ಭಾಷೆಯ ಮುಖ್ಯ ಉದ್ದೇಶ ಸಾಮಾಜಿಕ ಸಂಪರ್ಕ. ಭಾಷೆಯಷ್ಟು ಪರಸ್ಪರ ವಿನಿಮಯ ಸಾಮರ್ಥ್ಯ ಬೇರಾವ ಸಂವಹನಕ್ಕೂ ಇಲ್ಲ. ಭಾಷೆಯು ಸಂಸ್ಕೃತಿಯ ಮುಖ್ಯ ಅಂಗವಾಗಿರುವುದರಿಂದ ಭಾಷಾ ಸಮುದಾಯದಲ್ಲಿ ಭಾಷಿಕರು ಪರಸ್ಪರ ಆಂತರಿಕ ಸಂಬಂಧವನ್ನು ಹೊಂದಿರುತ್ತಾರೆ. ಭಾಷೆಯನ್ನು ಸಾಮಾಜಿಕ ಚೌಕಟ್ಟಿಗೆ ಒಳಪಡಿಸಿ, ಅದರ ಬಳಕೆಯ ಪರಿಸರದಲ್ಲಿ ಅಭ್ಯಸಿಸಿದರೆ ಸಮಾಜೋ ಭಾಷಿಕ ಅನನ್ಯತೆಯನ್ನು ಗುರುತಿಸಿದಂತಾಗುತ್ತದೆ. ಭಾಷಿಕರ ಸಾಮಾಜಿಕ ವರ್ಗ, ಜಾತಿ, ಅಂತಸ್ತು, ಲಿಂಗ, ವಯಸ್ಸು, ಇಂತಹ ಜೈವಿಕ ಅಂಶಗಳು ಭಾಷಾ ಬಳಕೆಯಲ್ಲಿ ಪರಿಣಾಮ ಬೀರುತ್ತವೆ. ತತ್ಪರಿಣಾಮವಾಗಿ ಭಾಷಾ ಬಳಕೆಯಲ್ಲಿ ವ್ಯತ್ಯಾಸಗಳು ಕಂಡುಬರುತ್ತದೆ. ಈ ಏಣಿ ಶ್ರೇಣಿ ಕ್ರಿಯೆಗೆ ಸ್ತರ ವಿನ್ಯಾಸವೆಂದು ಕರೆಯುತ್ತಾರೆ. ಬಳಕೆಯ ವಿಭಿನ್ನತೆಯ ಸ್ತರಕ್ಕೆ ಅನುಗುಣವಾಗಿ ಪರಸ್ಪರ ಸಂಬಂಧಿತರಾಗುತ್ತಾರೆ. ಶ್ರೀಮಂತರು ಶ್ರೀಮಂತರ ಜೊತೆಗೆ ಬಡವರು ಬಡವರ ಜೊತೆಗೆ ಹೆಚ್ಚಾಗಿ ಸಂಬಂಧ ಬೆಳೆಸುವುದುಂಟು.

ಭಾಷಾಸಮುದಾಯದಲ್ಲಿ ಕಳ್ಳು ಬಳ್ಳಿ, ಸಂಘ ಸಂಸ್ಥೆ ಇವೆಲ್ಲವೂ ಈ ಸಮುದಾಯದ ಸಂಸ್ಕೃತಿಯಿಂದ ನಿರ್ಣಯಿಸಲ್ಪಟ್ಟಿರುವ ವಿಷಯಗಳು. ಇವುಗಳ ಸಂಘಟನೆ, ರಚನೆ, ಇರುವಿಕೆ ಮತ್ತು ಕಾರ್ಯನಿರ್ವಹಣೆ ಮುಂತಾದವು ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತವೆ. ಸಾಮಾಜಿಕ ಸಂಬಂಧಗಳು ಭಾಷಿಕರ ಪರಸ್ಪರ ಅರಿವು, ಅನುಭವ, ಪ್ರಭಾವ ಹಾಗೂ ಪ್ರಚೋದನೆಗಳನ್ನೊಳಗೊಂಡಿರುತ್ತವೆ. ಭಾಷಾ ಸಮುದಾಯದಲ್ಲಿ ಬ್ರಾಹ್ಮಣರ ಸ್ಥಾನಮಾನ ಬ್ರಾಹ್ಮಣೇತರರಿಗಿಂತ ವಿದ್ಯಾವಂತರ ಸ್ಥಾನ ಅವಿದ್ಯಾವಂತರಿಗಿಂತ ಉನ್ನತವಾಗಿರುತ್ತದೆ. ಇದರಂತೆ ಭೂ ಒಡೆಯ ಹಾಗೂ ಕಾರ್ಮಿಕರ ಸ್ಥಾನಮಾನಗಳು, ಕಾರ್ಯ ವೈಖರಿಗಳು ಬೇಧಗೊಂಡಿವೆ. ವಿದ್ಯಾವಂತರಲ್ಲಿ ಇಂಗ್ಲಿಷ್ ಭಾಷೆಯನ್ನು ಕಲಿತವರಿಗೆ ಪ್ರಾದೇಶಿಕ ಭಾಷೆಯನ್ನು ಕಲಿತವರಿಗಿಂತ ಹೆಚ್ಚಿನ ಮಾನ್ಯತೆ ಇದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಭಾಷಿಕರು ಉದ್ದಕ್ಕೂ ಒಂದೇ ಸ್ತರದಲ್ಲಿರಬೇಕೆಂಬ ನಿರ್ಬಂಧವಿಲ್ಲ. ಒಬ್ಬ ಭೂಕಾರ್ಮಿಕ ಶ್ರದ್ಧೆಯಿಂದ ದುಡಿದು ಭೂ ಒಡೆಯನಾಗಬಹುದು. ಒಬ್ಬ ಭೂ ಒಡೆಯ ದುರ್ದೈವದಿಂದ ಕಾರ್ಮಿಕನಾಗಬಹುದು. ಸ್ತರ ವಿನ್ಯಾಸದಲ್ಲಿ ಸಾಮಾಜಿಕ ಚಲನೆ ಪ್ರತಿಗಾಮಿಯಾಗಿರುವಂತೆ ಗತಿ ವಿರೋಧಿಯೂ ಆಗಿದೆ.

ಸಾಮಾಜಿಕ ವರ್ಗ ಮತ್ತು ಜಾತಿಗಳು ಸ್ತರ ವಿನ್ಯಾಸದ ಪ್ರಧಾನ ರೂಪಗಳಾಗಿವೆ. (ಇವುಗಳಲ್ಲಿಯ ಸಾಮ್ಯ – ವೈಷಮ್ಯಗಳನ್ನು ಇದೇ ಅಧ್ಯಾಯದ ಕೊನೆಯ ಟಿಪ್ಪಣಿ ಭಾಗದಲ್ಲಿ ಕೊಡಲಾಗಿದೆ.) ಸಾಮಾಜಿಕ ವರ್ಗವು ಸಮುದಾಯದ ಒಂದು ಭಾಗವಾಗಿದ್ದು, ಇತರ ಭಾಗಗಳಿಂದ ಅಂತಸ್ತಿನ ಆಧಾರದ ಮೇಲೆ ಬೇರೆಯಾಗಿರುವುದು (ಇಲ್ಲಿ ಭಾಗವೆಂದರೆ ನಿರ್ದಿಷ್ಟ ಸಾಮಾಜಿಕ ಸಂಬಂಧಗಳನ್ನೊಳಗೊಂಡ ಜನರ ಗುಂಪು). ಸಾಮಾಜಿಕ ವರ್ಗವು ಭಾಷಿಕರ ಸ್ಥಾನಮಾನವನ್ನವಲಂಬಿಸಿರುತ್ತದೆ. ಸಾಮಾಜಿಕ ವರ್ಗದಂತೆ ಜಾತಿಯೂ ಸಹಿತ ಸಾಮಾಜಿಕ ವ್ಯವಸ್ಥೆಯಾಗಿದ್ದು, ಅಲ್ಲಿಯ ಸದಸ್ಯರು ಅದೇ ವರ್ಗದಲ್ಲಿ ಹುಟ್ಟಿಬೆಳೆದು ಆ ಸಾಮಾಜಿಕ ವರ್ಗದ ನಿಯಮಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುತ್ತಾರೆ. ತಮ್ಮ ಸಾಮಾಜಿಕ ವರ್ಗವನ್ನು ಬಿಟ್ಟು ಮತ್ತೊಂದು ವರ್ಗಕ್ಕೆ ವರ್ಗಾವಣೆಯಾಗುವುದು ಸುಲಭಸಾಧ್ಯವಿಲ್ಲದ ವರ್ಗಕ್ಕೆ ಜಾತಿ ಎನ್ನಲಾಗುತ್ತದೆ. ಜಾತಿ ವ್ಯವಸ್ಥೆಯಲ್ಲಿ ಮೇಲು – ಕೀಳು ಎಂಬ ಭಾವನೆ ಇರುತ್ತದೆ. ಬ್ರಾಹ್ಮಣರು ಉಚ್ಛ ಶ್ರೇಣಿಗೆ ಸೇರಿದರೆ ಹರಿಜನರು ಕೆಳ ಶ್ರೇಣಿಗೆ ಸೇರುತ್ತಾರೆ. ಒಂದು ಭಾಷಾ ಸಮುದಾಯದ ಭಿನ್ನ ಜಾತಿಗಳ ಮಧ್ಯೆ ವಿವಾಹ ಸಂಬಂಧ ಏರ್ಪಡುವುದಿಲ್ಲ. ಒಂದು ವೇಳೆ ನಡೆದರೆ ಸಮುದಾಯ ವಕ್ರ ದೃಷ್ಟಿ ಬೀರುತ್ತದೆ. ಜಾತಿ ವ್ಯವಸ್ಥೆಯಲ್ಲಿ ಕುಲಕಸಬುಗಳು ಬೆಳೆದು ಬಂದಿವೆ. ಪುರೋಹಿತ ವರ್ಗದವರು ಅರ್ಚನೆ, ವೈಶ್ಯರು ವ್ಯಾಪಾರ, ಕುಂಬಾರರು ಮಡಿಕೆ ತಯಾರಿಸುವುದು, ಶೂದ್ರರು ಚರ್ಮಹದಗೊಳಿಸುವಿಕೆ ಮುಂತಾದ ಕೆಲಸಗಳನ್ನು ಮಾಡುವ ಪದ್ಧತಿ ಇದೆ. ಆಧುನಿಕತೆಯ ಸಂಪರ್ಕದಿಂದಾಗಿ ಈಗ ಜಾತಿ ವ್ಯವಸ್ಥೆಯಲ್ಲಿ ಶಿಥಿಲತೆ ಉಂಟಾಗಿದೆ. ಇದು ಭಾಷಾ ಸಮುದಾಯದ ಅಭಿವೃದ್ಧಿಯ ಸಂಕೇತವಾಗಿದೆ.

ಒಂದು ಭಾಷಾ ಸಮುದಾಯದ ಭಾಷಿಕರ ವಯಸ್ಸು, ಲಿಂಗ, ಜಾತಿಯಂತಹ ಸಾಮಾಜಿಕ ಅಂಶಗಳು ಆ ಭಾಷೆಯ ರಚನಾತ್ಮಕ ಅಂಶಗಳ ಬದಲಾವಣೆಗೆ (ಧ್ವನಿ. ಪದ, ವಾಕ್ಯ) ಕಾರಣವಾಗುತ್ತವೆ. ಒಂದು ಪ್ರದೇಶದ ಬ್ರಾಹ್ಮಣರ ರಚನೆಯು ಬ್ರಾಹ್ಮಣೇತರ ಭಾಷೆಯ ರಚನೆಗಿಂತ ಭಿನ್ನವಾಗಿರುತ್ತದೆ. ಕಿತ್ತೂರು ಕರ್ನಾಟಕದ ಬ್ರಾಹ್ಮಣರು ಮನೆಯಾಗ (ಮನೆಯಲ್ಲಿ), ಹೋಗಲಿಕ್ಕಿಲ್ಲ (ಹೋಗುವುದಿಲ್ಲ) ಎಂಬ ರೂಪಗಳನ್ನು ಬಳಸಿದರೆ ಬ್ರಾಹ್ಮಣೇತರರು ‘ಮನ್ಯಾಗ’, ‘ಹೋಗುದುಲ್ಲ’ ಎಂಬಂತಹ ರೂಪಗಳನ್ನು ಬಳಸುತ್ತಾರೆ.

ಒಂದೇ ಸಮುದಾಯಕ್ಕೆ ಸೇರಿದ ಭಾಷಿಕರು ಅವರವರ ಸ್ಥಾನಮಾನಕ್ಕೆ ತಕ್ಕಂತೆ ಮಾತಾಡುವ ರೀತಿಯಲ್ಲಿ ವ್ಯತ್ಯಾಸವಾಗುವುದುಂಟು. ಉದಾ : ಲಿಂಗಾಯತರು ತಮ್ಮ ಸಮುದಾಯಕ್ಕೆ ಸೇರಿದ ಸ್ಥಿತಿವಂತ ಲಿಂಗಾಯತರ ಮಕ್ಕಳನ್ನು ಗೌರವದಿಂದ ಸಂಬೋಧಿಸುವುದುಂಟು. ‘ಮಲ್ಲು ಊರಿಂದ ಯಾವಾಗ ಬಂದ್ದೀಯಾ?’ ‘ಸಣ್ಣ ದನಿ ಮಲ್ಲಾ ನಮಸ್ಕಾರ’, ಹಾಗೆಯೇ ಆರ್ಥಿಕವಾಗಿ ಹಿಂದುಳಿದ ಲಿಂಗಾಯತರ ಮಕ್ಕಳನ್ನು ಏಕವಚನದಿಂದ ಸಂಬೋಧಿಸುವರು. ‘ಕಲ್ಲ್ಯಾ ಬಾರಲೇ,’ ‘ಲೇ ರಾಮ್ಯಾ ಎಲ್ಲಿಗಿ ಹೊಂಟೀ ‘ಸಾಮಾಜಿಕ ಸ್ಥಾನಮಾನವನ್ನು ಅನುಲಕ್ಷಿಸಿ ಭಾಷಾ ಬಳಕೆಯಲ್ಲಿ ಇಂತಹ ಏಣಿ ಶ್ರೇಣಿಯ ವ್ಯವಸ್ಥೆಯು ಎಲ್ಲ ಸಮುದಾಯದಲ್ಲಿಯೂ ಇದೆ. ಮೇಲ್ವರ್ಗದ ಕಿರಿಯ ವಯಸ್ಸಿನವರು ಕೆಳವರ್ಗದ ಹಿರಿಯರನ್ನು ಏಕವಚನದಿಂದ ಕರೆಯುವುದುಂಟು. ಹಾಗೆಯೇ ಕೆಳವರ್ಗದ ಹಿರಿಯರು ಮೇಲ್ವರ್ಗದ ಕಿರಿಯ ವಯಸ್ಸಿನವರನ್ನು ಗೌರವದಿಂದ ಕರೆಯುದುಂಟು. ‘ಸಣ್ಣದನಿ ಪತ್ರೆಪ್ಪ ಸಾಹುಕಾರರು ಬೆಳಗಾವಿಗೆ ಹೋಗಿದ್ದಾರೆ.’ ‘ಈರಣ್ಣ ಸಾಹುಕಾರರೇ ನಮಸ್ಕಾರ’ ಇಂತಹ ಸಂದರ್ಭದಲ್ಲಿ ಭಾಷಿಕರು ತಮ್ಮ ಪ್ರದೇಶದ ಆಡುನುಡಿಯಲ್ಲಿ ವ್ಯವಹರಿಸುತ್ತಾರೆ.

ಔಪಚಾರಿಕ ಮತ್ತು ಅನೌಪಚಾರಿಕ ಸಂದರ್ಭದಲ್ಲಿ ಭಾಷಿಕರು ಒಬ್ಬರನ್ನೊಬ್ಬರು ಸಂಬೋಧಿಸುವ ವಿಧಾನದಲ್ಲಿಯೂ ಭಿನ್ನತೆ ಇರುತ್ತದೆ. ಮಕ್ಕಳು ತಮ್ಮ ಪಾಲಕರ ಜೊತೆಗೆ, ಗುರು ಹಿರಿಯರ ಜೊತೆಗೆ ಗೌರವಯುತವಾಗಿ ವರ್ತಿಸುತ್ತಾರೆ. ಆ ಸಂದರ್ಭದಲ್ಲಿ ಅಪ್ಪ, ಅಣ್ಣ, ಅಜ್ಜ, ಅವ್ವ ಮುಂತಾದ ಬಂಧುಸೂಚಕಗಳನ್ನು ಬಳಸುವುದುಂಟು. ಸ್ನೇಹಿತರೊಂದಿಗೆ ಮುಕ್ತವಾಗಿ ವರ್ತಿಸುತ್ತಾರೆ. ಸ್ನೇಹಿತರನ್ನು ಅವರ ಹೆಸರು ಇಲ್ಲವೇ ಕುಲನಾಮ ಹಚ್ಚಿ ಕರೆಯುವುದುಂಟು. ಉದಾಃ ಚಳಿಗಾಲದಲ್ಲಿ ಚಳಿಕಾಸುತ್ತಾ ಹಿರಿಯರು, ಮಕ್ಕಳು ಪರಿಚಿತರು ಎಲ್ಲರೂ ಕೂಡಿ ಮಾತಾಡುತ್ತಾರೆಂದು ಭಾವಿಸಿಕೊಳ್ಳಿರಿ. ಆಗ ಭಾಷೆಯ ಬಳಕೆ ಸಹಜವಾಗಿರುತ್ತದೆ. ‘ತಂಡಿಭಾಳ ಐತಿ’ ‘ತಂಡ್ಯಾಗ (ಚಳಿಗಾಲದಲ್ಲಿ) ಹೋಲಕ್ ಹೋಗಾಕ್ ಆಗುದಿಲ್ಲ’, ‘ಇನ್ನಷ್ಟು ಹುಲ್ ಹಾಕ್’ ಮುಂತಾದ ಮಾತುಗಳಿಂದ ಆರಂಭವಾಗಿ ತಮ್ಮ ಹಳ್ಳಿಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮಸ್ಯೆಗಳ ಬಗೆಗೆ ಚರ್ಚಿಸುವುದುಂಟು. ಇದರಿಂದ ಭಾಷಿಕರ ಸಾಮಾಜಿಕ ಮನೋವೃತ್ತಿ ಅವರ ಮಾತಿನಲ್ಲಿ ಅಭಿವ್ಯಕ್ತವಾಗುತ್ತದೆ. ಅದರಂತೆ ಊಟ ಮಾಡಿ ಎದುರಾದ ಪರಿಚಿತರನ್ನು ‘ಊಟಾಯಿತಾ’ ಎಂದು ಕೇಳುವುದುಂಟು, ಅದು ಅಸಹಜವಾಗಿದ್ದರೂ ಭಾಷಿಕ ವ್ಯವಹಾರವನ್ನು ಮುಂದುವರಿಸುವಾಗ ಹಾಗೂ ಸಾಮಾಜಿಕ ಸಂಬಂಧಗಳನ್ನು ನಿಶ್ಚಯಗೊಳಿಸುವಾಗ ಈ ತರಹದ ಮಾತಿನ ಕ್ರಿಯೆಗಳು ಅವಶ್ಯವಾಗಿವೆ.

ಭಾಷಾ ಸಮುದಾಯದಲ್ಲಿ ಭಾಷಿಕರಿಗೆ ಆರ್ಥಿಕ ಹಾಗೂ ರಾಜಕೀಯ ಸ್ವಾಯತ್ತತೆ ಸಿಕ್ಕಾಗ ಸಮುದಾಯದ ಇತರ ಸದಸ್ಯರ ಮೇಲೆ ಅಧಿಕಾರ ಚಲಾಯಿಸುತ್ತಾರೆ. ಹಳ್ಳಿಗಳಲ್ಲಿ ಮಂಡಲ ಪಂಚಾಯಿತಿ ಸದಸ್ಯರ, ಅಧ್ಯಕ್ಷರ ಮಾತುಗಳನ್ನು ಗಮನಿಸಿದಾಗ ‘ಲೇ ಮಲಿಕ್ಯಾ ನೀರ್ ಬಿಡಲೇ’, ‘ಯಾಕೋ ತಲಾಠಿ ನಿನ್ನೆ ಯಾಕ್ ಬರಲಿಲ್ಲ’ ಹೀಗೆ ಸರಕಾರಿ ಅಧಿಕಾರಿಗಳನ್ನು, ಶಿಕ್ಷಕರನ್ನು ದಬಾಯಿಸುತ್ತಾರೆ. ಭಾಷಾ ಸಮುದಾಯದಲ್ಲಿ ಭಾಷಿಕರ ವರ್ಗ, ಜಾತಿ ಹಾಗೂ ಇತರ ಭಾಷಿಕರೊಡನೆ ಅವರು ನಡೆದುಕೊಳ್ಳುವ ರೀತಿ ಇವುಗಳನ್ನು ಅನುಲಕ್ಷಿಸಿ ಅವರ ಸ್ಥಾನಮಾನ ನಿರ್ಧಾರವಾಗುತ್ತದೆ. ವಯಸ್ಸು, ಲಿಂಗ, ಮುಂತಾದ ಜೈವಿಕ ಅಂಶಗಳು ಭಾಷೆಯ ಬಳಕೆಯಲ್ಲಿ ಬಳಕೆಯಲ್ಲಿ ಪ್ರಭಾವ ಬೀರುತ್ತವೆ. ಪ್ರೌಢರಿಗೆ, ವಯಸ್ಸಾದವರಿಗೆ, ಸಮುದಾಯದಲ್ಲಿ ಗೌರವವಿದೆ. ಅವರಿಗೆ ಅಜ್ಜ, ಅಣ್ಣಾ, ಯಜಮಾನ ಎಂದು ಸಂಬೋಧಿಸುವುದುಂಟು. ಹಿರಿಯರು ಎದುರಾದಾಗ ‘ನಮಸ್ಕಾರ ಅಜ್ಜಾ / ಸಾರ್’ ಎಂದು ಹೇಳುವುದುಂಟು. ಭಾಷೆಯ ಬಳಕೆಯನ್ನು ಗಮನಿಸಿದಾಗ ಆ ವ್ಯಕ್ತಿಗಳ ಬಗ್ಗೆ ಗೌರವ ಭಾವನೆ ಇರುತ್ತದೆ ಎಂಬ ಅಂಶ ಸ್ಪಷ್ಟವಾಗುತ್ತದೆ. ಮೇಲೆ ಹೇಳಿದಂತೆ ವಯಸ್ಸಾದವರು ಆರ್ಥಿಕವಾಗಿ, ಸಾಮಾಜಿಕವಾಗಿ, ಹಿಂದುಳಿದಿದ್ದರೆ ಗೌರವ ಕೊಡುವುದಿಲ್ಲ. ‘ಮುದುಕಾದಿ ಬುದ್ಧಿ ಎಲ್ಲಿ ಇಟ್ಟಿದಿ’, ‘ಮುದುಕಾದಿ ತಿಳಿಯುದಿಲ್ಲ?’ ಎಂಬ ಕಟಕಿ ಮಾಡುತ್ತಾರೆ. ಆರ್ಥಿಕವಾಗಿ ಸಾಮಾಜಿಕವಾಗಿ ಮುಂದುವರಿದ ಕುಟುಂಬಗಳ ಕಿರಿಯ ವಯಸ್ಸಿನವರಿಗೆ ಗೌರವ ಕೊಡುವುದುಂಟು. ಇಂತಹ ಅಸಮಾನತೆ ಭಾಷೆಯ ಬಳಕೆಯಲ್ಲಿರುತ್ತದೆ. ಸಾಮಾಜಿಕವಾಗಿ ಹೇಳುವುದಾದರೆ ಗಂಡಸರಿಗಿಂತ ಹೆಂಗಸಿಗೆ ಸ್ವಾತಂತ್ರ ಕಡಿಮೆ. ಪುರುಷ ಮತ್ತು ಸ್ತ್ರೀಯರ ಮಾತಿನ ಸಂದರ್ಭಗಳಲ್ಲಿ ನಯ ನಾಜೂಕತೆ ಹೆಚ್ಚು. ಲೈಂಗಿಕ ಭಾವನೆ ಬರಬಾರದೆಂದು ಅಥವಾ ಆತ್ಮೀಯತೆ ಉಂಟಾಗಲೆಂದು ಅಣ್ಣ, ಅಕ್ಕ. ಇಂತಹ ಬಂಧುಸೂಚಕಗಳು ಬಳಕೆಯಾಗುತ್ತವೆ. ‘ಹೆಣ್ಣು ಮಕ್ಕಳು ಬಂದ್ರು ಜಾಗ ಬಿಡಿ’, ‘ಆಯ್ತು ಅಣ್ಣಾರಿ’. ಗಂಡಸರು ಗಂಡಸರ ನಡುವೆ, ಹೆಂಗಸರು ಹೆಂಗಸರ ನಡುವೆ ಮಾತಿನ ಸಂದರ್ಭಗಳಲ್ಲಿ ಮುಕ್ತತೆ, ಸಹಜತೆ ಹೆಚ್ಚು. ಗಂಡಸರು, ಹೆಂಗಸರ ಮಧ್ಯ ಮಾತುಗಾರಿಕೆಯಲ್ಲಿ ಸಾಮಾಜಿಕ ನಿಯಂತ್ರಣವಿದೆ.

ಭಾಷಾ ಸಮುದಾಯದಲ್ಲಿ ವೈದ್ಯ – ರೋಗಿ, ವ್ಯಾಪಾರಿ – ಗಿರಾಕಿ, ತಂದೆ – ತಾಯಿ ಮುಂತಾದ ಅವಳಿ ಸಂಬಂಧಗಳನ್ನು ಕಾಣುತ್ತವೆ. ಅವುಗಳ ಸ್ವರೂಪ ಮತ್ತು ಬಳಕೆಯ ವಿಧಾನದಲ್ಲಿ ಭಿನ್ನತೆಯನ್ನು ಗುರುತಿಸಬಹುದಾಗಿದೆ. ಅವುಗಳಿಗೆ ಪ್ರಾದೇಶಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಿದೆ. ಬರಹದ ಕನ್ನಡದಲ್ಲಿ ಬಳಕೆಯಾಗುವ ತಂದೆ – ತಾಯಿ ರೂಪಗಳಿಗೆ ಭಾಷಾ ಪ್ರಬೇಧಗಳಲ್ಲಿ ಪರ್ಯಾಯ ರೂಪಗಳಿವೆ. ಉದಾ: ಕಿತ್ತೂರು ಕರ್ನಾಟಕದ ಎಲ್ಲ ಸಮುದಾಯದಲ್ಲಿಯೂ ತಂದೆ ತಾಯಿಗಳಿಗೆ ಸಂವಾದಿಯಾಗಿ ಅಪ್ಪ, ಅವ್ವ ರೂಪಗಳು ಬಳಕೆಯಾದರೆ ಹಳೆ ಮೈಸೂರು ಕಡೆಗೆ ಸಾಮಾಜಿಕ ವರ್ಗವನ್ನು ಅನುಸರಿಸಿ ಅವು ಬಳಕೆಯಾಗುತ್ತವೆ. ಸಾಮಾಜಿಕವಾಗಿ ಮೇಲ್ವರ್ಗದವರಲ್ಲಿ ಅಮ್ಮ, ಅಪ್ಪ ಎಂಬ ರೂಪಗಗಳು, ಕೆಳವರ್ಗದವರಲ್ಲಿ ಅವ್ವ, ಅಪ್ಪ, ಅಯ್ಯ ಎಂಬ ರೂಪಗಳು ಬಳಕೆಯಾಗುತ್ತವೆ.

ಭಾಷಾ ಸಾಮುದಾಯವು ಭಾಷಿಕರ ಸಂಬಂಧಗಳ ಬಲೆ, ಭಾಷೆಯು ಸಮುದಾಯದ ಪರಿಮಿತಿಯಲ್ಲಿಯೇ ಮೈದಳೆಯುವುದರಿಂದ ಭಾಷಿಕರು ಸಮುದಾಯದಲ್ಲಿ ಬದುಕುವಾಗ ವಿವಿಧ ಪ್ರಕ್ರಿಯೆಗೆ ಒಳಗಾಗುವರು. ಕೆಲವು ವೇಳೆ ಭಾಷಿಕನು ಕ್ರಿಯಾಶೀಲ ವ್ಯಕ್ತಿಯಾಗಿ ಕಾಣಿಸಿಕೊಂಡರೆ ಮತ್ತೆ ಕೆಲವು ವೇಳೆ ನಿಷ್ಕ್ರಿಯನಾಗುವನು. ಭಾಷಿಕನು ಸಮುದಾಯದಲ್ಲಿ ಅಂತಹ ಕ್ರಿಯೆಗೆ ಒಳಗಾಗಿ ವಿವಿಧ ರೂಪಗಳಲ್ಲಿ ತಲೆದೋರಿದಾಗ ಪರಸ್ಪರರ ಅರಿವಿನಿಂದ, ಮನಃ ಪರಿವರ್ತನೆಯಿಂದ ಹಾಗೂ ವೈವಾಹಿಕ ಸಂಬಂಧಗಳನ್ನು ಏರ್ಪಡಿಸಿ ಸಂಬೋಧನ ರೂಪಗಳ ಬಳಕೆಯಿಂದ ಭಿನ್ನಾಭಿಪ್ರಾಯಗಳನ್ನು ನಿವಾರಿಸಬಹುದು. ಆ ಮೂಲಕ ಭಾಷಿಕರು ಸಮುದಾಯದ ವ್ಯವಸ್ಥೆಗೆ ಅಡಕಗೊಳಿಸುವ ಕ್ರಿಯೆಗೆ ‘ಭಾಷೆಯ ಸಾಮಾಜೀಕರಣ’ ಸಮುದಾಯದಲ್ಲಿ ಸಮಾಜೀಕರಣ ಕ್ರಿಯೆಯು ನಿರಂತರವಾಗಿ ನಡೆಯುತ್ತಿರುತ್ತವೆ. ಈ ಪ್ರಕ್ರಿಯೆಯಿಂದ ಸಮುದಾಯವು ತನ್ನ ಗೊತ್ತು ಗುರಿಗಳನ್ನು ತಲುಪಲು ಮುನ್ನುಗ್ಗುತ್ತದೆ. ಬಂಧು ಸೂಚಕಗಳು ಸಾಮಾಜಿಕ ಒಪ್ಪಂದವಾಗಿ ಬಳೆಯಾಗಿರುತ್ತದೆ. ಒಟ್ಟಿನಲ್ಲಿ ಸಾಮಾಜಿಕ ಸ್ತರ ವಿನ್ಯಾಸವು ಭಾಷಾ ಬಳಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ.

ಕೊನೆಯಟಿಪ್ಪಣಿ

ಅ. ಜಾತಿ ಮತ್ತು ವರ್ಗ ಸಮಾಜದ ಅಭಿನ್ನ ಅಂಶಗಳಾದರೂ ಇವೆರಡರಲ್ಲೂ ಕೆಲವು ವೈಷಮ್ಯಗಳುಂಟು

ಜಾತಿವರ್ಗ  
೧. ಚಲನಶೀಲತೆ ಕಡಿಮೆ, ಭಾಷಿಕರ ಸ್ಥಾನಮಾನ ಹುಟ್ಟಿನಿಂದ ಬಂದಿರುತ್ತದೆ. ಜಾತಿಯ ವರ್ಗಾವಣೆ ಸಾಧ್ಯವಿಲ್ಲ. ಮುಕ್ತ ವ್ಯವಸ್ಥೆಯಾಗಿದೆ, ಭಾಷಿಕರ ಸ್ಥಾನಮಾನ ವ್ಯಕ್ತಿಯ ಸಾಧನೆಯಿಂದ ನಿರ್ಧರಿತವಾಗುತ್ತದೆ.
೨. ಭಾಷಿಕರಲ್ಲಿ ಮಡಿ, ಮೈಲಿಗೆ ಎಂಬ ಭಾವನೆ ರೂಢಿಯಲ್ಲಿರುವುದು. ಭಾಷಿಕರ ಮೇಲೆ ನಿಯಂತ್ರಣ ಹೇರುತ್ತದೆ. ಇಂತಹ ಕಟ್ಟುಪಾಡುಗಳು ಸಾಮಾಜಿಕ ವರ್ಗದಲ್ಲಿ ಕಂಡುಬರುವುದಿಲ್ಲ
೩. ಜಾತಿ ಜಾತಿಗಳ ನಡುವೆ ಅಪಾರವಾದ ಸಾಮಾಜಿಕ ಅಂತರ ಕಂಡುಬರುತ್ತದೆ. ಜಾತಿಗಳ ಸಂಖ್ಯೆ ಅಪಾರವಾಗಿರುತ್ತದೆ. (ಭಾರತದಲ್ಲಿ ಸು. ೩೦೦೦ ಜಾತಿಗಳಿವೆ.) ವಿಭಿನ್ನ ವರ್ಗಗಳ ನಡುವಿನ ಸಂಬಂಧಗಳು ಅನ್ಯೋನ್ಯವಾಗಿರುತ್ತವೆ. ವರ್ಗಗಳ ಸಂಖ್ಯೆ ಸೀಮಿತ. ಭಾರತದಲ್ಲಿ (ಮೇಲುವರ್ಗ, ಮಧ್ಯಮ ಮತ್ತು ಕೆಳವರ್ಗ ಎಂಬ ಮೂರು ವರ್ಗಗಳಿವೆ.
೪. ಈ ವ್ಯವಸ್ಥೆ ಪ್ರಜಾತಂತ್ರ ವಿರೋಧಿಯಾಗಿದೆ. ಇದು ಪರಿಪೂರ್ಣ ಒಳಬಾಂಧವ್ಯ ವ್ಯವಸ್ಥೆಯನ್ನು ಹೊಂದಿದೆ. ಇದು ಪ್ರಜಾತಂತ್ರವನ್ನು ಗೌರವಿಸುತ್ತದೆ. ಒಳಬಾಂಧವ್ಯವಿದ್ದರೂ ಅದರ ಪ್ರಮಾಣ ಹಾಗೂ ಪ್ರಭಾವ ತುಂಬ ಕಡಿಮೆ.

ಆ. ಮನೋವೃತ್ತಿಯೆಂದರೆ ‘ಅಂತರ್ಗತ ಬಯಕೆ’, ಭಾಷಾ ಮನೋವೃತ್ತಿಯೆಂದರೆ (Language Attitude) ವ್ಯಕ್ತಿ ಅಥವಾ ವ್ಯಕ್ತಿಗಳು ಒಂದಕ್ಕಿಂತ ಹೆಚ್ಚು ಭಾಷೆಗಳೊಡನೆ ವ್ಯವಹರಿಸುವಾಗ ಆ ಭಾಷೆಗಳ ಬಗ್ಗೆ ತೋರುವ ಒಲವು ಆ ವ್ಯಕ್ತಿಯ ಭಾಷಾ ಮನೋವೃತ್ತಿಯನ್ನು ಬಿಂಬಿಸುತ್ತದೆ. ಭಾಷಿಕರ ಭಾಷಾ ಮನೋವತ್ತಿಗಳು ಧನಾತ್ಮಕವಾಗಿರಬಹುದು, ಋಣಾತ್ಮಕವಾಗಿರಬಹುದು ಇಲ್ಲವೇ ತಟಸ್ಥವಾಗಿರಬಹುದು. ಭಾಷಾ ಮನೋವೃತ್ತಿಯು ಭಾಷಿಕರು ಸಂಪರ್ಕವಿಟ್ಟುಕೊಂಡಿರುವ ಭಾಷೆಗಳನ್ನು ಅವಲಂಬಿಸಿರುತ್ತದೆ.

ಇ. ಭಾಷಿಕರು ಅನೌಪಚಾರಿಕ ಸಂದರ್ಭದಲ್ಲಿ ತಮ್ಮ ಆಡುನುಡಿಯನ್ನು ಔಪಚಾರಿಕ ಸಂದರ್ಭದಲ್ಲಿ ಅದೇ ಭಾಷೆಯ ವ್ಯವಹಾರಿಕ ಶಿಷ್ಟರೂಪವನ್ನು ಬಳಸುವಂತಹ ಪ್ರಕ್ರಿಯೆಗೆ ಸ್ಥೂಲವಾಗಿ ದ್ವಿಸ್ತರತೆ (Daiglossia) ಎನ್ನುವರು. ೧೯೫೯ರಲ್ಲಿ ಫರ್ಗ್ಯೂಸನ್ ಮೊದಲ ಬಾರಿಗೆ ಈ ಪದವನ್ನು ಬಳಸಿದನು.