ಸಾಕ್ಷಿಯ ಮೂರನೆಯ ವರ್ಷ
ಸಾಕ್ಷಿಯ ಮೂರನೆಯ ವರ್ಷ
ಗೋಪಾಲಕೃಷ್ಣ ಅಡಿಗ
‘ಸಾಕ್ಷಿ’ ನಿಯತಕಾಲಿಕೆಯಾಗಿ ಮೈದೋರತೊಡಗಿ ತಕ್ಕಷ್ಟು ನಿಯತವಾಗಿಯೇ ಈ ಎರಡು ವರ್ಷಗಳ ಕಾಲ ಪ್ರಕಟವಾಗುತ್ತ ಬಂದು ತನ್ನೆರಡು ಸಂಪುಟಗಳನ್ನು ಹೀಗೆ ಮುಗಿಸಿರುವುದು ಈಗ ಸಹಜವೆನ್ನುವಂತೆ ಕಾಣುವ ಆದರೆ ನಿಜವಾಗಿಯೂ ನಮ್ಮನ್ನು ದಂಗುಬಡಿಸಬೇಕಾದ ಒಂದು ಅದ್ಭುತವೇ ಹೌದು, ಕಾಲ ಅನುಕೂಲ ಹೇಗೆ ಒದಗಿ ಕೂಡಿ ಬರುತ್ತವೆ ಎಂದು ಹೇಳುವುದು ಕಷ್ಟ. ಎಲ್ಲ ಕೂಡಿ ಬಂದು, ಸಂಚಾಲಕರ ನಿರಂತರ ಪರಿಶ್ರಮದ ಫಲವಾಗಿ, ಲೇಖಕರ ಅನಿಶ್ಚಿತವಾದರೂ ಅಲಭ್ಯವಾಗದ ಸಹಕಾರದಿಂದ ಕೊಂಡು ಓದುವ ಚಂದಾದಾರರ ಬೆಂಬಲದಿಂದ-ಮುಖ್ಯವಾಗಿ ಸಂಪಾದಕನ ಪುಣ್ಯದಿಂದ ‘ಸಾಕ್ಷಿ’ ತನ್ನ ಮೂರನೆಯ ಸಂಪುಟದ ಮೊದಲ ಕಂತಿನ ಕಟ್ಟನ್ನು ಬಿಚ್ಚಲು ಈಗ ಸಿದ್ದವಾಗಿದೆ. ಹೀಗೆಲ್ಲ ನಡೆದಿರುವುದು ಎರಡು ಪ್ರಮುಖ ಸತ್ಯಗಳನ್ನು ಮಂದಟ್ಟು ಮಾಡಿಕೊಡಬಹುದು : ಎಂಥ ದುರ್ಭರ ಸನ್ನಿವೇಶದಲ್ಲಿಯೂ ಮನುಷ್ಯ ತೀರ ನಿರಾಶನಾಗಬೇಕಾದ ಅಗತ್ಯವಿಲ್ಲ ; ನಾವು ಮಾಡುವ ಕೆಲಸವನ್ನು ತ್ರಿಕರಣಶುದ್ಧಿಯಿಂದ ಮಾಡುತ್ತ ಹೋದರೆ ನಾವು ಮಾಡಿದ ಮಾಡುವ ಕೆಲಸ ಸಂಪೂರ್ಣ ವ್ಯರ್ಥವಾಗುವುದಿಲ್ಲ; ದಟ್ಟಡವಿಯ ಮಧ್ಯದ ಆರಣ್ಯರೋದನವೂ ಕೆಲವು ಕಿವಿಗಳನ್ನು ಮುಟ್ಟುತ್ತದೆ, ಕೆಲವಾದರೂ ಹೃದಯಗಳನ್ನು ತಟ್ಟುತ್ತದೆ-ಎಂದು, ಹೀಗೆ ತಿಳಿದು ಮಾಡುತ್ತ ಬಂದಿರುವ ಈ ಕೆಲಸ ನಡೆಯುತ್ತ ಹೋಗುವುದಾದರೂ ಸಾಧ್ಯವಾಗಿರುವ ಬಗ್ಗೆ ಸಾಕ್ಷಿಯ ಪ್ರವರ್ತಕರು ಸಂತೃಪ್ತರಾಗಬೇಕು.
ಆದರೆ ‘ಸಾಕ್ಷಿ’ಯ ಬಗ್ಗೆ ನಮಗೆ ತೃಪ್ತಿ ಇದೆ ಎಂದಲ್ಲ. ಸಂಪಾದಕನ ತಲೆಯೊಳಗೆ ಎಂಥೆಂಥ ಲೇಖನಗಳ ಚಿತ್ರಗಳಿವೆಯೋ ಅಂಥವನ್ನು ಸಂಪಾದಿಸಲು ಇನ್ನೂ ಸಾಧ್ಯವಾಗಿಲ್ಲ-ಬಹುಶಃ ಸಾಧ್ಯವಾಗುವಂತೆಯೂ ಇಲ್ಲ. ಆದ ಕಾರಣ ಎಷ್ಟೋ ಸಲ ಅಷ್ಟೇನೂ ಉತ್ತಮ ಎನ್ನಿಸಲಾರದಂಥ ಲೇಖನಗಳನ್ನೂ ಪ್ರಕಟಿಸಬೇಕಾಯಿತು. ಪ್ರಕಟಿಸಬಹುದೆಂದು ನಿರ್ಧಾರ ತೆಗೆದುಕೊಂಡ ಮೇಲೂ ಚಡಪಡಿಸಿದ್ದುಂಟು. ನಿಯತಕಾಲಿಕದ ಗಂಡ ಇದಾದರೆ, ಅನಿಯತಕಾಲಿಕೆಯದು ಬೇರೆ ಬಗೆಯದು : ಈಗ ಹತ್ತು ಪ್ರಕಟಿಸಿದರೆ ಒಂದಾದರೂ ಉತ್ತಮವಾದದ್ದು ಸಿಕ್ಕಬಹುದಾದರೆ ಆಗ ಒಂದೂ ಇಲ್ಲ. ಅಲ್ಲದೆ, ಬದುಕೇ ನಿಯತಕಾಲಿಕವಾಗಿರುವಾಗ ಅನಂತಕಾಲದ ಸಂದರ್ಭದಲ್ಲಿ ಮಾತ್ರ ಸಾರ್ಥವಾಗಬಲ್ಲ ಅನಿಯತಕಾಲಭಾವನೆ ಬರೀ ಅಹಂಕಾರವೇ ಆಗಬಹುದು. ಜೀವವಿರುವಷ್ಟು ಕಾಲದೊಳಗೆ ಏನೇನು ಮಾಡೀಯೆ? ಏನು ಮಾಡುತ್ತೀಯೆ ? ಈ ಪ್ರಶ್ನೆಗಳಿಗಷ್ಟೆ ಉತ್ತರ ಕೊಟ್ಟರೆ ಸಾಕು ಎಂದು ಕಾಣಿಸುತ್ತದೆ.
ಯಾವ ಕಾಲದಲ್ಲೂ ಕಷ್ಟ ಪಟ್ಟು ಕೆಲಸ ಮಾಡುವ ಪ್ರವೃತ್ತಿಯಿಲ್ಲದೆ ಕರ್ಮಸಂನ್ಯಾಸದ ಕಡೆಗೆ ವಾಲುತ್ತಿದ್ದ ನಮ್ಮ ದೇಶದಲ್ಲಿ ಈಗೀಗಲಂತೂ ಕರ್ಮಸಂನ್ಯಾಸದ ಆ ಬೈರಾಗಿ ಭಾವನೆಯ ಜೊತೆಗೇ ಭೋಗಭಿಲಾಷೆಯ ವೃದ್ಧಿಯಾಗತೊಡಗಿ ಕೆಲಸಮಾಡದೆ ಇಷ್ಟಾರ್ಥಗಳೆಲ್ಲವನ್ನೂ ಪಡೆಯಬೇಕೆನ್ನುವ ಆಸೆ, ಏನೋ ಕೆಲಸ ಮಾಡಿದಂತೆ ಆಟ ಹೂಡಿ ಅತ್ಯುತ್ತಮ ಕೆಲಸಕ್ಕೆ ಮಾತ್ರ ಸಲ್ಲಬೇಕಾದ ಮಾನ ಮರ್ಯಾದೆ ಬಹುಮಾನ ಲಾಭಗಳನ್ನೆಲ್ಲ ಗಿಟ್ಟಿಸಿಕೊಳ್ಳಬೇಕೆನ್ನುವ ಧಂಧೆ ಇಲ್ಲಿ ಈಗ ಸಾರ್ವತ್ರಿಕವಾಗುತ್ತಿದೆ. ಓದದೆ ನಮ್ಮ ಹುಡುಗರು ಪಾಸಾಗಬೇಕು; ಕೇವಲ ಮಾತನಾಡುವುದರ ಮೂಲಕ ನಮ್ಮ ರಾಜಕಾರಣಿಗಳು ದೇಶಸೇವೆ ಮಾಡಬೇಕು, ಆತ್ಮೋದ್ಧಾರ ಸಾಧಿಸಿಕೊಳ್ಳಬೇಕು ; ಕನ್ನಡ ಕನ್ನಡ ಎಂದು ಘೋಷಣೆ ಹಾಕುವುದರ ಮೂಲಕ ನಮ್ಮ ವಿದ್ಯಾವಂತರು ಕನ್ನಡದ ಸೇವೆ ಮಾಡಬೇಕು, ಒಳ್ಳೋಳ್ಳೇ ಉದ್ಯೋಗ ಗಿಟ್ಟಿಸಿಕೊಳ್ಳಬೇಕು; ಕನ್ನಡದಲ್ಲಿ ನಿರಂತರವಾದ ಕಗ್ಗಗಳನ್ನು ಹೊಸೆದು ನಮ್ಮ ಸಾಹಿತಿಗಳು ಕನ್ನಡಮ್ಮನಿಗೆ ಉರುಳನ್ನೂ ತಮ್ಮ ಸ್ವಂತಕ್ಕೆ ಅರಳಮಾಲೆಯನ್ನೂ ಮಾಡಿಕೊಳ್ಳಬೇಕು. ಒಟ್ಟಿನಲ್ಲಿ ನಿಜವಾದ ತ್ರಿಕರಣಪೂರ್ವಕವಾದ ಸೃಷ್ಟಿಪರ ಕೆಲಸ ನಮ್ಮಲ್ಲಿ ಯಾರಿಗೂ ಬೇಡ. ಇಂಥ ಸನ್ನಿವೇಶದಲ್ಲಿ ಮಾಡುವುದಿಲ್ಲ ಒಂದು ಅಸಂಗತ ನಾಟಕವಾಗಿ ಒಂದು ದೃಷ್ಟಿಯಿಂದ, ಕೆಟ್ಟ ಕನಸಾಗಿ ಇನ್ನೊಂದು ದೃಷ್ಟಿಯಿಂದ, ಕಂಡರೆ ಆಶ್ಚರ್ಯವೇನಿಲ್ಲ. ಆದರೆ ಇಂಥ ವಿಚಿತ್ರ ಸನ್ನಿವೇಶದಲ್ಲಿ ನಿಜವಾದ ಕೆಲಸವೂ ಅಲ್ಲಲ್ಲಿ ನಡೆಯುತ್ತಲೇ ಇದೆ ಎಂಬುದೂ ಅಷ್ಟೇ ನಿಜ. ನಿಜವಾದ ಕೆಲಸ ಎಂದರೆ ಫಲವನ್ನು ಮರೆತ ಕೆಲಸ. ಆ ಕೆಲಸಕ್ಕೆ ತಕ್ಕ ವಾತಾವರಣವನ್ನು ಸೃಷ್ಟಿಸುವುದಕ್ಕಿಂತ ದೊಡ್ಡ ದೇಶಸೇವೆ ಬೇರೆ ಇಲ್ಲ. ಆ ದಿಕ್ಕಿನಲ್ಲಿ ಯತ್ಕಿಂಚಿತ್ ನಡೆಸುವುದೇ ‘ಸಾಕ್ಷಿಯ ಉದ್ದೇಶ.
ಸಾಹಿತ್ಯದ ಪ್ರಪಂಚದಲ್ಲಿ ಅಂಥ ಕೆಲಸ ಯಾವುದು ? ಕೃತಿಗಳನ್ನು ಕೂಲಂಕಷವಾಗಿ, ತಾಳ್ಮೆಯಿಂದ, ಪೂರ್ವಗ್ರಹಮುಕ್ತವಾಗಿ, ಸಾಹಿತ್ಯಪ್ರಿಯರೆಲ್ಲರ ಸಹಕಾರದಿಂದ ಅಭ್ಯಾಸ ಮಾಡುವುದು, ವಿಶ್ಲೇಷಿಸುವುದು, ತೂಗಿ ನೋಡುವುದು, ಬೆಲೆ ಕಟ್ಟುವುದು. ಈ ಕೆಲಸವನ್ನು ಕೇವಲ ಸೃಷ್ಟಿ ನಿರತರಷ್ಟೇ ಮಾಡಬೇಕಾದ್ದಿಲ್ಲ. ಸಾಹಿತ್ಯದಲ್ಲಿ ಆಸಕ್ತಿಯುಳ್ಳವರೆಲ್ಲರೂ ತಮ್ಮ ತಮ್ಮ ವ್ಯುತ್ಪತ್ತಿ ಶಕ್ತಿಗಳಿಗನುಸಾರವಾಗಿ ಮಾಡಬಹುದಾದದ್ದು, ಅದಕ್ಕೆ ತಕ್ಕ ವೇದಿಕೆಯಾದರೆ ‘ಸಾಕ್ಷಿ’ ಕೃತಾರ್ಥವೇ. ಹಾಗೆ ಕೆಲಸ ಮಾಡಲು ಇಂಥ ಕೆಲಸದಲ್ಲಿ ಆಸಕ್ತಿಯುಳ್ಳವರೆಲ್ಲರ ನೆರವನ್ನು ಪುನಃ ಕೋರುತ್ತೇನೆ. ಇದಕ್ಕಿಂತ ಹೆಚ್ಚು ಹೇಳಬೇಕಾದ್ದು ಇಲ್ಲ ; ಹೇಳಿದರೆ ಉಪಯೋಗವೂ ಇಲ್ಲ.
ತರ್ಕದಿಂದ ವಿವರಿಸುವುದಕ್ಕೆ ಬರುವಹಾಗಿದ್ದರೆ, ಎಷ್ಟೇ ದೋಷಗಳಿದ್ದರೂ, ಅದು ಪರಿಚಿತ ಪ್ರಪಂಚವೆನ್ನಬಹುದು. ಆದರೆ, ಭ್ರಮೆಗಳೂ ಬೆಳಕೂ ಇದ್ದಕ್ಕಿದ್ದಂತೆ ಕಳಜಿಹೋಗಿಬಿಟ್ಟಂಥ ಲೋಕದಲ್ಲಿ ಮನುಷ್ಯ ‘ಅಪರಿಚಿತ’ನಾಗಿ ನರಳುತ್ತಾನೆ. ಮನುಷ್ಯ ಮತ್ತು ಬದುಕು ಇವುಗಳ ಮಧ್ಯೆ -ನಟ ಮತ್ತು ರಂಗಪರಿಕರಗಳ ಮಧ್ಯೆ -ವಿಚ್ಛೇದವುಂಟಾಗುವಂಥದ್ದರಿಂದಲೇ ಅಸಂಗತದ ಭಾವನೆ ಮೂಡಿಕೊಳ್ಳುತ್ತದೆ…. ತಿಳಿದು ತಿಳಿಯಾದ ಕೆಲಕೆಲವು ಹೊತ್ತುಗಳಲ್ಲಿ, ಮನುಷ್ಯರ ಯಾಂತ್ರಿಕವಾದ ಅಂಗ ಚೇಷ್ಟೆಗಳೂ ಅರ್ಥವಿಲ್ಲದ ಅಣಕಾಟಗಳ ಸುತ್ತ ಇರುವ ಎಲ್ಲವನ್ನೂ ಅಪದ್ಧವಾಗಿಸಿ ಕಾಣಿಸುತ್ತವೆ. ಒಬ್ಬ ಗಾಜಿನ ತೆರೆಯ ಆಕಡೆ ಟೆಲಿಫೋನ್‌ನಲ್ಲಿ ಮಾತಾಡುತ್ತಿದ್ದರೆ ಮಾತು ಕೇಳಿಸದೆ ಆತನ ಚೇಷ್ಟೆಗಳಷ್ಟೇ ಕಾಣುವಾಗ, ಈತ ಏತಕ್ಕಾದರೂ ಬದುಕಿದ್ದಾನೆ ಎಂದು ನಮ್ಮನ್ನು ಕೇಳಿಕೊಳ್ಳುವಹಾಗಾಗುತ್ತದೆ. ಮನುಷ್ಯನ ಸ್ವಂತದ್ದೇ ಆದ ಈ ಅಮಾನುಷತೆಯನ್ನು ಕಂಡು ನಮಗೆ ಉಂಟಾಗುವ ಇಂಥ ಅಸ್ವಸ್ಥತೆ – ನಾವು ಏನಾಗಿದ್ದೇವೆಂಬುದನ್ನು ಪ್ರತ್ಯಕ್ಷ ಕಂಡಾಗ ಬರುವ ವಾಕರಿಕೆ – ಇದು “ಅಸಂಗತ’ದ ಒಂದು ಮುಖ.
ನಾನು; ನೆಲ; ಗಡಿಯಾರ
ನಾನು; ನೆಲ ; ಗಡಿಯಾರ
ಆರ್ಯ
ಕಾಲ ಟಕ ಟಕಾಂತ
ಜೀವದ ಬಯಕೆ
ನೋವು ನಕ್ಕ ನಗೆ ಕಟ್ಟೆ ಮೇಲಿಂದ
ಬಸುಬುಸು ದಪ್ಪನೆ ಹರಿದೇ ಹೋಯಿತು
ತಿರುಗಣೆಗೆ
ಜೀವ ಅಕ್ಷ ಮಾಡಿದಂತೆ
ಅತ್ತ ದೂರ ದೂರ ಅಲೆದಲೆದು
ಮತ್ತೆ ಗೂಟದೆಡೆ ಬಂದು
ಕತ್ತಿಗೆ ಉರುಲು ತಾನೇ ಹಾಕಿಕೊಂಡಾಗ
ಮುಂಚಿನಂತೆ
ಮುಂಚಿನಲ್ಲೆ
ಬೇಸರ.
ಭುಜ ಭುಜ ಹೊಸೆದು
ಲೋಕ ಎಲ್ಲದರ ಬೇನೆ ಬೇಸರಿಕೆಯ
ಬ್ರಹ್ಮಾಂಡ ರಾಶಿ
ಎಲ್ಲೆಲ್ಲು ಎಂದೆಂದು ಹೊರಲು ನೊಗ ಹೊತ್ತ
ನಾವು ಮೂವರೇ
ಪಾರ ನಾಯಿಡರು.
ನಾನು;
ಮುದಿ ಮುಖದ ಸುಕ್ಕು ರೇಖೆಯಂತೆ
ಹೆಪ್ಪುಗಟ್ಟಿದ ನೆಲ;
ಮತ್ತು,
ನಾ ಹುಟ್ಟಿದಾಗ ಗುಣುಗುಣಿಸಿದ,
ನಾ ಹುಟ್ಟಿಸಿದಾಗ ಗುಣುಗುಣಿಸಿದ
ನಾ ಸತ್ತಾಗ ಗುಣುಗುಣಿಸಿದ,
ತುಕ್ಕು ಹಿಡಿದ ಹಳೆ ಗಡಿಯಾರ.
ಉಕ್ತಿ (ವಕ್ರ): ಕಾವ್ಯದ ಸ್ಥಾನ -- ಸಂಸ್ಕೃತದಲ್ಲಿ
(ವಕ್ರ) ಉಕ್ತಿ : ಕಾವ್ಯದ ಸ್ಥಾನ / ಸಂಸ್ಕೃತದಲ್ಲಿ
ಪಿ. ನರಸಿಂಹಭಟ್ಟ
ಸಂಸ್ಕೃತದಲ್ಲಿರುವ ಕಾವ್ಯರಾಶಿಯನ್ನು ಸಮಗ್ರವಾಗಿ ಪರಿಶೀಲಿಸುವ ಸಂದರ್ಭದಲ್ಲಿ ವಿಚಾರಾರ್ಹವಾದ ಒಂದು ವಿಷಯ ಅತಿಸ್ಥೂಲದೃಷ್ಟಿಗೂ ಗೋಚರಿಸುವಷ್ಟು ಸ್ಪಷ್ಟವಾಗಿ ಕಂಡುಬರುತ್ತದೆ. ಈ ಭಾಷೆಯಲ್ಲಿ ಕಾವ್ಯ ರಚನೆ ಮಾಡಿದವರು ವಸ್ತುಗಳ ವೈವಿಧ್ಯಕ್ಕೆ ಅಷ್ಟೊಂದು ಗಮನ ಕೊಡದೆ ವರ್ಣನಪ್ರಕಾರಗಳ ವೈವಿಧ್ಯವನ್ನೇ ಕಾವ್ಯ ತತ್ವದ ಮುಖ್ಯ ನೆಲೆಯಾಗಿ ಸ್ವೀಕರಿಸಿ ಗ್ರಂಥರಚನೆ ಮಾಡಿರುವುದನ್ನು ಯಾರೂ ಅಲ್ಲಗಳೆಯುವಹಾಗಿಲ್ಲ. ದೃಶ್ಯಕಾವ್ಯದ ಪ್ರಕಾರಗಳಲ್ಲಿ ವರ್ಣನಪ್ರಕಾರಗಳಿಗೆ ಅವಕಾಶ ಕಡಿಮೆ. ಹಾಗಿದ್ದರೂ ಸಂಸ್ಕೃತ ನಾಟಕಕಾರರು ಶ್ರವ್ಯಕಾವ್ಯದ ಛಾಯೆಗಳನ್ನು ಅಲ್ಲಲ್ಲಿ ತಮ್ಮ ಕೃತಿಗಳೊಳಕ್ಕೆ ತುರುಕಿ ವರ್ಣನಪ್ರಕಾರಗಳಿಗೆ ಬೇಕಾಗುವ ಅವಕಾಶ ಹೆಚ್ಚಾಗುವಂತೆ ಮಾಡಿಕೊಂಡಿದ್ದಾರೆ. ಶ್ರವ್ಯ ಕಾವ್ಯದ ಪ್ರಕಾರಗಳಲ್ಲಿ ಹೆಚ್ಚಿನವು ವರ್ಣನಪ್ರಕಾರಗಳಿಗೆ ವಿಫುಲವಾದ ಅವಕಾಶ ಒದಗುವಂತೆ ರೂಪುಗೊಂಡಿವೆ. ಕೆಲವು ಕೃತಿಗಳಲ್ಲಿ ಬೇರೆ ರೂಪದ ಸತ್ವಕ್ಕೆ ಎಡೆಯೇ ಇಲ್ಲದಂತೆ ವರ್ಣನಪ್ರಕಾರಗಳು ಬೆಳೆದು ನಿಂತಿವೆ.
ಕೃತಿರಚನೆಯ ವಿಧಾನದಲ್ಲಿ ಎದ್ದು ಕಾಣುವ ಈ ಗುಣಕ್ಕೆ ಆಲಂಕಾರಿಕರ ವಿಚಾರಸರಣಿಯಲ್ಲಿ ತತ್ಸಮ ಕಲ್ಪನೆ ಇದೆ-ಇಲ್ಲ ಎಂದು ಪರಾಮರ್ಶಿಸುವುದು ಪ್ರಕೃತಕ್ಕೆ ಸೂಕ್ತವಾದ ಕೆಲಸ. ಈ ದಿಶೆಯಲ್ಲಿ ವಿಚಾರವನ್ನು ಮುಂದುವರಿಸಿದಾಗ, ಕವಿಗಳಲ್ಲಿ ವರ್ಣನ ಪ್ರಕಾರಗಳ ಕಡೆಗೆ ಒಲವು ಬೆಳೆಯುತ್ತಾ ಹೋಗುವುದಕ್ಕೆ ಆಲಂಕಾರಿಕರ ಹಿತಕರ ಪ್ರತಿಕ್ರಿಯೆ ಬಹುಮಟ್ಟಿಗೆ ಪ್ರೇರಕವಾಗಿರುವುದು ಸ್ಪಷ್ಟವಾಗುತ್ತದೆ. ಸ್ಥೂಲವಾದ ಒಂದು ಸಂಗತಿಯನ್ನು ಉದಾಹರಿಸಿ ಮೇಲಿನ ಮಾತನ್ನು ಸಮರ್ಥಿಸುವುದಕ್ಕೆ ಸಾಧ್ಯವಾಗುತ್ತದೆ : ರಸಧ್ವನಿಯೇ ಉತ್ತಮ ಕಾವ್ಯದ ಜೀವಾಳ ಎಂದು ಪ್ರತಿಪಾದಿಸುವ ಗ್ರಂಥ, ವರ್ಣನಪ್ರಕಾರಗಳ ಕಡೆಗಿನ ಅಶಿ ಒಲವಿನಲ್ಲಿರುವ ದೋಷವನ್ನು ಎತ್ತಿ ತೋರಿಸುತ್ತದೆ; ಆದರೂ ರಸದಂತಹ ಮೌಲಿಕತತ್ವಗಳನ್ನೂ ವರ್ಣನಪ್ರಕಾರಗಳ ಗರ್ಭದಲ್ಲೇ ಅಡಗಿಸುವ ಗ್ರಂಥಗಳು ಮತ್ತೂ ಮತ್ತೂ ಹೊರಬರುತ್ತವೆ. ಅಂದರೆ, ವರ್ಣನ ಪ್ರಕಾರಗಳಲ್ಲೇ ಕಾವ್ಯತ್ವವನ್ನು ನೆಲೆಗೊಳಿಸುವ ವಿಚಾರಸರಣಿ ಅಲಂಕಾರ ಶಾಸ್ತ್ರದ ಕೊನೆಯ ಹಂತದವರೆಗೂ ಮುಂದುವರಿಯುತ್ತದೆ.
ಈ ವಿಚಾರಸರಣಿಯನ್ನು ನಾಲ್ಕು ರೀತಿಯಲ್ಲಿ ವಿಶ್ಲೇಷಿಸಿ ಅರ್ಥೈಸಬಹುದು : ೧. (ವಕ್ರ) ಉಕ್ತಿ ಎಂಬ ಕಲ್ಪನೆ ಅಲಂಕಾರ ಶಾಸ್ತ್ರದಲ್ಲಿ ಪಡೆದ ಸ್ಥಾನ ೨. ಕಾವ್ಯವನ್ನು ವೇದಪುರಾಣ ಮೊದಲಾದ ಇತರ ವಾಙ್ಮಯ ಪ್ರಕಾರಗಳಿಂದ ಪ್ರತ್ಯೇಕಿಸುವಲ್ಲಿ ಆಲಂಕಾರಿಕರ ದೃಷ್ಟಿ ೩.
ದರ್ಶನ-ವರ್ಣನಗಳೆಂಬ ಎರಡು ಕವಿವ್ಯಾಪಾರಗಳಲ್ಲಿ ಪ್ರತಿಯೊಂದರ ಕುರಿತು ಆಲಂಕಾರಿಕರು ಕೊಡುವ ಅಭಿಪ್ರಾಯ ೪. ಆಲಂಕಾರಿಕರು ಕವಿತೆಯಲ್ಲಿ ಕಾಣುವ ಸೃಷ್ಟಿಕತ್ವ.
ವಕ್ರ+ಉಕ್ತಿಯ ಕಲ್ಪನೆ ಅಲಂಕಾರ ಶಾಸ್ತ್ರದಲ್ಲಿ ಬಹಳ ಪ್ರಾಚೀನ. ಕವಿಯ ಮಾತನ್ನು ದಿನಬಳಕೆಯ ಮಾತುಗಳಿಂದ ಪ್ರತ್ಯೇಕಿಸುವುದು ತಮಗೆ ಅನಿವಾರ್ಯ ಎಂಬುದನ್ನು ಪ್ರಶ್ನಿಸದೆ ಒಪ್ಪಿಕೊಳ್ಳುವ ಶಾಸ್ತ್ರಕಾರರಿಗೆ ಈ ಕಲ್ಪನೆ ಅತ್ಯವಶ್ಯವಾಗುತ್ತದೆ. ಹಾಗೆ ಪ್ರತ್ಯೇಕಿಸುವ ಗುಣ ‘ವಕ್ರತೆ’. ಆದುದರಿಂದ ಅದು ಕಾವ್ಯಸೌಂದರ್ಯಕ್ಕೆ ನೆಲೆ. ಇಂತಹ ಸೌಂದರ್ಯದ ಮೂರ್ತರೂಪಗಳು ‘ಅಲಂಕಾರ’ಗಳು. ಅಲಂಕಾರಗಳ ಪ್ರತ್ಯಕ್ಷ ನೆಲೆ ಕೆಲವು ಸಂದರ್ಭಗಳಲ್ಲಿ ಶಬ್ದ ; ಇನ್ನು ಕೆಲವು ಸಂದರ್ಭಗಳಲ್ಲಿ ಅರ್ಥ. (ಹೀಗೆ ನೆಲೆಯಾಗುವ ಅರ್ಹತೆ ಉಳ್ಳ) ಶಬ್ದ ಅರ್ಥಗಳ ಕೂಡುವಿಕೆ ಕಾವ್ಯ. ದಿನ ಬಳಕೆಯ ಮಾತುಗಳಲ್ಲಿ, ವಕ್ರತೆಯಾಗಲೀ ಅದರಲ್ಲಿ ನೆಲೆಯೂರುವ ಸೌಂದರ್ಯವಾಗಲೀ ಹಾಗೆ ನೆಲೆಯೂರಿದುದರ ಪರಿಣಾಮವಾಗಿ ಶಬ್ದ-ಅರ್ಥಗಳ ಜೊತೆಯಲ್ಲಿ ಕಾಣಿಸುವ ಅಲಂಕಾರಗಳಾಗಲೀ ಇರುವುದಿಲ್ಲ. ಇದು ವಕ್ರ+ಉಕ್ತಿಯ ಕುರಿತು ಪ್ರಾಚೀನರು ಮಾಡುವ ಒಂದು ವಿವೇಚನೆ.
ಮೇಲಿನ ವಿವೇಚನೆಯ ಪ್ರಕಾರ ವಕ್ರ+ಉಕ್ಕಿ ಅಲಂಕಾರ ಶಾಸ್ತ್ರದಲ್ಲಿ ಅತಿ ಹೆಚ್ಚಿನ ವ್ಯಾಪ್ತಿ ಉಳ್ಳ ಒಂದು ಕಲ್ಪನೆ. ಇನ್ನೊಂದು ಪಥ ಈ ಕಲ್ಪನೆಯನ್ನು ಇಷ್ಟು ವಿಸ್ತಾರವಾಗಿ ಇರುವುದಕ್ಕೆ ಬಿಡುವುದಿಲ್ಲ. ಇದರ ಪ್ರಕಾರವೂ ಕವಿಯ ಮಾತು ದಿನಬಳಕೆಯ ಮಾತಿನಿಂದ ಪ್ರತ್ಯೇಕವೇ. ಆದರೆ ಈ ಪ್ರತ್ಯೇಕತೆ ಸಾಕಷ್ಟು ವಿಸ್ತಾರವಾಗಿ ಗೋಚರಿಸುವವರೆಗೆ “ಉಕ್ತಿವಕ್ರತೆ’ ಸಿದ್ಧಿಸುವುದಿಲ್ಲ. ಹಿಂದಿನ ಪಥದ ಪ್ರಕಾರ ಕಾವ್ಯ ಸೌಂದರ್ಯಕ್ಕೆ ನೆಲೆಯಾದ ವಕ್ರತೆ ಕಾವ್ಯ ಸೌಂದರ್ಯದ ಒಂದು ಪ್ರಕಾರಕ್ಕೆ ಮಾತ್ರ ನೆಲೆಯಾಗಿ ನಿಂತು ಸೌಂದರ್ಯದ ಒಂದಂಶವನ್ನು ಬಿಟ್ಟು ಕೊಡುತ್ತದೆ. ಹಿಂದಿನ ಪಥದ ತಂತ್ರವನ್ನೇ ಉಪಯೋಗಿಸಿ ಹೇಳುವುದಿದ್ದರೆ, ಹೀಗೆ ಬಿಟ್ಟು ಕೊಡಲಾದ ಸೌಂದರ್ಯಾಂಶ ಅತಿ ಕಡಿಮೆ ವಕ್ರತೆಯನ್ನು ಹೊಂದಿದ ಅಂಶ.
ಅತಿ ಕಡಿಮೆ ಪ್ರಮಾಣದ ವಕ್ರತೆ ಎಂದರೆ ವಸ್ತು ಸ್ವಭಾವದಿಂದ ಪರಿಮಿತವಾಗಿ ನಿಲ್ಲುವ ವಕ್ರತೆ. ಇಲ್ಲಿ ಕಾಣುವ ಉಕ್ತಿ ವಕ್ರತೆ ವಸ್ತು ವಕ್ರತೆಗೆ ತತ್ಸಮವಾಗಿರುವುದರಿಂದ ಇಲ್ಲಿನ ಸೌಂದರ್ಯಾಂಶದ ನೆಲೆಯನ್ನು (‘ವಕ್ರ+ಉಕ್ಕಿ’ ಎಂದು ವ್ಯವಹರಿಸಲು ಈ ಎರಡನೆಯ ಪಥ ಒಪ್ಪುವುದಿಲ್ಲ. ಇಲ್ಲಿನ ಉಕ್ತಿವೈಚಿತ್ರ‍್ಯ ವಸ್ತುಸ್ವಭಾವದ ವ್ಯಾಪ್ತಿಗೆ ಒಳಗಾಗುವುದರಿಂದ ಇಂತಹ ಅಭಿವ್ಯಕ್ತಿಯನ್ನು ‘ಸ್ವಭಾವ+ಉಕ್ತಿ’ ಎಂದು ಈ ಪಥ ನಿರ್ದೇಶಿಸುತ್ತದೆ; ಸ್ವಭಾವ+ಉಕ್ತಿ-ವಕ್ರ+ಉಕ್ತಿಗಳೆಂದು ಕಾವ್ಯ ಪ್ರಪಂಚವನ್ನು ವಿಭಾಗಿಸುತ್ತದೆ.
ಹೀಗೆ ಅಲಂಕಾರಶಾಸ್ತ್ರದ ಪ್ರಾಚೀನ ಯುಗದಲ್ಲಿ ‘ಉಕ್ಕಿ’ ಎಂಬ ತತ್ವ ಕಾವ್ಯ ಸೌಂದರ್ಯಕ್ಕೆ ನೆಲೆ. ಮೇಲೆ ವಿವರಿಸಲಾದ ಎರಡೂ ಪಥಗಳೊಳಗೆ ಈ ತತ್ವದ ಪ್ರಾಧಾನ್ಯದ ಕುರಿತು ಏಕಕಂಠತೆ ಇದೆ. ಕಾವ್ಯ ಪ್ರಕಾರಗಳೆಲ್ಲವೂ ಉಕ್ತಿಪ್ರಕಾರಗಳು. ಉಕ್ತಿವೈಚಿತ್ರ‍್ಯದಲ್ಲಿ ಹುದುಗಿದ ವಕ್ರತೆಯ ಅಂಶದ ಮಿತಿಯನ್ನು ಅನುಸರಿಸಿ “ಉಕ್ತಿ’ ಯನ್ನು ವಿಭಜಿಸಲಾಗುತ್ತದೆ. ಉಕ್ತಿಕಲ್ಪನೆ ಇಲ್ಲಿ ಶಬ್ದ-ಅರ್ಥಗಳೆಂಬ ಎರಡು ಸ್ವರಗಳನ್ನು ಒಳಗೊಂಡಿದೆ. ಈ ಎರಡು ಸ್ವರಗಳ ಪೈಕಿ ಮೊದಲನೆಯದರ ಮೂಲಕ ಎರಡನೆಯದನ್ನು ತಲಪುವುದು ಈ ಕಲ್ಪನೆ ಅನುಸರಿಸುವ ಗ್ರಹಣ ವಿಧಾನ.
ಇದಕ್ಕೆ ವಿರುದ್ಧವಾದ ಗ್ರಹಣವಿಧಾನವನ್ನು ಅನುಸರಿಸುವ ಕಲ್ಪನೆ ‘ಧ್ವನಿ’, ಈ ಕಲ್ಪನೆಯ ಪ್ರಕಾರ ಕಾವ್ಯತ್ವಕ್ಕೆ ಸಾಕ್ಷಾತ್ ಸಂಬಂಧ ಇರುವ ವಸ್ತು ಅರ್ಥವಿಶೇಷ. ಅರ್ಥದ ಮೂಲಕ ಶಬ್ದಕ್ಕೂ ಕಾವ್ಯತ್ವಕ್ಕೂ ಸಂಬಂಧ. ಅಲಂಕಾರ ಶಾಸ್ತ್ರದ ಇತಿಹಾಸದಲ್ಲಿ ಈ ಕಲ್ಪನೆ ಹಿಂದಿನ ಕಲ್ಪನೆಗಿಂತ ಅನಂತರದ ಕಾಲದಲ್ಲಿ ವಿಕಾಸ ಹೊಂದುತ್ತದೆ. ಈ ಹೊಸ ಕಲ್ಪನೆ ಕಾವ್ಯಶರೀರಕ್ಕಿಂತ ಹೆಚ್ಚು ಕಾವ್ಯ ವಸ್ತುವಿಗೆ ಸಾಕ್ಷಾತ್‌ಸಂಬಂಧ ಇಟ್ಟುಕೊಂಡಿರುವುದರಿಂದ ಹಿಂದಿನ ಕಲ್ಪನೆಗಿಂತ ಬಲಿಷ್ಠವಾಗಿ ಪ್ರತಿಷ್ಠೆ ಹೊಂದುತ್ತದೆ; ಹಿಂದಿನ ಕಲ್ಪನೆಯನ್ನು ಬದಿಗೊತ್ತಿ ಶಾಸ್ತ್ರದಲ್ಲಿ ಅದರ ಮುಂದುವರಿಯುವಿಕೆಗೆ ತಡೆ ಉಂಟುಮಾಡುತ್ತದೆ.
ಇಷ್ಟಾದರೂ ಉಕ್ತಿತತ್ವ ತನ್ನ ಸ್ಥಾನವನ್ನು ಕಳೆದುಕೊಳ್ಳುವುದಿಲ್ಲ. ಆಲಂಕಾರಿಕರ ವಿವೇಕ ಧ್ವನಿತತ್ವವನ್ನು ಬೆಳಕಿಗೆ ತಂದು ಉಕ್ತಿತತ್ವದ ಅಸಮರ್ಥತೆಯನ್ನು ತೋರಿಸಿ ಕೊಟ್ಟನಂತರವೂ ಅವರ ಒಲವು ಹಿಂದಿನಂತೆ ಉಕ್ತಿತತ್ವದ ಕಡೆಗೇ ಇರುತ್ತದೆ. ಈ ಒಲವಿನಿಂದಾಗಿ ಉಕ್ತಿತತ್ವವನ್ನೇ ಪ್ರತಿಷ್ಠಿಸುವ ಗ್ರಂಥಗಳು ಪುನಃ ತಲೆಯೆತ್ತುತ್ತವೆ. ಹಿಂದಿನ ಕಲ್ಪನೆಯಲ್ಲಿ ಸಾಕಷ್ಟು ಪರಿಷ್ಕಾರವನ್ನೂ ಮಾಡುತ್ತವೆ. ಇಂತಹ ಗ್ರಂಥಕಾರರಲ್ಲಿ ಇಬ್ಬರು ಪ್ರಮುಖಪಾತ್ರ ವಹಿಸುತ್ತಾರೆ. ಕುಂತಕ ಮತ್ತು ಭೋಜರಾಜ, ಇವರಲ್ಲಿ ಮೊದಲನೆಯವನು ಪ್ರಾರಂಭದಲ್ಲಿ ವಿವೇಚಿಸಲಾದ ಎರಡು ಉಕ್ತಿ-ಪಥಗಳಲ್ಲಿ ಒಂದನೆಯದರ ಅನುಯಾಯಿ. ಅನಂತರದವನು ಎರಡನೆಯದರ ಪುರಸ್ಕರ್ತ.
ಪ್ರಾಚೀನರ ಮೊದಲನೆಯ ಪಥ ಸಾರುವಂತೆಯೇ ಕುಂತಕನ ಪ್ರಕಾರವೂ ಕಾವ್ಯ ಸೌಂದರ್ಯಕ್ಕೆ ಮೂಲ ವಕ್ರತೆ. ಆದರೆ ಪ್ರಾಚೀನರಂತೆ ಸ್ವಭಾವ+ಉಕ್ತಿಯನ್ನು ವಕ್ರ+ಉಕ್ತಿಯ ಒಂದು ಪ್ರಕಾರವೆಂದು ವ್ಯಾಖ್ಯಾನಿಸಲು ಇವನ ತಾರ್ಕಿಕತೆ ಒಪ್ಪುವುದಿಲ್ಲ. ಪರಸ್ಪರ ವಿರುದ್ಧ ಪ್ರಕೃತಿಯುಳ್ಳ ಈ ಎರಡು ಉಕ್ತಿ ಪ್ರಕಾರಗಳಲ್ಲಿ ಒಂದು ಇನ್ನೊಂದರ ಪ್ರಭೇದವಾಗಲು ಸಾಧ್ಯವಿಲ್ಲ ಎಂದು ಇವನ ಅಭಿಪ್ರಾಯ. ವಕ್ರತೆ ಎಂಬ ಒಂದೇ ತತ್ವ ಕಾವ್ಯ ಸೌಂದರ್ಯಕ್ಕೆ ಮೂಲವಾಗಿರುವುದರಿಂದ ಪ್ರಾಚೀನರ ಎರಡನೆಯ ಪಥದಂತೆ ಕಾವ್ಯಪ್ರಪಂಚವನ್ನು ವಿಂಗಡಿಸುವುದು ಇವನಿಗೆ ಇಷ್ಟವಿಲ್ಲ. ಸ್ವಭಾವ+ ಉಕ್ತಿಯ ಉದಾಹರಣೆಗಳಲ್ಲಿ ಕಾವ್ಯಸೌಂದರ್ಯ ಸ್ಪುಟವಾಗಿರುವುದರಿಂದ ಅವು ಕಾವ್ಯವಲ್ಲವೆಂದು ತೆಗೆದುಹಾಕಲು ಇವನ ಸಹೃದಯತೆ ಒಪ್ಪುವುದಿಲ್ಲ. ಈ ಸಮಸ್ಯೆಯನ್ನು ಬಗೆಹರಿಸುವುದಕ್ಕಾಗಿ ತಾನು ಪ್ರತಿಪಾದಿಸಹೊರಟ ತತ್ವ ಉಕ್ತಿವಕ್ರತೆ ಆದರೂ ತತ್ವವನ್ನು ಸ್ವಲ್ಪ ಸಡಿಲಗೊಳಿಸಿ ವಕ್ರತೆ ಎಂದಷ್ಟೇ ಇಟ್ಟುಕೊಳ್ಳುತ್ತಾನೆ. ಸ್ವಭಾವ + ಉಕ್ತಿಯನ್ನು ವಸ್ತು ವಕ್ರತೆ ಎಂದು ನಿರ್ದೇಶಿಸುತ್ತಾನೆ.
ಇವನು ಗ್ರಂಥರಚನೆ ಮಾಡುವ ಕಾಲಕ್ಕೆ ಧ್ವನಿತತ್ವ ಸಾಕಷ್ಟು ಪ್ರತಿಷ್ಠೆ ಹೊಂದಿರುತ್ತದೆ. ಆ ತತ್ವದ ಕೊಡುಗೆಯನ್ನು ಕಡೆಗಣಿಸುವುದು ಇವನ ವಿವೇಕಕ್ಕೆ ಸರಿಹೋಗುವುದಿಲ್ಲ. ತನ್ನ ಒಲವು ಮಾತ್ರ ಪ್ರಾಚೀನ ಕಲ್ಪನೆಯ ಕಡೆಗೇ ಇರುವುದರಿಂದ ಹೊಸ ತತ್ವದ ಸಾರವನ್ನು ಹಳೆಯ ಕಲ್ಪನೆಯ ಒಳಗೆ ಹುದುಗಿಸಿ ಇವನು ತನ್ನ ಅಭಿಪ್ರಾಯವನ್ನು ಪುಷ್ಟೀಕರಿಸುತ್ತಾನೆ.
ಭೋಜರಾಜನ ಪ್ರತಿಪಾದನೆಯ ರೀತಿ ಇದಕ್ಕಿಂತ ಭಿನ್ನ. ಪ್ರಾಚೀನರ ಎರಡನೆಯ ಪಥ ಇವನಿಗೆ ಹೆಚ್ಚು ಸಮ್ಮತ. ತನಗೆ ಇಷ್ಟವಿರುವ ಪಥಕ್ಕೆ ಅನುಸಾರವಾಗಿ ಇವನು ಕಾವ್ಯವನ್ನು ಉಕ್ತಿಭೇದದ ಆಧಾರದ ಮೇಲೆ ವರ್ಗಿಕರಿಸುತ್ತಾನೆ. ಪ್ರಾಚೀನ ಪಥದ ಪ್ರಕಾರ ಕಾವ್ಯ ಎರಡುವರ್ಗಗಳಿಗೆ ಸೇರಿದ್ದರೆ ಇವನ ಪ್ರಕಾರ ಮೂರು ವರ್ಗಗಳಿಗೆ ಸೇರುತ್ತದೆ : ಸ್ವಭಾವ+ಉಕ್ತಿ, ವಕ್ರ+ಉಕ್ತಿ ಮತ್ತು ರಸ+ಉಕ್ತಿ, ಈ ಮೂರು ಪ್ರಕಾರಗಳನ್ನು ವ್ಯಾಖ್ಯಾನಿಸುವಲ್ಲಿ ಇವನು ಕಾವ್ಯಮೀಮಾಂಸೆಯ ಮೂರು ಮುಖ್ಯ ಕಲ್ಪನೆಗಳನ್ನು ಉಪಯೋಗಿಸಿಕೊಳ್ಳುತ್ತಾನೆ: ಸ್ವಭಾವ+ಉಕ್ಕಿ ಎಂಬ ಕಾವ್ಯ ಪ್ರಕಾರದಲ್ಲಿ (ಕಾವ್ಯ) ಗುಣ ಪ್ರಧಾನ ; ವಕ್ರ+ಉಕ್ತಿ ಎಂಬ ಪ್ರಕಾರದಲ್ಲಿ ಅಲಂಕಾರ (ಉಪಮಾ-ಅನುಪ್ರಾಸ ಮೊದಲಾದುವು) ಪ್ರಧಾನ ; ರಸ+ಉಕ್ತಿಯಲ್ಲಿ ರಸ ಪ್ರಧಾನ ಅಂದರೆ, ಸ್ವಭಾವ+ಉಕ್ತಿಯಲ್ಲಿ ಸತ್ವ-ಶರೀರಗಳ ಸಮತೋಲನದಿಂದಲಾಗಿ ಸೌಂದರ್ಯ ; ವಕ್ರ+ ಉಕ್ತಿಯಲ್ಲಿ ಶರೀರದಿಂದಲಾಗಿ ಸೌಂದರ್ಯ ; ರಸ+ಉಕ್ತಿಯಲ್ಲಿ ಸತ್ವದಿಂದಲಾಗಿ ಸೌಂದರ್ಯ.
ಹೀಗೆ ಎರಡು ಪಥಗಳ ಪ್ರಾರಂಭ ಮತ್ತು ವಿಕಸಿತ ಅವಸ್ಥೆಗಳಲ್ಲಿ ಉಕ್ತಿ-ತತ್ವ ಪ್ರಧಾನತ್ವವಾಗಿ ಮುಂದುವರಿಯುತ್ತದೆ. ಈ ತತ್ವದ ಪ್ರಕಾರ ವರ್ಣನ (=ಅಭಿವ್ಯಕ್ತಿ) ಪ್ರಕಾರಗಳು ಸೌಂದರ್ಯದ ಪ್ರಕಾರಗಳಿಗೆ ನೆಲೆಯಾಗುತ್ತವೆ. ಆಲಂಕಾರಿಕರ ಈ ಪ್ರತಿಪಾದನೆ ಲಕ್ಷ್ಯ ಗ್ರಂಥಗಳಲ್ಲಿ ಕಂಡುಬರುವ ವರ್ಣನ ಪ್ರಕಾರಗಳ ಸಮೃದ್ಧಿಗೆ ಸಂವಾದಿ ಕಲ್ಪನೆಯಾಗುತ್ತದೆ. ಈ ಕಲ್ಪನೆಯನ್ನು ಉಪಯೋಗಿಸಿ ಆಲಂಕಾರಿಕರು ಕಾವ್ಯವನ್ನು ದಿನಬಳಕೆಯ ಮಾತುಗಳಿಂದ ಪ್ರತ್ಯೇಕಿಸಿ ಇಡುತ್ತಾರೆ.
ಕಾವ್ಯಕ್ಕೆ ಇನ್ನೊಂದು ರೀತಿಯ ‘ಪ್ರತ್ಯೇಕತೆ’ ಆಲಂಕಾರಿಕರ ದೃಷ್ಟಿಯಲ್ಲಿ ಆವಶ್ಯಕವಾಗುತ್ತದೆ. ದಿನಬಳಕೆಯ ಮಾತುಗಳಿಂದ ಪ್ರತ್ಯೇಕಿಸಿದಂತೆಯೇ ವೇದ-ಪುರಾಣ ಮೊದಲಾದ ವಾಙ್ಮಯಪ್ರಕಾರಗಳಿಂದ ಇವರು ಕಾವ್ಯವನ್ನು ಪ್ರತ್ಯೇಕಿಸುತ್ತಾರೆ. ಇವರ ಪ್ರತಿಪಾದನೆಯ ಪ್ರಕಾರ ವೇದದಲ್ಲಿ ಶಬ್ದಕ್ಕೆ ಪ್ರಾಧಾನ್ಯ; ಪುರಾಣದಲ್ಲಿ ಅರ್ಥಕ್ಕೆ ಪ್ರಾಧಾನ್ಯ ; ಕಾವ್ಯದಲ್ಲಿ ಸಹೃದಯನ ಮೇಲೆ ಉಂಟಾಗುವ ಪರಿಣಾಮಕ್ಕೆ ಪ್ರಾಧಾನ್ಯ. ಈ ವಿಚಾರವನ್ನು ಮನಸ್ಸಿನಲ್ಲಿಟ್ಟು ವೇದವನ್ನು ಪ್ರಭುವಿಗೂ ಪುರಾಣವನ್ನು ಮಿತ್ರನಿಗೂ ಕಾವ್ಯವನ್ನು ಪತ್ನಿಗೂ ಹೋಲಿಸುವುದು ರೂಢಿ. ಕಾವ್ಯಗಳಿಗೆ ವ್ಯಾಖ್ಯಾನ ಬರೆಯುವ ಮಲ್ಲಿನಾಥ ಮೊದಲಾದ ವಿದ್ವಾಂಸರು ಈ ವಿವೇಚನೆಯನ್ನು ಬಹಳವಾಗಿ ಆದರಿಸುವುದು ಅವರು ತಮ್ಮ ವ್ಯಾಖ್ಯಾನಗಳಿಗೆ ಬರೆಯುವ ಅವತರಣಿಕೆಗಳಿಂದ ಸ್ಪಷ್ಟವಾಗುತ್ತದೆ.
ಈ ವಿವೇಚನೆಯ ಪ್ರಕಾರ ಕಾವ್ಯಕ್ಕೂ ವೇದ-ಪುರಾಣಗಳಿಗೂ ವಸ್ತು ಒಂದೇ ಎಂಬುದು ಆಲಂಕಾರಿಕರ ಅಭಿಪ್ರಾಯ ಎಂಬುದು ಸ್ಪಷ್ಟ. ಪ್ರತಿಪಾದನೆಯ ವಿಧಾನದಲ್ಲಿ ಮಾತ್ರ ಈ ಮೂರು ವಿಧದ ವಾಙ್ಮಯಗಳಿಗೆ ಪರಸ್ಪರ ಭೇದ. ವೇದ ಪುರಾಣಗಳಲ್ಲಿರುವ ತತ್ವರಾಶಿಯನ್ನು ರಸಮಯವಾಗಿ ಪರಿವರ್ತಿಸುವುದು ಮಾತ್ರ ಕಾವ್ಯಕ್ಕಿರುವ ವಿಶೇಷ ಶಕ್ತಿ. ಇದರಿಂದಲಾಗಿ ಕಾವ್ಯಕ್ಕೆ ವಿಶಿಷ್ಟ ಸ್ಥಾನ.
ಹೀಗೆ ಎರಡು ರೀತಿಯ ಪ್ರತ್ಯೇಕತೆಗಳು ಕಾವ್ಯವೆಂದರೆ ವಿಶೇಷ ರೀತಿಯ ವರ್ಣನ ಪ್ರಕಾರ ಎಂದು ನಿರ್ಣಯಿಸುತ್ತವೆ. ಈ ಪ್ರತಿಪಾದನೆಯೊಡನೆ ಸಂಪೂರ್ಣ ಏಕಕಂಠತೆ ಬರುವಂತೆ ಕಾವ್ಯವನ್ನು ಉಕ್ತಿವಿಶೇಷ ಎಂದು ಲಕ್ಷಿಸುವ ಆಲಂಕಾರಿಕರನ್ನು ಕಾಣುವುದು ಸಾಧ್ಯವಿದೆ. ಅಲಂಕಾರ ಶಾಸ್ತ್ರದಿಂದ ಹೊರಗೂ ಇದೇ ಅಭಿಪ್ರಾಯವನ್ನು ಪುಷ್ಟಿಕರಿಸುವ ಉಲ್ಲೇಖಗಳು ಕಂಡುಬರುತ್ತವೆ.
ಭಟ್ಟತೌತನೆಂಬ ಆಲಂಕಾರಿಕನ ಹೆಸರಿನಲ್ಲಿ ಉದ್ಧೃತವಾಗಿರುವ ಒಂದು ಶ್ಲೋಕದ ಸಾರಾಂಶ ಹೀಗಿದೆ : ಆದಿಕವಿಯ ದೃಷ್ಟಿಗೆ (ಕಾವ್ಯವಸ್ತು) ಸ್ಪಷ್ಟವಾಗಿ ಗೋಚರವಾಗಿದ್ದರೂ ವರ್ಣನೆ (=ಅಭಿವ್ಯಕ್ತಿ). ಹುಟ್ಟುವ ತನಕ ಲೋಕದಲ್ಲಿ ಕವಿತೆಯು ಉದಯ ಆಗಲಿಲ್ಲ.
ಇದು ಕಾವ್ಯವನ್ನು ದರ್ಶನ-ವರ್ಣನಗಳೆಂಬ ಎರಡು ಮುಖಗಳ ರೂಪದಲ್ಲಿ ವಿಶ್ಲೇಷಿಸುವ ಮಾರ್ಗ. ಈ ಮಾರ್ಗ ಕಾವ್ಯಕ್ಕೆ ಬೀಜವಾಗಿರುವ ಪ್ರತಿಭಾತತ್ವದ ಕುರಿತು ವಿಚಾರ ನಡೆಸುತ್ತದೆ. ಇದರ ಪ್ರಕಾರ ಪ್ರತಿಭೆ ಎಂಬುದು ಕವಿಯಲ್ಲಿರುವ ಒಂದು ಅಪೂರ್ವವಾದ ಕಣ್ಣು. ಇತರರಿಗೆ ಕಾಣಿಸುವ ವಸ್ತುಗಳನ್ನೇ ಕವಿ ನೋಡುತಿದ್ದರೂ ಅವನಲ್ಲಿರುವ ಈ ವಿಶೇಷ ದರ್ಶನಶಕ್ತಿಯಿಂದಲಾಗಿ ಸಾಮಾನ್ಯ ಮನುಷ್ಯನಿಗೆ ಗೋಚರಿಸದ ಸೂಕ್ಷ ತತ್ವಗಳು ಕವಿಗೆ ಗೋಚರಿಸುತ್ತವೆ. ಇಂತಹ ದರ್ಶನಶಕ್ತಿ ಅವನಲ್ಲಿರುವ ವರ್ಣನಶಕ್ತಿಗೆ ಪ್ರೇರಕವಾಗುತ್ತದೆ.
ಈ ಪ್ರತಿಪಾದನೆ ಕವಿಗೂ ಸಾಮಾನ್ಯ ಮನುಷ್ಯನಿಗೂ ಇರುವ ಸಾಮ್ಯ-ವ್ಯತ್ಯಾಸಗಳನ್ನು ಸ್ಪಷ್ಟಪಡಿಸುತ್ತದೆ. ಕವಿಗೂ ಸಾಮಾನ್ಯ ಮನುಷ್ಯನಿಗೂ ಒದಗುವ ಮೂಲ ವಸ್ತು ಒಂದೇ. ಇದು ಲೌಕಿಕ ಪ್ರಪಂಚ. ಸಾಮಾನ್ಯ ಮನುಷ್ಯನಲ್ಲಿ ಪ್ರತಿಭಾತತ್ವ ಉದ್ಬೋಧಗೊಳ್ಳದೆ ಇರುವುದರಿಂದ ಅವನ ಅನುಭವ ಸ್ಥೂಲ. ಕವಿಯ ದರ್ಶನಶಕ್ತಿ ಸೂಕ್ಷವಾಗಿರುವುದರಿಂದ ಅವನ ಅನುಭವ ಸೂಕ್ಷ್ಮ, ಆದುದರಿಂದ ಕವಿ ಒಬ್ಬ “ದಾರ್ಶನಿಕ’.
ಕವಿ ದಾರ್ಶನಿಕನಾಗಿ ಕಾಣಿಸುವುದು ಸಾಮಾನ್ಯ ಮನುಷ್ಯನಿಂದ ಪ್ರತ್ಯೇಕಗೊಳ್ಳುವಲ್ಲಿ ಮಾತ್ರ. ಅನಂತರದ ಹಂತದಲ್ಲಿ ಇವನ ಸ್ಥಾನ ದಾರ್ಶನಿಕನ ಸ್ಥಾನದಿಂದಲೂ ಪ್ರತ್ಯೇಕ. ಇವನಲ್ಲಿ ಇರುವ ವರ್ಣನಶಕ್ತಿ ದಾರ್ಶನಿಕನಲ್ಲಿ ಇಲ್ಲ. ಇದು ಪ್ರತಿಭಾತತ್ವದ ಇನ್ನೊಂದು ಮುಖ ಈ ಶಕ್ತಿಯಿಂದಲಾಗಿ ತನ್ನ ಅನುಭವ ಎಷ್ಟೇ ಸೂಕ್ಷವಾಗಿದ್ದರೂ ಸಾಮಾನ್ಯನೂ ಗ್ರಹಿಸಬಹುದಾದ ರೀತಿಯಲ್ಲಿ ಕವಿ ತನ್ನ ಅನುಭವವನ್ನು ಕೊಡಬಲ್ಲ. ಹೀಗೆ ಸಾಮಾನ್ಯನಿಗೆ ಗ್ರಹಿಸಲು ಸಾಧ್ಯವಾಗುವುದು ಕಾವ್ಯದ ಸ್ಥೂಲಸ್ತರವನ್ನು ಮಾತ್ರ. ಸೂಕ್ಷ್ಮಸ್ತರಗಳನ್ನು ಗ್ರಹಿಸುತ್ತಾ ಹೋಗುವುದಕ್ಕೆ ಗ್ರಹಿಸುವವನಲ್ಲಿಯೂ ಪ್ರತಿಭಾತತ್ವದ ಅಂಶ ಇರಬೇಕಾಗುತ್ತದೆ. ಇಂತಹ ಅಂಶ ಸಹೃದಯತೆ.
ದಾರ್ಶನಿಕನಿಗೂ ಕವಿಗೂ ಮುಖ್ಯ ವ್ಯತ್ಯಾಸ ಇರುವುದು ಆವರು ಉಪಯೋಗಿಸುವ ಅಭಿವ್ಯಕ್ತಿ ಪ್ರಕಾರಗಳ ವ್ಯತ್ಯಾಸದಿಂದಲಾಗಿ ಕೇಳುವವನ ಮೇಲೆ ಉಂಟಾಗುವ ಪರಿಣಾಮಗಳಲ್ಲಿ. ದಾರ್ಶನಿಕನ ಮಾತಿನಲ್ಲಿರುವ ಸೂಕ್ಷ್ಮತತ್ವಗಳ ಪ್ರತಿಪಾದನೆಯನ್ನು ಗ್ರಹಿಸುವವನಿಗೆ ತಿಳಿವು ಮಾತ್ರ ಹೆಚ್ಚುತ್ತದೆ; ಕವಿಯ ಮಾತನ್ನು ಗ್ರಹಿಸುವವನಿಗೆ ತಿಳಿವು ಹೆಚ್ಚುವುದರ ಜೊತೆಗೆ ರುಚಿಕರವಾದ ಅನುಭವವೂ ಹೆಚ್ಚುತ್ತದೆ. ಈ ಮಾರ್ಗ ಕಾವ್ಯ ಎಂಬ ವಸ್ತುವಿಗಿಂತ ಹೆಚ್ಚು ಕವಿ ಎಂಬ ವ್ಯಕ್ತಿಯ ಮೇಲೆ ಗಮನ ಇಟ್ಟು ಮುಂದುವರಿಯುತ್ತದೆ. ಹೀಗೆ ಮುಂದುವರಿಯುವಲ್ಲಿ ಆಲಂಕಾರಿಕರ ಕಲ್ಪನೆಗಳು ಪ್ರತಿಭಾತತ್ವವನ್ನು ಸುತ್ತುವರಿಯುತ್ತವೆ. ಪ್ರತಿಭಾತತ್ವದ ಅನೇಕ ಮುಖಗಳ ಪೈಕಿ ಇಲ್ಲಿ ಮುಖ್ಯವಾಗಿ ಪ್ರತಿಪಾದಿತವಾಗುವುದು ಪ್ರತಿಭಾ ದೃಷ್ಟಿ. ಈ ದೃಷ್ಟಿಯನ್ನು ಕೇವಲ ಸ್ವರೂಪದಲ್ಲಿ ಗ್ರಹಿಸಿ ಅದರ ಸ್ಥಾನವನ್ನು ನಿರ್ಣಯಿಸುವ ಕೆಲಸಕ್ಕೆ ಆಲಂಕಾರಿಕರ ಈ ಮಾರ್ಗ ಕೈಹಾಕುವುದಿಲ್ಲ. ಅದನ್ನು ವರ್ಣನ ವ್ಯಾಪಾರಕ್ಕೆ ಜೋಡಿಸಿ ಒಂದು ಸಂಕೀರ್ಣತತ್ವದ ರೂಪದಲ್ಲಿ ಗ್ರಹಿಸಿ ವಿಚಾರ ನಡೆಸುತ್ತದೆ.
ಇದರಿಂದಲಾಗಿ ದಾರ್ಶನಿಕನಿಗೂ ಕವಿಗೂ ವಸ್ತುತಃ ಇರುವ ಮೌಲಿಕ ವ್ಯತ್ಯಾಸದ ಕಡೆಗೆ ಆಲಂಕಾರಿಕರ ಗಮನ ಹರಿಯುವುದಿಲ್ಲ. ಶಾಸ್ತ್ರಗಳಿಂದ ಕಾವ್ಯವನ್ನು ಪ್ರತ್ಯೇಕಿಸುವಲ್ಲಿ ಅನುಸರಿಸುವ ಮಾರ್ಗಕ್ಕೆ ಕವಿಯನ್ನು ದಾರ್ಶನಿಕನಿಂದ ಪ್ರತ್ಯೇಕಿಸುವ ಮಾರ್ಗ ಸಂವಾದಿಯಾಗುತ್ತದೆ. ಇಬ್ಬರಿಗೂ ಮೂಲವಸ್ತು ಒಂದೇ ; ಪ್ರಪಂಚದ ಸ್ಥೂಲಸೂಕ್ಷ್ಮ ಸ್ತರಗಳು. ಇಬ್ಬರು ಸಾಧಿಸುವುದೂ ಒಂದನ್ನೇ, ಕೇಳುವವನ ಮನಸ್ಸನ್ನು ಕೆಟ್ಟ ದಾರಿಯಿಂದ ತಿರುಗಿಸಿ ಒಳ್ಳೆಯ ದಾರಿಗೆ ಹಚ್ಚುವುದು. ಅಭಿವ್ಯಕ್ತಿ ಇಲ್ಲದೆ ಅನುಭವ ಮಾತ್ರ ಸಿದ್ಧಿಸಿದಾಗ ಉಂಟಾಗುವ ಬೀಜಸ್ವರೂಪದ ಕಾವ್ಯವನ್ನು ಗ್ರಹಿಸಿ ವಿಶ್ಲೇಷಿಸದಿರುವಿಕೆ ಈ ಸಂದರ್ಭದಲ್ಲಿ ಆಲಂಕಾರಿಕರ ಚಾರ ವಿಶಕ್ತಿಯನ್ನು ಕುಂಠಿಸುತ್ತದೆ. ವರ್ಣನರೂಪದಲ್ಲಿ ಹೊರ ಹೊಮ್ಮದೆ ಕೇವಲ ಅನುಭವ ಸ್ವರೂಪದಲ್ಲಿ ಉಳಿಯುವ ಕಾವ್ಯವನ್ನು ಸೃಷ್ಟಿಸುವ ಕವಿಯನ್ನು ‘ಹೃದಯಕವಿ’ ಎಂದು ಹೆಸರಿಸಿ ಅವನ ಬಗೆಗೆ ಹೆಚ್ಚಿನ ವಿವೇಚನೆಯನ್ನು ಮಾಡದೆ ಅಲಂಕಾರಶಾಸ್ತ್ರ ಕೈಬಿಡುವುದು ಹೀಗೆ ಕುಂಠಿತವಾದ ವಿಚಾರಶಕ್ತಿಗೆ ದ್ಯೋತಕ. ಆಲಂಕಾರಿಕರು ದರ್ಶನಸ್ವರೂಪದಲ್ಲಿ ತಾವು ಕಂಡುಕೊಂಡ ಪ್ರತಿಭಾತತ್ವವನ್ನು ವರ್ಣನ ವ್ಯಾಪಾರಕ್ಕೆ ಬೆರಸಿಯೇ ನೋಡುವುದರ ಜೊತೆಗೆ ಅದಕ್ಕೆ ಅಧೀನಗೊಳಿಸುವುದು ಇಲ್ಲಿ ಗಮನಿಸಬೇಕಾದ ಅಂಶ.
ಪ್ರತಿಭೆಯ ಒಂದು ನೆಲೆ ಕವಿ ಆದರೆ ಇನ್ನೊಂದು ನೆಲೆ ಸಹೃದಯ ಎಂಬ ಅಭಿಪ್ರಾಯವನ್ನು ಸ್ಪಷ್ಟವಾಗಿ ಸೂಚಿಸುವ ಉಲ್ಲೇಖ ಆಲಂಕಾರಿಕರಲ್ಲಿ ಕಂಡುಬರುತ್ತದೆ. ಇದರ ವ್ಯಾಖ್ಯಾನರೂಪವಾಗಿ ಕವಿಯ ಪ್ರತಿಭೆಯನ್ನು ‘ಕಾರಯಿತ್ರೀ” ಎಂದೂ ಸಹೃದಯದ ಪ್ರತಿಭೆಯನ್ನು “ಭಾವಯಿತ್ರೀ” ಎಂದೂ ಶಾಸ್ತ್ರದ ಇನ್ನೊಂದೆಡೆಯಲ್ಲಿ ಹೆಸರಿಸಲಾಗಿದೆ. ಬೇರೆ ಕಲ್ಪನೆಗಳನ್ನು ವಿಶ್ಲೇಷಿಸುವಲ್ಲಿ ಶಾಸ್ತ್ರಕಾರರು ಈ ಮಾರ್ಗವನ್ನು ಹೇಗೆ ವಿರೂಪಗೊಳಿಸಬೇಕಾಗುತ್ತದೆ ಮತ್ತು ಹೀಗಾಗುವುದಕ್ಕೆ ಅವರಲ್ಲಿ ವರ್ಣನಪ್ರಕಾರಗಳ ಕಡೆಗಿರುವ ಅತ್ಯಾಸಕ್ತಿ ಹೇಗೆ ಕಾರಣವಾಗುತ್ತದೆ ಎಂದು ವಿಚಾರಿಸುವುದು ಈ ಸಂದರ್ಭದಲ್ಲಿ ಉಪಯುಕ್ತ.
ಸಹೃದಯತೆಯ ಕುರಿತು ವಿಚಾರಿಸುವ ಸಂದರ್ಭದಲ್ಲಿ ಕಾವ್ಯದಲ್ಲಿರುವ ಗುಣದೋಷಗಳು ಮುಖ್ಯ ಕಲ್ಪನೆಗಳು. ಸಹೃದಯನಾದವನಿಗೆ ಗುಣದೋಷಗಳು ಥಟ್ಟನೆ ಗೋಚರಿಸಬೇಕು. ಗುಣದೋಷಗಳ ಕಲ್ಪನೆಯನ್ನು ಈ ಸಂದರ್ಭದಲ್ಲಿ ವಿಶಾಲ ಅರ್ಥದಲ್ಲಿ ಗ್ರಹಿಸಬೇಕು: ಕಾವ್ಯತ್ವದ ಉತ್ಕರ್ಷಕ್ಕೆ ಕಾರಣವಾಗುವಂತಹುದೆಲ್ಲವೂ ಗುಣ ; ಕಾವ್ಯವನ್ನು ಕೆಡಿಸುವಂತಹುದೆಲ್ಲವೂ ದೋಷ. ಗುಣಗಳ ಕುರಿತು ಪ್ರತಿಪಾದಿ ಸುವ ಯಾವ ಶಾಸ್ತ್ರಭಾಗದಲ್ಲೂ ಸಹೃದಯತೆಯ ಕಲ್ಪನೆ ತಾನು ಪ್ರತಿಭೆಯ ಸ್ವತಂತ್ರ ನೆಲೆ ಎಂಬ ವಿಚಾರಕ್ಕೆ ಭಂಗತಂದುಕೊಳ್ಳುವುದಿಲ್ಲ. ದೋಷಗಳ ಕುರಿತು ಹೇಳುವಲ್ಲಿ ಆಲಂಕಾರಿಕರು ಸಹೃದಯತೆಯ ಕಲ್ಪನೆ ವಿರೂಪಗೊಳ್ಳುವಂತೆ ಪ್ರತಿಪಾದಿಸುವ ಅಂಶಗಳು ಗೋಚರವಾಗುತ್ತವೆ.
ದೋಷಗಳಿಗೆ ಎರಡು ನೆಲೆಗಳು; ಅಶಕ್ತಿ ಮತ್ತು ಅವ್ಯುತ್ಪತ್ತಿ. ಅಶಕ್ತಿ ಎಂದರೆ ಪ್ರತಿಭೆ ಸಾಕಾಗದಿರುವುದು. ಅವ್ಯುತ್ಪತ್ತಿ ಎಂದರೆ ವಿಚಾರಶಕ್ತಿ ಸೂಕ್ಷ್ಮಗೊಳ್ಳುವುದಕ್ಕಾಗಿ ಮಾಡುವ ಶಾಸ್ತ್ರ-ವ್ಯವಹಾರ ಮೊದಲಾದವುಗಳ ಅಭ್ಯಾಸ ಸಾಕಾಗದಿರುವುದು. ಈ ಎರಡು ಪ್ರಕಾರದ ದೋಷಗಳಲ್ಲಿ ಅವ್ಯುತ್ಪತ್ತಿಯಿಂದ ಉಂಟಾದುವು ಶಕ್ತಿಯಿಂದಲಾಗಿ ಮುಚ್ಚಿಹೋಗುವ ಸಂಭವವಿದೆ. ಅಶಕ್ತಿಯಿಂದ ಉಂಟಾದುವು ಥಟ್ಟನೆ ಹೊಳೆಯುತ್ತವೆ, ಇದು ಶ್ರೇಷ್ಠ ಆಲಂಕಾರಿಕರಿಗೂ ಸಮ್ಮತವಾಗುವ ಒಂದು ಅಭಿಪ್ರಾಯ. ‘ಅನೇಕ ಗುಣಗಳ ಮಧ್ಯದಲ್ಲಿ ಒಂದು ದೋಷ ಇದ್ದರೂ ಮುಳುಗಿ ಹೋಗುತ್ತದೆ’ ಎಂಬ ಕಾಳಿದಾಸನ ಮಾತು ಇದಕ್ಕೆ ಸಂವಾದಿಯಾಗಿ ಕಂಡುಬರುತ್ತದೆ.
ಈ ಪ್ರತಿಪಾದನೆ ಸಹೃದಯತೆಯ ಕಲ್ಪನೆಯನ್ನು ಮೊಟಕುಗೊಳಿಸುತ್ತದೆ ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ. ಇರುವ ದೋಷವನ್ನು ಇಲ್ಲದಂತೆ ಪರಿಭಾವಿಸುವುದು ಸಹೃದಯತೆಗೆ ತಕ್ಕುದಲ್ಲ. ಸಹೃದಯತೆಯ ತೀಕ್ಷ್ಯತೆ ಕಡಿಮೆಯಾಗಿರುವುದರಿಂದ ಮಾತ್ರ ಇರುವ ದೋಷ ಇಲ್ಲದಂತೆ ತೇಲಿಹೋಗಬಹುದು. ಇಂತಹ ಸಂದರ್ಭಗಳು ದೂಷಣ ಹೊರತು ಭೂಷಣ ಅಲ್ಲ. ಸಹೃದಯತೆಗೆ ಎಂದೂ ಗೋಚರವಾಗದ ದೋಷ ಇರುವುದಾದರೆ ಅದನ್ನು ದೋಷ ಎಂದು ಯಾಕೆ ಪರಿಗಣಿಸಬೇಕು ? ಇಂತಹ ದೋಷವನ್ನು ಉದಾಹರಿಸಿ ಸ್ಪಷ್ಟಪಡಿಸಲು ಆಲಂಕಾರಿಕನಿಗೆ ಹೇಗೆ ಸಾಧ್ಯವಾಯಿತು ?
ಈ ಆಕ್ಷೇಪಗಳಿಗೆ ಆಲಂಕಾರಿಕರಲ್ಲಿ ಕೆಳಗಿನ ಸಮಾಧಾನ ಹುದುಗಿರಬಹುದು: ಕಾವ್ಯದ ಬಿಡಿಭಾಗದಲ್ಲಿ ದೋಷ ಇದ್ದಂತೆ ಕಂಡರೂ ಅಖಂಡ ಕಾವ್ಯದ ದೃಷ್ಟಿಯಿಂದ ಅದು ದೋಷವಾಗದೆ ಇರಬಹುದು; ಹೀಗೆ ಆಗುವುದಕ್ಕೆ ಕವಿಯಲ್ಲಿ ಶಕ್ತಿ ಮತ್ತು ಅವ್ಯುತ್ಪತ್ತಿ ಕೂಡಿರುವುದು ಕಾರಣ.
ಈ ಸಮಾಧಾನ ಅಷ್ಟೊಂದು ಸಮಂಜಸವಾಗುವುದಿಲ್ಲ. ಏಕೆಂದರೆ, ಮೇಲಿನ ಅಭಿಪ್ರಾಯ ಹೊರಡುವ ಕಾಲಕ್ಕೆ ದೋಷದ ಕಲ್ಪನೆಯನ್ನು ಇಡೀ ಕಾವ್ಯಕ್ಕೆ ಅನ್ವಯಿಸಿ ನಿರ್ಣಯಿಸುವ ವಿಚಾರ ಆಲಂಕಾರಿಕರಲ್ಲಿ ಪ್ರತಿಷ್ಠಿತವಾಗಿದೆ. ಇನ್ನೊಂದು ರೀತಿಯಲ್ಲಿ ನೋಡುವುದಾದರೆ ‘ಸಹೃದಯ’ ಎಂಬ ಪದವೇ ಒಂದು ರೀತಿಯ ಸಮಾಧಾನವನ್ನು ಸೂಚಿಸಬಹುದು. ಈ ಪದಕ್ಕೆ ಕವಿಗೆ ಇರುವಂತಹ ಹೃದಯ ಇರುವವನು ಎಂಬುದು ವಾಚ್ಯ ಅರ್ಥ. ಇಬ್ಬರ ಹೃದಯವೂ ಸಮಾನವಾಗಿದ್ದಲ್ಲಿ ಕವಿಗೆ ತನ್ನ ತಪ್ಪು ಕಾಣಿಸದಂತೆ ಸಹೃದಯನಿಗೂ ಕಾಣಿಸದೆ ಇರಬಹುದು. ಆದರೆ, ಸಹೃದಯತೆಯನ್ನು ಇದಕ್ಕೇ ಸೀಮಿತಗೊಳಿಸುವುದಾದರೆ ಅದು ‘ಸರಸ್ವತೀ ತತ್ವ’ದ ನೆಲೆ ಎಂಬ ಮಾತಿಗೆ ಹೆಚ್ಚಿನ ಬೆಲೆ ಉಳಿಯುವುದಿಲ್ಲ, ಅಲ್ಲದೆ, ಅವ್ಯುತ್ಪತ್ತಿಯನ್ನು ಮುಚ್ಚಿಡುವುದು ಪ್ರತಿಭಾತತ್ವದ ದೃಷ್ಟಿ ಸ್ವರೂಪಕ್ಕೆ ತಕ್ಕುದಾದ ಧರ್ಮ ಆಗುವುದಿಲ್ಲ. ಅನೇಕ ಗುಣಗಳ ಮಧ್ಯದಲ್ಲಿ ಒಂದು ದೋಷ ಮುಳುಗಿಹೋಗುತ್ತದೆ’ ಎಂಬ ಮಾತು ಸಾಮಾನ್ಯ ವ್ಯವಹಾರದಲ್ಲಿ ಅರ್ಥವತ್ತಾಗಿ ಕಾಣಿಸಬಹುದು. ಸೂಕ್ಷ್ಮ ವಿಮರ್ಶಕನ ದೃಷ್ಟಿಯಲ್ಲಿ ಈ ಮಾತು ಸಾಧು ಆಗುವುದಿಲ್ಲ. ‘ಮುಚ್ಚುತ್ತದೆ’ ಎಂಬ ಪದ ಆಲಂಕಾರಿಕರ ಇಂಗಿತವನ್ನು ಅವರಿಗೆ ಅರಿವಾಗದಂತೆ ಹೊರಸೂಸುತ್ತದೆ. ಕವಿತೆಯ ಅಂತಃಸತ್ವವಾಗಿ ಉಳಿಯಬೇಕಾದ ಪ್ರತಿಭೆಯನ್ನು ಆವರಣರೂಪವಾಗಿ ಪರಿವರ್ತಿಸುವ ಈ ಪದ. ವರ್ಣನಪ್ರಕಾರಗಳ ಕಡೆಗೆ ಆಲಂಕಾರಿಕರಿಗಿರುವ ಅತಿ ಒಲವನ್ನು ಸೂಚಿಸುತ್ತದೆ.
ಕವಿತೆಯನ್ನು ‘ಸೃಷ್ಟಿ’ ಎಂದು ಪ್ರತಿಪಾದಿಸುವ ಮಾತುಗಳು ಅಲಂಕಾರ ಶಾಸ್ತ್ರದಲ್ಲಿ ಕಂಡುಬರುತ್ತವೆ. ಇವುಗಳ ಪ್ರಕಾರ ಕವಿ ಬ್ರಹ್ಮನಿಗಿಂತಲೂ ಹೆಚ್ಚಿನ ಸೃಷ್ಟಿ ಸಾಮರ್ಥ್ಯ ಇರುವವನು. ‘ಬ್ರಹ್ಮ ಚೇತನವಾಗಿ ಸೃಷ್ಟಿಸಿದುದನ್ನು ಕವಿ ತನ್ನ ಸೃಷ್ಟಿಯಲ್ಲಿ ಅಚೇತನವಾಗಿಸಬಲ್ಲ ; ಅಚೇತನವನ್ನು ಚೇತನವಾಗಿಸಬಲ್ಲ’-ಇಂತಹ ಉದಾಹರಣೆಗಳಿಂದ ಆಲಂಕಾರಿಕರು ಕವಿಸೃಷ್ಟಿಯಲ್ಲಿ ಬ್ರಹ್ಮಸೃಷ್ಟಿಯಲ್ಲಿ ಇಲ್ಲದೆ ಇರುವ ಮಹತ್ವವನ್ನು ಕಾಣಲು ಪ್ರಯತ್ನಿಸುತ್ತಾರೆ.
ಒಂದು ವಸ್ತುವಿನ ಗುಣವನ್ನು ಇನ್ನೊಂದಕ್ಕೆ ಆರೋಪಿಸಿದಲ್ಲಿ ಹೊಸ ವಸ್ತುವನ್ನು ಸೃಷ್ಟಿಸಿದಂತೆ ಆಗುವುದಿಲ್ಲ. ಒಂದು ಹೊಸ ಪಾಕವನ್ನು ಸಿದ್ಧಪಡಿಸಿದಂತೆ ಆಗುತ್ತದೆ. ಪಾಕ ಮತ್ತು ಸೃಷ್ಟಿ ಎಂಬ ಎರಡು ಕಲ್ಪನೆಗಳನ್ನು ಆಲಂಕಾರಿಕರು ವಿವರಿಸುವ ವಿಧಾನವನ್ನು ಪರಿಶೀಲಿಸಿದಲ್ಲಿ ಅವುಗಳೊಳಗೆ ಹೆಚ್ಚಿನ ವ್ಯತ್ಯಾಸ ಇರುವಂತೆ ಕಾಣುವುದಿಲ್ಲ. ಇವರು ಉಪಯೋಗಿಸುವ ವಿಧಾನದಲ್ಲಿ ಕವಿವ್ಯಾಪಾರಕ್ಕೆ ವಿಷಯವಾಗುವ ವಸ್ತು ಅವನ ಬದುಕಿನೊಡನೆ ಒಂದಾಗುವುದಿಲ್ಲ. ಅದು ಅವನ ಬದುಕಿನಿಂದ ದೂರ ಇದು ಅವನ ಸೂಕ್ಷ್ಮದರ್ಶನ ಮತ್ತು ವರ್ಣನಪ್ರಕಾರಗಳಿಗೆ ಒಳಗಾಗಿ ಹೊಸ ರೂಪ ಹೊಂದುತ್ತದೆ.
ಆಲಂಕಾರಿಕರ ಸೃಷ್ಟಿತತ್ವ ಎಷ್ಟು ಸಂಕುಚಿತ ಎಂದು ತಿಳಿಯುವುದಕ್ಕೆ ಅವರಲ್ಲಿ ಅರ್ವಾಚೀನರೂ ಪ್ರತಿಷ್ಠಿತರೂ ಆದವರು ವ್ಯುತ್ಪತ್ತಿಗೆ ಕೊಡುವ ಸ್ಥಾನ ಸಹಾಯ ಮಾಡುತ್ತದೆ. ಇವರ ಪ್ರಕಾರ ವ್ಯುತ್ಪತ್ತಿ ಕೆಲವು ಸಂದರ್ಭಗಳಲ್ಲಿ ಪ್ರತಿಭೆಯೊಡನೆ ಸೇರಿ ಕವಿವ್ಯಾಪಾರವನ್ನು ಉತ್ತಮಗೊಳಿಸಬಹುದು ; ಇನ್ನು ಕೆಲವು ಸಂದರ್ಭಗಳಲ್ಲಿ ಕವಿವ್ಯಾಪಾರವನ್ನು ಕೆಡಿಸಲೂಬಹುದು. ಅಂದರೆ, ವ್ಯುತ್ಪತ್ತಿ ಹೆಚ್ಚಿದಂತೆ ಪ್ರತಿಭೆಯೂ ಹೆಚ್ಚಿದರೆ ಮಾತ್ರ ಕಾವ್ಯ ಉತ್ತಮವಾಗಬಹುದು.
ಈ ರೀತಿಯಲ್ಲಿ ನಿರೂಪಿಸಲಾಗುವ ಪ್ರತಿಭಾತತ್ವ ನಿತ್ಯವಾದುದಲ್ಲ. ಇದು ಪ್ರತಿಭೆಯ ಒಂದು ಆಭಾಸ ಮಾತ್ರ. ವ್ಯತ್ಪತ್ತಿಯನ್ನು ಹೆಚ್ಚಿಸುವುದರಿಂದ ಬರುವ ಸಮಸ್ಯೆಗಳನ್ನು ಇದಿರಿಸದೆ ಪ್ರತಿಭೆ ಸತ್ವಪೂರ್ಣ ಆಗುವುದಿಲ್ಲ. ತನ್ನ ಸ್ಥೂಲ-ಸೂಕ್ಷ ದೃಷ್ಟಿಗಳಿಗೆ ಗೋಚರವಾಗುವ ಪ್ರಪಂಚದ ಇತಿಮಿತಿಗಳನ್ನು ನಿರ್ಧರಿಸಿಕೊಳ್ಳಬೇಕಾದರೆ ವ್ಯತ್ಪತ್ತಿ ಅತ್ಯಾವಶ್ಯಕ. ಹೀಗೆ ಇತಿಮಿತಿಗಳನ್ನು ನಿರ್ಧರಿಸಿಕೊಳ್ಳಲಾಗದ ಪ್ರಪಂಚದ ಅನುಭವ ಎಷ್ಟಿದ್ದರೂ ಅದನ್ನು ಸೃಷ್ಟಿ ಕಾರ್ಯದಲ್ಲಿ ಉಪಯೋಗಿಸಲು ಸಾಧ್ಯವಾಗುವುದಿಲ್ಲ. ಇಷ್ಟು ಉಪಯುಕ್ತವಾಗುವ ವ್ಯತ್ಪತ್ತಿಯಿಂದ ಪ್ರಯೋಜನ ಪಡೆಯದೆ ಮೊಟಕಾಗುವಂತಹ ವಸ್ತು ಪ್ರತಿಭೆ ಎಂದು ಸರಿಯಾದ ಅರ್ಥದಲ್ಲಿ ತನ್ನನ್ನು ಕರೆಸಿಕೊಳ್ಳುವುದಿಲ್ಲ. ಇಂತಹ ಪ್ರತಿಭೆ ಕವಿಗೆ ಗೋಚರಿಸುವ ಪ್ರಪಂಚವನ್ನು ಸೂಕ್ಷ್ಮವಾಗಿ ನೋಡುವ ದೃಷ್ಟಿ ಮಾತ್ರ. ಅವನ ಜೀವನಾನುಭವದ ಕಡೆಗೆ ಹರಿದು ಅದು ತನ್ನ ಸತ್ವವನ್ನು ಹೆಚ್ಚಿಸಿಕೊಳ್ಳುವುದಿಲ್ಲ. ಇನ್ನೊಂದೆಡೆಯಲ್ಲಿ ಅದು ವ್ಯುತ್ಪತ್ತಿಯಿಂದ ಬರಬಹುದಾದ ಲಾಭನಷ್ಟಗಳೆಲ್ಲವನ್ನೂ ತನ್ನದಾಗಿಸಿ ವಿಶೃಂಖಲವಾಗಿ ಬೆಳೆಯುವುದಿಲ್ಲ. ವ್ಯುತ್ಪತ್ತಿಯಿಂದ ಉಂಟಾಗಬಹುದಾದ ನಷ್ಟಕ್ಕೆ ಹೆದರಿ ತನ್ನ ಅಭಿವ್ಯಕ್ತಿಗೆ ಬೇಕಾಗುವಷ್ಟು ವ್ಯತ್ಪತ್ತಿಯನ್ನು ಮಾತ್ರ ಸ್ವೀಕರಿಸುತ್ತದೆ. ಇಂತಹ ನಷ್ಟ ಎಂದರೆ ಸಹೃದಯ ಸಂವಾದಿತ್ವವನ್ನು ಕಳೆದುಕೊಂಡು ಪಾಂಡಿತ್ಯ ಪ್ರದರ್ಶನದ ಕಡೆಗೆ ಒಲಿಯುವಿಕೆ, ಈ ಅಪಾಯವನ್ನು ತಪ್ಪಿಸುವುದಕ್ಕಾಗಿ ವ್ಯತ್ಯಯ ಪ್ರಭಾವವನ್ನು ತಡೆಯುವುದರಿಂದ ಪ್ರತಿಭೆಯ ಚೈತನ್ಯ ಕುಂದುತ್ತದೆ ಎಂಬುದನ್ನು ಆಲಂಕಾರಿಕರು ಪರಿಶೀಲಿಸಿಲ್ಲ.
ಅಲಂಕಾರಶಾಸ್ತ್ರದಲ್ಲಿ ಇನ್ನೊಂದು ರೀತಿಯ ಸೃಷ್ಟಿ ತತ್ವದ ಪ್ರತಿಪಾದನೆ ಇದೆ. ಇದರ ಪ್ರಕಾರ ಕವಿಗಳಲ್ಲಿ ಸ್ಕೂಲವಾಗಿ ಎರಡು ವಿಧ : ೧, ರಾಮಾಯಣ-ಮಹಾಭಾರತಗಳಂತಹ ಉಪಜೀವ್ಯ ಕಾವ್ಯಗಳನ್ನು ರಚಿಸುವವರು. ೨. ಇವುಗಳಿಂದ ಮೂಲ ವಸ್ತುವನ್ನು ತೆಗೆದುಕೊಂಡು ತಮ್ಮದೇ ಆದ ರೀತಿಯಲ್ಲಿ ಉಪಜೀವಿ ಕಾವ್ಯಗಳನ್ನು ರಚಿಸುವವರು. ಮೊದಲನೆಯ ವರ್ಗದವರದು ಮೌಲಿಕ ಸೃಷ್ಟಿ. ಎರಡನೆಯವರದು ಈ ಸೃಷ್ಟಿಯನ್ನು ಅಭಿವೃದ್ಧಿಗೊಳಿಸುವ ರೂಪದ ಸೃಷ್ಟಿ. ಈ ಎರಡನೆಯ ಸೃಷ್ಟಿಯನ್ನು ಪ್ರಬಂಧವಕ್ರತೆ ಮೊದಲಾದ ಹೆಸರುಗಳಿಂದ ತಮ್ಮ ಪ್ರತಿಪಾದನೆಗನುಸಾರವಾಗಿ ಶಾಸ್ತ್ರಕಾರರು ನಿರ್ದೆಶಿಸುತ್ತಾರೆ.
ಎರಡನೆಯ ಸೃಷ್ಟಿಯ ಆವಶ್ಯಕತೆಯ ಕುರಿತು ಆಲಂಕಾರಿಕರು ಪರ್ಯಾಲೋಚಿಸುತ್ತಾರೆ. ಮೌಲಿಕಸೃಷ್ಟಿಯಲ್ಲಿ ರಸಕ್ಕೆ ಅನುಗುಣವಲ್ಲದ ಅಂಶಗಳು ಸೇರಿಕೊಂಡಿರುವುದು ಸಾಧ್ಯ. ಇಂತಹ ಅಂಶಗಳನ್ನು ತೆಗೆದು ರಸಕ್ಕೆ ಅನುಗುಣವಾದ ಅಂಶಗಳನ್ನು ಸೇರಿಸುವುದರಿಂದ ನೂತನ ಕಾವ್ಯದ ಸೃಷ್ಟಿ ಆಗುತ್ತದೆ. (ಉದಾ : ಮಹಾಭಾರತದಲ್ಲಿನ ದುಷ್ಯಂತೋಪಾಖ್ಯಾನ ಮತ್ತು ಕಾಳಿದಾಸನ ಶಾಕುಂತಲ.)
ಇಂತಹ ನೂತನತೆಯನ್ನು ಆಲಂಕಾರಿಕರು ಬಹಳ ಪ್ರಶಂಸಿಸುತ್ತಾರೆ. ರಸವನ್ನು ಕಾವ್ಯದ ಮುಖ್ಯತತ್ವವಾಗಿ ಪ್ರತಿಪಾದಿಸುವ ಗ್ರಂಥಭಾಗಗಳಲ್ಲಿ ಇದರ ಕುರಿತಾದ ಉಲ್ಲೇಖ ಅನೇಕ ಕಡೆ ಬರುತ್ತದೆ. ಕಾಲವು ಮುಂದುವರಿದಂತೆ ಕವಿಗಳಿಗೆ ವಸ್ತು ಮುಗಿದುಹೋಗಿ ಕಾವ್ಯಗಳೆಲ್ಲವೂ ಪುನರುಕ್ಕಿ ಆಗಬಹುದು ಎಂಬ ಪ್ರಾಯೋಗಿಕ ಸಮಸ್ಯೆಗೆ ಆಲಂಕಾರಿಕರ ಸಮಾಧಾನ ಇದು : ಲೌಕಿಕ ವಸ್ತುಗಳ ಪುನರುಕ್ತಿ ಆಗುವುದು ಸಾಧ್ಯ ಇದ್ದರೂ ಕವಿಗಳಲ್ಲಿ ರಸ ಎಂಬ ಅಲೌಕಿಕ ಶಕ್ತಿ ಇರುತ್ತದೆ. ಇದು ಮಂತ್ರಶಕ್ತಿ ಇದ್ದಂತೆ. ಇದರ ಸಹಾಯದಿಂದ ಒಂದೇ ಲೌಕಿಕವಸ್ತುವನ್ನು ಬೇರೆ ಬೇರೆ ರಸಗಳಿಗೆ ಅನುಗುಣವಾಗಿ ಅನೇಕ ರೀತಿಯಲ್ಲಿ ಚಿತ್ರಿಸಬಹುದು. ಇದರಿಂದಲಾಗಿ ಕಾಲ ಎಷ್ಟು ಮುಂದುವರಿದರೂ ಕಾವ್ಯವನ್ನು ಮುಗಿದುಹೋಗುವ ಭಯಕ್ಕೆ ಅವಕಾಶ ಇಲ್ಲ.
ಇದರ ಜೊತೆಗೇ ಇನ್ನೊಂದು ರೀತಿಯ ಸಮಾಧಾನವನ್ನು ಶಾಸ್ತ್ರಕಾರರು ಕೊಡುತ್ತಾರೆ: ಲೌಕಿಕ ವಸ್ತು ಮುಗಿದುಹೋಗುತ್ತದೆ ಎಂದು ಭಯಪಡಬೇಕಾಗಿಲ್ಲ. ದೇಶ – ಕಾಲಗಳ ಭೇದದಿಂದಲಾಗಿ ಲೌಕಿಕ ವಸ್ತು ಅನಂತ. ಇದಕ್ಕೆ ರಸಪ್ರಕಾರಗಳಿಂದ ಉಂಟಾಗುವ ಅನಂತತೆಯನ್ನು ಸೇರಿಸಿ ಕಲ್ಪಿಸಿಕೊಂಡರೆ ವಸ್ತುವನ್ನು ಮುಗಿಸಬೇಕೆಂದು. ಕವಿಗಳು ಪಣತೊಟ್ಟರೂ ಮುಗಿಸಲು ಸಾಧ್ಯ ಇಲ್ಲ. ಈ ಪ್ರತಿಪಾದನೆ ತಾತ್ವಿಕವಾಗಿ ಬಹಳ ಮೌಲಿಕ ಮತ್ತು ತಲಸ್ಪರ್ಶಿ. ಪ್ರಾರಂಭದಲ್ಲಿ ಸೂಚಿಸಲಾದ ನಾಲ್ಕು ವಿಶ್ಲೇಷಣಾ ಮಾರ್ಗಗಳಲ್ಲಿ, ಉಕ್ತಿತತ್ವದ ಮಾರ್ಗ ಅಲಂಕಾರ ಶಾಸ್ತ್ರದಲ್ಲಿ ಇತರ ಎಲ್ಲಾ ಕಲ್ಪನೆಗಳನ್ನೂ ನುಂಗುವಷ್ಟು ವಿಶಾಲ. ಈ ಕಲ್ಪನೆಯ ಒಂದು ಮುಖ ಕಾವ್ಯ ಪ್ರಪಂಚವನ್ನು ಸಮಗ್ರವಾಗಿ ವಕ್ರರೂಪದ ಉಕ್ತಿ ಎಂದು ಪ್ರತಿಪಾದಿಸುತ್ತದೆ. ಇನ್ನೊಂದು ಮುಖ ಕಾವ್ಯವನ್ನು ಬೇರೆ ಬೇರೆ ರೀತಿ ಉಕ್ತಿಗಳಾಗಿ ವಿಶ್ಲೇಷಿಸಿ ನೋಡುತ್ತದೆ. ಎರಡೂ ಮುಖಗಳಲ್ಲಿ ಇದು ವಸ್ತುವನ್ನು ಮರೆತು ಅಭಿವ್ಯಕ್ತಿಯ ಕಡೆಗೆ ಅತಿಯಾದ ಒಲವನ್ನು ತೋರಿಸುವ ಮಾರ್ಗ.
ಈ ಮಾರ್ಗಕ್ಕಿಂತಲೂ ಹೆಚ್ಚು ವಸ್ತು ಅಪ್ರಧಾನವಾಗುವುದು ಕಾವ್ಯವನ್ನು ವೇದಪುರಾಣಗಳಿಂದ ಅಲಂಕಾರಿಕರು ಪ್ರತ್ಯೇಕಿಸುವ ವಿಧಾನದಲ್ಲಿ ಕಾವ್ಯದ ವಸ್ತು ಮೂಲ ಸ್ಥಿತಿಯಲ್ಲಿ ನೂತನ ಅಲ್ಲ ಎಂಬುದನ್ನು ಈ ವಿಧಾನ ಸ್ಪಷ್ಟವಾಗಿ ಸಾರುತ್ತದೆ.
ದರ್ಶನ-ವರ್ಣನಗಳ ಕುರಿತು ಆಲಂಕಾರಿಕರು ಹೇಳುವ ಮಾತುಗಳು ವಸ್ತುವಿನ ಕಡೆಗೆ ಮೇಲಿನ ಎರಡು ಮಾರ್ಗಗಳು ಕೊಡುವುದಕ್ಕಿಂತ ಹೆಚ್ಚು ಲಕ್ಷ ಕೊಡುತ್ತದೆ. ಇಲ್ಲಿ ಕಾವ್ಯವಸ್ತು ಎಂದರೆ ಲೌಕಿಕ ವಸ್ತುವಿನ ಗುಣವಿಶೇಷಗಳು. ಈ ಮಾರ್ಗ ಹಿಂದಿನ ಮಾರ್ಗಗಳಿಗಿಂತ ಮುಂದುವರಿದರೂ ಸಾಕಷ್ಟು ಮುಂದುವರಿಯುವುದಿಲ್ಲ. ಗುಣವಿಶೇಷಗಳನ್ನು ಕಂಡಮಾತ್ರಕ್ಕೆ ಕವಿತೆಯ ಉದಯವಾಗುವುದಿಲ್ಲ; ಅದನ್ನು ಸುಂದರವಾದ ರೀತಿಯಲ್ಲಿ ಹೇಳುವುದೇ ಕಾವ್ಯ ಎಂಬುದು ಈ ಮಾರ್ಗದ ಪ್ರತಿಪಾದನೆಯ ಸಾರ. ಇದು ಕಾವ್ಯಕ್ಕಿರುವ ಸ್ಥೂಲ-ಸೂಕ್ಷ್ಮಸ್ತರಗಳ ಪೈಕಿ ಅನಂತರದ್ದನ್ನು ನಿರ್ಲಕ್ಷಿಸುತ್ತದೆ ಸೂಕ್ಷ್ಮ ಸ್ತರಗಳಲ್ಲಿ ಕಾವ್ಯವನ್ನು ಗುರುತಿಸುವುದು ವಿಮರ್ಶಕನಿಗೆ ಸಾಧ್ಯವಾಗಬೇಕು. ಹೀಗೆ ಸಾಧ್ಯವಾದಲ್ಲಿ ಸುಂದರವಾದ ರೀತಿಯಲ್ಲಿ ಅಭಿವ್ಯಕ್ತವಾಗುವ ಅನುಭವವನ್ನು ಮಾತ್ರ ಕಾವ್ಯವೆಂದು ಪರಿಗಣಿಸಿದರೆ ಸಾಲದು, ಪರಿಪೂರ್ಣ ಸ್ಥಿತಿಯಲ್ಲಿ ಅಭಿವ್ಯಕ್ತವಾಗುವ ಕಾವ್ಯ ಉಂಟಾಗುವುದಕ್ಕೆ ಕಾವ್ಯವಸ್ತು ಕವಿಗೆ ಗೋಚರವಾಗುವುದರಿಂದ ಮೊದಲಾಗಿ ಅನೇಕ ಸೂಕ್ಷ್ಮಸ್ತರಗಳ ಹಿನ್ನೆಲೆ ಆವಶ್ಯಕ ಇಂತಹ ಸೂಕ್ಷ್ಮಸ್ತರಗಳನ್ನು ವಿವೇಚಿಸದಿರುವುದರಿಂದಲಾಗಿ ಈ ಮೂರನೆಯ ಮಾರ್ಗ ಹಿಂದಿನ ಮಾರ್ಗಗಳಿಂದ ಮುಂದಕ್ಕೆ ಹೋದರೂ ಸಾಕಷ್ಟು ಮುಂದುವರಿಯದೆ ಉಳಿಯುತ್ತದೆ.
ಆಲಂಕಾರಿಕರು ಪ್ರತಿಪಾದಿಸುವ ಸೃಷ್ಟಿ ತತ್ವ ತಾತ್ವಿಕವಾಗಿ ಇರುವಷ್ಟು ವಿಶಾಲವಾಗಿ ಪ್ರಾಯೋಗಿಕ ಸ್ಥಿತಿಯಲ್ಲಿ ಉಳಿಯುವುದಿಲ್ಲ. ತಾತ್ವಿಕವಾಗಿ, ದೇಶ-ಕಾಲಗಳ ಭೇದಗಳಿಂದಲಾಗಿ ಕಾಣಬಹುದಾದ ಎಲ್ಲಾ ಲೌಕಿಕ ವೈವಿಧ್ಯವನ್ನೂ ಕವಿಯಾದವನು ಅರಗಿಸಿ ತನ್ನ ಅನುಭವವನ್ನಾಗಿ ಮಾಡಿಕೊಳ್ಳಬೇಕು. ‘ಕಾವ್ಯಾಂಗವಾಗದ ವಸ್ತುವೇ ಲೋಕದಲ್ಲಿ ಇಲ್ಲ ಕವಿಗಳ ಭಾರ ಎಷ್ಟು ದೊಡ್ಡದು !” ಎಂದು ಉದ್ಧರಿಸುವ ಶಾಸ್ತ್ರಕಾರರು ಕ್ರಮೇಣ ‘ರಸಗಳಿಗೆ ಅನುಗುಣವಾಗುವಂತೆ ವಸ್ತುವನ್ನು ಅಳವಡಿಸಿಕೊಂಡರೆ ಸಾಕು’ ಎಂಬ ಅಭಿಪ್ರಾಯಕ್ಕೆ ತಲಪುತ್ತಾರೆ, ಲಕ್ಷ್ಯಗ್ರಂಥಕಾರರು ಇಷ್ಟನ್ನೇ ವಸ್ತುವಿನ ಕುರಿತಾದ ಸಾರಾಂಶ ಎಂಬಂತೆ ಗ್ರಹಿಸಿ ಕಾವ್ಯ ರಚನೆ ಮಾಡುತ್ತಾರೆ. ವರ್ಣನತತ್ವವನ್ನೂ ಬಹಳ ಸ್ಥೂಲ ಅರ್ಥದಲ್ಲಿ ಗ್ರಹಿಸಿ ಒಂದೇ ವಸ್ತುವನ್ನು ಬೇರೆ ಬೇರೆ ಪ್ರಕಾರಗಳಲ್ಲಿ ಚಿತ್ರಿಸುವುದನ್ನೇ ತಮ್ಮ ಗುರಿಯಾಗಿ ಇಟ್ಟುಕೊಳ್ಳುತ್ತಾರೆ. ಇಂತಹ ಚಿತ್ರಣಕ್ಕೆ ರಸ ಮತ್ತು ಔಚಿತ್ಯ ಎಂಬ ಕಲ್ಪನೆಗಳು ನಿಯಾಮಕವಾಗುತ್ತವೆ. ಈ ಕಲ್ಪನೆಗಳಲ್ಲಿ ಯಾವುದೂ ವಸ್ತುವಿನ ಸೃಷ್ಟಿಯನ್ನು ವರ್ಣನ ಪ್ರಕಾರದ ಸೃಷ್ಟಿಯಷ್ಟು ಅವಧರಿಸುವುದಿಲ್ಲ. ಆದುದರಿಂದ ಕಾವ್ಯ ಎಂಬುದಕ್ಕೆ ವರ್ಣನಪ್ರಕಾರ ಎಂದಷ್ಟೇ ಅರ್ಥ ಪ್ರಾಯೋಗಿಕವಾಗಿ ಉಳಿಯುತ್ತದೆ.
ಕಾಲದ ಬಿಡುಗಡೆ | ಜೆ. ಕೃಷ್ಣಮೂರ್ತಿ
ನಮ್ಮ ಬದುಕಿನ ಹೆಚ್ಚು ಭಾಗವೆಲ್ಲ ‘ಕಾಲ’ದಲ್ಲೇ ಕಳೆದು ಹೋಗುತ್ತದೆ. ಈ ಅರಿವನ್ನು ಪಡೆದುಕೊಳ್ಳುವುದು ಎಷ್ಟು ಕುತೂಹಲಕಾರಿ. ಇಲ್ಲಿ ಕಾಲ ಎಂದರೆ, ನಿಮಿಷ ಗಂಟೆ ದಿನ ವರ್ಷ ಎಂದು ಲೆಕ್ಕಹಾಕುವ ಕ್ರಮಪ್ರಾಪ್ತಿಯುಳ್ಳ ಕಾಲದ ಮಾತಲ್ಲ; ಮಾನಸಿಕವಾದ ಕಾಲದ ನೆನಪುಗಳಿಂದ ಭಾಸವಾಗುವ ‘ಕಾಲ’ದ ಮಾತು. ಕಾಲದಲ್ಲಿ ಎರಡು ಬಗೆ. ಒಂದು ಕ್ರಮಪ್ರಾಪ್ತಿಯುಳ್ಳ ಕಾಲ, ಇನ್ನೊಂದು ಮಾನಸಿಕವಾದ ಕಾಲ, ಗಡಿಯಾರ ಸೂಚಿಸುವಂಥ ಕ್ರಮಪ್ರಾಪ್ತಿಯುಳ್ಳ ಕಾಲವನ್ನು ನೀವು ತಿರಸ್ಕರಿಸಲಾರಿರಿ. ಅದರಿಂದ ರೈಲು ತಪ್ಪಿಹೋದೀತು. ಅದು ಅಸಂಬದ್ಧ, ಆದರೆ ಮಾನಸಿಕವಾದ ಕಾಲ ಎಂಥದು ಎಂಬುದರ ಅರಿವು ಮೂಡುವುದರಿಂದ ಮತ್ತು ಆ ಅರಿವಿನಿಂದ ಅಂಥ ಕಾಲದ ಕಟ್ಟು ಕಳಚಿಹೋಗುವುದರಿಂದ ಮಾತ್ರವೇ ನಿಜವಾಗಿಯೂ ಅರ್ಥವತ್ತಾದ ಬದುಕು ಸಾಧ್ಯವಾಗುತ್ತದೆ.
ಆಕಾಶದಲ್ಲಿ ಕಪ್ಪು ಮೋಡಗಳ ಚೆಲ್ಲಿನ ಮಧ್ಯೆ ಉಜ್ವಲ ತುಣುಕುಗಳನ್ನು ನೋಡುತ್ತ ನಿತ್ತಾಗ, ಅಂಥ ತಲ್ಲೀನತೆಯಲ್ಲಿ ‘ಕಾಲ’ವಿಲ್ಲ; ಅಲ್ಲಿರುವುದು ಕೇವಲ ಸಾಕ್ಷಾತ್ ವರ್ತಮಾನ – ಈ ವರ್ತಮಾನವನ್ನು ಅನುಭವಿಸಿ ಹೊರಬಂದ ಮನಸ್ಸು ಅದನ್ನು ಮತ್ತೆ ನೆನಪಿಸಿಕೊಳ್ಳುತ್ತದೆ. ಅದೇ ಸ್ಥಿತಿ ಮುಂದುವರಿದರೆ ಎಷ್ಟು ಚೆನ್ನ ಎಂದು ಹಂಬಲಿಸತೊಡಗುತ್ತದೆ. ಅದನ್ನು ಸಂಗ್ರಹಿಸಿಕೊಳ್ಳಲು ತಹತಹಿಸುತ್ತದೆ. ಈ ಮೂಲಕ ‘ಕಾಲ’ವನ್ನು ಕಲ್ಪಿಸುತ್ತದೆ. ಹೀಗೆ ‘ಕಾಲ’ವೆಂಬುದು ಆಸೆಯಿಂದ ಹುಟ್ಟಿಕೊಂಡದ್ದು, ಸಂಗ್ರಹದ ಕಾಂಕ್ಷೆಯಿಂದ ಹುಟ್ಟಿಕೊಂಡದ್ದು, ವಾಸ್ತವದ ವಿಚ್ಛೇದದಿಂದ ಮೂಡಿಕೊಂಡದ್ದು.
ನಾವು ಪರಿವರ್ತನಗೊಳ್ಳುವುದಕ್ಕೆ, ಕ್ರಾಂತಿ ಸಂಭವಿಸುವುದಕ್ಕೆ ಈ ‘ಕಾಲ’ವನ್ನೇ ಆಶ್ರಯಿಸಿ ಹೋಗುತ್ತೇವೆ. ನಾನು ದುಷ್ಟನಾಗಿದ್ದೇನೆ ಆಸೆಬುರುಕನಾಗಿದ್ದೇನೆ, ಇದರಿಂದ ವ್ಯಾಕುಲ ಹುಟ್ಟಿ ಕೊಂಡಿದೆ : ಕ್ರಮಕ್ರಮವಾಗಿ ಇದು ಬಿಟ್ಟು ನಾನು ಸುಭಗನಾಗುತ್ತ ಹೋಗಬೇಕು. ತೃಪ್ತನಾಗುತ್ತ ಹೋಗಬೇಕು. ಹೀಗೆ ಪರಿವರ್ತನೆಗೊಳ್ಳುವುದು ಕಾಲದಲ್ಲೇ ಎಂದು ನಮ್ಮ ಭಾವನೆ. ನಾವು ಪರಿವರ್ತನಗೊಳ್ಳಬೇಕು ಎಂದು ಹಂಬಲಿಸುವುದಾದರೂ ಯಾತಕ್ಕೆ? ಇಲ್ಲಿ ಘರ್ಷಣೆಯುಂಟು ಸುಖವಿಲ್ಲ ಎಂಬುವುದಕ್ಕಾಗಿ, ಅಲ್ಲವೆ ? ಆದರೆ-ಇದು, ಈಗ ಇರುವುದು ಸರಿಯಲ್ಲ ಇನ್ನೊಂದು ಏನೋ ಆಗಬೇಕು ಎಂದು ಭಾವಿಸುವುದರಲ್ಲೇ, ಇರುವ ಸ್ಥಿತಿಗೂ ಅದು ಆಗಬೇಕೆಂದು ಹಂಬಲಿಸುವ ಇನ್ನೊಂದು ಸ್ಥಿತಿಗೂ ನಡುವೆ ನಾವೇ ಘರ್ಷಣೆ ಕಲ್ಪಿಸಿಕೊಂಡಂತಾಗಲಿಲ್ಲವೆ? ಘರ್ಷಣೆಯನ್ನು ಜೀವಂತವಾಗಿ ಸಾಗಿಸಿಕೊಂಡು ಹೋಗುವ ಈ ಕಾಲದ ದಾರಿಯಲ್ಲೇ ನಡೆದು, ಘರ್ಷಣೆಯಿಲ್ಲದ ನೆಲೆ ತಲುಪಲಾದೀತೆ ?
ನಾನು ಲಂಡನ್ ಮತ್ತು ಪ್ಯಾರಿಸ್ಗಳನ್ನು ನೋಡಲು ಇಳಿಯಲಿಲ್ಲ
ನಾನು ಲಂಡನ್ ಮತ್ತು ಪ್ಯಾರಿಸ್ಗಳನ್ನು
ನೋಡಲು ಇಳಿಯಲಿಲ್ಲ
-ಜಾಗೋ
ಪ್ರಪಂಚದ ನಗರಗಳಲ್ಲೆಲ್ಲ ಲಂಡನ್ ಮತ್ತು ಪ್ಯಾರಿಸ್ ಇವುಗಳನ್ನು ನನ್ನ ಜೀವಮಾನದಲ್ಲಿ ಒಮ್ಮೆಯಾದರೂ ನೋಡಬೇಕೆಂಬ ಅಭಿಲಾಷೆ ಮೊದಲಿನಿಂದಲೂ ನನ್ನಲ್ಲಿ ತೀವ್ರವಾಗಿ ಇದ್ದಿತು, ಮತ್ತು ಈಗ ಅವೆರಡೂ ನಗರಗಳನ್ನು ನನ್ನ ನ್ಯೂಯಾರ್ಕ್ – ಮುಂಬೈ ಉಡ್ಯಾಣದ ನಡುವೆ ಅನಾಯಾಸವಾಗಿ, ವಿಶೇಷ ಹೆಚ್ಚಿನ ಖರ್ಚಿಲ್ಲದೆ ನೋಡಲು ಇಳಿಯುವ ಸಾಧ್ಯತೆ ಮತ್ತು ಸೌಲಭ್ಯ ನನಗೆ ಒದಗಿ ಬಂದಿದ್ದವು. ಆದರೂ ನಾನು ಆ ನಗರಗಳನ್ನು ನೋಡಲು ನನ್ನ ವಿಮಾನದಿಂದ-ನನ್ನ ಎತ್ತರದಿಂದ ಕೆಳಗಿಳಿಯಲಿಲ್ಲ. ಈ ನಿಶ್ಚಯವನ್ನು ಕೈಗೊಳ್ಳುವುದು ನನಗೆ ತುಂಬ ಕಠಿಣವಾಗಿತ್ತು. ಆದರೂ ನಾನು ಆ ನಿಶ್ಚಯವನ್ನು ಕೈಕೊಂಡೆ, ಆ ನಿರ್ಧಾರವನ್ನು ಮಾಡಿದೆ. ಹೌದು, ಈ ನಿಶ್ಚಯವನ್ನು ಕೈಕೊಳ್ಳುವುದು ನನಗೆ ನಿಜವಾಗಿಯೂ ತುಂಬ ಕಠಿಣವಾಗಿತ್ತು-ಸಾರ್ತ್ರನಿಗೆ ನೋಬೆಲ್ ಪಾರಿತೋಷಕವನ್ನು ತಿರಸ್ಕರಿಸುವುದು ತುಂಬ ಕಠಿಣವಾಗಿದ್ದಂತೆ. ಆದರೆ ಅವನು ನೋಬೆಲ್ ಪಾರಿತೋಷಕವನ್ನು ತಿರಸ್ಕರಿಸುವುದು ಎಷ್ಟು ಮಹತ್ವದ್ದಾಗಿತ್ತೊ ಅಷ್ಟೇ ನನಗೆ ಲಂಡನ್ ಮತ್ತು ಪ್ಯಾರಿಸ್‌ಗಳನ್ನು ತಿರಸ್ಕರಿಸುವುದು ಮಹತ್ವದ್ದಾಗಿತ್ತು.
“ಲಂಡನ್ ಮತ್ತು ಪ್ಯಾರಿಸ್‌ಗಳನ್ನು ತಿರಸ್ಕರಿಸುವುದು ? ಇದೆಂಥ ಮೂರ್ಖ ವಿಚಾರ! ಪಾಪ, ಆ ನಗರಗಳೇನು ಅಂಥ ಅಪರಾಧಗೈದಿವೆ ? ನಗರಗಳು, ಊರುಗಳು ಮತ್ತು ಹಳ್ಳಿಗಳು ಎಲ್ಲಿಯಾದರೂ ತಪ್ಪುಮಾಡುವುದುಂಟೇ ? ತಪ್ಪಿತಸ್ಥರೆಂದೆನಿಸುವುದುಂಟೇ ? ಇದಂಥ ಮೂರ್ಖ ಕಲ್ಪನೆ ? ಕಲ್ಲು-ಮಣ್ಣು-ಕಾಂಕ್ರೀಟುಗಳ ಕಟ್ಟಡಗಳಿರುವಂಥ, ರಸ್ತೆಗಳಿರುವಂಥ ಪಟ್ಟಣಗಳು ತಪ್ಪುಮಾಡುವುದೆಂದರೇನು? ಹಾಗೆ ತಿಳಿಯುವುದೆಂದರೆ ತಾನು ಎಡವಿದ ಕಲ್ಲಿಗೆ ಸಿಟ್ಟಿನಿಂದ ಮತ್ತೊಮ್ಮೆ ಒದ್ದು ತನ್ನ ಕಾಲನ್ನು ಮತ್ತಷ್ಟು ನೋವು ಮಾಡಿಕೊಂಡಷ್ಟೇ ಮೂರ್ಖತನವಾಗುವುದಿಲ್ಲವೇ?” ಎಂದು ನೀವು ಕೇಳಬಹುದು. ನಾನೂ ಹಾಗೆ ನನ್ನನ್ನು ಕೇಳಿಕೊಂಡಿದ್ದೇನೆ. ಹಾಗೆ ಕೇಳಿಕೊಂಡಾಗ ನನಗೆ ಕೆಲವು ಉತ್ತರಗಳು ಸಿಕ್ಕಿವೆ. ಆ ಉತ್ತರಗಳನ್ನು ಮತ್ತು ಅವುಗಳಿಗೆ ಸಂಬಂಧಿಸಿದ ಕೆಲ ವಿಷಯಗಳನ್ನು ನಿಮ್ಮ ಮುಂದಿಡುವುದೇ ಇಲ್ಲಿ ನನ್ನ ಉದ್ದೇಶವಾಗಿದೆ. ಹೌದು, ಒಂದು ದೃಷ್ಟಿಯಲ್ಲಿ ಊರುಗಳು ಮತ್ತು ಪಟ್ಟಣಗಳು ಕೇವಲ ಜಡವಸ್ತುಗಳು ಎನ್ನುವುದು ನಿಜ-ವಾಹನಗಳಲ್ಲಿ ಚಲಿಸುವ ಮತ್ತು ವಿದ್ಯುದ್ದೀಪಗಳಲ್ಲಿ ಝಗಝಗಿಸುವ ಜಡವಸ್ತುಗಳು. ಆದರೂ ಈ ಜಡರೂಪವೇ ನಗರಗಳ ನಿಜವಾದ ಸ್ವರೂಪವೆಂದು ಹೇಳಲಾಗುವುದಿಲ್ಲ-ಹೇಗೆ ಇಂತಿಷ್ಟು ಲಕ್ಷ ರೂಪಾಯಿಗಳೇ, ಅಥವಾ ಇಂತಿಷ್ಟು ಭಾರವಾದ ಚಿನ್ನದ ಪದಕವೇ ನೋಬೆಲ್ ಪಾರಿತೋಷಕ ಎಂದು ಹೇಳಲಾಗುವುದಿಲ್ಲವೋ ಹಾಗೆ. ಸ್ಥೂಲವಾಗಿ ನೋಡಿದರೆ “ನಗರಗಳು” ಮತ್ತು “ಪಾರಿತೋಷಕ” ಇವೆರಡೂ ಜಡವಸ್ತುಗಳೇ. ಆದರೆ ಅದೇ ಸೂಕ್ಷ್ಮವಾಗಿ ಪರಿಶೀಲಿಸಿದರೆ-ವಿಚಾರಮಾಡಿದರೆ ಎರಡೂ ಜಡವಸ್ತುಗಳಲ್ಲ. ಎರಡೂ ಪ್ರಾತಿನಿಧಿಕ ವಸ್ತುಗಳು-ಪ್ರತೀಕಗಳು, ಯಾವುದರ ಪ್ರತೀಕಗಳು ನಗರಗಳು ಆಗಿರುತ್ತವೆಯೋ ಮತ್ತು ಯಾವುದರ ಪ್ರತೀಕಗಳು ಅಥವಾ ಪ್ರತಿನಿಧಿಗಳು ಲಂಡನ್ ಮತ್ತು ಪ್ಯಾರಿಸ್ ಈ ಮಹಾ ನಗರಗಳು ಆಗಿವೆಯೋ-ಐತಿಹಾಸಿಕವಾಗಿ, ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಆಗಿವೆಯೋ-ಅದನ್ನು ಚರ್ಚಿಸುವುದು ಮತ್ತು ಕೆಲಮಟ್ಟಿಗೆ ಖಂಡಿಸುವುದು ಈ ಲೇಖನದ ಉದ್ದೇಶ.
ಲಂಡನ್ ಮತ್ತು ಪ್ಯಾರಿಸ್ ಇವೆರಡೂ ಮಹಾ ನಗರಗಳು ಈ ಮಾನವ ಪ್ರಪಂಚದಲ್ಲಿ ಸದ್ಯ ”ಅಗ್ರೇಸರರು” ಎಂದು ಕರೆಯಿಸಿಕೊಳ್ಳುವ (ಅಥವಾ ಕರೆದುಕೊಳ್ಳುವ ) ಪಾಶ್ಚಿಮಾತ್ಯ ಬಿಳಿಜನರ ಸಂಸ್ಕೃತಿಯ ಎರಡು ಅತಿ ಮಹತ್ವದ ಕೇಂದ್ರಗಳು. ಈ ಎರಡೂ ನಗರಗಳು ಹೆಚ್ಚು ಕಡಿಮೆ ಸಮ-ಸಮಾನವಾದ ಐತಿಹಾಸಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪಡೆದಂಥವು. ರೋಮ್ ನಗರದಷ್ಟು ಪ್ರಾಚೀನವಾಗಿರದಿದ್ದರೂ ಸಾಕಷ್ಟು ಪ್ರಾಚೀನತೆ ಮತ್ತು ಇತಿಹಾಸಗಳನ್ನುಳ್ಳವುಗಳು. ಪ್ಯಾರಿಸ್ ಅಂತೂ ಇವತ್ತಿಗೂ ಕೂಡ ಇಡೀ ಜಗತ್ತಿನ ಸಾಂಸ್ಕೃತಿಕ (ಕಲೆ, ಸಾಹಿತ್ಯ, ಸೌಂದರ್ಯ, ಫ್ಯಾಶನ್ನು ಹಾಗೂ ಇತರ ಸಾಂಸ್ಕೃತಿಕ ವಿಷಯಗಳು) ರಾಜಧಾನಿ ಎಂದು ಕರೆಯಿಸಿಕೊಳ್ಳುವಂಥದು. ಲಂಡನ್ ಕೂಡ ಏನು ಕಡಿಮೆಯ ನಗರವಲ್ಲ. ಐತಿಹಾಸಿಕವಾಗಿ ಮತ್ತು ರಾಜಕೀಯವಾಗಿ ಹಲವು ನೂರು ವರುಷಗಳಿಂದ ಅಂತರಾಷ್ಟ್ರೀಯ ರಾಜಧಾನಿ ಎಂದು ಮೆರೆದ ನಗರ. ಸಂಸ್ಕೃತಿಯಲ್ಲಿ ಕೂಡ ಹಿಂದುಳಿದದ್ದಲ್ಲ.
ಅನೇಕ ವಿಶ್ವವಿಖ್ಯಾತ ಕವಿಗಳ, ಸಾಹಿತಿಗಳ, ವಿಜ್ಞಾನಿಗಳ, ತತ್ವಜ್ಞಾನಿಗಳ, ರಾಜಕಾರಣಿಗಳ, ಬುದ್ಧಿಜೀವಿಗಳ ಮತ್ತು ಕಲಾವಿದರ ಕಾರ್ಯಕ್ಷೇತ್ರವಾಗಿದ್ದ ಮತ್ತು ಇನ್ನೂ ಆಗಿರುವ ಸ್ಥಳ. ವಿಶ್ವಕವಿ ಶೇಕ್ಸಪಿಯರ್ ಇಲ್ಲಿಯೇ ತನ್ನ ಅನೇಕ ಪ್ರಸಿದ್ದ ನಾಟಕಗಳನ್ನು ಬರೆದಿದ್ದ ಮತ್ತು ಆಡಿದ್ದ, ಮತ್ತು ಮಿಲ್ಟನ್ ಮಹಾಕವಿ ಹುಟ್ಟಿದ್ದು ಮತ್ತು ಬೆಳೆದದ್ದು ಇದೇ ಲಂಡನ್ನಿನ ಒಂದು ಬಡ ಇಲಾಖೆ (Bread street, Cheap side.) ಯಲ್ಲಿ. ಅವನು ತನ್ನ ಮಹಾಕಾವ್ಯ “Paradise Lost”ನ್ನು ಬರೆದದ್ದೂ ಇದೇ ಲಂಡನ್ನಿನಲ್ಲಿ. ಷೆಲ್ಲಿ, ಕೀಟ್ಸ್, ವರ್ಡ್ಸ್‌ವರ್ಥರುಗಳಿಂದ ಹಿಡಿದು ಪೌಂಡ್, ಎಲಿಯಟ್ಟರವರೆಗಿನ ಮಹಾ-ಮಹಾ ಕವಿಗಳೂ ಇಲ್ಲಿಯೇ ತಮ್ಮ ಅನೇಕ ಮಹತ್ವದ ಕಾವ್ಯಗಳನ್ನು ರಚಿಸಿದ್ದರು ಮತ್ತು ಅವುಗಳನ್ನು ಸ್ಫೂರ್ತಿಸಿದ ಅನುಭವಗಳನ್ನು ಪಡೆದಿದ್ದರು. ಇಲ್ಲಿಯೇ-ಇಲ್ಲಿಯ ರಾಜರುಗಳ ಪಾರ್ಲಿಮೆಂಟಿನಲ್ಲಿಯೇ – ಆಧುನಿಕ ಜಗತ್ತಿನ ಪ್ರಜಾತಂತ್ರವು ಮೊದಲು ಮೈದಾಳಿ ಬೆಳೆದು, ಫ್ರಾನ್ಸ್, ಅಮೇರಿಕೆ, ಭಾರತ ಮುಂತಾದ ಪ್ರಪಂಚದ ಇನ್ನಿತರ ದೇಶಗಳಿಗೆ ಹಬ್ಬಿತ್ತು. ಇಲ್ಲಿಯೇ ‘ಎಂದೆಂದೂ ಸೂರ್ಯನು ಅಸ್ತಂಗತನಾಗದ’ ವಿಶ್ವವ್ಯಾಪೀ ಬ್ರಿಟಿಶ್ ಸಾಮ್ರಾಜ್ಯ ಮೈದಾಳಿ ಪ್ರಪಂಚದ ಮೂಲೆ-ಮೂಲೆಗೂ ಪಸರಿಸಿತ್ತು; ಮತ್ತು ಇಲ್ಲಿಯೇ ಕೊನೆಗೆ ತನ್ನ ಅಸ್ತಂಗತಿಯನ್ನು ಕಂಡಿತ್ತು. ಇಲ್ಲಿಯೇ ಲಾಕ್, ಮಿಲ್ ಮತ್ತು ಬೆಂಥ್ಯಾಮರು ತಮ್ಮ ವ್ಯಕ್ತಿ-ಸ್ವಾತಂತ್ರವಾದೀ ಪ್ರಜಾಪ್ರಭುತ್ವದ ತತ್ವಗಳನ್ನು ಮೊದಲು ಬೋಧಿಸಿದ್ದರು. ಇಲ್ಲಿಯೇ ಕಾರ್ಲ ಮಾರ್ಕ್ಸನು ತನ್ನ “ Das Capital” ಗ್ರಂಥವನ್ನು ಪ್ರಸಿದ್ಧಿಸಿ ಅಂತರಾಷ್ಟ್ರೀಯ ಕಮೂನಿಸಮ್ಮಿನ ಬುನಾದಿಯನ್ನು ಹಾಕಿದ್ದ. ಇಲ್ಲಿಯೇ ಲೋಕಮಾನ್ಯ ಟಳಕರು ತಮ್ಮ ‘ಬಾಂಬ್ ಖಟ್ಟೆ’ಯನ್ನು ನಡೆಸಿ ಭಾರತದ ರಾಜ್ಯ ಕ್ರಾಂತಿಯ “ಶ್ರೀಗಣೇಶ’ವನ್ನು ಬರೆದಿದ್ದರು. ಹೀಗಿದೆ ಈ ಎರಡು ನಗರಗಳ ಕತೆ (ಇಲ್ಲಿ ದಿ. ಚಾರ್ಲ್ಸ್ ಡಿಕೆನ್ಸನ ಕ್ಷಮೆ ಕೋರುತ್ತೇನೆ) ಮಹಾತ್ಮೆ. ಆದರೆ ಈ ಉಭಯ ನಗರಗಳಿಗೆ ಇಷ್ಟೆಲ್ಲ ಮಹತ್ವದ ಇತಿಹಾಸವಿದ್ದರೂ, ಅಲ್ಲಲ್ಲ, ಇದ್ದುದರಿಂದಲೇ ನಾನು ಅವನ್ನು ನೋಡಲು ವಿಮಾನದಿಂದ ಕೆಳಗಿಳಿದು ಹೋಗಬಾರದು ಎಂದು ನಿಶ್ಚೈಸಿದೆ.
ಈ ನನ್ನ ಹುಚ್ಚು ನಿರ್ಧಾರದಿಂದ ಅವೆರಡೂ ಮಹಾನಗರಗಳಿಗೆ-ಪ್ರಚಂಡವಾದ ಇತಿಹಾಸ ಮತ್ತು ಪರಂಪರೆಗಳುಳ್ಳಂಥ ಲಂಡನ್ ಮತ್ತು ಪ್ಯಾರಿಸ್‌ಗಳಿಗೆ ಯಾವ ಹಾನಿಯೂ ಆಗುವುದಿಲ್ಲವೆನ್ನುವುದು ನನಗೆ ಗೊತ್ತಿತ್ತು, ಅಥವಾ ನಾನು ಯತ್ಕದಾಚಿತ್ ಈ ನಗರಗಳನ್ನು ನೋಡಲು ನನ್ನ ವಿಮಾನ ಬಿಟ್ಟು ಕೆಳಗಿಳಿದಿದ್ದರೆ, ಮತ್ತು ಹಾಗೆ ಕೆಳಗಿಳಿದು ಈ ಮಹಾನಗರಗಳಲ್ಲಿ ನನ್ನ ಐದು ಪೂಟು ಮೂರು ಇಂಚಿನ ಈ ಯಃಕಶ್ಚಿತ ಕರೀ ಬಡಕಲು ಶರೀರವನ್ನು ಸುತ್ತಾಡಿಸಿದ್ದರೆ, ಪ್ರಚಂಡ ಬಿಳಿಯರ ಈ ಭವ್ಯ ರಾಜಧಾನಿಗಳಿಗೆ ಅಂಥ ಹೇಳಿಕೊಳ್ಳುವಂಥ ಲಾಭವೂ ಆಗುತ್ತಿರಲಿಲ್ಲವೆನ್ನುವುದೂ ನನಗೆ ಚೆನ್ನಾಗಿ ಗೊತ್ತಿತ್ತು. ಆದರೂ ಈ ಕರಿ ಯಃಕಶ್ಚಿತ ಶರೀರ ಅಂಥ ನಿಶ್ಚಯವನ್ನು ಮಾಡಿತ್ತು ಮತ್ತು ತನ್ನ ಎತ್ತರದಿಂದ ಕೆಳಗಿಳಿಯಲಿಲ್ಲ. ಈ ಯಃಕಶ್ಚಿತ ಕರೀ ಶರೀರ, ಸುಮಾರು ಹತ್ತು ತಿಂಗಳಕಾಲ ತನ್ನ ಜೀವಮಾನದಲ್ಲಿಯೇ ಅತೀ ಒಳ್ಳೆಯವು ಮತ್ತು ಅತೀ ಹೃದಯ ವಿದ್ರಾವಕವಾದವುಗಳು ಎಂದೆನಿಸಿದ ಹತ್ತು ತಿಂಗಳಕಾಲ-ನೂರಾರು, ಸಾವಿರಾರು ಭವ್ಯ ಮತ್ತು ಸೊಕ್ಕಿದ ಬಿಳಿ ಶರೀರಗಳ ಮಧ್ಯೆ ಇದ್ದು, ತನ್ನ ಅಶಕ್ತ ಕುಳ್ಳ ಕರೀ ಶರೀರವನ್ನು ಬಹಳ ಎಚ್ಚರಿಕೆಯಿಂದ ಕಾಪಾಡಿಕೊಂಡು, ಮತ್ತು ತನ್ನ ‘ಮೃದೂನಿ ಕುಸುಮಾದಪಿ’ಯಾದ ಆದರೂ ‘ವಜ್ರಾ ದಪಿ ಕಠೋರಾಣಿ’ಯಾದ ಮನಸ್ಸನ್ನು, ಬುದ್ದಿಯನ್ನು, ಮತ್ತು ಸಮಸ್ತ ಚೇತನಶಕ್ತಿ ಯನ್ನು ಕಷ್ಟಪಟ್ಟು ಉಳಿಸಿಕೊಂಡು ಮತ್ತು ಒಳಗೊಳಗೇ ಬೆಳೆಸಿಕೊಂಡು ಬಂದಿತ್ತು. ಈ ಹತ್ತು ತಿಂಗಳುಗಳಲ್ಲಿ ಶರೀರವನ್ನು, ಮನಸ್ಸನ್ನು ಮತ್ತು ಹೃದಯವನ್ನು ಅಲ್ಲೋಲ-ಕಲ್ಲೋಲವಾಗಿಸುವ ಏನೆಲ್ಲ ಘಟನೆಗಳು ಮತ್ತು ಸಂಗತಿಗಳು ಸಂಭವಿಸಿದವು ಈ ಯಃಕಶ್ಚಿತ ಕರೀ-ಶರೀರಿಗೆ ! ಈ ಘಟನೆಗಳ ಮತ್ತು ಅನುಭವಗಳ ಅಸಹ್ಯತೆಯ, ಅಮಾನುಷತೆಯ ಮತ್ತು ಕ್ರೂರತೆಯ ಕಲ್ಪನೆ ಸ್ವಲ್ಪವೂ ಇರಲಿಲ್ಲ ಈ ಕರೀ ಶರೀರಕ್ಕೆ, ಅದು ತನ್ನ ದೇಶವನ್ನು ಬಿಡುವ ಮೊದಲು. ಅದು ತಿಳಿದಿತ್ತು ತಾನು ಮಾನವ ಸಭ್ಯತೆ (?)ಯ ಉತ್ತಮ ಮಾದರಿಗಳೆನಿಸಿದ, ಅತ್ಯಂತ ಮುಂದುವರಿದ ಸುಸಂಸ್ಕೃತ ದೇಶಗಳಿಗೆ ಭೆಟ್ಟಿಕೊಡುತ್ತಿರುವನೆಂದು ಮತ್ತು ಆ ಮುಂದುವರಿದ ದೇಶಗಳಲ್ಲಿ ತನಗೆ ದೈಹಿಕವಾಗಿ ಅನೇಕ ಸೌಕರ್ಯಗಳು ಮತ್ತು ಸುಖಾನುಕೂಲಗಳು ದೊರೆಯುವುದರ ಜೊತೆಗೆ ಮಾನಸಿಕವಾಗಿ-ಬೌದ್ಧಿಕವಾಗಿ ಮತ್ತು ಹಾರ್ದಿಕವಾಗಿ-ಕೂಡ ಅನೇಕ ಸೌಕರ್ಯಗಳು ಹಾಗೂ ಸುಖಾನುಕೂಲಗಳು ದೊರೆಯಬಹುದು, ಮತ್ತು ತನ್ನ ಹಿಂದುಳಿದ ದೇಶದಲ್ಲಿ ದೊರಕದ ಅನೇಕ ಸದವಕಾಶಗಳು ಮತ್ತು ಸಂವರ್ಧನೆಯ ಸಾಧನಗಳು ದೊರಕಬಹುದು ಎಂದು. ಆದರೆ ಇವೆಲ್ಲ ಎಂಥ ಹುಚ್ಚು ಆಶಯಗಳಾಗಿದ್ದವು ! ಈ ಯಾಂತ್ರಿಕೃತ ಮತ್ತು ತಾಂತ್ರೀಕೃತ ಪಾಶ್ಚಿಮಾತ್ಯ ಜಗತ್ತಿನಲ್ಲಿ ಈ ಶ್ರೀಮಂತ ಅಮೇರಿಕೆಯಲ್ಲಿ ತನಗೆ ತನ್ನ ಬಡದೇಶದಲ್ಲಿ ಸಿಗಲಾರದ ಅನೇಕ ಯಂತ್ರ-ಸೌಲಭ್ಯಗಳು ಮತ್ತು ಅನುಕೂಲಗಳು ದೊರಕಿದ್ದವೆಂಬುದು ನಿಜ. ತನಗೆ ತನ್ನ ಮನೆಯಲ್ಲಿಯೇ (ಬಿಳಿಯರ ಕೇರಿಯಲ್ಲಿ ತನಗೆ ಬಹಳ ಕಷ್ಟದಿಂದ ಸಿಕ್ಕ ತನ್ನ ಮನೆಯಲ್ಲಿ) ಟೆಲಿವ್ಹಿಜನ್ನನ್ನು ನೋಡುವ, ಟೆಲಿಫೋನಿನಲ್ಲಿ ಬೇಕಾದಾಗ ಬೇಕಾದವರೊಡನೆ ಮಾತನಾಡುವ ಕಂಡಿಶನ್ಡ ಏರಿನಲ್ಲಿ (Conditioned Air) ಉಸಿರಾಡಿಸುವ, ಮತ್ತು ರೆಫ್ರಿಜರೇಟರಿನಲ್ಲಿ ತಂಗಳನ್ನು ಕೆಡದಂತೆ ಇಟ್ಟುಕೊಂಡು ಊಟಮಾಡುವ ಅನುಕೂಲತೆಗಳು ಮತ್ತು ಸೌಲಭ್ಯಗಳು ದೊರಕಿದ್ದವು ಎನ್ನುವುದು ನಿಜ. ತನ್ನ ಮನೆಯ, ತನ್ನ ಬಟ್ಟೆಗಳ ಮತ್ತು ತನ್ನ ಪಾದರಕ್ಷೆಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಮತ್ತು ಅಂದಚೆಂದಗಳನ್ನು ಹೆಚ್ಚಿಸಿಕೊಳ್ಳುವ ಅನೇಕಾನೇಕ ಯಾಂತ್ರಿಕ ಸಾಮಗ್ರಿಗಳ ಸೇವೆಯು ತನಗೆ ಲಭಿಸಿತು, ಎನ್ನುವುದೂ ನಿಜ. ಅದರಂತೆಯೇ ಎಲ್ಲಿ ಬೇಕಲ್ಲಿಗೆ ಎಷ್ಟು ಬೇಕಷ್ಟು ವೇಗದಿಂದ ಪ್ರಯಾಣಿಸುವ ಎಲ್ಲ ಬಗೆಯ ವಾಹನ ಸೌಕರ್ಯಗಳು ಮತ್ತು ವೇಳೆಯನ್ನು ಎಷ್ಟು ಬೇಕಷ್ಟು ಉಳಿಸಿಕೊಳ್ಳಲು ಸಾಧ್ಯವಾಗುವ ಎಲ್ಲ ಬಗೆಯ Instant ವಸ್ತುಗಳು ಮತ್ತು ವ್ಯವಸ್ಥೆಗಳು (ಉದಾ : Instant Breakfast, Instant Lunch, Instant Brunch-Breakfast- Cum-Lunch, Instant Shave, Instant-Sleep ಇತ್ಯಾದಿ) ತನಗೆ ದೊರಕಿದ್ದವು ಎನ್ನುವುದೂ ನಿಜವಾಗಿತ್ತು. ಆದರೂ ಈ ಹಿಂದುಳಿದ ಯಃಕಶ್ಚಿತ ಕರೀ ಶರೀರಕ್ಕೆ ಸಮಾಧಾನವೆನ್ನುವುದು ಒಂದು ಕ್ಷಣವೂ ಆಗಿರಲಿಲ್ಲ. ತೃಪ್ತಿ ಎನ್ನುವುದು ಸಿಕ್ಕಿರಲಿಲ್ಲ ಮತ್ತು ಶಾಂತಿ ಎನ್ನುವುದು ಲಭಿಸಿರಲಿಲ್ಲ. ಯಾಕೆಂದರೆ ಪ್ರತಿನಿತ್ಯವೂ ಅದು ಕೆಲಸಕ್ಕೆ ಹೋಗುವಾಗ ಮತ್ತು ಕೆಲಸ ಮುಗಿಸಿಕೊಂಡು ಬರುವಾಗ ಹತ್ತಾರು-ನೂರಾರು ಬಿಳಿಯರ ವಿನಾ ಕಾರಣ ಬೆಂಕಿದೃಷ್ಟಿಯನ್ನು, ತಾನು ಕರಿಯನಾಗಿ ಹುಟ್ಟಿ ಇಲ್ಲಿಗೆ ಬಂದ ತಪ್ಪಿಗಾಗಿ, ತನ್ನ ಮೇಲೆ ಬೀಳಿಸಿಕೊಂಡು, ಆ ಬೆಂಕಿಯಲ್ಲಿ ಉರಿದು, ಬೆಂದು, ಹೊತ್ತಿ, ಕರಕಾಗಿ ಮತ್ತಷ್ಟು ಕರಿಯಾಗಿ ತನ್ನ ಮನೆಗೆ ಮರಳಬೇಕಾಗುತ್ತಿತ್ತು, ಹೆಚ್ಚು-ಕಡಿಮೆ ಪ್ರತಿನಿತ್ಯವೂ ಇದೇ ಹಾಡು-ಇದೇ ಪಾಡು, ತಾನು ಈ ಬಿದ್ದೇಬೀಳುವ ಬಿಳಿಯರ ಬೆಂಕಿದೃಷ್ಟಿಗೆ ಸೊಪ್ಪು ಹಾಕಬಾರದು, ಹೆದರಬಾರದು ಮತ್ತು ಅದನ್ನು ಕುರಿತು ಚಿಂತಿಸಬಾರದು ಎಂದು ಎಷ್ಟು ಅಂದುಕೊಂಡರೂ ಆ ಬೆಂಕಿದೃಷ್ಟಿ-ಆ ಬೆಂಕಿವೃಷ್ಟಿ ತನ್ನ ಮೇಲೆ ಬಿದ್ದಾಗೆಲ್ಲ ಈ ಐದು ಫೂಟು ಮೂರು ಇಂಚಿನ ಯಃಕಶ್ಚಿತ ಕರಿ ಶರೀರ ಸ್ವಯಂ ಜ್ವಲಂತ ಆಗ್ನಿಯಾಗುತ್ತಿತ್ತು ಮತ್ತು “ಎಲೈ, ಈ ಪ್ರಪಂಚದ ಪ್ರಚಂಡ ಬಿಳಿಯರೇ, ಪ್ರಪಂಚದ ಮೊಟ್ಟ ಮೊದಲು ಅಣು, ಹೈಟ್ರೋಜನ್ ಮತ್ತು ಕೋಬಾಲ್ಟಿ ಬಾಂಬುಗಳನ್ನು ತಯಾರಿಸಿ, ಪ್ರಯೋಗಿಸಿ, ಮನುಕುಲವಿಧ್ವಂಸಕರೆನ್ನಿಸಿದ ರಾಕ್ಷಸರೇ, ನೀವು ಈ ನಿಮ್ಮ ಬೆಂಕಿದೃಷ್ಟಿಯಿಂದ ನನ್ನ ಐದು ಫೂಟು ಮೂರು ಇಂಚಿನ ಈ ಯಃಕಶ್ಚಿತ ಕರೀ ಶರೀರವನ್ನು ಮತ್ತು ಈ ಪ್ರಪಂಚದ ಎಲ್ಲ ಇಂಥ ಕರೀ ಶರೀರಗಳನ್ನು ಸುಟ್ಟು ಭಸ್ಮ ಮಾಡಲು, ಅವು ಈ ಪ್ರಪಂಚದಲ್ಲಿ ಹೇಳ ಹೆಸರಿಲ್ಲದಂತೆ ಆಗುವಂತೆ ಮಾಡಲು ಇಚ್ಛಿಸುತ್ತಿರುವಿರಲ್ಲವೇ? ಅದು ನಿಮಗೆ ಸಾಧ್ಯವಾಗಲಿಕ್ಕಿಲ್ಲ.
ಕೃಷ್ಣದೇವರ ಈ ಪ್ರಪಂಚದಲ್ಲಿ- ಏಶಿಯಾದಲ್ಲಿ, ಆಫ್ರಿಕಾದಲ್ಲಿ ಮತ್ತು ಭಾರತದಲ್ಲಿ ಲಕ್ಷಾವಧಿ ಕೋಟ್ಯಾವಧಿ ಕರಿ ಶರೀರಗಳಿರುವವರೆಗೆ ಮತ್ತು ಆ ಕರಿ ಶರೀರಗಳಲ್ಲಿ ವಾಯುದೇವನು–ಪ್ರಾಣದೇವನು-ಪ್ರತಿಷ್ಠಿತನಾಗಿರುವವರೆಗೆ ಅದು ಸಾಧ್ಯವಿಲ್ಲ” ಎಂದು ಅವಡುಗಚ್ಚಿ ಅಂದುಕೊಳ್ಳುತ್ತಿತ್ತು. “ಎಲಾ, ಕರಿಯರೆಂದರೆ ಇಷ್ಟೊಂದು ಕೀಳು ಮಾಡುವಿರಲ್ಲವೇ ? ಇಷ್ಟೊಂದು ತುಚ್ಛವೇ – ನಿಮ್ಮ ಈ ಸೊಕ್ಕಿದ
ಕರಿನಾಯಿಗಳಿಗಿಂತ ತುಚ್ಚವೇ-ಈ ಕರೀ ಮಾನವರ ಶರೀರಗಳು ? ಈ ಕರೀ ವಾನವರ ಜೀವಗಳು ? ನೀವೇ ಅವರನ್ನು ಆಫ್ರಿಕೆಯಲ್ಲಿ, ಏಶಿಯದಲ್ಲಿ ಮತ್ತು ನಿಮ್ಮ ಈ ಅಮೇರಿಕೆಯಲ್ಲಿ ನೂರಾರು ವರ್ಷಗಳವರೆಗೆ ಭೌಗೋಲಿಕ ಮತ್ತು ಐತಿಹಾಸಿಕ ಆಕಸ್ಮಿಕಗಳಿಂದ ನಿಮ್ಮ ಜನಾಂಗಕ್ಕೆ ಸಿಕ್ಕ ಆರ್ಥಿಕ, ರಾಜಕೀಯ ಮತ್ತು ಸೈನಿಕ ಮೇಲ್ಮೆಗಳ ದುರುಪಯೋಗದಿಂದ ಮತ್ತು ನಿಮ್ಮ ಕುಟಿಲಬುದ್ಧಿಯಿಂದ ನಿಮ್ಮ ಗುಲಾಮರಾಗಿಸಿದ್ದಲ್ಲದೆ, ಅವರನ್ನು ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಹತ್ತಿಕ್ಕಿ, ಆಮೇಲೆ ನೀವೇ ಅವರು ಈ ಎಲ್ಲ ಅಂಶಗಳಲ್ಲಿ ನಿಮಗಿಂತ ಜಾತ್ಯಾ-ಜನಾಂಗತಃ ಕೀಳು ಎಂದು ಸಾಧಿಸುತ್ತಿರುವಿರಲ್ಲವೇ ? ಆದರೆ ಇದೆಲ್ಲ ಕೇವಲ ಐತಿಹಾಸಿಕ ಆಕಸ್ಮಿಕ ಎನ್ನುವುದು ನೆನಪಿರಲಿ. ಕರಿಯರಿಗೂ ಒಂದು ಕಾಲ ಬಂದೀತು. ಅದು ಬರುತ್ತಿದೆ, ಇನ್ನೇನು ದೂರವಿಲ್ಲ. ನೀವು, ನೀವು ಕೊಚ್ಚಿಕೊಳ್ಳುವಂತೆ ಕರಿಯರಿಗಿಂತ ನಿಜವಾಗಿಯೂ ಜಾತ್ಯಾ ಉತ್ತಮ ದರ್ಜೆಯವರಾಗಿದ್ದರೆ ಅವರನ್ನು ಹೀಗೆ ಕೀಳಾಗಿ ನೋಡುತ್ತಿರಲಿಲ್ಲ, ನಡೆಸಿಕೊಳ್ಳುತ್ತಿರಲಿಲ್ಲ. ಕರಿಯರನ್ನು ನೀವು, ಬಿಳಿಯರು, ನೋಡುವ ದೃಷ್ಟಿಯಲ್ಲಿಯೇ ಹಾಗೂ ಅವರನ್ನು ನಡೆಸಿಕೊಳ್ಳುವ ರೀತಿಯಲ್ಲಿಯೇ ನಿಮ್ಮ ಸಂಸ್ಕೃತಿಯ ಗುಣ ಸ್ಪಷ್ಟವಾಗಿ ಗೊತ್ತಾಗುತ್ತದೆ. ನಿಜವಾದ ಸಭ್ಯನು-ನಿಜವಾದ ಸುಸಂಸ್ಕೃತನು-ಯಾರನ್ನೂ, ಅವರು ಎಂಥ ಅಸಂಸ್ಕೃತರಾಗಿದ್ದರೂ, ಹೀಗೆ ಅಸಭ್ಯ ರೀತಿಯಲ್ಲಿ, ಅಸಹ್ಯ ರೀತಿಯಲ್ಲಿ ನಡೆಸಿಕೊಳ್ಳುವದಿಲ್ಲ. ಎಲೈ, ಪ್ರತಿನಿತ್ಯವೂ ಈ ಕರಿ ಶರೀರದ ಮೇಲೆ ಬೆಂಕಿಯನ್ನು ಕಾರುವ ಬರ್ಬರ ಬಿಳಿಯರೇ, ಈ ಕಿರಿ ಕರೀ ಶರೀರದಲ್ಲಿ ಫಳಫಳ ಹೊಳೆಯುತ್ತಿರುವ ಸಭ್ಯತೆಯ ಜ್ಞಾನದ ಮತ್ತು ಸಂಸ್ಕೃತಿಯ ಜ್ಯೋತಿಯನ್ನು ಕಣ್ಣಿದ್ದರೂ, ಕಾಣದ ಕುರುಡರೇ, ನಿಮ್ಮ ಸಂಸ್ಕೃತಿಯ, ನಿಮ್ಮ ಸಭ್ಯತೆಯ, ನಿನ್ನ ಮಾನವತೆಯ ಕಿಮ್ಮತ್ತು. ಏನು ? ಇಂತಿಷ್ಟು ಬಿಲಿಯ ಡಾಲರುಗಳೇ ? ಅಥವಾ ಇಂತಿಷ್ಟು ಮಿಲಿಯ ಪೌಂಡುಗಳೇ? ಫ್ರಾಂಕುಗಳೇ ? ಮಾರ್ಕುಗಳೇ ? ಏನು ? ಏನು ? ಇಷ್ಟೆಲ್ಲ ವೈಜ್ಞಾನಿಕ ಸಂಶೋಧನೆ ಮಾಡಿದಿರಿ, ವಾತಾವರಣವನ್ನು ಮೀರಿ ಚಂದ್ರನವರೆಗೆ ಹೋಗಿ ಬಂದಿರಿ. ಆದರೆ ಬಣ್ಣವೆನ್ನುವುದು ಮೂಲತಃ ಭೌಗೋಲಿಕ-ಮುಖ್ಯತಃ ಭೌಗೋಲಿಕ ಆಮೇಲೆ ಮಾತ್ರ ಅನುವಂಶಿಕ ಅನ್ನುವ ಜೀವ-ವೈಜ್ಞಾನಿಕ ಸತ್ಯವನ್ನು ಕಾಣಲಿಲ್ಲ-ಕಂಡರೂ ಒಪ್ಪಿಕೊಳ್ಳಲಿಲ್ಲ-ಅಲ್ಲವೇ? ನೀವು ನಿಮ್ಮ ಅಮೌಲ್ಯ ಬಿಳಿತನವನ್ನು ಉಳಿಸಿಕೊಳ್ಳಿರಿ, ಎಳ್ಳಷ್ಟೂ ಮಲಿನವಾಗದಂತೆ ಎಳ್ಳಷ್ಟೂ ಮಿಶ್ರವಾಗದಂತೆ ಉಳಿಸಿಕೊಳ್ಳಿರಿ. ನಾವು, ಕರಿಯರು, ಬೇಡವೆನ್ನುವುದಿಲ್ಲ. ಆದರೆ ಕರಿಯರು, ಕರಿಯರಾದ ಮಾತ್ರಕ್ಕೆ ಮಾನವರಲ್ಲ, ಮಾನವರಾದರೂ ಬಿಳಿಯರಿಗಿಂತ ಹೀನ ಮಾನವರು. ಎನ್ನುತ್ತೀರಲ್ಲ- ಇದರ ಇತ್ಯರ್ಥವನ್ನು ದೇವರು- ಕೃಷ್ಣದೇವರು ಮಾಡಬಲ್ಲ ಕಾಮದೇವನು ಕೂಡ ಮಾಡಬಲ್ಲ, ನಿಸರ್ಗದೇವತೆ ಮಾಡಬಲ್ಲಳು, ಜ್ಞಾನದೇವತೆ – ವಿಜ್ಞಾನದೇವತೆ ಶಾರದೆ ಮಾಡಬಲ್ಲಳು ಸಂಪದ್ದೇವತೆ ಲಕ್ಷ್ಮಿ ಮಾಡಬಲ್ಲಳು, ಇತಿಹಾಸ ಮಾಡಬಲ್ಲದು, ಭವಿಷ್ಯ ಮಾಡಬಲ್ಲದು-ನಿಮ್ಮ ಸಂಸ್ಕೃತಿಯು ಅದನ್ನು ನ್ಯಾಯವಾಗಿ ಮಾನವೀಯವಾಗಿ ಮಾಡದಿದ್ದರೆ, ಇದರ ಇತ್ಯರ್ಥವಾಗುವವರೆಗೆ ನನಗೆ ಈ ಯಃಕಶ್ಚಿತ ಕರೀ ಕುಳ್ಳ ಶರೀರಿಗೆ-ನಿಮ್ಮ ಮಹಾನಗರಗಳನ್ನು ರಾಜಧಾನಿಗಳನ್ನು ಯುದ್ಧ ಸ್ಮಾರಕಗಳನ್ನು ಯುದ್ಧ ಕಚೇರಿಗಳನ್ನು, ವಾಣಿಜ್ಯ ಕೇಂದ್ರಗಳನ್ನು ವಿದ್ಯಾಕೇಂದ್ರಗಳನ್ನು, ಐತಿಹಾಸಿಕ ಮತ್ತು ಸಾಂಸ್ಕೃತಿಕ ಮ್ಯೂಜಿಯಮ್ಮುಗಳನ್ನು, ವೈಜ್ಞಾನಿಕ ಸಂಶೋಧನಾಲಯಗಳನ್ನು, ಆರ್ಟ ಗ್ಯಾಲರಿಗಳನ್ನು, ಸಾಳ್ಯ ಮಂದಿರಗಳನ್ನು ಮತ್ತು ನೈಟ್ ಕ್ಲಬ್ಬುಗಳನ್ನು ಈ ನಿಮ್ಮ ಯಾವ ಮಹಾಸಾಧನೆಗಳನ್ನೂ, ಯಾವ ಮಹಾ ಪುರುಷಾರ್ಥಗಳನ್ನೂ ನೋಡುವ ಮತ್ತು ಮೆಚ್ಚುವ ಮನಸ್ಸಿಲ್ಲ. ಯಾಕೆಂದರೆ ಹಾಗೆ ಮೆಚ್ಚಬಹುದಾಗಿದ್ದ (ಅವುಗಳಲ್ಲಿ ಕೆಲವನ್ನಾದರೂ) ಈ ಕರೀ ಶರೀರದ ಬಿಳೀ ಶುಭ್ರ ಮನಸ್ಸನ್ನು ನೀವೇ, ನಿಮ್ಮ ಬಿಳಿತನದ ಕರಿ ಸಂಸ್ಕೃತಿಯಿಂದ ಕಲುಷಿತಗೊಳಿಸಿದ್ದೀರಿ, ಕಪ್ಪಿಟ್ಟಿಸಿದ್ದೀರಿ. ಆದ್ದರಿಂದ ನಿಮ್ಮ ಈ ಮಹಾನಗರಗಳಿಗೆ ನಿಮ್ಮ ಇತಿಹಾಸದ, ನಿಮ್ಮ ಪರಂಪರೆಯ ಮತ್ತು ನಿಮ್ಮ ಸಂಸ್ಕೃತಿಯ ದ್ಯೋತಕಗಳೆನಿಸಿದ ಮತ್ತು ಹೆಮ್ಮೆಯೆನಿಸಿದ ಈ ಎರಡೂ ಮಹಾನಗರಗಳಿಗೆ-ಮತ್ತು ನಾನು ನನ್ನ ದುರ್ದೈವದಿಂದ ನೋಡಲೇಬೇಕಾಗಿ ಬಂದ ನಿಮ್ಮ ಆ ಮೂರನೆಯ ಮಹಾನಗರವಾದ ನ್ಯೂಯಾರ್ಕಿಗೆ, ಇವೆಲ್ಲವುಗಳಿಗೆ ಇಲ್ಲಿಂದಲೇ ನನ್ನ ನಮಸ್ಕಾರ-ದೊಡ್ಡ ನಮಸ್ಕಾರ”-ಎಂದು ಈ ಯಃಕಶ್ಚಿತ ಕರೀ ಶರೀರವು ತಾನು ವಿಮಾನದಲ್ಲಿ ಕುಳಿತಲ್ಲಿಂದಲೇ ಆ ಮಹಾನಗರಗಳಿಗೆ ತನ್ನ ಪ್ರಣಾಮವನ್ನು ಸಲ್ಲಿಸಿತು.
ಮಹತ್ವದ ವಿವರಣೆ : ಈ ಲೇಖನದಲ್ಲಿನ ಬಿಳಿಯರ ಮೇಲಿನ ನನ್ನ ಆಕ್ರೋಶವೆಲ್ಲ ಅಲ್ಲ, ಸಾತ್ವಿಕ ಸಂತಾಪವೆಲ್ಲ, ಕೇವಲ ಆಸುರೀ ಸ್ವಭಾವದ ಬಿಳಿಯರನ್ನು ಕುರಿತು, ಅಥವಾ ಬಿಳಿಯರಲ್ಲಿನ ಆಸುರೀ ಸ್ವಭಾವವನ್ನು ಮಾತ್ರ ಕುರಿತು, ಎಂದು ತಿಳಿಯಬೇಕು. ಇಲ್ಲಿ “ಆಸುರೀ ಸ್ವಭಾವ” ಎನ್ನುವುದನ್ನು ಪ್ರಪಂಚದಲ್ಲಿನ ವಿಭಿನ್ನ ಮಾನವರ “ಮಾನವತೆ”ಯನ್ನು ಅರ್ಥಾತ್ “ಮಾನವೀಯ ಸಮಾನತೆ”ಯನ್ನು ಕೇವಲ ಅವರ ಜನಾಂಗಿಕ ವ್ಯತ್ಯಾಸಗಳ (ಉದಾ: ಬಣ್ಣ, ಆಕಾರ ಸ್ವರೂಪ ಎತ್ತರ, ತೂಕ, ಭಾಷೆ, ವೇಷ-ಭೂಷಣ ಇತ್ಯಾದಿಗಳಲ್ಲಿನ ವ್ಯತ್ಯಾಸಗಳು) ಕಾರಣ ದಿಂದ ಅಲ್ಲಗಳೆಯುವ ಅಥವಾ ಕೇವಲ ಆ ಕಾರಣಗಳಿಂದಾಗಿ ಅವರ ಮಾನವೀಯತೆಯನ್ನು “ಹೀನ” ಎಂದು ತಿಳಿಯುವ ಸ್ವಭಾವ ಅಥವಾ ಪ್ರವೃತ್ತಿ ಎನ್ನುವ ಅರ್ಥದಲ್ಲಿ ಬಳಸಿದ್ದೇನೆ. ಪ್ರಪಂಚದ (ಬಿಳಿಯರನ್ನೊಳಗೊಂಡ ಪ್ರಪಂಚದ) ದುರಾದೃಷ್ಟದಿಂದಾಗಿ ಇಂಥ ಆಸುರೀ-ಸ್ವಭಾವದ ಬಿಳಿಯರು ಬಿಳಿಯರ ದೇಶಗಳಲ್ಲಿ ಇನ್ನೂ ಹೇರಳವಾಗಿದ್ದಾರೆ ಮತ್ತು ಇನ್ನೂ ಅವರೇ ಆ ದೇಶಗಳ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಸೈನಿಕ ಧೋರಣೆಗಳನ್ನು ನಿಯಂತ್ರಿಸುತ್ತಿದ್ದಾರೆ ಎಂದೇ ಈ ಲೇಖಕನ ಅಭ್ಯಾಸಪೂರ್ಣ ಅಭಿಪ್ರಾಯವಾಗಿದೆ. ಬಿಳಿಯರ ದೇಶಗಳಲ್ಲಿನ ಸಾಂಸ್ಕೃತಿಕ ಧೋರಣೆಗಳನ್ನು ಆ ದೇಶಗಳಲ್ಲಿನ “ಒಳ್ಳೆಯ-ಬಿಳಿಯರೇ ಸಾಮಾನ್ಯವಾಗಿ ನಿರೂಪಿಸುತ್ತಿದ್ದಾರಾದರೂ ಅವರಿಗಾಗಲೀ, ಅವರ ಒಳ್ಳೆಯ ಸಾಂಸ್ಕೃತಿಕ ಧೋರಣೆಗಳಿಗಾಗಲೀ, ಇದುವರೆಗೆ, ಬಿಳಿ ಜನಸಾಮಾನ್ಯರಲ್ಲಿನ ವರ್ಣಭಾವನೆಯನ್ನು ಮತ್ತು ಅವರು ಮಾಡುವ ವರ್ಣಭೇದವನ್ನು ಹೋಗಲಾಡಿಸುವುದು ಸಾಧ್ಯವಾಗಿಲ್ಲ. ಉದಾ : ಇಂಗ್ಲಂಡಿನಲ್ಲಿನ ಇಮ್ಮಿಗ್ರೇಶನ್ (Immigration) ನಿಬಂಧನೆಗಳು ಮತ್ತು ಅಮೇರಿಕೆಯಲ್ಲಿ ಸಿವ್ಹಿಲ್ ರೈಟ್ಸ್ ಕಾಯ್ದೆಯ ಚಲಾವಣೆಗೆ ಅಲ್ಲಿನ ಬಿಳಿಯರು ಮೇಲಿಂದ ಮೇಲೆ ತೋರಿಸುತ್ತಿರುವ ವಿರೋಧ ಮತ್ತು ತಂದೊಡ್ಡುತ್ತಿರುವ ಘಟನಾತ್ಮಕ ಮತ್ತು ಅಘಟನಾತ್ಮಕ ಅಡ್ಡಿ-ಆತಂಕಗಳು ಮತ್ತು ಕುಂಟುನೆವಗಳು, ಇತ್ಯಾದಿ.
ಭಿನ್ನತೆಯ ವಿರುದ್ಧ / ಡಾ. ಲೋಹಿಯಾ
ನಮ್ಮ ಇಂಡಿಯಾದ ಇವೊತ್ತಿನ ಸಮಗ್ರ ಸರ್ವತ್ರ ದಾರಿದ್ರ‍್ಯಕ್ಕೆ ಮುಖ್ಯವಾದ ಕಾರಣಗಳಲ್ಲಿ ಒಂದು ಇಲ್ಲಿನ ಜಾತಿ ಭಿನ್ನತೆ, ಸ್ತ್ರೀ ಪುರುಷರ ಮಧ್ಯೆ ಇರುವ ಭಿನ್ನತೆ. ಈ ಎರಡು ರೀತಿಯ ಭಿನ್ನತೆಗಳನ್ನು ಮೂಲೋತ್ಪಾಟನ ಮಾಡುವುದಕ್ಕೆ ಸತತ ಏಕೋದೃಢ ಪ್ರಯತ್ನ ನಡೆಸುವುದನ್ನು ಮರೆತ ಎಂಥ ಕ್ರಾಂತಿಯಾದರೂ ಈ ದೇಶದ ದಾರಿದ್ರವನ್ನು ಹೋಗಲಾಡಿಸದು. ಈ ಭಿನ್ನತೆಗಳ ಬಗ್ಗೆ ನಮ್ಮಲ್ಲಿ ಸತ್ವದ ಕೋಪ ಉರಿಯಬೇಕು. ಈ ಎರಡು ಭಿನ್ನತೆಗಳ ವಿರುದ್ದ ಹೋರಾಡುವುದಕ್ಕಿಂತ ಹೆಚ್ಚಿನ ಧಾರ್ಮಿಕ ಕರ್ತವ್ಯ ಇವೊತ್ತು ಇನ್ನೊಂದಿಲ್ಲ. ಆದರೆ ಈ ಹೋರಾಟದಲ್ಲಿ ನಮ್ಮ ಸತ್ವ-ಕೋಪ ಕಹಿಭಾವನೆಗೆ ಇಳಿದು ಕುಲಗೆಡದ ಹಾಗೆ ನೋಡಿಕೊಳ್ಳಬೇಕಾದ್ರೂ ಅತ್ಯಗತ್ಯ. ಈ ಮಾನವ ಸಂಬಂಧಗಳು, ಸ್ತ್ರೀ ಪುರುಷ ಸಂಬಂಧಗಳು ಇವೆಲ್ಲ ಅತಿ ನಾಜೂಕಿನವು. ಈ ನಾಜೂಕು ಕಳೆಯದಂತೆ ಒರಟಾಗದಿರುವುದು ಮತ್ತು ಅದೇ ಹೊತ್ತಿಗೆ ಈ ಹೋರಾಟ ದುರ್ಬಲವಾಗದಂತೆ ಸತ್ತ್ವಪೂರ್ಣವಾಗಿ ಕುದಿಯುತ್ತಿರುವುದು-ಇಂಥ ಒಂದು ಹದದಲ್ಲಿ ಈ ಕ್ರಾಂತಿ ನಡೆಯಬೇಕು.
ಲಂಕೇಶರ ತೆರೆಗಳು
ಲಂಕೇಶರ ತೆರೆಗಳು
ಕೆ. ಮರುಳಸಿದ್ದಪ್ಪ
ಸಂಸ ಕೈಲಾಸಂ ಶ್ರೀರಂಗೋತ್ತರ ಕನ್ನಡ ನಾಟಕಕಾರರಲ್ಲಿ ಲಂಕೇಶರು ಪ್ರಮುಖರು. ಆಧುನಿಕ ಪ್ರಜ್ಞೆಯ ಸಂಕೀರ್ಣ ಅನುಭವಗಳನ್ನು ನಾಟಕಕ್ಕೆ ಅಳವಡಿಸಿಕೊಳ್ಳಬೇಕಾಗಿ ಬಂದ ಸವಾಲನ್ನು ಅತ್ಯಂತ ಸಮರ್ಥವಾಗಿ ಎದುರಿಸಿ ಬರೆದ ವೈಶಿಷ್ಟ್ಯವನ್ನುಳ್ಳವರು.
ಸಂಸ ಕೈಲಾಸಂರ ಎಲ್ಲ ನಾಟಕಗಳು ಮತ್ತು ಶ್ರೀರಂಗರ ಬಹಳಷ್ಟು ನಾಟಕಗಳು ನಿರ್ದಿಷ್ಟವಾದ ಚಾರಿತ್ರಿಕ ಹಾಗೂ ಸಾಮಾಜಿಕ ಗುರಿಯನ್ನಿಟ್ಟುಕೊಂಡಿದ್ದು ಒಂದೊಂದು ಮೌಲ್ಯ ಪ್ರತಿಪಾದನೆಗಾಗಿ ಬರೆದ ನಾಟಕಗಳು. ಚಾರಿತ್ರಿಕ ಹಾಗೂ ಸಾಮಾಜಿಕ ಚೌಕಟ್ಟಿನಿಂದ ಬಿಡಿಸಿಕೊಂಡು ವ್ಯಕ್ತಿಯ ಅಂತರಂಗದ ಸಮಸ್ಯೆಗಳನ್ನು ವಿಶ್ಲೇಷಿಸಲು ನಾಟಕಕಾರರು ತೊಡಗಿದ್ದು ಇತ್ತೀಚೆಗೆ, ಕಾರ್ನಾಡ, ಲಂಕೇಶ, ಕಂಬಾರ, ತೇಜಸ್ವಿ, ಪಾಟೀಲ-ಮುಂತಾದವರ ನಾಟಕಗಳ ಸಾಧನ, ಈ ಕಾರಣಕ್ಕಾಗಿ ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಮಹತ್ವದ ದಾಖಲೆಗಳಾಗಿ ಉಳಿಯುತ್ತವೆ.
ತೆರೆಗಳು ಲಂಕೇಶರ ಮೂರನೆಯ ನಾಟಕ; ಅದಕ್ಕೆ ಮುನ್ನ, ಟಿ.ಪ್ರಸನ್ನನ ಗೃಹಸ್ಥಾಶ್ರವು, ನನ್ನ ತಂಗಿಗೊಂದು ಗಂಡುಕೊಡಿ-ಎಂಬ ಎರಡು ನಾಟಕಗಳನ್ನೂ ಕೆಲವು ಸಣ್ಣ ಕತೆ ಮತ್ತು ಕವಿತೆಗಳನ್ನೂ ಬರೆದಿದ್ದರು; ಅದಾದ ಮೇಲೆ ಮೂರು ನಾಟಕಗಳನ್ನೂ, ಒಂದು ಚಿಕ್ಕ ಕಾದಂಬರಿಯನ್ನೂ, ಕೆಲವು ಸಣ್ಣ ಕತೆ ಮತ್ತು ಕವಿತೆಗಳನ್ನೂ ಬರೆದಿದ್ದಾರೆ. ಸಾಹಿತ್ಯದ ಬೇರೆ ಕ್ಷೇತ್ರಗಳಲ್ಲಿ ಅವರ ಸಾಧನೆ ಏನಿದ್ದರೂ ಅವರು ಪ್ರಮುಖವಾಗಿ ನಾಟಕಕಾರರು ; ಎಂದೇ, ಅವರ ಸಣ್ಣ ಕತೆ ಮತ್ತು ಕಾದಂಬರಿಗಳೂ ಮೂಲ ಸ್ವರೂಪದಲ್ಲಿ ನಾಟಕೀಯ ಸತ್ವವನ್ನೇ ಪಡೆದಿವೆ.
ಲಂಕೇಶರ ಮೊದಲ ನಾಟಕ ಟಿ. ಪ್ರಸನ್ನನ ಗೃಹಸ್ಥಾಶ್ರವು ದೊಡ್ಡ ಆದರ್ಶಗಳಿಗೂ ಮತ್ತು ವಾಸ್ತವ ಸತ್ಯಕ್ಕೂ ಜೀವನದಲ್ಲಿರುವ ಸಂಬಂಧವನ್ನು ಕಟುವಾಗಿ ವಿಡಂಬಿಸುತ್ತದೆ. ಎರಡನೇ ನಾಟಕ ನನ್ನ ತಂಗಿಗೊಂದು ಗಂಡು ಕೊಡಿ ಸತ್ಯ, ಪ್ರೇಮ ಮುಂತಾದ ಜೀವನ ಮೌಲ್ಯಗಳ ಸಾವಿಗೆ ಕಾರಣವಾಗುತ್ತಿರುವ ಸಮಾಜ ಸುಧಾರಣೆಯ ಅಪ್ರಮಾಣಿಕತೆಯನ್ನು ತೀಕ್ಷವಾಗಿ ಟೀಕಿಸುತ್ತದೆ. ಎರಡು ನಾಟಕಗಳಲ್ಲಿಯೂ ವ್ಯಕ್ತಿಜೀವನವನ್ನು ಸಂಕುಚಿತಗೊಳಿಸುವ ಆದರ್ಶ ಮತ್ತು ನಂಬಿಕೆಗಳ ಮೇಲೆ ದಾಳಿ ನಡೆದಿದೆ.
ಲಂಕೇಶರ ಮೂರನೆಯ ನಾಟಕ ತೆರೆಗಳು ಮುಖ್ಯವಾಗಿ ಮೂವರು ಸಾಮಾನ್ಯರು ಮತ್ತು ನಾಲ್ಕನೆಯ ಆಸಾಮಾನ್ಯನೊಬ್ಬನ ನಡುವಿನ ಘರ್ಷಣೆಗೆ ಸಂಬಂಧಿಸಿದ್ದು. ಇಲ್ಲಿ ಬರುವ ವ್ಯಕ್ತಿಯೊಬ್ಬನ ದುರಾಸೆ ಮಹತ್ವಾಕಾಂಕ್ಷೆ ಅವನನ್ನು ಎತ್ತರಕ್ಕೆ ಒಯುವಂತೆ ಕೆಳಕ್ಕೂ ಸೆಳೆಯುತ್ತದೆ. ಈತನನ್ನು ಇದ್ದಕ್ಕಿದ್ದಂತೆ ಪ್ರಶ್ನೆಗೆ ಗುರಿಮಾಡುವ ಮೂವರು ಅದೇ ರೀತಿಯಲ್ಲಿ ಎತ್ತರ ಮತ್ತು ಆಳಕ್ಕೆ ಹೋಗುತ್ತಾರೆ, ಈ ಪ್ರಶ್ನೆ ಮತ್ತು ಉತ್ತರಗಳ ಜೊತೆಗೇ.
ಈ ನಾಲ್ವರ ಸಂಬಂಧ ಮತ್ತು ದುರಂತವನ್ನು ಮುಂದಿಡುವುದು ನಾಟಕದ ಉದ್ದೇಶ.
ನಾಟಕ ಆರಂಭದಲ್ಲಿ. ಒಬ್ಬ ವ್ಯಕ್ತಿ ರಂಗದ ಮೇಲಿರುತ್ತಾನೆ: ಮೂವರು-ಒಬ್ಬ ಎತ್ತರ, ಇನ್ನೊಬ್ಬ ಸಾಮಾನ್ಯ, ಮತ್ತೊಬ್ಬ ಕುಳ್ಳ-ಪ್ರವೇಶಿಸಿ ವ್ಯಕ್ತಿಗೆ ನಮಸ್ಕಾರ ಹೇಳುತ್ತಾರೆ; ತಮ್ಮ ಪರಿಚಯ ಮಾಡಿಕೊಳ್ಳುತ್ತಾರೆ; ತಾವು ಹಿಂದೆ ಅವನಿಗೆ ವಿದ್ಯಾರ್ಥಿಗಳಾಗಿದ್ದುದನ್ನು ಮತ್ತು ಆಗಿನ ಪಾಠ ಪ್ರವಚನಗಳ ವೈಭವವನ್ನೂ ಜ್ಞಾಪಿಸುತ್ತಾರೆ. ಹೀಗೆ ಮಾತುಕತೆ ನಡೆಯುತ್ತಿದ್ದಂತೆ ವ್ಯಕ್ತಿಯ ಬದುಕಿನ ಅನೇಕ, ಪದರುಗಳು ಬಿಚ್ಚುತ್ತಾ ಹೋಗುತ್ತವೆ ; ಅವನ ಮಾತಿನಿಂದಲೇ ಅವನ ಭೂತದ ಮತ್ತು ವರ್ತಮಾನದ ಮೇಲೆ ಬೆಳಕು ಚೆಲ್ಲುತ್ತಾರೆ. ಇವರನ್ನು ಕುರಿತು ವ್ಯಕ್ತಿ, ಮೊದಮೊದಲು ಅಲಕ್ಷ ತೋರಿಸಿದರೂ ಕ್ರಮೇಣ ಅವರೊಂದಿಗೆ ಹೊಂದಿಕೊಳ್ಳುತ್ತಾನೆ; ಗುರುತಿಸುತ್ತಾನೆ. ಅವರು ಈತನ – ಮನೆ, ಅದರ ಯಜಮಾನ ಮತ್ತು ಅವನ ಕೊಲೆಯ ಬಗ್ಗೆ ಪ್ರಶ್ನಿಸುತ್ತಾರೆ. ಇವರೊಂದಿಗೆ ಮಾತುಕತೆಯಲ್ಲಿ ವ್ಯಕ್ತಿ ಒಮ್ಮೊಮ್ಮೆ ಹೊಂದಿಕೊಂಡರೂ, ಒಮ್ಮೊಮ್ಮೆ ಅದು ಕ್ರೂರ ಹಿಂಸೆಯಾಗಿ ಆತನ ಪಾಲಿಗೆ ಪರಿಣಮಿಸುತ್ತದೆ ; ಇದಕ್ಕೆ ಕಾರಣ ಅವನ ಸ್ವಭಾವದಲ್ಲಿರುವ ಗೋಸುಂಬೆತನವೇ ಆಗಿದೆ.
ಹೇಳಿದ ಹೆಸರನ್ನೇ ಮತ್ತೆ ಮತ್ತೆ ಕೇಳಿಸಿಕೊಳ್ಳ ಬಯಸುವ, ಕಂಡವರನ್ನೆಲ್ಲ ತನ್ನ ವಿದ್ಯಾರ್ಥಿಗಳಿದ್ದಿರಬಹುದೆಂದು ಭ್ರಮಿಸುವ ಈತ ಪ್ರತಿಭಟನೆಯನ್ನು ಮಾತ್ರ ಸೈರಿಸಲಾರ. ಅಧಿಕಾರವಿದ್ದರೆ ಅದನ್ನು ಸೌದೆ ಹಾಕಿ ಸುಟ್ಟು ಬಿಡುವ ಗುದ್ದು ತೋಡಿ ಹೂತು ಬಿಡುವ, ಚರ್ಮ ಸುಲಿಸಿ ಸಾಯಿಸಿ ಬಿಡುವ ಪ್ರವೃತ್ತಿಯವನು. ಆದರೆ, ಹೆದಕ್ಕೊಂಡು ಹೋದರೆ ಮೈಮೇಲೆ ಬರುವ, ಅಟ್ಟಿಸಿಕೊಂಡು ಹೋದರೆ ಓಡಿ ಹೋಗುವ, ಬಿಸ್ಕತ್ ಹಾಕಿದರೆ ಕೈ ನೆಕ್ಕುವ, ಚಿನ್ನದ ಶಬ್ದ ಕೇಳಿದರೆ ಕಣ್ಣಗಲಿಸಿ ನಿಲ್ಲುವ, ಚಿನ್ನ ಇಲ್ಲದ ಹತ್ರ ಆತ್ಮ ಮಹಾತ್ಮ ನೋಡುವ ಜನಸ್ತೋಮದ ಬಗ್ಗೆ ಮತ್ತು ಅದರ ಅಸಹಾಯಕ ಸ್ಥಿತಿಯ ಬಗ್ಗೆ ಆತನಿಗೆ ಅಪಾರ ಕರುಣೆ. ಅದಕ್ಕೆ ಮಾರ್ಗದರ್ಶನ ಮಾಡಿ ಎಲ್ಲ ಕಡೆ ಸುಭಿಕ್ಷ ನೆಲೆಸೋ ಹಾಗೆ ಮಾಡಬೇಕೆನ್ನುವುದೇ ಆತನ ಆಸೆ, ಮಹತ್ವಾಕಾಂಕ್ಷೆ ಅವನನ್ನು ಎತ್ತರಕ್ಕೆ ಕೊಂಡೊಯ್ದರೆ ವಸ್ತುಸ್ಥಿತಿ ಅವನನ್ನು ಪಾತಾಳಕ್ಕೆ ತಳ್ಳುತ್ತದೆ. ಸ್ವಲ್ಪ ಪ್ರಭಾವ, ಕಿಲ ಕಿಲ ನಗೆ, ಜನಪ್ರಿಯ ತತ್ವಜ್ಞಾನದ ಬಲದಿಂದಲೇ ವ್ಯಾಪಾರ ಶುರುಮಾಡಿ, ಅದನ್ನು ಬಚಾಯಿಸಿಕೊಳ್ಳೋಕೆ ಕಂಟ್ರಾಕ್ಟು, ಕಂಟ್ರಾಕ್ಟ್ರು ಬಚಾಯಿಸಿಕೊಳ್ಳೋಕೆ ರಾಜಕೀಯ. ಹೀಗೆ ಅವನ ಪತನದ ದಾರಿ ಕಡಿದಾಗುತ್ತ ಹೋಗುತ್ತದೆ; ಒಂದು ಘಟ್ಟದಲ್ಲಿ ಉಳಿಯುವುದು ಕೇವಲ ಭಂಡತನ ಮಾತ್ರ.
ಆದರೆ ವ್ಯಕ್ತಿ ಇದಕ್ಕೆ ಪೂರ್ತಿ ಹೊಣೆಗಾರನಲ್ಲ ; ಅವನಷ್ಟೇ ಅವನ ಸುತ್ತಣ ಪರಿಸರವೂ ಹೊಣೆ. ನಾಯಿಗಳ ಸ್ನೇಹ ಮಾಡಿದ ಮೇಲೆ ತಾನೆ ನಿಮಗೆ ವಾಸನೆ ಹಿಡಿಯೋ ವಿದ್ಯೆ ಕರಗತವಾದದ್ದು ? ಎಂದು ಆತ ಪ್ರಶ್ನಿಸುತ್ತಾನೆ ಆದರೂ ಅವನು ಅಪರಾಧಿ ಪ್ರಜ್ಞೆಯಿಂದ ಬಳಲುತ್ತಿದ್ದಾನೆ; ಮುಗುಳ್ಳಗಲಾರ. ಆದ್ದರಿಂದಲೇ ತಾನು ಮಾಡಿದ ನಾನಾ ಬಗೆಯು ಕೊಲೆಗಳ ಬಗ್ಗೆ ತನ್ನೊಪ್ಪಿಗೆ ಕೊಡುತ್ತಾನೆ. ಹಾಗೆ ತಪ್ಪೊಪ್ಪಿಗೆ ಕೊಡುತ್ತಲೇ ಎಲ್ಲದರ ಹಿಂದಿರುವ ವ್ಯಾಪಾರಿ ಧರ್ಮ ಮತ್ತು ಟೊಳ್ಳುತನದ ಬಗ್ಗೆ ಮಾತಾಡುತ್ತಾನೆ. ತಾನು ಬ್ಲಾಕ್ ಮಾರ್ಕೆಟ್ ಮಾಡಿದ್ದು, ಕುದುರೆ ಜೂಜಾಡಿದ್ದು ಹೇಗೆ ವ್ಯಾಪಾರವೋ ಹಾಗೆಯೇ ಮಹಾಜನತೆ ಆದರ್ಶವೆಂದು ಭಾವಿಸಿರುವ-ದೊಡ್ಡವರಿಗೆ ವಿಧೇಯತೆ, ಪ್ರೇಮ, ವಿದ್ಯೆ, ವಿದ್ಯಾದಾನ-ಎಂಬಿವೂ ವ್ಯಾಪಾರವೆಂದು ಸ್ಪಷ್ಟಪಡಿಸುತ್ತಾನೆ.
ತನ್ನ ಮತ್ತು ಇತರರ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಈ ವಿರೋಧಾಭಾಸ ಮತ್ತು ಗೊಂದಲದ ಬಗ್ಗೆ ಮಾತಾಡುವ ಆತನನ್ನು ಬೇರೆಯವರಿಂದ ಪ್ರತ್ಯೇಕಿಸಿ, ಅವನ ಅಕೌಂಟನ್ನೇ ಮುಖ್ಯವಾಗಿ ಹೇಳುತ್ತಾರೆ ಅಪರಿಚಿತರು. ಇದು ಅವನನ್ನು ಹೆದರಿಕೆಗೆ ಗುರಿಮಾಡಿ ಜ್ಞಾಪಕಶಕ್ತಿ ಕಳೆದುಹೋಗುತ್ತದೆ. ಆಗ ಅವನಿಗೆ ಪರಿಚಿತವಾದ ಅನೇಕ ಸ್ಥಳಗಳ ಹೆಸರುಗಳ ನಾನೋಚ್ಚಾರಣೆಯನ್ನು ಮೂವರು ವ್ಯಕ್ತಿಗಳೂ ಮಾಡತೊಡಗುತ್ತಾರೆ ; ಕೂಡಲೆ ವ್ಯಕ್ತಿ ಎಚ್ಚರಾಗುತ್ತಾನೆ.
ಹೀಗೆ ಕ್ರಮೇಣ ವ್ಯಕ್ತಿಯ ಸುತ್ತ ಮಾತಿನ ಬಲೆ ಹರಡಿದ ಅಪರಿಚಿತರು ಅವನು ವಾಸಿಸುತ್ತಿರುವ ಮನೆ, ಅದರ ಹಿಂದಿನ ಯಜಮಾನ, ಈತ ಯಜಮಾನನನ್ನು ಕೊಂದದ್ದು, ತಾನು ಯಜಮಾನನಾದದ್ದು -ಇತ್ಯಾದಿ ಯಾವತ್ತೂ ವಿವರಗಳನ್ನು ಅವನ ಬಾಯಿಂದಲೇ ಹೊರಡಿಸುತ್ತಾರೆ. ಆದರೆ ಈ ಮೂವರ ವರ್ತನೆ ಹಾಗೂ ಮಾತಿನ ಧಾಟಿ ವ್ಯಕ್ತಿಗೆ ಸಂದೇಹ ಹುಟ್ಟಿಸುತ್ತದೆ ; ಅಲ್ಲಿಂದ ಕಾಲ್ತೆಗೆಯಲು ಅನುವಾಗುತ್ತಾನೆ.
ಇಲ್ಲಿಯವರೆಗೆ ಪತ್ತೆದಾರರಂತೆ ವಿಷಯ ಸಂಗ್ರಹಿಸುತ್ತಿದ್ದವರು ಈಗ ಇದ್ದಕ್ಕಿದ್ದಂತೆ ನ್ಯಾಯ ವಿಚಾರಣೆ ಆರಂಭಿಸುತ್ತಾರೆ. ಅವರೆಲ್ಲರಲ್ಲಿ ಕುಳ್ಳನೂ ಒರಟನೂ ಆದ ಕಿಟ್ಟ ನ್ಯಾಯಾಧೀಶನಾಗುತ್ತಾನೆ ; ವ್ಯಕ್ತಿಯ ಕೊನೆಯ ಹೇಳಿಕೆಯನ್ನು ಕೇಳುತ್ತಾನೆ. ಪರಿಸ್ಥಿತಿಯಿಂದ ಎಚ್ಚರಗೊಂಡ ವ್ಯಕ್ತಿ ಹುಷಾರಾಗಿ ಮಾತಾಡತೊಡಗುತ್ತಾನೆ; ತನ್ನ ಅಸಹಾಯಕತೆಯನ್ನು, ದೇಶಕ್ಕಾಗಿ ತಾನು ಮಾಡಿದ ಸೇವೆಯನ್ನು ಪ್ರಸ್ತಾಪಿಸುತ್ತಾನೆ, ತಾನು ಸಾವಿರ ತಪ್ಪು ಮಾಡಿದ್ದರೂ ಒಂದು ಒಳ್ಳೆ ಕೆಲಸ ಮಾಡುವ ಉದ್ದೇಶದಿಂದಲೇ ಮಾಡಿದ್ದಾನೆಂದು ಸಮರ್ಥಿಸಿಕೊಳ್ಳಲು ಹೋಗುತ್ತಾನೆ. ಆದರೆ ಇವನ ಮಾತುಗಳು ಮೂರು ಕಿವುಡ ಕಿವಿಗಳ ಮೇಲೆ ನಿರರ್ಥಕವಾಗಿ ಬೀಳುತ್ತವೆ. ಆತನಿಗೆ ಮುಂದೆ ಮಾತಾಡಲು ಅವಕಾಶ ಕೊಡದೆ ಚಿಕ್ಕ ಸ್ಟೂಲಿನ ಮೇಲೆ ನಿಲ್ಲಿಸುತ್ತಾರೆ. ತನಗೆ ಮಾತಾಡಲು ಬರುವುದಿಲ್ಲವೆಂದೂ, ದುರ್ಬಲಜೀವಿಯೆಂದೂ, ತನ್ನನ್ನು ರಕ್ಷಿಸಬೇಕೆಂದೂ, ವ್ಯಕ್ತಿ ಅಂಗಲಾಚುತ್ತಿರುವಾಗಲೇ ನಿಧಾನವಾಗಿ ನೇಣಿನ ಕುಣಿಕೆ ಆತನ ಕೊರಳನ್ನು ಸುತ್ತಿಕೊಳ್ಳುತ್ತದೆ.
ವಾಚ್ಯದ ನೆಲೆಯಲ್ಲಿ ಕಣ್ಣಿಟ್ಟು ನೋಡಿದಾಗ ನಾಟಕದ ಅಸ್ಥಿಪಂಜರವನ್ನು ಹೀಗೆ ಹಿಂಬಾಲಿಸಬಹುದಾದರೂ, ಅದರ ರಕ್ತ ಮಾಂಸಗಳು ಅಲ್ಲಿ ಬರುವ ಸಂಕೇತಗಳು ಅನುಭವದ ದೃಷ್ಟಿಯಿಂದ ಸಾರ್ವತ್ರಿಕವಾದ ಹಾಗೂ ವೈಯಕ್ತಿಕವಾದ ಅನೇಕ ಸಂಕೇತಗಳನ್ನು ಬಳಸಿಕೊಂಡು ಸಂಪರ್ಕ ಪಡೆಯಲು ನಾಟಕಕಾರರು ಯತ್ನಿಸಿರುವುದರಿಂದ ನಾಟಕದ ರೂಪ ಸಂಕೀರ್ಣಗೊಂಡು ಮಾತುಗಳ ಮಿತವ್ಯಯ ಸಾಧಿತವಾಗಿದೆ.
ಕಂಠಿ, ವಿಟ್ಟಿ ಮತ್ತು ಕಿಟ್ಟಿಯರು ಮತ್ತೆ ಮತ್ತೆ ಪ್ರಸ್ಥಾಪಿಸುವ ಮನೆ, ವ್ಯಕ್ತಿಯ ಬದುಕಿನ ಸಂಕೇತವಾಗುತ್ತದೆ; ಅದರಲ್ಲಿ ಹಿಂದೆ ವಾಸಿಸುತ್ತಿದ್ದ ಯಜಮಾನ, ವ್ಯಕ್ತಿಯ ಆತ್ಮಕ್ಕೆ 1 ಸಂಕೇತವಾಗುತ್ತಾನೆ. ಯಜಮಾನನನ್ನು ಕೊಲೆ ಮಾಡಿ ಮನೆಯೊಡೆಯನಾದ ವ್ಯಕ್ತಿ ಆತ್ಮವನ್ನು ಕಳೆದುಕೊಂಡ ದಿವಾಳಿತನದ ಬದುಕಿಗೆ ಸಂಕೇತವಾಗುತ್ತಾನೆ. ಮನೆಯೊಡೆಯನನ್ನು ಹುಡುಕಿಕೊಂಡು ಬಂದ ಮೂವರು ಅವನ ಭೂತಕ್ಕೆ ಸಂಕೇತವಾಗುತ್ತಾರೆ. ಕಂಠಿ, ವಿಟ್ಟಿ, ಕಿಟ್ಟಿ ಎಂದು ತಮ್ಮ ಹೆಸರನ್ನು ಹೇಳಿಕೊಂಡ ಇವರಲ್ಲಿ ವಿಟ್ಟ ಮತ್ತು ಕಿಟ್ಟಯರು ತಾವು ಬಾಕ್ಸರ್ ಮತ್ತು ಬೂದುನಾಯಿಗಳೆಂದು ಪರಿಚಯ ಮಾಡಿಕೊಳ್ಳುತ್ತಾರೆ. ಸ್ವಾಮಿನಿಷ್ಠೆಗೆ ಹೆಸರಾದ ಈ ಇಬ್ಬರೂ ತಮ್ಮ ಯಜಮಾನರೇನಾದರೋ ಎಂದು ತಲಾಸ್ ಮಾಡಲು ಬಂದಿದ್ದಾರೆ. ವಿಟ್ಟಿ ಮತ್ತು ಕಿಟ್ಟಿಯರಲ್ಲದೆ ಮತ್ತೊಂದು ನಾಯಿಯ ವಿಚಾರವೂ ನಾಟಕದಲ್ಲಿ ಬರುತ್ತದೆ. ಈ ನಾಯಿಯೂ ಆತನ ಭೂತಕ್ಕೆ ಸಂಕೇತ. ಅದು ಅವನು ಹೋದಲ್ಲೆಲ್ಲಾ ಹಿಂಬಾಲಿಸಿ ಆತನ ಸಣ್ಣತನವನ್ನು ಬಯಲಿಗೆಳೆಯುತ್ತದೆ. ಈತ ಚಿಳ್ಳ ಪಿಳ್ಳೆಗಳ ಕ್ಲಾಸಿನಲ್ಲಿ ದೇಶ, ಜಾತಿ, ಮತ, ನಿಷ್ಕಾಮ ಕರ್ಮದ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಿದ್ದಂತೆಯೇ ಈ ಬುಲ್‌ಡಾಗ್ ಇದ್ದಕ್ಕಿದ್ದಂತೆ ಆವತರಿಸಿ ‘ಎರಡು ಜಡೆ, ಮುದ್ದು ಮುಖ, ಫಳ ಫಳ ಕಣ್ಣುಗಳು’ ಬಳಿ ನಿಂತು ಅರಚುತ್ತದೆ.
ಈ ನಾಟಕದಲ್ಲಿ ಬಳಸಿರುವ ಸಂಕೇತಗಳಲ್ಲಿ ಕೆಲವು ಸಾರ್ವತ್ರಿಕವಾಗಿದ್ದರೆ ಮತ್ತೆ ಕೆಲವು ವೈಯಕ್ತಿಕವಾಗಿವೆ ಉದಾಹರಣೆಗೆ ಮನೆ ಮತ್ತು ಯಜಮಾನನ ಸಂಕೇತ ಹಾಗೂ ನಾಯಿಯ ಸಂಕೇತಗಳನ್ನು ಸಾರ್ವತ್ರಿಕ ಅನುಭವದ ಹಿನ್ನೆಲೆಯಲ್ಲಿ ವ್ಯಾಖ್ಯಾನಿಸಬಹುದು. ಮನೆ ಮತ್ತು ಮನೆಯ ಯಜಮಾನ ಎಂಬ ಅರ್ಥದಲ್ಲಿ ಬದುಕು ಮತ್ತು ಅದನ್ನು ಸತ್ಪಥದಲ್ಲಿ ನಡೆಸುವ ಆತ್ಮಕ್ಕೆ ಸಂಕೇತವಾಗಿ ನಮ್ಮ ಅನುಭಾವಿಗಳು ಬಹು ಹಿಂದಿನಿಂದಲೂ ಬಳಸುತ್ತ ಬಂದಿದ್ದಾರೆ. ಬಸವಣ್ಣನವರ ಒಂದು ವಚನದಲ್ಲಿ ಆತ್ಮವನ್ನು ಕಳೆದುಕೊಂಡ ವ್ಯಕ್ತಿಯ ರಿಕ್ತಸ್ಥಿತಿಯನ್ನು ಹೀಗೆ ಬಣ್ಣಿಸಲಾಗಿದೆ:
______________
1 ಇಲ್ಲಿ ‘ಆತ್ಮ’ ಎಂಬ ಪದವನ್ನು ಸಾಕ್ಷಿಪ್ರಜ್ಞೆ’ ಎಂಬ ಅರ್ಥದಲ್ಲಿ ಬಳಸಲಾಗಿದೆ.
______________
ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ,
ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ ?
ತನುವಿನೊಳಗೆ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ,
ಮನೆಯೊಳಗೆ ಮನೆಯೊಡೆಯನಿಲ್ಲ ಕೂಡಲಸಂಗಮದೇವ.
ಈ ನಾಟಕದಲ್ಲಿ ಬರುವ ಮನೆ, ಯಜಮಾನ ಮತ್ತು ವ್ಯಕ್ತಿಯ ಸಂಬಂಧಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಆಶ್ಚರ್ಯವಾಗುವಷ್ಟು ಪ್ರಮಾಣದಲ್ಲಿ ಬಸವಣ್ಣನವರ ಮೇಲಿನ ವಚನದೊಂದಿಗೆ ಸಾದೃಶ್ಯವನ್ನು ಗುರುತಿಸಬಹುದು. ‘ಕಂಠಿ ಹೇಳುವ ಈ ಕೆಲವು ಮಾತುಗಳನ್ನು ಪರಿಶೀಲಿಸಿದರೆ ಸಂದೇಹ ಮತ್ತಷ್ಟು ದೃಢಪಡುತ್ತದೆ: “ಆದ್ರೆ ಸ್ವಾಮಿ, ನಾವು ಚಿಕ್ಕೋರಿದ್ದಾಗ ನೀವೇ ಹೇಳಿದ್ರಿ ಈ ಮನೆ ಇಂಥ ಒಬ್ಬ ಪುಣ್ಯಾತ್ಮರದು ಅಂತ, ಇದರ ಹೊಸಿಲು ಸಾರಿಸಿ ರಂಗೋಲಿ ಹಾಕಿರ‍್ತಿದ್ರು. ಸಂಜೆ ದೀಪ ಹಚ್ಚಿರ‍್ತಿದ್ರು. ಒಂದು ಸಲ ನೀವು ಯಜಮಾನ್ರನ್ನೂ ತೋರಿಸಿದ ಹಾಗೆ ನೆನೆಪು.”
ಭಾರತೀಯ ಪರಂಪರೆಯಲ್ಲಿ ‘ಮನೆ’ ಮತ್ತು ‘ಯಜಮಾನ’ ವ್ಯಕ್ತಿಯ ‘ಬದುಕು’ ಮತ್ತು ‘ಆತ್ಮಕ್ಕೆ ಸಂಕೇತವಾದಂತೆ, ನಾಯಿ ಮಾನವನನ್ನು ಎಡೆಬಿಡದೆ ನೆರಳಿನಂತೆ ಹಿಂಬಾಲಿಸುವ ಕರ್ಮಕ್ಕೆ ಸಂಕೇತವಾಗುತ್ತದೆ. ಮಹಾಭಾರತದಲ್ಲಿ ಬರುವ ಕತೆಯಂತೆ ಧರ್ಮರಾಜ ಸಶರೀರನಾಗಿ ಸ್ವರ್ಗಾರೋಹಣ ಮಾಡಿದಾಗ ಒಬ್ಬೊಬ್ಬರಾಗಿ ಆತನ ತಮ್ಮಂದಿರು ಮತ್ತು ಮಡದಿ ಮಾರ್ಗ ಮಧ್ಯದಲ್ಲಿ ಕಳಚಿಕೊಳ್ಳುತ್ತಾರೆ; ಆದರೆ ಒಂದು ನಾಯಿ ಮಾತ್ರ ಅವನನ್ನು ಹಿಂಬಾಲಿಸುತ್ತದೆ. ಬದುಕಿನ ಸರಿ ತಪ್ಪುಗಳ “ಅ೦ತಿನು ವಿಚಾರಣೆ ನಡೆದಾಗ ಎಲ್ಲದಕ್ಕೂ ‘ದಾಖಲೆ’ಯಾಗಿ ನಿಲ್ಲುವ ಈ ನಾಯಿಯೇ ಮತ್ತೊಂದು ಅರ್ಥದಲ್ಲಿ ನ್ಯಾಯಾಧೀಶ; ತನ್ನ ಕರ್ಮದ ಫಲವನ್ನು ತಾನೆ ಅನುಭವಿಸಬೇಕು ಎಂಬ ಅರ್ಥದಲ್ಲಿ. ಈ ಹಿನ್ನಲೆಯಲ್ಲಿ ತನ್ನನ್ನು ಬಾಕ್ಸರ್ ತಳಿಗೆ ಸೇರಿದ ನಾಯಿಯೆಂದು ಪರಿಚಯಿಸಿಕೊಂಡ ಕಿಟ್ಟಿ ಇಲ್ಲಿ ನ್ಯಾಯಾಧೀಶನಾಗಿ ವ್ಯಕ್ತಿಗೆ ನೇಣಿನ ಶಿಕ್ಷೆ ವಿಧಿಸುವ ಸಂಕೇಶದ ಅರ್ಥ ಮಾಡಿಕೊಳ್ಳಬೇಕು.
ವ್ಯಕ್ತಿ ತನ್ನ ಜ್ಞಾಪಕಶಕ್ತಿಯನ್ನು ಕಳೆದುಕೊಂಡಾಗ, ಕಂಠಿಃ “ಹೌದು, ಭೂಲೋಕ …ಡೆಲ್ಲಿ, ಲಂಡನ್, ಹರಪನಹಳ್ಳಿ, ಬೆಂಗಳೂರು, ತೀರ್ಥಹಳ್ಳಿ, ಕೆಂಪೇಗೌಡ ರೋಡು
________________
1 ಈ ನಾಟಕದ ಮುಂಚಿನ ಹೆಸರು ‘ಮೃಗಗಳಿಗಂಜಿದೊಡೆಂತಯ’ ಎಂದಿತ್ತೆಂಬುದು ಗಮನಾರ್ಹ.
________________
…ಮಂಚೇಗೌಡ, ಪ್ರಜಾವಾಣಿ, ನಿಜಲಿಂಗಪ್ಪ…ರೆಕ್ಸ್…ಸೀಮೆಎಣ್ಣೆ… ಹುಚ್ಚಾಸ್ಪತ್ರೆ …. ಆದರ್ಶ ಸ್ತ್ರೀ” ಇತ್ಯಾದಿ ಬಡಬಡಿಸುತ್ತಾ ಅಸಂಬದ್ದ ನಾಮೋಚ್ಚಾರಣೆ ಮಾಡುವುದು, ಅದರ ಪರಿಣಾಮವಾಗಿ ವ್ಯಕ್ತಿಗೆ ಭೂಲೋಕದ ಗಾಳಿ ಬೀಸಿದಂತಾಗಿ ಸಂತೋಷಪಡುವುದು, ಇಂಗ್ಲಿಷ್ ಅಸಂಬದ್ಧ ನಾಟಕಗಳಲ್ಲಿ ಬಳಸಿರುವ ತಂತ್ರ. ಆ ಒಂದೊಂದು ಪದವೂ ಒಂದೊಂದು ಅನುಭವಕ್ಕೆ ಸಂಕೇತವಾಗಿದ್ದು, ಅನೇಕ ಬಗೆಯ
ಅನುಭವಗಳನ್ನು ಏಕಕಾಲದಲ್ಲಿ ಅತ್ಯಂತ ತೀವ್ರವಾಗಿ ಮನಸ್ಸಿಗೆ ತಂದುಕೊಡುತ್ತದೆ. ಈ ಸಂದರ್ಭದಲ್ಲಿ ಮೂರು ಜನರೂ ಒಂದೊಂದು ಪದವನ್ನು ಉಚ್ಚರಿಸುತ್ತಾ, ವರ್ತುಲಾಕಾರದಲ್ಲಿ ವ್ಯಕ್ತಿಯನ್ನು ಸುತ್ತುತ್ತಾ ಆರಾಧಿಸು (ritual) ವುದನ್ನು ರಂಗದ ಮೇಲೆ ಪ್ರಯೋಗಿಸಿದರೆ, ಅದರಿಂದಾಗುವ ಪರಿಣಾಮ ಅಸಾಧಾರಣವಾದುದು, ಈ ತಂತ್ರ ಇಂಗ್ಲಿಷ್’ ಅಸಂಗತ ನಾಟಕಕಾರ ಪಿಂಟರ್‌ನ ‘ಬರ್ತ್‌ಡೇ ಪಾರ್ಟಿ’ಯನ್ನು ನೆನಪಿಗೆ ತರುತ್ತದೆ.
ಮೇಲೆ ಹೇಳಿದ ಕೆಲವು ಸಂಕೇತಗಳು ಸಾರ್ವತ್ರಿಕವಾಗಿದ್ದರೆ ವಿಟ್ಟಿ ಹೇಳುವ ಈ ಮಾತಿನ ಸಾಂಕೇತಿಕ ಅರ್ಥದ ಅನುಭವ ವೈಯಕ್ತಿಕವಾದದ್ದು: “ಚಿತ್ರಗಳನ್ನು ಅಭ್ಯಾಸ ಮಾಡಿದರೆ ಮನುಷ್ಯನ ನೆನಪು ನಿಲುಕಲಾರದಷ್ಟು ಹಿಂದಿನ ಕಲ್ಲುಗಳ ಮೇಲೆ ಈ ಸ್ನೇಹಿತರ ಚಿತ್ರಗಳಿವೆ; ಈ ಸ್ನೇಹಿತರ ಪಕ್ಕದಲ್ಲಿ ಯಜಮಾನ, ಅವರೆಲ್ಲರ ಸುತ್ತಕಾಡು. ಇಂಥ ಒಂದು ಚಿತ್ರ ಐವತ್ತು ಸಾವಿರ ವರ್ಷ ಹಳೆಯದು.” ಇದೇ ಮಾದರಿಯ ಮತ್ತೊಂದು ಸಂಕೇತವೆಂದರೆ “ತರಗತಿಯಲ್ಲಿ ಹೊಕ್ಕು ಎರಡು ಜಡೆ ಪಿಳಿ ಪಿಳಿ ಕಣ್ಣುಗಳ ಹತ್ತಿರ ನಿಂತು ಬೊಗಳಲು ಆರಂಭಿಸಿದ ಬುಲ್‌ಡಾಗ್” ಘಟನೆ. ಅತ್ಯಂತ ವೈಯಕ್ತಿಕ ಮಾದರಿಯ ಈ ಬಗೆಯ ಸಂಕೇತಗಳಿಗೆ ವಿವರಣೆ ಕೊಡುವುದು ಸ್ವಲ್ಪ ಕಷ್ಟವಾದರೂ, ಅವು ಮನಸ್ಸಿನ ಆಳವನ್ನು ಹೊಕ್ಕು ಅಸ್ಪಷ್ಟವಾದ ಒಂದು ಬಗೆಯ ನಿಗೂಢ – ಆವರಣವನ್ನು ಕಲ್ಪಿಸಿಕೊಳ್ಳುತ್ತವೆ; ನಮ್ಮ ನೆನಪುಗಳನ್ನೇ ಎಚ್ಚರಿಸಿದಂಥ ಅನುಭವವಾಗುತ್ತದೆ.
ಸಂಕೇತದಂತೆ ಕಾಣುವ ಒಗಟಿನ ಮಾದರಿಗೆ ಉದಾಹರಣೆಯಾಗಿ, ಜನಸ್ತೋಮವನ್ನು ಕುರಿತು ವ್ಯಕ್ತಿ ಹೇಳುವ ಮಾತುಗಳನ್ನು ಕೊಡಬಹುದು : “ಹೆದರ‍್ಕೊಂಡ್ ಹೋದರೆ ಮೈಮೇಲೆ ಬರುತ್ತೆ, ಅಟ್ಟಿಸಿಕೊಂಡು ಹೋದ್ರೆ ಓಡಿಹೋಗುತ್ತೆ…..ಕನಸು ಕಟ್ಟುತ್ತ…. ನೆಲ ಅಗೆಯುತ್ತೆ………ಎರಡು ಒಳ್ಳೆ ಮಾತಾಡಿದ್ರೆ ವಿಧೇಯವಾಗಿರುತ್ತೆ….ಚಿನ್ನ ಇಲ್ಲದ ಹತ್ರ ಆತ್ಮ ಮಾತ್ರ ನೋಡುತ್ತೆ.”
ಈ ನಾಟಕದಲ್ಲಿ ಬರುವ ಬೇರೆ ಬೇರೆ ಸಂಕೇತಗಳು ಒಂದೊಂದು ಅನುಭವವನ್ನು ಅರ್ಥೈಸಿದಂತೆ, ಇಡೀ ನಾಟಕವೇ ಒಂದು ಉತ್ತಮ ಸಂಕೇತವಾಗುವ ಸಾಧ್ಯತೆಯನ್ನೂ ಗಮನಿಸದಿರುವಂತಿಲ್ಲ.
ಶೋಷಿತ ವರ್ಗ ಮತ್ತು ಶೋಷಕ ವರ್ಗಗಳ ನಡುವೆ ಆಗುವ ಘರ್ಷಣೆ ಹಾಗೂ ಅದರ ಪರಿಣಾಮವನ್ನೂ ಒಂದು ರೀತಿಯಲ್ಲಿ ನಾಟಕ ಸಂಕೇತಿಸುತ್ತದೆ.
ದುರ್ಬಲರ ಬಾಯಿ ಮುಚ್ಚಿಸಲು ಬಲಶಾಲಿಗಳು ಎಲ್ಲ ಕಾಲದಲ್ಲೂ ಅನುಸರಿಸಿಕೊಂಡು ಬಂದಿರುವ ಉಪಾಯಗಳಲ್ಲಿ ದಂಡವೇ ಕೊನೆಯದೆಂದೂ, ಈ ಅಸ್ತ್ರ ಒಮ್ಮೊಮ್ಮೆ ಪ್ರತ್ಯಸ್ತ್ರವಾಗಿ ಬಿಟ್ಟವರಿಗೇ ಹಿಂದಿರುಗಿ ಬಂದು ಬಡಿದಿರುವುದೂ ಉಂಟೆಂಬುದನ್ನೂ ಮತ್ತೊಂದು ರೀತಿಯಲ್ಲಿ ಸಂಕೇತಿಸುತ್ತದೆ. ನಾಟಕದ ಮೊದಲ ಘಟ್ಟದಲ್ಲಿ ವ್ಯಕ್ತಿಯ ಕೈ ಮೇಲಾಗಿದ್ದಾಗ ಕಂಠಿಯ ಮೂಲಕ ‘ಕಿಟ್ಟಿ’ ಯನ್ನು ಹಿಂಸಿಸುತ್ತಾನೆ; ನಾಟಕದ ಕೊನೆಯ ಘಟ್ಟದಲ್ಲಿ ವ್ಯಕ್ತಿ ನಿರ್ವಿಣ್ಣನಾದಾಗ ವಿಟ್ಟಿ ಅವನನ್ನು ಹಿಂಸಿಸುತ್ತಾನೆ; ಕೊನೆಗೆ ಮೂವರೂ ಸೇರಿ ವ್ಯಕ್ತಿಯನ್ನು ನೇಣಿಗೆ ಗುರಿಪಡಿಸುತ್ತಾರೆ.
ಚತುರ್ವರ್ಣಗಳು ಮತ್ತು ಚತುರೋಪಾಯಗಳನ್ನೂ ಪ್ರತಿನಿಧಿಸಬಲ್ಲ ಈ ನಾಟಕದ ನಾಲ್ಕು ವ್ಯಕ್ತಿಗಳು ಇನ್ನಿತರ ಅನೇಕ ಅರ್ಥಗಳಿಗೆ ದಾರಿ ಮಾಡಿಕೊಡುತ್ತಲೇ ನಾಟಕದ ಘರ್ಷಣೆಯನ್ನು ಕಾಪಾಡಿಕೊಂಡು ಬರುವುದು ಇಲ್ಲಿಯ ವೈಶಿಷ್ಟ್ಯ ಹಾಗೂ ಸ್ವಾರಸ್ಯ.
ಈ ನಾಟಕದ ಭಾಷೆ ಗಡುಸಾದುದು; ಕಾವ್ಯಮಯ ಭಾಷೆಯನ್ನು ಕುರಿತು ಒಂದು ರೀತಿಯ ವ್ಯಂಗ್ಯವನ್ನೂ ನಾಟಕಕಾರರು ವ್ಯಕ್ತಪಡಿಸಿದ್ದಾರೆ. ವ್ಯಕ್ತಿ, ಕಾವ್ಯಶೈಲಿಯಲ್ಲಿ ಮಾತಾಡಲು ಹೋದಾಗ ಕಿಟ್ಟಿ ಅವನನ್ನು ತಡೆದು, ಕೇಳಿದ್ದಕ್ಕೆ ಉತ್ತರ ಹೇಳು-ಎಂದು ಗದರಿಸುತ್ತಾನೆ; ಆಗ ವ್ಯಕ್ತಿ, ಗದ್ಯಶೈಲಿಗೆ ಹಿಂದಿರುಗುತ್ತಾನೆ. ಆದರೂ ಸಂಭಾಷಣೆಗೆ ಭಾಷೆಯನ್ನು ಅಳವಡಿಸಿಕೊಳ್ಳುವಾಗ ಉದ್ದೇಶಪೂರ್ವಕವಾಗಿ ವ್ಯಕ್ತಿಯ ಭಾಷೆ ಬೇರೆ ಮೂವರ ಭಾಷೆಗಿಂತ ಭಿನ್ನವಾಗಿರುವಂತೆ ನೋಡಿಕೊಂಡಿದ್ದಾರೆ. ವ್ಯಕ್ತಿ ಸುಂದರ ಮಾತುಗಳ ಹಂದರ ಕಟ್ಟಬಲ್ಲವನೆಂಬ ಕಲ್ಪನೆಗನು ಸಾರವಾಗಿ ಅವನ ಮಾತು ಮತ್ತು ಶೈಲಿ, ಕಂಠಿ ಸಮಯಸಾಧಕ ಅದಕ್ಕೆ ತಕ್ಕಂತೆ ಗ್ರಾಂಥಿಕ ಭಾಷೆ ಅವನದು. ವಿಟ್ಟಿ ಮತ್ತು ಕಿಟ್ಟಯರು ಅವರ ಸ್ವಭಾವಕ್ಕೆ ತಕ್ಕಂತೆ ತೀರಾ ಒರಟಾದ ಉಪಭಾಷೆ’ಯಲ್ಲಿ ಮಾತಾಡುತ್ತಾರೆ.
ಸಾಮಾನ್ಯವಾಗಿ ನಾಟಕದ ಚೌಕಟ್ಟಿನೊಳಗೆ ಹಾಸ್ಯದ ಚಟಾಕಿ ಹಾರಿಸುವುದು ಲಂಕೇಶರ ವೈಶಿಷ್ಟ್ಯ; ಅದು ಸಂದರ್ಭಕ್ಕನುಗುಣವಾಗಿರುತ್ತದೆ. ಆದರೆ ಒಮ್ಮೊಮ್ಮೆ ನಗೆಗಾಗಿ ನಗೆ ಎಂಬ ಚಪಲಕ್ಕೆ ಒಳಗಾಗಿ ನಾಟಕದೊಡನೆ ಅಗತ್ಯ ಸಂಬಂಧ ಪಡೆಯದ ಹಾಸ್ಯವನ್ನೂ ತುರುಕಿಬಿಡುತ್ತಾರೆ. ಮಂತ್ರಿಯೊಬ್ಬರು ತರಕಾರಿ ವ್ಯಾಪಾರ ಮಾಡುತ್ತಾ ಕೈಚೀಲದ ಬದಲು ಟೊಪ್ಪಿಗೆ ಒಡ್ಡಿದ ಪ್ರಕರಣವನ್ನು ಇದಕ್ಕೆ ಉದಾ ಹರಣೆಯಾಗಿ ಕೊಡಬಹುದು ; ಇಂಥ, ಇನ್ನೂ ಕೆಲವನ್ನು ಅವರ ಮೊದಲ ಎರಡು ನಾಟಕಗಳಿಂದ ಕೊಡಬಹುದು.
ತೆರೆಗಳು ದುರಂತ ನಾಟಕ. ಈ ನಾಟಕದ ದುರಂತತೆ ವಸ್ತುವಿನ ಅಂತರಂಗದಲ್ಲೇ ಹುದುಗಿದ್ದು, ಹಂತ ಹಂತವಾಗಿ ಸುರುಳಿ ಬಿಚ್ಚುತ್ತಾ ಹೋಗುವುದನ್ನು ಗುರುತಿಸಬಹುದು ; ಆದರೆ ಇದು ಸಂಪ್ರದಾಯಬದ್ಧ ದುರ೦ತ ನಾಟಕವಾಗಿರದೆ ಸಾಂಕೇತಿಕ ದುರಂತ ನಾಟಕವಾಗಿದೆ.
ವ್ಯಂಗ್ಯ, ವಿಡಂಬನ ಮತ್ತು ಕ್ರೂರತನಗಳು ಲಂಕೇಶರ ಎಲ್ಲ ನಾಟಕಗಳಲ್ಲಿಯೂ ಸಾಮಾನ್ಯವಾಗಿ ಎದ್ದು ಕಾಣುವ ಅಂಶಗಳು. ಅವರ ಮೊದಲ ನಾಟಕದ ನಾಯಕ ಜಗನ್ನಾಥರು, ಈ ಗುಣಗಳ ಮೂರ್ತ ಸ್ವರೂಪವಾಗಿದ್ದಾರೆ, ಈ ನಾಟಕದಲ್ಲಿಯೂ ಹಿಂಸೆ ಮತ್ತು ಕಿರುಕುಳವೇ ಸ್ಥಾಯಿಯಾಗಿ ಹಿನ್ನೆಲೆಯಲ್ಲಿದೆ. ಆದರೆ ಪ್ರಸನ್ನ, ಜಗನ್ನಾಥ ಮತ್ತು ವ್ಯಕ್ತಿಯನ್ನು ನೇಣು ಹಾಕಿದ ಮೂವರ ನಂಬಿಕೆಗಳೇ ಪರನು ಸತ್ಯವೆಂದು ಅವರು ಎಲ್ಲಿಯೂ ಹೇಳಿಲ್ಲ. ಬದುಕಿನ ಸಣ್ಣತನಗಳು ಮತ್ತು ಕಿರಿಕಿರಿಗಳಿಂದ ರೋಸಿದ ನಾಟಕಕಾರ ಈ ಬಗೆಯ ಪಾತ್ರಗಳ ಮೂಲಕ ಸಮಾಜದ ಮೇಲೆ ಹರಿಹಾಯುತ್ತಾರಾದರೂ ಸತ್ಯ ಇವೆರಡರ ನಡುವೆ ಎಲ್ಲಿಯೋ ಇದೆಯೆಂಬುದೂ, ವಿಡಂಬನೆ ಹಾಗೂ ಕ್ರೂರತನಗಳು ಎಲ್ಲ ಕಾಹಿಲೆಗಳಿಗೂ ಮದ್ದಲ್ಲವೆಂಬುದೂ ಅವರಿಗೆ ಚೆನ್ನಾಗಿ ಗೊತ್ತಿದೆ. ಆದುದರಿಂದಲೇ ಅವರ ನನ್ನ ತಂಗಿಗೊಂದು ಗಂಡು ಕೊಡಿ ನಾಟಕದಲ್ಲಿ ಕಮಲ ಹೀಗೆ ಹೇಳುತ್ತಾಳೆ : “ಸತ್ಯ, ಸತ್ಯ, ಸತ್ಯ-ಜಗತ್ತಿನ ಕೋಟ ಕೋಟಿ ತತ್ವಜ್ಞಾನಿಗಳು ಹುಡುಕಿ ಹುಡುಕೀ ಸಿಕ್ಕದೆ ಮಣ್ಣಲ್ಲಿ ಮಣ್ಣಾಗಿ ಹೋದ ಮೇಲೆ ನೀನು ಹೊಸದಾಗಿ ಹುಡುಕ್ತಿದೀಯ ಸತ್ಯಾನ ? ನಿನ್ನ ಮಾತು ನಂಬೋಕೆ ನಾನೇನು ಚಿಕ್ಕ ಪಿಳ್ಳೆ ಅಲ್ಲ. ಬದುಕಿನ ಕೊಳಕನ್ನೆಲ್ಲಾ ನನ್ನೆದೇಲಿ ಹಾಕಿ, ಅಪ್ಪನ ಹಕ್ಕನ್ನೆಲ್ಲಾ ನನಗೆ ಇಕ್ಕಿ, ನನ್ನ ಸುತ್ತ ಸಂಶಯದ ಚಿತ್ರವ್ಯೂಹ ಕಟ್ಟಿ ನನ್ನ ನಿರುಪಯುಕ್ತ ಕ್ರಿಮಿ ಮಾಡಿದೆ ಅಣ್ಣ…ತಂದೆ ಅನ್ನೋ ಸುಂದರ ಭ್ರಮೇನ, ತಾಯಿ ಅನ್ನೋ ಅಂಶವನ್ನ, ಅಣ್ಣ ಅನ್ನೋ ಸಂಬಂಧವನ್ನ ಕತ್ತರಿಸಿ ಹಾಕಿ-ಪ್ರತಿಯೊಂದನ್ನೂ ಅನುಮಾನದಿಂದ ನೋಡಿ ನೋಡಿ ಸಾವು ನಮ್ಮ ತಲೆದಿಂಬಾಗಿದೆ….”
ಟಿ. ಪ್ರಸನ್ನನ ಗೃಹಸ್ಥಾಶ್ರಮದ ಕೊನೆಯಲ್ಲಿ ಪ್ರಸನ್ನನು ಸಂಗೀತಗಾರ ಮತ್ತು ರಾಜನ ಸಾಂಕೇತಿಕ ಕತೆಯನ್ನು ಹೇಳಿ, ಇಲ್ಲಿನ ದುರಂತಕ್ಕೆ ಕಾರಣರು ಯಾರು ? ಎನ್ನುತ್ತಾನೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೊಣೆಗಾರನನ್ನು ಹೆಸರಿಸುತ್ತಾರೆ. ಆದರೆ ಪ್ರಸನ್ನ ಅದಕ್ಕೆ ಉತ್ತರವಾಗಿ ಯಾರೊಬ್ಬರೂ ತಪ್ಪಿತಸ್ಥರಲ್ಲವೆಂದೂ, ಸರಿತಪ್ಪಿನ ವಿಷಯವೇ ಇಲ್ಲಿ ಬರುವುದಿಲ್ಲವೆಂದೂ ಹೇಳುತ್ತಾನೆ.
ತೆರೆಗಳು ನಾಟಕದ ವ್ಯಕ್ತಿ ‘ನಿನ್ನ ಕೊನೆಯ ಆಸೆ ಏನು ?” ಎಂದು ಕೇಳಿದ ಕಿಟ್ಟಿಗೆ ಹೀಗೆ ಉತ್ತರ ಕೊಡುತ್ತಾನೆ : ಕೊನೇ ಆಶೆಯಂತೆ, ಕೊನೇ ಆಶೆ ! ಅಂಥದೊಂದು ಇದ್ದಿದ್ರೆ ಎಂದೋ ತೃಪ್ತಿ ಪಟ್ಟು ತೊಲಗಿ ಹೋಗ್ತಿದ್ದೆ, ಎಲ್ಲವನ್ನೂ ಸರಳಗೊಳಿಸಿ ಜಡ್ಜ್ ಮಾಡ್ತಿದೀರ…….. ಹಗಲು ಗೊತ್ತು ನಿಮಗೆ, ರಾತ್ರಿ ಗೊತ್ತು ನಿಮಗೆ ಆ ಎರಡರ ನಡುವಿನ ಕೋಟಿ ಕೋಟಿ ಬಣ್ಣಗಳು, ಶಾಖಗಳು ನಿಮಗೆ ಹೇಗೆ ಗೊತ್ತಾಗಬೇಕು ? ಹೇಗಾದರೂ ಗೊತ್ತಾಗಬೇಕು ?-
ಆದುದರಿಂದ ಲಂಕೇಶರ ದೃಷ್ಟಿ, ವ್ಯಕ್ತಿವ್ಯಕ್ತಿಯ ಸಂಬಂಧಗಳನ್ನು ಕೇವಲ ಅನುಮಾನಕ್ಕೆ ಗುರಿಮಾಡುವಷ್ಟಕ್ಕೇ ಸೀಮಿತಗೊಳ್ಳುವುದಿಲ್ಲವೆಂಬುದನ್ನು ಗಮನಿಸಬೇಕು. ತೀವ್ರ ಸಂವೇದನಾಶೀಲನಾದ ವ್ಯಕ್ತಿಗೆ ಬದುಕಿನ ಎಲ್ಲ ಘಟನೆಗಳಿಂದಲೂ ಒಂದೊಂದು ನೀತಿಪಾಠವನ್ನು ತೋರಿಸಿಕೊಡುವುದು ಕಷ್ಟವಾಗುತ್ತದೆ; ನಿಖರವಾಗಿ ಸತ್ಯವನ್ನು ಸೂತ್ರೀಕರಿಸುವುದು ಕಷ್ಟವಾಗುತ್ತದೆ; ಅಂದಮಾತ್ರಕ್ಕೆ ಆತ ಸಿನಿಕನಾಗಬೇಕಿಲ್ಲ.
ಅಸಂಗತ ರಂಗಭೂಮಿಯ ಮಹತ್ವ ಹಾಗೂ ವೈಶಿಷ್ಟ್ಯಗಳನ್ನು ಸಮರ್ಥವಾಗಿ ಪ್ರತಿಪಾದಿಸಿದ ಮಾರ್ಟೆನ್ ಎಸ್ಲಿನ್, ಅಸಂಗತ ನಾಟಕವನ್ನು ಹೀಗೆ ಸೂತ್ರೀಕರಿಸಿದ್ದಾನೆ : “ಉತ್ತಮ ನಾಟಕವೊಂದಕ್ಕೆ ಬುದ್ಧಿವಂತಿಕೆಯಿಂದ ಸೃಷ್ಟಿಸಲ್ಪಟ್ಟ ‘ಕತೆ’ ಇದ್ದರೆ, ಇವುಗಳಿಗೆ ಹೇಳಿಕೊಳ್ಳುವಂಥ ಕತೆಯಾಗಲೀ, ವಸ್ತುವಾಗಲೀ ಇರುವುದಿಲ್ಲ; ಉತ್ತಮ ನಾಟಕವೊಂದನ್ನು ಅಲ್ಲಿ ಕಂಡುಬರುವ ಪಾತ್ರವಿಕಾಸ ಹಾಗೂ ಕ್ರಿಯೆಯ ಕುಶಲ ನಿರ್ವಹಣೆಯ ಮೂಲಕ ಅಳೆದರೆ, ಇಲ್ಲಿ ಕೆಲವು ಬಾರಿ ಗುರುತಿಸುವಂಥ ಪಾತ್ರಗಳೇ ಇರುವುದಿಲ್ಲ ; ಹೆಚ್ಚು ಕಡಿಮೆ ಯಾಂತ್ರಿಕ ಗೊಂಬೆಗಳನ್ನೇ ಪ್ರೇಕ್ಷಕರೆದುರಿಗೆ ಚಾಚಿರುವುದುಂಟು, ಉತ್ತಮ ನಾಟಕವೊಂದರಲ್ಲಿ ಸಮರ್ಥವಾಗಿ ವಿವರಿಸಬಲ್ಲ ವಸ್ತುವನ್ನು ಅಚ್ಚುಕಟ್ಟಾಗಿ ಪ್ರತಿಪಾದಿಸಿ, ಮುಕ್ತಾಯವನ್ನು ತಂದು ಕೊಟ್ಟಿದ್ದರೆ, ಇವುಗಳಿಗೆ ಎಷ್ಟೋ ಬಾರಿ ಆದಿ-ಅಂತ್ಯಗಳೆರಡೂ ಇರುವುದಿಲ್ಲ. ಉತ್ತಮ ನಾಟಕವೊಂದು ತನ್ನ ಸಮಕಾಲೀನ ಸಮಾಜದ ಸ್ಥಿತಿಗತಿ, ವೈಲಕ್ಷಣ್ಯಗಳಿಗೆ ಕನ್ನಡಿ ಹಿಡಿದು ಅವುಗಳ ಸ್ವರೂಪ ಲಕ್ಷಣಗಳನ್ನು ಚಿತ್ರಿಸಿದರೆ, ಇವುಗಳು ಭಯಂಕರ ಕನಸುಗಳ ಪ್ರತಿಬಿಂಬದಂತೆ ಇರುವುದುಂಟು. ಉತ್ತಮ ನಾಟಕವೊಂದು ಸಂಭಾಷಣೆಗೆ ಚತುರೋಕ್ತಿಗಳನ್ನು ಮತ್ತು ಮೊನಚಾದ ವ್ಯಂಗ್ಯವನ್ನೂ ಅವಲಂಬಿಸಿದರೆ, ಇಲ್ಲಿ ಎಷ್ಟೋ ಬಾರಿ ಅಸಂಬದ್ಧ ಒಟಗುಟ್ಟುವಿಕೆಯನ್ನು ಬಿಟ್ಟು ಬೇರೇನೂ ಇರುವುದಿಲ್ಲ.”
ತೆರೆಗಳು ಈ ಸೂತ್ರದ ಪ್ರಕಾರ ಅಸಂಗತ ನಾಟಕಗಳ ಗುಂಪಿಗೆ ಸೇರುವುದಿಲ್ಲವೆನ್ನುವುದು ಸ್ಪಷ್ಟ. ಏಕೆಂದರೆ ಸಂಪ್ರದಾಯಬದ್ದ ರೀತಿಯಲ್ಲಿ ವಸ್ತು, ಪಾತ್ರ, ಸನ್ನಿವೇಶ ಕಲ್ಪನೆ ಹಾಗೂ ಬೆಳವಣಿಗೆಯನ್ನೇ ಮುಖ್ಯವಾಗಿ ನಾಟಕಕಾರರು ಗಮನಿಸಿಲ್ಲವಾದರೂ ಅದನ್ನು ಪೂರ್ತಿಯಾಗಿ ನಿರ್ಲಕ್ಷಿಸಿಲ್ಲ. ನಾಟಕಕಾರರೇ ‘ಪ್ರದರ್ಶನ ಟಿಪ್ಪಣಿಯಲ್ಲಿ ಹೇಳುವಂತೆ: “ಇಲ್ಲಿಯ ರೂಪು ಕೆಲವು ಮುಖ್ಯ ಅಂಶಗಳನ್ನು ಅವಲಂಬಿಸಿದೆ ; ವ್ಯಕ್ತಿಯ ಮತ್ತು ಮಿಕ್ಕ ಮೂವರ ನಡುವಿನ ಉದ್ದೇಶಪೂರ್ಣ ಅನ್ಯೋನ್ಯತೆ ಮತ್ತು ವಿಷಮತೆ ನಾಲ್ವರ ಪರಸ್ಪರ ಭಿನ್ನತೆ: ವ್ಯಕ್ತಿಯ ಘೋಷಿತ ಪ್ರತಿಷ್ಠೆ ಮತ್ತು ಆತನ ನಾಟಕೀಯ ಪತನ; ಮಿಕ್ಕವರ ಘೋಷಿತ ಶುದ್ದೀಕರಣ ಮತ್ತು ಅವರ ನಿಜವಾದ ಸಣ್ಣತನ.”
ಅಸಂಗತ ರಂಗಭೂಮಿಯ ಹಿನ್ನೆಲೆಗೆ ಒಂದು ತಾತ್ವಿಕ ಕಲ್ಪನೆಯಿದೆ; ಮಾರ್ಟಿನ್ ಎಸ್ಲಿನ್ನನ ಮಾತಿನಲ್ಲೇ ಹೇಳುವುದಾದರೆ : “ಸಾವು ಮತ್ತು ಮುಪ್ಪುಗಳನ್ನು ಅಸ್ಪಷ್ಟವಾದ ಸಾಮ್ಯೋಕ್ತಿಗಳಿಂದ ತೃಪ್ತಿಕರವಾದ ಬಾಲಭಾಷೆಯಿಂದ ಗೋಪ್ಯವಾಗಿಡುತ್ತಿರುವ ಇಂದು, ಭಯ ಹುಟ್ಟಿಸುವಂಥ ‘ಯಾಂತ್ರಿಕ ನಗ್ನತೆ’ ತನ್ನ ಮಾಯಾಜಾಲದಿಂದ ‘ಸಮೂಹಕ್ಷಯ’ಕ್ಕೆ ಕಾರಣವಾಗಿ, ಬದುಕನ್ನೇ ಉಸಿರು ಕಟ್ಟಿಸುವ ಸ್ಥಿತಿಯಲ್ಲಿ ಆವರಿಸಿದೆ. ಮನುಷ್ಯ, ವಸ್ತುಸ್ಥಿತಿಯನ್ನು’ಮುಖಾಮುಖಿ’ ಎದುರಿಸಿ ತನ್ನ ‘ನೆಲೆ’ ಯನ್ನು ಕಂಡುಕೊಳ್ಳಬೇಕಾದ ಅಗತ್ಯ ಎಂದಿಗಿಂತ ಹೆಚ್ಚಾಗಿದೆ. ಏಕೆಂದರೆ ವಸ್ತುಸ್ಥಿತಿಯನ್ನು ಅದರ ಎಲ್ಲ ಉದ್ದೇಶರಹಿತತೆಯೊಡನೆ ಎದುರಿಸುವುದರ ಮೇಲೆ ಮತ್ತು ಮುಕ್ತವಾಗಿ, ನಿರ್ಭಯವಾಗಿ, ಯಾವ ಭ್ರಮೆಯೂ ಇಲ್ಲದೆ ಅದನ್ನು ಒಪ್ಪಿಕೊಂಡು – ನಕ್ಕು ಬಿಡುವುದರ ಮೇಲೆ ಮನುಷ್ಯನ ಘನತೆ ನಿಂತಿದೆ ”
ಲಂಕೇಶ ಮತ್ತು ಇತರ ಆಧುನಿಕ ಕನ್ನಡ ನಾಟಕಕಾರರ ವೈಶಿಷ್ಟ್ಯ “ಬದುಕನ್ನು ಕುರಿತ ವಸ್ತುಸ್ಥಿತಿಗಳನ್ನು” ಒಪ್ಪಿಕೊಂಡು ಅದನ್ನು ಎದುರಿಸುತ್ತಿರುವುದರಲ್ಲಿಯೇ ಇದೆ. ಲಂಕೇಶರ ಎಲ್ಲ ನಾಟಕಗಳು-ಅದರಲ್ಲೂ ಮುಖ್ಯವಾಗಿ ತೆರೆಗಳು-ಈ ತಾತ್ವಿಕ ಹಿನ್ನೆಲೆಯಲ್ಲೇ ಬದುಕನ್ನು ವಿಶ್ಲೇಷಿಸುತ್ತಿರುವುದನ್ನು ಮರೆಯುವಂತಿಲ್ಲ.
ಎರಡು ಕವನಗಳು
ಎರಡು ಕವನಗಳು
ಬಿ. ಆರ್. ಲಕ್ಷ್ಮಣರಾವ್
೧. ಗ್ರಸ್ತ
ಮರವೇ,
ಸನಾತನ
ಬೇರ ಬಿಟ್ಟಿರುವೆ ಆಳ ;
ಆ ತಾತನ ಈ ತಾತನ
ಬಿಳಲ ಬಿಟ್ಟಿರುವೆ
ಬಹಳ ;
ನಾನೂ
ಒಂದು ಬಿಳಲಾಗಲೇ ?
ಅಥವ,
ಹಕ್ಕಿ ಬಂದಾಗ ಒಂದು,
ಕುಕ್ಕಿ ತಿಂದಾಗ ಹಣ್ಣು,
ಬೀಜವಾಗಿ,
ಹೊಕ್ಕು ಅದರ ಹೊಟ್ಟೆ,
ದಾಟಲೇ ಈ ಕಟ್ಟಿ ?
ದೂರ,
ನಿನ್ನ ಕಬಂಧ ಬಾಹುಗಳಿಂದ ದೂರ,
ನಾನೇ ಒಂದು ಬೇರ
ಊರಿ,
ಚಿಗುರಿ, ನಿಗುರಿ
ಬೆಳೆಯಲೇ?
ಆದರೆ, ಬೀಜದಲ್ಲೂ
ನನ್ನ ಗೋತ್ರ ;
ನಾ ಹೇಗಾದೇನು
ಸ್ವತಂತ್ರ ?
________________
೨. ನೆರಳುಗಳು
ಹೊರಳುತ್ತವೆ :
ನನ್ನ ಒಬ್ಬಂಟಿತನದ ಸುತ್ತ
ಸತ್ತಳೆ ಹಳದಿ
ಪ್ರೇತ
ನೆರಳುಗಳು ;
ಕಲೆ
ಕಣಿವೆಯಾಳಕ್ಕಿಳಿದು
ಹೋದವರ
ಹೊರಟೇ ಹೋದವರ
ನೆರಳುಗಳು.
ನರಳುತ್ತವೆ :
ಗಂಟಲಾಳಕ್ಕಿಳಿದ
ಬಾಳಗುಂಡಿನ
ಭಗ
ಭಗದ ಸುಖ
ಉರಿ,
ಗೂಡು, ಮರಿ,
ಪ್ರೇಮ ಕತ್ತರಿ
ಬಿಟ್ಟು.
ಹೋಗಲಾರದೆ
ಹೋದವರ
ಕೊರಳುಗಳು;
ನನ್ನ ಬೆರಳುತ್ತವೆ.
ಅರಳುತ್ತವೆ :
ನಾನು ದೀಪಗಳೆಡೆ ನಡೆದಂತಲ್ಲ
ನನ್ನ ಹಿಂದೆ ಗೋಡೆ
ಯ ಮೇಲೆ
ಹೆಡೆ ಬಿಚ್ಚಿ, ಜಡೆ ಬಿಚ್ಚಿ, ಬಡಿದಾಡಿ, ಗಹಗಹಿಸಿ,
ನೂರೊಂದು ಕೈ ಚಾಚಿ,
ಮಡುಗಟ್ಟಿ,
ನನ್ನಿಂದಲೇ ಹುಟ್ಟಿ,
ಬಂದ ಭಯ
ದ ದೈತ್ಯ
ನೆರಳುಗಳು ;
ನನ್ನ ಜೀವನಾಸಕ್ತಿಗೆ
ಉರುಳುಗಳು.
ವಚನ | ಅಲ್ಲಮ
ಅರಸಿ ಅರಸಿ ಹಾಹಾ ಎನ್ನುತ್ತಿದ್ದೆನು
ಬೆದಕಿ ಬೆದಕಿ ಬೆದಬೆದ ಬೇವುತ್ತಿದ್ದೆನು
ಕಣ್ಣ ಮೊದಲಲ್ಲಿದ್ದವನ ಕಾಣೆನು……
ಉಳ್ಳವರು ಹಗೆಯವ ತೆಗೆವನಕ್ಕರ
ಇಲ್ಲದವರ ಹರಣ ಹೋಯಿತ್ತೆಂಬ ಗಾದೆ ಎನಗಾಯಿತಯ್ಯ
ಮಾತು ಬಣ್ಣಿಸಲು ಹೊತ್ತು ಹೋಯಿತಯ್ಯ
ಒಬ್ಬರ ನೋಡುವಾಗ ಅರುವತ್ತು ಮನುಷ್ಯರ
ನೋಡುವ ಹಾಗೆ ಆಗುತ್ತಿದೆ
ಶೂನ್ಯ ಸಿಂಹಾಸನ ಬವರಿಗೊಡುತ್ತಿದೆ
ಪ್ರಾಣ ಹೆಡತಲೆಯಲ್ಲಿ ಹೋಗುತ್ತಿದೆ
ಸಂಸ್ಕೃತದಿಂದ
ಹಗಲೆಷ್ಟೋ ಒಳ್ಳೆಯದು ಬೇಡ ಈ ರಾತ್ರಿ
ರಾತ್ರಿಯೇ ಒಳ್ಳೆಯದು ಬೇಡ ಈ ಹಗಲು
ಎರಡೂ ಬೇಡ, ಸಾಯಲಿ ಸೊರಗಿ
ಪ್ರಿಯನ ಕೂಡದೆ ಯಾವುದೇತಕಾಗಿ ?
ಹೊರಳುದಾರಿಯಲ್ಲಿ ಕೆ.ಎಸ್.ನ
ಹೊರಳುದಾರಿಯಲ್ಲಿ ಕೆ. ಎಸ್. ನ.
ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
‘ಮೈಸೂರು ಮಲ್ಲಿಗೆ’ಯಿಂದ ‘ಇರುವಂತಿಗೆ’ಯ ವರೆಗೆ ತಮ್ಮ ಅಭಿವ್ಯಕ್ತಿಯ ಸ್ವರೂಪದಲ್ಲಿ ಕಣ್ಣು ಸೆಳೆಯುವ ಬದಲಾವಣೆಯೇನನ್ನೂ ತೋರಿಸದ ಶ್ರೀ ಕೆ. ಎಸ್. ನ ಅಲ್ಲಿಂದೀಚೆಗೆ ಭರ‍್ರನೆ ಬದಲಾಗಿದ್ದಾರೆ ಅನ್ನಿಸುತ್ತದೆ. ‘ಶಿಲಾಲತೆ’ಯಲ್ಲಿ ಹೊಸ ಆಕಾರಗಳಿಗೆ ತಡಕಿ ಪರದಾಡುತ್ತ ಅಲ್ಲಲ್ಲಿ ಸ್ವಲ್ಪ ಯಶಸ್ಸುಗಳಿಸಿದ ಈ ಕವಿ ‘ಮನೆ ಯಿಂದ ಮನೆಗೆ’ ಸಂಕಲನದಲ್ಲಿ ಒಂದು ಸ್ಥಿಮಿತಕ್ಕೆ ತಲುಪಿದರೆ ಇತ್ತೀಚಿನ ಕವನಗಳಲ್ಲಿ ಸಟ್ಟನೆ ಬೇರೊಂದು ಹೊಸ ರೀತಿಗೆ ಹೊರಳಿಬಿಟ್ಟಿದ್ದಾರೆ. ಕಳೆದ ಸಾಕ್ಷಿ ಸಂಚಿಕೆಗಳಲ್ಲಿ ಹೊರಬಂದ ಅವರ ಎರಡು ಕಾವ್ಯಖಂಡಗಳು ನಿರಲಂಕಾರವಾಗಿ, ನಾಟಕೀಯವಾಗಿ, ಮೊದಲಿಂದ ಕಡೆವರೆಗೆ ಘಟನಾದೇಹಿಯಾಗಿ ಬೆಳೆದು ಸದ್ದಿಲ್ಲದೆ ಬೆಳಕುರಿಸಿದ ಆಶ್ಚರ್ಯವನ್ನು ಕಂಡಾಗ ಅವರು ತಮ್ಮ ಕಾವ್ಯಶಕ್ತಿಯನ್ನು ಇನ್ನೂ ಬಹುಕಾಲ ಜೀವಂತವಾಗಿ ಇಟ್ಟುಕೊಳ್ಳಬಲ್ಲ ಕವಿಯೆನಿಸುತ್ತದೆ. ಅಭಿವ್ಯಕ್ತಿಯ ಕ್ರಮದಲ್ಲಿ ಬದಲಾಗಲು ತೊಡಗಿದ ಮೇಲೆ ಕೆ. ಎಸ್. ನ. ಕಾವ್ಯ ಮೈಗೂಡಿಸಿಕೊಂಡ ಒಂದೆರಡು ವಿಶಿಷ್ಟಾಂತಗಳನ್ನು ಗುರುತಿಸುವ ಪ್ರಯತ್ನ ಈ ಲೇಖನ.
‘ಶಿಲಾಲತೆ’ಯಲ್ಲಿ ಮತ್ತು ಅಲ್ಲಿಂದ ಮುಂದೆ ಕೆ. ಎಸ್. ನ. ಬರೆದ ಕೆಲವು ಕವನಗಳಿಗೆ ವಿವರವಾಗಿ ಅರ್ಥಹೇಳಲು ಸಾಧ್ಯವಿಲ್ಲ ; ಅವು ತುಂಬ ಅಸ್ಪಷ್ಟವಾಗಿವೆ. ಕ್ಲಿಷ್ಟವಾಗಿವೆ ಎಂದು ಕಾವ್ಯವನ್ನು ವಿಶೇಷ ವಿಷಯವಾಗಿ ಅಭ್ಯಾಸ ಮಾಡಿದ ಕೆಲವರು ಪದವೀಧರ ಅಧ್ಯಾಪಕರೂ ಹೇಳುವುದುಂಟು. ಮೇಲಿನ ಮಾತೇನೋ ಸತ್ಯವೇ. ಆದರೆ ಒಂದು ಕವನ ಕವನವಾಗಬೇಕಾದಲ್ಲಿ ಅದು ಸರಳ ವ್ಯಾಖ್ಯಾನಕ್ಕೆ ಬಗ್ಗುವಂತಿರಬೇಕು ಎಂಬ ಅಭಿಪ್ರಾಯ ಈ ಆಕ್ಷೇಪಣೆಯ ಹಿಂದಿದ್ದರೆ ಅದನ್ನು ಒಪ್ಪುವುದು ಸಾಧ್ಯವಿಲ್ಲ. ವಿವರಣೆಯ ಅಂಚಿನಾಚೆಗೂ ಹಾಯುವ ರಹಸ್ಯಗರ್ಭಿಯಾದ ಅನುಭವಬಂಧಗಳು ಉತ್ಕೃಷ್ಟ ಕಾವ್ಯವಾಗಿರಲು ಸಾಧ್ಯ. ಅಸ್ಪಷ್ಟತೆಯೇ ಉತ್ಕೃಷ್ಟತೆಯ ಲಕ್ಷಣವೆಂದೇನೂ ಇದರ ಅರ್ಥವಲ್ಲ. ಬೇರೆ ಕೆಲವು ಕಾರಣಗಳಿಂದಾಗಿಯ ಕಾವ್ಯ ಅಸ್ಪಷ್ಟವಾಗುವುದುಂಟು. ಎಂದರೆ ಅಸ್ಪಷ್ಟತೆ ಒಂದು ಉತ್ತಮ ಕವನದಲ್ಲಿ ಅದರ ಶ್ರೇಷ್ಠ ಗುಣಗಳಲ್ಲಿ ಒಂದಾಗಿರುತ್ತ ಸೋತ ಕವನದಲ್ಲಿ ಅದರ ದೋಷಕ್ಕೂ ಕಾರಣವಾಗಿರಬಹುದು. ಅಸ್ಪಷ್ಟತೆಯನ್ನೇ ಹಳಿಯದೆ, ಅದು ಏಕೆ ಬರುತ್ತದೆ, ಎಲ್ಲಿ ಅನಿವಾರ್ಯವಾಗಿ ಬಂದು ಗುಣವಾಗುತ್ತದೆ, ನಿವಾರ್ಯವಾಗಿದ್ದೂ ಉಳಿದು ಎಲ್ಲಿ ಒಂದು ದೋಷವಾಗುತ್ತದೆ ಎಂಬುದನ್ನು ವಿಚಾರಮಾಡಬಹುದು.
ಕೆಲವು ಸಲ ಕವನದ ಹೊಸತನವೇ ಓದುಗನಿಗೆ ಕವನ ಅಸ್ಪಷ್ಟವೆನಿಸಲು ಕಾರಣವಾಗುವುದೂ ಉಂಟು. ಉತ್ತಮ ಕವಿ ಪೂರ್ವಪರಿಚಿತವಾದ ಮಾತುಗಾರಿಕೆಯನ್ನು ಚೆಲ್ಲಿಕೊಟ್ಟು ಹೊಸಬಗೆಯ ನುಡಿಬಂಧಗಳಿಗೆ ಹೊರಳಿ ಅಪೂರ್ವ ಪಲುಕುಗಳನ್ನು ಸೃಷ್ಟಿಸಿರಬಹುದು. ರೂಢಿಯಲ್ಲಿ ಬಂದ ಒಂದು ನಿರ್ದಿಷ್ಟ ಕಾವ್ಯಮಾರ್ಗಕ್ಕೆ ಮನಸ್ಪನ್ನು ಒಗ್ಗಲು ಬಿಟ್ಟು ತಾನು ಓದುವ ಕವನಗಳಲ್ಲೆಲ್ಲಾ ಆ ರೂಢಿಯ ಶೈಲಿಯನ್ನೇ ನಿರೀಕ್ಷಿಸುವ ಓದುಗನಿಗೆ ಅವನ ನಿರೀಕ್ಷೆಗಳಿಗೆ ಹೊರತಾದ ಹೊಸ ಒಳ್ಳೆಯ ಕವನ ಕಷ್ಟ ಎಂದೋ ಅಸ್ಪಷ್ಟ ಎಂದೋ ಅನ್ನಿಸಿಬಿಡಬಹುದು. ಎಂದರೆ ಕವನದಲ್ಲಿ ಪ್ರಶಂಸೆಗೆ ಅರ್ಹವಾಗಿರುವ ಗುಣವೇ ಅವನಿಗೆ ಅವಗುಣವಾಗಿ ಕಾಣಬಹುದು. ಇಂಥ ಕಡೆಗಳಲ್ಲಿ ಕವನದ ಅಸ್ಪಷ್ಟತೆಯ ಮೂಲ ಇರುವುದು ಓದುಗನ ಅಭಿರುಚಿಯಲ್ಲಿಯೇ ಹೊರತು ಕಾವ್ಯಾಭಿವ್ಯಕ್ತಿಯಲ್ಲಿ ಅಲ್ಲ. ಕೆ. ಎಸ್. ನ. ಹಿಂದೆ ತಮ್ಮ ಕವನಗಳಲ್ಲಿ ಒಂದು ಪುಟ್ಟ ಸರಳ ಶೃಂಗಾರ ಚಿತ್ರವನ್ನು ಹೆಣೆದಿಡುತ್ತಿದ್ದಾಗ ಅದರ ಒಂದೊಂದು ಸಾಲೂ ಆ ಚಿತ್ರದ ಒಂದೊಂದು ರೇಖೆಯಾಗಿ ಬೆಳೆಯುತ್ತಿತ್ತು. ಅಕ್ಕಿಯಾರಿಸುವಾಗ, ಕಾರಣ ಯಾರಿಗೆ ಗೊತ್ತು- ಇಂಥ ಕವನಗಳನ್ನು ಈ ಮಾತಿಗೆ ಉದಾಹರಣೆಯಾಗಿ ನೋಡಬಹುದು. ಆದರೆ, ‘ಗಡಿಯಾರದಂಗಡಿಯ ಮುಂದೆ’, ‘ಬರಿಗೊಡಗಳಿಗೆ ಸಮಾಧಾನ?’ ದಂಥ ಕವನಗಳು ಬೆಳೆಯುವ ಕ್ರಮವೇ ಬೇರೆ. ಒಂದೊಂದು ಸಾಲಿನಲ್ಲೂ ಒಂದೊಂದು ಉಜ್ವಲ ಚಿತ್ರ ಮೂಡುತ್ತ ನಡೆದು ಆ ಚಿತ್ರಗಳೆಲ್ಲ ಒಟ್ಟಾಗಿ ಒಂದು ಅನುಭವ ಕೇಂದ್ರವನ್ನು ಕಟ್ಟುತ್ತವೆ.
“ಬಾನ ಚೆಜ್ಜದ ಕೆಳಗೆ ಹೆಬ್ಬಾವಿನುಬ್ಬಸದ
ಹತ್ತಿ ಬಿಲ್ಲಿನ ಕಸದ ಕತ್ತಲೆ.”
“ನಿರ್ನಾಮವಾಗಿರುವ ನೀಲ ನಗರಾವಳಿಯ
ಕೋಳಿಕೂಗು.”
“ಬಿಡುಗಣ್ಣ ನಿಮಿಷಗಳ ಹುಲಿಯಂಕಿ ತೋಟ.”
“ಕತ್ತು ಹಿಸುಕಿದ ಬಳ್ಳಿ ಕಳೆದ ಬೆಳಗು.”
“ಜೇನು ತಲೆ ಹೊಕ್ಕಿರುವ ತನಿಗುದುರೆಯೋಟ;”
“ಸಂಜೆ ತೀರದ ಸಾಲ, ಹಡಗು ಮುಳುಗು.”
“ಬಿರುಗಾಳಿ ಬೀಳಿಸಿದ ಮೂರನೆಯ ದಾರಿಮನೆ.”
“ಚೈತ್ರದ ಮಾವು ಜೂಲುನಾಯಿಯ ಜೋಲಿ.”
“ಹುಚ್ಚಿ ಬೇವಿನ ತಲೆಗೆ ಹಕ್ಕಿ ಹಾಡಿನ ಹೆಡಿಗೆ.”
“ಬಂಗಾರದಂಗಾಲು ಮೋಡದೊಳಗೆ.”
“ಜಿಂಕೆ ಚಕ್ಕಳದಂಚು ಕಾಡು ಹೊಳೆಗೆ.”
“ಸಂಜೆಗೊಬ್ಬಳು ಮುದುಕಿ ಕೊನೆಯ ಕೆಂಡವ ಕೆದಕಿ
ಎತ್ತಿ ಮುಡಿದಳು ಇದ್ದ ಗಂಟು ಜಡೆಗೆ.”
“ಹೊತ್ತ ಮೂಟೆಗಳೇನು ಹಿಡಿದ ಗಿಂಡಿಗಳೇನು
ಹೆಜ್ಜೆ ಸಾಲಿನ ಪಯಣ, ನಾರಾಯಣ.”
-ಹೀಗೆ ಕವನ ನಡೆಯುತ್ತ ಹೋದಂತೆ ಚಿತ್ರಗಳ ರಾಶಿಯೇ ಸುರಿದುಹೋಗುತ್ತದೆ. ಹಿಂದೆ ಕವನದ ನಡುವೆ ಕುಳಿತು ತಾನೇ ಅದನ್ನು ವಿವರಿಸುತ್ತಲೂ ಇದ್ದ ಕವಿ-ವ್ಯಾಖ್ಯಾನಕಾರ ಇಲ್ಲಿ ಥಟ್ಟನೆ ಮರೆಗೆ ಸರಿದು ಇಡಿಯ ಕವನದ ಅರ್ಥ ಇಂಥ ಚಿತ್ರಗಳ ಮೂಲಕವೇ ಮೆಟ್ಟಲೇರುತ್ತದೆ. ಅಲ್ಲದೆ ಈ ಚಿತ್ರಗಳನ್ನು ಪೋಣಿಸಿ ಹಿಡಿದಿರುವ ಒಂದು ತರ್ಕಬದ್ದವಾದ ಸೂತ್ರ ಕೂಡ ಸುಲಭವಾಗಿ ಕಾಣಸಿಗುವುದಿಲ್ಲ. ಹೀಗಾಗಿ ಓದುಗ ಈ ಚಿತ್ರಗಳ ಜಾಜ್ವಲ್ಯಕ್ಕೆ ಬೆರಗಾದರೂ ಅವುಗಳು ಒಟ್ಟಾಗಿ ಕಟ್ಟಿಕೊಡುವ ಧ್ವನ್ಯರ್ಥವನ್ನು ಹಿಡಿಯಲಾರದೆ ಹೋಗುತ್ತಾನೆ. ಮಂದಪ್ರಕಾಶಕ್ಕೆ ಬಹುಕಾಲ ಒಗ್ಗಿಹೋದ ಕಣ್ಣನ್ನು ಒಮ್ಮೆಲೆ ಹೋರೈಸುವ ಬೆಳಕಿಗೆ ಬಿಚ್ಚಿದಾಗ ಆ ಬೆಳಕನ್ನು ಕಣ್ಣು ಭರಿಸಲಾರದೆ ಹೋಗುವಂತೆ ಓದುಗನ ಸ್ಥಿತಿಯಾಗುತ್ತದೆ.
ಕೆಲವು ಸಲ ಕವನವನ್ನು ಓದುವ ಮುಂಚೆಯೇ ಅದು ತುಂಬ ಧ್ವನಿಪೂರ್ಣವಾದ ರಚನೆಯೆಂದೂ, ಅದರಲ್ಲಿ ಅರ್ಥದ ಹಲವು ಮಜಲುಗಳಿರಬೇಕೆಂದೂ ಕಲ್ಪಿಸಿಕೊಳ್ಳುವ ಓದುಗರೂ ಉಂಟು. ಇಂಥ ಪೂರ್ವಕಲ್ಪನೆಯೊಡನೆ ಓದಲು ಹೊರಟು ಇಲ್ಲದ ಅರ್ಥ ಗಳನ್ನೆಲ್ಲ ಅದರಲ್ಲಿ ಹುಡುಕಿ ತೆಗೆಯಲು ಪ್ರಯತ್ನಿಸಿದಾಗ ಸರಳವಾದ ಕವನ ತುಂಬ ತೊಡಕಿನದಾಗಿ ಭಾಸವಾಗಬಹುದು. ‘ಬರಿಗೊಡಗಳಿಗೆ ಸಮಾಧಾನ’ ಮತ್ತು ‘ರೂಪಕರಾತ್ರಿ’ ಕವನಗಳೆರಡೂ ಒಬ್ಬನೇ ಕವಿಯಿಂದ ರಚಿತವಾಗಿ, ಒಂದೇ ಸಂಕಲನದಲ್ಲಿ ಅಕ್ಕ ಪಕ್ಕದಲ್ಲಿಯೇ ಪ್ರಕಟವಾಗಿದ್ದರೂ ತೀರ ಭಿನ್ನರೀತಿಯ ಕವನಗಳು. ‘ರೂಪಕರಾತ್ರಿ’ಯ ವ್ಯಾಖ್ಯಾನಪರವಾದ ಸರಳರಚನೆಗೂ ಮತ್ತೊಂದರ ಬಿಕ್ಕಟ್ಟಾದ ರೂಪಕಶೈಲಿಗೂ ತುಂಬ ವ್ಯತ್ಯಾಸವಿದೆ. ಎರಡನೆಯದು ಮೊದಲಿನದರಷ್ಟು ಧ್ವನಿಪೂರ್ಣವಾದ ಶಿಲ್ಪವಲ್ಲ. ಅದರಲ್ಲಿ ಇಲ್ಲದ ಅರ್ಥಗಳನ್ನು ಹುಡುಕಲು ಹೋಗೆಬಾರದು. ಇಂಥ ಪ್ರಯತ್ನ ಕಾವ್ಯಾಸ್ವಾದನೆಗೆ ಅಡ್ಡಿಯಾಗುತ್ತದೆಂದೇ ಶ್ರೇಷ್ಠ ಕಾವ್ಯ ಮೀಮಾಂಸಕಾರ ಅಭಿನವಗುಪ್ತ “ನ ಸರ್ವತ್ರ ಧ್ವನಿರಾಗಿಣಾ ಭವಿತವ್ಯಂ” ಎಂದು ಸಹೃದಯರನ್ನು ಎಚ್ಚರಿಸುತ್ತಾನೆ.
ಪರಿಣತ ಸಹೃದಯನ ಬುದ್ದಿಯಲ್ಲಿಯೂ ಕೂಡಲೆ ಪಚನವಾಗದ ಕೆಲವು ಕವನಗಳು ಕೆ. ಎಸ್. ನ. ರವರ ಶ್ರೇಷ್ಠ ರಚನೆಗಳಲ್ಲಿ ಸೇರಿವೆ. ಇಂಥ ಕವನಗಳನ್ನು ಕುರಿತು ಮಾತನಾಡುವಾಗ ಕವನ ಅರ್ಥವಾಯಿತೇ ಎಂಬುದಕ್ಕಿಂತ ಅದೊಂದು ಅರ್ಥವತ್ತಾದ ಕೃತಿ ಎನ್ನಿಸಿತೇ ಎನ್ನುವುದು ಮುಖ್ಯ. ಏಕೆಂದರೆ ನಮಗೆ ಅರಿವಾಗದ ರಹಸ್ಯಶೀಲವಾದ ಎಷ್ಟೋ ವಿಷಯಗಳನ್ನು ದೊಡ್ಡವಂದು ನಾವು ಒಪ್ಪಿಕೊಂಡಿರುವುದುಂಟು ; ಅರ್ಥವಾಗದ ಬೆಳಕಿನ ಸ್ಪರ್ಶದಿಂದ ಆಕರ್ಷಿತರಾಗಿರುವುದುಂಟು. ನಮಗೆ ಸೃಷ್ಟಿಯ ಅರ್ಥ ಗೊತ್ತಿಲ್ಲ. ಆದರೂ ಅದು ಅರ್ಥಹೀನ ಎನಿಸುವುದಿಲ್ಲ. ಅಷ್ಟೇ ಅಲ್ಲ, ಅತ್ಯಂತ ಆಕರ್ಷಕವಾಗಿದೆ; ಯೋಚಿಸಿದಂತೆಲ್ಲಾ ಒಂದು ಮಹಾದ್ಭುತವೆನಿಸಿ ಅರ್ಥಮುಕ್ತವಾಗಿ (ಅರ್ಥಮೀರಿದ್ದಾಗಿ) ತೋರುತ್ತದೆ. ಅಸ್ಪಷ್ಟವೆಂದು ನಾವು ಭಾವಿಸುವ ಒಂದು ಶ್ರೇಷ್ಠ ಕವನದ ಬಗ್ಗೆಯೂ ಹೀಗೆ ವಿಚಾರ ಮಾಡುವುದೇ ಸಮರ್ಪಕವೆನಿಸುತ್ತದೆ.
ಅಲ್ಲದೆ ಕವನವೊಂದು ಅನೇಕ ಮಟ್ಟಗಳಲ್ಲಿ ಸಹೃದಯನನ್ನು ಮುಟ್ಟಬಹುದಷ್ಟೆ. ಕೆಲವು ತಮ್ಮ ಅಂತರಂಗವನ್ನು ಬಯಲಾಗಿಸಿ ಆಕರ್ಷಿಸಿದರೆ ಮತ್ತೆ ಕೆಲವು ಒಂದು ಹೊಳಹಾಗಿ ನಿವೇದಿತವಾಗಬಹುದು ; ಓದುಗನ ಸೂಕ್ಷ್ಮಾನುಭವ ಶಕ್ತಿಗೆ ಮಿಂಚಿದರೂ ಬುದ್ದಿಗೆ ದೊಡ್ಡ ಕಗ್ಗಂಟಾಗಿ ಸವಾಲಾಗಬಹುದು. ಹಾಗೆ ನೋಡಿದರೆ ಶ್ರೇಷ್ಠವೆನಿಸಿಕೊಂಡ ಎಷ್ಟೋ ಕವನಗಳು ವಿವರಣೆಗೆ ಪೂರ್ತಿ ಬಗ್ಗದವು ; ನಾಲ್ಕಾರು ಓದಿಗೂ ಜಗ್ಗದವು ;1 ಅಲ್ಲಲ್ಲಿ ಕಣ್ಣು ಕೋರೈಸುವಂತೆ ತಮ್ಮ ಅಂಗಾಂಗಗಳನ್ನು
1 The more seasoned reader, he who has reached in these matters a state of greater purity, does not bother about under-standing, not at least at first. I know that some of the poetry to which I am most devoted is poetry which I did not understand at first reading; some is poetry which I am not sure I understand yet.
Eliot, T. S: Selected Prose, P 93
ಮಿಂಚಿ ಥಟ್ಟನೆ ಕತ್ತಲಾಗಿಬಿಡುವಂಥವು. ಅವುಗಳ ಸಂವಾದವೇನಿದ್ದರೂ ನಮ್ಮ ಆಳದ ಅನುಭವ ಪ್ರಜ್ಞೆಯೊಡನೆ. ಇಂಥ ಕಾವ್ಯ ತರ್ಕಬದ್ದವಾದ ವಿವರಣೆಯ ಚೌಕಟ್ಟಿನೊಳಗೆ ಇರುಕಲಾಗದ ‘ಅರ್ಥಮುಕ್ತ’ ಸೂಕ್ಷ್ಮಾನುಭವಗಳ ಅಪೂರ್ವ ಹೆಣಿಕೆಯಾಗಿರುತ್ತದೆ. ಆ ಹೆಣಿಕೆಯ ವಿನ್ಯಾಸದಲ್ಲಿಯೇ ಕವನದಲ್ಲಿ ನಿರೂಪಿತವಾದ ಅನುಭವದ ಚೆಲುವು, ನಿವೇದನ ಬಲ, ಬಾಗು, ಕೊಂಕುಗಳೆಲ್ಲ ಇರುವುದರಿಂದ ಆ ಕಸೂತಿಯನ್ನು ಬಿಚ್ಚಿ ನೋಡಲು ಹೊರಡುವ ಕೈಗೆ ಬರುವುದು ಅರ್ಥ ಸತ್ಯ ಸ್ಪಷ್ಟವಾದ ದಾರವೊಂದೇ.
ತನ್ನ ಬದುಕಿನಲ್ಲಿ ಬಾಲ್ಯದಿಂದ ಇಳಿ ವಯಸ್ಸಿನವರೆಗೆ ಕಂಡುಂಡ ಎಷ್ಟೆಲ್ಲಾ ಸಂಗತಿಗಳಲ್ಲಿ ಯಾವುದೋ ಕೆಲವು ಮಾತ್ರ ಆಯ್ದ ದೃಶ್ಯಗಳಂತೆ ವ್ಯಕ್ತಿಯ ಮನಸ್ಸಿನಲ್ಲಿ ಅಚ್ಚೊತ್ತಿ ನಿಂತುಬಿಡುತ್ತವೆ. ಎಷ್ಟೋ ಪ್ರಸಂಗಗಳಲ್ಲಿ ಇವು ಒಂದು ದೊಡ್ಡ ಘಟನೆಯಾಗಿಯಾಗಲಿ ಅಥವಾ ಅರ್ಥಪೂರ್ಣವಾದ ಘಟನೆಯಾಗಿ ಆಗಲಿ ನಮಗೆ ಕಾಣದಿರಬಹುದು. ಆದರೆ ರಭಸದಿಂದ ಹರಿಯುವ ಬದುಕಿನ ಹೊಳೆಯಲ್ಲಿಯೂ ಅವು ಕದಲದ ಬಂಡೆಗಳಾಗಿ ಉಳಿದುಬಿಟ್ಟಿರುತ್ತವೆ ; ಮುಳುಗಿದ್ದು ಕಣ್ಣಿಗೆ ಕಾಣದಿದ್ದರೂ ಈಜುವಾಗ ಥಟ್ಟನೆ ಕಾಲಿಗೆ ಬಡಿದು ತಮ್ಮ ಇರುವಿಕೆಯನ್ನು ಹಠಾತ್ತನೆ ನಮ್ಮ ಅರಿವಿಗೆ ತರುತ್ತವೆ. ಇವು (ನಮ್ಮ ಹಳೆಯ ಕಥೆಗಳಲ್ಲಿ) ಕಾಡಿನಲ್ಲಿ ದಾರಿತಪ್ಪಿ ಅಲೆಯುವ ರಾಜಕುಮಾರನಂತೆ. ಪಟ್ಟ, ಛತ್ರ, ಆನೆ, ವಂದಿ, ಪರಿವಾರ ಮುಕ್ತನಾಗಿ, ಯಾರೆನ್ನುವುದು ತಿಳಿಯದೆ ಹೋದರೂ ಕೇವಲ ನಿಲುವು ತೇಜಸ್ಸುಗಳಿಂದಲೇ ನೋಡುವವರಿಗೆ ತಾನೊಬ್ಬ ಅಸಾಮಾನ್ಯನೆಂಬುದನ್ನು ಆ ರಾಜಪುತ್ರ ತಿಳಿಯಗೊಡುವಂತೆ ಈ ನೆನಪಿನ ಚಿತ್ರಗಳು, ಎಲ್ಲ ಸಂದರ್ಭಗಳಿಂದ ಮುಕ್ತವಾಗಿ ಉಳಿದೂ ತಮ್ಮ ಅಸಮಾನ್ಯತೆಯನ್ನು ಪ್ರಕಟಿಸುತ್ತವೆ. ಯಾವುದೇ ವ್ಯವಸ್ಥಿತ ವಿಶ್ಲೇಷಣೆಗೂ ಸೊಪ್ಪು ಹಾಕದೆ, ನಮ್ಮ ಜಾಗೃತಪ್ರಜ್ಞೆ ಇಳಿದು ನೋಡಲಾಗದ ಭಾವದ ಆಳಗಳನ್ನು ಪ್ರತಿನಿಧಿಸುತ್ತವೆ.1 “ಅಂತರಾಳಗಳಲ್ಲಿ ನಿಂತ ನೀರುಗಳಲ್ಲಿ ಕಂತಿ ಕೈಬಡಿವ (ಈ) ಬೀಜಾಣು
1 Why, for all of us, out of all that we have heard, seen, felt, in a life-time, do certain images recur, charged with emotion rather than others ? ……. Such memories may have symbolic value but of what we cannot tell, for they come to represent the depths of feeling into which we cannot peer.
Eliot, T. S: Selected Prose, P 95
ಎಲಿಯಟ್ ಇಂಥ ನೆನಪಿನ ಚಿತ್ರಗಳನ್ನು ‘Faded poor souvenirs of passionate moments’ ಎಂದು ಕರೆಯುತ್ತಾನೆ.
‘ಜಾಲ’ಗಳು ಸಮಾನ ಸಂಬಂಧದ ಯಾವುದೋ ವರ್ತಮಾನ ಸಂದರ್ಭಗಳಲ್ಲಿ ಬೀಸಿ ಒಗೆದ ಕಲ್ಲಿನಂತೆ ಜಾಗೃತಚಿತ್ತದ ವಲಯದೊಳಕ್ಕೆ ಬಂದು ಬೀಳುತ್ತಿರುತ್ತವೆ. ಉತ್ತಮ ಕವಿ ತನ್ನನ್ನು ಅಟ್ಟ ಕಾಡುವ ಇಂಥ ರಹಸ್ಯ ಚಿತ್ರಗಳನ್ನು ಸೋರದ, ಪಿಸಿಯದ, ಕಾಳುಮಾತುಗಳಲ್ಲಿ ಕಟ್ಟಿ ಕೊಡುತ್ತಾನೆ. ವಿಮರ್ಶಕ ಈ ಕವನಗಳ ಉದ್ದೇಶವನ್ನೂ ಅದು ನುಡಿಯುತ್ತಿರುವ ಅನುಭವದ ಸ್ವರೂಪವನ್ನೂ ಮತ್ತು ಅದನ್ನು ನೆಟ್ಟು ಬೆಳೆಯಲು ಕವಿ ಭಾಷೆಯನ್ನು ಬಳಸುತ್ತಿರುವ ಕ್ರಮವನ್ನೂ ಕುರಿತು ಹೇಳಬಹುದು ಅಷ್ಟೆ. ಹಾಗಲ್ಲದೆ ಕವನದ ಸಮಸ್ತಾರ್ಥವನ್ನೂ ಅದರ ಎಲ್ಲ ತೀವ್ರತಯೊಡನೆ ವ್ಯಾಖ್ಯಾನದಲ್ಲಿ ಬಳಿದು ತೆಗೆಯುತ್ತೇನೆನ್ನುವುದು ಅಸಂಬದ್ದವಾಗುತ್ತದೆ. ಇಂಥ ಕವನಗಳಲ್ಲಿ ವಿವರಣೆಗೆ ಸಿಗುವುದೇನಿದ್ದರೂ ಪರಿಚಾರಿಕೆಯ ಊಳಿಗವೇ ಹೊರತು ಪಟ್ಟದ ಮರ್ಯಾದೆಯಲ್ಲ.
ಒಂದು ಅರ್ಥಮುಕ್ತ ಕವನವನ್ನು ಅರ್ಥಹೀನವಾದ ವೇಷಧಾರೀ ಪದ್ಯದಿಂದ ಪ್ರತ್ಯೇಕಿಸುವುದು ಹೇಗೆ ಎಂಬ ಸಮಸ್ಯೆ ಬರುವುದು ಸಾಧ್ಯ. ಆದರೆ ಈ ಸಮಸ್ಯೆ ಕಾವ್ಯವನ್ನು ಅಕಸ್ಮಾತ್ತಾಗಿ ಓದುವವರಿಗೆ, ಯಾವುದು ಕವನ ಯಾವುದು ಅಲ್ಲ ಎಂದು ಪ್ರತ್ಯೇಕಿಸಲಾಗದ ಬಾಲಿಶಬುದ್ಧಿಗೆ ಒದಗಬಹುದಾದದ್ದು. ಶ್ರೇಷ್ಠ ಕವಿತೆಗಳ ಅನುಸಂಧಾನದಿಂದ ಪಕ್ವವಾದ ರುಚಿಗೆ ಇಂಥ ಸಂದಿಗ್ಧ ಒದಗುವುದಿಲ್ಲ.
ಒಮ್ಮೊಮ್ಮೆ ಅಸ್ಪಷ್ಟತೆಯ ಮೂಲ ಅಭಿವ್ಯಕ್ತಿಯಲ್ಲಿನ ಕೊರತೆಯಲ್ಲಿಯೇ ಇರಬಹುದು, ಶಿಲಾಲತೆಯಲ್ಲಿ ಇಂಥ ಉದಾಹರಣೆಗಳೂ ಸಿಗುತ್ತವೆ. ಕೆ. ಎಸ್. ನ. ಅಲ್ಲಿ ಹೊಸ ಅಭಿವ್ಯಕ್ತಿಯೊಂದಕ್ಕೆ ಇನ್ನೂ ತಡಕಾಡುತ್ತಿರುವುದರಿಂದಲೋ ಅಥವಾ ಕವಿಯೇ ಅದನ್ನು ಉದ್ದೇಶ ಪೂರ್ವಕವಾಗಿ ತರುವ ಪ್ರಯತ್ನ ಮಾಡಿದ್ದರ ಫಲವಾಗಿಯೋ ಅದು ಬಂದಿದೆ. “ಬಿಳಿಯ ಹೂಗಳ ಕವಿತೆ ಗೋರಿಗಳ ಮೇಲೆ” ಕವನದ ಮೊದಲ ಮತ್ತು ಕಡೆಯ ಭಾಗಗಳಲ್ಲಿ ಹೀಗಾಗಿದೆ. ಸ್ಪಷ್ಟವಾದ ವಿಚಾರದ ತಡಿಕೆಯ ಮೇಲೇ ಬೆಳೆಯುವ ಕವನದಲ್ಲಿ ಹೀಗಿರುವುದು ಒಂದು ದೋಷವೇ. ‘ಗಡಿಯಾರದಂಗಡಿಯ ಮುಂದೆ’ ಕವನದ ಕಡೆಯ ಭಾಗದಲ್ಲಿ ಉದ್ದೇಶಪೂರ್ವಕವಾಗಿ ಅಸ್ಪಷ್ಟತೆ ಬಂದಂತಿದೆ.
ಐದಾಗಿ ಬಿರಿದ ದಾಳಿಂಬೆ ನಗೆ ನೀರೊಡೆದು
ಹಳದಿಯಲಿ ಕೆಂಪರಳಿದೆ ;
ಗೋರಿ ದೀಪದ ಕೆಳಗೆ ಹಲ್ಲಿ ಐದರ ಹರಕೆ
ತಳವಿರದ ತಟ್ಟೆಯಲಿ ಐದು ಗೆಜ್ಜೆ-
ಇತ್ಯಾದಿ ಚಿತ್ರಗಳು ಕವನದ ಅನುಭವಕೇಂದ್ರದಿಂದ ಸಂಪರ್ಕ ಕಳೆದುಕೊಂಡು ನಿಲ್ಲುವುದಕ್ಕೆ ಅಭಿವ್ಯಕ್ತಿಯು ದೋಷವೇ ಕಾರಣವೆನಿಸುತ್ತದೆ.
ಹೊಸ ಕಾವ್ಯಕ್ರಮಕ್ಕೆ ಹೊರಳಿದ ಮೇಲೆ ಕೆ. ಎಸ್. ನ. ಮಾಡಿದ ಒಂದು ವಿಶೇಷ ಸಾಧನೆಯೆಂದರೆ ಉತ್ತಮ ಗದ್ಯದ ಶ್ರೇಷ್ಠ ಅಂಶಗಳಿಂದ ತಮ್ಮ ಕಾವ್ಯವನ್ನು ಕಸಿಗೊಳಿಸಿಕೊಂಡದ್ದು. ತಾನು ಬಲಿಷ್ಠವಾಗಿ ಬೆಳೆಯಲು ಕಾವ್ಯ ಗದ್ಯದ ಚುಚ್ಚುಮದ್ದನ್ನು ಮತ್ತೆ ಮತ್ತೆ ಕೊಟ್ಟುಕೊಳ್ಳುತ್ತಲೇ ಹೋಗಬೇಕು. ಪ್ರತಿಯಾಗಿ ಅದು ಮಾತನ್ನು ಬಗೆಬಗೆಯ ಸೂಕ್ಷ್ಮ ಅನಿಸಿಕೆಗಳಿಗೆ ಮೈಮಾಡಿ ಅದರ ಅರ್ಥವಂತಿಕೆ ಯನ್ನು ಬೆಳೆಸಿ, ಗದ್ಯದ ಬಲ ಹೆಚ್ಚಿಸುತ್ತದೆ. ಹೀಗೆ ಪರಸ್ಪರ ಅವಲಂಬಿಗಳಾದರೂ ಅವೆರಡರ ಸ್ವರೂಪದಲ್ಲಿ ಮತ್ತು ಕಾರ್ಯ ನಿರ್ವಹಣೆಯಲ್ಲಿ ವ್ಯತ್ಯಾಸವಿದೆ. ಏಕೆಂದರೆ ಎರಡಕ್ಕೂ ಭಿನ್ನ ಮೈಮನಸ್ಸುಗಳಿವೆ. ಒಂದು ಅನುಭವವನ್ನು ಅದರ ತೀವ್ರತೆ ಮೊಂಡಾಗದಂತೆ ಗದ್ಯ ಪದ್ಯಗಳೆರಡರಲ್ಲೂ ಹೇಳಲು ಸಾಧ್ಯವಿದ್ದಾಗ ಗದ್ಯದಲ್ಲಿ ಹೇಳಿ ಬಿಡುವುದೇ ಉತ್ತಮ. ಏಕೆಂದರೆ ಅದಕ್ಕೆ ಹೆಚ್ಚಿನ ಅರ್ಥವ್ಯಕ್ತಿ ಇದೆ. ಶ್ರೇಷ್ಠವಾದ ಕಾವ್ಯ ಅರ್ಥಕ್ಕೆ ಬಗ್ಗದ ಅನುಭವಗಳನ್ನೂ ಗರ್ಭೀಕರಿಸಿಕೊಂಡಿರುತ್ತದೆ. (ಅಡಿಗರ ‘ಕೂಪಮಂಡೂಕ’ ವನ್ನೋ, ಕೆ. ಎಸ್. ಎನ್. ರವರ ‘ಗಡಿಯಾರದಂಗಡಿಯ ಮುಂದೆ’ ಕವನವನ್ನೋ ಅದರೆ ಬಂಧ ಕಳಚದೆ ಗದ್ಯದ ರೂಪದಲ್ಲಿ ಬರೆದುಕೊಟ್ಟರೆ ಮೊದಲ ಸಲ ಓದುವವರಿಗೂ ಅದು ಗದ್ಯವಲ್ಲ ಎನ್ನುವುದು ತಿಳಿದುಹೋಗುತ್ತದೆ. ಗದ್ಯದ ಎಲ್ಲ ಅಚ್ಚುಕಟ್ಟು, ವಕ್ರತೆ ಬಿಗಿಗಳನ್ನು ಬಳಸಿಕೊಂಡೂ ಕಾವ್ಯ ಬೇರೊಂದೇ ವಿಧದಲ್ಲಿ ಮಾತಾಡುತ್ತದೆ. ಸ್ಪಷ್ಟತೆ ಅರ್ಥವ್ಯಕ್ತಿ, ನೇರ ನುಡಿತಗಳೇ ಗದ್ಯದ ಗುರಿಯಾದರೆ ಕಾವ್ಯ ರಹಸ್ಯಶೀಲವಾದ ವಿನ್ಯಾಸದಲ್ಲಿ ಬೆಳೆದು, ಹತ್ತು ಆಳಗಳಲ್ಲಿ ಬೇರು ಇಳಿಸಿ, ಅರ್ಥ ವಲಯದ ಆಚೆ ಪ್ರಾಂತ್ಯಗಳಲ್ಲೆಲ್ಲಾ ಮೈ ಚಾಚಿ ಫಲಿಸುತ್ತದೆ; ಮೋಡದ ತೆರೆ ತೂರಿ ನಿಂತ ಗಿರಿಯಂತೆ ಸೃಷ್ಣಾಸ್ಪಷ್ಟತೆಗಳ ನಡುವೆ ನಗುತ್ತದೆ.
ಕೆ. ಎಸ್. ನ. ಶಿಲಾಲತೆಯಲ್ಲಿ ಗದ್ಯದಿಂದ ಕಾವ್ಯದ ಬಲವನ್ನು ಬೆಳೆಸಿಕೊಳ್ಳುವ ಪ್ರಯತ್ನಕ್ಕೆ ತೊಡಗಿದರು. ನಿರ್ದಿಷ್ಟ ಛಂದೋರೂಪಗಳ, ಪ್ರಾಸಗಳ ಮತ್ತು
1 But poetry has as much to learn from prose as from other poetry; and I think that an interaction between prose and verse, like the intraction between language and language is a condition of vitality initerature.
Eliot, T. S: Selected Prose, P. 94
ಕಾವ್ಯಕ್ಕೇ ಮೀಸಲಾಗಿದ್ದ ವಿಶಿಷ್ಟ ಪದಪುಂಜಗಳ ಅಚ್ಚಿಗೆ ಬಿದ್ದಿದ್ದ ತಮ್ಮ ಕಾವ್ಯವನ್ನು ಆಡುಮಾತಿನ ವಕ್ರನಡೆಗಳಿಗೆ ತೀಡಿ ತಿದ್ದಿದರು ; ಅದರ ಹಲವು ಲಯ ಅರ್ಥ ಭಂಗಿಗಳನ್ನು, ಧ್ವನಿಧಾಟಿಗಳನ್ನು ತಮ್ಮ ಕಾವ್ಯದ ಮೈತುಂಬ ಬೆಳೆಸಿಕೊಂಡರು ; ಆಳ ಪದರಗಳ ಸೂಕ್ಷ್ಮಾನುಭವಗಳನ್ನು ಸುಟಿಯಾಗಿ ಹಿಡಿದೆತ್ತಬಲ್ಲ ಕಡಿಮಾತುಗಳ ಪಾತಾಳಗರಡಿಯನ್ನು ರೂಪಿಸಿಕೊಂಡರು. ಇದಕ್ಕೆ ಮುಂಚೆಯೂ ಅವರ ಕಾವ್ಯ (ನಡೆದು ಬಂದ ದಾರಿಯ ಮುಂದಿನ ಅಡಿಗರನ್ನು ಬಿಟ್ಟು) ಉಳಿದವರ ಕಾವ್ಯಕ್ಕಿಂತ ಮಾತಿಗೆ ಹೆಚ್ಚು ಸಮೀಪವಾಗಿತ್ತು. ಅವರು ಎಂದೂ ಭಾಷೆಯನ್ನು ಪುಸ್ತಕಗಳಿಂದ ಶಬ್ದ ಕೋಶಗಳಿಂದ ಕಲಿಯದೆ ಜನಮುಖದಿಂದ ಕಲಿತವರು. ಆದರೂ ಶಿಲಾಲತೆಯಲ್ಲಿ ಅವರು ಇದನ್ನು ಹೆಚ್ಚಾಗಿ ಸಾಧಿಸಿದರಲ್ಲದೆ ತಾಳಬದ್ಧವಾದ ಲಯವನ್ನು ತರುವುದಕ್ಕಾಗಿ ಕಾವ್ಯದಲ್ಲಿ ಎಡೆ ಗಿಟ್ಟಿಸುತ್ತಿದ್ದ ಅನೇಕ ಭರ್ತಿಪದಗಳನ್ನೂ ಅನಗತ್ಯ ಪ್ರತ್ಯಯಗಳನ್ನೂ ಉಚ್ಚಾಟಿಸಿದರು ಇಂಥ ಸಾಧನೆಯಿಂದ ಕಾವ್ಯಕ್ಕೆ ಹೇಗೆ ಹೆಚ್ಚಿನ ಎತ್ತರಗಳು ನಿಲುಕುವುವೆಂಬುದನ್ನು ಮುಂದೆ ಸಾಧಿಸಿ ತೋರಿಸಿದ್ದವರು ಅಡಿಗರೊಬ್ಬರೆ. ಹಳೆಯ ಕಾವ್ಯ ಪದ್ಧತಿಯಲ್ಲಿ ಆಗಲೇ ಕಾಲೂರಿ ಪಟ್ಟ ಗಿಟ್ಟಿಸಿಕೊಂಡಿದ್ದ ಕೆ. ಎಸ್. ನ. ಇದರ ಮಹತ್ವ ಗಮನಿಸಿ ಹೊಸ ಅಭಿವ್ಯಕ್ತಿಗೆ ತಾವೂ ಹೊರಳಿ ತಮ್ಮ ಕಾವ್ಯವನ್ನು ಆಗಲೇ ಕವಿಯತೊಡಗಿದ್ದ ಆತಂಕಗಳಿಂದ ಪಾರುಮಾಡಿಕೊಂಡರು.
ಸಂಸ್ಕೃತದಿಂದ
ಪ್ರಾಸಾದದಲ್ಲವಳು ದಿಕ್ಕುದಿಕ್ಕಲ್ಲಿ ಅವಳೆ
ಹಿಂದವಳು ಮುಂದೆಯೂ ಅವಳು
ಮಂಚದಲ್ಲವಳು ಹಾದಿಹಾದಿಯಲ್ಲವಳು
ತಪ್ಪಿಬಿಡುವಳೋ ಎಂದು ಕುದಿವ ನನಗೆ
ಹೋ ಜೀವ, ಬೇರೆ ವಸ್ತುವೇ ಇಲ್ಲವೋ
ಕಾಣುವುದು ಅವಳೆ ಅವಳೇ
ಅವಳೆ ಅವಳೆ, ಮತ್ತವಳೆ ಅವಳೆ ಈ
ಲೋಕ ತುಂಬಿ ನಿಂತ
-ಎಂಥ ಅದ್ವೈತ ಪಂಥ
ಒಂದು ವಿವರಣೆ
ಒಂದು ವಿವರಣೆ
ಕೆ. ಶಿವರಾಮ ಐತಾಳ
ಸಾಕ್ಷಿಯ ಏಳನೇ ಸಂಚಿಕೆಯಲ್ಲಿ ಪ್ರಕಟವಾಗಿರುವ ನನ್ನ ‘ಪ್ರಕ್ರಿಯೆ-ಪ್ರತಿಕ್ರಿಯೆ’ಗೆ ಸಂಬಂಧಿಸಿದಂತೆ ಎಂಟನೇ ಸಂಚಿಕೆಯಲ್ಲಿ ಪ್ರಕಟವಾಗಿರುವ ಶ್ರೀ ಎಚ್. ಎಸ್. ಬಿಳಿಗಿರಿ ಅವರ ‘ಒಂದು ಪ್ರತಿ-ಪ್ರತಿಕ್ರಿಯೆ’ಯನ್ನು ಗಮನಿಸಿದ್ದೇನೆ. ‘ವಸ್ತು’ವಿಗೆ ಮಾತ್ರ ಸಂಬಂಧಿಸಿದಂತೆ ಅಗತ್ಯವೆನಿಸಿ ನೀಡಿದ ಒಂದು ವಿವರಣೆ ಇದು :
೧. ವ್ಯಂಜನದ ಉಚ್ಚಾರಣೆಗೆ ಬೇಕಾಗುವ ಕಾಲದ ಬೆಲೆ ಅರ್ಧ ಮಾತ್ರೆ ಎಂಬ ವೈಯಾಕರಣರ ಮಾತನ್ನು ಹೊಡೆದುಹಾಕಬೇಕು ಎಂಬ ನನ್ನ ಮೂಲ ನಿರ್ಧಾರವೇ ತಪ್ಪು -ಎಂಬ ವಿಚಾರ.
ಅ. ಇದು ನನ್ನ ನಿರ್ಧಾರ ಅಷ್ಟೆ. ಮೂಲ ನಿರ್ಧಾರ ಎಂದರೇನೋ ತಿಳಿಯದು. ಈ ನಿರ್ಧಾರದ ಮೇಲೇ ವಾದ ನಿಲ್ಲಿಸಿಲ್ಲ.
ಆ. ವ್ಯಂಜನಗಳ ಉಚ್ಚಾರದ ವಿಷಯದಲ್ಲಿ-ಸ್ವರದ ಸಹಾಯದಿಂದ ಮಾತ್ರ ಉಚ್ಚರಿಸಬಹುದಾದುದನ್ನೂ, ಸ್ವತಂತ್ರವಾಗಿ ಉಚ್ಚರಿಸಬಹುದಾದ ವ್ಯಂಜನಗಳನ್ನೂ ಪ್ರಸ್ತಾಪಿಸಿದ್ದೇನೆ. ಕಾರ್ತ್ಸ್ನ್ಯ ಎಂಬಂಥ ಶಬ್ದದಲ್ಲಿ ತ್, ಸ್, ನ್ ಎಂಬ ವ್ಯಂಜನಗಳು ಸ್ವಸಹಾಯವಿಲ್ಲದೇ ಉಚ್ಛಾರವಾಗುವುದನ್ನು ಗಮನಿಸಿದ್ದೇನೆ. ಸ್ವರಸಹಾಯವಿಲ್ಲದೆ ಉಚ್ಚರಿಸಲಾಗದ ತಕಾರದ ಉಚ್ಚಾರ ಇಲ್ಲಿರುವುದು ಗಮನಯೋಗ್ಯ. ತ್ರಿ ಎಂಬಂಥಲ್ಲಿ ಆದಿಯಲ್ಲೂ ಇದು ಸಾಧ್ಯ. ಹೀಗೆ ಉಚ್ಚಾರವಾದಾಗಲೆಲ್ಲಾ ಅದು ತನ್ನ ಪಾಲಿನ ಕಾಲಭಾಗವನ್ನು ಪಡೆಯುತ್ತದೆ ಎಂಬುದನ್ನೂ ಸ್ಪಷ್ಟವಾಗಿ ಹೇಳಲಾಗಿದೆ.
ಇ. ವ್ಯಂಜನೋಚ್ಚಾರ ಕಾಲ ಅರ್ಧ ಮಾತ್ರೆಯೇ ಇತ್ಯಾದಿ-
(ಯ) ವ್ಯಂಜನವೊಂದನ್ನು ಸ್ವತಂತ್ರವಾಗಿ ಉಚ್ಚರಿಸಿದಾಗ ಅದು ತೆಗೆದುಕೊಳ್ಳುವ ಕಾಲ ಅರ್ಧ ಮಾತ್ರಯೇ ? ಸ್ವರ ಸಹಾಯದಿಂದ ಉಚ್ಚರಿಸಿದಾಗ ಅರ್ಧ ಮಾತ್ರೆಯೇ ಎಂಬುದನ್ನು ವೈಯಾಕರಣರು ಹೇಳಿಲ್ಲ.
(ರ) ಸ್ವತಂತ್ರವಾಗಿ ಉಚ್ಚರಿಸಲು ಸಾಧ್ಯವಿಲ್ಲದ ವ್ಯಂಜನಗಳನ್ನು ತೆಗೆದುಕೊಂಡರೆ-ಆ ವ್ಯಂಜನವು ಸದ್ದು ಮಾಡುವ ಸಾಧ್ಯತೆಯೇ ಇಲ್ಲದಿರುವುದರಿಂದ ಅದು ಕಾಲವನ್ನು ತೆಗೆದುಕೊಳ್ಳುವ ಪ್ರಶ್ನೆಯೇ ಏಳುವುದಿಲ್ಲ,
(ಲ) ಸ್ವತಂತ್ರವಾಗಿ, ಸ್ವರದಂತೆಯೇ, ಉಚ್ಚರಿಸಬಹುದಾದ ಸ್, ಶ್-ಮೊದಲಾದ ವ್ಯಂಜನಗಳನ್ನು ತೆಗೆದುಕೊಂಡರೆ ಅವಕ್ಕೆ ಸ್ವರ ತೆಗೆದುಕೊಳ್ಳಬಹುದಾದಷ್ಟೇ ಕಾಲದ ಬೆಲೆ ಕೊಡಬೇಕಾಗುತ್ತದೆ. ಉಚ್ಚಾರ ದೃಷ್ಟಿಯಿಂದ ಸ್ವರ ಪಡೆಯುವ ಕಾಲವನ್ನೇ ಇವು ಪಡೆಯುತ್ತವೆ.
(ವ) ‘ರ’ದಲ್ಲಿ ಹೇಳಿದಂಥ ಸ್ವತಂತ್ರವಾಗಿ ಉಚ್ಚರಿಸಲು ಸಾಧ್ಯವಿಲ್ಲದ ವ್ಯಂಜನಗಳನ್ನು ಕ, ಅಕ್-ಎಂಬಂತೆ ಸ್ವರದ ಸಹಾಯದಿಂದ ಉಚ್ಚರಿಸಬಹುದು. ಇಂಥ ಸಂದರ್ಭಗಳಲ್ಲಿನ ವ್ಯಂಜನವು, ಇಲ್ಲಿ ‘ಕ್’ ಎಂಬುದು, ಒಟ್ಟು ಉಚ್ಚಾರಣೆಯ ಕಾಲದ ಮೊತ್ತದಲ್ಲಿ ತನ್ನ ಪಾಲಿನ ಕಾಲಭಾಗವನ್ನು ಪಡೆಯುತ್ತದೆ. ಇಲ್ಲಿ ಕ ಅಥವಾ ಅಕ್ ಎಂಬುವು ಒಂದೊಂದು ಮಾತ್ರೆಯ ಕಾಲ ತೆಗೆದುಕೊಳ್ಳುತ್ತವೆ ಎಂದಿಟ್ಟುಕೊಂಡರೆ ಅವುಗಳಲ್ಲಿ ಸೇರಿದ ‘ಕ್’ ಎಂಬ ಸದ್ದು ಸುಮಾರಾಗಿ ಅರ್ಧಮಾತ್ರೆಯ ಕಾಲವನ್ನು ತೆಗೆದುಕೊಂಡಂತೆ (ಕಾಲಾವಕಾಶ ಭ್ರಮೆ) ತೋರಬಹುದು.
(ಶ) ಈ (ವ. ದ) ಲೆಕ್ಕಾಚಾರ ಒಂದು ಸ್ವರದ ಸಹಾಯದಿಂದ ಒಂದಕ್ಕಿಂತ ಹೆಚ್ಚು ವ್ಯಂಜನಗಳು ಉಚ್ಚಾರವಾಗುವಂಥ ಸಂದರ್ಭದಲ್ಲಿ ಸರಿಹೋಗುವುದಿಲ್ಲ. ತ್ರ್ಯ ( ತ್ ರ್ ಯ್ ಅ ) ಎಂಬ ಉಚ್ಚಾರ ಕಾಲವನ್ನು ಮೂರು ವ್ಯಂಜನಗಳೂ ಒಂದು ಸ್ವರವೂ ಪಾಲುಮಾಡಿಕೊಳ್ಳುತ್ತವೆ. ಕಾಲಾವಕಾಶ ಭ್ರಮೆಯ ದೃಷ್ಟಿಯಿಂದಲೂ ಇಲ್ಲಿನ ವ್ಯಂಜನಗಳು ಅರ್ಧರ್ಧ ಮಾತ್ರೆಗಳನ್ನು ತೆಗೆದು ಕೊಳ್ಳುವುದಿಲ್ಲ. ಕ್ ಆ ರ್ ತ್ ಸ್ ನ್ ಯ್ ಅ ಎಂಬುದರ ಸ್ವಾಭಾವಿಕ ಉಚ್ಚಾರದಲ್ಲಿ ಪ್ರತಿಯೊಂದು ವ್ಯಂಜನವೂ ಯಾವುದೇ ಒಂದು ಹ್ರಸ್ವಸ್ವರಕ್ಕೆ ಹೇಳಲಾದ ಒಂದು ಮಾತ್ರೆಯ ಅರ್ಧದಷ್ಟು ಕಾಲವನ್ನು ತೆಗೆದುಕೊಳ್ಳುವುದಿಲ್ಲ. ತ್ರಿತಯ ಎಂಬ ಶಬ್ದದಲ್ಲಿ ತ್ರಿ ಎಂಬಲ್ಲಿನ ತಕಾರವು ‘ತ’ ಎಂಬಲ್ಲಿನ ತಕಾರಕ್ಕಿಂತ ಕಡಿಮೆ ಕಾಲವನ್ನು ತೆಗೆದುಕೊಳ್ಳುತ್ತದೆ. ಕಾರ್ತ್ಸ್ನ್ಯ ಶಬ್ದದಲ್ಲಿನ ತ್ ವ್ಯಂಜನ ತೀರ ಕಡಿಮೆ ಕಾಲವನ್ನು ತೆಗೆದುಕೊಳ್ಳುತ್ತದೆ. ಇದು ಸ್ವಾಭಾವಿಕ ಉಚ್ಚಾರದ ದೃಷ್ಟಿಯಿಂದಲೂ, ಛಂದಸ್ಸಿನ ದೃಷ್ಟಿಯಿಂದಲೂ, ಭೌತಶಾಸ್ತ್ರದ ದೃಷ್ಟಿಯಿಂದಲೂ ಸಾಧುವಾದ ಸಂಗತಿ. ಆದುದರಿಂದ ವ್ಯಂಜನಕ್ಕೆ ಅರ್ಧಮಾತ್ರೆ ಎಂಬುದು ತೀರ ಅಶಾಸ್ತ್ರೀಯವೂ, ರೂಕ್ಷವೂ ಆದ ಅಭಿಪ್ರಾಯವಾಗಿದೆಯಾಗಿ ಅದನ್ನು ನಿರ್ದಾಕ್ಷಿಣ್ಯವಾಗಿ ಹೊಡೆದುಹಾಕಬೇಕು. ವೈಯಾಕರಣರ ಅಭಿಪ್ರಾಯದ ಹಿನ್ನೆಲೆಯಲ್ಲಿ ಏನು ಇಂಗಿತ ಇದ್ದೀತು ಎಂದು ಯೋಚಿಸಿ ಅವರ ವಿಶ್ಲೇಷಣ ಬುದ್ಧಿಯನ್ನು ಮೆಚ್ಚಿದ್ದೇನೆ.
೨. “ವೈಯಾಕರಣರ ಮಾತ್ರೆಯೆಂಬ ಶಬ್ದವೂ ಛಂದಶ್ಯಾಸ್ತ್ರಜ್ಞರ ಮಾತ್ರೆಯೆಂಬ ಶಬ್ದವೂ ಬೇರೆ ಬೇರೆ ಅರ್ಥವುಳ್ಳವುಗಳು ಎಂಬುದು ಸ್ವಯಂವೇದ್ಯವಾಗುತ್ತದೆ-ಎಂಬ ವಿಚಾರ.
ವ್ಯಂಜನಕ್ಕೆ ಅರ್ಧ ಮಾತ್ರೆ ಎಂಬುದು ಅಸಮರ್ಥನೀಯವಾದ ಮಾತ್ರಕ್ಕೆ ಮೇಲಿನ ವ್ಯತ್ಯಾಸ ಸ್ವಯಂವೇದ್ಯವಾಗಿಬಿಡುವುದಿಲ್ಲ. ವೈಯಾಕರಣರು ವ್ಯಂಜನಕ್ಕೆ ಹೇಳಿರುವ ಅರ್ಧ ಮಾತ್ರ ಅವರೇ ಹೇಳುವ ಒಂದು ಮಾತ್ರೆಯ ಅರ್ಧವಲ್ಲ ಎಂಬುದನ್ನು ೧. ಇ. ಶ. ದಲ್ಲಿ ಸ್ಪಷ್ಟಪಡಿಸಲಾಗಿದೆ. ಆದುದರಿಂದ ವೈಯಾಕರಣರ ಅರ್ಧಮಾತ್ರೆಯ ಕಲ್ಪನೆಗೆ ಅವರ ಅಳತೆಗೋಲಿನಿಂದಲೇ ಅಸ್ತಿತ್ವವಿಲ್ಲ. ಇನ್ನು ಅವರ ಒಂದು ಮಾತ್ರೆ ಛಂದೋವಿದರ ಒಂದು ಮಾತ್ರೆಯೇ. ಇವುಗಳಲ್ಲಿ ಬೇರೆ ಅರ್ಥಗಳಿಲ್ಲವಾಗಿ ವ್ಯತ್ಯಾಸ ದುರ್ಬೋಧವಾಗಿದೆ. ಇನ್ನು ಯಾರಾದರೂ ವೈಯಾಕರಣರ ಅರ್ಧಮಾತ್ರೆ ಸಂಗೀತದ ಅರ್ಧಮಾತ್ರೆಗೆ ಸಮನಾದುದರಿಂದ ಛಂದಸ್ಸಿನ ಮಾತ್ರೆಗೆ ಭಿನ್ನ ಎಂದು ವಾದಿಸಿಯಾರೋ ನೋಡಬೇಕಾಗಿದೆ.
೩. ವ್ಯಂಜನವನ್ನು ಸ್ವತಂತ್ರವಾಗಿ ಉಚ್ಚರಿಸಲಾಗದು ಎಂದು ನಾನು ಉಲ್ಲೇಖಿಸಿದ ಮಾತನ್ನು ನನ್ನ ಇಡೀ ವಾದಕ್ಕೆ ಮೂಲಾಧಾರವಾಗಿದೆ ಎಂದು ಆರೋಪಿಸಿ, ವ್ಯಂಜನಗಳನ್ನು ಸ್ವತಂತ್ರವಾಗಿ ಉಚ್ಚರಿಸಲು ಸಾಧ್ಯ ಎಂಬುದಕ್ಕಾಗಿ ‘ಆಲೋಕ’ದ ಎರಡು ಪುಟಗಳ ಸ್ವರ ವ್ಯಂಜನಗಳ ವಿವೇಚನೆಯತ್ತ ಗಮನ ಸೆಳೆಯಲಾಗಿದೆ ಈ ಸಂಬಂಧದಲ್ಲಿ ನಾನು ಬಿನ್ನವಿಸಬೇಕಾದ್ದು-
ಅ. ನಾನು ಖಂಡಿತವಾಗಿ ಅತಿಪ್ರಾಜ್ಞನಲ್ಲದಿದ್ದರೂ ಆಲೋಕ ಪ್ರಕಟವಾಗುವುದಕ್ಕೆ ಮುಂಚೆಯೇ ಹಿರಿಯರಲ್ಲಿ ಸ್ವನವಿಜ್ಞಾನವನ್ನು ಕಿಂಚಿತ್ ಅಭ್ಯಾಸ ಮಾಡಿದ್ದೇನೆ ಎಂದು ವಿನಯದಿಂದ ನಿವೇದಿಸಬಯಸುತ್ತೇನೆ. ಛಂದಸ್ಸಿನ ಕ್ಷೇತ್ರದಲ್ಲಿ ಡಿ. ಎಲ್. ಎನ್. ಅವರ ಮಾರ್ಗದರ್ಶನ ಪ್ರೋತ್ಸಾಹಗಳ ಆಶ್ರಯದಲ್ಲಿ ಈಗಾಗಲೇ ತಕ್ಕಷ್ಟು ಕೆಲಸ ಮಾಡಿ “ಶಾಸ್ತ್ರೀಯ ವಿಚಾರ ಧಾರೆ ಯಾವ ದಿಕ್ಕಿನಲ್ಲಿ ಹರಿಯ”ಬೇಕು ಎನ್ನುವುದನ್ನು ಸ್ವಲ್ಪವಾದರೂ ತಿಳಿದಿದ್ದೇನೆ ಎಂದು ಇನ್ನಷ್ಟು ತಗ್ಗಿ ಅರಿಕೆಮಾಡಿಕೊಳ್ಳುತ್ತೇನೆ. ನನ್ನ ಲೇಖನಕ್ಕೆ ನೇರವಾಗಿ ಸಂಬಂಧವಿಲ್ಲದಿದ್ದರೂ ಈ ನಿಮಿತ್ತದಲ್ಲಿ ಇನ್ನಷ್ಟು ಹೊಸ ವಿಚಾರಗಳನ್ನು ಯಾರಾದರೂ ಹೇಳಿದರೆ ನನ್ನ ಹೆಮ್ಮೆಗೆ ಧಕ್ಕೆ ಆಗದು. ಪ್ರತಿಯಾಗಿ ಸಂತೋಷ ಪಡುತ್ತೇನೆ. ಸಾಧ್ಯವಾದರೆ ನಾನೂ ಯೋಚಿಸುತ್ತೇನೆ.
ಆ. ವ್ಯಂಜನವನ್ನು ಸ್ವತಂತ್ರವಾಗಿ ಉಚ್ಚರಿಸುವುದು ಸಾಧ್ಯ ಎಂಬುದನ್ನು ನನ್ನ ‘ಪ್ರಕ್ರಿಯೆ-ಪ್ರತಿಕ್ರಿಯೆ’ಯಲ್ಲೇ (ಸಾಕ್ಷಿ 7 ನೇ ಸಂಚಿಕೆ ಪುಟ 49.3 ಕ್ಕೆ) ತೋರಿಸಲಾಗಿದೆ. ಇದು ಆಲೋಕಕ್ಕಿಂತಲೂ ಹಳೆಯ ವಿಚಾರ. ನಾನು ಛಂದೋಪ್ರಕ್ರಿಯೆಯನ್ನು ವಿಶೇಷವಾಗಿ ದೃಷ್ಟಿಯಲ್ಲಿಟ್ಟು ಕೊಂಡದ್ದರಿಂದ ವಿವರಕ್ಕೆ ಹೋಗಲಿಲ್ಲ. ಇದೇ ಲೇಖನದ 1 ಆ. ಗಮನಿಸುವುದು.
ಇ. ಕ್, ತ್, ಟ್, ಪ್ ಎಂಬಂಥ ಸ್ಪರ್ಶಗಳನ್ನು ಸ್ವರದ ಸಹಾಯವಿಲ್ಲದೆ ಉಚ್ಚರಿಸುವುದು ಸಾಧ್ಯವೇ ?
ವ್ಯಂಜನ ಸಂಸರ್ಗದಿಂದ ಸಾಧ್ಯವೆಂದು ತೋರುತ್ತದೆ. ವಕ್ರ (ವಕ್‌ತ್‌ರ್‌ಅ) ಎಂಬಲ್ಲಿ ತಕಾರದ ಆಚೆ ಈಚೆ ಸ್ವರವಿಲ್ಲ. ಓಷ್ಠ್ಯ (ಓಷ್‌ಠ್‌ಯ್‌ಅ) ಎಂಬಲ್ಲಿ ಠ್ ವ್ಯಂಜನದ ಉಚ್ಚಾರ ಹಾಗೆ. ಕಲ್ಕ್ಯಾವತಾರ (-ಲ್‌ಕ್‌ಯ್-) ಎಂಬಲ್ಲಿ ಕ್. ಕಮ್ಪ್ಯೂಟರ್ (ಮ್‌ಪ್‌ಯ್) ಎಂಬಲ್ಲಿ ಪ್. ಇಂಥ ಉದಾಹರಣೆ
1. ನನ್ನ ಹಲವು ಪ್ರಯತ್ನಗಳಲ್ಲಿ ಡಾ. ಎಸ್. ಶ್ರೀಕಂಠಶಾಸ್ತ್ರಿ ಅವರು ದಾರಿ ನಡೆಸಿದ್ದಾರೆ.
ಗಳಲ್ಲೆಲ್ಲ ಸ್ಪರ್ಶಿತರ ವ್ಯಂಜನ ಒಂದಾದರೂ ಪರಿಸರದಲ್ಲಿರುವ ಸಂಭವ ಹೆಚ್ಚೆಂದು ತೋರುತ್ತದೆ. ವಕ್ತ್ಕ ಎಂದೂ ಪ್ರಯತ್ನದಿಂದ ಹೇಳಬಹುದು. ಹೇಗೇ ಉಚ್ಚಾರವಾಗಲಿ ಉಚ್ಚಾರವಾದರೆ ಸಾಕು ಕಾಲವನ್ನು ಪಡೆದೇ ತೀರುತ್ತವೆ ಎಂಬುದು ಮಕ್ಕಳಿಗೂ ತಿಳಿಯದೆ? ಹೀಗೆ ವ್ಯಂಜನ ಪರಿಸರದಿಂದ ಉಚ್ಚರಿಸಲ್ಪಡಬಹುದಾದ ಮಾತ್ರಕ್ಕೆ ಈ ಸ್ಪರ್ಶವರ್ಣಗಳನ್ನು ಸ್ವತಂತ್ರವಾಗಿ ಉಚ್ಚರಿಸಬಹುದು ಎನ್ನಲಾಗದು. ಈ ಸ್ಪರ್ಶಗಳ ಜೊತೆಗೆ ಚ್ ಜ್ ಎಂಬ ಅನುಘರ್ಷಗಳನ್ನೂ ಸೇರಿಸಬಹುದೆಂದು ತೋರುತ್ತದೆ. ಹೀಗೆನ್ನುವಾಗ ಪೂರ್ವದ್ರಾವಿಡತ್ಸವನ್ನಾಗಲೀ, ಮೇಜ್‌ನ ಜವನ್ನಾಗಲೀ ನಾನು ದೃಷ್ಟಿಯಲ್ಲಿಟ್ಟುಕೊಂಡಿಲ್ಲ.
ಈ. ಈ ಮೇಲೆ ಹೇಳಿದ ವ್ಯಂಜನಗಳನ್ನು ಬಿಟ್ಟರೆ ಉಳಿದೆಲ್ಲಾ ವ್ಯಂಜನಗಳನ್ನು ಸ್ವತಂತ್ರವಾಗಿ ಉಚ್ಚರಿಸಬಹುದು. ಸ್, ರ್ ಗಳನ್ನು ಕೇವಲ ಉಸಿರಿನ ನೆರವಿನಿಂದ ಉಚ್ಚರಿಸಬಹುದು.
ಆದರೆ ಮ್, ನ್ ಎಂಬ ಅನುನಾಸಿಕ ವ್ಯಂಜನಗಳು ನಾಸಿಕ್ಯ ಸ್ವರಗಳಾಗಿ (Syllabic nasals) ಬಿಡುತ್ತವೆ.
ಯ್, ವ್, ರ್, ಲ್ ಗಳು ಅಂತಸ್ಥ ಅಥವಾ ಅರ್ಧಸ್ವರಗಳು ಎಂಬ ಹೆಸರಿನಿಂದ ಸ್ವರದ ನಂಟು ಪಡೆದಂತೆ ತೋರುತ್ತದೆ ; ಸ್ವರಿತ (Syllabic ಎಂಬ ಅರ್ಥದಲ್ಲಿ) ವಾಗುತ್ತದೆ ಎನ್ನಬಹುದು. ರ್ ಉಚ್ಚಾರ ಹೀಗೂ ಸಾಧ್ಯ.
೪. ಕ ಎಂಬುದಕ್ಕಿಂತ ಅಕ್ ಎನ್ನಲು ಪ್ರಯತ್ನ ಹೆಚ್ಚು ಬೇಕು. ಪ್ರಯತ್ನಕ್ಕೂ ಕಾಲಾವಕಾಶಭ್ರಮೆಗೂ ನೇರಸಂಬಂಧವಿದೆ. ಅಕ್ ಎಂಬುದಕ್ಕೆ ಹೆಚ್ಚಿನ ಪ್ರಯತ್ನ ಅಗತ್ಯವಾಗಿರುವುದರಿಂದ ಅದು ಕ ಎಂಬುದಕ್ಕಿಂತ ಹೆಚ್ಚಿನ ಕಾಲ ತೆಗೆದುಕೊಂಡಂತೆ ಭ್ರಮೆ ಉಂಟಾಗಬಹುದು ಎಂಬ ಅನುಮಾನ-
ಅ. ಇಲ್ಲಿ ಮೊದಲ ವಾಕ್ಯ ಸಾಧು. ಎರಡನೆಯದು ಅಸಾಧು. ಮೂರನೆಯದು ಅನಗತ್ಯ.
ಆ. ಕಾಲಾವಕಾಶ ಭ್ರಮೆ ಉತ್ಪನ್ನವಾಗುವ ಸಂದರ್ಭಗಳು ಬೇರೆ ಇವೆ.
ಕೆಲವು :
(ಯ) ಸದ್ದು ಎಂದರೆ ಸ್ಪಂದನ, ನಿರಂತರವಾಗಿ ಕ್ಷೀಣವಾಗುತ್ತಾ ಹೋಗುವ ಸ್ಪಂದನ. ವೀಣೆಯ ತಂತಿಯ ಒಂದು ಮಿಡಿತದ ಉಚ್ಚಾರ ತೆಗೆದುಕೊಳ್ಳುವ ಕಾಲ ಒಬ್ಬೊಬ್ಬರ ಕೇಳ್ಮೆಯ ಶಕ್ತಿಗೆ ಅನುಗುಣವಾಗಿ ಭಿನ್ನ ಭಿನ್ನ. ಪ್ರತಿಯೊಬ್ಬರೂ ಇಷ್ಟು ಕಾಲ ಎಂದು ಭ್ರಮಿಸಬೇಕಾಗುತ್ತದೆ. ಸೂಕ್ಷ್ಮ ಉಪಕರಣವು ಹೇಳ ಬಹುದಾದುದೂ ಗ್ರಹಿಸಿದ ಕಾಲವನ್ನಲ್ಲದೆ ಉಚ್ಚಾರದ ಕಾಲವನ್ನಲ್ಲ. ಒಂದು ಸದ್ದು ಕ್ಷೀಣಿಸುವುದರೊಳಗೆ ಇನ್ನೊಂದು ಶಕ್ತಿ ಸದ್ದು ಕೇಳಿದಾಗ ಆ ಹಿಂದಿನ ಸದ್ದಿನ ಕಾಲ ಖಚಿತವಾಗುತ್ತದೆ. [ಅನಂತರದ ಸದ್ದು ಮುಕ್ತಾಯದ ಕೊಟ್ಟ ಕೊನೆಯ ಸದ್ದಿನಂತೆ ಆಕಾಶದಲ್ಲಿ ಅಲೆದಾಡುತ್ತಲೇ ಲೆಕ್ಕಕ್ಕೆ ಸಿಗದೆ ಹೋಗುತ್ತದೆ. ಸದ್ದುಗಳ ಸರಣಿಯಲ್ಲಿ ಒಂದೊಂದು ಸದ್ದಿನ ಭಾಗವಷ್ಟನ್ನೇ ನಾವು ಕೇಳುವುದು.]
(ರ) | ತರಿ | ತಕಿಟ 1 ತರಿಕಿಟ | ತಕತಕಿಟ |
ಇಲ್ಲಿ ನಾಲ್ಕು ಘಟಕ (ಯೂನಿಟ್)ಗಳು ಒಂದಾದ ಮೇಲೊಂದರಂತೆ ಇವೆ. ಪ್ರತಿ ಘಟಕಗಳೂ ಪರಸ್ಪರ ಸಮಾನವಾಗಿವೆ. ಪ್ರತಿಯೊಂದು ಘಟಕದ ಕಾಲಮಾನವೂ ನಾಲ್ಕು ಮಾತ್ರೆಗಳು ಎಂದಿಟ್ಟು ಕೊಂಡರೆ ಕ್ರಮವಾಗಿ ಘಟಕಗಳಲ್ಲಿನ ಅಕ್ಷರಗಳು 2, 1 1/3, 1,4/5 ಮಾತ್ರೆಗಳನ್ನೇ ಸರಿಯಾಗಿ ತೆಗೆದುಕೊಂಡಿವೆ ಎಂದು ಪ್ರಮಾಣ ಮಾಡುವಂತಿಲ್ಲ. ಉಪಕರಣಗಳ ಹೇಳಿಕೆ ಭಿನ್ನವಾಗಬಹುದು. ಆದರೂ ಹಾಗೆ ತೆಗೆದುಕೊಂಡ ಹಾಗೆ ಅನ್ನಿಸುತ್ತದೆ. ಇದು ಭ್ರಮೆ.
‘ಆ ಈ’ ಎಂಬಷ್ಟೇ ಕಾಲವನ್ನು ‘ಕಾರ್ತ್ಸ್ನ್ಯ’ ಎಂಬುದು ಛಂದಸ್ಸಿನಲ್ಲಿ ತೆಗೆದುಕೊಳ್ಳುತ್ತದೆ. ಎರಡನೇ ಉದಾಹರಣೆಯಲ್ಲಿ ನಾಲ್ಕು ಮಾತ್ರೆಗಳನ್ನು ಪ್ರತಿಯೊಂದು ವ್ಯಂಜನಗಳೂ ಹಂಚಿಕೊಂಡಿವೆ ಎಂಬುದು ನಿರ್ವಿವಾದ. ಆದರೆ ಅದು ಎಷ್ಟೆಷ್ಟೆಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಕಾ-ರ‍್ತ್ಸ್ನ್ಯಮ್ ಎಂದು ಪ್ರಯತ್ನಪಟ್ಟು ಉಚ್ಚರಿಸಬಹುದು. ಅಥವಾ ಕಾರ್-ತ್ಸ್ನ್ಯಮ್ ಎನ್ನೋಣ. ಎರಡು ಸಂದರ್ಭಗಳಲ್ಲೂ ಎರಡು ಭಾಗಗಳೂ ಎರಡೆರಡು ಮಾತ್ರೆಗಳನ್ನು ತೆಗೆದುಕೊಳ್ಳುತ್ತದೆ ಎನ್ನುತ್ತೇವೆ. ಅಷ್ಟು ಸ್ಪಷ್ಟ. ಆಈ | ಕಾರ್ತ್ಸ್ನ್ಯಂ ಎಂಬಲ್ಲಿ ಮೊದಲನೆಯದು ನಾಲ್ಕು ಮಾತ್ರೆಯಾಗಿದ್ದು ಎರಡನೆಯದು ಆರೋ ಏಳೋ ಮಾತ್ರೆಗಳಾದಲ್ಲಿ ಉಚ್ಚಾರಣೆಯ ಕಾಲವಲ್ಲ-ಬೇರೆ ಯಾವುದೋ ಕಾಲವಾಗುತ್ತದೆ.
ಇಲ್ಲ-ಕಾರ್ತ್ಸ್ನ್ಯ ಎಂಬುದನ್ನು ಹ್ರಸ್ವಸ್ವರಕ್ಕೆ ಒಂದು ಮಾತ್ರೆ ಎಂಬ ಮೂಲಮಾನದ ಆಧಾರದ ಮೇಲೆ ಆರು ಮಾತ್ರೆಗಳಷ್ಟೇ ಕಾಲ ತೆಗೆದುಕೊಳ್ಳುವಂತೆ ಉಚ್ಚರಿಸಿ ತೋರಿಸಬೇಕು. ವೈಯಾಕರಣರೇ ಉಚ್ಚರಿಸಿದರೂ ಚಿಂತೆಯಿಲ್ಲ. ಅಥವಾ ಉಪಕರಣಗಳ ಸಹಾಯದಿಂದಲೇ ಉಚ್ಚಾರ ಮಾಡಿಸಿ, ಅಂಥ ಉಚ್ಚಾರ ಭಾಷೆಯ ಮಾತಿನ ಉದ್ದಕ್ಕೂ ವ್ಯವಹಾರವೇ ಎಂಬುದನ್ನು ನಿರೂಪಿಸಿದರೆ ತಿದ್ದಿಕೊಳ್ಳುತ್ತೇನೆ.1 ಉಚ್ಚಾರವಲ್ಲದೆ ಬರೆಹವನ್ನು ವೈಯಾಕರಣರು ಅಳೆಯುವುದಾದರೆ ನಮ್ಮ ತಕರಾರಿಲ್ಲ.
(ಲ) ನಿನ್ನೆ, ಈಗ, ಇನ್ನು ಸ್ವಲ್ಪ ಹೊತ್ತಾದ ಮೇಲೆ-ನನ್ಯ ಉಚ್ಚಾರದ ಮೂರು ‘ಕ’ಗಳು ಸಮಾನವಾದ ಕಾಲ ತೆಗೆದುಕೊಂಡಂತೆ ಭಾಸವಾಗುತ್ತದೆ. ಒಂದು ಪದ್ಯವನ್ನು ಓದುತ್ತೇನೆ. ಆ ಓದಿನಲ್ಲಿನ ಎಲ್ಲಾ ‘ಒಂದು ಮಾತ್ರೆ’ಗಳು ಪರಸ್ಪರ ಸಮ ಎನ್ನುತ್ತೇವೆ. ನಿಜವೆಂದೇ ಅಂದುಕೊಳ್ಳೋಣ. ಈಗೊಂದು ಗಂಟೆಯ ಹಿಂದೆ ನಾನು ಅದೇ ಪದ್ಯ ಓದಿದ್ದೆ. ಆಗಲೂ ಆ ಓದಿನಲ್ಲಿನ ಎಲ್ಲಾ ‘ಒಂದು ಮಾತ್ರೆ’ಗಳು ಹೀಗೆಯೇ ಸಮಾನವಾಗಿದ್ದುವು. ಆದರೆ ಆ ಓದಿನ ಆ ಒಂದು ಮಾತ್ರೆ, ಈ ಓದಿನ ಈ ಒಂದು ಮಾತ್ರೆ ಸಮಾನವೆಂಬಂತೆ ಭಾಸವಾಗುತ್ತದೆ. ಬಹುಮಟ್ಟಿಗೆ ಸಮಾನವಾಗಿರುವುದಿಲ್ಲ ; ಹೆಚ್ಚಿನ ಅಂತರವಿರುತ್ತದೆ. ಆದರೆ, ಸಮಾನವೆಂದು ತೋರುವುದು ಭ್ರಮೆ.
ಇ,(ಯ) ಕ ಎಂದೋ, ಅಕ್ ಎಂದೋ, ಖ ಎಂದೋ ಉಚ್ಚರಿಸಿ ಅದನ್ನು ಯಾರೂ ಅಳೆಯುವುದಿಲ್ಲ. ನಿರಂತರವಾದ ಕ್ರಿಯೆ, ಪ್ರಯತ್ನ ಅಗತ್ಯ. ‘ಕ್ರಿಯಾನಂತರ ವಿಶ್ರಾಂತಿ’ಯೇ ಪ್ರತೀತವಾಗುವುದು. ಕಾಲಪ್ರತೀತಿಗೆ ಕ್ರಿಯೆ ಪ್ರಯತ್ನ ಮಾಧ್ಯಮ. ಆ ಕಾಲವನ್ನು ಬೇರೊಂದು ಕಾಲದಂಡದಿಂದ ಅಳೆಯುವುದಿಲ್ಲ. ಈ ಪ್ರಾಥಮಿಕ, ಪ್ರಾವೇಶಿಕ ವಿಷಯವನ್ನು ಇಲ್ಲಿ ವಿವರಿಸದೆ ಕೈಬಿಡುತ್ತೇನೆ.2
1. “ಪ್ರಾದೇಶಿಕ ಅಂಕಗಣಿತ” ನನಗೆ ಬಾರದೆ ಕಾರ್ತ್ಸ್ನ್ಯಕ್ಕೆ ಐದು ಮಾತ್ರೆ ಲೆಕ್ಕಹಾಕಿದ್ದುಂಟು. ಶ್ರೀ ಬಿಳಿಗಿರಿಯವರು ಐದುವರೆ ಎಂದು ತಿದ್ದಿದ್ದಾರೆ. ಕೃತಜ್ಞತೆಗಳು. ವಸ್ತುತ ಅದು ‘ಕಾರ್ತ್ಸ್ನ್ಯ’ ಎಂದಿರಬೇಕಿತ್ತು. ಆರಾಗುತ್ತದೆ. ಬೇಡ ಕಾರ್ತ್ಸ್ನ್ಯ ಎಂಬುದನ್ನು ಐದುವರೆ ಮಾತ್ರೆಗಳಲ್ಲಿ ಹೇಳಿದರೇ ವಾಸಿ, ‘ಅಂ’ ಎಷ್ಟು ಮಾತ್ರಯಾಗುತ್ತದೋ ಸಂದೇಹ..
2. “The measurement of time is basically the counting of the repetitions of a recurring phenomenon. No measuring rod is required. The measurement of lengths always involves
ಕಾಲವು ಮುನ್ನಡೆಯ ಗತಿಗೆ ಅನುಸಾರವಾಗಿಯೇ ಹಿನ್ನಡೆಯುತ್ತದೆ.1
(ರ) ಲಘು ಗುರು-ಸಂಗೀತದ ತಾಳಾಂಗದ, ಛಂದಸ್ಸಿನ ಆಸ್ತಿ. ವರ್ಣಮಾಲೆಯನ್ನು ಹೇಳಿಕೊಡುವಾಗ ‘ಅ’ದ ಪರಿಚಯವಾಗುತ್ತದೆ. ಆದರೆ ಅನಂತರವೇ ಅದರ ಉಪಧ್ವನಿಮಾಗಳ ಪರಿಚಯವಾಗುವುದು, ಬಾಲಪಾಠದಲ್ಲಿ ಇದು ಅನಿವಾರ್ಯ. ಅಂದರೆ ಬಾಲಪಾಠದಲ್ಲಿ ಹೇಳಿಕೊಡಲಾಗುವ ‘ಅ’ ಅದಕ್ಕೆ ಸಂಬಂಧಿಸಿದ ಸಮೂಹವನ್ನು ಒಟ್ಟಾರೆ ಪ್ರತಿನಿಧಿಸುತ್ತದೆ. ಅಂತೆಯೇ ಯಾವೊಂದು ಉಪಧ್ವನಿಮಾವನ್ನೂ ಪ್ರತಿನಿಧಿಸುವುದಿಲ್ಲ. ಛಂದಸ್ಸಿನ ಬಾಲ ಪಾಠದಲ್ಲ ಅಷ್ಟೆ, ‘ಅ’ ಏಕಮೇವ ಅಕ್ಷರವಾಗಿ ಖಚಿತವಾಗಿ ಅಳತೆಗೆ ಸಿಗಲಾರದ್ದಾದರೂ, ಸಿಕ್ಕುವ ಅಳತೆ ಎನ್ನುವಂಥದು ಇತರೆಡೆಗಳಲ್ಲಿ ಅನ್ವಿತವಾಗಲಾರದ್ದಾದರೂ ಅದನ್ನು ಒಂದು ಮಾತ್ರೆ, ಲಘು ಎನ್ನಬೇಕಾಗುತ್ತದೆ- ಪ್ರವೇಶಕ್ಕಾಗಿ, ‘ಆ’ ಎಂಬುದು ‘ಗುರು’ ಎಂದಾಗ ಬಹುಮಟ್ಟಿಗೆ ಅದು ಅಕಾರಕ್ಕಿಂತ ದೊಡ್ಡದು ಎನ್ನಬಹುದೇ ಹೊರತು ಎರಡು ಮಾತ್ರೆಯಾಗದು. ಆದರೆ ಎರಡರ ಕಲ್ಪನೆಗಾಗಿ ಹೇಳಬೇಕಾಗುತ್ತದೆ. ಒಂದು ಸದ್ದಿಗೆ ಮಾತ್ರಾ ಮೌಲ್ಯ ಹೇಳುವುದು ಬಾಲಪಾಠಕ್ಕಾಗಿ ಮಾತ್ರ. ಒಂದು ಸದ್ದು ಅದು ಅ ಇರಲಿ, ಕ ಇರಲಿ-ಏನೇ ಇರಲಿ ಅದರ ಉಚ್ಚಾರ ಅಳತೆಗೆ ಸಿಗುವುದು, ಇಷ್ಟು ಎಂದು ಅಳತೆಗೆ ಸಿಗುವುದು, ನಿರಂತರವಾಗಿ ಸದ್ದುಗಳು ಬಂದಾಗಲೇ. ಆಗ ಒಂದು ಸದ್ದು, ಒಂದೇಕೆ ಮೌನಾಘಾತ (ಪರಿಭಾವನೆಯ ಸದ್ದು) ಗಳಿಂದ ಹೆಚ್ಚಿನ
the comparison of two lengths : the length to be measured and the unit of length, whereas the measurement of time requires no such comparison, but merely the counting of the units themselves as they recur,”
Astronomical time : G. M. Clemence, P. L. Reviews of Modern Physics, 29-1, 1957.
1. “Time-reversal invariance tells us that the bodies will evolve in time backward through exactly the same orbits they have just traversed”.
Experiments in Time Reversal : Oliver E. Overseth, P. 89, Scientific American 221-4, October 1969.
ಮಾತ್ರೆಗಳ ಕಾಲವನ್ನು ಒಂದು ಮಿತಿಯಲ್ಲಿ ಪಡೆಯಬಹುದು1 ವೈಯಾಕರಣರಿಗೆ ಚಿಕ್ಕದು ದೊಡ್ಡದು ಎಂಬರ್ಥದ ಲಘುಗುರುಗಳು ಸಾಕು. ಇನ್ನೂ ಎಳೆಯಬೇಕಾದಲ್ಲಿ, ಅದು ಎಷ್ಟೇ ಎಳೆದುಕೊಳ್ಳಲಿ-ಇನ್ನೂ ದೊಡ್ಡದು ಎಂಬರ್ಥದಲ್ಲಿ ಪ್ಲುತ ಇಟ್ಟುಕೊಳ್ಳಲಿ. ಲಯದ ಪ್ರಸ್ತಾಪಕ್ಕೆ ಬಂದಲ್ಲದೆ ಮಾತ್ರೆಗಳ ವಿಷಯ ಅವರಿಗೆ ಅನಾವಶ್ಯಕ. ಇಷ್ಟೇ ಕಾಲ ಎಂದು ಅಳೆಯುವಲ್ಲಿ ವ್ಯಾಕರಣ ಪ್ರಮಾಣವಲ್ಲ ; ಛಂದಸ್ಸು, ತಾಳ, ಕೇವಲ ವೈಯಾಕರಣರಿಗೆ ಆ ಅಧಿಕಾರವಿಲ್ಲ.
‘ಅಕ್’ನ ಉಚ್ಚಾರಕಾಲ-
ᴗᴗᴗᴗ ᴗ ᴗ ᴗ ᴗ
ಕಕಕಕ| ಅಕ್ ಅಕ್ ಅಕ್ ಅಕ್ |(ಕ1 + ಅಕ್1)
_ _ _ _ _ _ _ _
ಕಾಕಾಕಾಕಾ। ಅಕ್ ಅಕ್ ಅಕ್ ಅಕ್। (ಕ2 + ಅಕ್2)
ಮೊದಲನೇ ಉದಾಹರಣೆಯಲ್ಲಿ ಕ ಒಂದು ಮಾತ್ರೆಯಾದರೆ ಅಕ್ ಒಂದು ಮಾತ್ರೆಯೇ. ಎರಡನೆಯದರಲ್ಲಿ ಅಕ್ ‘ಕಾ’ನಷ್ಟು-ಎರಡು ಮಾತ್ರೆ. ಅಂದರೆ
(ದಾರದ) ಉದ್ದ ಅಳೆದಂತೆ ಕಾಲವನ್ನು ಅಳೆಯಲಾಗುವುದಿಲ್ಲ ಎಂಬ, ಈ ಹಿಂದೆ ಉದ್ಧರಿಸಿರುವ ಕ್ಲೆಮೆನ್ಸ್ ಅವರ ಭೌತಶಾಸ್ತ್ರ ಸತ್ಯ ಪೂರ್ಣವಾಗಿ ಛಂದಸ್ಸಿಗೆ ಅನ್ವಯವಾದೀತು ಎನ್ನುವಂತಿಲ್ಲ. ಟ್ರೈನಿನ ಟಕ್ಕಟಕಟಕ ಒಂದು ಬಗೆಯ ಸದ್ದು. ಆ ರೀತಿ ಘಟಕ ಕಲ್ಪನೆಗೆ ಒಗ್ಗದಂಥ ಕ್ರಮಾಗತ ಸದ್ದುಗಳೆ ಒಂದು ಮೊತ್ತವನ್ನು ನಮ್ಮ ಇಷ್ಟ ಬಂದ ಘಟಕಮಾನದಿಂದ ಅಳೆದು, ಲಯ ಆರೋಪಮಾಡಿ, ಒಟ್ಟು ಇಷ್ಟು ಮಾತ್ರೆಗಳನ್ನು ತೆಗೆದುಕೊಂಡಿದೆ ಎಂದು ಹೇಳಬಹುದು. ಹಾಗೆ ಹೇಳಬಹುದಾದುದು ಅಷ್ಟೇ ಅಲ್ಲ, ಅದೇ ಘಟಕವಾನ (ಅದೇ ಗುಣ, ಗತಿ) ವನ್ನು ಎಡೆಬಿಡದೆ ಮುಂದುವರಿಸಿ-ಅಷ್ಟು ಮಾತ್ರೆಗಳನ್ನೇ ಗಡಿಯಾರದೆದುರು ಪುನರಾವರ್ತಗೊಳಿಸಿ ಆ ಮಾತ್ರಾಮೊತ್ತವು ಪಡೆದ (ಗಡಿಯಾರದ) ಕಾಲವನ್ನು ಗುರುತಿಸಿ-ಮೂಲತಃ ಅಳತೆಗೊಳಗಾದ ಸದ್ದುಗಳ ಕಾಲದ ಮತ್ತೆ ಇಷ್ಟೇ ನಿಮಿಷಗಳು ಎಂದು ಬಹುಮುಟ್ಟನ ನಿಖರತೆಯಿಂದ ಹೇಳಬಹುದು. ಅಂದರೆ ಕಾಲವನ್ನು ಅಳೆಯಲು ಗಡಿಯಾರವ ಹಾಗೆಯೇ, ಆದರೆ ತಾತ್ಕಾಲಿಕವಾದ ಅಳತೆಯ ಮಾನ ಇದೆ ಎನ್ನಬಹುದು. ಅದು ತಾತ್ಕಾಲಿಕ ಮಾನದಂಡ ಎಂಬುದು ಮುಖ್ಯ. ಏಕೆಂದರೆ ಸ್ವಲ್ಪ ಅಂತರ ಕೊಟ್ಟು ಮತ್ತೆ ಅದನ್ನೇ ಅಳವಡಿಸಿದರೂ ಹೆಚ್ಚು ಕಡಿಮೆಯಾಗುವ ಸಂಭವ ಹೆಚ್ಚು. ಏಕೆಂದರೆ ವೇಗ ಎಲ್ಲಾ ಸಂದರ್ಭಗಳಲ್ಲಿ ನೂರಕ್ಕೆ ನೂರು ಸಾಲು ನಿಖರವಾಗಿ ಸಮಾನವಾಗಿರುವುದಿಲ್ಲ-ಮಾನವ್ಯ ಪರಿಮಿತಿಯಿಂದ.
ಮೊದಲದರಲ್ಲಿ ಅಕ್ ಒಂದು ಮಾತ್ರೆಯನ್ನೂ ಎರಡನೇಯದರಲ್ಲಿ ಎರಡುಮಾತ್ರೆಯನ್ನೂ ತೆಗೆದುಕೊಳ್ಳುತ್ತದೆ. ಅಕ್ ಎಂಬುದನ್ನು ‘ಕ’ಕ್ಕೆ ಸಮಾನವಾದ ಕಾಲದಲ್ಲೂ ಹೇಳಬಹುದು, ‘ಕಾ’ಕ್ಕೆ ಸಮಾನವಾದ ಕಾಲದಲ್ಲೂ ಹೇಳಬಹುದು. ಕ1 + ಅಕ್2 ಮತ್ತು ಕ2 + ಅಕ್1 ಎಂದು ಇನ್ನೆರಡು ರೀತಿಗಳೂ ಉಂಟಾಗುತ್ತವೆ.1
ಏಕಮಾತ್ರಕ ಅಕ್ ಸಂಗೀತದಲ್ಲಿ ಬರುತ್ತದೆ.2 ದ್ವಿಮಾತ್ರಕ ಅಕ್ ಮಾತ್ರ ಛಂದಸ್ಸಿನಲ್ಲಿ ಬಳಕೆಯಿದೆ. ‘ಅಕ್’ ಹೆಚ್ಚಿನ ಕಾಲವನ್ನು ತೆಗೆದುಕೊಂಡಂತೆಲ್ಲಾ “ಕ್” ಆದಮೇಲಿನ ಮೌನ ಹೆಚ್ಚುತ್ತದೆ. ಕಾಲ ಕಡಿಮೆಯಾದಂತೆ ಮೌನವೂ ಕಡಿಮೆಯಾಗಿ ಅಸ್ಪಷ್ಟವಾಗುತ್ತದೆ. ಮಾನವ್ಯ ಪರಿಮಿತಿಗೆ ಅಧೀನವಾಗಿ ಯಾವೊಂದು ಅಕ್ಷರವನ್ನು ಎಷ್ಟು ಕಾಲದಲ್ಲಿ ಬೇಕಾದರೂ ಹೇಳಬಹುದು. ಎಷ್ಟು ಕಾಲ ಹೇಳಿದರೆ ಅಷ್ಟು ಮಾತ್ರೆಗಳು ಅದಕ್ಕೆ.
ಛಂದಸ್ಸಿನಲ್ಲಿ ಬರುವ ದ್ವಿಮಾತ್ರಕ ‘ಅಕ್’ನ ಉಚ್ಚಾರವನ್ನು ದೃಷ್ಟಿಯಲ್ಲಿಟ್ಟುಕೊಂಡು ಅಕ್ ಎಂಬುದು ಕ ದಂತೆ ಲಘುವಾಗದೆ ಗುರುವಾಗಿದೆ ಎಂದಿರಬಹುದೇ ಹೊರತು ಅಕ್ ಗುರುವಾಗಲೇಬೇಕಿಲ್ಲ.
ಉ. ಅಧಿಕ ಪ್ರಯತ್ನ ಮತ್ತು ಕಾಲ.
ಕ ಎನ್ನುವುದಕ್ಕಿಂತ ಅಕ್ ಎನ್ನಲು ಹೆಚ್ಚಿನ ಪ್ರಯತ್ನಬೇಕು, ನಿಜ. ಆದರೆ ಕಾಲದ ಮೇಲೆ ಪ್ರಭಾವ ಬೀರಬೇಕಾದ್ದಿಲ್ಲ. ಹಾಗೆ ಕಾಲಾವಕಾಶ ಭ್ರಮೆಯ
ᴗᴗᴗᴗ ᴗ ᴗ
1. ಕಕಕಕ | ಅಕ್ ಅಕ್ (ಕ1 + ಅಕ್2)
_ _ _ _ _ _
ಕಾ ಕಾ। ಅಕ್ ಅಕ್ ಅಕ್ ಅಕ್’ (ಕ2 + ಅಕ್1) ಏಕಮಾತ್ರಕ ‘ಕ’ಕ್ಕೆ ದ್ವಿಮಾತ್ರಕ ‘ಅಕ್’ಊ, ದ್ವಿನಾತ್ರಕ ‘ಕಾ’ಕ್ಕೆ ಏಕಮಾತ್ರಕ ‘ಅಕ್’ಊ ಸೇರಿವೆ.
2. ಪಾಟಾಕ್ಷರ ಸಂಯೋಜನೆಯ ಅರಿವು ನನಗಾಗುವಂತೆ ಮಾಡಿದ ನನ್ನ ನಾಟ್ಯಾಚಾರ್ಯರಾದ ಶ್ರೀ ಎಂ. ಕೆ. ವಿಶ್ವನಾಥ್, ದಿವಂ. ಆ| ವಿ. ಎಸ್. ಸುಂದರಮ್ಮ, ದಿವಂ. ಶ್ರೀ ಎಂ. ಸಿ. ವೀರ್ ಅವರನ್ನೂ, ಲಯ ಪರಿಭಾವನೆಯನ್ನು ಖಚಿತಗೊಳಿಸಿದ ಪೂಜ್ಯ ಗುರುಗಳಾದ ಆ| ವಿ. ಸ್ವರಮೂರ್ತಿ ವಿ. ಎನ್. ರಾವ್ ಅವರನ್ನೂ ನಾನಿಲ್ಲಿ ನೆನೆಯಬೇಕು.
ಮೇಲೆ ಹೆಚ್ಚಿನ ಪರಿಣಾಮ ಆಗುವುದಿಲ್ಲ. ‘ಅ’ ಎಂಬುದಕ್ಕಿಂತ ಕ ಎನ್ನಲೂ, ಕ ಎಂಬುದಕ್ಕಿಂತ ಖ ಎನ್ನಲೂ ಕ್ರಮಶಃ ಹೆಚ್ಚುವರಿ ಪ್ರಯತ್ನಬೇಕು. ಆದರೆ ಉಚ್ಚಾರಕ್ಕೆ ಕಾಲ ವಾಸ್ತವವಾಗಿ ಹೆಚ್ಚು ಬೇಕಾಗುತ್ತಾ ಹೋಗುವುದಿಲ್ಲ.
ತರಿ ! ಕಿಟ | ತರಿಕಿಟತರಿಕಿಟ | ತರಿಕಿಟ |
ಇಲ್ಲಿ ನಾಲ್ಕು ಸಮಾನ ಕಾಲ ಘಟಕಗಳಿವೆ. ಹೆಚ್ಚಿನ ಪ್ರಯತ್ನಗಳು ಒಂದೇ ಘಟಕದಲ್ಲಿ, ಸಮಾನ ಕಾಲಾವಕಾಶದಲ್ಲಿ ಉಂಟಾಗಿವೆ. ಮೂರನೇ ಘಟಕದಲ್ಲಿ ಸದ್ದುಗಳೆಲ್ಲವೂ ಸಮಾನಕಾಲಭಾಗವನ್ನೇ ಪಡೆದಿವೆ ಎನ್ನಿಸುವುದು ಭ್ರಮೆಯೆನಿಸೀತು. ಈ ಮಾತು ಎಲ್ಲಕ್ಕೂ ಅನ್ವಯಿಸುತ್ತದೆ. ಒಟ್ಟಿನಲ್ಲಿ ಮೂರನೇ ಅಥವಾ ನಾಲ್ಕನೇ ಕಾಲಘಟಕ ಮೊದಲೆರಡಕ್ಕಿಂತ ಹೆಚ್ಚಿನ ಕಾಲಮೊತ್ತವನ್ನು ತೆಗೆದುಕೊಂಡಂತೆ ಭ್ರಮೆಯಾಗುವುದಿಲ್ಲ. ವಾಸ್ತವವಾಗಿ ಈ ಮೂರನೇ ಅಥವಾ ಇಲ್ಲಿನ ಯಾವುದೇ ಒಂದು ಕಾಲಾವಕಾಶದಲ್ಲಿ ಸಾವಿರ ಸದ್ದುಗಳನ್ನೂ ಉಪಕರಣದ ಸಹಾಯದಿಂದ ಅಡಗಿಸುವುದು ಸಾಧ್ಯ. ಆದರೂ ಕಾಲ ಒಟ್ಟಿನಲ್ಲಿ ಒಂದೇ. ಹೀಗೆ ಹೆಚ್ಚಿನ ಸದ್ದುಗಳು, ಹೆಚ್ಚಿನ ಪ್ರಯತ್ನಗಳು ಕಾಲಾವಕಾಶ ಭ್ರಮೆಗೆ ಕಾರಣವಾಗುವುದಿಲ್ಲ.
ಹೆಚ್ಚಿನ ಪ್ರಯತ್ನದಿಂದ ಒಂದು ಸದ್ದನ್ನು ಇನ್ನಷ್ಟು ಬಲಗೊಳಿಸಬಹುದು. ಮೇಲಿನಂತೆ ಎಂಟೇ ಸದ್ದುಗಳಿದ್ದು, ಅವುಗಳನ್ನು ನಾಲ್ಕು ನಾಲ್ಕರಂತೆ ಸಮಾನಾಂಶ ಕಲ್ಪನೆ ಮಾಡಿ ಒಂದು ಮತ್ತು ಐದನೇ ಸದ್ದುಗಳನ್ನು ಹೆಚ್ಚಿನ ಪ್ರಯತ್ನದಿಂದ ಬಲಗೊಳಿಸಬಹುದು, ಅಥವಾ ಆ ಎಂಟೇ ಸದ್ದುಗಳಲ್ಲಿ ಒಂದು ಮತ್ತು ನಾಲ್ಕನೇ ಸದ್ದುಗಳನ್ನು ಬಲಗೊಳಿಸಿ ಮೂರು ಐದರ ಪರಿವೃತ್ತಿಯನ್ನು ಕಲ್ಪಿಸಬಹುದು. ಈ ಸಂದರ್ಭಗಳಲ್ಲೂ ಹೆಚ್ಚಿನ ಕಾಲ ತೆಗೆದುಕೊಂಡೀತೆಂಬ ಕಾಲಾವಕಾಶ ಭ್ರಮೆ ಉಂಟಾಗುವುದಿಲ್ಲ.
ಇಲ್ಲಿ ಗುರುತಿಸಬಹುದಾದುದು-ಸ್ಪಂದನಗಳ, ಸದ್ದಿನ ಸಂಖ್ಯೆಯಾಗಲೀ, ಗಾತ್ರ (ವಾಲ್ಯೂಮ್) ಆಗಲೀ-ಕಾಲಾವಕಾಶವನ್ನು ಬಾಧಿಸುವುದಿಲ್ಲ. ನಿರೀಕ್ಷಿತ ವೇಗವೂ, ಅನ್ವಿತವೇಗವೂ ಒಂದಾಗದಾಗ ಮಾತ್ರ ಕಾಲಾವಕಾಶ ವ್ಯತ್ಯಸ್ತವಾದಂತೆ ಅನ್ನಿಸುತ್ತದೆ.1 ಆಕ್ ಎಂಬುದನ್ನು ‘ಅ’ ಎನ್ನುವುದಕ್ಕೆ
1. ಸಂಗೀತದ ‘ಗ್ರಹಲಕ್ಷಣ’ ಗಮನಿಸಿ,
ಸಮಾನವಾದ ಕಾಲದಲ್ಲಿ ಉಚ್ಚರಿಸುತ್ತೀರೋ, ‘ಆ’ ಎಂಬುದಕ್ಕೆ ಸಮಾನವಾದ ಕಾಲದಲ್ಲಿ ಹೇಳುತ್ತೀರೋ ಅದಕ್ಕೆ ತಕ್ಕಂತೆ ಉಚ್ಚಾರದ ಕಾಲ ಅಳೆಯಲ್ಪಡುತ್ತವೆ. ‘ಆ’ ಕಾಲದಲ್ಲಿ ಹೇಳಿ ‘ಆ’ ಕಾಲದಲ್ಲಿ ಬರಲಿಲ್ಲ ಎಂದುಕೊಂಡರೆ ಶುದ್ಧ ಭ್ರಮೆ ಆಗುತ್ತದೆ.1
೫. ಕೊನೆಯದಾಗಿ ನನ್ನ ವಿನಂತಿ : ನಮನಮಗೆ ತೋಚಿದಷ್ಟು ನಿರ್ವಿಕಾರವಾಗಿ ಹೇಳೋಣ. ಸತ್ಯಕ್ಕೆ ನಾವೇ ವಾರಸುದಾರರು ಎಂಬ ಭ್ರಾಂತಿ ಯಾರಿಗೂ ಬೇಡ. ನನಗೆ ಈಗಲೂ ಅನ್ನಿಸುತ್ತದೆ : ಇನ್ನಷ್ಟು ಶಾಸ್ತ್ರೀಯವಾದ ಕೆಲಸ, ಶಾಸ್ತ್ರೀಯವಾದ ಇನ್ನಷ್ಟು ಕೆಲಸ ನಡೆಯಬೇಕಾಗಿದೆ.
1. ಪುನರಸಿ ಆ ಅ ಅಥವಾ ಆ ತೆಗೆದುಕೊಳ್ಳುವ ಕಾಲವೂ ಗತಿಯಿಂದಲೇ ನಿರ್ಧರಿಸಬೇಕಾಗುತ್ತದೆ.
ಚಿತ್ತಾಲರ ಕಾವ್ಯದಲ್ಲಿ ಚಿಂತನಶೀಲತೆ
ಚಿತ್ತಾಲರ ಕಾವ್ಯದಲ್ಲಿ ಚಿಂತನಶೀಲತೆ
ಶಾಂತಿನಾಥ ದೇಸಾಯಿ
ಕಾಲದ ಕರೆ (೧೯೪೮) ಮನುಕುಲದ ಹಾಡು (೧೯೬೧) ಹರಿವ ನೀರಿದು1 (೧೯೭೦) ಹೀಗೆ ಸುಮಾರು ಕಾಲು ಶತಮಾನ ಕಾಲ ಅಖಂಡವಾಗಿ ಹರಿದ ಗಂಗಾಧರ ಚಿತ್ತಾಲರ ಕಾವ್ಯ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಅತ್ಯಂತ ಗಮನೀಯವಾದ ಒಂದು ಘಟನೆಯಾಗಿದೆ. ಇದೇ ಅವಧಿಯಲ್ಲಿ ಅತ್ಯಂತ ರಭಸದಿಂದ ಹರಿದ ನವ್ಯಕಾವ್ಯದೊಡನೆ ಸೇರಿಯೂ ಸೇರದಂತೆ ಜೊತೆ ಜೊತೆಯಾಗಿ ಹರಿದ ಅವರ ಕಾವ್ಯ ತನ್ನದೇ ಆದ ವೈಶಿಷ್ಟ್ಯಪೂರ್ಣತೆಯನ್ನು ಕಾಪಾಡಿಕೊಂಡು ಬಂದು ಈಗ ಒಂದು ಮಹತ್ವದ ಸಿದ್ದಿಯನ್ನು ಪಡೆದಿದೆಯೆಂದು ಹೇಳಬಹುದು. ಹೀಗಿದ್ದಾಗ, ಅವರ ಕಾವ್ಯದ ವೈಶಿಷ್ಟ್ಯವನ್ನೂ ಮೌಲಿಕತೆಯನ್ನೂ ಪರೀಕ್ಷಿಸುವ ಯತ್ನ ಈಗ ಆಗಬೇಕಾದದ್ದು ಅವಶ್ಯ. ಈ ಯತ್ನದ ಅಂಗವಾಗಿ, ಈ ಲೇಖನದಲ್ಲಿ ಚಿತ್ತಾಲರ ಕಾವ್ಯದಲ್ಲಿ ಪ್ರಾಮುಖ್ಯವಾಗಿ ಎದ್ದು ಕಾಣುವ ಚಿಂತನಶೀಲತೆಯ ಬಗ್ಗೆ ಒಂದು ವಿವೇಚನೆ ಮಾಡಲಾಗಿದೆ.
೧
ಕಾಲದ ಕರೆಯಿಂದ ಹರಿವ ನೀರಿನ ವರೆಗಿನ ಚಿತ್ತಾಲರ ಕಾವ್ಯದ ಒಂದು ವೈಶಿಷ್ಟ್ಯ ಅದರ ಏಕಮುಖಗಾಮಿತ್ವದಲ್ಲಿದೆಯೆಂದು ಹೇಳಬಹುದು. ವಸ್ತು, ದೃಷ್ಟಿ, ಶೈಲಿ ಎಲ್ಲದರಲ್ಲಿಯೂ ದೃಢವಾದ, ನಿರ್ಧರವಾದ, ಒಂದೇ ನಿಟ್ಟಿನ ಬೆಳವಣಿಗೆ ಕನ್ನಡದ
ಹರಿವ ನೀರಿದು-ಪೊಪ್ಯುಲರ್ ಪ್ರಕಾಶನ, ಮುಂಬಯಿ-೩೪, ೧೯೭೦.
ಬೇರಾವ ಕವಿಯಲ್ಲಿ ದೊರೆಯಲಾರದು. ಚಿತ್ತಾಲರ ಕಾವ್ಯದಲ್ಲಿ ಹರಿದಾಡುವ ಪ್ರಯೋಗಶೀಲತೆಯಿಲ್ಲ, ಅಸ್ವಸ್ಥ ಭಾವನೆಗಳ ಪರಚಾಟವಿಲ್ಲ, ದೈನಂದಿನ ಅನುಭವಗಳ ಚಂಚಲ ಚಲ್ಲಾಟವಿಲ್ಲ. (ಇದರಿಂದ ಅವರ ಕಾವ್ಯದಲ್ಲಿ ವೈವಿಧ್ಯತೆ ಕಡಿಮೆ, ಉರ್ವರತೆ ಕಡಿಮೆ, ವಿಸ್ತಾರ ಕಡಿಮೆ, ಸಂಕೀರ್ಣತೆ ಕಡಿಮೆ ಎಂದೆನಿಸುವುದು ಸಹಜ.) ಇದಕ್ಕೆ ಮುಖ್ಯ ಕಾರಣ ಚಿತ್ತಾಲರ ಕಾವ್ಯಪ್ರಕೃತಿ ಮೂಲತಃ ಚಿಂತನಶೀಲವಾಗಿದೆ. ಅನುಭವವನ್ನು ಇದ್ದಕ್ಕಿದ್ದಂತೆ ಹರಿಯಬಿಡದೆ, ಅದನ್ನು ಬುದ್ದಿಯ ಹಿಡಿತದಲ್ಲಿಟ್ಟು, ಅದರ ಬಗ್ಗೆ ಚಿಂತಿಸಿ, ಆ ಚಿಂತನೆಯನ್ನು ಹೃದ್ಗತಮಾಡಿ ಅದನ್ನೇ ಕಾವ್ಯವನ್ನಾಗಿಸುವ ವಿಧಾನ ಚಿತ್ತಾಲರದು. ತನ್ಮೂಲಕ ಅನುಭವದ ಪ್ರತ್ಯಕ್ಷ ಸ್ವರೂಪಕ್ಕಿಂತ ಹೆಚ್ಚಾಗಿ ಅದಕ್ಕೆ ಸಂಬಂಧಿಸಿದ ಚಿಂತನೆಯೇ ಅವರ ಕಾವ್ಯದಲ್ಲಿ ಕಾಣಸಿಗುವದು. ಉದಾ : ಕಾಲದ ಕರೆಯ ‘ದಿಗ್ಭ್ರಾಂತ’ ‘ಹೊಸಹುಟ್ಟು’ ಗಳಲ್ಲಿ ವಿಧಿಯ ದುರ್ವಿಲಾಸದ ಬಗ್ಗೆ ಚಿಂತನೆಯಿದೆ :
ಕರೆದ ದಾರಿ ಬೇರೆ, ಮತ್ತೆ
ತೆರೆದ ದಾರಿ ಬೇರೆಯೆ !
ಹಾತೊರೆದು ನಡೆವರನ್ನು
ಹಾದಿಗೆಡಿಸುತ್ತಾರೆಯೇ ?
ತೆರವೋ ತೆರವು ಈ ಜಗದ ಹರಹು, ತಾಯಂತೆ ಕಂಡ ನೆಲವೇ
ಜೀವಸಂಪದವ ಕಸಿದುಕೊಂಡು ವಿಧಿಯಂತೆ ನಿಂತ ತಲವೇ !
ಇಲ್ಲಿ ವೈಯಕ್ತಿಕ ಅನುಭವದ ಒತ್ತಡವಿದ್ದರೂ ಆ ಅನುಭವ ಯಾವುದೆಂಬುದು ಗೊತ್ತಾಗುವುದಿಲ್ಲ. ವೈಯಕ್ತಿಕ ಅನುಭವದಿಂದ ಸಾರ್ವತ್ರಿಕವಾದ ಜೀವನದ ಸ್ವರೂಪದತ್ತ ಕವಿ ಸಹಜವಾಗಿ ಜೀಕಿಬಿಡುತ್ತಾನೆ. ಚಿತ್ತಾಲರ ಚಿಂತನೆಯ ಮುಖ್ಯ ಗುರಿಯೆಂದರೆ ಜೀವನದ ಅನುಭವದ ಸಾರ್ವತ್ರಿಕ ಸ್ವರೂಪ ಕಂಡುಹಿಡಿಯುವದು ; ತಾವು ಮನುಕುಲದ ಪ್ರತಿನಿಧಿಯೆಂಬ ದೃಷ್ಟಿಯಿಂದ ಜೀವನವನ್ನು ಸ್ವಲ್ಪ ಎತ್ತರದ ಮೇಲಿಂದ ನೋಡಿ ಅದರ ಇತಿಮಿತಿಗಳನ್ನು ನಿರ್ಣಯಿಸುವದು. ಚಿತ್ತಾಲರ ಈ ನಿಲುವು, ಈ ದೃಷ್ಟಿ ಕಾಲದ ಕರೆಯಲ್ಲಿಯೇ ನಿಶ್ಚಿತವಾಗಿ, ಮುಂದೆ ಅದೇ ನಿಲುವು-ದೃಷ್ಟಿಗಳಿಂದ ಜೀವನವನ್ನು ನೋಡಿ, ಅನುಭವಿಸಿ, ಅದರ ಆಳ-ಎತ್ತರಗಳನ್ನು ಅಳೆದಿದ್ದಾರೆ. ಚಿತ್ತಾಲರ ಕಾವ್ಯದ ಬೆಳವಣಿಗೆ ಪ್ರಾಮುಖ್ಯವಾಗಿ ಲಂಬಮುಖಿಯಾಗಿದ್ದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಚಿತ್ತಾಲರ ವೈಯಕ್ತಿಕ ಜೀವನದ ವಿಸ್ತಾರ ಬಹಳ ದೊಡ್ಡದಿದೆ ; ಹನೇಹಳ್ಳಿ, ಧಾರವಾಡ, ಸಾಂಗಲಿ, ಮುಂಬಯಿ, ಅಮೇರಿಕ, ದಿಲ್ಲಿ ಇಂಗ್ಲಂಡ ; ಅದರಂತೇ ಅನುಭವದ ಸಮೃದ್ಧಿಯೂ ಬಹಳವಿದೆ. ಆದರೆ ಅದರ ವಿವರ ಅವರ ಕಾವ್ಯದಲ್ಲಿ ಅಷ್ಟೊಂದು ನೋಡಸಿಗುವದಿಲ್ಲ. ಇದಕ್ಕೆ ಮುಖ್ಯ ಕಾರಣ ಜೀವನದ ಮೂಲಭೂತ ಸ್ವರೂಪದಲ್ಲಿಯೇ ಅವರ ಆಸ್ಥೆ ಕೇಂದ್ರೀಭೂತವಾಗಿದೆ; ಅವರ ಚಿಂತನೆಯಲ್ಲಿ ವಿವರಗಳಿಗೆ ಮಹತ್ವವಿಲ್ಲ, ಅನುಭವದ ಸಾರ್ವತ್ರಿಕ ರೂಪುರೇಷೆಗಳಿಗಷ್ಟೇ ಮಹತ್ವ. ಕಾಲದ ಕರೆ, ಮನುಕುಲದ ಹಾಡು (ಈ ಸಂಗ್ರಹದಲ್ಲಿ ಈ ಹೆಸರಿನ ಕವಿತೆಯೇ ಇಲ್ಲ), ಹರಿವ ನೀರಿದು (ಇದಕ್ಕೆ ಮೊದಲು ‘ಜೀವನ? ಎಂಬ ಶೀರ್ಷಿಕೆಯಿತ್ತು-ಈ ಶೀರ್ಷಿಕೆಗಳೇ ಸಾಕು ಅವರ ಕೇಂದ್ರ ಒಲವನ್ನು ಬೆರಳಿಟ್ಟು ತೋರಿಸಲು. ಅವರ ವ್ಯಕ್ತ್ಯಾತೀತವಾದ ಸಾರ್ವತ್ರೀಕರಣದ ಪ್ರವೃತ್ತಿಯ ಮೂಲಕ ಅವರ ತೀರ ಆತ್ಮೀಯ ಅನುಭವಗಳೂ ಮಾನವಕುಲದ ಅನುಭವಗಳಾಗಿ ಮಾರ್ಪಡುತ್ತವೆ. ಉದಾ : ‘ಖುಶಿ’ಯಲ್ಲಿಯ ಇವರ ತೀರ ಆತ್ಮೀಯವಾದ ವೈಯಕ್ತಿಕ ಆನಂದ ‘ಬದುಕ ಮೂಲಕಿಹ ಸುಖ’ವಾಗುವದು. ತಂದೆಯವರ ಆತ್ಮಹತ್ಯೆಯಿಂದಾದ ದುಃಖ ಜೀವನವೆಂದರೇನು ಎಂಬ ತಾತ್ವಿಕ ಪ್ರಶ್ನೆಗೆ ಎಡೆಗೊಡುವುದು. ಮಗ ಉದಯನ ಚಕ್ಕಂದ ಮನುವಂಶದ ಕಥೆಯನ್ನೇ ಹಾಡಹಚ್ಚುವದು. ಫೈಲು ಈ ಯಂತ್ರಯುಗದ ಸಂಕೇತವಾಗಿ ನಿಲ್ಲುತ್ತದೆ. ಅದರಂತೆಯೇ ಗಾಂಧಿಯ ಕೊಲೆ ‘ನರನು ಕೆರಳುವ ಹುಂಬ, ಬಾಳು ಯೂಪಸ್ತಂಭ, | ಉತ್ತಮರ ಬಲಿ ಇಲ್ಲಿ…. ಇಂಥ ಬಲಿ ಇನ್ನೇಸೋ ?” ಎಂಬ ಬಾನ್ಮಾತನ್ನು ಸ್ಫುರಿಸುವದು. ನೂಯಾರ್ಕದಲ್ಲಿ ಕವಿಗೆ ಕಾಣಿಸುವದು ಅಲ್ಲಿಯ ಜೀವನದ ಸಂಕೀರ್ಣತೆಯಲ್ಲ, ಮಾನವನ ಬಯಕೆಯ-ಅವನನ್ನೇ ಲಘುವಾಗಿಸುವ-ಮೇರು ಕೃತಿ, ‘ಕಾರ್ತವೀರ್ಯ ಕೃತಿ’, ವಾಶಿಂಗ್ಟನ್ನಿನ ಬಗ್ಗೆ ಬರೆದ ಕವಿತೆ ಸೂರ್ಯಗೀತವಾಗಿದೆ, ಮಾನವಕುಲಕ್ಕೆ ಹೊಸ ಜೀವ ನೀಡುವ ‘ನಮ್ಮ ಆರ್ಯ’ನ ಸ್ತುತಿಯಾಗಿದೆ.
೨
ಚಿಂತನಶೀಲ ಕಾವ್ಯದಲ್ಲಿ ಎರಡು ಪ್ರಕಾರಗಳಿವೆಯೆಂದು ಸ್ಥೂಲವಾಗಿ ಹೇಳಬಹುದು. ಒಂದು, ಬುದ್ದಿಯ ಪಾತಳಿಯ ಮೇಲಿನ ಚಿಂತನೆಯನ್ನೂ ಹೃದ್ಗತ ಮಾಡಿ ಅದಕ್ಕೆ ಕಾವ್ಯರೂಪ ಕೊಡುವುದರಿಂದ ಉತ್ಪನ್ನವಾಗುವ ಕಾವ್ಯ ; ಎರಡು, ಕಾವ್ಯವನ್ನೇ ಚಿಂತನೆಯ ಸಾಧನವನ್ನಾಗಿ, ಚಿಂತನೆಯ ರೀತಿಯನ್ನಾಗಿ ಮಾಡಿ ಬರೆದ ಕಾವ್ಯ. ಚಿತ್ತಾಲರ ಕಾವ್ಯ ಮೊದಲ ರೀತಿಯ ಕಾವ್ಯದ ಪ್ರತಿನಿಧಿಯಾದರೆ, ಅಡಿಗರ ‘ಭೂಮಿ ಗೀತ’, ‘ಭೂತ’ದಂಥ ಕವಿತೆಗಳು ಎರಡನೆಯ ಪ್ರಕಾರದ ಕಾವ್ಯದ ಪ್ರತಿನಿಧಿಯೆನ್ನಬಹುದು. ಮೊದಲನೆಯ ಬಗೆಯ ಕಾವ್ಯದಲ್ಲಿಯ ಹೇಳಿಕೆಗಳನ್ನು, ವಿಚಾರಗಳನ್ನು, ತರ್ಕಗಳನ್ನು ಸಹಜವಾಗಿ, ಸ್ಪಷ್ಟವಾಗಿ ಎತ್ತಿ ತೋರಿಸಬಹುದಾದರೆ, ಎರಡನೆಯ ಬಗೆಯ ಕಾವ್ಯದಲ್ಲಿಯ ವಿಚಾರವನ್ನು ಕಾವ್ಯದಿಂದ ಬೇರ್ಪಡಿಸಲಾಗುವುದಿಲ್ಲ. ಮೊದಲನೆಯ ರೀತಿಯ ಕಾವ್ಯ ವಿಚಾರನಿಷ್ಠವಾಗಿದ್ದು ಸಯುಕ್ತಿಕವಾಗಿದ್ದರೆ, ಎರಡನೆಯ ರೀತಿಯ ಕಾವ್ಯ ಪ್ರತಿಮಾನಿಷ್ಠವಾಗಿದ್ದು (ವಿಚಾರ-ಭಾವನೆ-ಕಲ್ಪನೆಗಳ ಸಂಗಮದಿಂದ ಹುಟ್ಟಿದ್ದೇ ಪ್ರತಿಮೆ) ಪ್ರತಿಭೆಯ ಅನಪೇಕ್ಷಿತ ಜಿಗಿತಗಳ ಮೂಲಕ ತೊಡಕು ತೊಡಕಾಗಿರಬಹುದು. ಮೊದಲನೆಯ ರೀತಿಯ ಕಾವ್ಯದ ಸುಸ್ಪಷ್ಟತೆ ಎರಡನೆಯ ರೀತಿಯ ಕಾವ್ಯಕ್ಕಿರುವದಿಲ್ಲ; ಎರಡನೆಯ ರೀತಿಯ ಸಂಕೀರ್ಣತೆ ಮೊದಲನೆಯ ರೀತಿಯ ಕಾವ್ಯಕ್ಕಿರುವದಿಲ್ಲ. ಚಿತ್ತಾಲರು ಮಲತಃ ಬುದ್ಧಿವಾದಿಗಳಾದ್ದರಿಂದ ಅವರ ಕಾವ್ಯ ಸಹಜವಾಗಿಯೇ ಮೊದಲ ರೀತಿಯ ಕಾವ್ಯವಾಗಿ ರೂಪುಗೊಂಡಿದೆ. ಚಿಂತನೆ ಹೃದ್ಗತವಾಗಿ ಅನುಭವದಲ್ಲಿ ತೋಯ್ದು ಕಾವ್ಯವಾಗಿ ಹೊರಬೀಳುವ ಅದ್ಭುತವನ್ನೂ ಸೊಬಗನ್ನೂ ನಾವು ಚಿತ್ತಾಲರ ಪ್ರೌಢ ಕಾವ್ಯದಲ್ಲಿ ನೋಡಬಹುದಾಗಿದೆ. ಉದಾಹರಣೆಗಾಗಿ, ಕಾಲದ ಕರೆ, ಮನುಕುಲದ ಹಾಡು ಮತ್ತು ಹರಿವ ನೀರಿದು ಈ ಮೂರೂ ಸಂಕಲನಗಳಲ್ಲಿ ಬರುವ ಜೀವನ-ಮರಣಗಳ ವಿಷಯದ ಚಿಂತನೆ ತೆಗೆದುಕೊಳ್ಳೋಣ. ಕಾಲದ ಕರೆಯಲ್ಲಿ “ಈ ಮಣ್ಣು ಬಾಳು’ ಕವಿತೆಯಲ್ಲಿ ಈ ಚಿಂತನೆ ಮೂಡಿದ ರೀತಿಯಿದು :
ಈ ಮಣ್ಣ ಬಾಳು ಮಸಣಕ್ಕೆ ಕೂಳು
ಎದೆಯೊಡೆವ ಅಳುವು ಕೊನೆಗೆ
ಬದುಕಿನಾ ಸುತ್ತು ಸಾವಿನಾ ಕುತ್ತು
ಈ ಬಾಳು ಲೀಲೆ ನಿನಗೆ?
* * *
ಇದು ದಿವ್ಯಲೋಕ, ಇದು ಭವ್ಯಲೋಕ
ಇರಬಹುದು, ಆದರೇನು ?
ಇಗೊ ನೆಲದ ತಾಯಿ ತೆರೆದಿಹಳು ಬಾಯಿ
ಪಯಣಿಗರೂ ಇಲ್ಲಿ ನಾವು !
ಕಣ್ ತೆರೆದವೇಕೊ, ಮಣ್ ಕರೆವುದೇಕೊ-
ಇದು ಒಡೆಯದಂಥ ಗೂಢ !
ಕಾದಿಹುದು ಗೋರಿ, ಬೇರಿಲ್ಲ ದಾರಿ-
ಎದೆ ನಡುಕವೇಕೋ ಮೂಢ ?
ಇದೇ ವಿಚಾರವೇ ಮುಂದೆ ಮನುಕುಲದ ಹಾಡಿನ ‘ದುಃಖಗೀತ’ದಲ್ಲಿ ವ್ಯಕ್ತಗೊಂಡ ರೀತಿಯನ್ನು ನೋಡಬೇಕು ;
ನಾ ಹುಟ್ಟಿ ಬರುವಾಗಲೇ ಪಿಂಡದಲಿ ಬಂತು
ಏನೋ ದುರ್ದೈವದೆಳೆ.
(ಶುಭ್ರ ಲೋಲಕದಲ್ಲಿ ಬಿರುಕಿನತಿ ಸೂಕ್ಷ ಗೆರೆ.)
ಅದುವೆ ಬೆಳೆಯುತ ಬಂತು ಬಾಳಿನುದ್ದಕು
ರಕ್ತಮಾಂಸಗತವಾಗಿ.
ಕುನಿಸಿಟ್ಟು ಕಾಯುವ ತೆರದಿ
ಆಗಾಗ್ಗೆ ಹೆಡೆನೆರಳ ಚೆಲ್ಲಿ ಕತ್ತಲೆಗವಿಸಿ
ಕಂಡು ಕಾಣಿಸದಂತೆ ಮೈಮರೆಸಿ ಎದೆಗೆಡಿಸಿ,
ಈಗಂತೂ ದೇಹವನೆ ಸೀಳಿ ಬಂದಿದೆ ಕಣಾ
ಬುಸುಗುಡುತ ನಿಷನೀಲವಾಗಿ ತೂಗಿಸಿ ಫಣಾ
ಕ್ರುದ್ಧ ನಿರ್ದಯ ದಂಷ್ಟ್ರದಲ್ಲಿ ಜೀವನ ಹಿಡಿದು
ಎಲ್ಲೊ ಒಡಲಲ್ಲಿಂದ ಸೇಡ ಸಾಧಿಸಲೆಂದು.
ಈ ಎಲ್ಲ ಹಿಂಸೆಯಲು ಜೀವ ಕೇಳುವದೊಂದೆ
ತಿರು ತಿರುಗಿ ಜೀವ ಕೇಳುವದೊಂದೆ…………
ಜನನ-ಮರಣದ ಮಧ್ಯೆ ಹರಿವ ಬಾಳಿನ ಪಾತ್ರ
ಎಲ್ಲಿ ಇದರುಗಮ, ಎಲ್ಲಿದರ ನಿರ್ಗಮ-ಸತ್ರ ?
……….
ಏಕೆ ಇದು, ಏನು ಇದು, ಎಂತು ಇದು ಎನಬೇಡ.
ಚೀರಿದರು ಬ್ರಹ್ಮಾಂಡ ಬಿರಿವಂತೆ,
ಬಾನ ತಳ ಚಿಪ್ಲೊಡೆದು ಸಿಡಿವಂತೆ ಕೂಗಿದರು ಒರಲಿದರು,
ದಿಕ್ಕು ದಿಕ್ಕುಗಳ ಕದ ಕದ ಬಡೆದು ನರಳಿದರು
ಅಹ ! ನಿರುತ್ತರ ನಿರುತ್ತರ ನಿರುತ್ತರ ಸೃಷ್ಟಿ.
ಅದೇ ವಿಚಾರ ; ಆದರೆ ಇಲ್ಲಿ ಅನುಭವ ವೈಯಕ್ತಿಕ ದುಃಖದಲ್ಲಿ ಗಹನತೆ ಪಡೆದಿದೆ, ಸಾಂದ್ರತೆ ಪಡೆದಿದೆ, ಭಾವನೆಯ ಕಾವು ಪಡೆದಿದೆ. ‘ಈ ಮಣ್ಣ ಬಾಳಿ’ನಲ್ಲಿ ಜೀವನದ ಸತ್ಯ ಬೌದ್ಧಿಕದ ಅರಿವಿನ ಆನಂದದ ಮಾತಾಗಿದೆ. ಅದೇ ಸತ್ಯ ‘ದುಃಖಗೀತ’ದಲ್ಲಿ ಹೃದ್ಗತವಾಗಿ ಉತ್ಕಟ ಕಾವ್ಯವಾಗಿದೆ.
ಇವೇ ವಿಚಾರ ಇನ್ನಷ್ಟು ಹತವಾಗಿ, ಗಹನವಾಗಿ, ತಾತ್ವಿಕವಾಗಿ, ಜೀವನದ ಒಂದು ದರ್ಶನವಾಗಿ ‘ಹರಿವ ನೀರಿ’ನಲ್ಲಿ ರೂಪುಗೊಂಡಿದೆ. ಜೀವನವನ್ನು ವ್ಯಕ್ತಿಜೀವನವೆಂದೂ, ವಂಶಜೀವನವೆಂದೂ, ಮಾನವಕುಲದ ಜೀವನವೆಂದೂ ನೋಡಿ ಅದಕ್ಕೆ ಕಾಲ ಕೊಟ್ಟ ಮಿತಿಯ ಬಗ್ಗೆ, ಅದರ ಅಂತಿಮ ಗಡ್ಡದ ಬಗ್ಗೆ ಚಿಂತಿಸಿ ಕೊನೆಗೆ ಕವಿ ಒಂದು ಸ್ವೀಕಾರಭಾವದ ನಿಲುವು ತಳೆಯುತ್ತಾನೆ.
ತಡೆಯದೋ ಖುತುಮಾನ
ತಡೆಯದೋ ಪ್ರಾಣಗತಿ
ತಡೆಯದವ್ಯಾಹತವು ಸರಿವ ಕಾಲ.
ಏರಿ ತೀರಿದ ಮೇಲೆ ಬಹುದು ಬರಿ ಇಳಿಜಾರೆ
ಕವಿದು ಬಹ ನೆರಳುಗಳೆ
ಸುತ್ತಲಿಲ್ಲ.
* * *
ಹಿಡಿಯಲಾರದುದ ಹಿಡಿದಿಡುವ ಹಂಬಲವೇಕೆ ?
ತುಂಬಲಾರವೆ ಅದನು ?
ತುಂಬು ತುಂಬು
ಜೀವಂತವಿರುವನಕ ಜೀವನದೊಂದೆ ಗತಿ
ಕೊನೆಯೋರು, ತೊನೆದಾಡು, ಮಾಗು, ರಸದುಂಬು.
ಕಾಲದ ಕರೆಯ ದೃಷ್ಟಿಯೇ ಇಲ್ಲಿಯೂ ಇದೆ, ನಿಜ. ಆದರೆ ಇಲ್ಲಿ ಅದು ಜೀವನಾನುಭವದ ಭಾರದಿಂದ ಮಾಗಿದೆ, ಪ್ರೌಢ ಚಿಂತನಶೀಲತೆಯಿಂದ ಸಮತೂಕವನ್ನು ಪಡೆದಿದೆ.
೩
ಕಾಲದ ಕರೆಯಲ್ಲಿ ಕವಿ ‘ಕಾದಿಹುದು ಗೋರಿ ಬೇರಿಲ್ಲ ದಾರಿ’ ಎಂದು ಜೀವನದ ಮಿತಿಯನ್ನು ತೀರ್ಮಾನಿಸಿದರೂ ‘ಎದೆ ನಡುಕವೇಕೋ ಮೂಢ ?’ ಎಂದು ತಾರುಣ್ಯ ಸಹಜವಾದ ಹುಮ್ಮಸಿನಿಂದ ಆಹ್ವಾನವೀಯುತ್ತಾನೆ. ವಿಧಿ ಒಮ್ಮೊಮ್ಮೆ ಹಾದಿಗೆಡಿಸಿದರೂ, ‘ಏಕೊ ಏನೊ ಹೊಸ ಹುಟ್ಟಿನಂತೆ ಮುಂಜಾವು ಬೆಳೆದು’ ಬರಬಹುದು ಎಂದು ಆಶಾವಾದಿಯಾಗಿದ್ದಾನೆ. ಮನುಷ್ಯ ದೇವಾಂಶ ಸಂಭೂತ, ಮಹಾಸತ್ವಗಳ ದಿವ್ಯ ಭವ್ಯ ಜೀವನದ ಕನಸು ಕಾಣುವವ. ಆತ ಮನಸ್ಸು ಮಾಡಿದರೆ ಜೀವನವನ್ನು ಚೈತನ್ಯಲೀಲೆಯನ್ನಾಗಿ ಮಾಡಬಹುದು ಎಂದು ಕವಿ ಸೂಚಿಸುತ್ತಾನೆ. ಇದೇ ಜೀವನಪ್ರಜ್ಞೆಯ ಟಿಸಿಲಾಗಿ ಬೆಳೆದ ಸಾಮಾಜಿಕ ಪ್ರಜ್ಞೆ ಕಾಲದ ಕರೆಯಲ್ಲಿ ತೀಕ್ಷ್ಣವಾಗಿ ವ್ಯಕ್ತಗೊಂಡಿದೆ. ‘ಸ್ವಾತಂತ್ರ್ಯ’, ‘ಸುಲಿಗೆಗಾರ’, ‘ನೆಲದ ಮಗ’, ‘ಯುದ್ಧ’, ‘ಭಯದ ಗೀತ’, ‘ಶಾಂತಿಗೀತ’ -ಇವುಗಳಲ್ಲಿ ದೇಶದ, ಪ್ರಪಂಚದ ರಾಜಕೀಯ ಹಾಗೂ ಸಾಮಾಜಿಕ ಪರಿಸ್ಥಿತಿಯ ಬಗ್ಗೆ ಸ್ಥೂಲವಾದ ಚಿಂತನೆಯಿದೆ.
ತಾಯಾಗಿ ಬರಲಿರುವ ಸ್ವಾತಂತ್ರ್ಯವಿದು ಬಂತೆ
ಹಣದ ಮಕ್ಕಳ ಮನೆಯ ಸೂಳೆಯಾಗಿ ?
ಒಳಗೊಳಗೆ ಕುದಿದೆದ್ದ ಜೀವ ಕನಲುವದು ‘ಈ ಮೋಸ ಮಾಟವ ಸುಡುವೆ ಹೋಳಿಯಾಗಿ?
(‘ಸ್ವಾತಂತ್ರ್ಯ’)
* * *
ಶತಶತಮಾನಂಗಳ ಬಸಿರೂ
ಬಂಜೇ ಬಂಜೆ !
ಹಗಲೇರುವ ಮೊದಲೇ ಬಂತೇ
ಸಂಜೆ ಸಂಜೆ !
(‘ಸುಲಿಗೆಗಾರ’)
* * *
ಈ ಹುಡಿ ಹುಳುವಿಗೆ ನೆಲಬಾನಳವನು
ಬಂದೀತಾಳಲು ಗರುಡಗತಿ?
(‘ಬಿಡುಗಡೆ’)
ಮನುಷ್ಯ ಬಗೆದರೆ ‘ನೆಲದಲಿ ನಾಕವೆ ತೆರೆವುದು ಕಣ್ಣು ‘; ಆದರೆ ಆತನ ದುರಾಸೆ, ಆತನ ಹಸಿವೆ, ಆತನಲ್ಲಿಯ ‘ದಾನವ’, ಆತನ ಮತಿಗೇಡಿತನ ಇವು ಆತನ ಸದ್ಯದ ಅಧೋಗತಿಗೆ ಕಾರಣವಾಗಿವೆ. ಕಾಲದ ಕರೆಯ ಈ ಸಾಮಾಜಿಕ ಚಿಂತನೆ ಮುಂದೆ ಕಡಿಮೆಯಾಗಿ ಹರಿವ ನೀರಿನಲ್ಲಿ ಅದರ ಲವಲೇಶವೂ ಇಲ್ಲವಾಗಿದೆ. ಬಹುಶಃ ಮನುಕುಲದ ಹಾಡಿನಲ್ಲಿ ಈ ಸಾಮಾಜಿಕ-ರಾಜಕೀಯ ವಸ್ತುವಿಗೆ ಕೊನೆಯ ಸಲಾಮು ಹೊಡೆದುಬಿಟ್ಟಿರಬೇಕು-ಒಂದು ರೀತಿಯ ನಿರಾಶಾಭಾವದಲ್ಲಿ. ‘ಮಾನವ’ ಕವಿತೆಯಲ್ಲಿ ಕವಿ ‘ಶಾಪಗ್ರಸ್ತ’ ಮನುವಂಶದ ಅಸುರತನವನ್ನು ಸಹಾನುಭೂತಿಯಿಂದ ಖಂಡಿಸುತ್ತಾನೆ. ‘ಮದಿರೆ ಕುಡಿಸಿಹರಯ್ಯಾ ಖಲರು ಕುಲಘಾತಕರು’, ಆದ್ದರಿಂದ ;
ದೃಗ್ಬಂಧ ದಿಗ್ಬಂಧ. ಕಣ್ಣು ಇದ್ದೂ ಅಂಧ
ಬಲವಿದ್ದೂ ಹತಬಲ ಹತಾಶಬಲ
ಒಲವಿನೊರತೆಯೆ ಎದೆಯೊಳಿದ್ದರೂ
ಹಗೆಯ ಹಾಲಾಹಲವೆ ಮೈತುಂಬ ಹಬ್ಬುತಿಹ
ಅಸಹಾಯ. ಹಾಯ್ ಹಾಯ !
ಇಲ್ಲಿ ಮನುಷ್ಯನ ಅಸಹಾಯತೆ ಬಗ್ಗೆ ಕವಿ ಕನಿಕರ ಪಡುತ್ತಾನೆ. ಇದೇನೋ ದುರ್ವಿಧಿ, ಅಶುಭಗಳಿಗೆ ಎಂದು ಊಹಿಸುತ್ತಾನೆ :
ವಿಶ್ವಾಂತ ವಿಷಚಕ್ರ ತಿರುಗುತಿದೆ
ತನ್ನಶುಭ ವೇಧಛಾಯೆಯ ಚೆಲ್ಲಿ
ಲಯದ ಡಮರುಗ ಮತ್ತೆ ಬಡೆಯುತ್ತಿದೆ.
ಹೊರಹೊ೦ಟೆ.
ಅಲ್ಲಿ ಕಾದಿಹುದು ಬಲಿ
ಅಲ್ಲಿ ಯಾಜಿಯೂ ನಾನೆ, ಯಜ್ಞ ಪಶುವೂ ನಾನೆ.
……….
ದಿಙ್ಮೂಢ ! ದಿಙ್ಮೂಢ !
ಎಂದೊ ಕೊನೆಯ ಪ್ರಹಾರ ?
ಇಲ್ಲಿಗೆ ಚಿತ್ತಾಲರ ರಾಜಕೀಯ-ಸಾಮಾಜಿಕ-ನೈತಿಕ ಚಿಂತನೆ ಕೊನೆಗೊಳ್ಳುತ್ತದೆ. ಈ ಚಿಂತನೆ ಮತ್ತೆಂದು ಕೊನರಲಿರುವದೋ ನೋಡಬೇಕು.
ಚಿತ್ತಾಲರ ಚಿಂತನೆ ಪ್ರಾಮುಖ್ಯವಾಗಿ ಕೇಂದ್ರೀಭೂತವಾದದ್ದು ಜೀವನದ ಮೂಲ ಸ್ವರೂಪದ ಮೇಲೆ. ಕಾಲದ ಕರೆಯಿಂದ ಸುರುವಾದ ಈ ಚಿಂತನೆ ಕೊನೆಗೆ ಘನೀಭೂತವಾದದ್ದು ಹರಿವ ನೀರಿದು ಸಂಗ್ರಹದಲ್ಲಿ ವಿಶೇಷವಾಗಿ ‘ಹರಿವ ನೀರಿದು’ ಕವನದಲ್ಲಿ. ಈ ಚಿಂತನೆಯ ಮುಖ್ಯಾಂಶಗಳಿವು : (೧) ಜೀವನ ನಿರಂತರವಾಗಿ ಹರಿಯುವ ಪ್ರವಾಹ; ಅದೊಂದು ಅದ್ಭುತ ವ್ಯೂಹವೂ ಅಹುದು. ಅದಕ್ಕಿರುವದು ಸದಾ ವರ್ತಮಾನದಂಗಳ, “ಏಸು ಹಗಲುಗಳೆದ್ದು ಹಗಲುಗಳು ಮುಳುಗಿದರು | ನಿತ್ಯ ಇಂದಿನ ಬಿಸಿಲು.’ (೨) ಮನುಷ್ಯ ಕಾಲಾಧೀನ : ಹುಟ್ಟು, ಬಾಲ್ಯ, ತಾರುಣ್ಯ, ಇಳಿವಯಸ್ಸು, ಮರಣ ಇದು ಅವನ ಪ್ರಾಣಗತಿ. (೩) ಮನುಷ್ಯನ ವೈಶಿಷ್ಟ್ಯವೆಂದರೆ ಅವನ ಎಚ್ಚರ: ‘ಈ ಎಚ್ಚರವೆ ಗೂಢವಿಧಿ’. ಈ ಎಚ್ಚರದ ಮೂಲಕ ಆತನಿಗೆ ಜೀವನವನ್ನು ತನ್ನ ಸೃಜನಶೀಲತೆಯಿಂದ, ಕ್ರಿಯಾಶಕ್ತಿಯಿಂದ ತುಂಬಲು ಶಕ್ಯ. ಆದುದರಿಂದ, ‘ಸೈ, ಆಗು, ಆಕಾರ ತಾಳು;’ ‘ಈ ಜೀವಕ್ಷೇತ್ರದಲಿ | ಹೊಡೆತುಂಬಿ ನಿಂತಷ್ಟೆ ! ಉಡಿತುಂಬಿ ಬಂದಷ್ಟೆ ! ದಾರಿಯ ಫಲ’. ಕೊನೆಗೆ ಧನ್ಯತೆಯ, ಕೃತಾರ್ಥತೆಯ ಭಾವವೊಂದೇ ಮನುಷ್ಯನಿಗೆ ದೊರೆಯಬಹುದಾದ ಫಲ (‘Ripeness is all’) (೪) ಮನುಷ್ಯನ ವ್ಯಕ್ತಿತ್ವವೂ ಒಂದು ಗೂಢವೇ : “ಮೈಯ ಹಿಂದೆ, ಮನದ ಹಿಂದೆ ಅನಾಮಿಕರಾಗಿ ಅಡಗಿಹರು ! ಪಿತರು ಪಿತಾಮಹರು’; ಅವನಲ್ಲಿ ‘ಬೆಳಕಿನ ತೃಷೆ’ಯೊಂದು ಸದಾ ಜಾಗೃತವಾಗಿರುತ್ತದೆ, ಗುರಿಯನ್ನು ಶೋಧಿಸುವ ತವಕವಿರುತ್ತದೆ, ಜೀವನೀಯವಿದೆಂಬ ಅಭೇದ್ಯ ಭರವಸೆಯಿರುತ್ತದೆ. (೫) ಈ ಕಾಲಾತೀತವಾದ ಜೀವನ ಪ್ರವಾಹದಲ್ಲಿ ಕಾಲಾಧೀನನಾಗಿ ಚಲಿಸುವದೊಂದೆ ಮನುಷ್ಯನ ಜೀವನದ ಇತಿಮಿತಿ. ಇಲ್ಲಿ ‘ಬೆರಗಿನರ್ಭಕ ದೃಷ್ಟಿ ಚಾಚಿ ಅಭ್ಯಾಗತರ ತೆರದಿ ನೆಲಸುವದೊಂದೆ.’ ಈ ವಿಚಾರಗಳನ್ನು ಅತ್ಯಂತ ಸಮರ್ಪಕವಾಗಿ, ಸತ್ವಯುತವಾಗಿ, ಪ್ರಾಮಾಣಿಕವಾಗಿ, ಗಂಭೀರವಾಗಿ, ಅನುಭವದ ಆಳದಿಂದ ವ್ಯಕ್ತಗೊಳಿಸಿದ ಈ ದೀರ್ಘ ಕವನ ಕನ್ನಡದ ಒಂದು ಪ್ರಮುಖವಾದ ಕ್ಲಾಸಿಕಲ್ ಕವಿತೆಯೆನ್ನಬಹುದು.
ಚಿತ್ತಾಲರ ಉಳಿದ ಎಲ್ಲ ಕವನಗಳೂ ಈ ಚಿಂತನೆಯ ಪರಿಘದಲ್ಲಿಯೇ ಕೆಲಸಮಾಡುತ್ತವೆ. ಉದಾ : (೧) ಮನುಷ್ಯ ಜೀವನಕ್ಕೂ ಕಾಲಕ್ಕೂ ಇರುವ ಸಂಬಂಧ ‘ಹನ್ನೆರಡು ವರ್ಷಗಳ ಮೇಲೆ’, ‘ಪುನರಾಗಮನ’ದಂಥ ಕವಿತೆಗಳಲ್ಲಿ ಮೂರ್ತಸ್ವರೂಪ ಪಡೆಯುತ್ತದೆ. ಹನ್ನೆರಡು ವರ್ಷಗಳ ಮೇಲೆ ಕವಿ ತಮ್ಮ ಹುಟ್ಟೂರಿಗೆ ಹೋಗಿ ತಮ್ಮ ಇಲ್ಲದ ಮನೆ, ಹಾಳಾದ ಹಿತ್ತಲು ಮುಂತಾದವುಗಳನ್ನು ನೋಡಿ ‘ಈ ಜಗದ ರೀತಿ’ಯ ಬಗ್ಗೆ, ಅಂದು ಇಂದಿನ ನಡವೆ ಹರಿದ ‘ಕಠೋರ ನಿಷ್ಕರುಣ ಕಾಲನದಿ’ಯ ಬಗ್ಗೆ ಚಿಂತಿಸುತ್ತಾನೆ. (೨) ಮನುಷ್ಯ ಜೀವನದಲ್ಲಿ ಅರ್ಥಪೂರ್ಣತೆಯನ್ನು ತುಂಬುವದು, ಸಂತೃಪ್ತಿಯನ್ನನುಭವಿಸುವದು ತನ್ನ ಸೃಜನಶೀಲತೆಯಿಂದ. ಈ ಸೃಜನಶೀಲತೆ ದೈಹಿಕ ಪಾತಳಿಯ ಮೇಲೆ ಕಾಮವಾಗಿ, ಮಾನಸಿಕ ಪಾತಳಿಯ ಮೇಲೆ ಪ್ರತಿಭೆಯಾಗಿ ಕೆಲಸ ಮಾಡುವದು. ಅಂತೇ, ಚಿತ್ತಾಲರ ಕಾವ್ಯದಲ್ಲಿ ಮೊದಲಿನಿಂದಲೂ ಕಾಮ ಒಂದು ಕೇಂದ್ರ ವಸ್ತುವಾಗಿದೆ : ಕಾಲದ ಕರೆಯಲ್ಲಿ ‘ಕಾಮೋದಯ’, ‘ಮಿಲನ’ “ನಾನು ಯಾರೊ, ನೀನು ಯಾರೊ’ ; ಮನುಕುಲದ ಹಾಡಿನಲ್ಲಿ ‘ಸಮಾಗಮ’, ‘ಕನಸು ತಲೆಯಲಿ ತುಂಬಿದಂಥ ಹುಡುಗ’, ‘ನೀರಡಿಕೆ’, ‘ಹಿಗ್ಗಿನಲಿ ಮುಳುಗುವೆನು’ ; ಹರಿವ ನೀರಿದು ಸಂಗ್ರಹದಲ್ಲಿ ‘ಕಾಮಸೂತ್ರ’- ಈ ಎಲ್ಲ ಕವನಗಳಲ್ಲಿ ಕಾಮವೆಂದರೆ ‘ಪುರಾತನ ಪಿಸಾಸೆ’, ‘ಸೂರ್ಯ-ಚಂದ್ರರ ಬಂಧಿಸಿದ ಮೋಹನ’, ಜೀವನದ ಮೂಲಕ್ಕೇ ಇಳಿದ ಬೇರು. ಈ ದೃಷ್ಟಿಯಿದ್ದುದರಿಂದಲೇ ಕವಿ ‘ಕಾಮಸೂತ್ರ’ದಂಥ ಬಿಚ್ಚು ಗಮನವನ್ನು ಬರೆಯಲು ಸಮರ್ಥನಾಗಿದ್ದಾನೆ. ಕವಿಯ ಸ್ವಾನುಭವಕ್ಕೆ ತೀರ ಸಮೀಪವಾದ ಸೃಜನಶೀಲತೆಯ ಪ್ರಕಾರವೆಂದರೆ ಕಾವ್ಯನಿರ್ಮಿತಿ. ಅಂತೇ, ಕವಿ ‘ಕವನ’, ‘ಇಂಥ ಹಾಡು’ಗಳಲ್ಲಿ ಕಾವ್ಯಸೃಷ್ಟಿಯ ಬಗ್ಗೆ ಚಿಂತಿಸುತ್ತಾನೆ, (೩) ಮನುಷ್ಯ ಜೀವನದ ಚರಮ ಸ್ಥಿತಿಯಾದ ಮರಣದ ವಿಷಯ ಆತ್ಮೀಯರ ಮೃತ್ಯುವಿನ ಬಗ್ಗೆ ಕವಿ ಬರೆದ ಶೋಕಗೀತೆಗಳಲ್ಲಿ ಹಲವಾರು ರೀತಿಯಲ್ಲಿ ಅಭಿವ್ಯಕ್ತಗೊಂಡಿದೆ. ‘ತಾಯಿ’ಯಲ್ಲಿ ಮರಣದ ನಂತರ ಉಳಿಯುವದೇನು, ಬಹುಶಃ ನೆನಪು ಎಂಬ ಸೂಚನೆಯಿದೆ. ‘ದುಃಖಗೀತ’ದಲ್ಲಿಯಂತೂ ಜೀವನ-ಮೃತ್ಯುಗಳ ಬಗ್ಗೆ ಅತ್ಯಂತ ಆಳವಾದ ಚಿಂತನೆಯಿದೆ. ಜೀವನದಲ್ಲಿ ಎಷ್ಟೇ ತೊಡರುಗಳು ಬಂದರೂ ವಿಪತ್ತುಗಳು ಬಂದರೂ ಅದು ಮುಂದೆ ಹರಿಯುವದು ಬದುಕಿನ ‘ದುರ್ದಮ್ಯ ಭರವಸೆ’ಯ ಶಕ್ತಿಯ ಮೇಲೆ. ಆದರೆ ಕೊನೆಗೆ ಜೀವನವೇ ಭಗ್ನವಾದಾಗ, ‘ಜಗದ ನಡುವೆಯೆ ನಿಂತು ಜಗಕೆ ಬಾಹಿರ’ನಾದಾಗ, ದುಃಖದ ಬಾಧೆ ಅಸಹ್ಯವಾದಾಗ, ‘ಅಪರಿಹಾರ್ಯ ಅಂತದ ಗಳಿಗೆ ಬಂದು ತಲುಪಿ’ದಾಗ ಏನು ಮಾಡಬೇಕು ? ಈ ಕವಿತೆಯಲ್ಲಿ ಕವಿ ಎದುರಿಸುತ್ತಿರುವದು ಆತ್ಮಹತ್ಯೆಯ ಕಠೋರ ಸತ್ಯವನ್ನ. ಇಲ್ಲಿ ‘ನೋವನ್ನು ಮಾತುಗಳ ಮೂಲಕ, ತತ್ವಗಳ ಮೂಲ ಗೆಲ್ಲುವ’ (ಯು. ಆರ್. ಅನಂತಮೂರ್ತಿಯವರ ಮುನ್ನುಡಿ, ಪು. ಹನ್ನೆರಡು) ಪ್ರಶ್ನೆಯಿಲ್ಲ. ಇಲ್ಲಿರುವುದು ತಂದೆಯ ಆತ್ಮಹತ್ಯೆಯ ಕಠೋರ ಸತ್ಯವನ್ನು ತಿಳಿಯುವ ಉದ್ವಿಗ್ನ ಪ್ರಯತ್ನ. ಇಲ್ಲಿ ಕವಿ ತನ್ನ ತಂದೆಯ ‘ದುಃಖದೊಡನೆ ಆದಷ್ಟು ತಾದಾತ್ಮ್ಯವನ್ನು ತನ್ಮಯತೆಯನ್ನು ಹೊಂದಿ’, (ಮನುಕುಲದ ಪಾಡು, ಪು. ೫೮) ತನ್ನ ವೈಚಾರಿಕ ಹಾಗೂ ಭಾವನಾತ್ಮಕ ಪಾತಳಿಯ ಮೇಲೆ ಆ ದುಃಖವನ್ನೂ ಆತ್ಮಹತ್ಯೆಯ ನಿರ್ಣಯವನ್ನೂ ತಿಳಿಯಲು ಯತ್ನಿಸುತ್ತಾನೆ. ಇದು ತಂದೆಯ ಮನಸ್ಥಿತಿಯ ನಾಟಕೀಯವಾದ ಪುನರ್ನಿರ್ಮಿತಿಯಲ್ಲ, ಅಥವಾ ಆ ಆತ್ಮಹತ್ಯೆಯ ಬಗ್ಗೆ ಕವಿಗೆ ಅನಿಸುವ ಭಾವನೆಗಳ ವಿಚಾರಗಳ ಅಭಿವ್ಯಕ್ತಿಯಲ್ಲ. ತಂದೆಯ ಸ್ಥಾನದಲ್ಲಿ ತನ್ನನಿರಿಸಿ ತಾನು ಹೇಗೆ ಆ ವಿಷಪರಿಸ್ಥಿತಿಯನ್ನನುಭವಿಸಬಹುದಾಗಿತ್ತು, ತಾನು ಹೇಗೆ ಯೋಚಿಸಬಹುದಾಗಿತ್ತು ಎಂದು ಕವಿ ಮಾಡಿದ ವೈಶಿಷ್ಟ್ಯಪೂರ್ಣವಾದ, ಅತ್ಯಂತ ಕಠಿಣವಾದ, ತೊಡಕಿನ ಪ್ರಯತ್ನವಿದು. ಅಂತೇ ಇಲ್ಲಿಯ ಕಾವ್ಯ ಅತ್ಯಂತ ಹೃದಯಸ್ಪರ್ಶಿಯಾಗಿದೆ. ಇಲ್ಲಿಯ ವಿಚಾರಗಳ ಹಂದರ ಕವಿಯ ಜೀವನದರ್ಶನದ ಸೇಂದ್ರಿಯ ಭಾಗವಾಗಿಯೇ ಬರುತ್ತದೆಯಾದರೂ, ಇಲ್ಲಿಯ ಚಿಂತನಶೀಲತೆಗೆ ಭಾವನೆಯ ವೈಶಿಷ್ಟ್ಯಪೂರ್ಣವಾದ, ಉತ್ಕಟ ಒತ್ತಡವಿದೆ, “ನಾಟಕೀಯತೆ’ಯ ತೀಕ್ಷ್ಣತೆಯಿದೆ. (ಈ ಕವನದ ದುರ್ಬಲತೆ ಇದ್ದದ್ದು ಅದರ ‘ವಾಚಾಳಿತನ’ದಲ್ಲಲ್ಲ, ಮೊದಲ ಭಾಗದ ಮೂರ್ತತೆ ಎರಡನೆಯ ಭಾಗದಲ್ಲಿ ಮಾಯವಾಗಿ, ಕಾವ್ಯ ಬರೀ ಅಮೂರ್ತವಾದ ತಾತ್ವಿಕ ಪಾತಳಿಯ ಮೇಲೆ ಕೆಲಸಮಾಡಿದ ವಿಧಾನದಲ್ಲಿದೆ.) ಉಳಿದೆರಡು ಶೋಕಗೀತಗಳಲ್ಲಿ ಜೀವನದ-ಮರಣದ ಪ್ರಶ್ನೆಯಕಿಂತ ಮೃತರ ವ್ಯಕ್ತಿತ್ವದ ಕೇಂದ್ರ ವೈಶಿಷ್ಟ್ಯವನ್ನು ಹಿಡಿಯುವ ಯತ್ನವಿದೆ. ‘ಸುಧೀರ’ ಕವನದಲ್ಲಿ ಸುಧೀರನ ‘ನೆತ್ತರವೇಗೆ ಈ ನೆಲದ್ದೇ ಅಲ್ಲ’ ಎಂದು ಹೇಳಿ ಕೊನೆಗೆ ಜೀವನದ ಗೂಢಕ್ಕೆ ಸಂಬಂಧಿಸಿದ ಪ್ರಶ್ನೆ ಕವಿ ಕೇಳುತ್ತಾನೆ: ‘ಈ ಆಕಾಶ ಪರವಶ ಜೀವ ಬಂತೆಲ್ಲಿಂದ ಹೋಯಿತೆಲ್ಲಿ ?’ ‘ಅಣ್ಣ’ ಕವಿತೆಯಲ್ಲಿ ಅಣ್ಣನ ಜ್ವಾಲೆಯಂಥ, ಮಶಾಲಿನಂಥ, ‘ಇದ್ದಷ್ಟು ಕಾಲ ಇರುವಷ್ಟು ಪ್ರಾಣದ ತೈಲ ! ವೆರೆದು ಝಗಝಗ ಬೆಳಗಿ ಬೆಳಕ ಸುರಿಸಿ’ದ ಜೀವನದ ಬಗ್ಗೆ ಹೇಳಿ ಕೊನೆಗೆ ಮರಣದ ಗೂಢದ ಬಗ್ಗೆ ಕಸಿ ಚಿಂತಿಸುತ್ತಾನೆ :
ಕೊನೆಕೊನೆಯ ದಿನಗಳಲ್ಲಿ ಹೊತ್ತೇ ಇಲ್ಲದವನಂತೆ ಓಡಾಡಿದನಲ್ಲ-
ನೆರಳೆದ್ದು ಬರುವುದನ್ನು ಕಂಡಿದ್ದನೇ ?
ಹೊರಡಬೇಕಾದವನು ಒಬ್ಬಂಟಿ ಎನಿಸಿ ಎದೆಗುಂದಿದ್ದನೇ ?
೪
ಚಿತ್ತಾಲರ ಇತ್ತೀಚಿನ ಕಾವ್ಯದಲ್ಲಿ ಚಿಂತನಶೀಲತೆ ಒಂದು ಘಟ್ಟವನ್ನು ಮುಟ್ಟಿ ಒಂದು ಮಹತ್ವದ ಸಿದ್ಧಿಯನ್ನು ಪಡೆದಿದೆಯೆನ್ನಬಹುದು. ಕಾಲದ ಕೆರೆಯಲ್ಲಿ ಪ್ರಾರಂಭವಾದ ಕಾವ್ಯ ಸರಣಿ ಹರಿವ ನೀರಿದು ಸಂಗ್ರಹದಲ್ಲಿ ತನ್ನ ಉಚ್ಚಾಂಶವನ್ನು ಮುಟ್ಟಿದಂತಿದೆ. ಇನ್ನು ಮುಂದೆ ಕವಿ ತನ್ನ ವಸ್ತು-ಕ್ಷೇತ್ರವನ್ನು ವಿಸ್ತಾರಗೊಳಿಸಬೇಕು ಅಥವಾ ಮತ್ತೆ ಕಾವ್ಯ-ಚಿಂತನೆಯ ರೀತಿಯನ್ನೇ ಬದಲಿಸಬೇಕು -ಅಂದಾಗಲೇ ಪ್ರಗತಿ ಸಾಧ್ಯವೆಂದೆನಿಸುವುದು. ಜೀವನವನ್ನು ವಿಹಂಗಮ ದೃಷ್ಟಿಯಿಂದ ಅದರ ಸಾರ್ವತ್ರಿಕ ಲಕ್ಷಣಗಳಿಗಾಗಿ ನೋಡುವದಕ್ಕಿಂತ ಅನುಭವದ ಪ್ರತ್ಯೇಕತೆಯ ಮೇಲೆ ಲಕ್ಷ್ಯ ಕೇಂದ್ರೀಕರಿಸಿದರೆ ಚಿತ್ತಾಲರು ಬೇರೆ ಬಗೆಯ ಶ್ರೀಮಂತಕಾವ್ಯ ನಿರ್ಮಿಸಬಲ್ಲರು. ಇದಕ್ಕೆ ಉದಾಹರಣೆಗಳು ಅವರ ಕಾವ್ಯದಲ್ಲಿ ಬೇಕಾದಷ್ಟು ಸಿಗುತ್ತವೆ : “ಹನ್ನೆರಡು ವರುಷಗಳ ಮೇಲೆ’, ‘ಫೈಲು’, ‘ಕನಸು ತಲೆಯಲ್ಲಿ ತುಂಬಿದಂಥ ಹುಡುಗ’, ‘ಹರಿವ ನೀರಿದು’ ಕವನದಲ್ಲಿಯ ಮೂರನೆಯ ಭಾಗ, ‘ತಾಯಿ’, ‘ಸುಧೀರ, ‘ಅಣ್ಣ’, ಮುಂತಾದ ಕವನಗಳಲ್ಲಿ ಚಿತ್ತಾಲರ ಚಿಂತನೆ ಅನುಭವದ ವಿವರಗಳಿಗೆ ಗಟ್ಟಿಯಾಗಿ ಅಂಟಿಕೊಂಡೇ ಕೆಲಸ ಮಾಡುತ್ತದೆ. ಈ ಕಾವ್ಯಸರಣಿಯ ಬೆಳವಣಿಗೆಗೆ ಮಿತಿಯೆಂಬುದಿಲ್ಲವಾದ್ದರಿಂದ ಚಿತ್ತಾಲರಿಗೆ ಇದೊಂದು ಹಾದಿ ತೆರೆದೇ ಇದೆ.
ಚಿತ್ತಾಲರ ಕಾವ್ಯದ ರೀತಿ, ಒಂದೇ ಮಾತಿನಲ್ಲಿ ಹೇಳುವುದಾದರೆ, ಕ್ಲಾಸಿಕಲ್ ರೀತಿಯದು. ವಿಷಯದ ಮೇಲೆ ದೃಢವಾದ ಹಿಡಿತ, ಅದರ ಮೇಲೆ ಬುದ್ಧಿಶಕ್ತಿಯು ವ್ಯವಸ್ಥಿತವಾದ ದಾಳಿ (ಘೇರಾವೋ), ಕೊನೆಗೆ ಸಫಲವಾದ ವಿಜಯ-ಇವು ಚಿತ್ತಾಲರ ಕಾವ್ಯದಲ್ಲಿ ಎದ್ದು ಕಾಣುವ ಗುಣಗಳು. ಅವರ ಕಾವ್ಯದೃಷ್ಟಿಗೆ, ಕಾವ್ಯೋದ್ದೇಶಕ್ಕೆ ತಕ್ಕಂಥ ಭಾಷೆಯನ್ನು ಅವರು, ಪರಿಶ್ರಮಪೂರ್ವಕವಾಗಿಯಾದರೂ ಸರಿ, ನಿರ್ಮಿಸಿ ಕೊಂಡೇ ತೀರುತ್ತಾರೆ. ಅವರ ಚಿಂತನಶೀಲತೆ ತನ್ನ ರೀತಿಯನ್ನು ಬದಲಿಸುವತನಕ ಅವರ ಭಾಷೆಯೆಂದರೆ ಅವರ ಆಜ್ಞಾಧಾರಕ ‘ಜೀನಿ’ಯಾಗಿದೆ. ಬುದ್ಧಿಶಕ್ತಿಯ ದೃಢವಾದ ನಿರ್ದೇಶನದ ಕೆಳಗೇ ಕೆಲಸಮಾಡುವ ಅವರ ಚಿಂತನಶೀಲತೆ ಭಾಷೆ ಪ್ರತಿಮೆಗಳಲ್ಲಿ ಖಚಿತತೆಯನ್ನೂ, ಅಸಂದಿಗ್ಧತೆಯನ್ನೂ, ಸುಸ್ಪಷ್ಟತೆಯನ್ನೂ, ಹಾಗೂ ಹಂದರದಲ್ಲಿ ಬಂಧದಲ್ಲಿ (ಉದಾ, ‘ಹರಿವ ನೀರಿದು’ ಅಥವಾ ‘ದುಃಖಗೀತ’ದ Symphonic ಹಂದರ ನೋಡಬೇಕು) ಸಯುಕ್ತಿಕತೆಯನ್ನೂ ಸುಸಂಬಂಧತೆಯನ್ನೂ ಅರಸುವದು ಸಹಜವಾಗಿದೆ. ಈ ಸಂದರ್ಭದಲ್ಲಿ ‘ಮಾಯಕಶಕ್ತಿ ಪಡೆದ ಭಾಷೆ ಚಿತ್ತಾಲರಿಗೆ ಒಲಿದಿದ್ದರೆ ಇವರ ದೃಷ್ಟಿ, ನಿಲುವು, ಧಾಟಿ ಎಲ್ಲವೂ ಬದಲಾಗಿ ಬಿಡುತ್ತಿತ್ತೇನೋ’ ಎಂಬ ಅನಂತಮೂರ್ತಿಯವರ ಮಾತಿನ ಅರ್ಥ ತಿಳಿಯುವುದಿಲ್ಲ ; ಇಲ್ಲಿ ಕಾರ್ಯ-ಕಾರಣಗಳ ಸಂಬಂಧದ ಬಗ್ಗೆ ತಪ್ಪು ತಿಳುವಳಿಕೆಯಿದ್ದಂತೆನಿಸುವದು. (ಅಥವಾ ಅನಂತಮೂರ್ತಿಯವರು ಒಡೆದು ಹೇಳದ ಒಂದು ಸೂಕ್ಷ್ಮ ವಿಚಾರ ಅದರಲ್ಲಿರಬೇಕು.) ಚಿತ್ತಾಲರು ತಮ್ಮ ದೃಷ್ಟಿ, ನಿಲುವು, ಧಾಟಿ ಇವುಗಳಿಗೆ ತಕ್ಕಂತೆ ಭಾಷೆ-ಪ್ರತಿಮೆ-ಬಂಧಗಳನ್ನು ರೂಪಿಸಿಕೊಂಡಿರುವಾಗ ಅನಂತ ಮೂರ್ತಿಯವರ ಹೇಳಿಕೆಯ ಆಶಯ ಸ್ಪಷ್ಟವಾಗುವದಿಲ್ಲ, ಇರಲಿ.
ಚಿತ್ತಾಲರು ನವ್ಯಪಂಥೀಯರಲ್ಲ. ಆದರೂ ಅವರು ಜೀವನದತ್ತ ನೋಡುವ ರೀತಿಯಲ್ಲಿ, ಅಂದರೆ ಜೀವನವನ್ನು ಧೈರ್ಯದಿಂದ ಬಿಚ್ಚು ಮನಸ್ಸಿನಿಂದ ಎದುರಿಸುವ ರೀತಿಯಲ್ಲಿ, ಸ್ವಂತ ಅನುಭವವನ್ನು ವಸ್ತುನಿಷ್ಠವಾಗಿ ಪ್ರಾಮಾಣಿಕವಾಗಿ ಪರೀಕ್ಷಿಸುವ ವಿಧಾನದಲ್ಲಿ, ತಮ್ಮದೇ ಆದ ಜೀವನ ದರ್ಶನವನ್ನು ನಿರ್ಮಾಣಮಾಡುವ ಚಿಂತನ ಶೀಲತೆಯಲ್ಲಿ, ಮೂಲತಃ ನವ್ಯರೇ ಆಗಿದ್ದಾರೆ. ಕನ್ನಡ ನವ್ಯ ಕಾವ್ಯದಲ್ಲಿ, ಅಡಿಗರನ್ನು ಬಿಟ್ಟರೆ, ಚಿತ್ತಾಲರಂಥ ಸಮಗ್ರಬುದ್ಧಿಯ ಚಿಂತನಶೀಲ ಕವಿ ಇನ್ನೂ ಅವತರಿಸದಿರುವದು ವಿಷಾದದ ಸಂಗತಿ. ಕನ್ನಡ ನವ್ಯ ಕಾವ್ಯ ಬರೇ ಪ್ರಾಯೋಗಿಕ ಹರಿದಾಟವಾಗಬಾರದೆಂದಿದ್ದರೆ ಅದಕ್ಕೆ ಅಡಿಗತನದ ಅಥವಾ ಚಿತ್ತಾಲತನದ, ಅಂದರೆ ಚಿಂತನ ಶೀಲತೆಯ ದೀಕ್ಷೆಯಾಗಬೇಕಾದದ್ದು ಅತ್ಯವಶ್ಯ.
ವಿಮರ್ಶೆಗೆ ಪ್ರತಿಕ್ರಿಯೆ-ಒಂದು
ಹೊಕ್ಕುಳಲ್ಲಿ ಹೂವಿಲ್ಲ ಎಂಬ ಶ್ರೀ ಬಿ. ಟಿ. ದೇಸಾಯಿಯವರ ವಿಮರ್ಶೆಗೆ ಎರಡು ಪ್ರತಿಕ್ರಿಯೆಗಳು
ಒಂದು : ಪಿ. ಎಲ್. ಸುಬ್ರಹ್ಮಣ್ಯಂ
ಈ ಲೇಖನ ಜುಲೈ ೧೯೭೦ ರ ಸಾಕ್ಷಿಯಲ್ಲಿ ಶ್ರೀ ಬಿ. ಟಿ. ದೇಸಾಯರು ರಾಮಾನುಜನ್ನರ ‘ಹೊಕ್ಕುಳಲ್ಲಿ ಹೂವಿಲ್ಲ’ ಎಂಬ ಕವನ ಸಂಕಲನದ ಬಗ್ಗೆ ಬರೆಯುತ್ತ ಆಡಿರುವ ಕೆಲವು ಮಾತುಗಳಿಗೆ ಪ್ರತಿಕ್ರಿಯೆಯಾಗಿ ನನ್ನ ಮನಸ್ಸಿನಲ್ಲಿ ಉದ್ಭವಿಸಿದ ಕೆಲವು ವಿಚಾರಗಳನ್ನು ನನಗೇ ಸ್ಪಷ್ಟ ಮಾಡಿಕೊಳ್ಳುವ ಪ್ರಯತ್ನ. ಇದರ ಜೊತೆಗೆ ಶ್ರೀ ದೇಸಾಯರ ಲೇಖನದಲ್ಲಿ ಕಂಡುಬರುವ ಕೆಲವು ಗಂಭೀರ ರೂಪದ ತಪ್ಪುಗಳ ಬಗ್ಗೆ ವಿವೇಚಿಸುವುದು ನನ್ನ ಕರ್ತವ್ಯವೆನ್ನಿಸಿರುವುದರಿಂದ ಆ ಕೆಲಸವನ್ನೇ ಮೊದಲು ನಿರ್ವಹಿಸುತ್ತೇನೆ. ಈ ವಿಚಾರಗಳ ವ್ಯಾಪ್ತಿ ದೇಸಾಯರ ಮಾತುಗಳಿಗಷ್ಟೇ ಸೀಮಿತವಾದ ಪ್ರತಿಕ್ರಿಯೆಯಲ್ಲ ಎಂಬ ಭಾವನೆಯೂ ನನ್ನಲ್ಲಿದೆ.
ಮೊದಲನೆಯದಾಗಿ, ಶ್ರೀ ದೇಸಾಯರು ಈ ಲೇಖನದಲ್ಲಿ ತಾವು ಮಾಡಹೊರಟಿರುವುದು ಖಚಿತವಾಗಿ ಇಂತಹುದು ಎಂಬುದರ ಬಗ್ಗೆಯೇ ನಿರ್ಧರಿಸಿದಂತೆ ತೋರುವುದಿಲ್ಲ. ತಾವು ಮಾಡುತ್ತಿರುವುದು ಕಾವ್ಯ ಪರಿಚಯವೋ, ವಿಶ್ಲೇಷಣೆಯೋ ಅಥವಾ ವಿಮರ್ಶೆಯೋ ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆ ಇಟ್ಟು ಕೊಳ್ಳದೆ, ಒಮ್ಮೆಲೇ ಮಾತಿಗೆ ಆರಂಭಿಸುವುದರಿಂದ ಪರಸ್ಪರ ವಿರೋಧಿ ಉಕ್ತಿಗಳು, ಅಸ್ಪಷ್ಟ ವಿಚಾರಗಳು, ಆತುರದ ನಿರ್ಣಯಗಳು ಲೇಖನದ ತುಂಬ ತಲೆಯೆತ್ತಿ ಕುಣಿಯುತ್ತವೆ; ವಿಮರ್ಶೆ ಒಂದು ಹರಟೆಯಲಾಗುತ್ತದೆ.
ಒಂದು ಕವನದ ಮೂರು ಸಾಲುಗಳನ್ನುದ್ದರಿಸಿ, ಮತ್ತೆ ಕೆಲವು ಕವನಗಳ ಶೀರ್ಷಿಕೆಗಳನ್ನು ಹೇಳಿ, ಅಡಿಗರು ಒದರಾಡುವ ಕವಿ ಎಂದು ಮೌಲ್ಯ ನಿರ್ಣಯ ಮಾಡುವ, ಹಾಗೆಯೇ ‘ತಾತ ಕೂತಿದ್ದ’ ಕವನವನ್ನು ವಿಶ್ಲೇಷಿಸಿ ‘ನಲವತ್ತು-ನೆರಳು’ ರಾಮಾನುಜನ್ನರ ಮಹತ್ವದ ಕೊಡುಗೆ ಎಂಬ ಮೌಲ್ಯ ನಿರ್ಧಾರಕ್ಕೆ ಬರುವ ವಿಮರ್ಶೆ ಯಾವುದೇ ಒಂದು ಗಂಭೀರ ವಿಚಾರ ವಿನಿಮಯಕ್ಕೆ ಎಡೆಗೊಡಲಾರದು. ಆದರೆ ನವ್ಯರು ಎನ್ನಿಸಿಕೊಳ್ಳುವ ಭರದಲ್ಲೋ ಏನೋ, ನವ್ಯ ವಿಮರ್ಶೆಯಲ್ಲಿ ಬಳಕೆಯಾಗುವ ಕೆಲವು ಮಾತುಗಳನ್ನೂ, ವಿಚಾರಗಳನ್ನೂ ಜಾರ್ಗನ್ನಾಗಿಸಿಕೊಂಡು ವಿಮರ್ಶೆಯನ್ನು ದುರುಪಯೋಗಪಡಿಸುವುದು ಸಾಧ್ಯ ಎಂಬುದನ್ನು ಶ್ರೀ ದೇಸಾಯರು ತೋರಿಸಿಕೊಟ್ಟಿದ್ದಾರೆ. ಈ ಲೇಖನವನ್ನು ಓದಿದ ಕೂಡಲೇ ನನಗೇಕೋ “Willing to Wound and yet afraid to strike’ ಎನ್ನಿಸಿತು.
ಒದರಾಟದ ಕವನ ಕೆಲಮಟ್ಟಿಗೆ ತನ್ನನ್ನು ಸಮರ್ಥಿಸಿಕೊಳ್ಳಬಲ್ಲದು. ಆದರೆ ಈ ಎರಡು ದಶಕಗಳಲ್ಲಿ ಕನ್ನಡ ಕಾವ್ಯಕ್ಕೆ ನನ್ನ ಮತ್ತು ದೇಸಾಯರ ಕಣ್ಣನ್ನು ತೆಗೆಸಿರುವ -ಅಥವಾ ತೆಗೆಸಲು ಪ್ರಯತ್ನಿಸಿರುವ-ವಿಮರ್ಶೆಯ ಮುಖ್ಯ ಸಾರವೆಂದರೆ, ವಿಮರ್ಶೆ ಒದರಾಟಕ್ಕೆ ಸ್ವಲ್ಪವೂ ಅವಕಾಶವೀಯಬಾರದು ಎಂಬ ಮಾತು. ಕವಿಯ ಬಗ್ಗೆ Wordsworth ಆಡಿದ ಮಾತುಗಳನ್ನು ನೆನಪಿಸಿಕೊಳ್ಳುವುದಕ್ಕೆ ಮೊದಲು (ಇದು ನಿಜವಾಗಿ ರಾಮಾನುಜನ್ನರ ಕೆಲಸವಾಗಿತ್ತು) ವಿಮರ್ಶೆಯ ಬಗ್ಗೆ Eliot ನ ಮಾತುಗಳನ್ನು ನೆನಪಿಸಿಕೊಂಡು, ಪೂರ್ವಗೃಹೀತ ದೋಷಗಳನ್ನು ಸ್ವಲ್ಪಮಟ್ಟಿಗಾದರೂ ಹಿಡಿತದಲ್ಲಿಟ್ಟುಕೊಂಡಿದ್ದರೆ, ಇಷ್ಟು ಆಭಾಸವಾಗುತ್ತಿರಲಿಲ್ಲವೋ ಏನೋ ! ಇಲ್ಲಿ ಸಾಕಷ್ಟು ಗಂಭೀರ ಚಿಂತನೆ ಸಾಧ್ಯವಾಗಿಲ್ಲ ಎನ್ನುವ ಮಾತು ದೇಸಾಯರ ಕೊನೆಯ ವಾಕ್ಯದಿಂದಲೇ ಸ್ಪಷ್ಟವಾಗುತ್ತದೆ-
ರಾಮಾನುಜನ್ನರಿಂದ ನಮ್ಮ ಎಳಬರು ಕಲಿಯಬೇಕಾದ್ದು ಬೇಕಾದಷ್ಟಿದೆಯೆಂದರೆ ಕಲಿಕೆಯವರಾರೂ ನನ್ನ ಮೇಲೆ ಸಿಟ್ಟಿಗೇಳಲಿಕ್ಕಿಲ್ಲ ಎಂದು ನಾನು ಭಾವಿಸುತ್ತೇನೆ.
ರಾಮಾನುಜನ್ನರಿಂದ ಕಲಿಯಬಹುದಾದ ಎಳಬರು ಬಹಳ ಜನರಿರಬಹುದು. (ಕಲಿಯಬೇಕಾದ್ದು ಇಂತಹುದು ಎಂಬುದನ್ನು ತಿಳಿಸಿಹೇಳುವ ಜವಾಬ್ದಾರಿಯನ್ನು ದೇಸಾಯರು ನಿರ್ವಹಿಸುವುದಿಲ್ಲ.) ಆದರೆ, ರಾಮಾನುಜ ಮತ್ತು ಅಡಿಗರ ಕಾವ್ಯದ ಬಗ್ಗೆ ಚಿಂತಿ ಸುವವರಲ್ಲಿ ದೇಸಾಯರ ದೃಷ್ಟಿಯಲ್ಲಿ ‘ಕಲಿಕೆಯವರು’ ಎನ್ನಿಸಿಕೊಳ್ಳುವಂತಹವರು ಯಾರು ? ಎಷ್ಟು ಜನ : ವೇದಿಕೆಯ ಮೇಲೆ ನಿಂತು ಮುಂದಿರುವವರೆಲ್ಲ ಕಲಿಕೆಯವರು ಎಂಬ ಭ್ರಮೆಯಿಂದ ವಿಮರ್ಶೆಯ ಮಾತುಗಳನ್ನು ಹರಿಯಬಿಟ್ಟರೆ, ವಿಮರ್ಶೆ ಹರಟೆಯಲ್ಲಿ ಪರಿಣಮಿಸಿ ಆಯ ತಪ್ಪುವುದು ಸಹಜ. ಮೊದಲು ಹೇಳಿದ ಮಾತೆಲ್ಲ ಮುಂದೆ ಮರೆತುಹೋಗುವುದೂ ಸಹಜ-
“ಒಂದು ಬಗೆಯ ಪದ್ಯವನ್ನು ಓದುವಾಗ ಇನ್ನೊಂದು ಬಗೆಯ ಪದ್ಯಕ್ಕೆ ಅನ್ವಯಿಸುವ ಮೌಲ್ಯನಿರ್ದೆಶನಗಳನ್ನು ತರಬಾರದು’
ಎನ್ನುವವರು, ಆರಂಭದಲ್ಲೇ ‘ಪ್ರಾರ್ಥನೆ’ಯ ಮೂರು ಸಾಲುಗಳನ್ನು ‘ನಲವತ್ತು ನೆರಳು’ ಕವನದ ತಪ್ಪಾಗಿ ಉದ್ಧರಿಸಿರುವ ಆರು ಸಾಲುಗಳೊಂದಿಗೆ ಹೋಲಿಸಿ, ಇದರಿಂದ ಸೂಚಿತವಾಗುವ ಅಡಿಗ-ರಾಮಾನುಜನ್ನರ ನಡುವಿನ ತಾರತಮ್ಯ ವಿವೇಚನೆಯನ್ನು ಕೊನೆಯವರೆಗೂ ಉಳಿಸಿಕೊಂಡು ಬಂದಿದ್ದಾರೆ, ಮತ್ತು ಈ ಆಧಾರದ ಮೇಲೆಯೇ ರಾಮಾನುಜನ್ನರ ಕಡೆಗೆ ತಮ್ಮ ಕೈಯನ್ನು ಚಾಚಿದ್ದಾರೆ:
‘ನಾನು ಈ ಮೇಲಿನ ಮಾತನ್ನು ಯಾವನೊಬ್ಬ ಕವಿಯ ಮೌಲ್ಯಮಾಪನಕ್ಕಾಗಿ ಹೇಳಿಲ್ಲ’-
ಎಂದು ಅವರು ಹೇಳಿದರೂ ಅಡಿಗರು ಒದರಾಡುವ ಕವಿಯಾಗುವುದೂ, ರಾಮಾನುಜನ್ನರು ಹರಟೆಯ ಕವಿಯಾಗಿ ಮಹತ್ವ ಉಳ್ಳವರಾಗುವುದೂ ಇಲ್ಲೇ ಸೂಚಿತವಾಗಿದೆ. ರಾಮಾನುಜನ್ನರ ‘ಮಾಗಿಯ ಚಳಿಯಂತಹ ಕಾವ್ಯ’ದ ಮುಖ್ಯಗುಣ, ದೇಸಾಯರ ದೃಷ್ಟಿಯಲ್ಲಿ ‘ಹರಟೆಯ ಧಾಟಿ’ ಎಂಬುದನ್ನು ಗಮನಿಸಬೇಕು.
“ರಾಮಾನುಜನ್ನರ ಒಂದೊಂದು ಕವನವನ್ನೂ ಒಂದೊಂದು ತುಣುಕು ಹರಟೆಯೆಂದು ಓದಬಹುದು.’
ಈ ಆಧಾರದ ಮೇಲೆಯೇ ಅವರು ಮತ್ತೆ ಹೇಳುವ ಮಾತೆಂದರೆ-
‘ರಾಮಾನುಜನ್ನರ ಕಾವ್ಯ ಕನ್ನಡಕ್ಕೆ ಹೊಸ ಲಯ, ಧಾಟಗಳನ್ನು ಕೊಟ್ಟಿದೆ.’
ಮತ್ತೊಂದು ಕಡೆ ಇಂತಹ ಮರೆವು ತಾನೇತಾನಾಗಿ ಮೆರೆಯುವುದನ್ನು ಕಾಣುತ್ತೇವೆ:
‘ಈ ಕವನವನ್ನು ಓದಿದ ಮೇಲೆ ಕೆಲವು ಮಾತು ಹೊಳೆಯುತ್ತವೆ. ಮೊದಲನೆಯದು ; ಕವನದ ತನ್ಮಯದ ಧಾಟಿ. ಓದುಗರನ್ನು ಸಾಧ್ಯವಿದ್ದಷ್ಟು ಕವಿ ತನ್ನೊಳಗೆ involve ಮಾಡಿಕೊಂಡು ‘ವಸ್ತು’ವನ್ನು ಒಂದು ಕಡೆಗೆ, ಓದುಗ ಕವಿಯನ್ನು ಇನ್ನೊಂದು ಕಡೆಗೆ ಇಡುವ ರೀತಿ. ಇದಕ್ಕೆ ಪೂರಕವಾಗಿ ಅಲ್ಲಿರುವ ವಸ್ತುವಿನ ಬಗೆಗಿನ ವ್ಯಂಗ್ಯ. ಈ ವ್ಯಂಗ್ಯದ ಪರದೆ ಇರುವುದು ತೆರೆಯಲಿಕ್ಕೆಂದೇ. ತೆರೆದಕೂಡಲೆ ಓದುಗ ಮತ್ತು ಕವಿ ವಸ್ತುವಿನ ಒಡಲಲ್ಲಿ ಒಂದಾಗಿ ಬಿಡುತ್ತಾರೆ…?
ಎಂದು ಒಂದು ಕಡೆ ಅಂದವರು, ಲೇಖನದ ಕೊನೆಯಲ್ಲಿ ಈ ಮಾತುಗಳನ್ನು ಹೇಳುತ್ತಾರೆ-
“ಮುಖ್ಯವಾಗಿ ರಾಮಾನುಜನ್ನರದು ಹುಂಕಾರದ ಕಾವ್ಯವಲ್ಲ. ಅವರಲ್ಲಿ ಕೋಪ, ರೌದ್ರಗಳು ಎಲ್ಲಿಯೂ ಸಿಗುವುದಿಲ್ಲ. ಮೇಲಾಗಿ ಅವರು ಎಂದಿಗೂ (ಓದುಗನೊಂದಿಗಾಗಲೀ, ವಿಷಯದೊಂದಿಗಾಗಲಿ) ಸಂಪೂರ್ಣ ತನ್ಮಯರಾಗಿ ಬರೆಯುವುದಿಲ್ಲ.”
ಇದು ಎರಡು ಪುಟಗಳ ನಂತರ ಬರುವ ಮಾತು. ಮೊದಲು ಉದ್ದರಿಸಿದ ವಾಕ್ಯವೊಂದರಲ್ಲೇ ಮತ್ತೊಂದು ಮಾತಿದೆ. ಅದರ ಔಚಿತ್ಯವನ್ನು ದೇಸಾಯರು ಹೇಗೆ ಸಮರ್ಥಿಸಿಕೊಳ್ಳುತ್ಯಾರೋ ತಿಳಿಯಬೇಕು :
“ತೆರೆದಕೂಡಲೇ (ವ್ಯಂಗ್ಯಪರದೆ) ಓದುಗ ಮತ್ತು ಕವಿ ವಸ್ತುವಿನ ಒಡಲಲ್ಲಿ ಒಂದಾಗಿಬಿಡುತ್ತಾರೆ. ಹಾಗೆ ನೋಡಿದರೆ ಓದುಗನನ್ನು, ವಸ್ತುವಿನ ಮೇಲೆ ಒಗೆದು ದೂರ ನಿಂತು ಕವಿ ಕಿಲಾಡಿನಗು ನಗುತ್ತಾನೆ.”
ಇದು ಬಹಳ ಮೋಹಕವಾದ ದೃಶ್ಯವೇ ಇರಬೇಕು. ಆದರೆ “ಹೇಗೆ ನೋಡಿದರೆ ?’ ಎಂಬ ಪ್ರಶ್ನೆಗೆ ಉತ್ತರ ಸಿಗದೆ ದೃಶ್ಯ ಕಣ್ಣಿಗೆಟುಕಲಾರದು. ‘ಹಾಗೆ ನೋಡಿದರೆ? ಒಗೆದು ದೂರ ನಿಲ್ಲುವ ಕವಿ ‘ಹೀಗೆ ನೋಡಿದರೆ’ ವಸ್ತುವಿನ ಒಡಲಲ್ಲಿ ಒಂದಾಗುತ್ತಾನೆಯೇ? ಹೀಗೆ ತಲ್ಲೀನರಾಗಿ ಮಾತನಾಡುವಾಗ ಈ ಕೆಳಗಿನಂತಹ ಮಾತುಗಳೂ ದೇಸಾಯರಲ್ಲಿ ಮಹತ್ವದ ಉದ್ಧಾರಗಳಾಗಿ ಬಿಡುತ್ತವೆ :
‘ಅದಕ್ಕೇ, ರಾಮಾನುಜನ್ನರ ಯಾವ ಕವನವನ್ನೂ ಒಂದೇ ಸಲ ಓದಿ ತಿಳಿದುಕೊಂಡೆವು ಎನ್ನುವಂತಿಲ್ಲ’-
“ಅದಕ್ಕೇ, ಹೇಳುತ್ತೇನೆ-ರಾಮಾನುಜನ್ನರ ಪದ್ಯವನ್ನು ಮಾತಾಡಿದಂತೆಯೇ ಓದಬೇಕು-ಹಾಡಬಾರದು”.
ಹೀಗೆ ಹೇಳಬೇಕಾದರೆ, ದೇಸಾಯರು ‘ಪಂಪ ಕುಮಾರವ್ಯಾಸರಿಂದ ಹಿಡಿದು ಬೇಂದ್ರೆ ಅಡಿಗರ ವರೆಗೂ ಹರಿದು’ ಬಂದ ಉಳಿದೆಲ್ಲ ಕವನಗಳನ್ನೂ ಒಂದೇ ಓದಿಗೆ ಅರೆದು ಕುಡಿದಿರಬೇಕು ಎನ್ನಿಸುತ್ತದೆ.
ಇಂತಹ ವಿಮರ್ಶೆ ಈ ಯುಗದಲ್ಲಿ ಯುವಕ ಪೀಳಿಗೆಯವರಲ್ಲೊಬ್ಬರಾದ ದೇಸಾಯರಿಗೆ ಸಾಧ್ಯವೆನಿಸಿದಾಗ, ಒಂದು ಬಹಳ ಪ್ರಾಥಮಿಕವೂ ಸರ್ವವಿದಿತವೂ ಆದ ಮಾತನ್ನು ಇಲ್ಲೊಮ್ಮೆ ಒತ್ತಿ ಹೇಳಬೇಕೆನ್ನಿಸುತ್ತದೆ. ಅದೇನೆಂದರೆ, ಒಂದು ಕವನವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕಾದರೆ, ಅದನ್ನು ಪದೇ ಪದೇ ಓದಬೇಕು, ಮಾತನಾಡಿದಂತೆ ಓದಬೇಕು, ಹಾಡಬಾರದು ಎಂಬ ವಿಚಾರಗಳು ರಾಮಾನುಜನ್ನರ ಕಾವ್ಯಕ್ಕಷ್ಟೇ ಅಲ್ಲ ಅನ್ವಯಿಸುವುದು ; ಸಕ್ರಿಯವೆನ್ನಿಸಿಕೊಳ್ಳುವ ಯಾವುದೇ ಕವನಕ್ಕಾದರೂ ಅನ್ವಯಿಸುವಂತಹದು ಎಂಬ ಮಾತು. ಇದು ಇಂದಿನ ಕೆಲವು ವಿದ್ಯಾರ್ಥಿಗಳಿಗೂ ತಿಳಿದ ಮಾತು. ಕಲಿಸುವವರಿಗಷ್ಟೇ ಅಲ್ಲ. ಶ್ರೀ ದೇಸಾಯರು ‘ode to a Nightingale ಮತ್ತು ‘Ode on a Grecian Urn’ ಕವನಗಳನ್ನು ಹೇಗೆ ಓದಬೇಕು ಎಂಬುದನ್ನು ಸ್ವಲ್ಪ ಗಂಭೀರವಾಗಿ ವಿಚಾರಮಾಡಿಕೊಳ್ಳಬೇಕು. ‘ಭೂತ’ ‘ಪ್ರಾರ್ಥನೆ’ ‘ಹಳೆಯ ಮನೆಯ ಮಂದಿ’ ಇವುಗಳನ್ನು ಹಾಡಬೇಕೆ ?
ಕಾವ್ಯದಲ್ಲಿ ಬಳಕೆಯಾಗುವ ಆಡುನುಡಿಯ ಬಗೆಗೂ ದೇಸಾಯರ ಸರಳತೆ ಸೋಜಿಗವನ್ನುಂಟುಮಾಡುವಂತಹುದು.
ಪ್ರಭೂ
ಪರಾಕು ಪಂಪನ್ನೊತಿಯೊತ್ತಿ ನಡ ಬಗ್ಗಿರುವ
ಬೊಗಳುಸನ್ನಿಯ ಹೊಗಳು ಭಟ್ಟ ಖಂಡಿತಾ ಅಲ್ಲ.
ಎಂಬುದನ್ನುದ್ದರಿಸಿ ‘ಇಂಥ ಭಾಷೆಯನ್ನು ನಾನೂ ನೀವೂ ಸರ್ವಥಾ ಮಾತನಾಡಲಾರೆವು’ ಎನ್ನುತ್ತಾರೆ. ಆದರೆ, ಈ ಸಾಲುಗಳ ಬಗ್ಗೆ ಏನು ಹೇಳುತ್ತಾರೋ ?
ಆಕಾಶದವಕಾಶವನ್ನೇ ಝುಮ್ಮೆಂತ ದಾಟಿ
ಹೊರಟಿದೆ
ತನ್ನ ಅವತಾರದಗತ್ಯವನ್ನು ಹುಡುಕಿ
ಅನಂಗದ ಲಹರಿ.1
ಇಲ್ಲಿಯವರೆಗೆ ನಾನು ಅಡಿಗರ ಕವನಗಳ ಬಗ್ಗೆ ವಿಶಿಷ್ಟವಾಗಿ ಪ್ರಸ್ತಾಪಿಸದೇ ಇರುವುದಕ್ಕೆ ಒಂದೇ ಕಾರಣ-ಅಡಿಗರನ್ನು involve ಮಾಡದೆಯೇ, ದೇಸಾಯರ ವಿಮರ್ಶೆ ಎಷ್ಟು ಅಸಂಬದ್ಧವಾಗಿದೆ ಎಂದು ತೋರಿಸುವುದು ನನ್ನ ಮುಖ್ಯ ಉದ್ದೇಶವಾಗಿತ್ತು. ರಾಮಾನುಜನ್ನರ ಮುಖ್ಯವಾದ್ದೆಂದು ಆರಿಸಿದ ಕವನದ ವಿಶ್ಲೇಷಣೆಯೇ ಇವರ ಉದ್ದೇಶವಾಗದೇ ಇದ್ದ ಮೇಲೆ, ಈ ಲೇಖನದ ಉದ್ದೇಶ ಮತ್ತೇನಿತ್ತು ಎಂಬ ಪ್ರಶ್ನೆ ಸಹಜವಾಗಿಯೇ ತಲೆ ಎತ್ತುತ್ತದೆ. ಸಾಲುಗಳ ನಡುವೆ ಓದದೆ ಇದ್ದರೂ, ದೇಸಾಯರೇ ಒಂದು ಕಡೆ-
‘ನಾನು ಈ ಮೇಲಿನ ಮಾತನ್ನು ಯಾವನೊಬ್ಬ ಕವಿಯ ಮೌಲ್ಯಮಾಪನಕ್ಕಾಗಿ ಹೇಳಿಲ್ಲ’-
‘ಒಂದು ಬಗೆಯ ಪದ್ಯವನ್ನು ಓದುವಾಗ ಇನ್ನೊಂದು ಬಗೆಯ ಪದ್ಯಕ್ಕೆ ಅನ್ವಯಿಸುವ ಮೌಲ್ಯ ನಿರ್ದೆಶನಗಳನ್ನು ತರಬಾರದು’
ಎಂದೆಲ್ಲ ಹೇಳಿದ್ದರೂ, ಅವರ ಮನಸ್ಸಿನಲ್ಲಿರುವುದು ಎರಡು ಕಡೆ ಹಣಿಕೆ ಹಾಕಿ, ಮೂರನೇ ಕಡೆ ಉದ್ದಾರವಾಗಿದೆ.
“ಇಲ್ಲಿ (ಅಡಿಗರ ‘ಪ್ರಾರ್ಥನೆ’ ಯಿಂದ ಆರಿಸಿದ ಮೂರು ಸಾಲುಗಳಲ್ಲಿ) ಅರ್ಥ ಶಬ್ದದಿಂದ ಶಬ್ದಕ್ಕೆ ಒಟ್ಟುಗೂಡುತ್ತ ಹೋಗುತ್ತದೆ. ಇಂಥ ಭಾಷೆಗೆ ಒಂದು ರೀತಿಯ ಕೃತ್ರಿಮತೆ ಇದೆ. ಈ ಕೃತ್ರಿಮತೆ ಇನ್ನೂ ಸ್ಪಷ್ಟವಾಗಿ ಕಾಣುವುದು ಛಂದೋಬದ್ಧ ಕಾವ್ಯದಲ್ಲಿ. ಇಲ್ಲಿ (ಗಮನಿಸಬೇಕು) ಕವಿಗೆ ತನ್ನ ಮಾತಿನ ಧಾಟಿಗಿಂತ ‘ನಾದ’ವೇ ಪ್ರಮುಖವಾಗಿಬಿಡುತ್ತದೆ. ಬಹುಶಃ ಲಕ್ಷ್ಮೀಶನನ್ನು ‘ನಾದಲೋಲ’ನೆಂದು ಶ್ರೀ ಬೇಂದ್ರೆಯವರು ಕರೆದದ್ದು ಈ ಅರ್ಥದಲ್ಲೇ ಎಂದು ಕಾಣುತ್ತದೆ.’
1. ‘ನಲವತ್ತು ನೆರಳು’-ಆರನೆಯ ನುಡಿ
ಆದ್ದರಿಂದ ಶ್ರೀ ದೇಸಾಯರು ಅಡಿಗರನ್ನು ನಾದಲೋಲರೆಂದು ಕರೆದರೂ ತಪ್ಪಿಲ್ಲ ಎನ್ನುವಂತಿದೆ, ಹೌದೇ ? ‘ಇಲ್ಲ’ ಎನ್ನುವ ಪದ ಛಂದೋಬದ್ಧ ಕಾವ್ಯಕ್ಕೆ ಮಾತ್ರ ಅನ್ವಯಿಸುವಂಥದೋ ಅಥವಾ ಮೊದಲ ವಾಕ್ಯಕ್ಕೂ ನಿರ್ದೆಶಿಸುತ್ತದೋ ? ಒಟ್ಟಿನಲ್ಲಿ ಬೇಂದ್ರೆಯವರು ಲಕ್ಷ್ಮೀಶನ ಬಗ್ಗೆ ಹೇಳುವ ಮಾತಿನ ಅಸ್ಪಷ್ಟ (ಬಹುಶಃ) ಉಲ್ಲೇಖದ ಆವಶ್ಯಕತೆಯಾದರೂ ಏನಿತ್ತು ? ಈ ಹೋಲಿಕೆಯ ಪ್ರಯತ್ನದಿಂದ ವ್ಯಕ್ತವಾಗುವ ಮಾತೆಂದರೆ, ದೇಸಾಯರು ಅಡಿಗರ ಕಾವ್ಯಶೈಲಿಯನ್ನು ಅಲ್ಲಗಳೆಯಲು ಆಶಿಸಿದರೂ, ಆ ಧೋರಣೆಯನ್ನು ಸ್ಪಷ್ಟಪಡಿಸಲು ಸಿದ್ಧರಿಲ್ಲ ಎಂಬುದು. ‘ಭೂತ’ ಮತ್ತು ನಲವತ್ತು-ನೆರಳು’ ಕವನಗಳನ್ನು ಹೋಲಿಸುತ್ತ (ವಿಶ್ಲೇಷಿಸದೆ) ಅವರಾಡುವ ಈ ಮಾತುಗಳೂ, ಇದೇ ಧೋರಣೆಯನ್ನು ಪ್ರದರ್ಶಿಸುತ್ತವೆ.
-ಅಡಿಗರ ಕಾವ್ಯಕ್ಕೆ Time Perspective ಮುಖ್ಯ ಮನೋಭೂಮಿಕೆಯಾಗಿದ್ದರೆ, ರಾಮಾನುಜನ್ನರ ಕಾವ್ಯಕ್ಕೆ Space perspective ಮಹತ್ವದ್ದಾಗಿದೆ. ಈ ದೃಷ್ಟಿಯಿಂದ ರಾಮಾನುಜನ್ನರ ಕಾವ್ಯ ಇಂದಿನ ಬದುಕಿನ ಆಗುಹೋಗುಗಳನ್ನು, ಸಾಧ್ಯಾಸಾಧ್ಯತೆಗಳನ್ನು ಅರ್ಥೈಸಿಕೊಳ್ಳುವಲ್ಲಿ ಅತ್ಯಂತ ಸಾರ್ಥಕವಾಗಿದೆ. ‘ಭೂತ’ದ ಕೊನೆ ಒಂದು Perpetual possibility ಯತ್ತ ನಿಲುಕಿದರೆ, ನಲವತ್ತು-ನೆರಳು’ realised ಮತ್ತು realisable entity ಗಳತ್ತ ಲಕ್ಷಿಸುತ್ತದೆ. ನನ್ನ ಮಟ್ಟಿಗೆ ಸದ್ಯದ ಕನ್ನಡ ಕಾವ್ಯಕ್ಕೆ ‘ನಲವತ್ತು-ನೆರಳು’ ಬಹು ದೊಡ್ಡ ಕಾಣಿಕೆ.-
ಎಂದರೆ, ‘ಭೂತ’ ಸಾರ್ಥಕವಾಗಿಲ್ಲ. ಅದು ‘ಅಂಥ’ ದೊಡ್ಡ ಕಾಣಿಕೆಯಲ್ಲ ಎಂಬುದು ದೇಸಾಯರ ಅಭಿಪ್ರಾಯ ಎಂದಾಯಿತು. ಹೋಲಿಸುವ ಎರಡು ಕವನಗಳಲ್ಲಿ ಯಾವುದನ್ನೂ ವಿಶ್ಲೇಷಿಸದೆ, ಕೂಲಂಕಷವಾಗಿ ಎಚ್ಚರದಿಂದ ವಿಚಾರ ಮಾಡಿದ ನಿಶ್ಚಿತ ಪುರಾವೆಗಳಿಲ್ಲದೇ ಇಂತಹ ಮಾತುಗಳನ್ನಾಡುವುದು ಶ್ರೀ ದೇಸಾಯರ ಜಾಣ್ಮೆ. ಆದರೆ ಅಡಿಗರ ಬಗ್ಗೆ ತಮ್ಮಲ್ಲಿ ಉಂಟಾದ ಖೇದವನ್ನು ಮುಚ್ಚುವ ಪ್ರಯತ್ನಮಾಡಿ ಸೋತು, ಕೊನೆಗೆ ಹೀಗೆ ‘ಒದರಾಡುವ ಕವಿಗಳೇ ಹೆಚ್ಚು. ಉದಾಹರಣೆಗೆ ಅಡಿಗರೇ ಇದ್ದಾರಲ್ಲ’ ಎಂಬ ಉದ್ದಾರ ತೆಗೆಯುವುದರಲ್ಲಿ ಅಂತಹ ಜಾಣ್ಮೆ ತೋರುವುದಿಲ್ಲ.
ಇನ್ನು ದೇಸಾಯರ ವಿಮರ್ಶಾಧೋರಣೆಯ ಅಡಿಗಲ್ಲುಗಳಂತಿರುವ ಎರಡು ಮಾತುಗಳನ್ನು ವಿವೇಚಿಸಿದರೆ, ನನ್ನ ಚಿಂತನೆ ಹಿಡಿದ ದಾರಿ ಸ್ಪಷ್ಟವಾಗಬಹುದು. ಇವು ಇವರಿಗೆ ಹರಟಿಯ ಧಾಟಿಯ ಮೇಲಿರುವ ಮೋಹದಿಂದ ಬಂದ ಮಾತುಗಳು. ಮೊದಲನೆಯದು.
‘ಬಹುಶಃ ಎಲ್ಲ ಪದ್ಯ ಅಥವಾ ಕಾವ್ಯವನ್ನು ಎರಡು ವರ್ಗ ಮಾಡಬಹುದೆಂದು ಅನಿಸುತ್ತದೆ. ಒಂದು ಹಾಡುವ ಪದ್ಯ, ಇನ್ನೊಂದು ಮಾತಾಡುವ ಅಥವಾ ಸಂಭಾಷಣೆಯ ಪದ್ಯ’-
ಯಾವುದೇ ಭಾಷೆಗೆ ಮಹತ್ವದ ಕೊಡುಗೆ ಎನಿಸಿದ ಕಾವ್ಯವನ್ನು ವಿಶ್ಲೇಷಿಸುವಾಗ ಇಂತಹ ಸರಳ ವಿಭಾಗದ ತಳಹದಿಯಿಂದ ತೃಪ್ತರಾಗುವುದು ಎಷ್ಟು ಅಪಾಯಕರ ಎಂಬುವುದು ಮುಂದೆ ದೇಸಾಯರು ಮಾಡುವ ಆತುರದ generalisation ನಿಂದ ಗೊತ್ತಾಗುತ್ತದೆ.
ಹಾಡುವ ಪದ್ಯ ಅಲ್ಲದೇ ಇರುವುದೆಲ್ಲ ಮಾತಾಡುವ ಅಥವಾ ಸಂಭಾಷಣೆಯ ಕಾವ್ಯವಾಗಲೇಬೇಕೆ ? ಇದರ ನಡುವೆ ಬೇರೆ ಸ್ತರಗಳಿಲ್ಲವೆ ? ಸಂಭಾಷಣೆಗೆ ಇಬ್ಬರಾದರೂ ಬೇಕು. ಮಾತಾಡುವುದಕ್ಕೆ ಒಬ್ಬರೇ ಸಾಕು. ಇವೆರಡರ ನಡುವೆ ‘ಅಥವಾ’ ಎಂದದ್ದೇ ಬಹುಮಟ್ಟಿಗೆ ನಿರ್ಲಕ್ಷ್ಯದ ಗುರುತು. ಸಂಭಾಷಣೆಯಲ್ಲ ಆತ್ಮೀಯ ಸಂಭಾಷಣೆ ಇರಬಹುದು. (ಇಬ್ಬರೇ ಇದ್ದಾಗ, ಅಥವಾ ಇದ್ದವರೆಲ್ಲ ಆತ್ಮೀಯರಾದಾಗ ಅಥವಾ ದೇಸಾಯರೇ ಕಲ್ಪಿಸಿರುವಂತೆ ಹರಟೆ, ಒದರಾಟಗಳ ಸಂಭಾಷಣೆಯೂ ಇರಬಹುದು, ಇವಕ್ಕೆ ಬೇಕಾದ ಧಾಟಿ, ಲಯಗಳು ಬೇರೆ ಬೇರೆ. ಆತ್ಮೀಯತೆಯ ಅವಶ್ಯಕತೆ ಇಲ್ಲ. ಮಾತನಾಡುವ ಕಾವ್ಯ ಧ್ವನಿಯನ್ನು ಹೊಂದಿರಬಹುದು ಅಥವಾ ಮೂಕವೂ ಇರಬಹುದು. 1 ಈ ಮಾತುಗಳನ್ನು ಯಾಕೆ ಹೇಳುತ್ತೇನೆಂದರೆ, ಇಷ್ಟೆಲ್ಲ ವೈವಿಧ್ಯದ ಸಾಧ್ಯತೆಯನ್ನು ಮರೆತದ್ದರಿಂದಲೋ ಅಥವಾ
1. ಉದಾ : Hopkins ಕವಿಯ Wreck of the Dentschland ಕವನದ ೪, ೮ ಮತ್ತು ೧೨ ನೇ ನುಡಿಗಳು.
2. ಅಡಿಗರ ‘ಸ್ವಾತಂತ್ರ್ಯ : ೧೯೫೮ರ ಪಾಠ’ ಕವನದ ೧೪ ರಿಂದ ೨೬ ಮತ್ತು ೩೨ ರಿಂದ ೫೩ನೇ ಸಾಲುಗಳು.
3. Keats ಕವಿಯ Ode to a Nightingale ಮೊದಲನೇ ನುಡಿ. ಇವುಗಳನ್ನು ಓದಬೇಕು.
4. ಭೂತ ಕವನದಲ್ಲಿ ಮೊದಲಿನೆರಡು ನುಡಿಗಳು ಚಿಂತನೆಯ ಧಾಟಿಯಲ್ಲಿದ್ದು ಮೂರನೆಯ ನುಡಿಗೆ ಬರುವಹೊತ್ತಿಗೆ ಹೇಗೆ ಮಾತಿಗೆ ಧ್ವನಿಗೂಡುತ್ತದೆ ಎಂಬುದನ್ನು ನೋಡಬೇಕು. ೨ ನೆಯ ನುಡಿಯ ಕೊನೆಯ ಭಾಗದ ‘ಇವು ಬಯಸದೆ ಹೊರಂಗಳದ ರಂಗುರಂಗಿನ ಬಳ್ಳಿ ಹೂವು ಹೊದರ ?” ಎಂಬ ಮಾತಿನಿಂದ ಧ್ವನಿ ಬವಲಾಗುತ್ತದೆ. ಕೊನೆಯ ನುಡಿಯ ಮಾತುಗಳು ಬೇರೆ ತರಹ ಮೌನದಲ್ಲಿ ಲೀನವಾಗುತ್ತವೆ.
ಅದರ ಅರಿವಿಲ್ಲದುದರಿಂದಲೋ, ದೇಸಾಯರು ಅಡಿಗರ ಕಾವ್ಯಕ್ಕಷ್ಟೇ ಅಲ್ಲ, ರಾಮಾನುಜನ್ನರ ಕಾವ್ಯಕ್ಕೂ ಬಹುಮಟ್ಟಿಗೆ ಅಪರಿಚಿತರಾಗಿಯೇ ಉಳಿಯುತ್ತಾರೆ ಎನ್ನಿಸಿದೆ. ಅದಕ್ಕೇ ರಾಮಾನುಜನ್ನರ ಎಲ್ಲ (‘ಬಹಳಷ್ಟು ಶ್ರೇಷ್ಠ’) ಕಾವ್ಯಕ್ಕೂ ಹರಟೆಯ ಧಾಟಿ ಮುಖ್ಯವೆನ್ನುತ್ತಾರೆ.
-ಇವರಿಗೆ (ಅಡಿಗ ಮುಂತಾದವರಿಗೆ) ಭಾಷಣದ, ಮಂತ್ರದ ಧಾಟಿ ಪ್ರಮುಖವಾಗಿದ್ದರೆ, ರಾಮಾನುಜರ ರೀತಿಯ ಕಾವ್ಯಕ್ಕೆ ಹರಟೆಯ ಧಾಟಿ ಮುಖ್ಯವಾಗುತ್ತದೆ-
ಯಾವುದೇ ಕಾವ್ಯವಾಗಲಿ ಒಂದು ಅನುಭವದ ಸಂಕೀರ್ಣತೆಯ ಗಂಭೀರ, ಸಕ್ರಿಯ ಅಭಿವ್ಯಕ್ತಿಯನ್ನು ಸಾಧಿಸಬೇಕಾದಲ್ಲಿ ಹರಟೆಯ ಧಾಟಿಯ ಮೇಲೆ ಅವಲಂಬಿಸುವುದು ಸಾಧ್ಯವಿಲ್ಲ ಎಂಬುದು ನನ್ನ ಮತ. ಯಾಕೆಂದರೆ, ಮೊದಲನೆಯದಾಗಿ, ಇಂತಹ ಅಭಿವ್ಯಕ್ತಿಗೆ ಬೇಕಾದದ್ದು ಅನುಭವದಿಂದ, ಸನ್ನಿವೇಶದಿಂದ ನಿರ್ಲಿಪ್ತನಾಗಿ, ಆದಾಗ್ಯೂ ಬೇರೆ ಸೆಳೆತಗಳಿಗೆ ಸಿಲುಕದೆ ಆ ಅನುಭವವನ್ನು ಸನ್ನಿವೇಶವನ್ನು, ಅದರ ನಿಜರೂಪದಲ್ಲಿ ಪುನಃ ಸೃಷ್ಟಿಸುವ ಶಕ್ತಿ ಇದಕ್ಕೆ ಅವಶ್ಯವಾದ ಮಾನಸಿಕ ನೆಲೆಯೆಂದರೆ, ಒಂದು ರೀತಿಯಲ್ಲಿ ಧ್ಯಾನಾಸಕ್ತ ಏಕಾಂತತೆ, ಹಾಗೂ ತನ್ನಿಂದ ಹೊರತಾದ ಒಂದು ಆತ್ಮೀಯ ಸಂವೇದನೆಯ ಭರವಸೆ. ಇವು ಹರಟೆಯ ಮೂಡಿನಲ್ಲಿ ಇಲ್ಲದಿರುವ ಗುಣಗಳು. ಎರಡನೆಯದಾಗಿ, ಕಾವ್ಯನುಡಿಯ ಧಾಟಿ ಮತ್ತು ಲಯ, ಕಾವ್ಯವಸ್ತುವಾದ ಅನುಭವ ಅಥವಾ ಸನ್ನಿವೇಶದ ನಿಜವಾದ ಮೂಡನ್ನು ಅನುಸರಿಸುತ್ತವೆ. ಧಾಟಿ, ಲಯ, ಮೂಡು ಇವುಗಳಲ್ಲಿ ಸಾಂಗತ್ಯವಿಲ್ಲದಿದ್ದಲ್ಲಿ ವಸ್ತು ಸಕ್ರಿಯ ಅಭಿವ್ಯಕ್ತಿಯನ್ನು ಪಡೆಯಲಾರದು. ಕವನ ಹರಟೆಯು ಧಾಟಿಯಲ್ಲಿದ್ದರೆ, ಕಾವ್ಯ ವಸ್ತುವನ್ನು ನೋಡಿರುವುದೂ ಅದೇ ಧಾಟಿಯಲ್ಲಿ ಎಂದು ಅರ್ಥ.
ಆದರೂ, ಇಷ್ಟಕ್ಕೇ ನಿಲ್ಲದೆ ದೇಸಾಯರು ಇನ್ನೂ ಒಂದು ಹೆಜ್ಜೆ ಮುಂದಿಡುತ್ತಾರೆ.
-ರಾಮಾನುಜನ್ನರ ಒಂದೊಂದು ಕವನವನ್ನೂ ಒಂದೊಂದು ತುಣುಕು ಹರಟೆ ಎಂದು ಓದಬಹುದು-
ಈ ಕೆಳಗಿನ ಉದಾಹರಣೆಗಳು, ಈ ಮಾತಿನ ಜೊಳ್ಳುತನವನ್ನು ತೋರಿಸುತ್ತವೆ :
ನಿಜವೇ.
ಮುಟ್ಟಿದರೆ ಗೋಡೆ
ತೆಗೆದರೆ ಬಾಗಿಲು,
ಅರ್ಧ ಮುಚ್ಚಿ ಅರ್ಧ ತೆಗೆದರೆ
ಬೇಕು ಬೇಡದ ಉಯಾಲೆ,
ತೆಗೆದರೆ ಹೊರಗೆಲ್ಲ ಒಳಗೆ, ಮುಚ್ಚಿದರೆ
ಪೂರ್ವಪಶ್ಚಿಮ ; ಉತ್ತರದಕ್ಷಿಣ ;
ಒಳಗು ಹೊರಗು;
ಮಾನ ; ಸ್ವರತಿ ; ಛಾವಣಿ ಬಿದ್ದೀತೆಂಬ
– ಭಯ ; ಮೊಳೆ ಹೊಡೆದು ತಗುಲಿಸಿದ
ದೇವರಿಗೆ ಕೂಡ ಎದುರು ಗೋಡೆಯ ಭಯ ;
ಹೆಂಚಿನ ಗಳದಿಂದ ಇಳಿಬಿದ್ದ ಭಯದ
ಉರುಲು ; ನೇತಾಡುವ ಹಿಂದಿ ಸಿನಿಮದ ನಟಿ; ಕಾಮಸೂತ್ರದ ಎಂಟನೆಯ ಭಂಗಿ
ಯಲ್ಲಿ ಉಂಡು ಮಲಗಿದ ಗಂಡ ಹೆಂಡಿರ
ಜಗಳ ; ವಿಯಟ್ನಾಮಿಗೆ ನಾನು ಹೋದರೆ.
ಹೇಗೆ ಎನ್ನುವ ಯೋಚನೆ.
ಇದು ನಿಜವೇ” ಎಂಬ ಮಾತಿನ ನಂತರ ಬದಲಾಗುವ ಧ್ವನಿ. ಮನಸ್ಸು ತನ್ನೊಳಗೇ ವಿಚಾರಮಾಡಿ, ಎಷ್ಟೋ ಪ್ರತಿಮೆಗಳನ್ನು ಅವುಗಳ ಸಂಕೇತಗಳನ್ನು ಅವುಗಳಿಂದ ಸೂಚಿತವಾಗುವ ಅನಿಸಿಕೆಗಳನ್ನು ಕಲೆಹಾಕಿಕೊಳ್ಳುತ್ತಿರುವ ಯೋಚನೆಯ ಗಳಿಗೆ. ಅದಕ್ಕೇ ನುಡಿ ‘ವಿಯಾಟ್ನಾಮಿಗೆ ನಾನು ಹೋದರೆ ! ಹೇಗೆ ಎನ್ನುವ ಯೋಚನೆ’ ಎಂದು ಕೊನೆಗೊಳ್ಳುತ್ತದೆ. ಮೂಡು ಒಂದೇ ಆದುದರಿಂದ ಇದರ ಹಿಂದಿನ ನುಡಿಯ ಧಾಟಿಯೂ ಹರಟೆಯ ಸೋಗಿನಲ್ಲಿದ್ದರೂ, ‘ತಾತ ಕೂತಿದ್ದ’ ಕವನದಲ್ಲಿಯ ಬಿಚ್ಚು ಮನಸ್ಸಿನ ಹರಟೆಯಾಗುವುದಿಲ್ಲ ಎಂಬುದು ಗಮನಾರ್ಹ. ‘ತಾತ ಕೂತಿದ್ದ’ ಕವನದ ಈ ಸಾಲುಗಳನ್ನು ಈಗಲೇ ಓದಿದರೆ, ಈ ಮಾತು ಸ್ಪಷ್ಟವಾದೀತು.
ತಾತ ಕೂತಿದ್ದ
ನೆರೆಮನೆಯ ಚಿಕ್ಕ ತಾತನ ಮೊಮ್ಮಗಳು ಬಾಗಿಲ
ಬಿಸಿಲ
ಲ್ಲಿ ನಿಂತು ಕರೆದಾಗ
ಅಲ್ಲೇ ಮೂಲೆಯ ಕುರ್ಚಿಯಲ್ಲೇ ಲೇವಾದೇವಿ ಲೆಕ್ಕ ಮುಗಿಸಿ
ಕೂತಿದ್ದ ನೆರೆಮನೆಯ ಚಿಕ್ಕ ತಾತ. ಮಾಗಿ
ರಾತ್ರಿಯ ಛಳಿ ತಣ್ಣಗೆ ಕೊರೆದಾಗ
ಎಷ್ಟೋ ವರುಷದ ಸುಡುಗಾಡು ಲೆಕ್ಕ
ಫಕ್ಕನೆ ಸುಲಭವಾಯಿತು.
ಇದು ಪಕ್ಕೆ ಹರಟೆ ನಿಜ. ಈ ಕವನದಲ್ಲೇ ಮುಂದಿನ ನುಡಿಯ ಧಾಟಿ ಸ್ವಲ್ಪ ಬೇರೆ.
ಬೆಳಗಿನ ಕೋಳಿ
ಯ ಬಿಂಕಕ್ಕೆ ಬಿಸಿ ತಾಗಿ
ಅದು ಬುಗ್ಗೆ ಬುಗ್ಗೆಯ ಕೊರಲಸೆಲೆ ಒಡೆದು
ಹಗಲನ್ನುಕ್ಕಿಸಿದಾಗ ಬಿಸಿಲ ಕೊಕ್ಕೊಕ್ಕೊಕೋಡಿ ನೆಲವೆಲ್ಲ ಹರಿದಾಗ
ಆ ನೀರಿನ ಏರುಬೆಟ್ಟದ ಹಸಿರು ಬಿಳಿ ನೀಲಿ ಪುಷ್ಪರಾಗ
ದ ಬೆಳಕು ಮುಖವೇ ಕಾಣದ ಗಾಜಾಗಿ
ಹೆಪ್ಪುಗಟ್ಟಿತು.
ಇಲ್ಲಿ ಹರಟೆಯ ಧಾಟಿಯನ್ನು ಮೀರಿದ ಉತ್ಕಟತೆ, ಒಂದು ತರಹ ಕಾವ್ಯಮಯತೆ ಇದೆ. ಇದು ಒಟ್ಟು ಸಂಕಲನದಲ್ಲೇ ಹೆಚ್ಚು ಹರಟೆಮಯವಾಗಿರುವ ಕವನದಿಂದ ಆರಿಸಿದ್ದು.
ಇನ್ನು ‘ನಲವತ್ತು-ನೆರಳು’ ಕವನದಿಂದ ಒಂದು ಉದಾಹರಣೆ :
…….ಬಿಸಿಲಿನ X-ray
ಯಲ್ಲಿಟ್ಟು
ಅರೆ !
ತೋರಿಸುತ್ತಿದೆ ಗಾಳಿಮಗ್ಗದ ಬಿಳಿ ಸೀರೆ,
ಕಣ್ಣಿನ ಹಿಂದೆ
ಅವರಿವರೆ ಕಾಲು ಮೂಸುತ್ತ ಅಲೆಯುವ ಬೇಹು-
ಬುದ್ದಿಯ ನಿರ್ಬಂಧ-
ಬಾಹು-
ಬಂಧನದ ಗುಹ ಕಾಮಕ್ಕೆ.
ಇಲ್ಲಿ ‘ತೋರಿಸುತ್ತಿದೆ’ ಎಂದು ಆರಂಭವಾಗಿ ‘ಗುಹ್ಯ ಕಾಮಕ್ಕೆ’ ಎಂದು ಕೊನೆಗೊಳ್ಳುವ ಭಾಗದಲ್ಲಿಯ ಪದ-ಜೋಡಣೆಯೇ ಇದು ಮಾತಿನ ಲಯವಲ್ಲ, ಚಿಂತನೆಯ ಲಯ ಎಂಬುದನ್ನು ತೋರಿಸುತ್ತದೆ.
ಎಚ್ಚರದಿಂದ ಓದಿದಲ್ಲಿ ‘ನಲವತ್ತು-ನೆರಳು’ ಕವನದಲ್ಲಿ ಮೊದಲ ನುಡಿ, ಎರಡನೇ ನುಡಿಯ ಮೊದಲಭಾಗ ಮತ್ತು ಏಳನೆಯ ನುಡಿ ಬಿಟ್ಟರೆ, ಉಳಿಯುವ ನುಡಿಯ ಮಾತನಾಡುವ ಅಥವಾ ಹರಟೆಯ ಧಾಟಿಯಲ್ಲಿಲ್ಲ ಎಂಬುದು ತಿಳಿಯುತ್ತದೆ. ಆದರೂ, ದೇಸಾಯರು ಕವನದ ಹಿನ್ನುಡಿಯಂತಿರುವ ಏಳನೆಯ ನುಡಿಯ ಆರು ಸಾಲುಗಳಲ್ಲಿ ಕಾಣುವ ಕೆಲವು ಪದಗಳನ್ನು ಆಡುನುಡಿಯ ಬಳಕೆಯ ಲಕ್ಷಣಗಳೆಂದು ತಿಳಿದು ತಮ್ಮ ಎರಡನೆಯ ಮಾತನ್ನು ಮಂಡಿಸುತ್ತಾರೆ. ಈ ನುಡಿಯಲ್ಲಿ ‘ಯಾಕೋ’, ‘ಈಗ, ‘ನೋಡಿ’ ಇಂತಹ ಮಾತುಗಳಿರುವುದು, ಇವರಿಗೆ ಒಳಗಿನ ಬೇರೆ ಮಾತುಗಳನ್ನೆಲ್ಲ ಇಲ್ಲವಾಗಿಸಿಬಿಟ್ಟಿದೆ.
“…..ಎಂಬಲ್ಲಿ (ಏಳನೆಯ ನುಡಿಯಲ್ಲಿ-೬ ನೆಯ ಸಾಲು ತಪ್ಪಾಗಿದೆ ; ‘ಮರಿನೆರಳು’ ಎಂದಿರಬೇಕಿತ್ತು.’ ಅರ್ಥ ಶಬ್ದಾರ್ಥಾನುಸಾರಿಯಲ್ಲವಾದ್ದರಿಂದ, ಏನೂ ಧಕ್ಕೆ ಇಲ್ಲವೇನೋ !) ಶಬ್ದದ ಅರ್ಥಕ್ಕಿಂತ ಮಾತಿನ ಧಾಟಿಯ ಒತ್ತಡವೇ ಜಾಸ್ತಿಯಾಗುತ್ತದೆ …… ಇಲ್ಲಿ ಒಟ್ಟು ಅರ್ಥ ಯಾವದೊಂದು ಶಬ್ದ ಅಥವಾ ಶಬ್ದ ಸಮುಚ್ಚಯದ ಮೇಲೆ ಅವಲಂಬಿಸಿಲ್ಲ-”
ಎನ್ನುತ್ತಾರೆ. ಇಲ್ಲಿಯ ಅರ್ಥ ವಾಕ್ಯಾರ್ಥಾನುಸಾರಿಯಾಗುತ್ತೆ. ಧಾಟಿಯ ಒತ್ತಡದ ಮೇಲೆ ಅವಲಂಬಿಸಿದೆ ಎಂಬುದು ಅವರ ಅಭಿಪ್ರಾಯ. ಇದಕ್ಕೆ ಆಧಾರವಾಗಿ ಹೇಳುವ ಮಾತು ಇದು :
“-ಮಾತಾಡುವ ಪದ್ಯದಲ್ಲಿ ಕವಿ ತನ್ನ ಧೋರಣೆಯನ್ನು ಶಬ್ದಾರ್ಥಾನುಸಾರಿಯಾಗಿಸದೆ, ವಾಕ್ಯಾರ್ಥಾನುಸಾರಿಯಾಗಿಸುತ್ತಾನೆ.-ಕವಿಯ ಧೋರಣೆ, ಕವನದಿಂದ ಓದುಗ ಪಡೆಯುವ ಅರ್ಥ ಎರಡೂ ಒಂದೇ ಅಲ್ಲ. ಇಷ್ಟಲ್ಲದೇ ಅರ್ಥ ವಾಕಾರ್ಥಾನುಸಾರಿಯಾಗುತ್ತೋ, ಅಥವಾ ಶಬ್ದಾರ್ಥಾನುಸಾರಿಯಾಗುತ್ತೋ ಎಂಬುದು ಒಟ್ಟು ಕವನಕ್ಕೆ ಅನ್ವಯಿಸಬಹುದಾದಂತಹ ವಿಚಾರ, ಕವನದಲ್ಲಿಯ ಕೆಲವು ಸಾಲುಗಳಿಗಾಗಲೀ, ನುಡಿಗಳಿಗಾಗಲೀ ಅನ್ವಯಿಸುವಂತಹುದಲ್ಲ ಎಂಬುದು ನನ್ನ ಗ್ರಹಿಕೆ. (ಈ ರೀತಿ ವಿಚಾರಮಾಡುವುದರ ಆವಶ್ಯಕತೆ ಮತ್ತು ಔಚಿತ್ಯದ ಬಗ್ಗೆಯೇ ನನಗಿನ್ನೂ ಅನುಮಾನವಿದೆ)”
ನನಗನ್ನಿಸುವ ಮಟ್ಟಿಗೆ ಈ ಸಾಲುಗಳಲ್ಲಿ ಧಾಟಿಗಿಂತ ಪ್ರತಿಮೆಯ ಸಾಂಕೇತಿಕತೆ ಮುಖ್ಯವಾಗುತ್ತದೆ :
“ಇದೆಲ್ಲ ಯಾಕೋ ಹೆಚ್ಚಾಯಿತು
ಮಾತು.
ಈಗ ತಲೆಯಿಂದ ಬಿದ್ದ ಕೂದಲಿನ ಜತೆಗೇ
ಬಿತ್ತು,
ನೋಡಿ
ನರೆ ಇಲ್ಲದ ಮರಿನೆರಳು’.
ಇಲ್ಲಿ ಧಾಟಿಯಿಂದ ಸೂಚಿತವಾಗುವ ಭಂಗಿ, ಮನದ ನೆಲೆ, ಇಲ್ಲಿಯತನಕ ಕಂಡ ಮೂಡಿಗಿಂತ ಭಿನ್ನವಾದದ್ದು, ತಾನು ಹೇಳುತ್ತಿರುವುದರ ಬಗೆಗೇ ಇರುವ ಅನಿಶ್ಚಿತತೆಯಿಂದಲೋ ಏನೋ ಹುಟ್ಟಿದ ವ್ಯಂಗ್ಯದಿಂದ ಆವೃತವಾದದ್ದು ಎಂಬ ಅಂಶ ಕವನದ ಅರ್ಥಕ್ಕೆ ಒಂದು ವಿಶಿಷ್ಟ ಗತಿಯನ್ನು ಒದಗಿಸುತ್ತದೆ, ನಿಜ. ಆದರೆ ಅರ್ಥ ಯಾವುದೇ ಶಬ್ದ ಅಥವಾ ಶಬ್ದ ಸಮುಚ್ಚಯದ ಮೇಲೆ ಅವಲಂಬಿಸಿಲ್ಲ ಎಂದು ಹೇಳುವುದು ಸರಿಯಲ್ಲ. ಯಾಕೆಂದರೆ, ‘ತಲೆಯಿಂದ ಬಿದ್ದ ಕೂದಲು’ ಮತ್ತು ‘ನರೆ ಇಲ್ಲದ ಮರಿನೆರಳು’ ಇವುಗಳ ಸಾಂಕೇತಿಕತೆ ನಿಶ್ಚಿತವಾಗದ ಹೊರತು, ಅರ್ಥ ರೂಪಗೊಳ್ಳುವುದೇ ಸಾಧ್ಯವಿಲ್ಲ.
ಹಾಗೆಯೇ,
ಪ್ರಭೂ,
ಪರಾಕು ಪಂಪನ್ನೋತಿಯೊತ್ತಿ ನಡ ಬಗ್ಗಿರುವ
ಬೊಗಳುಸನ್ನಿಯ ಹೊಗಳುಭಟ್ಟ ಖಂಡಿತಾ ಅಲ್ಲ.
ಎಂಬಲ್ಲಿ ಅರ್ಥ ಕೇವಲ ಶಬ್ದಾರ್ಥಾನುಸಾರಿಯಾಗುತ್ತೆ ಎಂದು ಹೇಳುವುದು ಸರಿ ಯಾಗುವುದಿಲ್ಲ. ಬಳಕೆಯಿಂದ ಸವಕಲಾಗಿರುವ ಮಾತನ್ನು ಅಲ್ಪ ಬದಲಾವಣೆಯಿಂದ ಜೀವಂತಗೊಳಿಸುವ ಕ್ರಿಯೆ ಇಲ್ಲಿ ನಡೆದಿರುವ ಮಾತ್ರಕ್ಕೆ ಶಬ್ದಾರ್ಥಕ್ಕೆ ಹೆಚ್ಚು ಪ್ರಾಧಾನ್ಯ ಎಂದು ಹೇಳಲಾಗುವುದಿಲ್ಲ. ಪಂಪು ಎನ್ನುವ ಶಬ್ದ ಇಲ್ಲಿ ಬಳಕೆಯಾಗಿರುವ ಅರ್ಥದಲ್ಲಿ ತಮಿಳು, ತೆಲಗು, ಕನ್ನಡ ಮತ್ತು ಆಂಗ್ಲ (ನಮ್ಮ ದೇಶದಲ್ಲಿ ಬಳಕೆಯಲ್ಲಿರುವ) ಭಾಷೆಗಳಲ್ಲಿ ನಿತ್ಯ ಬಳಕೆಯಲ್ಲಿರುವುದು ದೇಸಾಯರಿಗೂ ಗೊತ್ತಿರಬಹುದು. ಆದರೆ ಕವನದಲ್ಲಿ ಕ್ರಿಯಾಪದದ ಬಳಕೆಯಲ್ಲಿ ವ್ಯತ್ಯಾಸವಿದೆ. ನಿತ್ಯ ಬಳಕೆಯಲ್ಲಿ ‘ಪಂಪು ಹೊಡಿ’ ಎನ್ನುತ್ತೇವೆ. ಇಲ್ಲಿ ‘ಒತ್ತು’ ಎಂಬ ಕ್ರಿಯಾಪದವನ್ನು ಬಳಸಲಾಗಿದೆ. ಇದರಿಂದಾಗಿರುವ ಪರಿಣಾಮವೆಂದರೆ ‘ಪಂಪು ಹೊಡಿ’ ಅಥವಾ ‘ನಾನೇನೂ ಪಂಪು ಹೊಡೆಯುವವನಲ್ಲ’ ಎನ್ನುವಾಗ ಅರ್ಥದಿಂದ ಸೂಚಿತವಾಗದೇ ಇರುವ (ಸವಕಲಾದ್ದರಿಂದ) ಕ್ರಿಯೆ ಮತ್ತು ಭಂಗಿ ಈಗ ಸೂಚಿತವಾಗುತ್ತವೆ. ಇದರ ಜೊತೆಗೆ ಪ್ರಭುಗಳ ಮುಂದೆ ಪರಾಕು ಹೇಳುವ ಹೊಗಳುಭಟ್ಟರ ಚಿತ್ರ ಕಣ್ಣ ಮುಂದೆ ಬಂದಾಗ, ‘ನಡ ಬಗ್ಗಿರುವ’ ‘ಬೊಗಳುಸನ್ನಿಯ’ ಈ ಪದಗಳು ಹೆಚ್ಚು ಅರ್ಥಪೂರ್ಣವಾಗಿ ಸಾಲುಗಳು ಒಟ್ಟು ಪರಿಣಾಮದಲ್ಲಿ ಎಷ್ಟು ಕ್ರಿಯಾತ್ಮಕವಾಗಿವೆ ಎಂಬುದು ತಿಳಿಯುತ್ತದೆ. ಇಲ್ಲಿ ‘ಸನ್ನಿ’, ‘ಭಟ್ಟ’ ಮತ್ತು ‘ಪಂಪು’ ಇವುಗಳಿಗೆ ಪ್ರತ್ಯೇಕವಾಗಿ ಮಹತ್ವವಿಲ್ಲ ಎಂಬುದನ್ನು ಗಮನಿಸದೇ ಇದ್ದಲ್ಲಿ ಗೊಂದಲಕ್ಕೀಡಾಗುವುದು ಸಹಜ. ಹೊಗಳುಭಟ್ಟ ಭಟ್ಟನಿಗಿಂತ ಬೇರೆ, ಬೊಗಳುಸನ್ನಿ ಸನ್ನಿಗಿಂತ ಬೇರೆ. ಹಾಗೆಯೇ ಪರಾಕು ಪಂಪು.
ಆದ್ದರಿಂದ ಇಲ್ಲಿ ಅರ್ಥ ಶಬ್ದಾರ್ಥಾನುಸಾರಿಯಷ್ಟೆ: ಆಗದೆ ಆ ಒಟ್ಟು ವಾಕ್ಯದಿಂದ ಹೊರಡುವ ಚಿತ್ರ, ಆ ಚಿತ್ರೀಕರಣವನ್ನು ಸಾಧಿಸುವ ಧಾಟಿ ಮತ್ತು ಭಂಗಿ, ಅವುಗಳಿಂದ ಬರುವ ಸಾಂಕೇತಿಕತೆಯ ವೈಶಿಷ್ಟ್ಯ ಇಷ್ಟರ ಮೇಲೂ ಅವಲಂಬಿಸಿದೆ ಎಂಬುದು ಸ್ಪಷ್ಟವಾಗುತ್ತದೆ.
ಮುಖ್ಯವಾಗಿ ಹೇಳಬೇಕಾದ್ದಿಷ್ಟೆ, ಯಾವುದೇ ಸಾರ್ಥಕ ಕವನದ ಅರ್ಥ ಬರೀ ಶಬ್ದಾರ್ಥಾನುಸಾರಿಯಾಗುತ್ತೆ ಅಥವಾ ವಾಕ್ಯಾರ್ಥಾನುಸಾರಿಯಾಗುತ್ತೆ ಎಂದು ಹೇಳುವುದು ಸರಿ ಅನ್ನಿಸುವುದಿಲ್ಲ. ಇವೆರಡೂ ಬೇರ್ಪಡಿಸಬಹುದಾದ ವಿಧಾನಗಳು ಎಂದು ತಿಳಿಯುವುದೇ ಒಂದು ಕೃತಿಯ ಸರಳೀಕರಣದ ಕುರುಹು.
ಈ ಅಡಿಗಲ್ಲುಗಳ ಮೇಲೆ ರಾಮಾನುಜನ್ನರ ಕಾವ್ಯದ ಬಗ್ಗೆ ದೇಸಾಯರು ತಮ್ಮದೇ ಆದ ಮೌಲ್ಯನಿರ್ಣಯದ ಚೈನಗೋಡೆಯನ್ನು ಕಟ್ಟುತ್ತಾರೆ.
“-ಇಷ್ಟಾದರೂ ರಾಮಾನುಜನ್ ತಮ್ಮ ಅನುಭವಗಳೊಂದಿಗೆ ಸೆಣಸಾಡುತ್ತಾರೆ ಎನ್ನಿಸುವುದಿಲ್ಲ. ಇದಕ್ಕೆ ಕಾರಣ, ಅವರು ತಮ್ಮ ಅನುಭವದ ಬಗ್ಗೆ ಇರಿಸಿಕೊಂಡ ಮಿತಿಗಳು, (ಯಾವುವು ?) ಅವರಿಗೆ Cultural reference ಗಳು personal involvement ಆಗದೆ ಇರುವುದು ಒಂದು ಕಾರಣವಿರಬಹುದು. ಆದ್ದರಿಂದಲೇ ಏನೋ ‘ನಲವತ್ತು-ನೆರಳಿ’ನಂತಹ ಕವನದಲ್ಲಿ ಅಂಥ ಅದ್ಭುತ ಅರ್ಥಸಾಂಗತ್ಯ ಕಂಡುಬರುತ್ತದೆ-”
ಇಲ್ಲಿಯ ಅನಿಶ್ಚಯತೆಯನ್ನು ಗಮನಿಸಬೇಕು. ‘ಕಾರಣವಿರಬಹುದು’, ‘ಆದ್ದರಿಂದಲೇ ಏನೋ’ ಎಂಬ ಮಾತುಗಳಿವೆ, ಆದರೆ ತಾವು ಕಂಡ ‘ಅದ್ಭುತ ಅರ್ಥಸಾಂಗತ್ಯ’ದ ಬಗ್ಗೆ ಯಾವ ಅನಿಶ್ಚಯತೆಯೂ ಇಲ್ಲ. ಈ ಅದ್ಭುತ ಅರ್ಥಸಾಂಗತ್ಯ ಹೇಗೆ ಕಂಡುಬರುತ್ತದೆ, ಯಾವುದರಿಂದ ಸೂಚಿತವಾಗುತ್ತದೆ ಎಂಬ ಪ್ರಶ್ನೆಗಳು ಅವರನ್ನು ಕಾಡಿಸಿಲ್ಲ. ಅಷ್ಟೇ ಅಲ್ಲ, ತಾವು ಮುಂದೆ ಮಾಡುವ ಮೌಲ್ಯಮಾಪನದ ದೃಷ್ಟಿಯಿಂದಲಾದರೂ ಈ ಕವನದ ವಿಶ್ಲೇಷಣೆ ಮಾಡುವುದು ತಮ್ಮ ಮುಖ್ಯ ಹೊಣೆ ಎಂಬ ಮಾತೂ ಅವರಿಗೆ ಹೊಳೆದಿಲ್ಲ. ಹೀಗಾಗಿ, ಬಹಳ ಸರಳ ರೀತಿಯಲ್ಲಿ ನಿರರ್ಗಳವಾಗಿ ಮಾತು ಮುಂದುವರಿಯುತ್ತದೆ.
“-ಅಡಿಗರ ‘ಭೂತ’ ಮತ್ತು ರಾಮಾನುಜನ್ನರ ‘ನಲವತ್ತು-ನೆರಳು’ಗಳನ್ನು ಈ ದೃಷ್ಟಿಯಿಂದ ಹೋಲಿಸಿನೋಡಬೇಕು. ಅಡಿಗರ ಕಾವ್ಯಕ್ಕೆ Time perspective ಮುಖ್ಯ ಮನೋಭೂಮಿಕೆಯಾಗಿದ್ದರೆ ರಾಮಾನುಜನ್ನರ ಕಾವ್ಯಕ್ಕೆ Space perspective ಮಹತ್ವದ್ದಾಗಿದೆ. ಈ ದೃಷ್ಟಿಯಿಂದ ರಾಮಾನುಜನ್ನರ ಕಾವ್ಯ ಇಂದಿನ ಬದುಕಿನ ಆಗುಹೋಗುಗಳನ್ನು ಸಾಧ್ಯಾ ಸಾಧ್ಯತೆಗಳನ್ನು ಅರ್ಥೈಸಿಕೊಳ್ಳುವಲ್ಲಿ ಅತ್ಯಂತ ಸಾರ್ಥಕವಾಗಿದೆ. ‘ಭೂತ’ದ ಕೊನೆ ಒಂದು Perpetual possibility ಯತ್ರ ನಿರುಕಿಸಿದರೆ ‘ನಲವತ್ತು -ನೆರಳು’ realised ಮತ್ತು realisable entity ಗಳತ್ತ ಲಕ್ಷಿಸುತ್ತದೆ……..”
ಇಲ್ಲಿ ‘space perspective ಮಹತ್ವದ್ದಾಗಿದೆ’, ‘ಇಂದಿನ ಬದುಕಿನ ಆಗುಹೋಗುಗಳನ್ನು ಸಾಧ್ಯಾಸಾಧ್ಯತೆಗಳನ್ನು ಅರ್ಥೈಸಿಕೊಳ್ಳುವಲ್ಲಿ ಅತ್ಯಂತ ಸಾರ್ಥಕವಾಗಿದೆ’ ಮತ್ತು ‘realised ಮತ್ತು realisable entity ಗಳತ್ತ ಲಕ್ಷಿಸುತ್ತದೆ’, ಈ ಮಾತುಗಳನ್ನು ಲಕ್ಷದಲ್ಲಿಟ್ಟು ಕೊಂಡು, ‘ನಲವತ್ತು-ನೆರಳು’ ಕವನವನ್ನು ವಿಶ್ಲೇಷಿಸಿ, ರಾಮಾನುಜನ್ನರ ಕಾವ್ಯದ ಬಗ್ಗೆ ನನ್ನ ನಿಲುಮೆಯನ್ನು ಸ್ಪಷ್ಟ ಪಡಿಸಬಯಸುತ್ತೇನೆ. ಇಷ್ಟೆಲ್ಲ ಹೇಳಿದಮೇಲೆ, ಈ ಕೆಲಸವನ್ನು ಮಾಡದಿದ್ದಲ್ಲಿ ಕರ್ತವ್ಯಲೋಪವಾಗಬಹುದು ಎಂಬುದು ನನ್ನ ಚಿಂತೆ. ಯಾಕೆಂದರೆ, ಶ್ರೀ ದೇಸಾಯರ ವಿಮರ್ಶಾವಿಧಾನವನ್ನು ಅಲ್ಲಗಳೆಯುವುದರ ಮೂಲಕವೇ ನಾನು ರಾಮಾನುಜನ್ನರ ಕಾವ್ಯವನ್ನು ನಿರಾಕರಿಸಿದ್ದೇನೆ ಎಂಬ ಭಾವನೆಗೆ ನಾನು ಎಡೆಗೊಡಲಾರೆ.
‘ನಲವತ್ತು ನೆರಳು’ ಕವನ ಮುಖ್ಯವಾಗಿ ನೆರಳು-ಬೆಳಕುಗಳ ಸಾಂಗತ್ಯ ಮತ್ತು ವಿರೋಧಗಳ ಮೂಲಕ ಒಂದು ಸಂಸ್ಕೃತಿಯ ನೆಲೆಗಟ್ಟನ್ನು ಅಳೆಯುವ ಪ್ರಯತ್ನ ಎನ್ನಿಸುತ್ತೆ.
ಕವನದ ಮೊದಲನೆಯ ನುಡಿಯಲ್ಲಿ ನೆರಳು | ಬೆಳಕು ರೊಮ್ಯಾಂಟಿಕ್ ಗೀತಕಾರರ ಧೋರಣೆಯನ್ನು ಪ್ರತೀಕಿಸುತ್ತದೆ.
‘ಒಂದು ಜಾತಿಯ ಕವಿಗೆ
ನೆರಳು ಅಂದರೆ ಪ್ರಾಣ
ಕಾರಣ ನೆರಳು | ಬೆಳಕು
instant ಪದ್ಯ.
ಹೇಳಿ ಮಾಡಿಸಿದ
ಕೃಷ್ಣ | ರಾಧೆ.’
ಇಲ್ಲಿ ನೆರಳು-ಬೆಳಕು ಒಂದಕ್ಕೊಂದು ಪೂರಕವಾಗುವ ಸನ್ನಿವೇಶದ ಉಲ್ಲೇಖವಿದ್ದರೂ, ಒಟ್ಟು ಧಾಟಿಯಲ್ಲಿ ವ್ಯಂಗ್ಯದ ಸೋಂಕಿದೆ.
ಹೇಳಿ ಮಾಡಿಸಿದ
ಕೃಷ್ಣ | ರಾಧೆ
‘ಎಂಬಲ್ಲಿ ಆದರ್ಶಪ್ರೇಮದ ಬಗ್ಗೆಗಿನ ಸರಳೀಕೃತ ದಾರ್ಶನಿಕ ಧೋರಣೆ ಚಿತ್ರಿತವಾಗಿದೆ. ‘ಹೇಳಿ ಮಾಡಿಸಿದೆ’ ಎಂಬುದು ವಾಡಿಕೆಯ ಮಾತೂ ಹೌದು. ಅನುಭವಕ್ಕಿಂತ ಹೆಚ್ಚಾಗಿ ನಂಬಿಕೆಯ ಮೇಲೆ ಭಾವುಕತೆಯ ಮೇಲೆ ಅವಲಂಬಿಸಿದ್ದು. ಇದು ಒಂದು cult, ಇದರ ಬಗ್ಗೆ instant ಪದ್ಯ ಹೊರಡಿಸುವ ಕವಿಯೂ, ಅವನ ಕವನವೂ cultನ ಅಂಗಗಳು.
‘ನೆರಳು ಅಂದರೆ ಪ್ರಾಣ’
ಎನ್ನುವುದರಿಂದ ಈ ಜಾತಿಯ ಕವಿಗೆ ನೆರಳು ಮುಖ್ಯವಾಗುತ್ತೆ. ಬೆಳಕು ಗೌಣವಾಗುತ್ತೆ. ಬಹುಶಃ ನೆರಳಿನ ಜೊತೆಯ ಸಂಬಂಧ ಹೆಚ್ಚು ಸುಲಭವಿರಬಹುದು, ಅಥವಾ ಬೆಳಕು taken for granted. ನೆರಳಿದ್ದ ಮೇಲೆ ಬೆಳಕಿನ ಕಲ್ಪನೆ ಕಷ್ಟವಲ್ಲ. ಈ ಸ್ಥಿತಿ ಕಾವ್ಯನಾಯಕನಿಗೆ ಒಪ್ಪಿಗೆಯಾದದ್ದಲ್ಲ. ಆದ್ದರಿಂದ ‘ಒಂದು ಜಾತಿಯ ಕವಿಗೆ’ ‘instant ಪದ್ಯ’ ಇವುಗಳಲ್ಲಿಯ ವ್ಯಂಗ್ಯ ‘ನೆರಳು | ಬೆಳಕು’ ಮತ್ತು ‘ಕೃಷ್ಣ | ರಾಧೆ’ ಯನ್ನೂ ತಟ್ಟುತ್ತದೆ. ಕೃಷ್ಣ ಇದ್ದ ಮೇಲೆ ರಾಧೆಯ ಕಲ್ಪನೆ ಕಷ್ಟವಲ್ಲ.
ಎರಡನೆಯ ನುಡಿಯ ಮೊದಲಭಾಗದಲ್ಲಿ ‘ಕತ್ತೆ ಕಿವಿನಿಮಿರಿಸಿ’ ತೋರಿಸಿದ ನೆರಳನ್ನು ಮೋಟುಗೋಡೆ ಮಡಿಸಿಟ್ಟುಕೊಂಡಿದೆ. ಈ ಕೆಲಸ ಗಂಟೆಗಟ್ಟಲೆ ನಡೆಯುವುದರಿಂದ ಒಂದು ತರಹ ಸ್ವಸಂತುಷ್ಟ ಸ್ಥಿತಿಯನ್ನು ಪ್ರತೀಕಿಸಬಹುದು. ಇಲ್ಲ ಬೆಳಕಿಗೆ ಪ್ರಾಮುಖ್ಯತೆ ಇಲ್ಲ. ಕತ್ತೆ, ಗೋಡೆ, ನೆರಳು, ಗೋಡೆಯ ಮೇಲೆ ನೆರಳು ಅನಿವಾರ್ಯ. ಆದ್ದರಿಂದ ‘ನೆರಳು ಬೆಳಕಿನ ಪ್ರಾರಬ್ಧ ಕರ್ಮ’ ಎಂಬ ಮಾತು, ನೆರಳನ್ನು ತೋರಿಸಿ ತೃಪ್ತಿಗೊಳ್ಳುವ ಕತ್ತೆ ಬಹುಶಃ ಕಾಮದ ಒಂದು ಸ್ಥಿತಿಗೂ ಸಂಕೇತ.
ಈ ನುಡಿಯ ಎರಡನೆಯ ಭಾಗವೂ ಕಾಮಕ್ಕೆ ಸಂಕೇತವಾಗಿರುವುದು ಕೊನೆಯ ಸಾಲುಗಳಿಂದ ಸ್ಪಷ್ಟವಾಗುತ್ತದೆ. ಆದರೆ ಇಲ್ಲಿಯ ವಿರೋಧ ಶಕ್ತಿಗಳು ಮೋಟುಗೋಡೆ ಅಥವಾ ನೆರಳಿನಂತೆ ಸ್ವಂತ ಚೇತನವಿಲ್ಲದ ವಸ್ತುಗಳಲ್ಲ. ಬಿಸಿಲಿನ ‘x-ray’ ಎಂತಹ ಪರೆಯನ್ನೂ ಭೇದಿಸುವ ಶಕ್ತಿಯುಳ್ಳದ್ದು-ಬೆಳಕು. ಈ ಬೆಳಕು ತೋರಿಸುವ ವಸ್ತುವನ್ನು ನೋಡುವ ಶಕ್ತಿ ಮಾತ್ರ ನೆರಳಲ್ಲದಿದ್ದರೂ, ನೆರಳಿನಂತಹುದು-‘ ‘ಕಣ್ಣಿನ ಹಿಂದೆ, ಅವರಿವರ ಕಾಲು ಮೂಸುತ್ತ ಅಲೆಯುವ’ ಗುಹ್ಯ ಕಾಮ.
೧ ಮತ್ತು ೭ ನೆಯ ನುಡಿಗಳನ್ನು ಬಿಟ್ಟರೆ ಉಳಿದ ನುಡಿಗಳೆಲ್ಲ quotes ನಲ್ಲಿರುವುದರಿಂದ ಇವುಗಳನ್ನು ಬೇರೆ ಬೇರೆ ‘instant ಪದ್ಯ’ ಗಳೆಂದು ಪರಿಗಣಿಸಬಹುದೋ ಏನೋ ! ಹಾಗಿದ್ದಲ್ಲಿ ೨ ನೆಯ ನುಡಿಯಲ್ಲಿ ಎರಡು ಪದ್ಯ ಏಕೆ?
ಈ ನುಡಿಯ ಎರಡು ಭಾಗಗಳಿಂದ ಹೊರಡುವ ಮುಖ್ಯ ಸಂಕೇತವೆಂದರೆ, ಬೆಳಕಿನ ಸಹಾಯ ಪಡೆದೂ (ಕತ್ತೆಯ ಹಾಗೆ ಅರಿವಿಲ್ಲದೆ ಮತ್ತು ಬುದ್ಧಿಯ ಹಾಗೆ ಅರಿವಿದ್ದು) ನೆರಳಿನೊಡನೆ ಸಂಬಂಧದಿಂದ ತೃಪ್ತಿಗೊಳ್ಳುವ ಪ್ರವೃತ್ತಿ. ಬೆಳಕಿನೆಡೆಗೆ ಪ್ರವೃತ್ತಿಇಲ್ಲದೇ ಇರುವುದು.
ಮೂರನೆಯ ನುಡಿ : ಬಹುಶಃ ಕೆಂಡಸಂಪಿಗೆ ಮುಗಿಲಕೆಂಪು ನಿಜಪ್ರೇಮದ (passion) ಸಂಕೇತವಿರಬಹುದು. ಇದು ಎರಡನೆಯ ನುಡಿಯಲ್ಲಿ ಬರುವ ‘ಕಾಲು ಮೂಸುವ’ ಗುಹ್ಯಕಾಮಕ್ಕಿಂತ ಭಿನ್ನವಾದದ್ದು, ಆದರೆ ಈ ಬಣ್ಣವೂ ಪ್ರತಿಬಿಂಬಿತ. ನೇರ ಬೆಳಕಲ್ಲ. ಇದಕ್ಕೆ ‘ಮೋಡವೆ ಗೋಡೆಯಾದರೆ’ ಮೂರ್ತರೂಪ ತಾಳದೆ, ಬಣ್ಣ, ಮೋಡ ಎರಡೂ ಬೀದಿಯ ಗೂಳಿಯ, ಬಿರುಕು ಬಾಡಿಯ ಕಾರಿನ ಅಥವಾ ನಲ್ಲಿ ಕೆಳಗಿನ ಕೊಳೆನೀರಿನ ತೆರೆಯ ಮೇಲೆ ಪ್ರತಿಬಿಂಬಿತವಾಗುತ್ತೆ. ಇದೂ ಒಂದು ತರಹ ನೆರಳೇ ? ಬೀದಿಯ ಗೂಳಿ, ಬಿರುಕು ಬಾಡಿಯ ಕಾರು ಮತ್ತು ನಲ್ಲಿ ಕೆಳಗಿನ ನೀರಿಗಿಂತ ಬೇರೆ ತರಹದ ಪ್ರತಿಮೆ ಎಂಬುದನ್ನು ಗಮನಿಸಬೇಕು. ಇದರ ಉದ್ರಿಕ್ತ ಸ್ಥಿತಿಯೇ ಬಣ್ಣದ ಮೋಡಕ್ಕೆ ತೆರೆಯೇ ? ಅಥವಾ ಇಲ್ಲಿ ಮೋಡಕ್ಕೆ ಕೆಳಗೆ ತೆರೆಯಿದ್ದರೂ, ಅದು ಮುಗಿಲಕೆಂಪಿಗೆ ಗೋಡೆಯಾದರೂ, ಆ ಕೆಂಪಿಗೆ ಮಾತ್ರ ನೆರಳಿಲ್ಲ ಎಂಬ ಭಾವನೆಯೇ ? ನನಗನ್ನಿಸುವ ಮಟ್ಟಿಗೆ ಈ ಭಾಗದಲ್ಲಿ ಕಾಮ ಮೂರ್ತ ರೂಪದಲ್ಲಿ ಸಾರ್ಥಕ್ಯ ಪಡೆಯದೇ ಇದ್ದಲ್ಲಿ (ಮೋಡವೆ ಗೋಡೆಯಾದರೆ) ಅದು ವ್ಯರ್ಥ ಅಭಿವ್ಯಕ್ತಿಗೆ ಪ್ರಯತ್ನಿಸುವುದು ಎಂಬ ಸೂಚನೆ ಇದೆ.
ನಾಲ್ಕನೇ ನುಡಿಯಲ್ಲಿಯ ಬಣ್ಣ ಬಣ್ಣದ ದೃಶ್ಯ ಬಹುಶಃ ಕೆಂಡಸಂಪಿಗೆಯ ಬಣ್ಣದಿಂದ ಸೂಚಿತವಾದದ್ದು.
ಸೋಫಿಯಾ ಚರ್ಚಿನ ನಲವತ್ತು ಕಿಟಕಿ, ನಲವತ್ತು ದಿಕ್ಕು, ನಲ್ವತ್ತು ಬೆಳಕು, ಬೆಳಕಿನ ಧನಾತ್ಮಕ (Positive) ಅಸ್ತಿತ್ವವನ್ನು ಸೂಚಿಸುತ್ತವೆ. ಇಲ್ಲಿ ನಲವತ್ತು ನೆರಳು ಇದ್ದರೂ, ಈ ನೆರಳು – ಬೆಳಕಿನ ಅಸ್ತಿತ್ವವನ್ನಾಗಲೀ ಪರಿಣಾಮಕಾರತೆಯನ್ನಾಗಲೀ ಕಳೆಯುವ ಸೂಚನೆ ನುಡಿಯಲ್ಲಿಲ್ಲ, ಎಂದರೆ ಇಲ್ಲಿ ನೆರಳು negative ಶಕ್ತಿ ಅಲ್ಲ. ಇದು ಇದೆ ಅಷ್ಟೆ. ನೆರಳಜೊತೆ ರಮಿಸುವ, ಸಂತುಷ್ಟಗೊಳ್ಳುವ ಪ್ರವೃತ್ತಿಯ ಇಲ್ಲ. ನಲವತ್ತು ದಿಕ್ಕಿನಿಂದಲೂ ಬೆಳಕು ಬರುವುದಷ್ಟೇ ಅಲ್ಲದೆ,
ನಡುವಿನ ಕಿಟಕಿ ಎರಡು
ಬ್ರಹ್ಮಾಂಡ ಚಕ್ರಾಕಾರದೊಳಗೆ
ಬಣ್ಣ ತೋಯ್ದ ಕುಸುರಿಗಾಜು
ಬಿಳಿ ಬೆಳಕಿನ ಸಪ್ತಾವತಾರಕ್ಕೆ ನಿಮಿತ್ತವಾಗಿ, ದೇವರನ್ನು ದಿಂಡರುಮಾಡಿ ಅನುರಾಗದಲ್ಲಿ ಅದ್ದಿ ಅದ್ದಿ ರಂಜಿಸುತ್ತದೆ. ಒಳಗೆ ಬಂದ ಗಂಡು-ಹೆಣ್ಣು ಯಾರಿಗೂ ಏಳು ಬಣ್ಣದ ಕಣ್ಣು ಕೊಡುತ್ತದೆ. ಬಹುಮಟ್ಟಿಗೆ ಈ ಚರ್ಚಿನ ದೃಶ್ಯ ಬಹಿರ್ಮುಖ (extrovert) ಧೋರಣೆಯನ್ನು ಸಂಕೇತಿಸುತ್ತದೆ. ಸಫಲ ಸಂಬಂಧವನ್ನೂ ಸೂಚಿಸುತ್ತದೆಯೇ ?
ಹನುಮಂತನ ಗುಡಿ ಇದಕ್ಕೆ ವಿರುದ್ಧವಾದ ಪ್ರತಿಮೆ. ಅಲ್ಲಿ ಕಿಟಕಿಯೇ ಇಲ್ಲ. ಬೆಳಕೂ ಇಲ್ಲ.
ಗರ್ಭಗೃಹದ ಕತ್ತಲೆಯಲ್ಲಿ ಕರ್ಪೂರಾರತಿ
ಪೂಜಾರಿ ಕೈಯಲ್ಲಿ ಸುತ್ತಿದಹಾಗೆ
ಭಕ್ತಾದಿಯ ನೆರಳು.
………………………
………………………
ನಲವತ್ತು
ಜನರಿಗೆ ನಲವತ್ತು ತಲೆಯ ಒಂದೆ ನೆರಳು.
ಅಂದರೆ, ಗುಡಿಯಲ್ಲಿ ದೇವರನ್ನು ಕಾಣುವ ಬದಲು ಪೂಜಾರಿ ಕೈಯಲ್ಲಿ ಸುತ್ತುವ ಕರ್ಪೂರದಾರತಿಯನ್ನೇ ಕಾಣುವುದು. ಸೋಫಿಯಾ ಚರ್ಚಿನಲ್ಲಿ ಎಲ್ಲರಿಗೂ ಎಲ್ಲರೂ ಕಾಣುವಂತೆ ಮತ್ತು ದೇವರು ಎಲ್ಲರಿಗೂ ಕಾಣುವಂತೆ (ಆಕರ್ಷಕವಾಗಿ, ಮುದ್ದಾಗಿ) ಬೆಳಕು ಬಿದ್ದರೆ, ಇಲ್ಲಿ ಬೆಳಕು ನೆರಳ ಸೃಷ್ಟಿಗಾಗಿಯೇ ಎಂಬಂತೆ, ಹೀಗಾಗಿ ಬಂದವರೆಲ್ಲರೂ ಸಂಬಂಧ ಸಾಧ್ಯವಾಗದೇ ಉಳಿಯುತ್ತಾರೆ.
ಇಲ್ಲಿಯವರೆಗೆ ಮಾನಸಿಕ ಜೀವನದಲ್ಲಿ ಹೊರಜಗತ್ತಿನಲ್ಲಿ ಧಾರ್ಮಿಕ ನೆಲೆಯಲ್ಲಿ ಹೇಗೆ ನೆರಳು ಒಂಟಿತನವನ್ನೂ, ಬರಡುತನವನ್ನೂ ಸಂಕೇತಿಸುತ್ತದೆ ಎಂಬುದನ್ನು ನೋಡಿದ್ದೇವೆ. (ಜೀವನ ನೆರಳನ್ನು ಅನುಸರಿಸಿ ನಡೆದಿದೆ ಎನ್ನಬಹುದೇ ?) ಇವೆಲ್ಲ ಸ್ವರತಿ ಧೋರಣೆಯ ಬೇರೆ ಬೇರೆ ರೂಪಗಳು. ಇದಕ್ಕೆ ವಿರುದ್ದವಾಗಿ ಸೋಫಿಯಾ ಚರ್ಚು ಸಾರ್ಥಕ ರತಿಯ ಸಂಕೇತವಾಗುತ್ತದೋ ಏನೋ.
ಮುಂದೆ ಐದನೆಯ ನುಡಿಯಲ್ಲಿ ಜಯಸಿಂಹ ಕಟ್ಟಿಸಿದ ಜಂತರವಂತರ ಗಡಿಯಾರ ಗುಡಿ-ಇದಕ್ಕೆ ಭೂಮಿ, ಸೂರ್ಯ ಎದುರೆದುರಾಗಿ ಹಲ್ಲು ಮಿಲಾಯಿಸುವ ಹಲ್ಲು ಗಾಲಿಯ ಚಕ್ರ. ಇಲ್ಲಿಯ ಮಾತುಗಳು ತಾತ್ವಿಕ ನೆಲೆಯನ್ನು ಹೊಂದುವುದರಿಂದ ಪ್ರತಿಮೆಗಳಿಗೆ ನಿರ್ದಿಷ್ಟ ಸಾಂಕೇತಿಕತೆ ಇದೆ.
“ನೆರಳ ನಡೆ ಇಲ್ಲಿ ಕಾಲದ ಹೆಜ್ಜೆ.”
“ನಿಂತಲ್ಲೆ ನಡೆದೂ ನಡೆದೂ
ಭೂಮಿಗಂಟ ಆಕಾಶದ ಸರ್ಕೀಟಲೆದರು ಕೂಡ
ಕಾಲಡಿಯಲ್ಲಿ ಹೊಸ ಹೊಸ ಹುಲ್ಲು,
ಕಾಲ್ಬೆರಳ ನಡುನಡುವೆ ಆಳೆತ್ತರದ ಮುದಿ
ಹಳದಿ ಜೊಂಡು.”
ಈ ಮಾತುಗಳಿಂದ ಕವನದಲ್ಲಿ ಈವರೆಗೆ ಇರದ ಕೆಲ ಹೊಸ ಸಾಂಕೇತಿಕತೆಗಳು ಈಗ ಹುಟ್ಟಿಕೊಳ್ಳುತ್ತವೆ.
ಒಂದು : ಕಾಲನ (ಸೂರ್ಯನ) ಹೆಜ್ಜೆಯನ್ನು ನೆರಳ ನಡೆಯಿಂದ ಗುರುತಿಸಬೇಕಾದ್ದು ಒಂದು ವಿರೋಧಾಭಾಸ.
ಎರಡು : ‘ನಿಂತಲ್ಲೇ ನಡೆದೂ……..ಆಕಾಶದ ಸರ್ಕೀಟಲೆದರು’, ಎಂಬ ಮಾತು ಒಂದು stagnation point ನ್ನು ಸೂಚಿಸುತ್ತದೆ. ಇದೂ ಒಂದು ವಿರೋಧಾಭಾಸ. ಈ ಸ್ಥಿತಿಯಲ್ಲಿ ಪ್ರಗತಿ ಅಸಾಧ್ಯ. ನಿಂತ ನೀರಲ್ಲಿ ಕೈಬಡಿದ ಕೆಲಸ. (‘ಇವಳೆದೆಗೆ ಬೇರಿಳಿದ ಕಾಲು ನನ್ನದು’, ‘ಬರಿದೆ ನಕ್ಷತ್ರ ಲೋಕಕ್ಕು ರೈಲುಬಿಟ್ಟೆ’ ಎಂಬುದನ್ನು ನೆನಪಿಗೆ ತರುತ್ತದೆ.)
ಮೂರನೆಯದು :
‘ಕಾಲಡಿಯಲ್ಲಿ ಹೊಸಹೊಸ ಹುಲ್ಲು,
ಕಾಲ್ಕೆರಳ ನಡುನಡುವೆ ಆಳೆತ್ತರದ ಮುದಿ
ಹಳದಿಜೊಂಡು.’
ಎನ್ನುವುದು ಬಹುಶಃ ಜೀವಿಸದೆ ವ್ಯರ್ಥಗೊಂಡ (ಹತ್ತಿಕ್ಕಲ್ಪಟ್ಟ) ಯೌವನದ ಗೋರಿಯ ಮೇಲೆ ಇಳಿದ ವೃದ್ಧಾಪ್ಯವನ್ನು ಸಂಕೇತಿಸುತ್ತದೆ. ನೆರಳಿನಲ್ಲೇ ನಿರತವಾದ ಜೀವನ ಅರ್ಥವಂತಿಕೆಯನ್ನೂ, ಆರೋಗ್ಯವನ್ನೂ ಕಳೆದುಕೊಂಡು ಬೆಳೆಯುತ್ತದೆ. ಆದರೆ ಈ ಬೆಳವಣಿಗೆ ಜೊಂಡಿನ ಬೆಳವಣಿಗೆ.
ಇಲ್ಲಿಯ ಇನ್ನೊಂದು ಪ್ರತಿಮೆ ಈ ಮಾತನ್ನು ಹೆಚ್ಚು ತೀವ್ರಗೊಳಿಸುತ್ತದೆ :
ಕಣ್ಣ ಮುಂದೆ
ಗೋಡೆಗೆ, ಕಂಬಕ್ಕೆ, ಕಮಾನಿಗೆ ನೆತ್ತಿಯಿಂದ ನೆರಳು ವಾಲಿ
ಇಳಿದು, ನೆಲದ ಮೇಲೆ ಅಂಗಾತ ಬಿದ್ದು ಬೆಳೆದು,
ಬೆಳಗ್ಗೆ ತ್ರಿವಿಕ್ರಮ, ಹಗಲಿಗೆ ವಾಮನ ;
ಹಗಲಿನ ವಾಮನ, ಸಂಜೆ ತ್ರಿವಿಕ್ರಮ ;
ರಾತ್ರಿ ಅವನ ಮೂರನೆ ಹೆಜ್ಜೆ.
ನೆರಳಾದ್ದರಿಂದ, ಇಲ್ಲಿಯ ಚೇತನ ಅಮೂರ್ತ, ಅದರ ಬೆಳವಣಿಗೆ ಒಂದು ಭ್ರಮೆ. ಆದರೂ ಅದು ಬೆಳವಣಿಗೆ ಮತ್ತು ಕ್ಷಯದ ಒಂದು ವಿಷಮವೃತ್ತದ illusion ನ್ನು ರಚಿಸುತ್ತದೆ.
ಇವೆಲ್ಲವೂ ಹೊಸ ವಿಚಾರಗಳಾದರೆ, ಈ ವರೆಗೆ ಬಂದ ಸಾಂಕೇತಿಕತೆ ಈ ನುಡಿಯಲ್ಲಿ ಕಾಣುವುದಿಲ್ಲ. ೨ ಮತ್ತು ೩ ನೇ ನುಡಿಗಳಲ್ಲಿನ ಕಾಮದ ಸಂಕೇತ ಮತ್ತು ಒಂಟಿತನ ಇವು ಇಲ್ಲಿ ಕಾಣದಾಗುತ್ತವೆ.
ನಿಮಿಷ ನಿಮಿಷ
ಈ ಭಾನುವಾರದ ಕುದುರೆ ರೇಸಿನ ನಿರಂತರ ನಿಶ್ಯಬ್ದ.
ಎಂಬ ಮಾತು ನನಗೆ ಸ್ವಲ್ಪವೂ ಅರ್ಥವಾಗಿಲ್ಲ.
ಇಲ್ಲಿಯವರೆಗೆ ಆದ ಚಿಂತನೆಯ ತಾತ್ಸರ್ಯದಂತಿದೆ ೬ ನೆಯ ನುಡಿ.
“ಆಕಾಶದವಕಾಶವನ್ನೆ ಝುಮ್ಮೆಂತ ದಾಟಿ
ಹೊರಟಿದೆ
ತನ್ನ ಅವತಾರದಗತ್ಯವನ್ನು ಹುಡುಕಿ
ಅನಂಗದ ಲಹರಿ.
ತಡೆದರೆ ಮಾತ್ರ ಬೆಳಕಿನಾವಾಹನೆ.
ಆದರೆ ಅನಂಗದ ಲಹರಿಯನ್ನು ತಡೆದರೆ ಬೆಳಕಿನಾವಾಹನೆಯಾಗುವುದು ಎಂಬುದಕ್ಕೆ ಆಧಾರವಾಗಿ ಕವನದಲ್ಲೇನೂ ಇಲ್ಲ. ಅಥವಾ ಇಲ್ಲಿಯವರೆಗೆ ಬೆಳಕಿನಾವಾಹನೆಯಾಗದೆ ಇದ್ದದ್ದು ಅನಂಗದ ಲಹರಿಯನ್ನು ತಡೆಯದೆ ಇದ್ದದ್ದರಿಂದ ಎಂಬ ನಿರ್ಣಯಕ್ಕೂ ಕವನ ಎಡೆಗೊಡುವುದಿಲ್ಲ. ಇಲ್ಲಿಯ ತನಕ ನಡೆದದ್ದೆಲ್ಲ ಬರಿಯ ಅನಂಗದ ಲಹರಿ ಎಂಬ ಸೂಚನೆಯೂ ಸರಳೀಕೃತ ಚಿಂತನೆಯ ಫಲ. ಬೆಳಕಿನೆಡೆಗೆ ಇರಬೇಕಾಗಿದ್ದ ಪ್ರವೃತ್ತಿಗೆ ಕವನದಲ್ಲೆಲ್ಲೂ Positive ನಿರ್ದೆಶನ ಇಲ್ಲದೇ ಇರುವುದರಿಂದ ಈ ಮಾತು ಅರ್ಥಪೂರ್ಣವಾಗದೇ ಉಳಿಯುತ್ತದೆ. (ಬೆಳಕಿನೆಡೆಗೆ ಪ್ರವೃತ್ತಿ ಇಲ್ಲ ಎಂಬ ಸೂಚನೆ ಇದ್ದರೂ, ಅದೂ inferred ಅಷ್ಟೆ.) ಆದ್ದರಿಂದ ಈ ನುಡಿಯಲ್ಲೂ ಒಂದು stagnation point ಹುಟ್ಟಿಕೊಳ್ಳುತ್ತದೆ.
‘ತಡೆದರೆ ಮಾತ್ರ ಬೆಳಕಿನಾವಾಹನೆ
ತಡೆಯ ತೊಡೆಯಿಂದ
ನೆರಳು ಹೊಳೆ’
ಎಂದರೆ ನೆರಳಿನಿಂದ ಬಿಡುಗಡೆ ಇಲ್ಲ ಎಂಬ ಮಾತು. ಇದು ಎರಡನೆಯ ನುಡಿಯಲ್ಲಿದ್ದ ಸ್ಥಿತಿಯೇ : ನೆರಳು ಬೆಳಕಿನ | ಪ್ರಾರಬ್ಧ ಕರ್ಮ.
(ಮೂರನೆ ನುಡಿಯ ಗೂಳಿಯನ್ನು ಬಿಟ್ಟರೆ, ಉಳಿದೆಲ್ಲ ಪ್ರತಿಮೆಗಳೂ ಬದಲಾವಣೆಯನ್ನು ಸೂಚಿಸಲಾಗದೇ ಇದ್ದವು)
ಮಣ್ಣಿನ ಕೊಳಕುಮಂಡಲ ಸೂರ್ಯಶಾಖದ ಗುಪ್ತಚಂದ್ರಿಕೆಯನ್ನು ತಡೆದಿಟ್ಟು ತಂದಿದ್ದರೂ, ಅದರಿಂದಲೂ ಒಂದು ವಿಷಮವೃತ್ರವೇ ರಚಿತವಾಗಿದೆ :
ರಚಿಸುತ್ತಿದೆ ತದಿಗೆ ತದಿ
ಗೆಗೆ ಕುಗ್ಗಿ ಹಿಗ್ಗುವ
ಪಕ್ಷಪಾತದ
ತಿಂಗಳುದ್ದದ ತಿದಿ
ಯನ್ನು.
ಈ ವಿಷಮವೃತ್ತದ ಕುಗ್ಗು ಹಾಗೆಯೇ ಹಿಗ್ಗು ಭ್ರಮೆ ಅಲ್ಲ, ನಿಜ. ಆದ್ದರಿಂದ ಐದನೆಯ ನುಡಿಯಲ್ಲಿದ್ದ ಅಸಾಧ್ಯ ಸ್ಥಿತಿಯಿಂದ ತಪ್ಪಿಸಿಕೊಂಡಂತಾಗಿದೆ. ಆದರೂ ನುಡಿ ಕೊನೆಗೊಳ್ಳುವುದು ನಿರಾಶೆಯ ಸೂಚನೆಯಲ್ಲಿ: ಯಾಕೆಂದರೆ ಈ ಚಂದ್ರಕ್ಷೇತ್ರವೆ ‘ರಾಹುಸರ್ಪದ ಬಾಲಕ್ಕೆ ನಿಮಿತ್ತ, ಹುತ್ತ’.
ಈ ನಿರಾಶೆಯಿಂದ ಹುಟ್ಟಿದ್ದೇ ಕೊನೆಯ ನುಡಿಯಲ್ಲಿ ವ್ಯಂಗ್ಯ :
‘ಇದೆಲ್ಲ ಯಾಕೊ ಹೆಚ್ಚಾಯಿತು
ಮಾತು………..
…………………
ನರೆ ಇಲ್ಲದ ಮರಿನೆರಳು.’
ಕವನದ ಆರಂಭದಲ್ಲಿದ್ದ ಧೋರಣೆ ಸುಳವಾದದ್ದಾದರೆ, ಈ ಧೋರಣೆ ನಿಂತ ನೀರಿನದು. ಇದು ಬೇರೆ ತರಹ ಸರಳತೆ. ಆದ್ದರಿಂದ ಕವನ ಯಾವ ಸ್ತರದಲ್ಲೂ ಸಾರ್ಥಕ್ಯತೆಯನ್ನು ಗಳಿಸಲಾರದೇ ಹೋಗುತ್ತದೆ.
ಕವನದ ಶೀರ್ಷಿಕೆಯೂ ಕವನದಲ್ಲಿ ಅರ್ಥಪಡೆಯುವುದಿಲ್ಲ. ಸೋಫಿಯಾ ಚರ್ಚಿನಲ್ಲಿ ನಲ್ವತ್ತು ಕಿಟಕಿಗಳಿದ್ದು ಅಲ್ಲಿ ಬಂದ ಒಬ್ಬೊಬ್ಬರಿಗೂ ನಲವತ್ತು ನೆರಳಿದ್ದ ಮಾತ್ರಕ್ಕೆ, ಹನುಮಂತನ ಗುಡಿಯಲ್ಲಿ ಭಕ್ತಾದಿಗಳ ಸಂಖ್ಯೆ ನಲವತ್ತಾಗುತ್ತದೆ. ಆದರೆ ನೆರಳು-ಬೆಳಕಿನ ವಿರೋಧಾಭಾಸದಲ್ಲಿ ನೆರಳಿಗೆ ಸಾಂಕೇತಿಕತೆ ಬರುವಹಾಗೆ ‘ನಲವತ್ತು-ನೆರಳಿ’ಗೆ ಬರುವುದಿಲ್ಲ. ಈ ನಡುವೆ ದೇಸಾಯರ realised, and realisable entity ಗಳು ಎಲ್ಲಿವೆಯೋ ಕಾಣದಾಗಿದೆ.
‘ನಲವತ್ತು ನೆರಳಿ’ನಲ್ಲಿ ನನಗೆ ಕಂಡುಬಂದ ಕೆಲವು ಕುಂದುಗಳೆಂದರೆ : ಪ್ರತಿಮೆಗಳ ಸಾಂಕೇತಿಕತೆ ಎಲ್ಲ ಸ್ತರಗಳಲ್ಲೂ, ಕಾವ್ಯವಸ್ತುವಿಗೆ ಪೂರ್ಣ ಅಭಿವ್ಯಕ್ತಿಯನ್ನು ಒದಗಿಸದೇ ಇರುವುದು ; ವೈಯಕ್ತಿಕ ನೆಲೆಯಲ್ಲಿ ಬಂದ ಅನಿಸಿಕೆಗಳಿಗೆ ಸರ್ವವ್ಯಾಪ್ತಿತ್ವವನ್ನು ಒದಗಿಸುವ ಪ್ರಯತ್ನ ಮಾಡಿರುವುದು ಮತ್ತು ಕವನದ ತಾತ್ವಿಕ ನೆಲೆಗೆ ಜೀವನದ ಆಗುಹೋಗುಗಳಿಗೆ ನಿರ್ದೇಶನ ಮಾಡುವ ಶಕ್ತಿ ಇಲ್ಲದಿರುವುದು ; ಇದರಿಂದಾಗಿ ರಾಮಾನುಜನ್ನರ ಕಾವ್ಯ ವಿಚಾರಜನ್ಯ, ಅನುಭವಜನ್ಯವಲ್ಲ ಎನ್ನಿಸುತ್ತದೆ.
‘ಕೆಲವರ ಪುನರ್ಜನ್ಮ’ ಎಂಬ ಕವನದಲ್ಲಿ ಕವನದ ತಾತ್ವಿಕ ನೆಲೆ ಬೆಕ್ಕಿನ ಸಾವಿನಿಂದ ಉದ್ಭವಿಸುವ ಸಂವೇದನೆಯನ್ನು ಮೀರುವ ಪ್ರಯತ್ನ ಮಾಡುತ್ತದೆ.
ನನ್ನ ಅಭಿಪ್ರಾಯದಲ್ಲಿ ಒಂದು ಸಂಸ್ಕೃತಿಯ ಧೋರಣೆಯನ್ನೂ ಅದರ ಮೌಲ್ಯವನ್ನೂ, ಮಿತಿಯನ್ನೂ ಅಳೆಯಬೇಕಾದರೆ, ಮಾನವ ಜೀವನದ ಸಂದರ್ಭದಲ್ಲಿ, ಅದರೆ ಸಾಧನೆ ಏನು ಎಂಬುದರಿಂದ ಅಳೆಯುವುದೇ ಪ್ರಬುದ್ಧ ಮಾರ್ಗ. ಇದಕ್ಕಾಗಿ ಜೀವನಕ್ಕೆ ದೂರವಾದ ಪ್ರತಿಮೆಗಳ ಸಾಂಕೇತಿಕತೆಯನ್ನು ಅವಲಂಬಿಸುವುದು ಸಮರ್ಪಕವೆನ್ನಿಸುವುದಿಲ್ಲ.
ಇನ್ನು ಕೊನೆಯ ಮಾತುಗಳು. ದೇಸಾಯರು ರಾಮಾನುಜನ್ನರ ಕಾವ್ಯವನ್ನು ಅಡಿಗರ ಕಾವ್ಯಕ್ಕೆ ಹೋಲಿಸುವ ಪ್ರವೃತ್ತಿ ತೋರಿಸಿದ್ದಾರೆ. Space perspective ಮತ್ತು Time perspective ಗಳ ನಡುವೆ ಇರುವ ವ್ಯತ್ಯಾಸ ಇವರ ನಡುವೆ ಇರುವ ವ್ಯತ್ಯಾಸ ಎಂಬ ಮಾತನ್ನು ಸೂಚಿಸಿದ್ದಾರೆ. ನನ್ನ ಅಭಿಪ್ರಾಯದಲ್ಲಿ ರಾಮಾನುಜನ್ನರ ಕಾವ್ಯ ಇನ್ನೂ ವಿಚಾರದ ಮಟ್ಟದಲ್ಲಿದೆ. ಅವರ ವಿಚಾರವೇ ಬಹಳ ಮಟ್ಟಿಗೆ ಅವರಿಗೆ ಗೋಚರವಾಗುವ ಪ್ರತಿಮೆ, ಸಂಕೇತಗಳ ವ್ಯಾಪ್ತಿಯನ್ನವಲಂಬಿಸಬಹುದು. ಉದಾಹರಣೆಗೆ : ‘ನಲವತ್ತು ನೆರಳು’ ಸೋಫಿಯಾ ಚರ್ಚಿನ ಸಾಂಕೇತಿಕತೆ ಇಲ್ಲದಿದ್ದಲ್ಲಿ, ಇಡೀ ಕವನದ ಕೇಂದ್ರ ಧೋರಣೆ ಬದಲಾಗುತ್ತಿತ್ತೋ ಏನೋ. ಅಡಿಗರ ಕಾವ್ಯ ಮಾತಿನ ಮಟ್ಟಕ್ಕೆ ಮುಟ್ಟಿದೆ. ಅವರ ಕಾವ್ಯದಲ್ಲಿ ಜೀವನದ ಸಂಕೀರ್ಣ ಅನುಭವಗಳೂ ತೀವ್ರ ಸಂವೇದನೆಗಳೂ ಪ್ರತಿಮೆ ಸಂಕೇತಗಳ ಸಹಾಯದಿಂದ ಮೂರ್ತಗೊಂಡು ಪುನಃ ಸೃಷ್ಟಿಗೊಳ್ಳುತ್ತವೆ. ಅಡಿಗರ ಕಾವ್ಯ ಅನುಭವಗಮ್ಯ. ರಾಮಾನುಜನ್ನರದು ದೃಷ್ಟಿ ಗಮ್ಯ, ವಿಚಾರಗಮ್ಯ. ರಾಮಾನುಜನ್ನರ ಕಾವ್ಯದಲ್ಲಿ ಸಂವೇದನೆಯ ತೀವ್ರತೆ ಸಂಕೀರ್ಣತೆ ಇದ್ದರೂ, ಅನುಭವದ ಸಂಕೀರ್ಣತೆ ಇಲ್ಲ. ಅವರ ವಿಚಾರಗಳು ಅನಿಸಿಕೆಗಳಾಗಿಯೇ ಉಳಿದು, ಕಾವ್ಯಭಾಷೆ ಚಿಂತನೆಯ ಮಟ್ಟದಲ್ಲೇ ಇರುವುದಕ್ಕೆ ಇದೂ ಒಂದು ಕಾರಣ. ಅವರಲ್ಲಿ ಕಾವ್ಯಭಾಷೆ ಮಾತಿನ ರೂಪಕ್ಕೆ ಘನೀಕರಿಸುವುದು ತಮ್ಮ ಸಂಕೀರ್ಣ ಸಂವೇದನೆಗಳಿಗೆ ಸಂಬಂಧಿಸದ ಕಾವ್ಯವಸ್ತು ಇದ್ದಲ್ಲಿ, ಉದಾ : ‘ತಾತ ಕೂತಿದ್ದ’ ‘ಒಂದು ಕೊಡೆ, ಒಂದು ವಾಚು’, ‘ಎರಡು ಮೊಟ್ಟೆ’ ಎಂಬ ಕವನಗಳು. ಇದು ಅವರ ಕಾವ್ಯದ ಗುಣವಲ್ಲ, ಕೊರತೆ. ಅವರಿಗೆ ‘cultural references’ “personal involvement” ಆಗುವುದಿಲ್ಲ ಎಂಬುದು ಹಾರಿಕೆಯ ಮಾತು. ‘ನಲವತ್ತು ನೆರಳ’ರ ಆರನೆಯನುಡಿ ‘ತಿರುಗಿ ಬಂದೆ’ ‘ತೆಗೆದರೆ ಬಾಗಿಲು’ ‘ಕೆಲವರ ಪುನರ್ಜನ್ಮ’ ‘ಇದು ಮಾತ್ರ ನಿನ್ನದೇನಯ್ಯ’ ‘ಮತ್ತೊಂದು ಖಾಂಡವ ದಹನ’ ಈ ಕವನಗಳು ಅವರು ನಮ್ಮ ಸಂಸ್ಕೃತಿ ಮೌಲ್ಯಗಳ ಬಗ್ಗೆ ಅಲಿಪ್ತರಲ್ಲ ಎಂಬುದನ್ನೂ ಮತ್ತು ಇನ್ನೂ ಇವುಗಳ ಬಗ್ಗೆ ಅವರ ಧೋರಣೆ ನಿರ್ಲಿಪ್ತತೆಯನ್ನು ಹೊಂದಿಲ್ಲ ಎಂಬುದನ್ನೂ ತೋರಿಸುತ್ತವೆ. ಅನಿಸಿಕೆಗಳಿಂದ ಅನುಭವದ ಕಡೆಗೆ, ವಿಚಾರದಿಂದ ಮಾತು ಸಂಭಾಷಣೆಯೆಡೆಗೆ ಬೆಳೆಯಬೇಕಾದ ಕಾವ್ಯ ರಾಮಾನುಜನ್ನರದು.
ಇಲ್ಲೇ ಇನ್ನೊಂದು ಮಾತನ್ನೂ ಹೇಳಿ ಮುಗಿಸುತ್ತೇನೆ. ಅಡಿಗರ ಕಾವ್ಯದ ಬಗ್ಗೆ ನಾನು, ಈಗಾಗಲೇ ಬರೆದಿರುವ ವಿಶ್ಲೇಷಣೆಗಳಲ್ಲಿ ಸೂಚ್ಯವಾಗಿ ಹೇಳಿರುವ ಒಂದು ಮಾತನ್ನು ಇಲ್ಲಿ ಸ್ಪಷ್ಟವಾಗಿ ಹೇಳಬಯಸುತ್ತೇನೆ. ನಾವು ಈ ಯುಗದಲ್ಲಿ ಅತ್ಯುತ್ತಮ ಮತ್ತು ಅರ್ಥಪೂರ್ಣವೆಂದು ಒಪ್ಪಿಕೊಂಡಿರುವ ಆಂಗ್ಲ ಕಾವ್ಯದೊಡನೆ ಹೋಲಿಸಬಹುದಾದಂತಹ ಕಾವ್ಯ, ಅಡಿಗರ ಕಾವ್ಯ. ಶ್ರೀ ನಾಡಿಗ, ಶ್ರೀ ಅನಂತಮೂರ್ತಿ, ಶ್ರೀ ಎಂಜಿಕೆ, ಇವರುಗಳ ಲೇಖನಗಳನ್ನು ಮತ್ತೊಮ್ಮೆ ಓದಿದರೆ ಈ ಮಾತಿನ ಔಚಿತ್ಯ ತಿಳಿಯಬಹುದು. ಇದನ್ನು ಈಗ ಹೀಗೆ ಏಕೆ ಹೇಳಬೇಕಾಗಿದೆ ಎಂದರೆ, ರಾಮಾನುಜನ್ನರ ಅಥವಾ ಇನ್ನುಳಿದ ಉದಯೋನ್ಮುಖ ಕವಿಗಳ ಕಾವ್ಯವನ್ನು ಅಡಿಗರ ಕಾವ್ಯಕ್ಕೆ ಹೋಲಿಸುವುದರಿಂದ ಆ ಕವಿಗಳಿಗೇ ಅಪಚಾರವೆಸಗಿದಂತೆ ಎಂಬುದನ್ನು ಸ್ಪಷ್ಟಪಡಿಸುವುದಕ್ಕೆ ; ಅಡಿಗೋತ್ತರ ಕಾವ್ಯವನ್ನು ಅಲ್ಲಗಳೆಯುವ ದೃಷ್ಟಿಯಿಂದಲ್ಲ. ಇಂತಹ ಹೋಲಿಕೆಗೆ ಕೈಹಾಕಬೇಕಾದರೆ ಉತ್ಸಾಹದ ಆತುರತೆಗಿಂತ ಹೆಚ್ಚಾಗಿ, ವಿಮರ್ಶೆಯ ಎಚ್ಚರ ಬೇಕಾಗುತ್ತದೆ.
ವಿಮರ್ಶೆಗೆ ಪ್ರತಿಕ್ರಿಯೆ-ಎರಡು
ಎರಡು : ಮಾಧವ ಕುಲಕರ್ಣಿ
ಹೊಸ ಸಾಹಿತ್ಯ ಕೃತಿಗಳು ಹೊರಬಂದಾಗ ಅವುಗಳನ್ನು ಬಿಚ್ಚು ಮನಸ್ಸಿನಿಂದ, ಸಹೃದಯತೆಯಿಂದ ನೋಡುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾಗಿ, ಈಗ ಇದ್ದ ಕೃತಿಗಳಿಗಿಂತ ಹೊಸ ಕೃತಿಗಳು ಭಿನ್ನ ಎಂದು ತೋರಿಸುವ ಉತ್ಸಾಹದಲ್ಲಿ, ಹೊಸ ಕೃತಿಗಳಿಗೆ ತನಗೆ ಅರಿವಿಲ್ಲದೆಯೇ ಧಕ್ಕೆ ತರುವದು ಹಾಗೂ ಈ ಮೊದಲು ಇದ್ದ ಕೃತಿಗಳಿಗೆ ಪರೋಕ್ಷವಾಗಿ ಅಪಚಾರ ಬಗೆಯುವದು ಆಗಬಾರದೆಂಬ ಅರಿವು ಸಾಹಿತ್ಯ ವಿಮರ್ಶಕನಿಗೆ ಅಗತ್ಯ. ಬಿ. ಟಿ. ದೇಸಾಯಿಯವರು ‘ಸಾಕ್ಷಿ-೮’ರಲ್ಲಿ ರಾಮಾನುಜನ್‌ರ ‘ಹೊಕ್ಕುಳಲ್ಲಿ ಹೂವಿಲ್ಲ’ ಕವನ ಸಂಗ್ರಹದ ಕುರಿತು ಬರೆದ ಲೇಖನದಲ್ಲಿ ವಿಮರ್ಶಕನಿಗೆ ಅಗತ್ಯವಿರುವ ಈ ಅರಿವು ಅವರಲ್ಲಿ ಕಾಣುವುದಿಲ್ಲ. ದೇಸಾಯಿಯವರ ಈ ಲೇಖನದಲ್ಲಿಯ ಕಾವ್ಯದಲ್ಲಿಯ ಕೆಲವು ಮಾತುಗಳೊಡನೆ ನಾನು ಭಿನ್ನಾಭಿಪ್ರಾಯ ಹೊಂದಿರುವುದೇ ಈ ಲೇಖನ ಬರೆಯಲು ಕಾರಣ.
ದೇಸಾಯಿಯವರು, ಅಡಿಗರ ‘ಪ್ರಾರ್ಥನೆ’ ಕವನದ ಮೊದಲ ಮೂರು ಸಾಲುಗಳಲ್ಲಿ ಕೃತ್ರಿಮತೆಯನ್ನು ಕಾಣುತ್ತಾರೆ. ಯಾಕೆಂದರೆ ‘ಇಂಥ ಭಾಷೆಯನ್ನು ನಾನು, ನೀವು ಸರ್ವಥಾ ಮಾತನಾಡಲಾರೆವು.’ ಒಂದು ಕವನದಲ್ಲಿ ಭಾಷೆಯ ಉಪಯೋಗ ಸೃಜನಾ ತ್ಮಕವಾಗಿ ಆಗಿದೆಯೋ ಇಲ್ಲವೋ ಎಂಬುದನ್ನು ನಾನು ನೀವು ಮಾತನಾಡುವ ಭಾಷೆಯಿಂದ ನಿರ್ಧರಿಸಲಿಕ್ಕಾಗದು. ಕವನದಲ್ಲಿಯ context ಹಾಗೂ ಮೂಡಿಗೆ ಭಾಷೆ ಹಾಗೂ ಲಯಗಳು ಎಷ್ಟರಮಟ್ಟಿಗೆ ಹೊಂದಿಕೊಂಡಿವೆ ಎಂಬುದರ ಮೇಲೆ ಒಂದು ಕವನದ ಯಶಸ್ಸು ಹಾಗೂ ಅದರಲ್ಲಿಯ ಭಾಷೆಯ ಸಾಫಲ್ಯ ಅವಲಂಬಿಸಿವೆಯಲ್ಲದೇ, ಒಂದು ತರದ ಭಾಷೆಯ ಅನಿವಾರ್ಯತೆ ಒಂದು ಕವನಕ್ಕೆ ಎಷ್ಟರ ಮಟ್ಟಿಗೆ ಜರೂರ ಆಗಿದೆ ಎಂಬುದರ ಮೇಲೆಯೇ, ಕವಿಯ ಪ್ರಾಮಾಣಿಕತೆಯನ್ನು ನಿರ್ಧರಿಸಲು ಬರುತ್ತದೆ. ಸೂಕ್ಷ್ಮಬುದ್ಧಿಯ ವಿಮರ್ಶಕ ಭಾಷೆಯ ಅನಿವಾರ್ಯತೆಯನ್ನು ಪರೀಕ್ಷಿಸುತ್ತಾನೆ; ಹಾಗೂ ಅನಿವಾರ್ಯತೆಯನ್ನು ಒಪ್ಪಿಕೊಂಡರೆ ಅದನ್ನು ಆಡುಮಾತು ಎಂದು ಕರೆಯುತ್ತಾನೆ. ಶೇಕ್ಸ್‌ಪಿಯರ್‌ನ ನಾಟಕದ ನಾಯಕರು ವಿಚಾರಿಸುವಾಗ, ತಮ್ಮೊಡನೆ ಸಂವಾದಕ್ಕೊಳಗಾದಾಗ ಉಪಯೋಗಿಸುವ ಭಾಷೆ ಎಲಿಜಾಬೆತನ್ ಕಾಲದಲ್ಲಿ ಪ್ರಚಲಿತವಿದ್ದ ಭಾಷೆಯಲ್ಲ; ಆದರೆ ಆ ನಾಯಕರು ಸಿಲುಕಿದ ದ್ವಂದ್ವ ಹಾಗೂ ನಾಟಕದ context ಆ ತರಹದ ಭಾಷೆಯನ್ನು ಬೇಡುತ್ತದೆ. ಹೀಗಾಗಿ ಆ ತರಹದ ಭಾಷೆ ಅನಿವಾರ್ಯವಾಗುತ್ತದೆ. ಹಾಪ್‌ಕಿನ್ಸನ ಕವನಗಳಲ್ಲಿಯೂ ಇದೇ ಕ್ರಿಯೆ ನಡೆಯುವದರಿಂದ, ಅವನ ಕವನಗಳಲ್ಲಿ ಉಪಯೋಗಿಸಿದ ಭಾಷೆ ಎಷ್ಟೇ ಗ್ರಾಂಥಿಕವೆನ್ನಿಸಿದರೂ, ಕವನಕ್ಕೆ ಹೊರತಾದ ಭಾಷೆ ಎನ್ನಿಸುವುದಿಲ್ಲ. ‘ಪ್ರಾರ್ಥನೆ’ ಕವನದಲ್ಲಿ ಕವನದ ನಾಯಕ ತನ್ನತನವನ್ನು ಸಾರುವ ಧೋರಣೆಯುಳ್ಳವನಾದುದರಿಂದ, ಮೊದಲ ಮೂರು ಸಾಲುಗಳಲ್ಲಿ ಉಪಯೋಗಿಸಿದ ಭಾಷೆ ಅನಿವಾರ್ಯವಾಗುತ್ತದೆ1 ಯಲ್ಲದೇ ‘ಪ್ರಭೂ’ ಎನ್ನುವ ಪದ ಅವನು ನಿಂತಿರುವ ಠೀವಿಯನ್ನು ಸೂಚಿಸುತ್ತದೆ. ದೇಸಾಯಿಯವರು ಅಡಿಗರ ‘ಪ್ರಾರ್ಥನೆ’ ಕವನದ ಮೊದಲ ಮೂರು ಸಾಲುಗಳಿಗೆ ಹೋಲಿಕೆಯಾಗಿ ರಾಮಾನುಜನ್‌ರ ‘ನಲವತ್ತು ನೆರಳು’ ಪದ್ಯದ ಕೊನೆಯ ಭಾಗವನ್ನು ಉದಹರಿಸಿ_ “ಯಾಕೊ” ‘ಈಗ….’ ‘ನೋಡಿ….? ಇಂಥ ಮಾತಿನ ಅಂಶಗಳನ್ನು ಬಳಸಿಕೊಂಡು, ಕವಿ ತನ್ನ ಬಗೆಗೇ ಇರುವ ಅವಿಶ್ವಾಸ, ನಿರರ್ಥಕತೆಯನ್ನು ಸೂಚಿಸುತ್ತಾನೆ”-ಎಂದಿದ್ದಾರೆ. ‘ನಲವತ್ತು ನೆರಳು’ ಪದ್ಯದ ಕೊನೆಯ ಭಾಗದಲ್ಲಿ ‘ನಾವು ನೀವು ಆಡುವ ಮಾತು’ ಉಪಯೋಗಿಸಿದ್ದಲ್ಲ, ಆದರೆ ಕವನ ಕೊನೆಗೆ ಆ ತರಹದ ಭಾಷೆಯನ್ನು ಅನಿವಾರ್ಯವಾಗಿ ಬೇಡುತ್ತದೆ ಎಂಬುದನ್ನು ಆ ಪದ್ಯದ ಸಂಕ್ಷಿಪ್ತ ವಿಶ್ಲೇಷಣೆಯಿಂದ ತೋರಿಸಬಹುದು :
ಕವನದ ಮೊದಲ ಭಾಗದಲ್ಲಿ ಬರುವ ಕವಿಯ ಮನಸ್ಸಿನ ಒಂದು ಭಾಗಕ್ಕೆ :
‘ಒಂದು ಜಾತಿಯ ಕವಿಗೆ
ನೆರಳು ಅಂದರೆ ಪ್ರಾಣ’
ಈ ಕವಿಗೆ ‘ನೆರಳು | ಬೆಳಕು ಅಂದರೆ
instant ಪದ್ಯ’
ಇಲ್ಲಿ ಈ ಮನಸ್ಸಿಗೆ, ತನ್ನಲ್ಲಿರುವ ನೆರಳಿನ ಬಗೆಗೆ ಅರಿವಿಲ್ಲ. ಆದರೆ, ಒಂದು ಜಾತಿಯ
1. ಅಡಿ ಟಿಪ್ಪಣಿಗಳು ಕೊನೆಯಲ್ಲಿ
ಕವಿಗೆ ನೆರಳೆಂದರೆ ಪ್ರಾಣವಾದರೂ, ನೆರಳು | ಬೆಳಕು ಒಟ್ಟಾದಾಗ instant ಪದ್ಯವಾಗುತ್ತದೆ. ಮತ್ತೊಬ್ಬರಲ್ಲಿರುವ ನೆರಳನ್ನು ಕಾಣುವ ಈ ಮನಸ್ಸಿಗೆ, ಆ ನೆರಳಿನ ನೆರಳು ತನ್ನ ಮೇಲಿದೆ ಎಂಬ ಅರಿವಿಲ್ಲ. ಈ ಅರಿವು ಕವನದ ಕೊನೆಯ ಭಾಗದಲ್ಲಿ ಈ ಮನಸ್ಸಿಗೆ ಬರುತ್ತದೆ-ತಲೆಯಿಂದ ಬಿದ್ದ ಕೂದಲಿನ ಜತೆಗೇ ನರೆ ಇಲ್ಲದ ನೆರಳು ಕೆಳಗೆ ಬೀಳುತ್ತದೆ. ಈ ಅರಿವು ಈ ಮನಸ್ಸಿಗೆ ಬರುವುದು ಕವಿಯ ಇನ್ನೊಂದು ಮನಸ್ಸು ಗ್ರಹಿಸುವ ಕೆಲ ಮಾತುಗಳಿಂದ. ಈ ಮಾತುಗಳು ಯಾರವು ಎಂಬ ಬಗ್ಗೆ ಸ್ಪಷ್ಟವಾದ ಸೂಚನೆ ಕವನದಲ್ಲಿರದಿದ್ದರೂ, ಈ ಮಾತುಗಳನ್ನು ಇನ್ನೊಂದು ಮನಸ್ಸು ಹಿಡಿದಿಟ್ಟುಕೊಂಡಿದೆ ಎಂಬುದು ಕವನದಲ್ಲಿ ಸ್ಪಷ್ಟವಾಗುತ್ತದೆ. ಈ ಮಾತುಗಳು ನೆರಳು ಬೆಳಕಿನ ಸಾರ್ಥಕತೆ ನಿರರ್ಥಕತೆ ಹಾಗೂ ಸಾಂಕೇತಿಕತೆಯನ್ನು ಸೂಚಿಸುವದರಿಂದ ಮೊದಲ ಭಾಗದಲ್ಲಿರುವ ಮನಸ್ಸಿನ ಭಾಗಕ್ಕೆ ಕೊನೆಯ ಭಾಗದಲ್ಲಿ ಬೇರೆ ಅರಿವು ಬರುವುದು ಸಾಧ್ಯವಾಗುತ್ತದೆ.
ಭಾಗ ೨ ರಲ್ಲಿ ಕತ್ತೆಯ ಕಿವಿಗಳೆರಡು, ಗೋಡೆಯ ಚರ್ಮವಾದ ‘ಗಾರೆ’ಯ ಮೇಲೆ ಮೂಡಿವೆ-‘ಇದು ನೆರಳು | ಬೆಳಕಿನ
ಪ್ರಾರಬ್ಧ ಕರ್ಮ.’
ಇಲ್ಲಿ ನೆರಳು ಬೆಳಕಿನ ಅನಿವಾರ್ಯವಾದ, ಬದಲಾಯಿಸಲು ಬಾರದ, ಭೌತಿಕ ಕ್ರಿಯೆ ಸೂಚಿತವಾಗಿದೆ. ಇದೇ ಭಾಗದಲ್ಲಿ ಮುಂದೆ, ‘ಗಾಳಿಮಗ್ಗದ ಬಿಳಿಸೀರೆ’ ‘ಕಣ್ಣಿನ ಹಿಂದಿನ ಗುಹ್ಯಕಾಮಕ್ಕೆ’ ‘ಬಿಸಿಲಿನ x-ray’ಯಲ್ಲಿ, ‘ಹೆಣ್ಣು ಗಳ ಕಂಪಾಸುಕಾಲ ಶಿಲ್ಪವನ್ನು’ ತೋರಿಸುತ್ತಿದೆ. ಇಲ್ಲಿ ಬಿಸಿಲು ಸೀರೆಯ ಮೇಲೆ ಬಿದ್ದಾಗ ನೆರಳು ಬೀಳುವದು ಕಣ್ಣ ಹಿಂದೆ. ಕತ್ತೆಯ ಕಿವಿಯ ಮೊದಲ ಚಿತ್ರಕ್ಕಿಂತ ಈ ಚಿತ್ರ ಹೆಚ್ಚು ಗಹನ ; ಕತ್ತೆಯ ಕಿವಿಯ ನೆರಳಿನ ಅಸ್ತಿತ್ವ ಭೌತಿಕವಾದ ಗಾರೆಯ ಗೋಡೆಯ ಮೇಲಾದರೆ, ಎರಡನೆಯ ಚಿತ್ರದಲ್ಲಿ ‘ಹೆಣ್ಣು ಗಳ ಕಂಪಾಸುಕಾಲದ ಶಿಲ್ಪ’ದ ನೆರಳು ಕಣ್ಣ ಹಿಂದೆ ಬೀಳುತ್ತದೆ. ಮುಟ್ಟಲು ಬಾರದ ಈ ಎರಡನೆಯ ನೆರಳಿಗೆ ಇನ್ನೊಂದು ಅಸ್ತಿತ್ವ ಕವಿಯ ಕವನದಲ್ಲಿ.
ಮೂರನೆಯ ಭಾಗದಲ್ಲಿ ‘ಕೆಂಡಸಂಪಿಗೆ” ಹಾಗೂ ‘ಮುಗಿಲ ಕೆಂಪಿನ’ ನಡುವೆ ಮೋಡವೇ ಗೋಡೆಯಾಗಿದೆ. ಮುಗಿಲ ಕೆಂಪು ಬೆಳಕು ಈಗ ಭೂಮಿಯನ್ನು ಮುಟ್ಟಲಾರದು, ಹೀಗಾಗಿ ‘ಗೂಳಿ’ ಬಿರುಕು ಬಾಡಿಯ ಕಾರು’ ‘ಕೊಳೆ ನೀರು ಯಾವುದಾದರನ್ನೂ ಆ ಮೋಡಕ್ಕೆ ‘ತೆರೆ’ಯಬಹುದು. ಬೆಳಕು ತಬ್ಬಲಾರದ್ದರಿಂದ ಇವುಗಳಿಗೆ ಈಗ ನೆರಳೇ ಇಲ್ಲ. ಆದರೆ ವಸ್ತು ನೆರಳನ್ನು ಕಳೆದುಕೊಳ್ಳುವ ರೀತಿ ಇದಲ್ಲ. (ನೆರಳು ರಹಿತವಾಗಿರುವ ಈ ವಸ್ತುಗಳನ್ನು ಗ್ರಹಿಸುವದು ಸತ್ಯದ ಗ್ರಹಿಕೆಯಲ್ಲವೆಂಬುದು ಮುಂದೆ ಸ್ಪಷ್ಟವಾಗುತ್ತದೆ.)
ಭಾಗ ೪ ರಲ್ಲಿ
ಸೋಫಿಯಾ ಚರ್ಚೆಗೆ ನಲವತ್ತು
ಕಿಟಕಿ,
ನಲವತ್ತು ಕಿಟಕಿಯಿಂದ ನಲವತ್ತು
ದಿಕ್ಕು, ನಲವತ್ತು ಬೆಳಕು.
ಒಳಗೆ ಬಂದ ಗಂಡು ಹೆಣ್ಣು ಯಾರಿಗೂ
ನಲವತ್ತು ನೆರಳು.
ಇಲ್ಲಿ ಬರುವ ಜನರಿಗೆಲ್ಲ ತಮ್ಮದೇ ಆದ ಸ್ವಂತ ನೆರಳಿದೆ. ‘ದೇವರನ್ನು ದಿಂಡರಾಗಿಸುವ’ ಇಲ್ಲಿಯ ಚಕ್ರಾಕಾರದ ಕುಸುರಿನ ಕಾಜು, ಬಿಳಿಬಣ್ಣ ಒಳಗೊಂಡಿರುವ ಏಳು ಬಣ್ಣಗಳನ್ನು ತೋರಿಸುವುದಕ್ಕೆ ‘ನಿಮಿತ್ತ’. ಸೋಫಿಯಾ ಚರ್ಚು ಇಲ್ಲಿ ಬೆಳಕಿನ ಎರಡು ಉಪಯೋಗಕ್ಕೆ ಸಂಕೇತವಾಗಿ ನಿಲ್ಲುತ್ತದೆ. ಈ ಚರ್ಚಿಗೆ ನಲವತ್ತು ಕಿಟಕಿಗಳಿರುವದರಿಂದ ಬರುವ ಜನರ ಸ್ವಂತ ನೆರಳನ್ನು ಬೆಳಕು ಇಲ್ಲಿ ತೋರಿಸುತ್ತದೆ; ಇದೇ ಬೆಳಕಿನ ಎಲ್ಲ ಅಂಶಗಳನ್ನು ಹೊರಗೆಡಹುವ ಗಾಜೂ ಸೋಫಿಯಾ ಚರ್ಚಿನಲ್ಲಿದೆ. ಈ ಗಾಜು ಇಲ್ಲಿ ಬರುವ ಜನರಿಗೆ ಏಳು ಬಣ್ಣದ ಕಣ್ಣನೊದಗಿಸುತ್ತದೆ: ಬೆಳಕು ಬೆಳಕಾಗಿ ಉಳಿಯದೆ ಬೆಳಕಿನ ಎಲ್ಲ ಸ್ತರಗಳ ಅರಿವನ್ನು ಗಾಜು ಇಲ್ಲಿ ಬರುವ ಜನರಿಗೆ ನೀಡುತ್ತದೆ. ಆದರೆ-‘ನಮ್ಮ ಹನುಮಂತನ ಗುಡಿಯೊಳಗೆ ಕಿಟಕಿಯೇ ಇಲ್ಲ’; ಹೀಗಾಗಿ ಹೊರಗಿನ ಬೆಳಕಿನಿಂದ ಜನ ನೆರಳು ಪಡೆಯುವ ಪ್ರಶ್ನೆಯೇ ಇಲ್ಲ. ಪೂಜಾರಿ ಕರ್ಪೂರಾರತಿ ಕೈಯಲ್ಲಿ ಹಿಡಿದು ಸುತ್ತುವಾಗಲೇ ಇಲ್ಲಿಯ ಜನರ ನೆರಳು-
ಕಲ್ಲುಗೋಡೆ ಕಲ್ಲುಕಂಬ
ಕೋರೆಹಲ್ಲು ದ್ವಾರಪಾಲಕರ ಮೇಲೆ ಕೆಳಗೆ ಸುತ್ತಸುತ್ತ
ಗಿರಿಗಿಟ್ಟಲೆ ತಿರುಗುತ್ತದೆ.
ಇಲ್ಲಿಯ ಜನರ ನೆರಳು ಪೂಜಾರಿಯ ಕರ್ಪೂರಾರತಿಯ ಮೇಲೆ ಅವಲಂಬನವಾದರೆ ಸೊಫಿಯಾ ಚರ್ಚಿನ ಜನರ ನೆರಳು ನಲವತ್ತು ಕಿಟಕಿಗಳಿಂದ ಬರುವ ಬೆಳಕಿನ ಮೇಲೆ ಅವಲಂಬಿಸಿದೆ. ಆರತಿ ಮುಗಿದ ಮೇಲೆ ಉಳಿಯುವುದು ನಂದಾದೀಪ ಒಂದೇ, ಆಗ :
‘……………..ನಲವತ್ತು
ಜನರಿಗೆ ನಲವತ್ತು ತಲೆಯ ಒಂದೇ ನೆರಳು.’
ಕವನ ಈ ಭಾಗದಲ್ಲಿ ಸಾರ್ಥಕತೆಯನ್ನು ಪಡೆಯುವುದಕ್ಕೆ ಒಂದು ಮುಖ್ಯಕಾರಣವೆಂದರೆ : ಎರಡು ಜನಾಂಗಗಳ ನಂಬಿಕೆಯನ್ನು ಹೋಲಿಸಿ ಕವಿ ತನ್ನ ಜನಾಂಗದ ನಂಬಿಕೆಯ ಬಗೆಗೆ ತನಗಿರಬಹುದಾದ ರೋಷದ ಸೊಡರು ಕವನದಲ್ಲಿ ಸೇರುವದಕ್ಕೆ ಎಡೆಬಿಡದೇ ಒಂದರ ಸಾರ್ಥಕತೆ ಹಾಗೂ ಇನ್ನೊಂದರ ನಿರರ್ಥಕತೆಯನ್ನು ನಿರ್ಧರಿಸಲು ಓದುಗನಿಗೆ ಸ್ವಾತಂತ್ರ್ಯವನ್ನು ಕೊಡುತ್ತಾನೆ.
ಎರಡನೆಯ ಭಾಗದಲ್ಲಿ ನೆರಳು-ಬೆಳಕಿನ ಭೌತಿಕ ಹಾಗೂ ವಸ್ತುವಿನ ಮೇಲೆ ಬೆಳಕು ಬಿದ್ದಾಗ ಆ ವಸ್ತುವಿನೊಡನೆ ಹೊಂದಿಕೊಂಡ ಮುಟ್ಟಲು ಬಾರದ, ನೋಡಲು ಬಾರದ ನೆರಳೊಂದು ಕಣ್ಣ ಹಿಂದೆ ನೋಡುವ ಕ್ರಿಯೆಗಳು ಚಿತ್ರಿಸಲ್ಪಟ್ಟಿವೆ. ಮೂರನೆಯ ಭಾಗದಲ್ಲಿ ಬೆಳಕಿಲ್ಲದಾಗ ನೆರಳಿಲ್ಲವೆಂಬುದು ಗೊತ್ತಾದರೂ, ಬೆಳಕಿಲ್ಲದಾಗ ಏನು ‘ತೆರೆ’ದರೂ ಅಷ್ಟೇ ಎಂಬ ಧ್ವನಿಯೂ ಆ ಭಾಗದಲ್ಲಿದೆ. ಇವೆಲ್ಲವುಗಳ ಮುಂದಿನ ಮಜಲು ನಾಲ್ಕನೆಯ ಭಾಗದಲ್ಲಿ ಸೂಚಿತವಾಗಿದೆ ; ಅಂದರೆ : ನೆರಳು-ಬೆಳಕುಗಳ ಸಾರ್ಥಕತೆ ಹಾಗೂ ನಿರರ್ಥಕತೆಯನ್ನು ಸೂಚಿಸಲಾಗಿದೆ.
ಭಾಗ ೫ರಲ್ಲಿ ಬೆಳಕು ಕೊಡುವ ಸೂರ್ಯ ಹಾಗೂ ಬೆಳಕು ತೆಗೆದುಕೊಳ್ಳುವ ಭೂಮಿ, ಒಂದಕ್ಕೊಂದು ‘ಹಲ್ಲು ಮಿಲಾಯಿಸುವ ಚಕ್ರಗಳು.’ ಇವು ಎದುರು ಬದುರು ಚಕ್ರಗಳಾದಾಗ ಭೂಮಿಯ ನೆರಳನ್ನು ಹಿಡಿಯಲು ಒಂದು ಗಾತ್ರ (dimension)ಬೇಕು. ಅದಕ್ಕೇ-‘ನೆರಳ ನಡೆ ಇಲ್ಲಿ ಕಾಲದ ಹೆಜ್ಜೆ.’ ಆಗ, ಹೊರ ಜಗತ್ತಿನಲ್ಲಿ ನಡೆಯುವದೆಲ್ಲ ಧ್ವನಿವರ್ಜವಾಗಿಸಿಕೊಂಡು ದೃಷ್ಟಿಗೋಚರ ಮಾತ್ರ :
‘ಈ ಭಾನುವಾರದ ಕುದುರೆರೇಸಿನ ನಿರಂತರ ನಿಶ್ಯಬ್ದ.’
ಈಗ ಕವನದಲ್ಲಿ ನೆರಳು ಬೆಳಕಿನ ಸಂಬಂಧ ಹಾಗೂ ತಾದಾತ್ಮ್ಯವನ್ನು ಒಟ್ಟು ಮೂರು ವಿವಿಧ ಹಂತಗಳಲ್ಲಿ ತೋರಿಸಿದ್ದು ಗೊತ್ತಾಗುತ್ತದೆ.
ಒಂದು : ಬೆಳಕು ಹಾಗೂ ನೆರಳು ಒಂದು ಕ್ರಿಯೆ (ಭಾಗ ೨)
ಎರಡು : ಹೊರಗಿನ ಬೆಳಕಿಲ್ಲದೆ ವ್ಯಕ್ತಿಗೆ ಸ್ವಂತ ನೆರಳಿಲ್ಲ (ಭಾಗ ೪)
ಮೂರು: ಬೆಳಕು ನೆರಳು ವ್ಯಕ್ತಿಯ ಮನಸ್ಸಿನ ಒಳತೋಟಿಗೆ ಸಂಬಂಧಿಸಿದಂತೆ.
ಮೂರನೆಯ ಮಜಲಿಗೆ ಮುಂದಿನ ಸಾಲುಗಳು ವಿವರಣೆ ನೀಡುತ್ತವೆ :
‘ಗೋಡೆಗೆ ಕಂಬಕ್ಕೆ ಕಮಾನಿಗೆ ನೆತ್ತಿಯಿಂದ ನೆರಳು ವಾಲಿ ಇಳಿದು, ನೆಲದ ಮೇಲೆ ಅಂಗಾತಬಿದ್ದು ಬೆಳೆದು……..?’
ಈಗ ಕಾಲಡಿಯಲ್ಲಿ ಹೊಸ ಹುಲ್ಲು, ಆದರೆ ಬೆಳೆಯುವ ನೆರಳಿನಿಂದ ‘ಕಾಲ್ಬೆರಳ ನಡುವೆ ಆಳೆತ್ತರದ ಮುದಿಹಳದಿ ಜೊಂಡು.’
ಸ್ವಂತ ನೆರಳಿಲ್ಲದ ಜನರಿರುವ ಹನುಮಂತದೇವರ ಗುಡಿ ಇರುವ, ಸೊಫಿಯಾ ಚರ್ಚಿನಂತಹ ಸ್ಥಳವಿರದ ದೇಶದಲ್ಲಿಯೇ, ದೆಹಲಿಯ ಜಂತರ ಮಂತರಿನಲ್ಲಿ ‘ನೆರಳ ನಡೆ ಕಾಲದ ಹೆಜ್ಜೆಯಾಗಬಹುದಾದ’ ಸಾಧ್ಯತೆ ಸಾಧ್ಯವಾಗಿದೆ ಎಂಬುದನ್ನು ಈ ಭಾಗ ಫಕ್ಕನೇ ಓದುಗನಲ್ಲಿ ಮೂಡಿಸುತ್ತದೆ (ಇದು ಈ ದೇಶದಲ್ಲಿರುವ ದ್ವಂದ್ವದ ಸೂಚನೆ ಎಂದು ಪರಿಗಣಿಸಿಬಿಡುವದು, ಕವನವನ್ನು ಸರಳೀಕರಣ ಮಾಡಿದಂತಾಗುತ್ತದೆ ಎಂಬುದನ್ನು ಲಕ್ಷಿಸಬೇಕು.)
ಈ ಹಂತವನ್ನು ತಲುಪಿದನಂತರ, ಭಾಗ ೬ ರಲ್ಲಿ :
ಆಕಾಶವನ್ನೆ ಝಮ್ಮಂತ ದಾಟಿ
ಹೊರಟಿದೆ
ತನ್ನ ಅವತಾರದಗತ್ಯವನು ಹುಡುಕಿ
ಅನಂಗದ ಲಹರಿ
ಈ ಲಹರಿಯನ್ನು ತಡೆದರೆ ‘ಬೆಳಕಿನ ಆವಾಹನೆ’ ಹಾಗೂ ಯಾವುದು ತಡೆಯುತ್ತದೆಯೋ ಅದರ ತೊಡೆಯಿಂದಲೇ ನೆರಳು ಹೊರಬರುತ್ತದೆ : ಬೆಳಕು ಬೆಳಕಾಗಿ ಉಳಿಯುತ್ತದೆ.
ಈ ಲಹರಿ,
ಮಣ್ಣಿನ ಕೊಳಕು ಮಂಡಲ
ತಡೆದಿಟ್ಟು ತಂದಿದೆ
ಸೂರ್ಯಶಾಖದ ಗುಪ್ತಚಂದ್ರಿಕೆಯನ್ನು.
ಹಾಗೂ ‘ತಿಂಗಳುದ್ದದ’ ‘ಪಕ್ಷಪಾತದ ತಿದಿ’ಗಳನ್ನು ರಚಿಸುತ್ತಿದೆ. ಈಗ ಲಹರಿಗೆ ‘ಚಂದ್ರಕ್ಷೇತ್ರವೇ ನಿಮಿತ್ತ’ ಎಂಬ ಮುಂದಿನ ಮಾತು ಸೋಫಿಯಾ ಚರ್ಚಿನಲ್ಲಿ ಗಾಜು ಬೆಳಕಿನ ಸಪ್ತವರ್ಣಗಳನ್ನು ತೋರಿಸಲು ನಿಮಿತ್ತವಾಗಿರುವದನ್ನು ನೆನಪಿಗೆ ತರುತ್ತದೆ. ಆದರೆ ಈ ‘ಚಂದ್ರಕ್ಷೇತ್ರದ ನಿಮಿತ್ತ’ (ಸೂರ್ಯನಿಂದ ಬೆಳಕು ಪಡೆದು, ಸಪ್ತವರ್ಣಗಳನ್ನು ಏರಿದ ಬೆಳಕಿನ ಮತ್ತೊಂದು ಪರಿಯನ್ನು ಚಂದ್ರ ಭೂಮಿಗೆ ಬೀರುತ್ತಾನೆ) ‘ಲಕ್ಷಾಂತರ ಯೋಜನೆಯ ಪರೆಬಿಟ್ಟ ರಾಹುಸರ್ಪದ ಬಾಲಕ್ಕೆ’ ‘ಹುತ್ತ’ವೂ ಹೌದು, ಮನಸ್ಸಿನ ಎರಡನೆಯ ಭಾಗ ಇಷ್ಟೆಲ್ಲ ಉಸುರಿದ ಮೇಲೆ, ಮೊದಲ ಭಾಗದಲ್ಲಿ ಬರುವ ಮನಸ್ಸು ಕೊನೆಯ ಭಾಗದಲ್ಲಿ ಹೇಳುತ್ತದೆ :
ಇದೆಲ್ಲ ಯಾಕೋ ಹೆಚ್ಚಾಯಿತು
ಮಾತು
ಈಗ ತಲೆಯಿಂದ ಬಿದ್ದ ಕೂದಲಿನ ಜತೆಗೇ
ಬಿತ್ತು
ನೋಡಿ
ನರೆ ಇಲ್ಲದ ಮರಿನೆರಳು.
ಇದೆಲ್ಲ ಮಾತು ಯಾಕೋ ಹೆಚ್ಚಾಯಿತು ಎನ್ನಬೇಕಾದರೆ, ಈ ಮನಸ್ಸಿಗೆ ನೆರಳಿನ ಬೆಲೆ realised factor ಆಗಿಬಿಟ್ಟಿದೆಯಲ್ಲದೇ ಅದನ್ನು ಮಾತಿನಲ್ಲಿ ಹೇಳುವದು ಅಸಾಧ್ಯ ಎಂಬ ಅರಿವೂ ಇದೆ. ಅದಕ್ಕೆ ಇನ್ನೂ ಬೆಳೆಯದೇ ಇದ್ದ ನೆರಳೊಂದು (ನರೆ ಇಲ್ಲದ ಮರಿನೆರಳು) ಹೊರಹೋಯಿತೆಂದು ಹೇಳಬೇಕಾದರೂ ನೇರವಾಗಿ ಹೇಳುವದು ಸಾಧ್ಯವಾಗದೇ-‘ಈಗ ತಲೆಯಿಂದ ಬಿದ್ದ ಕೂದಲಿನ ಜತೆಗೇ, ಎಂಬ ಮಾತು ಕೊನೆಯ ಭಾಗದಲ್ಲಿ ಅನಿವಾರ್ಯವಾಗುತ್ತದೆ. ಅಂದರೆ ಕೊನೆಯ ಭಾಗದಲ್ಲಿ ಬಂದಿರುವ ಮಾತುಗಳನ್ನು ಉದ್ದೇಶಪೂರ್ವಕವಾಗಿ ಬಳಸಿಕೊಂಡಿರುವದಿಲ್ಲವಷ್ಟೇ ಅಲ್ಲ, ಮನಸ್ಸಿನ ಎರಡನೆಯ ಭಾಗದ ಮಾತುಗಳು ಮುಗಿದ ನಂತರ ಈ ಮಾತುಗಳು ಕವನದ ಮೂಡಿಗೆ (ಮೊದಲ ಮನಸ್ಸಿನ ಸ್ಥಿತಿಗೆ) ಅನಿವಾರ್ಯವಾಗುತ್ತವೆ ; ಅದಕ್ಕೇ ಈ ಮಾತುಗಳು ಆಡುಮಾತಿಗೆ ಸಮೀಪ. ಅಡಿಗರ ಕವನದ ಒಂದು ಭಾಗವನ್ನು ಈ ಕವನದ ಕೊನೆಯ ಭಾಗಕ್ಕೆ ಹೋಲಿಸಿ ಅಡಿಗರ ಕವನದ ಭಾಷೆಯಲ್ಲಿ ಕೃತ್ರಿಮತೆ ಕಾಣುವದಕ್ಕಿಂತ, ‘ಪ್ರಾರ್ಥನೆ’ ಕವನವನ್ನು ವಿಶ್ಲೇಷಿಸಿ, ಆ ಕೃತ್ರಿಮತೆ ಎಂತಹದೆಂಬುದನ್ನು ತೋರಿಸಿದರೆ ವಿಮರ್ಶೆ ಸಾರ್ಥಕವಾದೀತು.
ಬಿ. ಟಿ. ದೇಸಾಯಿಯವರು ತಮ್ಮ ಲೇಖನದಲ್ಲಿ ಮುಂದೆ ಈ ಮಾತನ್ನು ಹೇಳುತ್ತಾರೆ -ಒಂದು ಬಗೆಯ ಪದ್ಯವನ್ನು ಓದುವಾಗ ಇನ್ನೊಂದು ಬಗೆಯ ಪದ್ಯಕ್ಕೆ ಅನ್ವಯಿಸುವ ಮೌಲ್ಯನಿರ್ದೆಶನಗಳನ್ನು ತರಬಾರದು’ -ಎಂದು. ಪದ್ಯಗಳನ್ನು ಕುರಿತು ಈ ರೀತಿಯ ಹೇಳಿಕೆಗಳನ್ನು ನೀಡಿದಾಗ ವಾದದ ಮಟ್ಟದಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಬಹುದಾದರೂ, ಎರಡು ಬೇರೆ ಬೇರೆ ಉದಾಹರಣೆಗಳನ್ನು ತೆಗೆದುಕೊಂಡು ಈ ಹೇಳಿಕೆಯನ್ನು ಪರೀಕ್ಷಿಸಬಹುದು. ವರ್ಡ್ಸ್‌ವರ್ಥ್ ಕವಿಯ ಡೆಫೋಡಿಲ್ ಕವನ ಹಾಗೂ ಅಡಿಗರ ‘ಭೂತ’ ಕವನಗಳನ್ನು ನೋಡಬಹುದು (ವರ್ಡ್ಸ್‌ವರ್ಥ ಹಾಗೂ ಅಡಿಗರ ನಡುವೆ ಇರುವ ಭೇದ ರಾಮಾನುಜನ್ ಹಾಗೂ ಅಡಿಗರ ನಡುವೆ ಇರುವ ಭೇದಕ್ಕಿಂತ ಹೆಚ್ಚು ವಿಸ್ತಾರವಾದದ್ದು). ಒಂದು ಕವನ ಕವಿಯ ಅನುಭವದ ಪುನರ್‌ನಿರ್ಮಿತಿ. (‘ಅನುಭವದ ಅರ್ಥಪೂರ್ಣ ಅಭಿವ್ಯಕ್ತಿ’ 2 ಎಂದು ಇದಕ್ಕೆ ಅರ್ಥ ವಲ್ಲ.) ಡೆಫೊಡಿಲ್ ಕವನದಲ್ಲಿ ನೋಡುವದೇ ಒಂದು ಅನುಭವ. ಈ ಅನುಭವ ತನಗೆ ಯಾವ ಯಾವ ಹಂತಗಳಲ್ಲಿ, ಯಾವ ರೀತಿಯಲ್ಲಾಯಿತೆಂಬುದನ್ನು ಕವಿ ಕವನದಲ್ಲಿ ನಿರ್ಮಿಸಿರುವದರಿಂದಲೇ ಕವನ ಈಗಿರುವ ಸ್ಥಿತಿಯನ್ನು ತಲುಪಿದೆ. ಈ ನೋಡುವ ಅನುಭವ ಅತಿ ಕಡಿಮೆ ಸಮಯದ್ದಾಗಿದ್ದರೂ, ಕವಿ ಮೊದಲು ನೋಡುವದು ಡೆಫೊಡಿಲ್ ಹೂವಿನ ಬಣ್ಣವನ್ನು ನಂತರ ಅವುಗಳ ಅಲುಗಾಟವನ್ನು (dancing and fluttering), ಆಮೇಲೆ ಅವುಗಳ ಸಂಖ್ಯೆ ಲಕ್ಷ್ಯಕ್ಕೆ ಬರುತ್ತದೆ (thousands together). ಒಂದು ಕ್ಷಣ ಡೆಫೊಡಿಲ್ ಹೂವುಗಳನ್ನು ನೋಡಿದ ಅನುಭವವನ್ನು, ಅನುಭವ ತಾನು ಗ್ರಹಿಸಿದ ರೀತಿಯಲ್ಲೇ ನಿರ್ಮಿಸಲು ಕವಿ ಸಮರ್ಥನಾಗಿರುವದರಿಂದ ಇಂದು ಕವನ ನಮಗೆ ಮಹತ್ವದ್ದಾಗಿದೆ. ಇನ್ನು ಅಡಿಗರ ‘ಭೂತ’ ಕವನದಲ್ಲಿ ಕವಿ ‘ಗುಡಿಗೋಪುರ ಬಂಗಾರ ಶಿಖರ’ಗಳತ್ತ ತೋರಿಸಬೇಕಾದರೆ, ಕವಿಯ ಅಂತರಂಗದಲ್ಲಿ ನಡೆದ ಕ್ರಿಯೆ ಯಾವ ರೀತಿಯದಾಗಿತ್ತೆಂಬುದನ್ನು ತೋರಿಸಲು ಉಪಯೋಗಿಸಿದ ಪ್ರತಿಮೆಗಳು. ಅವುಗಳ ನಡುವೆ ಏರ್ಪಟ್ಟ ಸಾವಯವ ಸಂಬಂಧ ಹಾಗೂ ಅನುಭವವನ್ನು ಇವೆಲ್ಲವುಗಳ ಮೂಲಕ ತಾನು ಪಡೆದ ರೀತಿಯಲ್ಲಿಯೇ ನಿರ್ಮಿಸುವದು-ಎಲ್ಲ ಮಹತ್ವದವಾಗಿ, ನಮ್ಮಲ್ಲಿ ಅಮೂರ್ತವಾಗಿರುವದನ್ನು ಮೂರ್ತವಾಗಿಸುವ ಶಕ್ತಿ ಪಡೆದು ಕವನ ಮಹತ್ವದ್ದಾಗುತ್ತದೆ.3
ಯಾವುದೇ ಕವನವನ್ನು ಓದುವಾಗ ಈ ಮೇಲೆ ವಿವರಿಸಿದ ಕಾವ್ಯದ ಈ ಮಹತ್ವದ ಪ್ರಾಥಮಿಕ ಕ್ರಿಯೆಯನ್ನು ಲಕ್ಷದಲ್ಲಿಟ್ಟುಕೊಳ್ಳದೇ ಓದಿದರೆ, ಅದು ಓದುವದಕ್ಕೆಂದೇ ಓದಿದ ಹಾಗಾಗುತ್ತದೆ, ಆರತಿ ಪದ್ಯಗಳನ್ನು ಹಾಡಿದ ಹಾಗಾಗುತ್ತದೆ. ರಾಮಾನುಜನ್ ಕವನಗಳನ್ನು ಕೂಡ ಅನುಭವದ ಪುನರ್‌ನಿರ್ಮಿತಿ ಎಂದುಕೊಂಡು ಓದುವದರಿಂದಲೇ ಆ ಕವನದ ಅರ್ಥದ ಹೊಳಹುಗಳು ಗಮನಕ್ಕೆ ಬರುವವಲ್ಲದೇ ಕವನದ ಸಾರ್ಥಕ್ಯ ಸ್ಪಷ್ಟವಾಗಬಹುದು.
‘ನಲವತ್ತು ನೆರಳು’ ಸದ್ಯದ ಕನ್ನಡ ಕಾವ್ಯಕ್ಕೆ ಬಹುದೊಡ್ಡ ಕಾಣಿಕೆ ಎಂದು ನಂಬಿದ ಬಿ. ಟಿ. ದೇಸಾಯಿಯವರು ತಮ್ಮ ಲೇಖನದಲ್ಲಿ ವಿಶ್ಲೇಷಿಸಿದ ಕವನ ‘ತಾತ ಕೂತಿದ್ದ’ ಎಂಬುದು ! ಆದರೆ ಆಡುಮಾತಿನ ಉದಾಹರಣೆಗೆ ಮಾತ್ರ ‘ನಲವತ್ತು ನೆರಳು’ ಪದ್ಯದ
2. 3. ಅಡಿ ಟಿಪ್ಪಣಿಗಳು ಕೊನೆಯಲ್ಲಿ
ಕೊನೆಯ ಭಾಗವನ್ನು ಸದ್ಯದಿಂದ ಬೇರ್ಪಡಿಸಿ ತೋರಿಸಿದ್ದಾರೆ !! ‘ತಾತ ಕೂತಿದ್ದ’ ಎಂಬ ಕವನವನ್ನು ವಿಶ್ಲೇಷಿಸಿ ಕವನದ ವಿಶ್ಲೇಷಣೆಯಲ್ಲಿ ನಂಬಿಕೆ ತೋರಿಸಿದ ಬಿ. ಟಿ. ದೇಸಾಯಿಯವರು ಪದ್ಯವನ್ನು ‘ಸವಿಯ ಬಲ್ಲರು’. ತಮ್ಮ ಲೇಖನದ ಕೊನೆಯ ಭಾಗದಲ್ಲಿ ಅವರು ಈ ರೀತಿ ಹೇಳುತ್ತಾರೆ : ‘ರಾಮಕೃಷ್ಣ, ಬುದ್ಧ, ಗಾಂಧಿ, ನೆಹರೂರ ಕೂಡ ಹೊಡೆದಾಡಿ, ಒದರಾಡುವ ಕವಿಗಳೇ ಹೆಚ್ಚು. ಉದಾಹರಣೆಗೆ ಅಡಿಗರೇ ಇದ್ದಾರಲ್ಲ !’ ಎಂದು. ಅಡಿಗರ ‘ನೆಹರೂ ನಿವೃತ್ತರಾಗುವದಿಲ್ಲ’ವೆನ್ನುಂತಹ ಕವನ ಈ ವಿಮರ್ಶಕನಿಗೆ ಕೇವಲ ಒದರಾಟವಾಗಿ ಕಂಡಿರುವದು, ಕವನದಲ್ಲಿ ಭಾಷೆಯ ಉಪಯೋಗದ ಬಗ್ಗೆ ಇವರಿಗಿರುವ ದಡ್ಡು ಸಂವೇದನೆಯತ್ತ ನಮ್ಮ ಲಕ್ಷವನ್ನು ಸೆಳೆಯುತ್ತದಲ್ಲದೇ, ರಾಮಾನುಜನ್ ಅವರ ಸರೀಕದ ಬರೆಯುತ್ತಿರುವವರಲ್ಲಿ ಹೇಗೆ ಭಿನ್ನ ಎಂಬುದನ್ನು ತೋರಿಸುವ ಬದಲು (ಹೊಸಕೃತಿ ಬಂದಾಗ ವಿಮರ್ಶೆ ಮುಖ್ಯವಾಗಿ ಮಾಡಬೇಕಾದ ಕೆಲಸ ಇದು) ಅಡಿಗರಿಗಿಂತ ಭಿನ್ನ ಎಂದು ತೋರಿಸುವ ವಿಫಲ ಪ್ರಯತ್ನ ಯಾಕೆ ಮಾಡಿದ್ದಾರೋ ತಿಳಿಯುವದಿಲ್ಲ. ಕಂಬಾರರ ‘ತಕರಾರಿನವರು’ ಮುನ್ನುಡಿಯಲ್ಲಿಯೂ ಬಿ. ಟಿ. ದೇಸಾಯಿಯವರು ಇದೇ ಧೋರಣೆ ತಳೆದಿರುವದರಿಂದ, ಈ ಧೋರಣೆಯೊಡನೆ ಭಿನ್ನಾಭಿಪ್ರಾಯ ಹೊಂದಿದವರು ಅದನ್ನು ಪ್ರಶ್ನಿಸುವದು ಹೇಗೆ ಅಗತ್ಯವೋ, ಹೊಸದಾಗಿ ಬರೆಯುತ್ತಿರುವವರು ಇಂಥ ಧೋರಣೆಯ ಅಪಾಯವನ್ನು (ಎಲ್ಲ ಧೋರಣೆಗಳಿಗೆ ಕಲ್ಯಾಣಕಾರಿ ಮುಖವಿದ್ದಂತೆ ಅಪಾಯದ ಹೊಳಹು ಇರುತ್ತದೆಂಬುದನ್ನು ನಂಬಿ ಈ ಮಾತನ್ನು ಹೇಳುತ್ತಿದ್ದೇನೆ) ಅರಿತಿರುವದು ಅಷ್ಟೇ ಅವಶ್ಯ.
1. 2. ಪಾ. ಲ. ಸುಬ್ರಹ್ಮಣ್ಯ ಅವರು ‘ಪ್ರಜ್ಞೆ-೩’ರಲ್ಲಿ ಬರೆದಿರುವ ‘ಪ್ರಾರ್ಥನೆ’ ವಿಶ್ಲೇಷಣೆ ಹಾಗೂ ‘ಸಂವೇದನೆ’ಯಲ್ಲಿ ಪ್ರಕಟವಾಗಿರುವ ಆವರ ‘ಭೂತ’ ಕವನದ ವಿಶ್ಲೇಷಣೆಯನ್ನು ನೋಡಿದರೆ, ಅಡಿಗರ ಕವನಗಳಲ್ಲಿ ಉಪಯೋಗವಾದ ಭಾಷೆಯ ಬಗ್ಗೆ ಸ್ಪಷ್ಟತೆ ಬರಬಹುದು.
3. ಮೇ ೧೭ ರ ಪ್ರಜಾಮತದಲ್ಲಿ ಡಾ|| ಶಾಂತಿನಾಥ ದೇಸಾಯಿಯವರು ‘ಹೊಕ್ಕುಳಲ್ಲಿಹೂವಿಲ್ಲ’ ಕುರಿತು ಬರೆಯುತ್ತ ‘… ಅನುಭವದ ಅರ್ಥಪೂರ್ಣ ಅಭಿವ್ಯಕ್ತಿ ಎಂಬ ಚಿರಪರಿಚಿತ ವ್ಯಾಖ್ಯೆಗಳು ರಾಮಾನುಜನ್‌ರ ಕಾವ್ಯಕ್ಕೆ ಅನ್ವಯಿಸಲಾರದು’ ಎಂದಿದ್ದಾರೆ. ನಾನು ಅನುಭವದ ಪುನರ್ನಿರ್ಮಿತಿ ಎಂದು ಹೇಳಿದ್ದು ಅರ್ಥಪೂರ್ಣ ಅಭಿವ್ಯಕ್ತಿ ಎಂಬ ಅರ್ಥದಲ್ಲಲ್ಲ ಎಂದು ತಿಳಿಸುವುದಕ್ಕಷ್ಟೇ ಈ ಟಿಪ್ಪಣಿ ಕೊಡಲಾಗಿದೆ.
ಪರಿಮಳ
ಪರಿಮಳ
ಸಿದ್ಧಲಿಂಗ ಪಟ್ಟಣಶೆಟ್ಟಿ
ನೆನಪಿದೆ ಪರಿಮಳ. ನನ್ನ ಚುಟ್ಟಾ ಅಂಗಡಿಯಲ್ಲಿ
ಕುಳಿತು ಈ ಊರ ಆಕಳಿಸುವ ಬೆಳದಿಂಗಳ
ನರಳುತ್ತ ಮೈಮುರಿವ ಬೆಳಗು, ಮಧ್ಯಾಹ್ನ
ಲಟಕೆ ಹೊಡೆಯುತ್ತ ಎದ್ದು ನಿಂತದ್ದು ನೆನಪಿದೆ.
ಮಧ್ಯಾಹ್ನ ಇಲ್ಲ ರಾತ್ರಿ ಹತ್ತರ ಹೊತ್ತು ನನ್ನ
ಅಂಗಡಿಯ ಹಿಂದುಗಡೆ ಹಾದು ಆಚೆ ದೂರದ
ಆಲದ ಮರದ ಕೆಳಗಡೆ ನೀನು ಆಗಾಗ
ನಿನ್ನ ಪ್ರಿಯಕರನೊಡನೆ ಹರಟೆ ಹೊಡೆದದ್ದು ನೆನಪಿದೆ.
ನೀ ಕ್ಯಾ ಕೀ ಹಾಕಿ, ಚಪ್ಪಾಳೆ ತಟ್ಟಿ ನಡೆದು
ಐದೋ ಹತ್ತೋ ನಿಮಿಷ ಕುಳಿತು ಹರಟಿದ ಹಾಗೆ ಮಾಡಿ
ಅವನ ಎದೆಗೊರಗಿ–ಯಾವನೋ ನನಗೇನು?
ಅವರನ್ನು ಎಷ್ಟಂತ ನೆನಪಿಡಲಿ ?-ನೀ
ಕಣ್ಣು ಮುಚ್ಚಿ ಸಿನೆಮಾ ನಾಟಕ ನೋಡಿದ್ದು ಮಾಡಿದ್ದು ನೆನಪಿದೆ.
ಒಂದು ಕೈ ತಪ್ಪಿದರೆ ಇನ್ನೊಂದು ಹಿಡಕೊಂಡು
ಈವ್ ತಿಂದ ಸೇಬಿನ ಹಾಗೆ ನೀ ನಾಚಿ ನಕ್ಕದ್ದು ಗುನುಗುನಿಸಿದ್ದು
ನೋಡಿ ಒಂದು ಥರಾ ಅನಿಸಿತ್ತು ಪರಿಮಳ.
ಇಂದು ಮಧ್ಯಾಹ್ನ ಆ ಗಿಡದ ಕೆಳಗಡೆ ಸುಮಾರು
ಒಂದು ತಾಸಿನ ತನಕ ನಿಂತು ನೀ ಕಾದಿದ್ದು
ಮುಖ ಡಿಶಂಬರದ ದಿಲ್ಲಿಯ ರಾತ್ರಿಯಂತಾದದ್ದು, ಕೊನೆಗೆ
ಆ ನಿನ್ನ ಬಹುಶಃ ಮೂರನೆಯ ಪ್ರಿಯತಮ
ಬಂದು ನೀನವನ ತೊಡೆಯಲ್ಲಿ ಅತ್ತದ್ದು ಗಳಗಳ, ನೆನಪಿದೆ ಪರಿಮಳ.
ನನಗೇಕೆ ಇಷ್ಟೊಂದು ಇಲ್ಲದ ಕಳವಳ
ಅನಬೇಡ ಪರಿಮಳ. ಏನೋ ವಿಚಾರ ಬಂತು.
ನಿನ್ನ ಕಾರ್ಯಕ್ರಮ ತಪ್ಪದಂತೆ ನಡೆಸಬೇಕಲ್ಲ, ಹೀಗಾಗಿ
ಏನೋ ವಿಚಾರ ಬಂತು, ನಾನು ನಾಲ್ಕನೆಯವನೊ
ಐದನೆಯವನೊ ಎಂದು ಯೋಚಿಸುತಿದ್ದೆ …. ಛೀ,
ಈ ಚಿಲ್ಲರೆ ದಿನಾ ಹೀಗೇ. ಲೆಕ್ಕ ತಪ್ಪುತ್ತದೆ
ಮತ್ತೆಣಿಸಬೇಕು ….
ಮಾರಲಾಗದ ನೆಲ
ಮಾರಲಾಗದ ನೆಲ ಒಂದು ಪ್ರಕಟವಾಗಲಾರದ ಕಾದಂಬರಿಯ ಹಾಳೆಗಳು
ಪಿ. ಲಂಕೇಶ್
ರಾತ್ರಿ ರೈಲಿಗೆ ಹೊರಡಬೇಕಿತ್ತು. ಮನೆಯಲ್ಲಿ ಹೆಂಡತಿ ಕಾಯುತ್ತಾ ಕೂತಿದ್ದಳು. ಆಗಲೇ ಮಬ್ಬುಗತ್ತಲು. ನಾನು ಬಾಗಿಲು ತಟ್ಟಿದೊಡನೆ ಅದನ್ನು ತೆಗೆದು ಬೇಸರದಿಂದ ಆಕಳಿಸುತ್ತಾ ನಿಂತ ಹೆಂಗಸು. “ಯಾಕೆ ಕುಸುಮು, ಬೇಸರವಾ, ನನ್ನ ಸಾಮಾನೆಲ್ಲ ಕಟ್ಟಿ ರೆಡಿ ಮಾಡಿದ್ದಿ
ತಾನೆ ?” ಅಂದೆ. ಅವಳು ಉತ್ತರಿಸದೆ ಕುರ್ಚಿಯಲ್ಲಿ ಕೂತು ಹಳೆಯ ಪತ್ರಿಕೆಯೊಂದನ್ನು ಓದಹತ್ತಿದಳು. ಅವಳ ಮುನಿಸು ಅರ್ಥಗರ್ಭಿತ ವಾಗಿತ್ತು. ಆಗ ಜ್ಞಾಪಕಕ್ಕೆ ಬಂತು-ನಾನು ಅದಕ್ಕೇ ಮನೆಗೆ ಬಂದು ಮೊದಲ ಶೋ ಚಿತ್ರಕ್ಕೆ ಅವಳನ್ನು ಕರೆದೊಯ್ದು ರಾತ್ರಿ ಹತ್ತೂವರೆಯ ರೈಲಿಗೆ ಹೊರಡಲು ನಿಶ್ಚಯಿಸಲಾಗಿತ್ತು. ಅವಳನ್ನು ಕಂಡು ಕನಿಕರವೆನ್ನಿಸಿತು. “ಏಳು, ಬೇಗ ಹೋದರೆ ಸಿನಿಮಾ ಸಿಗುತ್ತೆ. ನ್ಯೂಸ್‌ರೀಲ್ ಮಾತ್ರ ಮುಗಿದಿರುತ್ತೆ. ಪರವಾಗಿಲ್ಲ ಅಲ್ಲವಾ ?” ಅಂದೆ.
ಸಿನಿಮಾಕ್ಕೆ “ಒಲ್ಲೆ” ಅನ್ನದ ಹೆಂಡತಿ. ಎದ್ದಳು, ಬಾಚಿಕೊಂಡು ಸಿದ್ದವಾದಳು, ಮಕ್ಕಳಿಗೆ ಬಟ್ಟೆ ಹಾಕಿ ಹೊರಡಿಸಿದಳು. ಆದರೆ ಸಿನಿಮಾ-ಅದಾವುದೋ ಕೆಟ್ಟ ಅಳುಬುರುಕ ಚಿತ್ರ ನಡೆಯುತ್ತಿತ್ತು. ನನ್ನ ತಲೆ ತಿರುಗುತ್ತಿತ್ತು-ಊರ ಕಾಡುಗಳಲ್ಲಿ ತುಡುಗು ಹೋಗುತ್ತಿತ್ತು. ಸಿನಿಮಾದಲ್ಲಿ ಯಾವನೋ ಅಮಲ್ದಾರ ಎಳನೀರು ಬೇಕೆಂದದ್ದಕ್ಕೆ ಒಂದು ತೆಂಗಿನ ತೋಟವನ್ನೇ ಬೆಳೆದ ಗೌಡನ ಕಥೆ. ಅವನಿಗೆ ಕಷ್ಟ ಬಂದಾಗ, ಅವನ ಮಕ್ಕಳು ವಿಧಿಯ ಕೈವಾಡಕ್ಕೆ ಸಿಕ್ಕಾಗ ಕುಸುಮ ಕಂಬನಿಗರೆಯುತಿದ್ದಳು. ನಾನು ನಕ್ಕು ತಮಾಷೆ ಮಾಡುತ್ತಿದ್ದೆ. ಆದರೆ ತಲೆ ಊರಲ್ಲಿ ಇಳಿದುಕೊಳ್ಳುವ ಮನೆಯ ಬಗ್ಗೆ ಪರದಾಡಿತು. ನನ್ನ ಗದ್ದೆ ಗೇಯುವ ದುರುಗನಿದ್ದ ; ಆತನ ಸಂಸಾರ ಉದ್ಧಾರ ಮಾಡುವುದಕ್ಕಾಗಿ ನನ್ನ ನಾಲ್ಕು ಎಕರೆ ಗದ್ದೆಯನ್ನು ಆತನಿಗೆ ಕೊಟ್ಟಿದ್ದೆ…..ಆತ ಈಚಿಗೆ ಉದಾಸೀನನಾಗಿದ್ದ.
ಕಣ್ಣೆದುರು ಸಿನಿಮಾದ ಗೌಡ, ಮನಸ್ಸಿನಲ್ಲಿ ನನ್ನ ಗದ್ದೆ ಉಳುವ ದುರುಗ. ಅವನ ಬಗ್ಗೆ ಯೋಚನೆಗೆ ಕಾರಣವಿತ್ತು. ದುರುಗ ನಮ್ಮ ಮನೆಯೊಂದಿಗೆ ಸಂಬಂಧವುಳ್ಳ ಹಳೆಯ ಗಿರಾಕಿ; ನನ್ನ ಅಪ್ಪನ ಮೊದಲ ಮಗನೆಂಬ ಗುಮಾನಿಯ ಊರಲ್ಲಿತ್ತು. ಕಣ್ಣು ಮೂಗು ನೋಡಿದರೆ ಈ ಗುಮಾನಿ ದೃಢವಾಗುತ್ತಿತ್ತು. ನೂರಾರು ವರ್ಷಗಳಿಂದ ನಮಗಾಗಿ ದುಡಿದ ಆ ಬೇಡರ ಸಂಸಾರದ ಬಗ್ಗೆ ನನಗೆ ಅನುಕಂಪವಿತ್ತು. ನನ್ನ ಅಣ್ಣನಿಂದ ಬೇರೆಯಾದ ವರ್ಷ ಅವನಿಗೆ ನನ್ನ ನೆಲವನ್ನು ವಹಿಸಿ ಅಕ್ಕಿ ಕಳಿಸಲು ಹೇಳಿದ್ದೆ. ಆಗಾಗ ಕಳಿಸುತ್ತಿದ್ದ. ಆದರೆ ಅವನಿಗೆ ನೆಲವನ್ನು ಉಳುವ ಜವಾಬ್ದಾರಿ ವಹಿಸಿದ ದಿನ-ಹಲವು ವರ್ಷದ ಹಿಂದೆ-ಇನ್ನೊಂದು ಕೆಲಸ ಮಾಡಿದ್ದೆ.
ಭರಣಿ ಮಳೆ ತಡವಾಗಿ ಬಂದು ಹೊಳವಾಗಿತ್ತು. ಕಾಡಿನ ಮರಗಳಿಗೆ ಉತ್ಸಾಹ ಬಂದು ತಿಳಿಹಸಿರು ‘ ಉಕ್ಕುತ್ತಿತ್ತು. ಜನ ಗದ್ದೆಗಳನ್ನು ಹರಗಿ ಕೊರಡು ಹೊಡೆದು ಬಿತ್ತಲು ಆರಂಭಿಸಿದ್ದರು. ಆದರೆ ನಾನು ಊರಲ್ಲಿ ಇರುವುದು ಗೊತ್ತಿದ್ದರೂ ದುರುಗ ಹರಗಲಿಲ್ಲ; ಬಿತ್ತಲಿಲ್ಲ, ಎಲ್ಲರ ಭೂಮಿ ಹಸಿರಾಗಿ ಕಂಗೊಳಿಸಬೇಕಾದರೆ ನನ್ನ ನೆಲ ಬಂಜೆಯಾಗಿ ಉಳಿಯಬೇಕಾಗಿತ್ತು. ನಾನು ದುರುಗನಿಗಾಗಿ ಹುಡುಕಿದೆ; ಊರಲ್ಲಿ ಪ್ರತಿಯೊಂದು ಮನೆಯನ್ನೂ ನೋಡಿದೆ ; ಕೊನೆಗೆ ತಾಂಡಕ್ಕೆ ಹೋಗಿ ವಿಚಾರಿಸಿದೆ. ಅಲ್ಲಿ ಕಸವ್ಯಾ ದುರುಗನಿರುವ ಸುಳಿವು ಕೊಟ್ಟ. ದುರುಗ ವಾರಗಳಿಂದ ಕುಮರಿಯಲ್ಲಿ ಕಳ್ಳಭಟ್ಟಿ ಇಳಿಸುತ್ತಾ ಕುಡಿದು ತೂರಾಡುತ್ತಿದ್ದ. ಅವನನ್ನು ಹಿಡಿದುಕೊಂಡು ಊರಿಗೆ ಬಂದೆ.
ಇದನ್ನೆಲ್ಲಾ ತಿಳಿದೇ ನಾನು ನನ್ನ ಗದ್ದೆಯ ಸ್ವಾಧೀನ ಮಾಡಿಕೊಂಡ ವರ್ಷ ಅವನನ್ನು ಕಮರಿಯ ಹತ್ತಿರ ಹುಡುಕಿ ಹಿಡಿದು ಊರಿಗೆ ಕರೆದೊಯ್ದೆ. ಅಷ್ಟರಲ್ಲಿ ಕತ್ತಲೆಯಾಗಿತ್ತು. ಅವನನ್ನು ಮನಸೋ ಇಚ್ಛೆ ಬೈದೆ. ಅವನ ಹೆಂಡತಿಯಲ್ಲಿ ಚೆನ್ನಾಗಿ ಉಗಿದು “ಹೀಗೆ ಮಾಡಿದರೆ ನಿನಗೆ ನನ್ನ ಗದ್ದೆ ಹೊಡೆಯೋಕೆ ಕೊಡೋಲ್ಲ” ಅಂದೆ. ಅವನು ಸಾರಾಯಿಯಿಂದ ಕೊಂಚ ಸ್ವಸ್ಥನಾಗಿ ನನ್ನ ಕಾಲು ಹಿಡಿದುಕೊಂಡ. ಅವನಿಗೆ ಏನುಮಾಡುವುದೆಂದು ತಿಳಿಯಲಿಲ್ಲ, ಕುಡಿದಾಗ ಹುಚ್ಚ, ಕುಡಿಯದಿದ್ದಾಗ ವಿಧೇಯ, ಊರ ಬುದ್ಧಿವಂತ ಮಾದೇವಪ್ಪ, ಅಡ್ಡಮನೆಯ ವೀರಣ್ಣ ನನ್ನನ್ನು ಚುಡಾಯಿಸುತ್ತ “ನಿನ್ನ ಆಟ ಅವನ ಹತ್ರ ಸಾಗೋದಿಲ್ಲ, ತಮ್ಮ, ಸುಮ್ಮನೆ ಅವನ ಹಾರ್ಕಕ್ಕೆ ಅವನನ್ನು ಬಿಟ್ಟು ಹೋಗು” ಅಂದರು. ಆದರೆ ನಾನು ಹಠ ಹಿಡಿದೆ. ಅವನನ್ನು ಕರಿಯವ್ವನ ಗುಡಿಗೆ ಕರೆದೊಯ್ದು ಕುಡಿಯುವುದಿಲ್ಲವೆಂದು ಪ್ರಮಾಣ ಮಾಡಿಸುವುದಾಗಿ ಹೇಳಿದೆ. ಬುದ್ಧಿವಂತ ಮಾದೇವಪ್ಪನವರಿಗೆ ನನ್ನಂಥವನ ಐಲು ಹೊಸತಲ್ಲ. ನನ್ನ ಹುನ್ನಾರ ಕೇಳಿ ನಕ್ಕರು, ಇಪ್ಪತ್ತೈದು ವರ್ಷದಿಂದ ಕಂಡ ದುರುಗನ ಬುದ್ಧಿ ಅವರಿಗೆ ಹೊಸತೆ?
ಆದರೆ ನಾನು ಲಾಟೀನು ತೆಗೆದುಕೊಂಡೆ. ದುರುಗನಿಗೆ ಜೊತೆಗೆ ಬರಲು ಹೇಳಿದೆ. ಕತ್ತಲು ದಟ್ಟವಾಗಿತ್ತು. ದಾರಿಯ ಕಲ್ಲುಗಳ ಮೇಲೆ ಮಾತ್ರ ಲಾಟೀನು ತನ್ನ ಪ್ರಭಾವ ಬೀರುತ್ತಿತ್ತು. ದುರುಗ ಮಾತಾಡದೆ ಬರುತ್ತಿದ್ದ. ಅವನಿಗೆ ಮದ್ಯದ ದುರಂತಗಳ ಬಗ್ಗೆ ಹೇಳಬೇಕೆನ್ನಿಸಿತು. ಆದರೆ ಯಾಕೋ ಬಾಯಿ ಬರಲಿಲ್ಲ. ಕರಿಯವ್ವನ ಗುಡಿಯ ಮೆಟ್ಟಿಲು ಹತ್ತಿದೆವು. ಅಲ್ಲಿದ್ದವರು ನಾವಿಬ್ಬರೇ. ಗುಡಿಯ ಎದುರು ವಿಶಾಲವಾದ ಕೆರೆ. – “ಕೊರ್ ಕೊಟ್ರ್” ಎಂದು ಕೂಗುವ ಕಪ್ಪೆಗಳು-ಗುಡಿಯ ಪಕ್ಕದ ಕಣಗಿಲೆ ಮರದ ಬೆಳ್ಳನೆಯ ಹೂಗಳು ಕಗ್ಗತ್ತಲಲ್ಲಿ ಕ್ಷಯದ ರೋಗಿಗಳಾಗಿದ್ದವು. ಕರಿಯವ್ವನ ಗುಡಿಯ ಕಡಪದ ಕಲ್ಲುಗಳು ತಣ್ಣಗೆ ಕೊರೆಯುತ್ತಿದ್ದವು. ಆಗ ದುರುಗ ಇದ್ದಕ್ಕಿದ್ದಂತೆ ಅಳುವುದು ಕೇಳಿಸಿತು. ನಾನು ಸುಮ್ಮನೆ ನಿಂತು ಅವನ ಮುಖ ನೋಡಿದೆ. ಲಾಟೀನು ಕೈಯಲ್ಲಿ ನೇತಾಡುತ್ತಿದ್ದುದರಿಂದ ಅದರ ಬೆಳಕು ಮೂಗು ತುಟಿಗಳ ಮೇಲೆ ಬಿದ್ದು ಅವುಗಳ ನೆರಳುಗಳು ಉದ್ದಕ್ಕೆ ಮೇಲೆ ಹರಿದು ಆತ ಭಯಂಕರವಾಗಿದ್ದ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಅದು ಆತನ ಶಾಣ್ಯಾತನವಿರಬೇಕೆನ್ನಿಸಿತು, ಮತ್ತು ಪ್ರಮಾಣದ ಬಗ್ಗೆ ಅವನಿಗಿದ್ದ ಭೀತಿಯಿಂದ ಹಾಗೆ ಆಳುತ್ತಿರಬಹುದೆನ್ನಿಸಿತು. ಇದರಿಂದ ಅವನಿಗೆ ಒಳ್ಳೆಯ ಕಟ್ಟು ದೊರಕೀತೆಂದು ಹೊಸ ಹುಮ್ಮಸ್ಸು ಬಂತು. “ಬಾಯಿ ಮುಚ್ಚೊ ದರಿದ್ರದವನೇ, ನಿನಗೇನು ಹೆಂಡತಿ ಮಕ್ಕಳ ನೆದರು ಇಲ್ಲವಾ ? ದೇವರ ಗಂಟೆ ಹೊಡೆದು ಇನ್ನು ಕುಡಿಯೋದಿಲ್ಲ ಅಂತ ಪ್ರಮಾಣ ಮಾಡು” ಅಂತ ಬೈದೆ. ಆತ ಹೆಗಲ ಮೇಲಿನ ಕೊಳಕು ಟವಲನ್ನು ತಲೆಗೆ ಕಟ್ಟಿಕೊಂಡು ಕೈಮುಗಿದು ಅದೇನನ್ನೋ ಗೊಣಗಿದ. ಅದಕ್ಕೆ ಅವಕಾಶ ಕೊಡಬಾರದೆಂದುಕೊಂಡೆ. ಆದರೆ ಆತ ಅದೇ ಮಾತನ್ನು ಮನಸ್ಸಿನಲ್ಲೇ ಹೇಳಿಕೊಳ್ಳುವುದು ಸಾಧ್ಯವಿತ್ತು. ಆದ್ದರಿಂದ ಸುಮ್ಮನೇ ನಿಂತೆ. ಅವನು ತನ್ನ ಗೊಣಗಾಟ ನಿಲ್ಲಿಸಿ ದೇವರಿಗೆ ಅಡ್ಡ ಬಿದ್ದು ಮತ್ತೆ ನಿಂತು ಕೈಮುಗಿದು ಗೊಣಗಿದ. ಕೈಗಳನ್ನು ಮೇಲೆ ಗಂಟೆ ಬಾರಿಸಿ “ಕುಡಿಯಾಕಿಲ್ಲ ನನ್ನವ್ವ” ಅಂದ. ನನಗೆ ಇದ್ದಕ್ಕಿದ್ದಂತೆ ನಗೆ ಬಂತು. ಅದು ಪ್ರಶ್ನೆಯೋ ಪ್ರಮಾಣವೋ ಎಂದು ದೇವರ ಕಡೆ ನೋಡಿದೆ. ಗರ್ಭಗುಡಿಯ ತುಂಬ ಕತ್ತಲು. ಕರಿಯವ್ವನ ಮುಖ ಅಸ್ಪಷ್ಟವಾಗಿ ಕಾಣಿಸುತ್ತಿತ್ತು…..
ಊರಿಂದ ಬಂದು ವರ್ಷಗಳಾದವು. ಕುಸುಮ ನನ್ನ ಚೀಲವನ್ನು ಹಿಡಿದು ರಸ್ತೆಗೆ ಬಂದಳು, ರಿಕ್ಷಾ ನಿಲ್ಲಿಸಿ ಅವಳನ್ನು ನೋಡಿದೆ, ಬೇಸರದ ಮೂರ್ತಿಯಂತೆ ಕಂಡಳು. ಅವೊತ್ತು ನೋಡಿದ ಚಿತ್ರದ ಬಗ್ಗೆ ತಮಾಷೆ ಮಾಡಬೇಕೆನ್ನಿಸಿತು. ಆದರೆ ತಮಾಷೆಗೆ ಕೂಡ ಅದು ಯೋಗ್ಯವಾಗಿರಲಿಲ್ಲ. ಯಾವಾಗ ಊರಿಂದ ಹಿಂದಕ್ಕೆ ಬರ್ತಿರಿ ಅಂತ ಕೂಡ ಅವಳು ಕೇಳಲಿಲ್ಲ. “ಈ ಸಲ ಹೋಗಿ ಅವರನ್ನೆಲ್ಲ ನೋಡಿಕೊಂಡು ಸುಮ್ಮನೆ ಬಂದುಬಿಡಬೇಡಿ. ಖಂಡಿತ ಮಾರಿ ಬರಬೇಕು” ಅಂದಳು.
“ಭೂಮಿ ಮಾರೋದು ಕಷ್ಟ ಕುಸುಮ, ಅವರು ಕೇಳಿದಷ್ಟಕ್ಕೆ ಕೊಟ್ಟುಬರೋಕಾಗುತ್ತೇನೇ ?” ಅಂದೆ.
“ಮತ್ತೆ ಅದೇ ರಾಗ ನಿಮ್ಮದು. ಆ ದುರುಗ ಅದೇನು ಮಂಕು ಬೂದಿ ಎರಚಿರಬೇಕು. ಅವನ ಮುಖ ನೋಡಿ ಹಿಂದಕ್ಕೆ ಬರ್ತಿರಿ. ಮಾದೇವಪ್ಪ ತುಂಬ ಒಳ್ಳೆಯವರು ಆವರನ್ನು ಹಿಡಿದು ವ್ಯಾಪಾರ ಕುದುರಿಸಿ.”
“ಮಹಾದೇವಪ್ಪ ! ಸರಿ. ಅವರಿಗೆ ಮಗನ ಮದುವೆ, ಊರ ವ್ಯಾಜ್ಯ ಎಲ್ಲ ಸೇರಿ ಕೊಂಡು ತಲೆತಿನ್ನುತ್ತಿರುತ್ತೆ, ನನ್ನ ಕೆಲಸ ಅವರಿಗೆ ವಹಿಸಿದರೆ ಆಯ್ತು.”
“ಸದ್ಯ, ಊರ ಉಸಾಬರಿಗೆ ಹೋಗಬೇಡಿ” ಅಂದಳು.
ರೈಲಿನಲ್ಲಿ ಮಲಗಿ ಕನಸು ಕಾಣತೊಡಗಿದೆ. ಊರ ಹತ್ತಿರ ರೈಲು ನಿಂತಾಗ ಚುಮು ಚುಮು ಬೆಳಕು ಹರಿದಿತ್ತು.
೨
ಚಿಕ್ಕ ಪ್ಲಾಟ್‌ಫಾರಂ ಮಾತ್ರ ಇರುವ ಸ್ಟೇಷನ್ ಅದು. ಇಳಿದವರು ನಾಲ್ಕೂ ಐದೋ ಜನ. ಆ ಸ್ಟೇಷನ್ ಈ ವರ್ಷಗಳ ತರುವಾಯ ಇನ್ನೂ ಚಿಕ್ಕದಾಗಿ ಕಂಡಿತು. ನಾಲ್ಕು ಹೊಂಗೆಯ ಮರಗಳು ; ಅವನ್ನು ಸುತ್ತಿ ನೆಟ್ಟಗೆ ಸಾಗಿದ್ದ ಮುಳ್ಳು ಬೇಲಿ ; ನಡುವೆ ಎರಡು ತಗಡು ಹಾಕಿದ್ದ ಶೆಡು, ಅದೇ ಸ್ಟೇಷನ್ನು. ಪುಟ್ಟ ಸ್ಟೇಷನ್ನಿಗೆ ಬಡಿದಿದ್ದ ಬೋರ್ಡಿನ ಮೇಲೆ “ಎಡಪಾಲ” ಎಂದು ಬರೆದಿತ್ತು, ನನ್ನತ್ತ ಟಿಕೆಟ್ ಮಾರುವ ಮನುಷ್ಯ ರಾಜೀವ ಬಂದ. ಅವನ ಕೈಗೆ ಟಿಕೆಟ್ಟು ಹಾಕಿ, “ಹ್ಯಾಗಿದ್ದಿರಾ ರಾಜೀವ್ ?” ಅಂದೆ. “ಸೌಖ್ಯ ಸರ್, ನೀವು ಚೆನ್ನಾಗಿದ್ದೀರಾ ? ಹೋದಸಲ ನೀವು ಬಂದಾಗ ಚೈನಾ ವಾರ್ ನಡೀತಿತ್ತು. ಈಗ ಪಾಕೀಸ್ತಾನದ್ದು ನಡೀತಿದೆ. ಹಹಹ” ಅಂತ ನಕ್ಕ, ನನಗೂ ಅದು ವಿಚಿತ್ರವೆನಿಸಿತು. ಅಲ್ಲಿಗೆ ಬಂದು ಮೂರು ವರ್ಷವಾಗಿತ್ತು. ಆತ ಸುತ್ತಲೂ ನೋಡುತ್ತಾ “ದುರುಗ ಇಲ್ಲೇ ಇದ್ದ-ಹಾ-ಅಗೋ ಬಂದನಲ್ಲ. ತುಂಬ ದಿಲ್ಲಗಿ ಮನುಷ್ಯ! ನೋಡಿ ! ನೋಡಿ !” ಅಂತ ರಾಜೀವ ಕೂಗಿದ.
ನಾನು ಅವನನ್ನು ನೋಡಿ ಗುರುತಿಸುವಷ್ಟರಲ್ಲಿ ಅತ್ತೊಮ್ಮೆ ಇತ್ತೊಮ್ಮೆ ತೂರಾಡುತ್ತಾ ಸುಂಟರ ಗಾಳಿಗೆ ಸಿಕ್ಕವನ ಹಾಗೆ ನನ್ನೆಡೆಗೆ ತೂರಿ ಕಾಲದೆಸೆಯಲ್ಲಿ ಮುಗ್ಗರಿಸಿ “ಸ್ವಾಮೀ, ನನ್ನ ಕಾಪಾಡಬಕು-ನೀನೇ ನನ್ನ ಕರಿಯವ್ವ” ಅಂತ ಅರಚಿದ. ಅವನ ಬಾಯಿಂದ ಹೆಂಡದ ವಾಸನೆ ಬರುತ್ತಿತ್ತು, ಅವನು ನಿರರ್ಗಳ ಭಾಷಣದ, ನರ್ತನದ ಸ್ಥಿತಿಯಲ್ಲಿದ್ದ, ನಾನು ಏಳು’ ಎಂದು ಹೇಳುವುದಕ್ಕೆ ಮೊದಲೇ ನನ್ನನ್ನು ಎತ್ತಿ ಹೆಗಲ ಮೇಲೆ ಕೂರಿಸಿಕೊಂಡು ದೊಡ್ಡ ದನಿಯಲ್ಲಿ “ನಮ್ಮ ಸವ್ಕಾರು ಬಂದ್ರು -ನಾ ಬದ್ಕಿದ್ನಪೋ ಬದ್ಕಿದೆ” ಅಂತ ಊರ ಕಡೆಗೆ ನನ್ನನ್ನು ಹೊತ್ತುಕೊಂಡು ಓಡತೊಡಗಿದ. ಜನ ಸೇರಿಕೊಂಡರು; ಚಿಕ್ಕ ಮಕ್ಕಳು ಚಪ್ಪಾಳೆ ತಟ್ಟಿ ಕೂಗ ತೊಡಗಿದರು. ನಾನು ಬಿಡಿಸಿಕೊಂಡು ನೆಲಕ್ಕೆ ಇಳಿಯಲು ಹೋದೆ-ದುರುಗ ಬಿಡಲಿಲ್ಲ. ಮೋಜಿನ ಮೆರವಣಿಗೆ ಶುರುವಾಯಿತು. ಹಂಕಲುಗಳನ್ನು ದಾಟಿ, ಕೂಗುತ್ತಾ. ಹಾಡುತ್ತಾ ಆತ ನನ್ನನ್ನು ಊರ ಎದುರಿನ ಕರಿಯವ್ವನ ದೇವಸ್ಥಾನಕ್ಕೆ ಕರೆದೊಯ್ದು. ನನಗೆ ಆತನ ರಂಪಾಟ ಸಾಕಾಗಿತ್ತು. ವಾಸನೆ ಮೂಗನ್ನು ಹಾಳು ಮಾಡಿತ್ತು. ಕಾಲ ಮೇಲೆ ನಿಂತೊಡನೆ ಅವನ ಕೆನ್ನೆಗೆ ನಾಲ್ಕು ಬಿಗಿದೆ. ಆತ ಅತ್ತ. ಜನರ ಗುಂಪಿನಿಂದ ಮಹಾದೇವಪ್ಪ ಮುಂದೆ ಬಂದರು ಊರ ಬುದ್ದಿವಂತ ಅವರು; ಬುದ್ಧಿವಂತರೆಂಬ ಎಗ್ಗು ಇಲ್ಲದ ವ್ಯಕ್ತಿ, ನನ್ನನ್ನು ನೋಡುತ್ತಾ ಮುಗುಳು ನಕ್ಕು, “ನೋಡಿದೆಯಾ ತಮ್ಮ? ನಿನ್ನ ಆಸಾಮಿ ಕರಿಯವ್ವನ ಮೇಲೆ ಆಣೆ ಹಾಕಿದ-ಖರೆ, ಕಲಿತದ್ದು ಹೋದೀತಾ? ಕಲಿತದ್ದು ಬಿಡೆ ಕದ್ದ ಹಡಕಿ ಅಂದರೆ, ಅದನ್ನು ಬಿಟ್ಟೇನು ಕಲ್ಲು ಬಡಕೊಳ್ಳಲಾ-ಅಂದಿದ್ದಳಂತೆ. ಈಗ ನಿಂಗೇ ಬಂತು ಇಪ್ಪತ್ತು ರೂಪಾಯಿಗೆ ಜುಲ್ಮಾನೆ ಅವನು ಆಣೆ ಮುರಿದ, ನೀನು ಕರಿಯವ್ವಗೆ ಕುರಿ ಕಡಿಸಬೇಕು !” ಅಂತ ಹೇಳಿ ಅವರು ನನಗೆ ತಮ್ಮ ಮಾತು ಅರ್ಥವಾಯಿತೋ ಇಲ್ಲವೋ ಅಂತ ನೋಡಿದರು.
ನನಗೆ ಸರಿಯಾಗಿ ಅರ್ಥವಾಗಿರಲಿಲ್ಲ. ಆಗ ಒಂದು ಅಚ್ಚರಿಯಾಯಿತು. ದುರುಗನ ಚೀರಾಟ, ಜನರ ಗದ್ದಲದ ಮಧ್ಯೆ ನಾಯಿ ಬೊಗಳಿತು. ಅದರ ಹಿಂದೆಯೇ ಗುಂಡೊಂದು ಹಾರಿತು. ಜನ ಅತ್ತ ತಿರುಗಿದರು. ಕೆರೆಗೆ ಬೆನ್ನು ಮಾಡಿ ನಾಯಿಯನ್ನು ಒಂದು ಕೈಯಲ್ಲಿ ಹಿಡಿದು ಇನ್ನೊಂದು ಕೈಯಲ್ಲಿ ಗನ್ನು ತೂರಾಡುತ್ತಾ ರುದ್ರಮೂರ್ತಿ ನಿಂತಿದ್ದ ನನ್ನ ಬಾಲ್ಯದ ಮಿತ್ರ-ವ್ಯವಸಾಯದ ಡಿಗ್ರಿ ತೆಗೆದುಕೊಂಡ ವ್ಯಕ್ತಿ, ನನ್ನತ್ತ ಗಹಗಹಿಸಿ ನಕ್ಕು” ಯಾವಾಗ್ ಬಂದ್ಯಲೇ ವಿಶ್ವ-ಮೈ ಕೈ ಸರಿಯಾಗಿದೆಯಾ ? ಹ್ಯಾಗಿದೆ ಬೆಂಗಳೂರು ? ಇನ್ನೇನು ಮಾಡ್ತಿದ್ದೀ-ನಿನ್ನ ದುರುಗನಿಗೆ ಮುತ್ತು ಕೊಡ್ತಾ ನಿಂತುಬಿಟ್ಯಾ? ಸಾಕು ಸಾಕು ಬಾ” ಅಂದ.
“ಅದೇನೋ ಕುರಿಯನ್ನ ಕರಿಯವ್ವನಿಗೆ ಬಲಿಕೊಡಬೇಕಂತೆ ಕಣೋ, ಹ್ಯಾಗಿದೆ ನೋಡಿದೆಯಾ? ನಾನೇ ಇವನಿಗೆ ಇಲ್ಲಿ ಪ್ರಮಾಣ ಮಾಡಿಸಿದೆ- ಈತ ಅದನ್ನ ನಡೆಸಲಿಲ್ಲ. ಈಗ ಪ್ರಾಯಶ್ಚಿತ್ತವಾಗಿ ಕುರಿ !” ಅಂದೆ.
“ಓ ಹೊ ಹೋ ? ಬೇಕೂಫ-ನೀನೊಬ್ಬ ಬೇಕೂಫ. ಈ ದುರುಗನ ಸಮಾಚಾರ ನಿನಗಿನ್ನೂ ಗೊತ್ತಿಲ್ಲ. ಹೆಂಡ ಹ್ಯಾಗೂ ಕಳ್ಳಭಟ್ಟಿ ಹತ್ರ ಹೋಗಿ ಜೊಲ್ಲು ಸುರಿಸಿದ್ರೆ ಸಿಗುತ್ತೆ-ಖಂಡ ಹ್ಯಾಗೆ ಸಿಕ್ಕೀತು ಹೇಳು ? ಅದನ್ನೂ ಗಿಟ್ಟಿಸೋಕೆ ಪ್ರಯತ್ನ ಮಾಡ್ತಿದಾನೆ. ದರಿದ್ರ ಸೂಳೆ ಮಕ್ಕಳ ಸಾವಾಸ ನಿನಗೆ ಗೊತ್ತಿಲ್ಲ. ಬಾ ಹೋಗೋಣ. ಕೆಲವು ಪ್ರಾಬ್ಲಮ್ಸ್ ಚರ್ಚೆ ಮಾಡಬೇಕಾಗಿದೆ. ಎಲ್ಲ ಮುಖ್ಯವಾದ ಪ್ರಾಬ್ಲಮ್ಸ್ ಕಣಯ್ಯ, ನಗಬೇಡ, ಇಂಟಲೆಕ್ಟ್ ಪ್ರಾಬ್ಲಮ್ಸ್” ಅಂದ, ನಾನು “ಬರ್ತೆನೆ ನಡಿ, ಈಗ ಬಂದ್ಬಿಡ್ತೇನೆ” ಅಂದೆ.
ಎತ್ತರಕ್ಕೆ, ಗಟ್ಟಿಯಾಗಿದ್ದ ರುದ್ರಮೂರ್ತಿ,’ ಅಲ್ಲಿಂದ ಆರು ಮೈಲು ಆಚೆಯ ಗಬ್ಬೂರಿನ ಹುಡುಗ. ಅವನು ನಮ್ಮೂರಿಗೆ ಹೇಗೆ ಬಂದ, ಎಲ್ಲಿ ಮನೆ ಮಾಡಿದ್ದಾನೆ ಎಂಬದು ಬಗೆಹರಿಯಲಿಲ್ಲ, ಕುರಿಯನ್ನು ಕೊಡಿಸುವುದಾಗಿ ದುರುಗನಿಗೆ ಹೇಳಿ ಮಹದೇವಣ್ಣನವರ ಜೊತೆ ಮಾತಾಡತೊಡಗಿದೆ.
“ಮಗನ ಮದುವೆ ಆಯ್ತ ?” ಅಂದೆ,
“ಇಲ್ಲ ತಮ್ಮ. ಇಗೋ ಇವನೇ ಮಗ-ಈ ವರ್ಷವೂ ಮುಂದಲ ಬಾರಿಗೋ ಮಾಡಬೇಕು” ಅಂತ ಪಕ್ಕದಲ್ಲೇ ಬರುತ್ತಿದ್ದ ಹುಡುಗನನ್ನು ತೋರಿಸಿದ. ಧಡೂತಿ ಆಸಾಮಿ, ಅಪ್ಪನ ವಿವರಣೆ ಕೇಳಿ ಕೆಂಪಾದ, ಹದಿನೆಂಟು ವರ್ಷವಿರಬಹುದು, ಸೊಗಸಾಗಿ ಬೆಳೆದಿದ್ದ. ಬಿಸಿಲಿಗೆ ಬಿಟ್ಟಿದ್ದ ಮೈ, ನಸುಗಪ್ಪಾಗಿತ್ತು. ಒಂದು ಲುಂಗಿ ಪಂಚೆ ಸುತ್ತಿಕೊಂಡು ಬಿಳಿಯ ಶರ್ಟು ಹಾಕಿದ್ದ.
“ಹೆಸರು ಶೇಖರ ಅಲ್ಲವಾ” ಅಂದೆ.
“ಹೂ” ಅಂದ ಆತ.
“ಹೈಸ್ಕೂಲು ಮುಗಿಸಿದೆಯಾ?”
ಹುಡುಗ ಉತ್ತರಿಸಲಿಲ್ಲ. ಮಹಾದೇವಪ್ಪ ನಕ್ಕು “ಹೊಲಗದ್ದೆ ನೋಡಿಕೊಂಡು ಹೋದರೆ ಸಾಕು. ವಿದ್ಯೆ ತಗೊಂಡು ಏನು ತಮ್ಮ ಮಾಡೋದು? ಅದು ಒಳ್ಳೆದಕ್ಕಿಂತ ಕೆಡುಕನ್ನೇ ಮಾಡೋ ಹಂಗೆ ಕಾಣದೆ ಈಗಿನ ಹುಡುಗ್ರ ನೋಡಿದ್ರೆ” ಅಂದರು.
ನನಗೆ ತಕ್ಷಣ ರುದ್ರಮೂರ್ತಿಯ ನೆನಪಾಯಿತು. ನಾಯಿ ಹಿಡಿದುಕೊಂಡು ಗನ್ನು ಹೆಗಲಿಗೇರಿಸಿ ಖಾಕಿ ನಿಕ್ಕರ್ ಹಾಕಿ ಹೊರಟ ಅಸಾಮಿ ನಮ್ಮ ವಿದ್ಯೆಯ ಹೊಸತ್ತೊಂದು ರೂಪವಾಗಿದ್ದ. ಆದರೆ ನಾನಾಗಿಯೇ ಆ ವಿಷಯವನ್ನೆತ್ತಲು ಆತುರನಾಗಿರಲಿಲ್ಲ. ಶೇಖರ ತುಂಬ ಮೆದು ಮನಸ್ಸಿನ ಹುಡುಗನಿರಬೇಕು. ಸಂಕೋಚದಿಂದ ನೆಲ ನೋಡುತ್ತಾ “ಅಕ್ಕ ಚೆನ್ನಾಗಿದಾರಾ ವಿಶ್ವಣ್ಣ ?” ಅಂದ. ನಾನು ಅವನ ಧ್ವನಿ ವಿಶ್ವಾಸಕ್ಕೆ ಖುಷಿಗೊಂಡು, “ಚೆನ್ನಾಗಿದ್ದಾರಯ್ಯ ನೀನು ಯಾಕೆ ಒಂದ್ಸಾರಿ ಬೆಂಗಳೂರಿಗೆ ಬರಬಾರದು ? ಸಿನಿಮಾ ನೋಡ್ಕೊಂಡು ಮಜವಾಗಿ ಇದ್ದು ಬರಬಹುದು” ಅಂದೆ.
ಮಹಾದೇವಪ್ಪ ಊರಿನ ಈಚಿನ ವಿದ್ಯಮಾನಗಳ ಬಗ್ಗೆ ಖೇದಗೊಂಡಂತ್ತಿತ್ತು. ಅಲ್ಲೊಂದು ಇಲ್ಲೊಂದು ಸೂಚನೆಗಳನ್ನು ಕೊಡುತ್ತಾ ಮಾತಾಡಿದರು – ನಾನು ರುದ್ರಮೂರ್ತಿಯನ್ನು ನೋಡುವ ಆತುರದಲ್ಲಿದ್ದೆ. ದಾರಿಯಲ್ಲಿ ಸಿಕ್ಕ ಬಸವ, ಕೊಟ್ಟಿಗ್ಯಾರ ರಾಮಲಿಂಗ, ಕುಂಬಾರ‍್ರ ಮರಿಲಿಂಗ, ಕಲ್ಲೀಮೀಸೆ ಸಂಕ್ರಪ್ಪ, ಇವರನ್ನು ಕುಶಲ ವಿಚಾರಿಸುತ್ತಾ, ಅವರ ಜೊತೆಯಲ್ಲಿ ಹೋದೆ. ಸಂಕ್ರಪ್ಪ ನನ್ನ ಕಂಡೊಡನೆ, “ಏನು ಮೇಸ್ಟ್ರಪ್ಪ, ಹ್ಯಾಂಗಿದೆ ಬೆಂಗಳೂರು? ಈಗೆಷ್ಟು ಪಗಾರ” ಅಂದ.
“ಮುನ್ನೂರೋ ಎಷ್ಟೋ ಬರತೈತೆ ಸಂಕ್ರಪ್ಪ. ಮನೆಕಡೆ ಎಲ್ಲ ಸೌಖ್ಯವಾ?” ಅಂದೆ. ಸಂಕ್ರಪ್ಪ ತನ್ನ ಕೆಂಪು ಕಣ್ಣುಗಳನ್ನು ಅತ್ತ ತಿರುಗಿಸಿದ. ನನಗೆ ಕುತೂಹಲವಾಗಿ, “ಯಾಕೆ ? ಯಾಕೋ ಸಂಕ್ರಪ್ಪ ?” ಅಂದೆ.
“ಅವನ ಕುಟುಂಬ ಹೊರಟು ಹೋದ್ರು” ಮಹಾದೇವಪ್ಪ ಹೇಳಿದರು.
“ಯಾಕೆ ? ಏನಾಗಿತ್ತು ?”
“ಮಗಳು ಹುಟ್ಟಿದ ಹದಿನೆಂಟು ವರ್ಷಕ್ಕೆ ಮತ್ತೆ ಭಿಮ್ಮನ್ಸಿ ಆಗಿದ್ದು. ತೀರ‍್ಕೊಂಡ್ಲು.”
“ನನಗೆ ಗೊತ್ತೇ ಆಗ್ಲಿಲ್ಲ ಸಂಕ್ರಪ್ಪ. ದೇವರಿಗೆ ಕಣ್ಣಿಲ್ಲ, ನೋಡು” ಅಂದೆ.
ರುದ್ರಮೂರ್ತಿಯ ಮನೆಗೆ ಹೊರಟೆ.
* * * *
ಅವನನ್ನು ನೋಡಿದೆ. ಪಂಚೆ ಸುತ್ತಿಕೊಂಡು ಬರಿ ಭುಜ ತೋರಿಸುತ್ತಿದ್ದ. ಮೀಸೆ ತುಟಿಗಳ ಮೇಲೆ ಹರಡಿ ಮೊನಚಾಗುತ್ತಿತ್ತು. ಹಲ್ಲು ಕೆಂಪಾಗಿ ಪೇಸ್ಟ್ ಉಪಯೋಗಿಸುವುದು ಅವನಿಗೆ ಮರೆತಿರಬಹುದೆನ್ನಿಸಿತು. ಅಂದೆ, “ಹೌದೋ ? ನೀನು ನಮ್ಮೂರಿಗೆ ಬಂದು ಎಷ್ಟು ವರ್ಷವಾಯಿತು ? ಇಲ್ಲೇನು ಮಾಡುತ್ತಿದ್ದೀ ? ಏನು ಸಮಾಚಾರ ? ಬೆಂಗಳೂರು ಕಡೆ ಬರಲೇ ಇಲ್ಲವಾ ?”
“ಕಣ್ಣು ಕಾಣಿಸೋಲ್ಲವಾ ? ಆ ಬಾವಿ ನೋಡು, ತೋಟ ನೋಡು, ಪಂಪ್‌ಸೆಟ್ಟು, ಕಾಲುವೆ ನೋಡು ! ಇವೇ ನಿನಗೆ ಉತ್ತರ ಹೇಳದಿದ್ದರೆ ನಾನೇನು ಮಾಡಲಿ ?”
“ಸರಿಯಪ್ಪ, ನೋಡಿದೆ, ಮಾಡರ‍್ನ್ ರೈತ ನೀನು ಎಲ್ಲ ಬಿಟ್ಟು ರಾಮನಗರ ಬಿಟ್ಟು ಈ ಊರಿಗೆ ಯಾಕಯ್ಯ ಬಂದೆ ? ಹ್ಯಾಗೆ ಬಂದೆ ? ಇದು ನಿನ್ನೂರಾಗೋಕೆ ಹ್ಯಾಗೆ ಸಾಧ್ಯ ?”
“ಬಾರೋ ಮಗನೆ’ ಬಾ. ಆ ದುರುಗನಿಗೆ ಕುರಿ ಕೊಟ್ಟೆಯಾ ? ಬಾ. ಆತ ಕುರಿ ಕೊಡದಿದ್ರೆ ಕರಿಯವ್ವ ಆತನ ಸಂಸಾರಾನ ನಾಶ ಮಾಡ್ತಾಳೆ. ತಿಳೀತೆ ? ಈಗಾಗಲೇ ಅವನ ಒಂದು ಮಗು ಗೋತಾ ಹೊಡೆದಿದೆ. ಹೆಂಡ್ತಿಗೆ ಕಾಯಿಲೆ. ಕುಡಿಯೋಲ್ಲ ಅಂತ ಪ್ರಮಾಣ ಮಾಡಿ ಅದನ್ನ ಮುರಿದರೆ ಕರಿಯವ್ವ ಸುಮ್ಮನಿರ್ತಾಳೆಯೇ ?”
“ನಿನಗೆ ಹ್ಯಾಗೋ ಇದೆಲ್ಲ ಗೊತ್ತು ?”
“ಎಲ್ಲ ಗೊತ್ತು, ನನಗೆ ಗೊತ್ತಿರೋದೆಲ್ಲ ನಿನಗೆ ಗೊತ್ತಿದ್ದರೆ ನೀನು ಹೀಗೆ ದರಿದ್ರವಾಗಿರ‍್ತಿರ‍್ಲಿಲ್ಲ. ಬಾ, ನೀನೂ ಕೂಡ ಕರಿಯವ್ವನ ಹತ್ರ ಪ್ರಮಾಣ ಮಾಡಿಲ್ಲ ತಾನೆ ?”
ಒಳಗೆ ರೂಮಿಗೆ ಕರೆದೊಯ್ದು ರೆಫ್ರಿಜಿರೇಟರಿನಿಂದ ಐಸ್, ವಿಸ್ಕಿ ತೆಗೆದು ಮೇಜಿನ ಮೇಲಿಟ್ಟ. ಎರಡು ಗ್ಲಾಸು ತೆಗೆದು, ಒಳಕ್ಕೆ ತಿರುಗಿ “ಲೋ ಕರಿಯಾ ಕರಿಯಾ ಊಟಕ್ಕೆ ತಯಾರೇನೋ ? ” ಅಂದ. ಒಳಗಿನ ಕೋಣೆಗಳಿಂದ ಒಂದು ಕಪ್ಪನೆಯ ಮನುಷ್ಯ ಮೂರ್ತೀಭವಿಸಿ ನಗುತ್ತಾ ನಿಂತ. ಅವನ ಮುಖ ನೋಡಿದೊಡನೆ ಗುರುತು ಹಚ್ಚಿದೆ. ನಾನು ರುದ್ರನಿಗೆ ಹೇಳಿದೆ, “ನಾನೀಗ ಕುಡಿಯೋಲ್ಲ. ಇದೆಲ್ಲ ವಿಚಿತ್ರವಾಗಿ ಕಾಣುತ್ತೆ. ನಾನು ಮುಖ್ಯ ಕೆಲಸದ ಮೇಲೆ ಬಂದಿದ್ದೇನೆ.”
“ಗೊತ್ತಪ್ಪ, ನಿನ್ನ ಜಮೀನು ಮಾರಬೇಕು, ಹೌದೊ ? ಅದನ್ನ ಕೊಳ್ಳೋರು ಯಾರೂ ಅಂತಾನೂ ನಿನಗೆ ಬುದ್ಧಿ ಇದ್ದಿದ್ದರೆ ಗೊತ್ತಾಗಬೇಕು.”
ಈ ಮಾತು ಮುಂದುವರಿಸಲು ನನಗೆ ಇಷ್ಟವಿರಲಿಲ್ಲ. ಅವನು ನಾನು ಬಲ್ಲ ರುದ್ರ ಮೂರ್ತಿಯಾಗಿರಲಿಲ್ಲ. ಅವನ ಮನೆ ಆಳುಗಳು, ತೋಟ, ಗದ್ದೆ ಎಲ್ಲಕ್ಕಿಂತ, ನಮೂರ ಜನ ಮತ್ತು ನನ್ನ ಚಿಕ್ಕಂದಿನ ನನ್ನ ಊರು, ನನ್ನ ಸುಂದರ ಊರು ನನಗೆ ಮುಖ್ಯವಾಗಿತ್ತು.
“ನೀನು ದೇವರ ಹತ್ತಿರ ನಿಂತು ನಾನು ಕುಡಿಯೋಲ್ಲ ಅಂತ ಹೇಳಿಲ್ಲ. ಆ ದುರುಗನಿಗೆ ಮಾತ್ರ ಹಾಗೆ ಹೇಳಿಸಿದ್ದಿ. ಅಲ್ಲದೆ ನೀನು ಬೆಂಗಳೂರಲ್ಲಿ ಇದ್ದುಕೊಂಡು ಇನ್ನೂ ಇದನ್ನು ಕಲಿತಿಲ್ಲ ಅಂದರೆ…”
“ಹಾಗೇನಿಲ್ಲ ಕುಡೀತೇನೆ”-
“ಹಾಗಾದರೆ ತಗೊ” ಅಂತ ದೊಡ್ಡ ಗ್ಲಾಸಿನಲ್ಲಿದ್ದ ನಸುಗೆಂಪು ಬಣ್ಣದ ವಿಸ್ಕಿಯನ್ನು ನನ್ನತ್ತ ನೂಕಿ, “ತಗೊಳ್ಳಯ್ಯ, ನನ್ನ ಸ್ನೇಹಿತ ನೀನು, ಎಷ್ಟೊಂದು ದಿನಕ್ಕೆ ನಿನ್ನನ್ನು ನೋಡ್ತಿದೇನೆ. ಚೆನ್ನಾಗಿ ಕುಡಿ, ನಿದ್ರೆ ಮಾಡಿ ಆಮೇಲೆ ಬೇಕಾದರೆ ಊರೊಳಕ್ಕೆ ಹೋಗಿ ನಿನ್ನ ಕಾಡುಹರಟೆ ಹೊಡಿ. ಅದು ಬೇಡವೆಂದರೆ ಎಲ್ಲರನ್ನೂ ಬೇಕಾದರೆ ಇಲ್ಲಿಗೆ ಕರೆಸೋಣ. ಆ ದುರುಗನ ವಿಚಾರ ಯೋಚನೆ ಮಾಡಬೇಡ….ಕೇಳು. ಹಲಗೆ ಶಬ್ದ ಕೇಳಿದೆಯಾ ? ಢಣ್ ಢಣ…. ಢಣಕು ಢಕ್…. ಈಗ ಕರಿಯವ್ವನ ಎದುರು ಕುರಿ ಕತ್ತರಿಸಿ ಮನಸ್ಸು ಹಗುರಮಾಡಿಕೊಳ್ತಿದಾನೆ ದುರುಗ-”
“ಏನು ? ಆಗಲೇ ಕುರಿ ಕಡೀತಿದಾನೆಯೇ ?”
“ಹೌದು, ನಾನು ಕೊಟ್ಟೆ. ಒಂದು ಕುರಿಯೇನಯ್ಯ ಮಹಾ. ನಿನ್ನಂಥ ಸ್ನೇಹಿತನ ಪರವಾಗಿ ಒಂದು ಕುರಿಗೆ ನಲವತ್ತು ರೂಪಾಯಿ ಕೊಟ್ಟರೆ ನಾನು ಬಡವ ಆಗ್ತೇನೆಯೆ? ಇಲ್ಲ.”
ನನಗೆ ಇದೆಲ್ಲ ತೀರ ವೇಗದ ಘಟನೆಯಾಗಿ ಕಾಣುತ್ತಿತ್ತು. ನಮ್ಮ ಊರನ್ನು ಈತ ಸಂಪೂರ್ಣವಾಗಿ ಹತೋಟಿಗೆ ತೆಗೆದುಕೊಂಡಂತೆ ಕಾಣುತ್ತಿತ್ತು. “ಹಾಗಾದರೆ, ರುದ್ರು, ನೀನು ನನ್ನ ಪರವಾಗಿ ಕರಿಯವ್ವನಿಗೆ ಕುರಿ ಕೊಟ್ಟೆ?”
“ಓಹ್ ! ನಿನಗೆ ಕಿವೀನೂ ಕೇಳಿಸೋಲ್ಲ !”
“ಕೇಳಿಸುತ್ತೆ. ಹೇಳು, ನಿನಗೆ ಇದರಲ್ಲೆಲ್ಲ ನಂಬಿಕೆ ಇದೆಯಾ ? ನಿಜ ಹೇಳು.
ಲಿಂಗಾಯಿತರ ಹುಡುಗ ನೀನು. ನಾನೂ ಅಷ್ಟೆ. ಕರಿಯವ್ವನಿಗೆ ಕುರಿ ಕೊಡೋದರಲ್ಲಿ ನನಗೆ ನಂಬಿಕೆ ಬರೋದಕ್ಕೆ ಸಾಧ್ಯವೆ?”
“ನಿನಗೆ ? ದುರುಗನಿಂದ ಪ್ರಮಾಣ ಯಾಕೆ ಮಾಡಿಸಬೇಕಿತ್ತು ? ನಂಬಿಕೆ ಇಲ್ಲದೆ ಹಾಗೆ ಮಾಡಿದೆಯಾ?”
“ನನಗೇನೂ ತಿಳೀತಿಲ್ಲ, ನಾನಾಗ ಚಿಕ್ಕ ಹುಡುಗ.”
“ ತಿಳಿಯೋಲ್ಲ ಮರಿ ! ತಿಳಿಯೋಲ್ಲ ! ಎಲ್ಲ ನಿಧಾನಕ್ಕೆ ತಿಳೀಬೇಕು, ನಿಧಾನಕ್ಕೆ ಎಲ್ಲವೂ ನಮ್ಮ ವಶವಾಗಬೇಕು. ಆಗುತ್ತೆ. ಈಗ ಕುಡಿ, ಊಟ ಮಾಡೋಣ. ಆಮೇಲೆ ಬೇಕಾದಷ್ಟು ಮಾಡೋದಿದೆ, ಬೇಕಾದಷ್ಟು !”
“ಈ ಊರಿಗೆ ಈಗ ಛೇಲ್ಮನ್ ಯಾರು ?”
“ಮಹಾದೇವಪ್ಪ”
“ನೀನು ?”
“ನಾನು ಏನು ಅನ್ನೋದು ಎಲ್ಲರಿಗೆ ನಿಧಾನಕ್ಕೆ ತಿಳೀತಿದೆ. ಈ ಊರಿಗೆ ಕರೆಂಟು ಬಂದಿದ್ದು ಯಾರಿಂದ ಅಂಡ್ಕೊಂಡಿದ್ದಿ ? ಈಶ್ವರ ದೇವಸ್ಥಾನ ಕಟ್ಟಿಸಿರೋರು ಯಾರು ? ಆ ರಸ್ತೆಗಳೆಲ್ಲ ಯಾರಿಂದ ಸಮಕಟ್ಟಾಗಿ ಚೆನ್ನಾಗಿವೆ? ಇಲ್ಲಿಗೆ ಕೋಆಪರೇಟಿವ್ ಸೊಸೈಟಿ, ಹಾಲಿನ ಸೊಸೈಟಿ ಬಂದದ್ದು ಯಾರಿಂದ ?”
“ಹಾಗೆ ಪ್ರಶ್ನೆಗಳಾಗಿ ಎಲ್ಲವನ್ನೂ ಕೇಳಬ್ಯಾಡ. ಈ ಊರಲ್ಲಿ ಬಹಳ ಕೆಲಸ ನಡೀತಿದೆ -ಗೊತ್ತು, ನೀನೇ ಎಲ್ಲವನ್ನೂ ಮಾಡಿಸಿರಬಹುದು” ಅಂದೆ.
ಕರಿಯವ್ವನ ಗುಡಿಯ ಹತ್ತಿರ ಹಲಗೆ, ವಾಲಗದ ಸದ್ದು ಜೋರಾಗುತ್ತಿತ್ತು. ನನ್ನ ಕಿವಿ ಅದನ್ನು ಬಿಟ್ಟು ಕದಲಲೊಲ್ಲವು. ನನ್ನೆದುರು ರುದ್ರ ಕುಡಿಯುತ್ತಾ ಗಟ್ಟಿ ಧ್ವನಿಯಲ್ಲಿ ಮಾತಾಡುತ್ತಿದ್ದ. ನಾನೆಂದೆ, “ನೋಡು ರುದ್ರ, ಗುಡಿ ಹತ್ರ ಹೋಗೋಣ. ಅದನ್ನೆಲ್ಲ ನೋಡಿ ಬಹಳ ದಿನ ಆಗಿದೆ.” ಅಂದೆ.’
“ರೈಟ್” ಅಂದು ಅವನು ಮನೆಯಿಂದ ಹೊರಗೆ ಬಂದು ಪಕ್ಕದ ಶೆಡ್ಡಿನಿಂದ ಮೋಟಾರ್ಸೈಕಲ್ ತಂದ. ಹೊಚ್ಚ ಹೊಸ ಬುಲೆಟ್ ಗಾಡಿ, ಬಾವಿಯ ಹತ್ತಿರ ನಿಲ್ಲಿಸಿ ಎಡಗಾಲಿಂದ ಒದ್ದು ಸ್ಟಾರ್ಟ್ ಮಾಡಿದೆ. ನಾನು ಹಿಂದೆ ಹತ್ತಿ ಕೂತೆ. ವೇಗವಾಗಿ ಹೊರಡಿಸಿ ಗೇಟಿನ ಹತ್ತಿರ ಬಂದು ಕಾಲಿನಿಂದ ಬಾಗಿಲನ್ನು ಒದ್ದ. ಕರಿಯ ಒಳಗಿನಿಂದ ಓಡಿಬಂದು ಗೇಟ್ ಹಾಕಿಕೊಂಡ. ಪರಗಿ ಮೆಳೆಯ ಜಾಡಿನಲ್ಲಿ ತಗ್ಗು ದಿಣ್ಣೆ ನೋಡದೆ ಮೋಟಾರುಬೈಕು ಓಡುತ್ತಿತ್ತು. ಆ ಸದ್ದಿನಲ್ಲೂ ದೇವಸ್ಥಾನದ ಹಲಗೆ, ವಾಲಗದ ಗದ್ದಲ ಹತ್ತಿರಕ್ಕೆ ಬರುವುದು ವೇದ್ಯವಾಗುತ್ತಿತ್ತು. ಜನ ಸೇರಿದ್ದರು. ಪೂಜಾಗ್ರ ಹಲಗಯ್ಯ ಕರಿಯವ್ವನ ಎದುರು ಗಂಟೆ ಬಾರಿಸುತ್ತಿದ್ದ; ಗುಡಿಯ ನಡು ಕೋಣೆಯಲ್ಲಿ ಹೆಂಗಸರು, ಮಕ್ಕಳು ನಿಂತು ಮಾತಾಡುತ್ತಾ, ಚೀರುತ್ತಾ ದೊಡ್ಡ ಗಂಟೆಗಳನ್ನು ಹಾರಿ, ನಿಂತು ಬಾರಿಸುತ್ತಿದ್ದರು ಜಗುಲಿಯ ಮೇಲೆ ಜನ ತುಂಬಿದ್ದರು. ರುದ್ರ ಮತ್ತು ನಾನು ಮೋಟಾರುಬೈಕಿನ ಮೇಲೆ ಬಂದ ಕೂಡಲೇ ಜನ ನಮ್ಮ ಬಂದು ಗುಂಪು ಸೇರಲಾರಂಭಿಸಿದರು, ನಾನು ಕುರಿಗಳನ್ನು ಹಿಡಿದು ನಿಂತ ಜನರನ್ನು ನೋಡುತ್ತಿದ್ದೆ; ದುರುಗ ಚೆನ್ನಾಗಿ ಕುಡಿದು ಕುರಿ ಹಿಡಿದು ನಿಂತಿದ್ದ ; ಅವರ ಕೈಯಿನ ಹರಿತವಾದ ಕೊಡಲಿ ಹೊಳೆಯುತ್ತಿತ್ತು. ನಾನು ಬೈಕಿನಿಂದ ಇಳಿದು, “ಈ ಕಡೆ ಬಾ” ಎಂದು ಶೂದ್ರರಿದ್ದ ಕಡೆಗೆ ಹೊರಟೆ. ರುದ್ರ ನಕ್ಕು, “ಯಾಕೆ ಲಿಂಗಾಯತರ ಕಡೆಗೆ ಹೋದರೆ ವಿಸ್ಕಿ ಗೊತ್ತಾಗುತ್ತಾ ?” ಅಂದ. ಆದರೂ ಅವನನ್ನು ಎಳೆದುಕೊಂಡು ದುರುಗನ ಹತ್ತಿರ ಹೋದೆ. ನಾವು ಹತ್ತಿರ ಬರುವುದು ನೋಡಿದ ದುರುಗನ ಕಣ್ಣು ಹೊಳೆದವು. ಕುರಿಯನ್ನು ಇನ್ನೊಬ್ಬನ ಕೈಗೆ ಕೊಟ್ಟು ಹಲಗೆ ಇಸಿದುಕೊಂಡು ಬಡಿಯುತ್ತ ಕುಣಿಯ ಹತ್ತಿದ. ವಾತಾವರಣ, ಇದೇ ಕೇಕೆ, ಗಂಟೆ, ವಾಲಗ, ಹಲಗೆಯಿಂದ ತುಂಬಿತ್ತು. ರುದ್ರ ತನ್ನ ಜೇಬಿನಿಂದ ಎಂಟಾಣೆಯ ನಾಣ್ಯ ತೆಗೆದು “ದುರುಗ !” ಅಂದು ಎಸೆದ. ಆದನ್ನು ಕಂಡ ಜನರು ಹಿಂದಕ್ಕೆ ಸರಿದರು, ದುರುಗ ಆ ನಾಣ್ಯದ ಸುತ್ತ ಗಾಲಿ ಗಾಲಿಯಾಗಿ ಸುತ್ತಹತ್ತಿದ. ಅವನ ವೃತ್ತಗಳು ದೊಡ್ಡದಾಗುತ್ತಾ ಹೋದುವು. ಅವನ ಕೈಯಿನ ಹಲಗೆಯ ಸದ್ದು ಗಟ್ಟಿಯಾಗುತ್ತಾ ಹೋಯಿತು. ಆಮೇಲೆ ಅದನ್ನು ಹತ್ತಿರ ಹತ್ತಿರವಾಗಿ ಸುತ್ತಿದ. ಕೊನೆಗೆ ಹಲಗೆಯ ಲಯವನ್ನು ಸರಿಪಡಿಸಿಕೊಳ್ಳುತ್ತಾ ನಾಣ್ಯದ ಹತ್ತಿರ ಸುತ್ತಿ ಹಲಗೆ ಬಡಿಯುತ್ತಲೇ ಮಂಡಿಯೂರಿ ಕೂತ, ಕೈ ಯಾಂತ್ರಿಕವಾಗಿ ಹಲಗೆ ಬಡಿಯುತ್ತಿದ್ದವು ; ಹಣೆಯನ್ನು ನಾಣ್ಯಕ್ಕೆ ಇಟ್ಟು ಒತ್ತಿದೆ, ಎದ್ದು ಹಲಗೆ ಬಡಿಯುತ್ತಾ ಜನರತ್ತ ತಿರುಗಿದಾಗ ನಾಣ್ಯ ಅಂಟಿಕೊಂಡಿರಲಿಲ್ಲ. ಮತ್ತೆ ವೃತ್ತವಾಗಿ ಸುತ್ತಿ ಹತ್ತಿರ ಬಂದು ಬಗ್ಗಿದ. ಅಷ್ಟರಲ್ಲಿ ಬೆವರು ಹಣೆಯ ಮೇಲೆ ನಿಂತಿತ್ತು, ನಾಣ್ಯ ಅಂಟಿಕೊಂಡಿತು. ವಿಜಯೋತ್ಸಾಹದಿಂದ ಎದ್ದು ಗತ್ತಿನಿಂದ, ಗಾಂಭೀರದಿಂದ ಕುಣಿಯುತ್ತಾ ಹಲಗೆ ಬಡಿದ, ಜನ ಚಪ್ಪಾಳೆ ತಟ್ಟಿದರು. ದುರುಗ ಕುಣಿಯುತ್ತಲೇ ಇದ್ದ, ಅವನ ಹಣೆ ಮತ್ತು ನಾಣ್ಯ ಒಂದೇ ಆದಹಾಗಿತ್ತು. ಗಂಟೆಯ ಸದ್ದು ನಿಂತಿತು.
ವಾಲಗ ಮಂದವಾಯಿತು. ಪೂಜಾರಿ ಹಲಗಯ್ಯ ಮಂಗಳಾರತಿ ಮಾಡಿದ. ಕುಂಕುಮ, ನೀರು, ಹೂವು ತಂದು ಕುರಿಯ ಹತ್ತಿರ ನಿಂತ ಜನ ಕುರಿಯನ್ನು ನೋಡುತ್ತಿದ್ದರು. ದುರುಗ ಹಲಗೆಯನ್ನು ಬೇರೆಯವರಿಗೆ ಕೊಟ್ಟು ಕಂದಲಿ ತಂದು ನಿಂತ. ಪೂಜಾರಿ ನೀರು, ಹೂವು, ಕುಂಕುಮ ಹಾಕಿದ. ದುರುಗ ಕಂದಲಿ ಎತ್ತಿ ಹೊಡೆಯಲು ಹೋದ. ಆದರೆ ಕುರಿ ಕುತ್ತಿಗೆ ಎಳೆದುಕೊಂಡು ಒದ್ದಾಡಿತು. ಪೆಟ್ಟು ನೆಲಕ್ಕೆ ಬಿತ್ತು. ದುರುಗ ನೆಲಕ್ಕೆ ಉರುಳಿದ. ಇನ್ನಿಬ್ಬರು ಬಂದು ಕುರಿಯ ತಲೆ ಕಾಲು ಹಿಡಿದುಕೊಂಡರು. ಇನ್ನೊಬ್ಬ ಕಂದಲಿ ಎತ್ತಿ ಅದರ ಕುತ್ತಿಗೆಗೆ ಹೊಡೆದ. ತಲೆ ಕಡಿದು ನೆಲಕ್ಕೆ ಬಿತ್ತು. ಕಾಲುಗಳು ಒದ್ದಾಡಿದವು; ರಕ್ತ ಚಿರ‍್ರನೆ ಸಿಡಿಯಿತು. ತಲೆಯನ್ನು ಅಲ್ಲೇ ಇಟ್ಟು ನೈವೇದ್ಯ ಮಾಡಲಾಯಿತು.
ದುರುಗ ಎದ್ದ, ನನ್ನತ್ರ ಬಂದ, ಫಜೀತಿಗೆ ಎಡೆಗೊಡಬಹುದೆಂದು ಹೆದರಿದ್ದೆ. ಆದರೆ ರುದ್ರನತ್ತ ಹೋದ. ಅವನ ಕಾಲು ಹಿಡಿದುಕೊಂಡ. ಮೆಲ್ಲಗೆ ಅಪ್ಪಿಕೊಂಡು ಹೆಗಲಿಗೆ ಅವನನ್ನು ಎತ್ತಿದ. ಅವನ ಹೆಂಡದ ವಾಸನೆಯಲ್ಲಿ ನಮ್ಮ ಹೆಂಡದ ವಾಸನೆ ಗೊತ್ತಾಗಲು ಸಾಧ್ಯವಿರಲಿಲ್ಲ. ನಾನು ಜನರನ್ನು ನೋಡುತ್ತಿದ್ದೆ.
ಜಗುಲಿಯ ಮೇಲೆ ಹೆಂಗಸರು ನಿಂತಿದ್ದರು. ಅವರಲ್ಲಿ ಕೆಲವರ ಹೆಸರು ನನಗೆ ಗೊತ್ತು. ಸಂಕ್ರಪ್ಪನ ಮಗಳೂ ಅಲ್ಲಿಯೇ ಇದ್ದಳು; ದುರುಗ ರುದ್ರನನ್ನು ಅನಾಮತ್ತಾಗಿ ಎತ್ತಿಕೊಂಡಾಗ ನಕ್ಕಳು, ಸ್ವಚ್ಛವಾದ ಬಿಳುಪಾದ ಹಲ್ಲು ; ತುಂಬಿ ರಸವುಕ್ಕುವ ತುಟಿಗಳು, ಎಲ್ಲರಿಗಿಂತ ಕೊಂಚ ಎತ್ತರವಾಗಿದ್ದಳು; ಬಿಗಿದ ಎದೆ ಸೀರೆಯ ಮೇಲೆ ಕೋಡಿ ಹಾಯುತ್ತಿತ್ತು. ಮತ್ತೆ ಕೆಳಕ್ಕೆ ನೋಡಿದೆ; ಬಿಗಿಯಾದ ಗಂಡುತೋಳನ್ನು ಬಯಸುವ ಸೊಂಟ, ಅಲ್ಲಿಂದ ಕೆಳಕ್ಕೆ ಉಬ್ಬಿದ, ಕಣ್ಣು ಕುಕ್ಕುವ ತೊಡೆ, ಕೊಂಚ ಕಪ್ಪಾದ, ಕಾದ ಉಕ್ಕಿನಂಥ ಹೆಣ್ಣು , ಪಕ್ಕದಲ್ಲಿದ್ದ ಮಹದೇವಪ್ಪನವರ ಮಗ ಶೇಖರನನ್ನು ಕೇಳಿದೆ. “ಸಂಕ್ರಪ್ಪನ ಮಗಳ ಹೆಸರೇನೋ ಶೇಖರ ?”
“ಸಾವಂತ್ರಿ ಅಂತ-ನೆನಪಿಲ್ಲವಾ ?”
ನಾನು ಸುಮ್ಮನಾದೆ, ಆದರೆ ಮನಸ್ಸು ಸುಮ್ಮನಾಗಲಿಲ್ಲ. ಶೇಖರ ಯಾವ ಭಾವವೂ ಇಲ್ಲದ ಧ್ವನಿಯಲ್ಲಿ ಕೇಳಿದ, “ಯಾಕೆ ವಿಶ್ವಣ್ಣ ?”
“ಯಾಕೂ ಇಲ್ಲ, ಸುಮ್ಮನೇ. ಅವರ ಅವ್ವ ಸತ್ತು ಎಷ್ಟು ವರ್ಷ ಆತು ?”
“ಹೋದ ವರ್ಷದ ಹಟ್ಟಿ ಹಬ್ಬಕ್ಕೆ ಒಂದು ವಾರ ಇತ್ತು”
ನನಗೆ ವಿಸ್ತಿಯ ನೆನಪು ಮಾಸಿತ್ತು. ಸುಮ್ಮನಿರಲಾರದೆ ಹೆಂಗಸರ ಹತ್ತಿರ ಹೋದೆ. ಮಲ್ಲಕ್ಕ ನನ್ನನ್ನು ನೋಡಿ, “ಯಾವಾಗ ಬಂದೆ ತಮ್ಮ? ಮನೇ ಕಡೆ ಬಾ” ಅಂದಳು.
“ಬೆಳಗ್ಗೆ ಬಂದೆ. ಎಲ್ಲಾ ಚೆನ್ನಾಗಿದ್ದಾರ ? ಮಗಳು ಈಗ ಯಾವುದರಲ್ಲಿದ್ದಾಳೆ ?” ಅಂದೆ.
ಮಲ್ಲಕ್ಕ ತನ್ನ ಗ್ರಾಮಸೇವಕನಾದ ಅಳಿಯನ ನೆನಪಿಂದ ಸಂತೋಷಗೊಳ್ಳಲಿಲ್ಲ. ಮಿಕ್ಕ ಹೆಂಗಸರು ಮುಸುಮುಸು ನಕ್ಕರು. “ಈಗ ಗಾಜನೂರಾಗೆ ಅದಾಳೆ, ಆಕೆಗೆ ನಾಕು ಮಕ್ಕಳೀಗ. ಎಲ್ಲಾ ಗಂಡು” ಅಂದಳು ಮಲ್ಲಕ್ಕ. ತನ್ನ ಅಳಿಯ ಭಾಡ್ಯಾ ಎಂಬ ಸುದ್ದಿಯನ್ನು ಸುಳ್ಳಾಗಿಸಲು ಮಲ್ಲಕ್ಕ ತನ್ನ ಗಂಡು ಮೊಮ್ಮಕ್ಕಳ ವಿಚಾರ ಹೇಳುತ್ತಿದ್ದಳು. ನನಗೆ ನಿಜಕ್ಕೂ ಮಲ್ಲಕ್ಕನಲ್ಲಿ ಅಷ್ಟು ಆಸಕ್ತಿ ಇರಲಿಲ್ಲ. ಸಾವಂತ್ರಿ ಯತ್ತ ತಿರುಗಿ, ಯಜಮಾನನ ಧ್ವನಿಯಲ್ಲಿ, ಯಾರೂ ತಪ್ಪು ತಿಳಿದುಕೊಳ್ಳದಂತೆ, “ಏನಮ್ಮಾ ಸಾವಂತ್ರಿ, ನಿನ್ನ ತಾಯಿ ತೀರೋಂಡ್ರಂತೆ, ಕೇಳಿ ತುಂಬ ಬೇಸರವಾಯಿತು” ಅಂದೆ. ಅವಳು ದುಃಖ, ನಾಚಿಕೆ, ಭಯ ಎಲ್ಲವೂ ಒಟ್ಟಿಗೇ ಆಗಿ ಸೆರಗಿನಿಂದ ಮುಖ ಮುಚ್ಚಿಕೊಂಡಳು. ಅವಳ ಮೊಣಕ್ಕೆ ಕಳೆಕಳೆಯಾಗಿತ್ತು ; ನನ್ನ ಎದೆ ಅವಳ ತೇಜಸ್ಸಿನ ಹತ್ತಿರ ಢವಗುಟ್ಟತೊಡಗಿತು. ಮಲ್ಲಕ್ಕನ ಎರಡನೆ ಮಗಳು, “ವರ್ಷಾತು ಹೊಂಟುಹೋಗಿ” ಅಂದಳು.
ರುದ್ರ ಮೋಟಾರು ಬೈಸಿಕಲ್ ತರುವಾಗ ಸಾವಂತ್ರಿಯ ಎದೆ, ಗಲ್ಲ ನನ್ನ ಗಂಟಲನ್ನು ತುಂಬಿದಂತಿತ್ತು. ದುರುಗ ನಮ್ಮ ಸುತ್ತಾ ಹಾರಾಡುತ್ತಿದ್ದ ; ಹಾಡುತ್ತಿದ್ದೆ. ನನ್ನ ಕಡೆ ಅವನ ಗಮನ ಹರಿಯದ್ದು ಕಂಡು ವಿಸ್ಮಯವಾಗಿತ್ತು. ಆದರೆ ಅವನ ವಿಚಾರ ಯೋಚನೆಗೆ ನನ್ನ ಮೈಯಲ್ಲಿ ಜಾಗವಿರಲಿಲ್ಲ. ರುದ್ರ ಸೈಕಲ್ ಹೊರಡಿಸಿದ; ಜನ ಹಿಂದಕ್ಕೆ ಸರಿದರು; ಕುರಿಯ ತಲೆಯನ್ನು ಎತ್ತಿಕೊಂಡರು. ಕುರಿಯ ನಾಲ್ಕು ಕಾಲುಗಳನ್ನೂ ಕಣ್ಣಿಯಿಂದ ಕಟ್ಟ ಕೋಲು ತೂರಿಸಿ ಹೊತ್ತರು. ನಾವು ರುದ್ರನ ಮನೆಯ ಕಡೆ ಹೊರಟಾಗ ಹೇಳಿದೆ. “ಲೋ ರುದ್ರ, ನನ್ನನ್ನು ಮಹಾದೇವಪ್ಪನ ಮನೆ ಹತ್ರ ಇಳಿಸು” ಅಂದೆ. ಅವನು ಮರು ಮಾತಾಡದೆ ಗಾಡಿ ಓಡಿಸಿ ಕೇರಿಯಲ್ಲಿ ಧಬಧಬಿಸುತ್ತಾ ಹೋಗಿ ಮಹಾದೇವಪ್ಪನ ಮನೆಯ ಹತ್ತಿರ ಇಳಿಸಿದ “ರಾತ್ರಿ ಊಟಕ್ಕೆ ಬಾ, ಮರೀಬೇಡ, ಮಾತಾಡೋದು ಬೇಕಾದಷ್ಟಿದೆ” ಅಂದ.
ಮಹಾದೇವಪ್ಪ ಜಗುಲಿಯ ಮೇಲೆ ಕೂತು ಸಂಗ, ವೀರಯ್ಯ ಮುಂತಾದವರ ಜೊತೆಗೆ ಹರಟುತ್ತಿದ್ದರು. ನಾನು ಬಂದದ್ದು ಕಂಡು ಎದ್ದರು “ಬೇ, ವಿಶ್ವನಾಥ ಬಂದಿದ್ದಾನೆ. ನೀರು ಕೊಡು” ಅಂತ ಕೂಗಿದರು. ಅವರ ಧ್ವನಿ ಅಡಗುವ ಮುಂಚೆಯೇ ಅವರ ಹೆಂಡತಿ ಥಳಥಳ ಹೊಳೆಯುವ ಚೊಂಬಿನಲ್ಲಿ ನೀರು ತಂದು ಕೊಟ್ಟು. “ಹ್ಯಾಗಿದ್ದೀಯಾ ವಿಶ್ವಾ? ಎಲ್ಲ ಸುಕವಾಗಿದ್ದಾರಾ ?” ಅಂದರು. ನಾನು ನಕ್ಕು “ನೀವು ಹ್ಯಾಗಿದ್ದೀರಿ ಹೇಳಿ, ಪೇಟೆಯಲ್ಲಿ ಹೇಗೋ ಕಾಲ ಕಳೆದು ಹೋಗುತ್ತೆ” ಅಂದೆ.
ಶೇಖರ ಟವಲು ತಂದ, ಒರಸಿಕೊಂಡು ಕಂಬಳಿಯ ಮೇಲೆ ಕೂತೆ. ಮಹಾದೇವಪ್ಪ ನಿಧಾನಕ್ಕೆ ಎಲೆಯಡಕೆ ಹಾಕಿಕೊಳ್ಳುತ್ತಾ “ಇಲ್ಲೂ ಕಾಲ ಹೊರಟುಹೋಗುತ್ತೆ ಮಗು-ಹ್ಯಂಗೆ ಹೋಗುತ್ತೆ ಎಂಬುದೇ ಪ್ರಶ್ನೆ. ಊರಿಗೆ ಲೈಟ್ ಬಂತು, ಆಸ್ಪತ್ರೆ ಬಂತು, ಇಸ್ಕೂಲು ಬಂತು-ಆದರೆ ಸುಕ ಬಂತಾ ? ಯಾವಾಗ ಏನಾದೀತೋ ಅಂತ ನನ್ನೆದೆ ಢವಗುಟ್ಟೈತಿ…..”
“ಯಾಕೆ ? ಯಾಕೆ ಹೆದರಿಕೆ ?”
“ಹೋಗಲಿ ಬಿಡಪ್ಪ ಹೆಂಗೋ ಆಗ್ತತಿ ಹೋಗ್ತತಿ. ಈಗ ನೀನು ನೆಲ ಮಾರಾಕ ಅಂತ ಬಂದೆ, ಅಲ್ಲವಾ ?” ಅಂದರು.
ನಾನು ಹೇಳಿದೆ “ಹೌದು, ದುರುಗನ್ನ ನೆಚ್ಚಿ ನಾನು ಬೆಂಗಳೂರಲ್ಲಿ ಹಾಯಾಗಿ ಇರೋಕೆ ಆಗೋಲ್ಲ. ಇವತ್ತಿನವರೆಗೆ ಆತ ನೆಟ್ಟಗೆ ಭತ್ತ, ದುಡ್ಡು ಒಂದನ್ನೂ ಕಳಿಸಿಲ್ಲ. ಹೀಗೇ ಆದರೆ ನನಗೆ ಜಮೀನು ಇದ್ದೇನು ಉಪಯೋಗ ?”
ಎಲೆಯಡಿಕೆ ಬಾಯಿಯಲ್ಲಿ ಹಾಕಿಕೊಂಡು ಯೋಚಿಸಿದರು.
“ಹ್ಯಂಗಪ್ಪ ಕಳಿಸ್ತಾನೆ. ನಿನ್ನ ನೆಲಕ್ಕೆ ಆತ ಸರಿಯಾಗಿ ಕುಳ ಹಾಕಿಲ್ಲ. ಅವನು ಯಾಕೆ ಅದನ್ನು ಬೀಳು ಬಿಟ್ಟ ಅಂಬೋದು ನಿಂಗೆ ಇಷ್ಟೊತ್ತಿಗೆ ಗೊತ್ತಾಗಬೇಕಿತ್ತು, ಆಗಲಿಲ್ಲ”.
“ಯಾಕೆ ?”
“ ಅದು ನಿನ್ನಪ್ಪ ಮಾಡಿದ ಮೋಸ, ಹಿಪ್ಪೆ ಮಾಡಿ ರಿಜಿಸ್ಟ್ ಮಾಡೋವಾಗ ನಿನ್ನ ಪಾಲಿಗೆ ಆ ನೆಲ ಬರೆದರು. ನಿನ್ನಣ್ಣ ಅವನ ಪಾಲಿನ ಗದ್ದೇನೆಲ್ಲ ಸುಕವಾಗಿ ಮಾರಿ ಗಂಟು ಕಟ್ಟಿಕೊಂಡು ಶಿವಮೊಗ್ಗಾ ಸೇರಿಕೊಂಡ. ನಿಮ್ಮಪ್ಪ ಕೂಡ ನಿನ್ನ ಪಾಲಿನ ನೆಲಾನ ಗೇದಿರಲಿಲ್ಲ. ಅದನ್ನ ಗೇಯಾಕೆ ಹೋಗಿ ದುರುಗ ಮಗು ಕಳಕೊಂಡ. ದೆವ್ವದ ಗದ್ದೆ ಅಂತ ಅಲ್ವಾ ಅದರ ಹೆಸರು ?”
“ಮಹಾದೇವಪ್ಪನವರೇ, ಅದರಲ್ಲಿ ನಿಮಗೆ ನಂಬಿಕೆ ಇದೆಯಾ ?”
“ಇಲ್ಲ, ನನಗೆ ಗೊತ್ತಿಲ್ವಾ ?” ನನ್ನ ಗದ್ದೆನೇ ನಂಗೆ ಮನಾಮನಿ-ಅದನ್ನ ಉತ್ತು ನನ್ಮಗ ತಿಂದರೆ ಸಾಕು. ಮಿಕ್ಕೋರಿಗೆ ಹ್ಯಂಗೆ ಅದನ್ನ ಹೊಡಿ ಅಂತ ಹೇಳಲಿ, ತಮ್ಮ. ನನ್ನ ಮಾತಲ್ಲಿ ಅವರಿಗೆ ನಂಬಿಕೆ ಬಂದಾತಾ ?”
“ ಈಗೇನು ಮಾಡೋದು ನೀವೇ ಹೇಳಿ. ಅದನ್ನು ಹಾಗೇ ಬಿಟ್ಟು ಹೋಗಲೆ ?”
“ಬಿಡೋದು ಅಷ್ಟು ಸಲೀಸಲ್ಲ, ದುರುಗ ಬಿಡ್ತಾನಾ ?”
“ಇದೇನು ಹೀಗಂತೀರಿ? ಬಿಡೋಲ್ಲವಾ ?”
“ನಂಗೇನೋ ಅನುಮಾನ. ನೋಡು, ನಿನಗೆ ಕೆಟ್ಟ ಸುದ್ದಿ ಹೇಳೋಕೆ ಇಷ್ಟವಿಲ್ಲ. ಬ್ಯಾಸರ ಪಡಿಸೋಕೂ ನನಗೆ ಇಷ್ಟವಿಲ್ಲ. ಈ ಊರಿಗೆ ಭೂತ ಹೊಕ್ಕಿದೆ-ತಮ್ಮ. ಈ ಭೂತದಿಂದ ಏನೇನು ಅನಾಹುತ ಆಗುತ್ತೋ ಗೊತ್ತಿಲ್ಲ.ಎಲ್ಲರ ತಲೇಲೂ ಬರೀ ಲೆಕ್ಕಾಚಾರ. ಯಾವುದಾದರೂ ಒಂದು ಮನೆಗೆ ಹೋಗಿ ಕೊಂಚ ಮಜ್ಜಿಗೆ ಕೇಳು ಗೊತ್ತಾಗ್ತೈತೆ. ಆಣೆಗೆ ಸೇರು ಮಜ್ಜಿಗೆ ಮಾರಿದ್ದು ಈ ಊರಲ್ಲೇನಾದ್ರೂ ಇತ್ತಾ? ಪಟ್ಟಣ ಹತ್ರಕ್ಕೆ ಬರ‍್ತಿದೆ, ತಮ್ಮ.”
“ನೋಡಿ ಯಜಮಾನ್ರೇ, ದುರುಗ ನನ್ನ ಜಮಿನು ಬಿಡೋ ಮಾತು ಒತ್ತಟ್ಟಿಗಿರಲಿ. ಅವನು ಎಂಥೋನು ಅಂತ ನಂಗೆ ಗೊತ್ತು. ಈಗ ಅದನ್ನು ಬಿಡಿಸಿಕೊಂಡ್ರೆ ಬೇರೆ ಯಾರಾದ್ರೂ ಆರಂಬ ಮಾಡಬಹುದಾ? ಹೇಳಿ. ಯಾರಾದ್ರೂ ಕೊಳ್ಳಬಹುದಾ? ಹೇಳಿ.”
ಮಹಾದೇವಪ್ಪ ಯೋಚಿಸುತ್ತಾ ಕೂತರು. ಸಂಜೆಯಾಗತೊಡಗಿತ್ತು. ಕರುಗಳು ಹಕ್ಕೆಗಳಿಂದ ಕೂಗುತ್ತಿದ್ದವು. ಹೆಂಗಸರು ಬರಲು ತೆಗೆದುಕೊಂಡು ಅಂಗಳ ಗುಡಿಸುತಿದ್ದರು. ಮಕ್ಕಳು ಸಗಣಿ ತಟ್ಟಿಗಳನ್ನು ತಂದು ಉದ್ದನೆಯ ದಾರ ಕಟ್ಟಿ ಪಟ್ಟಿಗೆ ಒದೆ ಕೊಟ್ಟು ದೂರದಲ್ಲಿ ಕೂತು ಗುಬ್ಬಚ್ಚಿಗಳನ್ನು ಹಿಡಿಯಲು ಹೊಂಚುಹಾಕುತ್ತಿದ್ದರು. ಬುಗುರಿಯಾಡುತ್ತಾ ಗಿಚ್ಚಾ ಹೊಡೆದು ಕೂಗಾಡುತ್ತಿದ್ದರು.
ಅಲ್ಲಿದ್ದ ಹಳ್ಳಿಗರನ್ನು ಅವರ ಮನೆಗಳಿಗೆ ಕಳಿಸಿದರು. ನನ್ನನ್ನು ಕರೆದುಕೊಂಡು ಒಳಗಿನ ಕೋಣೆಗೆ ಹೋಗಿ, “ನಿನ್ನ ಗದ್ದೇಲಿ ದೆವ್ವವೂ ಇಲ್ಲ ಭೂತವೂ ಇಲ್ಲ, ಅದು ನನಗೆ ಗೊತ್ತು, ತಮ್ಮ. ಆದರೆ ಅದನ್ನು ಜನಕ್ಕೆ ಹೇಗೆ ನಂಬಿಸೋದು ? ಹೀಗೆ ಮಾಡೋಣ. ಇವತ್ತು ಹನುಮಂತದೇವರು ಹೊರಡಿಸೋಣ….”
“ದೇವರು ಅಲ್ಲಿ ದೆವ್ವ ಇರೋದು ನಿಜ ಅಂದ್ರೆ ?”
“ಅನ್ನದ ಹಾಗೆ ಮಾಡಬೇಕು. ಅದು ಸಾಧ್ಯ.”
“ನಿಮಗೂ ದೇವರಲ್ಲಿ ನಂಬಿಕೆ ಇಲ್ಲವಾ ?” ಅಂದೆ ಅಚ್ಚರಿಯಿಂದ.
ಮಹಾದೇವಪ್ಪ ನನ್ನ ಪ್ರಶ್ನೆಗೆ ನಕ್ಕರು. “ಹುಚ್ಚ, ದೇವರಲ್ಲಿ ನಂಬಿಕೆ ನನಗಲ್ಲದೆ ಯಾರಿಗೆ ಇರುತ್ತೆ ? ಹನುಮಂತ ದೇವರು ನನಗೆ ಗೊತ್ತಿಲ್ಲವಾ? ದೆವ್ವದಲ್ಲಿ ನಂಬಿಕೆ ಆಂಜನೇಯಸ್ವಾಮಿಗೆ ಇರುತ್ತಾ?”
ಅವರ ಮಾತು ಒಗಟಿನಂತೆ ಇತ್ತು. ಇಷ್ಟು ಹೇಳಿ ಮೌನವಾಗಿ ಕೂತರು. ನಾನೂ ಅವರೆದುರು ಮಾತಾಡದೆ ಕೂತಿದ್ದೆ. ನೂರಾರು ಜನ ಬಡವರು, ಮೂರ್ಖರು, ಮೂಢನಂಬಿಕೆಯುಳ್ಳವರು, ಕೊಳಕರು-ಅವರ ಜೊತೆಗೆಲ್ಲ ನಿತ್ಯ ಓಡಾಡಿದ ಅವರಿಗೆ ವ್ಯವಹಾರಜ್ಞಾನವಿತ್ತು ನನ್ನ ಊರ ಪ್ರತಿಯೊಂದು ಅಂಗುಲವನ್ನೂ ಬಲ್ಲವರಾಗಿದ್ದರು; ಹಬ್ಬಕ್ಕೆ, ಪರೋವಿಗೆ, ಅಭಿಷೇಕಕ್ಕೆ ಅವರ ಬೆಂಬಲವಿಲ್ಲದೆ ಆಗುತ್ತಿರಲಿಲ್ಲ, ಊರ ಪಟೇಲ ತನ್ನ ಕೆಲಸ ಕಳೆದುಕೊಂಡು ಶಿವಮೊಗ್ಗಕ್ಕೆ ಹೋಗುವ ಮುನ್ನ ಅವನ ಸಚಿವರಂತೆ ಕೆಲಸ ಮಾಡಿದ್ದರು. ಅವರ ತಿಳುವಳಿಕೆಯ ಎದುರು ನಾನು ಮಗುವಾಗಿದ್ದೆ.
ತಳವಾರರ ರಂಗನನ್ನು ಕರೆಸಿ ದೇವರು ಹಿಡಿಯುವ ಇಬ್ಬರನ್ನು ಕರೆಸಿದರು. ಆಂಜನೇಯನ ಗುಡಿಯಿಂದ ಉತ್ಸವಮೂರ್ತಿಯನ್ನು ತರಿಸಿ ಪೂಜೆ ಮಾಡಿಸಿದರು. ಊರಲ್ಲಿ ಡಂಗುರ ಸಾರಿ ಎಲ್ಲರೂ ಬರಲು ಹೇಳಿದರು.
ವಿದ್ಯುತ್ ದೀಪಗಳು ಮನೆಯಲ್ಲಿ ಉರಿಯುತ್ತಿದ್ದವು. ಬೀದಿ ಮಾತ್ರ ಕತ್ತಲಿಂದ ತುಂಬಿತ್ತು. ಜನ ಒಬ್ಬೊಬ್ಬರಾಗಿ ಬಂದು ಮಹಾದೇವಪ್ಪನವರ ಮನೆಯ ಅಂಗಳದಲ್ಲಿ ಕಟ್ಟಿಯ ಮೇಲೆ ಗಳೇವು ಸಾಮಾನುಗಳ ಮೇಲೆ ಕೂತರು. ಹನುಮಂತ ದೇವರ ಪೂಜೆ ಮುಂದುವರಿದಿತ್ತು. ಮಹಾದೇವಪ್ಪ ಎಲ್ಲರ ಮಧ್ಯೆ ಉತ್ಸಾಹದಿಂದ ಓಡಾಡುತ್ತಾ ಮಾತಾಡುತ್ತಾ ಇದ್ದರು. ದೇವರೆದುರು ಹಚ್ಚಿದ ಕರ್ಪೂರ ಊದು ಬತ್ತಿಯ ಹೊಗೆ ಅಂಗಳವನ್ನೆಲ್ಲಾ ತುಂಬಿತ್ತು. ನಾನು ನನಗೆ ಪರಿಚಿತರಾದವರೊಡನೆ ಮಾತಾಡುತ್ತಿದ್ದೆ. ಅಂಗಳದ ಕತ್ತಲಲ್ಲಿ ಮುಖಗಳು ಮಬ್ಬಾಗಿ ಕಾಣುತ್ತಿದ್ದವು. ತಳವಾರ ರಂಗ ಹಿಲಾಲು ಹತ್ತಿಸಿದ. ಮೊದಲು ಮಂಕಾಗಿ ಬರುಬರುತ್ತಾ ದಪ್ಪನಾಗಿ ಉರಿದ ಹಿಲಾಲು ನೂರಾರು ಮುಖಗಳನ್ನು ತೋರಿತು. ಮಹಾದೇವಪ್ಪನವರು ಚಪ್ಪಾಳೆ ಹೊಡೆದು ಜನರ ಗುಜುಗುಜು ಅಡಗಿಸಿ ಹೇಳಿದರು. “ನೋಡ್ರಪ್ಪಾ, ನಮ್ಮ ಭರಮಪ್ಪನ ಮಗ ವಿಶ್ವನಾಥ ಇವೊತ್ತು ಬಂದಿದಾನೆ. ಬೆಂಗಳೂರಲ್ಲಿ ದೊಡ್ಡ ಕೆಲಸದಲ್ಲಿದ್ದಾನೆ. ಅವನು ನಿಮಗೆ ನಾಲ್ಕು ಒಳ್ಳೆಯ ಮಾತು ಹೇಳಬೇಕು ಅಂತ ಕೇಳ್ಕೊಳ್ತವೆ.” ನಾನು ಬೆಚ್ಚಿದೆ. ಇದಕ್ಕೆ ನಾನು ಸಿದ್ಧನಿರಲಿಲ್ಲ. ಎದ್ದು ನಿಂತು ಹೇಳಿದೆ : “ನಾನು ನಿಮಗೆ ಹೇಳಬೇಕಾದ್ದೇನೂ ಇಲ್ಲ, ನಿಮ್ಮನ್ನೆಲ್ಲ ನೋಡಿದ್ದು ಸಂತೋಷ.”
ಇಷ್ಟು ಹೇಳಿ ಕೂತುಕೊಂಡೆ. ಮಹಾದೇವಪ್ಪ ಅಲ್ಲಿಯೇ ನಿಂತಿದ್ದ ದುರುಗನನ್ನು ಮುಂದಕ್ಕೆ ಕರೆದು, “ನೋಡೋ ದುರುಗ, ಆಂಜನೇಯ ಸ್ವಾಮಿ ಹೇಳಿದ ಹಾಗೆ ನಡೀಬೇಕು, ತಿಳೀತಾ ?” ಅವನು ನಮಸ್ಕಾರ ಹಾಕಿ ನಿಂತ.
ಇಬ್ಬರು ದೇವರ ಪೀಠದ ಕಾಲುಗಳನ್ನು ಹಿಡಿದು ಮೇಲಕ್ಕೆ ಎತ್ತಿದರು. ಹಿಲಾಲನ್ನು ಮುಂದಕ್ಕೆ ತಂದು ಅದಕ್ಕೆ ಎಣ್ಣೆ ಹಾಕಿದ. ಊದುಬತ್ತಿಗಳನ್ನು ಹಿಡಿದಿದ್ದ ಹುಡುಗ ಮುಂದೆ ಬಂದ. ದೇವರು ಕೈಗಳಲ್ಲಿ ಹಾಗೇ ನಿಂತು ತಲೆಯಲ್ಲಾಡಿಸಿತು. ಊದು ಬತ್ತಿಯ ಹೊಗೆಯಲ್ಲಿ ಹಿಂದಕ್ಕೆ ಮುಂದಕ್ಕೆ ಓಲಾಡಿತು. ನಾನು ತಲೆಯೆತ್ತಿ ನೋಡಿದೆ – ಕಪ್ಪು ಮೋಡಗಳ ಸಂದಿನಲ್ಲಿ ಒಂದೊಂದು ಚುಕ್ಕಿ ಮಿನುಗುತ್ತಿದ್ದವು; ಆಕಾಶದಿಂದ ಭೂಮಿಯ ತನಕ ಕಗ್ಗತ್ತಲು ಹಬ್ಬಿ ನಿಂತಿತ್ತು. ಅಯ್ಯನವರ ಹಿತ್ತಿಲು ಹೊಂಡದಲ್ಲಿ ಕಪ್ಪೆಗಳು ಒಟಗುಟ್ಟಿದವು ; ಹೊಂಡಕ್ಕೆ ನೇತುಬಿದ್ದ ಗೂಡುಗಳಲ್ಲಿ ಹಕ್ಕಿಗಳು ಅನ್ನೋನ್ಯ ಸದ್ದು ಮಾಡುತ್ತಿದ್ದವು.
ದೇವರು ಮಹಾದೇವಪ್ಪನವರ ಎದುರು ನಿಂತು ಹಿಂದಕ್ಕೆ ಮುಂದಕ್ಕೆ ಬಾಗಿ ಮೆಲ್ಲನೆ ತಲೆಯಲ್ಲಾಡಿಸಿತು. ಅವರು ಮನುಷ್ಯರನ್ನು ಮಾತಾಡಿಸುವ ಧಾಟಿಯಲ್ಲೇ. ಅಷ್ಟೇ ಗಂಭೀರವಾಗಿ, “ಸ್ವಾಮಿ, ಒಂದು ಸಂಸಾರಕ್ಕೆ ಅನ್ಯಾಯವಾಗುತ್ತೆ. ನೀನು ದಾರಿ ತೋರಿಸಬೇಕು. ಇವರ ಮಾವಿನಮರದ ಗದ್ದೆಯಲ್ಲಿ ದೆವ್ವ ಇದೆ ಅಂತ ಹೇಳ್ತಾರೆ. ನೀನು ದಾರಿ ತೋರಿಸಬೇಕು” ಅಂದರು.
ನಾನು ಮೈಯೆಲ್ಲ ಕುತೂಹಲವಾಗಿ ನೋಡುತ್ತ ಕೂತಿದ್ದೆ. ಹನುಮಂತ ತನ್ನ ಕುದುರೆಯ ಮೇಲೆ ಕೂತು ಮೌನವಾಗಿದ್ದ. ಜನರು ಆಸಕ್ತಿಯಿಂದ ದೇವರ ಮುಖವನ್ನೇ ನೋಡುತ್ತಿದ್ದರು. ಹಿಲಾಲು ತನ್ನ ಕೆಂಚು ಜ್ವಾಲೆಯಿಂದ ಕತ್ತಲೆಯನ್ನು ನೆಕ್ಕುತ್ತಿತ್ತು. ಸುಮ್ಮನಿದ್ದ ಹನುಮಂತ. ಜನ ತಮ್ಮಲ್ಲೇ ಮಾತಾಡಹತ್ತಿದರು.
ಮಹಾದೇವಪ್ಪ ನಿರಾಶೆಯಿಂದ ಹನುಮನ ಆಕೃತಿಯ ಮೇಲೆ ಕಣ್ಣು ನೆಟ್ಟಿದ್ದರು. ಮೌನ, ಕಗ್ಗತ್ತಲು, ಹಿಲಾಲಿನ ಎಣ್ಣೆ ವಾಸನೆ, ಹನುಮಂತ ತಲೆ ಅಲ್ಲಾಡಿಸಿದ. ಮಹಾದೇವಪ್ಪ ಸಂತೋಷದಿಂದ “ಹೌದೇ? ಇಲ್ಲವೇ?” ಅಂತ ಕೇಳಿದರು. ದೇವರು “ಹೌದು” ಎಂದು ಹಿಂದಕ್ಕೆ ಮುಂದಕ್ಕೆವಾಲಿತು. ಜನಕ್ಕೆ ಗೊಂದಲವಾಯಿತು “ದೆವ್ವ ಇಲ್ವಂತೆ ಕಣಲೇ” “ಐತಂತೋ” “ಇಲ್ಲ ಅಂತ ಕಾಣ್ಳಿಲ್ಲೇನ್ಲಾ” ಎಂದು ಏನೇನೋ ಮಾತಾಡಿಕೊಂಡರು. ಮಹಾದೇವಪ್ಪನವರಿಗೆ ಅಷ್ಟಕ್ಕೆ ತೃಪ್ತಿಯಾದಂತಿತ್ತು. ತೆಂಗಿನಕಾಯಿ ಒಡೆಸಿ, ದೇವರು ಹಿಡಿದವರಿಗೆ ಅದನ್ನು ಗದ್ದುಗೆಯ ಮೇಲೆ ಇಡಲು ಹೇಳಿದರು. ನನ್ನ ಭುಜತಟ್ಟಿ ಖುಷಿ ವ್ಯಕ್ತಪಡಿಸಿದರು. “ಆ ಗದ್ದೇಲಿ ದೆವ್ವ ಭೂತ ಏನೂ ಇಲ್ವಂತೆ” ಎಂದು ಎಲ್ಲರಿಗೂ ಸಾರಿ ಹೇಳಿದರು.
ಜನ ತಮ್ಮ ತಮ್ಮ ಮನೆಗೆ ಹೋದರು. ದುರುಗ ನನ್ನ ಕಾಲು ಹಿಡಿದುಕೊಂಡು “ನನ್ನ ಕೈ ಬಿಡಬಾರದು ಒಡೆಯಾ” ಅಂತ ಬೇಡಿಕೊಂಡ. ನಾನು ಅವನನ್ನು ಸಮಾಧಾನಪಡಿಸಿ ಕಳಿಸಿದೆ. ಊಟಮಾಡಿ ಮಹಾದೇವಪ್ಪನವರ ಜಗುಲಿಯ ಮೇಲೆ ಮಲಗಿದೆ. ಅವರೂ ನನ್ನ ಪಕ್ಕದಲ್ಲಿ ಮಲಗಿದರು. ವಾತಾವರಣ ಪ್ರಶಾಂತವಾಗಿತ್ತು. ಮೈಸೂರಿನ ರಾಜಕೀಯದ ಬಗ್ಗೆ ಮಾತಾಡಿದೆವು. ಗ್ರಾಮಪಂಚಾಯಿತಿಯ ಪ್ರಸ್ತಾಪ ಬಂತು. ರುದ್ರಮೂರ್ತಿಯ ಹೆಸರೆತ್ತಲು ನನಗೆ ಆಶೆಯಾಯಿತು. ಆದರೆ ಹಿಂಜರಿದೆ. ಆಂಜನೇಯನ ಅಪ್ಪಣೆ ನನಗೆ ಅಸ್ಪಷ್ಟವಾಗಿಯೇ ಬಂದಿತ್ತು. ಕೇಳಿದೆ:
“ದೇವರು ಹೊರಡಿಸಿದ್ದು ಒಳ್ಳೆಯದಾಯಿತು. ಜನಕ್ಕೆ ಇನ್ನಾದರೂ ನಂಬಿಗೆ ಬಂದಿರಬೇಕು. ಈ ಜನಕ್ಕೆ ದೆವ್ವ ಭೂತದ ಮೇಲೆ ಮೂಢ ನಂಬಿಕೆ ಯಾವಾಗ ಹೋಗುತ್ತೂ.”
‘ದೆವ್ವ ನಂಬಿದರೇನು, ದೇವರು ನಂಬಿದರೇನು-ಎರಡೂ ಒಂದೇ ಅಲ್ಲವಾ ? ನಂಬಿಕೆ ಬೇಕಪ್ಪ. ಆದ್ರೆ ಒಳ್ಳೇದನ್ನ ನಂಬೋ ಒಳ್ಳೇತನ ಬೇಕು.”
“ಹಾಗಾದರೆ ದೆವ್ವ ಇದೆ ಅಂತೀರಾ ?”
“ನಾನು ನೋಡಿಲ್ಲ, ನೋಡದೇ ಇರೋದೆಲ್ಲ ಇಲ್ಲ ಅಂತ ಹ್ಯಂಗೆ ಹೇಳೋದು ? ತಗಡಿನ ಮನೆ ಪಾರಕ್ಕನ ಗತಿ ಏನಾತು ನೋಡು, ಅವಳ ಗಂಡ ಸತ್ತ ಮ್ಯಾಲೆ ಅವನ ಸೈಕಲು ನಡುಮನೇಲಿ ಇರ‍್ತಿತ್ತು. ನಡುರಾತ್ರಿ ಅದರ ಗಾಲಿ ಗಿರ‍್ರ್ ಅಂತ ತಿರುಗ್ತಿದ್ದವು. ದೀಪ ಮುಡಿಸಿದ್ರೆ ಯಾರೂ ಇರ‍್ತಿರಲಿಲ್ಲ. ಒಂದು ರಾತ್ರಿ ಆಕೆಯ ಮಗ ತಿಪ್ಪೆ ಹತ್ರ ಸತ್ತು ಬಿದ್ದಿದ್ದ.”
ನಾನು ಸುಮ್ಮನಿದ್ದೆ.
“ಇದಕ್ಕೇನಂತೀ ?”
ಕಗ್ಗತ್ತಲು, ಜಗುಲಿಯಲ್ಲಿ ನಮ್ಮಿಬ್ಬರ ಮಾತು ಬಿಟ್ಟರೆ ಬೇರೆ ಪಿಸುಮಾತು ಕೂಡ ಇರಲಿಲ್ಲ. ಹಳ್ಳಿಯ ಎತ್ತುಗಳು ಹುಲ್ಲನ್ನು ಸರಸರ ಎಳೆಯುತ್ತ ತಿನ್ನುವುದು, ಕೋಡುಗಳಿಂದ ಮರಗೆಗೆ ಹೊಡೆಯುವುದು ಸ್ಪಷ್ಟವಾಗಿ ಕೇಳುತ್ತಿತ್ತು. ಎತ್ತುಗಳು ಮಲಗುವಾಗ ‘ಹುಸ್” ಎಂದು ದೊಡ್ಡ ನಿಟ್ಟುಸಿರು ಬಿಡುವುದು ಕಿವಿಗೆ ಹಾಯುತ್ತಿತ್ತು. ಮಹಾದೇವಪ್ಪ ಸುಮ್ಮನಾದರು. ಯೋಚಿಸುತ್ತಿರಬಹುದು, ನಿದ್ರೆ ಮಾಡುತ್ತಿರಬಹುದು. ಆಗ ನಾನು ಹಾಸಿಗೆಯಲ್ಲಿ ಮಲಗೇ ತಲೆ ಎತ್ತಿದೆ-ದೂರದಲ್ಲಿ ಮೋಟಾರು ಬೈಕು ಬರುವಂತೆ ತೋರಿತು ; ರುದ್ರಮೂರ್ತಿ ಇಷ್ಟೊತ್ತಿನಲ್ಲಿ ಬರುತ್ತಾ ಇದ್ದ. ಹಾಸಿಗೆಯಲ್ಲಿ ಕೂತೆ. ಮಹಾದೇವಪ್ಪನವರನ್ನು ಕರೆದೆ. ಅವರಿಗೆ ನಿದ್ದೆ ಹತ್ತಿತ್ತು, ನನಗೂ ನಿದ್ದೆ ಬರುತ್ತಿತ್ತು, ರೆಪ್ಪೆಗಳು ಭಾರವಾಗುತ್ತಿದ್ದವು. ರಸ್ತೆಯಲ್ಲಿ ಬೆಳಕು ಬಿತ್ತು-ಮೋಟಾರುಬೈಕು ಧಡಧಡ ಬಂದು ನಿಂತಿತು. “ಬಾರೋ ವಿಶ್ವ-ಆಗಲೇ ಮಲಗ್ತೀದೀಯ ? ನಾಚಿಕೆ ಆಗೋಲ್ಲವಾ, ಬಾ” ಅಂದ.
“ಎಲ್ಲಿಗೆ ಇಷ್ಟು ಹೊತ್ತಿನಲ್ಲಿ ? ನನಗೆ ನಿದ್ರೆ ಬರ್ತಿದೆ.”
“ನಿದ್ರೆ ಹೊರಟುಹೋಗುತ್ತೆ, ಹತ್ತು” ಅಂದ.
ಆಗ ತಿಳಿಯಿತು. ಅವನ ಹೆಗಲಲ್ಲಿ ಬಂದೂಕ ಇತ್ತು. ಬ್ಯಾಗಿನಲ್ಲಿ ಗುಂಡು ಹಾಕಿ ಕೊಂಡು, ತಲೆಗೆ ಟೋಪಿ, ಮೈಗೆ ಜರ್ಕಿನ್ ಹಾಕಿ ಬೇಟೆಗೆ ಹೊರಟಿದ್ದ. ನಾನು ನಗುತ್ತ ಅವನ ಹಿಂದೆ ಬೈಕ್ ಹತ್ತಿದೆ. “ಲೋ ರುದ್ರ, ನೀನು ತುಂಬ ರೂಮ್ಯಾಂಟಿಕ್ ನೋಡು-ಈ ಕಾಡಿನಲ್ಲಿ ಗುಬ್ಬಚ್ಚಿ ಕೂಡ ಇಲ್ಲ, ಬೇಟೆಗೆ ಹೊರಟಿದ್ದೀ, ಸುತ್ತಿ ಸುತ್ತಿ ಮೈ ಹಣ್ಣು ಮಾಡಿಕೊಂಡು ಬರಬೇಕಷ್ಟೆ.” ಅಂದೆ.
“ಗುಬ್ಬಚ್ಚಿ ಹೊಡೆಯುವ ಬೇಟೆಗಾರ ನೀನು-ಕಣಲೇ ಬೆಪ್ಪುಗ. ನನಗೇನು ಬೇರೆ ಕೆಲಸವಿಲ್ಲವಾ? ಬಾ, ಹೊತ್ತಾಯಿತು. ಇನ್ನೇನು ಚಂದ್ರ ಮೂಡುತ್ತೆ, ಮಜಾ ಇರುತ್ತೆ ತಿಳೀತಾ ?” ಅಂತ ಮೋಟರ್‌ಬೈಕ್ ಓಡಿಸಿದ.
“ಇವತ್ತು ದೇವರು ಹೊರಡಿಸಿದ್ದೆವು. ನನ್ನ ಗದ್ದೇಲಿ ದೆವ್ವ ಭೂತ ಏನೂ ಇಲ್ಲವಂತೆ. ಒಂದು ಕೆಲಸ ಆದಹಾಗಾಯಿತು.” ಅಂದೆ.
“ಅದನ್ನೆಲ್ಲ ನಂಬ್ತೀಯೇನೋ ?” ಅಂದ ರುದ್ರ.
“ಜನಕ್ಕೆ ನಂಬಿಕೆ ಇರುತ್ತೆ. ಅವರ ಮನಸ್ಸು ಹಾಳಾರಾದರೆ ಒಳ್ಳೆಯದು. ಅಲ್ಲವಾ?”
“ಜನ, ಊರು ಇಂಥ ಮಾತನ್ನೆಲ್ಲಾ ಬಿಡು. ನಿನಗೆ ನಂಬಿಕೆ ಇದೆಯೋ ಇಲ್ಲವೋ ಹೇಳು. ಇಲ್ಲದೆ ಇದ್ರೆ ನೀನು ದೇವರನ್ನ ಕೇಳ್ತಾನೇ ಇರ‍್ಲಿಲ್ಲ. ಎಂಥ ದರಿದ್ರನೋ ನೀನು” ಅಂದ.
ನಾನು ಸುಮ್ಮನಾದೆ.
“ಗೊತ್ತೇನೋ ವಿಶ್ವ ? ಆ ಹುಂಬ ದುರುಗ ದೇವರ ಮಾತು ಕೇಳಿ ಇವತ್ತು ನಿನ್ನ ಗದ್ದೆ ಹತ್ತಿರ ಮಲಗೋಕೆ ಹೋಗಿದಾನೆ. ಮಣ್ಣಿನ ಮಗನಯ್ಯ ಅವನು.”
“ಹ್ಞಾ ! ಮಲಗೋಕೆ ಹೋದನೆ ? ಎಲ್ಲಿ ಮಲಗ್ತಾನೆ ? ಯಾಕೆ? ಈ ಕತ್ತಲಲ್ಲಿ ?”
“ನೋಡು ನೋಡು, ಸರಿಯಾಗಿ ಕೂತ್ಕೊ. ಮೋಟಾರು ಬೈಕು ರೈಲುರಸ್ತೆ ಪಕ್ಕದಲ್ಲಿ ಹೋಗಿದೆ. ದುರುಗನ ಬುದ್ದಿ ಕೂಡ ನಿನಗೆ ಅರ್ಥವಾಗಿಲ್ಲ. ಹುಂಬ ಆತ. ಗದ್ದೆ ಹೊಡೆಯೋಕೆ ಆಶೆ ಇದೆ. ನಾಳೆವರೆಗೂ ಸುಮ್ಮನೆ ಇದ್ರೆ ಧೈರ‍್ಯ ಹೊರಟುಹೋದೀತು ಅಂತ ಇವತ್ತೇ ಹೋಗಿ ಮಲಗಿದಾನೆ. ಹಳೆ ಮಂಚಿಕೆ ಇದೆಯಲ್ಲ-ಅಲ್ಲಿ ಬಿದ್ದು ಕೊಂಡಿದ್ದು ಬೆಳಗ್ಗೆ ಬರ್ತಾನೆ. ಇವತ್ತು ಕುರಿ ತಿಂದು ಚೆನ್ನಾಗಿ ಕುಡಿದ ಅಂತ ಕಾಣುತ್ತೆ.”
“ಅವನು ಹಾಗೆ ಮಾಡಬಾರದಿತ್ತು.”
“ನೀನು ಕಣಯ್ಯ ಉತ್ತರಕುಮಾರ. ಯಾರು ಏನು ಮಾಡಬೇಕು ಅಂಥ ನಿನ್ನಂಥ ಪುಕ್ಕಲ ಹೇಳೋಕಾಗೋಲ್ಲ, ಈಚೆಗೆ ಯಾವ ಪುಸ್ತಕ ಓದ್ದೆ ಹೇಳು?”
ಗುಡ್ಡದ ನೆತ್ತಿ ಗುಲಾಬಿಯ ಬಣ್ಣಕ್ಕೆ ತಿರುಗುತ್ತಿತ್ತು. ಚಂದ್ರ ಮೂಡುತ್ತಿದ್ದ. ಮರ ಗಿಡಗಳ ನೆತ್ತಿಗಳು ಗೆರೆಕೊರೆದಂತೆ ಕಂಡವು. ರೈಲು ಹಳಿಗಳು ದೂರಕ್ಕೆ ಹರಿದು ಹೊಳೆಯುತ್ತಿದ್ದವು. ಮಬ್ಬುಗತ್ತಲಲ್ಲಿ ನಮ್ಮ ಗಾಡಿ ಬೆಳಕು ಕೊರಕಲು, ಪೊದೆಗಳ ಮೇಲೆ ಬೆಳಕು ಚೆಲ್ಲುತ್ತ ಕಾಡಿನಲ್ಲಿ ಓಡಿತು. ನಾನೆಂದೂ ಇಲ್ಲಿ ಮೋಟಾರು ಬೈಕಿನ ಮೇಲೆ ಬಂದಿರಲಿಲ್ಲ. ಶಾಲೆಯಲ್ಲಿದ್ದಾಗ ಬೆಳಗ್ಗೆ ಎಮ್ಮೆ ಕಾಯಲು ಬಂದು ಕಬಳೆ, ಪರಗಿಹಣ್ಣು ತಿಂದದ್ದು, ಜೇನು ಇಳಿಸಿದ್ದು, ಜೇನುಹುಳ ಮುಖ ಕಚ್ಚಿದಾಗ ಉಬ್ಬಿದ ತುಟಿ ಬಿಟ್ಟುಕೊಂಡು ಶಾಲೆಗೆ ಹೋದದ್ದು ನೆನೆಸಿಕೊಂಡೆ, ಬಳಪ ಕಲ್ಲಿಗಾಗಿ ಇಲ್ಲಿ ಕೂತು ಅಗೆಯುತ್ತಿದ್ದೆ-ದೊಡ್ಡ ನಿಧಿ ಪುಕ್ಕಟೆ ದೊರೆತ ಸಂತೋಷ, ಕಾಡಿನಲ್ಲಿ ನಮ್ಮ ಗಡಿ ನುಗ್ಗಿದಂತೆ ಗಿಡಗಳು ಒತ್ತರಲಾದವು, ಪೊದೆ ದಟ್ಟವಾದವು. ರುದ್ರ ಕತ್ತು ಅಲ್ಲಾಡಿಸದೆ ಬರುತ್ತಿದ್ದ ; ದಾರಿಯ ತಿರುವುಗಳಲ್ಲಿ ಸೊಂಯ್ಯನೆ ತಿರುಗಿಸಿ ನನ್ನ ಮೇಲೆ ಅದರಿಂದಾದ ಪರಿಣಾಮ ನೋಡುತ್ತಿದ್ದ.
ಹನ್ನೊಂದರ ಹೊತ್ತಿಗೆ ಗಾಡಿಕೊಪ್ಪ ಸಿಕ್ಕಿತು; ಅಟ್ಟಲು ಕಟ್ಟಿ ಆಟಕ್ಕೆ ಸಿದ್ಧತೆ ನಡೆದಿತ್ತು. ರುದ್ರ ನನ್ನನ್ನು ಕರೆದುಕೊಂಡು ಆ ರಂಗದ ಬಣ್ಣದ ಕೋಣೆಗೆ ಹೋದ. ನಾಲ್ಕು ನೆರೆಕೆ ನಿಲ್ಲಿಸಿ ಮಾಡಿಸಿದ ಕೋಣೆ ; ಕಲಾವಿದರೆಲ್ಲ ಬಣ್ಣ ಹಾಕಿಕೊಳ್ಳುತ್ತಿದ್ದರು; ಗಾಡಿಕೊಪ್ಪದ ಪ್ರಮುಖರು ಅವರಿಗೆ ಬೇಕಾದ ಸಲಕರಣೆ ಒದಗಿಸುತ್ತಿದ್ದರು. ರುದ್ರ ನನ್ನ ಕೈಹಿಡಿದು ಎಳೆದೊಯ್ದು ನಸುಗಪ್ಪು ಬಣ್ಣದ ಕೊಂಚ ದಪ್ಪಗಿದ್ದ ಒಬ್ಬ ಹೆಂಗಸಿಗೆ ಪರಿಚಯ ಮಾಡಿಕೊಟ್ಟ. ಅವಳ ಹೆಸರು ಶಾಂತವ್ವ ಎಂದು ತಿಳಿಯಿತು. ಕಣ್ಣಿಗೆ ಕುಕ್ಕುವ ಬಣ್ಣದ ಉಡುಪು ಧರಿಸಿದ್ದಳು; ಕೊರಳಲ್ಲಿ ಹೊಳೆಯುವ ಕೃತಕ ಒಡವೆಗಳು, ತಲೆಯ ಕೂದಲಲ್ಲಿ ಲೋಹದ ಹೂವುಗಳು; ಕಿವಿಗಳಲ್ಲಿ ಬುಗುಡಿ, ಕಾಲಲ್ಲಿ ಕಡಗ ರುದ್ರನನ್ನು ಕಂಡೊಡನೆ ಅವಳ ಕಣ್ಣುಗಳು ಅರಳಿದವು ; ತನ್ನ ಬೆನ್ನನ್ನು ತೋರಿಸಿ “ಚೆಂದಾಗೈತಾ ಸಾವ್ಕಾರ‍್ರೇ?” ಅಂದಳು, ರುದ್ರ ಉತ್ಸಾಹದಿಂದ ಅವಳ ಬೆನ್ನನ್ನು ಮುಟ್ಟಿ, ಎರಡು ಸಲ ತಟ್ಟಿ, “ಸೊಗ್ಸಾಗೈತೆ ಶಾಂತಿ ! ಸೊಗ್ಸಾಗೈತೆ !” ಅಂದ.
* * * *
ನಾನಂದೆ, “ಹೋಗೋಣೋ, ಬೆಳಗಾಗ್ತಾ ಬಂತು. ನಿದ್ರೆ ಬರ್ತಿದೆ. ನನಗೆ ಇದೆಲ್ಲ ಬೋರಾಗ್ತಿದೆ, ರುದ್ರ.”
“ಬೋರು ? ಆಹಾ !” ಎಂದು ಕುಡಿದ. ನನಗೆ ಕೊಟ್ಟು ಒತ್ತಾಯಪಡಿಸಿದ. ಕಟುವಾದ, ದುರ್ವಾಸನೆಯ ಗುಂಡು, ತುಟಿಗಿಟ್ಟು ಮೆಲ್ಲಗೆ ಎತ್ತಿ ನಾಲ್ಕು ಗುಟುಕು ಕುಡಿದೆ. “ಮಗು ಕಣೋ ನೀನು, ಮಗು” ಅಂದ ರುದ್ರ, “ನಿನ್ನಂಗೆ ಬದುಕಿ ಏನಾದಂಗಾತೊ ? ಕುಡಿ. ನಿನ್ನ ಹೆಂಡ್ತಿ ಬೆಂಗಳೂರಾಗಿದಾಳೆ ಹೆದರಬೇಡ, ಕುಡಿ. ಕರಿಯವ್ವನಿಗೆ ನಿನ್ನ ಮೇಲೆ ಸಿಟ್ಟಿಲ್ಲ. ಪರವಾಗಿಲ್ಲ ಕುಡಿ ಇವತ್ತು ದುರುಗ ಕುಡಿದದ್ದು ನೀನು ನೋಡಬೇಕಿತ್ತು.”
“ಹೌದ್ಕಣೋ ರುದ್ರ. ಆ ಮುಕ್ಕನಿಗೆ ಪ್ರಮಾಣ ಮಾಡಿಸಬಾರದಿತ್ತು. ಕುಡ್ತ ಅಂದ್ರೆ ಮೈ ಪರಚಿಕೊಳ್ಳುತ್ತೆ”
ನನ್ನ ತಲೆಗೂ ಏರುತ್ತಿತ್ತು.
“ನಿನ್ನ ಪರಮಾಣಕ್ಕೆ ಬೆಂಕಿ ಹಾಕ. ವರ್ಷದಲ್ಲಿ ಕುಡಿಯೋದನ್ನ ಇವತ್ತು ರಾತ್ರಿ ಕುಡಿದುಬಿಟ್ಟಿದ್ದಾನೋ, ತಿಳೀತಾ. ಚೆನ್ನಾಗಿ ಕುರಿ ತಿಂದು ಕುಡಿದುಬಿಟ್ಟಿದ್ದಾನೆ. ದೆವ್ವ ಭೂತ ಅವನ ಹತ್ರ ಸುಳಿಯಾಕಿಲ್ಲ. ನಿನ್ನ ಗದ್ದೆ ವಾರೆಯಲ್ಲಿ ಬಿದ್ದು ಬಿಟ್ಟರ ಬೇಕು ಈಗ. ಮಣ್ಣಿನ ಮಗನಯ್ಯ, ಮಣ್ಣಿನ ಮಗ !”
“ಹೌದಪ್ಪ, ಮಣ್ಣಿನ ಮಗ”
ಎತ್ತಿ ಗಟ ಗಟ ಕುಡಿದು ಪ್ರಯತ್ನಪೂರ್ವಕವಾಗಿ ಕಣ್ಣು ಬಿಟ್ಟು ಜಗತ್ತನ್ನು ಅವಲೋಕಿಸಿದೆ. ಮರಗಳು ಕಪ್ಪಗೆ ಕದಡಿಕೊಂಡಿದ್ದವು; ಕಪ್ಪು ಆಕಾಶದಲ್ಲಿ ನಕ್ಷತ್ರಗಳು ಕುಂಟಬಿಲ್ಲೆ ಆಡುತ್ತಿದ್ದ ಹಾಗೆ ತೋರಿತು, ಗಾಳಿ ಉಸಿರು ಕಟ್ಟಿ ನಿಂತಿತ್ತು ; ದಾರಿ ಇದ್ದಕ್ಕಿದ್ದಂತೆ ಕವಲೊಡೆದುಕೊಳ್ಳುತ್ತಿದ್ದವು.
ಮೋಟಾರುಬೈಕ್ ಹೊರಡಿಸಲು ಅಣಿಯಾದ ರುದ್ರ. ಕಾಲು ಹಿಡಿತದಲ್ಲಿರಲಿಲ್ಲ. ಬಲಗಾಲು ಉಪಯೋಗಿಸಿದ, ಹೊರಡಲಿಲ್ಲ. ಗೊಣಗಿದ, ಬ್ಯಾಗಿನಿಂದ ಟಾರ್ಚ್ ತೆಗೆದು ಅದರ ಅಂಗಾಂಗಗಳಿಗೆ ಬಿಟ್ಟು ಹತಾರಗಳನ್ನು ತೆಗೆದುಕೊಂಡು ಒಂದೊಂದಾಗಿ ಮೊಳೆ, ಮರಡು ಕಿತ್ತು ಪ್ಲಗ್ ರಿಪೇರಿ ಮಾಡಿದ. ಅಷ್ಟು ಕುಡಿದ ಮೇಲೂ ಅವನ ಬುದ್ಧಿ ಸ್ವಾಧೀನದಲ್ಲಿತ್ತು. ಸಾಮಾನುಗಳನ್ನು ಚೀಲಕ್ಕೆ ಹಾಕಿ ಗಾಡಿ ಹೊರಡಿಸಿದ, ಆದರೆ ಅಷ್ಟರಲ್ಲೇ ಕತ್ತಲು ತನ್ನ ಗಡಿ ಮುಟ್ಟಿತ್ತು. ಮೂಡಲ ಗುಡ್ಡದ ಮೇಲೆ ಬಿಳುಪು ಒಡೆಯುತ್ತಿತ್ತು. ಅಲ್ಲೊಂದು ಇಲ್ಲೊಂದು ಹಕ್ಕಿಗಳು ರೆಕ್ಕೆ ಬಡಿಯತೊಡಗಿದ್ದವು. ಪಶ್ಚಿಮದ ಬೆಳ್ಳಿ ಮಂದವಾಗುತ್ತಿತ್ತು. ಗಾಡಿ ಓಡಿತು-ತಗ್ಗು ದಿಣ್ಣೆಯನ್ನು ಗೆಲ್ಲುತ್ತ ; ದೂಳು ಎಬ್ಬಿಸುತ್ತ, ನನ್ನ ತಲೆ ತಿರುಗುತ್ತಿತ್ತು, ಮೈ ಭಾರವಾಗಿತ್ತು. ಆದರೆ ಕೈ ಮಾತ್ರ ಅವನ ಭುಜ ಹಿಡಿದಿದ್ದವು.
ಮೋಟಾರುಬೈಕು ಅವನ ಮನೆಯ ಎದುರು ಬಂದಾಗ ಊರ ಕಡೆ ಸದ್ದಿಲ್ಲ; ಹಗಲಿನ ಬೆಳಕು, ಕರಿಯ ಓಡಿ ಬಂದು ಗೇಟು ತೆಗೆದ, ಅವನ ಮುಖದಲ್ಲಿ ಭಯವಿತ್ತು, “ದುರುಗ ಲಗಾಟ ಹೊಡದ್ಭುಟ್ಟ ಸಾವ್ಕಾರೆ” ಅಂದ.
“ಹ್ಞಾ ! ಏನೋ ನೀನು ಅಂದದ್ದು ?” ಅಂದೆ ನಾನು. ಮೋಟಾರುಬೈಕಿಂದ ಹಾರಿ ನಿಂತಿದ್ದೆ. ಹೆಂಡದ ಉಯ್ಯಾಲೆಗೆ ಆಕರ್ಷಣೆಯಂತಿತ್ತು ಅವನ ಮಾತು. “ನೆಟ್ಟಗೆ ಬೊಗಳೂ..”
“ಸತ್ತೋದ ಯಜಮಾನ್ರೆ, ಗದ್ದೆ ಹತ್ರ ಸೆಟಗೊಂಡು ಬಿದ್ದಿದ್ದ, ಈಗ್ತಾನೆ ನಾನು ಇದೇ ಕಣ್ಣಾಗೆ ನೋಡಿ ಬಂದೀನಿ.”
ರುದ್ರ ನಿಂತು ತನ್ನ ಕೆಂಪು ಕಣ್ಣುಗಳನ್ನು ಕರಿಯನ ಮೇಲೆ ನಟ್ಟು ಸೈಕಲನ್ನು ನಿಲ್ಲಿಸಿ ಕೇಳಿದ, “ಏನಾರಾ ಆಗಿತ್ತೇನು ? ಗಾಯ ಗೀಯ ?”
“ಒಂಚೂರೂ ಗಾಯಾ ಇಲ್ಲ, ರಯ್ತ ಇಲ್ಲ.”
ಸಾವಿನ ಸುದ್ದಿ ಗುಬಲಾಗಿತ್ತು ; ಜನ ಮಾತಾಡಿಕೊಳ್ಳುತ್ತಿದ್ದರು, ರುದ್ರನನ್ನು ಅಲ್ಲೇ ಬಿಟ್ಟು, ನಾನು ಸರಸರ ನಡೆಯುತ್ತಿದ್ದೆ, ನನ್ನ ಗದ್ದೆ ತವರೆಕೆರೆಯ ಏರಿಯ ಹಿಂದೆ ಇತ್ತು; ಅಲ್ಲಿಯ ಸೊನೆಗಡುಕ ಮಾವಿನಮರ, ಓರೆಯ ಮೇಲೆ ಗುಂಪು ಗುಂಪು ಇದ್ದ ಕಂಟಿಗಳು, ಅಲ್ಲಿ ನಾನು ಚಿಕ್ಕಂದಿನಲ್ಲಿ ಜೇನು, ಕಾರೇಹಣ್ಣು ಮಾವಿನಹಣ್ಣು ಹುಡುಕುತ್ತಾ ಅಲೆಯುತ್ತಿದ್ದದ್ದು ನನ್ನಲ್ಲಿ ಮಾಸಿರಲಿಲ್ಲ. ಬದುಗಳ ಮೇಲೆ ನಡೆಯುತ್ತಾ ಹೋದೆ. ಗೇಣುದ್ದ ನಿಂತ ಭತ್ತದ ಸಸಿಗಳು, ಕೆರೆಯ ಬೆನ್ನಲ್ಲಿ ದಟ್ಟವಾಗಿ ಎತ್ತರಕ್ಕೆ ನಿಂತ ಕಬ್ಬು. ಸಂಕ್ರಪ್ಪನು ಗದ್ದೆಯ ಕಡೆ ಹೋಗುತ್ತಿದ್ದ; ನಾನು ಮಾತಾಡಿಸಿ ದುರುಗನ ಸಾವಿನ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದೆ. ಅವನು ಹೇಳಿದ, “ಕುಡುಕ ಸೂಳೇಮಗ, ಏನು ಮಾಡಿಕೊಂಡು ಬಿಟ್ಟನೋ” ಅಂತ ಸಣ್ಣ ದನಿಯಲ್ಲಿ ಹೇಳಿ ಸುಮ್ಮನಾದ. ಮಂಡಿಯ ಮೇಲಕ್ಕೆ ಮಾಸಿದ ಪಂಚೆ ಉಟ್ಟಿದ್ದ ಸಂಕ್ರಪ್ಪ. ಮುಖದ ಮೇಲೆ ಕಾಲಂಗುಲ ಕೂದಲ ಕೂಳೆ ; ಕಪ್ಪು ಮುಖ, ದಪ್ಪಗೆ ಕೆಂಪಗಿದ್ದ ಕಣ್ಣುಗಳು. ಬಂಗಿ ಸೇದುತ್ತಿದ್ದ ಮನುಷ್ಯ. ನಾನು ಚಿಕ್ಕಂದಿನಲ್ಲಿ ಅವನು ಚಿಲುಮೆ ಕೊಡಹಿ ಶುದ್ಧಗೊಳಿಸುವುದು, ಅದಕ್ಕೆ ಗಾಂಜಾ ತುಂಬುವುದು, ನಮಸ್ಕರಿಸುವ ರೀತಿಯಲ್ಲಿ ಹಸ್ತಗಳನ್ನು ಚಿಲುಮೆಯ ಮೇಲೆ ಮಡಿಸಿ ಆಕಾಶಕ್ಕೆ ಅದರ ಮೂತಿ ತಿರುಹಿ, ಬಾಯಿಗೆ ಇಟ್ಟುಕೊಂಡು ಎಳೆದು ಎರಡು ಸಲ ಕೆಮ್ಮಿ ಮುಗುಳ್ನಕ್ಕು ಮಾತಾಡುವುದು……. ಇದನ್ನು ಇಷ್ಟಗಲ ಕಣ್ಣರಳಿಸಿ ನೋಡುತ್ತಿದೆ. ಈಗ ಆತ ದುರ್ಬಲನಾಗಿದ್ದ ; ಅವನ ಒಟ್ಟಾರೆ ಆಕಾರ ಭಯಂಕರವಾಗಿಯೇ ಇತ್ತು.
ಅವನ ಮಗಳು ಸಾವಂತ್ರಿಯ ಬಗ್ಗೆ ಮಾತಾಡಬೇಕೆನ್ನಿಸಿತು. ಆದರೆ ನಾನು ಬದುವಿನ ಮೇಲೆ ಸಾಗುತ್ತಿದ್ದ ಹಾಗೆ ದುರುಗನ ಹೆಂಡತಿ ಮಕ್ಕಳ ರೋದನ ಕೇಳಿಸಿತು. ಮಾವಿನ ಮರದ ಹತ್ತಿರವೇ ಇದ್ದ ಮಂಚಿಗೆಯ ಕೆಳಗೆ ಹೆಣ ಬಿದ್ದಿತ್ತು. ನಾಲಿಗೆ ಹಿರಿದುಕೊಂಡಿತ್ತು. ಅಂಗಿ ಹರಿದಿತ್ತು. ತೆರೆದ ಕಣ್ಣು ತೆರೆದಹಾಗೆಯೇ ಇತ್ತು. ಯಲ್ಲವ್ವ ಅವನಿಗಿಂತ ಹತ್ತು ವರ್ಷಕ್ಕೆ ಚಿಕ್ಕವಳು. ತಲೆಕೆದರಿ, ಸೀರೆ ಅಸ್ತವ್ಯಸ್ತವಾಗಿತ್ತು. ಎದೆ ಎದೆ ಬಡಿದುಕೊಂಡು ಅಳುತ್ತಿದ್ದಳು. ಅವಳ ಚಿಕ್ಕ ಮಗ ನಾಲ್ಕು ವರ್ಷದವನು; ಕಾರಣಗೊತ್ತಿಲ್ಲದೆ ಕಣ್ಣೀರು ಸುರಿಸುತ್ತ ನಿಂತಿದ್ದ, ಹಿರಿಯ ಮಗಳು ಅವ್ವನ ಕುತ್ತಿಗೆಯಪ್ಪಿ ಅಳುತ್ತಿತ್ತು. ಸುತ್ತ ನಿಂತ ಜನ ಏನನ್ನೂ ಮಾತಾಡಲಿಲ್ಲ, ಎಲ್ಲರೂ ಹೆದರಿದಂತಿತ್ತು; ಗೊಂದಲಗೊಂಡಂತಿತ್ತು. ನಾನು ಏನು ಮಾಡುವುದೆಂದು ತಿಳಿಯದೆ, ಕೆಮ್ಮಿ ಯಲ್ಲವ್ವನಿಗೆ ಹೇಳಿದೆ, “ನೋಡವ್ವ, ಅತ್ತು ಏನ್ಬಂಧಂಗಾತು ಹೇಳು, ಕೇಳ್ತಾ ನಾನು ಹೇಳಿದ್ದು. ದೇವರಿದ್ದಾನೆ, ನಿನ್ನ ಕೈ ಬಿಡೋಲ್ಲ-“
ಅವಳು ಅಳುತ್ತಲೇ ನನ್ನ ಕಡೆ ನೋಡಿದಳು. “ಆ ದ್ಯಾವರ ಮನೀಗೆ ಬೆಂಕಿ ಬೀಳ ! ನಿನ್ನ ಮನೀಗೆ ಬೆಂಕಿ ಬೀಳಾ, ನಿನ್ನ ಮನೆ ಹಾಳಾಗ ನಿನ್ನ ಮನೆಗೆ ಮುಳ್ಳು ಹಚ್ಚತೈತೆ” ಎಂದು ಚೀರಿದಳು. ನನಗೆ ಅವಳ ಮಾತು ಶಾಪದ ಹಾಗೆ ಕಂಡಿತು. ಏನು ಮಾಡುವುದೆಂದು ತೋಚದೆ, “ದುಡ್ಡು ಬೇಕಾ ? ತಗೋ, ನಿನಗೆ ಪ್ರತಿ ತಿಂಗಳು ಮೂವತ್ತು ರೂಪಾಯಿ ಕಳಿಸ್ತೇನೆ. ತಿಳೀತಾ? ನಾನೇನು ಮಾಡಲಿ ? ನನ್ಯಾಕೆ ಬೈತಿ ಯಲ್ಲಕ್ಕ ?”
ಜನ ನನ್ನ ಔದಾರ್ಯಕ್ಕೆ ಮೆಚ್ಚಿ, ಅವಳನ್ನು ಬೈದು ಸಮಾಧಾನ ಮಾಡಲು ಮುಂದಾದರು. ನಾಲೈದು ಜನ ದುರುಗನ ಹೆಣಕ್ಕೆ ಕೈ ಹಾಕಿದರು. ಕಂಬಳಿಯಲ್ಲಿ ಸುತ್ತಿ ಅದನ್ನು ಎತ್ತಿಕೊಂಡು ಊರಿನ ಕಡೆ ಹೊರಟರು. ನಾನು ಯಲ್ಲಕ್ಕನ ಶಾಪದ ಮತ್ತು ನನ್ನ ಭರವಸೆಯ ಬಗ್ಗೆ ಯೋಚಿಸಿದೆ. ಅವಳು ಶುದ್ಧ ಉದ್ಧಟ ರಂಡೆ ಅನ್ನಿಸಿತು. ತಿಂಗಳಿಗೆ ಮೂವತ್ತು ರೂಪಾಯಿ ಹೆಚ್ಚೆನಿಸಿತು. ಹಾಗೆ ನೋಡಿದರೆ ಕೊಡುವ ಕಾರಣ ಇರಲಿಲ್ಲ. ಮಹಾದೇವಪ್ಪ ದಾರಿಯಲ್ಲಿ ಸಿಕ್ಕರು. ಶಾಲು ಹೊದ್ದು ಯಾವ ಭಾವನೆಯನ್ನೂ ತೋರದೆ ತಣ್ಣಗಿದ್ದರು.
“ಹ್ಯಂಡಕ್ಕೆ ಯಾರೋ ತಮ್ಮ ದುಡ್ಡು ಕೊಟ್ಟಿದ್ದು? ಆ ಹುಚ್ಚು ಮುಂಡೆಗಂಡ ಹೀಗೆ ಗೊಟಕ್ ಅಂತಾನೆ ಅಂತ ಗೊತ್ತಿತ್ತು.”
“ರುದ್ರ ಕೊಟ್ಟಿದ್ದ ” ಅಂದೆ.
“ದೇವರ ಮುಖಕ್ಕೆ ಆ್ಯಂಡ ಹಿಡಿಯುವ ಪೈಕಿ ಅವನು. ಅಂತೂ ಹೋದ. ಹನುಮಂತ ದೇವರು ಹೇಳಿದ ರಾತ್ರೀನೇ ಹೋಗಬೇಕಾ?”
ಸಂಕ್ರಪ್ಪ ಮಧ್ಯೆ ಮಾತಾಡಿದ. “ನನಗಂತೂ ದೇವರ ಅಪ್ಪಣೆ ಗೊತ್ತಾಗಲಿಲ್ಲ ಬಿಡು ಮಾದೇವಣ್ಣ, ‘ಹೂಂ’ ಅಂತತಿ ‘ಇಲ್ಲ’ ಅಂತತಿ, ಹಿರೇರಿಗೆ ಬುದ್ದಿ ಇರುಲ್ಲ ಅಂತೀಯೇನು? ನಲವತ್ತು ವರುಸದಿಂದ ಹೊಡೀದಿರೋ ಗದ್ಯಾಗ ದೆವ್ವ ಇಲ್ಲ ಅಂದ್ರೆ ಹ್ಯಂಗಪ್ಪ ನಂಬೋದು.”
“ಬಾಯಿ ಮುಚ್ಚಳಲೇ ಸಂಕ್ರ, ಮಹಾ ತಿಳಿದೋನು-ಹೇಳಿಬಿಟ್ಟ. ದೆವ್ವಾನೇ ಅವನ್ನ ಸಾಯಿಸ್ತು ಅಂತೀಯೇನ್ಲಾ? ಕುಡದು ಸಾಯಾಕಿಲ್ವ?”
“ಅಂತೂ ಸತ್ತ” ಅಂದೆ ನಾನು, “ಹ್ಯಂಗೆ ಸತ್ರೆ ಏನಪ್ಪ ಈಗ, ಸತ್ತದ್ದು ಮುಖ್ಯ.”
“ಬೆಳಗಿನ ಜಾವಾನೇ ಈ ಸುದ್ದಿ ಬಂತು, ವಿಶ್ವಣ್ಣ, ನಿಂಗೆ ಹೇಳಿ ಕಳಿಸಿದ್ರೆ ನೀನು ಇರ‍್ಲುಲ್ಲ. ಎಲ್ಲಿಗೆ ಹೋಗಿದ್ದೆ ?”
“ಅದೆಲ್ಲೋ ಆಟನಪ್ಪ-ಗಾಡಿಕೊಪ್ಪದಾಗೆ-ಅದನ್ನು ನೋಡೋಣಾಂತ ಹೋದ್ವಿ. ಹೊತ್ತಾಗಿಹೋಯ್ತು.”
“ಅರೆ ! ನಾನೂ ನೋಡಾಕೆ ಬಂದಿದ್ದೆ, ತಮ್ಮ. ಗಡಗಡಾ ಬಂದ್ಬಿಟ್ಟೆ. ಮನ್ಯಾಗ ಮಗಳು ಒಬ್ಬಳೇ, ಹುಡುಗಿ ಹೆದರಿಕೊಂಡರ” ಅಂತ ಸಂಕ್ರಪ್ಪ ಬಯಲಾಟದ ಬಗ್ಗೆ ಉತ್ಸಾಹದಿಂದ ಹೇಳಿದ.
ಮಹಾದೇವಪ್ಪ ಅವನಿಗೆ ಚುಡಾಯಿಸುವ, ಬಯ್ಯುವ ಧ್ವನಿಯಲ್ಲಿ ಅಂದರು.
“ಹುಚ್ಚು ಸೂಳೇಮಗ ಕಣಲೇ ಸಂಕ್ರ ನೀನು. ಚಿಣ್ಣೀ ಕಟ್ಯಾಗೆ ಶಾಂತಿ ಕುಣಿದ್ಲು. ಅಲ್ಲಿಗೆ ಹೋದೆ. ಮುದುವಾಲದಾಗೆ ಕುಣಿದ್ಲು ಅಲ್ಲೀಗ್ಹೊದೇ. ಯಾಕಪ್ಪ, ಅವಳ ಕಂಪ್ನಿ ಸೇರ‍್ಕೊಂಬಿಡು. ಹೆಂಡ್ತಿ ಸತ್ತೋರೆಲ್ಲ ನಿನ್ಹಂಗೆ ಮಾಡಿದ್ರೆ ಆತು ತಗೋ.”
“ಆಟ ಅಂದ್ರೆ ಖಯಾಲಿ ಕಣಪ್ಪ. ‘ಸುಭದ್ರ ಪರಣ್ಯ’ ನೀನು ನೋಡೇಕಾಗಿತ್ತು. ಅಣ್ಣಯ್ಯ, ಅದೇನು ಒಲ್ಪು, ಅದೇನು ಡ್ಯಾನ್ಸು.”
“ಮೊದಲು ಆ ಹುಡುಗೀಗೊಂದು ಗಂಡು ನೋಡಿದ ಮ್ಯಾಲೆ ಬಲ್ಪು-ಗಿಲ್ಪು ನೋಡೊ ಕಕವಾ” ಅಂತ ಮಹಾದೇವಣ್ಣ ಮಾತು ನಿಲ್ಲಿಸಿದರು.
ಊರು ತಲುಪಿದೊಡನೆ ಸಂಕ್ರಪ್ಪ ನನ್ನತ್ರ ಬಂದು” “ಚಾ ಮಾಡಿಸ್ತೇನೆ, ಬಾ ತಮ್ಮ. ಕುಡಿಕೆಂದು ಹೋಗು” ಅಂದ. ನನಗೆ ಯಾವುದರಲ್ಲೂ ಉತ್ಸಾಹವಿರಲಿಲ್ಲ. ನಿರಾಕರಿಸುನ ಶಕ್ತಿ ಕೂಡ ಇರಲಿಲ್ಲ. ದುರುಗ, ಹೆಣವನ್ನು ಮತ್ತು ಅಸಹಾಯಕವಾಗಿ ಚೀರಿಕೊಳ್ಳುವ ಸಂಸಾರವನ್ನು ತಲೆಯಿಂದ ಹೊರದೂಡುವುದು ಸಾಧ್ಯವಿರಲಿಲ್ಲ. ಮನೆಗೆ ಬಂದೊಡನೆ ಸಂಕ್ರಪ್ಪ ಮಗಳನ್ನು ಕೂಗಿ ಕರೆದ. ನನಗೆ ಚೊಂಬು ಕೊಡಲು ಹೇಳಿದ. ಸಾವಂತ್ರಿ ಒಳಗೆ ಒಲೆ ಊದುತ್ತಿದ್ದಳೆಂದು ಕಾಣುತ್ತದೆ. ಕಣ್ಣು ಕೆಂಪಾಗಿದ್ದವು. ತಲೆಯ ಕೂದಲು ಹಣೆಯನ್ನೆಲ್ಲ ಮುಚ್ಚಿದ್ದವು. ಅವಳಿಂದ ಚೆಂಬು ತೆಗೆದುಕೊಳ್ಳುತ್ತ, “ಏನಮ್ಮ ಕೆಲಸ ಜೋರು ಅಂತ ಕಾಣುತ್ತೆ” ಅಂದೆ. ಅವಳು ನಕ್ಕು ಸಂಕೋಚದಿಂದ ಒಳಗೆ ಹೋದಳು ; ಅವಳ ಬೆನ್ನು ಮತ್ತು ಜಘನ ಘನವಾಗಿತ್ತು. ಈ ವರ್ಷಗಳು ಅವಳಲ್ಲಿ ವಿಶಿಷ್ಟ ಹೆಣ್ಣುತನ ತುಂಬಿದ್ದವು ; ಮಂತ್ರಸ್ಥೆಯನ್ನಾಗಿಸಿದ್ದವು. ಸಂಕ್ರಪ್ಪ ರುದ್ರನನ್ನು ಹೊಗಳಹತ್ತಿದೊಡನೆ ಕುತೂಹಲಗೊಂಡು ಕಿವಿ ನಿಮಿರಿದವು. “ಭಾಳ ಚಾಲೂಕು ಹುಡುಗ ನಮ್ಮ ರುದ್ರಪ್ಪ” ಅಂತ ಗಾಂಜಾ ಚೀಲ ಬಿಚ್ಚಿದ. ಗಾಂಜಾವನ್ನು ಹದಮಾಡಿಕೊಳ್ಳುತ್ತ ಹೇಳಿದ, “ಆಟ ಕಣೋ, ಅವನ ಜೀವ, ಆಟ ಎಲ್ಲಾದ್ರೆ ಅಲ್ಲಿ ರುದ್ರಪ್ಪ. ಜನಬಳಕೆ ಹ್ಯಂಗೆ ಅಂತೀ, ಶಿಮೊಗ್ಗೀಗೆ ಹ್ವಾದ್ರೆ, ಹೆಜ್ಜೆ ಹೆಜ್ಜೆಗೂ ಅವನ ಗೆಣೆಕಾರರು. ಇದ್ಯಾವಂತ ಅಂದ್ರೆ ಹಂಗಿರಬಕಪ್ಪ.”
“ಹಂಗಾದ್ರೆ ರುದ್ರಪ್ಪ ಚೆನ್ನಾಗಿ ಗೊತ್ತು ನಿನಗೆ.”
“ಅರೆ ನಾವಿಬ್ರೂ ಹಿಂಗೆ ಕಣೋ” ಅಂತ ಎಡಗೈ ಬೆರಳೊಂದುನ್ನು ಬಲಗೈ ಬೆರಳಿಗೆ ಜಂಟಿ ಹಾಕಿ ತೋರಿಸಿದ ಗಾಂಜಾ ಎಳೆದ; ಕಣ್ಣು ತೇಲಾಡಿದವು.
ಟೀ ಬಂತು ; ನಾನು ಕುಡಿದೆ.
“ಬಯಲಾಟದ ಶಾಂತವ್ವ ಈ ಊರಿಗೂ ಬರ್ತಾಳಂತೆ,” ಅಂದೆ ಸಂಕ್ರಪ್ಪನಿಗೆ ಮಾತಿಗೆ ವಸ್ತು ಕೊಡುತ್ತಾ.
“ಬರ್ತಾಳಂತೆ ಅಂತೀಯಲ್ಲೋ, ಜಾಣಪ್ಪ, ಬಂದೇ ಬರ್ತಾಳೆ ಬರದೆ ಏನು ಸಾಯ್ತಾಳಾ ಮುಂಡೆ ? ಇನ್ನೂರು ರೂಪಾಯಿ ತೆತ್ತಿಲ್ವ? ಸಂಕ್ರಪ್ಪನ ಗಟ ಇರೋ ತಂಕ ಶಾಂತವ್ವ ಇಲ್ಲೇ ಬಿದ್ದಿರ್ತಾಳೆ. ಜಾಣ-ಆಟ ಆಡಿಕೊಂತ ಬಿದ್ದಿರ್ತಾಳೆ!”
“ರುದ್ರಮೂರ್ತಿ ಹಾಗಂದ ಸಂಕ್ರಪ್ಪ, ಅವನು ಅದೇನು ಇವತ್ತು ಕರೆದ” ಅಂದೆ, ಅವರಿಬ್ಬರ ನಡುವಿನ ಸ್ಪರ್ಧೆ ಪರೀಕ್ಷಿಸಲಿಕ್ಕೆ.
“ಹುಡ್ಗ ಭಲೇ ಶಾಣ್ಯಾ ಕಣೋ. ಒಳ್ಳೆ ಮನಸ್ಯ. ಸಾಂತವ್ವ ಅವನ ಅವ್ವ ಇದ್ದಂಗೆ. ಹಡೆದವ್ವ ಕಣೋ” ಅಂದ ನಗುತ್ತ.
ಗಾಂಜಾ ತಲೆಗೆ ಏರಿತ್ತು, ಚಿಲುಮೆಯನ್ನು ಜೇಬಿಗೆ ಸೇರಿಸಿ ನಿಂತ ಸಂಕ್ರಪ್ಪ ಕಾಲುಗಳ ಮೇಲೆ ಗಣ ಬಂದವನ ಹಾಗೆ ಓಲಾಡಿದ. ನನಗೆ ಈತನನ್ನು ನೋಡಬೇಕಾಗಿತ್ತು. ಎದ್ದು ನಿಂತೆ. ಆದರೆ ಆತ ನನ್ನನ್ನು ಕೈಹಿಡಿದು ಆಹ್ವಾನಿಸಿದೆ; “ಬಾರೋ ನನ್ನ ಸರದಾರ, ಒಳಗೆ ಬಾ-ಲೇಡಿಯೋ ಕೇಳ್ಕೊಂಬಿಟ್ಟು ಹೊಲ್ಲೋಗು, ಹೊಸಾ ಲೇಡಿಯೋ”
ನಾನು ಅದಕ್ಕೆ ತಯಾರಿರಲಿಲ್ಲ, ಬೆಂಗಳೂರಲ್ಲೇ ರೇಡಿಯೋ ಕೇಳದ ನಾನು, ಸಂಕ್ರಪ್ಪನ ಮನೆಯಲ್ಲಿ ಕೇಳುವ ಅಗತ್ಯವಿರಲಿಲ್ಲ. “ಇಲ್ಲ ಸಂಕ್ರಪ್ಪ, ನನಗೆ ಸ್ವಲ್ಪ ಕೆಲಸ ಇದೆ, ಬರ್ತೆನೆ. ಇವತ್ತೇನು ಬ್ಯಾಸಾಯದ ಕೆಲಸ ಇಲ್ಲವಾ ?”
“ಐತಪ್ಪ ಐತಿ. ಬರಾ ಹೊಡಿಯೋದೈತಿ ಒಂಚೂರು. ಗದ್ದೆ ಕಡೆ ಬಾ ತಮ್ಮ. ಮಧ್ಯಾನ ನಮ್ಮ ಸಾವಂತ್ರಿ ಬುತ್ತಿ ತರ್ತಾಳೆ, ತಿಂದು ಅಡ್ಡಾಕೊಂಬರೋವಂತೆ ಬಾ”
“ಸರಿ ಸಂಕ್ರಪ್ಪ, ಹಾಗಾದ್ರೆ ಮಧ್ಯಾಹ್ನ ಗದ್ದೆ ಕಡೆ ಬತ್ತೇನೆ” ಅಂದು ಅಲ್ಲಿಂದ ಹೊರಟೆ.
ಹೊರಗೆ ದುರುಗನ ಹೆಣದ ಮೆರವಣಿಗೆ ಹೊರಟಿತ್ತು. ಓಲೆ ಕಟ್ಟಿ ಅದರಲ್ಲಿ ದುರುಗನನ್ನು ಕೂರಿಸಿ ಹಿಂದಕ್ಕೆ ಕಟ್ಟಿದ್ದರು; ದಾಸವಾಳದ ಹೂ ಮುಡಿಸಿದ್ದರು. ದುರುಗನ ಮಕ್ಕಳು ಅಳುತ್ತಿದ್ದರು. ನಾನು ಹತ್ತಿರ ಹೋಗಿ ನೋಡಿದೆ. ನಾಲ್ಕು ಜನರ ಹೆಗಲಲ್ಲಿ ದುರುಗ. ಅವನು ಅಷ್ಟು ನಿಚ್ಚೇಷ್ಟಿತನಾಗಿ ಕೂತದ್ದನ್ನೇ ನಾನು ಕಂಡಿರಲಿಲ್ಲ. ಅವನ ಕುಣಿತ ನೆನಪಾಯಿತು; ಅವನು ನನ್ನನ್ನು ಜಾತ್ರೆಯಲ್ಲಿ ಹೊತ್ತು ಮೆರೆದದ್ದು
ನೆನಪಾಯಿತು ; ನಮ್ಮ ಮನೆಯ ವಿಚಾರ ಮಾತಾಡುವಾಗಲೆಲ್ಲ ನಮ್ಮ ಮನೆ” ಅಂತ ಹೇಳುತ್ತಾ ಇದ್ದ ನೆನಪಾಯಿತು ; ಹಲಗೆ ಬಡಿಯುತ್ತಾ ಕುಣಿಯುತ್ತಿದ್ದದ್ದು, ಕೂತು ಲಾವಣಿ ಹಾಡಿ ಎಲ್ಲರನ್ನು ಖುಷಿಗೊಳಿಸುತ್ತಿದ್ದದ್ದು, ಕುಡಿಯುತ್ತಿದ್ದದ್ದು, ಅವನ ಪ್ರಮಾಣ…ನನ್ನನ್ನು ಮೊನ್ನೆ ತಾನೆ ಹೊತ್ತು ಕುಣಿದ ದುರುಗ.
ಹೆಣ ಭಾರವಾಗಿತ್ತೆಂದು ಕಾಣುತ್ತೆ. ಹೆಗಲು ಬದಲಿಸುತ್ತ ಹೊರುತ್ತಿದ್ದರು ಜನ. ಧಾರಿಯ ಕಪ್ಪು ಮಣ್ಣಿನ ಮೇಲೆ ಚೆಲ್ಲಿದ ಚುಕ್ಕೆಗಳಂಥ ಮಂಡಕ್ಕಿ. ಅದು ಹೋದ ಮೇಲೆ ತಿನ್ನಲಾರದ ಆ ಮಂಡಕ್ಕಿ ಕಾಳುಗಳನ್ನು ನೋಡುತ್ತ, ತುಳಿಯುತ್ತ ನಡೆಯುತ್ತಿದ್ದ ಹುಡುಗರು. ಅವು ಮಣ್ಣಾಗಿ, ಲಗ್ಗೆ ಆಟ ಮುಂದುವರಿಸಿದರು.
ಯಾರ ಹತ್ತಿರವೂ ಹೋಗುವ ಮನಸ್ಸಿರಲಿಲ್ಲ. ಯಾರೂ ನನ್ನ ನೆರವಿಗೆ ಬರುವ ಸಾಧ್ಯತೆ ಇರಲಿಲ್ಲ. ಘಟನೆಗಳಲ್ಲಿ ಎಷ್ಟು ಮೂಢನಂಬಿಕೆ, ಎಷ್ಟು ಸ್ವಾಭಾವಿಕ, ಎಷ್ಟು ಭೂತಚೇಷ್ಟೆ ನನಗೆ ಬಗೆಹರಿಯುವ ಸಂಭವ ಇರಲಿಲ್ಲ. ನಾನು ಕಂಡ ಊರು ಬದಲಿಸುತ್ತೆ, ನಾನು ಬದಲಿಸಿದ್ದೇನೆ ಎಂದು ದಿಗ್ವಾ೦ತಿಯಾಯಿತು. ಜನ ಗಳೇವು ಸಾಮಾನು ಹಿಡಿದು ಗದ್ದೆಗಳಿಗೆ ಹೋಗುತ್ತಿದ್ದರು, ರುದ್ರಮೂರ್ತಿಯ ಟ್ರಾಕ್ಟರು ಎಲ್ಲೋ ಸದ್ದು ಮಾಡುತ್ತಿತ್ತು, ವಿದ್ಯುತ್ ಕಂಬಗಳು ಗದ್ದೆ, ಹೊಲಗಳ ಮೇಲೆ ಬೆರಳೆತ್ತಿ ನಿಂತಿದ್ದವು. ಹಾಗೇ ಅಡ್ಡಾಡಬೇಕೆಂದು, ಪೂರ್ತಿ ಕೈಬಿಟ್ಟು ಹೋಗುವ ಮುನ್ನ ಈ ಜಾಗವನ್ನು ಮತ್ತೊಮ್ಮೆ ನೋಡಬೇಕೆಂದು ಆಶೆಯಾಯಿತು. ಇಲ್ಲೇ ನಾನು ಹಲಸೆ ಆಡುತ್ತಿದ್ದದ್ದು ; ಅರಳಿ ಮರದ ದೊಗರು ಕಲ್ಲುಗಳು ತಕ್ಕ ಹಲ್ಲೆಗಳನ್ನು ಕಡೆಯುತ್ತಿತ್ತು. ಇಲ್ಲಿ ಮಿಕ್ಕ ಇಟ್ಟು ಹೊಡೆಯುತ್ತಿದ್ದೆವು. ಮಿಕ್ಕನಿಗೆ ಹಲ್ಲೆ ತಾಗದೇ ಹೋದಾಗ ಪರಮೇಶಿ ಚನ್ನಯ್ಯ, ನಂಜ ಇವರ ಹಲ್ಪೆಗೆ ಸಾಲಾಗಿ ನಿಲ್ಲುತ್ತಿದ್ದವು. ಹಲ್ಲೆಗೆ ಹೊಡೆಯಬೇಕು, ಅವರು ಕುಂಟಬೇಕು…. ಈ ಹುಣಸೆಯ ನೆರಳಲ್ಲಿ ಲಗ್ಗೆ ಆಡುತ್ತಿದ್ದೆವು. ಉಗಾದಿಯು ಹತ್ತಿರ ಬರುವಾಗ ಕಾವೇರುವ ಲಗ್ಗೆ ಕಟ್ಟುವಾಗ ಚೆಂಡಿನ ಗುಂಪಿನವರು ಬಾರಿಸುವ ಚೆಂಡು, ಕಟ್ಟುವವನ ಮೊಂಡುತನ. ಇಲ್ಲೇ ಪರಮೇಶಿಯ ಬುಗುರಿ. ನನ್ನ ಬುಗುರಿಗೆ ಗಿಚ್ಚ ಹೊಡೆದು ಹೋಳು ಮಾಡಿದ್ದು. ಸುತ್ತುವ ಬುಗುರಿ. ಹುರಿಯನ್ನು ಸುತ್ತಿ ಸುತ್ತಿ ನಾಲಿಗೆ ಕಚ್ಚಿ, ಸುತ್ತಿ ಸುತ್ತಿ ಹೊಡೆಯುವ ಬುಗುರಿ.
ಪರಗಿ ಮೆಳೆಯ ಜಾಡು ಹಿಡಿದು ರುದ್ರಮೂರ್ತಿಯ ಮನೆಗೆ ಬಂದೆ.
“ರುದ್ರ, ನನಗೆ ಒಂದೂ ಅರ್ಥವಾಗುತ್ತಿಲ್ಲ, ಏನಯ್ಯ ಇದೆಲ್ಲ ? ಯಾಕೆ ದುರಂಗ ಸತ್ತ ? ಅವನಿಗೆ ಏನಾಗಿರಬಹುದು?”
“ನೀವೇ ಇವನಿಗೆ ತಿಳಿಯೋ ಹಾಗೆ ಹೇಳಿ ಡಾಕ್ಟರೇ” ಅಂದ ರುದ್ರ, ಜಗುಲಿಯ ಮೇಲೆ ಕೂತು ಕಾಫಿ ಕುಡಿಯುತ್ತಿದ್ದ ವ್ಯಕ್ತಿಗೆ.
ಆ ವ್ಯಕ್ತಿ ನಕ್ಕಿತು ; ಚಿಕ್ಕ ವಯಸ್ಸಿಗೆ ಬೊಕ್ಕವಾಗುತ್ತಿದ್ದ ತಲೆ; ಡಾಕ್ಟರಾದರೂ ಹಳ್ಳಿಯಲ್ಲಿ ವಾಸ ಮಾಡಬೇಕಾಗಿ ಬಂದು ತಾನೊಬ್ಬ ಅಳಲೆಕಾಯಿ ಪಂಡಿತ ಎಂಬ ಸಂಶಯ ; ಬಣ್ಣ ಬಣ್ಣದ ಟೈಯನ್ನು ನೀವಿಕೊಳ್ಳುತ್ತ ಆತ ಮಾತಾಡಿದ ;
“ನಮಸ್ಕಾರ ಸಾರ್, ನನ್ನ ಹೆಸರು ರಾಮಕೃಷ್ಣ ಅಂತ – ಪಕ್ಕದ ಊರಲ್ಲಿ ನನ್ನ ಶಾಪ್ ಇದೆ. ತಮ್ಮನ್ನು ಕಂಡು ತುಂಬ ಸಂತೋಷವಾಯಿತು, ಸರ್. ರುದ್ರಮೂರ್ತಿಗಳು ತಮ್ಮ ವಿಷಯ ತುಂಬ ಹೇಳಿದ್ದರು. ಬನ್ನಿ ಸರ್ ಕೂತ್ಕೊಳ್ಳಿ”
ರುದ್ರಮೂರ್ತಿ ಗಟ್ಟಿಯಾಗಿ ನಕ್ಕು ಅಂದ, “ಅದೆಲ್ಲ ಇಲ್ಲಿ ಡಾಕ್ಟರ್ ಸಾಹೇಬ್ರೇ – ರಾತ್ರಿ ನೆಗದು ಬಿದ್ದನಲ್ಲ ಆ ದುರುಗ, ಅವನಿಗೆ ಏನಾಗಿ ಸತ್ತಿರಬಹುದು, ಹೇಳಿ?
“ಹೆಚ್ಗೆ ಕುಡಿದ್ರೆ ಹಾರ‍್ಟ್ ವೀಕಾಗುತ್ತೆ ಸಾರ್. ಚಟ ಬೇರೆ. ಗ್ಲಾಂಡ್ಸ್ ತಡೆಯೋಲ್ಲ. ತುಂಬ ಸಂತೋಷ ಆದಾಗ ನಮಗೆ ಅನ್ನಿಸೋಲ್ಲವೇ?”
“ಮುಂದೆ ಆಗೋದನ್ನ ಹೇಳ್ತೀರಲ್ರೀ. ಈಗ ಅವನಿಗೆ ಆದದ್ದು ಹೇಳಿ” ಅಂತ ರುದ್ರ ಮೂರ್ತಿ ನಕ್ಕು ಕೂಗಾಡಿದ.
ಡಾಕ್ಟರು ಕೂಡ ನಕ್ಕು ಏನೇನೋ ಮಾತಾಡಹತ್ತಿದ.
ಆದರೆ ರುದ್ರಮೂರ್ತಿ ತಮಾಷೆ ಮಾಡಿದ, “ನಮ್ಮ ಡಾಕ್ಟರು ಪರೀಕ್ಷೇಲಿ ಫಸ್ಟ್ ಕ್ಲಾಸು ಬಂದೋರು ಕಣೋ ವಿಶ್ವ, ಫಸ್ಟ್ ಕ್ಲಾಸ್, ತಿಳೀತಾ ? ಹಳ್ಳಿಯ ದೇಶಬಾಂಧವರ ಸೇವೆ ಮಾಡಬೇಕು ಅಂತ ಸರ್ಕಾರಿ ಕೆಲಸಕ್ಕೆ ಸೇರಿ ಇಲ್ಲಿಗೆ ಬಂದಿದ್ದಾರೆ. ಹ್ಯಾಗೆ ಸೇವೆ ಮಾಡ್ತಿದಾರೆ ಅಂತೀ, ಈಚೆಗೆ ಇವರು ಕಷ್ಟ ಪಡೋದು ನೋಡಿ ಎಲ್ಲರೂ ಇವರನ್ನು ದನದ ಡಾಕ್ಟರು ಅಂತ ಕರೀತಾರೆ. ಅವನ್ಯಾವನು ಡಾಕ್ಟರೆ. ಅವತ್ತು ಎತ್ತು ಹಿಡಕೊಂಡು ಬಂದಿದ್ನಲ್ಲ ನಿಮ್ಮ ಹತ್ರ ?”
“ದನ ಅಲ್ಲ ಸಾರ್, ಅವನಪ್ಪನ್ನ ಕರಕೊಂಡು ಬಂದಿದ್ದ. ನೀವು ಹಾಗಂದ್ರಿ”
ಇಬ್ಬರೂ ನಕ್ಕರು, ನಾನೆಂದೆ :
“ನಿನಗೆ ಇಲ್ಲಿ ಜನ ದನದ ಹಾಗೆ ಕಾಣಾರೆ ರುದ್ರ ಅಲ್ಲವಾ ?”
“ದನ ಅಂದ್ರೆ ನೀನು ಕೀಳು ಅಂತ ತಿಳ್ಕೊಂಡೇನು ? ಮೂರ್ಖ. ಬಸವಜಯಂತಿಯ ದಿವಸ ಎತ್ತು, ಕರ ಎಲ್ಲ ಅಲಂಕಾರ ಮಾಡಿಕೊಂಡಿರುತ್ವೆ. ಕೊಂಬುಗಳಿಗೆಲ್ಲ ಹಸರು, ಕೆಂಪು ಬಣ್ಣ. ಅವಕ್ಕೆ ಗಂಟೆಗಟ್ಟಲೆ ಪೂಜೆ ನಡೆಯುತ್ತೆ. ನಾನು ಇಲ್ಲಿಗೆ ಬಂದ ವರ್ಷ ಹೇಳಿದೆ-ಬಸವಜಯಂತಿ ಅಂದ್ರೆ ಜಗಜ್ಯೋತಿ ಬಸವೇಶ್ವರ ಹುಟ್ಟಿದ ದಿವಸ, ಎತ್ತುಗಳು ಹುಟ್ಟಿದ ದಿವಸ ಅಲ್ಲಾ ಅಂತ, ಅವತ್ತಿನಿಂದ ಬಸವೇಶ್ವರ ಅವರ ಜೀವನಕ್ಕೆ ಬಂದ……..”
ಅವನ ಉದ್ಧಟತನದ ಪಾಂಡಿತ್ಯದಲ್ಲಿ ನನಗೆ ಆಸಕ್ತಿಯಿರಲಿಲ್ಲ. ಇಬ್ಬರೂ ತಮ್ಮ ಪಾಂಡಿತ್ಯ ಪುರಾಣ, ಕುಚೇಷ್ಟೆಯಲ್ಲಿ ಮುಳುಗಿದ್ದರು. ತಮ್ಮ ಅನುಭವಗಳನ್ನು ಹೇಳಿಕೊಂಡು ನಗುತ್ತಿದ್ದರು. ನಾನು ಅವನ ಸದ್ದು ತಣ್ಣಗಾಗುವಂತೆ, ಸಿಟ್ಟಿನಿಂದ ಕೇಳಿದೆ; “ಸರಿಯಪ್ಪ, ಕೇಳು ದುರುಗನ ಕೊಲೆ ಆಗಿರಬಾರದೇಕೆ?”
ಇಬ್ಬರೂ ಸುಮ್ಮನಾದರು; ಅಂಥ ಪ್ರಶ್ನೆಯನ್ನು ಅವರು ನಿರೀಕ್ಷಿಸಿದ್ದ ಹಾಗೆ ಕಾಣಲಿಲ್ಲ. ಡಾಕ್ಟರು ಸಿಗರೇಟ್ ಹಚ್ಚಿದರು ; ರುದ್ರ ಯೋಚಿಸಿ ಕೇಳಿದ, “ಸರಿ, ಯಾರು ಅವನ್ನ ಕೊಲೆ ಮಾಡೋಕೆ ಹೋಗ್ತಾರೆ ? ಯಾಕೆ ?”
“ಸುಮ್ಮನೆ ತಮಾಷೆಗೆ.”
ನನಗೂ ನನ್ನ ಉತ್ತರ ಮೋಜೆನ್ನಿಸಿತು, ಡಾಕ್ಟರು ಹೇಳಿದರು, “ತಮಾಷೆಗೆ ಕೊಲೆ ಮಾಡೋ ಕಾಲ ಮುಗೀತು ವಿಶ್ವನಾಥರೇ. ಶಿವಮೊಗ್ಗ ಇಲ್ಲಿಂದ ದೂರವಿಲ್ಲ. ಪೋಲೀಸ್ ಇದೆ, ಅಲ್ಲದೆ ಇವತ್ತು ನಾನು ಅವನ ಶವ ಪರೀಕ್ಷೆ ಮಾಡಲಿಲ್ಲವೆ ?”
“ನನಗೆ ಆಶ್ಚರ್ಯ ಯಾವುದು ಗೊತ್ತೇನೋ ವಿಶ್ವ. ನೀನು ಆಂಜನೇಯನನ್ನು ಹೊರಡಿಸಿ ನಿನ್ನ ಗದ್ದೇಲಿ ದೆವ್ವ ಇಲ್ಲ ಅಂತ ಖಾತ್ರಿ ಪಡಿಸಿಕೊಂಡ ರಾತ್ರೀನೇ ಆತ ಪಲ್ಟಿ.”
“ದೆವ್ವ ಇಲ್ಲ ಅಂತ ದೇವರು ಸರಿಯಾಗಿ ಹೇಳ್ಳಿಲ್ಲ.”
ಆದರೆ ಅದನ್ನೇ ರಾಜಕೀಯ ಮಾಡಿದ್ರಿ. ಆ ಮಾದೇವಪ್ಪನ ಮಾತು ಕೇಳಿ ದೇವರು ಹೊರಡಿಸಿದೆ ದೇವರಿಂದ ಏನನ್ನೂ ಹೇಳಿಸಿ ಏನನ್ನೋ ವಿವರಿಸಿ ದುರುಗನನ್ನು ಗೊಂದಲದಲ್ಲಿ ಸಿಕ್ಕಿಸಿದ್ರಿ. ಈಥರ ಪಾಲಿಟಿಕ್ಸ್ ನಡೆಯೋಲ್ಲ ಮರಿ.”
“ಇದು ಪಾಲಿಟಿಕ್ಸ್ ಹ್ಯಾಗಯ್ಯ ?”
“ಮತ್ತೇನೋ ? ಪಾಲಿಟಿಕ್ಸ್ ಅಲ್ಲದೆ ಇನ್ನೇನು ? ಈ ಊರಿನ ದೇವರು ನಿನ್ನಂಥ ಮನುಷ್ಯನ ಮೂಢ ನಂಬಿಕೇನೆಲ್ಲ ಹೋಗಲಾಡಿಸೋಕೆ ಇದೆ ಅಂತೀಯಾ ? ನೀನು ಆಧುನಿಕ ಮನುಷ್ಯ. ರ‍್ಯಾಶನಲ್ ಕ್ರೀಚರ್. ವಿಜ್ಞಾನ ನಿನಗೆ ಬೇಕು, ತರ್ಕ ಬೇಕು. ಉಳೋದಕ್ಕೆ, ಖಾಯಿಲೆ ಗುಣ ಮಾಡೋದಕ್ಕೆ ಸೈನ್ಸ್ ಬೇಕು. ಊರಿಗೆ ಬಂದು ದೇವರು ಕೇಳ್ತೀಯ! ದೆವ್ವದ ಗುಮಾನೀನ ನಂಬ್ತೀಯ ! ದೇವರೆಲ್ಲಿದ್ದಾನೆ ಗೊತ್ತಾ” ಅಂತ ನಕ್ಕ ಆತ.
“ಎಲ್ಲಿದಾನೆ ?”
ಇಲ್ಲಿಗೆ ಬಂದಾಗ ನಾನೂ ಆತ್ಮ, ಪ್ರೇಮ ಅಂತ ಗಾಡಿ ಬಿಡ್ತಿದ್ದೆ. ಆಮೇಲೆ ಗೊತ್ತಾಯ್ತಯ್ಯ-ಬಯಲಾಟದ ಶಾಂತಿ ಅವೊತ್ತು ತೋರ‍್ಸಿದ್ಲು. ಆಕೆ-”
“ನಿನ್ನ ದೇವರ ವ್ಯಾಖ್ಯಾನ ಇರ‍್ಲಯ್ಯ. ದುರುಗ ಸತ್ತಿದ್ದು…”
“ಸತ್ರೇನಾಯ್ತು ? ಹ್ಯಾಗೂ ಅವನ ಹೆಂಡ್ತಿ ಯಲ್ಲಕ್ಕನಿಗೆ ಪ್ರತಿ ತಿಂಗಳೂ ಮೂವತ್ತು ರೂಪಾಯಿ ಕೊಡ್ತೇನೆ ಅಂತ ಹೇಳಿದ್ದೀಯಲ್ಲ. ಆತ ಬದುಕಿದ್ರೆ ಇಡೀ ಜೀವನದಲ್ಲಿ ಮೂವತ್ತು ದುಡೀತಿರ‍್ಲಿಲ್ಲ, ಉದಾರಿಯಯ್ಯ ನೀನು.”
“ಓದಾರ್ಯದ ಮಾತಲ್ಲ, ನಿನಗೆ ಗೊತ್ತಾಗೊಲ್ಲವಯ್ಯ. ಈ ಊರು ನಂದೆ. ಇಲ್ಲಿ ಹುಟ್ಟಿ ಬೆಳೆದದ್ದು. ದುರುಗನ ಅಪ್ಪ, ಅಮ್ಮ ನಮ್ಮ ಮನೆಗಾಗಿ ಜೀವ ತೇದ ಜನ ಅವನ ಮಾತು ಹೋಗಲಿ. ಈ ಜನಕ್ಕಾಗಿ ನಾನು ಏನೂ ಮಾಡೋಕೆ ಆಗೋಲ್ಲವಾ ? ಇವರ ಸಹಾಯಕ್ಕೆ ನನ್ನಿಂದ ಏನೂ ಆಗಬಾರದಾ?”
“ಸರಿ ಹೋಯ್ತಪ್ಪ, ನಿನ್ನಣ್ಣ ನೆಲ ಮಾರಿಕೊಂಡು ಶಿವಮೊಗ್ಗೆ ಸೇರಿದ. ಎಂಥಾ ಪ್ರೇಮ ಅವಂದು, ನೀನು ಎಂ.ಎ. ಮಾಡಿಕೊಂಡು ಬೆಂಗಳೂರು ಸೇರಿದೆ, ಪುಣ್ಯಾತ್ಮ. ನಾನು ಬೆಂಗಳೂರಲ್ಲಿ ಕೆಲಸ ಹುಡುಕಿ, ಸಿಕ್ಕದೆ ವ್ಯವಸಾಯ ಮಾಡಿ ದೇಶಸೇವೆ ಮಾಡೋಕೆ ಬಂದೆ. ನಾನು ಬಂದಾಗ ಈ ಜನ ನಗೋದು ನೋಡಬೇಕಿತ್ತು. ಈ ನಿನ್ನ ಯಜಮಾನ, ಮಹಾದೇವಪ್ಪನೇ ಹೇಳಿದ್ದನಂತೆ ಓದಿದೋರಿಗೆ ಬುದ್ದಿ ಇಲ್ಲ ಅಂತ, ನನ್ನಂಥವರಿಗೆ ಹ್ಯಾಗೆ ಬುದ್ಧಿ ಇರೋಕೆ ಸಾಧ್ಯ ? ನನ್ನ ಭಾಷೆ ಅವರಿಗೆ ಹ್ಯಾಗಪ್ಪ ಅರ್ಥವಾಗಬೇಕು ? ಇಂಗ್ಲಿಷಿನಲ್ಲೇ ಯೋಚನೆ ಮಾಡಿ ಕನ್ನಡ ದಲ್ಲಿ ಮಾತಾಡ್ತಿದ್ದೆ. ಇಂಗ್ಲೆಂಡಿನ ಲಾಜಿಕ್ ಇಲ್ಲಿ ನಿನ್ನಂಥವನ ಸೆಂಟಿಮೆಂಟ್ಯಾಲಿಟಿ ಆಗುತ್ತೆ. ಆ ವರ್ಷ ನೀನು ನನ್ನ ಗತಿ ನೋಡಬೇಕಿತ್ತು. ಬದುವೇನೇ, ಬಣವೆಯೇ ಮಾಯ ! ರಾತ್ರಿ ಇದ್ದ ಕಲ್ಲ ಗಡಿ ಬೆಳಗ್ಗೆ ಇಲ್ಲ ! ಗದ್ದೇಲಿ ನೆಟ್ಟ ಸಸಿ ನೆಟ್ಟ ಹಾಗೆ ನಿಲ್ಲಿಸಿದ ನೀರು ಎಲ್ಲಿಗೋ ಪರಾರಿ. ಆಗ ಬೇಲಿ ಹಾಕೋದು ಕಲಿತೆ. ನಿನಗೆ ಇದೆಲ್ಲ ಅರ್ಥವಾಗೋಲ್ಲ. ಸರಿಯಾಗಿ ಹೇಳ್ತೇನೆ ಕೇಳು. ನಾನು ಮೊದಲದಿನ ಬಯಲಾಟ ನೋಡಿದಾಗ ಅಸಹ್ಯ ಆಗಿತ್ತು. ಎರಡನೇ ಸಲ ಚನ್ನಾಗಿ ಕಾಣ್ತು. ಶಾಂತಿ ಆ್ಯಕ್ಟಿಂಗ್ ಸೊಗಸಾಗಿತ್ತು, ಬಯಲಾಟ ಬಿಟ್ಟರೆ ಇನ್ನಿಲ್ಲ ಅನ್ಸಿದ್ದು ಆ ರಾತ್ರಿ…ಹೇಳಿದ್ರೆ ನಾಚ್ಕೆ ಪಟ್ಟುಕೊಳ್ತಿ. ಹೋಗಲಿ ಆ ರಾತ್ರೀನೆ ಕರಿಯವ್ವಗೆ ಮಾರಿಹಬ್ಬ ಆಗ್ಬೇಕು ಅಂತ ಯೋಚಿಸಿದೆ. ಕ್ರಮೇಣ ನನಗೆ ಈ ಜನರ ಭಾಷೆ ಅರ್ಥವಾಗಿ ವಿಶ್ವ. ರಕ್ತ ಗಂಟೆ, ವಾಲಗ, ರೋಮಾಂಚನ. ಅವತ್ತು ಶಾಂತಿ ಊರಲ್ಲಿದ್ದಳು ಕಣಯ್ಯ, ಅವಳ ಮೈಮೇಲೆ ಕರಿಯವ್ವ ಬಂದ್ಲು….”
ಆಷಾಢದ ಮೋಡ ಕವಿಯುತ್ತಿತ್ತು. ಬೇಸಾಯಗಳು ರುದ್ರನ ತೋಟದ ಮುಂದೆ ಹೋಗುತ್ತಿದ್ದವು. ಹತ್ತು ಗಂಟೆಯ ರೈಲು ದೂರದಲ್ಲಿ ಕೂಗಿ ಕುಚುಗುಟ್ಟಿತು. ನನಗೆ ಅವನ ಮಾತು ಅಪಾಯ ಸೂಚಿಸಿದವು. ಭಯ ಹುಟ್ಟಿಸಿದವು. “ಸಾಕಪ್ಪ” ಅಂತ ಎದ್ದೆ. ಅವನು ಗಟ್ಟಿಯಾಗಿ ನಕ್ಕ. “ಪುಕ್ಕಲ ನನ್ನ ಮಗನೆ ! ಕೇಳು ! ಹೆದರಿಕೊ ಬೇಡ, ಕೇಳು!” ಪುಸ್ತಕ ಕೈಯಲ್ಲಿ ಹಿಡಿದು ನಾಲ್ಕು ವರ್ಷ ಆಯ್ತು ವಿಶ್ವ. ಗನ್ನು, ನಾಯಿ, ಟ್ರಾಕ್ಟರ್, ಎಂಜಿನ್ನು ಬುದ್ಧಿ-ಇಷ್ಟಾದರೂ ನಿಮ್ಮ ಮಹಾದೇವಣ್ಣ ತನ್ನ ಸೋಲು ಒಪ್ಪಿಕೊಂಡಿಲ್ಲ. ಈ ಊರಿಗಾಗಿ, ಸಾವಿರಾರು ರೂಪಾಯಿ ಖರ್ಚು ಮಾಡಿದ್ದೀನಿ. ಈಶ್ವರನ ತಲೆಯ ಮೇಲೆ ಸೂರು ಕಟ್ಟಿಸಿದ್ದೇನೆ. ಕರಿಯವ್ವನಿಂದ ಅವರ ಮೇಲೆ ಪ್ರಭಾವ ಬೀರಿದ್ದೇನೆ. ಆದರೆ ಈ ಜನ ಓಟು ಕೊಟ್ಟಿದ್ದು ಯಾರಿಗೆ ? ಮಹಾದೇವಣ್ಣನಿಗೆ !”
“ಭಯ ಕೊಂಚಕಾಲ ಮಾತ್ರ ಒಳ್ಳೆಯದು. ವಿಶ್ವಾಸ ಬೇಕು.”
“ಸರಿ, ಭಯದಿಂದ ಆಗೋ ಕೆಲಸ ಮೊದಲು ಮಾಡೋಣ. ಇವತ್ತು ನಿನ್ನ ಪರೀಕ್ಷೆ” ಅಂದು ಸಿಗರೇಟ್ ಹಚ್ಚಿ ನನ್ನ ಮುಖ ನೋಡಿದ ನನಗೆ ಏನು ಹೇಳುವುದೆಂದು ತೋಚಲಿಲ್ಲ. ಅವನು ದಿಗ್ಟಮೆ ಹುಟ್ಟಿಸುವ ವ್ಯಕ್ತಿಯಾಗಿದ್ದ. ತನ್ನ ಮಾತುಗಳನ್ನು ಹುಚ್ಚನಂತೆ, ಕೊಲೆಗಡುಕನಂತೆ, ಗಾಢ ಶ್ರದ್ಧೆಯುಳ್ಳ ಸನ್ಯಾಸಿಯಂತೆ ಹೇಳುತ್ತಿದ್ದ. ಅವನಿಂದ ಯಾವ ಪರೀಕ್ಷೆಯನ್ನು ತೆಗೆದುಕೊಳ್ಳಲೂ ಅಂಜಿಕೆ; ಆದರೆ ಸವಾಲು ತೆಗೆದುಕೊಳ್ಳದ ಹೇಡಿತನ ತೋರಲು ನಾಚಿಕೆ, ಅವನ ತೋಟದ ತೆಂಗಿನ ಗಿಡಗಳ ಕಲಕಲ ಕೂಡ ಕೇಳುವ ನಿಶ್ಯಬ್ದ ಮತ್ತು ನಿರೀಕ್ಷೆ. ಸಿಗರೇಟ್ ಎಳೆಯುತ್ತ ಹೇಳಿದ : “ದುರುಗ ಸತ್ತ. ನಿನ್ನ ಗದ್ದೆಯ ಸೋನೆಗಡಕಮರದ ಹಣ್ಣನ್ನು ನಿನ್ನಪ್ಪ, ಅಜ್ಞ, ನೀನು–ಯಾರೂ ತಿಂದಿಲ್ಲ. ದುರುಗ ತಿನ್ನಲಿಲ್ಲ. ಅಮಾವಾಸ್ಯೆಗೆ ಎರಡೇ ದಿನ ಇರಬೇಕು. ವಿಶ್ವ, ನೀನಿವತ್ತು ನಿನ್ನ ಗದ್ದೆಯ ಮಾವಿನ ಮರದಡಿ ಮಲಗಿ ರಾತ್ರಿ ಕಳೀಬೇಕು ತಿಳೀತೆ. ರಾತ್ರಿ ಕಳೆದು ಬಾ, ನಿನ್ನ ನೆಲ ನಿನ್ನದಾಗುತ್ತೆ.”
ಎದೆ ತಕತಕ ಅಕ್ಕಿ ಕುಟ್ಟುತ್ತಿತ್ತು. ಅವನು ಮುಂದುವರಿಸಿದ, “ರಾತ್ರಿಯ ಕಗ್ಗತ್ತಲಲ್ಲಿ ಭೂಮಿಯನ್ನು ವಶಪಡಿಸಿಕೋಬೇಕು. ನಾನು ಕವಿಯಲ್ಲ. ಆದರೆ ಬಯಲಾಟದ ರಂಡೆ ಶಾಂತಿ ಕಲಿಸಿದ ಪಾಠ ಅದು. ಅದನ್ನೇ ನಿನಗೆ ಒಪ್ಪಿಸ್ತಿದೇನೆ. ಯೋಚಿಸು. ನಾಳೆ ಇಲ್ಲಿಗೆ ಶಾಂತಿ ಬರ್ತಾಳೆ. ಆಗ ನಿನಗೆ ಮರೆತ ಭಾಷೆ ಬರುತ್ತೆ.”
ನಿಂತೆ, ನೆನಪಾಯಿತು, ಮೋಡಿ ಹಾಕುವವರು ಆಗ ಊರಿಗೆ ಬಂದಿದ್ದರು. ನಾನು ಚಿಕ್ಕವನಾಗಿದ್ದಾಗ ಸವಾಲು ಹಾಕುವವರಿಗಾಗಿ ಹುಡುಕುತ್ತಿದ್ದರು. ಕಾಲರಾದಲ್ಲಿ ನಿರ್ನಾಮವಾದ ದೊಡ್ಡಬಸವ ಆಗ ಒಬ್ಬನೇ ಗಟ್ಟಿಗ; ಅವನ ಮನೆಯ ಎದುರು ಬಂದು ಕೆಂಪುಪೇಟದ ಹಸಿರು ಅಂಗಿಯ ಆ ವಿಚಿತ್ರ ಮಂದಿ ಸವಾಲು ಕೂಗಿದಾಗ ಅವನು ಬೂದಿ ಹಾಕಿದ. ಎಲ್ಲಿಂದ ಬಂದವೋ ಹೆಜ್ಜೇನ ನೋಣ-ಅವರನ್ನು ಮುತ್ತಿದವು. ಅಲ್ಲಿಂದ ಓಡಿದರು. ಕಾಳಗ ಶುರುವಾಯಿತು.
ರುದ್ರನ ಸವಾಲಿಗೆ ನನ್ನಲ್ಲಿ ಉತ್ತರವಿರಲಿಲ್ಲ. ಡಾಕ್ಟರು ನಮ್ಮ ಮಾತು ಕೇಳುತ್ತ ಸತ್ತಮೋರೆ ಹಾಕಿಕೊಂಡು ಅಲ್ಲಾಡದೆ ಕೂತಿದ್ದ. ನಗಲಿಲ್ಲ; ಮಿಸುಗಲಿಲ್ಲ. ರುದ್ರನನ್ನು ನೋಡುತ್ತಿದ್ದ. ಅವನ ಕಣ್ಣ ರೆಪ್ಪೆ ಬಡಿಯಲಿಲ್ಲ. ನನ್ನ ಉತ್ತರಕ್ಕಾಗಿ ರುದ್ರ ಕಾಯುತ್ತಿದ್ದ. ಹೊರಗೆ ಗಾಳಿ ಮೋಡಗಳನ್ನು ಅಟ್ಟುತ್ತಿತ್ತು. ಮರಗಳು ಸೊಂಯ್ ಸೊಂಯ್ಯನೆ ಬೈದಾಡುತ್ತಿದ್ದವು. ನಾನು ಕಾಲುಗಳನ್ನು ಸೆಡೆಸಿ, ತನ್ನತನ ಸ್ಥಾಪಿಸುವ ಗಳಿಗೆ ಬಂದದ್ದಕ್ಕೆ ಸೊಕ್ಕಿ ಸಿಟ್ಟಿನಿಂದ ನಿಂತಿದ್ದೆ. ರುದ್ರ ಎದ್ದು ವಿಸ್ಕಿ ಬಾಟಲು ಓಪನ್ ಮಾಡಿದ. ಗ್ಲಾಸಿಗೆ ಸುರಿದು ನನ್ನ ಕೈಗೆ ಕೊಟ್ಟ. ಕುಡಿದು ಮುಂಗೈಯಲ್ಲಿ ಬಾಯೊರಿಸಿಕೊಂಡು ನಿಟ್ಟುಸಿರು ಬಿಟ್ಟೆ. ಗ್ಲಾಸನ್ನು ಕೆಳಗಿಟ್ಟು ಅಲ್ಲಿಂದ ಹೊರಟೆ. ಬಾಗಿಲುತನಕ ಬಂದು ತಿರುಗಿ ಕೂಗಿದೆ, “ಸಂಜೆ ಹೇಳ್ತೇನೆ.”
* * * *
ಬಿಸಿಲು ಕಟುವಾಗಿತ್ತು. ದಾರಿಯಲ್ಲಿ ಕಿರಿಗೇರಿಯ ಕೊರಡು ಹೊಡೆಯಲು ಹೋಗಿ ಬೆನ್ನಿಗೆ ಹೊಡೆತ ಬಿದ್ದಿತ್ತು. ತಿಪ್ಪಾಳಿಯಲ್ಲೇ ಕೂತೆ. ಕಿರಿಗೇರಿ ಎತ್ತುಗಳ ಮೂಗುದಣ್ಣ ಹಿಡಿದುಕೊಂಡು ದೂರಕ್ಕೆ ಎಳೆದುಕೊಂಡ. ನನ್ನ ಹತ್ತಿರ ಬಂದು “ಹ್ಯಂಗದಿಯಪ್ಪ – ಬೇವಾರ್ಸಿ ಎತ್ನ ಕ್ಯಾಯ-ಬಿಡಾಕಂದ ಪೆಟ್ ಬಿದ್ದುಲ್ಲ, ಅಲ್ಲವಾ ?”
ಅವನಿಗೆ ನೋವು ಬಚ್ಚಿಟ್ಟು ಮುಗುಳ್ಳಗೆಯ ಉತ್ತರ ಕೊಟ್ಟು ಎದ್ದೆ. ಉಟ್ಟಿದ್ದ ಲುಂಗಿ ಕೆಸರಲ್ಲಿ ಮುಳುಗಿತ್ತು; ಅಂಡು ನೋಯುತ್ತಿತ್ತು. ವಾರೆಯಿಂದ ಮಹಾದೇವಣ್ಣ ಮುಂತಾದವರು “ಏನಾತಲೆ ಕಿರಿಗೇರಿ ?” ಅಂತ ಕೂಗಿ ಯೋಗಕ್ಷೇಮ ವಿಚಾರಿಸಲು ಬರಲು ಹವಣಿಸುತ್ತಿದ್ದರು. ನಾನು ರಂಪ ಆರಂಭವಾಗುವುದಕ್ಕೆ ಮುನ್ನ ಅಲ್ಲಿಂದ ಕಾಲು ಕೀಳಬೇಕೆಂದು “ಬರ್ತನಲೇ ಕಿರಿಗೇರಿ-ಇಲ್ಲೇ ಇರ್ತಿ ಅಲ್ವಾ-ಐದು ರೂಪಾಯಿಯ ಕೆಲಸ ಏನೂಂತ ಹೇಳ್ತಿನಿ” ಅಂತ ಹೇಳಿ ಕಬ್ಬಿನ ಗದ್ದೆಯ ಕಡೆಗೆ ಕಾಲು ಬೆಳೆಸಿದೆ. ಕಿರಿಗೇರಿಯ ಕಣ್ಣು ಕುಂಟುತ್ತ ನಡೆಯುತ್ತಿದ್ದ ನನ್ನ ಬೆನ್ನ ಮೇಲೆ ನಟ್ಟಿದ್ದವು ; ಹಾಳೆಯಿಂದ ಹಾಳೆಗೆ, ಮೇಲಾಳಿಯಿಂದ ಕಿಪ್ಪಾಳಿಗೆ ನೆಗೆಯುತ್ತ, ನನಗೆ ಏನೂ ಆಗಿಲ್ಲವೆಂದು ತೋರುವುದಕ್ಕಾಗಿ ಗತ್ತಿನಿಂದ ಕಾಲಿಕ್ಕುತ್ತ ಹೋದೆ. ಕಬ್ಬು ನಾನು ತಿಳಿದದ್ದಕ್ಕಿಂತ ಹೆಚ್ಚು ಎತ್ತರ ಬೆಳೆದಿತ್ತು; ಅದಕ್ಕೆ ಕಟ್ಟಿದ್ದ ನೆರಕೆ ಹಚ್ಚನೆಯ ಕಬ್ಬನ್ನು ಬಳಸಿ ಕಣ್ಣು ಕಾಣುವವರೆಗೆ ಹೋಗಿತ್ತು. ಸಂಕ್ರಪ್ಪನ ಗದ್ದೆಗೆ ಹೋಗಬೇಕಿತ್ತು ; ಆ ಗದ್ದೆಗಳ ಸಮುದ್ರದಲ್ಲಿ ಸಂಕ್ರಪ್ಪನ ಗದ್ದೆ, ಯಾವುದೆಂದು ಬಗೆಹರಿಯುವಂತಿರಲಿಲ್ಲ. ನೆರಕೆಯಲ್ಲಿ ದಾರಿಯೇನಾದರೂ ಇದೆಯೇ ಎಂದು ಹತ್ತಾರು ಹೆಜ್ಜೆ ಹೋಗಿ ನೋಡಿದೆ-ಒಂದನ್ನೊಂದು ಆಧರಿಸಿ ನೆರಕೆಗಳು ದೂರ ದೂರ ಸಾಗಿದ್ದವು. ಅಲ್ಲಲ್ಲಿ ಹೆಂಗಸರು ಹುಲ್ಲು ಕೊಯ್ದು ಹೊತ್ತುಕೊಂಡು ಹೋಗುತ್ತಿದ್ದರು. ಹೊತ್ತು ಪಶ್ಚಿಮಕ್ಕೆ ವಾಲಿತ್ತು ; ಈಗ ಸ್ವತಂತ್ರ ಸಿಕ್ಕರೂ ಬುಕ್ಕಿ ಸಿಕ್ಕುವ ಸಂಭವ ಕಡಿಮೆ. ಆದರೂ ಕಬ್ಬಿನ ಗದ್ದೆಯ ತಂಪು, ಹಚ್ಚನೆಯ ಬೆಳೆ, ನೆರಳು, ಜುಳುಜುಳು ನೀರು, ಮೊಣಕಾಲೆತ್ತರದ ಹುಲ್ಲು ತೀರಾ ಆಕರ್ಷಕವೆನ್ನಿಸಿತು. ನೆರಕೆಯೊಂದರ ದಬ್ಬೆ ಹಿಡಿದು ಹತ್ತಿದೆ. ಉದ್ದನೆಯ ಗರಿಗಳು ಸುಳುಗುಟ್ಟುತ್ತಿದ್ದವು; ಮೈಗೆ ತಾಗಿದರೆ ಅಂಟಿಕೊಳ್ಳುವ ತುರುಚಿ, ನೋಡಲು ತುಂಬ ಮೋಹಕ, ಕಾಲಿನ ತುಂಬ ಹುಲ್ಲು ಕೊಂಚ ಎಚ್ಚರ ತಪ್ಪಿ ನಡೆದರೆ ನೀರು, ಕೆಸರು ತುಂಬಿದ ಗುದ್ದು, ಆದರೆ ಪಟ್ಟಿ ಪಟ್ಟಿಯಾಗಿ ಬಿಡಿಸಿದ ನೆಲದಲ್ಲಿ, ಸುತ್ತ ನೀರಿನಿಂದ ಆವೃತವಾಗಿ ಮೇಲಕ್ಕೆ ಎದ್ದು ಸೋಗೆಯುಟ್ಟು ಸೂರ‍್ಯನಿಂದ ಬಿಸಿಲು, ಬೆಳಕನ್ನು ನೆಲಕ್ಕೆ ಬಿಡಲು ನಿರಾಕರಿಸಿ ನಿಂತ ಕಬ್ಬು. ಹೊರಗಿನ ಭತ್ತದ ಗದ್ದೆಗಳಲ್ಲಿ ಎಲ್ಲ ಬೆಳಕು, ಶೆಖೆ. ಈ ಕಬ್ಬಿನಗದ್ದೆ ಅರ್ಧಂಬರ್ಧ ಕತ್ತಲು, ತಂಪು, ಹುಲ್ಲುಮಟ್ಟು, ಕೆಸರಿನ ವಾಸನೆ, ಮತ್ತಷ್ಟು ಹೀರಬೇಕೆನಿಸುವ ವಾಸನೆ. ಹಳದಿಯ ಪುಟ್ಟ ಹೂ ಕಿತ್ತು ಮೂಸಿದೆ-ಕಟುವಾಗಿ ಮೆಣಸು, ಬೆಲ್ಲ ಸೇರಿಸಿದಂಥ ವಾಸನೆ. ಅಲ್ಲಿ ನಿಂತು “ಸಂಕ್ರಪ್ಪಾ” ಎಂದು ಕೂಗಬೇಕೆನ್ನಿಸಿತು. ಆದರೆ, ಅಲ್ಲಿ ಯಾರೂ ಇಲ್ಲದ್ದು -ಇಲ್ಲದಂಥ ಅನುಭವ-ಸರಿಯೆನ್ನಿಸಿತು. ಕಬ್ಬು, ಹುಲ್ಲು, ನೀರು, ಹಸಿರು-ಇವುಗಳ ಜೊತೆಯಲ್ಲಿ ನಾನು. ಯಾರೋ ದೂರದಲ್ಲಿ ಮಾತಾಡಿದಂತೆ ತೋರಿತು. ಆಲಿಸಿದೆ, ಧ್ವನಿಗಳು ಹತ್ತಿರ ಹತ್ತಿರ ಬಂದವು. ನಾನು ಬದುವಿನ ಮೇಲೆ ನಿಂತು ಸಿಳ್ಳೆ ಹೊಡೆಯುತ್ತ ಆ ವ್ಯಕ್ತಿಗಳನ್ನು ನಿರೀಕ್ಷಿಸಿದೆ. ಕೊಟ್ಟಿಗೆಯವರ ನಿಂಗವ್ವ ಮತ್ತು ತಗಡಿನ ಮನೆಯ ಪಾರವ್ವ ಹುಲ್ಲು ಹೊತ್ತು ಬರುತ್ತಿದ್ದರು. ನನ್ನನ್ನು ನೋಡಿದ ನಿಂಗವ್ವ, “ಎಟಾಕಂದು ದೂರ ಬಂದೀದೀಯಲ್ಲೋ ತಮ್ಮ…. ಪ್ಯಾಟ ಮಂದಿ, ನಿಂಗೆ ಈ ಗದ್ಯಾಗೆ ಹೆದರಕ್ಕಾಗಲ್ಲವಾ ?” ಅಂದಳು. ಹುಲ್ಲು
ಹೊತ್ತಿದ್ದಳು. ಅವಳ ಮುಖದಲ್ಲಿ ಅರ್ಧ ಮಾತ್ರ ಕಾಣುತ್ತಿತ್ತು. “ನಂಗ್ಯಾಕವ್ವ ಭಯ, ಗಂಡ್ಸಲ್ಲವಾ? ಭಾಳಾಕಂದು ಹುಲ್ಲು ಹೊತ್ತು ಬಿಟ್ರಿ-ಎಷ್ಟು ಎಮ್ಮೆ ಅದಾವೆ ನಿಂಗವ್ವ ? ಕರಾವು ಚೆಂದಾಗೈತಾ ?” ಅಂದೆ.
ಹುಲ್ಲು ಹೊರೆ ಹೊತ್ತ ನಿಂಗವ್ವ ಆ ಭಾರದಡಿಯಲ್ಲಿಯೇ ಮಾತಾಡುವುದು ನನಗೆ ಇಷ್ಟವಿರಲಿಲ್ಲ. ಪಾರವ್ವ ಕೊಂಚ ಚಿಕ್ಕವಳು, ಲಜ್ಜೆಯಿಂದ ನಿಂತಿದ್ದಳು. ನಾನು ಅವರನ್ನು ಹೆಚ್ಚು ಹೊತ್ತು ನಿಲ್ಲಿಸಿಕೊಳ್ಳಬಾರದೆಂದು, “ಇಲ್ಲಿ ಸಂಕ್ರಪ್ಪನ ಕಬ್ಬಿನ ಗದ್ದೆ ಯೆತ್ತಲಾಗೈತೆ ನಿಂಗವ್ವ? ಕಬ್ಬು ಕಟ್ತಾ ಇದಾನಂತೆ-ಮಧ್ಯಾಹ್ನ ಬಾ ಅಂತ ಹೇಳಿದ್ದ. ಕೊಂಚ ಹೇಳ್ತಿಯಾ?”
ನಿಂಗವ್ವ ಹುಲ್ಲಿನ ಹೊರೆಯಲ್ಲಿ ಸಿಕ್ಕಿಸಿದ್ದ ಕುಡುಗೋಲು ತೆಗೆದುಕೊಂಡು ದಾರಿ ತೋರುತ್ತಾ “ಅಗೋ ಅಲ್ಲಿ ಮಂಚಿಕೆ ಕಾಣಾಕಿಲ್ವಾ, ಅಲ್ಲಿಂದ ನಾಕು ಮಾರು ಅತ್ತಲಾಕೆ. ಸಂಕ್ರಪ್ಪ ಕಾಣ್ಸಲಿಲ್ಲಪ್ಪಾ- ನಾವು ಅಲ್ಲಿಂದಾನೇ ಬಂದ್ವು….ಸಂಜೀನಾಗ ಮನೇ ಕಡೆ ಬಾ ತಮ್ಮ” ಎಂದು ಹೇಳಿ ನಿಂಗವ್ವ ಪಾರವ್ವನೊಂದಿಗೆ ಹೊರಟು ಹೋದಳು.
ಹಾಗಾದರೆ ಸಂಕ್ರಪ್ಪ ಇಲ್ಲ ಗಾಂಜಾ ಕುಡಿಯುತ್ತ ಮನೆಯಲ್ಲೇ ಕೂತನೋ ಏನೋ ಅಂದುಕೊಂಡು ನಾನು ಗುಣಿಯಿಂದ ಕಲ್ಲು ಮುರಿದುಕೊಂಡೆ; ಮುರಿದ ‘ಟಳ್”ಎಂಬ ಸಪ್ಪಳ ಗದ್ದೆಯನ್ನು ತುಂಬಿತು. ಕೋರೆಹಲ್ಲಿಗೆ ಹಾಕಿ ಸಿಗಿದು ತಿನ್ನುತ್ತಾ ಮಂಚಿಗೆ ಕಾಣುತ್ತಿದ್ದ ಕಡೆ ನಡೆದೆ. ನೀರು ಹಾಳೆಯಿಂದ ಹಾಳೆಗೆ, ಪಟ್ಟಿಯಿಂದ ಪಟ್ಟಿಗೆ ಜುಳು ಗುಟ್ಟಿ ಹೋಗುತ್ತಿತ್ತು. ಮಂಚಿಗೆಯ ಹತ್ತಿರ ಬಂದು ಸುತ್ತಾ ನೋಡಿದೆ, ಯಾರೂ ಇರಲಿಲ್ಲ, ನಾಲ್ಕು ಗೂಟ ನೆಟ್ಟು ಅವುಗಳ ನೆತ್ತಿಯ ಮೇಲೆ ಕಮಾನು ಹಾಕಿ, ಸೋಗೆ ಹೊಚ್ಚಿ, ಮಾಡಿದ ಪುಟ್ಟ ಮಂಚಿಕೆ ; ಅಚ್ಚುಕಟ್ಟಾಗಿತ್ತು. ಕಬ್ಬನ್ನು ಮೊದಲು ಮಂಚಿಗೆಯೊಳಕ್ಕೆ ಎಸೆದು, ಗೂಟದ ಕವೆಯ ಮೇಲೆ ಕಾಲಿಡುತ್ತ ಹತ್ತಿ ಒಳಗೆ ಹೋದೆ. ಕಬ್ಬು ತಿನ್ನುತ್ತ ಸಿಪ್ಪೆಯನ್ನು ದೂರಕ್ಕೆ, ಹತ್ತಿರಕ್ಕೆ, ಅಗೋ ಅಲ್ಲಿದೆಯಲ್ಲ ಉದ್ದನೆಯ ಕಬ್ಬಿನ ಗರಿಗೆ, ಅದರಿಂದ ಆಚೆ ಗುಬ್ಬಚ್ಚಿ ಕೂತು ಕೂಗುತ್ತಿದೆಯಲ್ಲ ಅಲ್ಲಿಗೆ-ಅಂತ ಎಸೆಯುತ್ತ ತಮಾಷೆಪಟ್ಟೆ. ಯಾರೂ ಇಲ್ಲದ, ಅರೆಗತ್ತಲ, ಹಸಿರು ತುಂಬಿದ ಭೂಮಿಯಲ್ಲಿ, ಸೋಗೆಯ ಪಿಸುಮಾತಿನಲ್ಲಿ ಹಾಗೆ ಕಣ್ಣು ಮುಚ್ಚಿದೆ. ……. ಕನಸು.
ಕನಸಿನಲ್ಲಿ ದುರುಗ ಬಂದ, ಹೆಣದ ಮೆರವಣಿಗೆ ಸಾಗುತ್ತಿದೆ. ಜನ ಸಂತೋಷದಿಂದ ನಲಿಯುತ್ತಿದ್ದಾರೆ. ವಿದ್ಯುತ್ ದೀಪಗಳಿಂದ ಅಲಂಕೃತವಾಗಿ ಝಗಝಗಿಸುವ ಊರು, ಕಿವಿ ಕೊರೆವ ಸದ್ದು, ಒಬ್ಬ ಮನುಷ್ಯ ಸತ್ತರೆ ಅಳುವುದಕ್ಕೆ ಬದಲು ನಗುತಿದ್ದಾರಲ್ಲ ಈ ಜನ ಎಂದು ಅಚ್ಚರಿಪಡುತ್ತಾ ನಾನು ನಿಂತೆ. ಒಂದೊಂದೇ ಮುಖ ನೋಡುತ್ತಾ ಹೋದೆ; ಎಲ್ಲ ನಾನು ಬಲ್ಲ ಮುಖಗಳು. ಅವರಿಗೆ ಸಂದರ್ಭಕ್ಕೆ ತಕ್ಕ
ಭಾವಪ್ರದರ್ಶನ ಇರಬೇಕೆಂದು ದೊಡ್ಡ ಭಾಷಣ ಕೊಡುವ ಆಶೆಯಾಯಿತು. ಮೆರವಣಿಗೆಯ ಎದುರು ಹೋಗಿ ನಿಂತು ಗಂಟಲು ಸರಿಮಾಡಿಕೊಂಡು ಕೂಗಿದೆ. ಅಷ್ಟರಲ್ಲಿ ದುರುಗನ ಹೆಂಡತಿ ಮತ್ತು ಅವನ ಮಕ್ಕಳು ಕಂಡರು; ಅವರೂ ನಗುತ್ತಿದ್ದರು. ದುಃಖ ಅತಿಯಾದಾಗ ಈ ನಗೆ ಸ್ವಾಭಾವಿಕವಿರಬಹುದೆಂದು ದಿಗ್ಧವೆಗೊಂಡು ನಿಂತೆ. ಮೆರವಣಿಗೆ ಬಂತು ; ನನ್ನತ್ರ ಬಂತು, ದುರುಗ ಓಲೆಯಲ್ಲಿ ಕೂತಿದ್ದ, ಕೆಂಪು ದಾಸವಾಳಗಳು ಬಾಡುವ ಬದಲು ಹೆಚ್ಚು ಕಳೆಗೊಂಡಿತ್ತು. ದುರುಗ ನಗುತ್ತಿದ್ದ. ಕೂತಲ್ಲೇ, ತಣ್ಣಗೆ ಹೆಚ್ಚೂ ಕಡಿಮೆಯಾಗದ ನಗೆ. ಅವನ ಮುಖ ತುಂಬಿತ್ತು. ಮೆರವಣಿಗೆ ನಿಲ್ಲಲಿಲ್ಲ, ಕ್ರಮೇಣ ಬಂತು. ನನ್ನನ್ನು ಆವರಿಸಿತು. ನಾನು ಕಸಿವಿಸಿಗೊಂಡು ಪಕ್ಕಕ್ಕೆ ಸರಿದು ತಪ್ಪಿಸಿಕೊಳ್ಳಲು ಹವಣಿಸಿದೆ. ಆದರೆ ಆಗಲಿಲ್ಲ, ಬ್ಯಾಂಡ್ – ಸೆಟ್ ಆರ್ಭಟಿಸಿತು. ಓಲೆ ಮತ್ತು ದುರುಗ ನನ್ನಮೇಲೆ ಬಂದವು. ನುಗ್ಗಿ ನನ್ನನ್ನು ಬೀಳಿಸಿದವು. ಯಾರೋ ಎತ್ತಿ ನನ್ನನ್ನು ಓಲೆಗೆ ಹಾಕಿದರು. ನಾಚಿಕೆಯಿಂದ ನನ್ನನ್ನು ನಾನು ನೋಡಿಕೊಂಡೆ. ನನ್ನ ಕಾಲುಗಳು ದುರುಗನ ಕೊರಳ ಸುತ್ತ ಹೆಣೆದುಕೊಂಡಿದ್ದವು; ಕತ್ತು ತಣ್ಣಗಿತ್ತು. ದುರುಗ ನನ್ನನ್ನು ಎತ್ತಿಕೊಂಡಿದ್ದ. ಭಯದಿಂದ ಚೀರಿದೆ.
ಕಣ್ಣು ಬಿಟ್ಟೆ. ಯಾರೋ ಚೀರಿಕೊಂಡಂತಾಯಿತು. ಹೆಣ್ಣು ಧ್ವನಿ, ಎಲ್ಲಿದ್ದೇನೆಂದು ಗೊತ್ತಾಯಿತು. ಮಂಚಿಗೆಯ ಹಿಂದೆ, ಮುಂದೆ ಕಬ್ಬಿನ ಗರಿ, ಹಣ್ಣಾದ ಹಳದಿಯಾದ ಬಿಸಿಲು. ಹೆಣ್ಣು ಚೀರಿತು, ಗಂಡಿನ ಧ್ವನಿ ಕೇಳಿತು, ಮಂಚಿಗೆಯಿಂದ ಹಾರಿ ಬದುವಿನ ಮೇಲೆ ನಿಂತು ನೋಡಿದೆ ; ಗದ್ದೆಯ ಕಿಪ್ಪಾಳಿಯಲ್ಲಿ ಕಬ್ಬಿನ ದಟ್ಟ ಬೆಳೆಯಲ್ಲಿ, ಹುಲ್ಲಿನ ಸಂದಿನಲ್ಲಿ ಗಂಡಿನ ಬಟ್ಟೆ ಮೊದಲು ಕಣ್ಣಿಗೆ ಬಿತ್ತು. ಗಂಡಿನ ಮುಖ ಆ ಕಡೆ ತಿರುಗಿತ್ತು. ಹೆಣ್ಣಿನ ಕೆಂಪು ಸೀರೆ, ಮತ್ತು ಬತ್ತಲೆ ತೊಡೆ ಕಣ್ಣನ್ನು ಎಳೆದವು. ಗಂಡಿನ ಹಿಡಿತದಿಂದ ಕೊತ್ತರಿಸಿಕೊಂಡು ಹೆಣ್ಣಿನ ತಲೆ ನನ್ನತ್ತ ನಿಮಿರಿತು. ಕೂಡಲೇ ಗೊತ್ತಾಯಿತು ಅಲ್ಲಿ ಸಿಕ್ಕಿಕೊಂಡಿದ್ದವಳು ಸಾವಂತ್ರಿ. ನಾನು ಏನು ಮಾಡುವುದೆಂದು ಇನ್ನೇನು ನಿರ್ಧರಿಸಬೇಕು-ಸಾವಂತ್ರಿ ಆ ಗಂಡಸನ್ನು ನೂಕಿದಳು -ಚೀರಿದಳು–ಆತ ಹಿಂದಕ್ಕೆ ನೋಡದೆ ನೆಗೆದು ಕಬ್ಬಿನ ಬೆಳೆಯಲ್ಲಿ ನುಸುಳಿ ಹೊರಟುಹೋದ. ಸಾವಂತ್ರಿ ಎದ್ದಳು ; ಅವಳ ಮೈಮೇಲೆ ಸೀರೆಯಿರಲಿಲ್ಲ, ಕುಪ್ಪಸ ಬಿಚ್ಚಿಕೊಂಡಿತ್ತು. ಅವಳಿಗೆ ನಾಚಿಕೆಯಾಗದಿರಲೆಂದು ನಾನು ಮತ್ತೆ ಮಂಚಿಕೆಯ ಕಡೆ ಹೋಗಲು ಇಷ್ಟ ಪಟ್ಟೆ ; ಆದರೆ ಕಾಲು ನಿರಾಕರಿಸಿದವು. ಕಣ್ಣು ಅವಳ ಮೈ ಮೇಲೆ ನಟ್ಟಿದ್ದವು ; ನಯವಾಗಿ, ಗಟ್ಟಿಯಾಗಿ, ಜೀವತುಂಬಿ ಏರಿಳಿದಿದ್ದ ಶರೀರ. ಹಸಿಕೊಂಡಿದ್ದ ಸೀರೆ ಎಳೆದುಕೊಂಡು ತೊಡೆ, ಎದೆ ಮುಚ್ಚಿಕೊಂಡಳು. ನಾನು ಹುಚ್ಚನಂತೆ, ವೈದ್ಯನಂತೆ ನೋಡಿದೆ…. ಅವಳು ಗಟ್ಟಿಯಾಗಿ ಬಿಕ್ಕಿ ಬಿಕ್ಕಿ ಅತ್ತಳು. ಮೊಲೆಯ ಮೇಲಿಂದ ಜಾರುತ್ತಿದ್ದ ಸೀರೆ ಸರಿಪಡಿಸಿಕೊಂಡು ಗಟ್ಟಿಯಾಗಿ ರಾಗ ತೆಗೆದಳು. ತುಂಬಿ ಉಚಾಯಿಸಿದ ಮೊಲೆಗಳು, ಅವುಗಳಿಂದ ಸಾಫಾಗಿ ಮೇಲಕ್ಕೆದ್ದು ಮೊನಚಾದ, ನಸುಗೆಂಪಾಗಿ ಹಿಗ್ಗಿಸುವ ತೊಟ್ಟುಗಳು, ಸೀರೆಯ ಮೂಲಕ ಕೆಳ ಕಾಣುವ ಆರೋಗ್ಯದ ನಡು, ಹೊಕ್ಕಳು, ಮೊಲೆಗಳ ನಡುವಿನಿಂದ ನವಿರಾಗಿ ಹೊರಟು ಹೊಕ್ಕುಳದ ಕೆಳಕ್ಕೆ ಕಪ್ಪಾಗಿ ಸಾಗಿದ ಕೂದಲು, “ಏಳವ್ವ ಸಾವಂತ್ರಿ, ಏನಾಯ್ತು ? ಏಳು, ಬಟ್ಟೆ ಹಾಕ್ಕೊ ಏಳು” ಅಂತ ನನಗೇ ಅರ್ಥವಾಗದ ಒಣಕಲು ಗಂಟಲಲ್ಲಿ ಹೇಳಿದೆ. ಅವಳು ಮುಖ ಮುಚ್ಚಿಕೊಂಡಿದ್ದಳು. ಅಳು ಸಾಗಿಸಿದ್ದಳು. ಅದೇನೋ ಹೇಳುತ್ತಿದ್ದಳು. ನಾನು ಇದೊಂದು ಧರ್ಮಸಂಕಟದ ಪ್ರಸಂಗವೆಂದು ಮನಸ್ಸಿನಲ್ಲೇ ಬಣ್ಣಿಸಿಕೊಂಡು “ಅತ್ರೆ ಉಪಯೋಗಿಲ್ಲವ್ವ – ಅನ್ಯಾಯ ಆಗಿದ್ರೆ ದೇವರು ನೋಡ್ಕೊಳ್ತಾನೆ – ಆ ಪಾಪಿಗೆ ತಕ್ಕ ಶಿಕ್ಷೆ ಆಗುತ್ತೆ” ಅಂದೆ. ಅನ್ನುತ್ತಾ ಹತ್ತಿರ ಬಂದೆ. ಅವಳು ಸೀರೆ ಎಳೆದುಕೊಂಡು ಎದ್ದಳು. ಅಳುತ್ತ “ಮಾದೇವಣ್ಣ ನ ಮಗ – ಜುಲೈ ಮಾಡಿ ಎಳೆದುಬುಟ್ಟ ! ಅವನ ಕಾಲಿಗೆ ಹುಳ ಮುಟ್ಟಾ !” ಅಂತ ಬಿಕ್ಕಿ ಸೀರೆ ಸುತ್ತಿಕೊಳ್ಳತೊಡಗಿದಳು.
“ಸುಳ್ಳು ಹೇಳಬೇಡ” ಅಂತ ಅವಳ ಮಾತು ವಿರೋಧಿಸಿದೆ. “ನಾನು ಸರಿಯಾಗಿ ನೋಡಿಲ್ಲ, ಆದರೆ ಅವನು ಮಾದೇವಣ್ಣನ ಮಗನ ಥರ ಕಾಣ್ಳಿಲ್ಲ. ಸುಳ್ಳು ಹೇಳಿ ಇಲ್ಲದವರ ತಲೆಗೆ ತರಬೇಡ” ಅಂದೆ. ಆದರೆ ಅವಳು ಗಟ್ಟಿಯಾಗಿ ಅಳುತ್ತಾ “ನಾನ್ಯಾಕಣ್ಣ ಸುಳ್ಳು ಹೇಳ್ಳಿ. ಹುಲ್ಲು ಕೊಯ್ತಾ ಇದ್ರೆ ಹಿಂದ್ಲಿಂದ ಬಂದು ಎಳೆದು ಬಿಟ್ಟ. ಕೈಯಿನ ಕುಡಗೋಲು ಬೇಲಿತಾಕೆ ಮುಂಚೇನೇ ಕೆಡವಿಬಿಟ್ಟ” ಅಂತ ಅತ್ತಳು. ಹುಲ್ಲಿನ ಹೊರೆ ಬದುವಿನ ಪಕ್ಕದಲ್ಲಿತ್ತು: ಕುಡುಗೋಲೂ ಅಲ್ಲಿಯೇ ಬಿದ್ದಿತ್ತು. ಸಾವಂತ್ರಿ ಕೆದರಿದ ಕೂದಲಲ್ಲಿ ಕೈಯಾಡಿಸಿಕೊಂಡು ಸೀರೆಯ ನಿರಿಗೆ ಎಳೆದುಕೊಂಡಳು; ಕುಪ್ಪುಸ ಮಾತ್ರ ಎದೆಯ ಚಿಗರಿಗಳನ್ನು ತೋರುತ್ತಾ ಬಿರಿದುಕೊಂಡಿತ್ತು. “ನೋಡು, ಸಾವಂತ್ರಿ, ನಾನಿದೇನೆ, ಹೆದರೊಬೇಡ, ಬಾ ಇಲ್ಲಿ, ಕುಪ್ಪುಸದ ಗುಂಡಿ ಹಾಕ್ತೇನೆ” ಅಂದೆ. ಅವಳು ನಿಂತೇ ಇದ್ದಳು, ಹಿರಿಯನಂತೆ ಅವಳ ಬೆನ್ನಕಡೆಗೆ ಹೋಗಿ ಗುಂಡಿ ಹಾಕುತ್ತ, ಇದರಿಂದ ಏನಾಗುತ್ತೆ ಅಂತ ನಿನಗೆ ಗೊತ್ತಿಲ್ಲ ಸಾವಂತ್ರಿ, ಊರೇ ಹಾಳಾಗಬಹುದು. ನೀನಿದನ್ನು ಯಾರಿಗೂ ಹೇಳಬಾರದು. ಪಿಟ್ಟೆನ್ನಬಾರದು, ಸಾವಂತ್ರಿ. ಮಾದೇವಣ್ಣನ ಮಗ ಹೀಲ್ಮಾಡಿದ ಅಂದ್ರೆ ದೊಡ್ಡ ಪಂಚಾಯಿತಿ, ಜಗಳ ಆಗುತ್ತೆ, ಗೊತ್ತಾಯ್ತ. ಪರಿಸ್ಥಿತಿ ಹದಗೆಡುತ್ತೆ” ಅಂತ ಏನನ್ನೋ ಬಡಬಡಿಸಿದ್ರೆ. ಕೈ ಮಾತ್ರ ಗುಂಡಿ ಹಾಕಲು ನಿರಾಕರಿಸಿದವು. ಅವಳ ಬಗ್ಗೆ ಅನುಕಂಪ ಬಂದಿತ್ತು; ನನ್ನೂರ ಮುಗ್ಧೆ, ಹರಯ ತುಂಬಿ ಕಣ್ಣು ಮಬ್ಬಾದ ಗಳಿಗೆಯಲ್ಲಿ ಗಂಡಸಿನ ಹಿಡಿತಕ್ಕೆ ಸಿಕ್ಕು ನರಳಿದ ತೊಡೆಗಳಲ್ಲಿ ಭಯ, ಆನಂದ, ಹಿಂಸೆ ಪಡೆದ ಮುಗ್ಧೆ, ತತ್ತರಿಸಿಹೋಗಿ. ದಿಕ್ಕು ಕಾಣದ ಮುಗ್ಧೆ….ಗುಂಡಿ ಹಾಕಲು ಹಿಂಜರಿದ ನನ್ನ ಕೈ ಮೆಲ್ಲಗೆ ಬೆನ್ನನ್ನು ನೇವರಿಸಿದವು. ಹಾಗೆಯೇ ಸೂಕ್ಷ್ಮವಾಗಿ ನನ್ನ ಸೊಗಸಾದ ಮಾತುಗಳೊಡನೆ, ನನ್ನ ಹಸ್ತ್ರ ಅವಳ ಎದೆಯತ್ತ ಜಾರಿದವು, ಮೊಲೆಗಳನ್ನು ಸವರುತ್ತ ನಿಗುರಿದ ತೊಟ್ಟು ಗಳನ್ನು ಮೆತ್ತಗೆ ಚಿವುಟಿದವು; ಅವಳು ಆಳುತ್ತಿದ್ದಳು, ಸೆರಗು ನೆಲಕ್ಕೆ ಬಿದ್ದ ನೆದರಿರಲಿಲ್ಲ. “ನೀನು ತುಂಬ ಒಳ್ಳೆ ಹುಡುಗಿ ಸಾವಂತ್ರಿ. ಅಳಬಾರದು. ಬೆಂಗಳೂರಿಗೆ ಬರ್ತಿಯಲ್ಲವಾ. ತುಂಬ ಮಜ ಇರುತ್ತೆ ಗೊತ್ತಾ-ತುಂಬ ಜೋಕಾಗಿರುತ್ತೆ” ಅನ್ನುವಷ್ಟರಲ್ಲಿ ಅವಳ ಜಾಕೆಟ್ಟು ಪೂರ್ತಿ ಮೊಲೆಯಿಂದ ಮೇಲೆ ಜಾರಿತ್ತು. “ವಿಸ್ವಣ್ಣ, ವಿಸ್ವಣ್ಣ” ಅಂತ ಬಿಕ್ಕುತ್ತಿದ್ದಳು. “ನೀನು ನನ್ನ ತಂಗಿ ಥರ ಸಾವಂತ್ರಿ, ನನ್ನ ಊರು ಜ್ಞಾಪಿಸಿಕೊಂಡಾಗಲೆಲ್ಲ ನನಗೆ ನಿನ್ನದೇ ನೆನಪು ಗೊತ್ತಾ. ಅಳಬೇಡ, ಚಿನ್ನ.” ಅವಳು ಅರ್ಧ ಮಲಗಿ, ಅರ್ಧ ನನಗೆ ಆತುಕೊಂಡು ಅಚ್ಚರಿಯಿಂದ ನೋಡುತಿದ್ದಳು. ಕಣ್ಣೀರು ಸುರಿಯುತ್ತಿತ್ತು. ತೊಡೆಗೆ ತೊಡೆ ಸೇರಿಸಿ ಕೆನ್ನೆಯನ್ನು ಅವಳ ಕೆನ್ನೆಯ ಹತ್ತಿರ ಒಯ್ದೆ ; ಬಿಸಿಯುಸಿರು ಮೈ ನಡುಗಿಸಿತು. ಅಲ್ಲಿಯವರೆಗೆ ಅವಳ ಧೋರಣೆಯ ವಿಚಾರವಾಗಿ ಅನುಮಾನವಿತ್ತು; ಈಗ ತುಟಿಯ ಮೇಲೆ ಮುತ್ತಿಟ್ಟಿ, ಅವಳು ಸುಮ್ಮನಿದ್ದಳು, ಕುತ್ತಿಗೆಯನ್ನು ಅಪ್ಪಿ ತುಟಿಯಿಂದ ನೇವರಿಸಿದೆ ; ಮೊಲೆಗಳ ನಡುವೆ ಮುಖ ಇಟ್ಟು ಕ್ರಮೇಣ ಹೊಕ್ಕುಳು, ಮೃದುವಾದ ಕಿಬ್ಬೊಟ್ಟೆ, ತೊಡೆಗಳ ಮೇಲೆ ಕೆನ್ನೆ ಸವರಿದೆ..ದೇಹದುದ್ದಕ್ಕೂ ಮಲಗಿದೆ. ಕುಕ್ಕುರುಗಾಲಲ್ಲಿ ಕೂತೆ.
ಕತ್ತಲು ಅಡಿ ಇಡುತ್ತಿತ್ತು. ಕಬ್ಬಿನ ಹಾಳೆಗಳ ಆಚೆಯಿಂದ, “ವಿಶ್ವ, ವಿಶ್ವ,” ಎಂಬ ಕಾಗು ಬಂತು. ಸಾವಂತ್ರಿ ನನ್ನನ್ನು ಒತ್ತರಿಸಿ, “ರುದ್ರಪ್ಪಾರು” ಅಂತ ಕೂಗಿಕೊಂಡು ಎದ್ದು’ ಬದುವಿನ ಗುಂಟ ಓಡಿದಳು ; ನಾನು ಬಟ್ಟೆ ಸರಿಮಾಡಿಕೊಂಡು ಬದುವಿನ ಮೇಲೆ ನಿಂತೆ. ರುದ್ರ ಬಂದ, ಎತ್ತರವಾದ, ಖಾಕಿಬಟ್ಟೆಯ, ಮೀಸೆ, ಬಂದೂಕು ಧರಿಸಿದ ವ್ಯಕ್ತಿ, ನನಗೆ ನಡುಕ ಹೋಗಿರಲಿಲ್ಲ, “ಬಾರಯ್ಯ, ನಿನ್ನನ್ನು ಹುಡುಕಿ ಹುಡುಕಿ ಸಾಕಾಯ್ತು, ಪ್ರಕೃತಿಯ ಸೌಂದಯ್ಯ ಸವೀತಾ ಕತ್ತಲಾದ್ರೂ ಬಿದ್ದಿರೋದಾ?” ಅಂದು ನನ್ನ ಮುಖ ನೋಡಿದ, ನಾನು ಕೆಮ್ಮಿ, ಮಬ್ಬುಗತ್ತಲಲ್ಲಿ ಅವನ ಮುಖದ ಭಾವನೆಗಳನ್ನು ಓದಲು ಯತ್ನಿಸುತ್ತಾ “ಎಷ್ಟು ನೋಡಿದರೂ ತೃಪ್ತಿಯಾಗೋಲ್ಲ. ರುದ್ರ ಪ್ರಕೃತಿಯಲ್ಲಿ ವಿಚಿತ್ರಸುಖ ಇದೆ ನೋಡು ಅಂದೆ.
”ಅರೆ, ಇಲ್ಲ ಅಂದೆನೇನೋ ಮಾರಾಯ ! ಬೇಕಾದಷ್ಟಿದೆ, ನಾನೂ ಅದನ್ನೇ ನೋಡ್ತಿದ್ದೆ, ಅವಳು ಹೋಗಿ ಅವಳಪ್ಪನ ಹತ್ರ ಹೇಳದಿದ್ರೆ ನಿನ್ನ ಪುಣ್ಯ !”
ಅವನ ಮಾತಿಗೆ ಜೋಲಿತಪ್ಪಿ ಬದುವಿನಿಂದ ಕೆಳಕ್ಕೆ ಜಾರಿದೆ. ಅವನು ಎಲ್ಲವನ್ನು ನೋಡಿದ್ದ ಹಾಗಾದರೆ. “ಛೇ” ಅಂದು ಅವನಿಗೆ ನನ್ನ ತಳಮಳ ತಿಳಿಯದಿರಲಿ ಅಂತ ಕೆಮ್ಮಿ ಬದು ಏರಿದೆ. ಅವನು “ಹಹ್ಹಾ ! ಯಾಕೋ ವಿಶ್ವ ಕಟ್ಟರಿಸ್ಯಾಡ್ತಿ? ಹುಚ್ಚ ಸೂಳೇ ಮಗನೆ, ಧೈರ‍್ಯ ತಕೊ. ಯಾರೂ ಮಾಡದೇ ಇರೋದನ್ನು ನೀನೇನೂ ಮಾಡಿಲ್ಲ. ನಿಜ ಹೇಳಬೇಕೂ ಅಂದ್ರೆ, ಬಯಲಾಟದ ಶಾಂತಿ ಬರ್ತಾಳೆ -ಅವಳನ್ನ ನೋಡಾಕೆ ತಿಳೀತಾ. ಅವಳಪ್ಪ ತನ್ನನ್ನು ನೋಡಾಕೆ ಶಾಂತಿ ಬರ್ತಾಳೆ ಅಂತ ತಿಳಿದೀದಾನೆ, ಯಾತಕ್ಕೆ ಬರ್ತಾಳೆ ಗೊತ್ತಾ ? ಆಮೇಲೆ ಹೇಳೇನೆ. ಈಗ ಮುಖ್ಯ ವಿಚಾರ ಮಾತಾಡೋದಿದೆ. ತಿಳೀತಾ, ಮುಖ್ಯ ವಿಚಾರ…”
ವಿದ್ಯಮಾನಗಳು ಆಗಲೇ ನನ್ನ ಎದೆಯ ಮೇಲೆ ಭಾರವಾಗಿದ್ದವು. ರುದ್ರನ ಮುಖ್ಯ ವಿಚಾರಗಳು ನನಗೆ ಬೇಕಿರಲಿಲ್ಲ. ಬೇಗ ಇಲ್ಲಿಂದ ತೊಲಗಿ ಬೆಂಗಳೂರು ಸೇರಿಕೊಂಡರೆ ಸಾಕೆನಿಸಿತು, ರುದ್ರ ಸಿಗರೇಟ್ ಹಚ್ಚಿ ಬೆಂಕಿಕಡ್ಡಿಯನ್ನು ಚುರೊಂದು ನೀರಿಗೆ ಎಸೆದ. ಕಾವಳ ನಿಧಾನವಾಗಿ ಹಬ್ಬುತ್ತಿತ್ತು; ಮಬ್ಬಿನಲ್ಲಿ ನಕ್ಷತ್ರಗಳು ತೇಲುವಂತೆ ಕಾಣುತಿತ್ತು. ಲೆಕ್ಕವಿಲ್ಲದಷ್ಟು ಕ್ರಿಮಿ ಕೀಟಗಳು ಕಬ್ಬು ಮತ್ತು ಕಳೆಯ ನಡುವೆ, ಮಲೆತ ನೀರಿನಲ್ಲಿ ಜೊಂಯ್ಯನೆ ಸದ್ದು ಮಾಡುತ್ತಿದ್ದವು; ಕಪ್ಪೆಗಳು ನಮ್ಮ ಕಾಲಿಗೆ ಸಿಕ್ಕು ತಪ್ಪಿಸಿಕೊಂಡು ನೀರಿಗೆ ಹಾರುತ್ತಿದ್ದವು. ಬ್ಯಾಟರಿ ಹೊತ್ತಿಸಿ ರುದ್ರ “ಕೆಸರಲ್ಲಿ ಕಾಲಿಡ ಬೇಡಯ್ಯ. ಜಿಗಣೆ ಇರ್ತವೆ,” ಅಂದು ಸಿಗರೇಟ್ ಎಳೆದು ಕತ್ತಲೆಗೆ ಹೊಗೆ ಸೇರಿಸಿದ. “ನೋಡು ವಿಶ್ವ, ಒಂದು ಕೆಲಸ ಆಗಿದೆ, ಹೀಗಾಗುತ್ತೆ ಅಂತ ನಾನು ಅಂದ್ಕೊಂಡಿದ್ದೆ. ನಿಮ್ಮ ಯಜಮಾನಪ್ಪ ಮಾದೇವಣ್ಣ ಇದಾನಲ್ಲ-ಆತ ಪೋಲಿಸರನ್ನ ಕರೆಸಿದಾನೆ. ಬೆಚ್ಚಬೇಡ, ವಿಶ್ವ, ಪೋಲಿಸರು ನಮ್ಮ ಪ್ರಪಂಚದಿಂದ, ಸಿಟೀಯಿಂದ ಬರ್ತಾರೆ. ಇವತ್ತು ಬಚಾವಾಗೋದು ನಿನ್ನ ಕೈಯಲ್ಲೇ ಇದೆ, ಸರಿಯಾಗಿ ಕೆಲಸ ಮಾಡಬೇಕು.” ಅವನ ಪೀಠಿಕೆ ಕೇಳಿ ದಿಗಿಲಾಯಿತು.
“ನೇರವಾಗಿ ಹೇಳೋ ರುದ್ರ, ಯಾತಕ್ಕೆ ಬಂದಿದಾರೆ ಪೋಲೀಸರು ?”
“ದುರುಗನ ಕೊಲೆ ಆಗಿದೆ ಅಂತ ಫಿರ್ಯಾದಿ ಕೊಟ್ಟಿದ್ರಂತೆ–ತಕ್ಷಣ ಹಾಜರ್ ನೋಡು ಪೋಲೀಸರು, ಈಗ ಏನ್ಮಾಡ್ತಾರೆ, ಹೇಳು”
“ನೀನೇ ಹೇಳು ಮಾರಾಯ, ನನಗೆ ಗೊತ್ತಾಗಿಲ್ಲ.”
“ದುರುಗನ ಶವ ಸಮಾಧಿಯಿಂದ ಹೊರತೆಗೆದು ಪರೀಕ್ಷೆ ಮಾಡಿಸ್ತಾರೆ. ನಿನಗೆ ಹೊಳೀ ಬೇಕಿತ್ತಯ್ಯ ಹೊಳೀಬೇಕಿತ್ತು ಈ ಹಾಳು ಶವಗಳನ್ನು ಸುಟ್ಟು ಹಾಕೋದು ಯಾವಾಗಲೂ ಕ್ಷೇಮ. ಯಾಕೋ ನೀನು ಹೀಗೆ ಮಾಡಿದೆ ?”
“ನಾನೇನು ಮಾಡಿದೆ ? ಏನು ಮಾಡಿಲ್ಲ ? ದುರುಗನು ಸತ್ತದ್ದಕ್ಕೂ ನನಗೂ ಏನಯ್ಯ ಸಂಬಂಧ ? ಅವನ್ನ ಹೂತರೆಷ್ಟು ಸುಟ್ಟರೆಷ್ಟು ಹಾಗೇ ಕೊಳೆಯೋದಕ್ಕೆ ಬಿಟ್ಟರೆಷ್ಟು ? ನೀನು ಮಾತಾಡೋದು ನೋಡಿದ್ರೆ ನಾನೇ ಎಲ್ಲಕ್ಕೆ ಜವಾಬ್ದಾರ ಅನ್ನೋ ಥರಾ ತಿಳ್ಕೊಂಡಿರೋ ಹಾಗಿದೆ. ನೀನು ನನ್ನ ಕೈ ಹಿಡಿದು ಹೇಳು–ನಾನೇನಾದ್ರೂ ಮಾಡಿದ್ದೇನಯ್ಯ ?”
“ಎಲ್ಲ ಗೊಂದಲ ಮಾಡಿದ್ದೀ ಅಷ್ಟೆ, ದೇವರು ಏನೂಂತ ಗೊತ್ತು, ಆದರೆ ದೇವರನ್ನ ಕೇಳಿ ದೆವ್ವ ಇಲ್ಲ ಅಂತ ತಿಳ್ಕೊಂಡೆ. ನಿನ್ನ ಚಿಕ್ಕಂದಿನ ನೆನಪಿನೆಲ್ಲ ನಂಬಿ ದೇವರು ಹೊರಡಿಸಿದೆ. ನಿನ್ನೂರ ಆಂಜನೇಯ, ನಿನ್ನೂರ ಜನ ನಿನ್ನೂರ ದೇವರ ಸಂಭ್ರಮ ನೋಡೋಕೆ ಎಷ್ಟು ಚೆಂದವಿರುತ್ತೆ – ಅಂದ್ಕೊಂಡು ದೇವರ ಪ್ರದರ್ಶನ ಮಾಡಿದೆ. Exotic ! Exotic ! ನಿನ್ನ ವಿದ್ಯೆ ನಿನಗೆ ಕಲಿಸಿದ್ದು ಸಿಕ್ಕಿಹಾಕಿಕೊಳ್ಳೋದನ್ನ ಅಷ್ಟೆ. ದುರುಗ ದೇವರ ಮಾತು ನಂಬಿದ, ಗದ್ದಿಗೆ ಹೋದ, ಸತ್ತ. ಸತ್ತದ್ದು ದೆವ್ವದಿಂದ ಅಲ್ಲ ಅಂತಾನೆ ಆತ.”
“ಆತ-ಯಾರು ?”
“ಮಹಾದೇವಣ್ಣ, ದೇವರಲ್ಲಿ ನಂಬಿಕೆ ಆತನಿಗೆ. ದೇವರು ಹೇಳಿದ ಮೇಲೆ ದೆವ್ವ ಇರಲಿಕ್ಕೆ ಸಾಧ್ಯವೇ ಇಲ್ಲ ಅಂತ ಅವನ ವಿಶ್ವಾಸ, ತಿಳೀತ. ಆತನ ಮನಸ್ಸಿನಲ್ಲಿ ಉಳಿದಿರೋದು ಒಂದೇ-ದುರುಗನ ಕೊಲೆಯಾಗಿರಬೇಕು ಅನ್ನೋದು”
“ಸರಿ” ಎಂದು ಕತ್ತಲಲ್ಲಿ ನಿಸ್ಸಹಾಯಕವಾಗಿ, ಆದಷ್ಟೂ ಪ್ರಯತ್ನಪಟ್ಟು ನಾಲಿಗೆಯನ್ನು ಉಪಯೋಗಿಸದೆ “ಸರಿಯಪ್ಪ, ಕೊಲೆಯಾಗಿಲ್ಲ ಅಂತ ನಮಗೆ ಗೊತ್ತಲ್ಲ. ದುರುಗನ ಶವ ತೆಗೆದು ನೋಡೊಳ್ಳಲಿ, ಬಿಡು.”
“ಅದೇ ಮರಿ ಪಾಯಿಂಟು ! ನಿನಗೆ ಹೇಳಬೇಕೂಂತ ಬಂದದ್ದು ಅದನ್ನೇ. ಅಕಸ್ಮಾತ್ ದುರುಗನ ಕೊಲೆಯಾಗಿದೆ ಅಂತ ಅವರಿಗೆ ಖಚಿತವಾಯ್ತು ಅನ್ನು, ಆಗ ?”
ಕಬ್ಬಿನ ಗದ್ದೆಯ ಅಂಚಿಗೆ ಬಂದಿದ್ದೆವು. ನನ್ನಿಂದ ಇದನ್ನೆಲ್ಲ ಇನ್ನು ಸಹಿಸುವುದು, ಈ ಪ್ರಕರಣದಲ್ಲಿ ತಳಕ್ಕೆ, ತಳಕ್ಕೆ ಹೋಗುವುದು ಸಾಧ್ಯವಿರಲಿಲ್ಲ. ಬದುವಿನ ಮೇಲೆ ಕೂತು ತೆಪ್ಪಗಾದೆ. ರುದ್ರ ಕೋವಿ ಹಿಡಿದು ನಿಂತು ಕಲ್ಲಾಗಿದ್ದ. ಸುತ್ತಣ ಗದ್ದೆಗಳು, ಅವನ್ನು ನೋಡುತ್ತಾ ನಿಶ್ಚಲವಾಗಿದ್ದ ರುದ್ರ, ದೂರದ ಕಂಕನರಿಗಳ ಕೂಗು ಎಲ್ಲವೂ ಕ್ರೂರವಾಗಿ, ಗೂಢವಾಗಿ ಕಂಡವು.
“ಕೊಲೆ ಅಂತ ತೀರ್ಮಾನಿಸಿದರು ಅನ್ನು” ಅಂತ ಆತ ಸಣ್ಣ ದನಿಯಲ್ಲಿ ನನ್ನನ್ನು ಬಿಗಿಯತೊಡಗಿದ, “ಮೊದಲು ಅನುಮಾನ ಬರೋದು ನಿನ್ನ ಮೇಲೇ,”
“ಹಾಗಾದ್ರೆ ನೀನು ಪ್ರಮಾಣ ಮಾಡಿ ಹೇಳು” ಅಂತ ಅರ್ಥವಿಲ್ಲದೆ ಕೂಗಿದೆ, “ನಾನು ಕೊಲೆ ಮಾಡಿದ್ದೀನೇನು?”
“ಹೆದರಬೇಡ ಮರಿ, ಹೆದರಬೇಡ. ನಾನಿರೋ ತನಕ ನಿನಗೆ ಭಯವಿಲ್ಲ” ಎಂದು ನನ್ನ ರಟ್ಟೆ ಹಿಡಿದು ಎತ್ತಿದ. ಕಾಲುಗಳನ್ನು ಗಟ್ಟಿ ಮಾಡಿಕೊಂಡು ನಿಂತೆ. ಅವನು ಬ್ಯಾಟರಿ ಬಿಡುತ್ತಾ “ಬಾ” ಅಂತ ಮುಂದೆ ಸಾಗಿದ. ಹಿಂಬಾಲಿಸಿದೆ. ಅನೇಕ ಪ್ರಶ್ನೆಗಳು ಅಸ್ಪಷ್ಟವಾಗಿ ತಲೆಯನ್ನು ತುಂಬುತ್ತಿದ್ದವು ಭಯ ಕಣ್ಣನ್ನು ಮಂಜುಮಾಡಿತ್ತು.
“ಧೈರ್ಯ ಮುಖ್ಯ, ವಿಶ್ವ. ಧೈರ್ಯವಾಗಿ, ಯಾವ ಮೋಹವೂ ಇಲ್ಲದೆ ಯೋಚಿಸಬೇಕು. ಅದೇ ಥರಾ ಕೆಲಸ ಮಾಡಬೇಕು. ಹೆದರಬೇಡಯ್ಯ. ನೀನು ನನ್ನ ಬಾಲ್ಯ ಸ್ನೇಹಿತ. ಈಗ ನಿನಗೆ ಕೆಲವು ವಿಷಯ ತಿಳೀತಾ ಇವೆ. ಪೆರೇಡ್‌ನಲ್ಲಿ ಕಾಫಿ ಕುಡಿದು ರೇಡಿಯೋದಲ್ಲಿ ಜಾನಪದ ಗೀತ ಕೇಳಿದಹಾಗಲ್ಲ ಬದುಕು. ನನ್ನ ಹಾಗೆ ನಾಸ್ತಿಕನಾಗು ಇಲ್ಲವೇ ಸಂಪೂರ್ಣ ಭಕ್ತನಾಗು. ಗೊಂದಲದಿಂದ ಹೀಗೆಲ್ಲ ಆಗುತ್ತೆ. ಈ ಊರಿಗೆ ನಾನು ಮಾಡಬೇಕು ಅಂತ ಇರುವುದು ಅದನ್ನೇ ಕತ್ತಲು ತೊಲಗಿ ಹಗಲು ಝಗ ಝಗಿಸಿಬೇಕು, ವಿಶ್ವ, ಈ ಊರಿನ ಪ್ರತಿಯೊಂದು ಅಂಗುಲ ನೆಲವೂ ಹಚ್ಚಗೆ ನಗಬೇಕು, ಅರ್ಥವಾಗ್ತಿದಿಯೇನು. ಭಯ ಬಿಟ್ಟು ಯೋಚನೆ ಮಾಡು. ಮೊದಮೊದಲು ಜನ ನನ್ನ ಪ್ಲಾನ್ ಕಂಡು ನಗ್ತಾರೆ ಹೆದರ‍್ತಾರೆ. ಆಮೇಲೆ ಖಂಡಿತ ಒಪ್ಪಿಕೊಳ್ತಾರೆ. ಮೊದಲ ದಿನ ಈ ಊರಿಗೆ ಲಾರಿ ಬಂದಾಗ ನೀನು ನೋಡಬೇಕಿತ್ತು, ದೇವರ ಥರ
ಇತ್ತು ಅದು ಅವರಿಗೆ. ಅವರ ಭಕ್ತಿ ಅಪಾರವಯ್ಯ, ಅದನ್ನ ಬಳಸಿಕೋಬೇಕು.”
ನೇರವಾಗಿ ಅವನ ಮನೆಯ ಕಡೆ ನಡೆದೆವು. ಊರು ಸಮೀಪಿಸಿದಂತೆ ಹಲಗೆಯ ಜಡ್ ಜಡ್ಡಿ-ನಕನಕ ಸದ್ದು ಕಿವಿಗೆ ತಾಕಹತ್ತಿತು. ಕತ್ತಲನ್ನು ತೂರಿ ತಂಗಾಳಿಯ ಮೇಲೆ ಸಾಗಿ ಬರುತ್ತಿತ್ತು. ಭಯ ಹುಟ್ಟಿಸುವ ಹಲಗೆಯ ಸದ್ದು. ಅದು ನನ್ನ ಎಳೆಯ ದಿನಗಳ ಸದ್ದು ಲಯ ಮಾತ್ರ ಆಗಿರಲಿಲ್ಲ; ಜನಕ್ಕೆ ಹೊಸ ಸುದ್ದಿಯನ್ನು ಸಾರುತ್ತಿತ್ತು. ಹೆಣವನ್ನು ಹೊರತೆಗೆಯುವ ಸತ್ಯವನ್ನು ಹುಡುಕಬೇಕೆನ್ನುವ, ದೇವರ ಮೇಲಿನ ಶ್ರದ್ಧೆ ಮತ್ತು ವಿಲಕ್ಷಣ ಅಶ್ರದ್ದೆಯ ಆ ಗದ್ದಲ ನನ್ನ ಗಂಟಲ ಕಟ್ಟ ಹತ್ತಿತ್ತು. ನನ್ನ ಅಪ್ಪ ತೀರಿಕೊಂಡು ಅಣ್ಣ ಹೊರಟು ಹೋಗಿ, ಎಲ್ಲರ ಸಮ್ಮುಖದಲ್ಲಿ ನಾನು ನನ್ನ ಊರನ್ನು ಒಂಟಿಯಾಗಿ ನೋಡಲು ಅದು ಒತ್ತಾಯಪಡಿಸುತ್ತಿತ್ತು. ನೆಲದ ಹಂಗು ತೊರೆಯಬೇಕೆನ್ನುವ ನನ್ನ ವಂಶದ ಕೊನೆಯ ಜೀವನಾದ ನಾನು ಒಂದು ರೀತಿಯಲ್ಲಿ ಅದಕ್ಕೆ, ಊರಿಗೆ, ಎಲ್ಲರಿಗೆ ಸೊಗಸಾದ ಬಲಿಯಾಗಿದ್ದೆ. ಅಣ್ಣ ಇಂಥ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿರಲಾರ-ಅವನಿಗೆ ಎಲ್ಲ ಸ್ಪಷ್ಟ, ಬುದ್ಧಿ ಅನಗತ್ಯವಾಗಿ ತಲೆ ಹಾಕದೆ ಮೋಹ ಅವನನ್ನು ಅಲ್ಲಾಡಿಸದೆ, ಆದರ್ಶ ಕಣ್ಣುಗಳನ್ನು ಮಂಜುಗೊಳಿಸದೆ ಎಲ್ಲ ನೇರವಾಗಿತ್ತು ಅವನಿಗೆ.
“ಹಲಗೆ ಬಡಿದು ಊರಲ್ಲಿ ಸಾರ್ತಿದಾರೆ ನೋಡು, ವಿಶ್ವ. ಹೆದರಬೇಡ, ನಿನಗೆ ಆಶ್ಚರ್ಯದ ವಿಷಯಗಳು ಕಾದಿವೆ.”
“ಅದಿರಲಿ, ನೋಡಿಕೊಳ್ಳೋಣ. ನೀನೇನು ನಿಜಕ್ಕೂ ವಿಚಾರವಂತ ಆಗಿದ್ದರೆ, ಹೇಳು, ರುದ್ರ. ನೀನೇ ಯಾಕೆ ಪೋಲೀಸರಿಗೆ ಹೇಳಿಕಳಿಸಬಾರದಿತ್ತು ? ಅದು ದೆವ್ವ ಇರಲಾರದು, ಕೊಲೆ ಇರಬೇಕು ಅಂತ ನಿನಗೆ ಅನುಮಾನ ಬರಲಿಲ್ಲವಾ?”
ರುದ್ರ ಗಹಗಹಿಸಿದ, “ಸಾಯೋದಕ್ಕೆ ಕೊಲೆ ಅಥವಾ ದೆವ್ವವೇ ಬೇಕು ಅಂತ ಯಾರಯ್ಯ ನಿನಗೆ ಹೇಳಿದ್ದು ? ಹಾಗೇ ಸಾಯಲಿಕ್ಕೆ ಸಾಧ್ಯವಿಲ್ಲವಾ ?”
“ಸರಿ ಹಾಗಾದರೆ ಹಣ ತೆಗೀಲಿ”
“ಕೊಲೆಯೂ ಯಾಕಿರಬಾರದು ?”
ರುದ್ರನ ಮನೆ ಕತ್ತಲಲ್ಲಿ ತಣ್ಣಗಿತ್ತು, ಬಾವಿಯ ಸುತ್ತಣ ಮಣ್ಣಿನ ದಿಣ್ಣೆ ಕತ್ತಲೊಂದಿಗೆ ಸೆಣಸಿ ಬಣ್ಣ ತೋರಿತ್ತು. ಮನೆಯೊಳಗಿನ ದೀಪ ಸುತ್ತಣ ಕತ್ತಲ, ಸೈನ್ಯಕ್ಕೆ ಹೆದರಿ ಉರಿಯುತ್ತಿತ್ತು. ನಾಯಿ ಗೇಟಿನವರೆಗೆ ಬೊಗಳುತ್ತ ಬಂದು ತನ್ನ ಸ್ವಾಮಿಯನ್ನು ಗುರುತಿಸಿ ಬಾಲ ಗುಂಡಾಡಿಸಿತು. ರುದ್ರ ಕರಿಯನನ್ನು ಕೂಗಿ ಟ್ರ‍್ಯಾಕ್ಟರು, ಪಂಪ್‌ಸೆಟ್ಟು ಮುಂತಾದ್ದರ ಬಗ್ಗೆ ವಿಚಾರಿಸಿಕೊಂಡ. ಒಳಗಿನಿಂದ ಒಂದು ವ್ಯಕ್ತಿ ಬಂದು ರುದ್ರನಿಗೆ ನಮಸ್ಕರಿಸಿತು. ಅರೆ ಮಬ್ಬಿನಲ್ಲಿ ಮೊದಲು ಗುರುತು ಸಿಗಲಿಲ್ಲ. ಅವನು ಮಾತಾಡಿದೊಡನೆ ಸಂಕ್ರಣ್ಣ ಎಂಬುದು ತಿಳಿಯಿತು.
“ಪಂಚಾತಿಯೋರೆ ಊರಗೆಲ್ಲ ಸಾರಿಸ್ತಿದಾರೆ, ರುದ್ರಪ್ಪ. ನೀನೂ ಬರಬೇಕು, ಏನಾಗೇತಿ ಗೊತ್ತೇನಪ್ಪ, ಕಬ್ಬಿನ ಗದ್ಯಾಗೆ ನಮ್ಮ ಹುಡುಗೀನ ಹಿಡಕೊಂಡು ಹಾದರ ಮಾಡಿದಾನೆ.”
“ಯಾರು ಸಂಕ್ರಪ್ಪ? ಯಾಕೆ ಹೀಗೆ ಬಡಬಡಿಸ್ತಿದೀಯ ? ಏನಾಯ್ತು ?”
“ಏನಪ್ಪ ಹೇಳ್ಳಿ ? ಸಾವಂತ್ರಿಯ ಮಾನ ಹೋಳಿಯಾಗೆ ಹ್ವಾಮ ಮಾಡಿದಂಗಾತಪ್ಪೊ” ಎಂದು ಸಂಕ್ರಪ್ಪ ಅಳಹತ್ತಿದ. ಅಳುತ್ತಲೇ “ಅಳ್ತಾ ಮಲಗಿ ಬಿಟ್ಟಿದ್ದಾಳೆ ಕಣೋ, ರುದ್ರಪ್ಪ. ಮಾದೇವಣ್ಣನ ಹುಡುಗ ಸೇಖ್ರ ಕಣೋ ನನ್ನಪ್ಪ.”
ರುದ್ರ ಸ್ವೆಟರ್ ಹಾಕಿಕೊಂಡು ತಲೆಗೆ ಮಫ್ಲರ್ ಸುತ್ತಿಕೊಂಡ. ಆ ವೇಳೆಯಲ್ಲಿ ಸಂಕ್ರಪ್ಪ ಕೂಗಾಡುತ್ತಲೇ ಇದ್ದ: “ನನ್ನ ಮಗಳ್ನ ಯಾರಪ್ಪ ಇನ್ನ ಮದುವ್ಯಾಗ್ತಾರೆ? ನನಗೆ ದಿಕ್ಯಾರು ಇನ್ನ? ನೀನು ತಂಗೀ ಥರಾ ಕಾಣ್ತಿದ್ದ ಹುಡುಗಿ – ನೀನು ಗಾಡಿಕೊಪ್ಪಕ್ಕೆ ಆಕೀನ ಕರಕೊಂಡು ಹ್ವಾದ್ರೂ ನಾನು ತುಟಿ ಪಿಟಕ್ಕೆಂದೆನೇನು ಮಾರಾಯ ? ಹಿಂಗಾದ್ರೆ ಹ್ಯಾಂಗೆ? ಹೆಂಗಸರು ಮಕ್ಕಳು ಗದ್ದೆಗೆ ಹ್ವಾಗೋದೇ ಬ್ಯಾಡ್ವ?”
ಮೈಯೆಲ್ಲ ಕಣ್ಣಾಗಿ ಆ ವ್ಯಕ್ತಿಯನ್ನು ನೋಡಿದೆ; ಮಂಡಿಯಿಂದ ಮೇಲಕ್ಕೆ ಪಂಚೆ ಉಟ್ಟುಕೊಂಡಿದ್ದ ; ಕಪ್ಪಗೆ ದೆವ್ವದ ಹಾಗೆ ಕಾಣುತ್ತಿದ್ದ, ನನ್ನ ಪುಣ್ಯಕ್ಕೆ ಅವನ ಗಮನ ನನ್ನ ಕಡೆ ಹರಿಯಲಿಲ್ಲ. ನಾನೂ ಅಂಗಿ ಬದಲಿಸಿ ಅವನ ಜೊತೆಗೆ ಹೊರಟಿ, ರುದ್ರ ಅಂದ: “ನೀನು ಎರಡು ಪಾರ್ಟಿಗೂ ಬೇಕಾದೋನು, ವಿಶ್ವ, ಸರಿಯಾಗಿ ಯೋಚಿಸು, ನಿನ್ನ ಧ್ವನಿ ಈ ಪಂಚಾಯಿತಿಯಲ್ಲಿ ಮುಖ್ಯವಾಗುತ್ತೆ, ನೆನಪಿರಲಿ.”
“ನಾನು ಮುಖ್ಯವಾದಾಗಲೆಲ್ಲ ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಆಗಿದೆ ರುದ್ರ. ನನಗೆ ಯಾರ ಸಾವಾಸವೂ ಬ್ಯಾಡ.”
“ಸರಿ, ಒಟ್ಟಿಗೇ ಎರಡು ಕೇಸುಗಳು ಕೋರ್ಟಿಗೆ ಹೋಗುತ್ತವೆ. ದುರುಗನ ಹೆಣ ಗುದ್ದಿನಿಂದ ಹೊರಬಂದು ನಿನ್ನ ಬೆನ್ನು ಹತ್ತುತೆ – ಮರೆತೀಯ.”
“ನಾನು ಬೆಂಗಳೂರಿಗೆ ಹೊರಟು ಹೋಗ್ತೇನೆ. ಅಲ್ಲಿ ಎಲ್ಲ ಸಲೀಸು ಕಣಯ್ಯ, ನನಗೆ ಇದೆಲ್ಲ ಬೇಡ.”
“ಬೇಡ ಅಂದ ಕೂಡಲೆ ಬಿಡೋಲ್ಲ-ಯಾವುದೂ ನಮ್ಮನ್ನು ಬಿಡೋಲ್ಲ, ನೆಲ ಹ್ಯಾಗೆ ಬಿಟ್ಟಿತು? ಹುಟ್ಟಿನಿಂದ ಅಂಟಿದ ದೇಹ ಬಿಡೋಕೆ ಆಗೋಲ್ಲ. ಕಾನೂನೂ ಆತ್ಮಹತ್ಯೆಯನ್ನು ಒಪ್ಪೋಲ್ಲ.”
[ಮುಂದೆ ಊರ ಮುಖಂಡರು ಸೇರಿ ಪಂಚಾಯಿತಿ ನಡೆಸುತ್ತಾರೆ. ನಾಯಕ ಹೆಣ್ಣಿನ ಮೇಲೆ ಅತ್ಯಾಚಾರ ನಡೆಸಿದನೆಂಬ ಗುಮಾನಿಯ ಮೇಲೆ ದಂಡ ವಿಧಿಸಲಾಗುತ್ತೆ. ಆದರೆ ರುದ್ರ ನಾಯಕನ ಪರವಾಗಿ ಮಾತಾಡುತ್ತಾನೆ. ನಾಯಕ ಮತ್ತೆ ನಗರಕ್ಕೆ ಹೊರಡುತ್ತಾನೆ. ನೆಲದ ಪ್ರಶ್ನೆ ಹಾಗೇ ಉಳಿಯುತ್ತದೆ.]
Leave A Comment