ಭಾಷಾ ಸಮುದಾಯದಲ್ಲಿ ಸ್ತರವಿನ್ಯಾಸಕ್ಕೆ ಅನುಗುಣವಾಗಿ ಒಬ್ಬ ಭಾಷಿಕ ಇನ್ನೊಬ್ಬ ಭಾಷಿಕರಿಗಿಂತ ಭಿನ್ನವಾದ ಸ್ಥಾನಮಾನಗಳನ್ನು ಹೊಂದಿರುತ್ತಾರೆ. ಭಾಷಿಕರ ವಿಭಿನ್ನ ಸ್ಥಾನಮಾನಗಳಿಂದಾಗಿ ವೈವಿಧ್ಯಮಯವಾದ ಸಾಮಾಜಿಕ ರಚನೆ ಏರ್ಪಟ್ಟಿರುತ್ತದೆ. ಸಾಮಾಜಿಕ ರಚನೆಯು ಸಂಘ ಸಂಸ್ಥೆಗಳ ಮೂಲಕ ನಿಯಂತ್ರಿಸಲ್ಪಟ್ಟಿರುತ್ತದೆ. ಈ ಅಧ್ಯಾಯನದಲ್ಲಿ ಭೂ ಮಾಲಿಕ – ಹಿಡುವಳಿದಾರ, ಒಡೆಯ – ಸೇವಕ, ಸ್ನೇಹಿತರು ಹಾಗೂ ಅಪರಿಚಿತರು ಇವರ ನಡುವಿನ ಸಂಬಂಧಗಳು ಹೇಗೆ ನಿಯಂತ್ರಿಸಲ್ಪಟ್ಟಿರುತ್ತವೆ. ಅವರವರ ಸ್ಥಾನಮಾನಗಳಿಗನುಗುಣವಾಗಿ ಪರಸ್ಪರರರು ಯಾವ ರೀತಿ ಸಂಬೋಧಿಸುತ್ತಾರೆ ಹಾಗೂ ಆ ಸಂದರ್ಭದಲ್ಲಿ ನಡೆಯುವ ಭಾಷಿಕ – ಕ್ರಿಯೆಗಳನ್ನು ಕುರಿತು ಚರ್ಚಿಸಲಾಗಿದೆ.

ಭೂ ಮಾಲೀಕಹಿಡುವಳಿದಾರ

ಭೂ ಒಡೆಯರಿಗೆ ಕೆಲವು ಸಂದರ್ಭದಲ್ಲಿ ತಮ್ಮ ಭೂಮಿಯನ್ನು ಉಳಲಿಕ್ಕೆ ಆಗುವುದಿಲ್ಲ (ಮಕ್ಕಳೆಲ್ಲರೂ ನೌಕರಿ ಮಾಡುತ್ತಿರುತ್ತಾರೆ ಅಥವಾ ಇನ್ನಾವುದೇ ಕಾರಣಗಳಿರಬಹುದು). ಅದಕ್ಕಾಗಿ ಅವರು ತಮ್ಮ ಭೂಮಿಯನ್ನು ಕೆಲವು ನಿರ್ಬಂಧನೆಗಳನ್ವಯ ಹಿಡುವಳಿದಾರರಿಗೆ ಅಥವಾ ಗೇಣಿದಾರರಿಗೆ (ಬೇಸಾಯ ಮಾಡಲು ಭೂಮಿಯನ್ನು ಪಡೆಯುವವ ಅಥವಾ ಸಾಗುವಳಿ ಮಾಡಿಕೊಳ್ಳುವವ) ಹಚ್ಚುವುದುಂಟು. ರೈತರೆಲ್ಲರೂ ಗೇಣಿದಾರರಾಗುವುದಿಲ್ಲ. ಕಡಿಮೆ ಹೊಲ, ಗದ್ದೆ ಹೊಂದಿದ ಹಾಗೂ ಮನೆಯಲ್ಲಿ ನಾಲ್ಕೈದು ಜನ ದುಡಿಯುವ ಜನರಿರುವ ರೈತರು ಇತರರ ಭೂಮಿಯನ್ನು ಗೇಣಿ ಹಿಡಿಯುತ್ತಾರೆ. ಗೇಣಿ ಹಿಡಿಯುವ ಸಂದರ್ಭದಲ್ಲಿ ಭೂ ಮಾಲೀಕ ಹಾಗೂ ಹಿಡುವಳಿದಾರರ ಮಧ್ಯ ನಡೆಯುವ ಸಂಭಾಷಣೆಯಲ್ಲಿಯ ಸಂಬೋಧನೆಗಳನ್ನು ಗಮನಿಸಿದಾಗ ಪರಸ್ಪರ ಹೆಸರು ಅಥವಾ ಕುಲನಾಮಗಳನ್ನು ಬಳಸುವುದುಂಟು.

ಭೂ ಮಾಲೀಕ : ಸೋಮಲಿಂಗಪ್ಪ ಅಥವಾ ರುದ್ರಾಪುರ ಸಾಹುಕಾರರೆ, ನನ್ನ ಮಕ್ಕಳೆಲ್ಲರೂ ನೌಕರಿ ಮಾಡಲಿಕ್ಕೆ ಹತ್ತಿದ್ದಾರೆ. ನನಗೂ ವಯಸ್ಸಾಗಿದೆ. ನಮ್ಮ ೪ ಎಕರೆ ಭೂಮಿಯನ್ನು ಉಳುಮೆ ಮಾಡಲಿಕ್ಕೆ ಆಗುತ್ತಿಲ್ಲ. ನಿಮ್ಮ ಮನೆಯಲ್ಲಿ ನಾಲ್ಕೈದು ಜನ ದುಡಿಯುವವರಿದ್ದೀರಿ. ನಮ್ಮ ಹೊಲವನ್ನು ನೀವೇ ಮಾಡಿರಿ. ಅದಕ್ಕೆ ಪ್ರತಿಯಾಗಿ ವರ್ಷಕ್ಕೆ ೧೦ ಚೀಲ ಜೋಳ ಕೊಟ್ಟರೆ ಸಾಕು. ಇದಕ್ಕೆ ನೀವೇನು ಅನ್ನುತ್ತೀರಿ?

ಸೋಮಲಿಂಗಪ್ಪ : ಮಹಾದೇವಪ್ಪ ಅಜ್ಜರವರೇ ಅಥವಾ ಬಿದರಿ ಅಜ್ಜನವರೆ ನೀವು ಹೇಳಿದ್ದು ತಿಳಿಯಿತು. ವರ್ಷಕ್ಕೆ ೧೦ ಚೀಲ ಆಗುವುದಿಲ್ಲ ೬ ಚೀಲ ಕೊಡುತ್ತೇವೆ.

ಭೂಮಿ ಫಲವತ್ತಾಗಿದ್ದರೆ ಬೇಡಿಕೆ ಹೆಚ್ಚುತ್ತದೆ. ಹಿಡುವಳಿದಾರ ಆದಷ್ಟೂ ಕಡಿಮೆ ಹಣಕೊಟ್ಟು ಭೂಮಿಯನ್ನು ಗೇಣಿ ಹಿಡಿಯಬೇಕೆಂದು ಯತ್ನಿಸಿದರೆ ಭೂ ಮಾಲೀಕ ಹೆಚ್ಚು ಹಣ ತೆಗೆದುಕೊಂಡು ಗೇಣಿ ಕೊಡಬೇಕೆಂದು ಹವಣಿಸುತ್ತಾನೆ. ಪರಸ್ಪರ ಸಂಭಾಷಣೆಯಲ್ಲಿ ಯಾವುದೇ ಬಗೆಯ ಅಧಿಕಾರ, ಮನೋವೃತ್ತಿ ಇರುವುದಿಲ್ಲ. ಭೂಮಿ ಫಲವತ್ತಾಗಿದ್ದರೆ ಹಿಡುವಳಿದಾರ, ಭೂ ಮಾಲೀಕನನ್ನು ಓಲೈಸುವುದುಂಟು.

ಭೂ ಮಾಲೀಕ : ಸೋಮಲಿಂಗಪ್ಪನವರೆ ನಮಗೂ ದಕ್ಕುವುದಿಲ್ಲ.

ಸೋಮಲಿಂಗಪ್ಪ : ಬಿದರಿ ಅಜ್ಜನವರೆ ೭ ಚೀಲ ಅಥವಾ ೭ ಸಾವಿರ ರೂಪಾಯಿ ಕೊಡುತ್ತೇನೆ. ನಮಗೂ ಅನುಕೂಲವಾಗುತ್ತದೆ. ದಯವಿಟ್ಟು ನಮಗೆ ಗೇಣಿ ಕೊಡಬೇಕು.

ಭೂ ಮಾಲೀಕ : ಸೋಮಲಿಂಗಪ್ಪನವರೆ ಆಗಲಿ, ಭೂಮಿ ಹಾಳು ಬಿಡಬೇಡಿರಿ.

ಗೇಣಿ ವ್ಯವಹಾರದಲ್ಲಿ ವ್ಯಕ್ತಿ ವ್ಯಕ್ತಿಗಳಲ್ಲಿ ಮಾತ್ರ ಸಂಭಾಷಣೆ ನಡೆಯುವುದುಂಟು. ಆ ಸಂದರ್ಭದಲ್ಲಿ ವಯಸ್ಸಿಗೆ ಅನುಗುಣವಾಗಿ ಅಜ್ಜ, ಅಪ್ಪ, ಅಣ್ಣ ಇಂತಹ ಬಂಧು ಸೂಚಕಗಳು ಆವೃತ್ತಿಯಾಗುತ್ತವೆ. ಭೂ ಮಾಲೀಕ ತನ್ನ ಭೂಮಿಯನ್ನು ಗೇಣಿ ಕೊಡುವುದಕ್ಕೆ ಕಿತ್ತೂರು ಕರ್ನಾಟಕ ಪ್ರದೇಶದ ಕಡೆಗೆ ‘ಕಣ್ಣೀಲೆ ಹಚ್ಚುವುದು’ ಎಂದು ಕರೆಯುವುದುಂಟು.

ಒಡೆಯಸೇವಕ

ಈ ಸ್ತರ ವಿನ್ಯಾಸವು ಎಲ್ಲ ಸಮುದಾಯಗಳಲ್ಲಿಯೂ ಎಲ್ಲ ವಲಯಗಳಲ್ಲಿಯೂ ಇರುತ್ತದೆ. ಅಧಿಕಾರಿ, ಗುಮಾಸ್ತ, ಸಿಪಾಯಿ, ಭೂ ಮಾಲೀಕ, ಆಳು, ಕೂಲಿಕಾರ ಮುಂತಾದವರು. ಇವರಲ್ಲಿ ನಡೆಯುವ ಸಂಭಾಷಣೆಯನ್ನು ಗಮನಿಸಿದಾಗ ಉನ್ನತ ಹುದ್ದೆಯಲ್ಲಿರುವವರು ತಮ್ಮ ಅಧೀನದಲ್ಲಿರುವವರನ್ನು ಹೆಚ್ಚಾಗಿ ಏಕವಚನದಿಂದ ಕರೆಯುವುದುಂಟು. ಅಲ್ಲಿ ಅವನ ಹೆಸರು ಅಥವಾ ಕುಲನಾಮ ಬಳಸುವುದುಂಟು.

ತಹಶೀಲದಾರ : ಬಾರೋ ಹಡಪದ ಅಥವಾ ಮಾರುತಿ ಈ ಪತ್ರ ಬೇಗ ಜಿರಾಕ್ಸ್ ಮಾಡಿಸಿ ಕೊಂಡ ಬಾರಪಾ.

ಮಾರುತಿ : ಹೂಡ್ರಿ ಸಾಹೆಬರೆ ಅಥವಾ ಹೂಡ್ರಿ ಸಾರ್

ಕೆಳದರ್ಜೆಯವರು ಮೇಲದರ್ಜೆಯವರನ್ನು ಸಾಹೇಬ್, ಮೇಷ್ಟ್ರು ಎಂದೇ ಸಂಬೋಧಿಸುವುದುಂಟು.

ಭೂ ಮಾಲೀಕ : ಯಾಕಲೇ ನಿಂಗ್ಯಾ, ನಿನಗ ಸರಿಯಾಗಿ ಗಳೆ ಹೊಡ್ಯಾಕ್ ಬರುದಿಲ್ಲ. ಈ ತಿಂಗಳ್ ನಿನಗ ಪಗಾರ ಕೊಡುದಿಲ್ಲ.

ನಿಂಗಪ್ಪ : ಸಾಹುಕಾರರೇ ಹಂಗ ಮಾಡಬ್ಯಾಡ್ರಿ, ನನ್ನ ಹೊಟ್ಟಿ ಮ್ಯಾಲ ಕಾಲ ಹಾಕಬ್ಯಾಡ್ರಿಪಾ

ಭೂ ಮಾಲಿಕ : ನಿಂಗ್ಯಾ ಇನ್ನು ಮೇಲೆ ಚಂದಚಾಗಿ ಗಳೆ ಹೊಡಿಬೇಕು.

ನಿಂಗಪ್ಪ : ಧನಿ, ಆಗಲಿ.

ಭೂ ಮಾಲಿಕನ ಸಂಬೋಧನೆಯಲ್ಲಿ ಒಂದು ರೀತಿಯ ದರ್ಪ ಇದ್ದರೆ ಕೂಲಿಕಾರನ ಸಂಬೋಧನೆಯಲ್ಲಿ ದೈನ್ಯತೆ ಇರುತ್ತದೆ. ಬಂಡವಾಳ ಶಾಹಿಗಳು ಕೂಲಿಕಾರರನ್ನು ಶೋಷಣೆ ಮಾಡುತ್ತಾರೆ. ಕೂಲಿಕಾರರೆ ಉತ್ಪಾದನೆ ಮಾಡುವವರು ಅವರಿಗೆ ಅವರು ಉತ್ಪಾದನೆ ಮಾಡಿದ ವಸ್ತುಗಳಿಗೆ ತಕ್ಕಂತೆ ಕೂಲಿ ಕೊಡುವುದಿಲ್ಲ. ಕಡಿಮೆ ಕೂಲಿಕೊಟ್ಟು ಹೆಚ್ಚು ಉತ್ಪಾದನೆ ಬಂಡವಾಳ ಶಾಹಿಗಳು ಪಡೆಯುತ್ತಾರೆ.

ಭೂ ಒಡೆಯನ ಅಧೀನದಲ್ಲಿ ಸೇವಕರು ಸುಮಾರು ವರ್ಷಗಳವರೆಗೆ ಕೆಲಸ ಮಾಡಿದರೆ ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ ಕುದುರುತ್ತದೆ. ಆಗ ಭೂ ಒಡೆಯ ಹಾಗೂ ಆತನ ಕುಟುಂಬದ ಸದಸ್ಯರಿಗೆ ಸೇವಕನು ಮನೆಯ ಸದಸ್ಯನಂತೆ ಆಗುತ್ತಾನೆ.

ಭೂ ಒಡೆಯ : ದ್ಯಾವಣ್ಣ ನಾಳೆ ಕೆರಿ ದಂಡಿಗಿ ಮ್ಯಾಗ ಶೇಂಗಾ ಒಣಕ್ ಹಾಕೋಣ ಮನೆಗೆ ಬೇಗ ಬಾರಪಾ

ಭೂ ಒಡೆಯನ ಹೆಂಡತಿ : ದ್ಯಾಮಣ್ಣ ಮೊದಲ ಊಟ ಮಾಡಿ, ಗಟ್ಟಿ ಆಗು ನಂತರ ನಿನ್ನ ದಗದಾ ಶುರು ಮಾಡಪಾ.

ದ್ಯಾಮಣ್ಣ : (ಅಕ್ಕಾ / ಅಣ್ಣಾ ಎನ್ನುತ್ತಾ) ಹಾಗೆಯೇ ಮಾಡುತ್ತೇನೆ.

ಇಂತಹ ಸಂದರ್ಭದಲ್ಲಿ ಏಣಿ ಶ್ರೇಣಿಯ ಬದಲು ಸಮತಾ ಮನೋಭಾವನೆ ಬರುವುದು. ಇಂತಹ ಸನ್ನಿವೇಶಗಳು ಕಡಿಮೆ. ಹೆಚ್ಚಾಗಿ ಸೇವಕರು ತಮ್ಮ ಒಡೆಯನನ್ನು ಅಪ್ಪಾ, ಸಾಹುಕಾರ, ಧಣಿ, ಒಡೆಯ ಮಾಲೀಕ ಎಂದು ಸಂಬೋಧಿಸಿದರೆ, ಯಜಮಾನಿಯನ್ನು ಅವ್ವಾ, ಅಮ್ಮಾ, ಸಾಹುಕಾರತಿ ಎಂದು ಸಂಬೋಧಿಸುವುದುಂಟು.

ಧರ್ಮಾಧಿಕಾರಿಭಕ್ತ

ನಮ್ಮ ರಾಷ್ಟ್ರದಲ್ಲಿ ಪ್ರಾಚೀನ ಕಾಲದಿಂದಲೂ ಹಲವಾರು ಧಾರ್ಮಿಕ ಸಂಸ್ಥೆಗಳು ಅಸ್ತಿತ್ವದಲ್ಲಿದ್ದು ಧರ್ಮ ಪ್ರಸಾರವನ್ನು ಮಾಡುತ್ತಿವೆ. ಕ್ರೈಸ್ತ ಮಿಶನರಿಗಳು, ಬೌದ್ಧ ಧರ್ಮಗುರುಗಳು, ಮುಸ್ಲಿಂ ಮುಲ್ಲಾಗಳು, ಜೈನಮುನಿಗಳು, ವೀರಶೈವ ಮಠಾಧಿಪತಿಗಳು, ಚರ್ಚು, ಬೌದ್ಧವಿಹಾರ, ಮಸೀದಿ,ಬಸದಿ ಹಾಗೂ ಮಠಗಳಲ್ಲಿ ತಮ್ಮ ಧರ್ಮದ ತಿರುಳನ್ನು ಜನತೆಗೆ ಸರಳವಾದ ಭಾಷೆಯಲ್ಲಿ ಉಪನ್ಯಾಸ, ಪ್ರವಚನ, ಪಠಣ ಮುಂತಾದವುಗಳ ಮೂಲಕ ಪ್ರಸಾರ ಮಾಡುವರು. ಧರ್ಮಾಧಿಕಾರಿಗಳು ಭಕ್ತರ ಸ್ಥಾನಮಾನಗಳನ್ನು ಗಮನದಲ್ಲಿಟ್ಟುಕೊಂಡು ಸೂಚಕ ಪದಗಳನ್ನು ಬಳಸುತ್ತಾರೆ.

ಭಕ್ತ : ಸ್ವಾಮೀಜಿಗಳು ಇದ್ದಾರೆಯೇ?

ಸೇವಕ : ಸ್ವಾಮಿಗಳು ಪವಾಡಿಸಿದ್ದಾರೆ (ಮಲಗಿದ್ದಾರೆ), ಸ್ವಲ್ಪ ಕುತಕೊಳ್ಳಿರಿ

ಧರ್ಮಾಧಿಕಾರಿ : ಓ ಓ ಬನ್ನಿರಿ, ಹೇಗಿದ್ದೀರಾ? ಕೆಲಸ ಇದ್ದಾಗ ಸ್ವಾಮಿಗಳ ನೆನಪಾಗುತ್ತದೆ.

ಭಕ್ತ       : ಇಲ್ಲ ಸ್ವಾಮೀಜಿ, ನಿಮ್ಮ ಆಶೀರ್ವಾದ ಸದಾ ಇರಲಿ, ನಾಳೆ ಮಗನ ಮದುವೆಯಿದೆ. ತಾವು ದಯಮಾಡಿಸಬೇಕು.

ಧರ್ಮಾಧಿಕಾರಿ : ಕಲ್ಲಪ್ಪ ನಿಮ್ಮ ಮಗ ನಮ್ಮ ಪ್ರಸಾದ ನಿಲಯದ ವಿದ್ಯಾರ್ಥಿ, ಬರುತ್ತೇವೆ.

ಧರ್ಮಾಧಿಕಾರಿಗಳು ರಾಜಕಾರಣಿಗಳನ್ನು, ಅಧಿಕಾರಿಗಳನ್ನು ‘ಸಾಹೇಬ’ರೆಂದೇ ಸಂಬೋಧಿಸುತ್ತಾರೆ. ಸಾಮಾನ್ಯ ಜನರನ್ನು ಏಕವಚನವನ್ನು ಪ್ರಯೋಗಿಸಿ ಅವರ ಹೆಸರು ಇಲ್ಲವೆ ಕುಲನಾಮಗಳನ್ನು ಬಳಸಿ ಸಂಬೋಧಿಸುವುದುಂಟು. ಭಕ್ತರು ವಿಶೇಷವಾಗಿ ವೀರಶೈವ ಧರ್ಮಾಧಿಕಾರಿಗಳನ್ನು ‘ಸ್ವಾಮೀಜಿ’, ‘ಸ್ವಾಮಿಗಳು’, ‘ಬುದ್ಧಿ’, ‘ಅಪ್ಪಾಗೋಳ್’, ‘ಅಜ್ಜಾಗೋಳ್’, ‘ಗುರುಗಳು’, ‘ಪೂಜ್ಯರು’ ಎಂದು ಸಂಬೋಧಿಸುವುದುಂಟು. ಕೆಲವು ಸಂದರ್ಭದಲ್ಲಿ ಮಠಗಳ ಸ್ಥಳದ ಹೆಸರುಗಳನ್ನು ಬಳಸಿ ಸಂಬೋಧಿಸುವುದುಂಟು. ‘ನಾಗನೂರು ಶ್ರೀಗಳು’, ‘ಕೊಟ್ಟೂರು ಶ್ರೀಗಳು’, ‘ಸತ್ತೂರು ಶ್ರೀಗಳು’ ಮುಂತಾದವು. ಮದುವೆ, ಜಾತ್ರೆ. ಉತ್ಸವ ಸಮಾರಂಭಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಭಕ್ತರು ಕಾರ್ಯಕ್ರಮದ ವಿವರಗಳನ್ನು ಇನ್ನೊಬ್ಬರಿಗೆ ಪರಿಚಯಿಸುವಾಗ ‘ನಾಳೆ ನಾಗನೂರ ಮಠದ ಪೂಜ್ಯ ಶ್ರೀ ಶ್ರೀ ಶ್ರೀ ಸಿದ್ಧರಾಮ ಮಹಾಸ್ವಾಮಿಗಳು ನಮ್ಮ ಹಳ್ಳಿಗೆ ದಯಮಾಡಿಸುತ್ತಾರೆ. ಗ್ರಾಮಸ್ಥರು ಶ್ರೀಗಳ ಆಶೀರ್ವಾದ ಪಡೆದು ಪುನೀತರಾಗಬೇಕೆಂದೂ ಮಹಾ ಪ್ರಸಾದ ಸ್ವೀಕರಿಸಬೇಕು’ ಎಂದು ಭಕ್ತರಲ್ಲಿ ಕೋರುತ್ತಾರೆ. ಧರ್ಮಾಧಿಕಾರಿಗಳು ಒಂದು ಸಮುದಾಯವನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವುದರಿಂದ ಹಾಗೂ ಜನರಲ್ಲಿ ಸಾಮಾಜಿಕ ಮೌಲ್ಯಗಳನ್ನು, ನೀತಿ ನಿಯಮಗಳನ್ನು ತುಂಬಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುವುದರಿಂದ ಭಕ್ತರಿಗೆ ಧರ್ಮಾಧಿಕಾರಿಗಳ ಮೇಲೆ ಅಪಾರ ಶ್ರದ್ಧೆ ಹಾಗೂ ಗೌರವವಿರುತ್ತದೆ.

ಸ್ನೇಹಿತರು

ಪ್ರೀತಿ, ವಿಶ್ವಾಸದಿಂದ ಕೂಡಿದ ಸಮ ಮನಸ್ಕ, ಸಮ ವಯಸ್ಕ ವ್ಯಕ್ತಿಗಳು ಗೆಳೆಯರಾಗುತ್ತಾರೆ. ಸ್ನೇಹತ್ವದಲ್ಲಿ ವಯಸ್ಸು ಮತ್ತು ಲಿಂಗ ಬಹುಮುಖ್ಯ ಪಾತ್ರ ವಹಿಸುತ್ತದೆ. ಸಮವಯಸ್ಸಿನ ಇಬ್ಬರು ಸ್ನೇಹಿತರು ಪರಸ್ಪರರನ್ನು ಅವರ ಹೆಸರು ಇಲ್ಲವೆ ಕುಲನಾಮಗಳಿಂದ ಸಂಬೋಧಿಸುವುದುಂಟು.

‘ಪಾಟೀಲರೆ ಸ್ವಲ್ಪ ನಿಲ್ಲಿರಿ, ನಾನು ಬರ್ತೆನ್ ‘

‘ನಮ್ಮ ಸ್ನೇಹಿತ ಪಾಟೀಲ ಎನ್ನುವವರು ಬೆಳಗಾವಿಯಲ್ಲಿ ನೌಕರಿ ಮಾಡ್ತಾರ್’

‘ನಮ್ಮ ಸ್ನೇಹಿತ ಮಲ್ಲು ಎನ್ನುವವ ಒಳ್ಳೆಯ ಮನುಷ್ಯ’

ಗೆಳೆತನದಲ್ಲಿ ಆತ್ಮೀಯತೆ, ಸಲಿಗೆಯಿದ್ದರೆ ಏಕವಚನವು ಪ್ರಯೋಗವಾಗುವುದುಂಟು.

‘ಏ ರಾಜಾ ಕ್ಲಾಸಿಗೆ ಟೈಂ ಆಗಿದೆ ಬಾರೋ’

‘ಬಿರಾದಾರ ಏನ್ ಮಾಡಾಕ್ ಹತ್ತಿಯೋ’

ಸಲಿಗೆಯ ಸಂದರ್ಭದಲ್ಲಿ ಬಾರಲೆ, ಬಾರಲೋ, ಬಾಸ್ವಾಮಿ, ಬಾರಯ್ಯ, ಬಾರಾಕೋ ಮುಂತಾದ ಸಂಬೋಧನೆಗಳು ಬಳಕೆಯಾಗುವುದುಂಟು. ಸ್ನೇಹಿತರಲ್ಲಿ ನಿಕಟತ್ವ ಕಡಿಮೆ ಇದ್ದರೆ ‘ರೀ’ ಬಳಕೆಯುಂಟು. ‘ನಮಸ್ಕಾರ ಬಿರಾದಾರವರೆ ಮತ್ತೇನು ವಿಶೇಷ’. ಹುಡುಗನಿಗೆ ಹುಡುಗಿಯರು ಸ್ನೇಹಿತರಿದ್ದರೆ ಕ್ವಚಿತ್ತಾಗಿ ಏಕವಚನ ಬಳಸುವುದುಂಟು.

‘ಯಾಕೆ ನಿನ್ನೆ ಕಾಲೇಜಿಗೆ ಬಂದಿರಲಿಲ್ಲ?’

ಇಂತಹ ಮಾತುಗಳು ಹೆಚ್ಚಾಗಿ ಪ್ರೇಮಿಗಳಲ್ಲಿ ಅಥವಾ ಹೆಚ್ಚು ಸಲಿಗೆಯಿದ್ದವರಲ್ಲಿ ಬಳಕೆಯಾಗುವುದುಂಟು. ಉಳಿದೆಡೆ ಅವರ ಹೆಸರು ಅಥವಾ ಕುಲನಾಮ ಬಳಸುವುದುಂಟು.

ಅಭಿತೇಜ : ‘ದಖನಿಯವರೆ ಅಥವಾ ಮಮತಾ ಅವರೆ ನಿನ್ನೆ ನಾನು ಕ್ಲಾಸಿಗೆ ಬಂದಿರಲಿಲ್ಲ. ದಯವಿಟ್ಟು ಹಿಸ್ಟರಿ ನೋಟ್ಸ್ ಕೊಡುತ್ತಿರಾ?’

ದಖನಿ : ‘ಅಭಿತೇಜ ಅವರೆ ಕೊಡುತ್ತೇನೆ, ಆದರೆ ಬೇಗ ಹಿಂತಿರುಗಿಸಬೇಕು’. ಹುಡುಗಿಯರಿಬ್ಬರು ಸ್ನೇಹಿತರಾಗಿದ್ದಾಗ ಅವರ ಹೆಸರು ಇಲ್ಲವೆ ಕುಲನಾಮ ಬಳಕೆಯಾಗುವುದುಂಟು.

ಕಮಲೆ : ರಾಧಾ ನಾಳೆ ನಾನು ಶಾಲೆಗೆ ಹೋಗುದಿಲ್ಲ. ಮೇಡಂ ಅವರಿಗೆ ಹೇಳು

ರಾಧಾ : ಆಯ್ತು ಹೇಳ್ತಿನಿ

ಆತ್ಮೀಯತೆಯಿಂದ ಏಕವಚನ ಬಳಸುವುದುಂಟು. ‘ಏ ಕಾಶಿ ಲವುಟ್‌ಬಾರ್ ನೀರಿಗಿ ಹೋಗುಣು’. ಸ್ನೇಹ ವಲಯದಲ್ಲಿ ಸಾಮಾಜಿಕ ಸಂಬಂಧ ವಯಸ್ಸು, ಲಿಂಗ, ಸ್ಥಾನ ಮಾನಗಳಿಗೆ ತಕ್ಕಂತೆ ಸಂಬೋಧನೆಯಲ್ಲಿ ಭಿನ್ನತೆ ಕಂಡುಬರುತ್ತದೆ.

ಅಪರಿಚಿತ ಪರಿಚಿತ

ಭಾಷಿಕರು ತಮ್ಮ ಸಮ ವಯಸ್ಸಿನ ಅಪರಿಚಿತ ವ್ಯಕ್ತಿಯನ್ನು ಮಾತನಾಡಿಸುವಾಗ ಅಣ್ಣಾ ಎಂದು ಸಂಬೋಧಿಸುವುದುಂಟು. ವಯಸ್ಸಿನಲ್ಲಿ ದೊಡ್ಡವರಿದ್ದರೆ ‘ತಾತ, ಅಜ್ಜ’ ಎಂದೂ ಸಂಬೋಧಿಸುವುದುಂಟು.

‘ಅಣ್ಣಾ ಸ್ವಲ್ಪ ಜಾಗ ಬಿಡಪಾ, ನನ್ನ ಕಾಲು ನೋವಾಗಿದೆ’.

‘ಯಜ್ಜಾ ನಿನಗೆ ಯಾರು ಬೇಕಾಗಿದ್ದಾರೆ?’

‘ಯಮ್ಮಾ ಬದನಿಕಾಯಿ ಹೆಂಗ ಕಿಲೋ?’

ಹಿರಿಯರು ಕಿರಿಯರನ್ನು ಸಂಬೋಧಿಸುವಾಗ ‘ತಂಗಿ’, ‘ತಮ್ಮ’, ‘ಅವ್ವ’, ಎನ್ನುವುದುಂಟು. ಅವರು ಪ್ರತಿಯಾಗಿ ‘ತಾತ’ / ‘ಅಜ್ಜ’, ಎನ್ನುವುದುಂಟು.

ತಂಗಿ ಅಥವಾ ತಮ್ಮ ಸರಿದು ಕೂಡ್ರಿ
ಯಜ್ಜಾ / ತಾತ ಅಥವಾ ಅಮ್ಮ ಇಲ್ಲಿ ಜಾಗ ಇಲ್ಲ

ಹುಡುಗಿಯರು ಸಮ ವಯಸ್ಕ ಪರುಷರನ್ನು ‘ಅಣ್ಣಾ’ ಎಂದೂ ಸಮ ವಯಸ್ಕ ಪುರುಷರು ಸ್ತ್ರೀಯರನ್ನು ‘ಯಕ್ಕಾ’ ಎಂದೂ ಸಂಬೋಧಿಸುವುದುಂಟು.

ಅಣ್ಣಾ, ನಾನು ನೀರ ತರತೇನ್ ಕ್ವಡ ಕೊಡು
ಅಕ್ಕಾ ಬೆಂಡೆಕಾಯಿ ಹೆಂಗ್ ಕಿಲೋ

ಪರಸ್ಪರರಲ್ಲಿ ಯಾವುದೇ ರೀತಿಯ ಲೈಂಗಿಕತೆಯ ಭಾವನೆ ಬರಬಾರದೆಂಬುದೇ ಅದನ್ನು ಹೀಗೂ ಹೇಳಬಹುದು. ಸಹೋದರತ್ವದ ಭಾವನೆ ಬರಬೇಕೆಂಬುದೇ. ‘ಅಣ್ಣಾ’ – ‘ಅಕ್ಕಾ’ ಎಂಬ ಸಹೋದರತ್ವ ಸಂಬೋಧನೆಗಳ ಹಿಂದಿರುವ ಉದ್ದೇಶ. ಇಬ್ಬರು ಸಮ ವಯಸ್ಕ ಸ್ತ್ರೀಯರು ಮಾತನಾಡುವಾಗ ‘ಅಕ್ಕಾ ನಿನ್ನ ಕೂಸ್ ಎಷ್ಟ ತಿಂಗಳದಿದೆ?’ ಅವಳು ಪ್ರತಿಯಾಗಿ ‘ಅಕ್ಕಾ ಐದು ತಿಂಗಳದಿದೆ’. ಪರಸ್ಪರರು ಸಂಬೋಧಿಸುವಾಗ ಪ್ರೀತಿ, ಗೌರವಾದರಗಳು ಮುಖ್ಯವಾಗುತ್ತವೆ.

ಇಬ್ಬರು ಅಪರಿಚಿತ ಪುರುಷ ವಿದ್ಯಾವಂತರು ಮಾತನಾಡುವಾಗ ‘ಸಾರ್’ ಎಂದೂ, ಇಬ್ಬರು ಅಪರಿಚಿತ ಸ್ತ್ರೀ ವಿದ್ಯಾವಂತರು ಮಾತನಾಡುವಾಗ ‘ಮೇಡಂ’, ‘ಟೀಚರ್’ ಎಂದೂ, ಪುರುಷ ವಿದ್ಯಾವಂತರು ಸ್ತ್ರೀ ವಿದ್ಯಾವಂತರೊಡನೆ ಮಾತನಾಡುವಾಗ ‘ಮೇಡಂ’, ‘ಟೀಚರ್’ ಎಂದೂ, ಸ್ತ್ರೀ ವಿದ್ಯಾವಂತರ ಪುರುಷ ವಿದ್ಯಾವಂತರೊಡನೆ ಮಾತನಾಡುವಾಗ ‘ಸಾರ್’, ‘ಅಣ್ಣಾರ್’ ಎಂದೂ ಸಂಬೋಧಿಸುವುದುಂಟು. ಅಪರಿಚಿತರೊಡನೆ ಮಾತನಾಡುವಾಗ ಯಾವುದೇ ಬಗೆಯ ಆತ್ಮೀಯತೆಯಾಗಲಿ, ನಿಕಟತ್ವವಾಗಲಿ ಇರುವುದಿಲ್ಲ. ತತ್ಕಾಲಿನ ಸಂಬಂಧ ಮಾತ್ರ ಇರುತ್ತದೆ. ಪರಿಚಿತರು ಪರಿಚಿತರೊಡನೆ ಮಾತನಾಡುವಾಗ ಅಕ್ಕಾ, ಅಣ್ಣಾ, ಅಜ್ಜ, ಅಮ್ಮ ಇವುಗಳ ಜೊತೆಗೆ ಆಂಟಿ, ಅಂಕಲ್, ಮಾಮ ಎಂದೂ ಸಂಬೋಧಿಸುವುದುಂಟು. ಇಲ್ಲಿ ಆತ್ಮೀಯತೆ ಹಾಗೂ ನಿಕಟತ್ವ ಹೆಚ್ಚಿರುತ್ತದೆ.

ಹೀಗೆ ಭಾಷಾ ಸಮುದಾಯದಲ್ಲಿ ವ್ಯಕ್ತಿಗಳ ಮಧ್ಯ ಪರಸ್ಪರ ಸಂಬಂಧ ಮತ್ತು ಸಂಪರ್ಕ ಇರುತ್ತದೆ. ಸಮುದಾಯದ ಕಟ್ಟಳೆಗಳ ಚೌಕಟ್ಟಿನಲ್ಲಿ ಭಾಷಿಕರು ಆಂತರಿಕ ಸಂಬಂಧಗಳನ್ನು ಹೊಂದಿರುತ್ತಾರೆ.