ಪರಿವರ್ತನಶೀಲತೆ ಭಾಷೆಯ ಲಕ್ಷಣ. ಅದಕ್ಕೆ ಸೌಲಭ್ಯಾಕಾಂಕ್ಷೆ ಮತ್ತು ಅನ್ಯ ಭಾಷಾ ಸಂಪರ್ಕಗಳು ಮುಖ್ಯ ಕಾರಣಗಳಾಗಿವೆ. ಅನ್ಯಭಾಷಾ ಸಂಪರ್ಕದ ಮೇಲೆ ಸಾಂಸ್ಕೃತಿಕ, ರಾಜಕೀಯ ಹಾಗೂ ವಲಯ ಮುಂತಾದ ಅಂಶಗಳು ಪ್ರಭಾವ ಬೀರುತ್ತವೆ. ಭಾಷೆಯ ಘಟಕಗಳಾದ ಬಂಧುವಾಚಕಗಳ ಪರಿವರ್ತನೆಗೂ ಈ ಅಂಶಗಳು ಪ್ರಭಾವ ಬೀರುತ್ತವೆ. ಕನ್ನಡ ಬಂಧುಸೂಚಕಗಳ ಮೇಲೆ ಸಂಸ್ಕೃತ, ಮರಾಠಿ, ಕನ್ನಡೇತರ ದ್ರಾವಿಡ ಭಾಷೆಗಳು, ಉರ್ದು ಹಾಗೂ ಇಂಗ್ಲಿಷ್ ಭಾಷೆಗಳ ಬಂಧುಸೂಚಗಳ ಪ್ರಭಾವ ಅಧಿಕವಾಗಿದೆ.

ಸಂಸ್ಕೃತ ಭಾಷೆಯು ಸಂಸ್ಕೃತಿಯ ವಾಹಕವಾಗಿದ್ದ ಕಾಲದಲ್ಲಿ ಇತರ ಭಾರತೀಯ ಭಾಷೆಗಳಂತೆ ಕನ್ನಡವೂ ಸಂಸ್ಕೃತದಿಂದ ಅನೇಕ ಪದಗಳನ್ನು ಸ್ವೀಕರಿಸಿತು. ಅದಕ್ಕೆ ಬಂಧು ಸೂಚಕಗಳು ಹೊರತಲ್ಲ.

ಪಿತೃತಂದೆ
ಮಾತೃತಾಯಿ
ಸಹೋದರಅಣ್ಣ, ತಮ್ಮ
ಸಹೋದರಿಅಕ್ಕ, ತಂಗಿ

ಆದರೆ ಸಂಸ್ಕೃತ ಬಂಧುಸೂಚಕಗಳ ಬಳಕೆ ಕಡಿಮೆ. ಬರವಣಿಗೆಯಲ್ಲಿ ಮಾತ್ರ (ಸೀಮಿತ ಸಾಮಾಜಿಕ ವರ್ಗದಲ್ಲಿ) ಅವು ಕಾಣಸಿಗುತ್ತವೆ. ಉತ್ತರ ಗಡಿಭಾಗದಲ್ಲಿ ಮರಾಠಿ ಭಾಷೆಯ ಪ್ರಭಾವ ಅಧಿಕವಾಗಿರುವುದರಿಂದ ನಿತ್ಯ ವ್ಯವಹಾರದಲ್ಲಿ ಮರಾಠಿ ಬಂಧುಸೂಚಕಗಳು ಬಳಕೆಯಾಗುತ್ತವೆ.

ಆಯಿ / ಮಾತಾಯಿ
ಪಾವಣಿಗರುಬೀಗರು
ವೈನಿಅತ್ತಿಗೆ
ಕಾಕಾಚಿಕ್ಕಪ್ಪ
ಮಾವಂಶಿಚಿಕ್ಕಮ್ಮ
ಬಾವ್ಸಹೋದರ

ಮುಸಲ್ಮಾನರ ಆಡಳಿತ ಕಾಲದಲ್ಲಿ ನವಾಬರು, ಅಧಿಪತಿಗಳು ಗುಲಬರ್ಗಾ ಸುತ್ತಮುತ್ತಲಿನ ಪ್ರದೇಶದಲ್ಲಿ ಇಸ್ಲಾಂ ಧರ್ಮ ತುಂಬ ವ್ಯವಸ್ಥಿತವಾಗಿ ನೆಲೆಯೂರುವಂತೆ ಮಾಡಿದರು. ಸಹಜವಾಗಿ ಆ ಭಾಷೆಯ ಬಂಧುಸೂಚಕಗಳ ಪ್ರಭಾವ ಆ ಪ್ರದೇಶದ ಕನ್ನಡದ ಬಂಧುಸೂಚಕಗಳ ಮೇಲಾಯಿತು.

ಮಾತಾಯಿ
ಚಚ್ಚ್ಯಾ / ಚಾಚಾಚಿಕ್ಕಪ್ಪ
ಮಾಮೂಮಾವ
ಬೈಯ್ಯಾ / ಬಾಯಿಸಹೋದರ
ಬಾಬಾತಂದೆ

ಆಧುನಿಕ ಕಾಲದಲ್ಲಿ ಕನ್ನಡವು ಇಂಗ್ಲಿಷಿನಿಂದ ಸ್ವೀಕರಿಸಿರುವ ಪದಗಳನ್ನು ನೋಡಿದರೆ ಇಂಗ್ಲಿಷ್ ಆಧುನಿಕ ಸಂಸ್ಕೃತಿಯ ಹೆಬ್ಬಾಗಿಲಾಗಿ ಪರಿಣಮಿಸಿರುವುದನ್ನು ಗುರುತಿಸಬಹುದು. ಪ್ರತಿಷ್ಠೆ ಮತ್ತು ಅವಶ್ಯಕತೆ ಇದಕ್ಕೆ ಮುಖ್ಯ ಕಾರಣಗಳಾಗಿವೆ. ಉಚ್ಛಾರಣೆ ಮತ್ತು ಬಳಕೆ ಈ ಎರಡು ಸನ್ನಿವೇಶಗಳಲ್ಲಿಯೂ ಇಂಗ್ಲಿಷ್ ಬಂಧುಸೂಚಕಗಳ ಪ್ರಭಾವ ಕನ್ನಡದ ಮೇಲಾಗಿದೆ.

ಮಮ್ಮಿತಾಯಿ
ಡ್ಯಾಡಿತಂದೆ
ಆಂಟಿಚಿಕ್ಕಮ್ಮ
ಅಂಕಲ್ಚಿಕ್ಕಪ್ಪ
ಫಾದರ್ತಂದೆ
ಮದರ್ತಾಯಿ
ಫಾದರ್ಇನ್ಲಾಮಾವ
ಮದರ್ಇನ್ಲಾಅತ್ತೆ
ಸನ್ಇನ್ಲಾಅಳಿಯ
ಡಾಟರ್ಇನ್ಲಾಸೊಸೆ
ಕೋಬ್ರದರ್ಸಹ ಸಹೋದರ (ಷಡ್ಡಕ)

ಇಂತಹ ಆಂಗ್ಲ ಪದಗಳು ಕನ್ನಡ ಬಂಧುವಾಚಕಗಳನ್ನು ಪಲ್ಲಟಗೊಳಿಸಿವೆ. ಪಟ್ಟಣಿಗರಲ್ಲಿ ಅದರಲ್ಲೂ ವಿದ್ಯಾವಂತದಲ್ಲಿ ಆಂಗ್ಲ ಪದಗಳ ಬಳಕೆ ಹೆಚ್ಚು. ಅನ್ಯಭಾಷೆಯ ಬಂಧುಸೂಚಕಗಳು ನಮ್ಮ ಭಾಷೆಯ ರಚನೆಗೆ ಹೊಂದಿಕೊಳ್ಳುವಂತೆ ಅಲ್ಪಸ್ವಲ್ಪ ವ್ಯತ್ಯಾಸವಾದರೂ ನಮ್ಮ ಭಾಷೆಯ ರಷನೆಯ ನಿಯಮಗಳಿಗೆ ಹೊಂದಿಕೊಳ್ಳುತ್ತತೆಂಬುದನ್ನು ಗಮನಿಸಬೇಕು (ಮಮ್ಮಿ, ಮಮ್ಮಿಯನ್ನು, ಮಮ್ಮಿಯಲ್ಲಿ).

ಕನ್ನಡ ಬಂಧುಸೂಚಕಗಳ ಮೇಲೆ ಕನ್ನಡೇತರ ದ್ರಾವಿಡ ಭಾಷೆಗಳ ಪ್ರಭಾವ ಹೇರಳವಾಗಿದೆ. ಕರಾವಳಿ ಪ್ರದೇಶದಲ್ಲಿ ತುಳು, ಮಲಯಾಳಂ ಭಾಷೆಗಳ, ಕೋಲಾರ, ಪಾವಗಡ ಪ್ರದೇಶದ ಕಡೆಗೆ ತೆಲುಗು ಭಾಷೆಯ, ಹಳೇ ಮೈಸೂರಿನ ದಕ್ಷಿಣ ಭಾಗದ ಕಡೆಗೆ ತಮಿಳ್ ಭಾಷೆಯ ಬಂಧುಸೂಚಕಗಳು ಬಳಕೆಯಾಗುತ್ತವೆ. ಕನ್ನಡ ಮತ್ತು ಕನ್ನಡೇತರ ದ್ರಾವಿಡ ಭಾಷೆಗಳು ದ್ರಾವಿಡ ಪರಿವಾರಕ್ಕೆ ಸೇರಿರುವುದರಿಂದ ಅವುಗಳಲ್ಲಿಯ ಬಂಧುಸೂಚಕಗಳಲ್ಲಿಯೂ ಹೆಸರು ಮತ್ತು ಸಂಬೋಧನೆಯಲ್ಲಿ ಸಾಮ್ಯತೆಯಿದೆ ವಿನಃ ವೈಷಮ್ಯಗಳಿಲ್ಲ. (ದ್ರಾವಿಡ ಬಂಧುಸೂಚಕಗಳ ಪಟ್ಟಿಯನ್ನು ಅನುಬಂಧ ಭಾಗದಲ್ಲಿ ಕೊಡಲಾಗಿದೆ. ಗಮನಿಸಬಹುದು).

ಒಂದು ಭಾಷೆಯಲ್ಲಿ ಅನೇಕ ಭಾಷಾ ಪ್ರಬೇಧಗಳಿದ್ದರೂ ಅದರಲ್ಲಿಯೂ ನಾಡಿನ ರಾಜಧಾನಿ ಸುತ್ತಮುತ್ತಲಿರುವ ಭಾಷಾ ಪ್ರಬೇಧವು ಹೆಚ್ಚು ಪ್ರಭಾವಿತವಾಗಿರುತ್ತದೆ. ಆ ಪ್ರದೇಶದ ರೂಪಗಳು ಮಾಧ್ಯಮಗಳ್ಲಿ ಬಳಕೆಯಾಗುವುದು ಹೆಚ್ಚು. ಈ ಕಾರಣದಿಂದ ಉಳಿದ ಭಾಷಾ ಪ್ರಬೇಧಗಳು ಆ ಪ್ರದೇಶದ ರೂಪಗಳ್ನು ಸ್ವೀಕರಿಸುವುದುಂಟು. ಉದಾಃ ಕಿತ್ತೂರು ಕರ್ನಾಟಕ ಪ್ರದೇಶದವರು ಹಳೇ ಮೈಸೂರು ಪ್ರದೇಶದ ಕಡೆಗೆ ಕೆಲಸ ಮಾಡಿ ಅಥವಾ ಓದಿ ಪುನಃ ತಮ್ಮ ಪ್ರದೇಶಕ್ಕೆ ಬಂದಾಗ ಅವರ ಜೊತೆಯಲ್ಲಿ ಆ ಪ್ರದೇಶದ ಇತರ ಪದಗಳಂತೆ ಬಂಧುಸೂಚಕಗಳು ಪ್ರಯಾಣ ಮಾಡುತ್ತವೆ. (ಹಳೆಯ ಮೈಸೂರು ಪ್ರದೇಶದ ಭಾಷೆ ಬರಹದ ಭಾಚೆ ಎಂಬ ಭಾವನೆ ಉತ್ತರದವರಿಗಿದೆ.). ಅಮ್ಮ, ಚಿಕ್ಕಮ್ಮ, ತಾತ, ಅತ್ತಿಗೆ ಇತ್ಯಾದಿ ಹಳೇ ಮೈಸೂರಿನ ಪದಗಳು, ಅವ್ವ, ಚಿಗವ್ವ, ಅಜ್ಜ, ವೈನಿ ಇತ್ಯಾದಿ ಕಿತ್ತೂರು ಕರ್ನಾಟಕದ ಪದಗಳಿಗಿಂತ ಶ್ರೇಷ್ಠ ಎಂಬ ಭಾವನೆ ಅಲ್ಲಿಯ ಜನರಿಗೆ ಬಂದರೆ ಆಶ್ಚರ್ಯವಿಲ್ಲ. ಹಾಗೆಯೇ ಕಿತ್ತೂರು ಕರ್ನಾಟಕದ ಕಡೆಯ ವೈನಿ ಎಂಬ ಪದವು ಹಳೇ ಮೈಸೂರು ಕಡೆಯಲ್ಲಿ ಕ್ರಮೇಣ ಸ್ಥಾಪಿತವಾಗುತ್ತಿರುವುದನ್ನು ಗಮನಿಸಬಹುದು.

ಬಂಧುಸೂಚಕಗಳ ಈ ವ್ಯತ್ಯಾಸ ಒಂದೊಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಆ ಪ್ರದೇಶದ ಒಳಗೆ ಜಿಲ್ಲೆ ಜಿಲ್ಲೆಗೂ ಭಿನ್ನತೆ ಕಂಡುಬರುತ್ತದೆ. ಬೆಳಗಾವಿ ಪ್ರದೇಶದ ಕಡೆಗೆ ‘ಅಜ್ಜ’ ಎಂದರೆ ವಿಜಾಪುರ ಕಡೆಗೆ ‘ಮುತ್ತ್ಯಾ’ ಎನ್ನುತ್ತಾರೆ. ಬಳ್ಳಾರಿ ಕಡೆಗೆ ‘ತಾತ’ ಎನ್ನುತ್ತಾರೆ. ಈ ಬದಲಾವಣೆ ತಾಲೂಕು ತಾಲೂಕುಗಳಿಗೂ ಕಂಡುಬರುತ್ತದೆ. ಬೆಳಗಾವಿ ಜಿಲ್ಲೆಯ ಉತ್ತರ ಭಾಗದಲ್ಲಿ ಅಜ್ಜಿಗೆ ‘ಆಯಿ’ ಎಂದು ಕರೆದರೆ ದಕ್ಷಿಣ ಭಾಗದಲ್ಲಿ ‘ಅಮ್ಮ’ ಎಂದು ಬಳಕೆಯಲ್ಲಿದೆ. ವಿದ್ಯಾವಂತರ ಭಾಷೆಯೂ ವಿದ್ಯಾವಂತರಲ್ಲದವರ ಭಾಷೆಯನ್ನು ಮಾರ್ಪಡಿಸುವುದಕ್ಕೆ ಒಂದು ನಿದರ್ಶನವನ್ನು ಕೊಡಬಹುದು. ಸವದತ್ತಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ‘ಅಜ್ಜಿ’ ಎಂಬರ್ಥದಲ್ಲಿ ‘ಅಮ್ಮ’ ಪದ ಬಳಕೆಯಲ್ಲಿದೆ. ಆ ಹಳ್ಳಿಯಿಂದ ಪಟ್ಟಣಕ್ಕೆ ಬಂದ ವಿದ್ಯಾವಂತರು ಇತರರ ಮುಂದೆ ಆ ಪದವನ್ನು ಬಳಸದೆ ಆ ಪದದ ಬದಲು ‘ಆಯಿ’, ‘ಅಜ್ಜಿ’ ಎಂಬ ಪದವನ್ನು ಬಳಸುವುದುಂಟು. ಹೀಗೆ ‘ಅಜ್ಜಿ’ ಎಂಬರ್ಥದಲ್ಲಿ ಬಳಕೆಯಾಗುವ ‘ಅಮ್ಮ’ ಬಂಧುಸೂಚಕದ ಸ್ಥಾನ ಅಭದ್ರವಾಗುತ್ತ ಬಂದು ಕ್ರಮೇಣ ಆ ಪದವು ಲುಪ್ತವಾಗಿ ಹೋಗಬಹುದು.

ಈ ಮಾತನ್ನು ಎಲ್ಲಾ ಭಾಷಾ ಪ್ರಬೇಧಗಳಿಗೂ ಅನ್ವಯಿಸಲು ಬರುವುದಿಲ್ಲವೆಂದು ಕಾಣುತ್ತದೆ. ಎಷ್ಟೋ ಭಾಷಾ ಪ್ರಬೇಧಗಳು ಬರೆಹದ ಭಾಷೆಯನ್ನಾಡುತ್ತಿರುವ ಜನರ ಮಧ್ಯ ಅನೇಕ ವರ್ಷಗಳಿದ್ದರೂ ತಮ್ಮ ವೈಲಕ್ಷಣ್ಯಗಳನ್ನು ಅಚ್ಚಳಿಯದೆ ಉಳಿಸಿಕೊಂಡಿರುವುದಕ್ಕೆ ನಿದರ್ಶನಗಳಿವೆ. ಅಂತಹ ಜನರು ತಮ್ಮ ಗುಂಪಿನಲ್ಲಿ ಒಂದು ರೀತಿಯಾಗಿ, ಉಳಿದವರ ಜೊತೆಯಲ್ಲಿ ಇನ್ನೊಂದು ರೀತಿಯಾಗಿ ಮಾತನಾಡುವುದುಂಟು. ಬರಹದ ಭಾಷೆಯಂತೆಯೇ ಮಾತನಾಡಲು ಪ್ರಯತ್ನಿಸಿದರೆ ಅದು ಬಹಳ ಕೃತಕವಾಗಿ ಕಾಣಿಸುತ್ತದೆ. ಬಂಧುತ್ವಗಳ ಪ್ರಭಾವ ಶೀಘ್ರವಾಗಿ, ಸಾರ್ವತ್ರಿಕವಾಗಿ ನಡೆಯಲು ಭಾಷಾ ಸಮುದಾಯದ ಪ್ರತಿಭಟನೆ ಇದ್ದೇ ಇರುತ್ತದೆ. ಅನ್ಯಭಾಷೆಯ ಬಂಧುಸೂಚಕಗಳನ್ನು ತಕ್ಷಣವೇ ಸ್ವೀಕರಿಸುವುದಿಲ್ಲ. ಉದಾ : ಮಮ್ಮಿ, ಡ್ಯಾಡಿಯಂತಹ ಪದಗಳು ಸಾಂಸ್ಕೃತಿಕ ಬದಲಾವಣೆಯ ಆವಿಷ್ಕಾರಗಳಾದರೂ ಅವುಗಳ ಬಳಕೆಗೆ ಸ್ವಭಾಷಿಕರ ಪ್ರತಿಭಟನೆ ಇದೆಯೆಂಬುದನ್ನು ಗಮನಿಸಬೇಕು.

ಆಧುನೀಕರಣ ಮತ್ತು ನಗರೀಕರಣಗಳ ಪ್ರಭಾವದಿಂದಾಗಿ ಸಂಸ್ಕೃತಿಕ ಪ್ರಸರಣವು ತೀವ್ರವಾಗಿ ನಡೆಯುತ್ತಿದೆ. ಅದರಿಂದ ಕುಟುಂಬ ರಚನೆ ಮತ್ತು ವ್ಯವಸ್ಥೆಯಲ್ಲಿ ಬದಲಾವಣೆಯಾಗುತ್ತಿದೆ. ಪ್ರೇಮ ವಿವಾಹ, ಅಂತರ್‌ಜಾತಿ ವಿವಾಹ ಇವು ಮಾನವನ ಸಾಮಾಜಿಕ ಬಾಂಧವ್ಯಗಳ ಮೂಲಸ್ವರೂಪವನ್ನೇ ಅಮೂಲಾಗ್ರವಾಗಿ ಪರಿವರ್ತನೆ ಮಾಡಿ ಮುಕ್ತ ಸಮಾಜ ಸ್ಥಾಪನೆಗೆ ಕಾರಣವಾಗಿದೆ. ತತ್ಪರಿಣಾಮವಾಗಿ ರಕ್ತ ಸಂಬಂಧಿಗಳಲ್ಲಿದ್ದ ಬಾಂಧವ್ಯಗಳು ಕಡಿಮೆಯಾಗಿ ರಕ್ತಸಂಬಂಧಿಗಳಲ್ಲದ ಜನರೊಡನೆ ಸಾಮಾಜಿಕ ಬಾಂಧವ್ಯಗಳು ಹೆಚ್ಚುತ್ತಿವೆ. ಇದರಿಂದ ಬಂಧುಸೂಚಕಗಳ ಸಂಬೋಧನೆಯ ವಿಧಾನವೂ ಬದಲಾಗುತ್ತಿದೆ. ಹಳ್ಳಿಗಳಲ್ಲಿ ಕುರುಬ, ಬೇಡ, ಒಕ್ಕಲಿಗ, ಲಿಂಗಾಯತ ಸಮುದಾಯಗಳಲ್ಲಿ ಪರಸ್ಪರರು ಬಂಧುವಾಚಕಗಳನ್ನು ಬಳಸಿ ಸಂಬೋಧನೆ ಮಾಡುತ್ತಾರೆ. (ಹರಿಜನ ಮತ್ತು ಬ್ರಾಹ್ಮಣರನ್ನು ಹೊರತುಪಡಿಸಿ). ಇಂತಹ ಸಮಾಜ ರಚನಾ ವಿನ್ಯಾಸದಲ್ಲಿ ಉಚ್ಛ ಸಾಮಾಜಿಕ ಸ್ಥಾನ ಹೊಂದುವುದು ಮುಖ್ಯವಲ್ಲ. ಬಾಂಧವ್ಯ ಗಟ್ಟಿಗೊಳಿಸುವುದು ಮುಖ್ಯವಾಗಿದೆ. ಸಾಂಸ್ಕೃತಿಕ ಸಂಬಂಧವನ್ನು ಸೂಚಿಸುವ ಬಂಧವಾಚಕಗಳ ಅಧ್ಯಯನವು ಭಾಷಾ ಸಂಸ್ಕೃತಿಯ ದೃಷ್ಟಿಯಿಂದ ಕುತೂಹಲಕಾರಿಯಾಗಿದೆ.