ಭಾಷಾ ಸಮುದಾಯದಲ್ಲಿ ತಂದೆ, ತಾಯಿ, ಮಕ್ಕಳು, ಮೊಮ್ಮಕ್ಕಳು ಮತ್ತು ಅವರ ಆಶ್ರಿತರು ಹೀಗೆ ಬಂಧುಗಳ ಒಂದು ಗುಂಪಿಗೆ ಕುಟುಂಬವೆನ್ನಬಹುದು. ಸಾಮಾನ್ಯವಾಗಿ ಒಂದು ಕುಟುಂಬಕ್ಕೆ ಸೇರಿದ ಸದಸ್ಯರು ಒಂದೇ ಕಡೆ ವಾಸಿಸುವುದುಂಟು. ಕುಟುಂಬವು ತನ್ನದೇ ಆದ ಸಾಮಾಜಿಕ ಕಾರ್ಯಗಳನ್ನು ಹೊಂದಿದೆ. ಅವುಗಳಲ್ಲಿ ಮುಖ್ಯವಾಗಿ ಸಂಸ್ಕೃತಿಯ ವಿನಿಮಯ, ಸದಸ್ಯರ ಮೇಲೆ ನಿಯಂತ್ರಣ, ಸದಸ್ಯರ ಸಂರಕ್ಷಣೆ ಹಾಗೂ ಸದಸ್ಯರ ವ್ಯಕ್ತಿತ್ವ ಬೆಳವಣಿಗೆ ಮುಂತಾದ ಕಾರ್ಯಗಳನ್ನು ನಿರ್ವಹಿಸುತ್ತದೆ. ಸಾಮಾಜಿಕ ರಚನೆಯಲ್ಲಿ ಕುಟುಂಬವು ಪ್ರಮುಖ ಪಾತ್ರ ವಹಿಸುತ್ತದೆ. ಕುಟುಂಬದಲ್ಲಿಯ ಅತ್ತೆ – ಮಾವ – ಭಾವ – ಸೊಸೆ ಮುಂತಾದ ಸದಸ್ಯರ ಸ್ಥಾನಮಾನಗಳು ಭಿನ್ನ ಮತ್ತು ನಿರ್ದಿಷ್ಟವಾಗಿರುತ್ತವೆ. ಈ ಅಧ್ಯಾಯದಲ್ಲಿ ಕುಟುಂಬದ ಭಾಷಾ ವಲಯದ ಭಾಷಿಕರ ಸಮಾಜೋ ಭಾಷಿಕ ಸಂಬಂಧವನ್ನು ಕುರಿತು ಚರ್ಚಿಸಲಾಗಿದೆ.

ತಂದೆ / ತಾಯಿ ಮಗ / ಮಗಳು

ಸಾಮಾನ್ಯವಾಗಿ ಹೆತ್ತವರಿಗೆ ಮಾತ್ರ ‘ತಂದೆ’ ‘ತಾಯಿ’ ಎಂಬ ರೂಪಗಳು ಬಳಕೆಯಾಗುತ್ತಿದ್ದರೂ ಬಳಕೆಯ ಬೇರೆ ಸಂದರ್ಭದಲ್ಲಿಯೂ ಅವು ಬಳಕೆಯಾಗುತ್ತವೆ. ಉದಾಃ ಗಂಡಸಿನ ಅಥವಾ ಹೆಂಗಸರ ಹೆಸರಿನ ಕೊನೆಯಲ್ಲಿ (ಅಣ್ಣ, ಅಯ್ಯನಂತೆ) ಸೇರುತ್ತವೆ. (ಮಹಾದೇವಪ್ಪ, ಚನ್ನಪ್ಪ), ಗಂಡಸರನ್ನು ಅಥವಾ ಹೆಂಗಸರನ್ನು ಸಂಬೋಧಿಸುವಾಗ ಸರ್ವ ಸಾಧಾರಣವಾಗಿ ಇವು ಬಳಕೆಯಾಗುತ್ತವೆ. ಹಿರಿಯರು ಕಿರಿಯರನ್ನು ವಾತ್ಸಲ್ಯದಿಂದ ಸಂಬೋಧಿಸುವಾಗಲೂ ಬಳಸುವುದುಂಟು (ಬಾರಪ್ಪ, ಬಾರಮ್ಮ) ಹಿರಿಯರನ್ನು ಕುರಿತು ಭಕ್ತಿ, ಗೌರವಗಳಿಂದ ಹೇಳುವಾಗಲೂ ಬಳಸುವುದುಂಟು. (ಅಪ್ಪಾರೆ / ಅಮ್ಮಾರೆ ತಾವು ಹೇಳಬೇಕು) ಒಂದು ವಸ್ತು ಇನ್ನೊಂದಕ್ಕಿಂತ ಅಧಿಕ ಎಂಬಲ್ಲಿ ಅಪ್ಪ ಬಳಕೆ ಯಾಗುವುದುಂಟು. ಇದು ಅದರಪ್ಪ (ರೂಢಿ)

ಕಿತ್ತೂರು ಕರ್ನಾಟಕ ಪ್ರದೇಶದಲ್ಲಿ ತಾಯಿಗೆ ‘ಅವ್ವ’ ಎಂದೂ ಕಲ್ಯಾಣ ಕರ್ನಾಟಕ ಹಾಗೂ ಹಳೇ ಮೈಸೂರು ಪ್ರದೇಶದಲ್ಲಿ ‘ಅಮ್ಮ’ ಎಂದೂ ಸಂಬೋಧಿಸುವುದುಂಟು. ತಾಯಿ / ತಂದೆ ಪದಗಳಿಗಿಂತ ‘ಅವ್ವ’ / ‘ಅಮ್ಮ’, ‘ಅಪ್ಪ’ ಎಂಬ ಪದಗಳು ಹೆಚ್ಚು ಅಪ್ಯಾಯನವಾದುದು. ಮಕ್ಕಳು ತಮ್ಮ ‘ಅಪ್ಪ’, ‘ಅವ್ವ’ಳನ್ನು ‘ತಂದೆ’ / ‘ತಾಯಿ’ಗಳೆಂದು ಗುರುತಿಸಬಹುದೆ ಹೊರತು ‘ತಂದೆ’ ‘ತಾಯಿ’ ಎಂದು ಸಂಬೋಧಿಸುವುದಿಲ್ಲ. ಅವ್ವ ಅಪ್ಪ ಎಂದೇ ಸಂಬೋಧಿಸುವುದು. ಅವ್ವ ಅಪ್ಪ ಪದಕ್ಕಿರುವ ಭಾವಸಂಪತ್ತು, ಕಳ್ಳು ಬಳ್ಳಿತನ ತಂದೆ / ತಾಯಿ ಪದಗಳಿಗಿಲ್ಲ. ಅವ್ವ / ಅಪ್ಪ ಬದುಕಿಗೆ ಇನ್ನೂ ಹತ್ತಿರವಾಗುತ್ತವೆ.

ಅಪ್ಪ, ಅವ್ವ / ಅಮ್ಮ ಇವುಗಳಿಂದಾದ ಸಾಧಿತ ರೂಪಗಳನ್ನು ನೋಡಿದಾಗ ಅವುಗಳ ಅರ್ಥ ವಲಯ ವಿಸ್ತಾರವಾಗುತ್ತದೆ. ತಾಯಿಯು ತಂಗಿ ಅಥವಾ ಚಿಕ್ಕಪ್ಪನ ಹೆಂಡತಿಗೆ ಉತ್ತರ ಭಾಗದಲ್ಲಿ ‘ಚಿಗವ್ವ’ [ಚಿಕ್ಕ+ ಅವ್ವ] ಎಂದೂ, ದಕ್ಷಿಣ ಭಾಗದಲ್ಲಿ ‘ಚಿಕ್ಕಮ್ಮ’ [ಚಿಕ್ಕ + ಅಮ್ಮ] ಎಂದೂ ಸಂಬೋಧಿಸುವುದುಂಟು. ಉತ್ತರ ಭಾಗದಲ್ಲಿ ಕೆಲವೆಡೆ ‘ಮಾವಂಶಿ’ ಎಂದು ಕರೆಯುವುದುಂಟು. ಬಹುಶಃ ಅದಕ್ಕೆ ಮರಾಠಿ ಪ್ರಭಾವ ಇರಬಹುದು. ಅದರಂತೆ ತಂದೆಯ ತಮ್ಮ ಅಥವಾ ಚಿಕ್ಕಮ್ಮನ ಗಂಡನಿಗೆ ಉತ್ತರ ಭಾಗದಲ್ಲಿ ಮರಾಠಿ ಪ್ರಭಾವದಿಂದಾಗಿ ‘ಕಾಕಾ’ ಎಂದು ಕರೆದರೆ ದಕ್ಷಿಣ ಭಾಗದಲ್ಲಿ ‘ಚಿಕ್ಕಪ್ಪ’ ಎಂದು ಕರೆಯುವುದುಂಟು. ತಾಯಿಯ ಅಕ್ಕ ಅಥವಾ ದೊಡ್ಡಪ್ಪನ ಹೆಂಡತಿಗೆ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಕ್ರಮವಾಗಿ ‘ದೊಡ್ಡವ್ವ’, ‘ದೊಡ್ಡಮ್ಮ’ ಎಂದು ಕರೆಯುತ್ತಾರೆ. ತಂದೆಯ ಅಣ್ಣ ಅಥವಾ ದೊಡ್ಡಮ್ಮನ ಗಂಡನಿಗೆ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ‘ದೊಡ್ಡಪ್ಪ’ ಎಂದು ಸಂಬೋಧಿಸುವುದುಂಟು. ಮರಾಠಿಯ ಪ್ರಭಾವದಿಂದಾಗಿ ಉತ್ತರ ಭಾಗದಲ್ಲಿ ತಂದೆಗೆ ‘ಬಾಬಾ’ ಎಂದು ಸಂಬೋಧಿಸುವುದುಂಟು. ವಿದ್ಯಾವಂತರಲ್ಲಿ ಆಂಗ್ಲಭಾಷೆಯ ಪ್ರಭಾವ ಹೆಚ್ಚಾಗಿರುವುದರಿಂದ ತಂದೆ, ತಾಯಿಯರಿಗೆ ‘ಫಾದರ್’, ‘ಮದರ್’ ಎಂದು ಸಂಬೋಧಿಸುವುದುಂಟು. ಮಕ್ಕಳ ಭಾಷೆಯಲ್ಲಿ ‘ಡ್ಯಾಡಿ’, ‘ಮಮ್ಮಿ’, ‘ಆಂಟಿ’, ‘ಅಂಕಲ್’ ಎಂಬ ರೂಪಗಳೇ ಈಗ ಬಳಕೆಗೆ ಬಂದಿವೆ.

ದ್ರಾವಿಡ ಭಾಷೆಗಳಲ್ಲಿ ‘ಮಕ್’ ಎಂಬುದು ಸಂತಾನಾರ್ಥಕ ಪದ. ಆದುದರಿಂದಲೇ ‘ಮಗ’, ‘ಮಗಳು’ ರೂಪಗಳು ಬಂದಿರಬಹುದು. ‘ಮಗ’ ಪದದಿಂದ ದತ್ತುಮಗ, ಸಾಕುಮಗ ಪದಗಳು ಸಾಧಿತವಾಗಿವೆ. ಮಗನ ಅಥವಾ ಮಗಳ ಮಗ ಮೊಮ್ಮಗನಾದರೆ, ಮಗಳು ಮೊಮ್ಮಗಳಾಗುತ್ತಾಳೆ. ಹೆಣ್ಣು ಮಗಳ ಮಗಳನ್ನು ಸೊಸೆಯಾಗಿ ಸ್ವೀಕರಿಸಬಹುದು. ಮಗನ / ಮಗಳ ಮೊಮ್ಮಗನಿಗೆ ‘ಮರಿಮಗ’ ‘ಗಿರಿಮಗ’ ಎಂದು ಕರೆಯುವುದುಂಟು. ಮಗ, ಮಗಳು, ಮೊಮ್ಮಗ, ಮೊಮ್ಮಗಳು ರೂಪಗಳು ಸಂಬೋಧನೆಯಲ್ಲಿ ಬಳಕೆಯಾಗುವುದಿಲ್ಲ. ಇನ್ನೊಬ್ಬರಿಗೆ ಪರಿಚಯಿಸುವಾಗ ಬಳಕೆಯಾಗುತ್ತವೆ. ತಂದೆ / ತಾಯಿಯರು (ಯಾವಾಗಲೂ) ತಮ್ಮ ಮಗ / ಮಗಳನ್ನು ಹೆಸರಿನಿಂದ ಕರೆಯುತ್ತಾರೆ.

ಪಾರವ್ವನೀರ ತರೋಗವಾ, ಕುಡಿಯಾಕ್ ನೀರಿಲ್ಲ‘ ;
ದುಂಡಪ್ಪಯಾಳೆ ಆಗೇತಿ ಹೊಲಕ್ ಹೋಗಪಾ
ದುಂಡಮ್ಮ ನಿಮ್ಮ ತಂಗಿ ಪಾರಮ್ಮನನ್ನು ಕರೆ

ಕೆಲವು ವೇಳೆ ವಾತ್ಸಲ್ಯದಿಂದ ತಂಗಿ, ತಮ್ಮ ಎಂದೂ ಸಂಬೋಧಿಸುವುದುಂಟು. ‘ತಂಗಿ / ತಮ್ಮ ಒಂದ್ ಚರಿಗಿ ನೀರ್ ಕೊಡವಾ’ ಕೌಟುಂಬಿಕ ಜೀವನದಲ್ಲಿ ಹೆತ್ತವರ ಬಗೆಗೆ ಅಪಾರ ಗೌರವವಿದೆ. ‘ತಂದೆ ನನ್ಹಡದಪ್ಪ ಒಂದು ಬಳುವಲಿ ಕಳಿಸು’, ‘ಅಂಗಳ ತುಂಬ ಎಳಿಗರ ತವರೂರು ಜಂಗೂಳಿ ಬಂದ್ರ ಕರೆಯಾಕ’ ‘ಮಳೆಯು ಬಂದರು ಬರಲಿ ಮರದ ಮೇಲಿರುವೆ’, ‘ಮಳೆ ನಿಂತ್ರು ಮರದಡಿ ಬಿಡದ ಹಡದವ್ವ ನೀ ಬಿಟ್ರೆ ನಿನ್ನ ಮನ ಬಿಡ’, ತಂದೆ ತಾಯಿ, ಮಗ, ಮಗಳ ಸುತ್ತ ಸ್ವಾರಸ್ಯಕರವಾದ ಗಾದೆಗಳು ಬಳಕೆಯಲ್ಲಿವೆ. ‘ಅಪ್ಪಗ್ ಅಪ್ಪಾ ಅನ್ನದವ್ ಚಿಕ್ಕಪ್ಪನನ್ನು ಅಪ್ಪಾ ಅಂದಾವೆ’, ‘ಅಪ್ಪನೆಟ್ಟ ಆಲದ ಮರವಾದರೆ ನೇಣಹಾಕಿ ಕೊಳ್ಳಬಹುದೇ?’, ‘ತಾಯಿಗಿಂತ ಬಂಧುವಿಲ್ಲ, ಉಪ್ಪಗಿಂತ ರುಚಿಯಿಲ್ಲ’, ‘ತಾಯಿ ಮಾತ ಕೇಳದವ ನಾಯಿಗೆ ಬೇಡದ ಅರಿವೆ’, ‘ತಾಯಿ ಇದ್ದರೆ ತವರೆಚ್ಚು, ತಂದೆ ಇದ್ದರ್ ಬಳಗೆಚ್ಚು’, ‘ಮಕ್ಕಳಿಲ್ಲದಿದ್ದರೆ ಒಂದು ಕಷ್ಟ ಇದ್ದ ಮೇಲೆ ನಾನಾ ಕಷ್ಟ’., ‘ಮನೆ ತಂಬ ಹೆಣ್ಣುಮಕ್ಕಳು ತೋವೆಗೆ ಉಪ್ಪು ಹಾಕುವವರಿಲ್ಲ’. ‘ಮಗ ಉಂಡರೆ ಕೆಟ್ಟಿಲ್ಲ ಮಳೆ ಆದರೆ ಕೆಟ್ಟಲ್ಲ’. ಸಾಮಾಜಿಕ ಜೀವನದಲ್ಲಿ ಬಳಕೆಯಾಗುವ ಇಂತಹ ವಾಗ್ರೂಢಿಗಳು ಆ ಬಂಧುಸೂಚಕಗಳ ಸ್ಥಾನಮಾನವನ್ನು ನಿರ್ದೇಶಿಸುತ್ತವೆ. [ಸಂಬಂಧವಾಚಿಗಳನ್ನೇ ಸಂಬೋಧಿಯಲ್ಲಿ ಬಳಸಬೇಕಾದ ಸಂದರ್ಭಗಳು ಇವೆ. ಇಲ್ಲಿಯೂ ವ್ಯಕ್ತಿಯ ಸಾಮಾಜಿಕ ವ್ಯಾಪ್ತಿಗೆ ಅವಕಾಶ ದೊರೆತು ವ್ಯಕ್ತಿಗಳ ನೆಲೆಗಳು ಹಿನ್ನೆಲೆಗೆ ಸರಿಯುತ್ತವೆ. (ಅಪ್ಪ. ಅಜ್ಜ)]

ಚಂಪು ಸಾಹಿತ್ಯದಲ್ಲಿ ಬಂಧಸೂಚಕ ಪದಗಳು ಭಾವನಾತ್ಮಕ ಸಂಬಂಧದ ಸನ್ನಿವೇಶದಲ್ಲಿ ಬಳಕೆಯಾಗಿರುವುದು ಕಡಿಮೆ. ಪಂಪ ಭಾರತದಲ್ಲಿ ಕೃಷ್ಣನು ಕರ್ಣನಿಗೆ ‘ನಿನಗಾದಿಯೊಳಬ್ಬೆ ಕೊಂತಿ, ನಿನಗಮ್ಮನ್ ಅಹರ್ಪತಿ’ ಎಂದು ಹೇಳಿದಾಗ ‘ಅಬ್ಬೆ (=ತಾಯಿ) ಅಮ್ಮನ್ (=ತಂದೆ) ಪದಗಳು ರಕ್ತ ಸಂಬಂಧದ ಸಂದರ್ಭದಲ್ಲಿ ಬಳಕೆಯಾಗಿವೆಯೆಂಬುದು ಸ್ಪಷ್ಟವಾಗುತ್ತದೆ. ವಚನಗಳಲ್ಲಿ ಬಂಧುಸೂಚಕಗಳು ಪ್ರೀತಿಪೂರ್ವಕವಾಗಿ (ಭಾವನಾತ್ಮಕವಾಗಿ) ಬಳಕೆಯಾಗುತ್ತವೆ. [ವಿವರಣೆಗಳಿಗಾಗಿ ನೋಡಿ ಎಂ.ಚಿದಾನಂದಮೂರ್ತಿ ವಚನಕಾರರ ಕಳ್ಳುಬಳ್ಳಿ ಪರಿಕಲ್ಪನೆ, ೧೯೯೮] ಮಾರಿತಂದೆ, ಮಾಚಿತಂದೆ ಎಂಬ ಹೆಸರುಗಳಲ್ಲಿ ‘ತಂದೆ’ ಭಾಗವು ಅವರು ಹುಟ್ಟಿದಾಗ ಅವರ ತಂದೆ – ತಾಯಿಗಳು ಇಟ್ಟುದಲ್ಲ. ಜನ ಗೌರವದಿಂದ ಇಟ್ಟದು. ಮಹಾದೇವಿಯಕ್ಕಳು ತನ್ನ ಗೆಳತಿಗೆ ತಾನು ಕಂಡ ಕನಸೊಂದನ್ನು ಹೇಳುವಾಗ ‘ಅಕ್ಕ ಕೇಳವ್ವ ನಾನೊಂದು ಕನಸುಕಂಡೆ’ ಎಂಬ ಮಾತುಗಳಲ್ಲಿ ಗೆಳತಿಯನ್ನು ‘ಅಕ್ಕ’ ‘ಅವ್ವ’ ಎಂದು ಸಂಬೋಧಿಸುತ್ತಾಳೆ. ಬಸವಣ್ಣನ ತಂಗಿ ನಾಗಲಾಂಬಿಕೆ ಬಸವಣ್ಣನನ್ನು ‘ಎನ್ನ ಹೆತ್ತ ತಂದೆ’ ಎಂದು ಕರೆದಿದ್ದಾಳೆ. ಮುಕ್ತಾಯಕ್ಕ ತನ್ನ ಅಣ್ಣ ಅಜಗಣ್ಣನನ್ನು ‘ನಾ ಎಂತು ಮರೆವೆವಯ್ಯ ಎನ್ನ ಅಜಗಣ್ಣ ತಂದೆಯನು?’ ಎಂಬಲ್ಲಿ ‘ತಂದೆ’ ಪದವು ಭಾವನಾತ್ಮಕವಾಗಿದೆ. ಅಲ್ಲಮನು ಅಕ್ಕಮಹಾದೇವಿಯನ್ನು ಹಲವೆಡೆ ‘ಅವ್ವಾ’ ಎಂದು ಗೌರವದಿಂದ ಸಂಬೋಧಿಸಿದ್ದಾನೆ. ಶರಣರು ತಮ್ಮ ಸಮಕಾಲೀನರ ಬಗ್ಗೆ ಮಾತನಾಡಿರುವ ರೀತಿ, ಗೌರವ, ಆತ್ಮೀಯತೆಯನ್ನು ತೋರಿರುವ ವಿಧಾನ ಅವರಿಗಿಂತ ಹಿಂದಿನ ಸಾಹಿತ್ಯದಲ್ಲಿ ವಿರಳ.

ಹಳ್ಳಿಗಳಲ್ಲಿ ಯಾರಿಗಾದರೂ ಸಂಕಟ ಬಂದಾಗ ಸಹಾಯ ಮಾಡಿದರೆ ‘ಹಡೆದಪ್ಪ ಪುಣ್ಯ ಹತ್ತಲಿ’, ‘ಹಡದವ್ವ ವರ್ಷ ತುಂಬ ಗೊಡದ ಗಂಡು ಮಗನ ತಾಯಾಗವ್ವ’ ಎಂದು ಭಾವನಾತ್ಮಕವಾಗಿ ಹೇಳುವುದುಂಟು. ಈ ಹೇಳಿಕೆಗಳು ಸಾಂಸ್ಕೃತಿಕವಾಗಿ ಮಹತ್ವವನ್ನು ಪಡೆದಿವೆ. ಸಾಮಾಜಿಕ ಜೀವನದಲ್ಲಿ ಈ ಬಂಧುಸೂಚಕಗಳು ಪ್ರಮುಖ ಪಾತ್ರ ವಹಿಸುತ್ತವೆ.

ಗಂಡ ಹೆಂಡತಿ

ಭಾಷಾ ಬಳಕೆಯಲ್ಲಿ ಗಂಡ ಹೆಂಡಿರು ಪರಸ್ಪರ ಮಾತನಾಡುವಾಗ ಪರಸ್ಪರರರು ಹೆಸರನ್ನು ಹಚ್ಚಿ ಕರೆಯುವುದಿಲ್ಲ. ಒಂದು ವೇಳೆ ಹೆಸರಿಡಿದು ಕರೆದರೆ ಆಯುಷ್ಯ ಕಡಿಮೆಯಾಗುತ್ತದೆಂಬ ನಂಬಿಕೆಯಿದೆ. (ಒಂದು ರೀತಿಯ ನಿಷೇಧವೂ ಇದೆ). ಹೆಂಡತಿಯು ಗಂಡನ ಬಗೆಗೆ ಹೇಳುವಾಗ ‘ಇವರ್’ ಎಂದೂ ಇಲ್ಲವೇ ಗಂಡನ ಪದನಾಮ ಅಥವಾ ವೃತ್ತಿನಾಮದಿಂದ ಕರೆಯುವುದುಂಟು. ಅಥವಾ ‘ನಮ್ಮವರು’, ‘ಮನೆಯವರು’, ‘ಯಜಮಾನರು, ‘ಹಜಬಂಡ್ ‘ ಎಂದೂ ಸಂಬೋಧಿಸುವುದುಂಟು. ಗಂಡ ಹೆಂಡತಿಯ ಬಗೆಗೆ ಹೇಳುವಾಗ ‘ನಮ್ಮವಳು’, ‘ಹೆಂಗಸರು’, ‘ಮನಿಯವರು’, ‘ಕುಟುಂಬ’, ‘ಫ್ಯಾಮಿಲಿ’ ಎಂದು ಬಳಸುವುದುಂಟು.

ಇವತ್ತು ನಳಾ ಬಂದಿಲ್ಲ, ನೀರ್ ತರಾಕ್ ಇವರ್ ಹೋಗ್ಯಾರ್
ನಿಮ್ಮ ಸಾರ್ ಯಾವಾಗಲೂ ಪುಸ್ತಕದಾಗ ಇರ್ತಾರ್
ನಮ್ಮ ಸಾಹೇಬರ್ ಬಾಳ ಪುಣ್ಯ ಮಾಡ್ಯಾರ್, ನಮ್ಮ
ಮಕ್ಕಳೆಲ್ಲರೂ ಆರಾಮ ಅದಾರ್
ಲಾಯಿಟ್ ಬಿಲ್ ತುಂಬಾಕ್ ನಮ್ಮ ಯಜಮಾನರು ಹೋಕ್ಕಾರ್

ಕೆಲವೊಮ್ಮೆ ಮಕ್ಕಳ ಮೇಲೆ ಹಾಯಿಸಿ ಬಂಧುಗಳನ್ನು ಸಂಬೋಧಿಸುವುದುಂಟು.

ಇವರ್ ಅಜ್ಜಗ ಆರಾಮ ಇಲ್ಲ, ದವಾಖಾನೆಗೆ ಹೋಗ್ಯಾನ್
ಇವರ್ ಮಾವನ ಸ್ವಲ್ಪ ಕರಿವಾ
ಇವರ್ ತಂದೆ ಆಫೀಸಿಗೆ ಹೋಗ್ಯಾರ್

ನಗರ ಪ್ರದೇಶದಲ್ಲಿ ಆಧುನೀಕರಣ ಪ್ರಕ್ರಿಯೆಯಿಂದಾಗಿ ಹೆಂಡತಿ ಗಂಡನನ್ನು, ಗಂಡ ಹೆಂಡತಿಯನ್ನು ಹೆಸರಿಡಿದು ಕರೆಯುವುದುಂಟು.

ಆಫೀಸ್ ರಜೆ ಇದೆ ಅಂತ್ ಲೋಹಿತ ಹೇಳಿದರು
ದೀಪಾವಳಿಗೆ ಬಟ್ಟೆ ತರಲಿಕ್ಕೆ ಪಾರವ್ವ ಬೆಳಗಾವಿ ಹೋಗುತ್ತಾಳೆ
ವೀಣಾ ಟೈಮ್ ಆಗಿದೆ ಬೇಗ ಡಬ್ಬಿತಾ

ಗಂಡ, ಹೆಂಡತಿಯನ್ನು ಪರಿಚಯಿಸುವಾಗ ಅಥವಾ ಹೆಂಡತಿಯ ಬಗೆಗೆ ಹೇಳುವಾಗ ಅವಳ ಹೆಸರೆಳದೆ ‘ಕುಟುಂಬ’, ‘ಹೆಣ್ಣು ಮಕ್ಕಳು’, ‘ಶ್ರೀಮತಿ’, ‘ಮಿಸೆಸ್’ ಎಂದು ಕರೆಯುವುದುಂಟು.

ನಮ್ಮ ಹೆಣ್ಣು ಮಕ್ಕಳ ರೊಟ್ಟಿ ಕಾಯಿಪಲ್ಲೆ ಚಲೋ ಮಾಡ್ತಾರ್
ನಮ್ಮ ಕುಟುಂಬ ಬೆಳಗಾವಿಗೆ ಹೋಗ್ಯಾರ್

ಕೆಲವು ವೇಳೆ (ನಾಟಕೀಯವಾಗಿ) ಗಂಡ ಹೆಂಡತಿಯನ್ನು ‘ಪ್ರಿಯಾ’ ಎಂದೂ ಕರೆದರೆ ಹೆಂಡತಿ ಗಂಡನನ್ನು ‘ಕಾಂತಾ’ ಎಂದು ಕರೆಯುವುದುಂಟು. ಕೌಟುಂಬಿಕ ಜೀವನದ ರಹಸ್ಯ ವಿಷಯಗಳನ್ನು ಮಾತನಾಡುವಾಗ ಇಬ್ಬರು ಏಕವಚನ ಬಳಸುವುದುಂಟು.

‘(ಜೋಳದ) ತೆನೆ ಮೂರ್ಯಾಕ್ ನಾಲ್ಕು ಮಂದಿ ಕೆಲಸಗಾರರನ್ನು
ನೀನ ಹೇಳಿಬರೋಗ್
ಸೂಟಿಗೆ ಊರಿಗೆ ಹೋಗುತ್ತೇವೆ, ಮನೆಯಲ್ಲಿ ನಿಮ್ಮ ವಿದ್ಯಾರ್ಥಿಗಳನ್ನು
ಇಡುವ ವ್ಯವಸ್ಥೆ ಮಾಡಿರಿ.’

ಶರಣರು ತಮ್ಮ ಆರಾಧ್ಯ ದೈವವನ್ನು ಗಂಡ ಎಂದೇ ಭಾವಿಸುವುದು ಪ್ರಸಿದ್ಧವಾಗಿದೆ.ಮಹಾದೇವಿಯನ್ನು ‘ಇಂದೆನ್ನ ಮನಗೆಗೆ ಗಂಡ ಬಂದಿಹ ನೆಲಗವ್ವ……. ಚನ್ನಮಲ್ಲಿಕಾರ್ಜುನ ಗಂಡನೆನಗೆ’ ಎಂದು ಉಕ್ತಿಗಳು ಭಾವನಾತ್ಮಕವಾಗಿ ಕಂಡುಬರುತ್ತವೆ.

ಸಹೋದರಸಹೋದರಿಯರು

ಸಾಮಾನ್ಯವಾಗಿ ಒಡ – ಹುಟ್ಟಿದವರಲ್ಲಿ ಹಿರಿಯವ ಅಣ್ಣನಾಗುತ್ತಾನೆ. ಆದರೆ ಅದರ ಬಳಕೆಯ ಪ್ರಸಾರ ವೈವಿಧ್ಯಮಯವಾಗಿದೆ. ಗಂಡಸರನ್ನು ಪ್ರೀತಿಯಿಂದ ಅಥವಾ ಗೌರವದಿಂದ ಸಂಬೋಧಿಸುವಾಗ ಸರ್ವ ಸಾಧಾರಣವಾಗಿ ಈ ಬಂಧುಸೂಚಕ ಉಪಯೋಗವಾಗುತ್ತದೆ. (ಹೋಗೋಯಣ್ಣಾ ಹೋಗ್), ಗಂಡಸರ ಹೆಸರಿನ ಕೊನೆಯಲ್ಲಿ ಗೌರವಾರ್ಥದಲ್ಲಿ ‘ಅಪ್ಪ’, ‘ಅಯ್ಯ’ ಮೊದಲಾದವರಂತೆ ಸೇರುತ್ತದೆ. (ಕಲ್ಲಣ್ಣ ಮಲ್ಲಣ್ಣ) ಬಹುವಚನದಲ್ಲಿ, ‘ಅಣ್ಣಗೋಳ್’ [ಅಣ್ಣಂದಿರರು] ಎಂದೂ ಗೌರವಾರ್ಥದಲ್ಲಿ ‘ಅಣ್ಣಾವರ್’ ಎಂದೂ ಬಳಕೆಯಾಗುವುದುಂಟು. ತಂದೆಯನ್ನು ಕುರಿತು ಮಾತನಾಡುವಾಗ ‘ಅಣ್ಣ’, ‘ಅಣ್ಣಯ್ಯ’ ಎಂದು ಸಂಬೋಧಿಸುವುದು ಕೆಲವು ಸಮುದಾಯದಲ್ಲಿದೆ. (ಹೆಚ್ಚಾಗಿ ಬ್ರಾಹ್ಮಣ ಸಮುದಾಯ). ಈ ವಾರ್ಗೀಕವು ನಿರ್ದಿಷ್ಟವಾಗಿಯೂ ಬಳಕೆಯಾಗುತ್ತದೆ. (ಅಣ್ಣಪ್ಪ)

ಒಡಹುಟ್ಟಿದವರಲ್ಲಿ ಕಿರಿಯವ ತಮ್ಮನಾಗುತ್ತಾನೆ, ಅದರ ಪ್ರಸಾರವನ್ನು ಗಮನಿಸಿದರೆ ಹಿರಿಯರು ಕಿರಿಯರನ್ನು ಕುರಿತು ಮಾತನಾಡುವಾಗ ಪ್ರೀತಿ ಪೂರ್ವಕವಾಗಿ ಬಳಕೆಯಾಗುತ್ತದೆ.ತಿರಸ್ಕಾರವನ್ನು ಸೂಚಿಸುವುದಕ್ಕಾಗಿ ವ್ಯಂಗ್ಯವಾಗಿಯೂ ಬಳಕೆಯಾಗುವುದುಂಟು (ಹೋಗೋ ತಮ್ಮಾ ಹೋಗ್) ಈ ವಾರ್ಗೀಕವು ನಿರ್ದಿಷ್ಟವಾಗಿಯೂ ಬಳಕೆಯಾಗುತ್ತದೆ (ತಮ್ಮಣ್ಣ), ಈ ಬಂಧುಸೂಚಕವು ಸಂಬೋಧನೆ ಮತ್ತು ಪರಿಚಯ ಎರಡೂ ಸಂದರ್ಭದಲ್ಲಿಯೂ ಬಳಕೆಯಾಗುತ್ತದೆ. ಬಹುವಚನದಲ್ಲಿ ‘ತಮ್ಮಗೋಳ್’ (ತಮ್ಮಂದಿರರು) ಎಂದು ಬಳಕೆಯಾಗುವುದುಂಟು.

ಒಡಹುಟ್ಟಿದವರಲ್ಲಿ ಹಿರಿಯವಳು ಅಕ್ಕಳಾಗುತ್ತಾಳೆ. ಅದರ ಪ್ರಸಾರವನ್ನು ಗಮನಿಸಿದರೆ ಚಿಕ್ಕಪ್ಪ / ಚಿಕ್ಕಮ್ಮ, ದೊಡ್ಡಪ್ಪ / ದೊಡ್ಡಮ್ಮರ ಮಗಳು ಅಕ್ಕಳಾಗುತ್ತಾಳೆ. ಸಾಮಾಜಿಕ ರಕ್ಷಣೆಗಾಗಿ ಗೌರವವನ್ನು, ಪ್ರೀತಿಯನ್ನು ವ್ಯಕ್ತಪಡಿಸುವಾಗಲೂ ಈ ರೂಪ ಬಳಕೆಯಾಗುವುದುಂಟು. ಇದೊಂದು ವಾರ್ಗೀಕರಾಗಿರುವುದರಿಂದ ಹೆಸರಿನ ಕೊನೆಯಲ್ಲಿ ಸೇರುವುದುಂಟು. (ಪಾರಕ್ಕ, ದುಂಡಕ್ಕ, ಚಿನ್ನಕ್ಕ ಮುಂತಾದವು), ಬಹುವಚನದಲ್ಲಿ ‘ಅಕ್ಕಗೋಳ್’ / ಗಳು’ (ಅಕ್ಕಂದಿರರು) ಎಂದು ಬಳಕೆಯಾಗುತ್ತದೆ. ಪ್ರೀತಿ ಹಾಗೂ ಗೌರವವನ್ನು ವ್ಯಕ್ತಪಡಿಸುವಾಗ ಈ ವಾರ್ಗೀಕವು ನಿರ್ದಿಷ್ಟವಾಗಿ ಬಳಕೆಯಾಗುತ್ತದೆ. (ಅಕ್ಕವ್ವ, ಅಕ್ಕಮ್ಮ) ಈ ಬಂಧುಸೂಚಕವು ಸಂಬೋಧನೆ ಹಾಗೂ ಪರಿಚಯ ಎರಡೂ ಸಂದರ್ಭದಲ್ಲಿಯೂ ಬಳಕೆಯಾಗುತ್ತದೆ. ಕರ್ನಾಟಕದ ಉತ್ತರ ಭಾಗದಲ್ಲಿ ಅಕ್ಕಳನ್ನು (ಹೆಚ್ಚು ಎಲ್ಲ ಬಂಧುವಾಚಕಗಳನ್ನು) ಸಂಬೋಧಿಸುವಾಗ ‘ಯ’ಕಾರ ಹತ್ತುವುದುಂಟು.

ಯಕ್ಕಾ ಊರಿಂದ ಯಾವಾಗ ಬಂದೀ
ಯಕ್ಕಾ ನಳಾ ಬಂದೀವೆ, ಕ್ವಡಾ ಕೊಡು
ಯಕ್ಕಾ ನಮ್ಮವ್ವ ಎಲ್ಲಿಗೆ ಹೋಗಿದ್ದಾಳೆ

ಒಡಹುಟ್ಟಿದವರಲ್ಲಿ ಕಿರಿಯವಳು ತಂಗಿಯಾಗುತ್ತಾಳೆ. ಆದರೂ ಬೇರೆ ಸಂದರ್ಭದಲ್ಲಿಯೂ ಈ ಬಂಧುಸೂಚಕ ಬಳಕೆಯಾಗುವುದುಂಟು. ಕಿರಿಯ ಹೆಂಗಸರನ್ನು ಸಂಬೋಧಿಸುವಾಗಲೂ ಹೇಳುವುದುಂಟು. ‘ತಂಗಿ ನೀರ್ ತರೋಗವಾ’, ಬಹುವಚನದಲ್ಲಿ ‘ತಂಗಿಗೋಳ್’ (ತಂಗಿಯಂದಿರು) ಎಂದು ಬಳಕೆಯಾಗುತ್ತದೆ. ಪ್ರೀತಿ, ಗೌರವವನ್ನು ತೋರಿಸುವಾಗ ಈ ವಾರ್ಗೀಕವೇ ನಿರ್ದಿಷ್ಟವಾಗಿ ಬಳಕೆಯಾಗುತ್ತದೆ (ತಂಗೆಮ್ಮ, ತಂಗೆವ್ವ) ಈ ಬಂಧುಸೂಚಕವು ಸಂಬೋಧನೆ ಹಾಗೂ ಪರಿಚಯ ಎರಡೂ ಸಂದರ್ಭದಲ್ಲಿಯೂ ಬಳಕೆಯಾಗುತ್ತದೆ.

ಹಿರಿಯ ಸಹೋದರನು ಕಿರಿಯವನನ್ನು ಅವನ ಹೆಸರಿನಿಂದ ಸಂಬೋಧಿಸುವುದುಂಟು.

ನಮ್ಮ ಉಮೇಶ್‌ನಿಗೆ ದಗದ ಬಾಳ ಆಗತತಿ
ಈಶ್ವರಪ್ಪ ಎಲ್ಲಿಗೆ ಹೋಗಿದ್ದಾನೆ? ಅವನು ಬಂದರೆ ನಮ್ಮ ಮನೆಗೆ
ಕಳಿಸಿ ಕೊಡ್ರಿ
ನಮ್ಮ ರಮೇಶ ಪುಲಗಡ್ಡಿಯಲ್ಲಿ ನೌಕರಿ ಮಾಡ್ತಾನೆ

ಕಿರಿಯ ಸಹೋದರ ಅಥವಾ ಸಹೋದರಿಯು ಹಿರಿಯವನನ್ನು ‘ಅಣ್ಣಾ’ ಎಂಬ ಬಂಧುಸೂಚಕರೊಡನೆ ಸಂಬೋಧಿಸುವುದುಂಟು.

ಮನ್ಯಾಗ ಅಣ್ಣ ಇಲ್ಲೇನವಾ ಒಂದ್ ಸ್ವಲ್ಪ ಕೆಲಸ ಇತ್ತವಾ
ದುಂಡಪ್ಪಣ್ಣಗ್ ಗಳಸುದು ಗೊತ್ತಾಗಲಿಲ್ಲ ; ಬಳಸುದು
ಗೊತ್ತಾಗಲಿಲ್ಲ
ನಮ್ಮ ಮಲ್ಲೇಶಪ್ಪಣ್ಣ ಬಹಳ ಅಪರೂಪ ಮನುಷ್ಯ

ಹಿಂದಿ ಮತ್ತು ಮರಾಠಿ ಭಾಷೆಯ ಪ್ರಭಾವದಿಂದಾಗಿ ‘ಬಯಾ’ ಎಂದೂ ಆಂಗ್ಲಭಾಷೆಯ ಪ್ರಭಾವದಿಂದಾಗಿ ‘ಬ್ರದರ್’ ಎಂದೂ ಬಳಕೆಯಾಗುವುದುಂಟು.

ಒಡಹುಟ್ಟಿದ ಸಹೋದರರು ಹೆಚ್ಚಾಗಿ ‘ಅಣ್ಣಾ’, ‘ತಮ್ಮಾ’ ಎಂದು ನೇರವಾಗಿ ಸಂಬೋಧಿಸುವುದಿಲ್ಲ. ಇನ್ನೊಬ್ಬರಿಗೆ ಪರಿಚಯಿಸುವಾಗ ಬಳಸುವುದುಂಟು.

ಇವರು ನಮ್ಮ ಅಣ್ಣ
ಇವನು ನಮ್ಮ ಅಣ್ಣನ ಮಗ
ನಮ್ಮ ತಮ್ಮನ್ ಮಗಳನ್ನು ಗೋಕಾಕಕ್ಕೆ ಕೊಟ್ಟಿದ್ದೇವೆ

ಕೆಲವು ವೇಳೆ ಅಣ್ಣನಿಗೆ ‘ದೊಡ್ಡವ’ ಎಂದು ಬೇರೆಯವರಿಗೆ ಹೇಳುವಾಗ ಬಳಕೆಯಾಗುತ್ತದೆ. ‘ಮದುವೆಗೆ ದೊಡ್ಡವ ಯಾಕ್ ಬರಲಿಲ್ಲ?’, ತಮ್ಮನಿಗೆ ಸಣ್ಣವ ಎಂದೂ ಬಳಕೆಯಾಗುವುದುಂಟು. ‘ಅವನು ಸಣ್ಣಾವ ನಾವು ಸಂಭಾಳಿಸಿಕೊಂಡು ಹೋಗಬೇಕು’, ಅಣ್ಣನು ತಂಗಿಯನ್ನು ಹೆಸರಿಡಿದು ಕರೆಯುತ್ತಾನೆ. ತಂಗಿಯು ಅಣ್ಣನನ್ನು ‘ಅಣ್ಣಾ ‘ ಎಂದು ಸಂಬೋಧಿಸುತ್ತಾಳೆ.

ಪಾರವ್ವ ಬಾಳ ದಿನ ತವರ ಮನ್ಯಾಗ ಇರಬಾರದವಾ
ನಾನು ನಿಮ್ಮವರು ನಮ್ಮ ಹಂಡರು ಯಾರು?’
ನನಗ ತಂದೆತಾಯಿಯರ ಸುಖ ಗೊತ್ತಿಲ್ಲ ನಮ್ಮ ಅಣ್ಣನ
ಸುಖಾನ ನಮಗೆ ಅತಿ.’

ಅಕ್ಕಳು ತಮ್ಮ ತಂಗಿಯನ್ನು ಅವಳ ಹೆಸರಿಡಿದು ಕರೆಯುತ್ತಾಳೆ.

ಪಾರವ್ವ ಪಂಚಮಿಗಿ ನಾನೂ ಬರ್ತನ್, ನೀನೂ ಬಾ
ಪಾರವ್ವ ಮಳಿಮಾರ ದಿನ ಹಳ್ಳಕ್ ಹೋಗ ಬ್ಯಾಡವಾ
ಅಕ್ಕಾ (ಯಕ್ಕಾ) ಹುಡುಗೋರನ್ ಕರಕೊಂಡ ಕುರಬ್ಯಾಟಕ್ ಬಾರವಾ

ಮದುವೆಯಾದ ನಂತರ ಆ ಊರಿನ ಜೊತೆಗೆ ಬಂಧುಸೂಚಕದ ಹೆಸರು ಬರುವುದುಂಟು.

ಕುರಬ್ಯಾಟ ಪಾರವ್ವ
ಚಚಡಿ ದುಂಡವ್ವ

ಅಕ್ಕನ ಕಕ್ಕುಲತೆಯು ತಂಗಿಯ ಮೇಲೆ ಬಹಳ ಇರುತ್ತದೆ. ಬೀಸುವಾಗ, ಕುಟ್ಟುವಾಗ ಅವಳನ್ನು ಹಾಡದೆ ಆ ಕ್ರಿಯೆ ಕೊನೆಗೊಳ್ಳುವುದಿಲ್ಲ. ‘ಆಡೀನ ಮಲಿಹಂಗ ಜೋಡ ನಾವಿಬ್ಬರು ಆಡಬ್ಯಾಡ ತಂಗಿ ಕದನವ | ಜಗಳಕ ಜೋಡೀನ ಹಕ್ಕಿ ಆಗಲ್ಯಾವ್’ || ಎಂದೂ ಅಗಲದಂತೆ ಹೇಳುತ್ತಾಳೆ. ಚಿಕ್ಕ ತಂಗಿ ತಿಳಿಯದೆ ಕದನ ಮಾಡಿದರೆ ಹಾಗೆ ಮಾಡಬಾರದೆಂದು ಸಮಾಧಾನ ಹೇಳುತ್ತಾಳೆ. ಅಕ್ಕತಂಗಿಯರಿಗೆ ಕೊನೆಯವರೆಗೂ ತವರು ಮನೆಯ ಆಸೆ ಇದ್ದೇ ಇರುತ್ತದೆ. ತಮ್ಮನಿಗೆ ಹಡೆದು ಹೆಣ್ಣು ಕೊಡಬೇಕೆಂದು ಆಶೆ ಮೂಡುತ್ತದೆ. ‘ಬಸುರಾದರ ತೊಡಬೇಕು ಹಸುರ ತಾಬುತಿ ಕುಬಸ ಹಸರೇಲಿ ಒಳಗೆ ಉಣಬೇಕು | ನನ್ನ ತಮ್ಮ ಹೊಸಬೀಗನಾಗಿ ಬರಬೇಕು | ತಂದೆ / ತಾಯಿಯರಿಗೆ ಸಣ್ಣ ಮಕ್ಕಳ ಮೇಲೆ ಕಾಳಜಿ ಹೆಚ್ಚು. ಅಣ್ಣ – ತಮ್ಮಂದಿರರಲ್ಲಿ ವೈಮನಸ್ಸು ಬಂದಾಗ ‘ಕಡೆಮಗನ್ ಸಣ್ಣವನಾಗಿ ಸರಕೋರೊ’ ಎಂದು ಸಣ್ಣವನಿಗೆ ಹೇಳುತ್ತಾಳೆ. ಸಹೋದರಿಯರಿಗೆ ತಮ್ಮ ಸಹೋದರರ ಮೇಲೆ ಅಪಾರ ವಾತ್ಸಲ್ಯ, ‘ಹೆಣ್ಣಿನ ಜಲ್ಮಕ ಅಣ್ಣ – ತಮ್ಮಂದಿರಿರಬೇಕು ಹೊನ್ನು ಕಟ್ಟುವವರು ಉಡಿಯೊಳಗ್, ಬೆನ್ನು ಕಟ್ಟುವರು ಸಭೆಯೊಳಗ್’ ಎಂಬ ಭರವಸೆ ಅವರಿಗಿರುತ್ತದೆ.

ಸಹೋದರ, ಸಹೋದರಿಯರ ಸುತ್ತ ಸ್ವಾರಸ್ಯಕರವಾದ ಗಾದೆಗಳು ಬಳಕೆಯಲ್ಲಿವೆ. ‘ಹಿರಿಯಣ್ಣನೆಂದರೆ ತಂದೆಯ ಸಮಾನ’. ‘ಅಕ್ಕನ ಹಗೆ; ಭಾವನ ನಂಟು ; ‘ಅಕ್ಕನ ಬಂಗಾರವಾದರೂ ಅಕ್ಕಸಾಲಿ ಬಿಡ’; ‘ಹಿರಿಯಕ್ಕನ ಚಾಳಿ ಮನಿಮಂದಿಗೆಲ್ಲ;’ ‘ಅಕ್ಕ ಸತ್ತರೂ ಅಮವಾಸೆ ನಿಲ್ಲೊದಿಲ್ಲ’; ‘ಅಕ್ಕನ ಹೊಟ್ಟೆಯಲ್ಲಿ ಆರು ತಿಂಗಳು; ತಂಗಿಯ ಹೊಟ್ಟೆಯಲ್ಲಿ ಮೂರು ತಿಂಗಳು’ ಇವು ಕೌಟುಂಬಿಕ ಜೀವನದಲ್ಲಿ ಈ ಬಂಧುಸೂಚಕಗಳ ಸ್ಥಾನವನ್ನು ನಿರ್ದೇಶಿಸುತ್ತವೆ.

ಆಧುನಿಕ ಪೂರ್ವ ಸಾಹಿತ್ಯವನ್ನು ವಿಶೇಷವಾಗಿ ವಚನ ಸಾಹಿತ್ಯವನ್ನು ಅವಲೋಕಿಸಿದಾಗ ಅಲ್ಲಿ ಬರುವ ಹೆಸರುಗಳ ಅಂತ್ಯ ಭಾಗಗಳು ವಾರ್ಗೀಕಗಳಾಗಿವೆ. ಬಸವಣ್ಣ, ಚೆನ್ನಬಸವಣ್ಣ, ಅಜಗಣ್ಣ, ಅಕ್ಕಮಹಾದೇವಿ, ಅಥವಾ ಮಹಾದೇವಿಯಕ್ಕ, ಅಕ್ಕ ನಾಗಮ್ಮ, ಮುಕ್ತಾಯಕ್ಕ, ಇಂತಹ ಹೆಸರುಗಳಲ್ಲಿ ‘ಅಣ್ಣಾ’, ‘ಅಕ್ಕಾ’, ಈ ಭಾಗಗಳು ಜನ ಪ್ರೀತಿಯಿಂದ ಸೇರಿಸಿದ ಭಾಗಗಳು. ಅಕ್ಕ ಮಹಾದೇವಿಗೆ ತಂದೆ ತಾಯಿಗಳು ಇಟ್ಟ ಹೆಸರು ‘ಮಹಾದೇವಿ’ ಎಂದು ಮಾತ್ರ. ಜನತೆ ಅವಳನ್ನು ಅಕ್ಕಮಹಾದೇವಿ ಅಥವಾ ಮಹಾದೇವಿಯಕ್ಕ ಎಂದು ಪ್ರೀತಿಯಿಂದ ಕರೆದರು. ಅಕ್ಕನಾಗಮ್ಮಳು ಹಾಗೆಯೇ (ಅವಳು ಬಸವಣ್ಣನ ಅಕ್ಕ ಅಲ್ಲ), ಬಸವ ಮತ್ತು ಚೆನ್ನಬಸವರ ಹೆಸರುಗಳಿಗೆ ‘ಅಣ್ಣ’ ಎಂಬ ಉತ್ತರಾರ್ಧವು ಸೇರಲು ಅದೇ ಪ್ರೀತಿಯೇ ಕಾರಣ. ದುಃಖದಲ್ಲಿದ್ದ ಕಿನ್ನರಯ್ಯನನ್ನ ಮಹಾದೇವಿಯಕ್ಕ ಸಮಾಧಾನ ಪಡಿಸುವಾಗ

ಎಲೆ ಅಣ್ಣಾ ಎಲೆ ಅಣ್ಣಾ ಮರುಳಲ್ಲಾ ಅಣ್ಣಾ
ಎನ್ನ ನಿನ್ನ ಅಳವೇ?’

‘ಅಣ್ಣಾ’ ಮಾತು ಕೇಳಿ ಕಿನ್ನರಯ್ಯನ ಮನಸ್ಸಿನಲ್ಲಿದ್ದಿರಬಹುದಾದ ಕಲ್ಮಶದ ಶೇಷ ಸಂಪೂರ್ಣವಾಗಿ ದಗ್ಧವಾಗುತ್ತದೆ. ವಚನಗಳಲ್ಲಿ ಎದ್ದು ಕಾಣುವ ಸಂಗತಿಯೆಂದರೆ ವಚನಕಾರರು ಪರಸ್ಪರ ಗೌರವವನ್ನು ವ್ಯಕ್ತಮಾಡಿರುವ ರೀತಿ ಅರ್ಥಪೂರ್ಣವಾಗಿದೆ. ‘ಅಣ್ಣಾ’ ಈ ಬಂಧುಸೂಚಕವನ್ನು ಬಳಸುವಾಗ ಅದು ಹೊತ್ತುಕೊಳ್ಳುವ ಭಾವ ಅರ್ಥಗರ್ಭಿತವಾಗಿದೆ. ಕೌಟುಂಬಿಕ ಹಾಗೂ ಸಾಮಾಜಿಕ ಜೀವನದಲ್ಲಿ ಅಣ್ಣ / ತಮ್ಮ / ಅಕ್ಕ / ತಂಗಿ ಇವುಗಳ ಸಂಬೋಧನೆ ಕಳ್ಳು – ಬಳ್ಳಿತನವನ್ನು ಗಟ್ಟಿಗೊಳಿಸುತ್ತವೆ.

ಒಂದು ಅಂಶವನ್ನು ಇಲ್ಲಿ ಗಮನಿಸಬೇಕು. ನಾವು ವ್ಯವಹಾರದಲ್ಲಿ ಕೇವಲ ಶಾಬ್ದಿಕ ಭಾಷೆಯೊಂದನ್ನೇ ಉಪಯೋಗಿಸುವುದಿಲ್ಲ. ಮನುಷ್ಯ ಸಂಬಂಧಗಳು ಕೂಡ ಭಾಷೆಯಂತೆಯೇ ವರ್ತಿಸುತ್ತವೆ. ನಮ್ಮಲ್ಲಿ ಸೋದರ ಮಾವನ ಅಥವಾ ಸೋದರತ್ತೆಯ ಹಾಗೂ ಅಕ್ಕನ ಮಗಳನ್ನು ಮದುವೆಯಾಗುವುದು ಇದೇ ಕಾರಣಕ್ಕಾಗಿ ಎಂದು ಶಾಸ್ತ್ರಜ್ಞರು ಹೇಳುತ್ತಾರೆ. ಮನೆತನದ ತಾಯಿಯಾದವಳು ತನ್ನ ಮಗನಿಗೆ ತನ್ನ ಅಣ್ಣನ ಮಗಳನ್ನು ತಂದುಕೊಳ್ಳುವುದೆಂದರೆ ಈ ಎರಡು ಮನೆತನಗಳ ನಡುವೆ ಸಂವಹನ ಕ್ರಿಯೆಯನ್ನು ಮುಂದುವರಿಸಿದಂತೆ. ಕನ್ನಡದಲ್ಲಿ ಇದನ್ನು ‘ಬಳ್ಳಿಯಕುಡಿ ತಿರುಗಿಸುವುದು’ ಎಂದು ಹೇಳುತ್ತಾರೆ. ಶಂಭಾ ಜೋಶಿಯವರು ಇದಕ್ಕೆ ಸಮಾನವಾದ ನುಡಿಗಟ್ಟನ್ನು ಮರಾಠಿ ಭಾಷೆಯಲ್ಲಿಯೂ ಗುರುತಿಸಿದ್ದಾರೆ. (ಮರಾಠಿ ಸಂಸ್ಕೃತಿ ಪು. ೬೭, ಕುರ್ತಕೋಟಿ ಅನುವಾದ ೧೯೯೦). ಮನುಷ್ಯ ಸಂಬಂಧಗಳು ಭಾಷೆಯಂತೆಯೇ ಸಂವಹನ ಶಕ್ತಿಯನ್ನು ಪಡೆದಿವೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.

ಅತ್ತೆಮಾವ, ಅಳಿಯಸೊಸೆ

ಸಾಮಾನ್ಯವಾಗಿ ಹೆಂಡತಿಯ ಅಥವಾ ಗಂಡನ ತಾಯಿ; ಸೋದರ ಮಾವನ ಹೆಂಡತಿ; ತಂದೆಯ ಒಡಹುಟ್ಟಿದವಳು ಅತ್ತೆಯಾಗುವುದುಂಟು. ಅದರಂತೆ ಹೆಂಡತಿಯ ಅಥವಾ ಗಂಡನ ತಂದೆ: ಸೋದರತ್ತೆಯ ಗಂಡ: ತಾಯಿಯ ಒಡಹುಟ್ಟಿದವನು ಮಾವನಾಗುವುದುಂಟು. ಇವು ವಾರ್ಗೀಕಗಳು. ಸಂಬೋಧನೆ ಮತ್ತು ಪರಿಚಯ ಎರಡರಲ್ಲಿಯೂ ಈ ಬಂಧಸೂಚಕಗಳು ಬಳಕೆಯಾಗುವುದುಂಟು. ಪಾರವ್ವತ್ತೆ, ದುಡವ್ವತ್ತೆ, ಮಹಾದೇವಪ್ಪ ಮಾವ, ಚಿನ್ನಪ್ಪಮಾವ. ಅಳಿಯನಿಗೆ ಸೋದರತ್ತೆಯ (ತಂದೆಯ ಒಡಹುಟ್ಟಿದವಳು), ಹಾಗೂ ಸೋದರ ಮಾವನ (ತಾಯಿಯ ಒಡಹುಟ್ಟಿದವನು) ಜೊತೆಗೆ ನಿಕಟತ್ವ ಹೆಚ್ಚು. ಅತ್ತೆಯನ್ನು ಪ್ರೀತಿ ಹಾಗೂ ಗೌರವದಿಂದ ಅತ್ತ್ಯಾ, ಅತ್ತೆಮ್ಮ ಎನ್ನುವುದುಂಟು. ಅತ್ತೆ / ಮಾವಂದಿರರ ಮನೆಯೆಂದರೆ ಸೊಸೆಯಂದಿರಿಗೆ ಕಾರಾಗೃಹವಿದ್ದಂತೆ (ಈಗ ಅಂತಹ ಪರಿಸ್ಥಿತಿ ಕಡಿಮೆಯಾಗಿದೆ). ಆಗ ಅವರ ಪಾಲಕರು ಬುದ್ಧಿ ಹೇಳಿ ಮಗಳನ್ನು ಗಂಡನ ಮನೆಗೆ ಕಳುಹಿಸುತ್ತಿದ್ದರು. ‘ಅತ್ತಿಯ ಮನಿಯಾಗ ಮುತ್ತಾಗಿ ಇರಬೇಕು ಹೊತ್ತು ನೀಡಿದರ | ಉಣಬೇಕು ನನ್ನ ಮಗಳ ತವರೂರ ಹೆಸರು ತರಬೇಕು ||. ಎಂಬ ಜಾನಪದ ತ್ರಿಪದಿ ಇದನ್ನೇ ಸೂಚಿಸುತ್ತದೆ. ಈ ಬಂಧುಸೂಚಕದ ಸುತ್ತಲೂ ಸ್ವಾರಸ್ಯಕರವಾದ ಗಾದೆಗಳು ರೂಢಿಯಲ್ಲಿವೆ. ‘ಅತ್ತೆಗೊಂದು ಕಾಲ ಸೊಸೆಗೊಂದು ಕಾಲ’, ‘ಸೊಸೆ ತನ್ನ ಅತ್ತಿಯ ಮ್ಯಾಲಿನ ಸಿಟ್ಟು, ಒಲಿಯ ಮ್ಯಾಲ ತೋರಿಸಿದಳು’. ಅತ್ತೆಯದು ಆರು ಮೊಳಾ; ಸೊಸೆಯದು ಮೂರು ಮೊಳಾ’ ಕೌಟುಂಬಿಕ ಜೀವನದಲ್ಲಿ ಅತ್ತೆಯ ಪಾತ್ರವನ್ನು ಇವು ತಿಳಿಸಿಕೊಡುತ್ತವೆ. ಕೌಟುಂಬಿಕ ಜೀವನದ ಸಾಂಸ್ಕೃತಿಕ ಸಂದರ್ಭಗಳಲ್ಲಿ ಸೋದರತ್ತೆ ಮತ್ತು ಸೋದರಮಾವಂದಿರು ಮಹತ್ವದ ಪಾತ್ರ ವಹಿಸುತ್ತಾರೆ. ‘ತಾಯಿ ಸತ್ತರೂ ಸೋದರ ಮಾವ ಇರಬೇಕು’, ಎಂಬ ಗಾದೆ ಇದನ್ನೇ ಹೇಳುತ್ತದೆ.

ಮಗಳ ಗಂಡ; ಹೆಂಡತಿಯ ಅಣ್ಣ / ತಮ್ಮ ; ತಂಗಿಯ ಗಂಡ ಅಳಿಯನಾಗುತ್ತಾನೆ. ಕೌಟುಂಬಿಕ ಜೀವನದಲ್ಲಿ ಅಳಿಯ ತುಂಬ ಪ್ರಿಯವಾದ ವ್ಯಕ್ತಿ. ಮಗಳ ಗಂಡ ಅಳಿಯನು ಹೆಂಡತಿಯ ತವರಿನಲ್ಲಿ ಗೌರವಾರ್ಹ ವ್ಯಕ್ತಿ. ಸಂಬೋಧಿಸುವಾಗ ಈ ಬಂಧುಸೂಚಕವು ಬಳಕೆಯಾಗುವುದಿಲ್ಲ. ಇನ್ನೊಬ್ಬರಿಗೆ ಪರಿಚಯಿಸುವಾಗ ಮಾತ್ರ ಬಳಕೆಯಾಗುತ್ತದೆ. ಅಳಿಯನಿಗೆ ಸೋದರತ್ತೆ ಮತ್ತು ಸೋದರ ಮಾವಂದಿರರ ಜೊತೆಗೆ ನಿಕಟತ್ವ ಹೆಚ್ಚು.

,ಎಸ್, ಪಾಟೀಲರಿಗೆ ಮೂರು ಮಂದಿ ಅಳ್ಯಾರ ಅದಾರ್
ಸಣ್ಣ ಅಳ್ಯಾ ಮಾತ್ರ ಬಾಳ ಮೊಂಡ ಅದಾನ್

ಅಳಿಯ ಸುತ್ತ ಅನೇಕ ಗಾದೆಗಳು ಬಳಕೆಯಲ್ಲಿವೆ. ‘ಅಳಿಯಾ ಮನಿ ಬಳಿಯಾ’, ‘ಅಳ್ಯಾಗ ಉಪಕಾರ ಮಾಡಿದರ್ ಮಳಲಾಗ ಉಚ್ಚಿ ಹುಯ್ದಹಾಗೆ’, ‘ಅಳ್ಯಾನ ಕಣ್ಣು ಬೆಳಗಾದ ಮೇಲೆ’, ಇವು ಕೌಟುಂಬಿಕ ಜೀವನದಲ್ಲಿ ಅಳಿಯನ ಸ್ಥಾನವನ್ನು ನಿರ್ದೇಶಿಸುತ್ತವೆ. ಸಾಮಾನ್ಯವಾಗಿ ಮಗನ ಹೆಂಡತಿ, ಅಕ್ಕ – ತಂಗಿಯರ ಮಗಳು ; ತಮ್ಮನ ಹೆಂಡತಿ ಸೊಸೆಯರಾಗುತ್ತಾರೆ. ಈ ಬಂಧುಸೂಚಕವು ಸಂಬೋಧನೆಯಲ್ಲಿ ಬಳಕೆಯಾಗುವುದಿಲ್ಲ. ಇನ್ನೊಬ್ಬರಿಗೆ ಪರಿಚಯಿಸುವಾಗ ಬಳಕೆಯಾಗುವುದುಂಟು. ಬಹುಶಃ ಇದರ ಮೂಲ ರೂಪ ಸೂತ್ರಿ ಅಥವಾ ಸೋತ್ರಿ (< ಸಂ. ಸ್ನುಷಾ) ಅಂದರೆ ಮಕ್ಕಳನ್ನು ಹೆರುವವಳು ಎಂದಿರಬೇಕು. ಆದರೆ ಈ ರೂಪವು ಎಲ್ಲ ಹೆಂಗಸರಿಗೆ ಅನ್ವಯವಾಗುವಂತೆ ‘ವಧು’ ಎಂಬರ್ಥದಲ್ಲಿ ಬಳಕೆಯಾಗುತ್ತದೆ. ಅದರ ಅರ್ಥ ಬಹುಶಃ ‘ವಹ್’ ಕರೆದುಕೊಂಡು ಅಥವಾ ಹೊತ್ತುಕೊಂಡು ಬಂದವಳು ಅಂದರೆ ಮದುವೆ ಮಾಡಿಕೊಂಡು ಬಂದವಳು ಎಂದುದರಿಂದಲೇ ‘ವಧು’ ಶಬ್ದ ‘ಮದುವಣಗಿತ್ತಿ’ ಸೊಸೆ (ಹಿಂದಿ – ಬಹೂ) ಎಂಬರ್ಥಗಳನ್ನೂ ಸಂಚಯಿಸಿಕೊಂಡಿವೆ. ತಾಯಂದಿರರು ತಮ್ಮ ಸಹೋದರರ ಮಗಳನ್ನು ಮಗಳ ಮಗಳನ್ನು ಸೊಸೆಯಾಗಿ ಸ್ವೀಕರಿಸುವುದುಂಟು. ‘ನನಗೆ ಇಬ್ಬರು ಸೊಸೆಯಂದಿರಿದ್ದಾರೆ. ಒಬ್ಬಳು ಅಣ್ಣನ ಮಗಳು, ಇನ್ನೊಬ್ಬಳು ಮಗಳ ಮಗಳು (ರೂಢಿ). ಹಿರಿಯರು ಕಿರಿಯ ಹೆಣ್ಣು ಮಕ್ಕಳಿಗೆ ‘ಸೊಸೆಯಾಗಿ ಬಾಳು (ಮುತ್ತೈದೆ)’ ಎಂದು ಹರಸುತ್ತಾರೆ. ಗ್ರಾಮೀಣ ಪ್ರದೇಶದ ಕೌಟುಂಬಿಕ ಜೀವನದಲ್ಲಿ ಅತ್ತೆಯಂದಿರರು (ಹೆಚ್ಚಾಗಿ) ಸೊಸೆಯ ಮೇಲೆ ಅಧಿಕಾರ ಚಲಾಯಿಸುವುದುಂಟು. ‘ಅತ್ತೆಯ ಮನೆಯ ಸೊಸೆಯಂತಿರಬೇಕು’ ಎಂಬ ನಾಣ್ಣುಡಿ ಇದನ್ನೇ ನಿರ್ದೇಶಿಸುತ್ತದೆ. ಮಾವ – ಸೊಸೆಯಂದಿರರಲ್ಲಿ ಆತ್ಮೀಯವಾದ ಸಾಮಾಜಿಕ ಸಂಪರ್ಕ ಇರುವುದಿಲ್ಲ. ನಿಷಿದ್ಧತೆಯಿರುತ್ತದೆ. ಒಂದು ಬಗೆಯ ಸಾಮಾಜಿಕ ನಿಯಂತ್ರಣವೂ ಇರುತ್ತದೆ.

ಸೊಸೆಯ ಸುತ್ತ ಅನೇಕ ಗಾದೆಗಳು ಬಳಕೆಯಲ್ಲಿವೆ.’ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ,; ‘ಸೊಸೆ ಸತ್ತ ಮೇಲೆ ಅತ್ತೆಯೂ ಅತ್ತಳಂತೆ’. ಇಂತಹ ಜಾನಪದ ಉಕ್ತಿಗಳು ಸಾಂಸಾರಿಕ ಜೀವನದಲ್ಲಿ ಅತ್ತೆ – ಸೊಸೆಯಂದಿರರ ಸ್ಥಾನಮಾನವನ್ನು ತಿಳಿಸಿಕೊಡುತ್ತವೆ. ಸೊಸೆಯಾವಾಗಲೂ ಅತ್ತೆ ಮಾವಂದಿರಿಗೆ, ಭಾವ – ಮೈದುನರಿಗೆ ಹಾಗೂ ನಾದಿನಿಯರಿಗೆ ವಿಧೇಯಕವಾಗಿಯೇ ಇರಬೇಕು ಎಂಬ ವಾಡಿಕೆ ಗ್ರಾಮೀಣ ಪ್ರದೇಶದಲ್ಲಿ ಈಗಲೂ ಇದೆ.

ಸಾಮಾಜಿಕ ಸಂಬಂಧದ ದೃಷ್ಟಿಯಿಂದ ಯೋಚಿಸಿದರೆ ಅತ್ತೆ – ಮಾವಂದಿರರಿಗೂ ಸೊಸೆಗೂ ಸಂಬಂಧಪಟ್ಟಂತೆ ಹಾಗೂ ಅತ್ತೆ – ಮಾವಂದಿರರಿಗೂ ಅಳಿಯನಿಗೂ ಸಂಬಂಧಪಟ್ಟಂತೆ (ಅನೇಕ ಸಮುದಾಯಗಳಲ್ಲಿ) ನಿಷೇದಾಜ್ಞೆಗಳು ರೂಢಿಯಲ್ಲಿವೆ. ಸೊಸೆಯಾದವಳು ತನ್ನ ಅತ್ತೆ ಮಾವಂದಿರರ ಹೆಸರನ್ನು ಹೇಳಬಾರದು ಅವರೊಂದಿಗೆ ಸಲೀಸಾಗಿ ಮಾತನಾಡಕೂಡದು. ಪರಸ್ಪರರಲ್ಲಿ ಸಲಿಗೆಯಾಗಲಿ, ಸ್ನೇಹವಾಗಲಿ ಬೆಳೆಸಕೂಡದು. ಅಳಿಯ ತನ್ನ ಹೆಂಡತಿಯಲ್ಲಿ ಕಾಣಿಸಿಕೊಳ್ಳುವ ಕೆಲವು ಗುಣಗಳು ಹಾಗೂ ರೂಪ ಸಾದೃಶ್ಯ ತನ್ನ ಅತ್ತೆಯಲ್ಲೂ ಕಾಣಿಸಿಕೊಂಡು, ಅಳಿಯನಾದವನು ಅತ್ತೆಯಲ್ಲಿ ಅನುರಕ್ತನಾಗಬಹುದಾದ ಸಾಧ್ಯತೆಗಳಿರುತ್ತವೆ. ಹಾಗೆಯೇ ಅತ್ತೆಯಾದವಳು ತನ್ನ ಮಗಳ ಜಾಗದಲ್ಲಿ ತಾನಿರುವಂತೆ ಭಾವಿಸಿಕೊಂಡು ಅಳಿಯ ರೂಪ, ಪ್ರಾಯ, ಸ್ಥಾನಮಾನಗಳ ಬಗ್ಗೆ ವಿಶೇಷ ಭಾವನೆಗಳನ್ನಿಟ್ಟುಕೊಂಡು ಮನಸ್ಸಿನಲ್ಲೇ ತನ್ನ ಬಯಕೆಯನ್ನು ಈಡೇರಿಸಿಕೊಳ್ಳಲು ಹವಣಿಸಬಹುದು. ಮಾವ ಹಾಗೂ ಸೊಸೆಯಂದಿರರಲ್ಲಿಯೂ ಇಂತಹ ಭಾವನೆಗಳು ಬರಬಹುದು. ಹೀಗೆ ಇವರಲ್ಲಿ ಮೂಡಬಹುದಾದ ಲೈಂಗಿಕ ಆಕರ್ಷಣೆಯನ್ನು ತಪ್ಪಿಸುವುದಷ್ಟೇ ಅಲ್ಲದೇ ಪರಸ್ಪರ ಗೌರವ, ವಿನಯ, ಭಕ್ತಿಗಳನ್ನು ಸೂಚಿಸುವುದರ ಕಾರಣವಾಗಿರಬಹುದೆಂಬುದನ್ನು ಅಲ್ಲಗಳೆಯುವಂತಿಲ್ಲ.

ವಿವಾಹದಿಂದ ಬಂದ ಸಂಬಂಧಿಕರಲ್ಲಿ ಸೋದರಮಾವ – ಅಳಿಯ, ಸೋದರತ್ತೆ – ಸೊಸೆ ಇವರು ಮಹತ್ವದ ಸ್ಥಾನವನ್ನು ಹೊಂದಿರುತ್ತಾರೆ. ಇವರುಗಳ ನಡುವೆ ನಗೆಚಾಟಿಕೆಯ ಸಂಬಂಧಗಳಿರುತ್ತವೆ. ಇವರ ಸಂಬಂಧವು ತಂದೆ, ತಾಯಿ, ದೊಡ್ಡಪ್ಪ, ಚಿಕ್ಕಪ್ಪನಂತಿರದೆ ಬೇರೆಯದೇ ಆಗಿರುತ್ತದೆ. ಅಲ್ಲದೆ ಸೋದರಿಯ ಮಗಳು, ಸೋದರ ಮಾವ / ಅತ್ತೆಯ ಮಗಳು ಹೆಂಡತಿಯಾಗಲು ಅರ್ಹಳಾಗುತ್ತಾಳೆ. ಜನಪದ ಸಾಹಿತ್ಯದಲ್ಲಿ ಮಾವ, ಅಕ್ಕ, ಹಾಗೂ ಅತ್ತೆಯ ಮಗಳು ಅಥವಾ ಮಗಳನ್ನು ವರ್ಣಿಸಿರುವ ಅನೇಕ ನಿದರ್ಶನಗಳಿವೆ. ‘ಮಾವನ ಮಗಳೇ ಮೋಹದ ಗಿಣಿಯೇ’ ಎಂದು ಹಾಡಿರುವುದು ಪರಸ್ಪರರ ಮಧುರ ಭಾವನೆಯನ್ನು ತೋರಿಸುತ್ತದೆ.

ಇದೇ ರೀತಿಯಾಗಿ ತಾಯಿಯ ಸೋದರನಿಗೆ ತನ್ನ ಸಹೋದರಿಯರ ಮಕ್ಕಳ ಮೇಲೆ ಮಮತೆ ಇರುತ್ತದೆ. ಇದು ಪರಸ್ಪರರಲ್ಲಿ ಪ್ರೀತಿ, ವಿಶ್ವಾಸವನ್ನು ಏರ್ಪಡಿಸುವಲ್ಲಿ ನೆರವಾಗುತ್ತದೆ. ಇದರಿಂದ ವಿವಾಹ ಪೂರ್ವದ ಹಗೆತನ, ನಿರ್ಲಕ್ಷ್ಯ ಮತ್ತು ಅಸಹಕಾರ ಭಾವನೆಗಳು ಕಳೆದುಹೋಗಿ ಎರಡು ಗುಂಪಿನವರು ಹತ್ತಿರದ ಸಂಬಂಧಿಗಳಾಗುತ್ತಾರೆ.

ಅತ್ತಿಗೆ

ಸಂಸ್ಕೃತದ ‘ಅತ್ತಿಕಾ’ ಎಂಬ ಶಬ್ದಕ್ಕೆ ಅಕ್ಕ ಎಂಬರ್ಥವಿದೆ. ಅದೇ ‘ಅತ್ತಿಗೆ’ ಎಂದು ಕನ್ನಡದ ರೂಪ ಪಡೆದಿರಬಹುದು. ಆದರೆ ಕನ್ನಡದಲ್ಲಿ ಈ ಶಬ್ದವನ್ನು ‘ಅಕ್ಕ’ ಎಂಬರ್ಥದಲ್ಲಿ ಯಾವಾಗಲೂ ಉಪಯೋಗಿಸಿಲ್ಲ. ಅತ್ತಿಗೆ ಪದವು ೧. ಅಣ್ಣನ ಹೆಂಡತಿ, ೨. (ಕೆಲವು ಸಲ) ಹೆಂಗಸರನ್ನು ಪ್ರೀತಿ ಅಥವಾ ಗೌರವದಿಂದ ನಿರ್ದೇಶಿಸುವಾಗ ಉಪಯೋಗಿಸುವ ಮಾತು (ಅಕ್ಕ, ಅಮ್ಮ ಎಂಬಂತೆ), ಈ ರೂಪಕ್ಕೆ ‘ಅಱ್ತೆಗೆ’ ಎಂಬ ಇನ್ನೊಂದು ರೂಪವಿದೆ. ಇದರರ್ಥ ಪ್ರೀತಿಯುಳ್ಳವಳು. ಪ್ರೀತಿಗೆ ಪಾತ್ರಳಾದವಳು. ನಲ್ಲೆ. ಪಂಪ, ಪೊನ್ನ, ನಂಜುಂಡರು ‘ಅತ್ತಿಗೆ’ ರೂಪವನ್ನು ನಲ್ಲೆ ಎಂಬಂರ್ಥದಲ್ಲಿ ಬಳಸಿದ್ದರೆ ‘ವಡ್ಡಾರಾಧನೆ’ ಮುಂತಾದ ಕಡೆಗಳಲ್ಲಿ ‘ಅಣ್ಣನ ಹೆಂಡತಿ’ ಎಂಬ ಪ್ರಸಿದ್ಧಾರ್ಥದಲ್ಲಿ ಬಳಸಲಾಗಿದೆ. ಹತ್ತನೆಯ ಶತಮಾನದಲ್ಲಿ ಆ ಮಾತಿಗೆ ಅಣ್ಣನ ಹೆಂಡತಿ ಮತ್ತು ನಲ್ಲೆ ಎಂಬ ಎರಡು ಅರ್ಥಗಳೂ ಇದ್ದವು. ಸೇಡಿಯಾಪು ಕೃಷ್ಣಭಟ್ಟರು (೧೯೯೨), ಮತ್ತು ಎಂ. ಚಿದಾನಂದಮೂರ್ತಿ (೧೯೯೩) ಅವರು ಈ ಬಗೆಗೆ ಸ್ಪಷ್ಟವಾದ ಲೇಖನಗಳನ್ನು ಬರೆದಿದ್ದಾರೆ. ಕನ್ನಡದಲ್ಲಿ ಈಗ ‘ಅತ್ತಿಗೆ’ ಎಂಬ ಮಾತು ಎಲ್ಲ ಕಡೆಗಳಲ್ಲಿ ಅಣ್ಣನ ಹೆಂಡತಿ ಎಂಬರ್ಥದಲ್ಲಿಯೂ ಬಳಕೆಯಾಗುತ್ತಿದೆ. ವ್ಯವಹಾರದಲ್ಲಿದ್ದರೂ ಕಿತ್ತೂರು ಕರ್ನಾಟಕದಲ್ಲಿ ಅದು ‘ಹೆಂಡತಿಯ ಅಕ್ಕ’ ಎಂಬರ್ಥದಲ್ಲಿಯೂ ಬಳಕೆಯಾಗುತ್ತಿದೆ. ಅದಕ್ಕೆ ಕಾರಣವೂ ಇದೆ. ಹೆಂಡತಿಯ ಅಕ್ಕನನ್ನು ಅಣ್ಣ ಮದುವೆಯಾಗುವ (ಮದುವೆಯಾಗಿರುವ) ಸಾಧ್ಯತೆಯಿರುವುದರಿಂದ ಅವಳು ಮದುವೆಯಾದ ವ್ಯಕ್ತಿ ಬೇರೆಯಾಗಿದ್ದರೂ ಅವನು ಒಂದು ರೀತಿಯಲ್ಲಿ ಅಣ್ಣನಾಗುತ್ತಾನೆ. ‘ಹಿರಿ ಅತ್ತಿಗೆ ತಾಯಿಯ ಸಮಾನ’ ಗೌರವದಿಂದ ಅವಳನ್ನು ‘ಅತ್ತಿಗೆಮ್ಮ’ಎಂದು ಕರೆಯುವುದುಂಟು. ‘ಬಾಗಲಕೋಟೆಯ ಅತ್ತಿಗೆಮ್ಮನ ಸ್ವಭಾವ ಚಲೋ ಭಾಳ ಐತಿ’ , ಕಿತ್ತೂರು ಕರ್ನಾಟಕ ಪ್ರದೇಶದಲ್ಲಿ ಮರಾಠಿ ಭಾಷೆಯ ಪ್ರಭಾವದಿಂದಾಗಿ ಅತ್ತಿಗೆಯನ್ನು ‘ವೈನಿ’ ಎಂದೂ ಕರೆಯುತ್ತಾರೆ. ಅತ್ತಿಗೆಯ ಸುತ್ತ ಅನೇಕ ಗಾದೆಗಳು ಬಳಕೆಯಲ್ಲಿವೆ. ‘ಅಣ್ಣ ನಮ್ಮವನಾದರೆ ಅತ್ತಿಗೆ ನಮ್ಮವಳೇ?’ ‘ಬಡವನ ಹೆಂಡತಿ ಊರಿಗೆಲ್ಲ ಅತ್ತಿಗೆ’, ‘ಅತ್ತೆಯ ಕಷ್ಟಕ್ಕಿಂತ ; ಅತ್ತಿಗೆಯ ನೋಟ ಕಷ್ಟ’. ಕೌಟುಂಬಿಕ ಜೀವನದಲ್ಲಿ ಅತ್ತಿಗೆಯ ಪಾತ್ರ ಹಿರಿದು.

(ಮಾವ) ಭಾವಮೈದುನ

ಈ ಬಂಧುಸೂಚಕಗಳ ಪ್ರಸಾರ ವೈವಿಧ್ಯಮಯವಾಗಿದೆ. ೧. ಕಿತ್ತೂರು ಕರ್ನಾಟಕ ಪ್ರದೇಶದ ಕಡೆಗೆ ತಾಯಿಯ ಸಹೋದರ, ಸೋದರಮಾವ, ಗಂಡ / ಹೆಂಡತಿಯ ತಂದೆ ಹಾಗೂ ಅಕ್ಕ / ತಂಗಿಯರ ಗಂಡ ಇವರಿಗೆ ‘ಮಾವ’ ಎಂದು ಕರೆಯುತ್ತಾರೆ. ಅದಕ್ಕೆ ಕಾರಣ ತಾಯಿಯ ಸೋದರನ ಮಗಳು ಹೆಂಡತಿಯಾಗುವ ಸಾಧ್ಯತೆಯಿರುವುದು. ಇನ್ನೊಂದು ಕಾರಣವೇನೆಂದರೆ ಗಂಡನ ಅಣ್ಣ / ತಮ್ಮಂದಿರು ಹೆಂಡತಿಯ ಅಕ್ಕ / ತಂಗಿಯರನ್ನು ಮದುವೆಯಾಗುವ (ಮದುವೆಯಾಗಿರುವ) ಸಾಧ್ಯತೆಯಿರುವುದರಿಂದ ಅವಳು ಮದುವೆಯಾದ ವ್ಯಕ್ತಿ ಬೇರೆಯಾಗಿದ್ದರೂ ಅವನು ಮಾವನಾಗುತ್ತಾನೆ. ಕೆಲವು ವೇಳೆ ಬಂಧುತ್ವವಿಲ್ಲದಿದ್ದರೂ ಆತ್ಮೀಯತೆಯನ್ನು ಸೂಚಿಸುವಾಗಲೂ ಈ ಪದ ಬಳಕೆಯಾಗುತ್ತದೆ. ಗಂಡನ ಅಣ್ಣನನ್ನು ಸಂಬೋಧಿಸುವಾಗ ‘ಮಾವ’ ಎಂದೂ ಇನ್ನೊಬ್ಬರಿಗೆ ಪರಿಚಯಿಸುವಾಗ ಮಾತ್ರ ‘ಭಾವ’ ಎಂದೂ ಪ್ರಯೋಗಿಸುವುದುಂಟು.

ಮಾವ ಯಾಳೆ ಆಗೇತಿ ಊಟಮಾಡ ಬರೀ’'(ಸಂಬೋಧನೆ)
ನನಗೆ ಭಾವ ಒಬ್ಬರಿದ್ದಾರೆ (ಪರಿಚಯ)
ಮೈದುನರು ಇಬ್ಬರಿದ್ದಾರೆ.
ಇವರು ನನ್ನ ಭಾವ ; ಒಕ್ಕಲುತನ ಮಾಡ್ತಾರ

೨. ಹಳೆಯ ಮೈಸೂರ ಪ್ರದೇಶದ ಕಡೆಗೆ ‘ಮಾವ’ ಮತ್ತು ‘ಭಾವ’ ಪೂರಕ ಪ್ರಸಾರವನ್ನು ಪಡೆದಿವೆ. ‘ಮಾವ’ ಪದವು ಗಂಡ / ಹೆಂಡತಿಯ ತಂದೆಗೆ ಹಾಗೂ ಸೋದರ ಮಾವನಿಗೆ ಮಾತ್ರ ಪ್ರಯೋಗವಾಗುತ್ತದೆ. ‘ಭಾವ’ ಪದವು ಅಕ್ಕ ತಂಗಿಯರ ಗಂಡನಿಗೆ, ಹೆಂಡತಿಯ ಅಣ್ಣ ತಮ್ಮರಿಗೆ ಹಾಗೂ ಗಂಡನ ಅಣ್ಣ ಇವರಿಗೆ ಪ್ರಯೋಗವಾಗುತ್ತದೆ. ‘ಭಾವ’ ಪದವು ಕಿತ್ತೂರು ಕರ್ನಾಟಕಕ್ಕಿಂತ ಹಳೇ ಮೈಸೂರು ಪ್ರದೇಶದ ಕಡೆಗೆ ಹೆಚ್ಚು ಪ್ರಸಾರವನ್ನು ಪಡೆದಿದೆ. ಮತ್ತು ಈ ಪ್ರದೇಶದಲ್ಲಿ ಭಾವ ಪದವು ಸಂಬೋಧನೆಯಲ್ಲಿ ಬಳಕೆಯಲ್ಲಿದೆ. ಭಾವ ಊಟಾಯ್ತ (ರೂಢಿ)

೩. ‘ಮೈದುನ’ ಪದವು ಕಿತ್ತೂರು ಕರ್ನಾಟಕದಲ್ಲಿ ಗಂಡನ ತಮ್ಮನಿಗೆ ಮಾತ್ರ ಬಳಕೆಯಾಗುತ್ತದೆ (ಪರಿಚಯಿಸುವಾಗ),

ನನಗ್ ಇಬ್ಬರು ಮೈದುನರು ಒಬ್ಬರು ಊರಾಗ ಅದಾರ್
ಇನ್ನೊಬ್ಬರು ಪುಲಗಡ್ಡಿಯಲ್ಲಿ ಮಾಸ್ತರ್ ಆಗ್ಯಾರ್

ಹಳೇ ಮೈಸೂರು ಕಡೆಗೆ ಪರಿಚಯ ಹಾಗೂ ಸಂಬೋಧನೆ ಎರಡರಲ್ಲೂ ಬಳಕೆಯಾಗುತ್ತದೆ.

ಇವರು ನನ್ನ ಮೈದುನ ತುಮಕೂರಿನಲ್ಲಿ ಕೆಲ್ಸ ಮಾಡ್ತಾರ್

ತಂಗಿಯ ಗಂಡನ ತಮ್ಮ ಹಾಗೂ ತಂಗಿಯ ಗಂಡನಿಗೆ ವಾವೆಯಲ್ಲಿ ತಮ್ಮ ಆಗುವುದರಿಂದ ಅವನನ್ನು ‘ಮೈದುನ’ ಎಂದೇ ಕರೆಯುತ್ತಾರೆ. ಹೆಂಡತಿಯ ತಮ್ಮ ಮೈದುನನಾದರೂ ‘ಭಾವ ಮೈದುನ’ ಎಂದೇ ಸೂಚಿಸುವುದು.

ಇವರು ನನ್ನ ಭಾವಮೈದುನ

ಕೌಟುಂಬಿಕ ಜೀವನದಲ್ಲಿ ‘ಮಾವ’, ‘ಭಾವ’, ‘ಮೈದುನ’ ಎಲ್ಲರೂ ತುಂಬ ಸಾಮರಸ್ಯತೆಯಿಂದಿರಬೇಕಾಗುತ್ತದೆ. ಇರದಿದ್ದರೆ ಅನೇಕ ತೊಂದರೆಗಳುಂಟಾಗುತ್ತವೆ. ‘ಭಾವ ಮೈದುನರು ಮುನಿದರ ಬಲಗಾಲ ಹಿಡಿದೇನ್ ಭಾವಯ್ಯನ ಮಡದಿ ನೆಗೆಣ್ಣಿಯರು ಮುನಿದರ್ ಬಾರಕ್ / ಬಾತಂಗಿಯೆಂದು ಕರೆದೇನ್’ ಸಹನ ಶಕ್ತಿ, ಸೌಹಾರ್ದತೆ ಕುಟುಂಬದ ಸದಸ್ಯರಲ್ಲಿ ಇರಬೇಕಾಗುತ್ತದೆ ಎಂಬುದು ಇದರಿಂದ ವೇದ್ಯವಾಗುತ್ತದೆ.

ಕೌಟುಂಬಿಕ ಜೀವನದಲ್ಲಿ ‘ಮಾವ’ ತಮಾಷೆಯ ಹಾಗೂ ಗಂಭೀರ ವ್ಯಕ್ತಿಯೂ ಆಗುತ್ತಾನೆ. ‘ಪಂಚಮಿ ಬಂತೋ ಸಮೀಪ, ಮಾವ ಬಂದಾನ ಕರ್ಯಾಕ, ಅವರೆನವ್ವಾ ಸಹುಕಾರ ನಾವೆನವ್ವಾ ಬಡುರಾ ಇಂತಹ ಅನೇಕ ಶಿಶುಪ್ರಾಸಗಳು ಮಾವನ ಸುತ್ತ ರಚಿತವಾಗಿವೆ. ಮಗು ಅಳುತ್ತಿದ್ದಾಗ ತಾಯಿ ‘ಅಳಬಾರದು ಮಾವನ ಮುಂದೆ ಹೇಳ್ತಿನಿ’ ಎಂದಾಗ ಮಗು ಸುಮ್ಮನಾಗುತ್ತದೆ. ‘ಮಾವಯ್ಯ ಸತ್ತರೆ ಏನೆಂದ ಅಳುವೇನು, ಬಾಗಿಲ ಹಿಡ್ಕೊಂಡ ಮಾವಯ್ಯ ನೀ ಊರುವ ದೊಣ್ಣಿ ನಮಗಾದ್ಯೋ’, ‘ತಾಯಿ – ತಂದೆ ಸತ್ತರೆ ಸೋದರ ಮಾವ ಇರಬೇಕು’, ‘ಮಾವ ಕೊಟ್ಟದ್ದು ಮನೆತನಕ, ದೇವರು ಕೊಟ್ಟದ್ದು ಕಡೆತನಕ’, ಇಂತಹ ಅನೇಕ ಗಾದೆಗಳು ಪ್ರಚಲಿತದಲ್ಲಿವೆ. ಕೆಲವು ಸಂದರ್ಭದಲ್ಲಿ ಮಾವ ಪದವು ಲಕ್ಷಣಾರ್ಥದಲ್ಲಿಯೂ ಬಳಕೆಯಾಗುತ್ತದೆ. ‘ತುಡುಗ ಮಾಡಿ ಮಾವನ ಮನೆ ಸೇರಿದ’ (ಸೆರೆಮನೆ), ‘ತುಡುಗ ಮಾಡಬಾರದು ಮಾವಗೋಳ್ ಬಂದ ಒದಿತಾರ’ (ಯಜಮಾನ). ಕೆಲವು ಸಂದರ್ಭದಲ್ಲಿ ಹೀನಾರ್ಥದಲ್ಲಿಯೂ ಬಳಕೆಯಾಗುತ್ತದೆ. ಅಕಿ ಹಿನ್ನೆಯಿಂದ ಮಾವನ ಹಾದಿ ನೋಡಾಕ ಹತ್ತ್ಯಾಳ (ಗೆಣೆಯ), ಹೀಗೆ ‘ಮಾವ’ ಪದವು ಕೌಟುಂಬಿಕ ಹಾಗೂ ಸಾಮಾಜಿಕ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದೆ:. ಬಳಕೆಯಲ್ಲಿ ವಿಭಿನ್ನ ಸಾಮಾಜಿಕ ಆಯಾಮವನ್ನು ಪಡೆದುಕೊಂಡಿವೆ.

ಅಜ್ಜ ಅಜ್ಜಿ, ಮೊಮ್ಮಗ ಮೊಮ್ಮಗಳು

ಸಾಮಾನ್ಯವಾಗಿ ತಂದೆ / ತಾಯಿಯ ತಂದೆ (ತಾಯಿ); ತಂ‌ದೆ / ತಾಯಿಯ ಚಿಕ್ಕಪ್ಪ (ಚಿಕ್ಕಮ್ಮ) ದೊಡ್ಡಪ್ಪ (ದೊಡ್ಡಮ್ಮ) ; ಹಿರಿಯ, ವೃದ್ಧ (ವೃದ್ಧೆ)ರಿಗೆ ಅಜ್ಜ / ಅಜ್ಜಿ ರೂಪಗಳು ಬಳಕೆಯಾಗುತ್ತವೆ. ಕೆಲವು ಸಂದರ್ಭದಲ್ಲಿ ಹಿರಿಯರ ಹೆಸರಿನ ಕೊನೆ ಗೌರವಾರ್ಥಕವಾಗಿ ‘ಅಜ್ಜ’ ರೂಪ ಸೇರುವುದುಂಟು. ಇದು ವಾರ್ಗೀಕ, ಉದಾ: ಮಹಾದೇವಪ್ಪಜ್ಜ, ಚಿನ್ನಪ್ಪಜ್ಜ, ಪಾರವ್ವಜ್ಜಿ, ದುಂಡವ್ವಜ್ಜಿ, ಕೆಲವೊಮ್ಮೆ ‘ಅಜ್ಜ’ ಎಂಬ ವಾರ್ಗೀಕವು ನಿರ್ದಿಷ್ಟವಾಗಿಯೂ ಬಳಕೆಯಾಗುತ್ತದೆ. ಉದಾಃ ಅಜ್ಜಪ್ಪ, ತೀರಿಹೋದ ಅಜ್ಜನ ಹೆಸರನ್ನು ಮೊಮ್ಮಗನಿಗೆ ಇಟ್ಟಾಗ ಅವನನ್ನು ಅಜ್ಜಪ್ಪ ಎಂದು ಕರೆಯುದುಂಟು. ಸಂಬೋಧನೆ ಮತ್ತು ಪರಿಚಯ ಎರಡೂ ಸಂದರ್ಭದಲ್ಲಿಯೂ ಈ ರೂಪಗಳು ಬಳಕೆಯಾಗುತ್ತವೆ. ‘ಅಜ್ಜ’ ಬಂದುಸೂಚಕಕ್ಕೆ ಸಂವಾದಿಯಾಗಿ ಬಳ್ಳಾರಿ ಸುತ್ತಮುತ್ತಲಿನ ಪ್ರದೇಶದಲ್ಲಿ ‘ತಾತ’ ಎಂದೂ ವಿಜಾಪುರ ಸುತ್ತಮುತ್ತಲಿನ ಪ್ರದೇಶದಲ್ಲಿ ‘ಮುತ್ತ್ಯಾ’ ಎಂದೂ ಕರೆಯುತ್ತಾರೆ. ‘ಮೂ’ ‘ಮುದು’ ‘ಮುನ್’ ‘ಮುತ್’ ಎಂಬ ರೂಪಗಳಿಂದ ಹಲವು ದ್ರಾವಿಡ ಶಬ್ದಗಳು ಹುಟ್ಟಿವೆ. ಮುತ್ತ್ಯಾ ಎಂದರೆ ಮೊದಲಿನವ, ಹಿರಿಯ ಎಂಬರ್ಥ ಬರುತ್ತದೆ. ಮುತ್ತಜ್ಜ ಎಂದರೆ ಅಜ್ಜನಿಗಿಂತ ಹಿರಿಯ, ಮುತ್ತಜ್ಜ, ಮುತ್ತಜ್ಜಿ, ಮೊಮ್ಮಕ್ಕಳು, ಮರಿಮಕ್ಕಳು, ಗಿರಿಮಕ್ಕಳು ಇವು ಮೂರು ತಲೆಮಾರಿನ ಸಂಬಂಧವನ್ನು ಸೂಚಿಸುತ್ತವೆ. ವೃದ್ಧ ಎಂದರೆ ವಯಸ್ಸು ಮೀರಿದವ ಎಂದು ತಿಳಿಯುತ್ತೇವೆ. ಆದರೆ ಆ ಶಬ್ದದ ಮೂಲಾರ್ಥ ‘ಬೆಳೆದವ’ (ವೃದ್‌ಬೆಳೆ, ವೃದ್ಧಿ – ಬೆಳವಣಿಗೆ), ಈ ರೂಪವೇ ಹಿಂದಿಯಲ್ಲಿ ‘ಬುಡ್ಡಾ’ ಆಗಿದೆ. ಇದು ವಯಸ್ಸಿನಲ್ಲಿ ಮುಪ್ಪಾದವರನ್ನು ತೋರಿಸುತ್ತದೆ. ‘ಅಜ್ಜಿ’ ಬಂಧುಸೂಚಕಕ್ಕೆ ಸಂವಾದಿಯಾಗಿ ಬಳ್ಳಾರಿ ಸುತ್ತಮುತ್ತಲಿನ ಪ್ರದೇಶದಲ್ಲಿ ‘ಅವ್ವ’ ಎಂದೂ ಬೆಳಗಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಅಮ್ಮ ಎಂದೂ ಕರೆಯುತ್ತಾರೆ. (ಅವ್ವ – ಅಮ್ಮ ಇವುಗಳ ಬಳಕೆಯ ಬಗೆಗೆ ಇದೇ ಅಧ್ಯಾಯನದ ಕೊನೆ ಟಿಪ್ಪಣಿ ಭಾಗದಲ್ಲಿ ಚರ್ಚಿಸಲಾಗಿದೆ). ಮಗ ಅಥವಾ ಮಗಳ ಮಗ ಮೊಮ್ಮಗನಾಗುತ್ತಾನೆ. ಮಗ ಅಥವಾ ಮಗಳು ಮೊಮ್ಮಗಳಾಗುತ್ತಾಳೆ.

ಅಜ್ಜ – ಅಜ್ಜಿ ರೂಪಗಳ ಬಳಕೆಯ ಸಾಮಾಜಿಕ ಆಯಾಮವನ್ನು ಗಮನಿಸಿ ಹೇಳುವುದಾದರೆ ಹೆಣ್ಣು ಮಕ್ಕಳ ಮಕ್ಕಳಿಗೆ ಅಜ್ಜ / ಅಜ್ಜಿಯರ ಮೇಲೆ ಸಲಿಗೆ ಹೆಚ್ಚು. ಶಿಶುಪ್ರಾಸಗಳಲ್ಲಿ ಇದರ ಬಗೆಗೆ ಉಲ್ಲೇಖಗಳು ಸಿಗುತ್ತವೆ.

ಹೆಣ್ಣು ಮಗಳ ಮಗ / ಮಗಳು –

‘ಕಾಗಿ ಬಾಬಾ ನಮ್ಮ
ಅಜ್ಜ / ಅಜ್ಜಿಯ ತಲಿ
ಕುಕ್ ಬಾ

ಗಂಡು ಮಗನ ಮಗ / ಮಗಳು – ‘ಕಾಗಿ ನಮ್ಮ ಅಜ್ಜ / ಅಜ್ಜಿಯ ಸನೇಕ್

ಬಂದರ್ ನಿನ್ನ ನೋಡ

ಎನ್ನುವಲ್ಲಿಯ ಹಾಸ್ಯ ಗಮನಾರ್ಹವಾಗಿದೆ. ಗಂಡು ಮಗನ ಮಗನಿಗೆ ತಮ್ಮ ಅಜ್ಜನ ಮೇಲೆ ಕಾಳಜಿಯಿದೆ (ಅವನು ಮನೆಯ ಮೊಮ್ಮಗ), ಹೆಣ್ಣು ಮಗಳ ಮಗ ಅಜ್ಜನಿಗೆ ತಮಾಷೆ ಮಾಡುತ್ತಾನೆ. ಆದರೂ ಅಜ್ಜ – ಅಜ್ಜಿಯರಿಗೆ ಮಗಳ ಮಕ್ಕಳ ಮೇಲೆ ಕಾಳಜಿ, ವಾತ್ಸಲ್ಯ ಹೆಚ್ಚು. ಅಜ್ಜ / ಅಜ್ಜಿಯರ ಸುತ್ತ ಅನೇಕ ಸ್ವಾರಸ್ಯಕರವಾದ ಗಾದೆಗಳು ಬಳಕೆಯಲ್ಲಿವೆ. ಅಜ್ಜ / ಅಜ್ಜಿಯಂದಿರಿಗೆ, ಮೊಮ್ಮಗ / ಮೊಮ್ಮಗಳು ಆಕಳಿಕೆ ಕಲಿಸಿದವಂತೆ’. ಅಜ್ಜ / ಅಜ್ಜಿ ಮದುವೆ ಎಂದರೆ ನನಗೂ ಎಂದ, ಅಜ್ಜ ಇಲ್ಲದ ಮನಿ ಮಜ್ಜಿಗಿಲ್ಲದ ಊಟ, ಕೌಟುಂಬಿಕ ಜೀವನದಲ್ಲಿ ಅಜ್ಜ, ಅಜ್ಜಿಯವರಿಗೆ ಗೌರವದ ಸ್ಥಾನವಿದೆ.

ನಾದುನಿ ನೆಗೆಣ್ಣಿ ಸವತಿ

ಸಾಮಾನ್ಯವಾಗಿ ಗಂಡನ ಅಕ್ಕ ಅಥವಾ ತಂಗಿ; ಪತಿಯ ಸಹೋದರಿಯರು ‘ನಾದುನಿ’ಯರಾಗುತ್ತಾರೆ. ಈ ಬಂಧುಸೂಚಕವು ಸಂಬೋಧನೆಯಲ್ಲಿ ಬಳಕೆಯಾಗುವುದಿಲ್ಲ. ಇನ್ನೊಬ್ಬರಿಗೆ ಪರಿಚಯಿಸುವಾಗ ಬಳಕೆಯಾಗುತ್ತದೆ. ‘ನಾಳೆ ನಮ್ಮ ನಾದಿನಿ ಬರ್ತಾಳೆ’, ‘ನಮಗೆ ಒಬ್ಬಾಕೆ ನಾದಿನಿ’ (ರೂಢಿ). ಹೆಚ್ಚಾಗಿ ನಾದುನಿಯರು ಅತ್ತಿಗೆಯರಿಗೆ ಕಾಟ ಕೊಡುತ್ತಾರೆ. ‘ನಾದ್ನಿ ಉಪದ್ರ’ ಎಂಬ ನುಡಿಗಟ್ಟು ಹಾಗೂ ‘ಗಂಡ ನನ್ನವನಾದರೂ ನಾದ್ನಿ ನನ್ನವಳಲ್ಲ’, ‘ಅತ್ತಿಗೆ ನಾದಿನಿ ಅತ್ತೆ ಮಾವಂದಿರ ಜೊತೆಗೆ ಹೊಂದದವಳು ಕತ್ತೆಗೆ ಸಮಾನ’ ಎಂಬ ಗಾದೆಗಳು ಇದನ್ನೆ ಸೂಚಿಸುತ್ತವೆ. ಈ ಕಾರಣಕ್ಕಾಗಿ ನಾದಿನಿಯರನ್ನು ಸಂಬೋಧಿಸುವಾಗ ಚಿಗವ್ವ, ಚಿಕ್ಕಮ್ಮ ಎಂದು ಕರೆಯುವುದುಂಟು. ಇದರರ್ಥ ‘ನೀನು ತಾಯಿಯ ಸಮಾನ’ ಕಾಡಬೇಡ’ ಎಂಬರ್ಥ ಸೂಚ್ಯವಾಗಿ ವ್ಯಕ್ತವಾಗುತ್ತದೆ.

ಸಾಮಾನ್ಯವಾಗಿ ಭಾವ / ಮೈದುನನ ಹೆಂಡತಿ; ಗಂಡನ ಸಹೋದರನ ಹೆಂಡತಿಯು ‘ನೆಗೆಣ್ಣಿ’ಯರಾಗುತ್ತಾರೆ. ಈ ಬಂಧುಸೂಚಕಕ್ಕೆ ಪರ್ಯಾಯವಾಗಿ ಹಳೆಮೈಸೂರು ಕಡೆಗೆ ‘ಓರೆಗಿತ್ತಿ’ ಎಂಬ ಪದ ಪ್ರಯೋಗದಲ್ಲಿದೆ (ಓರ+ಅಗ_ಇತ್ತಿ). ಇದು ‘ಅಂತಹವರ ಜೊತೆಗೆ ವ್ಯವಹರಿಸುವವಳು’ ಎಂಬರ್ಥ ಕೊಡುತ್ತದೆ. ಓರಗಿತ್ತಿ ಎಂದರೆ ಸಮ ವಯಸ್ಕರರ ಜೊತೆಗೆ ಸಹ ಜೀವನ ನಡೆಸುವಳು. ಅವಿಭಕ್ತ ಕುಟುಂಬದಲ್ಲಿ ನೆಗೆಣ್ಣಿಯರು ಹೆಚ್ಚಿರುವುದರಿಂದ ಎಲ್ಲರಿಗೂ ಸೇರಿ ‘ನೆಗ್ಯಾಣಿಮಕ್ಕಳು’ ಎಂಬ ಪದಪುಂಜ ಬಳಕೆಯಲ್ಲಿದೆ. ಪರಸ್ಪರರಲ್ಲಿ ಸಹೋದರಿ ಸಂಬಂಧವಿರುತ್ತದೆ. ‘ಅಲ್ಲದಂತಹ ಅತ್ತಿಗೆ, ಬೆಲ್ಲದಂತಹ ನಾದುನಿ, ನೆಲ್ಲಿಕಾಯಿಯಂತಹ ನೆಗೆಣ್ಣಿ | ಕುಡಾಡಿ ಕಲ್ಯಾಣ ತವರ ಮರತೇನ’, ಈ ಬಂಧುವಾಚಕವು ಸಂಬೋಧನೆಯಲ್ಲಿ ಬಳಕೆಯಾಗುವುದಿಲ್ಲ; ಇನ್ನೊಬ್ಬರಿಗೆ ಪರಿಚಯಿಸುವಾಗ ಬಳಕೆಯಾಗುತ್ತದೆ. ‘ಅಡಿಗಿ ಪಡಗಿ ನಮ್ಮ ನೆಗ್ಯಾಣಿ ಮಾಡ್ತಾಳ;, ಹೊಲದ್ ದಗದಾ ನಾನೇ ಮಾಡ್ತನ್’, ‘ನೆಗ್ಯಾಣಿ ಮಕ್ಕಳು ಹೊಂದಕೊಂಡ ಹ್ವಾದರ ಮನಿ ಮುಂದ ಬರುತ್ತವೆ: ಇಲ್ಲದಿದ್ದರ್ ಮನಿ ಮೂರಾಬಟ್ಟೆ ಆಗ್ತಾವ್’ ಎಂಬ ನಾಣ್ಣುಡಿಗಳು ಕರ್ನಾಟಕದ ಉತ್ತರ ಭಾಗದಲ್ಲಿ ಪ್ರಚಲಿತದಲ್ಲಿವೆ. (ನೆಗೆವೆಣ್ಣು > ನೆಗೆಹೆಣ್ಣು > ನೆಗೆಣ್ಣಿ / ನೆಗ್ಯಾಣಿ).

ಸಾಮಾನ್ಯವಾಗಿ ತನ್ನ ಗಂಡನ ಇನ್ನೊಬ್ಬಳು ಹೆಂಡತಿಯರು ‘ಸವತಿ’ಯರಾಗುತ್ತಾರೆ. (ಉಪಪತ್ನಿ) ಇದರರ್ಥ ಇಬ್ಬರು ಹೆಂಡಂದಿರಿರುವ ಗಂಡ ಇಬ್ಬರನ್ನೂ ಸಮಾನವಾಗಿ ನೋಡಿಕೊಳ್ಳುವುದು ಎಂದರ್ಥ. ಆದರೆ ಸವತಿಯರಲ್ಲಿ ತುಂಬ ಮತ್ಸರ ಭಾವನೆ ಇರುತ್ತದೆ. ‘ಸವತಿ ಮತ್ಸರ ಜಗಳ’ ಎಂಬ ನಾಣ್ಣುಡಿ ಇದನ್ನೇ ಹೇಳುತ್ತದೆ. ‘ಸವತಿ’ ಪದ ಬೇರೆ ಭಾಷಿಕ ಸಂದರ್ಭದಲ್ಲಿ ಪ್ರಯೋಗವಾದಾಗ ‘ವಿರೋಧ’ ಎಂಬರ್ಥವನ್ನು ಕೊಡುತ್ತದೆ. ಉದಾ: ‘ಸವತಿ ಕಣ್ಣು’ (ಓರೆನೋಟ, ಮತ್ಸರದೃಷ್ಟಿ), ಜಾನಪದ ಸಾಹಿತ್ಯದಲ್ಲಿ ಬರುವ ‘ಸಾವಿರ ಕೊಟ್ಟರೂ ಸವತಿಯ ಮನಿ ಬ್ಯಾಡ’ ಎಂಬ ಮಾತನ್ನು ವಿಶ್ಲೇಷಿಸಿದಾಗ ಅಲ್ಲಿ ಸಹ ಜೀವನ ಇರುವುದಿಲ್ಲ ಎಂಬುದನ್ನೆ ಅದು ಪ್ರತಿಬಿಂಬಿಸುತ್ತದೆ. ‘ಸವತಿಯೆಂದರೆ ಸಾಯುವ ಹೆಣವೂ ಎದ್ದು ಕುಂತಂತೆ’ ಎಂಬ ಗಾದೆಯೂ ಇದನ್ನೇ ಹೇಳುತ್ತದೆ. ಹಿಂದೂ ವಿವಾಹ ಕಾನೂನಿನಿಂದಾಗಿ ಈಗ ಸವತಿಯರ ಸಂಖ್ಯೆ ಇಳಿಯುತ್ತಿದೆ. ಆದರೆ ಜನರ ಬಾಯಿಂದ ಸವತಿ ಅಸ್ತಂಗತಳಾಗಲಿಲ್ಲ. ‘ಸವತೀ ಹಾಂಗೆ ಕಾಡತೀ’ ಎಂದು ತಾಯಿ ಮಗಳನ್ನೇ ಬಯ್ಯುವುದನ್ನು ಕೇಳಿದ್ದೇವೆ.

ಷಡ್ಡಕ್

ಹೆಂಡತಿಯ ಸೋದರಿಯ ಗಂಡನಿಗೆ ಈ ರೂಪ ಬಳಕೆಯಲ್ಲಿದೆ. ಈ ಬಂಧುಸೂಚಕವು ಸಂಬೋಧನೆಯಲ್ಲಿ ಬಳಕೆಯಾಗುವುದಿಲ್ಲ. ಇನ್ನೊಬ್ಬರಿಗೆ ಪರಿಚಯಿಸುವಾಗ ಬಳಕೆಯಾಗುತ್ತದೆ.

ನನಗೆ ಇಬ್ಬರು ಷಡ್ಡಕರಿದ್ದಾರೆ ಒಬ್ಬರು ಬೆಳಗಾವಿಯಲ್ಲಿ,
ಇನ್ನೊಬ್ಬರು ಮಮದಾಪುರದಲ್ಲಿ ನೌಕರಿ ಮಾಡ್ತಾರ್
ಇವರು ನನ್ನ ಷಡ್ಕ

ಷಡ್ಕ ಸಹೋದರರಲ್ಲಿ ನಿಕಟತ್ವ ಕಡಿಮೆ, ಏಕೆಂದರೆ ಹೆಂಡತಿಯ ಸಹೋದರಿಯರ ಜೊತೆಗೆ ವೈವಾಹಿಕ ಸಂಬಂಧ ಇರುವುದರಿಂದ ಒಂದು ಬಗೆಯ ಸಂಕೋಚವಿರುತ್ತದೆ. ಷಡ್ಕನಿಗೆ ತನ್ನ ಹೆಂಡತಿಯ ಅಕ್ಕ ತಂಗಿಯರ ಜೊತೆಗೆ ಸಲಿಗೆಯಿದ್ದರೆ ಮುಂದೆ ಆಗಬಹುದಾದ ಲೈಂಗಿಕ ಸಂಬಂಧವನ್ನು ಸೂಚಿಸುತ್ತದೆ. ವಿನೋದ ಸಂಬಂಧಗಳು ವ್ಯಕ್ತಿಗಳ ನಡುವೆ ಸೌಹಾರ್ದತೆಯನ್ನು ಲೈಂಗಿಕ ಸಂಬಂಧದ ಸಾಧ್ಯತೆಯನ್ನು ಸೂಚಿಸುತ್ತದೆ. ‘ಷಡ್ಡಕ್ ನೆಂಟನಲ್ಲ, ಮೊಡ್ಡ ಆಯುಧವಲ್ಲ’ ಎಂಬ ಗಾದೆ ಇದನ್ನೇ ಪ್ರತಿಧ್ವನಿಸುತ್ತದೆ. ಷಡ್ಡಕರಿಗೆ ತಮ್ಮ ಒಡಹುಟ್ಟಿದ ಸಹೋದರರ ಜೊತೆಗೆ ನಿಕಟತ್ವ ಹೆಚ್ಚು. ಷಡ್ಕ, ಸಡ್ಕ, ಸಡ್ಡುಕ, ಸಡ್ಡುಗ ಎಂಬ ರೂಪಗಳು ಪ್ರಾಚೀನ ಕಾವ್ಯಗಳಲ್ಲಿ ದೊರೆಯುತ್ತವೆ. ಇತ್ತೀಚೆಗೆ ಈ ರೂಪದ ಬಳಕೆ ಕಡಿಮೆಯಾಗುತ್ತಿದೆ. ಅದರ ಬದಲಾಗಿ ಇಂಗ್ಲಿಷಿನ ‘ಕೋ ಬ್ರದರ್’ ಎಂಬ ಪದವೇ ಹೆಚ್ಚು ಬಳಕೆಯಲ್ಲಿದೆ.

ಕೊನೆಟಿಪ್ಪಣಿ

ಅಮ್ಮಅವ್ವ: ಸಾಮಾನ್ಯವಾಗಿ ತಾಯಿ, ಅಜ್ಜಿ ಹಾಗೂ ಗೌರವಾರ್ಹವಾದ ವ್ಯಕ್ತಿಯನ್ನು ಕುರಿತು ಮಾತನಾಡುವಾಗ ಅವರ ಹೆಸರಿನ ಕೊನೆಗೆ ಸೇರಿಸಿ ಅಥವಾ ಸ್ವತಂತ್ರವಾಗಿ ಈ ರೂಪಗಳನ್ನು ಬಳಸುವುದುಂಟು. (ಪಾರ್ವತಮ್ಮ, ದುಂಡಮ್ಮ, ಚನ್ನಮ್ಮ). ಆದರೆ ಪ್ರದೇಶದಿಂದ ಪ್ರದೇಶಕ್ಕೆ ಈ ಸಂಬಂಧವಾಚಕಗಳ ಪ್ರಸಾರ, ಅವು ಪಡೆಯುವ ಅರ್ಥಛಾಯೆ ಹಾಗೂ ಅವುಗಳ ಹರಿದಾಟ ತುಂಬ ಸ್ವಾರಸ್ಯಕರವಾಗಿವೆ.

ಅ. ಹಳಗನ್ನಡದಲ್ಲಿ ‘ಅಮ್ಮ’ ಎಂಬುದು ತಂದೆಯನ್ನು ಸೂಚಿಸುತ್ತಿತ್ತು. ಆದರೆ ನಡುಗನ್ನಡದ ಕಾಲಕ್ಕೆ ‘ಅಮ್ಮ’ ಎಂಬುದು ತಾಯಿಗೆ ಅನ್ವಯಿಸುತ್ತದೆ. ತುಳು ಹೊರತುಪಡಿಸಿ ನೆರೆಯ ದ್ರಾವಿಢ ಭಾಷೆಗಳಲ್ಲಿ ‘ಅಮ್ಮ’ ಎಂಬುದು ತಾಯಿಯನ್ನು ಸೂಚಿಸುತ್ತದೆ. ತುಳುವಿನಲ್ಲಿ ಮಾತ್ರ ಇಂದಿಗೂ ‘ಅಮ್ಮೆ’ ಎಂದರೆ ‘ತಂದೆ’, ‘ಅಪ್ಪೆ ‘ ಅಂದರೆ ‘ತಾಯಿ’ ಎಂದರ್ಥ. ಹಳೆ ಮೈಸೂರಿನ ಕೆಲವು ಪ್ರದೇಶಗಳ ಕಡೆಗೆ ಗಂಡು ಮಕ್ಕಳನ್ನು ‘ಅಮ್ಮ’ ಎಂದೇ ಸಂಬೋಧಿಸುವುದುಂಟು. (ಏನಮ್ಮ ಹೇಗಿದ್ದೀಯಾ?)

ಆ. ಹಳಗನ್ನಡದಲ್ಲಿ ‘ಅಮ್ಮ’ ತಂದೆಯನ್ನು ಸೂಚಿಸುತ್ತಿದ್ದರೆ ತಾಯಿಯನ್ನು ಹೇಗೆ ಕರೆಯುತ್ತಿದ್ದರು? ಕಿತ್ತೂರು ಕರ್ನಾಟಕದಲ್ಲಿ ಬಳಕೆಯಲ್ಲಿರುವ ‘ಬೇ’ ದ ಮೂಲರೂಪ ‘ಅಬ್ಬೆ’ಯೆಂಬುದು ಆಗ ತಾಯಿ ಎಂಬರ್ಥದಲ್ಲಿ ಬಳಕೆಯಾಗುತ್ತಿತ್ತು. ಇಂದು ಕಿತ್ತೂರು ಕರ್ನಾಟಕದಲ್ಲಿ ‘ಬೇ’ ಎಂಬುದು ಸ್ತ್ರೀಯರಿಗೆ ಗೌರವ ಸೂಚಕವಾಗಿ ಬಳಕೆಯಾಗುತ್ತದೆ. ‘ಯಮ್ಮಾಬೇ’ ‘ಯವ್ವಾಬೇ’ ‘ಯತ್ತಿಬೇ’ ‘ಸಾಕ ಬೇ’.

ಇ. ಕಿತ್ತೂರು ಕರ್ನಾಟಕದಲ್ಲಿ ಇನ್ನೊಂದು ವೈಶಿಷ್ಟ್ಯತೆಯನ್ನು ಕಾಣುತ್ತೇವೆ. ಹಳೇ ಮೈಸೂರು ಪ್ರದೇಶದಲ್ಲಿ ‘ಅಮ್ಮ’ ಎಂಬುದು ತಾಯಿ ಎಂಬರ್ಥವನ್ನು ಸಂಪಾದಿಸಿದರೂ ಕಿತ್ತೂರು ಕರ್ನಾಟಕದಲ್ಲಿ ಅದು ತಾಯಿ ಎಂಬರ್ಥದ ಬದಲಿಗೆ ‘ಅಜ್ಜಿ’ ಎಂಬರ್ಥವನ್ನು ಸೂಚಿಸುತ್ತದೆ. (ಇದರ ಹಳಗನ್ನಡ ರೂಪ ‘ಅಚ್ಚಿ’, ‘ಕಾಡಚ್ಚಿ’ ಮುಂತಾದವು), ಯಾವ ಕಾರಣದಿಂದ ಅದು ಹೀಗೆ ಅರ್ಥಾಂತರ ಹೊಂದಿತೋ ಹೇಳುವುದು ಕಷ್ಟ. ಆದರೆ ಆ ಪ್ರದೇಶದ ಬ್ರಾಹ್ಮಣ ಸಮುದಾಯದಲ್ಲಿ ಮಾತ್ರ ‘ವಿಧವೆ’ ಎಂಬರ್ಥವನ್ನು ಸೂಚಿಸುತ್ತದೆಯೆಂದು ಸಕಾರಣವಾಗಿ ಹೇಳಬಹುದು. ಅಮ್ಮ ಎಂದರೆ ‘ಅಜ್ಜಿ’ (ವಯಸ್ಸಾದವಳು), ವಯಸ್ಸಾದ ಹೆಂಗಸರು ವಿಧವೆಯಾಗಿರುವ ಸಂಭವ ಬಹಳ. ಆದ್ದರಿಂದ ಅಮ್ಮ ಎಂದರೆ ವಿಧವೆ (ಬ್ರಾಹ್ಮಣ ಸಮುದಾಯದಲ್ಲಿ ಮಾತ್ರ ಎಂಬುದನ್ನು ಒತ್ತಿ ಹೇಳಬೇಕು).

ಈ. ಕಲ್ಯಾಣ ಕರ್ನಾಟಕದಲ್ಲಿ ‘ಅಮ್ಮ’ ಎಂದರೆ ತಾತಯಿ. ಆದರೆ ‘ಅವ್ವ’ ಎಂಬುದು ‘ಅಜ್ಜಿ’ ಎಂಬರ್ಥವನ್ನು ಸಂಪಾದಿಸಿದೆ. ಈ ಅರ್ಥಾಂತರ ಹೇಗಾಯಿತು ಎಂಬುದಕ್ಕೆ ಉತ್ತರಿಸುವುದು ಕಷ್ಟ ಸಾಧ್ಯ. ಈ ಎಲ್ಲ ಸಂಬಂಧಸೂಚಕಗಳು ಸಂಬೋಧಿಸುವಾಗ ಹಾಗೂ ಇನ್ನೊಬ್ಬರಿಗೆ ಪರಿಚಯಿಸುವಾಗ ಬಳಕೆಯಾಗುತ್ತವೆ.