ಭಾಷೆ ಸಂಸ್ಕೃತಿಯ ಮುಖ್ಯ ಅಂಗ. ಸಂಸ್ಕೃತಿಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳಿಗೆ ಭಾಷೆ ಬುನಾದಿಯಾಗಿರುತ್ತದೆ. ಭಾಷೆ, ಸಮಾಜ ಮತ್ತು ಸಂಸ್ಕೃತಿ ಇವು ಪರಸ್ಪರ ಪೂರಕವಾಗಿದೆ. ಭಾಷಾ ಸಮುದಾಯದಲ್ಲಿಯ ಕತೆ, ಗೀತೆ, ಗಾದೆ, ಒಗಟು, ವಾಗ್ರೂಢಿ ಹಾಗೂ ಹೆಸರುಗಳು ಮೂಲಕ ಸಮುದಾಯದ ಸಂಸ್ಕೃತಿ ಅಭಿವ್ಯಕ್ತವಾಗುತ್ತದೆ. ಹೆಸರುಗಳ ಕಕ್ಷೆಯಲ್ಲಿ ಬರುವ ಸಂಬಂಧ ವಾಚಕಗಳು ಮತ್ತು ಸಂಬೋಧನೆಗಳು ಭಾಷಿಕರ ಸಾಮಾಜಿಕ ಸಂಬಂಧವನ್ನು ಸ್ಥಿರೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಅಧ್ಯಯನದ ಮಹತ್ವ

ಬಂಧುವಾಚಕಗಳ ಅಧ್ಯಯನವು ಸಾಮಾಜಿಕ ಭಾಷಾಧ್ಯಯನದ ದೃಷ್ಟಿಯಿಂದ ತುಂಬ ಉಪಯುಕ್ತವಾದುದು. ಭಾಷಾ ಸಮುದಾಯ ಸಾಂಸ್ಕೃತಿಕ ವಿನ್ಯಾಸಗಳನ್ನು ತಿಳಿದುಕೊಳ್ಳುವಲ್ಲಿ ಬಂಧು ವಾಚಕಗಳು ಮಹತ್ವದ ಪಾತ್ರ ವಹಿಸುತ್ತವೆ. ಕನ್ನಡದ ಪರಿಸರದಲ್ಲಿ ಬಳಕೆಯಾಗುವ ಬಂಧುಸೂಚಕಗಳು ಹೆಚ್ಚಾಗಿ ಅಚ್ಚಗನ್ನಡ ಪದಗಳಾಗಿರುವುದರಿಂದ ಅಂತಹುಗಳನ್ನು ಸಂಗ್ರಹಿಸಿ ಅವುಗಳಿಗೆ ಅರ್ಥಕೊಡುವುದು ಅಗತ್ಯವಿದೆ. ಅವು ಕನ್ನಡ ಸಾಂಸ್ಕೃತಿಕ ಶಬ್ದಕೋಶಕ್ಕೆ ಉತ್ತಮ ಕೊಡುಗೆಗಳಾಗುತ್ತವೆ ಎಂಬುದರ ಬಗೆಗೆ ಅನುಮಾನಗಳಿಲ್ಲ. ಬಂಧುವಾಚಕಗಳ ಅಧ್ಯಯನವು ಭಾಷಾಶಾಸ್ತ್ರಜ್ಞರಿಗೆ ಮಾತ್ರವಲ್ಲದೆ ಜಾನಪದ ತಜ್ಞರಿಗೂ ಸಮಾಜಶಾಸ್ತ್ರಜ್ಞರಿಗೂ ಪ್ರಯೋಜನಕಾರಿಯಾಗಿದೆ. ಈ ತೆರನಾದ ಅಧ್ಯಯನವು ಸಂಸ್ಕೃತಿ ಹಾಗೂ ಭಾಷಿಕರ ಸಾಮಾಜಿಕ ಸಂಬಂಧವನ್ನು ಗುರುತಿಸಲು ವೈವಿಧ್ಯಮಯವಾದ ದತ್ತವನ್ನು ಒದಗಿಸುತ್ತದೆ. ಈ ಕಾರಣಗಳಿಂದ ಬಂಧು ಸೂಚಕಗಳಿಂದಾಗುವ ಪ್ರಯೋಜನ ಅಪಾರವಾದುದಾಗಿದೆ. ಮತ್ತು ಹೆಚ್ಚು ಪ್ರಯೋಜನಕಾರಿಯಾಗಿದೆ. ಬಂಧು ಸೂಚಕಗಳ ಅಧ್ಯಯನ ಮತ್ತು ವಿಶ್ಲೇಷಣೆಯ ಕಾರ್ಯ ತೆಲುಗು ಭಾಷೆಯಲ್ಲಿ ನಡೆದಿದೆ. ಕನ್ನಡದಲ್ಲಿ ಇತ್ತೀಚೆಗೆ ನಡೆಯುತ್ತಿದೆ.

ಬಂಧುವಾಚಕಗಳ ಭಾಷಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಧ್ಯಯನ ಈ ಕೃತಿಯ ವಸ್ತು. ಕನ್ನಡದಲ್ಲಿ ಇಂತಹ ಅಧ್ಯಯನಗಳು ನಡೆದಿರುವುದು ಕಡಿಮೆ. ಅಲ್ಲೊಂದು ಇಲ್ಲೊಂದು ಲೇಖನಗಳು ಬಂದಿವೆ.

ಅಧ್ಯಯನದ ಇತಿಹಾಸ

ಪಾಶ್ಚಾತ್ಯದಲ್ಲಿ ಬಂಧು ವಾಚಕಗಳ ಅಧ್ಯಯನಕ್ಕೆ ಒಂದು ಶತಕದ ಇತಿಹಾಸವಿದ್ದರೂ ನಮ್ಮ ನಾಡಿನಲ್ಲಿ ಮಾತ್ರ ಕೆಲವು ದಶಕಗಳ ಇತಿಹಾಸವೂ ಇಲ್ಲ. ದ್ರಾವಿಡ ಭಾಷೆಗಳ ಹೆಸರುಗಳ ರಚನೆಯ ಅಧ್ಯಯನವು ಸ್ವಾರಸ್ಯಕರವಾಗಿದೆ. (E.P. Ind xiii. ಪು. ೧೪) ಅವುಗಳ ಅಧ್ಯಯನ ನಡೆಯಬೇಕಾಗಿದೆಯೆಂದು ಹಲವು ದಶಕಗಳ ಹಿಂದೆಯೇ ಬಾರ್ನೆಟ್ ಹೇಳಿದ ಮಾತು ಬಂಧುವಾಚಕಗಳಿಗೂ ಅನ್ವಯವಾಗುತ್ತದೆ. ಆ ಮೇಲೆ ಬಂಧುವಾಚಕಗಳ ಅಧ್ಯಯನ ಶುರುವಾಯಿತು. ಕೆ.ಎಸ್. ಮಿಶ್ರಾ ಅವರ Terms of address and second person pronominal usage in Hindi (1977) ಎಂಬ ಕೃತಿಯಲ್ಲಿ ಪ್ರೇಮಚಂದ್ರರ ಕಾದಂಬರಿಗಳಲ್ಲಿ ಬಳಕೆಯಾದ ಸಂಬಂಧವಾಚಕ ಹಾಗೂ ಸಂಬೋಧನೆಗಳನ್ನು ಸಾಮಾಜಿಕ ಚೌಕಟ್ಟಿಗೆ ಒಳಪಡಿಸಿದ್ದಾರೆ. ಇದೊಂದು ಮಾದರಿ ಅಧ್ಯಯನವಾಗಿಸದೆ. ಎನ್. ಜೋಸೆಫ್‌‌‌ ಅವರ `Cultural Impacts in Kinship Terms’ (1980), ಸರಸ್ವತಿ ವೇಣುಗೋಪಾಲ ಅವರ Tamil Folk Linguistics Lullaby ; Addressing Between Marriage Practices and Kirship terms in some Dravidian Language (1980), ಎಂ. ಮ್ಯಾನುಲಾ ಅವರ `Some unique Kinship Terms current in a dialect of Kany Kumari Districe (1981), ಡಿ.ಡಿ.ಶರ್ಮಾ ಅವರ Kinship Terms of reference in Kumauni (1985), ಸೂರ್ಯಕುಮಾರ ಅವರ `A Socio linguistic study of Names and address system in Telugu’ (1986) ಅದರಂತೆ ಪೀಟರ್ ಜೆ. ಕ್ಲಾಸ್ ಅವರ ತುಳು ನಾಡಿನ `ಬಂಟ ನಾಡವ ಜಾತಿ ಸಂಕೀರ್ಣದ ಬಂಧುತ್ವ ವ್ಯವಸ್ಥೆಯ ಅಧ್ಯಯನ’ (೧೯೭೦) ಇವು ಆಯಾ ಪ್ರದೇಶದ ಭಾಷೆ, ಸಮಾಜ ಮತ್ತು ಸಂಸ್ಕೃತಿಯ ದೃಷ್ಟಿಯಿಂದ ವಿವೇಚಿಸಿದ ಮೌಲಿಕ ಬರಹಗಳಾಗಿವೆ.

ಕನ್ನಡದಲ್ಲಿ ಈ ಬಗೆಗೆ ಕೆಲವು ಬರಹಗಳು ಬಂದಿವೆ. ತೀ.ನಂ.ಶ್ರೀ ಅವರು ಆಧುನಿಕ ಪೂರ್ವ ಸಾಹಿತ್ಯದಲ್ಲಿ ಬಳಕೆಯಾದ `ಏನಿ ಗಡಿಂ – ರೀಂ’ ಎಂಬ ಸಂಬೋಧನಾ ರೂಪಗಳ ಸ್ವರೂಪವನ್ನು ಗುರುತಿಸಿದ್ದಾರೆ. `ಅತ್ತಿಗೆ’, `ಅಬ್ಬೆ’, `ಬಾಯಿ’ ಇಂತಹ ಬಂಧು ಸೂಚಕಗಳ ಹಾಗೂ ಸಂಬೋಧನೆಗಳ ವಿವೇಚನೆ ಅಲ್ಲಲ್ಲಿ ಮಾಡಿದ್ದರೂ ಅದು ಕೋಶ, ವ್ಯಾಕರಣ ದೃಷ್ಟಿಯಿಂದ ಮಾಡಿದ ಪ್ರಯತ್ನವಾಗಿದೆ. ಈ ದಿಸೆಯಲ್ಲಿ ಸೇಡಿಯಾಪು, ಚಿದಾನಂದ ಮೂರ್ತಿ,ಕಲಬುರ್ಗಿ ಮೊದಲಾದವರು ಮಾಡಿದ ಪ್ರಯತ್ನಗಳು ಗಮನಾರ್ಹವಾಗಿವೆ.

ಬಂಧು ವಾಚಕಗಳನ್ನು ಭಾಷೆ, ಸಂಸ್ಕೃತಿಯ ದೃಷ್ಟಿಯಿಂದ ನೋಡುವ ಅಧ್ಯಯನ ತೀರ ಇತ್ತೀಚಿನದು. ಬಹುಶಃ ಈ ದಿಶೆಯ ಮುಖ್ಯ ಪ್ರಯತ್ನವೆಂಬ ಕೀರ್ತಿ ಡಾ. ಎಂ. ಚಿದಾನಂದಮೂರ್ತಿ ಅವರ ವಚನಕಾರರ ಕಳ್ಳು ಬಳ್ಳಿ ಪರಿಕಲ್ಪನೆ ಎಂಬ ಸಂಪ್ರಬಂಧಕ್ಕೆ ಸಲ್ಲುತ್ತದೆ. ವಚನಕಾರರು ಪರಸ್ಪರರನ್ನು ಗೌರವಿಸುವ, ಸಂಬೋಧಿಸುವ ರೀತಿ ಹಾಗೂ ಅವುಗಳ ಸಾಮಾಜಿಕ ಮಹತ್ವವನ್ನು ಕುರಿತು ಸೋದಾಹರಣವಾಗಿ ನಿರೂಪಿಸಿದ್ದಾರೆ. ಆ ಮೇಲೆ ಯಾರೂ ಇಂತಹ ಅಧ್ಯಯನಕ್ಕೆ ಕೈ ಹಾಕಿದಂತಿಲ್ಲ. ಪ್ರಕೃತ ಲೇಖಕರು ತಂದೆ, ತಾಯಿ, ಅಣ್ಣ – ತಮ್ಮ, ಅತ್ತಿಗೆ, ಅಳಿಯ – ಅತ್ತಿ, ಇಂತಹ ಬಂಧು ಸೂಚಕಗಳನ್ನು ಕನ್ನಡ ವಿಶ್ವವಿದ್ಯಾಲಯದಿಂದ ಪ್ರಕಟವಾಗುವ ನಮ್ಮ ಕನ್ನಡ ಸಂಪತ್ರಿಕೆಯಲ್ಲಿ ಚರ್ಚಿಸಿದ್ದಾರೆ. ಡಾ. ಡಿ. ಪಾಂಡುರಂಗಬಾಬು ಅವರು ಮೈಸೂರು ಪ್ರಾಂತದ ಸಾಮಾಜಿಕ ಭಾಷಾ ಪ್ರಬೇಧವೊಂದರಲ್ಲಿ ಬಳಕೆಯಾಗುವ ಣೇ ಮೀ ಲೇ ಎಂಬ ಸಂಬೋಧನಾ ರೂಪಗಳ ಸ್ವರೂಪವನ್ನು ಗುರುತಿಸಿದ್ದಾರೆ. ಡಾ. ಪಿ. ಮಹಾದೇವಯ್ಯನವರು ಕನ್ನಡ ಬಂಧು ಸೂಚಕಗಳ ಸ್ವರೂಪದ ಬಗೆಗೆ ವಿವೇಚಿಸಿದ್ದಾರೆ. ಈ ಎಲ್ಲ ಲೇಖನಗಳು ಮಾಹಿತಿ ಪ್ರಧಾನವಾಗಿವೆ. ಹೀಗಾಗಿ ಬಂಧು ವಾಚಕಗಳ ಬಗ್ಗೆ ಸಾಮಾಜಿಕ ಭಾಷಾಧ್ಯಯನದ ತತ್ವಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ವ್ಯಾಪಕವಾದ ಅಧ್ಯಯನ ನಡೆದಿಲ್ಲವೆಂದೇ ಹೇಳಬೇಕು.

ಪ್ರಸ್ತುತ ಅಧ್ಯಯನದಲ್ಲಿ ಕಿತ್ತೂರು ಕರ್ನಾಟಕ ಪ್ರದೇಶದ ವ್ಯವಹಾರಿಕ ಕನ್ನಡದಲ್ಲಿ ಬಳಕೆಯಲ್ಲಿರುವ ಬಂಧು ಸೂಚಕ ಮತ್ತು ಸಂಬೋಧನೆಯ ರೂಪಗಳನ್ನು ಕಲೆ ಹಾಕಿ, ಅವುಗಳ ಸಾಮಾಜಿಕ ಆಯಾಮ ಮತ್ತು ಸ್ವರೂಪವನ್ನು ಗುರುತಿಸುವ ಪ್ರಯತ್ನ ಮಾಡಲಾಗಿದೆ. ಸಂದರ್ಭಕ್ಕೆ ತಕ್ಕಂತೆ ಮಿಕ್ಕ ಪ್ರದೇಶದ ಬಂಧು ಸೂಚಕಗಳ ಸ್ವರೂಪವನ್ನು ಕಿತ್ತೂರು ಕರ್ನಾಟಕ ಪ್ರದೇಶದ ಬಂಧು ಸೂಚಕಗಳೊಡನೆ ಹೋಲಿಸಿ ವಿವೇಚಿಸಲಾಗಿದೆ. ಬಂಧು ವಾಚಕಗಳನ್ನು ಕೇಂದ್ರವಾಗಿಟ್ಟುಕೊಂಡು ಕಿತ್ತೂರು ಕರ್ನಾಟಕ ಪ್ರದೇಶದ ಸಮಾಜೋ ಭಾಷಿಕ ಅಂಶಗಳನ್ನು ಅಭ್ಯಸಿಸುವುದು ಈ ಅಧ್ಯಯನದ ಉದ್ದೇಶವಾಗಿದೆ.

ಅಧ್ಯಾಯ ಒಂದರಲ್ಲಿ ಅಧ್ಯಯನದ ಉದ್ದೇಶ, ವ್ಯಾಪ್ತಿ ಹಾಗೂ ಸ್ವರೂಪವನ್ನು ಹೇಳುವುದರ ಜೊತೆಗೆ ಈ ವರೆಗೆ ಈ ಕ್ಷೇತ್ರದಲ್ಲಿ ನಡೆದಿರುವ ಕೆಲಸಗಳ ಬಗ್ಗೆ ಸ್ಥೂಲವಾಗಿ ವಿವರಣೆ ಕೊಡಲಾಗಿದೆ. ಅದು ಪ್ರಸ್ತುತ ಅಧ್ಯಯನಕ್ಕೆ ಅಗತ್ಯವಾದ ತಾತ್ವಿಕ ಹಿನ್ನೆಲೆಯನ್ನು ರೂಪಿಸುತ್ತದೆ. ಎರಡನೆಯಧ್ಯಾಯ ಬಂಧುತ್ವದ ಅರ್ಥ ಮತ್ತು ಸ್ವರೂಪಕ್ಕೆ ಸಂಬಂಧಿಸಿದೆ. ಭಾಷಾ ಸಮುದಾಯದಲ್ಲಿ ಭಾಷಿಕರ ಸಾಮಾಜಿಕ ವರ್ಗ, ಲಿಂಗ, ವಯಸ್ಸು ಭಾಷಾ ಬಳಕೆಯಲ್ಲಿ ವ್ಯತ್ಯಾಸವಾಗುವ ರೀತಿಯನ್ನು ಅಧ್ಯಾಯ ಮೂರರಲ್ಲಿ ಚರ್ಚಿಸಲಾಗಿದೆ. ಸಮುದಾಯದಲ್ಲಿ ಸಾಮಾಜಿಕ, ಕೌಟುಂಬಿಕ ಮತ್ತು ವೃತ್ತಿಸೂಚಕ ಅವಳಿ ಸಂಬಂಧಗಳ ಮೂಲಕ ಬಂಧುತ್ವ ಹೆಣೆಯಲ್ಪಟ್ಟಿರುತ್ತದೆ. ಈ ಕುರಿತು ಅಧ್ಯಾಯ ನಾಲ್ಕು, ಐದು ಮತ್ತು ಆರರಲ್ಲಿ ವಿವೇಚನೆ ಮಾಡಲಾಗಿದೆ. ಅನ್ಯ ಭಾಷೆಯ ಸಂಪರ್ಕದಿಂದ ಸಂಬಂಧವಾಚಕಗಳಲ್ಲಿ ಬದಲಾವಣೆಗಳು ಹೇಗೆ ನಡೆಯುತ್ತವೆಂಬುದನ್ನು ಅಧ್ಯಾಯ ಏಳರಲ್ಲಿ ಚರ್ಚಿಸಲಾಗಿದೆ. ಅಧ್ಯಾಯ ಎಂಟರಲ್ಲಿ ಆಧುನಿಕ ಪೂರ್ವ ಕನ್ನಡ ಹಾಗೂ ಆಧುನಿಕ ಕನ್ನಡದ ಕೆಲವು ಪ್ರಬೇಧಗಳಲ್ಲಿ ಕಂಡುಬರುವ ಸಂಬೋಧನೆಗಳ ಸಾಮಾನ್ಯ ಸ್ವರೂಪವನ್ನು ಸ್ಥೂಲವಾಗಿ ಹೇಳಲಾಗಿದೆ. ಅಧ್ಯಾಯ ಒಂಭತ್ತರಲ್ಲಿ ಸಂಗ್ಯಾ ಬಾಳ್ಯಾ ಗೀತ ರೂಪಕದಲ್ಲಿ ಬಳಕೆಯಾದ ಸಂಬೋಧನೆಗಳನ್ನು ಕುರಿತು ವಿವೇಚನೆ ಮಾಡಲಾಗಿದೆ. ಅಧ್ಯಾಯ ಹತ್ತರಲ್ಲಿ ಈ ಕ್ಷೇತ್ರದಲ್ಲಿ ಆಗಬೇಕಾದ ಕೆಲಸಗಳನ್ನು ಹಾಗೂ ಪ್ರಸ್ತುತ ಅಧ್ಯಯನದ ಫಲಿತಗಳನ್ನು ಸಂಕ್ಷಿಪ್ತವಾಗಿ ಹೇಳಲಾಗಿದೆ. ಈ ಕ್ಷೇತ್ರದ ಅಧ್ಯಯನಕ್ಕೆ ಪೂರಕವಾಗುವಂತೆ ನಾಲ್ಕು ಅನುಬಂಧಗಳಿವೆ.

ಒಂದು ನಿರ್ದಿಷ್ಟ ಪ್ರದೇಶದ ಅಥವಾ ಸಮುದಾಯದ ಸಂಬಂಧ ವಾಚಕಗಳನ್ನು, ಸಂಬೋಧನೆಗಳನ್ನು ಕುರಿತು ಬಹುಮಟ್ಟಿಗೆ ಪೂರ್ಣ ಪ್ರಮಾಣದ ಕೃತಿ ರಚನೆ ಕನ್ನಡದಲ್ಲಿ ಈ ವರೆಗೆ ನಡೆದಿಲ್ಲ. ಈ ಅಧ್ಯಯನ ಈ ದಿಕ್ಕಿನಲ್ಲಿ ಮೊದಲ ಪ್ರಯತ್ನವಾಗಿದೆ. ಒಟ್ಟಾರೆ ಸಂಬಂಧವಾಚಕ ಮತ್ತು ಸಂಬೋಧನೆಗಳ ಸ್ಥೂಲವಾದ ಸಮಾಜೋ ಭಾಷಿಕ ನೋಟವನ್ನು ಕುರಿತು ವಿವೇಚಿಸುವುದು ಪ್ರಸ್ತುತ ಅಧ್ಯಯನದ ಮುಖ್ಯ ಉದ್ದೇಶವಾಗಿದೆ.