾ. ಇನ್ನೊಂದು ಮಹತ್ವದ ಮಾತೆಂದರೆ, ಈ ವರ್ಣಸಮಸ್ಯೆಯಿರುವ ರಾಷ್ಟ್ರಗಳಲ್ಲಿ ಕೆಲವು ಪ್ರಪಂಚದಲ್ಲಿಯೇ ಅತ್ಯಂತ ಮುಂದುವರಿದ, ಸುಧಾರಿಸಿದ ಮತ್ತು ಸುಸಂಸ್ಕೃತ ರಾಷ್ಟ್ರ ಗಳು ಎಂದು ಹೆಸರು ಪಡೆದ ರಾಷ್ಟ್ರ (ಉದಾ : ಇಗ್ಲಂಡ್ ಮತ್ತು ಅಮೇರಿಕೆ) ಗಳಿರುವುದು. ನನ್ನ ಇತ್ತೀಚಿನ ವಿದೇಶ ಪ್ರವಾಸದಿಂದ ನನಗೆ ಖಚಿತವಾದ ವಿಷಯವೆಂದರೆ, ಈ ಪ್ರಪಂಚದ ಬಿಳಿ ಜನಾಂಗದವರೆಲ್ಲ ಸಾಮಾನ್ಯವಾಗಿ ಮತ್ತು ಕೆಲ ಬಿಳಿ-ರಾಷ್ಟ್ರಗಳ ಜನರು (ಇಗ್ಲಂಡ್, ಅಮೇರಿಕ ಮತ್ತು ದ.ಆಫ್ರಿಕಾ) ವಿಶೇಷವಾಗಿ ತಾವು ಈ ಪ್ರಪಂಚದ ಕರಿ-ಜನಾಂಗದವರಿಗಿಂತ ಎಲ್ಲ ವಿಷಯಗಳಲ್ಲಿಯೂ ಮುಂದುವರಿದವರು ಎಂದು ಭಾವಿಸುತ್ತಾರೆ ಅನ್ನುವುದು. (ಈ ಪ್ರಪಂಚದ ಬಿಳಿ-ರಾಷ್ಟ್ರಗಳ ಜನರು, ಸದ್ಯ, ಆಧುನಿಕ ವೈಜ್ಞಾನಿಕ ಮತ್ತು ತಾಂತ್ರಿಕ ವಿಷಯಗಳಲ್ಲಿ ಮತ್ತು ಸಾಕ್ಷರತೆಯಲ್ಲಿ ಈ ಪ್ರಪಂಚದ ಕರಿಜನರಿಗಿಂತ ಮುಂದುವರಿದಿದ್ದಾರೆನ್ನುವುದು ನಿಜವಾದರೂ ಅವರು ಕರಿ ಜನರಿಗಿಂತ ಎಲ್ಲ ವಿಷಯಗಳಲ್ಲಿಯೂ-ಅದರಲ್ಲೂ ಸಾಂಸ್ಕೃತಿಕ ವಿಷಯಗಳಲ್ಲಿ ಅಥವಾ ಸಜ್ಜನಿಕೆಯಲ್ಲಿ ಮುಂದುವರಿದವರು ಎನ್ನುವುದು ನಿಜವಲ್ಲ. ನನ್ನ ಒಂದು ವರುಷದ: ಅಮೇರಿಕೆಯ ವಾಸವು ನನಗೆ ಇದನ್ನು ತೋರಿಸಿಕೊಟ್ಟಿದೆ. ಆದರೆ ಬಿಳಿಯರು ಈ ಮಾತನ್ನು ಒಪ್ಪುವುದಿಲ್ಲ:) ಬಿಳಿಯರ ಈ ಸ್ವಶ್ರೇಷ್ಠತಾ ಭ್ರಮೆ (superiority Copaplet)ಯು ನಮಗೆ, ಕರಿಯರಿಗೆ ಬಹಳ ನೋವನ್ನು ಮತ್ತು ಅಪಮಾನವನ್ನು ಉಂಟುಮಾಡುವ ವಿಷಯವಾದರೂ ಅವರ ಈ ಭಾವನೆಗೆ-ಅದು ಎಷ್ಟೇ ಅಶಿಷ್ಟ ವಾದರೂ-ಕಾರಣಗಳಿಲ್ಲದೇ ಇಲ್ಲ ಮತ್ತು ಆಧಾರಗಳಿಲ್ಲದೇ ಇಲ್ಲ ಅನ್ನುವುದನ್ನು ನಾವು ಗಮನಿಸಬೇಕು. ಸದ್ಯದ ನಮ್ಮ ಈ ಜಗತ್ತನ್ನು ನೋಡಿ. ಈ ಪ್ರಪಂಚದಲ್ಲಿ ಮುಂದುವರಿದಿರುವ (ಅರ್ಥಾತ್: ಭೌತಿಕವಾಗಿ) ರಾಷ್ಟ್ರಗಳೆಲ್ಲ ಯಾರವು ? ಬಿಳಿಯರವು (ಜಪಾನವೊಂದನ್ನುಳಿದು), ಅಮೇರಿಕೆ ಯಾರದು ? ರಶಿಯ ಯಾರದು ? ಇಂಗ್ಲಂಡ್ ಯಾರದು ? ಫ್ರಾನ್ಸ್ ಯಾರದು ? ಎಲ್ಲ ಬಿಳಿಯರವು. ಈ ಪ್ರಪಂಚದಲ್ಲಿ ಮಧ್ಯಯುಗದಿಂದ ಈಚೆಗೆ ಆರ್ಥಿಕವಾಗಿ, ವೈಜ್ಞಾನಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಮುಂದುವರಿದಿರುವ ರಾಷ್ಟ್ರಗಳೆಲ್ಲ ಬಿಳಿಯರವು. ಯೂರೋಪಿಯನ್ನರು ಮಧ್ಯಯುಗದಿಂದೀಚಿಗಿನ ಪ್ರಪಂಚದ ಇತಿಹಾಸವನ್ನು ಅವಲೋಕಿಸಿದಂತೆಲ್ಲ ಪರಿಶೀಲಿಸಿದಂತೆಲ್ಲ, ಈ ಕಠೋರ ಸತ್ಯವು ಈ ಕಹಿಸತ್ಯವು, ನನಗೆ ಹೆಚ್ಚು ಹೆಚ್ಚು ಮನ ದಟ್ಟಾಗತೊಡಗಿದೆ. ನಮ್ಮ ದೇಶದ ಬಗ್ಗೆ ನಮ್ಮ ದೇಶದ ಅತಿ ಪುರಾತನ, ಅತಿ ಸನಾತನ ಸಂಸ್ಕೃತಿಯ ಬಗ್ಗೆ, ಧರ್ಮಗಳ ಬಗ್ಗೆ, ಕಲೆ ಮತ್ತು ತತ್ವಜ್ಞಾನಗಳ ಬಗ್ಗೆ ಹಾಗೂ ಕೆಲಪುಟ್ಟಿಗೆ, ಗಣಿಶ ಜ್ಯೋತಿಷ, ಆಯುರ್ವೆದ ಮುಂತಾದ ಶಾಸ್ತ್ರಗಳ ಬಗ್ಗೆ ನಾನು ಎಷ್ಟೇ ಅಭಿಮಾನವನ್ನು ತಳೆದರೂ, ಈ ದಾರುಣ-ಸತ್ಯವನ್ನು, ಈ ಕಠೋರಸತ್ಯವನ್ನು ನಾನು ಕಾಣದೇ ಇರಲಾರೆ. ಒಪ್ಪಿಕೊಳ್ಳದೇ ಇರಲಾರೆ ಮತ್ತು ಅದನ್ನು ಎದುರಿಸದೇ ಇರಲಾರೆ. ಭೌತಿಕವಾಗಿಯೇ ಅನ್ನಿ ನಾವು ಹಿಂದುಳಿದವರು ಅನ್ನುವುದನ್ನು ಮೊದಲು ಒಪ್ಪಿಕೊಳ್ಳೋಣ. ಹೆಚ್ಚು ವಿಚಾರ ಮಾಡಿದರೆ, ನಾವು ಭಾರತೀಯರು ಆಧ್ಯಾತ್ಮಿಕವಾಗಿ ಸಹ (ಆಧ್ಯಾತ್ಮಿಕತೆಯನ್ನು ಜನಸಾಮಾನ್ಯರ ಆಧ್ಯಾತ್ಮಿಕತೆ ಮತ್ತು ದಿನನಿತ್ಯದ ಸಾಮಾನ್ಯ ವ್ಯವಹಾರಗಳಲ್ಲಿ ವ್ಯಕ್ತವಾಗುವ ಆಧ್ಯಾತ್ಮಿಕತೆ ಎಂದು ಬಗೆದಲ್ಲಿ) ಬೇರೆ ದೇಶದ ಜನರಿಗಿಂತ ಸದ್ಯ ಯಾವ ರೀತಿಯಲ್ಲೂ ಮುಂದಿಲ್ಲ (ಹಿಂದೆ ಕದಾಚಿತ್ ಇದ್ದಿರಬಹುದು) ಎನ್ನುವುದನ್ನು ಸಹ ಒಪ್ಪಿಕೊಳ್ಳಬೇಕಾಗುವದು.
ನಮ್ಮಲ್ಲಿ ಹೆಚ್ಚಿನವರು “ನಮ್ಮ ಆಧ್ಯಾತ್ಮಿಕತೆ’ ಎಂದರೆ ನಮ್ಮ ವೇದೋಪನಿಷತ್ತುಗಳ ಆಧ್ಯಾತ್ಮಿಕತೆ, ಭಗವದ್ಗೀತೆಯ ಆಧ್ಯಾತ್ಮಿಕತೆ, ನಮ್ಮ ಧರ್ಮ-ಶಾಸ್ತ್ರಗಳ ಆಧ್ಯಾತ್ಮಿಕತೆ, ಪುರಾಣ-ಪುಣ್ಯ ಕಥೆಗಳ ಆಧ್ಯಾತ್ಮಿಕತೆ, ನಮ್ಮ ಋಷಿ-ಮುನಿ-ಮಹಾತ್ಮರುಗಳ ಆಧ್ಯಾತ್ಮಿಕತೆ ಅಥವಾ ನಮ್ಮ ಪುಸ್ತಕಗಳ ಮತ್ತು ಭಾಷಣಗಳ ಆಧ್ಯಾತ್ಮಿಕತೆ ಎಂದಷ್ಟೇ ಭಾವಿಸಿದ್ದಾರೆ. ಆದರೆ ಈ ಎಲ್ಲ ನಮ್ಮ ವಂದ್ಯ ಮತ್ತು ಪೂಜ್ಯ ಆಧ್ಯಾತ್ಮಿಕತೆಗಳು ಎಷ್ಟರಮಟ್ಟಿಗೆ ನಮ್ಮ “ಸದ್ಯದ-ನಮ್ಮ”, ‘ಜನಸಾಮಾನ್ಯರಾದ ನಮ್ಮ’ ಮತ್ತು ‘ದಿನಂಪ್ರತಿ-ನಮ್ಮ’ ಅರ್ಥಾತ್ ನಮ್ಮ ‘ಚಾಲೂ’ ಆಧ್ಯಾತ್ಮಿಕತೆಯಾಗಿದೆ ಎನ್ನುವುದನ್ನು ಪರಿಶೀಲಿಸುವುದು ಮತ್ತು ಪರೀಕ್ಷಿಸುವುದು ನಮ್ಮ ಎಲ್ಲಕ್ಕಿಂತ ದೊಡ್ಡ ಆಧ್ಯಾತ್ಮಿಕ ಕಾರ್ಯವಾಗಿದೆ ಎಂದು ನನಗನ್ನಿಸುತ್ತದೆ, ಇರಲಿ. ಈ ‘ನಿತ್ಯ’ವಾದ ಆಧ್ಯಾತ್ಮಿಕತೆಯ ಸಮಸ್ಯೆಯನ್ನು ಇಷ್ಟಕ್ಕೇ ಬಿಟ್ಟು ನಮ್ಮ ಪ್ರಸ್ತುತ ಸಮಸ್ಯೆಯಾದ ವರ್ಣಸಮಸ್ಯೆಯನ್ನು ಮತ್ತೆ ಎತ್ತಿಕೊಳ್ಳೋಣ.
ಸದ್ಯಕ್ಕೆ ಈ ಪ್ರಪಂಚದಲ್ಲಿ ಮುಂದುವರಿದಿರುವ (ಬೇಕಾದರೆ `ಭೌತಿಕವಾಗಿ’ ಎಂದಷ್ಟೇ ತಿಳಿಯಿರಿ) ರಾಷ್ಟ್ರಗಳೆಲ್ಲ ಬಿಳಿಜನಾಂಗದವರವು ಎಂದು ಮೇಲೆ ಹೇಳಿದೆನಷ್ಟೇ. ಈ ಸದ್ಯದ ಬಿಳಿಯರು ‘ಮುಂದುವರಿದಿರುವ ಸ್ಥಿತಿ’ಯಿಂದಾಗಿ ಬಿಳಿಯರು ತಮ್ಮ ಜನಾಂಗವು ಕರಿಯರಿಗಿಂತ ಎಲ್ಲ ವಿಷಯಗಳಲ್ಲಿ ಮುಂದುವರಿದ ಮತ್ತು ಯಾವಾಗಲೂ, ಎಲ್ಲದರಲ್ಲಿಯೂ, ಅವರಿಗಿಂತ ಮುಂದೆ ಹೋಗಬಲ್ಲ ಜನಾಂಗ ಮತ್ತು ಕರಿಯರಿಗಿಂತ ಸುಂದರವಾದ, ನಿರ್ಮಲವಾದ, ಶುದ್ಧವಾದ (ವರ್ಣ-ಮಿಶ್ರಣಕ್ಕೆಡೆಗೊಡದೇ ತಮ್ಮ ವರ್ಣ-ಶುದ್ದಿಯನ್ನು ಕಾಯ್ದು ಕೊಂಡಿದ್ದರಿಂದಾಗಿ) ಹಾಗೂ ಅವರಿಗಿಂತ ಬಹಳ ಮೇಲ್ಮಟ್ಟದ ಶುಚಿ-ರುಚಿಗಳುಳ್ಳ ಜ್ಞಾನ-ವಿಜ್ಞಾನ-ಕಲೆಗಳುಳ್ಳ-ಒಟ್ಟಾರೆ ಕರಿಯರಿಗಿಂತ ಬಹಳ ಮೇಲ್ಮಟ್ಟದ ಸಂಸ್ಕೃತಿಯುಳ್ಳ ಜನಾಂಗ ಎಂದು ಭಾವಿಸುವಂತಾಗಿದೆ ಮತ್ತು ಅವರು ಸಾಮಾನ್ಯವಾಗಿ ಹಾಗೆಯೇ ಭಾವಿಸುತ್ತಿದ್ದಾರೆ. ಪ್ರಪಂಚದ ಎಲ್ಲ ಬಿಳಿಯರೂ ಹೀಗೆ ಭಾವಿಸುತ್ತಾರೆ ಅಥವಾ ಭಾವಿಸುತ್ತಿದ್ದಾರೆ ಎಂದು ನಾನು ಹೇಳುತ್ತಿಲ್ಲ. ಆದರೆ ಅನೇಕ (ಅರ್ಥಾತ್ ಸಾಕಷ್ಟು ಸಂಖ್ಯೆಯಲ್ಲಿ) ಬಿಳಿಯರು ಹೀಗೆ ಭಾವಿಸುತ್ತಾರೆ ಎಂದು ಮಾತ್ರ ಖಂಡಿತವಾಗಿ ಹೇಳಬಲ್ಲೆ. ನಾನು ಎಲ್ಲ ಬಿಳಿದೇಶಗಳಲ್ಲಿ ಇದ್ದು ಬಂದಿಲ್ಲವೆನ್ನುವುದು ನಿಜವಾದರೂ, ಹಲವಾರು ಬಿಳಿದೇಶಗಳಲ್ಲಿ ಹಾಯ್ದು ಒಂದು ಬಿಳಿ ದೇಶದ ಒಂದು ಬಿಳಿ ಪ್ರಾಂತದಲ್ಲಿ ಬಿಳಿಜನರ ಮಧ್ಯೆ ವರ್ಷಪ್ಪತ್ತು ವಾಸಿಸಿ ಮತ್ತು ಜೀವಿಸಿ ಬಂದಿರುವೆನಾದ್ದರಿಂದ ಮತ್ತು ಯೂರೋಪಿನ ೩-೪ ದೇಶಗಳಲ್ಲಿ ಕೆಲಕಾಲ ವಾಸಿಸಿ, ಅಲ್ಲಿ ನೌಕರಿ ಮಾಡಿ ಬಂದಿರುವ ನನ್ನ ಒಬ್ಬಿಬ್ಬ ಸನಿಹದ ಮಿತ್ರರ ಹೇಳಿಕೆಗಳ ಮುಖಾಂತರವಾಗಿ ಪ್ರಪಂಚದ ನಾಲ್ಕಾರು ಬಿಳಿಯ ದೇಶಗಳ ಬಿಳಿಜನರ ಸಾಮಾನ್ಯ ಭಾವನೆಯನ್ನು ಮತ್ತು ಸಾಮಾನ್ಯ
ಧೋರಣೆಯನ್ನು ತಕ್ಕಮಟ್ಟಿಗೆ ಅರಿತಿರುವೆನಾದ್ದರಿಂದ ಈ ಖಂಡಿತಾಭಿಪ್ರಾಯವನ್ನು ಕೊಡುತ್ತಿದ್ದೇನೆ. ನಾನು ಹೀಗೆ ಹೇಳುವಾಗ, ಪ್ರಪಂಚದ ಎಲ್ಲ ಬಿಳಿ-ದೇಶಗಳಲ್ಲೂ ಇರುವ, ಆದರೆ ಅಲ್ಪಸಂಖ್ಯಾತರಾಗಿ ಇರುವ, ಪ್ರಾಜ್ಞ ಮತ್ತು ಸುಸಂಸ್ಕೃತ ಬಿಳಿಯರ ವಿಚಾರ ಮತ್ತು ಧೋರಣೆಗಳನ್ನು ಗಣನೆಗೆ (ಅವು ಗಣನೀಯವಾದರೂ) ತೆಗೆದುಕೊಂಡಿಲ್ಲ. ಅಂತೂ, ನನಗೆ ತೋರುವಂತೆ ವರ್ಣಸಮಸ್ಯೆಯು ಆಧುನಿಕ ಜಗತ್ತಿನ ಮುಂದುವರಿದ (ಅರ್ಥಾತ್ ವೈಜ್ಞಾನಿಕವಾಗಿ, ಆರ್ಥಿಕವಾಗಿ ಮತ್ತು ಸೈನಿಕವಾಗಿ) ಬಿಳಿ ರಾಷ್ಟ್ರಗಳ ಜಗತ್ತಿನ ಒಂದು ಬಹಳ ನಿಜವಾದ (ಸಾಮಾಜಿಕವಾಗಿ ಮತ್ತು ವೈಯಕ್ತಿಕವಾಗಿ), ಬಹಳ ಮೂಲಭೂತವಾದ (ಸಾಮಾಜಿಕ ಮನೋ ವೈಜ್ಞಾನಿಕವಾಗಿ) ಮತ್ತು ಬಹಳ ತೀವ್ರವಾದ (ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕವಾಗಿ) ಸಮಸ್ಯೆಯಾಗಿದೆ; ಅದು ಕೇವಲ ಕೆಲವು ರಾಷ್ಟ್ರಗಳ ಅಥವಾ ಸರಕಾರಗಳ ರಾಜಕೀಯ ಮತ್ತು ಅಂತರಾಷ್ಟ್ರೀಯ “ಸ್ಟಂಟ್” ಆಗಿಲ್ಲ. ಅಮೆರಿಕ (U. S. A.) ದ ಮಟ್ಟಿಗೆ ಹೇಳಬೇಕೆಂದರೆ, ಅಮೇರಿಕದ ಕೇಂದ್ರ (Federal) ಸರ್ಕಾರವು ವರ್ಣ-ವಿಷಯದಲ್ಲಿ ಸಾಕಷ್ಟು ಪ್ರಗತಿಶೀಲವಾದ ಹಾಗೂ ಸಾಕಷ್ಟು ಮಾನವೀಯ (Humanel)ವಾದ ಧೋರಣೆಯನ್ನು ತಳೆದಿದ್ದರೂ ಮತ್ತು ಹಲವಾರು ಪ್ರಗತಿಪರವಾದ ಕಾಯ್ದೆಗಳನ್ನು ಈ ವಿಷಯದಲ್ಲಿ ಈಗಾಗಲೇ ‘ಜ್ಯಾರಿ’ಯಲ್ಲಿ (Jn implementation) ತಂದಿದ್ದರೂ, ಅಮೇರಿಕೆಯ ಬಿಳಿಯ ಜನಸಾಮಾನ್ಯರು (ಉತ್ತರ ಮತ್ತು ದಕ್ಷಿಣ ಈ ಎರಡೂ ಕಡೆಯ ರಾಜ್ಯಗಳಲ್ಲಿನ ಜನಸಾಮಾನ್ಯರು) ವರ್ಣ ಭೇದವನ್ನು ಮಾಡಿಯೇ ಮಾಡುತ್ತಾರೆ (ಉತ್ತರದ ರಾಜ್ಯಗಳಲ್ಲಿ ಕಡಿಮೆ ಹುಂಬತನದಿಂದ ಮತ್ತು ದಕ್ಷಿಣದ ರಾಜ್ಯಗಳಲ್ಲಿ ಹೆಚ್ಚು ಹುಂಬತನದಿಂದ), ಕೇವಲ ಕೆಲವು ಅಶಿಕ್ಷಿತ ಮತ್ತು ಅಸಂಸ್ಕೃತ ಬಿಳಿಯ ಜನರಷ್ಟೇ ವರ್ಣಭೇದವನ್ನು ಮಾಡುತ್ತಿರಬಹುದೆಂದು ನಾನು ಅಮೇರಿಕೆಗೆ ಹೋಗುವ ಮೊದಲು ತಿಳಿದಿದ್ದೆ. ಆದರೆ ಅಮೇರಿಕೆಗೆ ಹೋದನಂತರ, ಬಿಳಿ ಸಮಾಜದ ಮಧ್ಯಮ ಮತ್ತು ಮೇಲ್ವರ್ಗದ ಸುಶಿಕ್ಷಿತ (?) ಬಿಳಿಯರಲ್ಲೇ ವರ್ಣ-ಭಾವನೆಯು ಹೆಚ್ಚಾಗಿರುವುದನ್ನು ಕಂಡು ಆಶ್ಚರ್ಯಗೊಂಡೆ. ಬಿಳಿ ಸಮಾಜದ ಬಡಜನರಲ್ಲಿ-ರೈತರಲ್ಲಿ ಮತ್ತು ಕೂಲಿಕಾರರಲ್ಲಿ ವರ್ಣಭೇದ-ಭಾವನೆಯನ್ನು ಹೆಚ್ಚಾಗಿ ಕಾಣಲಿಲ್ಲ, ಅವರು ನನ್ನೊಡನೆ ವ್ಯವಹರಿಸುವಾಗ, ಅಷ್ಟೇ ಅಲ್ಲ, ತಮ್ಮ ದೇಶದ ಕರಿಯ (ನೀಗ್ರೋ) ಜನರೊಡನೆ ವರ್ತಿಸುವಾಗ ಕೂಡ ಮೇಲ್ವರ್ಗದ ಬಿಳಿಯರಿಗಿಂತ ಹೆಚ್ಚು ಮಾನವೀಯವಾಗಿ ಮತ್ತು ಹೆಚ್ಚು ಸರಳವಾಗಿ ವರ್ತಿಸುತ್ತಿರುವದನ್ನು ಕಂಡೆ (ನಾನು ಕಮ್ಯೂನಿಷ್ಟನಲ್ಲವೆಂಬುದನ್ನು ಇಲ್ಲಿ ತಿಳಿಯಪಡಿಸುತ್ತೇನೆ. ನನ್ನೊಡನೆ ಅವರ ವರ್ತನೆಯು ಮರ್ಯಾದೆ ತೋರಿಸುವಂಥದಾಗಿದ್ದುದಕ್ಕೆ ಬಹುಶಃ ಬೇರೆ ಕಾರಣಗಳಿರಬಹುದು (ಉದಾ :-ನನ್ನ ಬಿಳೀ ಡ್ರೆಸ್ಸು, ವಿದ್ಯೆ, ಕೆಲಸ, ನನ್ನ ಆರ್ಥಿಕ ಮತ್ತು ಸಾಂಸ್ಕೃತಿಕ ಅಂತಸ್ತು, ಇತ್ಯಾದಿ). ಆದರೆ ತಮ್ಮ ದೇಶದ ಮತ್ತು ತಮ್ಮಷ್ಟೇ ಅಥವಾ ತಮಗಿಂತ ಕೆಳಗಿನ ಅಂತಸ್ತಿನ ಕರಿಯರೊಡನೆ ಅವರು ತೋರುವ ಸೌಹಾರ್ದವು ಮಾತ್ರ ಕೇವಲ ಮಾನವೀಯ ಭಾವನೆಗಳಿಂದ ಪ್ರಚೋದಿತವಾದದ್ದೇ ಆಗಿರಬೇಕು ಅಥವಾ ತಾವು ಬಿಳಿಯರಾದರೂ ಮತ್ತು ಅವರು ಕರಿಯರಾದರೂ, ತಾವಿಬ್ಬರೂ ಬಡವರು, ದೀನರು ಮತ್ತು ಶ್ರಮಜೀವಿಗಳು ಎಂಬ ತಮ್ಮಲ್ಲಿನ ಸಾಮಾನ್ಯವಾದ ಮತ್ತು ಮೂಲಭೂತವಾದ ಹೋಲಿಕೆಗಳಿಂದಾಗಿ ಅವರು ಹಾಗೆ ಸಮ-ಭಾವದಿಂದ ವರ್ತಿಸುತ್ತಿದ್ದರೂ ವರ್ತಿಸುತ್ತಿರಬಹುದು. ಆದರೂ ನನಗೆ ಅವರ ಈ ಸಮಭಾವನೆಯು ಕೇವಲ ಆರ್ಥಿಕ ಮತ್ತು ಸಾಮಾಜಿಕ ಕಾರಣಗಳ ಪರಿಣಾಮವೆಂದೇನೂ ಅನಿಸಲಿಲ್ಲ. ನಾನು ಪೆನ್ಸಿಕೋಲಾದಲ್ಲಿ ಪ್ರತಿನಿತ್ಯ ನನ್ನ ಕಾಲೇಜಿಗೆ ಸಿಟಿ ಬಸ್ಸಿನಲ್ಲಿ ಹೋಗುತ್ತಿದ್ದೇನಾಗಿ ಮತ್ತು ಅಮೇರಿಕೆಯಲ್ಲಿ ಅಕ್ಕಿ ದೊಡ್ಡ ದೊಡ್ಡ ಶಹರಗಳನ್ನಷ್ಟು ಬಿಟ್ಟು ಉಳಿದೆಲ್ಲ ಊರುಗಳಲ್ಲಿ ಮತ್ತು ನಗರಗಳಲ್ಲಿ ಸಿಟಿ ಬಸ್ಸುಗಳನ್ನು ತೀರ ಬಡವರಾದವರು (ಸಾಧಾರಣ ಬಡವರಿಗೆ ಕನಿಷ್ಠ ಒಂದಾದರೂ ಸೆಕೆಂಡ್ ಹ್ಯಾಂಡ್ ಕಾರು ಇಲ್ಲಿ ಇದ್ದೇ ಇರುತ್ತದೆ) ಮಾತ್ರ ಸಾಮಾನ್ಯವಾಗಿ ಉಪಯೋಗಿಸುತ್ತಾರಾಗಿ, ನನಗೆ ಅಲ್ಲಿಯ ಕರಿಜನರನ್ನು (ಅಮೇರಿಕೆಯ ಕಡು ಬಡವರಲ್ಲಿ ನೂರಕ್ಕೆ ತೊಂಬತ್ತರಷ್ಟು ಜನರು ಕರಿಯರು) ಮತ್ತು ಕೆಲವು ಬಡವರಾದ ಬಿಳಿ ಜನರನ್ನು ಅತಿ ಸಮೀಪದಿಂದ ನೋಡುವ ಮತ್ತು ಅಭ್ಯಸಿಸುವ ಅವಕಾಶ ಸಾಕಷ್ಟು ದೊರಕಿತ್ತು. ಅದರಂತೆಯೇ, ಅಲ್ಲಿ ವರ್ಣಭೇದ-ಭಾವನೆಯು ಬಿಳಿ ಜನಾಂಗದ ಚಿಕ್ಕ ಮಕ್ಕಳು ಮತ್ತು ಯುವಕ-ಯುವತಿಯರು ಇವರಲ್ಲಿಗಿಂತ ಪ್ರೌಢರು ಮತ್ತು ವಯಸ್ಕರು ಇವರಲ್ಲಿಯೇ ಹೆಚ್ಚಾಗಿದ್ದುದನ್ನು ಕಂಡೆ. ನಾನು ಅಲ್ಲಿ ಕಾಲೇಜಿನಲ್ಲಿ ಪಾಠ ಹೇಳಲು ಹೋದ ಮೊದಲನೇ ದಿವಸ ನನ್ನ ವಿದ್ಯಾರ್ಥಿಗಳು (ಅವರೆಲ್ಲ ಹೆಚ್ಚಾಗಿ ಬಿಳಿಯರೇ. ಬಿಳಿಯರ ವಿದ್ಯಾ ಸಂಸ್ಥೆಗಳಲ್ಲಿ ಏನೋ ಶಾಸ್ತ್ರಕ್ಕೆಂಬಂತೆ ಕೈ-ಬೆರಳ ಮೇಲೆ ಎಣಿಸಬಹುದಾದಷ್ಟು ಸಂಖ್ಯೆಯಲ್ಲಿ ಮಾತ್ರ ನೀಗ್ರೋ ವಿದ್ಯಾರ್ಥಿ-ವಿದ್ಯಾರ್ಥಿನಿಯರಿರುತ್ತಾರೆ) ಕರಿಯನಾದ ನನ್ನನ್ನು ನೋಡಿ ಮೊದಲು ನಾನು ಸೂಟು-ಟೈಗಳಲ್ಲಿ ಬಂದ ಒಬ್ಬ ನೀಗ್ರೋ ವಿದ್ಯಾರ್ಥಿಯಾಗಿರಬೇಕೆಂದು ಭಾವಿಸಿದ್ದರು. ಆದರೆ ನಾನು ಕ್ಲಾಸಿನಲ್ಲಿ ಪ್ರವೇಶಿಸಿದ ಕೂಡಲೇ ಅವರೊಂದಿಗೆ ಕುಳಿತುಕೊಳ್ಳಲು ಹೋಗದೇ ಸೀದಾ ವೇದಿಕೆಯ ಕಡೆಗೆ ನಡೆದುದನ್ನು ಕಂಡು ಅವರು ಆಶ್ಚರ್ಯಪಟ್ಟರು ಮತ್ತು ಮುಂದೆ ನಾನು ನನ್ನ “ವಿಚಿತ್ರವಾದ ಇಂಗ್ಲೀಷಿನಲ್ಲಿ? (ನನ್ನ ಇಂಗ್ಲೀಷಿನ ಭಾರತೀಯ-ಉಚ್ಚಾರಗಳಿಂದಾಗಿ ಅಲ್ಲಿ ನನ್ನ ಇಂಗ್ಲೀಷು ಆಡು ಉತ್ತಮವೆಂದು ಅವರಿಂದ ಅನಿಸಿಕೊಂಡ ಮೇಲೆ ಸಹ-‘Strange English ಮತ್ತು “Foreigo English’ ಎಂದೇ ಪ್ರಸಿದ್ಧವಾಗಿತ್ತು) ನನ್ನ ಇನ್ನೂ ವಿಚಿತ್ರವಾದ ಹೆಸರು” ಹೇಳಿ, ನಾನು ಇಂಡಿಯಾದವನೆಂದು, ಅವರ ಹೊಸ ಫಿಲಾಸಫಿ ಶಿಕ್ಷಕನೆಂದು ಹೇಳಿದಾಗಂತೂ ಅವರ ಆಶ್ಚರ್ಯಕ್ಕೆ ಸೀಮೆಯೇ ಉಳಿಯಲಿಲ್ಲ. ಅವರು
ಮೊದ ಮೊದಲು ನನ್ನ ವಿಷಯದಲ್ಲಿ (ನಾನು ಕರಿಯನಾದ್ದರಿಂದ) ತುಸು ಅಸಡ್ಡೆಯನ್ನು ತೋರಿಸಿದರಾದರೂ ಕ್ರಮೇಣ (ಆದರೆ ಬಹುಬೇಗ) ನನಗೆ ಒಗ್ಗಿಕೊಂಡರು ಮತ್ತು ಮರ್ಯಾದೆ ತೋರಿಸತೊಡಗಿದರು. ಆದರೆ ಅದೇ ನನ್ನ ಸಹೋದ್ಯೋಗಿಗಳಲ್ಲಿ ಅನೇಕರು ನನಗೆ ಕೊನೆಯವರೆಗೂ ಒಗ್ಗಿಕೊಳ್ಳಲಿಲ್ಲ ; ನನ್ನನ್ನು ತಮ್ಮ ಸರಿಸಮಾನನಾದ ಸಹೋದ್ಯೋಗಿಯೆಂದು ಒಪ್ಪಿಕೊಳ್ಳಲಿಲ್ಲ. ಇದೆಲ್ಲದರಿಂದ ನನಗೆ ತೋರುವುದೇನೆಂದರೆ, ವರ್ಣಭೇದ-ಭಾವನೆಯು ಬಿಳಿ ಜನಾಂಗದ ಜನರಲ್ಲಿ ಜಾತ್ಯಾ ಇರುವುದಕ್ಕಿಂತ ಹೆಚ್ಚಾಗಿ ‘ಕಲಿಕೆ’ಯಿಂದ ಬರುತ್ತದೆ ಹಾಗೂ ಸಾಮಾಜಿಕ ಸಂಪ್ರದಾಯಗಳಿಂದ ಹಬ್ಬುತ್ತದೆ ಮತ್ತು ಬಲಗೊಳ್ಳುತ್ತದೆ. ಅಮೇರಿಕೆಯಲ್ಲಿಯ ಬಿಳಿಜನರು ಅಲ್ಲಿಯ ಕರಿಜನರಿಗಿಂತ (ಸಾಮಾನ್ಯವಾಗಿ) ಹೆಚ್ಚು ಸುಶಿಕ್ಷಿತರೂ, ಸುಸಂಸ್ಕೃತರೂ ಆಗಿದ್ದಾ ರೆಂಬುದು ನಿಜ. ಆದರೆ ಅವರು ಅಲ್ಲಿಯ ಕರಿಯರಿಗಿಂತ ಹೆಚ್ಚು ಸ್ವತಂತ್ರರೂ (ರಾಜಕೀಯವಾಗಿ ಮತ್ತು ಆರ್ಥಿಕವಾಗಿ) ಸಿರಿವಂತರೂ ಸಹ ಆಗಿದ್ದಾರೆಂಬುದನ್ನು ನಾವು ಗಮನಿಸಬೇಕು (ಈ ಮಾತನ್ನು ಅಮೇರಿಕೆಯಲ್ಲಿಯು ಬಿಳಿಯರು ಅಲ್ಲಿಯ ಕರಿಯರಿಗಿಂತ ಅಥವಾ ಪ್ರಪಂಚದ ಯಾವುದೇ ಕರಿಯರಿಗಿಂತ ತಾವು ಹೆಚ್ಚು ಸುಧಾರಿಸಿದವರು ಮತ್ತು ಸುಸಂಸ್ಕೃತರು ಎಂದು ಹೇಳಿಕೊಳ್ಳುವಾಗ ಸರ್ವಥಾ ಗಮನಿಸುವುದಿಲ್ಲ). ಅಮೇರಿಕೆಯ ಕರಿಯರು ಅಲ್ಲಿಯ ಬಿಳಿಯರಷ್ಟೇ ಸ್ವತಂತ್ರರೂ, ಸಿರಿವಂತರೂ ಆದಾಗ ಅವರಿಬ್ಬರ ನಡುವಿನ ಸದ್ಯದ ಸಾಂಸ್ಕೃತಿಕ ವ್ಯತ್ಯಾಸಗಳು ಕನಿಷ್ಠ ಮುಕ್ಕಾಲುಪಾಲಿನಷ್ಟಾದರೂ ಮಟಾ-ಮಾಯವಾಗಿಬಿಡುವವು. ಇಲ್ಲಿ ನಾವು ಬ್ರಿಟಿಷರಾಳಿಕೆಯ ಕಾಲದಲ್ಲಿ ನಮ್ಮ ಮತ್ತು ಅವರ ದೇಶ ಹಾಗೂ ಸಮಾಜಗಳಲ್ಲಿನ ವ್ಯತ್ಯಾಸ ಮತ್ತು ಈಗ ನಾವು ಅವರಿಂದ ಸ್ವತಂತ್ರರಾಗಿ ಕೇವಲ ಇಪ್ಪತ್ತೆರಡೇ ವರ್ಷಗಳು ಕಳೆಯುವಷ್ಟರಲ್ಲಿ ನಮ್ಮ ಮತ್ತು ಅವರ ದೇಶ ಮತ್ತು ಸಮಾಜಗಳ ನಡುವೆ ಉಳಿದಿರುವ ವ್ಯತ್ಯಾಸ ಇವುಗಳನ್ನು ಗಮನಿಸಬಹುದು. ನಮ್ಮ ದೇಶವು ಇನ್ನೂ ಬಡಸ್ಥಿತಿಯಲ್ಲಿಯೇ ಇದ್ದರೂ, ಬ್ರಿಟಿಷರು ನಮ್ಮಲ್ಲಿಂದ ಕಾಲ್ದೆಗೆದಾಗ ನಮ್ಮ ದೇಶದ ಸ್ಥಿತಿ ಹಿಂಡಿ ಹಿಪ್ಪೆಯಾದ ಮಾವಿನ ಹಣ್ಣಿನ ಸಿಪ್ಪೆಯಂತಿದ್ದಿತಾದರೂ, ಈಗ ನಮ್ಮ ಮತ್ತು ಅವರ ದೇಶಗಳ ನಡುವೆ ಮೊದಲಿನ ವ್ಯತ್ಯಾಸ ಉಳಿದಿಲ್ಲವೆಂಬುದರಲ್ಲಿ ಯಾವ ಸಂದೇಹವೂ ಇಲ್ಲ.
ಕರಿಯರು ಬಿಳಿಯಂಗಿಂತ ಎಷ್ಟೋ ಕಡಿಮೆ ಶುಚಿ-ರುಚಿಗಳುಳ್ಳವರೂ, ಕಡಿಮೆ ಸುಶಿಕ್ಷಿತರೂ, ಕಡಿಮೆ ಸುಸಂಸ್ಕೃತರೂ ; ಮತ್ತು ಅವರಿಗಿಂತ ಎಷ್ಟೋ ಹೆಚ್ಚು ಅನಾಗರಿಕರೂ, ಗಲಭೆಕೋರರೂ, ಹಿಂಸಾಚಾರಿಗಳೂ ಆಗಿರುವರೆಂದೂ, ನಾನು ನಿಜವಾದ ಕರಿಯರನ್ನು ಅಲ್ಲಿ ಇನ್ನೂ ನೋಡಿಯೇ ಇಲ್ಲವೆಂದೂ, ಬೇಕಾದರೆ ಚಿಕ್ಯಾಗೋ ಮುಂತಾದ ನಗರಗಳಿಗೆ ಹೋಗಿ ಅಲ್ಲಿಯ ಘೆಟೋ (Ghettos) ಗಳನ್ನು ನೋಡಬಹುದೆಂದೂ ನನ್ನ ಕೆಲ ಬಿಳಿ-ಮಿತ್ರರು (ನಾನು ವರ್ಣಕ್ಕೆ ಸಂಬಂಧಿಸಿದ ಇಂತಹ ವಿಷಯಗಳನ್ನೆಲ್ಲ ನನ್ನ ಬಿಳಿ ಸ್ನೇಹಿತರೊಂದಿಗೆ ಇಲ್ಲಿ ಅಮೇರಿಕೆಯಲ್ಲಿದ್ದುಕೊಂಡು ಮತ್ತು ಬಿಳಿಯರ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಚರ್ಚಿಸುತ್ತೇನೆ ಎಂಬುದು ನನ್ನ ಅಮೇರಿಕೆಯಲ್ಲಿನ ಭಾರತೀಯ ಮಿತ್ರರಿಗೆ ಗೊತ್ತಾದಾಗ ಅವರು ಆಶ್ಚರ್ಯಕ್ಕಿಂತ ಹೆಚ್ಚಾಗಿ ಗಾಬರಿಪಟ್ಟರು) ನನಗೆ ತಿಳಿಸಿದರು. ಒಂದು ವೇಳೆ ಆ ನನ್ನ ಬಿಳಿ ಮಿತ್ರರು ತಿಳಿಸಿದಂತೆ, ಚಿಕ್ಯಾಗೋ ಮೊದಲಾದ ನಗರಗಳಲ್ಲಿ ಕೆಲ ಅಥವಾ ಅಧಿಕಾಂಶ ನಿಗ್ರೋಗಳು ಹಾಗೆ ಇರುವರೆಂದು ಒಪ್ಪಿಕೊಂಡರೂ, ಎಲ್ಲ (ಎಲ್ಲೆಡೆಯಲ್ಲಿಯ) ನಿಗ್ರೋಗಳು ಸಾಮಾನ್ಯವಾಗಿ ಸ್ವಭಾವತಃ ಹಾಗೆಯೇ ಇರುವರೆಂದಾಗಲೀ, ಅವರನ್ನು ಎಂಥ ವಾತಾವರಣದಲ್ಲಿಟ್ಟರೂ ಅವರು ಹಾಗೆಯೇ ಉಳಿಯುವರೆಂದಾಗಲೀ ನಿರ್ಣೈಸುವುದು (ನನ್ನ ಬಿಳಿ-ಮಿತ್ರರು ಮತ್ತು ಅಧಿಕಾಂಶ ಬಿಳಿಯರು ನಿರ್ಣೈಸಿರುವಂತೆ) ತಪ್ಪು. ಕೆಲ ನೀಗ್ರೋಗಳ ಈ ಹಿಂಸಾಚಾರ ಮುಂತಾದವುಗಳಿಗೆ [ಇಲ್ಲಿ, ಬ್ಲಾಕ್ ಪ್ಯಾಂಥರುಗಳು (Black Panthers), ಕು ಕ್ಲು ಕ್ಸ ಕ್ಲ್ಯಾನ್ (Ku Klux Klan ) ಗಿಂತ ತೀರ ಇತ್ತೀಚಿನವರು ಎನ್ನುವುದನ್ನು ಗಮನಿಸಬೇಕು] ಮುಖ್ಯ ಕಾರಣವೆಂದರೆ ಅವರಿಗೆ ಸಮಾಜದಲ್ಲಿ ನ್ಯಾಯ, ಸರಿಸಮಾನ ಅವಕಾಶ, ಸ್ಥಾನ ಮತ್ತು ಅನುಕೂಲತೆಗಳು ಇಲ್ಲದಿರುವುದು. ಯೋಗ್ಯ ಅವಕಾಶ, ಅನುಕೂಲತೆ ಮತ್ತು ಯೋಗ್ಯತೆಗೆ ತಕ್ಕ ಸ್ಥಾನ-ಮಾನಗಳು ನೀಗ್ರೋಗಳಿಗೆ ಸಿಕ್ಕ ಸ್ಥಳಗಳಲ್ಲೆಲ್ಲ ಮತ್ತು ಸಮಯದಲ್ಲೆಲ್ಲ ಅವರು ಇತರ ಬಿಳಿಯ ನಾಗರಿಕರಂತೆ ಸಭ್ಯರಾಗಿಯೇ ಜೀವನ ನಡೆಸುತ್ತಿದ್ದಾರೆನ್ನುವುದು ಅಮೇರಿಕದ ಕೆಲ ಸ್ಥಳಗಳಲ್ಲಿಯೇ ನನಗೆ ಗೊತ್ತಾಗುತ್ತದೆ. ಅದು ಏನೇ ಇರಲಿ, ಯಾವ ಮನುಷ್ಯನ ಬಗ್ಗೆಯೇ ಆಗಲಿ ಅಥವಾ ಯಾವ ಜನಾಂಗದ ಬಗ್ಗೆಯೇ ಆಗಲಿ ಅವರ ಸ್ವಭಾವ, ಯೋಗ್ಯತೆ ಅಥವಾ ಸಭ್ಯತೆ ಇಂತಿಷ್ಟೇ ಎಂದು ಮೊಟ್ಟ ಮೊದಲಿಗೆಯೇ ಅವರ ಬೆಲೆಯನ್ನು ಕಟ್ಟಿ ಬಿಟ್ಟು, ಆ ಮೇಲೆ ಆ ಪೂರ್ವಗ್ರಹೀತ ಬೆಲೆಯ ಮೇಲೆ ಅವರ ಸಾಮಾಜಿಕ ಸ್ಥಾನ-ಮಾನ, ಅವಕಾಶ ಮುಂತಾದವುಗಳನ್ನೆಲ್ಲ ಆಧರಿಸುವುದು ಬಹಳ ದೊಡ್ಡ ಅನ್ಯಾಯ. ಬಿಳಿಯರ ಈ ಪೂರ್ವಗ್ರಹದೂಷಿತವಾದ ಬೆಲೆಕಟ್ಟುವಿಕೆಯ ಅಸಂಬದ್ಧತನ ಮತ್ತು ಅಪದ್ಧತನ ಅವರು ಕರಿಯರಾದ ಭಾರತೀಯರ ಬೆಲೆಯನ್ನು ಅದೇ ಮಾದರಿಯಲ್ಲಿ ಕಟ್ಟುವಾಗ ಸ್ಪಷ್ಟವಾಗಿ ವ್ಯಕ್ತವಾಗುವುದು. ಬಿಳಿಯರು ಕರಿ-ಭಾರತೀಯರ ಸಾಂಸ್ಕೃತಿಕ-ಬೆಲೆಯನ್ನು ಹೀಗೆ ಕೇವಲ ಅವರ ಕರಿತನವನ್ನಷ್ಟೇ ಲೆಕ್ಕಕ್ಕೆ ತೆಗೆದುಕೊಂಡು ಕಟ್ಟು ವಾಗ ಕರಿಯ ಭಾರತೀಯರಿಗೆ–ನನ್ನಂಥ ಕರಿಯ ಭಾರತೀಯರಿಗೆ-ಅನಿಸುವುದು ಹೀಗೆ : “ಎಲ, ಈ ಬಿಳಿಮನುಷ್ಯ ನಾನು ಕರಿ ಆದ ಮಾತ್ರಕ್ಕೆ ಆ ನನ್ನ ಕರಿತನವನ್ನಷ್ಟೇ ಗಮನಿಸಿ, ಕರಿಯನಾದ ನನ್ನಲ್ಲಿರುವ ಬೇರೆ ಯಾವುದೇ ಸಭ್ಯತೆ ಮತ್ತು ಸಂಸ್ಕೃತಿಯ ಲಕ್ಷಣಗಳನ್ನು (ಸ್ವಚ್ಛತೆ, ಅಚ್ಚುಕಟ್ಟಾದ ವೇಷ, ನಡೆ-ನುಡಿ, ಇತ್ಯಾದಿ) ಎಳ್ಳಷ್ಟೂ ಗಮನಿಸದೇ ನನ್ನನ್ನು ಬಣ್ಣದಲ್ಲಿಯಷ್ಟೇ ಅಲ್ಲ, ಸಭ್ಯತೆ ಮತ್ತು ಸಂಸ್ಕೃತಿಗಳಲ್ಲಿ ಸಹ ತನಗಿಂತ ಹೀನ ಎಂದು ನಿರ್ಧರಿಸಿಬಿಡುತ್ತಿದ್ದಾನಲ್ಲ ! ಮತ್ತು ತಾನು ಬಿಳಿಯನಾದ ಮಾತ್ರಕ್ಕೆ, ಆ ಒಂದು ಕಾರಣದಿಂದಲೇ, ನನಗಿಂತ ಮೇಲ್ಮಟ್ಟದವ ಎಂದು ಭಾವಿಸುತ್ತಿದ್ದಾನಲ್ಲ ! ಇದರ ಅರ್ಥ ಏನು ? ಇದರ ಕಾರಣ ಏನು ?” ಕರಿಯರ ಬಗೆಗಿನ ಬಿಳಿಯರ ಈ ಧೋರಣೆಯನ್ನು ಸಾಮಾಜಿಕವಾಗಿ ಮತ್ತು ಮನೋವೈಜ್ಞಾನಿಕವಾಗಿ ವಿಶ್ಲೇಷಿಸಿದಾಗ ನನಗೆ ಕಂಡುಬರುವ ಕಾರಣಗಳು ಇವು : ಇದುವರೆಗೆ ಬಿಳಿಯರು-ಅದರಲ್ಲೂ ಅಮೇರಿಕ ಮತ್ತು ಆಫ್ರಿಕಗಳಲ್ಲಿನ ಬಿಳಿಯರು-ಕಂಡ ಕರಿಜನರಲ್ಲಿ (ಇವರಲ್ಲಿ ಹೆಚ್ಚಿನವರು ಸ್ವಾಭಾವಿಕವಾಗಿ ನೀಗ್ರೋಗಳೇ) ಹೆಚ್ಚಿನವರು ಬಿಳಿಯರಿಗಿಂತ ಸಂಸ್ಕೃತಿ, ಸಭ್ಯತೆ, ಜ್ಞಾನ ವಿಜ್ಞಾನ, ಮತ್ತು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸ್ಥಾನಮಾನ, ಇವೆಲ್ಲವುಗಳಲ್ಲಿ ಬಹಳ ಹಿಂದುಳಿದವರು. ಈ ಬಿಳಿಯರಲ್ಲಿ ಹೆಚ್ಚಿನವರು (ನಾನು ಮುಖ್ಯವಾಗಿ ಅಮೇರಿಕನ್ ಬಿಳಿಯರ ಬಗ್ಗೆ ಹೇಳುತ್ತಿದ್ದೇನೆ) ಈ ಜಗತ್ತಿನ ಸುಧಾರಿಸಿದ ಮತ್ತು ಸುಸಂಸ್ಕೃತ ಕರಿಯರಾದಂಥ ಭಾರತೀಯ-ಕರಿಯರನ್ನು ಕಂಡಿಲ್ಲ ಮತ್ತು ಅರಿತಿಲ್ಲ. ಉದಾ : ನಾನಿದ್ದ ಪೆನ್ಸಕೋಲಾ ನಗರದಲ್ಲಂತೂ ಅಲ್ಲಿನ ಮುಕ್ಕಾಲು ಪಾಲು ನಾಗರಿಕರು ತಮ್ಮ ಜೀವಮಾನದಲ್ಲಿ ನೋಡಿದ ಮೊದಲನೆಯ “Indian Indian” ಎಂದರೆ (ಯಾಕೆಂದರೆ ಅವರು “American Indians “ರನ್ನು ಮಾತ್ರ ನೋಡಿದ್ದರು ಮತ್ತು ಕೇವಲ “Indian” ಎಂದು ಯಾರಾದರೂ ಹೇಳಿದರೆ ಅವರು ಅದನ್ನು “American Indian” ಎಂಬ ತಮ್ಮ ಸಾಮಾನ್ಯ ಅರ್ಥದಲ್ಲಿಯೇ ಗ್ರಹಿಸುತ್ತಿದ್ದರು) ನಾನೇ ಆಗಿದ್ದೆ. ಹೀಗಾಗಿ ನನ್ನನ್ನು ಅವರು ಮೊದಲನೇ ಬಾರಿ ನೋಡಿದಾಗ, “ಇದಾವ ವಿಚಿತ್ರವಾದ ಪ್ರಾಣಿ? ಇತ್ತ ನಮ್ಮ ಹಾಗೆ ಬಿಳಿಯೂ ಇಲ್ಲ, ಆತ್ತ ನಮ್ಮ ನೀಗ್ರೋಗಳ ಹಾಗೆ ತೀರ ಕಪ್ಪೂ ಇಲ್ಲ. ಆಕೃತಿಯೂ, ನಮಗಿಂತ ನಮ್ಮ ನೀಗ್ರೋಗಳಿಗಿಂತ ತೀರ ಚಿಕ್ಕದು. ಇದೆಲ್ಲಿಯ ಕುದ್ರ ಜಂತು ?” ಎಂಬಂತೆ ಕಂಡಿದ್ದರು. ಇವತ್ತಿಗೂ ಕೂಡ ಹೆಚ್ಚಿನ ಬಿಳಿಯರು ಹೆಚ್ಚಿನ ಭಾರತೀಯರನ್ನು (ಏನೋ ಕೆಲವರು ಅತೀ ಬೆಳ್ಳಗಿರುವ ಭಾರತೀಯರು-ಅವರು ಎಷ್ಟು ಬೆಳ್ಳಗಿರಬೇಕೆಂದರೆ ಅವರು ನಮ್ಮ ದೇಶದಲ್ಲಿ “ಯುರೋಪಿಯನ್” ಎಂದು ಅನ್ವರ್ಥಕವಾಗಿ ಕರೆಯಿಸಿಕೊಳ್ಳುತ್ತಿರಬೇಕು- ಹೀಗೆ ಗಣಿಸಲ್ಪಡಲಿಕ್ಕಿಲ್ಲ) ಹೀಗೆಯೇ ನೋಡುತ್ತಾರೆ. ಏನೋ ಹಲ-ಕೆಲವು ಸಲ ಭಾರತಕ್ಕೆ ಭೇಟಿಕೊಟ್ಟ ಅಥವಾ ಭಾರತದ ಬಗ್ಗೆ ತಕ್ಕ ಮಟ್ಟಿಗೆ ಓದಿಕೊಂಡ ಸಭ್ಯ ಮತ್ತು ಸುಸಂಸ್ಕೃತ ಬಿಳಿಯರು ಮಾತ್ರ ಭಾರತೀಯರನ್ನು-ಅವರ ಕರಿತನವನ್ನು ಕಡೆಗಣಿಸಿ ಗೌರವದಿಂದ ಕಾಣಬಹುದು ಅಷ್ಟೇ. ಇದು ಸತ್ಯ. ಈ ಸತ್ಯ ಕೇವಲ ಅಮೇರಿಕೆಯು ದಕ್ಷಿಣರಾಜ್ಯವಾದ ಫ್ಲಾರಿಡಾದ ಪೆನ್ಸಿಕೋಲಾದಲ್ಲಿ ಕಾಣಸಿಗುವ ಮತ್ತು ಅನುಭವಿಸಸಿಗುವ ಸತ್ಯ ಮಾತ್ರವಲ್ಲ. ಇದು ಈ
ಪ್ರಪಂಚದ ಅತ್ಯಂತ ಅಂತರಾಷ್ಟ್ರೀಯ ಪಟ್ಟಣಗಳಲ್ಲೊಂದಾದ ಮತ್ತು ಒಂದು ದೃಷ್ಟಿಯಿಂದ ಅಂತರಾಷ್ಟ್ರೀಯ ರಾಜಧಾನಿ (ಯು. ಎನ್. ಓ. ದ ಕೇಂದ್ರ ಕಚೇರಿ ಅಲ್ಲಿ ಇರುವುದರಿಂದ) ಎಂದು ಅನಿಸುವ ನ್ಯೂಯಾರ್ಕ್ ನಗರದಲ್ಲಿ ಕೂಡ ನಮಗೆ ಕಾಣಸಿಗುವ ಕಠೋರ ಸತ್ಯ. ಈ ಸತ್ಯವನ್ನು ನಾನು ಮತ್ತು ನನ್ನ ಕೆಲ ಭಾರತೀಯ ಮಿತ್ರರು ಅಲ್ಲಿ (ನ್ಯೂಯಾರ್ಕಿನಲ್ಲಿ ಕಂಡಿದ್ದೇವೆ ಮತ್ತು ಸಾಕಷ್ಟು ಅನುಭವಿಸಿದ್ದೇವೆ. ಬೇಕಾದರೆ ನೀವು ಸ್ವತಃ ಈ ಸತ್ಯವನ್ನು ಪರೀಕ್ಷಿಸಬಹುದು. ಬಹುಶಃ, ಬಿಳಿಯರ ‘ಸುಧಾರಿಸಿದ’ ದೇಶಗಳಿಗೆ ಭೆಟ್ಟಿ ಕೊಡುವ ಹೆಚ್ಚಿನ ಭಾರತೀಯ ಬಾಂಧವರಿಗೆ ಈ ಸತ್ಯವನ್ನು ಸರಿಯಾಗಿ ಗಮನಿಸುವಷ್ಟು ಅಥವಾ ಗಮನಿಸಿದ್ದರೂ ಗಮನಿಸಿದ್ದೇವೆಂದು ಒಪ್ಪಿಕೊಳ್ಳುವಷ್ಟು ಪುರಸತ್ತು ಸಿಕ್ಕುತ್ತಿಲ್ಲವೇನೋ ! ಒಂದು ವೇಳೆ ಪುರಸತ್ತು ಸಿಕ್ಕರೂ, ತಮ್ಮ ಫಾರಿನ್ ಟ್ರಿಪ್ಪು-ಯಾವ ತಮ್ಮ ಫಾರಿನ್ ಟ್ರಿಪ್ಪು ತಮಗೆ “ಅಷ್ಟೊಂದು ಕಷ್ಟಸಾಧ್ಯವಾಗಿ ಲಭಿಸಿತ್ತೋ, ಯಾವುದಕ್ಕಾಗಿ ತಾವು ಈ ಮೊದಲು ಅಷ್ಟೊಂದಾಗಿ ಹಂಬಲಿಸಿದ್ದರೋ ಮತ್ತು ಯಾವುದು ತಮಗೆ ಲಭಿಸಿದ್ದಕ್ಕಾಗಿ ಅದು ಲಭಿಸದ ತಮ್ಮ ಅನೇಕಾನೇಕ ಶತ್ರುಗಳು, ಮಿತ್ರರು ಮತ್ತು ‘ಖಾಲೀ ಸಹೋದ್ಯೋಗಿ’ (‘Just Colleagues’ ಎಂಬ ಅರ್ಥದಲ್ಲಿ ಮಾತ್ರ) ಗಳು ಅಷ್ಟೊಂದಾಗಿ ಅಸೂಯೆ ಪಟ್ಟಿದ್ದರೋ, ಆ ತಮ್ಮ ಫಾರಿನ್ ಟ್ರಿಪ್ಪು-ಕೊನೆಗೆ ತಮ್ಮನ್ನು ಇಂಥ ಸತ್ಯದಲ್ಲಿ ಕೆಡವಿತು ಮತ್ತು ಮುಳುಗಿಸಿತು ಎಂಬುದನ್ನು ಅವರು ಹೇಗೆ ತಾನೇ ಒಪ್ಪಿಕೊಂಡಾರು? ಆದರೆ ನಾನು ಈ ಬಿಳಿಯ ಅಮೇರಿಕೆಯಲ್ಲಿ ಸಾಕಷ್ಟು ಗೌರವಾದರಗಳನ್ನು (ನಿಜವಾದ ಗೌರವಾದರಗಳು) ಸಹ ಪಡೆದಿದ್ದ ಕರಿಯನಾದ ನಾನು-ಮಾತ್ರ ಇಲ್ಲಿಯ ಈ ಸಾಮಾನ್ಯ ಸಾಮಾಜಿಕ ಸತ್ಯವನ್ನು ಒಪ್ಪಿಕೊಳ್ಳದೇ ಇರಲಾರೆ. ಈ ಅಂತಸ್ಸಾಮಾಜಿಕ ಹಾಗೂ ಅಂತರ್ಜನಾಂಗಿಕ ಸತ್ಯದ ಅನಿರೀಕ್ಷಿತ (ಪೂರ್ತಿಯಾಗಿ ಅನಿರೀಕ್ಷಿತವಾಗಿರದಿದ್ದರೂ ನಾನು ಅದನ್ನು ಸಾಕ್ಷಾತ್ತಾಗಿ ಕಂಡ ಪ್ರಮಾಣದಲ್ಲಿ ಮಾತ್ರ ಅದು ನನಗೆ ಖಂಡಿತವಾಗಿಯೂ ಅನಿರೀಕ್ಷಿತವಾಗಿತ್ತು) ಸಾಕ್ಷಾತ್ಕಾರದಿಂದ ನಾನು ನನ್ನ ಜೀವಮಾನದಲ್ಲಿಯೇ ಅನುಭವಿಸದಂಥ ತೀವ್ರವಾದ ಮತ್ತು ಆಳವಾದ ನೋವನ್ನು-ಯಾತನೆ ಯನ್ನು-ಆರೆಂಟು ತಿಂಗಳ ಕಾಲ ಒಳಗೊಳಗೇ ಅನುಭವಿಸಿದ್ದೇನೆ. ಆ ನೋವನ್ನು, ಆ ಗಾಯವನ್ನು, ಆ ಅಪಮಾನವನ್ನು ಮರೆಯುವುದು ಸಾಧ್ಯವಿಲ್ಲ-ಯಾವ ಆತ್ಮ ಗೌರವವುಳ್ಳ ಭಾರತೀಯನಿಗೂ ಇಂಥ ಅಪಮಾನವನ್ನು ಮರೆಯುವುದು ಸಾಧ್ಯವಾಗಲಿಕ್ಕಿಲ್ಲ ಮತ್ತು ಸಾಧ್ಯವಾಗಬಾರದು. ಆದರೂ, ಈ ಪ್ರಪಂಚದ ಬೇರೆ-ಬೇರೆ ಜನಾಂಗಗಳ ಮತ್ತು ಬೇರೆ-ಬೇರೆ ವರ್ಣಗಳ ಜನರು ಪರಸ್ಪರ ದ್ವೇಷಭಾವನೆಯನ್ನು ಉಳಿಸಿಕೊಳ್ಳುವುದರಲ್ಲಿ ಅಥವಾ ಬೆಳೆಸಿಕೊಳ್ಳುವುದರಲ್ಲಿ ಅರ್ಥವಿಲ್ಲ ಅಥವಾ ಅರ್ಥವಿದ್ದರೂ ಅದು ಯೋಗ್ಯವಲ್ಲ. ಮಾನವ ಸಂಸ್ಕೃತಿಗೆ–ಅದರಲ್ಲಿ ಭಾರತೀಯ ಸಂಸ್ಕೃತಿಗೆ -ತಕ್ಕುದಲ್ಲ. ಆದ್ದರಿಂದ ಈ ಪ್ರಪಂಚದ ಕರಿಜನರೆಲ್ಲ ಈ ಪ್ರಪಂಚದ ಬಿಳಿಜನರಿಗೆ ಹಿಂದೆ ಇಂಥದೇ ಒಂದು ಸಂದರ್ಭದಲ್ಲಿ ಯೇಸುವು ಹೇಳಿದಂತೆ, “Lord, Forgive them, for they know not what they do” ಎಂದು ಹೇಳುವುದು ತಕ್ಕುದೇ ವಿನಾ ಮಾರ್ಕ್ಸನು “Workers of the world, Unite” ಎಂದು ಘೋಷಿಸಿದಂತೆ “The Blacks of the world, Unite” ಎಂದು ಘೋಷಿಸುವುದು-ಹಾಗೆ. ಘೋಷಿಸಬೇಕೆಂದು ನಮಗೆ ಎಷ್ಟೇ ಅನಿಸಿದರೂ-ತಕ್ಕುದಲ್ಲ.
ಹೀಗೆ ಕರಿಯರಾದ ನಮಗೆ ನಮ್ಮ ಬಗೆಗಿನ ಬಿಳಿಯರ ಈ ಅಮಾನುಷ ಧೋರಣೆಯಿಂದಾಗುವ ಅಪಮಾನ-ಅನ್ಯಾಯಗಳನ್ನು ಕಡೆಗಣಿಸಿ ಅಥವಾ ಕ್ಷಮಿಸಿ ವಿಚಾರ ಮಾಡಿದಾಗ, ಬಿಳಿಯರ ಈ ವರ್ತನೆಗೆ ಈ ಕೆಳಗಿನ ಶಾರೀರ-ವೈಜ್ಞಾನಿಕ ಮತ್ತು ಮನೋವೈಜ್ಞಾನಿಕ ಕಾರಣಗಳು ನನಗೆ ಹೊಳೆಯುವವು : ಶಾರೀರಿಕವಾಗಿ ಭಾರತೀಯರು (ಭಾರತೀಯ ಮಾನದಿಂದ ಗೌರವರ್ಣದವರಾದ ಮತ್ತು ಎತ್ತರದವರಾದ ಭಾರತೀಯರನ್ನು ಹಿಡಿದು) ಬಿಳಿಯರಿಗೆ ಅವರಿಗಿಂತ ಹೀನರಾಗಿ ಕಂಡರೆ (ಅವರಿಗೆ ನಾವು ಸಾಮಾನ್ಯವಾಗಿ ಹಾಗೆಯೇ ಕಾಣಿಸುತ್ತೇವೆ ಎಂಬುದನ್ನು ನಾನು ಇಲ್ಲಿ ಅವರ ‘ಪ್ರತಿಕ್ರಿಯೆ’ಯ ಕನ್ನಡಿಯಲ್ಲಿ ಕಂಡಿದ್ದೇನೆ) ಅದರಲ್ಲಿ ಅಂಥ ಆಶ್ಚರ್ಯವೇನಿಲ್ಲ. ಯಾಕೆಂದರೆ, ಈ ಬಿಳಿಯರ ಬಿಳಿಬಣ್ಣವು ನಮ್ಮ ಗೌರವರ್ಣಿಯರ ಗೌರವರ್ಣಕ್ಕಿಂತ ಎಷ್ಟೋ ಹೆಚ್ಚು ಬಿಳಿ, ಅದ್ದರಿಂದ (ಬಿಳಿಯರ ದೃಷ್ಟಿಯಲ್ಲಿ) ಎಷ್ಟೋ ಹೆಚ್ಚು ಗೌರವಾರ್ಹವಾಗಿದೆ. ಇನ್ನು ಎತ್ತರವೋ ? ಬಿಳಿ ಜನರ (ಯೂರೋಪಿಯನ್ನರ ಮತ್ತು ಅದರಿಂದಾಗಿ ಅವರ ವಂಶಜರಾದ ಅಮೇರಿಕನ್ನರ) ಸರಾಸರಿ ಎತ್ತರ ಕರಿಜನರ -ಅದರಲ್ಲೂ ಭಾರತೀಯರ-ಸರಾಸರಿ ಎತ್ವರಕ್ಕಿಂತ ಅನೇಕ ಇಂಚುಗಳಿಂದ ಎತ್ತರವಾಗಿದೆ. ಅಮೇರಿಕನ್ನರಂತೂ ಇನ್ನೂ ಎತ್ತರದವರು. ನನ್ನ ಒಬ್ಬ ಅಮೇರಿಕನ್ ಬಿಳಿ ಗೆಳೆಯನ ಪ್ರಕಾರ ಬಿಳಿ ಅಮೇರಿಕನ್ನರ ಸರಾಸರಿ ಎತ್ತರ ೫’-೮ ಅಥವಾ ೫-೯ ಆಗಿರಬಹುದು. ಅವನು ನನ್ನ ಎತ್ತರವನ್ನು, ಅಲ್ಲಲ್ಲ, ಕುಳ್ಳತನವನ್ನು ಗಮನಿಸಿ, “ಭಾರತೀಯರ ಸಾಮಾನ್ಯ ಎತ್ತರ ನಿನ್ನಷ್ಟೇ ಇರುತ್ತದೋ ?” ಎಂದು ಕೇಳಿದ. “ಇಲ್ಲ ಮಹರಾಯಾ, ನಾನು ನಿಮ್ಮ ದೇಶದಲ್ಲಷ್ಟೇ ಅಲ್ಲ, ನಮ್ಮ ದೇಶದಲ್ಲಿ ಕೂಡ ಗಿಡ್ಡನೆಂದೇ ಪ್ರಸಿದ್ಧನಾಗಿದ್ದೇನೆ” ಎಂದು ಹೇಳಿದೆ. ಅವನಿಗೆ ನನ್ನ ಎತ್ತರದಿಂದ ಅಷ್ಟೇನು ಸಮಾಧಾನವಾದಂತೆ ಕಾಣಲಿಲ್ಲ. ಇನ್ನೊಂದು ಸಂಗತಿಯೆಂದರೆ, ಅಮೇರಿಕೆಯಲ್ಲಿನ ನೀಗ್ರೋಗಳ ಸರಾಸರಿ ಎತ್ತರ ಅಲ್ಲಿನ ಬಿಳಿಯರ ಸರಾಸರಿ ಎತ್ತರಕ್ಕಿಂತ ಹೆಚ್ಚು (ಕನಿಷ್ಠ ಪಕ್ಷ ಅವರ ಎತ್ತರದಷ್ಟೇ) ಆಗಿರುವುದು. ನನಗೆ ಅದನ್ನು ಕಂಡು ನಿಜವಾಗಿಯೂ ಆನಂದವಾಯ್ತು (ಅಲ್ಲಿನ ಎತ್ತರದ ನೀಗ್ರೋಗಳು ಗಿಡ್ಡ-ಕರಿಯನಾದ ನನ್ನನ್ನು ನಾನು ಅವರಿಗಿಂತ ಎಷ್ಟೋ ಕಡಿಮೆ ಕಪ್ಪು ಮತ್ತು ಎಷ್ಟೋ ಕಡಿಮೆ ಎತ್ತರದವನಾದುದರಿಂದ, ತಮ್ಮ ಸರಿಸಮಾನನೆದು ಕಾಣದಿದ್ದರೂ) ಅವರ ಎತ್ತರವನ್ನು ನೋಡಿ ನಾನಂದುಕೊಂಡೆ : “ಎಲಾ, ಈ ಎತ್ತರದ ಬಿಳಿಯರ ಸೊಕ್ಕು ಈ ಎತ್ತರದ ಕರಿಯರಿಂದ ಎತ್ತರದ ಮಟ್ಟಿಗಾದರೂ ಮುರಿಯಿತಲ್ಲ ಅಷ್ಟೇ ಸಾಕು. ಸದ್ಯ” ಈ ಪ್ರಪಂಚದ ಜನರ ಮತ್ತು ಜನಾಂಗಗಳ ‘ಬಿಳಿ-ಕರಿ’ ಮತ್ತು ‘ಎತ್ತರ-ಗಿಡ್ಡ” ಇತ್ಯಾದಿಗಳಲ್ಲಿನ ಸೆಣಸಾಟಗಳಿಗೆ ನನ್ನ ವೈಯಕ್ತಿಕ ಪ್ರತಿಕ್ರಿಯೆ ಏನೇ ಇರಲಿ, ಇಲ್ಲಿ ನನಗೆ ಹೇಳಬೇಕಾಗಿರುವುದು ಮುಖ್ಯವಾಗಿ ಇಷ್ಟು : ನನ್ನ ಮತ್ತು ಬಿಳಿಯರ ನಡುವೆ ಮೂಲಭೂತವಾದ ಶಾರೀರಿಕ ವ್ಯತ್ಯಾಸಗಳಿವೆ. ಇದರ ಮನವರಿಕೆ ನಿಮಗೆ ಸರಿಯಾಗಿ ಆಗಬೇಕಾದರೆ ನೀವು ಬಿಳಿಯರ ದೇಶವೊಂದಕ್ಕೆ ಹೋಗಿ ಬಹುಸಂಖ್ಯಾತ ಬಿಳಿಯರ ಸಮಾಜದಲ್ಲಿ ವ್ಯವಹರಿಸಿಯೇ ಪರೀಕ್ಷಿಸಬೇಕು. ಕೇವಲ ನಮ್ಮ ದೇಶದಲ್ಲಿ ಬಹುಸಂಖ್ಯಾತ ಕರಿ ಮತ್ತು ಗಿಡ್ಡ ಜನರ ಮಧ್ಯೆ ಅಲ್ಲೊಬ್ಬ-ಇಲ್ಲೊಬ್ಬ ಎತ್ತರದ ಬಿಳಿಯನನ್ನು ಆಗೊಮ್ಮೆ-ಈಗೊಮ್ಮೆ ಕಂಡರೆ, ಈ ಮೂಲಭೂತ ಶಾರೀರಿಕ (ಮತ್ತು ಆದ್ದರಿಂದ ಮಾನಸಿಕ ವ್ಯತ್ಯಾಸದ ಕಲ್ಪನೆ ನನಗೆ ಸರಿಯಾಗಿ ಆಗುವದಿಲ್ಲ. ನನಗೂ ಅಮೇರಿಕೆಗೆ ಹೋಗಿ ಅಲ್ಲಿ ಬಹುಸಂಖ್ಯಾತ ಬಿಳಿಜನರ ನಡುವೆ ವಾಸಿಸುವ ಮತ್ತು ವ್ಯವಹರಿಸುವ ಮುನ್ನ ಈ ವ್ಯತ್ಯಾಸದ ಸರಿಯಾದ ಕಲ್ಪನೆ ಇರಲಿಲ್ಲ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ನಮ್ಮ ದೇಶದಲ್ಲಿ ಮತ್ತು ನಮ್ಮ ಸಮಾಜದಲ್ಲಿ ಬಿಳಿಯನೊಬ್ಬನು, ಶಾರೀರಿಕವಾಗಿ, “Black Sheep’ ಎಂದು (ಅವನು ಬಿಳಿಯನಾಗಿದ್ದರೂ, ಅಲ್ಲಲ್ಲ ಆಗಿದ್ದರಿಂದಲೇ) ಅನಿಸಿದರೆ, ಬಿಳಿಜನರ ದೇಶದಲ್ಲಿ, ಅವರ ಸಮಾಜದಲ್ಲಿ ನಾವು ಭಾರತೀಯರು, ಕರಿಯರು, ಕರಿಯರಾದುದರಿಂದ ಮತ್ತು ಅವರಿಗಿಂತ ಕುಳ್ಳರಾಗಿರುವುದರಿಂದ, ‘black sheep’ ಎಂದು ಅವರಿಗೆ ಅನಿಸುತ್ತೇವೆ-ಅವರಲ್ಲಿನ ನಿಗ್ರೋಗಳಿಗಿಂತ ಹೆಚ್ಚಿನ (ಅವರಿಗಿಂತ ನಾವು ಕಡಿಮೆ ಕಪ್ಪಾಗಿದ್ದುದರಿಂದ) ‘black sheep’ ಎಂದು ಅನಿಸುತ್ತೇವೆ. ಇದನ್ನೇ ನಾನು “ಸತ್ಯದ ಸಾಕ್ಷಾತ್ಕಾರ” ಎಂದು ಹಿಂದೆ ಹೇಳಿದುದು. ಆದರೆ ಈ ಭೇದದೃಷ್ಟಿ ಮತ್ತು ಭೇದ-ಭಾವಗಳು ಮೂಲತಃ, ಸ್ವಾಭಾವಿಕವಾದ ಅಥವಾ ಪ್ರಾಕೃತಿಕವಾದ, ಶಾರೀರಿಕ ವ್ಯತ್ಯಾಸಗಳಿಂದಾಗಿ ಹುಟ್ಟಿಕೊಂಡಿದ್ದರೂ, ಅವು ಇಷ್ಟೊಂದು ದೀರ್ಘ ಕಾಲದವರೆಗೆ, ಇಷ್ಟೊಂದು ತೀವ್ರತೆಯಲ್ಲಿ ಬಿಳಿ ಸಮಾಜ (ಈ ಪ್ರಪಂಚದ ಅತಿ ಸಭ್ಯ ಮತ್ತು ಅತಿ ಸುಸಂಸ್ಕೃತ ಜನಾಂಗ ಎಂದು ಕರೆಯಿಸಿಕೊಳ್ಳುವ ಅಥವಾ ಕರೆದುಕೊಳ್ಳುವ ಬಿಳಿ ಸಮಾಜ) ದಲ್ಲಿ ಉಳಿದುಕೊಂಡದ್ದು. ಅಷ್ಟೆ ಅಲ್ಲ, ಬೆಳೆದುಕೊಂಡು ಬಂದದ್ದು ಮಾತ್ರ ಈ ಪ್ರಪಂಚದ ಬಿಳಿ ಮತ್ತು ಕರಿಜನರ ನಡುವಣ ಆರ್ಥಿಕ, ವೈಜ್ಞಾ ನಿಕ, ತಾಂತ್ರಿಕ ಮತ್ತು ರಾಜತಾಂತ್ರಿಕ ಅಸಮಾನತೆ ಮತ್ತು ಅಂತರಗಳಿಂದಾಗಿಯೇ ಎಂದು ಹೇಳಬಹುದು. ಈ ಎಲ್ಲ ಅಸಮಾನತೆಗಳು, ವ್ಯತ್ಯಾಸಗಳು ಮತ್ತು ಅಂತರಗಳು ಒಂದಕ್ಕೊಂದು ಪೂರಕವಾಗಿ ಬೆಳೆದುಕೊಂಡು ಪ್ರಪಂಚದ ಬಿಳಿಜನರ ಮನಸ್ಸಿನಲ್ಲಿ ಆಳವಾಗಿ ತಮ್ಮ ಪ್ರತಿಬಿಂಬವನ್ನು ಬೇರೂರಿಸಿವೆ. ಈ ವಿಷ-ಬೇರುಗಳ ನಿರ್ಮೂಲನವನ್ನು ಕೇವಲ ಒಂದೆರಡು ತಿಂಗಳುಗಳಲ್ಲಿ ಅಥವಾ ವರುಷಗಳಲ್ಲಿ, ಒಬ್ಬಿಬ್ಬ ಕರಿಯರು ಅಥವಾ ಭಾರತೀಯರು ಮಾಡುವುದು ಸಾಧ್ಯವಿಲ್ಲ. ಅದಕ್ಕಾಗಿ ಪ್ರಪಂಚದ ಬಿಳಿ ಮತ್ತು ಕರಿಜನರ ಸರ್ಕಾರಗಳು ಮುಖ್ಯವಾಗಿ ಅವುಗಳ ಪ್ರಸಾರಾಂಗಗಳು ಮತ್ತು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಂಘ-ಸಂಸ್ಥೆಗಳು ಅನೇಕ ವರ್ಷಗಳ ಕಾಲ ದುಡಿಯಬೇಕಾಗುವುದು. ಎಲ್ಲಕ್ಕೂ ಮುಖ್ಯವೆಂದರೆ, ಪ್ರಪಂಚದ ಬಿಳಿ ಮತ್ತು ಕರಿ ಜನರ ನಡುವಿನ ಆರ್ಥಿಕ, ವೈಜ್ಞಾನಿಕ, ಸೈನಿಕ ಹಾಗೂ ರಾಜತಾಂತ್ರಿಕ ಅಸಮಾನತೆಗಳು ಹೋಗಬೇಕು. ಕನಿಷ್ಠಪಕ್ಷ ಕಡಿಮೆಯಾಗಬೇಕು. ಹಾಗೆ ಆದಾಗಲೇ ಈ ಆಧುನಿಕ ಜಗತ್ತಿನ ವರ್ಣಸಮಸ್ಯೆಗೆ ಸಮರ್ಪಕವಾದ ಅಂತಿಮ ಪರಿಹಾರ ದೊರಕುವುದು ಸಾಧ್ಯ.
ಆರ್ಸನ್ ಪೊಹ್ರಿಬ್ನಿ
ಸೊವಿಯೆತ್ ‘ಗುಪ್ತ’ ಕಲಾವಿದರ ಮನಸ್ಸಿನ ಪೋಲಿಸ್
ಈ ಕಲಾವಿದರೆಲ್ಲರ ಜೀವನದ ಕೇಂದ್ರ : ಮನಸ್ಸಿನ ಪೋಲಿಸ್, ಬರಿಯ ಬಡತನಕ್ಕಿಂತ ಇದು ಉಗ್ರ ದಬ್ಬಾಳಿಕೆ. ಈ ನೆರಳು ಅವರೊಡನೆ ಬೀದಿಗಳಲ್ಲಿ ಸುತ್ತುತ್ತಿತ್ತು. ಊಟದ ಮೇಜಿನಲ್ಲಿ ಸಂಗಾತಿಯಾಗಿ ಕೊಡುತ್ತಿತ್ತು. ಟೆಲಿಫೋನ್ ಸಂಭಾಷಣೆಯನ್ನು ಕದ್ದು ಕೇಳುತ್ತಿತ್ತು. ಚಿತ್ರ ಬರೆಯುವಾಗ, ಶಿಲ್ಪ ರೂಪಿಸುವಾಗ ಕದದ ಹಿಂದೆ ನಿಂತಿರುತ್ತಿತ್ತು. ಸ್ಟಾಲಿನ್‌ನ ಭಯೋತ್ಪಾದಕ ದಿನಗಳಷ್ಟು ಬಹಿರಂಗ ಭೀಕರವಾಗಿಲ್ಲವೆಂಬುದು ಅಲ್ಪತೃಪ್ತಿಕೊಡುವಂಥದು. ಎಲ್ಲೆಲ್ಲೂ ಹಾಜರಿಯ ಈ ‘ಮನಸ್ಸಿನ ಪೋಲಿಸ್’ ಎದುರಿಸಲು ಮನಸ್ಸು ಗಟ್ಟಿ ಮಾಡಿದರೂ ಮತ್ತೆ ಅಳುಕುವಂತೆ ಮಾಡುತ್ತಿತ್ತು. ಅನೇಕರು ತಲೆಬಾಗುತ್ತಿದ್ದರು. ಹಿಂದೆ ಮುಂದೆ ನೋಡಿ ಮಾತನಾಡುತ್ತಿದ್ದರು. ಸದ್ದಿಲ್ಲದಂತಿರುತ್ತಿದ್ದರು. ಮಾಮೂಲಿ ರಷ್ಯ ಪ್ರಜೆಯಂತೆ ಶಿಲಾಮುಖದ ಹಿಂದೆ ಭಾವನೆಗಳನ್ನೆಲ್ಲ ಅದುಮಿಡುತ್ತಿದ್ದರು. ಸದಾ ‘ಸೆನ್ಸಾರ್‌ಗೆ ಹೆದರಿದ ಸಂಭಾಷಣೆಯಲ್ಲಿ ಓರೆಯಾದ ಸಾಂಕೇತಿಕ ಪ್ರಸ್ತಾಪಗಳೇ ತುಂಬಿದ್ದುವು. ಕೆಲವರು ತಮಗೆ ಅನಿಸಿದ್ದನೆಲ್ಲ ಪೂರ್ತಿ ಮುಚ್ಚಿಡುತ್ತಿದ್ದರು. ಎಂದರೆ ಪೋಲೀಸಿನವನನ್ನು ಮನೆಗೇ ಒಯ್ಯುತಿದ್ದರು. ಈ ಅಧಿಕಾರದ ಎದುರು ಶರಣು, ಚಿತ್ರಹಿಂಸೆಯ ಅಂತಸ್ಸಾಕ್ಷಿ, ಅಸ್ಪಷ್ಟ ಅಪರಾಧ ಮನೋಭಾವ, ಪೋಲಿಸ್ ಶಕ್ತಿಯ ಬಗ್ಗೆ ಅನಗತ್ಯವಾದ, ಮಿತಿಮೀರಿದ ಭಯ-ಇವು ಶತಮಾನಗಳ ಹಿಂದಿನ ಸಂಪ್ರದಾಯಕ್ಕೆ ಅನುಸಾರವಾಗಿತ್ತು. ನಿಜವಾಗಿ ದುರಂತವೆಂದರೆ ಇಂಥವರು ಭೀತರಾಗಿ ವ್ಯವಹಾರ ನೈಪುಣ್ಯದಿಂದ ನಿಷ್ಠೆ ಪ್ರದರ್ಶಿಸಿ, ಅಧಿಕೃತ ದಮನ ವ್ಯವಸ್ಥೆ ಎಷ್ಟು ಪರಿಣಾಮಕಾರಿ ಎಂಬುದಕ್ಕೆ ನಿದರ್ಶನವಾಗುತ್ತಿದ್ದಾರೆ.
.
ಒಂದು ಕವನ
ಚಂದ್ರಕಾಂತ ಕುಸನೂರ
ಒಂದು ಕವನ |
ಯಾರಿಗೆ ಬೇಕಾಗಿತ್ತು ಈ ಪ್ರಪಂಚ, ಆ ಸೂರ್ಯ, ಈ ಚಂದ್ರ
ಪಿಂಡ, ಅಂಡ, ಬ್ರಹ್ಮಾಂಡ ಸುಡಗಾಡ
ಸಿದ್ದನ ಮಠ.
ಸುಮ್ಮನೆ ಮಲಗಿದ್ದೆ ಕನಸುಕಾಣುತ್ತ ನಾ-ಆದರೆ
ಅವರ ಚಟದಿಂದ, ಹಟದಿಂದ ಬರಬೇಕಾಯ್ತು
ಈ ಮಾರ‍್ಹಾದಿ ಮಣ್ಣಿನ ಮೇಲೆ ನೆರೆದಿದ್ದ ಸಂತೆಯ-
ನಡುವೆ
ಇರಲೆಂದು, ಸುಮ್ಮನೆ ಸುತ್ತಾಡಿ, ನೋಡಿ
ಮಜಾಮಾಡಿ, ಕಡಲೆಪುರಿ ತಿಂದು ಹೋಗಬೇಕೆಂದರೆ
ಉಪ್ಪುಮಾರುವನಿಂದ ಚಿನ್ನ ಮಾರುವನ ತನಕ
ಎಲ್ಲರೂ ‘ನೆಂಟರೇ’ ಎಂದು ಗೊತ್ತಾದ ಮೇಲಂತೂ
“ಥುತ್ ಇದರ ಮನೆ ಹಾಳಾಗಾ’ ಎಂದು ಹಿಂದೆ ಸರೆದು
ಬಾಯಿಗೆ ಬಂದಂತೆ ಬೊಗಳಿ, ಸಾಧ್ಯವಾದಷ್ಟು
ಶಬ್ದ ಕೊಟ್ಟಷ್ಟು, ನನ್ನ ಬುದ್ಧಿಗೆ ಹೊಳೆದಷ್ಟು “ಹಲಕಟ್ಟು’ ಬೈದು ಸಿಟ್ಟು ಕಾರಿಕೊಂಡರೂ-
“ಪಾಪ ! ಹುಡುಗ ಇನ್ನೂ, ಬುದ್ದಿ ಬಂದಿಲ್ಲ, ತಲೆಯಮೇಲಿನ
ಮಾಸ ಹಾರಿಲ್ಲೆಂ’ದು ಹೇಳಿ ಕ್ಷಮಿಸಿ ಬಿಡಬೇಕೆ ?
ಇವರ ಸಹನಶೀಲತೆಯ ಮೇಲೆ ಒಂದಿಷ್ಟು ಬೆಂಕಿಹಾಕಾ !
ಇನ್ನು- ಅಪ್ಪ ಗಪ್ಪಿದ್ದೇ ಮಾಡಿದ ಕುತಂತ್ರದಿಂದ ಬಂದ
ಪಾಪ, ನಾನು ತಲೆಯ ಮೇಲೆ ಹೊತ್ತುಕೊಂಡು
ಸಂತೆಯಲ್ಲಿ ಶಾಜೋಗತನದಿಂದ ಮಾರಿ ಹಾಯಾಗಿ
ಹೋರಿಯಂತೆ ಮೆರೆಯಬೇಕೆಂದು ಹೊರಟಾಗ
ನನ್ನಂತೆಯೇ ಏಸೋ ಮಂದಿ, ಸಂದಿಗೊಂದಿಗಳಲ್ಲಿ
ಇದೇ ಕಾಯಕ ಮಾಡುತ್ತಿರುವುದನ್ನು ನೋಡಿ-
ಬೇಸತ್ತು, ಬೆಂಡಾಗಿ ಬೇಡಪ್ಪ ಎಂದು
ಬೇವುಗಿಡದಡಿಯಲ್ಲಿ ಮಾ
ಲಿಳಿಸಿ ಕುಳಿತಾಗ
ಸೊಕ್ಕಿದ ಬಿಸಿಲಿನ ಬಲಿತ ಕೋಡುಗಳ ಮೇಲೇ-
ಕುಳಿತು
ಬರಬೇಕೆ ನಿನ್ನ ಸೆರಗಿನ ಗಾಳಿ
ಆಗ ಕಾರಂಜೆ ಮೇಲೆ ಕೈಯಿಟ್ಟು ಹ…ನಿ
ಹನಿ
ಹನಿ ಬಿಚ್ಚಿ ತೋಯಿಸಿಕೊಂಡಂತೆ ತೊಯ್ಯಬೇಕೆ !
ಮನಸ್ಸು- ನಿನ್ನ ನೆನಪಿನ ನೀರಿನಿಂದ ಛಂದ
ಮತ್ತೆ ನಿನ್ನ ಸೀರಿ ಗಂಟಿಗೆ ನನ್ನ ದೃಷ್ಟಿ
ಅಂಟಿಕೊಂಡಾಗಂತೂ
“ಭಡಭಡಾ’ ಮುಂಬರುವ ಸಾವಿರ ವರುಷಗಳ
ನನ್ನ ಮನೆ ಬಳ್ಳಿಯ ಬೇರು ಆ ದಿಕ್ಕು ಈ ದಿಕ್ಕೆಂದು
ಹತ್ತು ಕಡೆಯಿಂದ ಬಂದು ನನ್ನ ಮೈ ಸುತ್ತ-
ಸುತ್ತಬೇಕೆ !
ಆಗ, ಅಯ್ಯೋ ಎಂದು ಗೋಳಾಡಿ
ಪಾರಾಗಬೇಕೆಂದು ಕೈಕಾಲು ಬಡೆದಾಗ-ಹತ್ತು ವರುಷಗಳ
ಹಿಂದೆಯೇ ಸತ್ತ ನಮ್ಮಪ್ಪ-ಮಾಳಿಗೆಯ ಮೇಲೆ ಕುಳಿತು,
ನನ್ನ ಗತಿ ನೋಡಿ, ನಕ್ಕು, ಮೇಲಿಂದ
“ದಪ್ಪೆ”ಎಂದು ಹಾರಿ, ತಲೆ ಬುರುಡಿ
ಹೋ…..ಳು………
ಮಾಡಿಕೊಂಡು-
ರಕ್ತ ಒಂಬಾಗಾಳಿ, ಸಾಯಬೇಕೆ?
ಆಗಂತೂ, ನನ್ನ ಸಿಟ್ಟು ನೆತ್ತಿಗೇರಿ, ಸತ್ತವನ ಶ್ರಾದ್ಧವೇ
ಮಾಡಬಾರದೆಂದು ಠರಾಯಿಸಿ, ಸಿಗರೇಟು ಹೊತ್ತಿಸಿ
ಜುರ‍್ರೆಂದು ಬಿಗಿದು, ಕಣ್‌ಮುಚ್ಚಿ-
ಕಲ್ಪನೆಯ ರಂಗುರಂಗಿನ ಸೀರಿವುಟ್ಟು ಮೈ ‘ಜುಂಮ್-ಎನಿಸುವ
ರಸತುಂಬಿದ ಹರೆಯ ಹುಡುಗಿಯರ ನಡುವೆ-
ನಿಂತಾಗ
ನನ್ನ ಅಂಗಳದಲ್ಲಿ ನಿನ್ನ
ಗೆಜ್ಜೆಯ ಸದ್ದು
ಹ….ಗು…ರಾ…..ಗಿ… ಎದ್ದು ನನ್ನ ಹತ್ತಿರ ಬಂದು
ಅಪ್ಪಿ ಮುದ್ದಿಟ್ಟಾಗ
ನನ್ನ ಅಂಗೈಯಲ್ಲಿ ರಥಸಪ್ತಮಿಯ ಸೂರ್ಯ
ನಕ್ಕು ಬಿಡಬೇಕೆ ?
.
ರಾಮಮನೋಹರ ಲೋಹಿಯಾ
ಕಲ್ಲುಗಳಲ್ಲಿ ಧರ್ಮ-ಇತಿಹಾಸ
ಇಂಡಿಯಾದ ಜನ ತಮ್ಮ ಧರ್ಮ-ಇತಿಹಾಸಗಳನ್ನು ಕಲ್ಲಲ್ಲಿ ಕಟ್ಟಿದ್ದಾರೆ. ಇತಿಹಾಸವನ್ನು ಕ್ಷಣಭಂಗುರವೆಂದು ಪರಿಗಣಿಸಿದ ಕಾರಣ ಅವರು ಅದಕ್ಕೆ ಎಂದೂ ಮನ್ನಣೆ ಕೊಡಲಿಲ್ಲ. ಅದಕ್ಕಾಗಿ ಅವರು ಇತಿಹಾಸಕ್ಕೆ ಸನ್ಯಾಯವಾಗಿ ಚಿರವಾದ ಕಥಾಕಾಲ್ಪನಿಕಗಳ ಕಡೆಗೆ ಕೇಂದ್ರೀಕರಿಸಿದ್ದರು. ಇತಿಹಾಸ ಈ ಬಗ್ಗೆ ಸೇಡು ತೀರಿಸಿಕೊಂಡಿದೆ. ತನ್ನ ಸತ್ಯಸಾರವನ್ನು ದೀರ್ಘಬಾಳುವಂಥ ಕಲ್ಲಿನಮೇಲೆ ಕೊರೆದುಕೊಂಡು, ಅದೇ ರೀತಿಯಲ್ಲಿ ಇವರ ಧರ್ಮ ಎತ್ತರ ಎತ್ತರಕ್ಕೆ ಏರಿದ ಹಾಗೂ ಆಕಾಶಕಿಯಾಗಿಬಿಟ್ಟಿತು, ಶೂನ್ಯಧ್ಯಾನವಾಗಿಬಿಟ್ಟಿತು. ಧಾರ್ಮಿಕ ಧ್ಯಾನಚಿಂತನಗಳು ಹೆಚ್ಚು ಹೆಚ್ಚು ಶೂನ್ಯಗತವಾದ ಹಾಗೆ, ಇನ್ನೊಂದು ಕಡೆ ಅವೇ ಕಲ್ಲಿನ ವಸ್ತುಭಾರದಲ್ಲಿ ಹರಳುಗಟ್ಟಿಕೊಳ್ಳಲು ಯತ್ನಿಸಿದವು. ಒಂದು ಕೊನೆಯಲ್ಲಿ, ಈ ಇತಿಹಾಸದ ಹಾಗೂ ಧಾರ್ಮಿಕ ಧ್ಯಾನಚಿಂತನಗಳ ಆಕಾಶಶೂನ್ಯ ; ಮತ್ತೊಂದು ಕೊನೆಯಲ್ಲಿ ಅವೇ ಶೂನ್ಯಗಳ ಅದ್ಭುತವೂ ಚಿರವೂ ಆದ ಶಿಲಾರೂಪ. ಶಿಲ್ಪ ಸೌಂಧರ್ಯ, ಘನಪ್ರತಿಮೆ.
.
ನಾಯಿ ನೆರಳು ಕಾದಂಬರಿ
ಎಸ್. ನಾಗರಾಜನ್
ನಾಯಿ ನೆರಳು-ಕಾದಂಬರಿ
ವಿಫುಲವಾದ ಪ್ರಶಂಸೆ ಗಳಿಸಿದ ಕಾದಂಬರಿ ‘ವಂಶವೃಕ್ಷ’ದ ಕರ್ತೃ ಶ್ರೀಯುತ ಎಸ್. ಎಲ್. ಭೈರಪ್ಪನವರು ಇದೀಗ “ನಾಯಿ ನೆರಳು” ಎಂಬ ಮತ್ತೊಂದು ಕಾದಂಬರಿಯನ್ನು ಕೊಟ್ಟಿದ್ದಾರೆ. ಮಗದೊಂದು ಪ್ರಕಟಣೆಯ ಹಂತದಲ್ಲಿದೆಯೆಂದು ಹೇಳಲಾಗಿದೆ. ಶ್ರೀಯುತರು ಐದುನೂರು ಪುಟಗಳಷ್ಟಿರುವ ‘ವಂಶವೃಕ್ಷ’ವನ್ನು ಬರೆಯಲು ಕೇವಲ ಮುವ್ವತ್ತು ದಿವಸಗಳನ್ನು ತೆಗೆದುಕೊಂಡರು. ಇನ್ನೂರ ನಲವತ್ತಯ್ದು ಪುಟಗಳಿರುವ ಸದ್ಯದ ಕಾದಂಬರಿ ಮೂರು ವಾರಗಳಲ್ಲಿ ಮುಗಿಯಿತು. ಬಲು ಒಳ್ಳೆಯ ಸಾಧನೆ. ಖಂಡಿತವಾಗಿ ಕೃತಿರಚನೆಯ ಈ ವೇಗ ಒಂದು ನ್ಯೂನತೆಯಲ್ಲ ಅಥವಾ ಆ ಕಾದಂಬರಿಗಳು ವಿವೇಚನಾ ಶೂನ್ಯತೆಯಿಂದ ಹೊಟ್ಟೆಪಾಡಿಗಾಗಿ ರಚಿತವಾದುವು ಎನ್ನುವುದಕ್ಕೆ ಸಾಕ್ಷಿಯಲ್ಲ. ಶ್ರೀಯುತ ಭೈರಪ್ಪನವರು ಅಪ್ರಯತ್ನಪೂರ್ವಕವಾಗಿ, ನಿರರ್ಗಳವಾಗಿ ಬರೆಯುತ್ತಾರೆ; ಅದೆಲ್ಲಾ ಒಳ್ಳೆಯದಕ್ಕಾಗಿ.
ಅವರಿಗೆ ‘ನಾಯಿ ನೆರಳು’ವಿನಲ್ಲಿ ಅಸಾಮಾನ್ಯವಾದ ಮನೋರಂಜಕ ಕಥೆಯೊಂದನ್ನು ಹೇಳಲಿಕ್ಕಿದೆ. ತಿರುಮಲ ಜೋಯಿಸರಿಗೆ, ಅವರ ಹೆಂಡತಿ ಗರ್ಭಿಣಿಯಾಗುವ ಕಾಲ ದಾಟಿದ ಮೇಲೊಬ್ಬ ಮಗ ಹುಟ್ಟುತ್ತಾನೆ. ಅವನು ಹುಟ್ಟಿದ ಕೂಡಲೆ ಚೀರಿಕೊಂಡ ಅವನ ತಾಯಿ, ಮುಂದೆಂದೂ ಎಚ್ಚರಾಗದಂತೆ ಮೂರ್ಛಿತಳಾಗುತ್ತಾಳೆ. ಬೆಳೆದು ದೊಡ್ಡವನಾಗುತ್ತಿದ್ದಂತೆ ಆ ಹುಡುಗ, ತನಗೆ ಮದುವೆಯಾಗಿದೆಯೆಂದೂ ತನ್ನ ನೆರವಿಗೊಬ್ಬ ಚಿಕ್ಕ ಮಗನಿದ್ದಾನೆಂದೂ ತಿಳಿಸುತ್ತಾನೆ. ಅವನು ಬೇರೆ ಮಕ್ಕಳೊಡನೆ ಬೆರೆಯುವುದಿಲ್ಲ, ಇದ್ದಕ್ಕಿದ್ದಂತೆ ಎಲ್ಲಿಂದಲೋ ಬಂದು ಆ ಹಳ್ಳಿಯಲ್ಲಿ ಕಾಣಿಸಿಕೊಂಡ ಒಂದು ನಾಯಿ ಅವನ ಎಡೆಬಿಡದ ಏಕೈಕ ಜತೆಗಾರನಾಗುತ್ತದೆ. ಆ ನಾಯಿ ನೆರಳ ಲ್ಲೆಂಬಂತೆ ಅವನು ಬೆಳೆಯುತ್ತಾನೆ. ಅವನು ಈ ಪ್ರಪಂಚಕ್ಕೆ ಸೇರಿದವನಲ್ಲವೇನೊ ಅನ್ನಿಸುವಂಥ ಒಂದು ತೆರನ ವಿಚಿತ್ರ ತಾಟಸ್ಥ ಮತ್ತು ಅಲಿಪ್ತತೆಯ ಧೋರಣೆ ಆ ಹುಡುಗನಲ್ಲಿದೆ. ಒಂದು ದಿನ, ದೂರದ ಹಳ್ಳಿಯ ಒಬ್ಬ ಮುದುಕ ತಿರುಮಲ ಜೋಯಿಸರಲ್ಲಿಗೆ ಆ ಹುಡುಗನನ್ನು ಕೇಳಿಕೊಂಡು ಬರುತ್ತಾನೆ. ಪ್ರವಾಸದ ಮೇಲಿದ್ದ ಒಂದಿಬ್ಬರು ಬ್ರಾಹ್ಮಣರೊಡನೆ ಆಕಸ್ಮಿಕವಾಗಿ ಆದ ಮಾತುಕತೆಗಳಿಂದ ಆ ಹುಡುಗನ ಕಥೆಯನ್ನರಿತಿದ್ದ ಆ ಮುದುಕ, ಆ ಹುಡುಗನ ಹಿಂದಿನ ಜನ್ಮದ ತಂದೆಯಾಗಿದ್ದು, ಪುನರ್ಜನ್ಮ ಪಡೆದ ತನ್ನ ಮಗನನ್ನು ಹುಡುಕಿಕೊಂಡು ಬಂದಿರುತ್ತಾನೆಂದು ತಿಳಿಯುತ್ತದೆ. ಆ ಹುಡುಗನನ್ನು ಅವನ ಹಿಂದಿನ ಜನ್ಮದ ಮನೆಗೆ ಕರೆತರುತ್ತಾರೆ. ಅಲ್ಲಿ ಅವನು ಸತ್ತು ಮತ್ತೆ ಕಾಣಿಸಿಕೊಳ್ಳುವವರೆಗಿನ ಹದಿನೆಂಟು ವರ್ಷಗಳ ಅವಧಿಯಲ್ಲಿ ದಕ್ಷಿಣ ಭಾರತದ ಸಾಂಪ್ರದಾಯಿಕ ವಿಧವಾ ಜೀವನವನ್ನು ನಡೆಸುತ್ತಿದ್ದ ಅವನ ಹೆಂಡತಿಯೊಡನೆ ಮೊದಲಿದ್ದ ಹಳೆಯ ಸಂಬಂಧವನ್ನು ಆತ ಪುನರಾರಂಭಿಸುತ್ತಾನೆ. ಸತ್ತ ಮನುಷ್ಯನೊಬ್ಬ ಪುನರ್ಜನ್ಮ ಪಡೆದು ಬಂದ ಇಂದ್ರಜಾಲದ ಬಗ್ಗೆ, ದೊಡ್ಡವನಾಗಿ ಬೆಳೆದು ಕಾಲೇಜು ವಿದ್ಯಾಭ್ಯಾಸ ಪಡೆದ ಆಧುನಿಕ ಯುವಕನಾಗಿದ್ದ ಅವನ ಚಿಕ್ಕ ಮಗನಿಗೆ ಸಂಶಯವಿರುತ್ತದೆ. ತನ್ನ ಅಜ್ಜ-ಅಜ್ಜಿ, ತಾಯಿ ಎಲ್ಲರೂ ಆ ಠಕ್ಕನಿಂದ ವಂಚಿತರಾಗಿದ್ದಾರೆಂದೇ ಆತ ಭಾವಿಸುತ್ತಾನೆ. ಹಳ್ಳಿಯ ದೈವ, ಪೂಜಾರಿ-ಪಾತ್ರಿಯ ಮೂಲಕ ಆ ಘಟನೆಯ ಸತ್ಯತೆಯನ್ನು ದೃಢಪಡಿಸಿದಾಗಲೂ ಆತ ಅದನ್ನು ನಂಬಲು ನಿರಾಕರಿಸುತ್ತಾನೆ. ನಿಜವೇನೆಂದರೆ, ಹಳ್ಳಿಯ ಪೂಜಾರಿ ನಿಷ್ಕಪಟಿಗಳಾದ ಮುಗ್ಧ ಗ್ರಾಮೀಣರನ್ನು ತನಗೆ ಬೇಕಾದಂತೆ ನಡೆಸಿಕೊಳ್ಳಲು ಹೂಡಿದ ಹೂಟವೇ ಹಳ್ಳಿಯ ದೈವ, ಎಂದವನು ಆಲೋಚಿಸುತ್ತಾನೆ. ತನ್ನ ತಾಯಿ, ಪುಟ್ಟ ವಿಧವೆಯೊಬ್ಬಳಿಗೆ ಸಹಜ ಹಾಗೂ ಅನಿವಾಧ್ಯವೆನ್ನುವಂತೆ ಪಾಪದಲ್ಲಿ ಬದುಕುತ್ತಿದ್ದಾಳೆ; ಆ ಪಾಪಕ್ಕೆ ಶೀಘ್ರದಲ್ಲಿಯೇ ನಾಚಿಕೆಗೇಡಿನ ಸಾಕ್ಷಿ ಸ್ಪಷ್ಟವಾಗುತ್ತದೆ. ಅದೇ ವೇಳೆ ಪುನರ್ಜನ್ಮ ಪಡೆದ ವ್ಯಕ್ತಿ ತಾಟಸ್ಥ್ಯದ ಮತ್ತು ಅಲಿಪ್ತತೆಯ ಧೋರಣೆಯಿಂದ ಅವನ ಬದುಕಿನತ್ತ ಸಾಗುತ್ತಾನೆ. ಹೇಗೋ ಒಂದು ದಿನ ಆತ ಇದ್ದಕ್ಕಿದ್ದಂತೆ ಅಸ್ಪೃಶ್ಯ ಹೆಣ್ಣೊಬ್ಬಳತ್ತ ಆಕರ್ಷಿತನಾಗಿ ಅವಳ ಜತೆ ಲೈಂಗಿಕ ಕ್ರಿಯೆ ನಡೆಸುತ್ತಾನೆ. ಅದು ತನ್ನ ತಂದೆಗೆ ತಿಳಿದಾಗ ಅವಳು ಬೆದರಿ ಆತನನ್ನು ತನ್ನ ಜತೆ ಓಡಿಬರುವಂತೆ ಒತ್ತಾಯಪಡಿಸುತ್ತಾಳೆ. ಅವನ ಮಗ ಇದೀಗ ತಾನು ಕ್ರಿಯಾಶೀಲನಾಗುವ ಸಮಯ ಬಂತೆಂದು ತೀರ್ಮಾನಿಸುತ್ತಾನೆ. ಅವನು ಆ ವ್ಯಕ್ತಿಯ ಮೇಲೆ ವಂಚನೆಯ ಆರೋಪ ಹೊರಿಸಿ ಮೊಕದ್ದಮೆ ಹೂಡಿ, ಉಪಾಯಾಂತರದಿಂದ ಆತನ ತಂದೆತಾಯಿಗಳೂ ಹೆಂಡತಿಯೂ ತನ್ನ ದೂರನ್ನೇ ಸಮರ್ಥಿಸುವಂತೆ ಮಾಡಿ, ಅವನು ಓಡಿಹೋಗಲು ಪ್ರಯತ್ನಿಸಿದಾಗ ಪತ್ತೆ ಹಚ್ಚಿ, ಅವನಿಗೆ ಏಳು ವರ್ಷದ ಸಶ್ರಮ ಸೆರೆವಾಸದ ಶಿಕ್ಷೆಯಾಗುವಂತೆ ಮಾಡುತ್ತಾನೆ. ಅವನನ್ನು ಸೆರೆಮನೆಗೆ ಕರೆದೊಯ್ಯುತ್ತಿರುವಾಗ ಅವನ ಬಾಲ್ಯದ ಜತೆಗಾರನಾಗಿದ್ದ, ವಂಶದ ಕಡೆಯುಳಿಕೆಯಾಗಿದ್ದ ನಾಯನ್ನು ಪೋಲೀಸರು ಕೊಲ್ಲುತ್ತಾರೆ, ಅವನ ಹೆಂಡತಿ ಮತ್ತು ತಾಯಿ ತಂದೆಯರಿಗೆ ನಡೆದದ್ದೇನು ಎಂದು ಮನವರಿಕೆಯಾದಾಗ ಅಪರಿಮಿತವಾದ ದುಃಖವಾಗುತ್ತದೆ; ಆ ಆಘಾತದಿಂದ ಅವನ ಮುದಿ ತಾಯಿಯಂತೂ ಸತ್ತೇ ಹೋಗುತ್ತಾಳೆ. ಆತನ ಹೆಂಡತಿ ಮತ್ತು ತಂದೆ ಅವನ ತಪ್ಪು ಸಾಬೀತಾದ್ದರ ವಿರುದ್ಧ ಅಹವಾಲು ಮಾಡಲು ತುಂಬ ಕಷ್ಟಪಟ್ಟು ಅವನನ್ನು ಒತ್ತಾಯಪಡಿಸಿದರೂ ಅವನು ಅದನ್ನು ನಿರಾಕರಿಸುತ್ತಾನೆ. ಅವನ ಕರ್ಮವನ್ನವನು ಅನುಭವಿಸಲೇಬೇಕು, (ಅವನನ್ನು ಅನುಸರಿಸುತ್ತಿದ್ದ ನಾಯಿಗಳು ಅವನ ಕರ್ಮಗಳು ; ಅವನ ಜೀವನದುದ್ದಕ್ಕೂ ಅವುಗಳ ನೆರಳು ಅವನನ್ನು ಆವರಿಸಿತ್ತು ಅಲ್ಲದೆ ಅವನು ಬೆಳೆದದ್ದು ಅವುಗಳ ನೆರಳಿನಲ್ಲಿ.) ಅವನ ಹೆಂಡತಿ, ಬಹುಶಃ ಔರಸಪುತ್ರನಲ್ಲದವನ ಕೈಯ್ಗೆ ಹೋಗುತ್ತಿದ್ದ ಆಸ್ತಿಯನ್ನು ರಕ್ಷಿಸಲೆಂದು ಮಗನು ತನಗೆ ಒಪ್ಪಿತವಾದಂತೆ ವರ್ತಿಸಿದ್ದಕ್ಕಾಗಿ, ಬೇಸರಗೊಂಡು ತನ್ನ ಮಾವನ ಮನೆಯನ್ನು ತ್ಯಜಿಸಿ ವೇಷಾಂತರದಿಂದ ಅಲೆದಾಡುತ್ತಾಳೆ. ಮಗ, ಈಗ ತನಗುಚಿತವಾದಂತೆ ಪಶ್ಚಾತ್ತಾಪಪಟ್ಟರೂ ಕಾಲ ಮೀರಿ ಹೋಗುತ್ತದೆ. ಮುಂದೆ ಆತ ಮದುವೆಯಾಗುತ್ತಾನೆ. ಅವನ ಹೆಂಡತಿ ಬಂಜೆಯಾಗುತ್ತಾಳೆ. ಲೌಕಿಕವಾದ ನೆರವಿನಿಂದಾಗಲೀ ಅಥವಾ ಆಧ್ಯಾತ್ಮಿಕವಾದ ನೆರವಿನಿಂದಾಗಲೀ ಅವಳ ಬಂಜೆತನವನ್ನು ಗುಣಪಡಿಸಲಾಗುವುದಿಲ್ಲ. ಅಷ್ಟರಲ್ಲಿ ದೂರದಲ್ಲೆಲ್ಲೋ ಸೇವಾವೃತ್ತಿಯಿಂದ ಹೊಟ್ಟೆ ಹೊರೆಯುತ್ತಿದ್ದ ಅವನ ತಾಯಿ ಗಂಡು ಮಗುವೊಂದನ್ನು ಹಡೆಯುತ್ತಾಳೆ. ಅವಳ ಗಂಡನ ಬಿಡುಗಡೆಯಾದಾಗ ಅವನೋ ಅಥವಾ ಅವನನ್ನು ತೀರ ಹೋಲುವ ಮತ್ತೊಬ್ಬನೋ ಸಂನ್ಯಾಸಿಯ ವೇಷದಿಂದ ಬಂದು ಅವಳನ್ನು ಸಂದರ್ಶಿಸಿ ಅವಳನ್ನೂ ಅವಳ ಮಗನನ್ನೂ ಆಶೀರ್ವದಿಸುತ್ತಾನೆ. ಅವನು ಅವಳನ್ನು ಬಿಟ್ಟು ಹೊರಡುತ್ತಾನೆ ಮತ್ತು ಕೂಡಲೇ ಕಣ್ಣಿಗೆ ಕಾಣಿಸದಾಗುತ್ತಾನೆ. ಅವಳ ವಾಸಸ್ಥಳವನ್ನು ಪತ್ತೆಹಚ್ಚಿದ ಅವಳ ಹಿರಿಯ ಮಗ, ಅವಳನ್ನು ತನ್ನೊಡನೆ ವಾಪಸಾಗಬೇಕೆಂದು ಅಂಗಲಾಚಿ ಬೇಡಿಕೊಳ್ಳುತ್ತಾನೆ. ತನ್ನ ತಾಯಿಯ ಜತೆ ಜೀವಿಸುತ್ತಿದ್ದ ಅಪರಿಚಿತ ವ್ಯಕ್ತಿ ಮರುಹುಟ್ಟು ಪಡೆದ ತನ್ನ ತಂದೆಯೇ ಎಂದು ಹೇಗೋ ಅವನಿಂದ ನಂಬಲಾಗುವುದಿಲ್ಲ; ಅವನ ಈ ಅಪನಂಬಿಕೆ ಅವನ ತಾಯಿಯನ್ನು ಹಾದರಗಿತ್ತಿಯನ್ನಾಗಿಯೂ ಅವಳ ಎರಡನೇ ಮಗನನ್ನು ಹಾದರಕ್ಕೆ ಹುಟ್ಟಿದವನನ್ನಾಗಿಯೂ ಮಾಡುತ್ತದೆಯಾದ್ದರಿಂದ ಅವಳು ಅವನೊಡನೆ ಹೋಗಲು ನಿರಾಕರಿಸುತ್ತಾಳೆ. (ಆ ಅಪರಿಚಿತ ವ್ಯಕ್ತಿ ಮರುಹುಟ್ಟು ಪಡೆದು ಬಂದ ತನ್ನ ತಂದೆಯೇ ಎಂದು) ನಂಬಬೇಕೆಂದು ಅವನು ಇಷ್ಟಪಟ್ಟರೂ ಸಾಧ್ಯವಾಗದೆ ಇರುವುದೇ ಅವನಿಗಾಗುತ್ತಿರುವ ಸಂಕಟ.
ಇದು ಶ್ರೀಯುತ ಭೈರಪ್ಪನವರು ನೆಯ್ದಿರುವ ಗೋಜಲುನೂಲಿನ ಕಥೆಯ ರೂಪರೇಷ ಕಥೆಯು ಮುಂದರಿಕೆಯಲ್ಲಿ ಬಂದಿರುವ ಹಲವು ಉಪಕಥೆಗಳೂ ಅಮುಖ್ಯ ಪಾತ್ರಗಳೂ ಕೆಲವು ಘಟನೆಗಳೂ ನಡೆದ ಹಾಗೇ ಏಕೆ ನಡೆಯುತ್ತವೆ ಎಂಬುದನ್ನು ಸೂಚಿಸುವ ಉದ್ದೇಶದಿಂದಷ್ಟೇ ಬಂದಿವೆ. ಉದಾಹರಣೆಗಾಗಿ ಹಳ್ಳಿಯ ಮುಖಂಡನ ಉತ್ತರ ಕ್ರಿಯೆಯ ಸಂದರ್ಭದಲ್ಲಿ ಹಳ್ಳಿಯ ಪುರೋಹಿತರಾದ ತಿರುಮಲ ಜೋಯಿಸರು ಒಂದು ಕುಂಬಳಕಾಯನ್ನೂ ಒಂದು ಕಬ್ಬಿಣದ ಬಟ್ಟಲ ತುಂಬ ಎಳ್ಳೆಣ್ಣೆಯನ್ನೂ ದಾನವಾಗಿ ಸ್ವೀಕರಿಸುತ್ತಾರೆ. ಸತ್ತ ವ್ಯಕ್ತಿಯ ಪಾಪಕರ‍್ಮಗಳಲ್ಲಿ ಅರ್ಧಭಾಗವು ದಾನ ಸ್ವೀಕರಿಸಿದವರಿಗೆ ಬರುತ್ತದೆಯೆಂಬ ನಂಬಿಕೆ ಇರುವುದರಿಂದ ಉತ್ತರ ಕ್ರಿಯೆಗಳನ್ನು ಮಾಡಿ ಸುವ ಬ್ರಾಹ್ಮಣರಲ್ಲಿ ಬಹಳಷ್ಟು ಮಂದಿ ಇಂಥ ದಾನವನ್ನು ನಿರಾಕರಿಸುತ್ತಾರೆ. ಶರೀರ ಶಾಸ್ತ್ರದ ಪವಾಡವೆನ್ನುವಂತೆ, ಮುಟ್ಟು ನಿಂತ ಬಹಳ ಕಾಲದ ಬಳಿಕ, ಜೋಯಿಸರ ಹೆಂಡತಿ ಗರ್ಭಿಣಿಯಾದಾಗ, ಹುಟ್ಟಲು ಬಯಸುತ್ತಿರುವುದು ಆ ಸತ್ತ ವ್ಯಕ್ತಿಯ ಕರ್ಮವೇ ಎಂದು ಪ್ರತಿಯೊಬ್ಬರೂ ಹೇಳುತ್ತಾರೆ. ಸತ್ತ ಆ ಮುಖಂಡನಿಗೆ ಕೀಳು ಜಾತಿಯ ಸೂಳೆಯೊಬ್ಬಳಿದ್ದು, ಆ ವ್ಯಭಿಚಾರೀ ಸಂಬಂಧದ ಕರ್ಮವೇ ; ಜೋಯಿಸರ ಮಗ, ಅಸ್ಪೃಶ್ಯ ಹುಡುಗಿಯೊಬ್ಬಳೊಡನೆ ನಿಷಿದ್ಧ ಸಂಬಂಧ ಬೆಳೆಸಿದಾಗ, ಮುಂದಿನ ಅವನ ಸೆರೆವಾಸಕ್ಕೆ ಅನುವಾಗುವಂತೆ ಆತನ ಬದುಕಿನಲ್ಲಿ ಅಭಿವ್ಯಕ್ತವಾಗುತ್ತದೆ. ಒಟ್ಟಾರೆ ಶ್ರೀಯುತ ಭೈರಪ್ಪನವರು, ಹಿಂದೂಗಳ ಸಾಂಪ್ರದಾಯಿಕ ನಂಬಿಕೆಗಳನ್ನೂ ಮೌಲ್ಯಗಳನ್ನೂ ಒಳಗೊಂಡ, ಹಿಂದೂ ಜೀವನದ ಆಧ್ಯಾತ್ಮಿಕ ಕಾದಂಬರಿಯೊಂದನ್ನು ಬರೆಯಲು ಇಲ್ಲಿ ಪ್ರಯತ್ನಿಸಿದ್ದಾರೆ. ಅವರು ತಮ್ಮ ಕಾದಂಬರಿಯ ಹಿನ್ನುಡಿಯಲ್ಲಿ ತಮ್ಮ ನಿಲುವನ್ನು ವಿವರಿಸುತ್ತಾರೆಯಾದ್ದರಿಂದ, ಕಾದಂಬರಿಯ ಮೌಲ್ಯ ನಿರ್ಣಯಕ್ಕೆ ಹೋಗುವ ಮೊದಲು ಅವರ ವಾದಗಳ ಸಾರಾಂಶವನ್ನು ಪರಿಶೀಲಿಸುವುದು ಯೋಗ್ಯವಾದದ್ದು.
ಶ್ರೀಯುತ ಭೈರಪ್ಪನವರು ಹೇಳುವಂತೆ ನಮ್ಮ ಪೂರ್ವಿಕರ ನಂಬಿಕೆ, ಆಚಾರ, ಸಂಪ್ರದಾಯಗಳು ಕೆಲವು ನಿರ್ದಿಷ್ಟ ಮೌಲ್ಯಗಳನ್ನು ಪ್ರತಿನಿಧಿಸುತ್ತಿದ್ದವು. ಸಾವಿನ ಬಳಿಕ ಆತ್ಮಕ್ಕೆ ಏನಾಗುತ್ತದೆ ? ದೇಹವು ಆತ್ಮಕ್ಕಿಂತ ಭಿನ್ನವಾದದ್ದೆ ? ಪುನರ್ಜನ್ಮವೇನಾದರೂ ಇದೆಯೆ ? ಅದರ ನಿಯಮಗಳು ಯಾವುವು ? ಇಂಥ ಪ್ರಶ್ನೆಗಳಿಂದ ನಮ್ಮ ಪೂರ್ವಿಕರು ಈ ಭೌತಿಕ ಜಗತ್ತಿಗಿಂತ ಸಂಪೂರ್ಣವಾಗಿ ಬೇರೆಯಾದ ಹೊಸ ಪ್ರಪಂಚಗಳನ್ನು ಸೃಷ್ಟಿಸಿದರು. ಆದರೆ ನಿಷ್ಠುರ ಸತ್ಯಶೋಧನೆಯ ದೃಷ್ಟಿಯುಳ್ಳ ಸ್ವಾನುಭವಸಿದ್ದ ವಿಜ್ಞಾನಗಳ ಪ್ರಗತಿಯ ಪರಿಣಾಮದಿಂದ ಈ ಪ್ರಪಂಚಗಳು ನಮ್ಮ ಪ್ರಜ್ಞಾವಲಯದಿಂದ ಕಣ್ಮರೆಯಾಗಿವೆ, ನಮ್ಮ ಅಭ್ಯಾಸಕ್ಕೂ ಅರಿವಿಗೂ ಉಳಿದಿರುವುದು ಕೇವಲ ಭೌತಿಕ ಪ್ರಪಂಚ. ಆದರೆ ಕೇವಲ ಭೌತ ವಿಜ್ಞಾನಗಳ ಪ್ರಪಂಚ ಮಾತ್ರ ಸತ್ಯವೆ? ಧಾರ್ಮಿಕ ನಂಬಿಕೆಯ ಪ್ರಪಂಚಗಳೆಲ್ಲವೂ ಸಂಪೂರ್ಣವಾಗಿ ಸುಳ್ಳೇ ? ಈ ವಿಷಯಗಳಲ್ಲಿಯ ಸತ್ಯಾಸತ್ಯತೆಗೆ ಪ್ರಮಾಣ ಯಾವುದಾಗಿರಬೇಕು ? ಅಂತಹ ಪ್ರಶ್ನೆಗಳು ಆಧ್ಯಾತ್ಮಕ್ಕೆ ಅಥವಾ ತಾತ್ವಿಕ ಮೌಲ್ಯಗಳಿಗೆ ಸಂಬಂಧಿಸಿದ್ದಾದರೂ ಪ್ರಕೃತ ಸಂದರ್ಭ ವಿಶಿಷ್ಟವಾದ ಒಂದು ಸಾಹಿತ್ಯಿಕ ಸಮಸ್ಯೆಯನ್ನು ಸೃಷ್ಟಿಸಿದೆ. ನಮ್ಮ ಬೌದ್ಧಿಕ ಅರಿವಿನ ಮತ್ತು ಸತ್ಯಶೋಧನೆಯ ಪ್ರವೃತ್ತಿ, ನಮ್ಮ ಬದುಕಿನ ಎಲ್ಲ ದೃಷ್ಟಿ ಕೋನಗಳನ್ನೂ ಆಳಲು ಪ್ರಯತ್ನಿಸಿದಾಗ, ಮನುಷ್ಯನ ಕಲ್ಪನಾಶಕ್ತಿ, ವಿಜ್ಞಾನ ಪ್ರತಿಪಾದಿತವಲ್ಲದಿರುವ ಸತ್ಯಗಳತ್ತ ತನ್ನ ಪ್ರಜ್ಞೆಯನ್ನು ಚಾಚದೆ ತನ್ನ ದೃಢವಾದ ಗ್ರಹಣಶಕ್ತಿಯನ್ನು ಕಳೆದುಕೊಳ್ಳುತ್ತದೆ. ಹಿಂದೆ ಇದ್ದುದಕ್ಕೆ ಹೋಲಿಸಿದಾಗ, ಇಂದಿನ ಲೇಖಕರ ಮತ್ತು ಓದುಗರ ಸಾಹಿತ್ಯಕ ಸಹಾನುಭೂತಿ ಬಹಳಷ್ಟು ಸಂಕುಚಿತವಾಗಿದೆ. ಈ ಭೌತಿಕ ಜಗತ್ತಿನ ವ್ಯಾಪ್ತಿಯನ್ನು ಮೀರಿ, ಒಂದೇ ಜನ್ಮದ ಅವಧಿಯನ್ನು ಮೀರಿ ನಿಲ್ಲುವ ಬದುಕನ್ನುಳ್ಳ ಪಾತ್ರಗಳು ನಮ್ಮ ಪ್ರಾಚೀನ ಸಾಹಿತ್ಯದಲ್ಲಿವೆ. ಉದಾಹರಣೆಗಾಗಿ ಕರ್ಣನೇಕೆ ಹೀಗೆಯೇ ಸಾಯುತ್ತಾನೆ ಎಂದು ಪ್ರಶ್ನಿಸಿದಾಗ ಬರುವ ಉತ್ತರ ನಮ್ಮನ್ನು ಅವನ ಹಿಂದಿನ ಜನ್ಮದತ್ತ ಕರೆದೊಯ್ಯುತ್ತದೆ.
ಮತ್ತೂ ಒಂದು ರೀತಿಯಲ್ಲಿ ನಮ್ಮ ಆಧುನಿಕ ಲೇಖಕರ ಸಾಹಿತ್ತಿಕ ವ್ಯಾಪ್ತಿ ಸಂಕುಚಿತವಾಗಿದೆ. ಜಡವಾದದ್ದು ಯಾವುದೂ ಇಲ್ಲದ ಜಗತ್ತಿನಲ್ಲಿ ನಮ್ಮ ಹಳೆಯ ಕವಿಗಳು ಜೀವಿಸಿದ್ದರು. ಕಲ್ಲಿಗೆ ಕೂಡ ತನ್ನದೇ ಆದ ಬದುಕಿತ್ತು. ಪರಿಣಾಮತಃ ಕವಿಯಾದವನು ಕೇವಲ ಪ್ರಾಕೃತಿಕ ವಸ್ತು ವರ್ಣನೆಗಳಿಂದಲೇ ಓದುಗರ ಭಾವಕೋಶಗಳನ್ನು ಮುಟ್ಟುತ್ತಿದ್ದನು. ಈ ಆನುಕೂಲ್ಯವನ್ನು ನಾವು ಕಳೆದುಕೊಂಡಿದ್ದೇವೆಯಾದ್ದರಿಂದ ಲೇಖಕ ತನ್ನನ್ನು ಈ ಭೌತಿಕ ಪ್ರಪಂಚದ ವ್ಯಕ್ತಿಯ ಮೇಲೇ ಒತ್ತಾಯಪೂರ್ವಕವಾಗಿ ಕೇಂದ್ರೀಕರಿಸಿಕೊಂಡು ಆತನನ್ನು ಚಿತ್ರಿಸಬೇಕಾಗುತ್ತದೆ.
ಇದೇನೂ ಹೆಚ್ಚಿನದಲ್ಲ, ನಾವು ತಿಳಿದಂತೆ ಬದುಕಿನಾಚೆಗೆ ಏನಿದೆ ಎಂಬುದು ಸಾಮಾನ್ಯ ಇಂದ್ರಿಯಾನುಭವಕ್ಕಾಗಲೀ ಸಶ್ಯಶೋಧನಾತರ್ಕಕ್ಕಾಗಲೀ ನಿಲುಕದ್ದಾದ್ದರಿಂದ ಆಧುನಿಕ ಲೇಖಕರು ಮತ್ತು ಓದುಗರು ಬದುಕನ್ನು ಅರ್ಥ ಮಾಡಿಕೊಳ್ಳಲು ಈ ಜೀವನದಾಚೆಗಿನದನ್ನು ತಿಳಿಯುವುದು ಅಗತ್ಯವಾಗಿದ್ದರೂ ಅದನ್ನು ನಿರಾಕರಿಸುತ್ತಾರೆ. ಅವರು, ಮಾನವತಾವಾದ ಮತ್ತು ಆಧುನಿಕ ಮನಃಶಾಸ್ತ್ರದ ಸಹಾಯದಿಂದ ಬದುಕಿನ ರಹಸ್ಯವನ್ನು ಅರ್ಥಮಾಡಿಕೊಳ್ಳಲೂ, ವಿವರಿಸಲೂ ಪ್ರಯತ್ನಿಸುತ್ತಾರೆ. ಮಾನವತಾವಾದ ಮತ್ತು ಮನಃಶಾಸ್ತ್ರಗಳೆರಡೂ ವಾಸ್ತವ-ಕಲೆಗೆ ದಾರಿ ಮಾಡಿಕೊಡುತ್ತವೆ. ಮಾನವೀಯ ಭಾವನೆಗಳನ್ನು, ಸಾಮಾನ್ಯ ಮನುಷ್ಯನೊಬ್ಬ ಅನುಭವಿಸಿದಂತೆ ಚಿತ್ರಿಸುವುದೇ ಮಾನವತಾವಾದದ ಗುರಿ. ಅಂದರೆ, ಮಾದರಿಯನ್ನೊದಗಿಸುವವನು ಸಾಮಾನ್ಯ ಮನುಷ್ಯ. ಮನಶ್ಯಾಸ್ತ್ರ ಒಂದು ವಿಜ್ಞಾನವಾಗಿ ಉಳಿಯಬೇಕಾದ ಉದ್ದೇಶವುಳ್ಳದ್ದರಿಂದ ಅದು, ವಿಜ್ಞಾನಕ್ಕೆ ಯೋಗ್ಯವಾದ ವಿಧಾನ ಮತ್ತು ವಸ್ತುಗಳ ಮಿತಿಯಲ್ಲೇ ಉಳಿಯುತ್ತದೆ. ಮೌಲ್ಯ-ವಿವೇಚನೆ ಅದಕ್ಕೆ ವರ್ಜ್ಯ. ಆಧುನಿಕ ಲೇಖಕನ ಮಾನವತಾವಾದ ಮತ್ತು ಮನಶ್ಯಾಸ್ತ್ರದ ಬಗೆಗಿನ ಸಂಪೂರ್ಣ ಸಮ್ಮತಿ ಮನುಷ್ಯ ಜೀವನದ ಮೌಲ್ಯಗಳನ್ನಾಗಲೀ ಗೂಢತೆಯನ್ನಾಗಲೀ ಒಪ್ಪಿಕೊಳ್ಳದ ಸಾಹಿತ್ಯದ ಸೃಷ್ಟಿಯತ್ತ ತುಯ್ಯುತ್ತದೆ. ನಮಗೆ ವಿಜ್ಞಾನ ಬೇಕು, ಮತ್ತೂ ಹೆಚ್ಚು ಬೇಕು ಎನ್ನುವುದು ನಿಶ್ಚಯವಾದರೂ ಮೌಲ್ಯಗಳ ವ್ಯಾಪಕ ವ್ಯವಸ್ಥೆಯೊಡನೆ ವಿಜ್ಞಾನದ ಸಾಮರಸ್ಯವನ್ನು ಸಾಧಿಸುವುದು ವಿಜ್ಞಾನಿಯ ಸಂಪೂರ್ಣ ಹಕ್ಕಾಗಲೀ, ಜವಾಬ್ದಾರಿಯಾಗಲೀ ಅಲ್ಲ. ಈ ಜೀವನದ ಮೊದಲು ಏನಾಗಿತ್ತು. ಅನಂತರ ಏನಾಗುತ್ತದೆ ಎಂಬುದನ್ನೊಳಗೊಂಡ ಬದುಕಿನ ಬಗೆಗಿನ ಎಚ್ಚರವನ್ನು ಹೆಚ್ಚಿಸುವ ಸಾಹಿತ್ಯ, ಉತ್ಕೃಷ್ಟ ಮೌಲ್ಯಗಳನ್ನುಳ್ಳ ಸಾಹಿತ್ಯ, ನಮಗೆ ಬೇಕು.
ಆಧುನಿಕ ಸಾಹಿತ್ಯಸ್ಥಿತಿಯ ಬಗ್ಗೆ ಈ ಅಭಿಪ್ರಾಯಗಳನ್ನು ಹೊಂದಿರುವ ಶ್ರೀಯುತ ಭೈರಪ್ಪನವರು ಹಿಂದೂಗಳಿಗೆ, ಪ್ರಸ್ತುತ, ಸುಸಂಗತವಾಗಿ ಮತ್ತು ಪ್ರಯೋಜನಕಾರಿಯಾಗಿ ಕಾಣುವ ಸಾಹಿತ್ಯ ಪ್ರಕಾರದ ಆವಶ್ಯಕತೆಯನ್ನರಿತು ಅದನ್ನೊದಗಿಸಿಕೊಡುವ ಧೀರಪ್ರಯತ್ನ ಮಾಡಿದ್ದಾರೆ. ಅವರು ಈ ಪ್ರಯತ್ನದಲ್ಲಿ ಎಷ್ಟರಮಟ್ಟಿಗೆ ಸಫಲರಾಗಿದ್ದಾರೆ?
ಮೊದಲಾಗಿ ಕಥಾನಾಯಕನಿದ್ದಾನೆ. (ಮೊದಲ ಜನ್ಮದಲ್ಲಿ ವಿಶ್ವೇಶ್ವರನೆಂದೂ ಎರಡನೇ ಜನ್ಮದಲ್ಲಿ ಕ್ಷೇತ್ರಪಾಲನೆಂದೂ ಕರೆಸಿಕೊಂಡವನು.) ಬ್ರೋನಿಂಗನ ಲ್ಯಾ ಜರಸ್ಸನ ಹಾಗೆ ಸಾವಿನಿಂದ ಮರಳಿ ಬಂದಿದ್ದಾನೆ. ಸಾವಿನಿಂದ ಹಿಂದಿರುಗಿ ಬರುವ ಅಂಥ ಅನುಭವ, ಖಂಡಿತವಾಗಿ ಷೇಕ್ಸ್‌ಪಿಯರನ ಕಲ್ಪನೆಯ ಮಿತಿಯನ್ನೂ ಮೀರಿದ್ದು. ಹ್ಯಾಮ್ಲೆಟ್ಟಿನಲ್ಲಿಯ ಭೂತ, ಚಾತುರ‍್ಯದಿಂದ, ಅನಾದ್ಯನಂತತೆಯ ಗರಿಮೆಯನ್ನು ಮನುಷ್ಯನ ಕಿವಿಗೆ ಬೀಳಬಾರದ್ದೆಂದು ಅನ್ವಯಿಸಿ ತಾನು ಸಿಕ್ಕಿಕೊಂಡ ಪೇಚಿನಿಂದ ಪಾರಾಗುತ್ತದೆಯಲ್ಲದೆ ಸ್ವತಃ ಹ್ಯಾಮ್ಲೆಟ್, ಬದುಕಿನ ಅನಂತರದ ಸ್ಥಿತಿಯನ್ನು ಯಾವ ಪ್ರವಾಸಿಯೂ ಎಂದೆಂದೂ ಹಿಂದಿರುಗಿ ಬಾರದ ಮೇರೆಯನ್ನುಳ್ಳ ಆ ರಾಜ್ಯ ಎಂದು ವರ್ಣಿಸುತ್ತಾನೆ. ಹೇಳಲು ಯಾವ ‘ಕಥೆ’ಯೂ ಇಲ್ಲವಾದರೂ, ಬ್ರೋನಿಂಗನ ಲ್ಯಾಜರಸ್ ಮತ್ತು ಭೈರಪ್ಪನವರ ಕ್ಷೇತ್ರಪಾಲರು ‘ಆ ರಾಜ್ಯ’ದಿಂದ ಹಿಂದಿರುಗಿ ಬಂದ ಪ್ರವಾಸಿಗಳು. ಒಂದು ವ್ಯತ್ಯಾಸವೆಂದರೆ ಕ್ಷೇತ್ರಪಾಲ (ಸಾವು ಹುಟ್ಟಿನ) ಮಧ್ಯಂತರ ಸ್ಥಿತಿಯನ್ನಲ್ಲವಾದರೂ (ಹಕ್ಸ್ಲೆಯು ‘ಟೈಮ್ ಮಸ್ಟ್ ಹ್ಯಾವ್ ಎ ಸ್ಟಾಪ್” ಎಂಬ ಕೃತಿಯಲ್ಲಿ ವರ್ಣಿಸಿರುವಂತೆ), ತನ್ನ ಹಿಂದಿನ ಜನ್ಮದ ಜೀವನವನ್ನು ಕರಾರುವಾಕ್ಕಾಗಿ ನೆನಪು ಮಾಡಿಕೊಳ್ಳುತ್ತಾನೆ. ಲ್ಯಾ ಜರಸ್ಸನ ವಿಷಯದಲ್ಲಿ ಎರಡನೆಯ ಜನ್ಮವಿಲ್ಲ. ಹೇಗೂ, ಸಾವಿನ ಅನುಭವ ಇವರಿಬ್ಬರಲ್ಲೂ ಒಂದು ಬದಲಾವಣೆಯನ್ನು ಉಂಟುಮಾಡಿದೆ. ಬೋನಿಂಗ್ ತನ್ನ ಲ್ಯಾಜರಸ್ಸನ ಬಗೆಗೆ, “ಈ ಬೆಳೆದ ಮನುಷ್ಯ ಜಗತ್ತನ್ನು ಇದೀಗ ಒಂದು ಮಗುವಿನಂತೆ ನೋಡುತ್ತಾನೆ” ಎನ್ನುತ್ತಾನೆ.
Indeed the especial marking of the man
Is pronc submission to the Heavenly Will
Seeing it, what it is, and why it is.
(Browning: “Epistle of Karshish)
ನಿಜವಾಗಿಯೂ ಮನುಷ್ಯನ ವಿಶಿಷ್ಟ ಲಕ್ಷಣಗಳೆಲ್ಲ, ಅದೇನು ಅದೇಕೆ ಎಂಬುದನ್ನು ಕಂಡುಕೊಂಡು, ದೈವಸಂಕಲ್ಪಕ್ಕೆ ತಲೆಬಾಗಿ ವಶವಾಗಿವೆ.
(ಬ್ರೋನಿಂಗ್ : ಕಾರ್ಷಿಷನ ಕಾಗದ)
ಬ್ರೋನಿಂಗನ ಮತ್ತು ಭೈರಪ್ಪನವರ ಕಥಾನಾಯಕರಲ್ಲಿ ಮೇಲಿನದರಷ್ಟೇ ಪ್ರಮುಖವಾದ ಮತ್ತೊಂದು ವ್ಯತ್ಯಾಸವಿದೆ ಮತ್ತು ಆ ವ್ಯತ್ಯಾಸ ಸಿದ್ಧಾಂತ ಪ್ರತಿಪಾದನೆಯಲ್ಲಿಯೇ ವ್ಯಗ್ರವಾಗಿರುವ ಕಾದಂಬರಿಯ ದೌರ್ಬಲ್ಯವನ್ನು ಹೊರತರುತ್ತದೆ.
ಭೈರಪ್ಪನವರು ತಾವೇ ಹಾಕಿಕೊಂಡ ನಿಯಮಗಳನ್ವಯ, ಜನ್ಮದಿಂದ ಜನ್ಮಕ್ಕೆ ಬರುವ ಕರ್ಮಶೇಷದ ಆಗುಹೋಗುಗಳನ್ನು ‘ಪೂರ್ವಜನ್ಮವಾಸನೆ’ ಎಂದು ಸ್ಪಷ್ಟಪಡಿಸಬೇಕಾಗಿದೆ. ಆದ್ದರಿಂದಲೇ ಅವರ ಕಥಾನಾಯಕ ತನ್ನ ಹಿಂದಿನ ಜನ್ಮದ ಹೆಂಡತಿಯೊಡನೆ ದಾಂಪತ್ಯ ಜೀವನದ ಹಕ್ಕುಗಳನ್ನನುಭವಿಸಲು ಅನುಮತಿ ಕೊಡಲೇಬೇಕೆಂದು ತಗಾದೆ ಮಾಡುತ್ತಾನೆ. ಕಾದಂಬರಿಯ ಮೊದಲಲ್ಲಿ ಕ್ಷೇತ್ರಪಾಲನ ‘ಎರಡನೆಯ’ ತಂದೆ ಅವನನ್ನು, ಅವನ “ಮೊದಲ’ ತಂದೆಯೊಡನೆ ಹೋಗಲು ಸಿದ್ದನೇ ಎಂದು ಕೇಳಿದಾಗ ಅವನು ತನ್ನ ಎರಡನೆಯ ತಂದೆ ತನಗೆ ನಿಜವಾಗಿ ಸಂಬಂಧಿತನಲ್ಲವಾದುದರಿಂದ ನಿಶ್ಚಿಂತೆಯಿಂದ ತಾನು ಸಿದ್ಧ ಎಂದು ಹೇಳುತ್ತಾನೆ. ಅದೇ ತೆರನ ತರ್ಕದಿಂದ ಅವನು ತನ್ನ ಮೊದಲ ತಂದೆ ಅಥವಾ ಹೆಂಡತಿಯೊಡನೆ ಮಾತ್ರವೇಕೆ, ಯಾವನೇ ತಂದೆ ಅಥವಾ ಹೆಂಡತಿಯೊಡನೆ ಸಂಬಂಧಿತನಾದವನೆಂದು ತಿಳಿದುಕೊಳ್ಳುವುದಾದರೂ ಹೇಗೆ ಎಂದು ಯಾರೇ ಆದರೂ ಪ್ರಶ್ನಿಸಬಹುದು.
“ಕಸ್ತ್ವಂ ಕೋ’ಹಂ ಕುತ ಆಯಾತಃ
ಕ ಮೇ ಜನನೀ ಕೋ ಮೇ ತಾತಃ….?”
(ನೀನು ಯಾರು ? ನಾನು ಯಾರು ? ನೀನು ಬಂದದ್ದೆಲ್ಲಿಂದ ? ನಾನು ಬಂದದ್ದಲ್ಲಿಂದ? ನನ್ನ ತಾಯಿ ಯಾರು ? ನನ್ನ ತಂದೆ ಯಾರು?) ನಿಜವಾಗಿ ಸಾವಿನ ತಿಳುವಳಿಕೆ ಅವನಲ್ಲಿ ಯಾವ ಬದಲಾವಣೆಯನ್ನೂ ಉಂಟುಮಾಡಿಲ್ಲ. ಸಾವಿನ ಮತ್ತು ಪುನರ್ಜನ್ಮದ ಅರಿವನ್ನುಳ್ಳ ಕಥಾನಾಯಕನನ್ನು ಭೈರಪ್ಪನವರು ಸೃಷ್ಟಿಸಿರುವ ಉದ್ದೇಶ-ನಾವು ಈ ಜಗತ್ತಿಗೆ ಮತ್ತು ಈ ಬದುಕಿಗೆ ನಮ್ಮ ವಿವರಣೆಯನ್ನು ಮಿತಗೊಳಿಸಿದಾಗ ವಿವರಣಾತೀತವಾಗುವ ಬದುಕಿನ ಗೂಢತೆಯ ಬಗ್ಗೆ ಆ ಅರಿವಿಗೆ ಹೊಂದಿಕೆಯಾಗುವ ಅರಿವನ್ನು ನಮ್ಮಲ್ಲಿ ದೃಢೀಕರಿಸಬೇಕು ಎಂಬುದಾಗಿದೆ. ಆದರೆ ಅವರು ತಮ್ಮ ‘ಸ್ವೀಕೃತ ತತ್ವ’ದ ಭಯಂಕರ ತೊಡಕನ್ನು ಅರ್ಥ ಮಾಡಿಕೊಳ್ಳಲು ಸೋತಿದ್ದಾರೆ. ಅರ್ಥ ಮಾಡಿಕೊಂಡಿದ್ದರೆ ಅವರು ತಮ್ಮ ಕರ್ಮತತ್ವದ ನಿಯಮಗಳ ಪ್ರತಿಪಾದನೆಯಲ್ಲಿ ಅಷ್ಟು ಕೌಶಲವನ್ನು ತೋರಿಸಲು ಆಗುತ್ತಿರಲಿಲ್ಲ. ಕರ್ಮತತ್ವ ಅಥವಾ ಸಿದ್ಧಾಂತ ಕ್ರಿಯಾತ್ಮಕವಾದ ಹಿಂದೂ ನಂಬಿಕೆಯ ಅಂತರಾಳದಲ್ಲಿ ನಿಶ್ಚಯವಾಗಿ ಹಿಂದಿನಿಂದಲೂ ಇತ್ತು (ಭಿನ್ನಾಭಿಪ್ರಾಯಗಳಿವೆ) ಮತ್ತು ಬಹುಶಃ ಈಗಲೂ ಇದೆಯಾದ್ದರಿಂದ, ತನ್ನ ಕ್ರಿಯೆ ಹಾಗೂ ಪಾತ್ರಚಿತ್ರಣಗಳಲ್ಲಿ ಹಿಂದೂ ಮೌಲ್ಯಗಳನ್ನು ಒಳಗೊಳ್ಳಬೇಕೆಂದು ಹೊರಟ ಒಂದು ಕಾದಂಬರಿ ಬಹುಶಃ ಕರ್ಮದ ಬಗ್ಗೆಯೇ ಕೇಂದ್ರೀಕೃತವಾಗಿರಬೇಕೆಂದು ತಿಳಿಸುವುದೊಳ್ಳೆಯದು (ಶುದ್ಧಾದ್ವೈತದ ಬದಲಾಗಿ, ಎಂದು ಹೇಳೋಣವೆ ?), ಆದರೆ ಈ ಉದ್ದೇಶಕ್ಕಾಗಿ ಕಥಾನಾಯಕ ಪುನರವತರಿಸಲೇಬೇಕೆಂದು ನಾವು ಬಯಸುತ್ತೇವೆ ಎಂದು ತಿಳಿಯಲಾಗದು. (ನಾವು ಬಯಸುವುದು) ನಿಷ್ಕೃಷ್ಟವಾಗಿ ಹೇಳಬೇಕೆಂದರೆ, ಕರ್ಮದಲ್ಲಿಯ ನಂಬಿಕೆಯೊಡನೆ ವರ್ತಿಸುವ ಪ್ರಜ್ಞೆಯ-ನಾವೇನು ಆಲೋಚಿಸುತ್ತೇವೆ. ಅನುಭವಿಸುತ್ತೇವೆ ಎಂಬುದನ್ನೊಳಗೊಂಡು ನಾವೇನು ಮಾಡುತ್ತೇವೆ ಎಂಬುದಕ್ಕೆ ಕಾರ‍್ಯ-ಕಾರಣ ಸಂಬಂಧವಿದೆಯೆಂಬ ಅಂತರಂಗದ ನಂಬಿಕೆಗೆ ಸಾಕ್ಷಿಯಾಗುವ ಪ್ರಜ್ಞೆಯ-ಸೃಷ್ಟಿ. ಈ ಕಾರ‍್ಯ ಕಾರಣಗಳು ನಾವು ತಿಳಿದಿರುವ ಈಗಿನ ಮತ್ತು ಇಲ್ಲಿನ ನಮ್ಮ ಬದುಕಿನ ಕಾಲದೇಶಗಳಿಗೆ ಮಾತ್ರ ಪರಿಮಿತವಾದದ್ದಲ್ಲವೆಂದು ಭೈರಪ್ಪನವರು ವಾದಿಸುತ್ತಾರೆ. ಕಡೆಯ ಪಕ್ಷ ಇದನ್ನೊಂದು ಸಾಧನೀಯ ಪೂರ್ವಸಿದ್ದಾಂತವೆಂದು ಕೂಡಲೇ ಒಪ್ಪಿಕೊಳ್ಳಬಹುದು. ಅಷ್ಟೇ ಅಲ್ಲದೆ ಭೈರಪ್ಪನವರ ಈ ಮೂಲ ಸಿದ್ಧಾಂತದ ಸಾಕ್ಷಾತ್ಕಾರವು ಒಪ್ಪಿಗೆಯಾಗುವಂತೆ ಇಲ್ಲ; ಏಕೆಂದರೆ, ಅವರು ನಮ್ಮ ಆಧ್ಯಾತ್ಮಿಕ ಮೂಲಗಳ ಅರಿವನ್ನೂ ಮತ್ತು ಲೌಕಿಕ ಘಟನೆಗಳ ಪರಿಣಾಮಗಳನ್ನೂ ನಮ್ಮ ಪ್ರಜ್ಞೆಯಲ್ಲಿನ ಆವಿಷ್ಕಾರದಂತಲ್ಲದೆ ಅದಕ್ಕೊಂದು ಸಾಧಾರಣ ಸಹಯೋಗವೆಂಬಂತೆ ನಡೆಸಿಕೊಳ್ಳುತ್ತಾರೆ. ಅರಿವಿನ ವ್ಯಾಪ್ತಿ ನೇರವಾಗಿ ಆಳಕ್ಕಿಳಿಯದೆ ಅಡ್ಡಗಲವಾಗಿ ಹರಡಿಕೊಳ್ಳುತ್ತದೆ. ನಾವು ಬ್ಲೇಕ್ ಅನ್ನು ನೆನಪು ಮಾಡಿಕೊಳ್ಳುತ್ತೇವೆ :
To see a world in a grain of sand
AndHeeaven in a wild flower ;
Hold infinity in the palm of your hand
Apd cternity in an hour.
ಮರಳ ಕಣವೊಂದರಲಿ ಜಗವ ನೋಡುವುದಕ್ಕೆ
ಕಾಡುಹೂ ಒಂದರಲಿ ಸ್ವರ್ಗ ಕಾಣುವುದಕ್ಕೆ ;
ಅನಂತತೆಯನಂಗಯ್ಯಲಿ ನೀನು ಹಿಡಿಯುವುದಕ್ಕೆ
ಒಂದೇ ಕ್ಷಣದಲ್ಲಿ ನಿತ್ಯತೆಯ ಕಾಣಲಿಕ್ಕೆ.
ಹಾಗೆಯೇ ಮ್ಯಾಕ್‌ಬೆತ್ ನಾಟಕದಲ್ಲಿ ಮ್ಯಾಕ್‌ಬೆತ್ ಇಡುವ ಪ್ರತಿಯೊಂದು ಹೆಜ್ಜೆಯೂ, ಆತನ ಪ್ರಜ್ಞೆಯ ಮೇಲೆ ನೆರಳನ್ನು ಚೆಲ್ಲುವ ಪ್ರತಿಯೊಂದು ಆಲೋಚನೆಯೂ ಅತನ ಅನಂತವಿಧಿಯತ್ತಣ ಬಾಗಿಲನ್ನು ತೆರೆಯುತ್ತದೆ ಅಥವಾ ಮುತ್ತವೆಯಲ್ಲದೆ ; ಆ ಸತ್ಯದ ಅರಿವು, ನಾಟಕದಲ್ಲಿನ ಇತರ ಪಾತ್ರಗಳಿಗಿಂತ ಹೆಚ್ಚಾಗಿ ಮ್ಯಾಕ್‌ಬೆತ್‌ನಿಗೆ ಘನವಾಗಿದೆ. ಆದ್ದರಿಂದಲೇ ಆ ನಾಟಕ, ನಮಗೆ ಅಷ್ಟೊಂದು ಸಾಂದ್ರಾನುಭವದ್ದಾಗುತ್ತದೆ.
The fierce dispute,
Betwixt damnation and impassioned clay
Must I buron through.
ಈ ಉಗ್ರ ವಾಗ್ಯುದ್ಧ :
ಅಧೋಗತಿಗೂ ಭಾವೋದ್ರಿಕ್ತ ಮೃತ್ತಿಕೆಗೂ ನಡುವೆ
ನಾ ಸುತುತ್ತ ಸಾಗಬೇಕು.
ಷೇಕ್ಸ್‌ಪಿಯರನ ಮ್ಯಾಕ್‌ಬೆತ್ ಅನುಭವಸಿದ್ಧವಾದದ್ದಕ್ಕೂ ಮತ್ತು ಬೌದ್ಧಿಕವಾಗಿ ಗ್ರಹಿಸಿದ್ದರೂ ಅಂದರೆ, ಕಲೆಯ ನಿಜವಾದ ಆಧ್ಯಾತ್ಮಿಕತೆಗೂ ಕಲ್ಪಿತವಾದದ್ದಕ್ಕೂ ಇರುವ ಮತ್ತೂ ಒಂದು ವ್ಯತ್ಯಾಸವನ್ನು ಸ್ಪಷ್ಟ ಪಡಿಸುತ್ತದೆ. ಭೈರಪ್ಪನವರು ತಮ್ಮ ಹಿನ್ನುಡಿಯಲ್ಲಿ ಒಂದು ತೆರನ ಗೂಢಸಂವೇದನೆಯ ಬಗ್ಗೆ ಹೇಳುತ್ತಾರಾದರೂ, ಸೂಚನೆ ಗಳನ್ನೊದಗಿಸಿದ ಕೆಲವನ್ನು ಬಿಟ್ಟರೆ ಸಮಸ್ಯೆಗಳ ಶ್ರೇಣಿಯನ್ನೇ ಕೊಡುತ್ತಾರೆ. ಹಿಂದೂವಾದದ ಕರ್ಮದಲ್ಲಿರುವ ನಂಬಿಕೆಯಷ್ಟೇ ಪ್ರಮುಖವಾದ, ಮಾಯೆಯ ಬಗೆಗಿನ ನಂಬಿಕೆಯ ಬಗ್ಗೆ ಅವರು ತಮ್ಮ ಹಿನ್ನುಡಿಯಲ್ಲೆಲ್ಲೂ ಪ್ರಸ್ತಾಪಿಸದಿರುವುದು
5
ಮಹತ್ವದ ಅಂಶ. ಆತ್ಮರಕ್ಷಣೆಗಾಗಿ, ಸುಸ್ಪಷ್ಟ ಮೌಲ್ಯಗಳನ್ನು ಹೊಂದಿದ್ದ ಹಿಂದಿನ ಯುಗಗಳು ಬದುಕಿನ ರಹಸ್ಯಗಳನ್ನು ನಿಶ್ಚಯಿಸಿಕೊಂಡಿದ್ದವೆಂದು ಅವರು ಅಲೋಚಿಸಿರುವುದಾಗಿ ತೋರುತ್ತದೆ. ಆ ಬಗ್ಗೆ ನನಗೆ ಸಂಶಯ, ಬ್ರಹ್ಮವೇ ಪರಮ ಸತ್ಯವೆಂದರಿತುಕೊಂಡಿರುವ ಸಂತರಿಗಲ್ಲದೆ, ಹಿಂದುವೊಬ್ಬನಿಗೆ ಮಾಯೆ ಎಂಬುದು ಆತ್ಯಂತಿಕವಾಗಿ ಅರಿವಿಗೆ ನಿಲುಕದ್ದೆಂಬ ತಥ್ಯವನ್ನು ಗಣನೆಗೆ ತರುವುದರಿಂದಲೇ ಬದುಕಿನ ಗೂಢತೆಯ ಸಂವೇದನೆ ಹುಟ್ಟುತ್ತದೆ. ನಮ್ಮ ಜೀವನದ ಸಾಂಪ್ರದಾಯಿಕ ಮಾರ್ಗ, ಅದರ ಮೂಲಾಧಾರವನ್ನು (ಉಪಪತ್ತಿಯನ್ನು) ನಾನು ತಿಳಿದ ಹಾಗೆ, ದಕ್ಷಿಣಾಮೂರ್ತಿಯ ದಯೆಯಿಂದ ನಾವದನ್ನು ಮೀರಿ ಮಾಯೆಯೆಂದು ಅರಿತುಕೊಳ್ಳುವವರೆಗೆ, ಅವುಗಳೊಡನೆ ಶಾಂತಿಯುತ ಸಹಬಾಳ್ವೆಯನ್ನು ಮಾಡಲು ನಮ್ಮನ್ನು ಸಮರ್ಥರಾಗುವಂತೆ ಮಾಡಲುದ್ದೇಶಿತವಾಗಿದೆ. ತಾವು ಕೆಲವು ಪಾತ್ರಗಳ ಹಾಗೂ ಘಟನೆಗಳ ಒಗಟು (ಸಮಸ್ಯೆ) ಗಳನ್ನು ಸೃಷ್ಟಿಸಿದರೆ, ಹಿಂದೂ ಸಂಪ್ರದಾಯಗಳ ಜ್ಞಾನವುಳ್ಳ ಓದುಗರು, ಎರಡಕ್ಕೆರಡನ್ನು ಸೇರಿಸಿದರೆ ನಾಲ್ಕೆಂದು, ಆ ಕಾದಂಬರಿಯ ವ್ಯಾಪ್ತಿಗೆ ಮತ್ತೊಂದಷ್ಟನ್ನು ಸೇರಿಸಿಕೊಳ್ಳುತ್ತಾರೆಂಬ ನಂಬಿಕೆ ಭೈರಪ್ಪನವರಿಗಿರುವಂತಿದೆ. ಹಾಗಾಗಿ ಜೋಯಿಸರು ಕಬ್ಬಿಣದ ಬಟ್ಟಲ ತುಂಬ ಎಳ್ಳೆಣ್ಣೆಯನ್ನೂ, ಕುಂಬಳ ಕಾಯನ್ನೂ ದಾನ ತೆಗೆದುಕೊಂಡಾಗ ಎಳ್ಳೆಣ್ಣೆಯು ಶನಿಗೆ ಪವಿತ್ರವೆಂದೂ, ಕಬ್ಬಿಣವು ಪಾಪಕರ್ಮಗಳನ್ನೂ, ಕುಂಬಳಕಾಯಿಯು ಆತ್ಮದೂರವಾದ ದೇಹವನ್ನು ಪ್ರತಿನಿಧಿಸುವುದೆಂದೂ (ಈ ವಿವರಣೆಗಳಿಗೆ ಮದ್ರಾಸಿನ ಪ್ರೊ. ರಾಮಸ್ವಾಮಿಯವರಿಗೆ ನಾನು ಆಭಾರಿ) ಬಲ್ಲ ಓದುಗರು ಕೂಡಲೇ ಆ ಎರಡು ಘಟನೆಗಳಿಗಿರುವ ಸಂಬಂಧವನ್ನು ಕಂಡುಕೊಳ್ಳುತ್ತಾರೆ. ಒಂದು ಸಾಹಿತ್ಯಕೃತಿಯ ಜವಾಬ್ದಾರಿ ಕೇವಲ ಕಲೆಗೆ ಹೊರತಾದ ಓದುಗರ ನಂಬಿಕೆಗಳನ್ನು ಆಶ್ರಯಿಸುವಂತೆ ಉತ್ತೇಜನವನ್ನೊದಗಿಸುವುದರಲ್ಲಿ ಮಾತ್ರ ಸೇರಿಕೊಂಡಿದೆಯೋ ಅಥವಾ ಅದು ನಮ್ಮ ನಂಬಿಕೆಗಳನ್ನು ಲಕ್ಷ್ಮಮಾಡದೆ, ಕೇವಲ ಸಂಕೇತಗಳೆಂದು ಪ್ರತಿಕ್ರಿಯೆ ತೋರಿಸಬಹುದಾದ ಸಂಕೇತಗಳ ರೂಪದಲ್ಲಿ ನಂಬಿಕೆಗಳನ್ನು ಪುನಃ ಸೃಷ್ಟಿಸುವುದೊ ಎಂಬುದು ನಿಜವಾಗಿ ವಾಸ್ತವವಾದ ವಿವಾದಾಸ್ಪದ ಸಂಗತಿ. ಅದರಂತೆ ಮ್ಯಾಕ್‌ಬೆತ್ ಡಂಕನ್ನನ್ನು ಕೊಂದ ಬಳಿಕ ಡಂಕನ್ನ ಕುದುರೆಗಳು ಒಂದನ್ನೊಂದು ತಿಂದವೆಂದು ವರದಿಯಾಗಿದೆ. ಪ್ರಾಣಿಗಳ ಶ್ರೇಣಿಯಲ್ಲಿ ಮನುಷ್ಯ ಜೀವಿಗಳು ಆಕ್ರಮಿಸಿಕೊಂಡಿರುವ ಪ್ರಮುಖ ಸ್ಥಾನವನ್ನು ಗಮನದಲ್ಲಿರಿಸಿಕೊಂಡು, ಮನುಷ್ಯರೇನೇ ಮಾಡಿದರೂ ಅವರನ್ನುಳಿದ ಸೃಷ್ಟಿಯಲ್ಲಿ ಕೂಡ ಜಾಗತಿಕ ಪ್ರತಿಸ್ಪಂದನ ಉಂಟಾಗುತ್ತದೆಯೆಂದು ಷೇಕ್ಸ್‌ಪಿಯರನ ಸಮಕಾಲೀನರು ನಂಬಿಕೊಂಡಿದ್ದರು. ಮ್ಯಾಕ್‌ಬೆತ್ ಮಾಡಿದ ಕೃತ್ಯದ ಅಸ್ವಾಭಾವಿಕತೆ ಬೇರೆ ಕಡೆಗಳಲ್ಲೂ ಅಸ್ವಾಭಾವಿಕ ಘಟನೆಗಳ ಪರಂಪರೆಯನ್ನೇ ಉಂಟುಮಾಡುತ್ತದೆ. ಕುದುರೆಗಳು ಒಂದನ್ನೊಂದು ತಿನ್ನುವುದು ಈ ನಂಬಿಕೆಯ ಸಂಕೇತವಾದ್ದರಿಂದ ನಾವು ಅದನ್ನೊಪ್ಪುತ್ತೇವೆ; ಏಕೆಂದರೆ, ಚಿತ್ರಿತವಾಗಿರುವ ಮನುಷ್ಯಾವಸ್ಥೆಯ ಸಂದರ್ಭಕ್ಕೆ ಹಾಗೂ ನಾಟಕಕಾರರು ವ್ಯವಸ್ಥೆ ಗೊಳಿಸಿರುವ ಪ್ರಕೃತಿಯ ಸ್ವಭಾವಕ್ಕೆ ಅದು ಉಚಿತವಾಗಿದೆ. ಲಿಯರ್ ನಾಟಕದ ಬಿರುಗಾಳಿಯೂ ಹಾಗೇ ಸಂದರ್ಭೋಚಿತವಾಗಿದೆ. ಭೈರಪ್ಪನವರ ಕಾದಂಬರಿಯಲ್ಲಿ ಬರುವ ದಾನ ಸ್ವೀಕಾರಕ್ಕೂ, ಮಗುವಿನ ಹುಟ್ಟಿಗೂ ಅಂಥ ಸ್ಪಷ್ಟವಾದ ಕೂಡಲೇ ಅರಿವಾಗಬಲ್ಲ ಹೊಂದಾಣಿಕೆಯಿಲ್ಲ. ಅವರು ಅದನ್ನು ನಮ್ಮ ಪರಂಪರಾಗತವಾದ ನಂಬಿಕೆಯ ಹಿನ್ನೆಲೆಯಿಂದ ತುಂಬಿಕೊಳ್ಳಬೇಕೆಂದು ಹೇಳುತ್ತಾರೆ. ನಾವು ಹಾಗೆ ಮಾಡಲು ನಿರಾಕರಿಸಿದಲ್ಲಿ ಅವರು, (ಪರಂಪರೆಯ) ಸ್ವಾಮ್ಯ ತಪ್ಪಿದ ಹಿಂದುಗಳಂತೆ ಕೋಪಕ್ಕಿಂತ ಹೆಚ್ಚಾದ ದುಃಖದಿಂದ ನಮ್ಮತ್ತ ತಲೆದೂಗುತ್ತಾರೆ.
ಶ್ರೀಯುತ ಭೈರಪ್ಪನವರ ಕಾದಂಬರಿಯನ್ನು ನಾನು ಸುದೀರ್ಘವಾಗಿ ಪರಿಶೀಲಿಸಿರುವುದೇಕೆಂದರೆ ಅವರು, ಇಂದು ನಮ್ಮ ದೇಶದ ಸಂಸ್ಕೃತಿ ಮತ್ತು ಸಾಹಿತ್ಯದ ಬಗ್ಗೆ ನಮ್ಮ ಬದುಕಿನ ಮೂಲಭೂತ ತತ್ವಗಳ ಬಗ್ಗೆ ಗಾಢವಾದ ಕಳಕಳಿಯನ್ನಿಟ್ಟು ಕೊಂಡಿರುವ ಚಿಂತನಶೀಲ ಬರಹಗಾರರು ಎಂಬುದು. ಕೃತಿರಚನೆಯ ಮೂಲಕ ಶ್ರೀಯುತರು ಸಾಧಿಸಲು ಯತ್ನಿಸುತ್ತಿರುವ ಮೂಲೋದ್ದೇಶ ಘನವಾದದ್ದು ; ಅದಕ್ಕೆ ನನ್ನ ತಾತ್ವಿಕವಾದ ಒಪ್ಪಿಗೆಯಿದೆ. ಅವರ ಪ್ರತ್ಯಕ್ಷ ಕೃತಿಯ ಬಗ್ಗೆ ನಾನೇನಾದರೂ ನಿರಾಶೆಯನ್ನು ವ್ಯಕ್ತಪಡಿಸಿದ್ದರೆ ಅದನ್ನು ನಾನು ಅವರ ಕೃತಿಗೆ ಕೊಟ್ಟಿರುವ ಪ್ರಾಮುಖ್ಯದ ಪ್ರಮಾಣವೆಂದೂ ಮತ್ತು ಅವರ ಸೃಷ್ಟಿಶಕ್ತಿಯ ಬಗ್ಗೆ ನನಗಿರುವ ಗೌರವದ ಸೂಚನೆಯೆಂದೂ ತಿಳಿಯಲಾಗುವುದೆಂದು ನಾನು ನಂಬಿದ್ದೇನೆ.
[Indian Writing Today ತ್ರೈಮಾಸಿಕದಲ್ಲಿ ಪ್ರಕಟವಾದ ಇಂಗ್ಲಿಷ್ ಲೇಖನದ ಅನುವಾದ. ಆನುವಾದಕ : ರಾಮದಾಸ ] .
ಯುಜಿನ್ ಐನೆಸ್ಕೊ
ರಂಗಭೂಮಿ
ರಂಗಭೂಮಿ ಪರಿಶುದ್ಧ ಸ್ಥಿತಿಯಲ್ಲಿ ಹೇಗಿರಬೇಕೆಂಬುದಕ್ಕೆ ಯಾವುದೊಂದು ಕ್ರೀಡಾ ಸ್ಪರ್ಧೆಯೇ ಮಾದರಿ: ಅದು ಕೇವಲ ಸಂಘರ್ಷ, ದ್ವಂದ್ವಗಳ ಅನಾವಶ್ಯಕ ಟಗರು ಕಾಳಗ, ಪಕ್ಷಪ್ರತಿಪಕ್ಷಗಳ ನಿಷ್ಕಾರಣ ಉದ್ರಿಕ್ತ ಹೋರಾಟ.
ಮುಚ್ಚಿದ ಕಿಟಕಿ
ಕೆ. ಎಸ್. ನರಸಿಂಹಸ್ವಾಮಿ
ಮುಚ್ಚಿದ ಕಿಟಕಿ
ನೀನು ನೋಡುತ್ತಿರುವ ಆ ಗೋಡೆಯಲ್ಲೊಂದು
ಕಿಟಕಿಯಿರುವುದೆ ನನಗೆ ಮೊದಲು ತಿಳಿದಿರಲಿಲ್ಲ.
ಬಳಿಕ ಕಂಡದ್ದು : ಕೆಮ್ಮಣ್ಣು ಮೆತ್ತಿದ ಕಟ್ಟು,
ಒಡೆದ ಗಾಜಿನ ಮೇಲೆ ವರ್ಷಾಂತರದ ದೂಳು.
ನಾನು ಈ ಮನೆಗೆ ಬಂದಾಗಲೇ ಆ ಕಿಟಕಿ
ಮುಚ್ಚಿತ್ತು… ನಾನು ಕೇಳಿದ್ದಕ್ಕೆ ನೆರೆಯವನು
ಏನೆಂದ ಗೊತ್ತೆ?-“ಈ ಮನೆಯ ಕಟ್ಟಿಸಿದವನೆ
ಇಲ್ಲಿದ್ದ ಹಿಂದೆ ; ಬಲು ಒಳ್ಳೆಯವ, ದೃಢಕಾಯ.
ಇದ್ದಕಿದ್ದಂತವನು ಒಂದು ದಿನ ಕುಳಿತಲ್ಲೆ
ಸತ್ತ ಸಮ್ಮನೆ ; ಕೆಟ್ಟ ನಕ್ಷತ್ರದಲ್ಲವನು
ಸತ್ತದ್ದು ಸುಳ್ಳಲ್ಲ. ಜೀವ ಹೋದದ್ದೇನೇ
ಆ ಕಿಟಕಿಯಿಂದೆದು ಕೆಲವರ ಅಭಿಪ್ರಾಯ.
ತಂತಿ ತಲಪಿದ್ದೆ ತಡ, ಅಳಿಯ ಹದ್ದಿನ ಹಾಗೆ
ಆಕಾಶದಿಂದಿಳಿದ, ಬಂಜೆ ಹೆಂಡತಿಯೊಡನೆ ;
ತಾನೂ ಸ್ವಲ್ಪ ಅತ್ತ, ಮೆರವಣಿಗೆ ಹೊರಡಿಸಿದ,
ಕಟ್ಟಿಗೆಗೆ ಕಿಚ್ಚಿಟ್ಟು ನೆಟ್ಟಗಿಲ್ಲಿಗೆ ಬಂದ;
ಸತ್ತ ಕೋಣೆಯ ಒಂಟಿ ಕಿಟಕಿಯನ್ನೆದುರಿಸಿದ;
(ಆಸೆ ತೀರದೆ ಸತ್ತ ಮುದುಕ ಬರುವನು ಮತ್ತೆ
ಆ ಕಿಟಕಿಯಿಂದ ಈ ಮನೆಗೆಂದು ವಾಹಕರು
ಸುಡುಗಾಡಿನಲ್ಲಿ ಹೇಳಿದ್ದನ್ನು ಕೇಳಿದ್ದ);
ಅದನ್ನು ಮುಚ್ಚಿ, ಮೆತ್ತಿ, ಮೊಳೆಹೊಡೆದು, ಒದ್ದು
ಅಧ್ವಾನಮಾಡಿ ಗುಡುಗುತ್ತ ಊರಿಗೆ ನಡೆದೆ;
ಸತ್ತಕೋಣೆಯ ಬಾಗಿಲಿದ್ದಂತೆಯೇ ಇತ್ತು;
ಮನೆಯ ಮುಂಬಾಗಿಲೂ ಬಾಡಿಗೆಗೆ ತೆರೆದಿತ್ತು.
ಮಕ್ಕಳೊಂದಿಗೆ ನೀನು ಈ ಮನೆಗೆ ಬರುವುದೆ ?
ನಿನ್ನ ಗ್ರಹಚಾರ ! ನಿನ್ನಿಷ್ಟ. ಹೋಗಲಿ ಕಡೆಗೆ
ಇಷ್ಟಾದರೂ ಮಾಡು : ನಿನಗೆ ಬೇಕಾದವರು
ಆ ಕಿಟಕಿಯನ್ನು ಮುಟ್ಟದೆ ಹಾಗೆ ನೋಡಿಕೋ.”
ಹೆಂಡತಿಯ ಗಂಟಲಿಗೆ ಹೆದರಿ ನಡೆಯುವ ಇವನ
ಹೇಳಿಕೆಗೆ ನಗೆ ಬಂತು. ಈ ಕಿವಿಯಿಂದ ಕೇಳಿ
ಆ ಕಿವಿಯಿಂದ ಬಿಟ್ಟೆ. ಅನುಮಾನ ಬಂದದ್ದು
ಇವನ ಮೇಲೆಯೆ ಹೊರತು, ಸತ್ತವನ ಮೇಲಲ್ಲ.
ಸತ್ತವನು ಮತ್ತೆ ಬಂದರೆ ಇಲ್ಲಿ ಸ್ಥಳವಿಲ್ಲ:
ಈಗಲೇ ನಾವು ಹನ್ನೊಂದು, ತೊಟ್ಟಿಲು ಸೇರಿ.
ಸತ್ತವನು ಬರುವುದೂ ಇಲ್ಲ, ಬಂದರೆ ಕೂಡ,
ಕಿಟಕಿಯಿಂದಿಳಿದು ಬರುವಷ್ಟು ಸಣ್ಣವನಲ್ಲ.
ಇದು ಮನೆಯೇ ಹೊರತು ಅಂಗಡಿಯಲ್ಲ. ನಿತ್ಯವೂ
ನಾನು ಎಲ್ಲೋ ಹೋಗಿ ದುಡಿದು ತಂದರೆ ತಾನೆ
ಇವಳು ಅಟ್ಟಿಕ್ಕುವುದು ?-ನಮ್ಮ ಓಡಾಟಕ್ಕೆ
ಒಂದು ಬಾಗಿಲು ಸಾಕು. ಬೇಡ ಮುಚ್ಚಿದ ಕಿಟಕಿ.
ಸಾಲದೆಂದರೆ, ಬೇರೆ ಕಿಟಕಿಗಳು ಇವೆಯಲ್ಲ,
ತೆರೆಯಬಹುದಲ್ಲ-ಗುಬ್ಬಿಗಳ ಸಂಚಾರಕ್ಕೆ
ಬೀದಿಯ ಪ್ರಚಾರಕ್ಕೆ, ಋತುಗಳುಪಚಾರಕ್ಕೆ,
ಬಾಗಿಲರಿಯ ದ ಸಣ್ಣ ಪುಟ್ಟ ವ್ಯವಹಾರಕ್ಕೆ !
ನಮಗೆ ಬಾಗಿಲಿನಿಂದ ಬಂದದ್ದೆ ಸಾಲದು,
ಕಿಟಕಿಯಿಂದಲು ಬೇರೆ ಇನ್ನಷ್ಟು ಬರಬೇಕು !-
ಇಲ್ಲೊಂದು ತತ್ವವಡಗಿರುವಂತೆ ತೋರುವುದು.
ಮುಚ್ಚಿದ ಕಿಟಕಿಯಿಂದ ಕೇಳಿಸುವುದೀಗಲೂ
ನೆರೆಯವನ ಹೆಂಡತಿಯ ತಡೆಯಿರದ ಗಂಟಲು.
ಮುಚ್ಚಿದ ಕಿಟಕಿಯನ್ನೆ ನೀನು ನೋಡುತ್ತಿರುವೆ ;
ಯಾರು ಮುಚ್ಚಿದರು ಏಕೆಂದು ಕೇಳುತ್ತಿರುವೆ.
ಈಗ ನನ್ನಲ್ಲಿಲ್ಲ ಯಾವುದೆ ಸಮಾಧಾನ.
ಇಲ್ಲುಂಟು ಅಗೆವ ಬುದ್ದಿಗನಂತ ಅವಕಾಶ;
ಹೊಳೆದದ್ದೆ ತಾರೆ, ಉಳಿದದ್ದು ಆಕಾಶ.
.
ದೇವರ ದಾಸಿಮಯ್ಯ
ವಚನಗಳು
ಎನ್ನೊಡಲಾದರೆ ಎನ್ನಿಚ್ಛೆಯಲ್ಲಿರದೆ
ನಿನ್ನೊಡಲಾದರೆ ನಿನ್ನಿಚ್ಚೆಯಲ್ಲಿರದೆ
ಅದು ಎನ್ನೊಡಲೂ ಅಲ್ಲ ನಿನ್ನೊಡಲೂ ಅಲ್ಲ
ಅದು ನೀ ಮಾಡಿದ
ಜಗದ ಬಿನ್ನಾಣದೊಡಲು ಕಾಣಾ ರಾಮನಾಥ
ಎಣ್ಣೆಯಿದ್ದು ಎಳ್ಳು ನೆನೆಯದ ಭೇದವ
ಕಿಚ್ಚಿದ್ದು ಕಲ್ಲು ಸಿಡಿಯದ ಭೇದವ
ಕಾಮವಿರ್ದು ಕನ್ನೆಯ(ದ)ನನುಭವಿಸದ ಭೇದವ
ಪರವಿದ್ದು ಪ್ರಾಣನ ಪ್ರಕೃತಿಯು ಹರಿಯದ ಭೇದವ
ನರರೆತ್ತ ಬಲ್ಲರೈ ರಾಮನಾಥ
.
ಪ್ರತಿ-ಪ್ರತಿಕ್ರಿಯೆ
ಎಚ್. ಎಸ್. ಬಿಳಿಗಿರಿ
ಒಂದು ಪ್ರತಿ-ಪ್ರತಿಕ್ರಿಯೆ
“ಸಾಕ್ಷಿ”ಯ ನಾಲ್ಕನೆಯ ಸಂಚಿಕೆಯಲ್ಲಿ ‘ಗುರು, ಲಘು, ಅಕ್ಷರ’ ಎಂಬ ನನ್ನ ಲೇಖನವೊಂದು ಪ್ರಕಟವಾಗಿತ್ತು. ಆ ಲೇಖನದಲ್ಲಿನ ಕೆಲವು ಮಾತುಗಳಿಗೆ ಸಂಬಂಧಿಸಿದಂತೆ “ಸಾಕ್ಷಿ’ಯ ಏಳನೆಯ ಸಂಚಿಕೆಯಲ್ಲಿ ಶ್ರೀ ಶಿವರಾಮ ಐತಾಳರ ‘ಸ್ಥೂಲ ಪ್ರತಿಕ್ರಿಯೆ’ ಪ್ರಕಟವಾಗಿದೆ. ಶ್ರೀ ಐತಾಳರು ತಮ್ಮ ಲೇಖನದ ಕಡೆಯಲ್ಲಿ ‘ಶ್ರೀ ಬಿಳಿಗಿರಿಯವರ ಲೇಖನ ವಿಚಾರ ಪ್ರಚೋದಕವಾಗಿದೆ….’ ಎಂದಿದ್ದಾರೆ. ಸುಮಾರು ಏಳು ಪುಟಗಳಷ್ಟಿ ರುವ ನನ್ನ ಲೇಖನ ಸುಮಾರು ಹತ್ತು ಪುಟಗಳಷ್ಟಿರುವ ಪ್ರತಿಕ್ರಿಯೆಗಳನ್ನು ಬರೆಯುವಂತೆ ಅವರನ್ನು ಪ್ರಚೋದಿಸಿದೆ. ಇದು ನನಗೆ ಹೆಮ್ಮೆಯನ್ನೇನೋ ಉಂಟುಮಾಡಿದ್ದರೂ, ಅವರು ವ್ಯಕ್ತಪಡಿಸಿರುವ ಅನೇಕ ವಿಚಾರಗಳಿಗೂ ನನ್ನ ಲೇಖನಕ್ಕೂ ನೇರವಾದ ಸಂಬಂಧವಿಲ್ಲವಾಗಿ ಆ ಹೆಮ್ಮೆಗೆ ಧಕ್ಕೆ ತಗುಲಿದಂತಾಗಿದೆ.
ಶ್ರೀಮಾನ್ ಐತಾಳರ ಲೇಖನದಲ್ಲಿ ಅನೇಕ ವಿಚಾರಗಳಿವೆ. ಅವುಗಳಲ್ಲಿ ಹಲವು ಸಾಧುವಾದವುಗಳು; ಕೆಲವು ಅಷ್ಟೇನೂ ಸಾಧುವಲ್ಲದವುಗಳು. ಸಾಧುವಾದ ವಿಚಾರಗಳಿಂದ ನನ್ನ ಲೇಖನಕ್ಕೆ ಯಾವ ರೀತಿಯ ಬಾಧಕವೂ ಇಲ್ಲ. ಅಷ್ಟೇನೂ ಸಾಧುವಲ್ಲದ ವಿಚಾರಗಳಿಂದ ನನ್ನ ಲೇಖನಕ್ಕೇ ಏಕೆ ಯಾರ ಲೇಖನಕ್ಕೂ ಬಾಧಕವಿಲ್ಲ! ಆದುದರಿಂದ ಅವರು ಹೇಳಿರುವ ಮಾತುಗಳಲ್ಲಿ ನಾನು ಹೇಳಿರುವ ಮಾತುಗಳಿಗೆ ವಿರೋಧವಾಗಿರುವವುಗಳನ್ನು ಮಾತ್ರ ಈ ಟಿಪ್ಪಣಿಯಲ್ಲಿ ಗಮನಿಸಿದ್ದೇನೆ.
ಮೂರನೆಯ ಪ್ರತಿಕ್ರಿಯೆಯಲ್ಲಿ ಅವರು ‘ವೈಯಾಕರಣರು ವ್ಯಂಜನಗಳಿಗೆ ಕೊಟ್ಟಿರುವ ಅರ್ಧಮಾತ್ರೆಯ ಬೆಲೆಯ ವಿಚಾರವಾಗಿ ಬರೆದಿದ್ದಾರೆ. ವ್ಯಂಜನದ ಉಚ್ಛಾರಣೆಗೆ ಬೇಕಾಗುವ ಕಾಲದ ಬೆಲೆ ಅರ್ಧಮಾತ್ರೆ ಎಂಬ ವೈಯಾಕರಣರ ಮಾತನ್ನು ‘ಹೊಡೆದು ಹಾಕಬೇಕು ಎಂಬುದು ಅವರ ನಿರ್ಧಾರ. ಈ ನಿರ್ಧಾರವನ್ನು ಮಾಡಿಕೊಂಡ ಮೇಲೆ ವೈಯಾಕರಣರು ವ್ಯಂಜನಗಳಿಗೆ ಅರ್ಧಮಾತ್ರೆಯ ಬೆಲೆಯನ್ನು ಯಾಕೆ ಕೊಟ್ಟಿದ್ದಿರಬಹುದು ಎಂಬ ಸಮಸ್ಯೆ ಅವರಿಗೆ ಎದುರಾಗುತ್ತದೆ. ಆದುದರಿಂದ ಅವರು ಕೆಲವು ಊಹೆಗಳನ್ನು ಮಾಡಿದ್ದಾರೆ. ಈ ಊಹೆಗಳು ಸರಿಯೇ ತಪ್ಪೇ ಎಂದು ಚರ್ಚಿಸುವ ಬದಲು, ಈ ಊಹೆಗಳಿಗೆ ಆಧಾರವಾದ ಅವರ ಮೂಲ ನಿರ್ಧಾರವೇ ತಪ್ಪು ಎಂಬುದನ್ನು ತೋರಿಸಿದರೆ ನನ್ನ ಕೆಲಸ ತೀರಿದಂತೆ.
“ ‘ಮಾತ್ರೆ’ಯ ಕಲ್ಪನೆಯನ್ನು ವ್ಯಂಜನಗಳಿಗೂ ಅನ್ವಯಿಸಿದ್ದು ಉಚಿತವಾಗಲಿಲ್ಲವೇನೋ” ಎಂಬ ಸಂದೇಹವು ನನ್ನ ಲೇಖನದಲ್ಲಿಯೇ ವ್ಯಕ್ತವಾಗಿದೆ. ಶ್ರೀಮಾನ್ ಐತಾಳರ ಲೇಖನವನ್ನು ಓದಿದ ಮೇಲೂ ಆ ಸಂದೇಹ ಸಂದೇಹವಾಗಿಯೇ ಉಳಿದಿದೆಯೇ ಹೊರತು, ಅವರಂತೆ ‘ಹೊಡೆದು ಹಾಕಬೇಕು ಎಂಬ ನಿರ್ಧಾರಕ್ಕೆ ಬರಲು ಆಗಿಲ್ಲ. ಏಕೆಂದರೆ ಆ ನಿರ್ಧಾರಕ್ಕೆ ಕೊಟ್ಟಿರುವ ಕಾರಣ ವಿಚಿತ್ರವಾಗಿದೆ. ‘ವ್ಯಂಜನವನ್ನು ವ್ಯಂಜನಮಾತ್ರವಾಗಿ ಉಚ್ಚರಿಸಲಾಗದು’ ಎಂಬ ಮಾತಿನ ಮೇಲೆ (ಈ ಮಾತು ವೈಯಾಕರಣರದೇ ಅಲ್ಲವೇ ಎಂಬುದು ಅಪ್ರಸ್ತುತ) ಅವರ ವಾದ ನಿಂತಿದೆ. ಈ ಮಾತನ್ನೊಪ್ಪುವುದು ಸಾಧ್ಯವಿಲ್ಲ. 1 ಆದರೆ ಒಪ್ಪಿಕೊಂಡು ಮುಂದುವರಿಯೋಣ. ವ್ಯಂಜನವನ್ನು ವ್ಯಂಜನಮಾತ್ರವಾಗಿ ಉಚ್ಚರಿಸಲಾಗದು ಎಂಬ ವಿಚಾರದಿಂದ, ವ್ಯಂಜನಗಳ ಉಚ್ಚಾರಣೆಗೆ ಕಾಲ ಬೇಕಾಗಿಲ್ಲ ಎಂಬ ವಿಚಾರ ಹೇಗೆ ಹೊರಪಡುತ್ತದೆಯೋ ನನಗೆ ತಿಳಿಯದು. ಸ್ವತಂತ್ರವಾಗಿ ಉಚ್ಚಾರಣೆಗೊಂದು ಕಾಲ ತೆಗೆದುಕೊಳ್ಳದಿದ್ದರೂ, ಅಕ್ಷರಗಳ ಭಾಗವಾಗಿ ಉಚ್ಚಾರಣೆಗೊಳ್ಳಲು ವ್ಯಂಜನಗಳಿಗೆ ಕಾಲ ಬೇಕೇಬೇಕು ಎಂಬುದು ಸ್ವತಃಸಿದ್ಧವಲ್ಲವೇ? ಯಾವ ಕೆಲಸವೇ ಆಗಲಿ-ಸದ್ದನ್ನು ಮಾಡುವುದೂ ಒಂದು ಕೆಲಸ-ಅದನ್ನು ಮಾಡಲು ಕಾಲ ಬೇಕೇಬೇಕು.
ಒಪ್ಪಲು ಅಸಾಧ್ಯವಾದ, ಹಾಗೆ ಒಪ್ಪಿಕೊಂಡರೂ ತಮ್ಮ ನಿರ್ಧಾರಕ್ಕೆ ತಾರ್ಕಿಕ ಸಂಭಂಧವಿರದ ಒಂದು ಮಾತು ಅವರಿಗೆ ಆಧಾರವಾಗಿದೆ. ಈ ನಿರ್ಧಾರದ ಆಧಾರದ ಮೇಲೆ ಅವರ ಊಹೆಗಳು ಹಬ್ಬಿವೆ.
1 ಸ್ವರ ವ್ಯಜನಗಳ ನಿವೇಚನೆಗೆ ಇದೇ ಲೇಖಕನ ‘ಆಲೋಕ’ ಎಂಬ ಗ್ರಂಥವನ್ನು ನೋಡಬಹುದು. (ಪು. ೧೦೭-೧೦೮).
ವೈಯಾಕರಣರ ‘ಮಾತ್ರೆ’ ಎಂಬ ಶಬ್ದವೂ ಛಂದಶ್ಯಾಸ್ತ್ರಜ್ಞರ ‘ಮಾತ್ರೆ’ ಎಂಬ ಶಬ್ದವೂ ಬೇರೆ ಬೇರೆ ಅರ್ಥವುಳ್ಳವುಗಳು ಎಂಬುದು ಸ್ವಯಂ ವೇದ್ಯವಾಗುತ್ತದೆ. ಆದರೆ ಶ್ರೀಮಾನ್ ಐತಾಳರಿಗೆ ಹಾಗೆನ್ನಿಸುವುದಿಲ್ಲವಂತೆ. ವೈಯಾಕರಣರು ವ್ಯಂಜನಕ್ಕೆ ಅರ್ಧ ಮಾತ್ರೆಯ ಬೆಲೆಯನ್ನು ಕೊಟ್ಟಿರುವುದನ್ನು ಅವರೇ ಒಪ್ಪಿಕೊಂಡಿದ್ದಾರೆ. ವೈಯಾ ಕರಣರ ಮಾತು ಸರಿಯೇ ತಪ್ಪೇ ಎಂಬುದು ಬೇರೆ ವಿಷಯ. ವೈಯಾಕರಣರ ಮಾತನ್ನು ಒಪ್ಪಿಕೊಂಡು ಮುಂದುವರಿದರೆ ಕ ಎಂಬ ಅಕ್ಷರದ ಬೆಲೆ ಒಂದೂವರೆ ಮಾತ್ರೆಯೇ.1 ಛಂದಶ್ಯಾಸ್ತ್ರಜ್ಞರ ಮಾತನ್ನು ಅನುಸರಿಸಿದರೆ ಒಂದೇ ಮಾತ್ರೆ. ಇವರಿಬ್ಬರ ‘ಮಾತ್ರೆ”ಗಳು ಒಂದೇ ಆಗಿದ್ದರೆ ಈ ವ್ಯತ್ಯಾಸ ಹೇಗೆ ಕಂಡುಬರುತ್ತಿತ್ತು?
ನನ್ನ ಲೇಖನವನ್ನು ಬರೆದಂದಿನಿಂದಲೂ ನನ್ನನ್ನು ಕಾಡುತ್ತಿದ್ದ ಸಮಸ್ಯೆಯೊಂದಕ್ಕೆ ಉತ್ತರವೇನಾದರೂ ದೊರೆತೀತೆ ಎಂಬ ಆಸೆಯಿಂದ ಶ್ರೀಮಾನ್ ಐತಾಳರ ಪ್ರತಿಕ್ರಿಯೆಗಳನ್ನು ಓದಿ ನೋಡಿ ನಿರಾಶನಾದೆ. ಅವರಿಗೆ ಹೊಳೆಯದಿದ್ದ ಪ್ರಶ್ನೆಗೆ ಅವರ ಲೇಖನದಿಂದ ಉತ್ತರ ಬಯಸಿ ನಿರಾಶನಾದುದು ನನ್ನ ತಪ್ಪಷ್ಟೇ ಹೊರತು, ಅವರ ಲೇಖನದ್ದಲ್ಲ.
ಸಮಸ್ಯೆಯಿದು : ಸಂವೃತಾಕ್ಷರಗಳೂ (closed syllables) ದೀರ್ಘಸ್ವರಯುಕ್ತ ವಿವೃತಾಕ್ಷರಗಳೂ (open syllables) ಗುರುವೆನಿಸಿಕೊಳ್ಳುತ್ತವೆ ಎಂಬುದನ್ನೇನೋ ಒಪ್ಪಿಕೊಳ್ಳಬಹುದು. ಆದರೆ, ಹ್ರಸ್ವಸ್ವರಯುಕ್ತವಾದ ಸಂವೃತಾಕ್ಷರದ ಅಂತ್ಯವ್ಯಂಜನಕ್ಕಿರುವ ಬೆಲೆ, ಹ್ರಸ್ವಸ್ವರಯುಕ್ತವಾದ ಸಂವೃತಾಕ್ಷರದ ಆದಿವ್ಯಂಜನಕ್ಕಿರುವ ಬೆಲೆ, ಹ್ರಸ್ವಸ್ವರಯುಕ್ತವಾದ ವಿವೃತಾಕ್ಷರದ ಆದಿವ್ಯಂಜನಕ್ಕೆ ಏಕಿಲ್ಲ ?
ಕ ಎಂಬ ಅಕ್ಷರವನ್ನೂ ಅಕ್ ಎಂಬ ಅಕ್ಷರವನ್ನೂ ಹೋಲಿಸಿ ನೋಡೋಣ. ವೈಯಾಕರಣರ ಪ್ರಕಾರ ಎರಡು ಅಕ್ಷರಗಳಿಗೂ ಇರುವ ಬೆಲೆ ಒಂದೂವರೆ ಮಾತ್ರೆಯಷ್ಟೇ, ಆದರೆ ಕ ಎಂಬ ಅಕ್ಷರ ಲಘು; ಅಕ್ ಎಂಬ ಅಕ್ಷರ ಗುರು. ಈ ಎರಡು
1. ” ‘ಕ’ ಎಂಬುದು ಒಂದೂವರೆ ಮಾತ್ರೆ ಎಂದು ಯಾರೂ ಹೇಳಿರುವಂತೆ ನನಗೆ ತಿಳಿಯದು. ‘ಕಾರ್ತ್ಸ್ಯ’ ಒಟ್ಟು ಮೂರು ಮಾತ್ರೆಗಳು. ವ್ಯಂಜನಗಳನ್ನು ಲೆಕ್ಕಹಾಕಿ ಒಟ್ಟು ಐದು ಮಾತ್ರೆಗಳು ಎಂದು ಯಾರೂ ಹೇಳಿದ್ದು ನಾ ಕಾಣೆ. ಇವೆಲ್ಲ ನಮ್ಮ ಸ್ವಂತ ವೈಚಿತ್ರಗಳು” ಎಂದಿದ್ದಾರೆ ಶ್ರೀಮಾನ್ ಐತಾಳರು. ವ್ಯಂಜನಕ್ಕೆ ಅರ್ಧಮಾತ್ರೆ ಎಂದುಕೊಂಡು ಮುಂದುವರಿದರೆ “ಕ” ಎಂಬುದಕ್ಕೆ ಒಂದೂವರೆ ಮಾತ್ರೆ ಎಂದು ಹೇಳಲೇಬೇಕಾಗುತ್ತದೆ. ಈ ಪ್ರಾದೇಶಿಕ ಅಂಕಗಣಿತದನ್ನು ಯಾರೂ ಹೇಳಿಕೊಡಬೇಕಾಗಿಲ್ಲ. ಈ ಲೆಕ್ಕದ ಪ್ರಕಾರ ‘ಕಾರ್ತ್ಸ್ಯ’ ಎಂಬುದಕ್ಕೆ ಐದೂವರೆ ಮಾತ್ರೆಗಳು. ಲೆಕ್ಕಹಾಕುವಾಗ ಸ್ವಂತ ವೈಚಿತ್ರಗಳಿಗೆ ಅವಕಾಶವೆಲ್ಲಿಂದ ಬಂತು ?
6
ಅಕ್ಷರಗಳಲ್ಲೂ ಇರುವುದು ಒಂದೇ ಸ್ವರ, ಒಂದೇ ವ್ಯಂಜನ. ಒಂದು ಮಾತ್ರೆ ಲಘು, ಮತ್ತೊಂದು ಗುರು-ಇದು ಹೇಗೆ ? ಒಂದರಲ್ಲಿ ವ್ಯಂಜನ ಸ್ವರದ ಪೂರ್ವದಲ್ಲಿದ್ದರೆ, ಮತ್ತೊಂದರಲ್ಲಿ ಪರದಲ್ಲಿದೆ. ಸ್ವರಕ್ಕೆ ಪರವಾಗಿರುವಾಗ ವ್ಯಂಜನದ ಉಚ್ಛಾರಣೆಗೆ ಹೆಚ್ಚು ಕಾಲ ಬೇಕಾದೀತೆಂದು ಹೇಳಲು ಬರುವಂತಿಲ್ಲ. ಈ ಎರಡು ಅಕ್ಷರಗಳ ಉಚ್ಛಾರಣೆಗೂ ಎಷ್ಟು ಕಾಲ ಬೇಕಾಗಬಹುದೆಂಬುದನ್ನು ಉಪಕರಣಗಳ ಸಹಾಯದಿಂದ ಅಳೆದು ನೋಡಬಹುದು. ಸ್ವಾರಸ್ಯವಾದ ವಿಚಾರವೆಂದರೆ ಇದು: ಉಪಕರಣಗಳ ಸಹಾಯದಿಂದ ದೊರಕುವ ಫಲಿತಾಂಶ ಏನೇ ಇರಲಿ, ಅದು ಈ ಸಮಸ್ಯೆಯ ಮೇಲೆ ಬೆಳಕನ್ನು ಚೆಲ್ಲುವ ಸಂಭವ ಕಡಿಮೆ. ಈ ಸಮಸ್ಯೆಗೆ ಉತ್ತರ ದೊರಕುವುದು ಬೇರೆ ದಿಕ್ಕುಗಳಲ್ಲಿ ಬುದ್ಧಿಯನ್ನು ಓಡಿಸಿದಾಗಲೇ.
ಭಾಷಾವಿಜ್ಞಾನದಲ್ಲಿ ಈಚೆಗೆ ನಡೆದ ಸಂಶೋಧನೆಗಳ ಆಧಾರದ ಮೇಲೆ ಸದ್ಯಕ್ಕೆ ಹೀಗೆ ಹೇಳಬಹುದು : ಕ ಎಂಬ ಅಕ್ಷರವನ್ನು ಉಚ್ಚರಿಸುವುದಕ್ಕೂ ಆಕ್ ಎಂಬ ಅಕ್ಷರವನ್ನು ಉಚ್ಚರಿಸುವುದಕ್ಕೂ ಬೇಕಾಗಿರುವ ಕಾಲ ಒಂದೇ ಆಗಿರಲಿ ಇಲ್ಲದಿರಲಿ ; ಕ ಎಂಬುದನ್ನು ಉಚ್ಚರಿಸುವುದಕ್ಕೆ ಬೇಕಾಗುವ ಪ್ರಯತ್ನಕ್ಕಿಂತ ಹೆಚ್ಚಿನ ಪ್ರಯತ್ನ ಅಕ್ ಎಂಬುದನ್ನು ಉಚ್ಚರಿಸುವುದಕ್ಕೆ ಬೇಕಾಗುತ್ತದೆ. ಒಂದು ಅಕ್ಷರವು ಲಘುವೋ ಗುರುವೋ ಎಂಬುದನ್ನು ನಿರ್ಧರಿಸಲು, ಅದನ್ನು ಉಚ್ಚರಿಸಲು ಎಷ್ಟು ಕಾಲ ಬೇಕಾಗುತ್ತದೆ ಎಂಬುದಕ್ಕಿಂತ, ಅದು ಎಷ್ಟು ಕಾಲ ತೆಗೆದುಕೊಂಡಂತೆ ನಮ್ಮ ಕಿವಿಗೆ ಕೇಳುತ್ತದೆ ಎಂಬುದು ಮುಖ್ಯ. ಒಂದು ಅಕ್ಷರದ ಉಚ್ಚಾರಣೆಯ ಕಾಲಾವಕಾಶಕ್ಕೂ, ಅದು ನಮ್ಮ ಕಿವಿಯ ಮೂಲಕ ಮನಸ್ಸಿನ ಮೇಲೆ ಉಂಟುಮಾಡುವ ‘ಕಾಲಾವಕಾಶ ಭ್ರಮೆ’ಗೂ ನೇರವಾದ ಸಂಬಂಧವಿರಬೇಕಾಗಿಲ್ಲ. ಆದರೆ, ಒಂದು ಅಕ್ಷರದ ಉಚ್ಚಾರಣೆಗೆ ಬೇಕಾಗುವ ಪ್ರಯತ್ನಕ್ಕೂ, ಅದು ನಮ್ಮ ಕಿವಿಯ ಮೂಲಕ ಮನಸ್ಸಿನ ಮೇಲೆ ಉಂಟುಮಾಡುವ ‘ಕಾಲಾವಕಾಶಭ್ರಮೆ’ಗೂ ನೇರವಾದ ಸಂಬಂಧವುಂಟು. 1
ಈ ಎರಡು ರೀತಿಯ ಕಾಲಾವಕಾಶಗಳು-ಒಂದು ಭೌತಿಕ ಮತ್ತೊಂದು ಮಾನಸಿಕ ಉಂಟು ಎಂಬುದಕ್ಕೆ ಪೋಷಕವಾಗಿ ಕೆಲವು ಪ್ರಮಾಣಗಳನ್ನು ಕೊಡಬಹುದು. ಮಕ್ಕಳು ಮಾತನಾಡುವುದನ್ನು ಕಲಿಯುವಾಗ ವ್ಯಂಜನ-ಸ್ವರ ಎಂಬ ರಚನೆಯ ಅಕ್ಷರಗಳ ಉಚ್ಚಾರಣೆಯನ್ನು ಮೊದಲು ಕಲಿಯುತ್ತಾರೆ ; ಸ್ವರ-ವ್ಯಂಜನ ಎಂಬ
1 ಛಂದಶ್ಯಾಸ್ತ್ರದ ‘ಮಾತ್ರೆ’ ಈ ಎರಡನೆಯ ರೀತಿಯ ಕಾಲಾವಕಾಶಕ್ಕೂ, ಸ್ವಸನಶಾಸ್ತ್ರಜ್ಞರ ಅಥವಾ ವೈಯಾಕರಣರ ‘ಮಾತ್ರೆ’ ಮೊದಲನೆಯ ರೀತಿಯ ಕಾಲಾವಕಾಶಕ್ಕೂ ಸಂಬಂಧಿಸಿದ್ದಾಗಿರಬಹುದೇ ?
ರಚನೆಯ ಅಕ್ಷರಗಳ ಉಚ್ಚಾರಣೆಯನ್ನು ಅನಂತರ ಕಲಿಯುತ್ತಾರೆ. ಸ್ವರ-ವ್ಯಂಜನ ಎಂಬ ರಚನೆಯ ಅಕ್ಷರವೇ ಇಲ್ಲದ ಭಾಷೆಗಳುಂಟು ; ಆದರೆ ವ್ಯಂಜನ-ಸ್ವರ ಎಂಬ ರಚನೆಯ ಅಕ್ಷರಗಳಿಲ್ಲದ ಭಾಷೆಗಳೇ ಇಲ್ಲ. ಇದರಿಂದ ವ್ಯಂಜನ-ಸ್ವರ ಎಂಬ ರಚನೆಯ ಅಕ್ಷರಗಳು ‘ಸಹಜ’ವೆಂದೂ, ಸ್ವರ-ವ್ಯಂಜನ ಎಂಬ ರಚನೆಯ ಅಕ್ಷರಗಳು `ಅಸಹಜ’ವೆಂದೂ ಗೊತ್ತಾಗುತ್ತದೆ.
ನನ್ನ ಲೇಖನವು ‘ಇನ್ನಷ್ಟು ಶಾಸ್ತ್ರೀಯವಾದ ಕಾರ್ಯ ನಡೆಯಬೇಕಾದ ಅಗತ್ಯವನ್ನು ತೋರಿಸುತ್ತದೆಯಂತೆ. ಶಾಸ್ತ್ರೀಯ ವಿಚಾರಧಾರೆ ಯಾವ ದಿಕ್ಕಿನಲ್ಲಿ ಹರಿಯಬಹುದು ಎಂಬುದನ್ನು ಸೂಚಿಸುವುದಷ್ಟೇ ಮೇಲಿನ ಮಾತುಗಳ ಉದ್ದೇಶ.
.
ಜೆ. ಕೃಷ್ಣಮೂರ್ತಿ
ಶಿಕ್ಷಣ-ತಂತ್ರ
ನಮ್ಮ ಇಂದಿನ ವಿದ್ಯಾಭ್ಯಾಸ ತಂತ್ರವನ್ನೇ ಎತ್ತಿ ಹೊಗಳುವಂಥದಾಗಿದೆ. ತಂತ್ರವನ್ನು ಎತ್ತಿ ಹೊಗಳುತ್ತ ನಾವು ಮನುಷ್ಯನನ್ನು ನಾಶಗೊಳಿಸುತ್ತಿದ್ದೇವೆ. ತಾಂತ್ರಿಕ ತಜ್ಞರನ್ನೆ ವಿಶಿಷ್ಟವಾಗಿ ಸಿದ್ಧಗೊಳಿಸುತ್ತ ನಾವು ವಿಜ್ಞಾನಿಗಳನ್ನು ಪಡೆದಿದ್ದೇವೆ. ಗಣಿತಜ್ಞರನ್ನು ಸೇತುನಿರ್ಮಾಪಕರನ್ನು ಆಕಾಶವಿಜಯಿಗಳನ್ನು ಪಡೆದಿದ್ದೇವೆ. ಆದರೆ ಅವರು ಜೀವನಕ್ರಮವನ್ನು ಒಟ್ಟಂದವಾಗಿ ಅರಿಯಬಲ್ಲರೆ? ಯಾವುದೇ ಒಬ್ಬ ತಜ್ಞ ಬದುಕನ್ನು ಪೂರ್ಣೈಕವಾಗಿ ಅನುಭವಿಸಬಲ್ಲನೆ ?~ ಅವನು ತನ್ನ ತಜ್ಞತೆಯಿಂದ ಹೊರ ನಿಂತಾಗ ಮಾತ್ರಸಾಧ್ಯ. ಬದುಕನ್ನು ಇಡಿಯಾಗಿ ಅರಿತುಕೊಳ್ಳದೆ, ಯೋಚನೆ ಹಾಗೂ ಆಸೆಗಳ ಕವಲುದಾರಿಗಳನ್ನು ಸಮಗ್ರತೆಯಲ್ಲಿ ಕಾಣಬಲ್ಲ ಸ್ಫೋಟದೃಷ್ಟಿಯಿಲ್ಲದೆ, ಕೇವಲ ಶಕ್ತಿ, ದಕ್ಷತೆಗಳನ್ನು ಬೆಳೆಸಿಕೊಳ್ಳುವುದರಿಂದ ಇನ್ನಷ್ಟು ನಿಷ್ಕರುಣಿಗಳಾಗುತ್ತೇವೆ. ಯುದ್ಧಗಳಿಗೆ ಬೀಜವಾಗುತ್ತೇವೆ. ಪ್ರತಿಯೊಬ್ಬ ವ್ಯಕ್ತಿಗೂ ಬಹು ದೊಡ್ಡ ಹಾಗೂ ಬಹು ತ್ವರಿತವಾದ ಸಮಸ್ಯೆಯೆಂದರೆ ಬದುಕನ್ನು ಇಡಿಯಾಗಿ ಅರಿತುಕೊಳ್ಳುವುದು. ಅಂಥ ಅರಿವು ಮಾತ್ರವೇ ಜೀವನದ ನಿತ್ಯವೃದ್ಧಿಸುವ ಸಂಕೀರ‍್ಣತೆಗಳನ್ನು ಎದುರಿಸಬಲ್ಲುದು. ತಂತ್ರಜ್ಞಾನ, ಅದು ಎಷ್ಟೇ ಅನಿವಾರ‍್ಯವಾಗಿದ್ದರೂ, ನಮ್ಮ ಆಂತರ್ಯದ ಹಾಗೂ ಮಾನಸಿಕವಾದ ಸಂಘರ್ಷಣೆ ಒತ್ತಡಗಳನ್ನು ಬಗೆಹರಿಸಲಾರದು.
.
ಕಾಮ
ಕೆ. ನಿ. ತಿರುಮಲೇಶ್
ಕಾಮ
ಏನು ಹೇಳಲಿ ಹೆಣ್ಣೆ
ವೈಚಾರಿಕ ಅಭಿಚಾರವನ್ನೋ ವ್ಯಭಿಚಾರವನ್ನೂ
ನಿಮ್ಮ ತೆರೆ ನನ್ನ ಪರೆ ಎಲ್ಲ ಹರಿದು ತೆಗೆದೊಗೆದದ್ದೊ ಮಂಚದ ಕೆಳಗೆ
ಕೊರೆದು ಕರಗಿದ್ದೊ ಹಾಸಿಗೆಯೊಳಗೆ ಶಿಲಾಬಾಲೆ ಎಲೆಲೆ
ನಿನ್ನ ಘನ ನನ್ನ ಉಸಿರಿನ ಮೇಲೆ
ಕುಳಿತು ಕೂಗಲಾರದೆ ಕೂಗಿದೆ ಇದೋ
ಎರಡು ಜೀವಗಳ ಭಗ್ನಸ್ವರದ ವಿಷಾದ
ನಿಷಾಧ ಮಾ ನಿಷಾಧ
ಇದೀಗ ನೆನಪು ಅಲ್ಕೊಹಾಲ್
ಕಾಮದ ಬುರುಗು ನೊರೆ ನೊರೆ ಕಿನಾರೆಯುದ್ದ
ಬೊಗ್ಗಿಸಿಕೊ ನಿನ್ನ ಪಾಲು ಬಾ
ಕುಡೀ ಕುಣಿದಾಡು ಈ ಖಾರ ಹಿಡೀ
ಮಿಡಿಯುವ ಒಳನಾಡಿ ಚಾಚು ಬರುವಷ್ಟು ಬರಲಿ ಹೊರ
ರಾಚು ಈ ಬಯಕೆ ಈ ವಾಕರಿಕೆ
ಸೆಕೆ ಆರುವ ಮೊದಲು ಕಾಲು ಕುಸಿಯುವ ಮೊದಲು ಬಾ
ತಿರುಗೋಣ ಕಪ್ಪು ಮುಸುಕು ನೃತ್ಯ
ಸೂತಕ ಪ್ರೇತಗಳು ಖಾಲಿ ಅಲೆಯುವ ಎಲೆಗಳು
ನಿರರ್ಥಕ ಎನ್ನಬೇಡ ಹೆಣ್ಣೆ
ಮಗ್ಗೀಗೆ ಅರ್ಥ ಇಲ್ಲ
ನಿನ್ನ ಏರುತಗ್ಗೀಗೆ ಇಲ್ಲ
ರಹಸ್ಯ ಎಂದು ಬಚ್ಚಿಟ್ಟು ಕೊಂಡ ಗುಂಗು
ಎಲ್ಲಿಯ ತನಕ ಶೂನ್ಯ ಬಿಚ್ಚುವ ತನಕ ರಿಂಗು ರಿಂಗು
ಶಬ್ದ ಗಳೊಡನೆ ಕಸರತ್ತು ಬೇಡ
ನಿರರ್ಥಕವೂ ಒಂದು ಥರ ಅರ್ಥ ಹೌದಾ
ಈ ಮಗ್ಗುಲಿಗೆ ಬಾಗು ಈ ಮೈ ಮೂಸಿನೋಡು
ಕಂಕುಳೆಡೆ ಹೊಕ್ಕುಳೆಡೆ ಎಡೆ ಎಡೆ
ಯಾಕೇ ಎಂಬಂತೆ ಮೈ ಮಾಡಬೇಡ
ಯಾಕೆ ಎಂಬುದೊಂದು ಆಧ್ಯಾತ್ಮಿಕ ಪಿಂಡ
ಹೆತ್ತರೆ ಅದು ಶಿಖಂಡಿ ಪ್ರಸವ ಕೋಡಂಗಿ
ಬೆನ್ನು ಹುರಿ ತಟ್ಟಿದರೆ ಎದ್ದು ನಿಲ್ಲುವ
ಪ್ರಶ್ನಾರ್ಥಕ ಹಾಸ್ಯಭಂಗಿ
ಈ ಗೊಟ್ಟಿ ನೃತ್ಯಕ್ಕೆ ಗೋಟುವಾದ್ಯಕ್ಕೆ
ಯಾವ ಚಿಹ್ನೆಯನ್ನೂ ತೂಗು ಹಾಕದಿರು
ನಮ್ಮ ಗುಪ್ತ ಮೈಲಿಗೆ ಪಿಡುಗು ಸಾರದಿರು
ಓ ನನ್ನ ಮಾನಸಿಕ ಸೂಳೆ
ಇದು ಆನುವಂಶಿಕತೆ ಕಣೇ
ಅಂಬೆ ಶಿಖಂಡಿಯರ ವ್ಯಥೆ
ತೊನ್ನು ಮನಸ್ಸು ಒಳಗೇ ಮುದುಡಿ ಮುಳ್ಳಾಗಿ ಮೂಡಿ
ತುರಿಕೆ ತೀಡಿ ಟಳ್ಳನೆ ಒಡೆದು ಸೊನ್ನೆ ಹೋದರೂ
ಅಸ್ತಿತ್ವಕ್ಕೆ ವ್ಯರ್ಥ ಹೋರಾಡುವ ಹುಣ್ಣು ವ್ಯಕ್ತಿತ್ವದ
ಪಾಂಡು ಭೂಪಾಲನ ಕಥೆ ಕೇಳಿ ಗೊತ್ತೆ
ಶಾಪದ ಹೊರೆ ಹೊತ್ತ ಪಾಪವ್ರತರು
ಬೆಂಕಿ ಪೊಟ್ಟಣದ ಮಕ್ಕಳು ಕಣೇ ತಿರುಗಿ ನೋಡಿದರೆ
ಇಲ್ಲಿ ಸಾಮ್ರಾಜ್ಯ ನಂದುವುದನ್ನು ಕಂಡೆವು
ನನ್ನ ನೆರಳುಗಳ ಹಿಂದೆ ಮುಂದೆ
ಕೂಗಬೇಡವೇ ದುಃಸ್ವಪ್ನವೆಂದು ಇದ್ದೀತು
ಸ್ವಪ್ನವೂ ಒಂದು ಥರ ವಾಸ್ತವತೆ ಹೌದಾ
ನಿನ್ನ ಬೆವರಿಗೂ ಉಂಟಲ್ಲಿ ಸ್ವಂತ ಪರಿಮಳ
ಮತ್ತೆ ಹೆದರಬೇಡ ಜಿಜ್ಞಾಸೆಯ ಪ್ರಸವ
ಇಷ್ಟೇ ಸಾಕು ಕುಡಿ
ಈ ನೃತ್ಯದಲ್ಲಿ ಸುತ್ತ ಬಾ
ತಿರುಗು ಮುರುಗು
.
ಸ್ಯಾಮುಯೆಲ್ ಬೆಕೆಟ್
ಯು. ಆರ್. ಅನಂತಮೂರ್ತಿ
ಸ್ಯಾಮುಯಲ್ ಬೆಕೆಟ್
“WAITING FOR GODOT” ನಾಟಕದಿಂದ ಪ್ರಸಿದ್ಧನಾದ ಸ್ಯಾಮುಯಲ್ ಬೆಕೆಟ್ ಮುಖ್ಯವಾಗಿ ತಾನು ಕಾದಂಬರಿಕಾರನೆಂದೂ, ಕುತೂಹಲಕ್ಕಾಗಿ, ಖುಷಿಗಾಗಿ ತಾನು ನಾಟಕಗಳನ್ನು ಬರೆಯುವುದೆಂದೂ ಹೇಳಿಕೊಂಡಿದ್ದಾನೆ. ಜಾಯ್ಸ್ ಮತ್ತು ಏಟ್ಸರಂತೆ ಬೆಕೆಟ್ ಐರ‍್ಲೆಂಡಿನವ ; ಸಾಹಿತ್ಯದಲ್ಲಿ ಸಾಂಕೇತಿಕತೆಯ ಪಂಥವನ್ನು ತುಳಿದ ಅವರಂತೆಯೇ ಕಲೆಯಲ್ಲಿ ಸುಲಭವಾದದ್ದನ್ನು ಸಾಧಾರಣವಾದದ್ದನ್ನು ತಿರಸ್ಕರಿಸಿದವ; ಹೊಸದನ್ನು, ಕಷ್ಟವಾದದ್ದನ್ನು ಭಾಷೆ ತಂತ್ರಗಳಲ್ಲಿ ಸದಾ ಪ್ರಯತ್ನಿಸುತ್ತ, ಸಾಮಾಜಿಕ ಮನುಷ್ಯ ನೋಡಲು ಅಂಜುವ ಜೀವನಾನುಭವದ ಮೂಲರಹಸ್ಯಗಳನ್ನು, ಅನಿವಾರ್ಯವಾದ ಸಂಕಟಗಳನ್ನು ಶೋಧಿಸುತ್ತಿರುವ ಪ್ರಯೋಗಶೀಲ ಲೇಖಕ. ಮನುಷ್ಯ ಸ್ವರೂಪದ ನಿಜದರ್ಶನ ಸಾಧ್ಯವಾಗುವುದು ಅವನ ನಿತ್ರಾಣ, ದೈನ್ಯ, ನಿಸ್ಸಹಾಯಕ ಅವಸ್ಥೆಗಳಲ್ಲಿ ಎಂದು ಇವನು ಭಾವಿಸುತ್ತಾನೆಂಬುದು MOLLOY, MALONE DIES,, KRAPP’S LAST TAPE ಎನ್ನುವ ಕೃತಿಗಳಿಂದ ತಿಳಿಯುತ್ತದೆ. ಈ ಎಲ್ಲ ಕೃತಿಗಳ ನಾಯಕರೂ ಒಂದೋ ವೃದ್ಧರು ಅಥವಾ ನಿರ್ಬಲರಾದ ತಪ್ತರು ಎಂಬುದು ಗಮನಾರ್ಹ. ಯೌವನದ ಹುರುಪಿನಲ್ಲಿ ಮರೆಯಾಗಿ ಅಡಗಿರುವ ಮನುಷ್ಯನ ನಿಜವಾದ ಪಾಡು ಅವನ ದುರ್ದಶೆಯಲ್ಲಿ ವ್ಯಕ್ತವಾಗುತ್ತದೆ ಎಂದು ಬೆಕೆಟ್ ಭಾವಿಸುವುದೇ ಇದಕ್ಕೆ ಕಾರಣ. ಈ ದೃಷ್ಟಿಯಿಂದ ನೋಡಿದಲ್ಲಿ ಬೆಕೆಟ್ ಬಾದಲೇರ್ ಎಲಿಯಟ್ಟರಂತೆ ಕ್ರಿಶ್ಚಿಯನ್ ಪರಂಪರೆಗೆ ಸೇರಿದ ಲೇಖಕ ಎನ್ನಿಸುತ್ತದೆ.
ಆದ್ದರಿಂದ ಅಹಂಕಾರಜನ್ಯವಾದ ಆದರ್ಶವಾದವನ್ನೂ ಪ್ರಗತಿಪರ ರಾಜಕೀಯ ತತ್ವಗಳನ್ನೂ ಇವನು ಅನುಮಾನದಿಂದ ಕಾಣುತ್ತಾನೆ.
ಬೆಕೆಟ್ಟಿನ ಹುಡುಕಾಟ ಮಾತೃಭೂಮಿ, ಮಾತೃ ಭಾಷೆಗಳನ್ನು ಬದಲಾಯಿಸುವ ತನಕವೂ ಹೋಗಿದೆ. ಇಂಗ್ಲಿಷ್ ಭಾಷೆ ತೀರ ನಯವಾಗಿ, ಅಮೂರ್ತವಾಗಿ ಸತ್ತಿದೆ ಎನ್ನಿಸಿದ್ದರಿಂದ ತನ್ನ ಯುದ್ಧೋತ್ತರ ಕೃತಿಗಳನ್ನೆಲ್ಲ ತಾನು ಕಲಿತ ಭಾಷೆಯಾದ ಫ್ರೆಂಚಿನಲ್ಲಿ ಬರೆದೆ ಎನ್ನುತ್ತಾನೆ ಬೆಕೆಟ್. ತನ್ನ ಅನುಭವದ ಲೋಕವನ್ನು ಬೆತ್ತಲೆಗೊಳಿಸಿ ನಿಷ್ಠುರವಾಗಿ ನೋಡಬೇಕೆಂದು ಬಯಸುವ ಇವನ ಪ್ರತಿಭೆಗೆ ಮಾತೃ ಭಾಷೆಯ ಮೋಹಕವಾದ ಜಾಲದಲ್ಲಿ ಸಿಕ್ಕಿ ಬೀಳುತ್ತಿದ್ದ ತನ್ನ ಹಿಂದಿನ ಬರವಣಿಗೆಯ ಕ್ರಮವನ್ನು ಫ್ರೆಂಚಿನ ಮೂಲಕ ಬದಲಿಸಿಕೊಳ್ಳಬೇಕಾಯಿತು. ಹೀಗೆ ಅವನು ಬರೆದ ಫ್ರೆಂಚ್ ಕೃತಿಗಳಲ್ಲಿ ಹಲವನ್ನು ಅವನೇ ಇಂಗ್ಲಿಷಿಗೆ ಭಾಷಾಂತರಿಸಿದ್ದಾನೆ.
ಬೆಕೆಟ್ ದಿಗ್ಭ್ರಮೆಗೊಳಿಸುವಷ್ಟು ನವ್ಯ ಲೇಖಕನಾದರೂ ಯೂರೋಪ್ ಸಾಹಿತ್ಯದ ಪರಂಪರೆಯಿಂದ ಸತ್ವವನ್ನು ಸಾಕಷ್ಟು ಪಡೆದವನು. ಇಟಲಿಯ ಪುರಾತನ ಡಾಂಟೆ, ಫ್ರಾನ್ಸಿನ ಅಧುನಿಕ ಫ್ರೂಸ್ಟ್, ಐರ‍್ಲೆಂಡಿನ ಕಟುವಾದ ಮಾತಿನ ಸ್ವಿಫ್ಟ್, ಕಾದಂಬರಿಯನ್ನು ತಲೆಕೆಳಗು ಮಾಡಿದ ಲೀಲಾಪ್ರವೃತ್ತಿಯ ಸ್ವರ‍್ನ್, ಯೂರೋಪಿನ ತತ್ವ ಶಾಸ್ತ್ರಜ್ಞರು–ಎಲ್ಲರಿಂದಲೂ ಬೆಕೆಟ್ ಪ್ರೇರಿತನಾಗಿದ್ದಾನೆ.
ಜಾಯ್ಸನ ನಿಕಟವರ್ತಿಯಾಗಿದ್ದ ಬೆಕೆಟ್, ೨೦ರ ದಶಕದ ಪ್ರಯೋಗಶೀಲ ಪರಂಪರೆಯ ಕೊನೆಯ ಬರಹಗಾರ ಎನ್ನಬಹುದು. ಜಾಯ್ಸ್‌ನಂತೆಯೇ ಯಾವ ತಾತ್ವಿಕ, ರಾಜಕೀಯ, ಸಾಮಾಜಿಕ, ಧಾರ್ಮಿಕ ಕಟ್ಟುಪಾಡುಗಳಿಗೂ ಬದ್ಧನಾಗದೆ ಒಂಟಿಯಾಗಿ ನಿಂತಿರುವ ಸಾಹಿತಿ ಇವನು. ಸಾಹಿತ್ಯದ ಉದ್ಯೋಗ ಸಮಸ್ಯೆಗಳನ್ನು ಪರಿಹರಿಸುವುದು, ಅವುಗಳನ್ನು ಕುರಿತು ಚಿಂತಿಸುವುದು ; ಸಾಹಿತ್ಯ ವಿಮರ್ಶೆಯ ಕಸುಬು ಕಲಾಕೃತಿಗಳ ಅರ್ಥಗಳನ್ನು ವಿವರಿಸುವುದಲ್ಲ. ಅವುಗಳ ಬಗ್ಗೆ ಮಾಡುವ ಚಿಂತನೆ-ಎನ್ನುತ್ತಾನೆ ಬೆಕೆಟ್.
ಫ್ರೂಸ್ಪನ ಬಗ್ಗೆ ಬರೆಯುತ್ತ ಬೆಕೆಟ್ ಹೇಳಿರುವ ಮಾತುಗಳು ಇವು : ಕಲೆ ಟೆಲಿಪಸ್ಸಿನ ಈಟಿ ಇದ್ದ ಹಾಗೆ. ಟೆಲಿಪಸ್ಸಿನ ಈಟಿ ತಿವಿದು ಗಾಯಗೊಳಿಸುವ ಸಾಧನ ಮಾತ್ರವಲ್ಲ, ಈ ಗಾಯದ ನಿಧಾನ ಕೂಡ. ವಾಸ್ತವ ಮಾರ್ಗದ ಕಲೆ ಅನುಭವದ ನಿರ್ಜೀವ ಮಾಹಿತಿಯನ್ನು ಮಾತ್ರ ಕೊಟ್ಟಿತು ; ಆದರೆ ವಕ್ರಮಾರ್ಗದ ಸಾಂಕೇತಿಕ ಕಲೆ ಜೀವಂತ ಸತ್ಯವನ್ನು ದಟ್ಟವಾಗಿ ಸೃಷ್ಟಿಸುತ್ತದೆ. ೧೯೩೨ರಲ್ಲಿ ಇವನು ಸಹಿ ಹಾಕಿದ ಒಂದು
ಮ್ಯನಿಫೆಸ್ಟೊಕಲೆಯ ದರ್ಶನ ಸ್ವಯಂಸಿದ್ಧವೆಂದೂ, ಬದುಕಿನ ಬಹಿರಂಗ ಸ್ವರೂಪಕ್ಕಿಂತ ಅಂತರಂಗ ಹೆಚ್ಚು ಮಹತ್ವಪೂರ್ಣವಾದದ್ದೆಂದೂ, ಕಲೆ ಸುಪ್ತಪ್ರಜ್ಞೆಯಿಂದ ಉಕ್ಕಿ ಬರತಕ್ಕದ್ದೆಂದೂ ಸಾರುತ್ತದೆ. ಈ ದೃಷ್ಟಿಯಿಂದ ನಮ್ಮ ವಾಸ್ತವಿಕ ಕಲ್ಪನೆಗಳನ್ನೆಲ್ಲ ತಲೆಕೆಳಗು ಮಾಡಿ ಬಿಡಬಲ್ಲ, ಅನುಭವದ ಜಡ್ಡನ್ನು ಉತ್ತಬಲ್ಲ ಸುರಿಯಲಿಸ್ಟ್ ಕಲೆ ಬೆಕೆಟ್‌ಗೆ ಅವಶ್ಯವಾಯಿತು.
ಆಲ್‌ಫ್ರೆಡ್ ಜಾರಿ ಮತ್ತು ಆಂಟೋನಿನ್ ಆರ‍್ಟೊ ಅವರ ನಾಟಕಗಳು ಮತ್ತು ಪ್ರಬಂಧಗಳು ಬೆಕೆಟ್ಟಿಗೆ ತನ್ನ ವಿಚಾರಗಳನ್ನು ಸ್ಪಷ್ಟ ಪಡಿಸಿಕೊಳ್ಳಲು ಸಹಾಯವಾದುವು. ಅಂದರೆ ಅಸಂಗತ ನಾಟಕದ ಮುಖ್ಯ ಸ್ವರೂಪದ ರೂಪುರೇಷೆಗಳು ಈ ಇಬ್ಬರು ಲೇಖಕರಲ್ಲಿ ಸಿಗುತ್ತವೆ. ಆರ‍್ಟೊ ೧೯೩೮ರಲ್ಲಿ THE THEATRE AND TTS DOUBLE ಎನ್ನುವ ಕ್ರಾಂತಿಕಾರಿ ಗ್ರಂಥವನ್ನು ಪ್ರಕಟಿಸಿದ. ನಾಟಕವೆಂದರೆ ಕೇಳುವುದಕ್ಕೆ ಮಾತ್ರವಲ್ಲದೆ ನೋಡುವುದಕ್ಕಾಗಿಯೂ ಇರುವ ಕಲೆ ಎಂದು ಸ್ಪಷ್ಟವಾಗಿ ಸಾಧಿಸಿದ ಪುಸ್ತಕ ಇದು.
ಆರ‍್ಟೋನ ಒಟ್ಟು ವಿಚಾರವನ್ನು ಹೀಗೆ ಸಂಗ್ರಹಿಸಬಹುದು : ಅಸಂಗತವಾದದ್ದು ಬೆರಗುಗೊಳಿಸುತ್ತದೆ; ಜಾಡಿಗೆ ಬಿದ್ದ ಬುದ್ಧಿಯನ್ನು ಸ್ಮೃತಿಯನ್ನು ಹೊಸದಿಕ್ಕಿನಲ್ಲಿ ದುಡಿಸಿಕೊಂಡು ಅಪರಿಚಿತ ಸತ್ಯಗಳು ನಮಗೆ ಕಾಣುವಂತೆ ಮಾಡುತ್ತದೆ; ದೈವದಲ್ಲಿ ನಂಬಿಕೆ ಮರೆಯಾಗಿ ಹೋದ ನಮ್ಮ ಪ್ರಪಂಚದ ಮೂಲಭೂತ ತಾತ್ವಿಕ ಸಮಸ್ಯೆ ಗಳನ್ನು ಎತ್ತುತ್ತದೆ.
ಇದು ಸಾಧ್ಯವಾಗಲು ಆಕ್ಟೋ ಹಿಂಸೆಯ ಚಿತ್ರಣ ರಂಗಭೂಮಿಯಲ್ಲಿ ಅನಿವಾರ‍್ಯವೆನ್ನುತ್ತಾನೆ. ಯಾಕೆಂದರೆ ಹಿಂಸೆಯ ಮುಖಾಂತರ ಮಾತ್ರ ನಮ್ಮ ಮನಸ್ಸು ಬೆಚ್ಚಿ ತನ್ನ ಹೊಯ್ದಾಟದ ಮೂಲದಲ್ಲಿ ಏನಿದೆ ಎಂಬುದನ್ನು ಗ್ರಹಿಸಬಲ್ಲುದು. ಆದರೆ ರಂಗಭೂಮಿಯ ಮೇಲೆ ಬರುವ ಕ್ರೌರ‍್ಯ ದ್ವೇಷರಹಿತವಾಗಿರತಕ್ಕದ್ದು ; ಅನುಭಾವಿಯ ಕಾಮುಕತೆಯಂತೆ ಶುದ್ಧವಾಗಿ ತಾತ್ವಿಕವಾಗಿ ಇರತಕ್ಕದ್ದು.
ಆಕ್ಟೊ ರಂಗಭೂಮಿ ತನ್ನದೇ ಭಾಷೆಯನ್ನಾಡಬಲ್ಲ ಜೀವಂತ ಸ್ಥಳವೆನ್ನುತ್ತಾನೆ. ಆದ್ದರಿಂದ ನಾಟಕಕಾರ ಅದರ ವಿವಿಧ ಅಂಗಗಳಿಗೆ ತಮ್ಮದೇ ಆದ ಮಾತುಗಳನ್ನು ಆಡಲು ಅವಕಾಶ ಮಾಡಿಕೊಡಬೇಕು. ಬೂರ್ಶ್ವಾ ವರ್ಗದ ಮನರಂಜನೆಗೆಂದು ಇರುವ ರಂಗಭೂಮಿ ಮನುಷ್ಯನ ಪ್ರಾಕೃತ ಪ್ರವೃತ್ತಿಗಳನ್ನು ಚಿತ್ರಿಸಲು ಅಂಜಿ ಸಪ್ಪೆಯಾಗಿದೆ. ಪ್ರಾಚೀನ ರಂಗಭೂಮಿಯಂತೆಯೇ ನಮ್ಮ ರಂಗಭೂಮಿ ಕೂಡ
ನಯನಾಜೂಕುಗಳನ್ನು ಧಿಕ್ಕರಿಸಿ ಪ್ರೇಕ್ಷಕನಲ್ಲಿ ದಾರ್ಶನಿಕ ಭಯವನ್ನು ಹುಟ್ಟಿಸಬೇಕು; ಹುಟ್ಟು ಮತ್ತು ಸಾವಿನ ರಹಸ್ಯಗಳನ್ನು ಎಚ್ಚರವಾಗಿಡಬೇಕು. ಹೀಗೆ ಪ್ರೇಕ್ಷಕನಲ್ಲಿ ಭಯವನ್ನು ಉಂಟುಮಾಡುವುದರ ಮುಖಾಂತರ ಮಾತ್ರ ಅವನನ್ನು ತನ್ನ ಅದೃಷ್ಟದ ಬಗ್ಗೆ ಚಿಂತಿಸುವಂತೆ ಮಾಡುವುದು ಸಾಧ್ಯ. ರಂಗಭೂಮಿ ‘ಕ್ರೂರ’ವಾಗ ಬೇಕು : ಅಂದರೆ, ಇಂತಹ ಒಳಗುದಿಯನ್ನು ತಳಮಳವನ್ನು ಉಂಟುಮಾಡುವ ಸಾಮರ್ಥ್ಯ ಹೊಂದಿರಬೇಕು ಎಂದು ಅರ್ಥ.
ಅಬ್ಸರ್ಡ್ ನಾಟಕಕಾರರು ಅಲ್ಪವಾದ ಹಾಸ್ಯ ಅಥವಾ ಮೆಲೊಡ್ರಾಮಗಳ ಮುಖಾಂತರ ಪ್ರೇಕ್ಷಕರನ್ನು ತಣಿಸುವ ರಂಗಭೂಮಿಯನ್ನು ಧಿಕ್ಕರಿಸುತ್ತಾರೆ. ಅರ್ಥಪೂರ್ಣವಾದ ನಗುವೆಂದರೆ ಅರಾಜಕ, ನಿರಂಕುಶ ನಗು. ಭಯದಿಂದ ಹಿಂದೆಗೆಯದ ಜೀವಂತ ರಂಗಭೂಮಿ ಹೀಗೆ ಅರಾಜಕ ಖುಷಿಯಿಂದ ನಕ್ಕು ನಗಿಸಿ ನಿಜವಾದ ಟ್ರಾಜಿಕ್ ಅನುಭವವನ್ನು ಸೃಷ್ಟಿಸುತ್ತದೆ.
ಆರ‍್ಟೋನ ಈ ತತ್ವಗಳು ಜೀನೆ, ಅಯನೆಸ್ಕೊ, ಅಡಮೊವ್, ಬೆಕೆಟ್ಟರ ಮೇಲೆ ಗಾಢವಾದ ಪ್ರಭಾವ ಮಾಡಿವೆ. ಆರೋನಿಂದ ಪ್ರಭಾವಿತನಾದ ಬ್ರೌನ್ ಎನ್ನುವ ನಿರ್ದೆಶಕ ಬೆಕೆಟ್ಟನ WAITING FOR GODOT ಅನ್ನು ರಂಗದ ಮೇಲೆ ತಂದ ಎನ್ನುವುದು ಗಮನಾರ್ಹ.
ಬೆಕೆಟ್ಟಿನ ನಾಟಕಗಳಿಗೆ ಅತ್ಯಂತ ಸರಳವಾದ ರಂಗಸಜ್ಜಿಕೆ ಸಾಕು. WAITING FOR GODOT ನಾಟಕ ನಡೆಯುವುದು ರಸ್ತೆಯೊಂದರ ಬದಿಯಲ್ಲಿ ; ಹಿನ್ನೆಲೆಯಲ್ಲಿ ಒಂದು ಮರ ಮಾತ್ರ ಇದೆ. ENDGAME ನಲ್ಲಿ ನಾವು ಕಾಣುವುದು ಒಂದು ಖಾಲಿ ಕೋಣೆ, ಕಸದ ತೊಟ್ಟಿಗಳು ಮತ್ತು ಹ್ಯಾಮ್ ಕೂರುವ ಕುರ್ಚಿ. KRAPP’S LAST TAPE ನಲ್ಲಿ ಒಬ್ಬ ಹಣ್ಣಾದ ಮುದುಕ ತನ್ನ ಯೌವನದ ಕಾಲದ ಟೀಪನ್ನು ಕೇಳಿಸಿಕೊಳ್ಳುತ್ರ ಟೇಪ್ ರಿಕಾರ್ಡರಿನ ಎದುರು ಕೂತಿರುತ್ತಾನೆ. ಸಾಂಪ್ರದಾಯಿಕ ರಂಗಭೂಮಿ ನೈಜತೆಯ ಭ್ರಾಂತಿಯನ್ನು ಉಂಟುಮಾಡಲು ಶ್ರಮಿಸುತ್ತದೆ ; ಆದರೆ ಬೆಕೆಟ್ಟಿಗೆ ರಂಗಸಜ್ಜಿಕೆ ವಾಸ್ತವಿಕತೆಯ ಉದ್ದೇಶಪೂರ್ವಕ ಅಣಕಾಟ, ಗೇಲಿ, ಇದು ರಂಗಭೂಮಿ, ಇವರು ಪಾತ್ರಧಾರರು ಎಂಬುದನ್ನು ಬೆಕೆಟ್ ಮರೆಯುವುದೇ ಇಲ್ಲ ; ಬೆಕೆಟ್ ನಾಟಕದ ನಟರೂ ಮರೆಯುವುದಿಲ್ಲ.
ಬ್ಲಿನ್ WAITING FOR GODOT ನಾಟಕವನ್ನು ಮೊದಲು ನಿರ್ದೆಶನಕ್ಕೆ ಆರಿಸಿಕೊಳ್ಳಲು ಕಾರಣ : ಕಡಿಮೆ ಖರ್ಚಿನಲ್ಲಿ ಈ ನಾಟಕವನ್ನು ರಂಗಕ್ಕೆ ತರಲು ಸಾಧ್ಯ
7
ಎಂಬುದು ಕೇವಲ ಐದು ಜನ ಗಂಡು ಪಾತ್ರಧಾರಿಗಳು ಮಾತ್ರ ಈ ನಾಟಕಕ್ಕೆ ಸಾಕು. ಬ್ಲಿನ್‌ನಿಗೆ ಮೊದಲು ಈ ನಾಟಕದ ಆಳವಾದ ಯಾವ ಅರ್ಥಗಳೂ ಹೊಳೆದಿರಲಿಲ್ಲವಂತೆ. ಆದರೆ ಬ್ಲಿನ್ ಮಾಡಿದ ಎಲ್ಲ ತಿದ್ದುಪಡಿಗಳನ್ನೂ ಒಪ್ಪಿಕೊಂಡು ಬೆಕೆಮ್ ನಾಟಕವನ್ನು ಇಂಗ್ಲಿಷಿಗೆ ಭಾಷಾಂತರಿಸಿದ. ನಾಟಕದ ಮುಖ್ಯ ಪಾತ್ರಗಳಾದ ಎಸ್ಟ್ರಗನ್ ಮತ್ತು ಲಾಡಿಮೀರರು ಅಲೆಮಾರಿ ಬೇವರ್ಸಿಗಳೆಂಬುದು ಬಿನ್ ಕೊಟ್ಟ ಸೂಚನೆ.
WAITING FOR GODOT ಕಥೆಯೇ ಇಲ್ಲದ ನಾಟಕ. ಘಟನೆಯಿಂದ ಘಟನೆಗೆ ಭಾವನೆಗಳು ಬೆಳೆಯುತ್ತ ಕೊನೆಗೆ ಶಿಖರಸ್ಥಿತಿಗೆ ಮುಟ್ಟುವ ಸಾಂಪ್ರದಾಯಿಕ ಶಿಲ್ಪ ಈ ನಾಟಕದಲ್ಲಿ ಇಲ್ಲ. ನಾಟಕದ ಸ್ಥಾಯಿಭಾವ ಬೇಸರಿಕೆ ; ಮನುಷ್ಯನ ಅನಿಶ್ಚಿತ ಅಸ್ವಸ್ಥ ಸ್ಥಿತಿ. ತೆರೆಯನ್ನೊಡನೆ ಕಾಣುವುದು ಯಾವುದೋ ಒಂದು ರಸ್ತೆ, ಎಲೆಯಿಲ್ಲದ ಒಂದು ಮರ, ಬೂಟನ್ನು ಕಾಲಿನಿಂದ ಕಳಚಲು ಒದ್ದಾಡುತ್ತ ಏದುಸಿರು ಬಿಡುವ ಒಬ್ಬ ಬೇವರ್ಸಿ. ದಾಪು ಕಾಲು ಹಾಕುತ್ತ ಇನ್ನೊಬ್ಬ ಬೇವರ್ಸಿ ಪ್ರವೇಶಿಸುತ್ತಾನೆ. ಬೂಟನ್ನು ಬಿಚ್ಚಲಾರದ ಗೋಳು. ಬಿಟ್ಟುಹೋದನೆಂದು ತಿಳಿದ ಸಂಗಾತಿ ಹಿಂದಕ್ಕೆ ಬಂದ ಸಂತೋಷ. ನೇಣುಹಾಕಿಕೊಂಡು ಸಾಯಬೇಕೆಂಬ ವಿಚಾರ ಹೀಗೆ ಇಬ್ಬರ ನಡುವೆ ಮಾತು ಬೆಳೆಯುತ್ತದೆ. ಹೋಗುವ ಮಾತಾಡುತ್ತಾರೆ, ಇರುವ ಮಾತಾಡುತ್ತಾರೆ, ಕಾಯುವ ಮಾತಾಡುತ್ತಾರೆ, ಏಸುಕ್ರಿಸ್ತ, ಪಾಪಿಗಳ ಉದ್ಧಾರ, ಕ್ಯಾರೆಟ್ಟು, ಹಿಂದೊಮ್ಮೆ ಕೆಲಸದಲ್ಲಿದ್ದ ದ್ರಾಕ್ಷಿತೋಟ, ಯೌವನ, ಮುಪ್ಪು, ಷಂಡತನ-ಮಾತು ಅಸಂಬದ್ಧವಾಗಿ, ಕೆಲವೊಮ್ಮೆ ಬೇಸರಿಕೆಯ ರಗಳೆಯಾಗಿ, ಕೆಲವೊಮ್ಮೆ ಆತುರ ಹೊಗೆಯಾಡುವ ಉದ್ವಿಗ್ನತೆಯಾಗಿ ಸಂಗೀತದ ಪಲ್ಲವಿಯಂತೆ ಪುನರಾವರ್ತಿತವಾಗುತ್ತದೆ. ಒಬ್ಬ ಈಗ ಹೇಳಿದ ಮಾತುಗಳನ್ನೆ ಇನ್ನೊಬ್ಬ ಆಮೇಲೆ ಮರೆಯುತ್ತಾರೆ. ಯಾವುದು ನಿಜ, ಯಾವುದು ಸುಳ್ಳು ಎಂಬುದು ತಿಳಿಯಲಾರದಂತೆ ಮಾತು ಗಂಟಾಗುತ್ತದೆ, ಗೋಜಲಾಗುತ್ತದೆ. ಇಬ್ಬರೂ ತಾವು ಗೋಡೋಗಾಗಿ ಕಾಯುತ್ತಿದ್ದೇವೆ ಎಂದುಕೊಳ್ಳುತ್ತಾರೆ. ಆದರೆ ಗೋಡೋ ಯಾರು, ಅವನಿಗಾಗಿ ಎಲ್ಲಿ ಯಾಕೆ ಕಾದಿರಬೇಕು, ಯಾವತ್ತು ಕಾದಿರಬೇಕು-ಎಲ್ಲವೂ ಅಸ್ಪಷ್ಟ. ನಿರರ್ಗಳವಾದ ಮಾತು ಇದ್ದಕ್ಕಿದ್ದಂತೆ ನಿಂತುಬಿಡುತ್ತದೆ. ತಮಾಷೆಯಂತೆ ಕಾಣುವ ಘಟನೆಗಳ ಉದ್ದಕ್ಕೂ ತೀವ್ರವಾದ ಅಸ್ವಸ್ಥತೆ, ಬೇಸರಿಕೆ, ಬಳಲಿಕೆ ಕಾಣಿಸಿಕೊಳ್ಳುತ್ತದೆ.
ಅಡ್ಡಾದಿಡ್ಡಿಯಾಗಿ ಹೀಗೆ ಮಾತು ಬೆಳೆಯುತ್ತಿದ್ದಂತೆಯೇ ಒಬ್ಬ ಪ್ರವೇಶಿಸುತ್ತಾನೆ. ಅವನ ಕತ್ತಿಗೆ ಹಗ್ಗ ಬಿಗಿದಿದೆ, ಕೈಯಲ್ಲಿ ಬುಟ್ಟಿ, ಭಾರವಾದ ಬ್ಯಾಗು, ಮಡಿಸುವ ಒಂದು ಸ್ಟೂಲಿದೆ. ಇವನು ಮಧ್ಯದ ರಂಗಕ್ಕೆ ಬರುವಷ್ಟು ಹೊತ್ತಿಗೆ ಹಗ್ಗದ
ಇನ್ನೊಂದು ತುದಿಯನ್ನು ಹಿಡಿದವನೊಬ್ಬ-ಕೈಯಲ್ಲಿ ಚಾಟಿ ಹಿಡಿದವ-ಕಾಣಿಸಿಕೊಳ್ಳುತ್ತಾನೆ. ಚಾಟಿ ಒಡಿದಿರುವಾತ ಐರಿಷ್ ಜಮೀನುದಾರರ ಅಪರಾವತಾರದಂತಿರುವ ದರ್ಪವಂತ. ಹೆಸರು ಪೋಸೊ. ಇವನ ಮಾತು, ನಡೆ, ನುಡಿ ಎಲ್ಲವೂ ಗತ್ತಿನದು. ಇನ್ನೊಬ್ಬ ಲಕ್ಕಿ-ಪೋಸೋನ ಗುಲಾಮ. ಎಸ್ಟ್ರಗನ್ ಮತ್ತು ಲಾಡಿಮಿರ್ ಗೋಡೋಗಾಗಿ ಕಾಯುತ್ತಿರುವ ಇಬ್ಬರು ಬೇವರ್ಸಿಗಳು-ಪೋಸೊನೇ ಗೋಡೋ ಇರಬಹುದೆ ಎಂದು ಕಾತರರಾಗಿ ಈ ಯಜಮಾನ ಗುಲಾಮರ ವಿಚಿತ್ರ ವರ್ತನೆಯನ್ನು ಕುತೂಹಲದಿಂದ ನೋಡುತ್ತಾರೆ. ಲಕ್ಕಿ ಯಂತ್ರದಂತೆ ಫೋಸೋನನ್ನು ಅನುಸರಿಸುತ್ತಾನೆ. ಲಕ್ಕಿಯ ವರ್ತನೆ ಒಂದು ಅರ್ಥಹೀನ ಪ್ಯಾಂಟೊಮೈಮ್. ಸ್ಟೂಲಿನ ಮೇಲೆ ಆರಾಮಾಗಿ ಕೂತು ಪೋಸೋ ರಾವಿನಿಂದ ಕೋಳಿಯನ್ನು ತಿನ್ನುತ್ತಾನೆ. ಲಕ್ಕಿಗೆ ಎಲುಬಿನ ಚೂರುಗಳನ್ನು ಎಸೆಯುತ್ತಾನೆ. ಎಸ್ಟ್ರಗನ್ ಅದನ್ನೆತ್ತಿ ಆಸೆಯಿಂದ ಚೀಪುತ್ತಾನೆ. ಲಕ್ಕಿಯ ಕತ್ತಿನ ಸುತ್ತ ಹಗ್ಗದಿಂದಾಗಿ ವ್ರಣವಾಗಿರುವುದನ್ನು ಕರುಣೆಯಿಂದ ಬೇವರ್ಸಿಗಳು ಪರೀಕ್ಷಿಸುತ್ತಾರೆ. ಆಗ ಲಕ್ಕಿ ಒಬ್ಬ ಬೇವರ್ಸಿಗೆ ಛಟೀರನೆ ಬಿಗಿಯುತ್ತಾನೆ. “ಏ ಹಂದಿ ಚಿಂತಿಸು” ಎಂದು ಯಜಮಾನ ಹೇಳಿದೊಡನೆ ಲಕ್ಕಿ ಮಾತಾಡಲು ಪ್ರಾರಂಭಿಸುತ್ತಾನೆ. ಅವನ ನಿರರ್ಗಳ ದೀರ್ಘ ಭಾಷಣ ಬರೀ ಜಾರ್ಗನ್ನುಗಳ ಕಲಸುಮೇಲೋಗರ. ಅದರ ಅಸ್ಪಷ್ಟ ಸಂದೇಶ ಮನುಷ್ಯನ ನಾಗರಿಕತೆ ಅವನತಿಯ ದಾರಿ ಹಿಡಿದಿದೆ ಎಂದು ಪೋಸೊ ಮತ್ತು ಲಕ್ಕಿ ಹೊರಟು ಹೋದ ಮೇಲೆ ಒಬ್ಬ ಹುಡುಗ ಪ್ರವೇಶಿಸುತ್ತಾನೆ. ಗೋಡೋನ ವಿಷಯವನ್ನು ಹುಡುಗನೂ ಎತ್ತುತ್ತಾನೆ. ಆದರೆ ಹುಡುಗ ಯಾರು, ಅವನು ತರುವ ವಾರ್ತೆಯೇನು ಅಸ್ಪಷ್ಟ ವಾಗಿಯೇ ಉಳಿಯುತ್ತದೆ. ಒಂದು ಕ್ಷಣದಲ್ಲೆ ಬೆಳಕು ಆರಿ, ಕತ್ತಲಾಗಿ, ಚಂದ್ರೋದಯವಾಗುತ್ತದೆ. ಒಬ್ಬ ಬೇವರ್ಸಿ ‘ಹೋಗೋಣವೇ” ಎನ್ನುತ್ತಾನೆ. ಇನ್ನೊಬ್ಬ “ಆಗಲಿ ಎನ್ನುತ್ತಾನೆ. ಆದರೆ ಇಬ್ಬರೂ ಚಲಿಸುವುದಿಲ್ಲ. ತೆರೆ ಬೀಳುತ್ತದೆ.
ಎರಡನೇ ಅಂಕದಲ್ಲಿ ಆಗಿರುವ ಬದಲಾವಣೆಯೆಂದರೆ ಮರದಲ್ಲಿ ಚಿಗುರಿದ ನಾಲ್ಕೈದು ಎಲೆಗಳು ಮಾತ್ರ. ಈ ನಾಟಕದಲ್ಲಿ ಚಿಗುರುವುದು ಮರ ಮಾತ್ರ ಎಂಬುದು ಗಮನಿಸಬೇದ್ದು, ಇಬ್ಬರು ಬೇವರ್ಸಿಗಳು ಮತ್ತದೇ ಮಾತುಗಳನ್ನು ಆಡುತ್ತಾರೆ. ಪೋಸೊ ಮತ್ತು ಲಕ್ಕಿಯರನ್ನು ನೋಡಿದ್ದು ಯಾವುದೋ ಕಾಲದಲ್ಲಿ ನಡೆದಿದ್ದ ಘಟನೆಯೆಂಬಂತ ಅವರು ಚರ್ಚಿಸುತ್ತಾರೆ. ಇರುವ ವಿಚಾರ, ಹೋಗುವ ವಿಚಾರ, ಸಾಯುವ ವಿಚಾರ, ಗೋಚೋಗಾಗಿ ಕಾಯುವ ವಿಚಾರ ಮತ್ತೆ ಎತ್ತುತ್ತಾರೆ. ಲಕ್ಕಿ ಮತ್ತು ಪೋಸೋ ಮತ್ತೆ ಪ್ರವೇಶಿಸುತ್ತಾರೆ. ಹಿಂದಿನ ದರ್ಪವಾಗಲಿ ಗತ್ತಾಗಲಿ ಪೋಸೊನಲ್ಲಿ ಈಗ ಇಲ್ಲ. ಅವನು ಈಗ ಕುರುಡ ; ಲಕ್ಕಿಯಿಲ್ಲದೆ ಅವನ ಪಥ ಸಾಗುವುದಿಲ್ಲ. ಮತ್ತೆ ಅದೇ ಹುಡುಗ ಬರುತ್ತಾನೆ. ಬೇವರ್ಸಿಗಳು ಅವನ ಹತ್ತಿರ ಗೋಡೋನ ಮಾಹಿತಿ ಕೇಳುತಾರೆ. ಅವನಿಗೆ ಗಡ್ಡವಿದೆಯೇ ? ಅವನ ಬಣ್ಣವೇನು ? ಒಳ್ಳೆಯ ಯಜಮಾನನೆ ? -ಇತ್ಯಾದಿ. ಹುಡುಗ ಹೊರಟು ಹೋಗುತ್ತಾನೆ. ಮೊದಲನೆ ಅಂಕದ ಕೊನೆಯಲ್ಲಿಯಂತೆಯೇ ಈಗಲೂ ಒಬ್ಬ ಬೇವರ್ಸಿ “ಹೋಗೋಣವೆ’ ಎಂದು ಕೇಳುತ್ತಾನೆ. ಇನ್ನೊಬ್ಬ “ಆಗಲಿ’ ಎನ್ನುತ್ತಾನೆ. ಆದರೆ ಹಿಂದಿನಂತೆ ಇಬ್ಬರೂ ಚಲಿಸುವುದಿಲ್ಲ. ತೆರೆ ಬೀಳುತ್ತದೆ.
ನಾಟಕ ಗಹನವಾಗಿಯೇ ಕೊನೆಗೂ ಉಳಿಯುತ್ತದೆ. ವಿವರಿಸಿದ ಕೂಡಲೆ ತನ್ನ ಗುಟ್ಟನ್ನು ಬಿಟ್ಟು ಕೊಟ್ಟು ಸರಳವಾಗಿಬಿಡುವ ಒಗಟಿನಂತಲ್ಲ ಈ ನಾಟಕ. ತನ್ನ ರಹಸ್ಯವನ್ನು ಬಚ್ಚಿಟ್ಟುಕೊಂಡು ನಮ್ಮನ್ನು ಚಿಂತಿಸಲು ಹಚ್ಚುವ ಶಕ್ತಿ ಈ ನಾಟಕಕ್ಕಿದೆ. ಕಣ್ಣಿಗೆ, ಕೆವಿಗೆ ಮೊದಲಿನಿಂದ ಕೊನೆಯವರೆಗೂ ಹೊಸದಾಗಿರುವ ಈ ನಾಟಕಕ್ಕೆ ಜಡ್ಡಾದ ನಮ್ಮ ಭಾವನೆಗಳನ್ನು ಪುಸಲಾಯಿಸಿ ಎಚ್ಚರಿಸುವ, ಕಾಡುವ ಸತ್ವ ಇದೆ. ಕೆಲವೊಂದು ಘಟನೆಗಳು ಅಸ್ಪಷ್ಟವಾಗಿ ಅರ್ಥವಾಗುತ್ತವೆ. ಈಗ ದರ್ಪದಿಂದಿದ್ದು ಮುಂದೆ ಕುರುಡಾಗುವ ಪೋಸೊ ದಬ್ಬಾಳಿಕೆಯ ನಿರರ್ಥಕತೆಯನ್ನು ಸೂಚಿಸುತ್ತಾನೆ. ಪೋಸೊ ಸೊರಗಿದ ಗುಲಾಮನ ಮೇಲೆ ಅವಲಂಬಿಯಾದ ಸೋತ ಯಜಮಾನನಾದರೆ, ಲಕ್ಕಿ ಬುದ್ಧಿ ಜೀವಿಯ ದ್ರಾಬೆತನವನ್ನು ಸಂಕೇತಿಸುತ್ತಾನೆ. ಒಬ್ಬನನ್ನು ಬಿಟ್ಟು ಇನ್ನೊಬ್ಬ ಇರಲಾರ. ENDGAME ನಲ್ಲಿ ಹ್ಯಾಮ್ ಮತ್ತು ಕ್ಲೊವ್‌ರ ಸಂಬಂಧ ಈ ಬಗೆಯದೆ. ಹ್ಯಾಮ್ ನಿಲ್ಲಲಾರ, ಕೊವ್ ಕೂರಲಾರ. ಎಸ್ಟ್ರಗನ್ ಮತ್ತು ಲಾಡಿ ಮೀರರು ಕೂಡ ಪರಸ್ಪರ ದ್ವೇಷಿಸುವ, ಪ್ರೀತಿಸುವ, ಆದರೆ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಬಂಧಿತರು. ಒಬ್ಬ ತೋರ, ಇನ್ನೊಬ್ಬ ಸಪುರ ; ಒಬ್ಬ ಆಸೆಬುರುಕ, ಇನ್ನೊಬ್ಬ ಸೂಕ್ಷ್ಮಮನಸ್ಸಿನವ; ಒಬ್ಬನ ಕಾಲು ನಾರುತ್ತದೆ, ಇನ್ನೊಬ್ಬನ ಬಾಯಿ ನಾರುತ್ತದೆ.
ಸರ್ಕಸ್ಸಿನ ಬಫೂನು ತಾನು ನಗದೇ ಪ್ರೇಕ್ಷಕರನ್ನು ನಗಿಸಲೆಂದು ಮಾಡುವಂತಹ ನಟನೆಗಳು ನಾಟಕದುದ್ದಕ್ಕು ಬರುತ್ತವೆ. ಲಾರೆಲ್ ಮತ್ತು ಹಾರ್ಡಿಯರಂತೆ ಹ್ಯಾಟುಗಳನ್ನು ಬದಲಾಯಿಸಿಕೊಳ್ಳುವುದು ; ಬೂಟನ್ನು ಬಿಚ್ಚಲು ಒದ್ದಾಡುವುದು ; ಪ್ಯಾಂಟ್ ಜಾರಿ ಬೀಳುವುದು ; ಇದ್ದಕ್ಕಿದ್ದಂತೆ ನಿದ್ದೆ ಹೋಗುವುದು ; ಥಟ್ಟನೆ ಎಚ್ಚರವಾಗುವುದು ; ಕಾಲುಗಳನ್ನು ಅಗಲಿಸಿ ನಡೆಯುವುದು ; ಮೂತ್ರಶಂಕೆ ತೀರಿಸಿಕೊಳ್ಳಲು ಅವಸರದಿಂದ ಓಡುವುದು ; ಈಗ ಜಗಳವಾಡುವುದು, ಮತ್ತೆ ಅಪ್ಪಿ ಮುದ್ದಿಡುವುದು ; ಮುತ್ತಿಟ್ಟೊಡನೆ ಬಾಯಿವಾಸನೆಯಿಂದ ಹೇಸಿ ದೂರ ಸರಿಯುವುದು ; ಹ್ಯಾಟನಿಂದ ಕೀಟವನ್ನು ಓಡಿಸಲು ಶ್ರಮಿಸುವುದು- ಹೀಗೆ ದಿನನಿತ್ಯದ ಎಲ್ಲ ಕರ್ಮಗಳೂ ನಾಟಕದಲ್ಲಿ ಸಾಂಗವಾಗಿ ನಿಧಾನವಾಗಿ, ಬುದ್ಧಿಪೂರ್ವಕವಾಗಿ ಅಭಿನಯಿಸಲ್ಪಡುವುದರಿಂದ ನಮಗೆ ಒಗ್ಗಿಹೋದದ್ದರ ಹಿಂದಿರುವ ಅಸಂಬದ್ಧತೆಯ ದರ್ಶನವಾಗುತ್ತದೆ.
ನಾಟಕದಲ್ಲಿ ಕೆಲವು ಸಾರಿ ಕ್ರೌರ್ಯ ಕಾಣಿಸಿಕೊಳ್ಳುತ್ತದೆ. ತನ್ನ ದರ್ಪ ಪ್ರದರ್ಶನದ ಸುಖಕ್ಕಾಗಿ ಫೋಸೊ ಲಕ್ಕಿಯನ್ನು ಹಿಂಸಿಸುತ್ತಾನೆ ; ಸಹಾನುಭೂತಿಯನ್ನು ತೋರಿಸಲು ಬಂದ ಬೇವರ್ಸಿ ಎಸ್ಟಗನ್ ಅನ್ನು ಗುಲಾಮ ಲಕ್ಕಿ ಥಳಿಸುತ್ತಾನೆ; ಬೇವರ್ಸಿ ಎಸ್ಟ್ರಗನ್ ಲಕ್ಕಿಯನ್ನು ಒದೆಯುತ್ತಾನೆ; ಕುರುಡನಾದ ಪೋಸೋನ ಬಾಯಿ ಮುಚ್ಚಿಸಲೆಂದು ಲಾಡಿಮೀರ್ ಅವನನ್ನು ಹೊಡೆಯುತ್ತಾನೆ. ಸರ್ಕಸ್ಸಿನ ಬಫೂನರಿಯಂತೆಯೇ ಮ್ಯೂಸಿಕ್ ಹಾಲಿನ ಮಾತಿನ ಚಕಮಕಿಯನ್ನೂ, ಕಾಮೆಡಿಗೆ ಮೂಲ ಆಕರವಾದ ಮೂಕಾಭಿನಯವನ್ನೂ ಬೆಕೆಟ್ ಉಪಯೋಗಿಸಿಕೊಳ್ಳುತ್ತಾನೆ. ಬಾಯಿತುಂಬ ಹರಟುವ ಪಾತ್ರಗಳು ಇದ್ದಕ್ಕಿದ್ದಂತೆ ನಿಶ್ಚಲರಾಗಿಬಿಡುತ್ತಾರೆ-ಮಾತು -ಮೌನ ಬೆರೆತ ಈ ಹಾಸ್ಯ ಕರುಣ ಮಿಶ್ರಿತ ವಕ್ರಲಯದಲ್ಲಿ ಮನುಷ್ಯನ ಪಾಡನ್ನು ಸಂಕೇಶಿಸುವ ಶಕ್ತಿ ಗುಪ್ತವಾಗಿ ಹರಿಯುತ್ತಿರುವುದು ನಿಧಾನವಾಗಿ ಹೊಳೆಯುತ್ತದೆ.
ಬೆಕೆಟ್ಟಿನದು ನಿಷ್ಕ್ರಮಣದ ದಾರಿಯಿಲ್ಲದ, ಕೊನೆಯಿಲ್ಲದ ಪ್ರಪಂಚ. ENDGAME ನ ಹ್ಯಾಮ್ ಸಾಯಲಾರ, ಕ್ಲೊವ್ ಬಿಟ್ಟು ಹೋಗಲಾರ. ಗೋಡೋ ಬರುವುದೇ ಇಲ್ಲ. ನಾವು ಸ್ವಸಂತೃಪ್ತಿಯಲ್ಲಿ ಅವಚಿಕೊಂಡಿರುವ ಎಷ್ಟೋ ಭ್ರಾಂತಿಗಳನ್ನು ಕಂಡು ಬೆಕೆಟ್ ವಿಷಾದದಿಂದ ನಗುತ್ತಾನೆ. ಪ್ರೇಮ ಅವನಿಗೆ ಒಂಟಿತನ ಮತ್ತು ಪರಸ್ಪರ ದೂಷಣೆಯ ಮರುಭೂಮಿಯಂತೆ ಕಾಣುತ್ತದೆ. ಆದರೂ ನಗುವ ಶಕ್ತಿಯನ್ನು, ಸಹಾನುಭೂತಿಯನ್ನು ಕಳೆದುಕೊಳ್ಳದ, ನೋವನ್ನು ಗುರುತಿಸಬಲ್ಲ ಬರಹಗಾರ ಬೆಕೆಟ್. ಸಿನಿಕನ ಸಂತೃಪ್ತ ನಗುವಲ್ಲ ಬೆಕೆಟ್‌ನದು. ಬದುಕು ಅಸಂಬದ್ಧವೆನ್ನಿಸಿದರೂ ಮನುಷ್ಯ ಈ ಅಸಂಬದ್ಧತೆಯನ್ನು ಮೀರಲು ಮಾಡುವ ಸಾಹಸವನ್ನು ಸಹಾನುಭೂತಿಯಿಂದ ಬೆಕೆಟ್ ಕಾಣುತ್ತಾನೆ. ತನ್ನ ಪಾತ್ರಗಳಂತೆಯೇ ಇವನೂ ಅಸ್ವಸ್ಥವಾದ ಸಂವೇದನೆಯ ಬರಹಗಾರ ಎನ್ನಿಸುತ್ತದೆ ನಮಗೆ. ಪ್ರವಾದಿಯ ನಿಶ್ಚಿತ ಧೋರಣೆ-ದಾಟಿಗಳಿಲ್ಲದೆ, ಉಧಾರವಾದಿಯ ಸಂದೇಹ ಕಾತರಗಳಿಂದ ಬರೆಯುವ ಇವನ ಕಲೆಯಲ್ಲಿ ಆಪ್ತವಾಕ್ಯದ ಸಹೃದಯತೆ ಅಡಗಿದೆ. ಕಾಲದ ಜೈಲಿನಲ್ಲಿ ಕನಸು ಶ್ರಮಿಸುತ್ತ, ಭ್ರಮಿಸುತ್ತಿರುವ ಮನುಷ್ಯ ಮೀರಿ ನಿಲ್ಲುವ ಕೆಲವೇ ಮುಹೂರ್ತಗಳು ಕಲೆಯ ಪ್ರಭೆಯಲ್ಲಿ ಮಾತ್ರ ಗೋಚರಿಸುತ್ತವೆಂದು ತಿಳಿದ ಬೆಕೆಟ್ ಅಧುನಿಕ ಕಲಾ ಪ್ರಪಂಚದ ಏಕಾಗ್ರ ಮನಸ್ಸಿನ
ಸಾಹಸಿಯಾಗಿದ್ದಾನೆ.
.
[ಕೃಪೆ : ಆಕಾಶವಾಣಿ, ಬೆಂಗಳೂರು]
ಹೊಕ್ಕುಳಲ್ಲಿ ಹೂವಿಲ್ಲ
ಬಿ. ಟಿ. ದೇಸಾಯಿ
ಎ. ಕೆ. ರಾಮಾನುಜನ್‌ರ-ಹೊಕ್ಕುಳಲ್ಲಿ ಹೂವಿಲ್ಲ
ಕನ್ನಡ ಕಾವ್ಯದಲ್ಲಿ, ಅದರಲ್ಲೂ ಆಧುನಿಕ ಕಾವ್ಯದಲ್ಲಿ ಆಸ್ಥೆಯುಳ್ಳ ನನ್ನ ಸಹೃದಯ ಮಿತ್ರರೊಬ್ಬರು ಶ್ರೀ ರಾಮಾನುಜನರ ಹೊಕ್ಕುಳಲ್ಲಿ ಹೂವಿಲ್ಲದಲ್ಲಿಯ ಕೆಲವು ಕವನಗಳನ್ನು ಓದುತ್ತಿದ್ದಂತೆಯೇ ಅವರ ಮುಖದ ತುಂಬಾ ಪ್ರಶ್ನಾರ್ಥಕ ಚಿಹ್ನೆಗಳು ಮೂಡಿದವು. ಅವುಗಳನ್ನು ಕವನಗಳೆಂದು ಕರೆಯಲಿಕ್ಕೂ ಹಿಂದೆಮುಂದೆ ನೋಡತೊಡಗಿದರು. ಇವುಗಳನ್ನು ‘ಹರಟೆ’ ಎಂದೇಕೆ ಕರೆಯಬಾರದು ? ಎಂದು ಅಂದರು. ಅವರ ಈ ಧೋರಣೆಯನ್ನೇ ವಿಷಯವಾಗಿಟ್ಟುಕೊಂಡು ರಾಮಾನುಜನರ ಕಾವ್ಯದ ಬಗೆಗಿನ ಕೆಲವು ಮೂಲಭೂತ ಸಂಗತಿಗಳನ್ನು ವಿವೇಚಿಸಲು ಇಲ್ಲಿ ಪ್ರಯತ್ನಿಸಿದ್ದೇನೆ.
ರಾಮಾನುಜನರ ಕಾವ್ಯ ಕನ್ನಡದಲ್ಲಿ ಈವರೆಗೆ ಬಂದ ಕಾವ್ಯಕ್ಕಿಂತ (ಇದರಲ್ಲಿ ‘ನವ್ಯ ಕಾವ್ಯ’ವೂ ಬಂತು) ಭಿನ್ನ ಪ್ರಕೃತಿಯದು ಎನ್ನುವುದೇ ಅವರ ಕಾವ್ಯದ ಸಶ್ವದ ಬಗ್ಗೆ, ಗುಣದ ಬಗ್ಗೆ ಸಂದೇಹಗಳನ್ನು ಹುಟ್ಟಿಸುತ್ತದೆ. ಇದಕ್ಕೆ ಬಹುಶಃ ನಮ್ಮ ಸಾಂಪ್ರದಾಯಿಕ ವಾಚನಕ್ರಮವೇ ಕಾರಣ ಎನ್ನಿಸುತ್ತದೆ. “…every author, as far as he is great, and at the same time ORIGINAL, has had the task of CREATING the taste by which he is to be enjoyed: so has it been, so will it continue to be” ಎಂದ ವರ್ಡ್ಸ್‌ವರ್ಥನ ಈ ಮಾತನ್ನು ರಾಮಾನುಜನರ ಕಾವ್ಯವನ್ನೋದುವಾಗ ನೆನಪಿನಲ್ಲಿಟ್ಟುಕೊಳ್ಳಬೇಕು.
ಸಾಮಾನ್ಯವಾಗಿ ನಾವು ಸದ್ಯಕ್ಕೆ ಅಥವಾ ಕಾವ್ಯಕ್ಕೆ ಒಂದು, ಗದ್ಯಕ್ಕೆ ಇನ್ನೊಂದು ಹೀಗೆ ಭಿನ್ನ ನಮೂನೆಯ ವಾಚನಕ್ರಮಗಳನ್ನು ಉಪಯೋಗಿಸುತ್ತ ಬಂದಿದ್ದೇವೆ. ಕೆಲವೊಂದು ಪದ್ಯವನ್ನು ಪದ್ಯದಂತೆಯೇ ಲಯಬದ್ಧವಾಗಿ, ಛಂದೋಬದ್ಧವಾಗಿ ಓದಬೇಕಾಗುತ್ತದೆ ನಿಜ. ಆದರೆ ಎಲ್ಲ ಪದ್ಯವನ್ನೂ ಒಂದೇ ರೀತಿ ಓದಬೇಕಾಗಿಲ್ಲ.
ಬಹುಶಃ ಎಲ್ಲ ಪದ್ಯ ಅಥವಾ ಕಾವ್ಯವನ್ನು ಎರಡು ವರ್ಗ ಮಾಡಬಹುದೆಂದು ಅನಿಸುತ್ತದೆ: ಒಂದು ಹಾಡುವ ಪದ್ಯ, ಇನ್ನೊಂದು ಮಾತಾಡುವ ಅಥವಾ ಸಂಭಾಷಣೆಯ ಪದ್ಯ. ‘ಹಾಡುವ ಪದ್ಯ’ದಲ್ಲಿ ಕವಿ ಶಬ್ದಗಳ “ಕೇವಲ ಸಂಗೀತವನ್ನು ಉಪಯೋಗಿಸಿಕೊಳ್ಳುವುದೇ ಹೆಚ್ಚು. ಇಂಥಲ್ಲಿ ‘ನಾದ’ವೇ ಪ್ರಮುಖವಾಗಿರುತ್ತದೆ. ಇಲ್ಲಿ ಕವಿ ತನ್ನ ಧೋರಣೆಯನ್ನು ಶಬ್ದಾರ್ಥಾನುಸಾರಿಯಾಗಿಸಿರುತ್ತಾನೆ. ಭಾಷೆಯ ಅರ್ಥವಂತಿಕೆಯಲ್ಲಿಯೇ ತನ್ನ ಧೋರಣೆಯ ವ್ಯಂಜಕತೆಯನ್ನು ಹುದುಗಿಸಿರುತ್ತಾನೆ. ಮಾತಾಡುವ ಪದ್ಯದಲ್ಲಿ ಕವಿ ತನ್ನ ಧೋರಣೆಯನ್ನು ಶಬ್ದಾರ್ಥಾನುಸಾರಿಯಾಗಿಸದ ವಾಕ್ಯಾರ್ಥಾನುಸಾರಿಯಾಗಿಸಿರುತ್ತಾನೆ. ಅಂದರೆ ಮಾತಾಡುವ ಧಾಟಿ, ಧ್ವನಿಯ ಏರಿಳಿತಗಳ ಮುಖಾಂತರ ಈ ಕವಿ ತನ್ನ ಧೋರಣೆಗಳನ್ನು ಸೂಚಿಸುತ್ತಾನೆ. ಎರಡು ಉದಾಹರಣೆಗಳು ಈ ಮಾತನ್ನು ಸ್ಪಷ್ಟ ಪಡಿಸಬಹುದು.
ಪ್ರಭೂ,
ಪರಾಕು ಪಂಪನ್ನೊತ್ತಿಯೊತ್ತಿ ನಡ ಬಗ್ಗಿರುವ
ಬೊಗಳುಸನ್ನಿಯ ಹೊಗಳುಭಟ್ಟ ಖಂಡಿತಾ ಅಲ್ಲ,
ಇಲ್ಲಿ ಪಂಪು, ಸನ್ನಿ, ಭಟ್ಟ ಶಬ್ದಗಳ ಮುಖಾಂತರ ಕವಿ ತನ್ನ ಧಾರ್ಷ್ಟ್ಯದ ಅಹಮಿಕೆಯನ್ನೂ, ತಿರಸ್ಕಾರವನ್ನೂ ಸೂಚಿಸಿದಂತೆಯೇ “ಒತ್ತಿಯೊತ್ತಿ’, ‘ಖಂಡಿತಾ ಅಲ್ಲ’ ಇವುಗಳ ಮುಖಾಂತರವೂ ಸೂಚಿಸುತ್ತಾನೆ. ಇಂಥ ಭಾಷೆಯನ್ನು ನಾನು ನೀವು ಸರ್ವಥಾ ಮಾತಾಡಲಾರೆವು. ಇಲ್ಲಿ ಅರ್ಥ ಶಬ್ದದಿಂದ ಶಬ್ದಕ್ಕೆ ಒಟ್ಟುಗೂಡುತ್ತ ಹೋಗುತ್ತದೆ. ಇಂಥ ಭಾಷೆಗೆ ಒಂದು ರೀತಿಯ ಕೃತ್ರಿಮತೆ ಇದೆ. ಈ ಕೃತ್ರಿಮತೆ ಇನ್ನೂ ಸ್ಪಷ್ಟವಾಗಿ ಕಾಣುವುದು ಛಂದೋಬದ್ಧ ಕಾವ್ಯದಲ್ಲಿ. ಇಲ್ಲಿ ಕವಿಗೆ ತನ್ನ ಮಾತಿನ ‘ಧಾಟಿ’ಗಿಂತ ‘ನಾದ’ವೇ ಪ್ರಮುಖವಾಗಿಬಿಡುತ್ತದೆ. ಬಹುಶಃ ಲಕ್ಷ್ಮೀಶನನ್ನು ‘ನಾದಲೋಲ’ನೆಂದು ಶ್ರೀ ಬೇಂದ್ರೆಯವರು ಕರೆದದ್ದು ಈ ಅರ್ಥದಲ್ಲೇ ಎಂದು ಕಾಣುತ್ತದೆ.
ಎರಡನೇ ರೀತಿಯದಕ್ಕೆ ಈ ಸಾಲುಗಳನ್ನು ನೋಡಬಹುದು :
ಇದೆಲ್ಲ ಯಾಕೋ ಹೆಚ್ಚಾಯಿತು
ಮಾತು
ಈಗ ತಲೆಯಿಂದ ಬಿದ್ದ ಕೂದಲಿನ ಜತೆಗೇ
ಬಿತ್ತು,
ನೋಡಿ
ನರೆ ಇಲ್ಲದ ನೆರಳು.
ಎಂಬಲ್ಲಿ ಶಬ್ದದ ಅರ್ಥಕ್ಕಿಂತ ಮಾತಿನ ಧಾಟಿಯ ಒತ್ತಡವೇ ಜಾಸ್ತಿಯಾಗುತ್ತದೆ. “ಯಾಕೋ….” ಈಗ….’ ‘ನೋಡಿ…? ಇಂಥ ಆಡುಮಾತಿನ ಅಂಶಗಳನ್ನು ಬಳಸಿಕೊಂಡು ಕವಿ ತನ್ನ ಬಗೆಗೇ ಇರುವ ಅವಿಶ್ವಾಸ ನಿರರ್ಥಕತೆಯನ್ನು ಸೂಚಿಸುತ್ತಾನೆ. ಇಲ್ಲಿ ಒಟ್ಟು ಅರ್ಥ ಯಾವದೊಂದು ಶಬ್ದ ಅಥವಾ ಶಬ್ದ ಸಮುಚ್ಚಯದ ಮೇಲೆ ಅವಲಂಬಿಸಿಲ್ಲ. ‘ಪರಾಕು ಪಂಪು’, ‘ಬೊಗಳುಸನ್ನಿ’ಯಲ್ಲಿ ಕಾಣುವ ಅರ್ಥದಲ್ಲಿಯ ಸ್ಪಷ್ಟ ಧೋರಣೆ ಇಲ್ಲಿ ಇಲ್ಲ. ಒಟ್ಟಿನ ಮೇಲೆ ಈ ಇಬ್ಬರೂ ಕವಿಗಳು ಭಾಷೆಯ ಬೇರೆ ಬೇರೆ ಸ್ವರಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಎನ್ನುವದು ಮುಖ್ಯ.
ಆದರೆ ಒಂದು ಮಾತು. ನಾನು ಈ ಮೇಲಿನ ಮಾತನ್ನು ಯಾವನೊಬ್ಬ ಕವಿಯ ಮೌಲ್ಯಮಾಪನಕ್ಕಾಗಿ ಹೇಳಿಲ್ಲ. ಒಬ್ಬ ಕವಿ ಇನ್ನೊಬ್ಬನಿಗಿಂತ ಹೇಗೆ ಭಿನ್ನ ಎಂಬುದನ್ನು ಎತ್ತಿ ತೋರಿಸಲಿಕ್ಕೆ ಮಾತ್ರ. ಈ ಭಿನ್ನತೆಯೆ ಆಯಾ ಕಾವ್ಯವನ್ನು ಓದುವ ನಮ್ಮ ರೀತಿಯನ್ನು, ಅವುಗಳ ಬಗೆಗಿನ ನಮ್ಮ approach ನ್ನು ನಿರ್ಧರಿಸುತ್ತದೆ. ನಾನು ಹೇಳುವದು ಇಷ್ಟೆ : ಒಂದು ಬಗೆಯ ಪದ್ಯವನ್ನು ಓದುವಾಗ ಇನ್ನೊಂದು ಬಗೆಯ ಪದ್ಯಕ್ಕೆ ಅನ್ವಯಿಸುವ ಮೌಲ್ಯನಿರ್ದೆಶನಗಳನ್ನು ತರಬಾರದು-ಎಂದು. ಅವುಗಳಲ್ಲಿಯ ಅಂತರ ಮೂಲಭೂತವಾದದ್ದೂ, ಒಟ್ಟು ಮೌಲ್ಯ ನಿರ್ಧಾರದ ದೃಷ್ಟಿ ಯಿಂದ ಅವಶ್ಯವಾದದ್ದೂ ಇರಬಹುದು, ಆ ಮಾತು ಬೇರೆ.
ಅದಕ್ಕೇ ಹೇಳುತ್ತೇನೆ-ರಾಮಾನುಜನರ ಪದ್ಯವನ್ನು ಮಾತಾಡಿದಂತೆಯೇ ಓದಬೇಕು -ಹಾಡಬಾರದು. ರಾಮಾನುಜನ್ ಒಬ್ಬರೇ ಈ ರೀತಿಯ ಕಾವ್ಯ ಬರೆದಿದ್ದಾರೆಯೆಂದಲ್ಲ. ಪಂಪ, ಕುಮಾರವ್ಯಾಸರಿಂದ ಹಿಡಿದು ಬೇಂದ್ರೆ, ಅಡಿಗರವರೆಗೂ ಈ ಕಾವ್ಯ ಹರಿದುಬಂದಿದೆ. ಆದರೆ ಅವರು ಮಾತಾಡುವ ಮತ್ತು ಹಾಡುವ ಪದ್ಯವೆರಡನ್ನೂ ಸೇರಿಸಿಯೇ ಬರೆದಿದ್ದಾರೆ. ಆದ್ದರಿಂದ ಅದನ್ನು ಹೇಗೆ ಓದಿದರೂ ಪದ್ಯವಾಗುತ್ತದೆ. ಇವರಿಗೆ ಭಾಷಣದ, ಮಂತ್ರದ ಧಾಟಿ ಪ್ರಮುಖವಾಗಿದ್ದರೆ ರಾಮಾನುಜನ್ ರೀತಿಯ ಕಾವ್ಯಕ್ಕೆ ಹರಟೆಯ ಧಾಟಿ ಮುಖ್ಯವಾಗುತ್ತದೆ. ನಾನು ನೀವು ಕುಳಿತು ಸಹಜ ಹರಟೆ ಹೊಡೆಯುವ ಧಾಟಿಯಲ್ಲಿ ರಾಮಾನುಜನರನ್ನು ಓದಿದರೇ ಅವರ ಪದ್ಯದ ಸವಿ ಹತ್ತುತ್ತದೆ. ಏಕೆಂದರೆ ಸಂಭಾಷಣೆ ಅಥವಾ ಹರಟೆಯೇ ಅವರ ಕಾವ್ಯದ ಜೀವಾಳ.
ಹರಟೆ ಹೊಡೆಯಬೇಕಾದರೆ ಕನಿಷ್ಠ ಇಬ್ಬರು ಬೇಕಾಗುತ್ತಾರೆ : ಹರಟೆ ಹೊಡೆಯುವವನೊಬ್ಬ, ಹೊಡೆಸಿಕೊಳ್ಳುವವನೊಬ್ಬ. ಹರಟೆಯ ವಿಷಯವು ಆತ್ಮೀಯವಾಗಿಯೂ, ಹಗುರಾಗಿಯೂ, ನಮ್ಮ-ನಿಮ್ಮ ದಿನನಿತ್ಯದ ಅನುಭವಕ್ಕೆ ಸಿಗುವಂಥದೂ ಇರಬೇಕು. ಗೀತೆ ಅಥವಾ ಕಮ್ಯುನಿಸಂ ಬಗ್ಗೆ ಹರಟೆ ಹೊಡೆಯಲಿಕ್ಕಾಗುವದಿಲ್ಲ ; ಬೇಕಾದರೆ ಭಾಷಣ ಬಾರಿಸಬಹುದು. ರಾಮಾನುಜನರ ಒಂದೊಂದು ಕವನವನ್ನು ಒಂದೊಂದು ತುಣುಕು ಹರಟೆಯೆಂದು ಓದಬಹುದು. ಆದರೆ ಅದು ಕೇವಲ ಆ ಮಟ್ಟಕ್ಕೆ ನಿಲ್ಲದೆ ಹರವಾಗುತ್ತ, ಅರ್ಥ ವಿಸ್ತಾರ ಪಡೆಯುತ್ತದೆ. ಅದು ಹೇಗೆ ಎಂಬುದನ್ನು ತಾತ ಕೂತಿದ್ದ ಎನ್ನುವ ಕವನದಲ್ಲಿ ನೋಡಬಹುದು :
ಹೀಗೇ ಒಬ್ಬ ಮುದಿತಾತ ಮುಂಜಾನೆ ಕಟ್ಟೆಯ ಮೇಲೆ ಕೂತು ಬಿಸಿಲು ಕಾಸುತಿದ್ದಾಗ ಗೊಟಕ್ ಅಂದ. ಅದು ಹೇಗೆ ಅಂದರೆ:
ತಾತ ಕೂತಿದ್ದ.
ನೆರಮನೆಯ ಚಿಕ್ಕ ತಾತನ ಮೊಮ್ಮಗಳು ಬಾಗಿಲ
ಬಿಸಿಲ
ಲ್ಲಿ ನಿಂತು ಕರೆದಾಗ
ಅಲ್ಲೇ ಮೂಲೆಯ ಕುರ್ಚಿಯಲ್ಲೇ ಲೇವಾದೇವಿ ಲೆಕ್ಕ ಮುಗಿಸಿ
ಕೂತಿದ್ದ ನೆರೆಮನೆಯ ಚಿಕ್ಕತಾತ, ಮಾಗಿ
ರಾತ್ರಿಯ ಛಳಿ ಥಣ್ಣಗೆ ಕೊರೆದಾಗ
ಎಷ್ಟೋ ವರುಷದ ಸುಡುಗಾಡು ಲೆಕ್ಕ
ಫಕ್ಕನೆ ಸುಲಭವಾಯಿತು.
“ಸುಡುಗಾಡು ಲೆಕ್ಕ’ವೆಂದ ಕೂಡಲೇ ಕಿವಿ ನಿಮಿರುತ್ತದೆ ಏನಿರಬಹುದು ? ಎಂದು.
ಆದರೂ ಅಡ್ಡಿಯಿಲ್ಲ, ಕಥೆ intcresting ಇದೆ. ಮುಂದೆ?
ಬೆಳಗಿನ ಕೋಳಿ
ಯ ಬಿಂಕಕ್ಕೆ ಬಿಸಿ ತಾಗಿ
8
ಅದರ ಬುಗ್ಗೆ ಬುಗ್ಗೆಯ ಕೊರಲ ಸೆಲೆ ಒಡೆದು
ಹಗಲನ್ನುಕ್ಕಿಸಿದಾಗ ಬಿಸಿಲ ಕೊಕ್ಕೊಕ್ಕೋ ಕೋಡಿ
ನೆಲವೆಲ್ಲ ಹರಿದಾಗ
ಆ ನೀರಿನ ಏರುಬೆಟ್ಟದ ಹಸಿರು ಬಿಳಿ ನೀಲಿ ಪುಷ್ಪರಾಗ
ದ ಬೆಳಕು ಮುಖವೆ ಕಾಣದ ಗಾಜಾಗಿ
ಹೆಪ್ಪುಗಟ್ಟಿತು.
ರಾಮಾನುಜನ್ ತಾವು ಹೇಳುವ ಮಾತನ್ನು ಅಭಿನಯಿಸಬಲ್ಲರು ಎಂಬುದಕ್ಕೆ ಈ ಪ್ಯಾರಾ ಸಾಕ್ಷಿ. ತಾತ ಕಾಯಿಸುತ್ತಿದ್ದ ಬಿಸಿಲಿನ ಸಪ್ತವರ್ಣದ ವೈಭವ “ಏಕವರ್ಣದ ವರ್ಣನೀಯ ಶಾಂತಿ’ಯಾಗಿ ಹೇಗೆ ಹೆಪ್ಪುಗಟ್ಟಿತು ಎಂಬುದು ಇಲ್ಲಿ ಮುಖ್ಯ. ಹಾಗೆಯೇ ಬಿಸಿ ಮತ್ತು ತಂಪುಗಳ contrast ಕೂಡ.
ಟೆಲಿಫೋನು ಬಾರಿಸಿತು.
ಕೋಳಿಮರಿ ಪುಕ್ಕ ಒದರಿ ನುಚ್ಚಿನ ನಡುವೆ ಅಕ್ಕಿ ಮಣಿ
ಆರಿಸಿತು.
ಟೆಲಿಫೋನು ಮತ್ತೆ ಭಾರಿಸಿತು.
ಮನೆಯಲ್ಲಿ ಮಗಳಿಲ್ಲ.
ಗಂಟೆಗಂಟಿಗು ಗಂಟೆ
ಈ ಅನಿಮಿಷ ದೇವನ ಮುಂದೆ ದಿನವೆಲ್ಲ
ಬಾರಿಸಿತು. ಸ್ನೇಹದ ಗಂಟೆ.
ಲಂಗೋಟ ಸ್ನೇಹಿತರ ಜನ್ಮಾಂತರದ ಗಲ್ಲಿ ಹಿಂದಿನ ಗಂಟೆ.
ಉಡಿದಾರವಿಲ್ಲದ ಗಂಟೆ.
ತಪ್ಪು ನಂಬರು.
ಕೆಪ್ಪ ಹುಂಬರು.
ಆಸೆಯ ದೂರದ ನೆಂಟರು
………………………………
………………………………
…………………ಹಿಮಾಲಯ
ನಿದ್ರೆಯಾರಿಸಿಕೊಂಡು
ಅಲ್ಲೇ ಕೂತಿದ್ದ.
ಈಗ ಸಂಶಯ ಸರಳವಾಯಿತು. ‘ತಾತ ಸತ್ತಿದ್ದಾನೆ’ ಎಂದು. ಬಿಟ್ಟ ಕಣ್ಣು ಬಿಟ್ಟಂತೆಯೇ ಕುಳಿತಲ್ಲಿಯೇ ಸೆಟೆದ ಈ ‘ಅನಿಮಿಷ ದೇವನ’ ಎಷ್ಟೋ ವರುಷದ ಸುಡಗಾಡು ಲೆಕ್ಕ’ ಹೀಗೆ ‘ಫಕ್ಕನೆ ಸುಲಭವಾಯಿತು’. ಆದರೆ ರಾಮಾನುಜನ್‌ರನ್ನು ಓದುತ್ತಿದ್ದಾಗ ಮೈಯೆಲ್ಲ ಕಿವಿಯಾಗಿರಬೇಕಾಗುತ್ತದೆ. ಕತೆ ಚೆನ್ನಾಗಿ ಹೇಳುತ್ತಿದ್ದಾರೆಂದು ಬರೇ ‘ಹೂಂ’ ಗುಟ್ಟಿದರೆ ಸಾಲದು. ಉದಾಹರಣೆಗೆ “ತಪ್ಪು ನಂಬರು” ಮೊದಲಿನ ಪ್ಯಾರಾದೊಂದಿಗೆ ತೆಗೆದುಕೊಂಡರೆ wrong number’ ಎಂದು ಅರ್ಥ. ಏಕೆಂದರೆ ತಾತನಿಗೆ ಈಗ ಬಂದ ಟೆಲಿಫೋನು ಆತನಿಗಲ್ಲವೇ ಅಲ್ಲ. ಇದನ್ನೇ ಮುಂದಿನ ಪ್ಯಾರಾದೊಂದಿಗೆ ತೆಗೆದುಕೊಂಡರೆ : ‘ಆಸೆಯ ದೂರದ ನೆಂಟರು’ ಇತ್ಯಾದಿ ತಾತನ ಬಾಲ್ಯದ ಬಳಕೆಯವರೆಲ್ಲ ಅವನಿಂದ ಬೇರ್ಪಡಿಸಲ್ಪಟ್ಟಿದ್ದರೂ ಇನ್ನೂ ಆತನ ಬೆನ್ನು ಬಿಡಲೊಲ್ಲರು ; ತಮ್ಮ ತಪ್ಪನ್ನು ಅವರು ಇನ್ನೂ ನಂಬಲೊಲ್ಲರು. ಈ ಅರ್ಥದಲ್ಲೂ ಈ ಸಾಲು ಸರಿಗೂಡುತ್ತದೆ. ಇದು ಇನ್ನೊಂದು ವಿಶಾಲ ಅರ್ಥದಲ್ಲಿ appearance ಮತ್ತು realityಗಳ ನಡುವಿರುವ ಸಂದಿಗ್ಧತೆಯೂ ಹೌದು. ಪದ್ಯದ ಮುಂದಿನ ಪ್ಯಾರಾ ಈ ಮಾತನ್ನು ದೃಢಪಡಿಸುತ್ತದೆ.
ಸ್ಥೈರ‍್ಯದ ಕಂಚುಕಾಯಿಸಿ ದೇಹದಚ್ಚಿ
ನ ಮೂಲೆ ಮೂಲೆಗು, ಕಾಲುಗುರು ಕೈಬೆರಳು ಮೂಗು ತುದಿ
ಹಣೆ ಹುಬ್ಬು ಬಾದಾಮಿ ಕ್ರಾಸಿನ ಪಾತಿ
ಎಲ್ಲ ಹೊಯ್ದಿಟ್ಟ ಹಾಗೆಯೆ
ಅಲ್ಲೆ ಕುಡಿದ ಕಂಚಲ್ಲಾಡದೆಯೆ
ಕಿಟಕಿ ಬಿಸಿಲಲ್ಲಿ ಮಿರುಗುತ್ತ ಕೂತಿದ್ದ.
ಮಗಳ ಅಚ್ಚು ಮೆಚ್ಚಿ
ನ ಮಗಳು ಹಿಂದಿಂದ ಓಡೋಡಿ ಬಂದು
ತಾತನ ಕೈಹಾವ ತಂಪನ್ನು ಮುಟ್ಟಿ ಚೀರಿದಾಗ
ಲು ಕೂಡ ಛೇ ಮೂದೇವಿ !
ಎಂದು ಬೆಚ್ಚದೆಯೆ
ಅವರಿವರು ಬಂದು ಮುಟ್ಟಿ ಮುಚ್ಚುವವರೆಗು
ಬಿಟ್ಟ ಕಣ್ ಮುಚ್ಚದೆಯೆ
ಅಲ್ಲೇ
ಕೂತಿದ್ದ.
ತಾತ ಜೀವಂತ ಇದ್ದಾಗ ಏನು ಮಾಡಬಹುದಿತ್ತೊ ಅದೆಲ್ಲ ಈಗ ಅವನ ಸಾವಿನೆದುರು ನಿಷ್ಕ್ರಿಯವಾಗಿದೆ. ಈ ಚಿತ್ರದ ಭಯಾನಕತೆಗೆ ಪದ್ಯದ ನಾಟಕದ ಧಾಟಿಯ ಕಾರಣ-ಅರ್ಥದ ಪಾತಳಿಯಲ್ಲಿ ಸಾವೂ ಜೀವಂತದ ಭಂಗಿಯಲ್ಲಿ ಒಡಮೂಡಿದ್ದರ ವಿಪರ್ಯಾಸ. ಅವರಿವರು ಬಂದು ಸತ್ತಿದ್ದಾನೋ ಇಲ್ಲವೋ ಎಂದು ಮುಟ್ಟಿ ಖಾತ್ರಿ ಮಾಡಿಕೊಳ್ಳುವಷ್ಟರ ಮಟ್ಟಿಗೆ ತಾತನ ಸಾವು ಜೀವಂತವಾಗಿತ್ತು ! ಅಥವಾ ಜೀವನ, ಮರಣಗಳೆರಡನ್ನೂ ಪ್ರತಿನಿಧಿಸಬಲ್ಲ ದ್ವಂದ್ವ (ambivalent) ಭಂಗಿಯಲ್ಲಿ ತಾತ ಕೂತಿದ್ದ.
ಕವನ ಇಷ್ಟಕ್ಕೆ ಮುಗಿದಿದ್ದರೂ ಏನೂ ಹಾನಿ ಇದ್ದಿರಲಿಲ್ಲ. ಆದರೆ ಮುಂದೆ : ನಾನು ನೀವು ಈಗ ಕೂತಿಲ್ಲವೆ ? -ಹಾಗೆ
ಎಂದು ಓದಿದ ಕೂಡಲೆ ತನ್ಮಯರಾಗಿ ಹೂಂಗುಟ್ಟುತ್ತ ಕತೆ ಕೇಳುತ್ತ ಕೂತ ನಮಗೆ ಸಟಕ್ಕನೆ ಪೃಷ್ಟದಲ್ಲಿ ಮುಳ್ಳು ಚುಚ್ಚಿದಂತಾಗಿ ಎದ್ದು ಕೂಡುತ್ತೇವೆ ! ಕತೆ ಕೇಳುವಾಗಿದ್ದ (ಸಾವಿನಂತಹ) ನನ್ನು ತನ್ಮಯತೆಗೂ ತಾತನ ಜೀವಂತವೆನಿಸುವಂತಹ ಸಾವಿನ ಪೋಜಿಗೂ ಬಹಳ ಫರಕು ಇಲ್ಲ. ತಾತನ ಸಾವಿನಂತೆ ನಮ್ಮ ಜೀವನ್ಮೃತಾವಸ್ಥೆಯೂ ಅಕಲ್ಪಿತವೇ ! ಈ ಅರ್ಥ ಹೊಳೆದಾಗ ತಾತ ಪಟಕ್ಕನೆ ಹೋದ ಒಬ್ಬ ಮುದಿಯನಾಗದೆ ನಮ್ಮ ಬದುಕಿನ ಒಂದು ಅವಸ್ಥೆಯ ಪ್ರತೀಕವಾಗುತ್ತಾನೆ. ಈಗ ಕವನವನ್ನು ಮತ್ತೊಮ್ಮೆ ಓದಿದರೆ ಕತೆಯ ಸೆಳವಿನಲ್ಲಿ ಲಕ್ಷಕ್ಕೆ ಬಾರದೆ ಹೋದ ಕೆಲವು ಧ್ವನಿ ನಿಕ್ಷೇಪಗಳು ಸ್ಪಷ್ಟವಾಗುತ್ತವೆ. ಅದಕ್ಕೇ ರಾಮಾನುಜನ್‌ರ ಯಾವ ಕವನವನ್ನೂ ಒಂದೇ ಸಲ ಓದಿ ತಿಳಿದುಕೊಂಡೆವು ಎನ್ನುವಂತಿಲ್ಲ. ಕಾರಣ ಅಲ್ಲಿ ಅರ್ಥ ಕಠಿಣವಿದೆಯೆಂದಲ್ಲ (ಹಾಗೆ ಇದೆಯೆಂದು ಒಪ್ಪಿದರೂ), ಸಂಕೀರ್ಣವಿದೆಯೆಂದು.
ಈ ಕವನವನ್ನು ಓದಿದ ಮೇಲೆ ಕೆಲವು ಮಾತು ಹೊಳೆಯುತ್ತವೆ. ಮೊದಲನೆಯದು ; ಕವನದ ತನ್ಮಯದ ಧಾಟಿ. ಓದುಗರನ್ನು ಸಾಧ್ಯವಿದ್ದಷ್ಟು ಕವಿ ತನ್ನೊಳಗೆ involve ವಾಡಿಕೊಂಡು ‘ವಸ್ತು’ವನ್ನು ಒಂದು ಕಡೆಗೆ, “ಓದುಗ+ಕವಿ’ಯನ್ನು ಇನ್ನೊಂದು ಕಡೆಗೆ ಇಡುವ ರೀತಿ ಇದಕ್ಕೆ ಪೂರಕವಾಗಿ ಅಲ್ಲಿರುವ ವಸ್ತುವಿನ ಬಗೆಗಿನ ವ್ಯಂಗ್ಯ.
ಈ ವ್ಯಂಗ್ಯದ ಪರದೆಯಿರುವದು ತೆರೆಯಲಿಕ್ಕೆಂದೇ. ತೆರೆದ ಕೂಡಲೇ ಓದುಗ ಮತ್ತು ಕವಿ ವಸ್ತುವಿನ ಒಡಲಲ್ಲಿ ಒಂದಾಗಿ ಬಿಡುತ್ತಾರೆ. ಹಾಗೆ ನೋಡಿದರೆ ಓದುಗನನ್ನು ವಸ್ತುವಿನ ಮೇಲೆ ಒಗೆದು ತಾನು ದೂರ ನಿಂತು ಕವಿ ಕಿಲಾಡಿ ನಗು ನಗುತ್ತಾನೆ ಎಂದು ಅನಿಸುತ್ತದೆ. ಎರಡನೆಯದು : ವಸ್ತುವಿನ ಸಾಮಾನ್ಯತೆ ದಿನನಿತ್ಯದ ಅನುಭವಗಳನ್ನು ಕೆದಕಿ ಅವಕ್ಕೆ ಈ ಮೊದಲು ಎಂದೂ ನೋಡಿರದ, ಕೇಳಿರದ ಅರ್ಥವ್ಯಾಪ್ತಿಯನ್ನು ಕೊಡುವದು. ಮೂರನೆಯದು : ವಸ್ತುವನ್ನು ಒಂದು ನಿರ್ದಿಷ್ಟ ಪ್ರತಿಮೆಯಾಗಿಸುವದು-ಈ ಪ್ರತಿಮಾ ಸೃಷ್ಟಿಯೇ ಪ್ರತೀಕೀಕರಣವೂ ಆಗುವದು. ಈ ಮೂರೂ ಮಾತುಗಳಲ್ಲಿ ಮೊದಲಿನ ಎರಡು ಬಹಳ ಮಹತ್ವದವು. ಇಲ್ಲಿಯೇ ರಾಮಾನುಜನರ ಕಾವ್ಯದ ಗುಟ್ಟಿರುವದು.
ಈ ಸಂಕಲನದಲ್ಲಿ ಬಂದ ಬಹಳಷ್ಟು ಶ್ರೇಷ್ಠ ಕವನಗಳು ‘ತಾತ ಕೂತಿದ್ದ’ ಕವನದ ರೀತಿಯವು. ಉದಾಹರಣೆಗೆ: ತೆಗೆದರೆ ಬಾಗಿಲು, ನಲವತ್ತು ನೆರಳು, ಕಲೆ ಮತ್ತು ಜೀವನಸೌಂದಯ್ಯ, ಒಂದು ಕೊಡೆ, ಒಂದು ವಾಚು, ಪಿತ್ರಾರ್ಜಿತ, ತಿರುಗಿ ಬಂದೆ, ಎರಡು ಮೊಟ್ಟೆ ಇತ್ಯಾದಿ.
ರಾಮಾನುಜನ್‌ರ ಕಾವ್ಯದಲ್ಲಿ ಕಂಡುಬರುವ ಒಂದು ವಿಶೇಷ ಸೊಬಗೆಂದರೆ ಅನುಭವದ ಬಗೆಗೆ (ಅಂದರೆ ಭಾಷೆಯ ಬಗೆಗೂ ಹೌದು) ಅವರಿಗಿರುವ ನಿಸ್ಸಂಕೋಚ ದೃಢತೆ. ಅನುಭವ ಬದುಕಿಗೆ ಹತ್ತಿರವಾಗಿದ್ದಷ್ಟೂ ಅವರ ಶೈಲಿ ಹದನಾಗುತ್ತದೆ. ಅದಕ್ಕೇ ಅವರ ಕೆಲವು ಕಥನ ಕವನಗಳು-ಆ ಹಕ್ಕಿ ಬೇಕಾದರೆ, ಪರಕಾಯ ಪ್ರವೇಶ ಇತ್ಯಾದಿಗಳು-ಮಕ್ಕಳ ಕಥೆಯಂತಿದ್ದರೂ (ಮತ್ತು ಈ ಪದ್ಯಗಳಲ್ಲೆಲ್ಲ ಅವರು ಅಜ್ಜಿ ಕತೆ ಹೇಳುವ ತಂತ್ರವನ್ನೇ ಬಳಸಿಕೊಳ್ಳುತ್ತಾರೆ) ಅವು ಅಷ್ಟಕ್ಕೇ ನಿಲ್ಲುವದಿಲ್ಲ. ಪ್ರಾತಿನಿಧಿಕವಾಗಿ ರಾಮಾನುಜನ್ ನಮಗೆ ಇಡಿಯಾಗಿ ಸಿಗುವದು ಈ ಕವನಗಳಲ್ಲೇ. ಆದರೆ ಅದೇ, ಅನುಭವಗಳಿಗೆ ತಾತ್ವಿಕ, ಧಾರ್ಮಿಕ ನಿಲುವು ಇದ್ದರೆ ಅವರ ಕಾವ್ಯ ಮುಗ್ಗರಿಸುತ್ತದೆ. ಉದಾಹರಣೆಗೆ : ಕೆಲವರ ಪುನರ್ಜನ್ಮ, ಇಲ್ಲಿ ಒಂದು ಸಂಸ್ಕೃ ತಿಯ ಜೀವನ ಮಾರ್ಗದ ಇಡೀ ತಾತ್ವಿಕ ಧೋರಣೆಯೊಂದನ್ನು ಆ ಸಂಸ್ಕೃತಿಗೆ references ಇಲ್ಲದೆ ಕೇವಲ ವಿಮುಕ್ತ ವ್ಯಕ್ತಿ ಜೀವನಕ್ಕೆ ಅಳವಡಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಿಸುತ್ತದೆ. ಆದ್ದರಿಂದ ಈ ಕವನದ ಕೊನೆಯಲ್ಲಿ ಬರುವ
ಆದರೂ ಪುನರ್ಜನ್ಮ
ಎನಿಸಲಿಲ್ಲ. ಗೀತೆಯ ಕೊಟೇಶನ್ ಕೂಡ
ಜ್ಞಾಪಕಕ್ಕೆ ಬರಲಿಲ್ಲ.
ಎನ್ನುವ ಮಾತು ಸ್ವಲ್ಪ ಅಸಂಗತವಾಗುತ್ತದೆ. ಏಕೆಂದರೆ ಈ ಕವನದಲ್ಲಿ ಬರುವಂತೆ ಗೀತೆ ಅವರಿಗೆ ಒಂದು book of quotations ಮಾತ್ರ ಆಗಿ ಬಿಟ್ಟಿದೆ. ಒಂದು ಸಂಸ್ಕೃತಿಯನ್ನೇ ರೂಪಿಸಿದ ಕೆಲವು ತಾತ್ವಿಕ, ಆಧ್ಯಾತ್ಮಿಕ ಧೋರಣೆಗಳು ಆ ಸಂಸ್ಕೃತಿಯ ದೈನಂದಿನ ಅಸಂಬದ್ಧತೆಯಿಂದಾಗಿ ಹೀಗೆ ಅರ್ಥಹೀನವಾಗಿರುವುದು ಶ್ರೀ ರಾಮಾನುಜನ್ ಒಬ್ಬರ ದುರಂತ ಮಾತ್ರವಲ್ಲ; ಭಾರತೀಯ ಜೀವನವನ್ನೇ ಹಾದರಗೊಳಿಸಿದ ದುರಂತವಿದಾಗಿದೆ. ಆದರೆ ಈ ಮಾತನ್ನು ಈ ಕವನವನ್ನು ಸಮರ್ಥಿಸಲು ಹೇಳುತ್ತಿಲ್ಲ ಎಂದು ಸೂಚಿಸಬಯಸುತ್ತೇನೆ.
ಇಷ್ಟಾದರೂ ರಾಮಾನುಜನ್ ತಮ್ಮ ಅನುಭವಗಳೊಂದಿಗೆ ಸೆಣಸಾಡುತ್ತಾರೆ ಎನ್ನಿಸುವುದಿಲ್ಲ. ಇದಕ್ಕೆ ಕಾರಣ, ಅವರು ತಮ್ಮ ಅನುಭವದ ಬಗ್ಗೆ ಇರಿಸಿಕೊಂಡ ಮಿತಿಗಳು, ಅವರಿಗೆ cultural referenceಗಳು personal involvement ಆಗದೆ ಇರುವದು ಒಂದು ಕಾರಣವಿರಬಹುದು. ಆದ್ದರಿಂದಲೇ ಏನೋ ನಲವತ್ತು ನೆರಳಿನಂತಹ ಕವನದಲ್ಲಿ ಅಂಥ ಅದ್ಭುತ ಅರ್ಥಸಾಂಗತ್ಯ ಕಂಡುಬರುತ್ತದೆ. ಅಡಿಗರ ಭೂತ ಮತ್ತು ರಾಮಾನುಜನ್‌ಗೆ ನಲವತ್ತು ನೆರಳುಗಳನ್ನು ಈ ದೃಷ್ಟಿಯಿಂದ ಹೋಲಿಸಿ ನೋಡಬೇಕು. ಅಡಿಗರ ಕಾವ್ಯಕ್ಕೆ time perspective ಮುಖ್ಯ ಮನೋಭೂಮಿಕೆಯಾಗಿದ್ದರೆ ರಾಮಾನುಜನ್‌ರ ಕಾವ್ಯಕ್ಕೆ space perspective ಮಹತ್ವದ್ದಾಗಿದೆ. ಈ ದೃಷ್ಟಿ ಯಿಂದ ರಾಮಾನುಜನ್‌ರ ಕಾವ್ಯ ಇಂದಿನ ಬದುಕಿನ ಆಗುಹೋಗುಗಳನ್ನು ಸಾಧ್ಯಾ ಸಾಧ್ಯತೆಗಳನ್ನು ಅರ್ಥೈಸಿಕೊಳ್ಳುವಲ್ಲಿ ಅತ್ಯಂತ ಸಾರ್ಥಕವಾಗಿದೆ. ಭೂತದ ಕೊನೆ ಒಂದು perpetual possibility ಯತ್ತ ನಿರುಕಿಸಿದರೆ ನಲವತ್ತು ನೆರಳು realised ಮತ್ತು realisable entity ಗಳತ್ತ ಲಕ್ಷಿಸುತ್ತದೆ. ನನ್ನ ಮಟ್ಟಿಗೆ ಸದ್ಯದ ಕನ್ನಡ ಕಾವ್ಯಕ್ಕೆ ನಲವತ್ತು ನೆರಳು ಬಹುದೊಡ್ಡ ಕಾಣಿಕೆ. ಮುಖ್ಯವಾಗಿ ರಾಮಾನುಜನ್‌ರದು ಹುಂಕಾರದ ಕಾವ್ಯವಲ್ಲ. ಅವರಲ್ಲಿ ಕೋಪ, ರೌದ್ರಗಳು ಎಲ್ಲಿಯೂ ಸಿಗುವದಿಲ್ಲ. ಮೇಲಾಗಿ ಅವರು ಎಂದಿಗೂ (ಓದುಗನೊಂದಿಗಾಗಲಿ, ವಿಷಯದೊಂದಿಗಾಗಲಿ) ಸಂಪೂರ್ಣ ತನ್ಮಯರಾಗಿ ಬರೆಯುವದಿಲ್ಲ. ನಮ್ಮಲ್ಲೆಲ್ಲ ತನ್ಮಯರಾಗಿ, ತಲ್ಲೀನರಾಗಿ ಬರೆಯುವವರೇ ಹೆಚ್ಚು ರಾಮಕೃಷ್ಣ, ಬುದ್ಧ, ಗಾಂಧಿ, ನೆಹರೂರ ಕೂಡ ಹೊಡೆದಾಡಿ ಒದರಾಡುವ ಕವಿಗಳೇ ಹೆಚ್ಚು. ಉದಾಹರಣೆಗೆ ಅಡಿಗರೇ ಇದ್ದಾರಲ್ಲ ! ತನ್ಮಯನಾಗಿ ಬರೆಯುವ ಕವಿ ತನ್ನ ವಸ್ತುನಿಷ್ಠೆಯನ್ನು ಕಳೆದುಕೊಂಡು ಕೇವಲ ರೌದ್ರ, ಭೀಕರತೆಯ ಧ್ವನಿಯಾಗಿಯೋ, ಇಲ್ಲವೆ ಅಳುಬುರುಕನಾಗಿಯೋ ಬರೆಯಬಲ್ಲಷ್ಟೇ ಗಂಭೀರ ಆತ್ಮಚಿಂತನೆಯಲ್ಲಿ ತೊಡಗಿ ಅನುಭಾವಿಯೂ ಆಗಬಲ್ಲ. ಇಂಥ ಕಾವ್ಯವನ್ನು ಓದಿ ಓದಿ ದಡ್ಡು ಬಿದ್ದ ನಮಗೆ ರಾಮಾನುಜನ್‌ರ ಮಾಗಿಯ ಚಳಿಯಂತಹ ಕಾವ್ಯ ಒಗ್ಗುವುದು ಕಷ್ಟ. ಸ್ವಲ್ಪ ಕಷ್ಟ ಅಷ್ಟೆ. ಅವರ ಪ್ರೌಢ ಧೋರಣೆಗಳು, ಜೀವನದ ಸಾಧ್ಯತೆಗಳ ಬಗೆಗಿನ ಸದಾ ಎಚ್ಚರ, ಅದರಿಂದಾಗಿ ಅವರ ವ್ಯಂಗ್ಯ-ಇವು ಆತ್ಮರತಿಯ ಕೊರತೆಯನ್ನು ಇಲ್ಲವಾಗಿಸುತ್ತವೆ.
ರಾಮಾನುಜನ್‌ರ ಕಾವ್ಯ ಕನ್ನಡಕ್ಕೆ ಹೊಸ ಲಯ, ಧಾಟಗಳನ್ನು ಕೊಟ್ಟಿದೆ. ಈ ಲಯ ಧಾಟಿಗಳ ಹಿಂದೆ ವ್ಯಂಗ್ಯನಿಷ್ಠವಾದ, ಸೂಕ್ಷ್ಮ ಅನುಕಂಪಕ್ಕೊಳಗಾಗಬಲ್ಲ ಪ್ರೌಢ ಜೀವನ ದೃಷ್ಟಿಯಿದೆ. ಆ ಜೀವನದೃಷ್ಟಿ ನಮ್ಮದಾಗದೆ ಅವರ ಲಯ, ಧಾಟಿಗಳೂ ನಮ್ಮನಾಗಲಾರವು. ರಾಮಾನುಜನ್‌ರಿಂದ ನಮ್ಮ ಎಳಬರು ಕಲಿಯಬೇಕಾದದ್ದು ಬೇಕಾದಷ್ಟಿದೆಯೆಂದರೆ ಕಲಿಕೆಯವರಾರೂ ನನ್ನ ಮೇಲೆ ಸಿಟ್ಟಿಗೇಳಲಿಕ್ಕಿಲ್ಲ ಎಂದು ನಾನು ಭಾವಿಸುತ್ತೇನೆ.
.
“ನಮ್ಮದು ಮೂಲಭೂತ ಸಂಕಲ್ಪಶೀಲತೆಯೇ ಇಲ್ಲದ, ದೇವರು ಕೈಬಿಟ್ಟಿರುವ ದುರದೃಷ್ಟವಂತ ದೇಶ. ಇಲ್ಲಿ ಆಲೋಚಿಸುವ, ಭಾವಿಸುವ ಮತ್ತು ಸಂಕಲ್ಪಿಸುವ ಶಕ್ತಿಗಳು ಕ್ಷಯಗ್ರಸ್ತವಾಗಿವೆ. ಪೂರ್ಣವಾಗಿ ಮತ್ತು ನಿಜವಾಗಿ ಬದುಕುವ ಸಾಹಸದ, ದೊಡ್ಡ ಹೋರಾಟದ ಅರಿವೇ ಇಲ್ಲ. ಸ್ತ್ರೀ ಪುರುಷರೆಲ್ಲರೂ ಬರೀ ತಿನ್ನುವ, ಕುಡಿಯುವ, ಯಾಂತ್ರಿಕವಾಗಿ ಕೆಲಸ ಮಾಡುವ, ಸಿಗರೇಟು-ಬೀಡಿ ಸೇದುವ, ನಿದ್ದೆ ಹೊಡೆಯುವ ಹಾಗೂ ಕೊನೆಯಿಲ್ಲದೇ ಕಿಚಗುಟ್ಟುವ ನೆರಳುಗಳಂತೆ ಸುಳಿದಾಡುತ್ತಿದ್ದಾರೆ. ನಮ್ಮ ವಿಚಾರ ಶೈಲಿ ಬಾಲಿಶ ; ಭಾವನೆಗಳು ಸುಲಭವಾಗಿ ಭಾವಾತಿರೇಕದ ಕೀಳುಮಟ್ಟಕ್ಕೆ ಇಳಿಯುತ್ತವೆ. ಪ್ರೌಢ ಹೋರಾಟದ ಮತ್ತು ತುಂಬು ಜೀವನದ ಎಂತಹ ಅಭಾವವಿದೆ !”
“ಒಂದಾನೊಂದು ಕಾಲದಲ್ಲಿ ನಮ್ಮಲ್ಲಿ ನಮ್ಮದೇ ಆದ ಮನಸ್ಸೆಂಬುದೊಂದು ಇತ್ತು. ಅದು ಜೀವಂತವಾಗಿತ್ತು; ಅದು ಆಲೋಚಿಸುತ್ತಿತ್ತು. ಅನುಭವಿಸುತ್ತಿತ್ತು; ತನ್ನನ್ನು ತಾನು ವ್ಯಕ್ತಪಡಿಸಿಕೊಳ್ಳುತ್ತಿತ್ತು. ಅದು ತೀವ್ರ ಗ್ರಹಣಶೀಲ ಹೇಗೋ ಹಾಗೆ ಕ್ರಿಯಾಶೀಲವೂ ಆಗಿತ್ತು.”
ರವೀಂದ್ರನಾಥ ಠಾಕೂರ್
ರೀತಿ: ಮಿತಕಾಲಿಕ ಕಾವ್ಯ ಮೀಮಾಂಸೆ
ಪಿ. ನರಸಿಂಹ ಭಟ್ಟ
ರೀತಿ : ಮಿತಕಾಲಿಕ ಕಾವ್ಯಮೀಮಾಂಸೆ
ಆಲಂಕಾರಿಕರ ವಿಚಾರಸರಣಿಗಳನ್ನು ಒಟ್ಟು ಸೇರಿಸಿ ಸಾರಗ್ರಹಣ ಮಾಡುವ ಸಂದರ್ಭದಲ್ಲಿ ಎರಡು ಪಥ (approach) ಗಳು ಆರಂಭದಿಂದ ಕೊನೆಯವರೆಗೆ ಶಾಸ್ತ್ರದುದ್ದಕ್ಕೂ ವ್ಯಾಪಿಸಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಈ ಎರಡು ಪಥಗಳಲ್ಲಿ ಒಂದು ಕಾವ್ಯದ ಸತ್ವ(Spirit)ವನ್ನು ಮುಖ್ಯ ವಸ್ತುವಾಗಿಟ್ಟುಕೊಂಡು ಮುಂದುವರಿಯುತ್ತದೆ; ಇನ್ನೊಂದು ಕಾವ್ಯದ ಶರೀರ(form)ವನ್ನು ಪ್ರಧಾನವಸ್ತುವಾಗಿಟ್ಟುಕೊಂಡು ನಡೆಯುತ್ತದೆ. ಮೊದಲನೆಯ ಪಥಕ್ಕೆ ಮೂಲ ಆಧಾರವಾಗಿರುವ ಶಾಸ್ತ್ರೀಯ ಕಲ್ಪನೆಗಳು-ರಸ ಮತ್ತು ಅದರ ‘ಪರಿಕರ’ಗಳು. ಎರಡನೆಯ ಪಥದ ಮೂಲ ಕಲ್ಪನೆಗಳು-ರೀತಿ (ಮಾರ್ಗ) ಮತ್ತು ಅದರ ಘಟಕಗಳು.
ಈ ಎರಡು ಪಥಗಳಲ್ಲಿ ಮೊದಲನೆಯದು ಹೆಚ್ಚು ವ್ಯಾಪಕ, ಸೂಕ್ಷ್ಮ ಮತ್ತು ತಲಸ್ಪರ್ಶಿ. ಅಂದರೆ, ಒಂದು ದೇಶದ ಕಾವ್ಯಮೀಮಾಂಸೆಯಲ್ಲಿ ಉತ್ಪನ್ನವಾದ ಸತ್ವದ ಕಲ್ಪನೆ (ಉದಾ : ರಸ) ಆ ದೇಶದ ಕಾವ್ಯಗಳಿಗೆ ಅನ್ವಯಿಸುವಷ್ಟೇ ಸಮರ್ಪಕವಾಗಿ ಬೇರೆ ದೇಶಗಳ ಕಾವ್ಯಗಳಿಗೂ ಅನ್ವಯಿಸುತ್ತದೆ. ಇಂತಹ ಕಲ್ಪನೆ ಶಾಸ್ತ್ರದ ಬೆಳವಣಿಗೆಯ ಒಂದು ಹಂತದಲ್ಲಿ ಉತ್ಪನ್ನವಾದಂತೆ ಕಂಡರೂ ಎಲ್ಲಾ ಕಾಲಗಳ ಕಾವ್ಯಗಳಿಗೂ ಅನ್ವಯಿಸುವಷ್ಟು ಸೂಕ್ಷ್ಮ.
ಕಾವ್ಯದ ಶರೀರ ಪರಿಸರಕ್ಕೆ ತಕ್ಕಂತೆ ರೂಪುಗೊಳ್ಳುವುದರಿಂದ ಇದಕ್ಕೆ ಸಂಬಂಧಿಸಿದ ಪಥ ಮೇಲೆ ವಿವರಿಸಲಾದ ಪಥದಂತೆ ಬೇರೆ ಬೇರೆ ದೇಶಗಳ ಕಾವ್ಯಗಳಿಗೆ ಸಮಾನವಾಗಿ ಅನ್ವಯಿಸುವಷ್ಟು ವ್ಯಾಪಕವಾಗುವ ಸಂಭವವಿಲ್ಲ. ಕಾಲಕ್ಕೆ ತಕ್ಕಂತೆಯೂ ಕಾವ್ಯರೂಪ ಬದಲಾಗುವುದರಿಂದ ಈ ಪಥ ಬೇರೆ ಬೇರೆ ಕಾಲಗಳಲ್ಲಿ ಉಂಟಾದ ಕಾವ್ಯಗಳಿಗೆ ಸಮಾನವಾಗಿ ಅನ್ವಯಿಸುವಷ್ಟು ಸೂಕ್ಷ್ಮವೂ ಆಗಿರುವುದಿಲ್ಲ.
ವ್ಯಾಪಕತೆ, ತಲಸ್ಪರ್ಶಿತ್ವ ಮತ್ತು ಸೂಕ್ಷ್ಮತೆಯ ದೃಷ್ಟಿಯಿಂದ ಮೊದಲನೆಯ ಪಥ ಹೆಚ್ಚು ಮಹತ್ವದ್ದೆಂಬುದು ಖಚಿತ. ಆದರೆ ಕಾವ್ಯಮೀಮಾಂಸೆಯ ಬೆಳೆವಣಿಗೆಗೆ ಎರಡನೆಯ ಪಥವೂ ಇಷ್ಟೇ ಆವಶ್ಯಕ. ಯಾಕೆಂದರೆ ಸತ್ವಕ್ಕೆ ಸಂಬಂಧಿಸಿದ ಪಥ ಕಾವ್ಯಮೀಮಾಂಸೆಯ ಸ್ವಂತ (exclusive) ಸಾಧನೆ ಅಲ್ಲ. ಇದು ಸೌಂದರ್ಯ ಮೀಮಾಂಸೆಯ ಎಲ್ಲಾ ಪ್ರಕಾರಗಳಿಗೂ ಸಾಮಾನ್ಯವಾಗಿರುತ್ತದೆ; ಕಾವ್ಯವನ್ನು ಇತರ ಕಲಾವಸ್ತುಗಳಿಂದ ಪ್ರತ್ಯೇಕಿಸಿ ವಿವೇಚಿಸುವುದಿಲ್ಲ. ಎರಡನೆಯ ಪಥ ಮುಖ್ಯವಾಗಿ ಕಾವ್ಯದ ಶರೀರಕ್ಕೆ ಸಂಬಂಧಿಸಿರುವುದರಿಂದ ಇತರ ಕಲಾವಸ್ತುಗಳು ಇದರ ವ್ಯಾಪ್ತಿಯಲ್ಲಿ ಸೇರಿಕೊಳ್ಳುವ ಸಂಭವ ಇರುವುದಿಲ್ಲ. ಹೀಗಾಗಿ ಕಾವ್ಯಮೀಮಾಂಸೆಯನ್ನು ಸ್ವತಂತ್ರವಾಗಿಸುವಲ್ಲಿ ಈ ಪಥದ ಪಾತ್ರ ಬಹಳ ಮುಖ್ಯ.
ಸತ್ವ ಮತ್ತು ಶರೀರ ಇವೆರಡೂ ಸೇರಿ ಒಂದೇ ಅಖಂಡ ವಸ್ತು. ಒಂದರ ಹೊರತು ಇನ್ನೊಂದಕ್ಕೆ ಜೀವಂತ ಅಸ್ತಿತ್ವ ಇಲ್ಲ. ಕಾವ್ಯ ಇಂತಹ ಒಂದು ಅಖಂಡ ವಸ್ತು. ಶಾಸ್ತ್ರವನ್ನು ಈ ಎರಡು ಪಥಗಳಾಗಿ ವಿಶ್ಲೇಷಿಸುವುದು ಅಭ್ಯಾಸದ ಸೌಕರ್ಯಕ್ಕಾಗಿ ಮಾತ್ರ. ಇದೇ ಸತ್ಯ ಕಾವ್ಯಮೀಮಾಂಸೆಯ ಗ್ರಂಥಗಳಲ್ಲೂ ಸ್ಪಷ್ಟವಾಗುತ್ತದೆ. ಅಲ್ಲದೆ, ಆರಂಭದ ಗ್ರಂಥಗಳಲ್ಲಿ ಈ ಎರಡು ಪಥಗಳ ನಡುವೆ ಕಾಣುವ ಅಂತರ ಸಂಕುಚಿತವಾಗುತ್ತಾ ಹೋಗಿ ಅವೆರಡೂ ಒಟ್ಟು ಸೇರುತ್ತವೆ. ಹೀಗೆ ಒಟ್ಟು ಸೇರುವಲ್ಲಿ ಶರೀರಪಥ ಸತ್ವಪಥದ ಪ್ರಭಾವಕ್ಕೆ ಒಳಗಾಗುತ್ತದೆ; ಸತ್ವಪಥವೂ ಬದಲಾವಣೆ ಹೊಂದುತ್ತದೆ. ಅನಂತರದ ಆಲಂಕಾರಿಕರು ಈ ಮಿಶ್ರಪಥವನ್ನು ಪುನಃ ವಿಶ್ಲೇಷಿಸುತ್ತಾರೆ. ಇದರ ಪರಿಣಾಮವಾಗಿ ಶಕೀರಪಥದ ಪ್ರಧಾನ ಕಲ್ಪನೆಯಾದ ‘ರೀತಿ’ ಇನ್ನೊಂದು ರೂಪದಲ್ಲಿ ಅವತರಿಸುತ್ತದೆ.
‘ರೀತಿ’ಯ ಪಥದ ಬಾಳನ್ನು ನಾಲ್ಕು ಪುಟ್ಟ ಯುಗಗಳಾಗಿ ವಿಂಗಡಿಸಬಹುದು : ೧ ಅಸ್ಪಷ್ಟತೆಯ ಯುಗ ೨ ಪ್ರತಿಷ್ಠೆಯ ಯುಗ ೩ ಪರಿಷ್ಕಾರದ ಯುಗ ೪ ಪುನರ್ವಿಶೇಷಣೆಯ ಯುಗ.
ಅಸ್ಪಷ್ಟತೆಯ ಯುಗದಲ್ಲಿ ‘ರೀತಿ’ ಎಂಬ ಹೆಸರಿನಲ್ಲಿ ಕಾವ್ಯಗಳನ್ನು ವರ್ಗೀಕರಿಸುವ ವಿಧಾನವನ್ನೇ ವಿಚಾರಶೂನ್ಯವೆಂದು ತಿರಸ್ಕರಿಸುವ ಅಭಿಪ್ರಾಯ ಕೆಲವು ಆಲಂಕಾರಿಕರಲ್ಲಿ ಇದ್ದುದು ಸ್ಪಷ್ಟವಾಗಿ ಕಂಡುಬರುತ್ತದೆ. ಇವರು ಮುಖ್ಯವಾಗಿ ಆಕ್ಷೇಪಿಸುವುದು ವರ್ಗಿಕರಣವನ್ನಲ್ಲ. ವರ್ಗಿಕರಣದ ಜೊತೆಗೆ ಒಂದು ವರ್ಗದ ಕಾವ್ಯ ಇನ್ನೊಂದು ವರ್ಗಕ್ಕಿಂತ ಸರ್ವಾತ್ಮನಾ (in every respect) ಶ್ರೇಷ್ಠ ಎಂಬ ಅಂಗೀಕೃತ ಸಿದ್ಧಾಂತವೂ ಪ್ರತಿಷ್ಠಿತವಾಗಿರುವುದನ್ನು ಇವರು ಕಟುವಾಗಿ ಆಕ್ಷೇಪಿಸುತ್ತಾರೆ. ಈ ಆಕ್ಷೇಪದ ಮೇಲೆ ಏನೂ ಮಾನ್ಯತೆ ಇಡದಿರುವ ಇನ್ನೊಂದು ಪಕ್ಷವೂ ಈ ಯುಗದಲ್ಲಿ ಕಂಡುಬರುತ್ತದೆ. ಇದರ ಪ್ರಕಾರ, ‘ವೈದರ್ಭ’ ಮತ್ತು ‘ಗೌಡ’ ಎಂಬ ಎರಡು ನಿಶ್ಚಿತ ಕಾವ್ಯಮಾರ್ಗ (ರೀತಿ)ಗಳಿವೆ. ಈ ಎರಡು ಮಾರ್ಗಗಳು ಪ್ರಕೃತಿಯಲ್ಲಿ ಒಂದಕ್ಕೊಂದು ವಿರುದ್ಧ. ಅಲ್ಪಸ್ವಲ್ಪ ಸಾಮ್ಯ ಇದ್ದರೂ ಇವುಗಳೊಳಗಿನ ತೀವ್ರ ವಿರೋಧದ ಮುಂದೆ ಇದು ಕಾಣುವಷ್ಟಿಲ್ಲ. ವೈದರ್ಭಮಾರ್ಗ ಸರಳಸ್ವಭಾವದ್ದಾಗಿದ್ದರೆ ಗೌಡಮಾರ್ಗ ಪ್ರೌಢ. ಅಲ್ಲದೆ, ಈ ಎರಡು ಮಾರ್ಗಗಳಲ್ಲಿ ವೈದರ್ಭಮಾರ್ಗವೇ ಶ್ರೇಷ್ಠ.
ಹಿಂದಿನ ಆಕ್ಷೇಪವನ್ನು ಈ ಅಭಿಪ್ರಾಯಕ್ಕೆ ಎದುರಾಗಿಸಿ ಹೇಳುವುದಿದ್ದರೆ, ಅದರ ಪ್ರಕಾರ ಈ ಎರಡು ಮಾರ್ಗಗಳೂ ಒಂದು ಇನ್ನೊಂದರ ಗುಣಗಳನ್ನು ಅಗತ್ಯವಿದ್ದಷ್ಟು ಸ್ವೀಕರಿಸಿಕೊಳ್ಳಬೇಕು. ಇಲ್ಲವಾದರೆ ಗುಣಗಳೆಂದು ಕರೆಯಲಾಗುವ ಅಂಶಗಳೇ ಅತಿಯಾಗಿ, ದೋಷಗಳಾಗಿ ಪರಿಣಮಿಸಬಹುದು. ವೈದರ್ಭಮಾರ್ಗ ಗೌಡ ಮಾರ್ಗದ ಗುಣಗಳನ್ನು ಸಂಪೂರ್ಣ ದೂರಮಾಡಿದಲ್ಲಿ ಸರಳತೆ ಅತ್ಯಧಿಕವಾಗಿ ಕಾವ್ಯ ಸೌಂದರ್ಯಕ್ಕೆ ಕೊರತೆ ಉಂಟಾಗಬಹುದು. ಗೌಡಮಾರ್ಗ ಸರಳತೆಗೆ ವಿರುದ್ಧವಾಗಿಯೇ ಮುಂದುವರಿದಲ್ಲಿ ಪ್ರೌಢಮಾತ್ರವಲ್ಲದೆ ಕ್ಲಿಷ್ಟವೂ ಆಗಿ ಕಾವ್ಯ ಕೆಡಬಹುದು. ಆದುದರಿಂದ ಎರಡೂ ಮಾರ್ಗಗಳ ಗುಣಗಳನ್ನು ಅಗತ್ಯವಿದ್ದಷ್ಟು ಬೆರೆಸಿ ಕೊಳ್ಳುವುದು ಅಗತ್ಯ.
ಈ ವಿವಾದದ ಮೂಲವನ್ನು ಕಂಡುಹಿಡಿಯಬೇಕಿದ್ದರೆ ರೀತಿತತ್ವದ ಇತಿಹಾಸವನ್ನು ಸಾಧ್ಯವಿದ್ದಷ್ಟು ಶೋಧಿಸಬೇಕು. ಆರಂಭದಲ್ಲಿ ಭಾರತದೇಶದ ನಾಲ್ಕು ದಿಕ್ಕುಗಳಲ್ಲಿನ ಪ್ರದೇಶಗಳ ತಳಹದಿಯ ಮೇಲೆ ಕಾವ್ಯಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸುವುದು ರೂಢಿಯಲ್ಲಿದ್ದಂತೆ ತಿಳಿದುಬರುತ್ತದೆ. ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರಗಳೆಂಬ ನಾಲ್ಕು ದಿಕ್ಕುಗಳ ಪ್ರದೇಶಗಳಲ್ಲಿ ಉಂಟಾಗುತ್ತಿದ್ದ ಕಾವ್ಯಗಳು ಎದ್ದು ಕಾಣುವಷ್ಟು ಒಂದಕ್ಕೊಂದು ಭಿನ್ನವಾಗಿದ್ದು ಇವುಗಳಲ್ಲಿ ಪ್ರತಿಯೊಂದು ಮಾದರಿಗೂ ಒಂದು ಸ್ವಂತಿಕೆ ಇತ್ತೆಂಬುದಕ್ಕೆ ಆಧಾರ ಇದೆ. ಆದರೆ ಈ ಕಾಲದಲ್ಲಿ ಈ ನಾಲ್ಕು ಮಾದರಿಗಳ ಪೈಕಿ ಯಾವುದನ್ನೂ ಉಳಿದ ಮಾದರಿಗಳಿಗಿಂತ ಸರ್ವಾತ್ಮನಾ (in every respect) ಶ್ರೇಷ್ಠ ಎಂದು ಪರಿಗಣಿಸುತ್ತಿದ್ದಂತೆ ಕಾಣುವುದಿಲ್ಲ. ಕಾಲಹೋದಂತೆ ನಾಲ್ಕು ಮಾದರಿಗಳು ಎರಡು (ವೈದರ್ಭ ಮತ್ತು ಗೌಡ- ದಕ್ಷಿಣ ಮತ್ತು ಪೂರ್ವದಿಕ್ಕಿನವು) ಮಾರ್ಗಗಳಲ್ಲೇ ಅಂತರ್ಗತವಾಗಿ ಅವುಗಳಲ್ಲಿ ಒಂದರ ಕಡೆಗೇ ಅತಿ ಒಲವು ಬೆಳೆದಂತೆ ಕಂಡುಬರುತ್ತದೆ. ಈ ಅತಿ ಒಲವಿನಿಂದ ಬರುವ ಅಪಾಯಕ್ಕೆ ಎದುರಾಗಿ ಮೇಲಿನ ಆಕ್ಷೇಪ ಹೋರಾಡುತ್ತದೆ. ಹೀಗೆ ಮಾರ್ಗ ವಿಭಜನೆ ಅಗತ್ಯವೆಂದಾಗಲೀ ಅನಾವಶ್ಯಕವೆಂದಾಗಲೀ ಸ್ಪಷ್ಟವಾಗಿ ನಿರ್ಧರಿಸುವುದು ಈ ಯುಗದ ಕಾವ್ಯಮೀಮಾಂಸೆಗೆ ಸಾಧ್ಯವಾಗುವುದಿಲ್ಲ. ಒಂದು ಮುಖ್ಯ ವಿಷಯವನ್ನು ಈ ಯುಗದ ಬಗ್ಗೆ ಗಮನಿಸಬೇಕು : ಕಾವ್ಯಮಾರ್ಗಗಳು ಅನಂತ ; ಆದರೂ, ಸರಳತೆ ಮತ್ತು ಪ್ರೌಢಿ-ಇವೆರಡರ ತಳಹದಿಯ ಮೇಲೆ ಮಾರ್ಗಗಳನ್ನು ಸ್ಫೂಲವಾಗಿ ವಿಭಾಗಮಾಡಬಹುದು ಎಂಬ ನಿರ್ಧಾರಕ್ಕೆ ಆಲಂಕಾರಿಕರು ಈ ಯುಗದಲ್ಲೇ ಬಂದು ತಲಪಿರುವುದು ಸ್ಪಷ್ಟವಾಗುತ್ತದೆ. ಈ ನಿರ್ಧಾರ ಕೊನೆಯವರೆಗೂ ಕಾವ್ಯಮೀಮಾಂಸೆಯಲ್ಲಿ ಬದುಕಿ ಉಳಿಯುತ್ತದೆ.
ಈ ಯುಗವನ್ನು ಅಸ್ಪಷ್ಟತೆಯ ಯುಗವೆಂದು ಕರೆಯುವುದಕ್ಕೆ ಮೇಲಿನ ವಿವಾದ ಒಂದೇ ಕಾರಣ ಅಲ್ಲ. ಈ ಯುಗದ ಆಲಂಕಾರಿಕರ ಪ್ರಕಾರ ಕಾವ್ಯಸೌಂದರ್ಯಕ್ಕೆ ಕಾರಣವಾಗುವಂಥಾದ್ದೆಲ್ಲವೂ ‘ಅಲಂಕಾರ’. ಕಾವ್ಯಮಾರ್ಗಗಳನ್ನು ನಿರ್ಣಯಿಸುವುದು ‘ಗುಣ’. ಗುಣವೆಂದರೆ ಅಕ್ಷರ ವಿನ್ಯಾಸ, ಪದಸಂಘಟನೆ, ಅರ್ಥ, ಅನುಪ್ರಾಸ ಮೊದಲಾದ ಅಲಂಕಾರ, ರಸ, ಧ್ವನಿ ಇಂಥವುಗಳಲ್ಲಿ ಒಂದನ್ನು ಅಥವಾ ಎಲ್ಲವನ್ನೂ ತನ್ನ ಸರ್ವಸ್ವವನ್ನಾಗಿ ಮಾಡಿಕೊಳ್ಳಬಲ್ಲ ಘಟಕ. ಹೀಗೆ, ಇವರು ಕಲ್ಪನೆಗಳನ್ನು ಒಂದಕ್ಕೊಂದು ಹೆಣೆಯುತ್ತಾ ಹೋಗುವಲ್ಲಿ ಉಂಟಾಗುವ ಅಸ್ಪಷ್ಟತೆಯನ್ನು ಗಮನಿಸುವುದಿಲ್ಲ. ಕಲ್ಪನೆಗಳು ಅವ್ಯಾವರ್ತಿತ (overlapping) ವಾಗಿ ಒಂದನ್ನೊಂದು ಬೆರೆಯುವುದರಿಂದ ಇವರ ಅಭಿಪ್ರಾಯಗಳೊಳಗೆ ಇರುವ ವ್ಯತ್ಯಾಸಗಳನ್ನು ಅರ್ಥೈಸಿಕೊಳ್ಳುವುದು ತುಂಬಾ ಪ್ರಯಾಸಕರ.
ಮುಂದಿನ ಯುಗದಲ್ಲಿ ಗುಣಗಳ ಕಲ್ಪನೆ ತರ್ಕಕ್ಕೆ ಗುರಿಪಡಿಸಲ್ಪಟ್ಟು ಹೆಚ್ಚಿನ ಸ್ಪಷ್ಟತೆಯನ್ನು ಕಂಡುಕೊಳ್ಳುತ್ತದೆ. ಒಂದೊಂದು ಗುಣಕ್ಕೆ ಒಂದೊಂದು ಧರ್ಮವಿದ್ದುದು ಹೋಗಿ ಎಲ್ಲಾ ಗುಣಗಳಲ್ಲಿಯೂ ಶಬ್ದ-ಅರ್ಥಗಳೆರಡಕ್ಕೂ ಅನ್ವಯಿಸುವ ಚೈತನ್ಯ ತುಂಬಿಕೊಳ್ಳುತ್ತದೆ. ಇದರಿಂದಲಾಗಿ ಸಮಾನಸಂಖ್ಯೆಯ ಎರಡು ಪ್ರಕಾರದ ಗುಣಗಳು ಕಾಣಿಸಿಕೊಳ್ಳುತ್ತವೆ. ಒಂದು ಪ್ರಕಾರದ ಗುಣಗಳು ಪದಬಂಧವನ್ನೇ ಜೀವಾಳವಾಗಿ ಹೊಂದಿರುತ್ತವೆ. ಇನ್ನೊಂದು ಪ್ರಕಾರದ ಗುಣಗಳು ‘ಅರ್ಥ’ ಎಂಬ ಹೊದಿಕೆಯ ಒಳಗಡೆ ರಸದಂತಹ ಸೂಕ್ಷ್ಮವಸ್ತುವಿನ ವರೆಗಿನ ಕಾವ್ಯದ ಬೇರೆ ಬೇರೆ ಸ್ವರಗಳನ್ನು ಒಳಗೊಳ್ಳುತ್ತವೆ. ಹೀಗೆ, ಅತಿಸ್ಥೂಲವಾದ ಪದಬಂಧದಿಂದ ಹಿಡಿದು ಅತಿ ಸೂಕ್ಷ್ಮವಾದ ರಸದವರೆಗಿನ ವಿವಿಧ ಸ್ತರಗಳು ಗುಣಸಂಪತ್ತಿನಲ್ಲಿ ಲೀನವಾಗಿ “ಇಂತಹ ಗುಣಸಂಪತ್ತನ್ನು ಒಳಗೊಳ್ಳುವ ಸದರಚನೆಯೇ ರೀತಿ” ಎಂಬ ತರ್ಕಬದ್ಧವಾದ ಲಕ್ಷಣ ಈ ಯುಗದಲ್ಲಿ ‘ರೀತಿ’ಯ ಕಲ್ಪನೆಯನ್ನು ಸ್ಪಷ್ಟಪಡಿಸುತ್ತದೆ. ಇಂತಹ ರೀತಿಯೇ ಕಾವ್ಯದ ಆತ್ಮವೆಂದು ಈ ಯುಗ ಸಾರುತ್ತದೆ. ಬೇಕು-ಬೇಡ ಎಂಬ ವಿವಾದಕ್ಕೊಳಗಾಗಿ ಅಸ್ಪಷ್ಟವಾಗಿ ಕಾಣುತ್ತಿದ್ದ ಕಲ್ಪನೆ ಕಾವ್ಯಮೀಮಾಂಸೆಯ ಪ್ರಧಾನಕಲ್ಪನೆಯಾಗಿ ಈ ಯುಗದಲ್ಲಿ ಪ್ರತಿಷ್ಠೆ ಹೊಂದುತ್ತದೆ.
ಈ ಯುಗದಲ್ಲಿ ಆಗುವ ಇನ್ನೊಂದು ಬದಲಾವಣೆ ಎಂದರೆ ಎರಡು ಅತಿರೇಕಗಳಂತೆ ಕಾಣಿಸುತ್ತಿದ್ದ ಎರಡು ಮಾರ್ಗಗಳು ತಮ್ಮ ವಿರೋಧವನ್ನು ಕಳೆದುಕೊಂಡು ತಮ್ಮ ಸ್ವಭಾವವನ್ನೂ ಸ್ಥಾನವನ್ನೂ ನಿರ್ಣಯಿಸಿಕೊಳ್ಳುವುದು. ಸರಳತೆ-ಸ್ಪಷ್ಟತೆಗಳ ಮಾದರಿಯಾಗಿ ಆಲಂಕಾರಿಕರನ್ನು ಒಲಿಸುತ್ತಿದ್ದ ವೈದರ್ಭಮಾರ್ಗ ಗುಣಸಂಪತ್ತಿನ ಸಾಕಲ್ಯದ ಪ್ರತಿನಿಧಿಯಾಗಿ ಈ ಯುಗದಲ್ಲಿ ಸರ್ವಶ್ರೇಷ್ಠವಾದ ಕಾವ್ಯಮಾರ್ಗವಾಗುತ್ತದೆ. ಇದಕ್ಕೆ ವಿರುದ್ಧವಾಗಿ ಕಾಣಿಸುತ್ತಿದ್ದ ಗೌಡಮಾರ್ಗ ಆಲಂಕಾರಿಕರ ಅಣಕಿಸುವಿಕೆಗೆ ಗುರಿಯಾಗುವ ರೂಪದಲ್ಲಿ ಉಳಿಯುವುದಿಲ್ಲ. ವೈದರ್ಭದಂತೆ ಸರ್ವಶ್ರೇಷ್ಠವಲ್ಲದಿದ್ದರೂ ಇದೊಂದು ಉತ್ತಮವಾದ ಕಾವ್ಯಮಾರ್ಗವೇ. ವೈದರ್ಭಮಾರ್ಗದಲ್ಲಿ ತುಂಬಿರುವ ಮಧುರತೆ-ಮೃದುತ್ವಗಳಿಗೆ ಬದಲಾಗಿ ಇದರಲ್ಲಿ ಔದ್ಧತ್ಯ-ಕಠಿನತೆಗಳು ತುಂಬಿರುತ್ತವೆ-ಅಷ್ಟೆ. ಹೀಗೆ, ಹಿಂದಿನ ಯುಗದಲ್ಲಿದ್ದ ತಮ್ಮ ಪರಸ್ಪರ ವಿರೋಧವನ್ನು ಇವು ಬಿಟ್ಟುಕೊಡುತ್ತವೆ; ಇವುಗಳ ಮೂಲಪ್ರಕೃತಿಯಲ್ಲಿ ಮಾತ್ರ ವ್ಯತ್ಯಾಸ ಉಳಿಯುತ್ತದೆ.
ಗುಣಗಳ ಸಂಖ್ಯೆ ಹೆಚ್ಚಾಗುವಂತೆ ರೀತಿಗಳ ಸಂಖ್ಯೆಯೂ ಈ ಯುಗದಲ್ಲಿ ಹೆಚ್ಚುತ್ತದೆ. ವಿರುದ್ದ ಪ್ರಕೃತಿಯ ಎರಡು ಮಾರ್ಗಗಳ ಮಧ್ಯವರ್ತಿಯಾಗಿ ‘ಪಾಂಚಾಲ’ ಎಂಬ ಹೆಸರಿನ ಇನ್ನೊಂದು ಹೊಸಮಾರ್ಗ ಕಾಣಿಸಿಕೊಳ್ಳುತ್ತದೆ. ಪ್ರದೇಶಗಳ ತಳಹದಿಯ ಮೇಲೆ ಮಾರ್ಗಗಳನ್ನು ವಿಭಜಿಸುವ ಸಂಪ್ರದಾಯ ಹಳೆಯದಾಗಿದ್ದರೂ ಹೊಸತಾಗಿ ಬರುವ ಹೆಸರೂ ಪ್ರದೇಶ ಸೂಚಕವೇ ಆಗಿರುತ್ತದೆ. ಇದರ ಪ್ರಕೃತಿ ವೈದರ್ಭಮಾರ್ಗದ ಪ್ರಕೃತಿಗೆ ಹತ್ತಿರ ಇರುತ್ತದೆ. ಮನಸ್ಸನ್ನು ಉದ್ದೀಪನಗೊಳಿಸುವ ಎರಡು (ಓಜಸ್ಸು-ಕಾಂತಿ) ಪ್ರೌಢಗುಣಗಳು ಮಾತ್ರ ಅದರಲ್ಲಿರುವಂತೆ ಇದರಲ್ಲಿ ಇರುವುದಿಲ್ಲ.
ಮಾರ್ಗಗಳ ಬಗೆಗಿನ ಕಲ್ಪನೆ ತರ್ಕಬದ್ಧವೂ ಸ್ಪಷ್ಟವೂ ಆಗಿರುವುದು ಕಂಡುಬರುವಂತೆ ಗುಣಗಳ ಕಲ್ಪನೆಯೂ ತರ್ಕಕ್ಕೆ ಗುರಿಪಡಿಸಲ್ಪಟ್ಟು ಈ ಯುಗದಲ್ಲಿ ಹಿಂದಿನ ಯುಗಕ್ಕಿಂತ ಹೆಚ್ಚು ಸ್ಪಷ್ಟವಾಗುತ್ತದೆ. ಹಿಂದಿನ ಆಲಂಕಾರಿಕರು ‘ಕಾವ್ಯಸೌಂದರ್ಯವನ್ನು ಹೆಚ್ಚಿಸುವ ಘಟಕಗಳೆಲ್ಲವೂ ಅಲಂಕಾರ’ ಎಂಬ ಸಾಮಾನ್ಯ ಲಕ್ಷಣವನ್ನು ಮಾತ್ರ ಹೇಳಿದ್ದರು. ಇವರ ಪ್ರಕಾರ ಗುಣಗಳೂ ಅಲಂಕಾರಗಳು ; ಉಪಮಾರೂಪಕ-ಅನುಪ್ರಾಸ ಮೊದಲಾದ ಉಕ್ತಿವಿಶೇಷಗಳೂ ಅಲಂಕಾರಗಳು. ಗುಣಗಳಿಗೂ ಉಪಮಾ ಮೊದಲಾದ ಉಕ್ತಿವಿಶೇಷಗಳಿಗೂ ಇರುವ ವ್ಯತ್ಯಾಸವನ್ನು ಇವರು ವಿವೇಚಿಸಿಲ್ಲ. ಇಂತಹ ವಿವೇಚನೆ ಈ ಯುಗದಲ್ಲಿ ನಡೆಯುತ್ತದೆ. ತರ್ಕಶಾಸ್ತ್ರದ ಪ್ರಕ್ರಿಯೆಯನ್ನು ಉಪಯೋಗಿಸಿ ಗುಣಗಳು ಕಾವ್ಯಸೌಂದರ್ಯದ ನಿಯತಕಾರಣಗಳೆಂದೂ ಉಪಮಾ ಮೊದಲಾದವು ಈ ಸೌಂದರ್ಯವನ್ನು ಅಧಿಕಗೊಳಿಸುವಂತಹವು ಮಾತ್ರ ಎಂದೂ ಈ ಯುಗದ ಆಲಂಕಾರಿಕರು ಸ್ಪಷ್ಟಪಡಿಸುತ್ತಾರೆ. ‘ಅಲಂಕಾರ’ ಪದಕ್ಕೆ ಬರುವ ಈ ಸಂಕುಚಿತವ್ಯಾಪ್ತಿಯ ಜೊತೆಗೆ ‘ಸೌಂದರ್ಯವೇ ಅಲಂಕಾರ’ ಎಂಬ ವಿಶಾಲವ್ಯಾಪ್ತಿ ಪ್ರತ್ಯೇಕವಾಗಿ ಉಳಿಯುತ್ತದೆ.
‘ರೀತಿ’ಗೆ ಬಂದ ಈ ಪ್ರತಿಷ್ಠೆ ಬಹುಕಾಲ ಉಳಿಯುವುದಿಲ್ಲ. ಇದಕ್ಕೆ ಕಾರಣ ಅನಂತರದ ಯುಗದಲ್ಲಿ ಕಾವ್ಯಮೀಮಾಂಸೆಗೆ ಬಂದೊದಗುವ ತೀವ್ರ ಸನ್ನಿವೇಶ. ಇದುವರೆಗಿನ ಆಲಂಕಾರಿಕರು ಶ್ರವ್ಯ ಕಾವ್ಯಗಳನ್ನು ಬೇರೆ ಬೇರೆ ಪ್ರಕಾರದ ವಿಶ್ಲೇಷಣೆಗೆ ಗುರಿಪಡಿಸಿ ಅವುಗಳಲ್ಲಿ ಕಂಡುಬರುವ ಎಲ್ಲಾ ಸೌಂದರ್ಯವನ್ನೂ ‘ಅಲಂಕಾರ’ ಎಂಬ ಸ್ಥೂಲ ಮತ್ತು ಸಾಮಾನ್ಯ ಪದದೊಳಗೆ ತುರುಕಿಸುತ್ತಿದ್ದರು. ಶ್ರವ್ಯ ಕಾವ್ಯಗಳಲ್ಲಿ ಇಲ್ಲದೆ ಇರುವ ಅಭಿನಯ ಮೊದಲಾದ ಕಲಾಮಾಧ್ಯಮಗಳಿಂದ ಬರುವ ಸೌಂದರ್ಯಾನುಭವ ಮತ್ತು (ಶ್ರವ್ಯ) ಕಾವ್ಯಾನುಭವಗಳೊಳಗಿನ ಸಾಮ್ಯವನ್ನು ಗುರುತಿಸಿ, ಶ್ರವ್ಯ-ದೃಶ್ಯಗಳೆಂಬ ಎರಡು ಪ್ರಕಾರದ ಕಾವ್ಯಗಳನ್ನು ಸಮ್ಮಿಲನಗೊಳಿಸಿ ಸೌಂದರ್ಯಾನುಭವದ ಮೂಲವನ್ನು ಗುರುತಿಸುವ ದಿಶೆಯಲ್ಲಿ ಕಾವ್ಯಮೀಮಾಂಸೆ ಈಗ ಮುನ್ನಡೆಯುತ್ತದೆ. ನಾಟ್ಯಶಾಸ್ತ್ರದಲ್ಲಿ ಪ್ರಧಾನತತ್ವವಾಗಿ ಪ್ರತಿಪಾದಿತವಾದ ‘ರಸ’ವನ್ನು ಆಲಂಕಾರಿಕರು ಸಂಪೂರ್ಣವಾಗಿ ತಮಗೂ ಮೂಲತತ್ವವನ್ನಾಗಿ ಮಾಡಿಕೊಂಡು ಕಾವ್ಯಮೀಮಾಂಸೆಯನ್ನು ಪರಿಷ್ಕರಿಸುತ್ತಾರೆ. ರಸದಂತಹ ಸೂಕ್ಷವೂ ವ್ಯಾಪಕವೂ ಆದ ಅನುಭವ ತತ್ವದ ಮುಂದೆ ‘ರೀತಿ’ಯ ಪ್ರತಿಷ್ಠೆ ನಿಲ್ಲುವುದಿಲ್ಲ.
ಈ ಹೊಸ ಪರಿಷ್ಕಾರ ಕಾವ್ಯಮೀಮಾಂಸೆಯಲ್ಲಿ ಸಂಪೂರ್ಣ ನೆಲೆಯೂರುವ ಮೊದಲೇ ‘ರೀತಿ’ಯ ಬಗೆಗಿನ ಪರಿಷ್ಕರಣ ಪ್ರಾರಂಭವಾಗಿರುತ್ತದೆ. ರಸಕ್ಕೆ ಅನಿವಾರ್ಯವಾದ ವ್ಯಂಜನಾವ್ಯಾಪಾರ (ಧ್ವನಿ) ಕಾವ್ಯಮೀಮಾಂಸೆಯಲ್ಲಿ ಪ್ರತಿಷ್ಠಿತವಾಗುವ ಮೊದಲೇ ಆಲಂಕಾರಿಕರು ರಸಕ್ಕೆ ಸಂಬಂಧಿಸುವಂತೆ ‘ರೀತಿ’ಯ ಸ್ಥಾನವನ್ನು ನಿರ್ಣಯಿಸಲು ಮುಂದೆ ಬರುತ್ತಾರೆ. ರಸಗಳನ್ನು ಮಧುರ -ಉದ್ದತಗಳೆಂದು ಸ್ಥೂಲವಾಗಿ ವಿಭಜಿಸಿಕೊಂಡು ಮಧುರ ರಸಕ್ಕೆ ವೈದರ್ಭಮಾರ್ಗವೂ ಉದ್ಧತ ರಸಕ್ಕೆ ಗೌಡಮಾರ್ಗವೂ ಯೋಗ್ಯವಾದುವೆಂದು ಮುಖ್ಯ ಮಾರ್ಗಗಳ ಸ್ಥಾನವನ್ನು ನಿರ್ಣಯಿಸುತ್ತಾರೆ. ‘ರೀತಿ’ಗಳ ಸಂಖ್ಯೆಯನ್ನು ಹೆಚ್ಚಿಸಿ ಅವುಗಳ ಮುಖ್ಯಗುಣಗಳಿಗನುಸಾರವಾಗಿ ಪ್ರತಿಯೊಂದನ್ನು ಈ ಎರಡು ಪ್ರಸಿದ್ಧ ಮಾರ್ಗಗಳ ಪೈಕಿ ಯಾವುದಾದರೊಂದರ ಸಮೀಪಕ್ಕೆ ತಂದಿಟ್ಟು ಎಲ್ಲಾ ರೀತಿಗಳನ್ನೂ ಎರಡು ಗುಂಪುಗಳಲ್ಲಿ ಸೇರಿಸಿಡುತ್ತಾರೆ.
ಪರಿಷ್ಕಾರ ಯುಗದ ಪ್ರಭಾವ ಇಷ್ಟಕ್ಕೇ ನಿಲ್ಲುವುದಿಲ್ಲ. ರಸದ ಪ್ರತಿಷ್ಠೆ ಕಾವ್ಯ ಮೀಮಾಂಸೆಯಲ್ಲಿ ನೆರವೇರುವ ಸಂದರ್ಭದಲ್ಲಿ ‘ವೃತ್ತಿ’ ಎಂಬ ಕಲ್ಪನೆ ನಾಟ್ಯಶಾಸ್ತ್ರದಿಂದ ರಸವನ್ನು ಹಿಂಬಾಲಿಸುತ್ತದೆ. ‘ವೃತ್ತಿ’ ರಸದ ಸ್ಪಷ್ಟ ನೆಲೆಯಾಗಿದ್ದು ರೀತಿತತ್ವವನ್ನು ಒಳಗೊಳ್ಳುವಷ್ಟು ವ್ಯಾಪಕವಾಗಿರುತ್ತದೆ. ಹೀಗೆ ತನ್ನ ಅಸ್ತಿತ್ವವನ್ನು ವ್ಯರ್ಥವೆಂದು ಪ್ರತಿಪಾದಿಸುವಷ್ಟು ವ್ಯಾಪಕವಾದ ಇನ್ನೊಂದು ಕಲ್ಪನೆಯನ್ನು ‘ರೀತಿ’ ಎದುರಿಸಬೇಕಾಗುತ್ತದೆ. ಇದಕ್ಕಾಗಿ ಆಲಂಕಾರಿಕರು ‘ವೃತ್ತಿ’ಯ ವ್ಯಾಪ್ತಿಯನ್ನು ಸಂಕೋಚಪಡಿಸಿ ರೀತಿ-ವೃತ್ತಿ ಇವೆರಡನ್ನೂ ರಸದ ಎರಡು ನೆಲೆಗಳನ್ನಾಗಿ ಮಾಡುತ್ತಾರೆ. ‘ವೃತ್ತಿ’ ರಸದ ನಿಕಟವರ್ತಿಯಾಗಿಯೇ ಬೆಳೆದು ಬಂದಿರುವುದರಿಂದ ಅದನ್ನು ರಸಕ್ಕೆ ಯೋಗ್ಯವಾದ ‘ಅರ್ಥಸಂದರ್ಭ’ವೆಂದು ಆಲಂಕಾರಿಕರು ವ್ಯಾಖ್ಯಾನಿಸುತ್ತಾರೆ. ‘ರೀತಿ’ ರಸಕ್ಕೆ ಯೋಗ್ಯವಾದ ‘ಶಬ್ದ ಸಂದರ್ಭ’ವಾಗಿ ಉಳಿದುಕೊಳ್ಳುತ್ತದೆ. ಈ ಪುನರ್ವಿಶ್ಲೇಷಣೆಯ ನಂತರದ ಯುಗದಲ್ಲಿ ಬೇರೆ ಬೇರೆ ‘ರೀತಿ’ಗಳೆಂದರೆ ಬೇರೆ ಬೇರೆ ವಿಧದ ಶಬ್ದಸಂಘಟನೆಗಳು ಮಾತ್ರ. ರೀತಿಗಳನ್ನೇ ಶಬ್ದ ವೃತ್ತಿಗಳೆಂದು ಕರೆದು ಹಿಂದೆ ಪ್ರಸಿದ್ಧವಾಗಿದ್ದ ವೈದರ್ಭ, ಗೌಡ ಮತ್ತು ಪಾಂಚಾಲ ಮಾರ್ಗಗಳನ್ನು ಉಪನಾಗರಿಕಾ, ಪರುಷಾ ಮತ್ತು ಕೋಮಲಾವೃತಿಗಳೆಂದು ಕರೆಯುವ ಸಂಪ್ರದಾಯವೂ ಆಚರಣೆಗೆ ಬರುತ್ತದೆ.
ಪುನರ್ವಿಶ್ಲೇಷಣೆಯ ಯುಗದಲ್ಲಿ ‘ರೀತಿ’ ಇನ್ನೂ ಒಂದು ದಿಶೆಯಲ್ಲಿ ಮುಂದುವರಿಯುತ್ತದೆ. ಅಸ್ಪಷ್ಟತೆಯ ಯುಗದಲ್ಲಿ ಆಲಂಕಾರಿಕರು ಹೇಳಿದ ಒಂದು ಮಾತು ಈ ಯುಗದಲ್ಲಿ ವಿಕಸಿತವಾಗುತ್ತದೆ. “ಕಾವ್ಯಮಾರ್ಗಗಳು ವಸ್ತುತಃ ಅನಂತ ; ಸ್ಪಷ್ಟಭೇದವುಳ್ಳ ಎರಡನ್ನು ಮಾತ್ರ ನಾವು ಪ್ರತಿಪಾದಿಸುವೆವು” ಎಂಬ ಮಾತು ಕಾವ್ಯಮೀಮಾಂಸೆಯಲ್ಲಿ ಬಹಳ ಪ್ರಾಚೀನ. ಈ ಅಭಿಪ್ರಾಯವನ್ನು ಪ್ರಾಚೀನರು ಹೇಳಿದುದು ಮಾತ್ರ. ಈ ವರೆಗೆ ಅದನ್ನು ಯಾರೂ ಮುಂದುವರಿಸಿ ವಿವರಣೆ ಮಾಡಿಲ್ಲ. ಈ ಯುಗದಲ್ಲಿ ಒಬ್ಬ ಆಲಂಕಾರಿಕ (ವಕ್ರೋಕ್ತಿಜೀವಿತಕಾರನಾದ ಕುಂತಕ) ತನ್ನ ಗ್ರಂಥದಲ್ಲಿ ಈ ಅಭಿಪ್ರಾಯವನ್ನು ಸ್ಪಷ್ಟವಾಗಿ ಪ್ರತಿಪಾದಿಸುತ್ತಾನೆ. ಇವನ ಪ್ರಕಾರ ಪ್ರತಿಯೊಬ್ಬ ಕವಿಯೂ ತನಗೆ ಯೋಗ್ಯವಾದ ಕಾವ್ಯಮಾರ್ಗವನ್ನು ರೂಪಿಸುತ್ತಾನೆ.
ಕಾವ್ಯಮಾರ್ಗಗಳ ಅನಂತತೆಯನ್ನು ಪ್ರತಿಪಾದಿಸುವ ಇವನಿಗೂ ಅವುಗಳ ಸ್ಥೂಲ ಸಂಖ್ಯೆಯ ಕಡೆಗೆ ಹಿಂದಿನ ಆಲಂಕಾರಿಕರಿಗೆ ಇರುವಷ್ಟೇ ಆಕರ್ಷಣೆ ಇದೆ. ಪ್ರದೇಶಗಳನ್ನು ಸೂಚಿಸುವ ಹೆಸರುಗಳನ್ನು ತೆಗೆದುಹಾಕಿ ಸುಕುಮಾರ, ವಿಚಿತ್ರ ಮತ್ತು ಮಧ್ಯಮಗಳೆಂಬ ಹೆಸರಿನಲ್ಲಿ ಮೂರು ಪ್ರಸಿದ್ಧ ಮಾರ್ಗಗಳನ್ನು ಇವನೂ ಒಪ್ಪಿಕೊಳ್ಳುತ್ತಾನೆ. ಈ ಮೂರು ಮಾರ್ಗಗಳೊಳಗಿನ ಪರಸ್ಪರ ಅಂತರ ಹಿಂದಿನ ವೈದರ್ಭ, ಗೌಡ ಮತ್ತು ಪಾಂಚಾಲ ಮಾರ್ಗಗಳೊಳಗಿನ ಅಂತರಕ್ಕೆ ತತ್ಸಮ (Corresponding) ವಾಗಿರುತ್ತದೆ.
ರೀತಿತತ್ವದ ನಿರೂಪಣೆಯಲ್ಲಿ ಇವಿಷ್ಟು ಪ್ರಸಿದ್ಧವಾದ ಹಂತಗಳು. ಇವೇ ನಿರೂಪಣೆಗಳನ್ನು ಅಲ್ಪಸ್ವಲ್ಪ ವ್ಯತ್ಯಾಸಪಡಿಸಿ ತಮ್ಮದೇ ಆದ ವಿಧಾನದಲ್ಲಿ ರೀತಿಯನ್ನು ಪ್ರತಿಪಾದಿಸುವ ಆಲಂಕಾರಿಕರು ಅನೇಕ ಮಂದಿ ಇದ್ದರು. ಇವರಲ್ಲಿ ಕೆಲವರ ಗ್ರಂಥಗಳು ಸಂಪೂರ್ಣವಾಗಿ ಉಪಲಬ್ಧವಾಗಿಲ್ಲ. ಇನ್ನು ಕೆಲವರು ಬೇರೆ ಬೇರೆ ಗ್ರಂಥಗಳ ಲೇಖಕರಾಗಿದ್ದು ಒಂದೊಂದು ಗ್ರಂಥದಲ್ಲಿ ಒಂದೊಂದು ವಿಧದಲ್ಲಿ ವಿಷಯ ನಿರೂಪಣೆ ಮಾಡಲು ಹೊರಟು ಅಲ್ಲಿಗೇ ಕೈಬಿಟ್ಟವರು.
ಕಾವ್ಯ ಹೊರಹೊಮ್ಮುವ ವಿಧಾನಗಳು ಸಂದರ್ಭಕ್ಕನುಸಾರವಾಗಿ ಅನೇಕ. ಇವುಗಳಲ್ಲಿ ಯಾವ ವಿಧಾನವನ್ನೂ ಸಂದರ್ಭದ ಹೊರತಾಗಿ ಯೋಗ್ಯ ಅಥವಾ ಅಯೋಗ್ಯವೆಂದು ತೀರ್ಮಾನಿಸುವಂತಿಲ್ಲ. ಸಹೃದಯತೆ ಅಲಿಪ್ತವೂ ಪಕ್ಷಪಾತರಹಿತವೂ ಆಗಿ ಉಳಿಯಬೇಕಾದರೆ ಅಭಿವ್ಯಕ್ತಿ ವಿಧಾನವೂ ಕಾವ್ಯಸತ್ವದಷ್ಟೇ ಸಹಜವೂ ಅನುಪಮವೂ ಆದ ಸೃಷ್ಟಿ ಎಂಬ ಅರಿವು ಮಸುಕಬಾರದು. ಇದು ರೀತಿತತ್ವದ ಮರ್ಮ.
ಆಲಂಕಾರಿಕರಿಗೆ ಈ ಮರ್ಮದ ಛಾಯೆಗಳು ಆಗಾಗ್ಗೆ ಹೊಳೆಯದೆ ಇಲ್ಲ. ರೀತಿತತ್ವದ ಮೊದಲನೆಯ ಹಂತದಲ್ಲಿ ಕಾವ್ಯಮಾರ್ಗಗಳನ್ನು ಹೆಸರಿಸಿ ಹೆಸರಿಗೇ ಮೌಲ್ಯವನ್ನು ಅಂಟಿಸುವ ವಿಮರ್ಶಾಸರಣಿಯನ್ನು ಆಕ್ಷೇಪಿಸುವ ಸ್ಪಷ್ಟ ಉಲ್ಲೇಖವನ್ನು ನಾವು ಕಾಣುತ್ತೇವೆ. ಈ ನಿಷ್ಪಕ್ಷಪಾತ ಸಹೃದಯತೆ ಅರಳುವುದಕ್ಕಿರುವ ತೊಂದರೆಗಳನ್ನೂ ಆ ಹಂತದಲ್ಲಿ ನಾವು ಸ್ಪಷ್ಟವಾಗಿ ಗುರುತಿಸುತ್ತೇವೆ. ಒಂದು ಮಾರ್ಗಕ್ಕೆ ಅಂಟಿಕೊಳ್ಳಿಬಾರದು ಎಂದು ಒತ್ತಿ ಹೇಳುವ ಆಲಂಕಾರಿಕರು ಇರುವಂತೆಯೇ ಒಂದು ಮಾರ್ಗವನ್ನು ಅತಿಶಯವಾಗಿ ಮೆಚ್ಚುವುದರ ಜೊತೆಗೆ ಇನ್ನೊಂದು ಮಾರ್ಗವನ್ನು ಅಣಕಿಸುವ ಗ್ರಂಥಕಾರರೂ ಈ ಯುಗದಲ್ಲಿ ಕಾಣಿಸುತ್ತಾರೆ.
ಎರಡನೆಯ ಹಂತದಲ್ಲಿ ತರ್ಕ ಬಹಳ ಕೆಲಸಮಾಡುತ್ತದೆ. ರೀತಿಯ ಜೀವಾಳ ನೆಲೆಸಿರುವುದೆಲ್ಲಿ ? ಶಬ್ದದಲ್ಲಿ ಅಥವಾ ಅರ್ಥದಲ್ಲಿ ? ಎಂಬ ಸಂಶಯ ಒಂದನೆಯ ಯುಗದ ಆಲಂಕಾರಿಕರಿಗೆ ಸಮಸ್ಯೆಯಾಗಿತ್ತು. ‘ಇವೆರಡರಲ್ಲಿ’ ಎಂಬ ಉತ್ತರವೂ ಇವರಿಗೆ ಖಂಡಿತವಾಗಿ ತಿಳಿದಿತ್ತು. ಇದರಿಂದಲೇ ಗುಣಗಳನ್ನು ಲಕ್ಷಿಸಿ ಉದಾಹರಿಸುವಲ್ಲಿ ಕೆಲವನ್ನು ಶಬ್ದದ ಕಡೆಗೂ ಕೆಲವನ್ನು ಅರ್ಥದ ಕಡೆಗೂ ಇವರು ವಾಲಿಸುತ್ತಾರೆ. ರೀತಿಗೆ ಶಬ್ದ-ಅರ್ಥಗಳೆರಡೂ ಸಮಾನವಾದ ಮತ್ತು ಅವಿಭಾಜ್ಯವಾದ ನೆಲೆಗಳು ಎಂಬ ಸಿದ್ಧಾಂತವನ್ನು ಪ್ರತಿಪಾದಿಸುವಷ್ಟು ಇವರ ತರ್ಕಸರಣಿ ಮುಂದುವರಿದಿಲ್ಲ. ಅನಂತರದ ಯುಗ ರೀತಿಯನ್ನು ಕಾವ್ಯದ ಆತ್ಮವೆಂದು ಪ್ರತಿಷ್ಠಿಸಲು ಹೊರಟುದರಿಂದ ಗುಣಗಳ ವ್ಯಾಪ್ತಿಯನ್ನು ಶಬ್ದ-ಅರ್ಥಗಳೆರಡಕ್ಕೂ ಅನ್ವಯಿಸುವಂತೆ ವಿಸ್ತರಿಸುತ್ತದೆ. ಇದರ ಜೊತೆಗೆ ಗೌಡಮಾರ್ಗದ ಕಡೆಗೆ ಹಿಂದಿನ ಕೆಲವು ಆಲಂಕಾರಿಕರಲ್ಲಿದ್ದ ಅನಾದರವನ್ನು ಕಿತ್ತು ತೆಗೆಯುತ್ತದೆ. ಆದರೂ, ವೈದರ್ಭಮಾರ್ಗದ ಕಡೆಗಿನ ಅತ್ಯಾದರ ಈಗಲೂ ಹೋಗುವುದಿಲ್ಲ. ಇದಕ್ಕೆ ಕಾರಣ, ಹಿಂದಿನ ಯುಗದ ಆಲಂಕಾರಿಕರಿಗಿರುವಂತೆ ಇವರಿಗೂ ‘ರೀತಿ’ ಎಂಬುದು ಸ್ವತಂತ್ರ ಕಲ್ಪನೆ. ಅದು ಬೇರೊಂದು ಗುರಿಯನ್ನು ತಲಪಲಿರುವ ಸಾಧನೆ ಅಲ್ಲ; ಅದೇ ಗುರಿ ಎಂದ ಮೇಲೆ ಕಾವ್ಯಗಳಲ್ಲಿ ಉತ್ಕರ್ಷ-ಅಪಕರ್ಷ ಗಳಿರುವಂತೆ ಅವುಗಳ ಮಾರ್ಗಗಳಲ್ಲೂ ಉತ್ಕರ್ಷ-ಅಪಕರ್ಷಗಳಿರಲೇಬೇಕು. ಈ ಅಭಿಪ್ರಾಯ ಎರಡು ಯುಗಗಳಿಗೂ ಸಾಮಾನ್ಯವಾಗಿದ್ದರೂ ಉತ್ಕರ್ಷ-ಅಪಕರ್ಷಗಳ ಮೇಲಿನ ಅವಧಾರಣೆ (emphasis) ಎರಡನೆಯ ಯುಗದಲ್ಲಿ ಕಡಿಮೆಯಾಗುತ್ತದೆ. ಯಾವ ಮಾರ್ಗವೂ ಅಪಕ್ರಷ್ಟವಲ್ಲ ಎಂಬ ಅಭಿಪ್ರಾಯ ರೂಪುಗೊಳ್ಳುತ್ತದೆ.
ಮೂರನೆಯ ಯುಗದಲ್ಲಿ ರೀತಿಯ ಕಲ್ಪನೆ ಅಡಿಮೇಲಾಗುವಷ್ಟು ಬದಲಾವಣೆ ಹೊಂದುತ್ತದೆ. ‘ರೀತಿ’ ಎಂಬುದು ಸ್ವತಂತ್ರ ಕಲ್ಪನೆ ಅಲ್ಲ. ಅದು ಯಾವಾಗಲೂ ರಸದ ಅನುಯಾಯಿ. ರಸಕ್ಕೆ ಅನುರೂಪವಾಗಿರುವಿಕೆ ಅಥವಾ ಇಲ್ಲದಿರುವಿಕೆ ಮಾತ್ರ ‘ರೀತಿ’ಯ ಉತ್ಕರ್ಷ- ಅಪಕರ್ಷಗಳಿಗೆ ನಿರ್ಣಾಯಕ. ಇನ್ನೂ ಒಂದು ಬದಲಾವಣೆ ‘ರೀತಿ’ಯ ಕಲ್ಪನೆಯ ಬಗ್ಗೆ ಈ ಯುಗದಲ್ಲಿ ಕಾಣಿಸಿಕೊಳ್ಳುತ್ತದೆ. ಹಿಂದೆ ನಾವು ನೋಡಿದಂತೆ ಶಬ್ದ-ಅರ್ಥಗಳೆರಡೂ ಅವಿಭಕ್ತವಾಗಿ ‘ರೀತಿ’ಯ ನೆಲೆಗಳೆಂದು ತೀರ್ಮಾನಿಸಲಾಗಿತ್ತು. ಈಗ ‘ರೀತಿ’ ರಸಕ್ಕೆ ನೆಲೆಯಾಗಬೇಕಾಗುತ್ತದೆ. ರಸಕ್ಕೆ ನೆಲೆಯಾಗಿರುವಂತೆ ‘ವೃತ್ತಿ’ ಎಂಬ ಕಲ್ಪನೆ ನಾಟ್ಯಶಾಸ್ತ್ರದಲ್ಲಿ ರೂಪುಗೊಂಡಿತ್ತು. ಕಾವ್ಯ ಮೀಮಾಂಸೆ ತನ್ನ ಕೊಡುಗೆಯಾಗಿ ‘ರೀತಿ’ಯನ್ನು ರಸಕ್ಕೆ ನೆಲೆಯಾಗಿಸುವಾಗ ವೃತ್ತಿಗೆ ಸ್ಥಾನವೆಲ್ಲಿ ? ಈ ಸಮಸ್ಯೆಯನ್ನು ಆಲಂಕಾರಿಕರು ಹೊಸತಾಗಿ ಎದುರಿಸಬೇಕಾಗುತ್ತದೆ.
ಇವರ ತರ್ಕ ರೀತಿಯನ್ನೂ ವೃತ್ತಿಯನ್ನೂ ಎರಡು ಪ್ರತ್ಯೇಕ ಸ್ವರಗಳ ರೂಪದಲ್ಲಿ ರಸಕ್ಕೆ ನೆಲೆಯಾಗಿಸಿ ಮೊದಲನೆಯದನ್ನು ಶಬ್ದಕ್ಕೂ ಎರಡನೆಯದನ್ನು ಅರ್ಥಕ್ಕೂ ಗಂಟುಹಾಕುತ್ತದೆ. ಹೀಗೆ, ಮೂರನೆಯ ಯುಗ ನಾಲ್ಕನೆಯ ಯುಗವನ್ನು ಅನಿವಾರ್ಯವಾಗಿ ಸೃಷ್ಟಿಸುತ್ತದೆ.
ನಾಲ್ಕನೆಯ ಯುಗಕ್ಕೆ ಇನ್ನೊಂದು ಮುಖ ಇದೆ. ಇದು ರೀತಿಯ ಪುನಃಪ್ರತಿಷ್ಠೆ. ಇದಕ್ಕೆ ಕಾರಣ, ಸೌಂದಯ್ಯಮೀಮಾಂಸೆಯ ಇತರ ಮೂಲಗಳು ಕಾವ್ಯಮೀಮಾಂಸೆಯ ಮೇಲೆ ಉಂಟುಮಾಡಿದ ಪರಿಣಾಮಗಳು ಕಾವ್ಯಮೀಮಾಂಸೆಯ ಸ್ವಂತ ಸಾಧನೆಯೇ ಎನ್ನಿಸುವಂತೆ ತಮ್ಮ ಶಾಸ್ತ್ರದ ವ್ಯಾಪ್ತಿಯನ್ನು ಹಿಗ್ಗಿಸಿ ಗ್ರಂಥರಚನೆ ಮಾಡುವ ಆಲಂಕಾರಿಕರು. ಇವರ ಪ್ರಕಾರ ‘ರೀತಿ’ ಸ್ವತಂತ್ರ. ಇದಕ್ಕೆ ನೆಲೆ ಶಬ್ದ-ಅರ್ಥಗಳಲ್ಲ; ಕವಿಸ್ವಭಾವ. ಮನುಷ್ಯ (ಕವಿ) ಸ್ವಭಾವ ಸಂಖ್ಯೆಗೆ ಸಿಗದೆ ಅನಂತವಾಗಿರುವಂತೆ ರೀತಿಗಳೂ ಅನಂತ. ಆದರೂ ಸ್ಥೂಲವಾಗಿ ಮನುಷ್ಯರನ್ನು ಒಳ್ಳೆಯವರು-ಕೆಟ್ಟವರು ಮುಂತಾಗಿ ವರ್ಗೀಕರಿಸುವಂತೆ ‘ರೀತಿ’ಗಳನ್ನೂ ವರ್ಗಿಕರಿಸಬಹುದು.
ಒಂದನೆಯ ಯುಗದಿಂದ ಎರಡನೆಯ ಯುಗ ವಿಕಾಸಹೊಂದಿದಂತೆ ಕಾಣಲು ಕಾರಣವಾದುದು ಒಂದು ವಿಧದ ತರ್ಕ : ಅಸ್ಪಷ್ಟತೆಯ ಯುಗದಲ್ಲಿ ರೀತಿಯ ಕೆಲವು ಅವಯವಗಳು ಶಬ್ದದ ಮೇಲೂ ಕೆಲವು ಅವಯವಗಳು ಅರ್ಥದ ಮೇಲೂ ನೆಲೆಯೂರಿ ರೂಪಿತವಾದಂತೆ ಕಾಣುತ್ತಿತ್ತು. ಪ್ರತಿಷ್ಠೆಯ ಯುಗದಲ್ಲಿ ‘ರೀತಿ’ಯ ಎಲ್ಲಾ ಅವಯವಗಳಿಗೂ ಶಬ್ದ-ಅರ್ಥಗಳೆರಡೂ ಸಮಾನ ಮತ್ತು ಅವಿಭಾಜ್ಯ ನೆಲೆಗಳಾದ ಎರಡು ಸ್ತರಗಳಾಗಿ ಕಾಣಿಸುತ್ತವೆ. ತರ್ಕದ ಸಹಾಯದಿಂದ ವಿಸ್ತಾರಗೊಂಡ ಕಲ್ಪನೆ ಬುದ್ಧಿಯ ನೋಟಕ್ಕೆ ವಿಕಸಿತವೂ ಪರಿಷ್ಕೃತವೂ ಆದಂತೆ ಕಾಣುತ್ತದೆ. ಆದರೆ, ಅನುಭವ ಇಲ್ಲಿ ಮೌಲಿಕವೂ ಸ್ವಾಭಾವಿಕವೂ ಆದ ಪರಿಷ್ಕಾರವನ್ನಾಗಲೀ ವಿಕಾಸ ವನ್ನಾಗಲೀ ಗುರುತಿಸಲು ಸಮರ್ಥವಾಗುವುದಿಲ್ಲ. ವಿವಿಧ ಮಾರ್ಗಗಳ ಪೈಕಿ ಒಂದರ ಕಡೆಗೆ ಹಿಂದಿನ ಆಲಂಕಾರಿಕರಿಗಿದ್ದ ಅತ್ಯಾದರದಲ್ಲಿ ಏನೂ ವ್ಯತ್ಯಾಸ ಉಂಟಾಗುವುದಿಲ್ಲ.
ಮೂರನೆಯ ಯುಗ ಸ್ವತಂತ್ರ. ಇಲ್ಲಿ ಬರುವ ರೀತಿಯ ಕಲ್ಪನೆ ಸಂಪೂರ್ಣ ಹೊಸತು. ಈ ಹೊಸ ಕಲ್ಪನೆಯನ್ನು ಸ್ಪಷ್ಟಪಡಿಸುವುದು ನಾಲ್ಕನೆಯ ಯುಗದ ಒಂದನೆಯ ಮುಖ. ಇದು ತರ್ಕದ ಇನ್ನೊಂದು ಪ್ರಯೋಗ. ಹಿಂದಿನ ತರ್ಕದ ಪ್ರಕಾರ ‘ರೀತಿ’ ಎಂಬ ಸ್ವತಂತ್ರ ಕಲ್ಪನೆಗೆ ಶಬ್ದ-ಅರ್ಥಗಳು ಸ್ತರಗಳಾಗುವಂತೆ ಈ ತರ್ಕದ ಪ್ರಕಾರ ‘ರಸ’ ಎಂಬ ಸ್ವತಂತ್ರ ಕಲ್ಪನೆಗೆ ರೀತಿ-ವೃತ್ತಿಗಳು ಸ್ತರಗಳು. ಎರಡು ಸ್ತರಗಳನ್ನು ಪ್ರತ್ಯೇಕಿಸದಿದ್ದಲ್ಲಿ ಬುದ್ಧಿ ತೃಪ್ತಿ ಹೊಂದುವುದಿಲ್ಲ; ಪ್ರತ್ಯೇಕಿಸಿದಲ್ಲಿ ಅನುಭವ ಸಮಾಧಾನಪಡುವುದಿಲ್ಲ.
ನಾಲ್ಕನೆಯ ಯುಗದ ಎರಡನೆಯ ಮುಖವಾಗಿ ಕಾಣಿಸುವುದು ಅಸ್ಪಷ್ಟತೆಯ ಯುಗದ ಮೇಲೆ ಪ್ರಯೋಗಿಸಲಾದ ಮತ್ತೊಂದು ತರ್ಕ. ಕಾವ್ಯ ಮಾರ್ಗಗಳು ಅನಂತ ಎಂಬ ಸ್ಪಷ್ಟ ಉಲ್ಲೇಖ ಅಸ್ಪಷ್ಟತೆಯ ಯುಗದಲ್ಲೇ ಕಂಡುಬರುತ್ತದೆ. ಈ ಯುಗದ ಇತಿಹಾಸವನ್ನು ಪರಿಶೀಲಿಸಿದಾಗ ನಾಲ್ಕು ದಿಕ್ಕುಗಳ ಪ್ರದೇಶಗಳಲ್ಲಿನ ಕವಿಗಳು ಎದ್ದು ಕಾಣುವ ಕೆಲವು ಗುಣಗಳಿರುವಂತೆ ಕಾವ್ಯರಚನೆ ಮಾಡುತ್ತಿದ್ದುದು ಕಂಡುಬರುತ್ತದೆ. ಒಂದೊಂದು ಪ್ರದೇಶಕ್ಕೆ ಒಂದು ಅಥವಾ ಕೆಲವು ಗುಣಗಳನ್ನು ಅಂಟಿಸಿ ಕಾವ್ಯಗಳನ್ನು ಅಭ್ಯಾಸಮಾಡುವ ಮನೋಧರ್ಮಕ್ಕೆ ಕಾವ್ಯವನ್ನು ರಚಿಸುವ ವ್ಯಕ್ತಿಗೂ ಒಂದು ಅಥವಾ ಕೆಲವು ಗುಣಗಳನ್ನು ಅಂಟಿಸುವುದು ಮೌಲಿಕವಾಗಿ ಹೊಸತಲ್ಲ. ಹೊಸ ಪ್ರಯೋಗ ಮಾತ್ರ. ಈ ಪ್ರಯೋಗದ ಪ್ರಕಾರ ಕವಿಯ ಸ್ವಭಾವ ಸಿದ್ದವಸ್ತುವಾಗಿರುವಷ್ಟರ ಮಟ್ಟಿಗೆ ‘ರೀತಿ’ಯೂ ಒಂದು ಸಿದ್ದವಸ್ತು. ಸ್ವಭಾವ ವ್ಯತ್ಯಾಸ ಹೊಂದುವಷ್ಟರ ಮಟ್ಟಿಗೆ ‘ರೀತಿ’ ವ್ಯತ್ಯಾಸಹೊಂದಬಹುದು. ಇದಿಷ್ಟು ‘ರೀತಿ’ಯ ಘಟಕಗಳೊಳಗಿನ ಅಂತರಕ್ಕೆ ನೆಲೆ. ತಾತ್ವಿಕವಾಗಿ ಇದಿಷ್ಟೇ ನೆಲೆಯಾದರೂ ಈ ಅಭಿಪ್ರಾಯ ಹಿಂದಿನ ನೆಲೆಗಳನ್ನು ಆಶ್ರಯಿಸುತ್ತದೆ. ‘ರೀತಿ’ಗೆ ಗುಣಗಳನ್ನು ಅಂಟಿಸಿ ಆ ಗುಣಗಳ ಸ್ವಭಾವವನ್ನು ನಿರ್ಣಯಿಸುವಲ್ಲಿ ಶಬ್ದ ಅರ್ಥಗಳಂತಹ ಸ್ತರಗಳ ವಿವೇಚನೆ ಇಲ್ಲಿಯೂ ನಡೆಯುತ್ತದೆ.
ಒಟ್ಟಿನಲ್ಲಿ ಶಬ್ದ-ಅರ್ಥಗಳ ಮೇಲೆ ಹೇಗೆ ನೆಲೆಯೂರಬೇಕೆಂದು ಯೋಚಿಸುವುದರಲ್ಲಿಯೇ ‘ರೀತಿ’ ತನ್ನ ಆಯುಸ್ಸನ್ನು ಸಂಪೂರ್ಣವಾಗಿ ಸವೆಯಿಸುತ್ತದೆ. ಅಲಂಕಾರಿಕರೆಲ್ಲರೂ ರೀತಿತತ್ವವನ್ನು ಪ್ರತಿಪಾದಿಸುವ ಸಂದರ್ಭಗಳಲ್ಲಿ ಸಿದ್ಧರೂಪದಲ್ಲಿ ತಮಗೆ ಉಪಲಬ್ಧವಿರುವ ಕಾವ್ಯಗಳನ್ನು ಮಾತ್ರ ಗಮನದಲ್ಲಿಟ್ಟು ವಿಶ್ಲೇಷಿಸಲು ಪ್ರಯತ್ನಿಸುತ್ತಾರೆ. ಕಾವ್ಯವನ್ನು ‘ಪಾಕ’ವಾಗಿಟ್ಟುಕೊಂಡು ಅದರ ಘಟಕಗಳನ್ನು ಬೇರೆ ಬೇರೆ ಪ್ರಕಾರಗಳಲ್ಲಿ ಒಟ್ಟು ಸೇರಿಸುವ ವಿಧಾನಗಳನ್ನು ಆಲೋಚಿಸುತ್ತಾರೆ. ಈ ಘಟಕಗಳಿಗಿರುವ ಪರಿಸರ ಮತ್ತು ಪರಿಷ್ಕಾರದ ಪರಿಮಿತಿ ಇವರಿಗೆ ಹೊಳೆಯುವುದಿಲ್ಲ. ಇದರಿಂದಲಾಗಿ ರೀತಿತತ್ವ ಸಿದ್ಧ ಕಾವ್ಯಗಳಿಗೆ ಮಾತ್ರ ಅನ್ವಯಿಸುವಷ್ಟು ಮಿತಕಾಲಿಕವಾಗಿ ಉಳಿಯುತ್ತದೆ.
ಹೀಗೆ ಮಿತಕಾಲಿಕವಾಗುವುದು ರೀತಿತತ್ವಕ್ಕೆ ಅಸಹಜ ಅಲ್ಲ. ನಾವು ಪ್ರಾರಂಭದಲ್ಲಿ ಸ್ಪಷ್ಟ ಪಡಿಸಿದಂತೆ ಕಾವ್ಯಶರೀರವನ್ನು ಮೊದಲಾಗಿಟ್ಟು ಅದರ ಮೂಲಕ ಕಾವ್ಯ ಸತ್ವವನ್ನು ತಲುಪುವ ಕಲ್ಪನೆಗಳು ಸಾರ್ವಕಾಲಿಕವಾಗುವಷ್ಟು ವ್ಯಾಪಕವೂ ಸೂಕ್ಷವೂ ಆಗಿರಲು ಸಾಧ್ಯವಿಲ್ಲ. ಆಲಂಕಾರಿಕರ ‘ರೀತಿ’ಗೆ ಇರುವುದು ಇದೊಂದೇ ಪರಿಮಿತಿ ಅಲ್ಲ. ಸ್ಥಗಿತಗೊಂಡ ಅನುಭವ ಇಲ್ಲಿ ತರ್ಕದ ವಿವಿಧ ಪ್ರಯೋಗಗಳಿಗೆ ಗುರಿಯಾಗುವುದರಿಂದ ಮೇಲಿನ ನೋಟಕ್ಕೆ ಈ ಕಲ್ಪನೆ ಬಹಳ ಪರಿಷ್ಕಾರಗೊಂಡಂತೆ ಮತ್ತು ಹೆಚ್ಚು ಮೌಲಿಕವಾದಂತೆ ಬೇರೆ ಬೇರೆ ‘ಯುಗ’ಗಳಲ್ಲಿ ಕಾಣಿಸುತ್ತದೆ. ವಸ್ತುತಃ ಅಲ್ಲಿ ಯಾವ ಪರಿಷ್ಕಾರವೂ ಆಗಿರುವುದಿಲ್ಲ. ಇದಕ್ಕೆ ಕಾರಣ ಭಿನ್ನ ಪರಿಸರಗಳಲ್ಲಿ ಉಂಟಾಗಬಹುದಾದ ಕಾವ್ಯಘಟಕಗಳಲ್ಲಿ ಭಿನ್ನಸ್ವರೂಪದ ‘ಸೃಷ್ಟಿ ತತ್ವ’ವನ್ನು ಗುರುತಿಸದಿರುವುದು. ಇಂತಹ ಸೃಷ್ಟಿ ತತ್ವವನ್ನು ಗುರುತಿಸುತ್ತಿದ್ದಲ್ಲಿ ಮೇಲೆ ವಿವರಿಸಲಾದ ನಾಲ್ಕು ಹಂತಗಳಲ್ಲಿ ರೀತಿತತ್ವ ಆಗಿಂದಾಗ್ಗೆ ಅನುಭವಸಂವಾದಿಯಾದ ಹೊಸರೂಪದಲ್ಲಿ ತನ್ನ ನೆಲೆಯನ್ನು ಮತ್ತು ಅದರ ಮೂಲಕ ಕಾವ್ಯದ ನೆಲೆಯನ್ನು ಗುರುತಿಸಬಹುದಾಗಿತ್ತು.
ಆದರೆ, ಒಂದು ವಿಷಯ ಗಮನಾರ್ಹ. ತರ್ಕದ ವಿಶ್ಲೇಷಣೆಗೆ ಸಿಲುಕಿ ರೀತಿತತ್ವ ತನ್ನ ನೆಲೆ ಅರಸುವುದರಲ್ಲೇ ಜೀವಮಾನವನ್ನು ಕಳೆದರೂ ತನ್ನನ್ನು ನಿಃಸತ್ವವಾಗಿಸಲು ಬಿಡಲಿಲ್ಲ. ಇದಕ್ಕೆ ಕಾರಣ, ಆಲಂಕಾರಿಕರು ಕಂಡುಕೊಂಡ ಸತ್ವ-ಶರೀರಪಥಗಳೆರಡರ ಸಂಮಿಲನದ ಆವಶ್ಯಕತೆ. ಹೀಗಾಗಿ, ರೀತಿತತ್ವ ತರ್ಕ-ಅನುಭವಗಳ ದ್ವಂದ್ವದಲ್ಲಿ ತನ್ನ ಜೀವನದ ಬಹುಭಾಗವನ್ನು ವ್ಯರ್ಥಪಡಿಸಿಕೊಂಡರೂ ಕಾವ್ಯದ ಒಳತಿರುಳನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನವನ್ನು ಬಿಟ್ಟುಕೊಡುವುದಿಲ್ಲ.
ಅಲ್ಲಮ
ಉರಿಯ ಲಿಂಗ
ಅರಗಿನ ದೇಗುಲದಲ್ಲಿ ಉರಿಯ ಲಿಂಗವ ಕಂಡೆ ದೇವರ ಪೂಜಿಸುವವರಾರೂ ಇಲ್ಲ
ಉತ್ತರಪಥದ ದರ್ಶನಾದಿಗಳಿಗೆ ಸುತ್ತಿದ ಮಾಲೆ ಎತ್ತಲಿಕ್ಕೆ ಹೋಯಿತ್ತು
ಮರನೊಳಗಣ ಕಿಚ್ಚು ಮರನ ಸುಟ್ಟುದ ಕಂಡೆ.
ಗಿಳಿಯು ಪಂಜರದೊಳಿಲ್ಲ
ಪಿ. ಲಂಕೇಶ್
ಗಿಳಿಯು ಪಂಜರದೊಳಿಲ್ಲ
ದೃಶ್ಯ ಒಂದು
ಮಧ್ಯಮ ವರ್ಗದ ಮನೆ. ತೆರೆ ಏಳುವ ಸಮಯದಲ್ಲಿ ಮಗುವಿನ ಅಳು. ತಾಯಿ ಸುಮ್ಮನಿರಿಸಲು ಮಾಡುವ ಹಾಡು, ಚೀರಾಟ, ಗಂಟೆ ಇತ್ಯಾದಿ ಸಪ್ಪಳ. ತೆರೆ ಎದ್ದಾಗ ಸುಮಾರು ಹನ್ನೆರಡು ವರ್ಷದ ಹುಡುಗಿ ಗಿಲಕಿಗಾಗಿ ಕುರ್ಚಿ, ಟೇಬಲ್ ಕೆಳಗೆ ಹುಡುಕುತ್ತಿರುವಳು, “ಸಿಗ್ತಾ ಇಲ್ಲಮ್ಮ” ಎಂದು ಹೇಳಿ ಒಳಗೆ ಹೋಗುವಳು. ಮನೆಯ ಯಜಮಾನರ ಪ್ರವೇಶ.
ಗಂಡ : ಶಭಾಸ್, ಹ್ಯಾಗೆ ಅಳ್ತಿದಾನೆ ನನ್ನ ಮಗ ! ಗಂಗೂ, ಪಾಪ ಯಾಕೆ ಅಳ್ತಿದೆ ಗೊತ್ತಿಲ್ಲವೇನೇ ?
ಹೆಂಡತಿ : ಹೇಳಿ.
ಗಂ : ಬಾ ಇತ್ತ. ನಿನ್ನ ಕುಮಾರನ ದರ್ಶನ ಆಗಲಿ.
ಹೆಂ : ಮಲಗುತ್ತೆ, ಸುಮ್ಮನಿರಿ.
ಗಂ : ಏನಂದೆ?
ಹೆಂ : (ಗಟ್ಟಿಯಾಗಿ) ಮಲಗುತ್ತೆ ! ಸುಮ್ಮನಿರಿ !
ಗಂ : ಭಪ್ಪರೆ, ನನ್ನ ಮಗ ಮಲಗ್ತಾನೆ!
ಹೆಂ : ಕತ್ತೆ ಥರ ಒಟಗುಟ್ಟೋದೇ ನಿಮ್ಮ ಕೆಲಸ.
ಗಂ : ಬಾರೆ ಮತ್ತೆ ಪರವಾಗಿಲ್ಲ. ಗಾಯಿತ್ರಿ ಮಲಗಿಸ್ತಾಳೆ.
ಹೆಂ : ಸರಿ (ಬಂದು) ಬಂದೆ, ಅದೇನು ಹೇಳಿ.
ಗಂ : ನನಗೆ ಅದೇ ಪ್ರಾಬ್ಲಮ್ ಚಿನ್ನ :
ಬೀಜದಿಂದ ಮರವೋ ಮರದಿಂದ ಬೀಜಾನೋ-ಇದ್ದ ಹಾಗೆ, ನಿನ್ನ ಹಾಡಿನಿಂದ ಅತ್ತನೋ ಅವನು ಅತ್ತಿದ್ರಿಂದ ಹಾಡಿದೆಯೋ- ಹೆಂ : ಮಹಾ ನಂಗೂ ಅದೇ ಕಣ್ರೀ ಪ್ರಾಬ್ಲಮ್, ಹುಡುಗ್ರು ಧಡ್ರು ಅಂತ ಪಾಠ ಹೇಳ್ತೀರೋ,
ನೀವು ಪಾಠ ಹೇಳಿದ್ರಿಂದ ಧಡ್ಡರಾದ್ರೋ-
ಗಂ : (ಮಗು ಸಂಪೂರ್ಣ ಅಳು ನಿಲ್ಲಿಸಿದ್ದು ಕೇಳಿ) ಹ್ಞಾ! ನೋಡು ಯಾರು ಹೇಳಿದ್ದು ನಿಜ ?
ಹೆಂ : ನಿಮ್ಮ ಗದ್ದಲಕ್ಕೆ ಹೆದರ್ಕೊಂಡಿರಬೇಕು, ಅಷ್ಟೆ-
ಗಂ : ಅಲ್ಲ !
ಹೆಂ : ಗಂಟೆ ಸದ್ದಿಗೆ ಸುಮ್ಮನಾಗಿರಬೇಕು.
ಗಂ : ಅಲ್ಲ !
ಹೆಂ : ರಿಪಿ ರಿಪಿ ಮಾಡೋದೇ ನಿಮ್ಮ ಕೆಲಸ, ಕೈಬಿಡಿ.
ಗಂ : ಕೂತ್ಕೋ, ಮಾತಾಡೋಣ.
ಹೆಂ : ಕೈ ಬಿಡ್ರೀ, ಗಾಯಿತ್ರಿ ಬರ್ತಾಳೆ.
ಗಂ : ಕೂತ್ಕೋ ಅಂದ್ರೆ ಕೂತ್ಕೋಬೇಕು. ಗಾಯಿತ್ರಿ, ನಾಳೆ ನಿಂಗೆ ಟೆಸ್ಟ್ ಅಲ್ವಾ ?
ಗಾಯತ್ರಿ : ಹೌದಪ್ಪ.
ಗಂ : ಅಲ್ಲೇ ಕೂತ್ಕೊಂಡು ಓದ್ಕೋ ಮರಿ. ಈ ಸಲ ಫಸ್ಟ್ ಕ್ಲಾಸ್ ಬರಬೇಕು.
ಹೆಂ : ಬಹಾಳ ಪ್ರೀತಿ ಮಗಳ ಮೇಲೆ. ಅವಳ ಕ್ಲಾಸ್ ಯಾವುದು ಹೇಳಿ ?
ಗಂ : (ಗೊತ್ತಿಲ್ಲದೆ) ಗೊತ್ತು ಬಿಡೆ. (ಈ ಮಧ್ಯೆ ತನ್ನ ಯೋಗ್ಯತೆಗೆ ತಕ್ಕ ರೀತಿಯಲ್ಲಿ ಪ್ರೀತಿ ತೋರುವನು.)
ಹೆಂ : ಏನು ಗೊತ್ತು, ಹೇಳಿ.
ಗಂ : ನಾವು ನಂದಿಗೆ ಹೋಗಿದ್ದಾಗ ಅವಳಿಗೆ ಏಳು ವರ್ಷ.
ಹೆಂ : ಸರಿ, ಏಳರಲ್ಲಿ ಎರಡು ಹೋದ್ರೆ ಐದು.
ಗಂ : ಊಟಿಯಲ್ಲಿದ್ದಾಗ ನಾನೇ ಹದಿನಾಲ್ಕರ ಮಗ್ಗಿ ಬರೆದುಕೊಟ್ಟಿದ್ದೆ.
ಹೆಂ : (ಅವನು ನೆನೆಸಿಕೊಳ್ಳುವ ವಿಧಾನಕ್ಕೆ ನಕ್ಕು) ಅದ್ಹ್ಯಾಗೆ ಪಾಠ ಹೇಳಿ ಕೊಡ್ತಿರ‍್ರೀ ನೀವು ? (ಗಟ್ಟಿಯಾಗಿ ನಗುವಳು)
ಗಂ : (ತಾನೂ ನಗಲು ಯತ್ನಿಸಿ, ಆದರೆ ಹೆಚ್ಚಾಗಿ ಮುನಿಸಿನಿಂದ) ನಿನಗೇನು ಹುಚ್ಚೇನೇ ?
ಹೆಂ : ಹುಚ್ಚಲ್ಲ, ತಮಾಷೆ ! ನಿಮ್ಮ ವಯಸ್ಸು ಹ್ಯಾಗೆ ಹೇಳ್ತೀರಿ, ಹೇಳಿ.
ಗಂ : ನನ್ನ ಸರ್ಟಿಫಿಕೇಟಲ್ಲಿ ಇದೆ.
ಹೆಂ : ಅಲ್ಲ, (ಮತ್ತೆ ನಕ್ಕು) ಹಾಗಲ್ಲ. ನಾಲ್ಕು ವರ್ಷದ ಕೆಳಗೆ ಕೆಂ-ಪು ಶರ್ಟು ಹಾಕ್ಕೊಂಡು ಬೀದೀಲಿ ಹೋಗ್ತಿದ್ರಿ. ಸಾವ್ಕಾರ್ ಮುನಿಯಪ್ಪನ ನಾಯಿ ಅಟ್ಟಿಸಿಕೊಂಡು ಬಂತು, ಅಲ್ಲಿಂದ ಕಾಲು-ಕಿತ್ರಿ- ಒಂದು ರಿಕ್ಷಾಕ್ಕೆ ಹೋಗಿ ಢಿಕ್ಕಿ ಹೊಡಿದ್ರಿ-ಪೋಲೀಸ್ನೋನು ಬಂದು….
ಗಂ : ಹಳೇ ಕತೆ ಮತ್ತೆ ಮತ್ತೆ ಹೇಳಬೇಡವೇ (ಎಂದು ಅವಳು ನಗುತ್ತಿದ್ದಂತೆ ಅಟ್ಟಿಸಿಕೊಂಡು ಹೋಗುವನು.)
ಗಾ : (ಕೆಮ್ಮಿ) ಇಲ್ಲಿ ತುಂಬ ಕತ್ತಲೆ ಕಣಪ್ಪ.
ಹೆಂ : (ನಕ್ಕು ಸುಸ್ತಾಗಿ ಸಿಕ್ಕು) ನನ್ನ ಮುಟ್ಟಬೇಡ್ರಿ, ನಿಮ್ಮ ತಲೆ ನೋಡ್ಕೊಳ್ಳಿ-
ಗಂ : (ಅವಳು ಸಿಕ್ಕಿದಳೆಂಬಂತೆ) ಹೆಂಗಸರು ಮಾತ್ರ ಕನ್ನಡಿಯಿಲ್ಲದೆ ತಮ್ಮ ತಲೆ ತಾವೇ ನೋಡ್ಕೋತಾರೆ-
ಹೆಂ : ತಲೆಹರಟೆ ! ಕ್ಷೌರ ಮಾಡಿಸಿಕೊಂಡು ಬಂದು ಮೈಲಿಗೇಲಿ-
ಗಂ : ಹೌದಲ್ಲ ! ಮರೆತೇಬಿಟ್ಟಿದ್ದೆ-ನಿನ್ನನ್ನು ಅದಕ್ಕೇ ನಾನು ಕರೆದದ್ದು.
ಹೆಂ : ಸರಿಯಾಗಿ ಮಾತನಾಡದಿದ್ರೆ ಒಂದಕ್ಕೆ ಎರಡರ್ಥ ಆಗುತ್ತೆ. ಅದೇನು ಹೇಳಿ.
ಗಂ : ಹೇಳ್ತೇನೆ, ಇರು. (ಎಂದು ಸಿಗರೇಟನ್ನು ಸಾವಧಾನವಾಗಿ ಹಚ್ಚಿಕೊಳ್ಳುವನು. ಈ ಕೆಲಸ ಹಂತ-ಹಂತವಾಗಿ ಸಾಗುತ್ತಿದ್ದಂತೆ ಮಾತಾಡುವಳು.)
ಹೆಂ : ಇವತ್ತು ಒಂದನೇ ತಾರೀಖು (ಮೌನ) ಪಾಪ ಹುಟ್ಟಿದ ಹಬ್ಬ (ಮೌನ) ನೆನಪಿರಲಿ, ಜಯಾ ಸೀರೇಗೆ ಅಂತ ಕಳಿಸಿದ ದುಡ್ಡನ್ನೆಲ್ಲ ಖರ್ಚು ಮಾಡಿಕೊಂಡು ಕೂತಿದ್ದೀರಿ.
ಗಂ : ಮುಗೀತಾ ನಿನ್ನ ಒಂದನೇ ತಾರೀಖಿನ ಪುರಾಣ ?
ಹೆಂ : ನಿಮ್ಮ ಪುರಾಣ ಹೇಳಿ.
ಗಂ : ಇದು ನನ್ನ ಹಜಾಮನ ಕತೆ (ತಲೆ ತೋರಿಸುತ್ತಾ) ನನ್ನ ಹಜಾಮನ ಕತೆ, ಅಂದೆ. (ನಗುವಳು) ನಗಬೇಡ. ಕೇಳು. ಹೆಂಗಸರಿಗೆ ಕ್ಷೌರದ ಕತೆ ಕೊಂಚ ಕಷ್ಟ. (ನಗುವಳು) ನಗು, ನಗು. ಹೆಂಗಸರಿಗೇನು, ತಲೆ ಮೇಲೆ ಕೂದಲು ಬೆಳೀತಿದ್ರೆ ಆರಾಮಾಗಿ ಹಾಡು ಹೇಳ್ತಾ ಇರ‍್ತೀರಿ ; ಎಣ್ಣೆ ಹಾಕಿ ಹೂವಿನ ಘಮ ಘಮ ಕೊಟ್ಟು, ಬೆಳೀ ಬೆಳೀ ಅಂತೀರಿ; ಮೋಟು ಜಡೆ ಆದ್ರೆ ಕೆದರಿಕೊಂಡು ಬಾಬ್ ಅಂತೀರಿ-
ಉದ್ದ ಜಡೆ ಆದ್ರೆ ಅದನ್ನ ಗಂಡಸರ ಕುತ್ತಿಗೆಗೆ ಸುತ್ತಿ
ಹೆಂ : ಹುಂ, ಸುತ್ತಿ?
ಗಂ : ಹೋಗ್ಲಿ ಬಿಡು, ಗಂಡಸರಿಗೆ ಮಾತ್ರ ಒಂದು ಚೋಟುದ್ದ ಕೂದಲು ಸಾಕು. ಪಕ್ಕದಲ್ಲಿ ನೀಟಾಗಿ ಕತ್ತರಿಸಿರಬೇಕು; ಕತ್ತಿ ತಕೊಂಡು ಹೆರೆದು ಗಾರ‍್ಡನಿಂಗ್ ಮಾಡಿರಬೇಕು; ಎಲ್ಲೆಲ್ಲಿ ಎಷ್ಟೆಷ್ಟು ಕೂದಲಿರಬೇಕೋ ಅಷ್ಟಿದ್ದರೆ ಚೆಂದ.
ಹೆಂ : (ತುಂಟತನದಿಂದ) ಕೂದಲೇ ಇಲ್ಲದಿದ್ರೆ ?
ಗಂ : ಕೂದಲೇ ಇಲ್ಲದಿದ್ರೆ ಟೊಪ್ಪಿಗೆ-
ಗಾಂಧಿ ಟೊಪ್ಪಿಗೆ, ರಟ್ಟಿನ ಟೊಪ್ಪಿಗೆ, ಗುಡಾಣದಂಥ ಟೊಪ್ಪಿಗೆ, ಕೆಳಗೆ ನಾಲ್ಕೇ ನಾಲ್ಕು ಕೂದಲಿದ್ರೂ ಅದನ್ನು ಕತ್ತರಿಸಿ, ಅದನ್ನು ಹದ ಮಾಡೋಕೊಬ್ಬ ಹಜಾಮ ಬೇಕು (ಅವಳನ್ನೇ ನೋಡುತ್ತ-ನಕ್ಕು)
ನೀನು ಬೋಳಾಗಿದ್ರೆ ಹೇಗಿರಿದ್ದೆ ಅಂತ ನೆನೆದ್ರೆ ನಗು ಬರುತ್ತೆ.
ಹೆಂ : ಹೋಗ್ರಿ-ಕೆಟ್ಟ ನಾಲಗೆ.
ಗಂ : ನಾನೆಷ್ಟೊ ನೋಡೀದೀನಿ, ಹೆಂಗಸರಿಗೆ ಬಕ್ಕತಲೆ ಆದದ್ದು ಕಮ್ಮಿ-ಈಚೀಚೆಗೆ ಗಂಡ ಸತ್ತಿದ್ದೋರೂ ಕೂಡಾ ಇಷ್ಟುದ್ದ ಜಡೆ
ಹಾಕ್ಕೊಂಡು-
ಹೆಂ : ಅದೇನೋ ಕತೆ ಹೇಳ್ತೀನಿ ಅಂದಿರಲ್ರೀ, ಒಳ್ಳೆ ಪ್ರೋಫೇಸರ್ ನೀವು !
ಗಂ : ಕತೆ ಅಲ್ವೆ, ನಡೆದದ್ದು.
ಹೆಂ : ನಡೆದದ್ದು, ಕೂತದ್ದು ಎರಡನ್ನೂ ಹೇಳಿ.
ಗಂ : ಸರಿ ಕೇಳು, ಪ್ರತೀ ತಿಂಗಳು ಒಂದನೇ ತಾರೀಖು ಹೋಗ್ತೇನಲ್ಲ, ಆ ಹಜಾಮನ ಅಂಗಡಿಗೆ ಹೋದೆ. ಅಂದ್ರೆ ಇವತ್ತು ಹೋದೆ. ನೀನು, ಕೂದಲು ಎಷ್ಟುದ್ದ ಆಗಿದೆ ಅಂದ್ರೆ ನಿನ್ನ ಎದೆಗೆಲ್ಲ ಚುಚ್ಚುತ್ತೆ ಅಂತ-
ಹೆಂ : ಬರೀ ಹಲ್ಕಾನಪ್ಪ ನೀವು, ಕತೆ ಹೇಳಿ.
ಗಂ : ಆ ಅಂಗಡಿಗೆ ಹೋದೆ. ಹಜಾಮು ಸುಮ್ಮನೆ ನಿಂತಿದ್ದ- ಗಿರಾಕಿಗಳೇ ಕಮ್ಮಿ ಅವನಿಗೆ. ಇಡೀ ತಿಂಗಳು ನನಗಾಗಿ ಕಾಯುತ್ತಿದ್ದನೇನೋ ಅನ್ನೋ ಹಾಗೆ ನಿಂತಿದ್ದ. ಹೋದ ಕೂಡಲೇ ಕುರ್ಚಿಯ ಧೂಳು ಹೊಡೆದು ಸಜ್ಜಾದ. ಕನ್ನಡೀನ ನನ್ನ ಮುಖಕ್ಕೆ ಸರಿಯಾಗಿ ಇಟ್ಟ. ನಿತ್ಯದ ಹಾಗೇ ಇದ್ದ-ತುಟಿ ಪಿಟಕ್ಕೆನ್ನದೆ. ನನ್ನ ತಲೇ ಮೇಲೆ ಕೈಯಾಡಿಸಿ, ಮಿಷನ್ ತಗೊಂಡು, ಚಕ್ ಚಕಾ, ಚಕ್ ಚಕಾ ಅಂತ ಷುರು ಮಾಡಿದ.
ಹೆಂ : ಅಲ್ರೀ ಅವನು ಒಂದು ಮಾತೂ ಆಡೋಲ್ವಾ ?
ಗಂ : ಅವನು ಬೇರೆ ಥರಾ ಹಜಾಮ ಕಣೇ-ಈ ನಾಲ್ಕು ವರ್ಷದಿಂದ ನಾಲ್ಕು ಮಾತು ಆಡಿರಬಹುದು ಅಷ್ಟೇ.
ಹೆಂ : ನಾಲ್ಕು ಮಾತೇ ? ಎಂಥಾ ನಾಲ್ಕು ಮಾತು ?
ಗಂ : ಸಿಸರ್ ಕಟ್ ಬೇಕೇ ಸಾರ್ ಅಂದ, ನಾಲ್ಕು ವರ್ಷದ ಕೆಳಗೇ, ನಾನು ‘ಹೂಂ’ ಎಂದೆ-
ಹೆಂ : ಆ ಮೇಲೆ ?
ಗಂ : ಮೀಸೆ ಕತ್ತರಿಸಬೇಕೇ ಸಾರ್ ಅಂದ, ಒಂದು ಸಲ ; ಪೂರ್ತಿ ಹೆರೆದು ಬಿಡು ಅಂದೆ ನುಣ್ಣಗೆ ಹೆರೆದು ಬಿಟ್ಟ.
ಹೆಂ : ಆ ಮೇಲೆ ?
ಗಂ : ಕೂದಲು ಕೊಂಚ ಬೆಳ್ಳಗಾಗ್ತಿದೆ ಸಾರ್, ಅಂದ. ಬಣ್ಣ ಹಚ್ಕೋಳ್ತೇನೆ ಅಂದೆ.
ಹೆಂ : ನೀವು ಯಾರು ಅಂತ ಅವನಿಗೆ ಗೊತ್ತಿಲ್ವಾ?
ಗಂ : ಇಲ್ಲ, ಅವನು ಯಾರು ಅಂತ ನನಗೆ ಗೊತ್ತಿಲ್ಲ.
ಹೆಂ : ಸುಳ್ಳು, ಅವನು ಹಜಾವ ಅಂತ ನಿಮಗೆ ಗೊತ್ತು.
ಗಂ : ಹಜಾಮರ ವಿಷಯ ಹೆಂಗಸರಿಗೇನು ಗೊತ್ತು, ಹೇಳ್ತೇನೆ ಕೇಳು- ನೀನು ಷಾಸಿಗೆ ಹೋದೆ ಅಂತ ಇಟ್ಕೋ-
ಹೆಂ : ಥೂ!
ಗಂ : ನಾನೇ ಹೋದೆ ಅಂತಿಟ್ಕೋ-ಮುಕ್ಕಾಲು ಮೂರು ಪಾಲು ಹಜಾಮರು ಒಳ್ಳೆ ಡಿಪ್ಲೊಮ್ಯಾಟ್ಸ್ ಥರ ಮುಗುಳಕ್ಕು ಬನ್ನಿ ಸಾರ್ ಅಂತಾರೆ. ನೀನು ರಾಜ ಆಗಿರು, ಕೊತ್ತಂಬರಿ ಬೀಜ ಆಗಿರು, ಬನ್ನಿ ಸಾರ್ ಅಂತಾರೆ, ಕೂಡ್ಕೊಳ್ಳಿ ಸಾರ್, ಅಂತಾರೆ. ನಾನು ಕೂತ್ಕಂಡೆ ಅನ್ನು-ಏನು ಸಾರ್, ಈಚೆಗೆ ಕಾಣಿಸಲಿಲ್ಲ, ಅಂತಾರೆ–ನಾನು ಈಚೆಗೆ ವ್ಯಾನಿಷಿಂಗ್ ಕ್ರೀಮ್ ಹಚ್ಚೇನೆ ಅಂದ್ರೆ ಪೆದ್ದು ಪೆದ್ದಾಗಿ ನಗ್ತಾರೆ. ನಿಮ್ಮ ಮಾತು ಒಳ್ಳೆ ಮಜಾ ಸಾರ್, ಏನು ಸಮಾಚಾರ ಅಂತಾರೆ-ನಂಗೆ ಸಮಾಚಾರ ಗೊತ್ತಿಲ್ಲ’-ಸುಮ್ಮೆ ನಕ್ಕರೆ ಇವತ್ತು ಯಾವ ಕುದುರೆ ಗೆಲ್ಲುತ್ತೆ ಸಾರ್, ಟ್ಯೂಡರ್ ಜೆಟ್ಟೋ, ಗೋಲ್ಡ್ ಬಾಂಡೋ ಅಂತಾರೆ; ಕುದುರೆ ಯಾಕಪ್ಪ ಗೆಲ್ಲುತ್ತೆ ಅಂದ್ರೆ, ರೇಸಿನ ಮೇಲೆ ಭಾಷಣ ಕೊಟ್ಟು ನಿನ್ನ ಹೆಣ ಹಾಕ್ತಾರೆ.
ಹೆಂ : ಅವರು ಹಜಾಮರು ಯಾಕಾದದ್ದು ಅಂತ ಹೇಳಬೇಕು ನೀವು-
ಗಂ : ರೇಸಿನಿಂದ ಹಜಾವರಾದರೋ, ಹಜಾಮರಿಂದ ರೇಸಾಯಿತೋ-
ಹೆಂ : ಸಾಕಪ್ಪಾ ಸಾಕು-
ಗಂ : ಆದರೆ ನನ್ನ ಹಜಾಮ ಸೈಲೆಂಟ್-ಅದಕ್ಕೇ ಅವನು ನನಗೆ ಇಷ್ಟ. ಕಪ್ಪನೆಯ ವ್ಯಕ್ತಿ; ಅವನ ಕೆಲಸ ಆಯ್ತು, ಅವನಾಯ್ತು.
ಹೆಂ : ಇಷ್ಟೇನಾ ಕತೆ ?
ಗಂ : ಇಷ್ಟೇ ಆಗಿದ್ರೆ ನಾನ್ಯಾತಕ್ಕೆ ಹೇಳಿದ್ದೆ ? ಇವತ್ತು ಸುಮ್ಮೆ ಕ್ಷೌರ ಮಾಡ್ತಿದ್ದ-ಇದ್ದಕ್ಕಿದ್ದ ಹಾಗೆ ಮಾತಾಡಿದ.
ಹೆಂ : ಹೌದ ? ಏನಂದ ?
ಗಂ : ತನಗೆ ತಂದೆ ಇದಾರಾ ಸಾರ್ ಅಂದ- (ಮೌನ). ಹೌದು ಅಂದೆ, ಇದ್ದಾರೆ-ಊರಲ್ಲಿದ್ದಾರೆ ಅಂದೆ. (ಮೌನ) ನೀವೊಬ್ಬರೇ ಮಕ್ಕಳಾ ಸಾರ್ ಅಂದ
ಹೌದು ನಾನೊಬ್ಬನೇ ಅಂದೆ. (ಮೌನ) ತಮಗೆ ಮಕ್ಕಳು ಇದ್ದಾರಾ ಅಂದ ಇಬ್ಬರು ಇದಾರೆ ಅಂದೆ.
ಹೆಂ : ಆಮೇಲೆ.
ಗಂ : ಅಷ್ಟಕ್ಕೇ ಸುಮ್ಮನಾದ-ಮತ್ತೇನಾದರೂ ಕೇಳಬಹುದು ಅಂತ ನೋಡಿದೆ-ಆದರೆ ಮಾತನಾಡಲಿಲ್ಲ. (ಮೌನ) (ನಕ್ಕು) ವಿಚಿತ್ರ ಅಲ್ಲವಾ, ಮೈಲಿ ಮುಖದ ಆ ಮನುಷ್ಯ ಎಷ್ಟೋ ವರ್ಷದಿಂದ ನನ್ನನ್ನು ನೋಡ್ತಿದ್ದಾನೆ. ಮಾತೇ ಆಡ್ತಿರಲಿಲ್ಲ-ಈಗ ಇದ್ದಕ್ಕಿದ್ದ ಹಾಗೆ ಮಾತಾಡಿದ-ಅವನ ಮಾತಿಗೆ ವಿಚಿತ್ರ ಶಕ್ತಿ ಇತ್ತು. (ಮೌನ) ನಾನೂ ಅವನನ್ನು ಪ್ರಶ್ನೆ ಕೇಳಬೇಕು ಅಂದುಕೊಂಡೆ ಆದರೆ ಅವನ ಮೌನ ನೋಡಿ ಸುಮ್ಮನಾದೆ. ಮಾತಿಲ್ಲದೆ ನಮ್ಮ ಮಧ್ಯೆ ಸಂಬಂಧ ಬೆಳೆದ ಹಾಗಿತ್ತು.
ಹೆಂ : ಅವ್ರು ನೋಡೋಕೆ ಹೇಗಿದ್ದಾನೆ?
ಗಂ : ಕಪ್ಪಗಿದ್ದಾನೆ, ಯಾವಾಗಲೂ ಗಂಭೀರವಾಗಿರ‍್ತಾನೆ.
ಹೆಂ : ಖುಷಿಖುಷಿಯಾಗಿರ‍್ತಾನಾ?
ಗಂ : ಇಲ್ಲ, ಖುಷಿಯೂ ಇಲ್ಲ, ದುಃಖವೂ ಇಲ್ಲ. (ಹೊರಗಡೆ ಬಾಗಿಲು ತಟ್ಟಿದ ಶಬ್ದ, ‘ಯಾರು ನೋಡು’ ಅನ್ನುವನು. ಅವಳು ಪ್ರೇಕ್ಷಕರಿಗೆ ಕಾಣಿಸುವ ಬಾಗಿಲು ತೆಗೆದು ಹೊರಗೆ ನೋಡುತ್ತ ‘ಯಾರು ಬೇಕಿತ್ತು’ ಎನ್ನುವಳು. ವ್ಯಕ್ತಿ ಪ್ರೇಕ್ಷಕರಿಗೆ ಕಾಣುವುದಿಲ್ಲ. ಮತ್ತೆ ‘ಯಾರು ಬೇಕಿತ್ತು’ ಅನ್ನುವಳು. ಈ ವಿಚಿತ್ರ ರೀತಿಗೆ ಗಂಡ ಎದ್ದು ಬಂದು ತಾನೂ ನೋಡುವನು. ವ್ಯಕ್ತಿಯನ್ನು ಗುರುತಿಸಿ…)
ಗಂ : ಓ! ನೀನಾ, (ಸಂತೋಷದಿಂದ) ಅರೆ, ಅವನೇ ಕಣೆ, ನಾನು ಈಗ ಹೇಳುತ್ತಿರಲಿಲ್ಲವಾ, ಅವನೆ ! ನೀನು ಒಳಗೆ ಹೋಗು. (ಅವಳು ಒಳಗೆ ಹೋಗುವಳು.) ಬಾರಯ್ಯಾ, ಯಾಕೆ ಗೇಟ್ ಹತ್ತಿರಾನೇ ನಿಂತಿದ್ದಿ, ಮಾತಾಡಿಸಿದ್ರೆ-ಯಾರು ಅಂತ ಹೇಳಬಾರದ ? ಒಳಗೆ ಬಾ (ಎಂದು ಪ್ರೇಕ್ಷಕರಿಗೆ ಕಾಣಿಸುವ ಬಾಗಿಲು ದಾಟಿ ಒಳಗೆ ಬರುವನು, ವ್ಯಕ್ತಿಯ ಪ್ರವೇಶ-ಅವನು ಬಾಗಿಲ ಹೊರಗೇ ನಿಂತಿರುವನು.) ಏನು ಬಂದೆ, ಯಾಕೆ ಸಪ್ಪಗಿದ್ದೀ, ಏನಾಯ್ತು ? (ಮೌನ) ನಿನ್ನನ್ನು ನಿನ್ನ ಷಾಪಿನಿಂದ ಹೊರಗೆ ನಾನು ನೋಡುತ್ತಿರುವುದು ಇದೇ ಮೊದಲು ! ಏನು ವಿಶೇಷ ?
ವ್ಯಕ್ತಿ : ನನ್ನ ತಂದೆ ತೀರ‍್ಕೊಂಡ್ರು ಸಾರ್-
ಗಂ : ಹೌದೆ? ನಿನ್ನ ತಂದೆ ತೀರ‍್ಕೊಂಡ್ರೆ? ಏನಾಗಿತ್ತು? ಯಾವಾಗ ತೀರ‍್ಕೊಂಡ್ರು? ಬೆಳಿಗ್ಗೆ ಅದಕ್ಕೇ ಸಪ್ಪಗಿದ್ದೆ ಅಲ್ವಾ?
ವ್ಯ : ಎರಡು ದಿನ ಜ್ವರ ಬಂದಿತ್ತು ಸಾರ್, ಮಧ್ಯಾಹ್ನ ತೀರಿಕೊಂಡ್ರು.
ಗಂ : ಬೆಳಿಗ್ಗೆ ನನಗೆ ಯಾಕೆ ಹೇಳಿಲ್ಲ ? ಅಯ್ಯೋ ಹಾಳಾದವನೇ, ಆಸ್ಪತ್ರೆ ಗಾದ್ರೂ ಸೇರಿಸಬಹುದಾಗಿತ್ತು, (ಮೌನ)
ವ್ಯ : ಹೆಣ ಹಾಗೇ ಬಿದ್ದಿದೆ ಸಾರ್, ಮೂವತ್ತು ರೂಪಾಯಿ ಬೇಕಾಗಿತ್ತು.
ಗಂ : ಮೂವತ್ತೆ ? ಎರಡು ಗಂಟೆ ಬಿಟ್ಕೊಂಡು ಬಾ, ಇವತ್ತು ಮೊದಲನೇ ತಾರೀಖು, ಆಫೀಸಿಗೆ ಹೋಗಿ ಬರ‍್ತೇನೆ.
ವ್ಯ : ಆಗಲಿ ಸಾರ್- (ಮೌನ-ಹೋಗುವನು.)
ಗಂ : ಲೇ ಗಂಗೂ, ಬಾ ಇಲ್ಲಿ (ಬರುವಳು, ಭುಜದ ಮೇಲೆ ಹಿಂಡಿದ ಬಟ್ಟೆ) ಅವನು ಯಾರು ಗೊತ್ತಾ, ನನ್ನ ಮಾಮೂಲು ಹಜಾಮ !
ಹೆಂ : ಹೌದಾ, ಹ್ಯಾಗೆ ನಿಂತಿದ್ದ ! ಕಳ್ಳನ ಥರ !
ಗಂ : ಸಂಕೋಚ ಕಣೇ-ತುಂಬ ಒಳ್ಳೆಯ ಮನುಷ್ಯ-ಅವನ ತಂದೆ ಇವತ್ತು ತೀರ್ಕೊಂಡ್ರಂತೆ (ಹೋಗಲಿರುವಳು) ನಿಲ್ಲು-ನೋಡು, ಅವನಿಗೆ ಇವತ್ತು ಇಪ್ಪತ್ತು ರೂಪಾಯಿ ಬೇಕಂತೆ, ತಂದೆಯ ಶವಸಂಸ್ಕಾರಕ್ಕೆ.
ಗಾ : (ಪ್ರವೇಶಿಸಿ) ಇಪ್ಪತ್ತಲ್ಲಮ್ಮ, ಅವನು ಕೇಳಿದ್ದು ಮೂವತ್ತು ಅಲ್ಲವೇನಪ್ಪಾ ?
ಹೆಂ : (ಸಿಟ್ಟಿನಿಂದ) ಹೌದು ಮೂವತ್ತು-ನೀನು ಯಾಕೆ ಕದ್ದು ಕೇಳಿಸಿಕೊಂಡೆ ?
ಗಾ : ನಾನು ಸುಮ್ಮನೇ ನಿಂತಿದ್ದೆ ಕಣಪ್ಪಾ, ಕೇಳಿಸ್ತು.
ಗಂ : ಒಳಗೆ ಓದ್ಕೊ ಅಂದ್ರೆ ಯಾಕೆ ಕೇಳಿಸ್ಕೊಂಡೆ ?
ಗಾ : ಓದುವಾಗೆಲ್ಲ ಕಿವಿಗೆ ಪ್ಲಾಸ್ಟರ್ ಹಾಕ್ಕೋಳ್ಬೇಕೇನೋ ?
ಹೆಂ : ಹೋಗ್ಲಿ ಬಿಡಿ, ನೀವು ಯಾಕೆ ಸುಳ್ಳು ಹೇಳ್ಬೇಕು.
ಗಂ : ಹತ್ತು ರೂಪಾಯಿಗೆ ನಾನು ಸುಳ್ಳು ಹೇಳಬೇಕಾಗಿಲ್ಲ. ಅವನು ಕೇಳಿದ್ದು ಮೂವತ್ತು-ನಾನು ಕೊಡಲೇ ಬೇಕು.
ಹೆಂ : ಮೂವತ್ತೇಕೆ, ಐವತ್ತು ಕೊಡಿ.
ಗಂ : ಕೊಡ್ತೇನೆ.
ಹೆಂ : ಆದರೆ ಅದಕ್ಕೆ ಸುಳ್ಳು ಹೇಳಬೇಕಿಲ್ಲ.
ಗಂ : ನಿನ್ನ ಮನಸ್ಸಿನಲ್ಲಿ ಏನಿದೆ ಅಂತ ನನಗೆ ಗೊತ್ತು–ನೀನು ‘ಕೊಡಿ’ ಅಂತ ಸರಿಯಾಗಿ ಹೇಳಬೇಕು.
ಹೆಂ : (ಕೃತಕವಾಗಿ ನಕ್ಕು) ಸರಿಯಾಗೇ ಹೇಳ್ತೀದೇನೆ ಕೊಡಿ-
ಗಂ : ನೋಡು, ಈ ನಗರದಲ್ಲಿ ಲೆಕ್ಕವಿಲ್ಲದಷ್ಟು ಜನರಿದ್ದಾರೆ-ಲಕ್ಷ ಲಕ್ಷ ಜನ. ಅದರಲ್ಲಿ ನಮಗೆ ಗೊತ್ತಿರೋರು ಇಪ್ಪತ್ತೋ, ಮೂವತ್ತೋ ಜನ. ಮಾತಾಡಿ, ಬರೆದು, ಗಿಲೀಟುಮಾಡಿ, ಜೂಜಾಡಿ ದುಡಿದು ತಿನ್ನೋ ಜನ-ಪೂಜೆಯ ಮಂದಿ, ಮಂತ್ರದ ಮಂದಿ, ಮಾತಿನ ಮಂದಿ, ಮೋಸದ ಮಂದಿ- ಬೀದೀಲಿ ಹೋಗ್ತಾ ಇದ್ದಾಗ, ಇರುವೆಯ ಗುಂಪಿನಂತಹ ಜನ. ಒಬ್ಬರಿಗೊಬ್ಬರು ಗೊತ್ತಿಲ್ಲದ, ಹುಷಾರಾಗಿ ಬದುಕೋ ಜನ. ತಮ್ಮ ನೋವನ್ನು ಇನ್ನೊಬ್ಬರಿಗೆ ಹೇಳಿಕೊಳ್ಳದ ಜನ. ತಮ್ಮ ನಿರಾಶೆಯನ್ನ, ಸೋಲನ್ನ, ಕಣ್ಣೀರನ್ನ-ಬಚ್ಚಿಟ್ಟ ಜನ ; ಇದ್ದ ಒಂದೇ ಬಟ್ಟೆಯನ್ನ ರಾತ್ರಿ ಒಗೆದು ಬೆಳಿಗ್ಗೆ ಹಾಕ್ಕೋಳ್ಳೋ ಜನ. ಇದ್ದ ಒಂದೇ ಒಂದು ವ್ಯಕ್ತಿಯನ್ನು ಕಳೆದುಕೊಂಡು ಒಬ್ಬಂಟಿಯಾದ ಜನ-ನೋಡು, ಗಂಗು, ನಾವು ಈ ಊರಿಗೆ ಬಂದ ಮೇಲೆ ಒಬ್ಬರಿಗೂ ಒಂದು ರೂಪಾಯಿ ದಾನ ಮಾಡಿಲ್ಲ. ಈ ವ್ಯಕ್ತಿಗೆ ನಾವು ಸಹಾಯ ಮಾಡಬೇಕು.
ಹೆಂ : ಅವನ ಹೆಸರೇನು ?
ಗಂ : ಗೊತ್ತಿಲ್ಲ.
ಹೆಂ : ಅವನು ಎಲ್ಲಿದ್ದಾನೆ?
ಗಂ : ಗೊತ್ತಿಲ್ಲ.
ಹೆಂ : ಅವನಿಗೆ ನನ್ನ ಮನೆ ಹೇಗೆ ಗೊತ್ತಾಯ್ತು ?
ಗಂ : ಗೊತ್ತಿಲ್ಲ.
ಹೆಂ : ಗೊತ್ತಿಲ್ಲ, ಗೊತ್ತಿಲ್ಲ. ಸರಿ, ಕೊಟ್ಟುಕೊಳ್ಳಿ, ನನಗೂ ಅದಕ್ಕೂ ಸಂಬಂಧವಿಲ್ಲ-ನೀವು ದುಡಿಯೋರು, ನೀವು ಕೊಡೋರು, ನನಗ್ಯಾಕೆ ? (ಹೋಗುವಳು–ಗಾಯತ್ರಿ ಬಾಗಿಲು ಹಾಕಿಕೊಂಡು ಬರುವಳು. ಗಂಡ ಕೂತಿರುವನು, ಕೊಂಚ ಮೌನ)
ಗಾ : ಅವನು ತುಂಬ ಒಳ್ಳೆಯವನ ಹಾಗಿದ್ದಾನೆ, ಅಲ್ವೇನಪ್ಪ? (ಅವಳನ್ನೇ ನೋಡುವನು)
ಗಂ : (ಕುತೂಹಲದಿಂದ) ಹೌದ ? ಹ್ಯಾಗೆ ಒಳ್ಳೆಯವನು ಅಂತಿ ?
ಗಾ : ಕೆಲವರನ್ನು ನೋಡಿದ್ರೆ ಒಳ್ಳೆಯವನು ಅನ್ಸುತ್ತೆ.
ಗಂ : ಅವನ ತಂದೆ ಸತ್ತಿದ್ದು ನಿಜವಿರಬಹುದೆ ?
ಗಾ : ಸುಳ್ಳು ಯಾಕಪ್ಪ ಹೇಳ್ತಾನೆ ?
ಗಂ : ಯಾಕೆ ಹೇಳಬಾರದು ?
ಗಾ : ಎಲ್ರೂ ಸುಳ್ಳು ಹೇಳಲ್ಲ.
ಗಂ : ಇಂಥವರೇ ಸುಳ್ಳು ಹೇಳ್ತಾರೆ, ಇಂತಹವರು ಹೇಳಲ್ಲ ಅಂತ ಹ್ಯಾಗೆ ಹೇಳೋದು ? ಲಕ್ಷಾಂತರ ಜನ ಇರೋ ಊರು ಇದು. ಏನನ್ನಾದ್ರೂ ಹೇಳಬಹುದು-ಏನನ್ನಾದ್ರೂ ನಂಬಿಸಬಹುದು.
ಗಾ : ಹಾಗಾದ್ರೆ ಯಾರನ್ನೂ ನಂಬೋಕಾಗೊಲ್ಲ ?
ಗಂ : ಮೂವತ್ತು ರೂಪಾಯಿ ಹೆಚ್ಚಲ್ಲ.
ಗಾ : ಮತ್ತೆ?
ಗಂ : ಮೋಸ
ಗಾ : ಅಂದ್ರೆ ?
ಗಂ : ಮೋಸ ಹೋದ್ರೆ ಅದೇ ಯೋಚನೆ ಮನಸ್ಸನ್ನು ತಿನ್ನುತ್ತೆ. ನನ್ನ ಆತ್ಮಗೌರವಕ್ಕೆ ಧಕ್ಕೆ ಬರುತ್ತೆ.
ಗಾ : ಹಾಗಂದ್ರೇನಪ್ಪ ?
ಗಂ : ಇದೊಂದು ಯುದ್ದ ಗಾಯತ್ರಿ. ಶತ್ರುಗಳು ದಂಡೆತ್ತಿ ಬಾರ‍್ತಾರೆ. ನಾವು ಅವರನ್ನು ಎದುರಿಸಬೇಕು. ಅದಕ್ಕೆ ತಕ್ಕ ರೀತಿಯಲ್ಲಿ ಸೈನ್ಯವನ್ನು ತರಬೇತಿ ಮಾಡಬೇಕು, ವ್ಯೂಹ ರಚಿಸಬೇಕು.
ಗಾ : (ಇದ್ದಕ್ಕಿದ್ದಂತೆ ನಕ್ಕು) ಹೌದ ? ದೊಡ್ಡ ಸೈನ್ಯಾನಾ ? ಕತ್ತಿ, ಬಂದೂಕು, ಫಿರಂಗಿ-
ಗಂ : ನಿನಗೆ ತಿಳಿಯೋಲ್ಲ.
ಗಾ : ಅಂತೂ ಅವನಿಗೆ ದುಡ್ಡು ಕೊಡಬಾರದು.
ಗಂ : ಆದ್ರೆ ಈತ ಒಳ್ಳೆ ಮನುಷ್ಯ.
ಗಾ : ಹ್ಯಾಗೆ ಗೊತ್ತು ?
ಗಂ : ನೀನೇ ಹೇಳಿದೆಯಲ್ಲ-
ಗಾ : (ಗೆಲುವಿನಿಂದ) ಹ್ಹಾ ! ನಾನೇ ಗೆದ್ದೆ (ಒಳಕ್ಕೆ) ಅಮ್ಮಾ, ನಾನೇ ಗೆದ್ದೆ-
ಗಂ : (ಅಷ್ಟೇ ಧ್ವನಿ ಎತ್ತರಿಸಿ) ಆದ್ರೆ ಒಳ್ಳೇತನ ಇಟ್ಟುಕೊಂಡು ಏನು ಮಾಡಬೇಕು ? ತಂದೆ ಶವ ಸುಡೋದಕ್ಕೆ ಅಂತ ನಾಲ್ಕು ಕಾಸು ಕೂಡಿಟ್ಟಿಲ್ಲ ಮುಠ್ಠಾಳ-
(ಹೆಂಡತಿಯ ಪ್ರವೇಶ)
ಹೆಂ : ಪರವಾಗಿಲ್ಲ ನಿಮಗೂ ಮುಠ್ಠಾಳರು ಗೊತ್ತು.
ಗಂ : ಗೊತ್ತು, ಆದರೆ ಮುಠ್ಠಾಳರಿಗೂ ತಂದೆ, ತಾಯಿ ಇರ್ತಾರೆ-ಸ್ನೇಹಿತರಿರ‍್ತಾರೆ-ಅವರ ಹೆಣವನ್ನು ಸುಡಬೇಕಾಗುತ್ತೆ, ಪರಿಚಯ ಇರೋರು ಸಹಾಯ ಮಾಡಬೇಕಾಗುತ್ತೆ.
ಹೆಂ : ಇಷ್ಟಕ್ಕೆಲ್ಲ ನೀವು ಯಾಕೆ-
ಗಂ : ಹಣ ಹೋಗುತ್ತೆ ಬರುತ್ತೆ. ಆದರೆ ನಮ್ಮ ಗೋಳು, ನಮ್ಮ confusion ಉಳಿಯುತ್ತೆ. ಯಾರು ಕೆಟ್ಟವರು ಯಾರು ಒಳ್ಳೆಯವರು; ಯಾರು ಬೇಕು, ಯಾರು ಬೇಡ ; ಯಾವುದು ಜಿಂಕೆ, ಯಾವುದು ಹುಲಿ; ಯಾವುದನ್ನು ಕೊಲ್ಲಬೇಕು, ಯಾವುದನ್ನು ಬದುಕಿಸಬೇಕು- ಹೆಂ : ಹೀಗೆ ಮಾತಾಡಿದ್ರೆ ಹ್ಯಾಗೆ ಅರ್ಥವಾಗಬೇಕು?
ಗಂ : (ಗಮನಿಸದೆ) ಹತ್ತು ವರ್ಷದಿಂದ ನಾನು ಬಲ್ಲ ಸ್ನೇಹಿತರು ನನಗಿನ್ನೂ ಸಮಸ್ಯೆ. ಹತ್ತು ಜನರ ಪರಿಚಯ ನನ್ನ ಆಳಕ್ಕೆ ಇಳಿದು ಮನಸ್ಸನ್ನು ಅಲ್ಲಾಡಿಸುತ್ತೆ. ಅವರ ಚರ್ಮ ಹೊಕ್ಕು ನೋಡುವ ದಾರಿ ನನಗಿಲ್ಲ. ಅವರನ್ನು ಮುಟ್ಟಿ ನೋಡಿದರೆ ಗೊತ್ತಾಗೋಲ್ಲ. ಅವರೊಂದಿಗೆ ಹರಟದರೆ ಗೊತ್ತಾಗೋಲ್ಲ. ಅವರೊಂದಿಗೆ ಜಗಳ ಆಡಿದರೆ ಗೊತ್ತಾಗೋಲ್ಲ. (ಅವಳ ದಿಗ್ಭ್ರಮೆ ಗಮನಿಸಿ, ನಕ್ಕು) ಕೊಂಚ ಕಾಫಿ ಕೊಡು ಗಂಗೂ, ಯಾಕೆ ಹೀಗೆ ನೋಡ್ತಿದ್ದೀ? ನನಗೇನೂ ಆಗಿಲ್ಲ. ಕಾಲುಚೀಲ ತೊಳೆದಿದ್ದೀಯ ? ಶರ್ಟಿನ ಇಸ್ತ್ರಿ ಆಗಿದೆಯಾ ?
(ಕತ್ತಲ ತೆರೆ)
ದೃಶ್ಯ ಎರಡು
(ಬಾಗಿಲು ಬಡಿದ ಸದ್ದು. ಗಂಡ ಬಟ್ಟೆ ಬದಲಿಸಿ ಹೆಗಲ ಮೇಲೆ ಟವಲ್ ಹಾಕಿಕೊಂಡಿದ್ದಾನೆ. ಸದ್ದು ಕೇಳಿ ಬಾಗಿಲವರೆಗೆ ಬಂದು ನೋಡುತ್ತಾನೆ.)
ಗಂ : ಬಾ, ಹೊರಗೇ ಯಾಕೆ ನಿಂತಿದ್ದೀ-ಬಾ. (ವ್ಯಕ್ತಿ ಬರುತ್ತಾನೆ). ಇಷ್ಟು ದಿನ ನಿನ್ನನ್ನ ನೋಡಿದ್ದೇನೆ. ನಿನ್ನ ಹೆಸರೇ ನನಗೆ ಗೊತ್ತಿಲ್ಲವಲ್ಲ ? (ಮೌನ) ಕಿವಿ ಕೇಳಿಸೋಲ್ವಾ? ನಿನ್ನ ಹೆಸರೇನು ?
ವ್ಯಕ್ತಿ : ಮುನಿಸ್ವಾಮಿ, ಸಾರ್.
ಗಂ : ನಿನ್ನ ತಂದೆ ಹೆಸರೇನು ?
ವ್ಯ : ವೆಂಕಟಸ್ವಾಮಿ, ಸಾರ್. ಗಂ : ಆತ ಏನು ಕೆಲಸ ಮಾಡ್ತಿದ್ದ?
ವ್ಯ : ನನ್ನ ಹಾಗೇ ಸಾರ್.
ಗಂ : ತಿಂಗಳಿಗೆ ನಿನ್ನ ಆದಾಯ ಎಷ್ಟು ? (ಮೌನ) ಕೇಳಿಸಲಿಲ್ಲವೇ ? ತಿಂಗಳಿಗೆ ಎಷ್ಟು ದುಡೀತಿ ?
ವ್ಯ : ಐವತ್ತೊ ಅರವತ್ತೋ ಸಾರ್.
ಗಂ : ನಿನ್ನ ಮನೆ ಎಲ್ಲಿ ?
ವ್ಯ : ಎಡಿಯೂರ್ ಹತ್ರ, ಸಾರ್.
ಗಂ : ಬಾಡಿಗೆ ಎಷ್ಟು ಕೊಡ್ತಿ ?
ವ್ಯ : ಐದು ರೂಪಾಯಿ, ಸಾರ್.
ಗಂ : ಅಂತೂ ಒಂದು ಪೈಸ ಕೂಡ ಉಳಿಸಿಲ್ಲ ? (ಮೌನ)
ತಂದೆಯ ಶವ ಸಂಸ್ಕಾರಕ್ಕೆ ದುಗ್ಗಾಣಿ ಇಲ್ಲ ? (ಮೌನ)
ನಿನಗೆ ಕಾಯಿಲೆ ಆದ್ರೆ ಗತಿ ಏನು ? (ಮೌನ)
ನಿನ್ನ ತಾಯಿಗೆ ಕಾಯಿಲೆ ಆದ್ರೆ ಏನು ಮಾಡ್ತೀ? (ಮೌನ)
ನನ್ನ ಮಾತು ಕಿವಿ ಮೇಲೆ ಬೀಳ್ತಾ ಇದೆಯೋ ? ನೀನು ಕೈ ಚಾಚಿದಾಗಲೆಲ್ಲ ಯಾರಯ್ಯ ನಿನಗೆ ದುಡ್ಡು ಕೊಡ್ತಾರೆ?
(ತನ್ನ ಕ್ರೌರ್ಯಕ್ಕೆ ತಾನೇ ನಾಚಿಕೊಂಡು) ನೋಡು, ನಾನು ನಿನ್ನ ಒಳ್ಳೇದಕ್ಕೇ ಹೇಳ್ತಿರೋದು. ಇಂಥ ಪಟ್ಟಣದಲ್ಲಿ ನಮ್ಮ ಹುಷಾರಿ ನಮ್ಮ ಕೈಯಲ್ಲಿರಬೇಕು. (ಈ ಹಿತವಚನವೂ ಅಸಂಗತವೆನಿಸಿ) ಆಮೇಲೆ, ಒಂದರ್ಧ ಗಂಟೆ ಬಿಟ್ಕೊಂಡು ಬಾ. ಮೂವತ್ತು ರೂಪಾಯಿ ಆಗಲ್ಲ ಅಂತ ಕಾಣುತ್ತೆ. ಇಪ್ಪತ್ತು ಕೊಡಬಹುದು. (ಆತ ನಿಧಾನಕ್ಕೆ ಹೋಗುವನು, ಗಾಯತ್ರಿಯ ಪ್ರವೇಶ)
ಗಾ : ಯಾಕಪ್ಪ ಹಾಗೆ ಅವನ್ನ ಬೈತಿದ್ದೆ ?
ಗಂ : ನೀನು ಸುಮ್ಮನಿರಮ್ಮ.
ಗಾ : ಅವನು ಮೋಸಗಾರ ಅಲ್ಲ ಅನ್ಸುತ್ತೆ.
ಗಂ : ಸರಿ, ಅವನು ಮೋಸಗಾರ ಅಲ್ಲ. ಗಾ : ಹಾಗಾದರೆ ಬೈದದ್ದು ಯಾಕೆ ?
ಗಂ : ತಮಾಷೆಗೆ ಬೈದೆ.
ಗಾ : ಹೌದೆ ? ತಮಾಷೆಗೆ ಬೈತಾರೆಯೇ ?
ಗಂ : ಯಾಕೆ ಬೈಯೋಲ್ಲ ? ನಾಟಕದಲ್ಲಿ ಬೈಯೋಲ್ಲವೆ ?
ಗಾ : ನೀನು ಬೈದದ್ದು ತಮಾಷೆಗಲ್ಲ-ನನಗೊತ್ತು.
ಗಂ : ಹೌದು, ಸೀರಿಯಸ್ಸಾಗೇ ಬೈದೆ.
ಗಾ : ಯಾಕೆ ?
ಗಂ : ತಮಾಷೆಗೆ-ಸೀರಿಯಸ್ಸಾಗಿ ಬೈದೆ…. (ಅವನ ಉತ್ತರದಿಂದ ಬೇಸರಗೊಂಡು ಬೇರೆ ವಿಷಯ ಎತ್ತುವಳು)
ಗಾ : ಅಪ್ಪಾ, ಇವತ್ತು ಏನಾಯ್ತು ಗೊತ್ತೆ ?
ಗಂ : ಏನಾಯ್ತು ?
ಗಾ : ನಮ್ಮ ಸ್ಕೂಲಲ್ಲಿವತ್ತು ಕಪ್ಪೆ ಕೊಟ್ಟಿದ್ರು-ಡಿಸೆಕ್ಷನ್‌ಗೆ.
ಗಂ : ಗೊತ್ತು. ಅದನ್ನು ನೀನು ಕತ್ತರಿಸಿದೆ.
ಗಾ : ಥತ್, ಸಮ್ನಿರಪ್ಪ ಅಂತೀನಿ….ಅದನ್ನು ಹಿಡಿದು ತರೋವಾಗ ಸಾಯಿಸೇ ಇರಲಿಲ್ಲ.
ಗಂ : ಸರಿ, ನೀನು ಸಾಯಿಸಿದೆ.
ಗಾ : ಮಧ್ಯೆ ಬಾಯಿ ಹಾಕಬೇಡಪ್ಪ ಅಂದ್ರೆ-
ಗಂ : ಬೇಗ ಬೇಗ ಹೇಳಿಬಿಡು.
ಗಾ : ಅದನ್ನ ನೋಡಿದೆ. ಹ್ಯಾಗೆ ಪಿಳಿ ಪಿಳಿ ಕಣ್ಣು ಬಿಡ್ತಿತ್ತು ಅಂತೀಯ. ಅದರ ಜೀವ ಎಲ್ಲಿರುತ್ತೆ, ಹ್ಯಾಗೆ ಹೋಗುತ್ತೆ ಅಂತ ನೋಡಬೇಕು ಅಂತ-ಕತ್ತರಿಸಿದೆ. ನಿಧಾನಕ್ಕೆ ಕತ್ತರಿಸಿದೆ. ಹೊಟ್ಟೆ ಕತ್ತರಿಸಿದೆ. ನರಾನೆಲ್ಲ ಬಿಡಿಸಿದೆ…. ಆದ್ರೆ ಜೀವ ಹೊರಟೇ ಹೋಗಿತ್ತು.
ಗಂ : ಹಾಗೆ ಗೊತ್ತಾಗೋಲ್ಲ, ಜೀವ ಹ್ಯಾಗಿರುತ್ತೆ ಅಂತ ಗೊತ್ತಾಗೋದು ಅದು ಒಟ್ಟಿಗೆ ಇದ್ದಾಗ, ಕತ್ತರಿಸೋಕೆ ಮುಂಚೆ. ಗಾ : ಹಾಗಾದ್ರೆ ಕತ್ತರಿಸದೇ ಇದ್ದದ್ದಕ್ಕೆಲ್ಲ ಜೀವ ಇರುತ್ತಾ?
ಗಂ : ಹಾಗಲ್ಲ, ಜೀವ ಇದ್ರೆ ಒಂದು ಕಳೆ ಇರುತ್ತೆ.
ಗಾ : ಇಲ್ಲೇ ಇದ್ರೆ?
ಗಂ : ಇಲ್ಲದೇ ಇದ್ರೆ-ಹೆಣ, ತಣ್ಣಗಿರುತ್ತೆ.
ಗಾ : ಇಲ್ಲದೇ ಇದ್ರೆ?
ಗಂ : ಹೆಣವಲ್ಲದೇ ಇದ್ರೆ ? ಉಸಿರಾಡುತ್ತೆ, ಬೆಚ್ಚಗಿರುತ್ತೆ. ಮೊಟ್ಟೆ ಇಡುತ್ತೆ, ಮರಿ ಮಾಡುತ್ತೆ.
ಗಾ : ಹ್ಹಾ ! ಸಿಕ್ಕಿಹಾಕ್ಕೊಂಡೆ. ಮನುಷ್ಯರು ಮೊಟ್ಟೆ ಇಡೋಲ್ಲ !
ಗಂ : ಪೆದ್ದಿ, ಮನುಷ್ಯರಿಗೆ ಜೀವ ಇದ್ರೆ ಗೊತ್ತಾಗೋಲ್ವ ?
ಗಾ : ಗೊತ್ತು, ಉಸಿರಾಡ್ತಾರೆ, ಬೆಚ್ಚಗಿರ‍್ತಾರೆ. ಮೊಟ್ಟೆ ಇಡ್ತಾರೆ, ಮರಿ ಮಾಡ್ತಾರೆ.
ಗಂ : ಸರಿ, ಇವತ್ತಿಗೆ ನಿನ್ನ ಜ್ಞಾನಾರ್ಜನೆ ಇಷ್ಟು ಸಾಕು, ಹೋಗು.
ಗಾ : ತಮಾಷೆ ಮಾಡೋಲ್ಲ. ಹೇಳಪ್ಪ. ಮನುಷ್ಯರ ಜೀವ ಹ್ಯಾಗೆ ಗೊತ್ತಾಗುತ್ತೆ?
ಗಂ : ಸುಖ, ದುಃಖ ; ಪ್ರೀತಿ, ವಿಶ್ವಾಸ- ಎಲ್ಲಾ ಇರುತ್ತೆ.
(ಹೆಂಡತಿ ಪ್ರವೇಶ)
ಹೆಂ : ಪ್ರೀತಿ-ವಿಶ್ವಾಸದ ಮಾತು ಮುಗೀತ ? ನೋಡಿ, ಖರ್ಚಿನ ಲಿಸ್ಟ್ ತಂದಿದೀನಿ.
ಗಂ : ತಂದೆಯಾ ? ಬಾ, ಎಷ್ಟು ? ಬೇಳೆ ಮೂರು ಕೆ. ಜಿ. ತಾನೆ ?
ಹೆಂ : ಕೊತ್ತುಂಬರಿ ಅರ್ಧ ಕೆ. ಜಿ.
ಗಂ : ಕಡ್ಲೆಕಾಯಿ ಎಣ್ಣೆ ಎರಡು ಕೇಜಿ, ರವೆ ನಾಲ್ಕು ಕೇಜಿ.
ಹೆಂ : ಬೆಣ್ಣೆ ಎರಡು ಕೇಜಿ, ಅಕ್ಕಿ ಇಪ್ಪತ್ತು ಕೇಜಿ.
ಗಂ : ಸರಿ, ಈರುಳ್ಳಿ ನಲವತ್ತು ಕೇಜಿ, ಸೀರೆ ಐವತ್ತು ಕೇಜಿ.
ಹೆಂ : ಸಿಗರೇಟು ನೂರು ಕೇಜಿ….
ಗಂ : (ಸಿಗರೇಟ್ ಹಚ್ಚಿ) ಹಹ್ಹಾ ! ಸಿಗರೇಟಿನ ಹೊಗೆ ವರ್ತುಳ ವರ್ತುಳ
ಧೂಪ ಧೂಮ ಲೀಲೆ…….. ವಿವಿಧ ರೂಪ ವಿಹ್ವಲ ವಿಲಾಸಗಳು
ವಿಕ್ಷತ ಚಿತ್ರಗಳು ಗಾಳಿಯಲೆಯ ಮೇಲೆ ತೇಲೆ……..
ಹೆಂ : ಅದೇನು ಆನಂದವೋ……..
ಗಂ : ತೇಲೆ, ತೇಲೆ, ತೇಲೆ…….. ಹೊಗೆಯನ್ನು ಗಾಳಿಯಲೆಯ ಮೇಲೆ……..
ಹೆಂ : ನಾನಿನ್ನು ಬರ್ತೇನೆ. ಈ ಹುಚ್ಚು ನೋಡೋಕಾಗೋಲ್ಲ.
ಗಂ : ಹುಚ್ಚಲ್ಲ ಸಂತೋಷ. ಉಪ್ಪಿಟ್ಟು ರೆಡೀನ? ತಗೊಂಡು ಬಾ. ಹಲ್ಲು ಉಜ್ಜುತೇನೆ. ಬಾಯಿ ತೋಳೀತೇನೆ. ಅಚ್ಚುಕಟ್ಟಾಗಿ ತಿಂತೇನೆ. ಮಗು ಎಲ್ಲಿ, ಪಕ್ಕದ ಮನೆಗೆ ಕಳಿಸಿದೆಯಾ? ಸರಿ. ನಮ್ಮ ಮನೆ ಎಷ್ಟು ಚೆನ್ನಾಗಿದೆ. ನನಗೇ ಇಬ್ಬರೇ ಮಕ್ಕಳು. ಒಂದು ಹೆಣ್ಣು, ಒಂದು ಗಂಡು…. ಒಬ್ಬಳೇ ಹೆಂಡತಿ…. ಇವತ್ತು ಹವೆ ಎಷ್ಟು ಚೆನ್ನಾಗಿದೆ. ಲಾಲ್ ಬಾಗ್‌ನಲ್ಲಿ ಹೂ ಈಚೆಗೆ ಎಷ್ಟು ಚೆನ್ನಾಗಿ ಅರಳಿವೆ ಅಂತೀಯಾ? ಅಲ್ವೆ, ಆ ದರಿದ್ರ ಸೀರೇಲೂ ಎಷ್ಟು ಚೆನ್ನಾಗಿ ಕಾಣ್ತೀಯಾ !-ಯಾಕೆ ಹಾಗೆ ನೋಡ್ತಿದೀಯ ?
ಹೆಂ : ನಿಮ್ಮ ಪ್ಲಾನ್ ನನಗೆ ಗೊತ್ತು. ನಿನ್ನ ಹಜಾಮ ಈಗ ಬರ‍್ತಾನೆ ತಾನೆ ?
ಗಂ : ಹುಚ್ಚಿ, ಅವನಿಗೆ ಚೆನ್ನಾಗಿ ಬೈದು ಕಳಿಸಿದೀನಿ. ಮುಖ ಎತ್ತದ ಹಾಗೆ ಮಾತಾಡಿ ಕಳಿಸಿದೇನೆ.
ಹೆಂ : ಏನಂತ ಬೈದಿರಿ ?
ಗಂ : ನಿನ್ನ ಹೆಸರೇನು, ಅಂದೆ; ನಿಮ್ಮಪ್ಪನ ಹೆಸರೇನು, ಅಂದೆ; ನಿನ್ನ ವಾಸ ಎಲ್ಲಿ ಅಂತ ಕೇಳಿದೆ;
ನೀನು ಎಷ್ಟಯ್ಯ ದುಡೀತಿ ತಿಂಗಳಿಗೆ, ಅಂತ ಕೇಳಿದೆ; ಕಂಡ ಕಂಡವರನ್ನು ದುಡ್ಡು ಕೇಳೋಕೆ ನಾಚಿಕೆ ಆಗೋಲ್ಲವಾ ಅಂತ
ಕೇಳಿದೆ-
ಹೆಂ : ಅಷ್ಟಕ್ಕೆಲ್ಲಾ ನಾಚ್ಕೊಳ್ತಾನಾ ? ನೋಡಿ, ಬಂದೇ ಬರ್ತಾನೆ.
ಗಂ : ಅವನು ಮಿಕ್ಕೋರ ಹಾಗಲ್ಲ. ತುಂಬಾ ಸಂಕೋಚದ ಮನುಷ್ಯ.
ಹೆಂ : ನಿಮಗಿನ್ನೂ ಅವನ ಮೇಲಿನ ನಂಬಿಕೆ ಹೋಗಿಲ್ಲ ?
ಗಂ : ಮೂವತ್ತು ರೂಪಾಯಿಗೆ ನಂಬಿಕೇನ ಕೊಡಾಕಾಗೋಲ್ಲ, ಕೊಳ್ಳಾಕಾಗೋಲ್ಲ.
ಹೆಂ : ಸರಿ, ನಾನು ವಾದ ಮಾಡೋಲ್ಲ, ಆದ್ರೆ ಹೇಳಿ, ಆತ ಯಾಕೆ ದುಡ್ಡು ಕೇಳಬೇಕಿತ್ತು?
ಗಂ : ಚಿಕ್ಕ ವಯಸ್ಸು, ಸಿನಿಮಾಕ್ಕೆ ಹೋಗಬಹುದು. ರೇಸ್ ಆಡಬಹುದು-
ಹೆಂ : ಅದಕ್ಕೆಲ್ಲ ನಾವು ದುಡ್ಡು ಕೊಟ್ಟು-
ಗಂ : ಸರಿ, ಆ ವಿಷಯ ಬಿಡು, ಪಾಪನ್ನ ಕರಕೊಂಡು ಬಾ. ಕಬ್ಬನ್ ಪಾರ್ಕಲ್ಲಿ ಪುಟ್ಟ ರೈಲಿದೆ. ಇವತ್ತು ಸವಾರಿ ಮಾಡ್ಸೋಣ.
ಹೆಂ : ಹಿಟ್ಟು ರುಬ್ಬಿದ್ದೇನೆ, ದೋಸೆ ಮಾಡ್ತೇನೆ ಹಾಗಾದ್ರೆ-
ಗಂ : ರೇಸ್ ಹ್ಯಾಗಿರುತ್ತಪ್ಪ ?
ಹೆಂ : ತೆಪ್ಪಗಿರೆ, ರೇಸ್ ಹ್ಯಾಗಿರುತ್ತಂತೆ.
ಗಂ : ಅಥವಾ ನಂದಿಗೆ ಹೋಗಬಹುದು. ಹ್ಯಾಗೂ ನಾಳೆ ರಜಾ. ಏನಂತೀ ? ನಾವು ಈಚೆಗೆ ಎಲ್ಲೂ ಹೋಗಿಲ್ಲ. ಅಲ್ಲೇ ಇದ್ದು ಬಿಟ್ಟು ನಾಳೆ ಬರಬಹುದು.
ಹೆಂ : ಹೌದಲ್ಲವಾ ? ಎಷ್ಟು ಚೆನ್ನಾಗಿರುತ್ತೆ, ಚಳಿಯಾಗುತ್ತೆ-ಮಗೂಗೊಂದು ಸ್ವೆಟರ್ ತಗೊಳ್ಳಿ.
ಗಾ : ಅಪ್ಪ, ಒಂದೊಂದು ರೇಸ್‌ನಲ್ಲಿ ಎಷ್ಟು ಕುದುರೆ ಇರುತ್ತಪ್ಪ?
ಗಂ : ನನಗ್ಗೊತ್ತಿಲ್ಲ, ಮರಿ.
ಗಾ : ಅಷ್ಟೂ ಗೊತ್ತಿಲ್ವ ? ಏನು ಪೆದ್ದಪ್ಪ, ಅಪ್ಪ ನೀನು ! ಮುನಿಸ್ವಾಮಿಗೆ ಎಲ್ಲಾ ಗೊತ್ತು !
ಗಂ : ಸರಿ, ಅವನ್ನೇ ಕೇಳು….
ಹೆಂ : ಅಲ್ಲ, ನಮ್ಮ ಪಾಪಂಗೆ ಜಾರುಬಂಡೆ ಅಂದ್ರೆ ಎಷ್ಟು ಇಷ್ಟಾಂತ !
ಗಂ : ಹೂವು ಅಂದ್ರೂ ಅಷ್ಟೇ.
ಹೆಂ : ಮಕ್ಕಳು ! ಪುಟಾಣಿ ಮಕ್ಕಳು ಕಂಡ್ರೆ ಅಪ್ಪಿಕೊಂಡು ಆಡುತ್ತೆ !
ಗಂ : ಅವನಿಗೊಂದು ಗೊಂಬೆ ಕೊಡಿಸ್ತೇನೆ……..
(ಅಷ್ಟರಲ್ಲಿ ಬಾಗಿಲಲ್ಲಿ ಕಟ್ ಕಟ್ ಸದ್ದು. ಎಲ್ಲರೂ ಥಟ್ಟನೆ ನಿಶ್ಯಬ್ದದಿಂದ ನಿಲ್ಲುವರು. ಗಂಡ ಹೆಂಡತಿಯ ಕಡೆಗೆ ತಿರುಗಿದೊಡನೆ ಆಕೆ ಬಾಗಿಲವರೆಗೆ ಹೋಗಿ ನೋಡಿ ಬರುವಳು.)
ಹೆಂ : (ಪಿಸುಗುಟ್ಟುತ್ತಾ) ಅವನೇ-
ಗಂ : ಹೌದ ?
ಹೆಂ : ಈಗೇನು ಮಾಡೋದು ?
ಗಂ : ನಾನು ಮನೇಲಿಲ್ಲ ಅಂತ ಹೇಳು.
ಗಾ : (ಗಟ್ಟಿಯಾಗಿ) ಯಾಕಪ್ಪ, ಪಿಸುಗುಟ್ತೀರಿ ?
ಹೆಂ : ಶ್ಶ್……….
(ಬಾಗಿಲಲ್ಲಿ ನಿಲ್ಲುವಳು. ವ್ಯಕ್ತಿ ಸುಮ್ಮನೆ ನಿಂತಿರುವನು.) ಯಾರು ?
ವ್ಯ : ನಾನಮ್ಮ.
ಹೆಂ : ನೀನು ಅಂದ್ರೆ ಯಾರಪ್ಪ?
ವ್ಯ : ಕೊಂಚ ಯಜಮಾನ್ರನ್ನ ನೋಡಬೇಕಿತ್ತು.
ಹೆಂ : ನೀನು ಅಂದ್ರೆ ಯಾರಪ್ಪ ?
ವ್ಯ : ಮುನಿಸ್ವಾಮಿನಮ್ಮ.
ಹೆಂ : ಯಾವ ಮುನಿಸ್ವಾಮಿ ? ಏನು ಬೇಕಿತ್ತು ?
ವ್ಯ : ನಾನು…. ಕ್ಷೌರದವನು ತಾಯಿ. ಯಜಮಾನ್ರನ್ನ ನೋಡಬೇಕಿತ್ತು.
ಹೆಂ : ಯಾಕೆ ?
ವ್ಯ : ಕೊಂಚ ಕೆಲಸ ಇತ್ತು.
ಹೆಂ : (ಕೊಂಚ ರೇಗಿ) ಎಂಥ ಕೆಲಸ? (ಮೌನ) ಅವರು ಊರಲ್ಲಿಲ್ಲ.
ವ್ಯ : ಬಾ ಅಂತ ಹೇಳಿದ್ರು.
ಹೆಂ : ಅವರು ಊರಲ್ಲಿಲ್ಲವಲ್ಲ ? (ಮೌನ)
ವ್ಯ : ಏನಾದ್ರೂ ಹೇಳಿದ್ರಾ ?
ಹೆಂ : ಇಲ್ಲ.
ವ್ಯ : ಕೊಂಚ ದುಡ್ಡು ಕೊಡ್ತೇನೆ ಅಂದಿದ್ರು-
ಹೆಂ : ಅವರು ಊರಲ್ಲಿಲ್ಲವಲ್ಲ ?
ವ್ಯ : ಕೊಡಲಿಲ್ಲವಾ ?
ಹೆಂ : ಒಂದು ಸಲ ಹೇಳಿದರೆ ಆಗೋಲ್ಲವೇನಯ್ಯ ? ಅವರು ಊರಲ್ಲಿಲ್ಲ, ತಿಳೀತೆ ? ಏನೂ ಹೇಳಿಲ್ಲ, ಏನೂ ಕೊಟ್ಟಿಲ್ಲ; ನಾನು ಹೇಳೋದು ಕೇಳಿಸ್ತಿದೆಯಾ ?
ಗಾ : ಅಪ್ಪಾ ! (ಅವಳ ಮಾತು ಎಲ್ಲರಿಗೂ ಕೇಳಿಸಿದೆ. ಮೌನ)
ವ್ಯ : ಸರಿ, ನಾನು ಬಂದಿದ್ದೆ ಅಂತ ಹೇಳಿ.
ಹೆಂ : ಆಗಲಿ.
ವ್ಯ : (ಸ್ವಲ್ಪವೇ ವ್ಯಂಗ್ಯದಿಂದ) ತಾವು ಆಗ…..ಊರಲ್ಲಿರಲಿಲ್ಲ ಅಂತ ಹೇಳಿ,
ಹೆಂ : ಆಗಲಿ. (ನಿಧಾನಕ್ಕೆ ಹೋಗುವನು. ಅವನು ಹೋದನೆಂಬಷ್ಟರಲ್ಲೇ…)
ಗಾ : ಅಪ್ಪಾ, ಯಾಕಪ್ಪ ಸುಳ್ಳು ಹೇಳಿದೆ ? ಅಮ್ಮ, ಯಾಕಮ್ಮ ಬೈದೆ ? ನಾನು ಹೇಳ್ತೇನೆ ? (ಕೊಂಚ ಕೊಂಚವೇ ಗಡುಸಾಗಿ ಮಾತಾಡುತ್ತಾ ಜಗತ್ತಿಗೇ ಸಾರುವವಳಂತೆ ಕೂಗುವಳು.) ಅಪ್ಪ, ಅವನಪ್ಪ ಸತ್ತೀದಾನೆ. ನನಗೊತ್ತು. ಅವನಪ್ಪ ಸತ್ತೀದಾನೆ. ಅವನು ಸುಳ್ಳು ಹೇಳ್ಳಿಲ್ಲ…. ಅಪ್ಪ ಇದಾರೆ. ನನ್ನಪ್ಪ ಮನೇಲೇ ಇದಾರೆ. ಎಲ್ಲೂ ಹೋಗಿಲ್ಲ……. (ನಿಧಾನಕ್ಕೆ ತಂದೆಯ ಹತ್ತಿರ ಬಂದು, ಅವನ ಮುಖ ನೋಡುತ್ತಾ) ಅಪ್ಪ, ಸತ್ತವರ ಮುಖ ಹೇಗಿರುತ್ತಪ್ಪ ?…………
ತೆರೆ
Leave A Comment