‘ಸಂಬಂಧವಾಚಕಗಳು ಮತ್ತು ಸಂಬೋಧನೆಗಳು’ ಎಂಬ ಹೆಸರಿನ ವಿಶಿಷ್ಟ ಕೃತಿಯನ್ನು ವಿದ್ವತ್ ಲೋಕಕ್ಕೆ ಸಾದರಪಡಿಸುತ್ತಿದ್ದೇನೆ. ೨೦೦೦ ವರ್ಷದಲ್ಲಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಭಿವೃದ್ಧಿ ವಿಭಾಗದಲ್ಲಿ ಕೈಕೊಂಡ ವೈಯಕ್ತಿಕ ಯೋಜನೆ ಲಿಖಿತ ರೂಪ ಈ ಕೃತಿ.

ಸಾಮಾಜಿಕ ಭಾಷಾಧ್ಯಯನದ ಕಕ್ಷೆಯಲ್ಲಿ ಬರುವ ಬಂಧುತ್ವ ಪದಗಳ ಅಧ್ಯಯನವು ಭಾಷಿಕ ಸ್ತರದಲ್ಲಿ ಪ್ರಾರಂಭವಾಗಿ ಸಾಮಾಜಿಕ ಸ್ತರವನ್ನು ಸಮೀಕರಿಸಿಕೊಂಡು ಸಾಂಸ್ಕೃತಿಕ ಸ್ತರದಲ್ಲಿ ವಿರಮಿಸುತ್ತದೆ. ಹೀಗಾಗಿ ಈ ಅಧ್ಯಯನವು ಭಾಷೆ ಮತ್ತು ಸಂಸ್ಕೃತಿಯ ದೃಷ್ಟಿಯಿಂದ ಸ್ವಾರಸ್ಯಕರವಾದ ಸಂಗತಿಗಳನ್ನು ತಿಳಿಸಿಕೊಡುತ್ತದೆ. ಒಂದು ಭಾಷಾ ಸಮುದಾಯದ ಭಾಷೆಯನ್ನು ಪರಿಶೀಲಿಸುವಾಗ ಅಲ್ಲಿ ಬದುಕನ್ನು ಎಷ್ಟರಮಟ್ಟಿಗೆ ಚಿತ್ರಿಸಲಾಗಿದೆ, ಅದರ ಪ್ರಸ್ತುತತೆ ಹಾಗೂ ಸಾಮಾಜಿಕ ಆಯಾಮದ ಕಡೆಗೆ ನನ್ನ ಆಸಕ್ತಿಯಿದೆ. ಈ ದೃಷ್ಟಿಯಿಂದ ಪ್ರಸ್ತುತ ಕೃತಿಯನ್ನು ನೋಡಬೇಕೆಂದು ಸೂಚಿಸುತ್ತೇನೆ.

ಈ ವಿಷಯವನ್ನು ಕುರಿತು ಕನ್ನಡದಲ್ಲಿ ಒಂದೆರಡು ಲೇಖನಗಳು ಬಂದಿವೆ. ಆದರೆ ಬಂಧುತ್ವ ಸೂಚಕಗಳ ಸಾಮಾಜಿಕ ಸ್ತರವನ್ನು ಕುರಿತು ಗ್ರಂಥರೂಪದ ಅಧ್ಯಯನ ಈ ವರೆಗೆ ನಡೆದಿರಲಿಲ್ಲ. ಈ ಗ್ರಂಥದ ಮೂಲಕ ಅದು ಕೈಗೂಡುತ್ತಿರುವ ವಿಷಯ ನನಗೆ ಸಂತೋಷವನ್ನುಂಟು ಮಾಡಿದೆ. ಇಲ್ಲಿ ಮುಖ್ಯವಾಗಿ ಕಿತ್ತೂರು ಕರ್ನಾಟಕ ಪ್ರದೇಶದ ಬಂಧುತ್ವ ಸೂಚಕಗಳಿಗೆ ಪ್ರಾಧಾನ್ಯ ದೊರಕಿದ್ದರೂ ಕರ್ನಾಟಕದ ಇತರ ಭಾಗಗಳ ಬಂಧುಸೂಚಕಗಳ ಸ್ವರೂಪವನ್ನು ವಿವೇಚಿಸಿದ್ದೇನೆ. ಈ ಗ್ರಂಥ ಇಂಗ್ಲೀಷಿನಲ್ಲಿ ತರ್ಜುಮೆಯಾದರೆ ತುಂಬ ಸಂತೋಷವಾಗುತ್ತದೆ.

ಬಂಧುವಾಚಕಗಳನ್ನು ಸಾಮಾಜಿಕ ಭಾಷಾಶಾಸ್ತ್ರದ ಹಿನ್ನೆಲೆಯಲ್ಲಿ ಅಭ್ಯಸಿಸುವುದರ ಜೊತೆಗೆ ಸಮಾಜೋ ಸಾಂಸ್ಕೃತಿಕ ವೈಶಿಷ್ಟ್ಯಗಳ ಆಧಾರದ ಮೇಲೆ ಅಧ್ಯಯನ ನಡೆಸುವುದು ಸೂಕ್ತ. ಅಂತರಶಿಸ್ತೀಯ ಅಧ್ಯಯನದ ನೆಲೆಯಲ್ಲಿ ಅವುಗಳನ್ನು ಪರಿಭಾವಿಸುವ ಅಗತ್ಯವಿದೆ. ಆಧುನಿಕ ಕಾಲದಲ್ಲಿ ಅವುಗಳ ಬಳಕೆಯ ಸ್ವರೂಪವನ್ನು ತಿಳಿದುಕೊಳ್ಳಲು ತಾತ್ವಿಕ ಚರ್ಚೆಯೂ ನಡೆಯಬೇಕಾಗಿದೆ. ಅಂತಹ ಅಧ್ಯಯನಕ್ಕೆ ಮತ್ತು ಚರ್ಚೆಗೆ ಪ್ರಸ್ತುತ ಕೃತಿ ಪ್ರೇರಣೆ ಕೊಡುತ್ತದೆಂದು ಭಾವಿಸಿದ್ದೇನೆ.

ಈ ಕೃತಿ ಪ್ರಕಟವಾಗುತ್ತಿರುವ ವೇಳೆಯಲ್ಲಿ ಅದಕ್ಕೆ ಸ್ಫೂರ್ತಿ, ಪ್ರೇರಣೆಯಾಗಿರುವ ಶ್ರೇಷ್ಠ ವಿದ್ವಾಂಸ ಡಾ. ಎಂ. ಚಿದಾನಂದಮೂರ್ತಿ ಅವರನ್ನು ಸ್ಮರಿಸುವುದು ನನಗೆ ಗೌರವದ ವಿಷಯವಾಗಿದೆ. ಅವರ ಹಲವಾರು ಕೃತಿಗಳಲ್ಲಿ ‘ವಚನಕಾರರ ಕಳ್ಳು ಬಳ್ಳಿ – ಪರಿಕಲ್ಪನೆ’ ಎಂಬ ಸಂಪ್ರಬಂಧವನ್ನು ಹಲವರು ಗಮನಿಸಿರಲಾರರು. ಆ ಸಂಪ್ರಬಂಧವೇ ನನ್ನ ಕೃತಿಗೆ ಪ್ರೇರಕ. ನನ್ನ ಅಧ್ಯಯನದಲ್ಲಿ ಸಮಸ್ಯೆಗಳು ಬಂದಾಗ ಆ ಸಂಪ್ರಬಂಧದ ಆಶ್ರಯವನ್ನು ಪಡೆದು, ಪರಿಹರಿಸಿಕೊಂಡಿದ್ದೇನೆ. ನನ್ನ ಅಧ್ಯಯನಕ್ಕೆ ಬಹುದೊಡ್ಡ ಆಸ್ತಿಯಾಗಿರುವ ಸಂಶೋಧನೆಯ ಆ ಕುಲಗುರುವಿನ ನೆನಪಾದಾಗಲೆಲ್ಲ ಕೃತಜ್ಞತೆಯಿಂದ ಕರಗಿಹೋಗುತ್ತೇನೆ.

ಪ್ರಸ್ತುತ ಗ್ರಂಥ ರಚನೆಯ ಉದ್ದಕ್ಕೂ ಒತ್ತಾಸೆಯಾಗಿ ನಿಂತು ಸಲಹೆಗಳನ್ನು ನೀಡಿದ ನನ್ನ ಪ್ರಾಧ್ಯಾಪಕರಾದ ಡಾ. ಕೆ.ವಿ. ನಾರಾಯಣ ಅವರಿಗೆ ಹೃತ್ಪೂರ್ವಕ ವಂದನೆಗಳು. ಇತ್ತೀಚೆಗೆ ಡಾ. ಕೆ.ವಿ. ನಾರಾಯಣ ಅವರು ನನ್ನನ್ನು ಕುರಿತು ‘ವಿದ್ವತ್ ವಲಯದಲ್ಲಿ ಕನ್ನಡ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ ಅಧ್ಯಾಪಕರಲ್ಲಿ ನಾನೂ ಒಬ್ಬ ‘ ಎನ್ನುವಷ್ಟರ ಮಟ್ಟಿಗೆ ಶೈಕ್ಷಣಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಉದ್ದಕ್ಕೂ ನನ್ನ ಪ್ರಾಧ್ಯಾಪಕರ ಹೇಳಿಕೆಗೆ ಸ್ವಲ್ಪವೂ ಚ್ಯುತಿ ಬರದಂತೆ ನಡೆದುಕೊಳ್ಳುತ್ತೇನೆ : ಮುಂದುವರೆಯುತ್ತೇನೆ ; ಸಾಹಿತ್ಯ ಸಂಬಂಧಿ ಶಾಸ್ತ್ರ ವಿಷಯಗಳನ್ನು ಕುರಿತು ಹೊಸ ಹೊಸ ಕ್ಷೇತ್ರಗಳಿಗೆ ಲಗ್ಗೆ ಹಾಕಬೇಕೆಂದು ನಮ್ರವಾಗಿ ಹೇಳಬಯಸುತ್ತೇನೆ. ಪ್ರಸ್ತುತ ಯೋಜನೆಯನ್ನು ನಿರ್ವಹಿಸಲು ಅನುಮತಿ ನೀಡಿ, ಪ್ರೋತ್ಸಾಹಿಸಿದ ಅಂದಿನ ಕುಲಪತಿ ಡಾ. ಎಂ. ಎಂ. ಕಲಬುರ್ಗಿ ಅವರಿಗೆ ಹಾಗೂ ಪ್ರಕಟಿಸಲು ಒತ್ತಾಯಿಸಿದ ಇಂದಿನ ಕುಲಪತಿ ಡಾ. ಎಚ್. ಜೆ. ಲಕ್ಕಪ್ಪಗೌಡ ಅವರಿಗೆ, ಅಧ್ಯಯನಾಂಗದ ಮೇಲಧಿಕಾರಿಗಳಿಗೆ ಹಾಗೂ ಹಸ್ತಪ್ರತಿಯನ್ನು ಪರಿಶೀಲಿಸಿ ಉಪಯುಕ್ತ ಸಲಹೆಗಳನ್ನು ನೀಡಿದ ಡಾ. ಕೆ. ಪಿ. ಭಟ್ ಅವರಿಗೆ ಅನಂತ ಕೃತಜ್ಞತೆಗಳು. ಮುದ್ರಣ ವಿನ್ಯಾಸದಲ್ಲಿ ನೇರವಾದ ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಅವರಿಗೆ, ಸುಂದರವಾಗಿ ಅಕ್ಷರ ಸಂಯೋಜಿಸಿದ ವಿದ್ಯಾರಣ್ಯ ಗಣಕ ಕೇಂದ್ರದ ಶ್ರೀನಿವಾಸ ಕೆ. ಕಲಾಲ್ ಅವರಿಗೆ ಹಾಗೂ ಮುಖಪುಟ ವಿನ್ಯಾಸ ಮಾಡಿದ ಕೆ. ಕೆ. ಮಕಾಳಿ ಅವರಿಗೆ ವಂದನೆಗಳನ್ನು ಸಲ್ಲಿಸುತ್ತೇನೆ.

ಡಾ. ಎಸ್. ಎಸ್. ಅಂಗಡಿ.