ಎಲ್ಲಿಂದಲೋ ಬಂದು ಮತ್ತೆಲ್ಲಿಗೋ ನಡೆವ
ಈ ನನಗೆ ಇದರ ಜತೆ ಯಾವ ಸಂಬಂಧ?
ನಾನು ಇದ್ದೇನೆಂದು ನೀರು ಹರಿಯುವುದಿಲ್ಲ ;
ಹೂವು ಅರಳುವುದಿಲ್ಲ; ಹಕ್ಕಿ ಕೂಗುವುದಿಲ್ಲ.
ಮೊಳೆಯುವುದು, ಬೆಳೆಯುವುದು, ಅಳಿಯುವುದು,
ಯಾವುದೂ ನನ್ನ ಕೇಳುವುದಿಲ್ಲ. ಎಂದೋ
ಯಾರೋ ಕೀ ಕೊಟ್ಟು ಇರಿಸಿದ ಹಾಗೆ ಕ್ರಮ-
ಬದ್ಧವಾಗಿ ತನ್ನ ಪಾಡಿಗೆ ತಾನು ನಡೆಯುತ್ತ-
ದಲ್ಲ? ಇದರೊಡನೆ ನನಗೆ ಎಂಥ ಸಂಬಂಧ?

ಆದರೂ ಹೂವು ಅರಳಿದ ಹೊತ್ತು ಮಗ್ನವಾಗು-
ತ್ತದೆ ಮನಸ್ಸು ಅದರ ಚೆಲುವಿಗೆ ಸೋತು.
ಜತೆಗೆ ಇದ್ದಾರೆಂದು, ನಮ್ಮತಮ್ಮವರೆಂದು
ಪ್ರೀತಿ-ಸ್ನೇಹಗಳಿಂದ ಅವರಿವರ ಜತೆ ಬೆರೆತು
ಪಡೆದುಕೊಳ್ಳುತ್ತೇವೆ ನಮಗೆ ಬೇಕಾದ ಅರ್ಥ.
ಇರುವಷ್ಟು ಹೊತ್ತು ಈ ಲೋಕದಲ್ಲಿ ಆಗ-
ಬಾರದು ನೋಡಿ, ಯಾವುದೂ ವ್ಯರ್ಥ.

ದುಃಖ-ಅವಮಾನ ಸಂಕಟಗಳಲ್ಲಿ ನಾನು
ಒಬ್ಬಂಟಿಯಾಗುತ್ತ್ತೇನೆ. ಅದುವರೆಗು ಜತೆಗೆ
ನಿಂತವರೊಬ್ಬರೂ ಇರದ ದ್ವೀಪವಾಗುತ್ತೇನೆ.
ಹಬ್ಬಿರುವ ಮಬ್ಬಿನ ಮಧ್ಯೆ ಒಬ್ಬನೇ ಕೂತು
ಯೋಚಿಸುತ್ತೇನೆ : ಯಾಕಿಷ್ಟು ದುಷ್ಟರಾಗು-
ತ್ತಾರೆ ಜನ, ಕೊಂಬೆಗಳ ಕಡಿದು, ಹೂವುಗಳ
ಹೊಸಕಿ, ಹಕ್ಕಿಗಳ ಕೊರಳು ಹಿಸುಕುತ್ತಾರೆ
ನಿಷ್ಕಾರಣ ? ಈ ಹೊತ್ತಿನಲ್ಲಿ ಮತ್ತೆ ಕಾಡುವುದು
ಪ್ರಶ್ನೆ : ಈ ಇವರಿಗೂ ನನಗೂ ಏನು ಸಂಬಂಧ ?