ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೇ ಕನ್ನಡಿಗ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನೂ ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯಪೂರ್ಣವೂ ಆಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿದಾನ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡ ಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಬೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ, ನಾಡಿನ ಕೋಟಿ ಕೋಟಿ ಶ್ರೀ ಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸದ್ಭಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಧಾನ್ವಿಕ ಕಾಯಕ ಇದರ ದಾರಿಯಾಗಿದೆ.

ಕನ್ನಡ ನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿಶ್ವವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡ ನಾಡಿನ ಯಾತ್ರೆ ಸಂಪೂರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾಸಂಸ್ಥೆ ಇದು. ಕನ್ನಡ ಪ್ರಜ್ಞೆ ತನ್ನ ಸತ್ವ ಮತ್ತು ಸ್ವತ್ವದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; ವಿಶ್ವಪ್ರಜ್ಞೆ ಕನ್ನಡ ದೇಶೀಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು ಸಮರಸಗೊಂಡು ಸಾಕ್ಷಾತ್ಕಾರಗೊಳ್ಳಬೇಕು ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಉಸಿರಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡ ಮಾನವ ವಿಶ್ವಮಾನವನಾಗಿ ಬೆಳೆಯಲು ಸಾಧನವಾಗಬೇಕು. ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾಪಂಥವನ್ನು ಕ್ರಮಿಸುವುದು ನಮ್ಮ ವಿಶ್ವವಿದ್ಯಾಲಯದ ಮಹತ್ತರ ಆಶಯ.

ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿ ಸತ್ವಪೂರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪುಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಶೇಷ ಹೊಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವಕ್ಕೆ ಬಂದಿದೆ. ಶ್ರವ್ಯ, ದೃಶ್ಯ ಮತ್ತು ವಾಚನ ಸಾಮಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಈಗಾಗಲೇ ೬೦೦ ಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ವೈಶಿಷ್ಟಮಯ ಕೃತಿಗಳ ಮೂಲಕ ಕನ್ನಡ ಗ್ರಂಥಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ವಲಿಸಿರುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತಿದೆ.

ಭಾಷಿಕ ಜಗತ್ತು ಅತ್ಯಂತ ಕುತೂಹಲಕರವಾದ, ಅದ್ಭುತವಾದ ಮತ್ತು ಸೂಕ್ಷ್ಮವಾದ ಒಂದು ಜಗತ್ತು. ಮಾನವನ ಶೈಶವದಲ್ಲಿ ಅವನ ಅಲ್ಪ ಪ್ರಮಾಣದ ಮತ್ತು ಅತ್ಯಗತ್ಯವಾದ ಭೌತಿಕ ಅನುಕೂಲಗಳಿಗಾಗಿ ಮೊಳಕೆಗೊಂಡು, ಅವನ ಭೌತಿಕ ಪ್ರಪಂಚದೊಡನೆ ಬೌದ್ಧಿಕ ಪ್ರಪಂಚವೂ ಮಿಳಿತಗೊಂಡು ವಿಸ್ತಾರವಾಗುತ್ತಾ ಬಂದಂತೆ ತಾನು ಕಂಡ ಮತ್ತು ಅನುಭವಿಸಿದ ನೋಟಗಳನ್ನು, ಅನುಭವಗಳನ್ನು, ಸಂವೇದನೆಗಳನ್ನು ಅನ್ಯರಿಗೆ ಸಂವಹನಗೊಳಿಸಲು ಸಹಜ ಸ್ಪೂರ್ತ ಹೊಳಹುಗಳ ಪ್ರಯತ್ನ ಮತ್ತು ಪರಿಶ್ರಮಗಳ ಮೂಲಕ ಹೊಸ ಭಾಷೆಯನ್ನು ಸೃಷ್ಟಿಸಿಕೊಳ್ಳುತ್ತ ಹೋದ. ಮಾನವ ಜಗತ್ತು ವಿಸ್ತಾರವಾದಂತೆಲ್ಲ ಹಾಗೂ ಭಿನ್ನ ಭಿನ್ನ ನೆಲಗಳಲ್ಲಿ ಹಾಗೂ ಪರಿಸರದಲ್ಲಿ ವಾಸಿಸುತ್ತಾ ಹೋದಂತೆಲ್ಲ ಅವು ವ್ಯಕ್ತಿಗತವಾದ, ಕುಟುಂಬಗತವಾದ, ಸಮಾಜಗತವಾದ, ಪರಿಸರಗತವಾದ ಬದಲಾವಣೆಗಳನ್ನು ಹೊಂದುತ್ತಾ ಅಪಾರ ವೈವಿಧ್ಯವನ್ನು ಧಾರಣಮಾಡಿಕೊಳ್ಳುತ್ತ ಬೆಳೆದವು. ತನ್ನ ಮನದೊಳಗೆ ಮತ್ತು ಹೊರಗೆ ಹುಟ್ಟುವ ಎಲ್ಲ ಅನುಭವಗಳನ್ನು ಭಾಷೆಯ ತೆಕ್ಕೆಯೊಳಗೆ ತೆಗೆದುಕೊಂಡು ಅವುಗಳ ಉದ್ದೇಶವನ್ನು ಅನ್ಯರಿಗೆ ಅತ್ಯಂತ ಖಚಿತವಾಗಿ, ಸ್ಪಷ್ಟವಾಗಿ ರವಾನಿಸುವ ಅವನ ಉದ್ದೇಶ ಬಲಗೊಂಡಂತೆಲ್ಲ ಭಾಷೆ ಮತ್ತು ಅದರ ವಿವಿಧ ಸೂಕ್ಷ್ಮಾಂಗಗಳು ಪ್ರತ್ಯೇಕ ರೂಪುಗಳನ್ನು ತಳೆಯುತ್ತ ವಿಶಿಷ್ಟಾರ್ಥ ಧಾರಣೆಮಾಡಿಕೊಳ್ಳುತ್ತ ನಡೆದವು. ಹೀಗಾಗಿ ಭಾಷೆಯಲ್ಲಿ ಅಪಾರ ವೈವಿಧ್ಯ ಮತ್ತು ವೈಶಿಷ್ಟ್ಯಗಳು ಸಂಪ್ರಾಪ್ತವಾದವು. ಇವು ಹುಟ್ಟಿದ ಬಗೆ, ರೂಪುಗೊಂಡ ಬಗೆ, ಕುಡಿಯೊಡೆದು ಚೆಲ್ಲುವರಿದ ಬಗೆ ಅತ್ಯಂತ ಸ್ವಾರಸ್ಯಕರವಾದ ಅಧ್ಯಯನದ ನೆಲೆಗಳಾದವು. ಮನುಷ್ಯನ ಪ್ರಚಂಡ ಪ್ರತಿಭಾಶಕ್ತಿ, ಸೂಕ್ಷ್ಮಗ್ರಹಣಶಕ್ತಿ ಮತ್ತು ಮೂರ್ತೀಕರಣ ಶಕ್ತಿಗಳ ಸಹಸ್ರಾರು ಟಿಸಿಲುಗಳನ್ನು ಈ ಭಾಷಾ ಲೋಕದ ಶ್ರೀಮಂತಿಕೆ ಮತ್ತು ಸಮೃದ್ಧತೆಗಳು ಬಿಂಬಿಸುತ್ತವೆ. ಹೀಗೆ ಶ್ರೀಮಂತಿಕೆ ಮತ್ತು ಸಮೃದ್ಧತೆಗಳನ್ನು ಒಟ್ಟಿಗೆ ಪಡೆದುಕೊಂಡ ಭಾಷೆಗಳಲ್ಲಿ ಕನ್ನಡವೂ ಒಂದು.

ಈ ಭಾಷೆಯ ಸ್ವರೂಪವನ್ನು ವಿವರಿಸುವ ಮತ್ತು ವಿಶ್ಲೇಷಿಸುವ ಗ್ರಂಥಗಳು ಬಹಳ ಪ್ರಾಚೀನ ಕಾಲದಿಂದಲೂ ನಮ್ಮಲ್ಲಿ ರಚಿತವಾಗಿವೆ. ಈ ಕೃತಿಗಳಲ್ಲಿ ಸಾರ್ವತ್ರಿಕವಾದ ಮತ್ತು ಸಾಮಾನ್ಯ ಸ್ವರೂಪದ ಭಾಷಿಕ ವಿವೇಚನೆ ನಿಯಮಬದ್ಧವಾಗಿ ನಡೆದಿದೆ : ಹಳೆಗನ್ನಡ, ನಡುಗನ್ನಡ ಮತ್ತು ಆಧುನಿಕ ಕನ್ನಡಗಳಲ್ಲಿಯೂ ಇಂತಹ ಕೃತಿಗಳು ಮೈವೆತ್ತಿವೆ. ಆದರೆ, ಪ್ರದೇಶ, ಪರಿಸರ, ಜಾತಿ, ವೃತ್ತಿ ಮೊದಲಾದವುಗಳಿಗೆ ಅನುಸಾರವಾಗಿ ಈ ಭಾಷೆಯ ಸ್ವರೂಪ ವ್ಯತ್ಯಸ್ತವಾಗುತ್ತ ಹೋಗುತ್ತದೆ. ಆದ್ದರಿಂದಲೇ ಕನ್ನಡದ ಭಾಷೆಯ ವೈವಿಧ್ಯಗಳನ್ನು ಲೆಕ್ಕಿಸಲು ವಾಸುಕಿಯೂ ಹಿಂಜರಿಯುತ್ತಾನೆ ಎಂಬ ಅಭಿಪ್ರಾಯ ರೂಪುಗೊಂಡಿದೆ. ಲಿಖಿತ ಭಾಷೆಯ ಸ್ವರೂಪದಲ್ಲೇ ಇಷ್ಟು ವ್ಯತ್ಯಾಸಗಳಿರುವಾಗ ಆಡುಭಾಷೆಯ ಅನಂತ ಸೂಕ್ಷ್ಮತೆಗಳನ್ನು ಸಂಪೂರ್ಣವಾಗಿ ಅಳೆಯುವುದು, ಅರ್ಥೈಸಿಕೊಳ್ಳುವುದು ಕಷ್ಟಸಾಧ್ಯದ ಮಾತು. ಭಾಷೆಯ ಅಧ್ಯಯನ ಒಂದು ವಿಜ್ಞಾನವಾಗಿ ಬೆಳೆದುಬಂದಿರುವ ಈ ದಿನಗಳಲ್ಲಿ ಅನಕ್ಷರಸ್ಥರಾದ ಕನ್ನಡ ಜನ ತಮ್ಮ ಅನುಕೂಲ ಮತ್ತು ಸನ್ನಿವೇಶಗಳಿಗಾಗಿ ಸೃಷ್ಟಿಸಿಕೊಂಡ ಬಹುಮುಖೀ ಭಾಷೆಯ ಅಧ್ಯಯನ ಮತ್ತಷ್ಟು ವ್ಯಾಪಕ ನೆಲೆಗಳ ಕಡೆಗೆ ನಮ್ಮನ್ನು ಕರೆದೊಯ್ಯುತ್ತದೆ. ದಿನನಿತ್ಯದ ವ್ಯವಹಾರದಲ್ಲಿ ಪರಸ್ಪರ ಸಂಬೋಧನೆ ಮಾಡುವಾಗ ಕಾಣಿಸುವ ಪದಾವತಾರಗಳು ಅತ್ಯಂತ ವಿಸ್ಮಯವನ್ನುಂಟುಮಾಡುತ್ತವೆ. ಈ ರೀತಿಯ ಸಂಬೋಧನಾ ವಾಚಕಗಳು ಒಂದು ಭಾಷೆಯ, ಸಮಾಜದ, ಸಂಸ್ಕೃತಿಯ ಅನನ್ಯ ಮತ್ತು ಅನಂತ ವಿನ್ಯಾಸಗಳನ್ನು ಧಾರಣ ಮಾಡಿಕೊಂಡಿರುತ್ತವೆ. ಇವುಗಳ ಸೂಕ್ಷ್ಮವಾದ ಅಧ್ಯಯನ, ಆಯಾ ಪದಗಳ ಪರಿಸರದ ಬಹುರೂಪಿ ವಿನ್ಯಾಸಗಳನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ. ಇವು ನಮ್ಮ ಸಂಸ್ಕೃತಿ ಮತ್ತು ಸಮಾಜಗಳ ಸೂಕ್ಷ್ಮ ಅಧ್ಯಯನಕ್ಕೆ ನೆರವಾಗುವುದು ಮಾತ್ರವಲ್ಲದೆ ಈ ಪದದ ಸೃಷ್ಟಿಕಾರರ ಸೃಜನಶೀಲ ಪ್ರತಿಭೆಗೂ ತೋರುಬೆರಳಾಗುತ್ತವೆ ಮಾತ್ರವಲ್ಲ ಹಲವು ಶಾಸ್ತ್ರಗಳ ಜೀವಾಂಶಗಳನ್ನು ಇವು ಅಣುರೂಪದಲ್ಲಿ ಧಾರಣ ಮಾಡಿಕೊಂಡಿರುವುದು ಸ್ಪಷ್ಟವಾಗುತ್ತದೆ. ಪಾಶ್ಚಾತ್ಯ ಭಾಷಾ ತಜ್ಞರು ಈ ಸಂಬಂಧವಾಚಕಗಳನ್ನು ಅಧ್ಯಯನ ಮತ್ತು ವಿಶ್ಲೇಷಣೆಗಳಿಗೆ ಒಳಪಡಿಸತೊಡಗಿ ಒಂದು ಶತಮಾನವೇ ಕಳೆದಿದ್ದರೂ ಸಮೃದ್ಧ ಪರಂಪರೆಯುಳ್ಳ ಕನ್ನಡದಲ್ಲಿ ಇತ್ತೀಚೆಗೆ ತಾನೇ ಇವುಗಳ ಕಡೆಗೆ ನಮ್ಮ ತಜ್ಞರ ದೃಷ್ಟಿ ಹರಿಯತೊಡಗಿದೆ. ಪ್ರೊ. ತೀ. ನಂ. ಶ್ರೀಕಂಠಯ್ಯ, ಡಾ. ಚಿದಾನಂದಮೂರ್ತಿ, ಸೇಡಿಯಾಪು ಕೃಷ್ಣಭಟ್ಟ, ಡಾ. ಕಲಬುರ್ಗಿ, ಡಾ. ಪಿ. ಮಹಾದೇವಯ್ಯ, ಡಾ. ಪಾಂಡುರಂಗ ಬಾಬು ಮುಂತಾದ ಕೆಲವೇ ಕೆಲವು ವಿದ್ವಾಂಸರು ಇವುಗಳನ್ನು ಕುರಿತು ಕೆಲವು ಬರಹಗಳನ್ನು ಬರೆದಿದ್ದಾರೆ. ಆಡುಭಾಷೆಯನ್ನು ಬಳಸಲಾಗಿರುವ ಹಳಗನ್ನಡ, ನಡುಗನ್ನಡ ಮತ್ತು ಆಧುನಿಕ ಕನ್ನಡದ ಕೃತಿಗಳಲ್ಲಿ ಈ ಪ್ರಯೋಗಗಳು ಹೇರಳವಾಗಿದ್ದರೂ ಅವುಗಳ ಕಡೆ ಮತ್ತು ಅವು ಚಿಮ್ಮಿಸುವ ಸ್ವಾರಸ್ಯ ಹಾಗೂ ಸಂಬಂಧಗಳ ಕಡೆ ನಮ್ಮವರು ಹೆಚ್ಚಾಗಿ ಕಣ್ಣು ತಿರುಗಿಸಿಲ್ಲ.

ಇಂತಹ ಸಂದರ್ಭದಲ್ಲಿ ನಮ್ಮ ಹಸ್ತಪ್ರತಿಶಾಸ್ತ್ರ ವಿಭಾಗದ ಡಾ. ಎಸ್.ಎಸ್. ಅಂಗಡಿ ಅವರು ಕಿತ್ತೂರು ಕರ್ನಾಟಕದ ಪ್ರದೇಶದಲ್ಲಿ ದಿನ ನಿತ್ಯದ ಬಳಕೆಯಲ್ಲಿ ಚಿಮ್ಮುವ ಬಂಧುತ್ವ ಸೂಚಕವಾದ ಹಾಗೂ ಪರಸ್ಪರ ಸಂಬೋಧನೆಗೆ ಸಂಬಂಧಿಸಿದ ಭಾಷಾ ರೂಪಗಳನ್ನು ಈ ಕೃತಿಯಲ್ಲಿ ತುಂಬ ಪರಿಶ್ರಮದಿಂದ ಕಲೆಹಾಕಿದ್ದಾರೆ. ತಮಗೆ ನಿಕಟ ಪರಿಚಯವಿರುವ ಭಾಷೆಯ ಹೊರ ಸ್ವರೂಪವನ್ನು ಮಾತ್ರ ವಿಶ್ಲೇಷಿಸದೆ ಅವುಗಳನ್ನು ಭಾಷಾ ಶಾಸ್ತ್ರೀಯವಾದ ತತ್ವಗಳ ಆಧಾರದ ಮೇಲೆ ಅವುಗಳ ಸಾಂಸ್ಕೃತಿಕ ಮತ್ತು ಸಾಮಾಜಿಕ ಸ್ವರೂಪವನ್ನು ಪರಿಚಯಿಸುವ ಗಂಭೀರ ಪ್ರಯತ್ನವನ್ನು ಇಲ್ಲಿ ಮಾಡಿದ್ದಾರೆ. ಈ ಪದರೂಪಗಳ ತೌಲನಿಕ ಅಧ್ಯಯನವನ್ನು ಮಾಡಿ ಅವುಗಳ ಅರ್ಥ ವಿನ್ಯಾಸ ಹಾಗೂ ಪ್ರದೇಶಾಧಾರಿತ ಅರ್ಥ ವ್ಯತ್ಯಾಸಗಳನ್ನೂ ಇಲ್ಲಿ ನಿದರ್ಶನಗಳ ಮೂಲಕ ಡಾ. ಎಸ್. ಎಸ್. ಅಂಗಡಿ ಅವರು ಗುರುತಿಸಿದ್ದಾರೆ. ಬೇರೆ ಬೇರೆ ಭಾಷೆಗಳ ಸಂಪರ್ಕದಿಂದ ಮತ್ತು ಬಳಕೆಯಿಂದ ಹಾಗೂ ಪರಿಸರ ವ್ಯತ್ಯಾಸದಿಂದ ಈ ಶಬ್ದಗಳಲ್ಲಿ ಬದಲಾವಣೆಗಳಾಗುವ ಪರಿಯನ್ನು ಇಲ್ಲಿ ವಿವೇಚಿಸಲಾಗಿದೆ. ಇದರ ಜೊತೆಗೆ ಇನ್ನೂ ಕನ್ಯೆ ನೆಲವಾಗಿರುವ ಈ ಕ್ಷೇತ್ರದಲ್ಲಿ ಮಾಡಬೇಕಾದ ಕೆಲಸಗಳ ಸಂಕ್ಷಿಪ್ತ ಸೂಚನೆಯನ್ನು ಕೂಡ ಕೊಡಲಾಗಿದೆ. ಕೊನೆಯಲ್ಲಿ ಕೊಟ್ಟಿರುವ ಅನುಬಂಧಗಳು ಹೆಚ್ಚಿನ ಅಧ್ಯಯನಕ್ಕೆ ಸಹಕಾರಿಯಾಗಿವೆ. ಭಾಷಾ ವಿಜ್ಞಾನದ ಅಲಕ್ಷಿತ ಕ್ಷೇತ್ರವೊಂದರ ಬಗ್ಗೆ ವಿಫಲ ಕ್ಷೇತ್ರ ಕಾರ್ಯ ಹಾಗೂ ವಿವೇಚನೆಗೆ ತೋರುಬೆರಳಾಗಿದೆ ಎಂದು ಭಾವಿಸುತ್ತೇನೆ. ಇಂಥದೊಂದು ಕೃತಿಯನ್ನು ರಚಿಸಿಕೊಟ್ಟ ಡಾ. ಎಸ್. ಎಸ್. ಅಂಗಡಿ ಅವರಿಗೆ ನನ್ನ ಅಭಿನಂದನೆಗಳು ಸಲ್ಲುತ್ತವೆ.

ಡಾ. ಎಚ್. ಜೆ. ಲಕ್ಕಪ್ಪಗೌಡ
ಕುಲಪತಿಗಳು