ಭಾಷಾಸಮುದಾಯದಲ್ಲಿ ವಿಭಿನ್ನ ವರ್ಗದ, ವಿಭಿನ್ನ ವೃತ್ತಿಯ ಭಾಷಿಕರಿರುತ್ತಾರೆ. ಅವರು ಬೇರೆ ಬೇರೆ ಭಾಷಿಕ ಸನ್ನಿವೇಶಗಳಲ್ಲಿ ಭಾಷೆಯನ್ನು ಬಳಸುವಾಗ ಭಿನ್ನತೆ ಕಂಡುಬರುತ್ತದೆ. ಅದು ಸಹಜ. ವ್ಯಾಪಾರಿ – ಗಿರಾಕಿ, ವೈದ್ಯ ರೋಗಿ ಮುಂತಾದ ವೃತ್ತಿಸೂಚಕ ಅವಳಿಗಳ ನಡುವೆ ಜೈವಿಕ ಹಾಗೂ ಸಾಮಾಜಿಕ ಸಂಬಂಧಗಳಿರುವುದುಂಟು. ಅವರಲ್ಲಿ ಪರಸ್ಪರ ಪ್ರೀತಿ, ವಾತ್ಸಲ್ಯ ಸಹಕಾರ ಇರುತ್ತದೆ. ಕೆಲವು ಸಂದರ್ಭದಲ್ಲಿ ಅತೃಪ್ತಿ ಕಂಡು ಬರಬಹುದಾದರೂ ಅವೆಲ್ಲವು ಸಮುದಾಯದ ಪರಿಸರದಲ್ಲಿಯೇ ಪರಿಹಾರವಾಗುತ್ತವೆ. ಈ ಅಧ್ಯಾಯದಲ್ಲಿ ಭಾಷಾ ಸಮುದಾಯದಲ್ಲಿರುವ ಕೆಲವು ವೃತ್ತಿ ಸಂಬಂಧಗಳಲ್ಲಿ ನಡೆಯುವ ಭಾಷಾ ಕ್ರಿಯೆಗಳನ್ನು ಕುರಿತು ಚರ್ಚಿಸಲಾಗಿದೆ.

ಔಪಚಾರಿಕ ಅನೌಪಚಾರಿಕ

ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಹಾಗೂ ನಿರ್ದಿಷ್ಟ ಕಟ್ಟಳೆಗಳ ಚೌಕಟ್ಟಿನಲ್ಲಿ ಭಾಷೆ ಬಳಕೆಯಾಗುವ ಪರಿಸರಕ್ಕೆ ‘ಔಪಚಾರಿಕ ಭಾಷಾ ಪರಿಸರ’ ಎಂದು ಹೆಸರು. ಉದಾ: ವಿದ್ಯಾಸಂಸ್ಥೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಮುಂತಾದ ವಲಯಗಳಲ್ಲಿ ಭಾಷೆ ಔಪಚಾರಿಕವಾಗಿ ಬಳಕೆಯಾಗುತ್ತದೆ. ಇಲ್ಲಿ ಕೃತಕತೆ ಹೆಚ್ಚು,. ಔಪಚಾರಿಕ ಮತ್ತು ಅನೌಪಚಾರಿಕ ಸನ್ನಿವೇಶಗಳ ಸಾಮಾನ್ಯ ವ್ಯತ್ಯಾಸಗಳು ಇದೇ ಅಧ್ಯಾಯದ ಕೊನೆ ಟಿಪ್ಪಣಿ ಭಾಗದಲ್ಲಿ ಕೊಡಲಾಗಿದೆ. ಇಬ್ಬರು ಒಂದೇ ಶ್ರೇಣಿಯ ಅಧಿಕಾರಿಗಳು ಒಬ್ಬರನ್ನೊಬ್ಬರು ಸಂಬೋಧಿಸುವಾಗ ಪರಸ್ಪರ ಕುಲನಾಮ ಇಲ್ಲವೆ ಹೆಸರು ಇಲ್ಲವೆ ಪದನಾಮಗಳನ್ನು ಬಳಸುವುದುಂಟು.

ಅಪ್ಪ ಸಾಹೇಬರೇ ಸ್ವಲ್ಪ ಕೆಲಸ ಅತಿ ಬರ್ತೀರ
ಪಾಟೀಲ ಸರ್ ಸ್ವಲ್ಪ ಕೆಲಸ ಅತಿ ಬರ್ತೀರಾ
ಇಂಜನಿಯರರೇ ಸ್ವಲ್ಪ ಕೆಲಸ ಅತಿ ಬರ್ತೀರಾ

ಹಿರಿಯ ಶ್ರೇಣಿಯ ಅಧಿಕಾರಿಗಳು ಕಿರಿಯ ಶ್ರೇಣಿಯವರನ್ನು ಸಂಬೋಧಿಸುವಾಗ ಅವರ ಹೆಸರು / ಕುಲನಾಮ (ಕೆಲವು ವೇಳೆ ಕ್ವಚಿತ್ತಾಗಿ) ಪದನಾಮಗಳನ್ನು ಬಳಸುವುದುಂಟು.

ಹಿರಿಯ ಶ್ರೇಣಿಯವ : ಗೋಪಾಲ್ ಯಾಕೆ ಎರಡು ದಿವಸಾಯಿತು ಆಫೀಸಿಗೆ ಬಂದಿರಲಿಲ್ಲ

ಕಿರಿಯ ಶ್ರೇಣಿಯವ : ಸಾಹೇಬರೆ, ಮೈಯಲ್ಲಿ ಆರಾಮ ಇರಲಿಲ್ಲ.

ಹಿರಿಯ ಶ್ರೇಣಿಯವ : ಆಸ್ಪತ್ರೆಗೆ ತೋರಿಸಿರಿ

ಕಿರಿಯ ಶ್ರೇಣಿಯವ : ಸಾಹೆಬರೆ, ನಿನ್ನೆ ತೋರಿಸಿದ್ದೇನೆ.

ಕಿರಿಯ ಶ್ರೇಣಿಯವರು ಹಿರಿಯ ಶ್ರೇಣಿಯವರನ್ನು ಸಾರ್, ಸಾಹೇಬ್ ಎಂದು ಕರೆಯುವುದುಂಟು. ಕರ್ನಾಟಕದ ಉತ್ತರ ಭಾಗದಲ್ಲಿ ಸಾಹೇಬ್, ರೂಪ ಹೆಚ್ಚಾಗಿ ಸರಕಾರಿ ಅಧಿಕಾರಿಗಳನ್ನು ಸಂಬೋಧಿಸಿಸುವಾಗ ಧಾರಾಳವಾಗಿ ಬಳಕೆಯಾಗುತ್ತದೆ. ಡಿ. ಸಿ. ಸಾಹೇಬರು, ವಿ. ಸಿ. ಸಾಹೇಬರು, ತಹಶೀಲದಾರ ಸಾಹೇಬರು ಮುಂತಾದವರು. ಅಲ್ಲದೆ ರಾಜಕಾರಣಿಗಳನ್ನೂ ಡ್ರೈವರ್ – ಕಂಡಕ್ಟರ್ ಗಳನ್ನು ಸಂಬೋಧಿಸುವಾಗಲೂ ಬಳಕೆಯಾಗುತ್ತದೆ.

ಎಂ.ಎಲ್.. ಸಾಹೇಬರು, ಎಂ. ಪಿ. ಸಾಹೇಬರು,
ಡ್ರೈವರ್ ಅಥವಾ ಕಂಡಕ್ಟರ್ ಸಾಹೇಬ್ರ ವೇಳೆ ಆಗೇತಿ ಗಾಡಿ ಬಿಡ್ರಿ

ಇದನ್ನು ಗಮನಿಸಿದಾಗ ಈ ಪದದ ಬಳಕೆಯಲ್ಲಿ ಸಾಮಾಜಿಕ ಬದ್ಧತೆ ಇದೆಯೆಂದು ಕಾಣುತ್ತದೆ. ಹಿರಿಯ ಶ್ರೇಣಿಯವರಲ್ಲಿ ಹೆಚ್ಚಾಗಿ ಪ್ರಶ್ನೆ, ಅಧಿಕಾರ ಚಲಾವಣೆ, ಒಂದು ರೀತಿಯ ಗತ್ತು ಇದ್ದರೆ ಕಿರಿಯ ಶ್ರೇಣಿಯವರಲ್ಲಿ ವಿಧೇಯಕತೆ, ಸೌಮ್ಯತೆಯಿರುತ್ತದೆ. ಹಿರಿಯ ಶ್ರೇಣಿಯವರು ಕಿರಿಯ ಶ್ರೇಣಿಯವರನ್ನು ಸಂಬೋಧಿಸುವಾಗ ಏಕವಚನದ ಬಳಕೆ ಹೆಚ್ಚು. ಕಿರಿಯ ಶ್ರೇಣಿಯವರು ಹಿರಿಯ ಶ್ರೇಣಿಯವರನ್ನು ಸಂಬೋಧಿಸುವಾಗ ಬಹುವಚನದ ಬಳಕೆ ಹೆಚ್ಚು.

ಔಪಚಾರಿಕ ಸನ್ನಿವೇಶಗಳನ್ನು ಹೊರತುಪಡಿಸಿ ಕುಟುಂಬ, ಮಾರುಕಟ್ಟೆ, ಬಸ್ ನಿಲ್ದಾಣ ಇಂತಹ ಅನೌಪಚಾರಿಕ ಸನ್ನಿವೇಶಗಳಲ್ಲಿ ಭಾಷೆ ಬಳಕೆಯಾಗುವಾಗ ಯಾವುದೇ ರೀತಿಯ ಕೃತಕತೆ ಇರುವುದಿಲ್ಲ. ಇಲ್ಲಿ ಕಿರಿಯ ಶ್ರೇಣಿಯವರು ಹಿರಿಯ ಶ್ರೇಣಿಯವರನ್ನು ಏಕವಚನದಿಂದ ಸಂಬೋಧಿಸುವುದುಂಟು. ಮಾಮನಿ ಎಂ.ಎಲ್.ಎ ಇದ್ದಾಗ ಬಾಳ ಮೆರೆದ್, ಈಗ ಮೂಲಿ ಗುಂಪ್ ಆಗ್ಯಾನ್ (ರೂಢಿ).

ಕೂಲಿಕಾರರು ಭೂಮಾಲೀಕರನ್ನು ದಣಿ, ಸಾಹುಕಾರ ಎಂದೂ, ಭಕ್ತಾದಿಗಳು ಧರ್ಮಾಧಿಕಾರಿಗಳನ್ನು ಪೂಜ್ಯರು, ಸ್ವಾಮೀಜೀ, ಅಪ್ಪಾಗೋಳ್, ಅಜ್ಜಾಗೋಳ್ ಎಂದೂ ಸಂಬೋಧಿಸುವುದುಂಟು. ಔಪಚಾರಿಕ ಮತ್ತು ಅನೌಪಚಾರಿಕ ಸನ್ನಿವೇಶಗಳಿಗೆ ತಕ್ಕಂತೆ ಭಾಷಾ ಬಳಕೆ ಭಿನ್ನವಾಗಿರುವಂತೆ ಆ ಸಂದರ್ಭದಲ್ಲಿ ಆಯಾ ವ್ಯಕ್ತಿಗಳನ್ನು ಸಂಬೋಧಿಸುವಾಗ ಸಂಬೋಧನಾ ರೂಪಗಳು ಭಿನ್ನವಾಗಿರುತ್ತವೆ.

ವ್ಯಾಪಾರಿ ಗಿರಾಕಿ

ಮಾರುಕಟ್ಟೆಯಲ್ಲಿ ಬಳಕೆಯಾಗುವಾಗ ಭಾಷೆಯ ರೀತಿಯನ್ನು ಗಮನಿಸಿದಾಗ ವ್ಯಾಪಾರಿಯ ಭಾಷೆಯಲ್ಲಿ ತುಂಬ ನಯಗಾರಿಕೆ ಇರುತ್ತದೆ. ಪ್ರೀತಿ, ಆತ್ಮೀಯತೆಯಿಂದ ಕೂಡಿದ ಪದಗಳನ್ನು ಬಳಸುವುದರಿಂದ ಗಿರಾಕಿಗಳಿಗೆ ಬಹಳ ಹತ್ತಿರವಾಗುತ್ತಾನೆ. ಅವನಿಗೆ ಅಂಗಡಿಯಲ್ಲಿಯ ಸಾಮಾನುಗಳು ಮಾರಾಟವಾಗುವುದು ಮುಖ್ಯ. ವ್ಯಾಪಾರಿ ಮತ್ತು ಗಿರಾಕಿಗಳ ಮಧ್ಯ ತಾತ್ಕಾಲಿಕ ಸಂಬಂಧವಿರುವುದರಿಂದ ಯಾವುದೇ ರೀತಿಯ ಸಾಮಾಜಿಕ ಬದ್ಧತೆ ಇರುವುದಿಲ್ಲ.

ವ್ಯಾಪಾರಸ್ಥರು ಸ್ತ್ರೀ ಗ್ರಾಹಕರನ್ನು ಸಂಬೋಧಿಸುವಾಗ ಅಮ್ಮಾರ, ಅಕ್ಕಾರ್, ಮೇಡಂ, ಟೀಚರ್, ಸಿಸ್ಟರ್ ಎಂದು ಗೌರವಯುತವಾಗಿ ಸಂಬೋಧಿಸುವುದುಂಟು.

’ಅಮ್ಮಾರ್ ಹಳೆ ಅಕ್ಕಿ ಚೆನ್ನಾಗಿವೆ. ೫೦ ಕೆ. ಜಿ. ತಗೊಂದ್ ಹೋಗ್ರಿ
’ಅಕಸ್ಮಾತ್ ನಿಮಗ್ ಪಸಂದ್ ಬರದಿದ್ದರ್’
’ವಾಪಸ್ ತಗೋತಿವರಿ’

ನೌಕರಸ್ಥರ ಗಂಡಸರನ್ನು ಸಾರ್, ಸಾಹೇಬ್ ಎಂದು, ಭೂ ಮಾಲೀಕರನ್ನು ದಣಿ, ಸಾಹುಕಾರ ಎಂದು ಸಂಬೋಧಿಸುವುದುಂಟು.

ವ್ಯಾಪಾರಿ : ಬನ್ನಿ ಸಾರ್ ಕೂತುಕೊಳ್ಳಿ, ತೊಗರಿ ಬೇಳೆ ಚೆನ್ನಾಗಿವೆ ಸಾರ್, ೫ ಕೆ. ಜಿ. ತೆಗೆದುಕೊಳ್ಳಿರಿ.

ಸಾಹುಕಾರರೆ / ದಣಿ, ನಮ್ಮ ಅಂಗಡಿಗೆ ೧೦ ಚೀಲ ಜ್ವಾಳಾ ಕೊಡಬೇಕು.

ರುದ್ರಗೌಡ : ಊಹೂ (ತಲೆದೂಗುತ್ತ) ಈ ವರ್ಷ ನಮಗ್ ಸಾಲುದಿಲ್ಲ

ವ್ಯಾಪಾರಿ : ಸಾಹುಕಾರರೆ, ನಿಮ್ಮಂತವರು ಈ ರೀತಿ ಅಂದರೆ ಹೇಗೆ?

ವ್ಯಾಪಾರಿಗಳು ಪ್ರತಿ ಹಂತದಲ್ಲಿಯೂ ಗಿರಾಕಿಗಳ ಜೊತೆಗೆ ವಿಶ್ವಾಸಾರ್ಹ ರೀತಿಯಲ್ಲಿ ಮಾತನಾಡುತ್ತಾರೆ. ಆದರೆ ಗ್ರಾಮಾಂತರ ಪ್ರದೇಶದಲ್ಲಿ ಗಿರಾಕಿಗಳೇ ವ್ಯಾಪಾರಸ್ಥರನ್ನು ಗೌರವ ಸೂಚಕವಾಗಿ ಸಂಬೋಧಿಸುವುದುಂಟು.

ಗಿರಾಕಿ : ನಮಸ್ಕಾರ್ ಶೆಟ್ಟರೆ, ಕಲ್ಲೊಳ್ಳಿ ಬೆಲ್ ಬಂದಿದೆಯಾ ಶೆಟ್ಟರೆ.

ವ್ಯಾಪಾರಿ : ಕಲ್ಲೊಳ್ಳಿ ಬೆಲ್ ಇನ್ನೂ ಬಂದಿಲ್ಲೋ ಕಲ್ಯಾ, ಬೆಳಗಾವಿ ಬೆಲ್ ಬಂದಿದೆ, ಚಲೋ ಅತಿ, ಒಂದ್ ಪೆಂಟಿ ಒಯ್‌ ಲೇ.

ಗ್ರಾಮಾಂತರ ಪ್ರದೇಶದಲ್ಲಿ ವ್ಯಾಪಾರಿಗಳು ಹಳ್ಳಿಯನ್ನು ನಿಯಂತ್ರಣದಲ್ಲಿಟ್ಟುಕೊಂಡಿರುತ್ತಾರೆ ಎಂಬುದನ್ನು ಗಮನಿಸಬೇಕು. ಸಣ್ಣ ವ್ಯಾಪಾರಸ್ಥರು ದೊಡ್ಡ ವ್ಯಾಪಾರಸ್ಥರನ್ನು ಸಾಹುಕಾರ / ದಣಿ ಎಂದು ಕರೆಯುವುದುಂಟು.

ಶಿಕ್ಷಕ ವಿದ್ಯಾರ್ಥಿ

ಭಾರತೀಯ ಸಮಾಜವು ಪ್ರಾಚೀನ ಕಾಲದಿಂದಲೂ ಕೆಲವು ನೀತಿ – ನಿಯಮಗಳನ್ನು ಹಾಗೂ ತತ್ವಗಳನ್ನು ಪಾಲಿಸಿಕೊಂಡು ಬರುತ್ತಿದೆ. ಇದರಿಂದ ಜನರಲ್ಲಿ ಧರ್ಮ – ನೀತಿ, ಆಚಾರ – ವಿಚಾರಗಳನ್ನು ಮೈಗೂಡಿಕೊಂಡಿದೆ. ಸತ್ಯ, ಪ್ರಾಮಾಣಿಕತೆ, ಆತ್ಮವಿಶ್ವಾಸ ಹಾಗೂ ಧಾರ್ಮಿಕ ಮನೋಭಾವನೆ ಅವರಲ್ಲಿ ಹೆಚ್ಚಿಸಿದೆ. ಅಹಿಂಸೆ, ಆಧ್ಯಾತ್ಮಿಕತೆಗೆ ವಿಶೇಷ ಮನ್ನಣೆ ನೀಡುವವರು ಹಾಗೂ ಸಮಾಜಕ್ಕೆ ಸೂಕ್ತ ಸಲಹೆ ಮಾರ್ಗದರ್ಶನ ನೀಡುವವರೆ ಶಿಕ್ಷಕರು, ಸಮಾಜದಲ್ಲಿ ಶಿಕ್ಷಕರ ಸ್ಥಾನಮಾನ ಉನ್ನತ ಮಟ್ಟದ್ದಾಗಿದೆ. ತರಗತಿಯಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಮಧ್ಯ ನಡೆಯುವ ಸಂಭಾಚಣೆಯಲ್ಲಿನ ಸಂಬೋಧನೆಗಳನ್ನು ಗಮನಿಸಿದಾಗ ಶಿಕ್ಷಕರು ವಿದ್ಯಾರ್ಥಿಗಳನ್ನು ಅವರ ಹೆಸರು ಅಥವಾ ಕುಲನಾಮಗಳನ್ನು ಬಳಸುವುದುಂಟು.

ಶಿಕ್ಷಕ : ಯಾಕಲೇ ಮಲ್ಯಾ ನಿನ್ನೆ ಶಾಲೆಗೆ ಏಕೆ ಬಂದಿರಲಿಲ್ಲ?

ವಿದ್ಯಾರ್ಥಿ : ಗುರುಗಳೇ, ನಿನ್ನೆ ಹೊಲಕ್ಕೆ ಹೋಗಿದ್ದೆ.

ಶಿಕ್ಷಕ : ಮಗನ್, ಹೊಲಕ್ಕೆ ಹೋದರೆ ಶಾಲೆಗೆ ನಿಮ್ಮ ಅಪ್ಪ ಬರ್ತಾನೆಯೇ? ಇನ್ನೊಮ್ಮೆ ಶಾಲಿ ತಪ್ಪಿಸಬೇಡ

ವಿದ್ಯಾರ್ಥಿ : ಆಗಲಿ ಗುರುಗಳೇ

ಶಿಕ್ಷಕ : ನಿನ್ನೆ ಗಣಿತ ವಿಷಯದ ಬಗೆಗೆ ಗೃಹ ಪಾಠ ಕೊಟ್ಟಿದ್ದೆ. ಯಾರು ಮಾಡಿಕೊಂಡು ಬಂದೀರಿ?

ವಿದ್ಯಾರ್ಥಿ : ಸರ್, ನಾನು ಮಾಡಿದ್ದೇನೆ.

ಶಿಕ್ಷಕ : ರುದ್ರಾಪುರ‍್ಯಾ ನೀನು ಏಕೆ ಲೆಕ್ಕ ಮಾಡಿಲ್ಲ? ಮಗನ್ ಊರಾಗ ತಿರುಗಾಡುತ್ತೀಯಾ, ಕುಳಿತುಕೊಂಡು ಓದಬೇಕು.

ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಹೆಚ್ಚಾಗಿ ಏಕವಚನದಿಂದ ಸಂಬೋಧಿಸುವುದುಂಟು. ಆ ಹಂತದಲ್ಲಿ ವಿದ್ಯಾರ್ಥಿಗಳು ತುಂಬ ವಿನಯದಿಮದ ವರ್ತಿಸುತ್ತಾರೆ. ಪದವಿ ಮತ್ತು ಸ್ನಾತಕೋತ್ತರ ಹಂತದಲ್ಲಿ ವಿದ್ಯಾರ್ಥಿಗಳು ಪ್ರೌಢರಾಗಿರುವುದರಿಂದ ಗುರುಗಳು ತಮ್ಮ ವಿದ್ಯಾರ್ಥಿಗಳನ್ನು ಬಹುವಚನದಿಂದ ಸಂಬೋಧಿಸುತ್ತಾರೆ.

ಶಿಕ್ಷಕರು : ಬಿದರಿ ಅವರೇ, ಗಮಕ ಸಮಾಸದ ಬಗ್ಗೆ ಸಂಪ್ರಬಂಧ ಬರೆದಿದ್ದೀರಾ?

ವಿದ್ಯಾರ್ಥಿ : ಸರ್, ಬರೀತಾ ಇದ್ದೇನೆ, ನಾಳೆ ಕೊಡುತ್ತೇನೆ.

ಶಿಕ್ಷಕರು : ಬೇಗ ಕೊಡಿರಿ, ಕನ್ನಡ ಅಧ್ಯಯನದಲ್ಲಿ ಪ್ರಕಟಿಸೋಣ

ವಿದ್ಯಾರ್ಥಿ : ಆಯ್ತು ಸರ್.

ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಗುರುಗಳು, ಅಧ್ಯಾಪಕ, ಉಪಾಧ್ಯಾಯ, ಸರ್, ಮಾಸ್ತರ್, ಮೇಷ್ಟ್ರು, ಓಜಯ್ಯ ಎಂದು ಕರೆಯುವರು. ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಕರ ಮೇಲೆ ಅಪಾರ ಗೌರವವಿರುವುದರಿಂದ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸ್ನೇಹಿತ, ತತ್ವಜ್ಞಾನಿ ಹಾಗೂ ಮಾರ್ಗದರ್ಶಕನಂತೆ ವರ್ತಿಸಬೇಕು. ಇದರಿಂದ ಮಕ್ಕಳ ಭವಿಷ್ಯವನ್ನು ರೂಪಿಸಿಕೊಳ್ಳಲು ಹಾಗೂ ಸಮಾಜ ಒಪ್ಪುವಂತಹ ಆದರ್ಶ ಗುಣಗಳನ್ನು ಬೆಳೆಸಿಕೊಳ್ಳು ಅನುಕೂಲವಾಗಿದೆ.

ವೈದ್ಯ ರೋಗಿ

ಆರೋಗ್ಯವು ಸಾಮಾಜಿಕ ಗುಣಧರ್ಮಗಳಿಗೆ ಮತ್ತು ಜೀವನದ ಸುಖ ಸಂತೋಷಗಳಿಗೆ ಅಡಿಪಾಯವಾಗಿದೆ. ರೋಗ ತಲೆದೋರಿ ದೈಹಿಕ ಆರೋಗ್ಯಕ್ಕೆ ಭಂಗ ಉಂಟಾದಾಗ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತೇವೆ. ಆಗ ವೈದ್ಯರು ರೋಗಿಯನ್ನು, ರೋಗಿಯು ವೈದ್ಯರನ್ನು ಸಂಬೋಧಿಸುವಾಗ ಭಾಷಾ ಬಳಕೆಯು ಸ್ವಾರಸ್ಯಕರವಾಗಿರುತ್ತದೆ. ವೈದ್ಯರು ೧೫ ವರ್ಷಗಳಿಗಿಂತ ಕಡಿಮೆ ಇರುವ ಮಕ್ಕಳನ್ನು ಬೇಬಿ, ಅಮ್ಮಾ, ಪುಟಾ ಎಂದು ಸಂಬೋಧಿಸುವುದುಂಟು.

ವೈದ್ಯ : ಏನಮ್ಮಾ ಆರಾಮ ಇಲ್ಲೇನು? ಅಳಬಾರದಮ್ಮ, ನಿನಗೆ ಚಾಕಲೆಟ್ ಕೊಡತೇನು ಪುಟಾ ಸುಮ್ಮ ಕೂಡ್ರಬೇಕು.

೧೫ ರಿಂದ ೨೦ ವರ್ಷದವರನ್ನು ಅಪಾ, ಅಮಾ ಎಂದು ಸಂಬೋಧಿಸುವುದುಂಟು.

ವೈದ್ಯ : ಏನಪಾ / ಏನಮಾ ನಿನಗೆ ಏನು ಆಗಿದೆ?

ರೋಗಿ : ನಾಲ್ಕು ದಿವಸ್ ಆತ ಸಾಹೇಬರೆ, ಸುಸ್ತ ಆಗೇತಿ

ವೈದ್ಯ : ಏನ್ ಆಗಿಲ್ಲಮ್ಮ / ಆಗಿಲ್ಲಪಾ, ಇಂಜಕ್ಷನ್ ಮಾಡ್ತೆನಿ ಆರಾಮ ಆಗುತ್ತದೆ.

೨೦ ವರ್ಷ ಮೇಲ್ಪಟ್ಟವರನ್ನು ’ರೀ’ ಇಲ್ಲವೆ ಅವರ ಹೆಸರಿನ ಜೊತೆಗೆ ಅಣ್ಣಾ, ಕಾಕಾ ಎಂಬ ಬಂಧುಸೂಚಕಗಳನ್ನು ಬಳಸಿ ಸಂಬೋಧಿಸುವುದುಂಟು.

ವೈದ್ಯ : ಮಾದೇವಪ್ಪಣ್ಣಾರ್ ನಿಮ್ಮ ಉಸಿರಾಟದ ತೊಂದರೆ ಈಗ ಆರಾಮ ಆಗಿದೆಯೋ ಇಲ್ಲವೋ?

ರೋಗಿ : ಸಾಹೆಬರೆ, ಹೆಚ್ಚಾಗಿದೆ

ವೈದ್ಯ : ಹಾಗಾದರೆ ನಾಳೆ ಸ್ವಾಮಾರ್, ಬೆಳಗಾವಿ ಕೆ.ಎಲ್.ಇ. ದವಾಖಾನೆಗೆ ಹೋಗಿ ಬರೋಣ

ರೋಗಿ : ಆಗಲಿ ಸಾಹೇಬರೆ, ಆರಾಮ ಆದರೆ ಸಾಕು.

ನಗರ ಪ್ರದೇಶದಲ್ಲಿ ವೈದ್ಯರಿಗೆ ವಿದ್ಯಾವಂತರು ಸಾರ್ ಎಂದು ಸಂಬೋಧಿಸುವುದುಂಟು. ಗ್ರಾಮಾಂತರ ಪ್ರದೇಶದಲ್ಲಿ ಸಾಹೇಬ್ ಎಂಬ ರೂಪವೇ ಪ್ರಯೋಗದಲ್ಲಿದೆ. ಡಾಕ್ಟರ್, ಸಾಹೇಬ್ / ಡಾಕ್ಟರ್‌ಗೋಳ್ ಎಂಬ ರೂಪಗಳು ಬಳಕೆಯಲ್ಲಿವೆ. (ಹೆಚ್ಚಾಗಿ) ವೈದ್ಯರುಗಳು ರೋಗಿಗಳ ಜೊತೆಗೆ ಹಸನ್ಮುಖದಿಂದ ವರ್ತಿಸುತ್ತಾರೆ. ಮಾತನಾಡುತ್ತಾರೆ. ವೈದ್ಯರುಗಳು ಪ್ರೀತಿಯುಕ್ತ ಮಾತುಗಳೇ ರೋಗಿಗಳ ಅರ್ಧ ರೋಗವನ್ನು ನಿವಾರಿಸುತ್ತವೆ.

ವಿಟ ವೇಶ್ಯೆ

ವೇಶ್ಯಾವೃತ್ತಿ ಒಂದು ಜ್ವಲಂತ ಸಮಸ್ಯೆ. ಹಣ ಇಲ್ಲವೆ ಇತರ ಸೌಲಭ್ಯಕ್ಕೋಸ್ಕರ ಅಭ್ಯಾಸಬದ್ಧವಾಗಿ ಇಲ್ಲವೇ ಆಗಾಗ್ಗೆ ಲೈಂಗಿಕ ಸಂಬಂಧವನ್ನು ಹೊಂದುವವರು ವೇಶ್ಯೆಯರು. ಕಾಮತೃಶೆಗಾಗಿ ವೇಶ್ಯೆಯರ ಜೊತೆಗೆ ಸಂಬಂಧ ಹೊಂದುವವರು ವಿಟರು. ಭೋಗದ ಸಂದರ್ಭದಲ್ಲಿ ಈರ್ವರಿಗೂ ಲಜ್ಜೆ ಇರುವುದಿಲ್ಲ. ವಿಟ – ವೇಶ್ಯೆಯನ್ನು ಉದ್ರೇಕಿಸಿ ಏಕವಚನದಲ್ಲಿ ಮಾತನಾಡುತ್ತಾನೆ. ವೇಶ್ಯೆಯರ ಹೆಸರಿನಿಂದಲೇ ಸಂಬೋಧಿಸುತ್ತಾನೆ. ಸರಸೂ. ಲಕ್ಷ್ಮೀ, ಮಾಲಾ ಮುಂತಾದವು. ಬಾರ್, ಬಾ, ಅಲ್ಲಿಯೇ ಬಾ, ದಾರಿಕಾಯತಾನ್, ಈ ರೂಪಗಳಲ್ಲದೇ ಕೈ ಸನ್ನೆ, ಸಂಕೇತ ಇಂತಹ ಶಾಬ್ದಿಕ ಸಂವಹನ ಇಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ವಿಟ : ಎಷ್ಟು ಹೇಳು

ವೇಶ್ಯೆ : ನೂರು ರೂಪಾಯಿ

ವಿಟ : ಐವತ್ತು ಕೊಡ್ತೆನೆ

ವೇಶ್ಯೆ : ಬಾಬಾ, ಲವೂಟ್ ರೊಖ್ಖಾಕೊಡ

ವೇಶ್ಯೆ – ವಿಟವನ್ನು ಬಹುವಚನದಲ್ಲಿ ಸಂಬೋಧಿಸುವುದುಂಟು. (ಹೆಚ್ಚಾಗಿ) ಮಾವ ಎಂದು ಕರೆಯುತ್ತಾರೆ. ವೇಶ್ಯೆ ಮತ್ತು ವಿಟನ ಸಂಬಂಧ ತುಂಬ ತಾತ್ಕಾಲಿಕ. ಹಣ ಸಂಪಾದನೆ ಮತ್ತು ಕಾಮತೃಷೆ ಇಂಗಿಸುವುದು ಇಲ್ಲಿ ಮುಖ್ಯವಾಗಿರುತ್ತದೆ.

ಹಳ್ಳಿಗಳಲ್ಲಿ ಇಟ್ಟುಕೊಳ್ಳುವ ಪದ್ಧತಿ ಇದೆ. ಶ್ರೀಮಂತರು ಪರಸ್ತ್ರೀಯರ ಜೊತೆಗೆ ಅನಧಿಕೃತವಾಗಿ ಸಂಬಂಧ ಹೊಂದಿರುತ್ತಾರೆ. (ಉಪಪತ್ನಿ). ಅವರಿಗೆ ಸಾಮಾಜಿಕ ಮನ್ನಣೆ ಇದೆ. ಅದು ಪ್ರತಿಷ್ಠೆ ಅಂಶವೂ ಆಗಿದೆ. ಪರಸ್ಪರರಲ್ಲಿ ಪ್ರೀತಿ ಹೆಪ್ಪುಗಟ್ಟಿರುತ್ತದೆ. ಗೆಣೆಯ ತೀರಿಕೊಂಡಾಗ ಉಪಪತ್ನಿ ಅವನನ್ನು ನೆನೆಸಿ ಅಳುತ್ತಾಳೆ

ಗೆಣೆಯ ಬಿಟ್ಟರು ಕೂಡ ಗೆಣೆಯನಾಡಿದ ಆಟ
ಮನದಾಗ ಊರಿ ನಿಂತ್ಹಾಂಗ | ಹುಡುಗಿ
ಚಂಚಣಕ ನೆನೆಸಿ ಅಂತಾಳ ||

ಎಂಬ ಮಾತು ಹಳ್ಳಿಗರಲ್ಲಿ ಈಗಲೂ ರೂಢಿಯಲ್ಲಿದೆ.

ಹೀಗೆ ಭಾಷಾ ಸಮುದಾಯದಲ್ಲಿ ಸಾಮಾಜಿಕ ಸಂಬಂಧಗಳು ವಿಭಿನ್ನತೆಯಿಂದ ಕೂಡಿದ್ದರೂ ಸಾಮಾಜಿಕ ಸ್ಥಿರತೆಗೆ ಧಕ್ಕೆಯನ್ನುಂಟು ಮಾಡುವುದಿಲ್ಲ. ಔಪಚಾರಿಕ ಮತ್ತು ಅನೌಪಚಾರಿಕ ಸಂದರ್ಭಗಳಲ್ಲಿಯ ಭಾಷಾ ಬಳಕೆಯನ್ನು ತುಲನಾತ್ಮಕವಾಗಿ ಅಧ್ಯಯನ ಮಾಡುವುದರಿಂದ ಭಾಷಾ ಸಮುದಾಯಗಳ ಸಾಮಾಜಿಕ ವ್ಯವಸ್ಥೆಯನ್ನು ತಿಳಿಯಬಹುದಾಗಿದೆ.

ಕೊನೆಟಿಪ್ಪಣಿ

ಭಾಷಾ ಬಳಕೆ : ಔಪಚಾರಿಕ ಮತ್ತು ಅನೌಪಚಾರಿಕ ಸಂದರ್ಭ (ಸಾಮ್ಯ ವೈಷಮ್ಯಗಳು)

ಔಪಚಾರಿಕ

ಅನೌಪಚಾರಿಕ

೧. ನಿರ್ದಿಷ್ಟ ಕಾರ್ಯ ವಿಧಾನದ ವ್ಯಾಪ್ತಿಯುಂಟು ೧. ಉದ್ದೇಶರಹಿತ ಕಾರ್ಯವಿಧಾನದ ವ್ಯಾಪ್ತಿ ಉಂಟು
೨. ನಿಯಮಿತವಾದ ಸ್ಥಳ, ವೇಳೆ ಹಾಗೂ ಸಂಕಥನ ಇರುತ್ತದೆ. ೨. ಸ್ಥಳ, ವೇಳೆ, ಹಾಗೂ ಸಂಕಥನದ ವ್ಯವಸ್ಥೆ ಇಲ್ಲ.
೩. ಭಾಷಿಕರ ನಡುವೆ ಪ್ರಾಥಮಿಕ ಸಂಬಂಧವುಂಟು ೩. ಭಾಷಿಕರ ನಡುವೆ ಪ್ರಾಥಮಿಕ ಸಂಬಂಧ ಇರುವುದಿಲ್ಲ.
೪. ಭಾಷಾ ಬಳಕೆ ನಿಯಮಿತವೂ ಉದ್ದೇಶರಹಿತವೂ ಅರ್ಥಪೂರ್ಣವಾಗಿರುತ್ತದೆ. ೪. ಭಾಷಾ ಬಳಕೆಯಲ್ಲಿ ಸಹಜತೆ ಇರುತ್ತದೆ.
೫. ವಿದ್ಯಾಸಂಸ್ಥೆ, ಕುಟುಂಬ, ಧಾರ್ಮಿಕ ಸಂಸ್ಥೆಗಳಲ್ಲಿ ಭಾಷೆ ಔಪಚಾರಿಕವಾಗಿ ಬಳಕೆಯಾಗುತ್ತದೆ. ೫. ಬಸ್ ನಿಲ್ದಾಣ, ಪೇಟೆ, ಮದುವೆ ಮುಂತಾದ ಸನ್ನಿವೇಶಗಳಲ್ಲಿ ಭಾಷೆ ಅನೌಪಚಾರಿಕವಾಗಿ ಬಳಕೆಯಾಗುತ್ತದೆ.