ಭಾಷಾಧ್ಯಯನ ಸಮಾಜ ಮುಖಿಯಾಗಿರಬೇಕು; ವರ್ತಮಾನಕ್ಕೆ ಸ್ಪಂದಿಸಬೇಕು. ಕನ್ನಡ ಭಾಷೆಯನ್ನು ಹೊಸ ಹೊಸ ಆಯಾಮಗಳಿಂದ ಈಗ ನೋಡಬೇಕಾಗಿದೆ. ಭಾಷಾಧ್ಯಯನದ ವಿಧಾನದಲ್ಲಿಯೂ ಹೊಸ ದೃಷ್ಟಿಕೋನವನ್ನು ಮೂಡಿಸಬೇಕಾಗಿದೆ. ಆಧುನಿಕ ಭಾಷಾತತ್ವಗಳನ್ನು, ಸಿದ್ಧಾಂತಗಳನ್ನು ಕನ್ನಡದ ರಚನೆಗೆ ಅನ್ವಯಿಸಿ ನೋಡುವುದು ಈಗ ಅಗತ್ಯವಾಗಿದೆ. ಈ ಕ್ಷೇತ್ರದಲ್ಲಿ ಅಂತರ್ ಶಿಸ್ತೀಯ ಅಧ್ಯಯನದ ಅಗತ್ಯವಿದೆ. ಭಾಷೆ, ಸಾಹಿತ್ಯ, ಜಾನಪದಶಾಸ್ತ್ರ, ಸಮಾಜಶಾಸ್ತ್ರ ಇವೆಲ್ಲವೂ ಒಂದಕ್ಕೊಂದು ಪೂರಕವಾಗಿರುವುದರಿಂದ ಒಂದು ಭಾಷಾ ಸಮುದಾಯದ ರಚನೆಯನ್ನು ಅನ್ಯಜ್ಞಾನ ಶಿಸ್ತುಗಳ ಹಿನ್ನೆಲೆಯಲ್ಲಿ ವಿವೇಚಿಸಬೇಕಾಗಿದೆ. ಇದರಿಂದ ಒಂದು ಭಾಷೆ ಮತ್ತು ಆ ಭಾಷಿಕ ಸಮುದಾಯದ ಸಂಸ್ಕೃತಿಯನ್ನು ತಿಳಿದಂತಾಗುತ್ತದೆ, ಅಂದರೆ ಭಾಷೆಯನ್ನು ಸಾಮಾಜಿಕ ಚೌಕಟ್ಟಿಗೆ ಒಳಪಡಿಸಿದಂತಾಗುವುದು. ಸಮುದಾಯದ ವಿವಿಧ ಸ್ತರಗಳಲ್ಲಿ ಭಾಷಾ ಬಳಕೆಯ ರೀತಿಯನ್ನು ಹಾಗೂ ಭಾಷಾ ಬಳಕೆಯಲ್ಲಾಗುವ ಮಾರ್ಪಾಟುಗಳನ್ನು ಶೋಧಿಸಬೇಕು. ಇದರಿಂದ ನಮ್ಮ ಅಧ್ಯಯನಕ್ಕೆ ತೂಕಬರುತ್ತದೆ. ಇಂತಹ ಸಂದರ್ಭದಲ್ಲಿ ವರ್ಣನಾತ್ಮಕ ವಿಶ್ಲೇಷಣೆ ಒಂದು ಅಧ್ಯಾಯವಾಗಿ ಮಾತ್ರ ಸೇರ್ಪಡೆಯಾಗಬೇಕು. ಇಡೀ ಅಧ್ಯಯನವೇ ಅದಾಗಬಾರದು. ಸಮಾಜದ ಕಕ್ಷೆಯಲ್ಲಿಯೇ ಭಾಷಾಧ್ಯಯನ ಸಾಗಿದರೆ ಸ್ವಾರಸ್ಯಕರವಾಗಿ ಸಂಗತಿಗಳು ಗೋಚರವಾಗುತ್ತವೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಅಧ್ಯಯನ ಪಡೆದಿದೆ.

ಭಾಷಾ ಸಮುದಾಯದಲ್ಲಿ ಭಾಷಿಕರ ಸೌಹಾರ್ದಯುತ ಸಂಬಂಧವನ್ನುಂಟು ಮಾಡುವಲ್ಲಿ ಬಂಧುವಾಚನಗಳು ಮಹತ್ವದ ಪಾತ್ರ ವಹಿಸುತ್ತವೆ. ಜನಾಂಗಿಕ ಮತ್ತು ಸಾಂಸ್ಕೃತಿಕ ಅಧ್ಯಯನಕ್ಕೆ ಬಂಧುವಾಚಕಗಳು ಬಹುಮುಖ್ಯ ಆಕರಗಳಾಗುತ್ತವೆ. ಈ ಆಶಯದ ಹಿನ್ನೆಲೆಯಲ್ಲಿ ಪ್ರಸ್ತುತ ಅಧ್ಯಯನ ರೂಪುಗೊಂಡಿದೆ. ಈ ವರೆಗೆ ವಿವೇಚಿಸಿದ ಒಂಬತ್ತು ಅಧ್ಯಯನಗಳಲ್ಲಿ ಬಂಧುವಾಚನಗಳ ರಚನೆ ಹಾಗೂ ಅವುಗಳ ಸಾಮಾಜಿಕ ಆಯಾಮದ ಸ್ವರೂಪವನ್ನು ಗುರುತಿಸಲಾಗಿದೆ. ಕಿತ್ತೂರು ಕರ್ನಾಟಕದ ವ್ಯವಹಾರಿಕ ಶಿಷ್ಟ ಕನ್ನಡದಲ್ಲಿ ಬಳಕೆಯಾಗುವ ಸಾಮಾಜಿಕ, ಕೌಟುಂಬಿಕ, ವೃತ್ತಿಸೂಚಕ ಅವಳಿ ಸಂಬಂಧಗಳ ಸ್ವರೂಪವನ್ನು ಕುರಿತು ಚರ್ಚಿಸಲಾಗಿದೆ. ಕಿತ್ತೂರು ಕರ್ನಾಟಕದ ಬಂಧುಸೂಚಕಗಳನ್ನು ಕೇಂದ್ರವಾಗಿಟ್ಟುಕೊಂಡು ಕರ್ನಾಟಕದ ಬಂಧುಸೂಚಕಗಳ ಸ್ವರೂಪವನ್ನು ಗುರುತಿಸಲು ಯತ್ನಿಸಲಾಗಿದೆ.

ಭಾಷಾ ಸಮುದಾಯದಲ್ಲಿ ಸಾಮಾಜಿಕ ಸಂಬಂಧವನ್ನು ಸೂಚಿಸುವ ಸಂಬಂಧ ವಾಚಕಗಳು ಹೆಚ್ಚಾಗಿ ವಾರ್ಗೀಕಗಳು (ಮಗ, ಮಗಳು, ತಂಗಿ, ಮೊಮ್ಮಗ, ಮೊಮ್ಮಗಳು ಇವುಗಳನ್ನು ಹೊರತುಪಡಿಸಿ), ಸಂಬಂಧವಾಚಕಗಳನ್ನು ಕೌಟುಂಬಿಕ (ತಂದೆ – ತಾಯಿ, ಸಹೋದರರು). ವಿವಾಹಿಕ (ಅತ್ತೆ, ಮಾವ, ಅಳಿಯ, ಸೊಸೆ) ಮತ್ತು ಸಾಮಾಜಿಕ (ಚಿಕ್ಕಪ್ಪ, ದೊಡ್ಡಪ್ಪ) ಹಾಗೂ ನೆರೆಹೊರೆಯವರನ್ನು ಬಂಧುವಾಚಕಗಳೊಡನೆ ಸಂಬೋಧಿಸುವುದು ಎಂದು ವಿಂಗಡಿಸಬಹುದು. ಬಂಧುಸೂಚಕಗಳನ್ನು ಉತ್ತರ ಭಾಗದಲ್ಲಿ ‘ಕಳ್ಳುಬಳ್ಳಿ’ (ಕರುಳುಬಳ್ಳಿ) ಎಂದು ಕರೆಯುವುದುಂಟು. ಇದರರ್ಥ ರಕ್ತಸಂಬಂಧ ಎಲ್ಲ ಸಂಬಂಧಗಳಿಗಿಂತಲೂ ಶ್ರೇಷ್ಟ. (ಸ್ನೇಹಸಂಬಂಧ, ಗುರುಶಿಷ್ಯ ಸಂಬಂಧ). ರಕ್ತಸಂಬಂಧವು ಭಾರತೀಯ ಸಂಸ್ಕೃತಿಯಲ್ಲಿ ಅತೀ ಮಹತ್ವದ್ದು. ಕಳ್ಳುಬಳ್ಳಿ ಸೂಚಕ ಪದಗಳು ಕುಟುಂಬ ಕೇಂದ್ರೀಕೃತವಾದವು. ಇಲ್ಲಿ ಹೆಚ್ಚಾಗಿ ಮಮತೆ, ಅಂತಃಕರಣ ಎಂಬ ಭಾವನಾತ್ಮಕ ಅರ್ಥ ಉಂಟು. ‘ಕಣ್ಣರಿಯದೊಡಂ ಕರುಳರಿಯದೆ’ ಎಂಬ ಹಳಗನ್ನಡದ ಗಾದೆಯೇ ಇದೆ. ‘ಕರುಳುಚುರ್’ ಎಂದಿತು. ಇವೆಲ್ಲ ನಾಣ್ಣುಡಿಗಳನ್ನು ಗಮನಿಸಿದಾಗ ಕರುಳಿನವರು ಎಂದರೆ ರಕ್ತಸಂಬಂಧಿಗಳು. ಅವರನ್ನು ಹೊರತುಪಡಿಸಿ ಉಳಿದ ಸಂಬಂಧಿಕರೆಲ್ಲವೂ ನೆಂಟರು ಅಥವಾ ಬಳ್ಳಿಗೆ ಸೇರಿದವರು.

ಆಧುನಿಕತೆ ಹೆಚ್ಚಾದಂತೆ ಕಳ್ಳುಬಳ್ಳಿ ಪದಗಳ (ಭಾವನಾತ್ಮಕ) ಬಳಕೆ ಕಡಿಮೆಯಾಗುತ್ತದೆಂಬುದನ್ನು ಗಮನಿಸಬೇಕು. ಹಳ್ಳಿಗಳಲ್ಲಿ ‘ಯಣ್ಣಾ ಕ್ವಡಾ ಹೊರಸು’ ಎಂಬಂತಹ ಮಾತುಗಳು ಸಾಮಾನ್ಯ. ಆದರೆ ನಗರಗಳಲ್ಲಿ ಬಂಧುತ್ವಸೂಚಕ ಪದಗಳ ಬಳಕೆ ಕಡಿಮೆ ಎಂದರೆ ಸಾಲದು. ಇಲ್ಲವೇ ಇಲ್ಲ ಎನ್ನಬಹುದು. ಸಾಮಾಜಿಕ ಸಂಬಂಧಗಳು ದುರ್ಬಲವಾಗುವುದರ ಲಕ್ಷಣವಿದು. ಹಳ್ಳಿಗಳಲ್ಲಿ ಭಾಷಿಕರು ತಮ್ಮ ಸಮುದಾಯವನ್ನು ಕುಟುಂಬದ ವಿಸ್ತರಣೆಯಲ್ಲಿ ಕಂಡರು. ‘ಅರಮನೆ ಇದ್ದರೂ ನೆರೆ ಮನೆಬೇಕು’. ನೆರೆಗೆ ಹೊರೆಯಾಗಬಾರದು. ನೆರೆ ಹೊರೆ ಎಂದರೆ ಸುತ್ತಮುತ್ತ ಇರುವವರು. ಅವರಲ್ಲಿ ಪರಸ್ಪರ ಸಹಾಯ, ಸಹಕಾರ, ಪ್ರೀತಿ, ವಿಶ್ವಾಸಕ್ಕಾಗಿ ಬಂಧುತ್ವ ಸೂಚಕಗಳು ಬಳಕೆಯಾಗುತ್ತವೆ. ರಕ್ತ ಸಂಬಂಧದಿಂದ ಅವ್ವ, ಅಪ್ಪ, ಅಣ್ಣ, ತಂಗಿ ಅಲ್ಲದಿದ್ದರೂ ಕೂಡ ಅವ್ವ, ಅಪ್ಪ, ಅಣ್ಣ ತಂಗಿಯರಾಗುತ್ತಾರೆ. ಪ್ರೀತಿ, ವಾತ್ಸಲ್ಯಗಳು ಒಂದು ಕುಟುಂಬಕ್ಕೆ ಮಾತ್ರ ಸೀಮಿತವಾಗಿದ್ದರೂ ಅವು ಕುಟುಂಬದ ಆಚೆಗೂ ಅಭಿವ್ಯಕ್ತವಾಗುತ್ತವೆ.

ಕನ್ನಡದಲ್ಲಿ ಬಂಧುಸೂಚಕಗಳ ಅಧ್ಯಯನ ಕೆನ್ನೆ ನೆಲ. ಈ ಕ್ಷೇತ್ರದಲ್ಲಿ ಅಧ್ಯಯನ ಮಾಡಬೇಕೆಂಬ ಸಂಶೋಧಕರಿಗೆ ಸಾಕಷ್ಟು ಅವಕಾಶಗಳಿವೆ. ಆಧುನಿಕ ಹಾಗೂ ಆಧುನಿಕ ಪೂರ್ವ ಸಾಹಿತ್ಯದಲ್ಲಿ ಬಳಕೆಯಾದ ಬಂಧುಸೂಚಕಗಳ ಸ್ವರೂಪ ಹಾಗೂ ಕನ್ನಡೇತರ ದ್ರಾಬಿಡ ಬಂಧುಸೂಚಕಗಳನ್ನು ಕನ್ನಡ ಬಂಧು ಸೂಚಕಗಳೊಡನೆ ಹೋಲಿಸಿ ತುಲನಾತ್ಮಕ ಅಧ್ಯಯನ ಆಗಬೇಕಾಗಿದೆ. ಕನ್ನಡದ ಬೇರೆ ಬೇರೆ ಭಾಷಾ ಪ್ರಬೇಧಗಳಲ್ಲಿ ಬಳಕೆಯಾಗುವ ಬಂಧುಸೂಚಕಗಳ ಪಟ್ಟಿಯೊಂದನ್ನು ತಯಾರಿಸಿ ಆಯಾ ಭಾಷಾ ವಲಯಗಳಲ್ಲಿ ಬದುಕಿದ ಭಾಷಿಕರ ಆಸಕ್ತಿ ಮತ್ತು ಮನೋವೃತ್ತಿ ಮುಂತಾದ ಸಂಗತಿಗಳನ್ನು ಗುರುತಿಸಿಕೊಳ್ಳಬಹುದು.

ಬಂಧವಾಚಕಗಳನ್ನು ಕುರಿತು ಸಮಗ್ರ ಅಧ್ಯಯನ ನಡೆಯಬೇಕಾಗಿದೆ. ಪ್ರಸ್ತುತ ಅಧ್ಯಯನ ಒಂದು ಆಂಶಿಕ ಪ್ರಯತ್ನವಷ್ಟೇ. ಭಾಷಾಶಾಸ್ತ್ರ. ಜಾನಪದಶಾಸ್ತ್ರ, ಮಾನವಶಾಸ್ತ್ರ ಮತ್ತು ಸಮಾಜಶಾಸ್ತ್ರಗಳ ಅಧ್ಯಯನ ಶಿಸ್ತುಗಳ ಸಹಾಯ ಪಡೆದು ಅಂತರಶಿಸ್ತೀಯ ಅಧ್ಯಯನದ ನೆಲೆಯಲ್ಲಿ ಬಂಧುವಾಚಕಗಳ ಬಳಕೆ, ಸ್ವರೂಪ ಮತ್ತು ಅವುಗಳ ಸಾಮಾಜಿಕ ಮಹತ್ವ ಇವುಗಳನ್ನು ಕುರಿತು ಅಧ್ಯಯನ ನಡೆಯಬೇಕಾಗಿದೆ ಎಂದು ಸೂಚಿಸಿ ಅಂತಹ ಅಧ್ಯಯನಕ್ಕೆ ಈ ಕೃತಿ ಪ್ರವೇಶಿಕೆಯಾಗಿ ಮಾಹಿತಿಗಳನ್ನು ಹಾಗೂ ಸೈದ್ಧಾಂತಿಕ ಚೌಕಟ್ಟನ್ನು ಒದಗಿಸುತ್ತದೆ. ಈ ಬಗೆಗೆ ಯಾರಾದರೂ ಕೆಲಸವನ್ನು ಮುಂದುವರಿಸಿದರೆ ತುಂಬ ಸಂತೋಷವಾಗುತ್ತದೆ.