ಭಾಷಾ ಸಮುದಾಯದಲ್ಲಿ ಭಾಷಿಕರು ಹಲವು ಬಗೆಯ ಸಾಮಾಜಿಕ ಸಂಬಂಧಗಳಿಂದ ಹೆಣೆದುಕೊಂಡಿರುತ್ತಾರೆ. ಅಂತಹ ಸಂಬಂಧಗಳಲ್ಲಿ ಬಂಧುತ್ವವೂ ಬಹು ಮುಖ್ಯ ಪಾತ್ರವಹಿಸುತ್ತದೆ. ಇಂಗ್ಲಿಷಿನ `Kinship’ ಪದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ‘ಬಂಧುತ್ವ’ ಪದ ಬಳಕೆಯಲ್ಲಿದೆ. ಅದರರ್ಥ ರಕ್ತಸಂಬಂಧಿ, ಕಳ್ಳು – ಬಳ್ಳಿ, ನೆಂಟರು ಇತ್ಯಾದಿ. ವ್ಯಕ್ತಿಯು ಸಮಾಜಜೀವಿ. ಬಂಧು ಬಳಗವನ್ನು ತೊರೆದು ಒಂಟಿ ಜೀವನ ನಡೆಸಲು ಸಾಧ್ಯವಿಲ್ಲ. ಬಂಧುತ್ವ ವ್ಯಕ್ತಿಗಳಿಗೆ ಊರು ಗೋಲಿದ್ದಂತೆ ‘ಒಂಟಿ ಬಾಳು ಬಾಳೆ?’ ಎಂಬ ಗಾದೆಯನ್ನು ನೆನಪಿಸಿಕೊಳ್ಳಬಹುದು. ಜೀವನದ ಅವಶ್ಯಕತೆಗಳನ್ನು ಪೂರೈಸಬೇಕಾದರೆ ವ್ಯಕ್ತಿ ಇತರರ ಮೇಲೆ ಅವಲಂಬಿಸಬೇಕಾಗುತ್ತದೆ. ಬಂಧುತ್ವ ಹುಟ್ಟಿನಿಂದಲೇ ಬರುವುದು. ಪಾಲಕರ, ಪೋಷಕರ ಸಂಪರ್ಕದಿಂದ ಅದು ವೃದ್ಧಿಯಾಗುವುದು. ಕುಟುಂಬದ ಮೂಲ ಉದ್ದೇಶ ಸಂತಾನೋತ್ಪತ್ತಿಯ ಕಾರ್ಯ ಮಾತ್ರವಾಗಿರದೆ ಬಂಧುತ್ವವನ್ನು ಗೊತ್ತುಪಡಿಸುವುದೂ ಆಗಿದೆ. ಬಂಧುತ್ವವು ವಯಸ್ಸು, ಲಿಂಗ, ಜಾತಿ ಹಾಗೂ ಸಾಮಾಜಿಕ ವರ್ಗಗಳನ್ನು ಅವಲಂಬಿಸಿರುತ್ತದೆ. ವ್ಯಕ್ತಿಯ ವೈವಾಹಿಕ ಸಂಬಂಧವು ಕ್ರಮೇಣ ಸಾಮಾಜಿಕ ಬಂಧುತ್ವದೊಡನೆ ಸಮೀಕರಣಗೊಳ್ಳುತ್ತದೆ.

ಬಂಧು ಸೂಚಕಗಳು ಭಾಷಿಕ ರಚನೆಗಳು, ಸಾಮಾಜಿಕ ಭಾಷಾಶಾಸ್ತ್ರಜ್ಞರು ಹೆಸರುಗಳನ್ನು ಸ್ಥಳನಾಮಗಳು ಮತ್ತು ವ್ಯಕ್ತಿನಾಮಗಳೆಂದು ವಿಂಗಡಿಸುತ್ತಾರೆ. ವ್ಯಕ್ತಿನಾಮಗಳನ್ನು ವ್ಯಕ್ತಿನಾಮ, ಕುಲನಾಮ ಮತ್ತು ಸಂಬಂಧ ವಾಚಕಗಳೆಂದು ವರ್ಗೀಕರಿಸುತ್ತಾರೆ. ವ್ಯಕ್ತಿನಾಮಗಳ ಕಕ್ಷೆಯಲ್ಲಿ ಬರುವ ಸಂಬಂಧ ವಾಚಕಗಳ ಸಂಖ್ಯೆ ಸೀಮಿತವಾಗಿದ್ದರೂ ಅವುಗಳ ಸಾಮಾಜಿಕ ಅರ್ಥಛಾಯೆ ವೈವಿಧ್ಯಮಯವಾಗಿವೆ. ಬಂಧು ವಾಚಕಗಳ ಬಳಕೆಯಲ್ಲಿ ಭಾಷಿಕರ ಬಯಕೆ, ಹಾರೈಕೆಗಳು ಹಾಗೂ ಅವರ ಕೌಟುಂಬಿಕ ಪರಂಪರೆ ಅಡಗಿರುತ್ತದೆ. ಹೀಗಾಗಿ ಬಂಧು ವಾಚಕಗಳು ಸಂಸ್ಕೃತಿ ಅಧ್ಯಯನಕ್ಕೆ ಮೌಲಿಕ ಆಕರಗಳಾಗುತ್ತವೆ.

ಬಂಧು ವಾಚಕಗಳ ಜೈವಿಕ ಮತ್ತು ರಾಚನಿಗೆ ಸ್ವರೂಪವನ್ನು ಅನುಲಕ್ಷಿಸಿ ಮೂರು ರೀತಿಯಾಗಿ ವರ್ಗೀಕರಿಸಬಹುದು

೧.        ಅ. ರಕ್ತಸಂಬಂಧ
ಆ. ಇತರ ಸಂಬಂಧ

೨.        ಅ. ಪ್ರಾಥಮಿಕ ಸಂಬಂಧ
ಆ. ಅನುಷಂಗಿಕ ಸಂಬಂಧ

೩.        ಅ. ಮೂಲ ರೂಪಗಳು
ಆ. ಸಾಧಿತ ರೂಪಗಳು

ಬಂಧುತ್ವವನ್ನು ತಂದೆ – ತಾಯಿ, ಅಣ್ಣ – ತಮ್ಮ, ಅಕ್ಕ – ತಂಗಿ ಇವರ ಮೂಲಕ ವಂಶವನ್ನು ನಿರ್ಧರಿಸಿದರೆ ಅದು ರಕ್ತಸಂಬಂಧ. ಉದಾ: ಚಿಕ್ಕಪ್ಪ – ತಂದೆಗಿಂತ ಚಿಕ್ಕವ, ಚಿಕ್ಕಮ್ಮ – ತಾಯಿಗಿಂತ ಚಿಕ್ಕವಳು ಮುಂತಾದವು. ಇವುಗಳಿಗೆ ‘ಕಳ್ಳುಬಳ್ಳಿ’ ಎಂದು ಕರೆಯುವರು. ಇವುಗಳನ್ನು ಹೊರತುಪಡಿಸಿ, ಸ್ನೇಹ ಸಂಬಂಧ, ಗುರು – ಶಿಷ್ಯರ ಸಂಬಂಧ, ನಾಡಿನ ಬಗೆಗಿರುವ ಸಂಬಂಧ, ಅದರಂತೆ ವೃತ್ತಿಯ ಬಗೆಗೆ, ವಿದ್ಯಾಸಂಸ್ಥೆಯ ಬಗೆಗಿರುವ ಸಂಬಂಧ ಇವು ‘ಇತರ ಸಂಬಂಧ’ಗಳ ವರ್ಗದಲ್ಲಿ ಸಮಾವೇಶಗೊಳ್ಳುತ್ತದೆ. ತಂದೆ – ತಾಯಿ, ಅಣ್ಣ – ತಮ್ಮ, ಅಕ್ಕ – ತಂಗಿ ಇವು ನೇರವಾಗಿ ರಕ್ತ ಸಂಬಂಧಕ್ಕೆ ಸಂಬಂಧಿಸಿರುವುದರಿಂದ ಇವುಗಳಿಗೆ ‘ಪ್ರಾಥಮಿಕ ಸಂಬಂಧವಾಚಕ’ಗಳೆಂದು ಕರೆಯುವರು. ಅತ್ತೆ – ಮಾವ – ಅಳಿಯ, ಭಾವ – ಮೈದುನ, ಚಿಕ್ಕಪ್ಪ – ಚಿಕ್ಕಮ್ಮ, ನಾದಿನಿ – ನೆಗೆವೆಣ್ಣಿ ಇಂತಹ ಬಂಧು ಸೂಚಕಗಳು ವಿವಾಹದಿಂದ ಇಲ್ಲವೇ ಆಪ್ತತೆಯಿಂದ ಸೃಷ್ಟಿಯಾಗುತ್ತವೆ. ಇವುಗಳಿಗೆ ‘ಅನುಷಂಗಿಕ ಸಂಬಂಧವಾಚಕ’ಗಳೆಂದು ಕರೆಯುವರು.

ಕನ್ನಡ ಬಂಧು ವಾಚಕಗಳ ರಚನೆಯನ್ನಾಧರಿಸಿ ಹೇಳುವುದಾದರೆ ಅವು ನಾಮಪದ ಮತ್ತು ಗುಣವಾಚಕಗಳ ಕಕ್ಷೆಯಲ್ಲಿ ಬರುತ್ತವೆ. ಅವುಗಳನ್ನು ಮೂಲರೂಪ ಮತ್ತು ಸಾಧಿತ ರೂಪಗಳೆಂದು ವಿಂಗಡಿಸಲಾಗಿದೆ. ಅರ್ಥವತ್ತಾದ ಸ್ವತಂತ್ರ ಪದಗಳೇ ಮೂಲರೂಪಗಳಾಗಿವೆ. ಅವ್ವ, ಅಪ್ಪ, ಮಾವ, ತಂಗಿ, ಅಣ್ಣ ಮುಂತಾದವು. ಇವುಗಳಲ್ಲಿ ಧ್ವನಿಗಳ ಸುಸಂಬದ್ಧವಾದ ಜೋಡಣೆ ಇರುವುದರಿಂದ ಅವು ಅರ್ಥವತ್ತಾದ ಕನಿಷ್ಠತಮ ರೂಪಗಳಾಗಿವೆ. ಅದರಂತೆ ಎರಡು ಮೂಲ ರೂಪಗಳ ಮಧ್ಯೆ ಯಾವುದೇ ಭಾಷಾ ಘಟಕವನ್ನು ಸೇರಿಸಲು ಸಾಧ್ಯವಿಲ್ಲದಂತಹ ರಚನೆಗಳು ಸಾಧಿತ ರೂಪಗಳಾಗುತ್ತವೆ. ಉದಾಃ ದೊಡ್ಡಪ್ಪ, ಚಿಕ್ಕಪ್ಪ, ಚಿಕ್ಕಮ್ಮ, ಇವುಗಳ ಆಂತರಿಕ ಬೆಳವಣಿಗೆ ಸಾಧ್ಯವಿಲ್ಲ. ಸಾಧಿತ ರೂಪಗಳ ಆಂತರಿಕ ರಚನೆಯನ್ನು ಅವುಗಳ ಅಂಗಗಳಿಂದ ಅದರ ಅರ್ಥವನ್ನು ಹೇಳಬಹುದು. ಉದಾಃ ‘ಚಿಕ್ಕಮ್ಮ,’ ಚಿಕ್ಕ + ಅಮ್ಮ ಈ ಅಂಗಗಳಿಂದ ತಾಯಿಗಿಂತ ಚಿಕ್ಕವಳಾದವಳು, ಚಿಕ್ಕಪ್ಪನ ಹೆಂಡತಿ, ಇವಲ್ಲದೆ ಇಂತಹ ಬೇರೆ ಬೇರೆ ಕೆಲವು ಸಂದರ್ಭಗಳನ್ನು ಗುರುತಿಸುತ್ತಾರೆ. ಇಂತಹ ಸಂಬಂಧಗಳಿರುವ ಗುಣ ಧರ್ಮಗಳ ಆಧಾರದ ಮೇಲೆ ‘ಚಿಕ್ಕಮ್ಮ’ ಎಂಬ ಪದಕ್ಕೆ ಅರ್ಥ ಹೇಳಲು ಸಾಧ್ಯ. ಚಿಕ್ಕಮ್ಮ ಎಂಬುದಕ್ಕೆ ಅಮ್ಮನಿಗಿಂತ ಚಿಕ್ಕ ಹೆಂಗಸು ಎಂದರೆ ಅಮ್ಮನ ತಂಗಿ ಎಂಬರ್ಥವಿದೆಯಲ್ಲದೆ ಇತರ ಅಮ್ಮಂದಿರಿಗಿಂತ ಚಿಕ್ಕವಳಾಗಿರುವ ಅಮ್ಮ ಎಂಬಂರ್ಥವಿಲ್ಲ. ಅಮ್ಮನಿಗಿಂತ ಚಿಕ್ಕ ಹೆಂಗಸು > ಚಿಕ್ಕಮ್ಮ. ಇಲ್ಲಿಯ ಸಮಸ್ತ ಪದದ ಅರ್ಥ ‘ತಂಗಿ’. ಅದು ಸಮಸ್ತ ಪದದ ಹೊರಗಡೆ ಇದೆ. ಇದರಿಂತೆ ದೊಡ್ಡಪ್ಪ (ಅಣ್ಣ), ದೊಡ್ಡಮ್ಮ (ಅಕ್ಕ), ಚಿಕ್ಕಪ್ಪ (ತಮ್ಮ) ಮುಂತಾದವುಗಳನ್ನು ಮೇಲಿನಂತೆಯೇ ಪರಿಭಾವಿಸಬಹುದು. ಬಂಧುವಾಚಕಗಳ ರಚನೆಯ ಅಧ್ಯಯನವು ಆಕೃತಿಮಾಶಾಸ್ತ್ರದ ಕಕ್ಷೆಯಲ್ಲಿ ಬರುತ್ತದೆ.

ಬಂಧುವಾಚಕಗಳ ಬಳಕೆಯ ಸಂದರ್ಭಗಳು ತುಂಬ ಸ್ವಾರಸ್ಯಕರವಾಗಿರುತ್ತದೆ. ಭಾಷಾ ಸಮುದಾಯದಲ್ಲಿ ಪ್ರತಿಯೊಬ್ಬ ಭಾಷಿಕನಿಗೂ ನಿರ್ದಿಷ್ಟವಾದ ಸ್ಥಾನಗಳಿರುತ್ತವೆ. ವಿಧಿ – ನಿಷೇಧಗಳಿರುತ್ತವೆ. ಒಬ್ಬ ಭಾಷಿಕ ಇನ್ನೊಬ್ಬ ಭಾಷಿಕನೊಡನೆ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಕಟ್ಟುಪಾಡುಗಳಿರುತ್ತವೆ. ಅವುಗಳಿಗೆ ‘ಬಂಧುತ್ವದ ಬಳಕೆಗಳು’ ಎಂದು ಕರೆಯುತ್ತಾರೆ. ಅವುಗಳಲ್ಲಿ ಮುಖ್ಯವಾಗಿ ಎರಡು ವಿಧ. ‘ಪ್ರತ್ಯೇಕತೆಯ ಸಂಬಂಧ’ ಮತ್ತು ‘ವಿನೋದ ಸಂಬಂಧ’. ಪ್ರತ್ಯೇಕತೆಯ ವಿಧಾನವು ಭಿನ್ನಾಭಿಪ್ರಾಯ ಮತ್ತು ಹಿತಾಸಕ್ತಿಗಳ ಭಿನ್ನತೆಯಿಂದ ಉಂಟಾಗುವ ಘರ್ಷಣೆಗಳನ್ನು ನಿಯಂತ್ರಿಸಿ ಮಿತಗೊಳಿಸುತ್ತದೆ. ಅತ್ತೆ – ಅಳಿಯ, ಮಾವ – ಸೊಸೆಗಳ ಸಂಬಂಧದ ಬಗೆಗೆ ನಿಷೇದಗಳು ರೂಢಿಯಲ್ಲಿವೆ. ಇದಕ್ಕೆ ತದ್ವಿರುದ್ಧವಾದ ಪದ್ಧತಿಯೆಂದರೆ ವಿನೋಧ ಸಂಬಂಧ. ಇಲ್ಲಿ ರಕ್ತ ಸಂಬಂಧಿಗಳ ಹಿತಾಸಕ್ತಿಗಳನ್ನು ಒಂದೆಡೆ ಸೇರಿಸುವ ಮೂಲಕ ಬಂಧುತ್ವದ ಕಟ್ಟುಪಾಡುಗಳನ್ನು ಬಲಪಡಿಸುತ್ತದೆ. ವಿನೋದವೆಂದರೆ ಗೇಲಿ, ಅಣಕ, ಚೇಷ್ಟೆ, ಹಾಗೂ ಲೈಂಗಿಕ ವಿಷಯಗಳಿಗೆ ಸಂಬಂಧಪಟ್ಟಂತೆ ಅಸಭ್ಯ ನುಡಿಗಳೂ ಆಗಿರಬಹುದು. ಅತ್ತೆ / ಮಾವನ ಮಗ / ಮಗಳು, ಅಕ್ಕ / ತಂಗಿಯ ಮಗ / ಮಗಳು, ಹೆಂಡತಿಯ ಸಹೋದರ, ಸಹೋದರಿ, ಅಜ್ಜ / ಅಮ್ಮ (ತಾಯಿಯ ತಂದೆ / ತಾಯಿ) ಮೊಮ್ಮಗ / ಮೊಮ್ಮಗಳು ಇವರಲ್ಲಿ ವಿನೋದ ಸಂಬಂಧ ಹೆಚ್ಚಿರುತ್ತದೆ. ವಿನೋದ ಸಂಬಂಧಗಳು ಹೊರನೋಟಕ್ಕೆ (ಹೆಚ್ಚಾಗಿ) ದ್ವೇಷದಂತೆ ಕಂಡುಬಂದರೂ ಒಳನೋಟಕ್ಕೆ ಅವೆಲ್ಲ ವ್ಯಕ್ತಿಗಳ ನಡುವಣ ನಿಕಟಸಂಪರ್ಕವನ್ನೂ ಸ್ನೇಹವನ್ನೂ ಸೂಚಿಸುತ್ತವೆ.

ಭಾಷಾ ಸಂವಹನದಲ್ಲಿ ಮಧ್ಯಂತರವಾಗಿ ವಸ್ತು ಅಥವಾ ವ್ಯಕ್ತಿಯ ಹೆಸರಿನ ಮೂಲಕ ಬಂಧುಗಳನ್ನು ಸಂಬೋಧಿಸುವ ವಿಧಾನ ಎಲ್ಲ ಸಮುದಾಯಗಳಲ್ಲಿಯೂ ಬಳಕೆಯಲ್ಲಿದೆ. ಒಬ್ಬ ವ್ಯಕ್ತಿ ಇಂತಹವನ ತಂದೆ ಅಥವಾ ತಾಯಿ ಎಂದು ಹೇಳುವ ಸಂದರ್ಭದಲ್ಲಿ ಹಾಗೂ ಗಂಡ ಹೆಂಡತಿಯ, ಹೆಂಡತಿ ಗಂಡನ ಹೆಸರಿಡಿದು ಕರೆಯುವಲ್ಲಿ ನಿಷೇಧ ಇರುವುದರಿಂದ ಅಂತಹ ಸಂದರ್ಭದಲ್ಲಿ ಮಗುವಿನ ಹೆಸರಿನ ಮೂಲಕ ಅಥವಾ ಅವರು ಕೈಕೊಳ್ಳುವ ವೃತ್ತಿಯ ಮೂಲಕ ಕರೆಯುವ ವಾಡಿಕೆ ಇದೆ.

ಇವರು ರಮೇಶನ ತಂದೆ / ತಾಯಿ
ಗಿರೀಶ್ ನಿಮ್ಮ ಅಪ್ಪನನ್ನು ಕರೆ
ನಮ್ಮ ರೈತ ಹೊಲಕ್ಕೆ ಹೋದರು

ಆವೇಶದ ವೇಳೆಯಲ್ಲಿ ಒಬ್ಬ ವ್ಯಕ್ತಿ ಇನ್ನೊಮ್ಮ ವ್ಯಕ್ತಿಯನ್ನು ಬೈಯುವಾಗ ಮಕ್ಕಳ ಮೂಲಕ ಸಂಬೋಧಿಸಿ ಬೈಯುತ್ತಾರೆ.

            ‘ಏಏ ಕತ್ತೆಯಂತಹದ, ಮುದುಕ ಆದಿ ಬುದ್ದಿ ಬರಲಿಲ್ಲ
            ‘ಕ್ವಾಣ ಇದ್ದಂಗ ಇದೆ
            ‘ನಾಯಿಯ ಹಾಗೆ ಬೊಗಳಬೇಡ

ಅಳಿಯನನ್ನು ಹೆಸರಿಡಿದು ಕೂಗದೆ ಮಗಳ ಅಥವಾ ಮೊಮ್ಮಗ ಅಥವಾ ಮೊಮ್ಮಗಳ ಮೂಲಕ ಕರೆಯುವ ವಾಡಿಕೆ ಇದೆ.

            ‘ವೀಣಾ ನಿಮ್ಮ ಯಜಮಾನರು ನಾಳೆ ಬರಬಹುದು
            ‘ಪಾರಮ್ಮ ನಿಮ್ಮ ತಂದೆಯವರನ್ನು ಊಟಕ್ಕೆ ಕರೆ
            ‘ಅಭಿತೇಜ ನಾಳೆ ಬೆಂಗಳೂರಿನ ನಿಮ್ಮ ಮಾಮಾನ ಮನೆಗೆ ಹೋಗೋಣ

ಇಂತಹ ರಕ್ತ ಸಂಬಂಧಗಳು ಸೌಹಾರ್ಧಯುತವಾದ ಮಾತುಕತೆಗೆ ಹಾಗೂ ಸಾಮಾಜಿಕ ಅಂತರ್ ಕ್ರಿಯೆಗೆ ಸಹಾಯ ಮಾಡಿ ಕೊಡುತ್ತವೆಯಲ್ಲದೆ ಸಮುದಾಯದಲ್ಲಿ ಸ್ನೇಹಪರ ವಾತಾವರಣವನ್ನು ಪೋಷಿಸುತ್ತವೆ. ಕೆಲವು ಭಾಷಿಕ ಸಂದರ್ಭಗಳಲ್ಲಿ ತಂದೆ ತಾಯಿಯ ಹೆಸರು ಮಕ್ಕಳಿಗೆ ಉಪನಾಮವಾಗಿ ಬರುತ್ತದೆ.

            ‘ದುಂಡಪ್ಪನ ಮಗ ಶಂಕರೆಪ್ಪ
            ‘ಪಾರಮ್ಮನ ಮಗಳು ಕಾಶವ್ವ

ಬಂಧುತ್ವದ ವ್ಯಾಪ್ತಿಯು ಆ ಬಳಗದ ಎಲ್ಲ ವ್ಯಕ್ತಿಗಳಿಗೂ ವ್ಯಾಪಿಸುತ್ತದೆ. ಸಂಬಂಧಗಳ ಸ್ವರೂಪಕ್ಕೆ ತಕ್ಕಂತೆ ಚಿಕ್ಕಪ್ಪ, ದೊಡ್ಡಪ್ಪ, ಅತ್ತೆ, ಭಾವ ಇತ್ಯಾದಿಯಾಗಿ ಸಂಬೋಧಿಸುವುದು ರೂಢಿಯಲ್ಲಿದೆ. ಇದು ಬಂಧುಗಳಲ್ಲಿಯ ಅನೋನ್ಯತೆಯನ್ನು ಸೂಚಿಸುತ್ತದೆ.

ಭಾಷಾ ಸಮುದಾಯಗಳಲ್ಲಿ ವ್ಯಕ್ತಿಗಳನ್ನು ಒಗ್ಗೂಡಿಸುವ ಪ್ರಾಥಮಿಕ ಬಂಧನವೇ ಬಂಧುತ್ವವಾಗಿರುವುದರಿಂದ ಅಲ್ಲಿ ಸಾಮಾಜಿಕ ಮನ್ನಣೆ ಬಹುಮುಖ್ಯವಾದುದಾಗಿದೆ. ಇದಕ್ಕೆ ದತ್ತು ಪದ್ಧತಿ ಉತ್ತಮ ಉದಾಹರಣೆ ಎನ್ನಬಹುದು. ಒಬ್ಬ ವ್ಯಕ್ತಿ ತನಗೆ ಗಂಡು ಮಕ್ಕಳಿಲ್ಲದ ಪಕ್ಷದಲ್ಲಿ ತನ್ನ ಬಂಧುಗಳ ಪೈಕಿ ಒಬ್ಬರನ್ನು ದತ್ತುವಾಗಿ ಸ್ವೀಕರಿಸಿ ಕಾನೂನಿನ ಪ್ರಕಾರ ತಂದೆಯೆನಿಸಿಕೊಳ್ಳುತ್ತಾನೆ. ದತ್ತು ಪುತ್ರ ಎಲ್ಲ ಹಕ್ಕು ಬಾಧ್ಯತೆಗಳಿಗೂ ಒಡೆಯನಾಗುತ್ತಾನೆ. ಆದ್ದರಿಂದ ಬಂಧುತ್ವದ ನಿರ್ಣಯದಲ್ಲಿ ಸಾಮಾಜಿಕ ಮನ್ನಣೆ ಪ್ರಧಾನವಾದುದಾಗಿದೆ.

ಭಾಷಿಕ ಸನ್ನಿವೇಶದಲ್ಲಿ ಕೆಲವು ವೇಳೆ ಹಲವರನ್ನು ಸಂಬೋಧಿಸಲು ಒಂದೇ ಬಂಧುತ್ವ ಸೂಚಕ ಪರಿಭಾಷೆಯನ್ನು ಬಳಸುವುದರಿಂದ ಅನೇಕ ಗೊಂದಲಗಳು ಉಂಟಾಗಬಹುದು. ಅಂತಹ ಸಂದರ್ಭಗಳು ಬಂದಾಗ ಒಂದು ಪರಿಹಾರವನ್ನು ಹುಡುಕಬಹುದು. ವ್ಯಕ್ತಿಯೊಬ್ಬನನ್ನು ಸೂಚಿಸಲು ಬಳಸುವ ಬಂಧುತ್ವದ ಸೂಚಕದ ಜೊತೆಗೆ ಆ ವ್ಯಕ್ತಿಯ ಹೆಸರನ್ನೂ ಸೇರಿಸುವುದುಂಟು.

            ‘ಈಶ್ವರಪ್ಪ ಕಾಕಾ‘ (ಚಿಕ್ಕಪ್ಪ)
            ‘ಶಿವಯೋಗಿ ಮಾಮಾ

ಸಂಬೋಧನೆಗೆ ಒಳಪಡುವ ವ್ಯಕ್ತಿ ಎದುರಿಗಿದ್ದರೆ, ಆ ವ್ಯಕ್ತಿಯನ್ನು ನೋಡುತ್ತಾ ಬಂಧು ಸೂಚಕವನ್ನು ಬಳಸಿದರೆ ಸಂಬಂಧ ಸ್ಪಷ್ಟವಾಗುವುದರಲ್ಲಿ ಯಾವ ಗೊಂದಲವೂ ಆಗುವುದಿಲ್ಲ. ಭಾಷಿಕನ ಮಾತನಾಡುವ ಧಾಟಿಯಿಂದಲೇ ಆ ಭಾಷಿಕ ಯಾರನ್ನು ಕುರಿತು ಮಾತನಾಡುತ್ತಿದ್ದಾನೆ ಎಂಬುದನ್ನು ಸುಲಭವಾಗಿ ಗುರುತಿಸಬಹುದು. ಬಂಧುತ್ವವನ್ನು ಗುರುತಿಸಲು ಇನ್ನೊಂದು ಮಾರ್ಗವಿದೆ. ಬಂಧುತ್ವದ ಸೂಚಕಗಳೊಡನೆ ಬಂಧು ವಾಸವಾಗಿರುವ ಸ್ಥಳದ ಹೆಸರನ್ನು ಸೇರಿಸಿ ಹೇಳುವುದುಂಟು.

            ‘ಧಾರವಾಡ ಅಮ್ಮ
            ‘ಮಮದಾಪುರ ಅಜ್ಜ
            ‘ಜಮಖಂಡಿ ಮಾವ

ಕೆಲವು ವೇಳೆ ದೊಡ್ಡ, ಸಣ್ಣ ಎಂಬ ವಿಶೇಷಣಗಳ ಬಳಕೆಯಿಂದಲೂ ಬಂಧುಗಳನ್ನು ಖಚಿತವಾಗಿ ಗುರುತಿಸುವುದುಂಟು. ದೊಡ್ಡ ಅತ್ತೆ, ಸಣ್ಣ ಅತ್ತೆ, ದೊಡ್ಡ ಮಾವ, ಸಣ್ಣ ಮಾವ, ಹೀಗೆ ಬಂಧುಗಳನ್ನು ಖಚಿತವಾಗಿ ಗುರುತಿಸಲು ವ್ಯಕ್ತಿನಾಮ, ಸ್ಥಳನಾಮ ಮತ್ತು ವಿಶೇಷಣಗಳು ಬಳಕೆಯಾಗುತ್ತದೆ.

ಕುಟುಂಬ ವ್ಯವಸ್ಥೆಯ ಸ್ವರೂಪಕ್ಕೆ ತಕ್ಕಂತೆ ಬಂಧುವಾಚಕಗಳ ಬಳಕೆಯಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ. ಬಂಧು ಸಮೂಹಗಳ ಸಾಂಸ್ಕೃತಿಕ ಆಯಾಮ ತುಂಬ ಸ್ವಾರಸ್ಯಕರವಾಗಿರುತ್ತದೆ. ಕೆಲವು ಸಂಗತಿಗಳನ್ನು ಇಲ್ಲಿ ಚರ್ಚಿಸಲಾಗಿದೆ. ಕನ್ನಡ ಬಂಧುತ್ವ ವ್ಯವಸ್ಥೆಯು ದ್ರಾವಿಡ ಬಂಧುತ್ವ ವ್ಯವಸ್ಥೆಯ ತತ್ವಗಳ ಮೇಲೆಯೇ ಅವಲಂಬಿಸಿದೆ. ದ್ರಾವಿಡ ಭಾಷಿಕರಲ್ಲಿ ತನಗಿಂತ ಕಿರಿಯರನ್ನು ಸಂಬೋಧಿಸುವಾಗ ಬಂಧುವಾಚಕಗಳನ್ನು ಸಾಮಾನ್ಯವಾಗಿ ಬಳಸುವುದಿಲ್ಲ ಅವರ ಹೆಸರಿಡಿದು ಸಂಬೋಧಿಸುತ್ತಾರೆ. ತನಗಿಂತ ಹಿರಿಯರನ್ನು ಸಂಬೋಧಿಸುವಾಗ ಬಂಧುವಾಚಕಗಳನ್ನು ಬಳಸುತ್ತಾರೆ.

ಬಂಧುತ್ವ ವ್ಯವಸ್ಥೆಯಲ್ಲಿ ವಯಸ್ಸು, ಲಿಂಗ ಮತ್ತು ಅಂತಸ್ತುಗಳು ಪ್ರಮುಖ ಪಾತ್ರವಹಿಸುತ್ತವೆ. ಎಳೆಯ ತಲೆಮಾರಿನ ವೈವಾಹಿಕ ಸಂಬಂಧಿಕಗಳ ಮತ್ತು ವಿವಾಹಯೋಗ್ಯ ಸಂಬಂಧಿಗಳ ನಡುವೆ ಸಣ್ಣ ಪ್ರಮಾಣದ ಭಿನ್ನತೆಯಿದೆ. ‘ಮದುಮಗ’ ಎಂಬ ಪದದ ಅರ್ಥವು ಮದುವೆಯ ದಿನ ಅಥವಾ ಆ ದಿನದ ಆಸುಪಾಸಿನಲ್ಲಿರುವ ಪುರುಷನಿಗೆ ಅನ್ವಯಿಸಬಹುದಾದ ಪದವಾಗಿದೆ. ಪ್ರಾಯಶಃ ಅವನಿಗೆ ಮಕ್ಕಳಾಗುವವರೆಗೆ ಅದನ್ನು ಹೀಗೂ ಹೇಳಬಹುದು. ಮದುವೆಯಿಂದ ಮುಂದೆ ಒಂದೆರಡು ವರ್ಷಗಳವರೆಗೂ ಈ ಪದವನ್ನು ಅವನಿಗೆ ಅನ್ವಯಿಸಬಹುದು. ಮದುಮಗ ಪದಕ್ಕೆ ಪರ್ಯಾಯವಾಗಿ ಬರುವ ‘ಮದುಮಗಳು’ ಪದದ ಬಳಕೆಯಲ್ಲಿ ಕೊಂಚ ವಿಶಾಲವಾದ ಅರ್ಥದಲ್ಲಿ ಮೈನೆರೆದ ವಿವಾಹಿತೆ ಅಥವಾ ಅವಿವಾಹಿತೆ ಅಂದರೆ ಮಕ್ಕಳನ್ನು ಇನ್ನು ಪಡೆಯದ ಕನ್ಯೆಯನ್ನು ಸೂಚಿಸಲು ಆ ರೂಪ ಬಳಕೆಯಲ್ಲಿದೆ.

ಸ್ತ್ರೀಯು ತನ್ನ ವಿವಾಹ ಸಂಬಂಧಿ ಹಿರಿಯ ಪುರುಷ ಬಂಧುಗಳೊಂದಿಗೆ ಬಹಳ ಔಪಚಾರಿಕ ಮತ್ತು ಎಚ್ಚರಿಕೆಯ ಸಂಬಂಧವನ್ನು ಹೊಂದಿರುತ್ತಾಳೆ. ಈ ಔಪಚಾರಿಕತೆಯು ವಿವಾಹಯೋಗ್ಯ ಸೋದರ ಬಂಧುಗಳೊಂದಿಗೆ ಅಷ್ಟಾಗಿ ಎದ್ದು ತೋರುವುದಿಲ್ಲ. ಸಹೋದರ ಬಂಧುವಲ್ಲದ ವೈವಾಹಿಕ ಸಂಬಂಧಿಯು ಮನೆಗೆ ಹೊರಗಿನವನಾಗಿದ್ದು, ಆತನನ್ನು ಕಾಮುಕಭೀತಿ ಎಂದು ತಿಳಿಯಲಾಗುತ್ತಿದೆ. ಹೆಣ್ಣೊಬ್ಬಳು ತನ್ನ ಗಂಡನ ಅಣ್ಣನೊಂದಿಗೆ ಇಲ್ಲವೆ ಅಕ್ಕನ ಗಂಡನೊಂದಿಗೆ ಇರಿಸಿಕೊಳ್ಳಬಹುದಾದ ಸಂಬಂಧವು ನಿಷೇಧಗಳಿಂದ ಕೂಡಿದೆ. ಆಕೆಯು ಅವನ ಹೆಸರನ್ನೂ ಹೇಳಬಾರದು ಎಂಬ ಸಂಪ್ರದಾಯ ಗ್ರಾಮೀಣ ಪ್ರದೇಶಗಳಲ್ಲಿ ಜೀವಂತವಾಗಿದೆ. ಆದರೆ ಸ್ತ್ರೀಯು ತನ್ನ ಮಾತೃಮೂಲೀಯ ಸಂಬಂಧಗಳೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿರುತ್ತಾಳೆ.

ಸಂಬೋಧನೆಯಲ್ಲಿಯ ಕೆಲವು ಸೂಚಕ ಪದಗಳು ಧನಾತ್ಮಕ ಮನೋವೃತ್ತಿಯನ್ನುಂಟು ಮಾಡುತ್ತವೆ. ಉದಾ: ‘ಅಕ್ಕ’ ಪದ ಪ್ರಯೋಗದ ಸಂಬೋಧನೆಯು ಲೈಂಗಿಕ ಸಂಬಂಧವನ್ನು ಹೊರತುಪಡಿಸುತ್ತದೆ. ಏಕೆಂದರೆ ಅಕ್ಕನೆಂದು ಕರೆಯಲಾಗುವ ಭಾಷಿಕರೊಡನೆ ಲೈಂಗಿಕ ಸಂಬಂಧವು ಅಗಮ್ಯ ಗಮನವಾಗುತ್ತದೆ. ಮೇಲಾಗಿ ಜ್ಯೇಷ್ಠ ಮಹಿಳೆಯೊಂದಿಗೆ ಹೊಂದುವ ಲೈಂಗಿಕ ಸಂಬಂಧವು ಬಂಧುತ್ವ ಮತ್ತು ಜಾತಿ ವ್ಯವಸ್ಥೆಯ ತತ್ವಗಳಿಗೆ ಸರಿಹೊಂದುವುದಿಲ್ಲ. ಅಣ್ಣ / ಅಕ್ಕ ಎಂಬ ಸೂಚಕ ಪದಗಳ ಸಂಬೋಧನೆಯು ಲೈಂಗಿಕ ಸಂಬಂಧವನ್ನು ದೂರೀಕರಿಸುವ ಉದ್ದೇಶದಿಂದ ಕೂಡಿದ ಕಾಲ್ಪನಿಕ ಬಂಧುತ್ವದ ವಿಸ್ತರಣೆಯಾಗಿರಬಹುದು ಅಥವಾ ಇಲ್ಲದಿರಬಹುದು. ಆದರೆ ಮುಖ್ಯವಾಗಿ ಬಂಧುತ್ವವಾಚಕಗಳು ವಿವಾಹ ಸಂಬಂಧಿ ಬಂಧುಗಳ ಮತ್ತು ರಕ್ತ ಸಂಬಂಧಿಗಳ ನಡುವಣ ಜ್ಞಾತಿ ಪ್ರಬೇಧಗಳನ್ನು ಸೂಚಿಸುತ್ತವೆ.

ಬಂಧು ವ್ಯವಸ್ಥೆಯಲ್ಲಿ ಹಿರಿಯಣ್ಣನಿಗೆ ತನ್ನ ತಂಗಿಯ ಬಗೆಗೆ ಇರುವ ನೇರ ಜವಾಬ್ದಾರಿಯು ಆಕೆಯ ಪಾಲಕರಿಗೆ ಇರುವುದಕ್ಕಿಂತ ಹೆಚ್ಚಿನದಾಗಿದೆ. ಪ್ರಾಯದಲ್ಲಿ ಆತ ಸಾಕಷ್ಟು ಹಿರಿಯನಾಗಿದ್ದರೆ ಆಕೆಗೆ ತಕ್ಕ ವರನ ಆಯ್ಕೆಯಲ್ಲಿ ಆತನ ತೀರ್ಮಾನಕ್ಕೆ ತುಂಬ ಮಹತ್ವವಿದೆ. ಹಾಗೂ ಆಕೆಯ ಸುಖ – ದುಖಗಳಲ್ಲಿ ಇವನಿಗೆ ಗಮನಾರ್ಹ ಕಾಳಜಿಯಿರುತ್ತದೆ. ಒಂದು ವೇಳೆ ಆಕೆ ವಿಧವೆಯಾದಲ್ಲಿ ಅಥವಾ ವಿವಾಹ ವಿಚ್ಛೇದನ ಹೇಳಿ ತವರಿಗೆ ಮರಳಿದಲ್ಲಿ ನಿಶ್ಯರ್ತವಾಗಿ ಆಕೆಯ ಹಾಗೂ ಆಕೆಯ ಮಕ್ಕಳ ಲಾಲನೆ ಪಾಲನೆ ಅಣ್ಣಂದಿರ ಜವಾಬ್ದಾರಿಯಾಗಿದೆ. ಸಹೋದರ ಸಹೋದರಿಯರು ಒಂದು ಬಗೆಯ ಅಲೌಕಿಕ ಬಂಧನಕ್ಕೆ ಒಳಗಾಗಿರುವ ಸಂಗತಿಯು ಜಾನಪದ ಶಾಸ್ತ್ರದಲ್ಲಿ ಮತ್ತೆ ಮತ್ತೆ ಕಾಣಿಸುತ್ತದೆ.

ಬಂಧು ವರ್ಗದಲ್ಲಿ ಹೆಂಡತಿಯ ಸೋದರಿಯರ ಗಂಡ ಅಥವಾ ಗಂಡನ ಸೋದರರಿಗೆ ಸಮಾನಾಂತರ ಸೂಚಕಗಳನ್ನು ಬಳಸಲಾಗುತ್ತದೆ. ಈ ಸಂಬಂಧವನ್ನು ವಾಂಶಿಕ ಸಂಬಂಧದಿಂದ ಪ್ರತ್ಯೇಕಿಸಲೋಸುಗ ‘ಷಡ್ಡಕ’, ‘ನೆಗೆಣ್ಣಿ’ ಎಂಬ ಸೂಚಕಗಳನ್ನು ಬಳಸಲಾಗುತ್ತದೆ. ಈ ಪ್ರಕಾರ ಸಹೋದರರಿಬ್ಬರ ಹೆಂಡಂದಿರರು ಪರಸ್ಪರ ಅಕ್ಕ – ತಂಗಿಯರೆಂದು ಸೂಚಿತರಾಗುತ್ತಾರೆ. ಅದರಂತೆ ಸಹೋದರಿಯರ ಗಂಡಂದಿರು ಪರಸ್ಪರ ಅಣ್ಣ – ತಮ್ಮಂದಿರರಾಗುತ್ತಾರೆ. ಆದರೆ ಯಾರಾದರೂ ಕೇಳಿದಲ್ಲಿ ಕ್ರಮವಾಗಿ ‘ನಾವು ನೆಗೆಣ್ಣಿಯವರು’, ‘ನಾವು ಷಡ್ಡಕರು’ (ಮದುವೆಯ ಮೂಲಕ ಸಹೋದರ – ಸಹೋದರಿಯರು) ಎಂದು ತಮ್ಮ ಸಂಬಂಧವನ್ನು ಹೇಳುತ್ತಾರೆ. ಆದರೆ ನೆಗೆಣ್ಣಿ ಮತ್ತು ಷಡ್ಡಕ ಬಂಧುಗಳಲ್ಲಿ ನಿಕಟತ್ವ ಇರುವುದಿಲ್ಲ. ಗಂಡನ ಇನ್ನೊಬ್ಬಳ ಹೆಂಡತಿಯ ಮಗ ‘ಮಲಮಗ’ ಆಗುತ್ತಾನೆ. ಮಲಮಗನಿಗೆ ತಂದೆಯ ಉಪಪತ್ನಿ ‘ಮಲತಾಯಿ’ ಆಗುತ್ತಾಳೆ. ಮಲತಾಯಿಯರಿಗೆ ಮಲಮಕ್ಕಳ ಮೇಲೆ ಯಾವಾಗಲೂ ವಕ್ರದೃಷ್ಟಿ ಹಾಗೂ ಒಂದು ಬಗೆಯ ಪಕ್ಷಪಾತ ಧೋರಣೆಯಿರುತ್ತದೆ. ಮಲಮಕ್ಕಳಿಗೆ ಮಲತಾಯಿಯr ಮೇಲೆ ಮಾತೃವಾತ್ಸಲ್ಯ ಇರುವುದೇಯಿಲ್ಲ. ಹೀಗೆ ಷಡ್ಡಕ, ನೆಗೆಣ್ಣಿ, ಮಲತಾಯಿ, ಮಲಮಗ ಇವರ ಬಾಂಧವ್ಯದಲ್ಲಿಯ ಸಂಬಂಧವು ತುಂಬ ತಾಂತ್ರಿಕವಾಗಿರುತ್ತದೆ.

ಬಂಧು ಸಮೂಹದಲ್ಲಿ ಬರುವ ‘ನೆಂಟರು’ ಎನ್ನುವ ಪದವು ಭಾಷಿಕರೊಬ್ಬರ ಬಂಧುಗಳಾಗಿರುವ ಸ್ಥೂಲ ಪರವಾಗಿದೆ. ಬಂಧುವಾಚಕ ಪದಗಳು ‘ನಂಟರು’ ಪದದ ಅಡಿಯಲ್ಲಿ ಬರುತ್ತದೆ. ‘ನಂಟರು’ ಎಂದರೆ ಸಂಬಂಧಿಗಳು ಎಂಬ ಅರ್ಥವನ್ನು ಹೊಂದಿರುವ ಸಾಮಾನ್ಯ ಪದವಾಗಿದೆ. ಕೆಲವೊಮ್ಮೆ ಈ ಪದವು ಸಮಾನಾಂತರ ಮತ್ತು ವಿವಾಹ ಯೋಗ್ಯ ರಕ್ತ ಬಂಧುಗಳ ಹಾಗೂ ವೈವಾಹಿಕ ಬಂಧುಗಳನ್ನು ಒಳಗೊಂಡಂತೆ ಎಲ್ಲಾ ಸಂಬಂಧಿಗಳಿಗೆ ಅನ್ವಯಿಸುತ್ತದೆ. ಭಾಷಿಕರ ಸಾಮಾಜಿಕ ವಲಯದಲ್ಲಿ ಕಂಡುಬರುವ ಬೇರೆ ಬೇರೆ ಸಾಂಸ್ಕೃತಿಕ ಸಂದರ್ಭದಲ್ಲಿ ನೆಂಟರಿಷ್ಟರ ಸಂಬಂಧ ಗಾಢವಾಗಿ ಬೆಸೆಯಲಾಗಿದೆ. ಕುಟುಂಬದ ಸಾಂಸ್ಕೃತಿಕ ಐಕ್ಯತೆಯನ್ನು ಹಾಗೂ ಸಮತೋಲತೆಯನ್ನು ತರುವಲ್ಲಿ ನೆಂಟರು ಬಹುಮುಖ್ಯ ಪಾತ್ರ ವಹಿಸುತ್ತಾರೆ.

ಬಂಧುವಾಚಕಗಳು ಭಾಷಿಕರು ನಿರ್ವಹಿಸುವ ಸಾಮಾಜಿಕ ಕಾರ್ಯವನ್ನು ನಿರ್ಧರಿಸುತ್ತವೆ. ಬಂಧುಗಳ ಮಧ್ಯ ಉದ್ಭವಿಸುವ ಮನಸ್ತಾಪಗಳನ್ನು, ಘರ್ಷಣೆಗಳನ್ನು ತಪ್ಪಿಸುವ, ನಿಯಂತ್ರಿಸುವ ಸಾಧನವಾಗಿ ಕುಟುಂಬ ವಲಯದ ನೆಮ್ಮದಿಯ ಜೀವನಕ್ಕೆ ಸಹಕರಿಸುತ್ತವೆಯಲ್ಲದೆ ಸಾಮಾಜಿಕ ಸಂಬಂಧವನ್ನೂ ಬೆಸೆಯುತ್ತವೆ. ಭಾಷಾ ಸಮುದಾಯದಲ್ಲಿ ಸಾಂಸ್ಕೃತಿಕ ಹಿತ ಸಂಬಂಧವನ್ನುಂಟು ಮಾಡುವಲ್ಲಿ ಬಂಧು ಸೂಚಕಗಳು ಮಹತ್ವದ ಪಾತ್ರ ವಹಿಸುತ್ತವೆ.

 – – – –
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)