ಸಂಗ್ಯಾ ಬಾಳ್ಯಾ ಗೀತರೂಪದಲ್ಲಿ ಬಳಕೆಯಾದ ಸಂಬೋಧನೆ ರೂಪಗಳ ಸ್ವರೂಪವನ್ನು ಈ ಅಧ್ಯಾಯದಲ್ಲಿ ವಿವೇಚನೆ ಮಾಡಲಾಗಿದೆ. ‘ಸಂಗ್ಯಾ ಬಾಳ್ಯಾ’ ಗೀತ ರೂಪಕವು ಉತ್ತರ ಕರ್ನಾಟಕ ವ್ಯಾಪ್ತಿಯನ್ನು ಮೀರಿ ಪಶ್ಚಿಮ ಮತ್ತು ದಕ್ಷಿಣ ಕರ್ನಾಟಕದವರೆಗೂ ಪಸರಿಸಿದೆ. ಇತ್ತಿತ್ತಲಾಗಿ ಚಲನಚಿತ್ರವಾಗಿ ನಾಡಿನ ತುಂಬೆಲ್ಲ ಪರಿಚಿತವಾಗಿದೆ. ನೆರೆಯ ಮಹಾರಾಷ್ಟ್ರದಲ್ಲಿಯೂ ಅಷ್ಟೇ ಜನಪ್ರಿಯವಾಗಿದೆ. ಪ್ರದೇಶದಿಂದ ಪ್ರದೇಶಕ್ಕೆ ದಾಟಿಕೊಂಡು ಬರುವಾಗ ನಾಟಕದ ಹಾಡುಗಳ ರಚನೆಯಲ್ಲಿ ಆಯಾ ಪರಿಸರದ ಭಾಷೆ ಪ್ರಭಾವ ಬೀರುತ್ತದೆ. ಸಂಗ್ಯಾ ಬಾಳ್ಯಾದ ಕರ್ತೃ, ಕಾರಣ, ಘಟನೆಯ ಹಿನ್ನೆಲೆ ಇವೆಲ್ಲವುಗಳನ್ನು ಪಕ್ಕಕ್ಕೆ ಸರಿಸಿ ರಂಗಭೂಮಿಯಲ್ಲಿ ಅದನ್ನು ನೋಡಿದಾಗ ಮನಸೆಳೆಯುವ ಹಾಡುಗಳು, ಮೈನವಿರೇಳಿಸುವ ಸನ್ನಿವೇಶ, ಮಜಭೂತಾದ ಪಾತ್ರಸೃಷ್ಟಿ, ಸಹಜ ಮತ್ತು ವಿಶಿಷ್ಟವಾದ ಸಂಬೋಧನೆಗಳು ಮತ್ತು ಸಂಭಾಚಣೆಯ ರೀತಿ ಇವು ಇದರ ವೈಶಿಷ್ಟ್ಯಗಳಾಗಿವೆ. ಜಾನಪದ ಸಣ್ಣಾಟಗಳ ಪಂಕ್ತಿಯಲ್ಲಿ ಸಂಗ್ಯಾ ಬಾಳ್ಯಾ ಅತ್ಯಂತ ಶ್ರೇಷ್ಟವಾದುದು ಮತ್ತು ಜನಪ್ರಿಯವಾದುದಾಗಿದೆ. ಇದರ ಜನಪ್ರಿಯತೆಗೆ ಮೂರು ಕಾರಣಗಳಾಗಿವೆ.

೧. ಸಾಮಾಜಿಕ ವಸ್ತುವನ್ನೊಳಗೊಂಡ ವಾಸ್ತವಿಕ ಘಟನೆಗಳ ಮೇಲೆ ಈ ನಾಟಕ ರಚನೆಯಾಗಿದೆ.

೨, ನಾಟಕದ ಉದ್ದಕ್ಕೂ ಹಾಸ್ಯ, ಪ್ರಣಯ, ಶೃಂಗಾರಗಳೇ ತುಂಬಿಕೊಂಡಿದ್ದು, ಅವು ಪ್ರೇಕ್ಷಕರನ್ನು ಸೆರೆಹಿಡಿಯುತ್ತವೆ. ಅವುಗಳ ಒಡಲಲ್ಲಿ ದುರಂತ ಅಡಗಿದೆ ಎಂಬುದನ್ನು ಮರೆಯಲಾಗದು.

೩. ಪ್ರಾದೇಶಿಕ ಭಾಷಾ ವೈಶಿಷ್ಟ್ಯತೆಯನ್ನು ಬಳಸಿಕೊಂಡಿರುವುದರಿಂದ ಪ್ರೇಕ್ಷಕರಿಗೆ ಹೆಚ್ಚು ಹತ್ತಿರವಾಗಿದೆ. ಇದರಿಂದ ಭಾಷಾ ಸಂಕೀರ್ಣತೆ ದೂರವಾಗಿ ನಾಟಕದ ಆಶಯ ಜನರಿಗೆ ಸುಲಭವಾಗಿ ಅರ್ಥವಾಗುತ್ತದೆ.

ಈ ಎಲ್ಲ ಅಂಶಗಳಿಂದ ಈ ಗೀತರೂಪದ ಕನ್ನಡ ಜಾನಪದ ರಂಗಭೂಮಿಯ ಮೇಲೆ ತನ್ನದೇ ಆದ ವೈಶಿಷ್ಟ್ಯತೆಯನ್ನು ಪಡೆದುಕೊಂಡಿದೆ. ಈ ಗೀತರೂಪಕದಲ್ಲಿ ಬಳಕೆಯಾದ ಬಂಧುಸೂಚಕಗಳ ಬಳಕೆಯ ಸ್ವರೂಪ ವೈವಿಧ್ಯಪೂರ್ಣವಾಗಿವೆ.

ಈ ಗೀತರೂಪಕದ ಪಾತ್ರಗಳ ಸಂಬಂಧವನ್ನು ಏಳು ಗುಂಪುಗಳಾಗಿ ವರ್ಗೀಕರಿಸಬಹುದು.

.       ಗಂಡ + ಹೆಂಡತಿ + ತಮ್ಮಂದಿರರು
          ಈರ್ಯಾ + ಗಂಗಾ ಇರಪಾಕ್ಷಿ, ಬಸವಂತ

.       ಅತ್ತಿಗೆ + ಮೈದುನರು
ಗಂಗಾ ಇರಪಕ್ಷ, ಬಸವಂತ

.       ಗೆಳೆಯರು
ಸಂಗ್ಯಾ + ಬಾಳ್ಯ

.      ಅಳಿಯ + ಅತ್ತೆ
ಸಂಗ್ಯಾ + ಪರಮ್ಮ

.      ಮಿಂಡ + ರಂಡಿ
ಸಂಗ್ಯಾ + ಗಂಗಿ

.     ಒಡೆಯ + ಸೇವಕರು
ಈರ್ಯಾ + ಬ್ಯಾಗಾರಿ

.       ವ್ಯಾಪಾರಿ + ಗಿರಾಕಿ
ಸೇಡಜಿ + ಸಂಗ್ಯಾಬಾಳ್ಯಾ

ಮೊದಲನೆಯ ಗುಂಪಿನಲ್ಲಿ ಗಂಗಿಯ ಕೌಟುಂಬಿಕ ಸಂಬಂಧವಿದೆ. ಅಲ್ಲಿ ಗಂಗಿಯ ಪಾತ್ರ (ಆದರ್ಶ) ಗೃಹಿಣಿಯಂತಿದೆ. ಆಕೆ ಸಂಗ್ಯಾನ ಕೂಡ ಹಾದರ ಮಾಡಿ ಕೌಟುಂಬಿಕ ಸಂಬಂಧದಿಂದ ಕಳಚಿ ಅಪರಾಧಿಯಾಗಿ ಸಂಪೂರ್ಣ ದುರಂತ ದೆಸೆಹೊಂದುತ್ತಾಳೆ. ಜನರಿಂದ ಹಾಗೂ ಗಂಡ, ಮೈದುನರಿಂದ ‘ರಂಡಿ’ ಎಂದು ಕರೆಯಲ್ಪಡುತ್ತಾಳೆ. ಇವು ಆಯಾ ವ್ಯಕ್ತಿಗಳ ಸಂಬಂಧವನ್ನು ಸೂಚಿಸುತ್ತವೆ. ಪಾತ್ರಗಳು ಆಯಾ ಸಂದರ್ಭಕ್ಕೆ ತಕ್ಕಂತೆ ಸಂಬೋಧಿಸುವ ವಿಧಾನದಲ್ಲಿಯೂ ಬದಲಾವಣೆ ಕಂಡುಬರುತ್ತದೆ. ಸಂಗಪ್ಪ – ಸಂಗಣ್ಣ – ಸಂಗ್ಯಾ – ಸಂಗ, ಈರಪ್ಪ – ಈರಣ್ಣ – ಈರ್ಯಾ, ಗಂಗಾ – ಗಂಇ ಮುಂತಾದವುಗಳನ್ನು ಸಂಬೋಧಿಸುವಾಗ ಮೇಲು, ಕೀಳ:ಉ, ಆತ್ಮೀಯತೆ ಈ ಎಲ್ಲ ಭಾವನೆಗಳು ಗಮನಾರ್ಹವಾದವುಗಳಾಗಿವೆ. ಸಂಗ್ಯಾ ಕೀಳಾಗಿ, ಸಂಗಣ್ಣ, ಸ್ನೇಹ, ಆತ್ಮೀಯತೆ, ಸಂಗಪ್ಪ ಹೆಮ್ಮೆ ಪಡುವಂತಹ ಸನ್ನಿವೇಶ ಆಯಾ ವ್ಯಕ್ತಿಗಳನ್ನು ಕರೆಯುವಾಗ ಅವು ಒಂದು ರೀತಿಯಲ್ಲಿ ಸ್ಥಾನಮಾನದ ಸೂಚಕಗಳಾಗಿರುತ್ತವೆ. ಆಯಾ ವ್ಯಕ್ತಿಗಳನ್ನು ಸಂಬೋಧಿಸುವಾಗ ಪ್ರೇಕ್ಷಕರ ಮನೋಧೋರಣೆ (Attitude) ಬದಲಾಗುತ್ತದೆ. ಇಂತಹ ಸಂಬೋಧನೆಯಲ್ಲಿ ಹೆಚ್ಚು ಒತ್ತುಕೊಟ್ಟು ದೀರ್ಘವಾಗಿ ಉಚ್ಚರಿಸುತ್ತಾರೆ. ಈ ರೀತಿಯ ಉಚ್ಚಾರಣೆ ನಾಟಕೀಯವಾಗಿರದೆ ಸಹಜವಾಗಿರುತ್ತದೆ.

ಈರ್ಯಾ ವ್ಯಾಪಾರಕ್ಕೆ ಹೋಗುವ ಸಿದ್ಧತೆಯಲ್ಲಿದ್ದಾಗ ಈರ್ಯಾ ಮತ್ತು ಗಂಗಾಳ ನಡುವೆ ನಡೆಯುವ ಸಂಭಾಷಣೆಯ ಸಂದರ್ಭದಲ್ಲಿ ಕೆಲವು ಸಂಬೋಧನೆಗಳು ಕಂಡುಬರುತ್ತವೆ. ಅವುಗಳ ರಚನೆ ಸರಳವಾಗಿದ್ದರೂ ನಾಟಕದಲ್ಲಿ ಬಂದಾಗ ನಾಟಕೀಯವೆನಿಸುತ್ತವೆ.

ಸಖಿಬಾಬಾ
ಪ್ರಿಯ ನಿಮಗೆ ಕೈ ಮುಗಿಯುವೆ
ಪ್ರಾಣಕಾಂತಾ ನಾ ಹೆಗ್ ಜೀವಿಸಲೋ
ಕಾಂತಾ | ಕರಸೀದ ಕಾರಣವೆನೂ
ಕೇಳಕಾಂತೆ |

ಕಿತ್ತೂರ ಕರ್ನಾಟಕದ ಆಡುನುಡಿಯಲ್ಲಿ ಇಂತಹ ಸಂಬೋಧನೆಗಳು ಬಳಕೆಯಾಗುವುದಿಲ್ಲ. ಆದರೆ ಇವು ಈ ಗೀತರೂಪಕದಲ್ಲಿ ಕಾಣಿಸಿಕೊಂಡು ಕೃತಕವಾಗಿ ನಾಟಕೀಯವಾಗಿ ಬಳಕೆಯಾಗಿವೆ. ಅಂದರೆ ‘ದ್ವಿಸ್ತರತೆ’ (ಡೈಗ್ಲಾಸಿಯಾ) ಇಲ್ಲಿ ಕಂಡು ಬಂದಿದೆ. ಬಹುಶಃ ಕಂಪನಿ ನಾಟಕಗಳ ಪ್ರಭಾವ ಸಂಗ್ಯಾ ಬಾಳ್ಯಾ ಮೇಲೆ ಆಗಿರಬೇಕು (!) ಬಂಧುವಾಚಕಗಳ ಮತ್ತು ಸಂಬೋಧನೆಗಳ ಬಳಕೆಯನ್ನು ನೋಡಿದರೆ ಅವು ವಾಕ್ಯದ ಆರಂಭದಲ್ಲಿ ಅಥವಾ ಮಧ್ಯದಲ್ಲಿ ಹೆಚ್ಚು ಒತ್ತುಕೊಟ್ಟು ದೀರ್ಘವಾಗಿ ಉಚ್ಚರಿಸುವುದುಂಟು. ಅದು ಸಣ್ಣಾಟಗಳ ಸಂಪ್ರದಾಯವೆಂಬಂತೆ ಕಂಡುಬರುತ್ತದೆ.

ತಂಗಿ ಗಂಗವ್ವ | ನೀನು ಗಂಗವ್ವ ಬಾರವ್ವ ಹೊರಗ
ನಾ ಅತ್ತಿಮನಿ ಸೊಸಿಯಮ್ಮಾ ಹರಸಿ ಒಗತಾನ
ಬಾರ ಆಯಿ | ಬಂದಿಯ ಭಾಳ ದಿನಕ್
ಮಿತ್ರ
ಬಾಳಣ್ಣ ಹೇಳುತ್ತೇನೆ ಕೇಳುವಂತನಾಗು

ಸನ್ನಿವೇಶದ ಜೀವಂತಿಕೆಯ ದೃಷ್ಟಿಯಿಂದ ಇವು ಮುಖ್ಯವಾಗಿವೆ. ವಾಕ್ಯಗಳ ಮಧ್ಯೆ ಬಂದಾಗ ವ್ಯಕ್ತಿ ನಾಮಗಳು ದೀರ್ಘತೆಯಿಂದ ಉಚ್ಚಾರವಾಗುವುದುಂಟು.

ಇರಪಕ್ಷಿಬಸವಂತ ಬರ್ಯಪ್ಪ ತಮ್ಮಗಳಿರಾ
ಹೇಳ್ ಪರಮ್ಮ | ಅದೇನ್ ಬಿಚ್ಚಿ ಹೇಳಮ್ಮಾ

ಕೆಲವು ವಾಕ್ಯಗಳಂತು ಸಂಭಾಷಣೆಯ ಸಂದರ್ಭದಲ್ಲಿ ತಟ್ಟನೆ ಎದುರಿನ ಪಾತ್ರಕ್ಕೆ ಪ್ರತಿಕ್ರಿಯಿಸಿದ ರೂಪಗಳಾಗಿ ವ್ಯಕ್ತವಾಗಿರುವುದನ್ನು ಕಾಣುತ್ತೇವೆ. ಈರ್ಯಾ ಗಂಗಾಳಿಗೆ ಬಸವಣ್ಣ ದೇವರಿಗೆ ಹೋಗಬೇಕೆಂದು ಹೇಳಿದಾಗ

ಈರ್ಯಾಕೇಳತಾಂತೆ | ಬಸವಣ್ಣ ದೇವರಾ
ನೀ ಹೋಗಬೇಕ್ | ನಾಳಿಸ್ವಾಮಾರಾ.
ಗಂಗಾಮೂರಂತಸ್ತಿನ ಮನೆಯೊಳು ಯಾರ್ಯಾರು ಸುಳುವಿಲ್ಲಾ
ಒಂದು ಹಡೆದಿಲ್ಲೂ ಪ್ರಿಯಾ ಕಂದಿಲ್ಲೋ ನನ್ನಧ್ಯಾಯ

ತನ್ನ ಅಂತರಂಗದ ಆಸೆಯನ್ನು, ತಾರುಣ್ಯದ ಸಹಜ ಬಯಕೆಯನ್ನು ಹೇಳುತ್ತಾಳೆ

ಯಮ್ಮಾ ಎಷ್ಟದೂರ ಅತಿ
ನನ್ನ ಮಗಳ ಬಂತ್ ಬಾರ್

ಮರಡಿ ಬಸವಣ್ಣನ ಜಾತ್ರೆಯಲ್ಲಿ ಸಂಗ್ಯಾದಾರಿಕಟ್ಟಿ ಪ್ರೇಮಯಾಚಿಸಿದಾಗ ಗಂಗಿ ಅವನನ್ನು ಉದ್ದೇಶಿಸಿ

ದೊರೆ ಈರ್ಯಾ ನನ್ನ ಪ್ರಾಣಕಾಂತಾ
ಮೈದುನರು | ಇರಪಕ್ಷಿಬಸವಂತ

ವಿವಾಹಿತ ಸ್ತ್ರೀ ವ್ಯಾಮೋಹ ಸರಿಯಲ್ಲವೆಂದು ಸಂಗ್ಯಾನಿಗೆ ಬುದ್ಧಿ ಹೇಳುತ್ತಾಳೆ. ಈ ಗೀತರೂಪಕದಲ್ಲಿ ಸಂಭಾಷಣೆಗೆ ಹೆಚ್ಚಿನ ಮಹತ್ವವಿದೆ. ಪಾತ್ರಗಳು ಹಾಡು ಹೇಳಿ ಹಾಡಿನಲ್ಲಿರುವ ಅರ್ಥವನ್ನು ಸ್ಪಷ್ಟಗೊಳಿಸಲು ಮಾತು ಬೆಳೆಸುತ್ತವೆ. ಪಾತ್ರಧಾರಿಗಳ ಸಂಬೋಧನೆಯಲ್ಲಿ ಯಮ್ಮಾ, ಯಣ್ಣಾ, ಯತ್ತಿ, ಮಿತ್ರ ಇಂತಹ ರೂಪಗಳು ಪುನಃ ಪುನಃ ಆವೃತ್ತಿಯಾಗುತ್ತವೆ. ಇವು ಪಾತ್ರಧಾರಿಗಳಿಗಿರುವ ಸಂಬಂಧವನ್ನು ಸೂಚಿಸುತ್ತವೆ. ಸಂಬೋಧನೆಗಳು ಪಾತ್ರಗಳ ಮಾನಸಿಕ ಸ್ಥಿತಿಯನ್ನು ಸಮರ್ಥವಾಗಿ ಪ್ರೇಕ್ಷಕರಿಗೆ ಅರಿವು ಮಾಡಿಕೊಳ್ಳುತ್ತವೆ.

ಗೆಳೆಯ ಹೇಳುತ್ತೇನೆ ಕೇಳುವಂಥವನಾಗು
ಗೆಳೆಯ ಅದೆನಿರುವುದು ಚೆಂದವಾಗಿ ಹೇಳುವಂತವನಾಗು

ಮುಂತಾದ ವಾಕ್ಯಗಳು. ಪದ ಪುಂಜಗಳು ಪ್ರೇಕ್ಷಕರ ಗಮನವನ್ನು ಸೆಳೆಯುತ್ತವೆ. ಪರಮ್ಮ ತನ್ನ ಗಂಡನಿಗೆ ‘ಮುದುಕ’ ಎಂದೂ ಅವನು ಪರಮ್ಮಳಿಗೆ ‘ಮುದುಕಿ’ ಎಂದು ಸಂಬೋಧಿಸುತ್ತಾರೆ. ಸಂಬೋಧನೆಯಲ್ಲಿ ಬಳಕೆಯಾಗುವ ಶಬ್ದಚಿತ್ರಗಳಿಂದ ಹೊಸ ಅರ್ಥವಂತಿಕೆ ಹೊಳೆಯುತ್ತದೆ.

ಸರದಾರ ನನ್ನ ಗಂಡ ಸರಿಗಿ ಮಾಡಿಸಿಕೊಇಟ್ಟ
ಸರದಾಳಿ ಕೆಳಗ ಬರಿಗೊಳ್ಳು | ಗೆಳೆತೆವ್ವ
ನಗಿ ನಮಗ್ಯಾತಕ ||

‘ಸರದಾರ’ ಎನ್ನುವ ಪದದ ಹಿಂದೆ ಗಂಡ ಎಂತವನೇ ಇರಲಿ ಹೆಂಡತಿಯ ಪಾಲಿಗೆ ಅವನು ‘ಸರದಾರ’ ಅವನಿರುವವರೆಗೆ ಅವಳು ಏನೇನೂ ಆಪೇಕ್ಷಿಸಿರಲಾರಳು. ಅವನು ಇರದಾಗ ‘ಸರದಾಳ ಕೆಳ ಬರಿಗೊಳ್ಳ’ ಎಂಬ ಸಾಲು ವಿರಹಿಯ ಶೂನ್ಯತೆಯನ್ನು ಚಿತ್ರಿಸುತ್ತದೆ. ಬಾಳ್ಯಾ ಗಂಗಾನ ಹತ್ತಿರ ಬಂದು ಸಂಗ್ಯಾನ ಕೂಡುವಂತೆ ಒತ್ತಾಯಿಸಿದಾಗ ಅವನಿಗೆ ಗಂಗಾ ಹೇಳುವ ಮಾತು ತುಂಬಾ ಮಾರ್ಮಿಕವಾಗಿದೆ.

ಬಾಳಪ್ಪಣ್ಣಾ ಕಲಿತೇನೋ
ಕುಂಟಲತನಾ
ನನ್ನಸರಿ ಅಕ್ಕಾ ತಂಗಿ ಇಲ್ಲೇನೋ
ಯಣ್ಣಾ ನಿನಗ್

ಇಲ್ಲಿ ಬಳಕೆಯಾದ ‘ಅಣ್ಣಾ’ ಎಂಬ ರೂಪ ಅದು ಹೊತ್ತುಕೊಳ್ಳುವ ಭಾವ ಎಷ್ಟು ಹಿರಿದು? (ಸ್ತ್ರೀವಾದಿ ತತ್ವಗಳ ಹಿನ್ನೆಲೆಯಲ್ಲಿ ಇಂತಹ ಹೇಳಿಕೆಗಳನ್ನು ವಿಶ್ಲೇಷಿಸಿರಬೇಕಾಗಿದೆ). ಬಾಳ್ಯಾ ಪಾಶ್ಚಾತ್ತಾಪಗೊಂಡು ಬಂದದಾರಿಗೆ ಮರಳುತ್ತಾನೆ. ಅನೈತಿಕ ವರ್ತನೆಯನ್ನು ತಡೆಯಲು ಬಂಧುಸೂಚಕಗಳು ಮಹತ್ವದ ಪಾತ್ರವಹಿಸುತ್ತವೆ. ಎಂಬುದು ಗಮನಿಸಬೇಕಾದ ಸಂಗತಿ. ಗೀತರೂಪಕದ ಉದ್ದಕ್ಕೂ ‘ಎಲೆಲೆ’ ಎಂಬ ಸಂಬೋಧನೆಯ ರೂಪ ಪುನರಾವೃತ್ತಿಯಾಗುತ್ತದೆ. ‘ಎಲೆಲೆ ಸಂಗ್ಯಾ ಸಿಕ್ಕಿ ಬಿದ್ದಾನೋ’ ಮುಂತಾದವು ಪ್ರೇಕ್ಷಕರ ಗಮನವನ್ನು ಸೆಳೆಯುವುದು ಇವುಗಳ ಮುಖ್ಯ ಉದ್ದೇಶವಾಗಿದೆ.

ಪರಮ್ಮಳು ಸಂಗ್ಯಾನ ಸೋದರತ್ತ. ಗಂಗಿಯನ್ನು ಸಂಗ್ಯಾನಿಗೆ ತಂದುಕೊಡುವಲ್ಲಿ ಇವಳು ಮಹತ್ವದ ಪಾತ್ರ ವಹಿಸುತ್ತಾಳೆ. ಗಂಗಿಯ ಮನಸ್ಸನ್ನು ಕದಡುತ್ತಾಳೆ. ಸಂಗ್ಯಾ ಪರಮ್ಮಳನ್ನು ‘ಯತ್ತಿ’ ಎಂದೇ ಸಂಬೋಧಿಸುತ್ತಾನೆ. ‘ಕೇಳಬೇಕ ಕೇಳಬೇಕ ಯತ್ತಿ ಮಾತಾ’ ಎನ್ನುವುದನ್ನು ಗಮನಿಸಿದರೆ ಅಳಿಯಂದಿರಿಗೆ ತಮ್ಮ ಸೋದರತ್ತೆಯರ ಮೇಲೆ ಅಪಾರ ಸಲಿಗೆ ಮತ್ತು ಆತ್ಮೀಯತೆ. ಅದರಂತೆ ಅತ್ತೆಯಂದಿರಿಗೂ ಸೋದರಳಿಯರ ಮೇಲೆ ಅಷ್ಟೇ ವಾತ್ಸಲ್ಯವಿರುತ್ತದೆ. ಸಂಗ್ಯಾನ ಕೊಲೆಯಾದಾಗ ಪರಮ್ಮ ತುಂಬ ನೋವು ಪಟ್ಟಕೊಳ್ಳುತ್ತಾಳೆ.

ಸಂಗ್ಯಾನ ಕೊಂದವರ | ಚೆಂಡಿ ಚಿವುಟಲಿ
ಸಂಗಪ್ಪನನ್ನಳಿಯ | ಬಂಗಾರದಂತವಾ

ಎನ್ನುವಲ್ಲಿ ಭಾವ ತೀವ್ರತೆಯಿದೆ. ಗುಡಿಯಲ್ಲಿ ಗಂಗಿ, ಪರಮ್ಮ, ಪೂಜಾರಿಯರ ಸಂವಾದದಲ್ಲಿ ಕಂಡುಬರುವ ‘ಯಮ್ಮಾಬೇ ಹಿಂದಿನ ಹುಡುಗಿಯಾರ್’, ‘ಯಾಕೋ ಪೂಜಾರಿ’ ಎನ್ನುವಲ್ಲಿ ಹಾಸ್ಯಲಾಸ್ಯವಾಡಿದೆ. ಸಂಗ್ಯಾ ಗಂಗಿಯರ ಶೃಂಗಾರದ ಉನ್ಮಾದದಲ್ಲಿ

ಪ್ರಿಯಾಂಗಾತೇ ಘಾಸಿ ಮಾಡಬೇಡ

ಎಂಬಸಾಲಿನಲ್ಲಿ ವಿರಹದ ತೃಪ್ತಿಯ ಹೋರಾಟ ಬಿಚ್ಚಿಕೊಂಡಿದೆ. ಈರ್ಯಾನಿಗೆ ಹಾದರದ ವಿಷಯ ತಿಳಿದಾಗ ತಾನು ಅಂತವಳಲ್ಲವೆಂದು ಸಮರ್ಥಿಸಿಕೊಳ್ಳುತ್ತಾಳೆ.

ಸಬಾನನ್ನ ಇರಪಕ್ಷ, ಬಸವಂತ | ಬಂದ್ದ್ಯುಳ್ಳ ಮೈದುನರ್ಯಾ
ಸೇರಲಾರದ ಗಂಡ | ಹಾದರ ಹೊರಿಸ್ಯಾನು

ಗಂಗಿ ತನ್ನ ರಕ್ಷಣೆಗಾಗಿ ಸತ್ಯವನ್ನು ಮರೆಮಾಚಲು ಯತ್ನಿಸುತ್ತಾಳೆ. ಕರ್ನಾಟಕದಲ್ಲಿ ಮೈದುನ ರೂಪದಲ್ಲಿ ಸಂಬೋಧನೆಯಲ್ಲಿ ಬಳಕೆಯಾಗುವುದಿಲ್ಲ. ಆದರೆ ಇಲ್ಲಿ ಬಳಕೆಯಾಗಿರುವುದು ಗಮನಾರ್ಹ.

ಸಂಬೋಧನೆಯಲ್ಲಿ ದ್ವಿರುಕ್ತಿಗಳ ಕೇವಲ ಪ್ರಾಸಕ್ಕಾಗಿ ಉಪಯೋಗವಾಗದೆ ಆಯಾ ಸನ್ನಿವೇಶದ ಪಾತ್ರಗಳ ವ್ಯಕ್ತಿತ್ವದ ಮೇಲೆ ಬೆಳಕು ಬೀರುತ್ತವೆ.

ಯಮ್ಮಾ ಯಮ್ಮಾ ಪರಮ್ಮಾ
ಕಾಂತಾ | ನನ್ನ ಕಾಂತಾ
ಎಲೆಎಲೆ ಬ್ಯಾಗಾರಿ ಸುಳ್ಳಾತೋ ಯಾಪಾರಾ

ಸಂಬೋಧನೆಗಳ ಪುನರುಕ್ತಿಗಳು ನಾಟಕದ ಸೌಂದರ್ಯವನ್ನು ಹೆಚ್ಚಿಸುತ್ತವೆ.

ಸಂಗ್ಯಾ ಬಾಳ್ಯಾ ಗೀತರೂಪಕದ ಸಂಬೋಧನೆಯ ಘಟಕಗಳು ಹೀಗಿವೆ.

ಪುರುಷ ಪಾತ್ರಕ್ಕೆ ಅಪ್ಪಾನ (ಬಾಳಪ್ಪ, ಸಂಗಪ್ಪ ಮುಂತಾದವು), ಮಿತ್ರಾ, ಗೆಳೆಯಾ, ಅಣ್ಣಾ (ಯಣ್ಣಾ), ದೊರಿ (ಈರ್ಯಾ ದೊರೆ), ಮೈದುನ.

ಸ್ತ್ರೀಪಾತ್ರಕ್ಕೆ ಕಾಂತಾಮಣಿ, ಕಾಮಿನಿ, ಕಾಂತೇ, ಸಖಿಯೇ, ರಮಣಿ, ನಾರಿ, ಯತ್ತಿ, ಯಮ್ಮ, ತಂಗಿ, ಎಕ್ಕಲಹುಡುಗಿ, ಉಳಿದ ಪಾತ್ರಗಳಿಗೆ ಎಲೆಬ್ಯಾಗಾರಿ, ರಾವ್ ಸಾಹೇಬರೆ, ಸೇಡ್ಜ. ದಾದಾ ಇವು ಗೀತರೂಪಕದ ಸಂವಿಧಾನಕ್ಕೆ ಕಲೆಯನ್ನು ತಂದುಕೊಟ್ಟಿವೆ.

ಸಂಗ್ಯಾ ಬಾಳ್ಯಾದ ಭಾಷಾಭಿವ್ಯಕ್ತಿಯಲ್ಲಿ ಸಮಕಾಲೀನ ಪ್ರಜ್ಞೆಯ ತುಡಿತವಿದೆ. ಆಡು ಭಾಷೆಯಿಂದ ವ್ಯಕ್ತವಾಗುವ ನಾಟಕಗಳು ಶುಷ್ಕವಾಗುತ್ತದೆ ಎಂಬ ಆರೋಪಕ್ಕೆ ಈ ಗೀತ ರೂಪಕ ಹೊರತಾಗಿ ನಿಲ್ಲುತ್ತದೆ. ಇದರಲ್ಲಿರುವ ಭಾಷೆಯ ಅರ್ಥವಲಯಗಳಲ್ಲಿ ಕಂಡುಬರುವ ತೊಡಕುಗಳನ್ನು ನಿವಾರಿಸಿ ಆಡು ನುಡಿಯ ಆಯಾಮಗಳನ್ನು ಶಿಷ್ಟ ನಾಟಕಗಳಿಗೆ ಪೂರಕಗೊಳಸಿವು ಕಲಾತ್ಮಕತೆಯನ್ನು ಹೊಂದಿದೆ. ಈ ಕಾರಣಗಳಿಂದಲೂ ಈ ಗೀತರೂಪಕ ನ್ನಡ ಸಣ್ಣಾಟಗಳ ಪಂಕ್ತಿಯಲ್ಲಿ ಮಹತ್ವದ ಸ್ಥಾನವನ್ನು ಪಡೆದಿದೆ. ಈ ಗೀತರೂಪಕದ ಅಭ್ಯಾಸದ ಮೂಲಕ ಭಾಷಾ ವೈಶಿಷ್ಟ್ಯಗಳ ಜೊತೆಗೆ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಅರಿಯಬಹುದಾಗಿದೆ.