ಡಾಕ್ಟರ್ ಸಂಪೂರ್ಣಾನಂದರು ಕಾಶಿಯಲ್ಲಿ ೧೮೮೯ ರ ಜನವರಿ ಒಂದರಂದು ಹುಟ್ಟಿದರು. ಕಾಶಿಯನ್ನು ವಾರಣಾಸಿ ಎಂದೂ ಕರೆಯುತ್ತಾರೆ. ಗಂಗಾನದಿ ದಡದಲ್ಲಿರುವ ವಾರಣಾಸಿ ಪವಿತ್ರವಾದ ಧರ್ಮಸ್ಥಳವಾಗಿದೆ. ಸಂಪೂರ್ಣಾನಂದರ ಮನೆಯಲ್ಲಿ ಯಾವಾಗಲು ಧಾರ್ಮಿಕ ವಾತಾವರಣವಿರುತ್ತಿತ್ತು. ಇವರ ಮನೆಯೂ ತುಂಬಾ ಜನನಿಬಿಡ ಪ್ರದೇಶದಲ್ಲಿದ್ದಿತು.

ಬಾಲ್ಯ

ಸಂಪೂರ್ಣಾನಂದರು ಮಧ್ಯಮವರ್ಗದ ಕಾಯಸ್ಥ ಮನೆತನಕ್ಕೆ ಸೇರಿದವರು. ಸಂಪೂರ್ಣಾನಂದರ ತಾಯಿ ಸಂಪೂರ್ಣವಾಗಿ ಶಾಕಾಹಾರಿಗಳಾಗಿದ್ದರು. ತಂದೆಯವರು ವರ್ಷದಲ್ಲಿ ನಾಲ್ಕು ಬಾರಿ ಮಾತ್ರ ದುರ್ಗಾ ದೇವಿಗೆ ಆಡು ಕುರಿಗಳನ್ನು ಬಲಿಕೊಟ್ಟಾಗ ಮಾಂಸದ ರುಚಿ ನೋಡುತ್ತಿದ್ದರು. ಚಿಕ್ಕಂದಿನಲ್ಲಿಯೇ ಒಂದು ಘಟನೆಯಿಂದ ಸಂಪೂರ್ಣಾನಂದರು ಪೂರ್ತಿಯಾಗಿ ಮಾಂಸಾಹಾರವನ್ನು ಬಿಟ್ಟುಬಿಟ್ಟರು.

ಈ ಘಟನೆ ನಡೆದದ್ದು ೧೯೦೨ ರಲ್ಲಿ. ಈ ವರುಷ ಕಾಶಿ ನಗರದಲ್ಲಿ ಕಾಲರಾರೋಗ ತೀವ್ರವಾಗಿದ್ದಿತು. ಸಂಪೂರ್ಣಾನಂದರ ಕುಟುಂಬದಲ್ಲಿ ಇಬ್ಬರು ಕಾಲರಾ ರೋಗದಿಂದ ಸತ್ತುಹೋದರು. ಇನ್ನೂ ಮೂವರಿಗೆ ಕಾಲರಾ ರೋಗ ತಗುಲಿತು. ತೀವ್ರವಾದ ಔಷಧೋಪಚಾರಗಳಿಂದ ಈ ಮೂವರು ಸತ್ತು ಬದುಕಿದರು. ಇದು ದೇವಿಯ ಅಸಮಾಧಾನದ ಪರಿಣಾಮ, ಅದಕ್ಕೆ ದೇವಿಗೆ ಬಲಿಕೊಡಬೇಕೆಂದು ಸಂಪೂರ್ಣಾನಂದರ ತಂದೆ ನಿರ್ಧರಿಸಿ ವಿಂಧ್ಯಾಚಲಕ್ಕೆ ಹೋಗಿ ಎರಡು ಕುರಿಗಳನ್ನು ಬಲಿಕೊಟ್ಟರು. ಕುರಿಗಳನ್ನು ಕಡಿಯುವ ದೃಶ್ಯ ಸಂಪೂರ್ಣಾನಂದರಿಗೆ ಭೀಕರವಾಗಿ ಕಂಡಿತು. ಮುಂದೆ ಮೂರು ನಾಲ್ಕು ದಿನಗಳ ನಂತರ ಸ್ವಪ್ನದಲ್ಲಿ ಸಂಪೂರ್ಣಾನಂದರಿಗೆ ಅವುಗಳ ಚೀತ್ಕಾರ ಕೇಳಿದಂತಾಯಿತು. ಕಡಿದ ಕುರಿಗಳ ದೈನ್ಯಮುಖಗಳು ಕಾಣಿಸಿಕೊಂಡವು. ಸ್ವಪ್ನದಿಂದ ಎಚ್ಚೆತ್ತ ಸಂಪೂರ್ಣಾನಂದರು “ಇನ್ನು ಮುಂದೆ ಮಾಂಸಾಹಾರವನ್ನು ಸೇವಿಸುವುದಿಲ್ಲ” ಎಂದು ಪ್ರತಿಜ್ಞೆ ಮಾಡಿದರು.

ಶಿಕ್ಷಣ

ಅಂದಿನ ಸಂಪ್ರದಾಯದಂತೆ, ಕಾಯಸ್ಥ ಕುಟುಂಬದವರೆಲ್ಲರೂ ಉರ್ದುವಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದರು. ಆದರೆ ತಂದೆಯವರ ಇಚ್ಛೆಯಂತೆ ಸಂಪೂರ್ಣಾನಂದರು ಹಿಂದಿ ಶಾಲೆಗೆ ಸೇರಿಕೊಂಡರು. ಮುಂದೆ ಎರಡು ವರ್ಷಗಳಲ್ಲಿಯೇ ಉರ್ದು ಕಲಿಯ ತೊಡಗಿದರು. ತನ್ನ ಮಗ ಭಾಷೆಯಲ್ಲಿ ಪಾರಂಗನಾಗಬೇಕೆಂಬುದು ತಂದೆಯ ಇಚ್ಛೆಯಾಗಿದ್ದಿತು. ಆಗ ಪಶಿಯನ್ ಕಲಿಯುವುದೂ ಒಂದು ಮಹತ್ವದ ವಿಷಯವೆನ್ನುವ ಭಾವನೆ ಇದ್ದಿತು. ಹೀಗಾಗಿ ತಂದೆಯವರು ತಮ್ಮ ಮಗನಿಗೆ ಈ ಭಾಷೆಯನ್ನು ಕಲಿಸಲು ಒಬ್ಬ ಮೌಲ್ವಿಯನ್ನು ಗೊತ್ತು ಮಾಡಿದರು. ಇದಲ್ಲದೆ ಇಂಗ್ಲಿಷ್, ಗಣಿತ, ಭೂಗೋಳ ಕಲಿಸಲು ಇನ್ನೊಬ್ಬ ಶಿಕ್ಷಕನನ್ನು ಗೊತ್ತು ಮಾಡಿದರು. ಸಮಯ ಸಿಕ್ಕಾಗ ಸ್ವತಃ ತಂದೆಯೇ ಮಗನಿಗೆ ಕಲಿಸಲು ಮುಂದಾಗುತ್ತಿದ್ದರು.

ಸಂಪೂರ್ಣಾನಂದರ ಮನೆಯಲ್ಲಿ ಧಾರ್ಮಿಕ ಪುಸ್ತಕಗಳ ಪಠಣ ನಡೆಯುತ್ತಿತ್ತು. ಇವರ ತಾಯಿ ತುಲಸೀ ದಾಸರ ರಾಮಾಯಣವನ್ನು ಓದುತ್ತಿದ್ದರು. ಸಂಪೂರ್ಣಾನಂದರೂ ಈ ರಾಮಾಯಣವನ್ನು ಓದುತ್ತಿದ್ದರು.

ಸಂಪೂರ್ಣಾನಂದರು ಬಹುಬೇಗ ಮೆಟ್ರಿಕ್ ವರ್ಗಕ್ಕೆ ಬಂದು ಬಿಟ್ಟಿದ್ದರು. ಈ ಪರೀಕ್ಷೆಗೆ ಕುಳಿತುಕೊಳ್ಳಲು ೧೬ ವರ್ಷ ವಯಸ್ಸಾಗಿರಬೇಕೆಂಬ ನಿಯಮ ಕಡ್ಡಾಯವಾಗಿತ್ತು. ೧೮೮೯ರ ಜನವರಿಗೆ ಒಂದರಂದು ಹುಟ್ಟಿದ ಸಂಪೂರ್ಣಾನಂದರು, ೧೯೦೪ ರಲ್ಲಿ ನಡೆಯುವ ಮೆಟ್ರಿಕ್ ಪರೀಕ್ಷೆಗೆ ಕೂಡಲು ಅರ್ಹರಾಗಿರಲಿಲ್ಲ. ನಿರ್ದಿಷ್ಟ ವಯೋಮಿತಿಯನ್ನು ಮುಟ್ಟಲು ಇನ್ನೂ ಎರಡು ವರ್ಷಗಳ ಕಾಲ ಕಾಯಬೇಕಾಯಿತು. ಆದರೆ ಬಾಲಕ ಸಂಪೂರ್ಣಾನಂದ ಈ ವೇಳೆಯನ್ನು ಹಾಳುಮಾಡಲಿಲ್ಲ. ಅವರು ಈ ಅವಧಿಯನ್ನು ಹೆಚ್ಚಿನ ಜ್ಞಾನ ಸಂಪಾದನೆಗೆ ಬಳಸಿಕೊಂಡರು. ಹಲವರು ಪ್ರಸಿದ್ಧ ಸಾಹಿತಿಗಳ ಕೃತಿಗಳನ್ನು ಓದಿ ಮುಗಿಸಿದರು. ರಮೇಶಚಂದ್ರ ದತ್ತ ಮತ್ತು ಬಂಕಿಮ ಚಂದ್ರ ಚಟ್ಟೋಪಾಧ್ಯಾಯರ ಎಲ್ಲ ಕಾದಂಬರಿಗಳನ್ನು ಓದಿದರು. ಇವುಗಳಲ್ಲದೇ ಮಹಾರಾಣಾ ಪ್ರತಾಪ, ಶಿವಾಜಿ ಮುಂತಾದ ಹಲವಾರು ಐತಿಹಾಸಿಕ ಪುರುಷರ ಚರಿತ್ರೆಗಳನ್ನು ಪಠಣ ಮಾಡಿದರು.

ದಾಸ್ಯದ ವಿರುದ್ಧ

ಈ ಅವಿರತ ಓದಿನಿಂದ ಸಂಪೂರ್ಣಾನಂದರ ಮನಸ್ಸು ಆಗಿನ ಆಳರಸರಾದ ಇಂಗ್ಲಿಷರಿಗೆ ವಿರೋಧವಾಯಿತು. ತಂದೆ ಸರ್ಕಾರಿ ನೌಕರರು. ತಂದೆಯ ಪ್ರಾಮಾಣಿಕತೆಯನ್ನು ಅವರ ಮೇಲಧಿಕಾರಿಗಳಾದ ಇಂಗ್ಲಿಷರು ಮುಕ್ತಕಂಠದಿಂದ ಹೊಗಳುತ್ತಿದ್ದರು. ಆಗ ತಂದೆಗೆ ತಿಂಗಳಿಗೆ ಇನ್ನೂರು ರೂಪಾಯಿ ಸಂಬಳ ಬರುತ್ತಿತ್ತು. ಅಂದಿನ ದಿನಗಳಲ್ಲಿ ಇನ್ನೂರು ಎಂದರೆ ದೊಡ್ಡ ಮೊತ್ತವೇ. ತಂದೆ ಎಂದೂ ಲಂಚಕ್ಕೆ ಕೈಯೊಡ್ಡಿದವರಲ್ಲ. ತಮಗೆ ಬರುವ ಸಂಬಳದಲ್ಲಿ ಮಕ್ಕಳಿಗೆ ಉಚ್ಚ ಶಿಕ್ಷಣ ಕೊಡಿಸುವ ಪ್ರಬಲ ಇಚ್ಛೆಯನ್ನು ಹೊಂದಿದ್ದರು. ಆದರೆ ಆಗಿನ ಆಳರಸರಾದ ಬ್ರಿಟಿಷರ ವಿರುದ್ಧ ನಿಲ್ಲುವುದು ಅವರ ದೃಷ್ಟಿಯಲ್ಲಿ ಮಹಾಪಾಪವೇ ಆಗಿದ್ದಿತು. ಆದರೆ ನಿರಂತರ ಓದಿನ ಫಲವಾಗಿ ಬಾಲಕ ಸಂರ್ಪೂವಾನಂದರ ವೈಚಾರಿಕತೆ, ವಿಮರ್ಶಕ ಬುದ್ಧಿ ಬೆಳೆದು ಬರತೊಡಗಿದ್ದವು. ಹೀಗಾಗಿ ಬ್ರಿಟಿಷರು ನಮ್ಮನ್ನು ಗುಲಾಮರನ್ನಾಗಿ ಮಾಡಿ ನಮ್ಮ ದೇಶವನ್ನು ಆಳುತ್ತಿರುವುದು ಅನ್ಯಾಯವೆನ್ನುವ ಭಾವನೆ ಅವರಲ್ಲಿ ಪ್ರಬಲವಾಗಿ ಬೆಳೆಯತೊಡಗಿತು.

ಇಂತಹ ಭಾವನೆಗಳಿಂದ ಪ್ರಚೋದನೆ ಪಡೆದ ಸಂಪೂರ್ಣಾನಂದರು ಕ್ರಾಂತಿಯ ಸೆಳವಿಗೆ ಇಳಿಯ ತೊಡಗಿದರು. ಬ್ರಿಟಿಷ್ ಸರ್ಕಾರ ಬಂಗಾಳವನ್ನು ಇಬ್ಭಾಗ ಮಾಡಬೇಕೆಂದು ನಿರ್ಧರಿಸಿತು. ಬಂಗಾಳಿಗಳು ಈ ನಿರ್ಣಯದ ವಿರುದ್ಧ ಸಿಡಿದು ನಿಂತರು. ಕಾಶಿಯಲ್ಲಿ ಬಂಗಾಳಿಗಳ ಸಂಖ್ಯೆಯೂ ಸಾಕಷ್ಟಿದ್ದಿತ್ತು. ಸಂಪೂರ್ನಾನಂದರಿಗೆ ಅನೇಕ ಬಂಗಾಳಿ ಮಿತ್ರರಿದ್ದುದರಿಂದ ಕಾಶಿಯಲ್ಲಿ ನಡೆಯುತ್ತಿದ್ದ ಬಂಗಾಳಿಗಳ ರಹಸ್ಯ ಸಭೆಗಳಿಗೆ ಅವರು ಹೋಗತೊಡಗಿದರು. ಇವರ ತಂದೆಗೆ ತನ್ನ ಮನೆಯಲ್ಲಿಯೇ ಸಿಡಿಲುಮರಿಯೊಂದು ಬೆಳೆಯುತ್ತಿರುವುದು ಗೊತ್ತಾಗಲಿಲ್ಲ. ಹೋರಾಡುವ ಸಮಯ ಬಂದಲ್ಲಿ ನಮ್ಮ ತರುಣರು ಅದಕ್ಕೆ ಸಿದ್ಧರಾಗಿರಬೇಕೆಂದು ಅಲ್ಲಲ್ಲಿ ವ್ಯಾಯಾಮ ಶಾಲೆಗಳು ಪ್ರಾರಂಭವಾದುವು. ಬಂಗಾಳಿಗಳು ಇದ್ದಲ್ಲಿ ಗೂಢಚಾರರ ಜಾಲ ಪಸರಿಸತೊಡಗಿತು. ಹೀಗಾಗಿ ವಾರಣಾಸಿಯ ತುಂಬ ಬ್ರಿಟಿಷರ ಗೂಢಾಚಾರರು ಹಬ್ಬಿಕೊಂಡರು. ಬಂಗಾಳಿಗಳ ಮೇಲೆ ಕಣ್ಣನ್ನಿರಿಸುವುದರಲ್ಲದೇ ಅವರ ಜೊತೆಯಲ್ಲಿ ಓಡಾಡುವ ಜನರ ಮೇಲೂ ಅವರು ಗಮನ ಇಡತೊಡಗಿದರು. ಬಂಗಾಳ ವಿಭಜನೆಯ ನಿರ್ಣಯದ ನಂತರ ಬಂಗಾಳದಲ್ಲಿ ಉಗ್ರರೂಪದ ಚಳವಳಿ ಪ್ರಾರಂಭವಾಯಿತು. ಆಗ ಶಾಲೆ ಕಾಲೇಜುಗಳಲ್ಲಿ ಬೇಸಿಗೆಯ ರಜವಾದುದರಿಂದ ವಿದ್ಯಾರ್ಥಿಗಳೆಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಈ ಚಳವಳಿಯಲ್ಲಿ ಭಾಗವಹಿಸತೊಡಗಿದರು. ವಿಕ್ಟೋರಿಯ ಪಾರ್ಕಿನಲ್ಲಿ ಹಲವು ವಿದ್ಯಾರ್ಥಿಗಳ ಜತೆ ಕಲೆತಾಗ ಸಂಪೂರ್ಣಾನಂದರ ಮನಸ್ಸು ವ್ಯಗ್ರವಾಗತೊಡಗಿತು. ಬ್ರಿಟಿಷರ ಬಗೆಗೆ ದ್ವೇಷ ಅವರನ್ನು ಆವರಿಸತೊಡಗಿತು.

ವಾರಣಾಸಿಯಲ್ಲಿ ಕಾಂಗ್ರೆಸ್ ಅಧಿವೇಶನ ಸೇರಿತು. ಈ ಅಧಿವೇಶನದಲ್ಲಿ ಸಂಪೂರ್ಣಾನಂದರು ಸ್ವಯಂಸೇವಕರಾಗಿ ಭಾಗವಹಿಸಿದರು. ಹೀಗಾಗಿ, ರಾಜಕಾರಣಪಟುಗಳಾದ ಗೋಖಲೆ, ಪಂಡಿತ ಮದನಮೋಹನ ಮಾಳವೀಯ, ಲೋಕಮಾನ್ಯ ತಿಲಕ್, ಲಾಲಾ ಲಜಪತ ರಾಯ್, ಸುರೇಂದ್ರನಾಥ ಬ್ಯಾನರ್ಜಿ ಮುಂತಾದ ಮಹನೀಯರ ನಿಕಟ ಸಂಪರ್ಕದ ಲಾಭವನ್ನು ಅವರು ಪಡೆದರು.

ಮುಂದೆ ಸ್ವಾತಂತ್ರ್ಯ ಚಳುವಳಿಯ ಜತೆಯಲ್ಲಿ ಸ್ವದೇಶಿ ಚಳವಳಿಯೂ ಪ್ರಾರಂಭವಾಯಿತು. ಇನ್ನು ಮುಮದೆ ವಿದೇಶೀ ಬಟ್ಟೆಗಳನ್ನು ಧರಿಸುವುದಿಲ್ಲವೆಂದು ಸಂಪೂರ್ಣಾನಂದರು ಪ್ರತಿಜ್ಞೆ ಮಾಡಿದರು.

ಜ್ಞಾನದಾಹ

ಸಂಪೂರ್ಣಾನಂದರು ಕ್ವೀನ್ಸ್ ಕಾಲೇಜಿನಲ್ಲಿ ಕಲಿತು ೧೯೧೧ ರಲ್ಲಿ ಅಲಹಾಬಾದ್ ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ ಪದವೀಧರರಾದರು. ಮುಂದೆ ಸಾರ್ವಜನಿಕ ಕಾರ್ಯದಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಅವರ ಸಮಯ ವ್ಯಯವಾಗುತ್ತಿತ್ತು. ಈ ಮಧ್ಯೆ ಅವರಿಗೆ ಜ್ಯೋತಿಷಶಾಸ್ತ್ರದ ಅಭ್ಯಾಸದಲ್ಲಿ ಆಸಕ್ತಿ ಹೆಚ್ಚಿತು. ಅವರ ತಂದೆಯವರಿಗೆ ಜ್ಯೋತಿಷಶಾಸ್ತ್ರದಲ್ಲಿ ಅಭಿರುಚಿ ಇದ್ದಿತು. ಸಂಪೂರ್ಣಾನಂದರು ಆ ಶಾಸ್ತ್ರದ ಹಲವಾರು ಗ್ರಂಥಗಳನ್ನು ಓದಿ ಮನನಮಾಡತೊಡಗಿದರು. ಪ್ರಾಯೋಗಿಕವಾಗಿ ಕಲಿತದ್ದಲ್ಲದೆ ಪ್ರತ್ಯಕ್ಷವಾಗಿ ಆಕಾಶದಲ್ಲಿಯ ಗ್ರಹಗಳ ನಿರೀಕ್ಷೆಯಲ್ಲಿ ತೊಡಗಿದರು. ರಾತ್ರಿ ಆಯಿತೆಂದರೆ ಆಕಾಶದತ್ತ ದೃಷ್ಟಿ ಹಾಯಿಸುತ್ತ ವೀಕ್ಷಿಸತೊಡಗಿದರು.

ಇವರು ಕಾಲೇಜಿನಲ್ಲಿ ಓದುತ್ತಿದ್ದಾಗ ನಿಷ್ಣಾತ ಪ್ರೊಫೆಸರುಗಳ ಸಹವಾಸದ ಫಲ ಇವರಿಗೆ ಲಭಿಸಿತು. ಅವರ ಕಾಲೇಜಿನಲ್ಲಿ ಡಾಕ್ಟರ್ ವೆನಿಸ್, ಪ್ರೊಫೆಸರ್ ರೆಂಡಲ್, ಡಾಕ್ಟರ್ ಗಣೇಶಪ್ರಸಾದ ಮುಂತಾದ ಉತ್ತಮ ಪ್ರೊಫೆಸರರ ನೇತೃತ್ವದಲ್ಲಿ ಅಭ್ಯಾಸ ಮಾಡುವ ಸುಯೋಗ ಇವರಿಗೆ ಲಭಿಸಿತು.

ಸಂಪೂರ್ಣಾನಂದರಿಗೆ ಜೀವನದಲ್ಲಿ ಯಾವುದು ಸತ್ಯ ಎಂಬುದನ್ನು ತಿಳಿದುಕೊಳ್ಳುವ ಹವ್ಯಾಸ ಬಾಲ್ಯದಿಂದಲೂ ಇದ್ದಿತು. ಬಿಡುವಿನ ಸಮಯದಲ್ಲಿ ಈ ವಿಷಯದ ಯೋಚನೆಗಳು ಅವರ ಮನಸ್ಸನ್ನು ಮುತ್ತುತ್ತಿದ್ದವು. ನಾವು ಬೆಳೆದ ಸಂಸ್ಕಾರದ ಫಲವಾಗಿ ನಮ್ಮಲ್ಲಿ ಧರ್ಮ, ಜೀವನದ ಒಂದು ಅಂಗವಗಿ ಬೆಳೆದು ಬರುತ್ತದೆ ಎಂಬುದನ್ನು ಅವರು ಕಂಡುಕೊಂಡಿದ್ದರು. ಹೀಗಾಗಿ ಅವರ ಮುಂದಿನ ಲೇಖನಗಳಲ್ಲಿ ಹಾಲಿನಲ್ಲಿ ಬೆಣ್ಣೆ ಅಡಕವಾಗಿರುವಂತೆ ಧರ್ಮದ ಕಂಪು ಇದ್ದುದನ್ನು ನಾವು ಗಮನಿಸಬಹುದು.

ಆತ್ಮಜಾಲದ ಹಂಬಲ

ಬಾಲ್ಯದಿಂದಲೂ ಅವರು ಧಾರ್ಮಿಕ ಪುಸ್ತಕಗಳನ್ನು ಓದುತ್ತಿದ್ದರು. ಧರ್ಮದ ತತ್ವಗಳನ್ನು ಅರಿಯದಿದ್ದರು ಧಾರ್ಮಿಕ ಕಥೆಗಳನ್ನು ಓದಿ ತಮ್ಮ ಸ್ವಭಾವವನ್ನು ತಿದ್ದಿ ಕೊಳ್ಳಲು ಪ್ರಯತ್ನಿಸುತ್ತಿದ್ದರು. ಬೇರೆ ಬೇರೆ ಹೆಸರುಗಳಿಂದ ಪೂಜೆಗೊಳ್ಲುವ ಎಲ್ಲ ದೇವತೆಗಳೂ ಸರ್ವವ್ಯಾಪಿ ಪರಮೇಶ್ವರನ ಭಾವನೆಯು ಮನುಷ್ಯನ ಮನಸ್ಸನ್ನಾವರಿಸುವ ಸಾಧನಗಳೆಂದು ಸಂಪೂರ್ಣಾನಂದರು ತಿಳಿದುಕೊಂಡರು. ಈ ಪ್ರಶ್ನೆ ಜಟಿಲವಾದಂತೆ, ತಮ್ಮ ಸಮಸ್ಯೆಯ ನಿವಾರಣೆಗಾಗಿ ಬಾಲಕ ಸಂಪೂರ್ಣಾನಂದ ತಂದೆಗೆ ಶರಣು ಬಂದರು. ತಂದೆಯು ತಮಗೆ ತಿಳಿದಷ್ಟರಮಟ್ಟಿಗೆ ಮಗನಿಗೆ ತಿಳಿಸಿದರು. ಆದರೆ ಸೃಷ್ಟಿಯ ನಿರ್ಮಾಣದ ಬಗೆಗೆ ಇದ್ದ ಸಂದೇಹ ಮಾಯವಾಗಲಿಲ್ಲ. ಅವರು ದೊಡ್ಡವರಾದ ಬಳಿಕ ಆರ್ಯಸಮಾಜ, ಇಸ್ಲಾಂ, ಜರತುಷ್ಟ್ರ ಧರ್ಮದ ಗ್ರಂಥಗಳನ್ನು, ಹಾಗೆಯೇ ಸ್ವಾಮಿ ವಿವೇಕಾನಂದರ ಪುಸ್ತಕಗಳನ್ನು, ಬ್ರಹ್ಮಸೂತ್ರ ಮತ್ತು ಉಪನಿಷತ್ತುಗಳ ಇಂಗ್ಲಿಷ್ ಭಾಷಾಂತರಗಳನ್ನು ಓದಿದರು. ಈ ಅಭ್ಯಾಸದ ಫಲವಾಗಿ ಆದಿಶಂಕರಾಚಾರ್ಯರ ಬಗೆಗೆ ಅವರಲ್ಲಿ ಆದರ ಭಾವನೆ ಮೂಡಿತು.

‘ಜೀವನದಲ್ಲಿ ಯಾವುದು ಸತ್ಯ?’

ಆದಾಗ್ಯೂ ಅವರ ಮನಸ್ಸಿನಲ್ಲಿ ಮೂಡಿದ್ದ ಸಂದೇಹ ಪೂರ್ತಿಯಾಗಿ ಮಾಯವಾಗಲಿಲ್ಲ. ಅವರ ನೆರೆಮನೆಯಲ್ಲಿ ವಾಸಿಸುತ್ತಿದ್ದವನೊಬ್ಬ ರಾಧಾಸ್ವಾಮಿ ಸತ್ಸಂಗ ಪಂಗಡಕ್ಕೆ ಸೇರಿದವನಾಗಿದ್ದನು. ಅವನ ಜತೆಯಲ್ಲಿ ಸಂಪೂರ್ಣಾನಂದರು ಚರ್ಚಿಸತೊಡಗಿದರು. ಕಬೀರ, ನಾನಕ ಅವರ ಗ್ರಂಥಗಳನ್ನು ಓದಿಯಾಯಿತು. ಇವೆಲ್ಲದರ ಅಭ್ಯಾಸ ಮಾಡಿದ ಬಳಿಕ ಅವರು ‘ಆತ್ಮಜ್ಞಾನ’ ಎಂಬುದು ಕೇವಲ ಪುಸ್ತಕಗಳನ್ನು ಓದುವುದರಿಂದ ಸಾಧಿಸುವ ವಸ್ತುವಾಗಿರದೆ, ತನ್ನನ್ನು ತಾನೇ ತಿಳಿದುಕೊಳ್ಳುವ ಪ್ರಯತ್ನಗಳ ಮೂಲಕ ಅದು ಸಾಧಿತವಾಗುತ್ತದೆ ಎಂಬ ಸತ್ಯವನ್ನು ತಿಳಿದು ಕೊಂಡರು. ಗುರುವಿನ ಗುಲಾಮನಾಗುವತನಕ ದೊರೆ ಯದಣ್ಣ ಮುಕುತಿ ಎಂಬ ಭಾವ ಅವರಲ್ಲಿ ಬೆಳೆಯಿತು. ಅಭ್ಯಾಸ, ಯೋಗ, ಮತ್ತು ವೈರಾಗ್ಯ ಇವುಗಳ ಆವಶ್ಯಕ ಎಂದು ಬಗೆದರು.

ಈ ಜಿಜ್ಞಾಸೆ ಅವರನ್ನು ಹಲವಾರು ಸಾಧುಗಳನ್ನು ಭೇಟಿ ಮಾಡಲು ಹಚ್ಚಿತು. ಆ ಸಾಧುಗಳ ಸರಳ ಸ್ವಭಾವಕ್ಕೆ ಅವರು ಮರುಳಾದರೂ ಅವರ ಮನಸ್ಸಿಗೆ ಬೇಕಾದ ಸಮಾಧಾನ ದೊರೆಯಲಿಲ್ಲ. ಅವರು ಸಂಸ್ಕೃತದ ಅಭ್ಯಾಸವನ್ನು ನಿಷ್ಠೆಯಿಂದ ಮಾಡತೊಡಗಿದರು. ಯೋಗವಿದ್ಯೆ ಅವರನ್ನು ಆಕರ್ಷಿಸಿತು. ಯಾವಾಗಲೂ ಯೋಚನಾಪರ ರಾಗತೊಡಗಿದರು. ಅವರ ಈ ಹೊಸ ಚಟುವಟಿಕೆಯಿಂದ ಮನೆಯ ಜನರಿಗೆ ಗಾಬರಿಯಾಯಿತು. ಇವರ ‘ಆತ್ಮಜ್ಞಾನ’ದ ವಿಚಾರವನ್ನು ಸೂಕ್ಷ್ಮವಾಗಿ ಗ್ರಹಿಸಿದ ಇವರ ತಾಯಿ ಮಗನನ್ನು ಹತ್ತಿರ ಕರೆದು ಹೇಳಿದರು. ‘ಮಗೂ, ನೀನು ಅಜ್ಜನ ಬಳಿಗೆ ಹೋಗು. ನಿನ್ನ ಸಮಸ್ಯೆಗೆ ಅವರು ಪರಿಹಾರ ನೀಡಬಲ್ಲರು.’ ಸಂಪೂರ್ಣಾನಂದರ ತಾಯಿಯ ತಂದೆ, ಬಾಬಾ ರಾಮಲಾಲ ಎಂಬ ಮಹಾನ್ ಯೋಗಿಯ ಶಿಷ್ಯರಾಗಿದ್ದರು. ತಾಯಿಯ ಮಾತಿನಂತೆ, ಸಂಪೂರ್ಣಾ ನಂದ ಅಜ್ಜನ ಬಳಿಗೆ ಬಂದು ಇರತೊಡಗಿದರು. ಆದರೆ ಅಜ್ಜ ಆತ್ಮಜ್ಞಾನದ ವಿಷಯವಾಗಿ ಯಾವ ಮಾತನ್ನೂ ಆಡಲಿಲ್ಲ. ಈ ಬಾಲಕನಲ್ಲಿ ಸಾಧನಮಾರ್ಗದಲ್ಲಿ ಮುಂದು ವರಿಯಲು ಯೋಗ್ಯತೆ ಇದೆಯೇ ಎಂಬುದನ್ನು ಪರೀಕ್ಷಿಸ ತೊಡಗಿದರು. ಆದರೆ ಯಾವ ಫಲವಾಗಲಿ ಬಿಡಲಿ ತಮ್ಮ ಕರ್ತವ್ಯವನ್ನು ಮಾಡಬೇಕು ಎಂದು ನಡೆಯುತ್ತಿದ್ದ ಅಜ್ಜನ ರೀತಿಯಿಂದ ಸಂಪೂರ್ಣಾನಂದರು ಪಾಠ ಕಲಿತರು.

ಅಧ್ಯಾಪಕ ವೃತ್ತಿ

೧೯೧೮ ರಲ್ಲಿ ಸಂಪೂರ್ಣಾನಂದರ ತಂದೆಯವರು ನಿಧನರಾದರು. ಅನಂತರ ಮನೆಯನ್ನು ನಡೆಯಿಸಿಕೊಂಡು ಬರುವ ಹೊನೆ ಸಂಪೂರ್ಣಾನಂದರ ಮೇಲೆ ಬಿದ್ದಿತು. ವಿಶ್ವವಿದ್ಯಾಲಯದ ಪದವಿ ಹಾಗೂ ತಂದೆಯವರ ಸರ್ಕಾರಿ ಸೇವೆಗಳ ಬೆಂಬಲದ ಆಧಾರದ ಮೇಲೆ ಅವರಿಗೆ ಸರ್ಕಾರಿ ನೌಕರಿ ಸಿಕ್ಕುವುದು ಸುಲಭವಾಗಿತ್ತ. ಆದರೆ ಬ್ರಿಟಿಷ್ ಸರ್ಕಾರದ ಸೇವೆಯನ್ನು ಮಾಡುವುದಿಲ್ಲ ಎಂದು ಅವರು ನಿರ್ಧರಿಸಿದ್ದರು. ಜೀವನ ನಿರ್ವಹಣೆಗಾಗಿ ಏನನ್ನಾದರೂ ಮಾಡಲೇಬೇಕಿದ್ದಿತು. ಅದಕ್ಕಾಗಿ ಕಾಶಿಯಲ್ಲಿಯ ಲಂಡನ್ ಮಿಷನ್ ಸ್ಕೂಲಿನಲ್ಲಿ ಶಿಕ್ಷಕರಾಗಿ ಸೇರಿಕೊಂಡರು. ಮರು ವರ್ಷವೇ ರಾಜಾ ಮಹೇಂದ್ರ ಪ್ರತಾಪರು ಸ್ಥಾಪಿಸಿದ ವೃಂದಾವನ ಪ್ರೇಮ ಮಹಾವಿದ್ಯಾಲಯದಲ್ಲಿ ಶಿಕ್ಷಕರಾದರು. ೧೯೧೬ ರಲ್ಲಿ ಎಲ್. ಟಿ,. (ಅಂದರೆ ಇಂದಿನ ಬಿ.ಎಡ್. ಗೆ ಸಮನಾದ ಪರೀಕ್ಷೆ) ಪರೀಕ್ಷೆ ಮುಗಿಸಿಕೊಂಡರು. ಇಂದೂರಿನ ಡಾಲಿ ಕಾಲೇಜು ಕೇವಲ ರಾಜಮಹಾರಾಜರ ಮಕ್ಕಳಿಗೆ ಮೀಸಲಾದ ಕಾಲೇಜಾಗಿದ್ದಿತು. ಅಲ್ಲಿಗೆ ಶಿಕ್ಷಕರನ್ನು ಆರಿಸಲು ಸಂದರ್ಶನ ನಿಶ್ಚಯವಾಯಿತು. ಸಂಪೂರ್ಣಾನಂದರು ಸಂದರ್ಶನದಲ್ಲಿ ಚೆನ್ನಾಗಿ ಉತ್ತರ ಹೇಳಿದರು, ಆಯ್ಕೆಯಾದರು.

ಈ ಕಾಲೇಜಿನಲ್ಲಿ ಸಂಪೂರ್ಣಾನಂದರು ಮೂರು ವರ್ಷಗಳವರೆಗಿದ್ದರು. ಈ ಅವಧಿಯಲ್ಲಿ ಅವರಿಗೆ ಅಲ್ಲಿಯೇ ಶಿಕ್ಷಕರಾದ ಬನಾರಸಿದಾಸ ಚತುರ್ವೇದಿಯವರ ನಿಕಟ ಸಂಪರ್ಕ ಬಂದಿತು. ಚತುರ್ವೇದಿಯವರು ಪತ್ರಕೋದ್ಯಮಿ ಆಗಿದ್ದರಲ್ಲದೆ ವಿದೇಶಗಳಲ್ಲಿನ ಭಾರತೀಯರ ಸಮಸ್ಯೆಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರು.

ಮೂರು ವರ್ಷಗಳ ನಂತರ ಸಂಪೂರ್ಣಾನಂದರು ರಾಜಸ್ಥಾನದ ಬಿಕಾನೇರಿನ ಡುಂಗರ ಕಾಲೇಜಿಗೆ ಅಧ್ಯಾಪಕರಾಗಿ ಹೋದರು. ಇಂದೂರು ಕಾಲೇಜಿಗೂ ಈ ಕಾಲೇಜಿಗೂ ಅಜಗಜಾಂತರ ವ್ಯತ್ಯಾಸವಿದ್ದಿತು. ಇಲ್ಲಿ ಸಾವಿರಕ್ಕೂ ಮೇಲ್ಪಟ್ಟು ವಿದ್ಯಾರ್ಥಿಗಳಿದ್ದರು. ಹಾಗೆಯೇ ಇಲ್ಲಿ ಕಾನೂನು ಅಭ್ಯಾಸ ಕ್ರಮವನ್ನು ಹಿಂದಿ ಮಾಧ್ಯಮದ ಮುಖಾಂತರ ಕಲಿಸಲಾಗುತ್ತಿತ್ತು.

ನೌಕರಿಯ ಸಲುವಾಗಿ ಹಲವು ಕಡೆ ಓಡಾಡಿದ ಸಂಪೂರ್ಣಾನಂದರಿಗೆ ಜಗತ್ತಿನ ಅನುಭವ ಒಂದು ನಿಧಿಯಾಗಿ ದೊರೆಯಿತು. ಅಭ್ಯಾಸ ಹಾಗೂ ಅನುಭವಗಳ ಬಂಡವಾಳದಿಂದ ಸಂಪೂಣಾನಂದರು ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದರು.

ದಕ್ಷಿಣ ಆಫ್ರಿಕದಲ್ಲಿ ಸತ್ಯಾಗ್ರಹ ನಡೆಯುತ್ತಿದ್ದ ಕಾಲವದು. ಸಂಪೂರ್ಣಾನಂದರು ‘ಧರ್ಮವೀರ ಗಾಂಧೀಜಿ’ ಎನ್ನುವ ಪುಸ್ತಕ ಬರೆದು ಅದರಿಂದ ಬಂದ ಗೌರವ ಧನವನ್ನು ಪೂರ್ತಿಯಾಗಿ ದಕ್ಷಿಣ ಆಫ್ರಿಕ ಸತ್ಯಾಗ್ರಹಕ್ಕಾಗಿ ಕಳುಹಿಸಿಕೊಟ್ಟು ಸತ್ಯಾಗ್ರಹಕ್ಕೆ ತಮ್ಮ ಪಾಲಿನ ಅಳಿಲು ಸೇವೆಯನ್ನು ಸಲ್ಲಿಸಿದರು. ಅನಂತರ “ಮಹಾರಾಜ್ ಛತ್ರಸಾಲ್”, “ಭಾರತ ದೇಶಿಯ ಸಂಸ್ಥಾನಗಳು” “ಭೌತಿಕ್ ವಿಜ್ಞಾನ್” ಮತ್ತು “ಜ್ಯೋತಿರ್ವಿನೋದ್” ಮೊದಲಾದ ಗ್ರಂಥಗಳನ್ನು ಬರೆದರು. ಇವುಗಳಲ್ಲದೇ ಹಿಂದಿ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದರು. ಅವರು ನೌಕರಿಯಲ್ಲಿದ್ದುದರಿಂದ ಪತ್ರಿಕೆಗಳಿಗೆ ಲೇಖನಗಳನ್ನು “ಕಾಪಾಲಿಕ” ಮತ್ತು “ಸುಖಾಖಿಲ” ಎನ್ನುವ ಕಾವ್ಯನಾಮಗಳಿಂದ ಬರೆಯುತ್ತಿದ್ದರು.

೧೯೧೭ರಲ್ಲಿ ಇಂದೂರಿನಲ್ಲಿ ಸೇರಿದ ಹಿಂದಿ ಸಾಹಿತ್ಯ ಸಮ್ಮೇಳನದ ಸ್ವಾಗತಸಮಿತಿಯ ಉಪಾಧ್ಯಕ್ಷರೂ ಆಗಿದ್ದರು. ಮಹಾತ್ಮಾಜಿಯವರೇ ಈ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ಹೀಗೆ ಗಾಂಧೀಜಿಯವರ ಸಂಪರ್ಕದಲ್ಲಿ ಬರಲು ಸಂಪೂರ್ಣಾನಂದರಿಗೆ ಅವಕಾಶವಾಯಿತು.

ಕಾಂಗ್ರೆಸ್ನಲ್ಲಿ ಪ್ರವೇಶ

ಪ್ರಪಂಚದ ಮೊದಲನೆಯ ಮಹಾಯುದ್ಧಕ್ಕೆ ಮೊದಲೆ ಭಾರತದಲ್ಲಿ ಸ್ವಾತಂತ್ರ್ಯಕ್ಕಾಗಿ ಚಳವಳಿ ಪ್ರಾರಂಭವಾಗಿತ್ತು. ಬ್ರಿಟಿಷ್ ಸರ್ಕಾರ ಇದನ್ನು ದಮನ ಮಾಡಲು ಕ್ರೌರ್ಯವನ್ನು ಬಳಸಿತು. ದೇಶಪ್ರೇಮಿಗಳನ್ನು ಸೆರೆಮನೆಗೆ ತಳ್ಳಿತು. ಅಮೃತಸರದ ಜಲಿಯನ್ ವಾಲಾಬಾಗ್ ಎಂಬಲ್ಲಿ ಬ್ರಿಟಿಷ್ ಸೈನ್ಯ ಸಭೆಯೊಂದರ ಮೇಲೆ ಗುಂಡು ಹಾರಿಸಿ ನೂರಾರು ಜನರನ್ನು ಕೊಂದುಹಾಕಿತು.

ದೇಶಸೇವೆಗಾಗಿ ಉದ್ಯೋಗಕ್ಕೆ ರಾಜೀನಾಮೆ

೧೯೨೦ ರಲ್ಲಿ ನಾಗಪುರದಲ್ಲಿ ಸೇರಿದ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿ ಅಸಹಕಾರದ ಕಹಳೆಯನ್ನೂದಿದರು. ಆಗ ಸಂಪೂರ್ಣಾನಂದರು ಬಿಕಾನೇರ್ ಕಾಲೇಜನಲ್ಲಿ ಪ್ರಾಧ್ಯಾಪಕರಾಗಿದ್ದರು. ಆಗ ಅವರಿಗೆ ತಿಂಗಳಿಗೆ ಮುನ್ನೂರೈವತ್ತು ರೂಪಾಯಿ ಸಂಬಳ ದೊರೆಯುತ್ತಿತ್ತು. ಆಗಿನ ಕಾಲಕ್ಕೆ ಇದು ದೊಡ್ಡ ಮೊಬಲಗೇ. ಸಂಸಾರವನ್ನು ನಡೆಸಿಕೊಂಡು ಬರುವ ಹೊಣೆ ಇವರ ಮೇಲೆಯೇ ಇದ್ದಿತು. ಆದರೂ ದೇಶದಲ್ಲಿ ನಡೆದ ಸಂಗತಿಗಳಿಂದ ಅವರ ಮನಸ್ಸು ಕಾತರಗೊಂಡಿತ್ತು. ದೇಶಕ್ಕೆ ತಾವೂ ಸೇವೆ ಸಲ್ಲಿಸಬೇಕೆಂದು ದೃಢನಿರ್ಧಾರ ಮಾಡಿ ೧೯೨೧ ರ ಡಿಸೆಂಬರ್ ೩೧ ರಂದು ತಮ್ಮ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಕಾಂಗ್ರೆಸ್ಸನ್ನು ಸೇರಿದರು.

ರಾಜೀನಾಮೆ ಸಲ್ಲಿಸಿದ ಸಂಪೂರ್ಣಾನಂದರು ಶಾಂತಿ ನಿಕೇತನಕ್ಕೆ ಬಂದರು. ಅಲ್ಲಿ ದೀನಬಂಧು ಆಂಡ್ರೂಸರ ಭೇಟಿಯಾಯಿತು. ಭಾರತೀಯ ಸಂಸ್ಥಾನಗಳಲ್ಲಿಯ ರೈತರ ಪರಿಸ್ಥಿತಿ ಕಳವಳಕಾರಕವಾಗಿದ್ದುದರಿಂದ, ಆಂಡ್ರೂಸರು ಸಂಪೂರ್ಣಾನಂದರನ್ನು ಕರೆದುಕೊಂಡು ಸಂಸ್ಥಾನಗಳಿಗೆಲ್ಲ ಭೇಟಿಕೊಟ್ಟು ಅಲ್ಲಿಯ ಪರಿಸ್ಥಿತಿಯನ್ನು ಅಭ್ಯಾಸ ಮಾಡಬೇಕೆಂದು ಪ್ರಯತ್ನಿಸಿದರು. ಆದರೆ ಸಂಸ್ಥಾನಗಳ ಅರಸರು ಇವರ ಭೇಟಿಗೆ ಆಸ್ಪದಕೊಡದಿದ್ದುದರಿಂದ ಆಂಡ್ರೂಸರ ಪ್ರಯತ್ನ ನಿಷ್ಫಲವಾಯಿತು. ಜತೆಗೆ ಕಾಂಗ್ರೆಸ್ ಚಟುವಟಿಕೆಗಳಲ್ಲಿ ಸಂಪೂರ್ಣಾನಂದರು ಪೂರ್ತಿಯಾಗಿ ಭಾಗವಹಿಸ ತೊಡಗಿದರು. ಮುಂದೆ ಉತ್ತರ ಪ್ರದೇಶ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಗಳಾದರು. ಚಿಂತನಶೀಲರೂ ವಿದ್ವಾಂಸರೂ ಆದ ಭಗವಾನ್ದಾಸ್ ಉತ್ತರಪ್ರದೇಶ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು.

ಸತ್ಯಾಗ್ರಹ

ಇದೇ ಸಮಯದಲ್ಲಿ ಇಂಗ್ಲೆಂಡಿನ ರಾಜಕುಮಾರ ಭಾರತಕ್ಕೆ ಭೇಟಿ ನೀಡಿದರು. ಅವರು ಹೋದಲೆಲ್ಲ ಕಾಂಗ್ರೆಸ್ ಹರತಾಳಕ್ಕೆ ಕರೆ ಇತ್ತಿತ್ತು. ಭಗವಾನ್ದಾಸರೂ ಸಂಪೂರ್ಣಾನಂದರೂ ಹರತಾಳ ಯಶಸ್ವಿಯಾಗುವಂತೆ ಅಹೋರಾತ್ರಿ ದುಡಿದರು.

ಸಂಪೂರ್ಣಾನಂದರ ಜಿಲ್ಲಾ ಕಾಂಗ್ರೆಸ್ ಸಮಿತಿ ಬೆಳೆಯತೊಡಗಿತು. ಆಶಾಯೋಗಿ ಸಂಸ್ಕೃತ ಛಾತ್ರ ಸಂಘದವರು ಹಗಲೂ – ರಾತ್ರಿ ದುಡಿದು ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿದರು. ಸಂಪೂರ್ಣಾನಂದರು ಸತ್ಯಾಗ್ರಹ ಯಾವ ರೀತಿ ಯಶಸ್ವಿಯಾಗಿ ಮಾಡಬೇಕೆಂಬುದರ ಬಗೆಗೆ ಯೋಚಿಸತೊಡಗಿದರು. ಪ್ರತಿದಿನ ೨೦ ಜನ ಕಾಂಗ್ರೆಸ್ ಕಾರ್ಯಕರ್ತರು ಸತ್ಯಾಗ್ರಹ ಮಾಡಿ ಸೆರಮನೆಗೆ ಹೋಗಬೇಕೆಂದು ನಿರ್ಧರಿಸಿದರು. ಅದರಂತೆ, ಪ್ರತಿದಿನವೂ ೨೦ ಮಂದಿ ಸ್ವಯಂಸೇವಕರು ಸೆರೆಮನೆಯನ್ನು ತುಂಬ ತೊಡಗಿದರು. ಸತ್ಯಾಗ್ರಹದ ಮೊದಲ ದಿನವೇ ಸಂಪೂರ್ಣಾನಂದರನ್ನು ಪೊಲೀಸರು ಬಂಧಿಸಿದರು. ವಿಚಾರಣೆ ನಡೆದು ಅವರಿಗೆ ಒಂದು ವರ್ಷಜೈಲುವಾಸ ಹಾಗೂ ನೂರು ರೂಪಾಯಿ ದಂಡ ವಿಧಿಸಲಾಯಿತು. ಸಂಪೂರ್ಣಾನಂದರು ಜುಲ್ಮಾನೆಯ ಹಣ ಕೊಡಲೊಪ್ಪದಿದ್ದಾಗ ಪೊಲೀಸರು ಅವರ ಬಳಿ ಇದ್ದ ಕೈಗಡಿಯಾರವನ್ನು ಜಪ್ತಿಮಾಡಿ ದಂಡದ ಹಣ ತುಂಬಿಸಿಕೊಂಡರು. ಸಂಪೂರ್ಣಾನಂದರ ಹಳೆಯ ಶಿಷ್ಯ ಅಗ್ನಿಹೋತ್ರಿ ಎಂಬುವನು ಜರ್ಮನಿಯಿಂದ ಆ ಕೈಗಡಿಯಾರವನ್ನು ಕಳಿಸಿದ್ದ.

ಕಮ್ಯುನಿಸಮ್ನೊಡನೆ ಸಂಪರ್ಕ

ಜೈಲಿನಿಂದ ಬಿಡುಗಡೆಗೊಂಡ ನಂತರ ಸಂಪೂಣಾನಂದರು ‘ಮರ್ಯಾದಾ’ ಪತ್ರಿಕೆಯ ಸಂಪಾದಕತ್ವವನ್ನು ವಹಿಸಿಕೊಂಡರು. ಹಾಗೆಯೇ ಕಾಶೀ ವಿದ್ಯಾಪೀಠದಲ್ಲಿ ತತ್ವಶಾಸ್ತ್ರದ ಪ್ರೊಫೆಸರರಾದರು. ಆಗ ಇವರ ಜತೆಯಲ್ಲಿ ಶ್ರೀಪ್ರಕಾಶ, ಆಚಾರ್ಯ ನರೇಂದ್ರದೇವ ಅವರು ಪ್ರೊಫೆಸರರಾಗಿದ್ದರು. ಪ್ರಾರಂಭದಲ್ಲಿ ಕಾಶೀ ವಿದ್ಯಾಪೀಠ ರಾಜಕೀಯದಿಂದ ದೂರ ಉಳಿದಿತ್ತು. ಆದರೆ ಮುಂದೆ ಈ ಸಂಸ್ಥೆ ರಾಜಕೀಯ ಚಟುವಟಿಕೆಗಳ ಒಂದು ಅಂಗ ಎನಿಸಿಕೊಂಡಿತು. ಆಗ ಅಲ್ಲಿ ಅಭ್ಯಾಸ ಮಾಡುತ್ತಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ, ಡಾಕ್ಟರ್ ಕೇಸ್ಕರ್, ಟಿ. ಎನ್. ಸಿಂಗ್, ಕಮಲಾಪತಿ ತ್ರಿಪಾಠಿ, ಕೂಲಿಕಾರರ ಅಗ್ರಮಾನ್ಯ ನೇತಾರ ಹರಿಹರನಾಥ ಶಾಸ್ತ್ರಿ, ರಾಜಾರಾಮ ಶಾಸ್ತ್ರಿ ಮುಂತಾದ ವಿದ್ಯಾರ್ಥಿಗಳು ತುಂಬಾ ಹುರುಪಿನಿಂದ ರಾಜಕೀಯ ಚಟುವಟಿಕೆಗಳನ್ನು ಸಂಸ್ಥೆಯೊಳಗಿನಿಂದಲೇ ಪ್ರಾರಂಭಿಸಿದ್ದರು.

ರಷ್ಯಾದಲ್ಲಿ ಚಕ್ರವರ್ತಿಯ ಆಡಳಿತ ಅಂತ್ಯಗೊಂಡು ಸಮತಾವಾದ (ಕಮ್ಯುನಿಸಮ್)ದ ಆಳಿತ ಸ್ಥಾಪಿತವಾದದ್ದರ ಬಗೆಗೆ ಸಂಪೂರ್ಣಾನಂದರಿಗೆ ಕುತೂಹಲ ಉಂಟಾಯಿತು. ಕೆಲವರು ಭಾರತೀಯರು ರಷ್ಯಾಕ್ಕೆ ಹೋದರು. ಅವರಲ್ಲಿ ಸಂಪೂರ್ಣಾನಂದರ ಶಿಷ್ಯ ಶೌಕತ್ ಉಸ್ಮಾನಿಯಾ ಎಂಬವನೂ ಇದ್ದ. ಆತ ತನ್ನ ಗುರುಗಳಿಗೆ ರಷ್ಯಾದ ಸಮತಾವಾದದ ಸಾಹಿತ್ಯವನ್ನು ಕಳುಹಿಸತೊಡಗಿದ. ಹೀಗೆ ಸಂಪೂರ್ಣಾನಂದರಿಗೆ ಈ ಸಿದ್ಧಾಂತದ ಪರಿಚಯ ಆಯಿತು.

ಆಡಳಿತಗಾರರಾಗಿ, ಶಾಸಕರಾಗಿ

೧೯೨೩ ರಲ್ಲಿ ಮುನಿಸಿಪಲ್ ಚುನಾವಣೆಗಳು ನಡೆದವು. ಕಾಂಗ್ರೆಸ್ ಎಲ್ಲ ಕಡೆಯಲ್ಲಿ ಜಯಭೇರಿ ಬಾರಿಸಿತು. ಸಂಪೂರ್ಣಾನಂದರೂ ವಾರಣಾಸಿ ಕಾರ್ಪೊರೇಷನ್ನಿಗೆ ಆರಿಸಿಬಂದರು. ತೆರಿಗೆ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮುಂತಾದ ಉಪಸಮಿತಿಗಳಿಗೆ ಅಧ್ಯಕ್ಷರಾಗಿ ದುಡಿದು ದಕ್ಷ ಆಡಳಿತವನ್ನು ನಡೆಸಿದರು. ಕಾರ್ಪೊರೇಷನ್ನಿನ ಆದಾಯವೂ ಹೆಚ್ಚಿತು.

ಈ ದಿನಗಳಲ್ಲಿ ಒಂದು ಪ್ರಸಂಗ ನಡೆಯಿತು. ‘ಸೂರ್ಯ’ ಎಂಬ ಪತ್ರಿಕೆಯ ಸಂಪಾದಕರು ಸಂಪೂರ್ಣಾನಂದರ ಮೇಲೆ ಆಪಾದನೆಯೊಂದನ್ನು ಮಾಡಿ ಇವರು ಲಂಚ ಪಡೆದು ಪುರಸಭೆಯ ಜಾಗವನ್ನು ಅಲ್ಯುಮಿನಿಯಂ ಪಾತ್ರೆ ತಯಾರಕನಿಗೆ ಕೊಡಿಸಿದರು. ಎಂದು ಅಪರೋಕ್ಷವಾಗಿ ಟೀಕಿಸಿ ಲೇಖನ ಬರೆದಿದ್ದರು. ಆಗ ಸಂಪೂರ್ಣಾನಂದರ ಮಗಳ ಮದುವೆಯ ಸಮಯ. ಲಗ್ನದ ವೆಚ್ಚಕ್ಕೆ ಹಾಗೆ ಮಾಡಿದ್ದರೂ ಮಾಡಿರಬಹುದು ಎಂದು ಜನರ ಸಂದೇಹಕ್ಕೆ ಅವಕಾಶ ಮಾಡಿಕೊಟ್ಟಂತಿತ್ತು. ಈ ಟೀಕೆ. ಸಂಪೂರ್ಣಾನಂದರು ಆ ಸಂಪಾದಕನ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಹೂಡಿದರು. ಕೋರ್ಟಿನ ವಿಚಾರಣೆಯಲ್ಲಿ ಆರೋಪದಲ್ಲಿ ಯಾವ ಹುರುಳೂ ಇಲ್ಲವೆಂದು ಸಿದ್ಧವಾಯಿತು. ತೀರ್ಪು ಸಂಪೂರ್ಣಾನಂದರ ಪರವಾಗಿಯೇ ಆಯಿತು.

ಈ ಸಮಯದಲ್ಲಿ ಬ್ರಿಟಿಷರು ಭಾರತೀಯರಿಗೆ ಸೈನ್ಯದಲ್ಲಿ ಉಚ್ಚ ಶಿಕ್ಷಣವನ್ನು ಕೊಡಬೇಕೋ ಕೊಡ ಬಾರದೋ ಎನ್ನುವ ಬಗೆಗೆ ವರದಿ ಸಲ್ಲಿಸುವಂತೆ ‘ಸ್ಯಾಂಡರ್ಸ್ಟ್ ಸಮಿತಿ’ಯನ್ನು ನೇಮಿಸಿತು. ಈ ಸಮಿತಿಯಲ್ಲಿ ಮೋತಿಲಾಲ್ ನೆಹರು, ಜಿನ್ನಾ ಹಾಗೂ ಫಿರೋಜ್ ಸೇಥ್ನಾರವರನ್ನು ಸದಸ್ಯರಾಗಿ ನೇಮಿಸಿತ್ತು. ಮೋತಿಲಾಲರು ಈ ಸಮಿತಿಗೆ ಸಂಪೂರ್ಣಾನಂದರನ್ನು ಕಾರ್ಯದರ್ಶಿಯನ್ನಾಗಿ ನಿಯಮಿಸಿಕೊಂಡರು. ಆದರೆ ಸಮಿತಿಯ ಬ್ರಿಟಿಷ್ ಸದಸ್ಯರು ಬ್ರಿಟಿಷರಲ್ಲದವರಿಗೆ ಉಚ್ಚ ಸೈನಿಕ ಶಿಕ್ಷಣವನ್ನು ಕೊಡುವುದು ಬೇಡವೆನ್ನುವ ಅಭಿಪ್ರಾಯದವರಾಗಿದ್ದರು.

ಮುಂದೆ ೧೯೨೬ ರಲ್ಲಿ ವಾರಣಾಸಿ ಕ್ಷೇತ್ರದಿಂದ ಚುನಾವಣೆಯಲ್ಲಿ ಆರಿಸಿ ಬಂದಾಗ ಸಂಪೂರ್ಣಾನಂದರು ಸೈನಿಕ ಶಿಕ್ಷಣ ಮಸೂದೆ ತರಲು ಪ್ರಯತ್ನಿಸಿದರು. ಭಾರತೀಯರಿಗೂ ಬ್ರಿಟಿಷರಂತೆ ಸೈನಿಕ ಶಿಕ್ಷಣ ದೊರೆಯುವಂತೆ ಮಾಡುವುದು ಅವರ ಉದ್ದೇಶವಾಗಿತ್ತು. ಆದರೆ ರಾಜ್ಯ ಸರ್ಕಾರ ಈ ವಿಷಯ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದು ಎಂದು ಹೇಳಿ ಮಸೂದೆಯನ್ನು ತಳ್ಳಿಹಾಕಿತು. ಆದರೆ ಸಂಪೂರ್ಣಾನಂದರು ಅದನು ಅಷ್ಟಕ್ಕೇ ಬಿಡದೆ ಕೇಂದ್ರ ಅಸೆಂಬ್ಲಿಯಲ್ಲಿ ಈ ಮಸೂದೆ ತಂದು ಅದು ಅಂಗೀಕಾರವಾಗುವಂತೆ ಮಾಡಿದರು.

ಸೈಮನ್ ಕಮಿಷನ್ ವಿರುದ್ಧ

ಈ ಅವಧಿಯಲ್ಲಿ ‘ಸೈಮನ್ ಕಮಿಷನ್’ ಭಾರತಕ್ಕೆ ಬಂದಿತ್ತು. ಭಾರತೀಯರು ಸ್ವಾತಂತ್ರ್ಯಕ್ಕೆ ಅರ್ಹರೇ ಎಂದು ವಿಮರ್ಶೆ ಮಾಡುವುದು ಈ ಕಮಿಷನ್ನ ಕೆಲಸ. ಇದು ಭಾರತೀಯರಿಗೆ ಅಪಮಾನ ಮಾಡಿದಂತೆ ಎಂದು ಭಾರತದ ಎಲ್ಲ ಪಕ್ಷಗಳೂ ಈ ಕಮಿಷನ್ನನ್ನು ವಿರೋಧಿಸಬೇಕೆಂದು ನಿರ್ಧರಿಸಿದ್ದವು. ಆದರೆ ಅದನ್ನು ವ್ಯವಸ್ಥಿತ ರೀತಿಯಲ್ಲಿ ಬಹಿಷ್ಕರಿಸುವ ಹೊಣೆ ಕಾಂಗ್ರೆಸ್ ಪಕ್ಷದ ಮೇಲೆಯೇ ಇದ್ದಿತು. ಕಮಿಷನ್ ಹೋದ ಕಡೆಗಳಲ್ಲೆಲ್ಲ ಜನರು ಹರತಾಳ ಮಾಡಿದರು, ವಿರೋಧವಾಗಿ ಪ್ರದರ್ಶನಗಳನ್ನು ನಡೆಸಿದರು. ಯಾವ ನಗರದಲ್ಲಾದರೂ ಈ ಬಗೆಯ ಧಿಕ್ಕಾರವಾಗದಂತೆ ಮಾಡಬೇಕೆಂದು ಸರ್ಕಾರದ ಉದ್ದೇಶ. ಕಾಶಿಯಲ್ಲಿ ಶಿವರಾತ್ರಿಯ ದಿನ ಸೈಮನ್ ಕಮಿಷನ್ ಕಳಿಸಿದರೆ, ಜನರಿಗೆ ಜಾತ್ರೆಯ ಕಾರಣದಿಂದ ಇತ್ತಕಡೆ ಗಮನ ಹರಿಸಲು ಸಾಧ್ಯವಾಗದು ಎಂದು ಬ್ರಿಟಿಷರು ಊಹಿಸಿದರು. ಆದರೆ ಅವರ ಊಹೆ ತಪ್ಪಾಯಿತು. ಅಂದು ಕಮಿಷನ್ ಕಾಶಿಗೆ ಬಂದಿತು. ಸಂಪೂರ್ಣಾನಂದರು ಬಹಿಷ್ಕಾರದ ಮೆರವಣಿಗೆಯನ್ನು ಸಂಘಟಿಸಿದ್ದರು. ಸಾವಿರಾರು ಸ್ವಯಂಸೇವಕರು ರೈಲು ನಿಲ್ದಾಣದ ಬಳಿ ಬಂದು ‘ಸೈಮನರೇ ಹಿಂದಕ್ಕೆ ಹೋಗಿ’ ಎಂದು ಕಪ್ಪು ಬಾವುಟ ಪ್ರದರ್ಶನ ಮಾಡಿಯೇ ಬಿಟ್ಟರು. ಸೈಮನ್ ಕಾಶಿಯ ಮಹಾರಾಜನನ್ನು ಭೇಟಿ ಮಾಡಬೇಕಾಗಿತ್ತು, ಅದೂ ಕಷ್ಟವಾಯಿತು. ತನ್ನನ್ನು ಸಾರನಾಥದಲ್ಲಿ ಕಾಣುವಂತೆ ಸೈಮನ್ ರಾಜನಿಗೆ ಹೇಳಿ ಕಳುಹಿಸಿದ. ಕಾಶಿ ರಾಜ ಗಂಗಾನದಿಯಲ್ಲಿ ದೋಣಿಯಲ್ಲಿ ಹೊರಟಾಗ ಸಂಪೂರ್ಣಾನಂದರ ಜನ ಮೋಟಾರು ಬೋಟಿನಲ್ಲಿ ಅವರನ್ನು ಬೆನ್ನಟ್ಟಿ ಈ ಸಂದರ್ಶನ ನಡೆಯದಂತೆ ಮಾಡಿದರು.

ಸೆರಮನೆಗೆ

೧೯೩೦ ರಲ್ಲಿ ಗಾಂಧೀಜಿ ಉಪ್ಪಿನ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ೧೯೩೦ ಜನವರಿ ೨೬ ರಂದು ಸ್ವಾತಂತ್ರ್ಯ ದಿನಾಚಾರಣೆ ಎಂದು ಘೋಷಿಸಿದರು. ಗಾಳಿ, ನೀರು, ಬೆಳಕು ಎಲ್ಲರಿಗೂ ಬದುಕುವುದಕ್ಕೆ ಅಗತ್ಯ; ನಿಸರ್ಗವೇ ಅವನ್ನು ಒದಗಿಸುತ್ತದೆ; ಸರ್ಕಾರ ಅವುಗಳನ್ನು ಬಳಸುವುದರ ಮೇಲೆ ನಿರ್ಬಂಧ ಹೇರಬಾರದು. ಹಾಗೆಯೇ ಉಪ್ಪು ಎಲ್ಲರಿಗೂ ಅಗತ್ಯ. ಸಮುದ್ರದ ನೀರಿನಿಂದ ದೊರಕುವುದು. ಇದನ್ನು ಅಪ್ಪಣೆ ಇಲ್ಲದೆ ತಯಾರು ಮಾಡಬಾರದು ಎಂದು ಬ್ರಿಟಿಷ್ ಸರ್ಕಾರ ನಿರ್ಬಂಧಿಸುವುದು ತಪ್ಪು ಎಂದರು ಗಾಂಧೀಜಿ. ಸರ್ಕಾರದ ಕಾನೂನಿನ ವಿರುದ್ಧ ಚಳವಳಿ ಪ್ರಾರಂಭಿಸಿದರು. ಸ್ವಯಂ ತಾವೇ ಗುಜರಾತಿನ ದಾಂಡಿ ಎಂಬ ಸ್ಥಳದಲ್ಲಿ ಈ ಸತ್ಯಾಗ್ರಹ ಪ್ರಾರಂಭಿಸಿದರು. ಕಾಶಿ ಜಿಲ್ಲೆಯಲ್ಲಿ ಈ ಸತ್ಯಾಗ್ರಹ ಸಂಘಟಿಸುವ ಹೊಣೆ ಸಂಪೂರ್ಣಾನಂದರ ಮೇಲೆ ಬಿದ್ದಿತು.

ತಮ್ಮ ಜಿಲ್ಲೆಯಲ್ಲಿ ಸಂಪೂರ್ಣಾನಂದರು ಈ ಆಂದೋಲನವನ್ನು ಒಳ್ಳೇ ಉತ್ಸಾಹದಿಂದ ನಡೆಸಿದರು. ಕಾನೂನಿಗೆ ವಿರೋಧವಾಗಿ ಅವರೂ ಅವರ ಹಿಂಬಾಲಕರೂ ಉಪ್ಪನ್ನು ತಯಾರಿಸಿದರು. ಅದನ್ನು ತಡೆಯಲು ಪೊಲೀಸರು ಯತ್ನಿಸಿದರು. ಆಗ ಇವರು ಲಾಠಿ ಪೆಟ್ಟು ತಿನ್ನುವಂತಾಯಿತು. ಹಲವಾರು ಸತ್ಯಾಗ್ರಹಿಗಳನ್ನು ಸರ್ಕಾರ ಜೈಲಿಗೆ ಕಳುಹಿಸಿತು. ನ್ಯಾಯಾಲಯಗಳಲ್ಲಿ ಈ ಸತ್ಯಾಗ್ರಹಿಗಳ ವಿಚಾರಣೆ ನಡೆದಾಗ ಸಂಪೂರ್ಣಾನಂದರು ‘ಈ ನ್ಯಾಯಾಲಯಗಳನ್ನು ನಾವು ಮನ್ನಿಸುವುದಿಲ್ಲ, ಇನ್ನು ಮುಂದೆ ಇಲ್ಲಿ ನಡೆಯಬಹುದಾದ ನಡವಳಿಗಳಿಗೆ ನಾವು ಬದ್ಧರಲ್ಲ’ ಎಂದು ಘೋಷಿಸಿದರು.

ಚಳವಳಿ ದಿನೇದಿನೇ ಪ್ರಬಲವಾಗತೊಡಗಿತು. ಸಂಪೂರ್ಣಾನಂದರ ಕೇಳಿಕೆಯಂತೆ ಸರ್ಕಾರದಲ್ಲಿ ದೊಡ್ಡ ಕೆಲಸದಲ್ಲಿದ್ದ ತ್ರಿಭುವನಸಿಂಗ್ರಂತಹವರು ರಾಜೀನಾಮೆ ನೀಡಿ ಚಳವಳಿಯನ್ನು ಸೇರಿದರು. ಆಗ ತೇಜ್ ಬಹದ್ದೂರ್ ಸಪ್ರು ಮತ್ತು ಬ್ಯಾರಿಸ್ಟರ್ ಜಯಕರ್ ಕಾಂಗ್ರೆಸ್ ಹಾಗೂ ಸರ್ಕಾರದ ಮಧ್ಯೆ ಸಂಧಾನಮಾಡಲು ಪ್ರಯತ್ನಿಸಿದರು. ಮೊದಮೊದಲು ಅವರ ಪ್ರಯತ್ನ ಫಲಿಸಲಿಲ್ಲ. ಕಡೆಗೆ ಒಪ್ಪಂದವಾಯಿತು. ಈ ಒಪ್ಪಂದದಂತೆ ಕಾಂಗ್ರೆಸ್ ಸತ್ಯಾಗ್ರಹವನ್ನು ನಿಲ್ಲಿಸಬೇಕು, ಸರ್ಕಾರದವರು ಹೊರಡಿಸಿದ ವಿಶೇಷ ಕಾಯಿದೆಗಳನ್ನು ಮತ್ತು ವಿಧಿಸಿದ ಶಿಕ್ಷೆಗಳನ್ನು ಹಿಂತೆಗೆದುಕೊಳ್ಳಬೇಕು, ವಸೂಲು ಮಾಡಿದ ಹಣವನ್ನು ಸರ್ಕಾರ ಹಿಂದಿರುಗಿಸಬೇಕು, ಜಪ್ತುಮಾಡಿದ ಭೂಮಿಗಳು ಮಾರಾಟವಾಗದೇ ಇದ್ದಲ್ಲಿ ಅದನ್ನು ಅವರವರಿಗೆ ಹಿಂದಿರುಗಿಸಬೇಕು, ರಾಜೀನಾಮೆ ನೀಡಿದ ನೌಕರರನ್ನು ಪುನಃ ನೇಮಕ ಮಾಡಿಕೊಳ್ಳಬೇಕು ಎಂದು ತೀರ್ಮಾನವಾಯಿತು.

ಸಂಪೂರ್ಣಾನಂದರು ಉತ್ತರ ಪ್ರದೇಶ ಪ್ರಾಂತದ ಹಿಂದೂಸ್ತಾನಿ ಸೇವಾದಳದ ಸಂಘಟಣೆಯ ಹೊಣೆಯನ್ನು ವಹಿಸಿಕೊಂಡಿದ್ದರು. ಕಾಶಿಯಲ್ಲಿಯ ಕಿಸಾನ್ ಸತ್ಯಾಗ್ರಹದ ಪ್ರಮುಖರೂ ಅವರೇ ಆಗಿದ್ದರು. ಈ ಮಧ್ಯೆ ಲಂಡನ್ನಿನಲ್ಲಿ ದುಂಡುಮೇಜಿನ ಪರಿಷತ್ತು ನಡೆಯಿತು. ಈ ಪರಿಷತ್ತಿಗೆ ಹೋಗಿಬಂದ ಗಾಂಧೀಜಿಯವರ ಬಂಧನವಾದುದರಿಂದ ಪುನಃ ಸತ್ಯಾಗ್ರಹ ಆರಂಭವಾಯಿತು. ಸಂಪೂರ್ಣಾನಂದರು ಪುನಃ ಚಳುವಳಿಯನ್ನು ಪ್ರಾರಂಭಿಸಿದರು. ಈಚಲ ಗಿಡಗಳನ್ನು ಕಡಿಯುವುದು, ವಿದೇಶೀ ಬಟ್ಟೆಗಳ ಅಂಗಡಿಗಳ ಮುಂದೆ ಪಿಕೆಟಿಂಗ್ ಮಾಡುವುದು ಹಾಗೂ ವಿದೇಶೀ ಬಟ್ಟೆಗಳನ್ನು ಸುಡುವ ಚಳವಳಿಯನ್ನು ಪ್ರಾರಂಭಿಸಿದರು.

ಮತ್ತೆ ಸಂಪೂರ್ಣಾನಂದರ ಬಂಧನವಾಯಿತು. ಈ ಸಲ ಸಂಪೂರ್ಣಾನಂದರಿಗೆ ಆರು ತಿಂಗಳು ಸಶ್ರಮ ಶಿಕ್ಷೆ ವಿಧಿಸಲಾಯಿತು. ಜೈಲಿನಿಂದ ಬಿಡುಗಡೆ ಆಗಿ ಕಾಶಿಗೆ ಬಂದ ಬಳಿಕ ಜಿಲ್ಲಾ ಕಮಿಷನರರು ಸಂಪೂರ್ಣಾನಂದರು ಇಪ್ಪತ್ತನಾಲ್ಕು ಗಂಟೆಗಳಲ್ಲಿ  ಕಾಶಿಯನ್ನು ಬಿಟ್ಟು ಹೊರಡುವಂತೆ ಆಜ್ಞೆ ವಿಧಿಸಿದರು. ಆದರೆ ಸಂಪೂರ್ಣಾನಂದರು ಈ ಆಜ್ಞೆಯನ್ನು ಪಾಲಿಸಲಿಲ್ಲ. ಪುನಃ ಅವರ ಬಂಧನವಾಗಿ ಒಂದು ವರ್ಷ ಶಿಕ್ಷೆಯನ್ನು ವಿಧಿಸಲಾಯಿತು.

ಅವರು ಜೈಲಿನಿಂದ ಮರಳಿ ಬಂದಾಗ ಚಳವಳಿಯ ಕಾವು ನಿಂತಿತ್ತು. ಸಂಪೂರ್ಣಾನಂದರು ಈಗ ತಮ್ಮ ಗಮನವನ್ನು ರೈತರತ್ತ ಹರಿಸಿದರು. ಆಗ ರೈತರು ಜಮೀನುದಾರರಿಂದ ಹಲವಾರು ರೀತಿಗಳಲ್ಲಿ ಹಿಂಸೆಗೆ ಒಳಗಾಗಿದ್ದರು. ಅವರು ನಿಸ್ಸಹಾಯಕರಾಗಿದ್ದರು. ಜಮೀನುದಾರರಿಗೆ ಹಣದ ಬಲವಿತ್ತು. ಆಚಾರ್ಯ ನರೇಂದ್ರ ದೇವ್, ಆಚಾರ್ಯ ಕೃಪಲಾನಿಯವರ ಜತೆಯಲ್ಲಿ ಸಂಪೂಣಾನಂದರು ಚರ್ಚಿಸಿ ರೈತರ ಗೋಳುಗಳ ಬಗೆಗೆ ವಿಚಾರಣೆ ನಡೆಸಬೇಕೆಂದು ನಿರ್ಧರಿಸಿದರು. ಆಗ ಗೋರಖ್ಪುರ್ ಜಿಲ್ಲೆಯ ಒಂದು ಹಳ್ಳಿಯಲ್ಲಿ ಜಮೀನುದಾರರು ಪುಂಡರನ್ನು ಒಟ್ಟುಗೂಡಿಸಿ ರೈತರ ಮೇಲೆ ದಾಳಿ ಮಾಡಿದ್ದರು. ಇದನ್ನು ಸಂಪೂರ್ಣಾನಂದರು ಧೈರ್ಯವಾಗಿ ವರದಿ ಮಾಡಿದರು. ಜಮೀನುದಾರರ ದೌರ್ಜನ್ಯವನ್ನು ಪ್ರಕಟಿಸುವ ಧೈರ್ಯ ಪತ್ರಿಕೆಗಳಿಗೆ ಇರಲಿಲ್ಲ. ಆದರೆ ಸಂಪೂರ್ಣಾನಂದರು ಹಟತೊಟ್ಟು ವಾಸ್ತವ ಸಂಗತಿಗಳನ್ನು ತೋರಿಸಿಕೊಡತೊಡಗಿದರು. ಜಮೀನುದಾರರೂ ಸ್ವಲ್ಪ ಗಾಬರಿಯಾದರು. ಸ್ವಯಂ ಗಾಂಧೀಜಿಯವರೇ ಸಂಪೂರ್ಣಾನಂದರ ಈ ವರದಿಯನ್ನು ಆಗಿನ ವೈಸ್ ರಾಯ್ ಲಾರ್ಡ್ ವಿಲಿಂಗ್ಡನ್ ಅವರಿಗೂ ಕಳುಹಿಸಿ ಕೊಟ್ಟರು.

ಕಾಂಗ್ರೆಸ್ ಸಮಾಜವಾದಿ ಪಕ್ಷ

ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ, ನಾವು ಹೇಗೆ ನಡೆದುಕೊಳ್ಳಬೇಕು ಎಂಬ ಬಗೆಗೆ ದೇಶದ ತರುಣರು ವಿಚಾರಿಸತೊಡಗಿದ್ದರು. ಭಾರತ, ರಾಜಕೀಯ ಸಾಮಾಜಿಕ ಹಾಗೂ ಆರ್ಥಿಕ ಉನ್ನತಿ ಸಾಧಿಸಲು ಸಮಾಜವಾದಿ ಪದ್ಧತಿಯೇ ಯೋಗ್ಯವೆಂದು ಸಂಪೂರ್ಣಾನಂದರು ನಿಷ್ಠೆಯಿಂದ ನಂಬಿದ್ದರು. ಇದು ಹೊರಗಿನಿಂದ ಹೊತ್ತು ತಂದದ್ದಲ್ಲ, ನಮ್ಮ ಚರಿತ್ರೆ, ಅಗತ್ಯಗಳ ಬುನಾದಿಯ ಮೇಲೆ ದೇಶದ ಭವಿಷ್ಯವನ್ನು ಕಟ್ಟಬಯಸುವ ಬಯಕೆಯಿಂದ ಬಂದದ್ದು ಎಂದು ವಿವರಿಸಿದರು. ಆಗ ಮುಂಬಯಿಯಲ್ಲಿ ಯೂಸಫ್ ಮೆಹರಲ್ಲಿ, ಮೀನೂ ಮಸಾನಿ, ಅಚ್ಯುತ ಪಟವರ್ಧನರು ಹಾಗೂ ಪಾಟ್ನದಲ್ಲಿ ಜಯಪ್ರಕಾಶ್ ನಾರಾಯಣ್, ಕೇರಳದಲ್ಲಿ ನಂಬೂದರಿಪಾಡ್ ಇವರೆಲ್ಲ ಸಮಾಜವಾದ ಸಂಘಟನೆಯ ಬಗೆಗೆ ಯೋಚಿಸುತ್ತಿದ್ದರು. ಆಗ ಕಾಶಿಯಲ್ಲಿ ಸಂಪೂರ್ಣಾನಂದರು “ನಾವು ಅಧಿಕಾರಕ್ಕೆ ಬಂದಲ್ಲಿ” ಎಂಬ ಚಿಕ್ಕ ಪುಸ್ತಕವನ್ನು ಬರೆದರು. ಆ ಪುಸ್ತಕದಲ್ಲಿ ಅವರು ಪ್ರತಿಪಾದಿಸಿದ ಪ್ರಮುಖ ಅಂಶಗಳು ಹೀಗಿವೆ:

೧. ಜಮೀನುದಾರರಿಗೆ ಪರಿಹಾರ ನೀಡಿ ಜಮೀನುದಾರಿ ಪದ್ಧತಿಯ ನಿರ್ಮೂಲನ ಮಾಡಬೇಕು.

೨. ಚಿಕ್ಕ ಹಿಡುವಳಿಗಳನ್ನು ಒಂದುಗೂಡಿಸಬೇಕು.

೩. ಪ್ರಮುಖ ಕೈಗಾರಿಕೆಗಳನ್ನು ಹಾಗೂ ಸಂಚಾರ ವ್ಯವಸ್ಥೆಗಳನ್ನು ರಾಷ್ಟ್ರೀಕರಿಸಬೇಕು.

೪. ಕನಿಷ್ಠ ಹಾಗೂ ಗರಿಷ್ಠ ಕೂಲಿ ಹಾಗೂ ಕೆಲಸದ ಅವಧಿಯನ್ನು ನಿರ್ಣಯಿಸಬೇಕು.

೫. ದುಡಿಯಬಲ್ಲವರಿಗೆ ಕೆಲಸದ ಅವಕಾಶ, ದುಡಿಯಲಾರದ ಮುದುಕರಿಗೆ ನಿವೃತ್ತಿ ವೇತನ ನೀಡಬೇಕು.

೬. ಮಹಿಳಾ ಕೆಲಸಗಾರರಿಗೆ ಹೆರಿಗೆಗಿಂತ ಮುಂಚೆ ಒಂದು ತಿಂಗಳು ಹಾಗೂ ಹೆರಿಗೆಯ ನಂತರ ಒಂದು ತಿಂಗಳು ಸಂಬಳಸಹಿತೆ ರಜೆ ಕೊಡಬೇಕು.

೭. ಬಡವರ ಮಕ್ಕಳಿಗೆ ಉಚಿತ ಶಿಕ್ಷಣ, ಆಹಾರ ಒದಗಿಸಬೇಕು.

೮. ಮದ್ಯಪಾನವನ್ನು ಸಂಪೂರ್ಣವಾಗಿ ಪ್ರತಿ ಬಂಧಿಸಬೇಕು.

೯. ಉಪ್ಪಿನ ಮೇಲಿನ ಕಂದಾಯವನ್ನು ಕಿತ್ತೊಗೆಯಬೇಕು.

ಅವರು ಅಂದು ಪ್ರತಿಪಾದಿಸಿದ ಈ ಅಂಶಗಳು ಎಷ್ಟೊಂದು ಪ್ರಗತಿಪರವಾಗಿವೆ ಎಂಬುದನ್ನು ಇಂದೂ ಗುರುತಿಸಬಹುದು.

೧೯೩೪ರ ವಸಂತಮಾಸದಲ್ಲಿ ಸಂಪೂರ್ಣಾನಂದರು ಮತ್ತು ಅವರ ಗೆಳೆಯರು ಕಾಂಗ್ರೆಸ್ಸಿನಲ್ಲಿಯೇ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು. ೧೯೩೪ ಅಕ್ಟೋಬರ್ ೨೧-೨೨ರ ದಿನಾಂಕಗಳಲ್ಲಿ ಸಂಪೂರ್ಣಾನಂದರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಸಮಾಜವಾದಿ ಪಕ್ಷ ಉದಯಕ್ಕೆ ಬಂದಿತು. ಮೊದಲ ಸಭೆಯಲ್ಲಿಯೇ ಕೆಳಗಿನ ಅಂಶಗಳನ್ನು ಪ್ರತಿಪಾದಿಸಲು ಸಂಪೂರ್ಣಾನಂದರು ನಿರ್ಧರಿಸಿದರು.

೧. ಉತ್ಪಾದನೆ ಮಾಡುವವರ ಕೈಯಲ್ಲಿ ಅಧಿಕಾರವಿರಬೇಕು

೨. ಮುಖ್ಯಕೈಗಾರಿಕೆಗಳ ರಾಷ್ಟ್ರೀಕರಣವಾಗಬೇಕು.

೩. ವಿದೇಶೀ ವ್ಯಾಪಾರವನ್ನು ಕೇಂದ್ರವು ಸ್ವಾಧೀನಕ್ಕೆ ತೆಗೆದುಕೊಳ್ಳಬೇಕು.

೪. ರಾಜಮಹಾರಾಜರು ಹಾಗೂ ಜಮೀನು ದಾರರಿಗೆ ಪರಿಹಾರ ಧನ ನೀಡಿ ಅವರನ್ನು ಪೂರ್ತಿಯಾಗಿ ಪದಚ್ಯುತರನ್ನಾಗಿ ಮಾಡಬೇಕು.

೫. ಸಹಕಾರ ಮತ್ತು ಸಂಯುಕ್ತ ಬೇಸಾಯಗಳಿಗೆ ಪ್ರೋತ್ಸಾಹ ನೀಡಬೇಕು.

ಮಂತ್ರಿಯಾಗಿ

೧೯೩೬ರಲ್ಲಿ ಭಾರತದ ವಿವಿಧ ಪ್ರಾಂತಗಳಲ್ಲಿ ವಿಧಾನ ಸಭೆಗಳಿಗೆ ಚುನಾವಣೆಗಳು ನಡೆದವು. ಉತ್ತರ ಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದಿಂದ ಆರಿಸಿಬಂದಿತು. ಸಂಪೂರ್ಣಾನಂದರೂ ಕಾಶಿ ನಗರದಿಂದ ಪ್ರಚಂಡ ಬಹುಮತದಿಂದ ಆರಿಸಿ ಬಂದರು.

೧೯೩೭ರಲ್ಲಿ ಉತ್ತರಪ್ರದೇಶದಲ್ಲಿ ಮಂತ್ರಿಮಂಡಲ ರಚನೆಯಾಯಿತು. ಪಂಡಿತ ಗೋವಿಂದವಲ್ಲಭ ಪಂತರು ಮುಖ್ಯಮಂತ್ರಿಗಳಾದರು. ಒಂದು ಸಲ ಜವಹರಲಾಲ್ ನೆಹರು ಅವರು ಉತ್ತರಪ್ರದೇಶ ರಾಜಕೀಯ ಪರಿಷತ್ತಿನಲ್ಲಿ ಮಾತನಾಡುವಾಗ “ಉತ್ತರಪ್ರದೇಶ ಮಂತ್ರಿಮಂಡಲ ತುಂಬಾ ಆಲಸಿಯಾಗಿ ಸುಖಜೀವ ನಡೆಸುತ್ತಿದೆ” ಎಂದು ಟೀಕೆ ಮಾಡಿದರು. ಈ ಟೀಕೆಯನ್ನು ಪ್ರತಿಭಟಿಸಿ ಪಂಡಿತ ಪ್ಯಾರೇಲಾಲ್ ಶರ್ಮ ಮಂತ್ರಿ ಪದವಿಗೆ ರಾಜೀನಾಮೆ ಇತ್ತರು. ಈ ತೆರವಾದ ಸ್ಥಳಕ್ಕೆ ಸಂಪೂರ್ಣಾನಂದರನ್ನು ನಿಯಮಿಸಿಕೊಳ್ಳಬೇಕೆಂದು ಪಂತರು ಯೋಚಿಸಿದರು. ಆಗ ಕೆಲವು ಸದಸ್ಯರು ಸಂಪೂರ್ಣಾನಂದರು ಸಮಾಜವಾದಿಗಳಾಗಿದ್ದು ಗಾಂಧೀಜಿ ಪ್ರಾರಂಭಿಸಿದ ಮೂಲಶಿಕ್ಷಣ ಯೋಜನೆಯನ್ನು ವಿರೋಧಿಸುವವರಾಗಿದ್ದಾರೆ. ಅವರನ್ನು ಮಂತ್ರಿಗಳನ್ನಾಗಿ ನೇಮಕ ಮಾಡಬಾರದೆಂದು ಪಂತರಿಗೆ ಸಲಹೆ ನೀಡಿದರು. ಆದರೆ ಪಂತರು ಈ ಸಲಹೆಗೆ ಕಿವಿಗೊಡದೇ ಸಂಪೂರ್ಣಾನಂದರನ್ನು ಮಂತ್ರಿಗಳನ್ನಾಗಿ ಮಾಡಿ ಶಿಕ್ಷಣ ಖಾತೆಯನ್ನು ವಹಿಸಿಕೊಟ್ಟರು.

ಮುಂದೆ ಮಂತ್ರಿಮಂಡಲ ರಾಜೀನಾಮೆ ಕೊಡುವವರೆವಿಗೂ ಸಂಪೂರ್ಣಾನಂದರು, ಮಂತ್ರಿಗಳಾಗಿ ಜನಪ್ರಿಯ ಕೆಲಸ ಮಾಡಿ ಎಲ್ಲರ ಮೆಚ್ಚುಗೆಯನ್ನು ಗಳಿಸಿಕೊಂಡರು.

೧೯೩೯ರಲ್ಲಿ ಎರಡನೆಯ ಮಹಾಯುದ್ಧ ಪ್ರಾರಂಭವಾಯಿತು. ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟರೆ ಮಾತ್ರ ಕಾಂಗ್ರೆಸ್ ಬ್ರಿಟಿಷರಿಗೆ ಯುದ್ಧದಲ್ಲಿ ಸಂಪೂರ್ಣ ಸಹಕಾರ ನೀಡುವುದೆಂದು ಘೋಷಿಸಿದರು. ಬ್ರಿಟಿಷ್ ಸರ್ಕಾರ ಈ ಸಲಹೆಯನ್ನು ಒಪ್ಪಲಿಲ್ಲ. ಹೀಗಾಗಿ ಎಲ್ಲ ಕಾಂಗ್ರೆಸ್ ಮಂತ್ರಿಮಂಡಲಗಳು ರಾಜೀನಾಮೆ ನೀಡಿ ಸರ್ಕಾರದಿಂದ ಹೊರಬಂದವು.

ಸಂಪೂರ್ಣಾನಂದರ ಜೀವನದಲ್ಲಿ ೧೯೩೯ ಅತ್ಯಂತ ಕರಾಳ ವರ್ಷವಾಗಿ ಪರಿಣಮಿಸಿತು. ಅವರ ಕಿರಿಯ ಮಗ ಅಕ್ಟೋಬರಿನಲ್ಲಿ ತೀರಿಹೋದನು. ಇವನ ಸಾವಿನ ನಂತರ ಹದಿನೈದು ದಿನಗಳಲ್ಲಿಯೇ ಸಂಪೂರ್ಣಾನಂದರ ಹೆಂಡತಿ ಕೊನೆಯುಸಿರನ್ನೆಳೆದರು. ಆಕೆಯ ಬಳಿಕ ಇನ್ನೊಬ್ಬ ಮಗ ಹಾಗೂ ಹಿರಿಯ ಮಗಳು ಮೀನಾಕ್ಷಿ ಸತ್ತುಓದರು. ಒಂದರ ಮೇಲೊಂದರಂತೆ ಅವರ ಕುಟುಂಬದ ಸದಸ್ಯರು ಸತ್ತುಹೋದ ದುಃಖವನ್ನು ಸಂಪೂರ್ಣಾನಂದರು ಸಹಿಸಿಕೊಂಡರು. ಹಿರಿಯ ಮಗಳು ಮೀನಾಕ್ಷಿ ಹಾಸಿಗೆ ಹಿಡಿದಾಗ ಆಕೆಯ ಶುಶ್ರೂಷೆಯನ್ನು ಮಾಡುತ್ತ ಆಕೆಯ ಹಾಸಿಗೆಯ ಪಕ್ಕದಲ್ಲಿಯೇ ಕುಳಿತು ‘ವ್ಯಕ್ತಿ ಮತ್ತು ರಾಜ್ಯ’ ಎಂಬ ಪುಸ್ತಕವನ್ನು ಬರೆದರು. ಈ ಪುಸ್ತಕ ಇಂಗ್ಲಿಷಿನಲ್ಲಿಯೂ ಭಾಷಾಂತರಗೊಂಡು ಪ್ರಕಟವಾಯಿತು.

ಹೋರಟ, ಸೆರೆಮನೆ

ಈಗ ಗಾಂಧೀಜಿ ಮತ್ತೆ ಸತ್ಯಾಗ್ರಹ ಪ್ರಾರಂಭಿಸಿದರು. ಈ ಸತ್ಯಾಗ್ರಹದಲ್ಲಿ ಸಂಪೂರ್ಣಾನಂದರು ಭಾಗವಹಿಸಿದರು. ಅದಕ್ಕಾಗಿ ಅವರಿಗೆ ಒಂದು ವರುಷ ಶಿಕ್ಷೆಯಾಯಿತು. ಜೈಲಿನಲ್ಲಿಯೇ “ಆರ್ಯರ ಮೊದಲ ದೇಶ” ಎಂಬ ಪುಸ್ತಕ ಬರೆದರು.

ಎರಡನೆಯ ಮಹಾಯುದ್ಧ ಭರದಿಂದ ಸಾಗಿತ್ತು. ಸೋಲಿನ ದವಡೆಯಲ್ಲಿದ್ದ ಇಂಗ್ಲೆಂಡನ್ನು ಪಾರು ಮಾಡಲು ಇಂಗ್ಲೆಂಡಿನ ಪ್ರಧಾನಿ ಚರ್ಚಿಲ್ ಬದ್ಧಕಂಕಣರಾಗಿದ್ದರು. ಭಾರತದ ಸ್ವಾತಂತ್ರ್ಯದ ಪ್ರಶ್ನೆಯನ್ನು ತಳ್ಳಿಹಾಕುವುದರಲ್ಲಿ ಅವರು ನಿಸ್ಸೀಮರಾಗಿದ್ದರು.

ಮುಂದೆ ಮುಂಬೈಯಲ್ಲಿ ೧೯೪೨ರ ಆಗಸ್ಟ್ ೮ ರಂದು ಕಾಂಗ್ರೆಸ್ ಚರಿತ್ರಾರ್ಹವಾದ ‘ಚಲೇ ಜಾವ್’ (‘ಬ್ರಿಟಿಷರೇ, ಭಾರತದಿಂದ ಹೊರಡಿ’) ಚಳವಳಿಯನ್ನು ಘೋಷಿಸಿತು. ‘ಮಾಡು ಇಲ್ಲವೇ ಮಡಿ’ ಜನ ಸಾಮಾನ್ಯರ ಮಂತ್ರವಾಯಿತು. ಸಾವಿರಾರು ಸಂಖ್ಯೆಯಲ್ಲಿ ಮುಂದಾಳುಗಳ ಬಂಧನವಾಯಿತು. ಸಂಪೂರ್ಣಾನಂದರ ಬಂಧನವೂ ಆಯಿತು. ಕಾಶಿ ಸೆರೆಮನೆಯಲ್ಲಿದ್ದಾಗ ಸಂಪೂರ್ಣಾನಂದರು ಸಮಾಜವಾದದ ಬಗ್ಗೆ ಭಾಷಣಮಾಲೆಯನ್ನು ಆರಂಭಿಸಿದರು. ಹಲವಾರು ಜನರ ಮೇಲೆ ಅವರ ಈ ಭಾಷಣ ಪರಿಣಾಮ ಬೀರತೊಡಗಿತು. ಕಾಶಿ ಜೈಲಿನಿಂದ ಬಕೀಲಿ ಜೈಲಿಗೆ ಅವರನ್ನು ವರ್ಗಾಯಿಸಲಾಯಿತು. ಅಲ್ಲಿ ರಫಿ ಅಹ್ಮದ್ ಕಿದ್ವಾಯಿ, ಪುರುಷೋತ್ತಮದಾಸ ಟಂಡನ್ ಅವರೂ ಇದ್ದರು. ಈ ಜೈಲಿನಲ್ಲಿಯೇ ಸಂಪೂರ್ಣಾನಂದರು ತತ್ವ ಜ್ಞಾನದ ವಿಷಯದ ಮೇಲೆ ‘ಚಿದ್ವಿಲಾಸ’ ಎಂಬ ಪುಸ್ತಕವನ್ನು ಬರೆದರು. ಅವರು ಕಟ್ಟಾ ಶಾಕಾಹಾರಿಗಳಾಗಿದ್ದು ಚಹವನ್ನು ಸಹ ಮುಟ್ಟುತ್ತಿರಲಿಲ್ಲ. ಸೆರೆಮನೆಯಲ್ಲಿದ್ದಾಗಲೇ ಅವರಿಗೆ ಸಂಧಿವಾತ ರೋಗ ಗಂಟುಬಿದ್ದಿತ್ತು. “ಈ ಬೇನೆಯಿಂದ ನಾನು ಚೇತರಿಸಿಕೊಳ್ಳುವುದೇ ಸಾಧ್ಯವಿಲ್ಲ. ಇದು ನನ್ನ ಕರ್ಮವಾಗಿರಬೇಕು ಇಲ್ಲವೆ ಹಿಂದಿನ ಜನ್ಮದಲ್ಲಿ ಮಾಡಿದ ಪಾಪದ ಫಲವಾಗಿ ಈಗ ಕಾಡುತ್ತಿರಬಹುದು” ಎಂದು ಅವರು ಹೇಳುತ್ತಿದ್ದರು.

ಸೆರೆಮನೆಯಲ್ಲಿ ‘ಚಿದ್ವಿಲಾಸ’ ಎಂಬ ಪುಸ್ತಕವನ್ನು ಬರೆದರು.

ಸ್ವತಂತ್ರ ಭಾರತದಲ್ಲಿ

೧೯೪೭ರ ಆಗಸ್ಟ್ ೧೫ ರಂದು ಭಾರತ ಸ್ವತಂತ್ರವಾಯಿತು ಪಂಡಿತ ಗೋವಿಂದವಲ್ಲಭ ಪಂತರು ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದರು. ಸಂಪೂರ್ಣಾನಂದರು ಮಂತ್ರಿಗಳಾಗಿ ವಿವಿಧ ಇಲಾಖೆಗಳನ್ನು ನೋಡಿಕೊಳ್ಳತೊಡಗಿದರು. ಅವರ ಕಾರ್ಯವ್ಯಾಪ್ತಿ ಬೆಳೆಯಿತು. ಮುಂಬಯಿ ಪ್ರಾಂತದ ಮುಖ್ಯಮಂತ್ರಿಗಳಾದ ಬಿ.ಜಿ. ಖೇರರು ಒಂದು ಸಲ ಮಾತನಾಡುತ್ತ “ಸಂಪೂರ್ಣಾನಂದರೆಂದರೆ ಉತ್ತರ ಪ್ರದೇಶದ ಅರ್ಧ ಸರ್ಕಾರವೇ ಆಗಿದ್ದಾರೆ” ಎಂದು ಹೇಳಿದ್ದರು.

ಸರ್ದಾರ್ ವಲ್ಲಭಬಾಯಿ ಪಟೇಲರ ಮರಣಾನಂತರ ಗೋವಿಂದವಲ್ಲಭ ಪಂತರು ಕೇಂದ್ರ ಸರ್ಕಾರದಲ್ಲಿ ಗೃಹ ಮಂತ್ರಿಗಳಾದ್ದರಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಪದವಿ ಸಂಪೂರ್ಣಾನಂದರ ಕೈಗೆ ಬಂದಿತು. ಭಾರತದಲ್ಲಿಯೇ ಅತ್ಯಂತ ದೊಡ್ಡ ರಾಜ್ಯವೆನಿಸಿದ್ದ ಉತ್ತರ ಪ್ರದೇಶದ ಮುಖ್ಯ ಮಂತ್ರಿಗಳಾಗಿ ಸಂಪೂರ್ಣಾನಂದರು ಚಿರಸ್ಮರಣೀಯ ಸೇವೆಯನ್ನು ಸಲ್ಲಿಸಿದರು.

ರಾಜಕಿಯ  ಏರುಪೇರುಗಳಲ್ಲಿ ಹಾಗೂ ೧೯೫೨ ರಿಂದ ಸಮಾಜವಾದಿ ಪಕ್ಷ ಕಾಂಗ್ರೆಸಿನಿಂದ ಒಡೆದು ಒಂದು ಸ್ವತಂತ್ರ ಪಕ್ಷವಾಗಿ ಕೆಲಸ ಮಾಡತೊಡಗಿತು. ಹೀಗಾಗಿ ಸಂಪೂರ್ಣಾನಂದರು ಮಾನಸಿಕವಾಗಿ ರಾಜಕೀಯದಿಂದ ದೂರ ಉಳಿಯಬಯಸಿದರು. ಮುಂದೆ ವಾರಣಾಸಿ ಹಿಂದೂ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದರು.

ಮುಂದೆ ಉತ್ತರಪ್ರದೇಶದ ಗವರ್ನರ್ರಾಗಿ ನೇಮಕಗೊಂಡರು. ಅವರು ವಾರಣಾಸಿ ಹಿಂದೂ ವಿಶ್ವವಿದ್ಯಾಲಯದಲ್ಲಿದ್ದಾಗ ಕಲಿಸುತ್ತಿದ್ದ ಪಾಠ ಮುಗಿದಿರಲಿಲ್ಲ. ಆದ್ದರಿಂದ ವಿದ್ಯಾರ್ಥಿಗಳನ್ನೇ ಲಕ್ನೋದ ರಾಜಭವನಕ್ಕೆ ಕರೆಸಿಕೊಂಡು ಅವರ ಅಭ್ಯಾಸಕ್ರಮದಂತೆ, ಪಾಠವನ್ನು ಕಲಿಸಿ, ಅವರನ್ನು ಹಿಂದಕ್ಕೆ ಕಳುಹಿಸಿದರು. ಅವರು ಒಬ್ಬ ನಿಷ್ಠಾವಂತ ಶಿಕ್ಷಕರೆಂಬುದನ್ನು ಅವರ ಈ ಕ್ರಮದಿಂದ ಕಂಡುಕೊಳ್ಳಬಹುದಾಗಿದೆ.

ಕೊನೆಯವರೆಗೂ ಸಂಪೂರ್ಣಾನಂದರು ಕಾಂಗ್ರೆಸಿನ ನಿಷ್ಠ ಅನುಯಾಯಿಗಳಾಗಿದ್ದರು. ಸಮಾಜವಾದವನ್ನು ನಿಷ್ಠೆಯಿಂದ ಬೆಂಬಲಿಸಿದರು. ಸ್ವಾರ್ಥರಹಿತ, ಸಾರ್ಥಕ ಜೀವನವನ್ನು ನಡೆಸಿದ ಈ ಮಹಾಜೀವ ೧೯೬೯ ರಲ್ಲಿ ಕಣ್ಮರೆ ಆಯಿತು.

ಚಿಂತನಶೀಲ ರಾಜಕಾರಣಿ

ಸಂಪೂರ್ಣಾನಂದರು ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲು ಮತ್ತು ಸ್ವಾತಂತ್ರ್ಯ ಬಂದ ನಂತರವೂ ರಾಜಕೀಯದಲ್ಲಿ ಚೈತನ್ಯ ಪೂರ್ಣವಾಗಿ ದುಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಸೆರೆಮನೆಯನ್ನು ಕಂಡರು. ಸ್ವಾತಂತ್ರ್ಯ ಬಂದನಂತರ ಮಂತ್ರಿಗಳಾಗಿದ್ದರು. ಆದರೆ ಅವರು ಬರಿಯ ರಾಜಕಾರಣಕ್ಕೆ ಮುಡಿಪಾದವರಲ್ಲ. ಬಾಲ ಗಂಗಾಧರ ತಿಲಕರು, ಜವಹಾರಲಾಲ್ ನೆಹರು ಮುಂತಾದವರಂತೆ ತಮ್ಮ ತಿಳಿವಳಿಕೆಯನ್ನು ಬೆಳೆಸಿಕೊಳ್ಳು ಸದಾ ಪ್ರಯತ್ನಿಸುತ್ತಿದ್ದ ಆಜನ್ಮ ವಿದ್ಯಾರ್ಥಿಯೂ ಆಗಿದ್ದರು. ವಿದ್ವಾಂಸ ರಾಜಕಾರಣಿಗಳ ಪಂಕ್ತಿಗೆ ಸೇರಿದವರು ಅವರು. ಜೊತೆಗೆ, ಸ್ವಾತಂತ್ರ್ಯದ ಹೋರಾಟ ನಡೆಸುವಾಗಲೇ ಭವಿಷ್ಯವನ್ನು ಕುರಿತು ಗಂಭೀರವಾಗಿ ಚಿಂತನೆ ಮಾಡಿದವರು ಅವರ. ಭಾರತದಲ್ಲಿ ಕೆಲವರು ತೀರ ಶ್ರೀಮಂತರಾಗಿದ್ದಾರೆ, ಕೋಟ್ಯಂತರ ಮಂದಿ ತೀರ ಬಡತನದಲ್ಲಿ ನರಳುತ್ತಿದ್ದಾರೆ. ಇಂತಹ ಅಸಮಾನತೆ ತೊಲಗಿ ಭಾರತ ಮುಂದುವರಿಯ ಬೇಕಾದರೆ ಭಾರತ ಸಮಾಜವಾದ ಅಥವಾ ಸೋಷಿ ಯಲಿಸಂನ ಹಾದಿಯಲ್ಲಿ ನಡೆಯಬೇಕೆಂದು ಗುರುತಿಸಿ ಈ ವಾದವನ್ನು ರಾಜಕಾರಣಿಗಳಿಗೆ ಮತ್ತು ಜನಸಾಮಾನ್ಯರಿಗೆ ಪರಿಚಯ ಮಾಡಿಕೊಡಲು ಶ್ರಮಿಸಿದರು.

ಸ್ವಾರ್ಥರಹಿತ ಪರೋಪಕಾರಿ ಜೀವನವೇ ಒಂದು ತಪಸ್ಸು ಎಂಬುದನ್ನು ಅವರು ತಮ್ಮ ಅಖಂಡ ಜನ ಸೇವೆಯ ಮೂಲಕ ನಮ್ಮ ನಾಡಿನ ಜನಕ್ಕೆ ತೋರಿಸಿ ಕೊಟ್ಟಿದ್ದಾರೆ.