ಭಾಷಿಕರ ಪ್ರದೇಶ, ವರ್ಗ, ಜಾತಿ, ಲಿಂಗ, ವಯಸ್ಸನ್ನಾಧರಿಸಿ ಸಂಬೋಧನೆಗಳ ಬಳಕೆಯಲ್ಲಿ ಭಿನ್ನತೆ ಕಂಡುಬರುತ್ತದೆ. ಭಾಷಾ ಸಮುದಾಯದಲ್ಲಿ ಭಾಷಿಕರ ಜೀವನ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಂಬೋಧನಾ ರೂಪಗಳು ಮಹತ್ವದ ಪಾತ್ರ ವಹಿಸುತ್ತವೆ. ಕನ್ನಡದಲ್ಲಿ ಬಳಕೆಯಲ್ಲಿರುವ ಕೆಲವು ಸಂಬೋಧನಾ ರೂಪಗಳ ಸ್ವರೂಪವನ್ನು ಇಲ್ಲಿ ವಿವೇಚಿಸಲಾಗಿದೆ. ಕರೆಯುವಾಗ ಇಲ್ಲವೆ ಕೂಗುವಾಗ ಉಪಯೋಗಿಸುವ ಪದಗಳು ಸಂಬೋಧನೆಗಳಾಗಿವೆ. ವ್ಯಾಕರಣ ವರ್ಗಗಳಲ್ಲಿ ಸಂಬೋಧನೆಗಳು ಅವ್ಯಯಗಳ ಕಕ್ಷೆಯಲ್ಲಿ ಬರುತ್ತವೆ. ಕೇಶಿರಾಜ ಹಳಗನ್ನಡದಲ್ಲಿ ಬಳಕೆಯಾದ ಸಂಬೋಧನೆಗಳನ್ನು ಒಂದು ಸೂತ್ರದಲ್ಲಿ ಹೇಳಿದ್ದಾನೆ.

ಸ್ಮರಣ ವಿಚಾರಾ ಮಂತ್ರಣ
ಪರಿಗತ ಮೆನಸಿರ್ಪುವೆಲೆಲೆಏ ಎಂಬಿವು ಸಂ
ಚರಿಸುವುದನುದನು ಮತದೊಳ್
ಲ್ಲರಿ ನೇಕಾರ ಮದೆಕಾರ ಮವಧಾರಣೆಗೊಳ್ (ಸೂ. ೩೨೬)

ಇದರರ್ಥ ‘ಎ’, ‘ಎಲೆಲೆ’, ‘ಏ’ ಎಂಬಿವು ಸ್ಮರಣೆ, ವಿಚಾರ ಹಾಗೂ ಸಂಬೋಧನೆ ಎಂಬರ್ಥಗಳಲ್ಲಿ ಬಳಕೆಯಾಗುತ್ತವೆ. ‘ಗಡ’ ಎಂಬುದು ಉಚಿತ ಸಂಭಾಷಣೆಯಲ್ಲಿ ಪ್ರಯೋಗವಾಗುತ್ತದೆ ಎಂದಿದ್ದಾನೆ. ಹಳಗನ್ನಡದ ಕಾವ್ಯಗಳಲ್ಲಿ ‘ಏನಿಂ’, ‘ಗಡಿಂ’ ಎಂಬ ರೂಪಗಳು ಸಂಬೋಧನೆಯಲ್ಲಿ ಬಳಕೆಯಾಗಿವೆ. ‘ಏನಿ’ ಸಂಬೋಧನೆಯ ಪ್ರಯೋಗ ನಡುಗನ್ನಡದಲ್ಲಿದೆ. ‘ಏನಿ ಪಶುಪತಿ ಭಟ್ಟರೇ ಸುಖದೊಳಿರ್ದಿರೆ’ (ನಂಬಿಯಣ್ಣನ ರಗಳೆ) ‘ಏನಿ ಬಿಜಯಂ ಗೈದಿದೆ’ (ಜೈಮಿನಿ ಭಾರತ) ಗಡಿಂ ಎಂಬುದು ಹಳಗನ್ನಡದಲ್ಲಿದ್ದಂತೆಯೇ ನಡುಗನ್ನಡದಲ್ಲಿಯೂ ಇದೆ. (ವಿವರಣೆಗಾಗಿ ನೋಡಿ ತೀ.ನಂ.ಶ್ರೀಕಂಠಯ್ಯ ‘ಏನಿ – ಗಡಿಂ – ರೀ’ ಸಮಾಲೋಕನ) ಏನ್ + ಇಂ= ಏನಿಂ > ಏನಿ ಆಗಿದೆ. ಹಳಗನ್ನಡದ ಅಂತ್ಯ ಬಿಂದು ನಡುಗನ್ನಡದಲ್ಲಿ ಲೋಪವಾಗುವುದು.

ಸಾಮಾನ್ಯವಾಗಿ ‘ಗಡ’ ಎಂಬ ಹಳಗನ್ನಡ ಅವ್ಯಯಕ್ಕೆ ‘ಇಂ’ ಆಖ್ಯಾತ ಪ್ರತ್ಯಯ ಸೇರಿ ‘ಗಡಿಂ’ ಆಗಿದೆ.

[ಗಡ+ ಇಂ+ ಗಡಿಂ, ಗಡ + ಇ = ಗಡಿ]. ಈ ಎರಡು ರೂಪಗಳು ಪ್ರೇಕ್ಷಕರ ಗಮನವನ್ನು ಸೆಳೆಯಲ್ಲಿಕ್ಕೆ ಬಳಕೆಯಾಗಿವೆ. ಇಲ್ಲೆಲ್ಲ ಬಹುವಚನದ ಸಂಬೋಧನೆಯಿದೆ ಎಂಬುದನ್ನು ಗಮನಿಸಬೇಕು.

ಏಡ್ರಿ ಅಡಿವೆಪ್ಪ ಆರಾಮ ಇದ್ದೀರಾ
ಏಡ್ರಿ ಅಕ್ಕಾರ್ ಅಡಿಗೆ ಆಯ್ತಾ

ವ್ಯಾಕರಣದ ದೃಷ್ಟಿಯಿಂದ ಯೋಚಿಸಿದರೆ ‘ಏನ್’ ಸರ್ವನಾಮ. ಆದರೆ ಏನಿಂ (ಏನಿ) ಎಂಬಲ್ಲಿ ಅದು ಅವ್ಯಯದಂತೆ ಪ್ರಯೋಗವಾಗುತ್ತದೆ. ಹೊಸಗನ್ನಡ ‘ಏಡ್ರಿ’ ಎಂಬುದು ಏನಿಂ (ಏನಿ) ಎಂಬ ರೂಪಕ್ಕೆ ಸಮಾನವಾಗಿದೆ. ಹೊಸಗನ್ನಡದ ಬಳಕೆಯ ಮಾತಿನಲ್ಲಿ ಏನ್ರಿ ಎಂಬಂತೆಯೇ ಯಾಕ್ರಿ, ಬೇಕ್ರಿ, ಹಾಕ್ರಿ ಎಂಬ ರೂಪಗಳು ಬಳಕೆಯಲ್ಲಿವೆ. ಇಲ್ಲೆಲ್ಲ ಯಾಕೆ, ಬೇಕು, ಹಾಕು, ರೂಪಗಳಲ್ಲಿ ‘ರೀ’ ಎಂಬುದು ಸೇರಿದೆ. ಅಷ್ಟೇ ಅಲ್ಲ. ‘ರೀ’ ಎಂಬುದೇ ಸ್ವತಂತ್ರ ಸಂಬೋಧನಾರ್ಥದಲ್ಲಿ ಪ್ರಯೋಗವಾಗುದುಂಟು.

ರೀ (ರಿ) ಕೂಸ್ ಅಳಾಕ್ ಹತ್ತತಿ ಎತ್ತಿಕೊಳ್ಳಿರಿ
ರೀ (ರಿ) ಆಫೀಸಿಗೆ ಟೈಯಂ ಆಯ್ತ ನೋಡ್ರಿ

ಹೆಂಡಂದಿರರು ಗಂಡಿದರನ್ನು ಹೆಸರು ಹಚ್ಚಿ ಕರೆಯುವುದಿಲ್ಲ. ‘ರೀ’ (ರಿ) ಎಂದೇ ಸಂಬೋಧಿಸುವುದುಂಟು. (ಹೆಸರು ಹಚ್ಚಿ ಕರೆದರೆ ಗಂಡನ ಆಯುಷ್ಯ ಕಡಿಮೆಯಾಗುವುದು ಎಂಬ ನಂಬಿಕೆ ಇದೆ.) ಹೊಸಗನ್ನಡದ ‘ರೀ’ ಎಂಬುದು ಆಧುನಿಕಪೂರ್ವ ಕನ್ನಡದ ಇರ್ (<ಇ)ಗೆ ಪ್ರತಿನಿಧಿಯಾಗಿ ಪ್ರಯೋಗವಾಗುತ್ತದೆ. ‘ಇರ್’ ಸ್ವರಾಂತ್ಯದಲ್ಲಿ ‘ಇರಿ’ ಆಗಿದೆ. [ಬಂದಿರ್ > ಬಂದಿರಿ]. ವಚನಗಳಲ್ಲಿ, ಕೀರ್ತನೆಗಳಲ್ಲಿ ಏಕತಾನತೆಯನ್ನು ಮುರಿಯಲು ಆತ್ಮೀಯವಾಗಿ ಸಂಭಾಷಣೆ ಶುರುವಾಗುತ್ತದೆ. ಆ ಸಂದರ್ಭದಲ್ಲಿ ಎಲೋ, ಎಲವೋ, ಅಣ್ಣಗಳಿರಾ, ಭೋ ರೋ ಮೊದಲಾದ ಸಂಬೋಧನಾ ರೂಪಗಳು ಬಳಕೆಯಾಗುತ್ತವೆ. ಇವು ವಚನ ಮತ್ತು ಕೀರ್ತನೆಗಳ ವೈಶಿಷ್ಟ್ಯಗಳಾಗಿವೆ.

ಆಧುನಿಕ ಪೂರ್ವ ಸಾಹಿತ್ಯದಲ್ಲಿ ‘ಅಬ್ಬೆ’ ಎಂಬುದಕ್ಕೆ ‘ತಾಯಿ’ ಎಂಬರ್ಥವಿತ್ತು. (ಚಲಬ್ಬೆ, ಅತ್ತಿಮಬ್ಬೆ). ಕಿತ್ತೂರು ಕರ್ನಾಟಕದಲ್ಲಿ ವಯಸ್ಸಾದ ಸ್ತ್ರೀಯರನ್ನು ಗೌರವದಿಂದ ಸಂಬೋಧಿಸುವಾಗ ‘ಬೇ’ ಎಂಬುದನ್ನು ಬಳಸುವುದುಂಟು. ಅದು ಹಿಂದನ ‘ಅಬ್ಬೆ’ಯ ಅವಶೇಷವಾಗಿದೆ ಅಥವಾ ಸವಕಳಿ ರೂಪವಾಗಿದೆ.

ಯಮ್ಮಾ ಬೇ ಊಟಕ್ ಹಚ್ಚಬೇ ’‘ಯವ್ವಾ ಬೇ ಹಾಡ ಬೇ
ಯತ್ತಿ ಬೇ ಬಾರ ಬೇ

ಬ್ರಾಹ್ಮಣರನ್ನು ಹೊರತುಪಡಿಸಿ ಎಲ್ಲ ಜಾತಿ, ವರ್ಗದವರು ಬೇ ರೂಪವನ್ನು ಬಳಸುತ್ತಾರೆ. ಕಿತ್ತೂರು ಕರ್ನಾಟಕದಲ್ಲಿ ‘ಅ’ ಕಾರಾದಿ ಬಂಧುವಾಚಕಗಳನ್ನು ಸಂಬೋಧಿಸುವಾಗ ‘ಯ’ ಕಾರಾದಿಯಾಗಿ ಬಳಕೆಯಾಗುತ್ತವೆ.

ಯವ್ವಾ ಬೇ ಬಾರ ಬೇ
ಯಮ್ಮ ತಿನ್ನಾಕ ಏನ ಅತಿ ಬೇ
ಯಪ್ಪ ರೊಕ್ಕಾ ಕೊಡ್

ಇದೇ ರೀತಿ ಯತ್ತಿ (ಅತ್ತೆ), ಯಕ್ಕ (ಅಕ್ಕ), ಯಜ್ಜ (ಅಜ್ಜ), ಕಿತ್ತೂರು ಕರ್ನಾಟಕ ಪ್ರದೇಶದಲ್ಲಿ ವಯಸ್ಸಾದ ಪುರುಷರನ್ನು ಸಂಬೋಧಿಸುವಾಗ ‘ಪೋ’ / ‘ಪೋ’ ಎಂಬ ರೂಪಗಳನ್ನು ಬಳಸುವುದುಂಟು.

ಯಜ್ಜಾ ಪೋ (ಪೊ) ಯಾಳೆ ಆಗೇತಿ ಮನಿಗಿ ಹೋಗ್ ಪೋ

ಇದೇ ರೀತಿ ‘ಯಪ್ಪಾ ಪೋ’, ‘ಮಾವಾ ಪೋ’ ವಯಸ್ಸಾದ ಸ್ತ್ರೀಯರನ್ನು ಸಂಬೋಧಿಸುವಾಗ ‘ವೋ’ / ‘ವೊ’ ಬಳಸುವುದುಂಟು. ‘ಯಮ್ಮಾವೋ ಯಾಳೆ ಆಗೇತಿ ರೊಟ್ಟಿ ಮಾಡವೋ.’

ಮೈಸೂರು ಜಿಲ್ಲೆಯ ಹುಣಸೂರ ಪ್ರದೇಶದ ಕನ್ನಡ ಮಾತಾಡುವ ವಿವಿಧ ಜಾತಿಯವರು (ಮೇಲ್ಜಾತಿ – ಬ್ರಾಹ್ಮಣ, ಲಿಂಗಾಯತ,ಕ ಮಧ್ಯಮ ಜಾತಿ೦ – ತೋರೇರ, ಉಪ್ಪಾರ, ಈಡಿಗ, ಕೆಳಜಾತಿ – ಹೊಲೆಯ, ಮಾದಿಗ), ‘ಣೇ, ಮೀ ಲೇ ’ ಎಂಬ ವಿಶಿಷ್ಟ ಸಂಬೋಧನಾ ರೂಪಗಳನ್ನು ಬಳಸುತ್ತಾರೆ. ಡಿ. ಪಾಂಡುರಂಗಬಾಬುರವರು ಅವುಗಳ ಸ್ವರೂಪ ಹಾಗೂ ಬಳಕೆಯ ಸಂದರ್ಭವನ್ನು ಗುರುತಿಸುತ್ತಾರೆ.* ‘ಣೇ’ ರೂಪವನ್ನು ಮಧ್ಯಮ ಜಾತಿಯವರು ತಮ್ಮೊಳಗೆ ಮಾತ್ರ ಬಳಸುತ್ತಾರೆ.

ಣೇ ವಸಿಯಸುರ್ಕೊಡು (ಸ್ವಲ್ಪ ಸಾರು ಕೊಡು)
ಬಾಣೇ (ಬಾರೇ)
ಕಿರಿಯರು ಹಿರಿಯರೊಂದಿಗೆ ಮಾತಾಡುವಾಗಲೂ ಣೇ ಬಳಕೆಯಾಗುತ್ತದೆ.
ಅತ್ತೆ ಹೆಣ್ ಕೊಟ್ಟಿಣೇ (ಅತ್ತೆ ಹೆಣ್ಣು ಕೊಡುವೆಯಾ)

ಮೇಲ್‌ ಸ್ತರದವರು ಕೆಳಸ್ತರದವರನ್ನುದ್ದೇಶಿಸಿ ಮಾತನಾಡುವಾಗ ‘ಮೀ’ ರೂಪದ ಬಳಕೆ ಕಂಡುಬರುತ್ತದೆ.

ಮೀ ನಿಂತ್ಕೋ (ಲೇ ನಿಂತಕೋ)

‘ಲೇ’ ರೂಪ ಮೇಲ್ಜಾತಿಯವರಲ್ಲಿ ಬಳಕೆಯಾಗುತ್ತದೆ. ಇದು ಆ ಪ್ರದೇಶದ ವ್ಯಾವಹಾರಿಕ ಶಿಷ್ಟ ಕನ್ನಡದಲ್ಲಿ ಬಳಕೆಯಾಗುತ್ತದೆ.

ಲೇ ಬಾ ಇಲ್ಲಿ
ಲೇ ಅಕ್ಕಾ ಕಾಸುಕೊಡೆ

ಕಲ್ಯಾಣ ಕರ್ನಾಟಕದಲ್ಲಿ ‘ಈಗಾ’ ಎಂಬುದು ಸಂಬೋಧನೆಯಲ್ಲಿ ಬಳಕೆಯಾಗುತ್ತದೆ. ‘ಈಗಾಬಾಯಿಲ್ಲಿ’. ‘ಈಗಾನೋಡು’ ಗಮನ ಸೆಳೆಯುವುದಕ್ಕಾಗಿ ಇದು ಬಳಕೆಯಾಗುತ್ತಿರಬಹುದು. ಶಿಕ್ಷಣ ಮತ್ತು ಆಧುನೀಕರಣ ಪ್ರಕ್ರಿಯೆಯಿಂದಾಗಿ ಇಂತಹ ಸಂಬೋಧನಾ ರೂಪಗಳ ಬಳಕೆ ಕಡಿಮೆಯಾಗುತ್ತಿದೆಯಾದರೂ ಗ್ರಾಮೀಣ ಪ್ರದೇಶದ ಕೃಷಿ ಕಾರ್ಮಿಕರ ಆಡುನುಡಿಯಲ್ಲಿ ಇವುಗಳನ್ನು ಗಮನಿಸಬೇಕಾಗಿದೆ. ಯಕ್ಷಗಾನ ಬಯಲಾಟಗಳಲ್ಲಿ ‘ಎಲವೋ’ ಎಂಬ ರೂಪ ಬಳಕೆಯಾಗುತ್ತಿದೆ.

ಎಲವೋ ಸೂತನ ಮಗನೇ ನೀ
ಕಲಹದೊಳತಿ ಸಹಸಿಗನೇ

ಪ್ರೇಕ್ಷಕರ ಗಮನವನ್ನು ಸೆಳೆಯುವುದು ಇವುಗಳ ಮುಖ್ಯ ಉದ್ದೇಶವಾಗಿರುತ್ತದೆ.

ಮರಾಠಿ ಮೂಲದಿಂದ ಬಂದಿರುವ ‘ಬಾಯಿ’ ರೂಪ ಪ್ರತಿಷ್ಠಿತ ವರ್ಷದ ಸ್ತ್ರೀ ವ್ಯಕ್ತಿ ನಾಮಗಳ ಕೊನೆಯಲ್ಲಿ ಬರುತ್ತದೆ. ಶಾರದಾಬಾಯಿ, ಜೀಜಾಬಾಯಿ, ಕಸ್ತೂರಿಬಾಯಿ ಅವರನ್ನು ‘ಬಾಯಿ’ ಎಂದೇ ಸಂಬೋಧಿಸುವುದುಂಟು.

ಬಾಯಿಯವರೇ ಸಾಹೇಬರು ಇದ್ದಾರೆಯೇ?

ಗಂಡಂದಿರರು ತಮ್ಮ ಹೆಂಡಂದಿರಿಗೆ ಬಾಯಿ ಎಂದೇ ಸಂಬೋಧಿಸುವುದುಂಟು.

ಮನೆತನದ ಜವಾಬ್ದಾರಿ ಬಾಯಿಯವರೇ ಮಾಡ್ತಾರ
ಬಾಯಿ ಅವರೇ ತರಕಾರಿ ಏನು ತರಬೇಕು?

ಇತ್ತಿತ್ತಲಾಗಿ ‘ಬಾಯಿ’ ರೂಪ ಸಂಕುಚಿತ ಅರ್ಥವನ್ನು ಪಡೆದಿದೆ. ಆಸ್ಪತ್ರೆಯಲ್ಲಿಯ ದಾದಿಯರಿಗೆ ಮಾತ್ರ ಬಳಕೆಯಾಗುತ್ತದೆ. ಅಧಿಕಾರಿಗಳನ್ನು ಕುರಿತು ಮಾತನಾಡುವಾಗ ‘ಸಾಹೇಬ’ ಎಂಬ ಅರೇಬಿಕ್ ರೂಪ ಬಳಕೆಯಾಗುತ್ತದೆ.

‘ಸಾಹೇಬರೇ ನಾಳೆ ಆಫೀಸಿಗೆ ಬುರುವುದಿಲ್ಲ’
ಬಿದರಿ ಸಾಹೇಬರು ಬಾಳ ಚಲೋ ಅಧಾರ

ಸಾಹೇಬ ಪದದ ಬಳಕೆಯ ಹಿಂದೆ ಸಾಮಾಜಿಕ ಬದ್ಧತೆ ಇದೆ. ಇಂಗ್ಲಿಶ್ ಭಾಷೆಯ ಪ್ರಭಾವದಿಂದಾಗಿ ಸರ್, ಮಿಸ್ಟರ್, ಮೇಷ್ಟ್ರ ರೂಪಗಳು ಪರಿಚಿತ ಹಾಗೂ ಅಪರಿಚಿತರನ್ನುದ್ದೇಶಿಸಿ ಮಾತನಾಡುವಾಗ ಬಳಕೆಯಾಗುವುದುಂಟು.

ಏನ್ರಿ ಸರ್ ಅಥವಾ ಮೇಷ್ಟ್ರೇ ಚನ್ನಾಗಿದ್ದೀರಾ
ಗಾಣಿಗಿಸರ್ ಚೆನ್ನಾಗಿ ಪಾಠ ಮಾಡುತ್ತಿದ್ದರು.

ಸಮ ವಯಸ್ಕರರು ಜಗಳಾಡುವ ಸಂದರ್ಭದಲ್ಲಿ ‘ಮಿಸ್ಟರ್’ ರೂಪ ಬಳಕೆಯಾಗುವುದುಂಟು.

ಮಿಸ್ಟರ್ ಸರಿಯಾಗಿ ಮಾತಾಡು
ಮಿಸ್ಟರ್ ಬಾ ಇಲ್ಲಿ

ದೂರವಾಣಿಯಲ್ಲಿ ಕರೆ ಬಂದಾಗ ಮಾತಾಡುವುದಕ್ಕಿಂತ ಮುಂಚೆ ‘ಹಲೋ’ ಎಂದು ಹೇಳುವುದುಂಟು. ಭಾಷಿಕರ ಗಮನ ಸೆಳೆಯುವುದೇ ಅದರ ಉದ್ದೇಶವಾಗಿದೆ.

ಹಲೋ ಸರ್ ನಾನು ಬಿದರಿ ಅವರು ಮಾತನಾಡುವುದು.
ಚನ್ನಾಗಿದ್ದೀರಾ ಸರ್
ಹತ್ತೋ ಮತ್ತೇನು ವಿಶೇಷ

ಅಂಗವಿಕಲರನ್ನುದ್ದೇಶಿಸಿ ಮಾತನಾಡುವಾಗ ಅವರ ಊನವಾದ ಭಾಗವನ್ನು ಅನುಲಕ್ಷಿಸಿ ಸಂಬೋಧಿಸುವುದುಂಟು.

ಕುಂಟಾ ಎಲೆ ಅಡಕೆ ತಗೊಂದ ಬಾರಲೇ
ಕುಡ್ಡ ಇಲ್ಲಿ ಬಾ
ಎಲೆ ಕಿವುಡ, ಕಡೆ ಬಾರಲೇ

ದ್ವೇಷ, ಅಸೂಯೆ, ಜಗಳ, ಇಂತಹ ಆವೇಶದ ಸಂದರ್ಭದಲ್ಲಿ ಪ್ರಾಣಿ ಸೂಚಕಗಳನ್ನು ಬಳಸಿ ಸಂಬೋಧಿಸುವುದುಂಟು.

ನಾಯಿ ಅಂತಹದೇ ಹೋಗಾಚೆ
ಕತ್ತೆ ಮಂಗ್ಯಾ
ಹಂದಿ ಹಾಗೆ ಗಫ್ ಗಫ್ ತಿನ್ನಬಾರದು

ಅಪ್ಪ, ಅವ್ವ, ಅಣ್ಣ, ತಮ್ಮ, ತಂಗಿ, ಚಿಕ್ಕಪ್ಪ, ದೊಡ್ಡಪ್ಪ ಅತ್ತೆ ಈ ಬಂಧುವಾಚಕಗಳು ಸಂಬೋಧನೆಯಲ್ಲಿಯೂ ಇನ್ನೊಬ್ಬರಿಗೆ ಪರಿಚಯಿಸುವಾಗಲೂ ಬಳಕೆಯಾಗುತ್ತವೆ.

ಅತ್ತಿ ನೀರ ಬಂದಿವೆ ಕ್ವಡಾಕೊಡು
ತಂಗಿ ಹೊಲಕ್ಕ ಹೋಗಿ ರೊಟ್ಟಿ ಕೊಟ್ಟ ಬಾರಮ್ಮ
ಇವರು ನಮ್ಮ ಅತ್ತಿಯವರು.’

ಸೊಸೆ, ನಾದಿನಿ, ನೆಗೆಣ್ಣಿ, ಮೈದುನ, ಅತ್ತಿಗೆ, ಷಡ್ಡಕ್, ಇಂತಹ ಬಂಧುಸೂಚಕಗಳು ಸಂಬೋಧನೆಯಲ್ಲಿ ಬಳಕೆಯಾಗುವುದಿಲ್ಲ. ಇನ್ನೊಬ್ಬರಿಗೆ ಪರಿಚಯಿಸುವಾಗ ಬಳಕೆಯಾಗುತ್ತವೆ.

ಇವರು ನಮ್ಮ ನಾದುನಿ ಜಮಖಂಡಿಯಲ್ಲಿ ಇರ್ತಾರ
ಇವರು ನಮ್ಮ ಮೈದುನರು’.

ಮಕ್ಕಳು ಬಳಸುವ ಸಂಬೋಧನೆಯಲ್ಲಿ ಪ್ರಾದೇಶಿಕ ವ್ಯತ್ಯಾಸಗಳು ಕಂಡುಬರುತ್ತವೆ. ಗ್ರಾಮೀಣ ಪ್ರದೇಶದ ಮಕ್ಕಳು ಯಪ್ಪಾ, ಯವ್ವಾ, ತಮ್ಯಾ ಎಂದು ಸಂಬೋಧಿಸಿದರೆ ನಗರ ಪ್ರದೇಶದ ಮಕ್ಕಳು ಅಪ್ಪಾಜಿ, ಅವ್ವಾರಿ, ಅಕ್ಕಾರಿ ಎಂದು ಸಂಬೋಧಿಸುವುದುಂಟು. ಹಳೆ ಮೈಸೂರು ಕಡೆಗೆ ಮಕ್ಕಳನ್ನು ‘ಅಮ್ಮಿ’ ಎಂದು ಸಂಬೋಧಿಸುವುದುಂಟು. ‘ಅಮ್ಮಿ ಬಾ ಇಲ್ಲಿ’, ‘ಏನಮ್ಮ ಅಮ್ಮಿ ಹೇಗಿದ್ದೀಯಾ’, ನಾಮವಾಚಕ, ಗುಣವಾಚಕಗಳ ಕೊನೆಯ ಸ್ವರವನ್ನು ದೀರ್ಘ ಮಾಡಿದರೆ ಸಂಬೋಧನೆಯಾಗುವುದುಂಟು.

ಅಣ್ಣಾ ಯಣ್ಣಾ ()
ಅಣನೇ ()
ಅಣಂದಿರಾ (ಇರಾ)
ಚಿಕ್ಕವನೇ ಳೇ ()

ಗೌರವಾರ್ಥದಲ್ಲಿ ಕೆಲವು ಶಬ್ದಗಳ ಮುಂದೆ ‘ಅವರು’ ಎಂಬ ಬಹುವಚನ ರೂಪ ಬರುತ್ತದೆ. ಆಗ ‘ಯ್, ನ್’ ಆಗಮಗಳಾಗುವುದು. ಗಾಂಧೀಜಿಯವರೇ, ಅಮ್ಮನವರೇ ಮುಂತಾದವು.

ಭಾಷಿಕರು ಕೆಲವು ಸಂದರ್ಭದಲ್ಲಿ ಅಂದರೆ ಧಾರ್ಮಿಕ ವಿಷಯಗಳನ್ನು ಚರ್ಚಿಸುವಾಗ, ಹಬ್ಬ – ಹರಿದಿನ, ಮದುವೆ – ಜಾತ್ರೆಗಳಲ್ಲಿ ಉಲ್ಲಾಸವಾದಾಗ, ಕೌಟುಂಬಿಕ ತೊಂದರೆಗಳು ಬಂದಾಗ ಅದರಂತೆ ಕೋಪ, ದುಃಖ, ಭಯ, ತಿರಸ್ಕಾರ, ಮೆಚ್ಚುಗೆ, ಆಕ್ಷೇಪ ಇಂತಹ ಆವೇಶದ ಸನ್ನಿವೇಶಗಳಲ್ಲಿ ಅಥವಾ ಅಂತಹ ಮನೋಭಾವಗಳನ್ನು ವ್ಯಕ್ತಪಡಿಸುವಾಗ ಅರ್ಥವಿಲ್ಲದ ಶಬ್ದಗಳನ್ನು ಬಳಸುತ್ತಾರೆ. ಅವುಗಳು ‘ಭಾವಸೂಚಕಾವ್ಯಯ’ಗಳೆನಿಸುವವು. ಅಯೋ, ಅಕ್ಕಟಾ, ಅಕಟಕಟಾ, ಆಹಾ, ಭಲೆ, ಭಲಾ, ಛೇ, ಥೂ, ಅಬ್ಬಾ, ಅಹಹಾ, ಆಹಾ, ಓಹೋ, ಹೋ, ಹೋಹೋ, ಅಃ ಆಃ, ಓ, ಏ, ಚೀ, ಥು. ಮುಂತಾದವು. ಕೆಲವು ಭಾಷಿಕ ಸಂದರ್ಭಗಳಲ್ಲಿ ಬೈಗಳು ರೂಪಗಳೇ ಸಂಬೋಧನೆಗಳಾಗುತ್ತವೆ. ‘ಏ ಐಯ್ಯ’, ‘ಏ ತುರುಕ’, ‘ಏ ಮಗನೆ, ಬಾರಲೇ ನಿನ್ನ ಐದೇಶಿ ಬಲ್ಲೇ’ ಮುಂತಾದವುಗಳು. ಗ್ರಾಮೀಣರ ಬದುಕಿನಲ್ಲಿ ಭಾಷೆ ನಿರರ್ಗಳವಾಗಿ ಮಡಿಯಿಲ್ಲದೆ, ನಯನಾಜೂಕುಗಳ ಪರಿವಿಲ್ಲದೆ ಅಭಿವ್ಯಕ್ತವಾಗುತ್ತದೆ. ಆವೇಶದ ಸಂದರ್ಭದಲ್ಲಿ ಬಳಕೆಯಾಗುವ ಸಂಬೋಧನೆಯ ರೂಪಗಳನ್ನು ಭಾಷಿಕರು ವೇಗೋಚ್ಚಾರವಾಗಿ ಹಾಗೂ ಪದಗಳನ್ನು ಮೊಟಕುಗೊಳಿಸಿ ಉಚ್ಚರಿಸುತ್ತಾರೆ.

ಕನ್ನಡದಲ್ಲಿ ಬಳಕೆಯಾಗುವ ಸಂಬೋಧನೆಗಳನ್ನು ಹೀಗೆ ಗುರುತಿಸಬಹುದು. ‘ಲೇ / ಲೆ’ ಎಂಬ ರೂಪಗಳು ಹಳೇ ಮೈಸೂರು ಕಡೆಗೆ ತಂದೆ / ತಾಯಿಯನ್ನು ಕರೆಯುವಾಗ ಬಳಕೆಯಾಗುತ್ತದೆ. ಅಪಾಲೇ, ಅವ್ವಾಲೇ ಇದೇ ರೂಪವನ್ನು ಕಿತ್ತೂರು ಕರ್ನಾಟಕದ ಕಡೆಗೆ ಆತ್ಮೀಯ ಗೆಳೆಯರನ್ನು ಕರೆಯುವಾಗ ಮಾತ್ರ ಬಳಕೆಯಾಗುತ್ತದೆ. ಯಲ್ಲಾಲೇ, ಕಮಲೀಲೇ, ಇಂತಹ ಕೆಲವು ವ್ಯತ್ಯಾಸವನ್ನು ಬಿಟ್ಟರೆ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ವಯಸ್ಸು, ಲಿಂಗ, ಸಾಮಾಜಿಕ ವರ್ಗಗಳನ್ನಾಧರಿಸಿ ಪೋ / ಪೋ, ವೋ / ವೋ, ಬೇ, ರೀ, ಏನೂಂದ್ರೆ, ಎಲೊ / ಎಲೋ, ಎಲಾ, ಎಲೌ, ಓ. ಎಲೆ / ಎಲೇ, ಎ / ಏ, ಎಲೆಲೆ, ಎಲೈ, ಅಮ್ಮಾವರೇ, ಅಣ್ಣಾವರೇ, ಸರ್, ಭಾಯಿ, ಹಲೋ, ಮೇಷ್ಟ್ರ, ಸಾಹೇಬ್ ಇಂತಹ ಸಂಬೋಧನೆಗಳು ವಿಭಿನ್ನ ಸಂದರ್ಭ, ಸನ್ನಿವೇಶಕ್ಕೆ ತಕ್ಕಂತೆ ಬಳಕೆಯಾಗುತ್ತವೆ. ಸಂಬೋಧನೆಗಳಿಂದಲೇ ಭಾಷಿಕರ ಪ್ರದೇಶವನ್ನು ಅವರ ಮನೋವೃತ್ತಿಗಳನ್ನು ಹಾಗೂ ಬೇರೆ ಭಾಷಿಕರೊಡನೆ ಹೊಂದಿರುವ ಅವರ ಸಾಮಾಜಿಕ ಸಂಬಂಧವನ್ನು ಗುರುತಿಸಬಹುದು.* ವಿವರಣೆಗಾಗಿ ನೋಡಿ – ಡಿ. ಪಾಂಡುರಂಗಬಾಬು ‘ಣೇ ಮೀ ಲೇ’ ಕನ್ನಡ ಅಧ್ಯಯನ ಮಳೆ ಸಂಚಿಕೆ ೧೯೯೮