ಭಾಷೆಗೆ ವ್ಯಾಖ್ಯಾನ ಹಲವು. ಭಾಷೆಯ ಲಕ್ಷಣಗಳನ್ನು ಹೇಳುವಾಗ ಭಾಷೆಯೊಂದು ಸಂವಹನ ವ್ಯವಸ್ಥೆ ಎಂದು ಸೂಚಿಸುವುದುಂಟಷ್ಟೆ. ಸಂವಹನ ವೆಂದರೆ ತಲುಪಿಸುವುದು ಎಂದರ್ಥ. ಈ ಸಂವಹನಕ್ಕಾಗಿ ನಾವು ಹಲವಾರು ವ್ಯವಸ್ಥೆಗಳನ್ನು ರೂಪಿಸಿಕೊಂಡಿದ್ದೇವೆ. ಸಂವಹನದ ಉದ್ದೇಶ, ಮಾಧ್ಯಮ, ಸಂದರ್ಭ, ಭಾಗೀದಾರರು ಮುಂತಾದ ಸಂಗತಿಗಳನ್ನು ಅವಲಂಬಿಸಿ ಬೇರೆ ಬೇರೆ ಸಂವಹನ ವ್ಯವಸ್ಥೆಗಳು ರೂಪುಗೊಂಡಿವೆ. ಈ ವ್ಯವಸ್ಥೆಗಳಲ್ಲಿ ಭಾಷೆಯೂ ಒಂದು. ಮನುಷ್ಯರಲ್ಲಿ ಭಾಷೆಯಲ್ಲದೆ ಇನ್ನೂ ಹಲವು ಸಂವಹನ ವ್ಯವಸ್ಥೆ ಗಳಿವೆ. ನಮಗೀಗ ತಿಳಿದಿರುವಂತೆ ನಮ್ಮ ಪರಿಸರದ ಮಾನವೇತರ ಜಗತ್ತಿನಲ್ಲಿ ಮುಖ್ಯವಾಗಿ ಪ್ರಾಣಿಪ್ರಪಂಚದಲ್ಲಿ ಕೂಡ  ಸಂವಹನ ವ್ಯವಸ್ಥೆಗಳಿವೆ. ಬೇರೆ ಬೇರೆ ಸಂವಹನ ವ್ಯವಸ್ಥೆಗಳನ್ನು ಹೋಲಿಸಿ ಅವುಗಳ ನಡುವೆ ಇರುವ ಸಾಮ್ಯ ವ್ಯತ್ಯಾಸಗಳನ್ನು ಗುರುತಿಸುವುದು ಅವಶ್ಯಕ. ಇದರಿಂದ ಭಾಷೆಯೆಂಬ ಸಂವಹನ ವ್ಯವಸ್ಥೆಗೂ ಇತರ ಸಂವಹನ ವ್ಯವಸ್ಥೆಗಳಿಗೂ ಇರುವ ಸಂಬಂಧಾಂತರಗಳು ಗೊತ್ತಾಗುತ್ತವೆ. ಮಾನವ ಭಾಷೆಯ ವೈಶಿಷ್ಟ್ಯಗಳನ್ನು ತಿಳಿಯಲು ಇದೊಂದು ಉಪಯುಕ್ತ ವಿಧಾನ.

ಚಾರ್ಲ್ಸ್ ಎಫ್. ಹಾಕೆಟ್ ಈ ಸಮಸ್ಯೆಯನ್ನು ಬಿಡಿಸಲು ಒಂದು ಅಧ್ಯಯನ ವಿಧಾನವನ್ನು ರೂಪಿಸಿದನು. ಈ ವಿಧಾನದಲ್ಲಿ ಮೊದಲು ಎಲ್ಲ ಸಂವಹನ ವ್ಯವಸ್ಥೆಗಳಿಗೂ ಇರಬಹುದಾದ ಸಾಮಾನ್ಯ ಲಕ್ಷಣಗಳನ್ನು ಗುರುತಿಸುವರು. ಅನಂತರ ಪ್ರತಿಯೊಂದು ಸಂವಹನ ವ್ಯವಸ್ಥೆಯನ್ನೂ ಪರಿಶೀಲಿಸಿ ಅದರಲ್ಲಿ ಈ ಸಾಮಾನ್ಯ ಲಕ್ಷಣಗಳು ಇವೆಯೇ ಇಲ್ಲವೋ ಎಂಬುದನ್ನು ಕಂಡುಕೊಳ್ಳುವರು. ಇದರಿಂದಾಗಿ ಮಾನವ ಭಾಷೆಯಲ್ಲಿರುವ ಸಾಮಾನ್ಯ ಸಂವಹನ ವ್ಯವಸ್ಥೆಯ ಲಕ್ಷಣಗಳು ತಿಳಿಯುವ ಜೊತೆಗೆ ಇತರ ಸಂವಹನ ವ್ಯವಸ್ಥೆಗಳಿಂದ ಭಾಷೆ ಹೇಗೆ ಬೇರೆ ಎನ್ನುವುದೂ ತಿಳಿಯುತ್ತದೆ ಹಾಕೆಟ್ ರೂಪಿಸಿದ ಸಾಮಾನ್ಯ ಲಕ್ಷಣಗಳು ಹದಿಮೂರು.

1. ಉಚ್ಚಾರಣೆ / ಶ್ರವಣ ಮಾಧ್ಯಮ : ಧ್ವನಿಯನ್ನು ಉಚ್ಚರಿಸಿ ಕಿವಿಯಿಂದ ಕೇಳಿ ಸಂವಹನ ಸಾಧಿಸುವ ವಿಧಾನ. ಇದಲ್ಲದೆ ಇನ್ನಿತರ ಇಂದ್ರಿಯಗಳನ್ನೂ ಬಳಸುವುದಿದೆ. ಉದಾ: ಕಣ್ಣು.

2. ಪ್ರೇಷಣೆ ಮತ್ತು ಗ್ರಹಣ : ಏನನ್ನೂ ಸಂವಹನ ಮಾಡಬೇಕಾಗಿದೆಯೋ ಅದನ್ನು ವ್ಯವಸ್ಥೆಯ ಒಂದು ತುದಿಯಿಂದ ರವಾನಿಸುವರು. ಹೀಗೆ ರವಾನೆ ಗೊಂಡದ್ದನ್ನು ವ್ಯವಸ್ಥೆಯ ಇನ್ನೊಂದು ತುದಿಯಲ್ಲಿ ಗ್ರಹಿಸುವರು. ಮಾದರಿ ಗಾಗಿ ರೇಡಿಯೋ ಸಂಕೇತಗಳ ಪ್ರೇಷಣೆ ಮತ್ತು ಗ್ರಹಣಗಳನ್ನು ನೋಡ ಬಹುದು.

3. ಶೀಘ್ರನಾಶ : ಸಂವಹನೆಯ ವ್ಯವಸ್ಥೆಯಲ್ಲಿ ರವಾನೆಯಾಗುವ ಸಂದೇಶಗಳು ಕೆಲವು ವ್ಯವಸ್ಥೆಗಳಲ್ಲಿ ಶೀಘ್ರವಾಗಿ  ನಾಶವಾಗುತ್ತವೆ. ನಿರ್ಜನ ಪ್ರದೇಶದಲ್ಲಿ ನಾವು ಮಾತಾಡಿದರೆ ಮಾತಿನ ಧ್ವನಿಗಳನ್ನು ಕೇಳಿಸಿಕೊಳ್ಳುವವರು ಯಾರೂ ಇರುವುದಿಲ್ಲ. ಯಾರಾದರೂ ಅಲ್ಲಿಗೆ ಬರುವವರೆಗೂ ಈ ಧ್ವನಿಗಳು ಅಲ್ಲಿ ಉಳಿದಿರುವುದಿಲ್ಲ. ಮತ್ತೆ ಕೆಲವು ಸಂವಹನ ವ್ಯವಸ್ಥೆಗಳಲ್ಲಿ ಹೀಗೆ ನಾಶವಾಗದೆ ಸಾಕಷ್ಟು ದೀರ್ಘಕಾಲ ಉಳಿಯುವ ಸಾಧ್ಯತೆಗಳಿರುತ್ತವೆ. ಬರವಣಿಗೆ ಅಂಥ ದೊಂದು ವ್ಯವಸ್ಥೆ.

4. ಪರಸ್ಪರ ಅದಲು ಬದಲಾಗುವಿಕೆ : ಕೆಲವು ಸಂವಹನ ವ್ಯವಸ್ಥೆಯಲ್ಲಿ ಎರಡು ತುದಿಗಳು ತಮ್ಮ ಕಾರ್ಯಗಳನ್ನು ಅದಲು ಬದಲು ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ. ನಾವು ಮಾತಾಡಲೂ ಬಲ್ಲೆವು (ಪ್ರೇಷಣೆ). ಕೇಳಲೂ ಬಲ್ಲೆವು (ಗ್ರಹಣ). ಈ ಸಾಧ್ಯತೆ ಎಲ್ಲ ಸಂವಹನ ವ್ಯವಸ್ಥೆಗಳಲ್ಲೂ ಇರುವುದಿಲ್ಲ. ಗಂಡು ನವಿಲು ಕುಣಿದು ತನ್ನ ಪ್ರಣಯಾಕಾಂಕ್ಷೆಯನ್ನು ಹೆಣ್ಣು ನವಿಲಿಗೆ ತಿಳಿಸುವುದು. ಆದರೆ ಹೆಣ್ಣುನವಿಲು ಈ ಕೆಲಸವನ್ನು ಮಾಡಲಾರದು. ಅದು ಬೇರೆಯೆ ವಿಧಾನವನ್ನು ಅನುಸರಿಸಬೇಕಾಗುತ್ತದೆ.

5. ಸ್ವಯಂಗ್ರಹಣ : ಕೆಲವು ಸಂವಹನ ವ್ಯವಸ್ಥೆಗಳಲ್ಲಿ ಪ್ರೇಷಣೆಯ ತುದಿಯಲ್ಲಿಯೇ ಗ್ರಹಣಕಾರ್ಯವೂ ಸಾಧ್ಯ. ನಾವು ಮಾತಾಡಿದ್ದನ್ನು ಬೇರೆಯವರು ಕೇಳುವಂತೆ ನಾವೂ ಕೇಳುತ್ತಿರುತ್ತೇವೆ. ಈ ಸಾಧ್ಯತೆ ಎಲ್ಲ ಸಂವಹನ ವ್ಯವಸ್ಥೆಗಳಲ್ಲೂ ಇರುವುದಿಲ್ಲ.

6. ವಿಶೇಷತೆ : ಭಾಷಾ ಸಂವಹನ ವ್ಯವಸ್ಥೆಯೊಂದು ಸ್ವಯಂಪೂರ್ಣ ವ್ಯವಸ್ಥೆ. ಅದು ಬೇರೊಂದು ವ್ಯವಸ್ಥೆಯ ಉಪವಸ್ತುವಲ್ಲ. ಅಂದರೆ ಇಲ್ಲಿ ನಡೆಯುವ ಪ್ರತಿಯೊಂದು ಕಾರ್ಯವೂ ಸಂವಹನದ ಉದ್ದೇಶಕ್ಕಾಗಿಯೇ ರೂಪುಗೊಂಡಿರು ತ್ತವೆ. ಬೇರೆ ಯಾವುದೋ ಮುಖ್ಯ ಉದ್ದೇಶಕ್ಕಾಗಿಯೇ ರೂಪುಗೊಂಡು ಸಂವಹನದ ಉದ್ದೇಶವನ್ನು ಪ್ರಾಸಂಗಿಕವಾಗಿ ಪೂರೈಸುವುದಿಲ್ಲ. ಹೀಗಲ್ಲದೆ ಬೇರೊಂದು ವ್ಯವಸ್ಥೆಯೊಡನೆ ಹೊಂದಿಕೊಂಡಿರುವ ಇತರ ಬಗೆಯ ಸಂವಹನ ವ್ಯವಸ್ಥೆಗಳೂ ಇವೆ.

7. ಅರ್ಥಪೂರ್ಣತೆ : ಭಾಷೆಯಲ್ಲಿ ಧ್ವನಿಗಳಿಗೆ ಅರ್ಥವೆಂಬುದಿರುತ್ತದೆ. ಧ್ವನಿ ಮತ್ತು ಅರ್ಥಗಳ ಸಂಬಂಧ ಸಂಕೀರ್ಣವಾದುದು. ಆದರೆ ಆ ಸಂವಹನ ವ್ಯವಸ್ಥೆಯಲ್ಲಿ ಭಾಗಿಗಳಾಗುವವರಿಗೆ ಆ ಸಂಬಂಧ ತಿಳಿದಿರುತ್ತದೆ. ಅಲ್ಲದೆ ಆ ಬಗ್ಗೆ ಒಪ್ಪಿಗೆಯೂ ಇರುತ್ತದೆ. ಧ್ವನಿಗಳು ತಮಗೆ ತಾವು ಸ್ವಯಂಪೂರ್ಣ. ಅರ್ಥವನ್ನು ನಾವು ಆರೋಪಿಸಿಸುತ್ತೇವೆ. ಕೆಲವು ಸಂವಹನಗಳಲ್ಲಿ ಅರ್ಥವನ್ನು ಸೂಚಿಸುವ ಸಂಕೇತವು ಅರ್ಥದ ಭಾಗವೇ ಆಗಿರುತ್ತದೆ. ಕಾಲೆಳೆದುಕೊಂಡು ನಡೆಯುವುದನ್ನು ಕಂಡಾಗ ಆಯಾಸವಾಗಿದೆ ಎಂದು ಅರ್ಥಮಾಡಿಕೊಳ್ಳುತ್ತೇವೆ. ಕಾಲೆಳೆಯುವುದು ಪ್ರತ್ಯೇಕ ಕ್ರಿಯೆಯಲ್ಲ. ಅದು ಆಯಾಸವಾಗಿರುವುದರ ಅಂಗವೇ ಆಗಿದೆ. ಇನ್ನೊಂದು ಉದಾಹರಣೆ ಶಿಲುಬೆ. ಇದು ಯಾವ ಅರ್ಥವಿನ್ನು ಹೇಳುವುದೋ ಅದರ ಅಂಶವೇ ತಾನಾಗಿದೆ.

8. ಯಾದೃಚ್ಚಿಕತೆ : ಭಾಷೆಯಲ್ಲಿ ಧ್ವನಿಗಳ ಸ್ವರೂಪಕ್ಕೆ ಮತ್ತು ಅವು ಪ್ರತೀತಿ ಗೊಳಿಸುವ ಅರ್ಥಕ್ಕೆ ಯಾವ ನೇರ ಸಂಬಂಧವೂ ಇರುವುದಿಲ್ಲ. ಆ ಧ್ವನಿಗಳನ್ನು ವೇಗವಾಗಿ ಉಚ್ಚರಿಸಲಿ ಅತಿ ನಿಧಾನವಾಗಿ ಉಚ್ಚರಿಸಲಿ ಅರ್ಥದಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ. ಕೆಲವು ಇನ್ನಿತರ ಸಂವಹನಗಳಲ್ಲಿ ಸಂಕೇತಗಳ ಸ್ವರೂಪದಲ್ಲಿ ವ್ಯತ್ಯಾಸಗಳಾದರೆ ಅರ್ಥದಲ್ಲೂ ವ್ಯತ್ಯಾಸಗಳಾಗುತ್ತವೆ. ಉದಾಹರಣೆಗೆ ಜೇನ್ನೊಣಗಳು ನರ್ತಿಸುವ ಮೂಲಕ ಮಕರಂದವು ಜೇನು ಗೂಡಿನಿಂದ ಎಷ್ಟು ದೂರವಿದೆಯೆಂದು ತಿಳಿಸುತ್ತವೆ. ಈ ನರ್ತನದ ವೇಗದಲ್ಲಿ ಹೆಚ್ಚು ಕಡಿಮೆಯಾಗುವುದು. ಈ ವ್ಯತ್ಯಾಸದ ಮೂಲಕ ಮಕರಂದವಿರುವ ಜಾಗದ ದೂರವನ್ನು ತಿಳಿಸುತ್ತವೆ. ಅಂದರೆ ಇಲ್ಲಿ ಸಂಕೇತ ಸ್ವರೂಪದಲ್ಲಿ ಆಗುವ ವ್ಯತ್ಯಾಸಕ್ಕೆ ಅರ್ಥವನ್ನು ಬದಲಾಯಿಸುವ ಸಾಮರ್ಥ್ಯವಿದೆ.

9. ಬಿಡಿಬಿಡಿಯಾಗಿರುವಿಕೆ : ಮಾನವ ಭಾಷೆಯ ಧ್ವನಿಗಳು ಪ್ರತ್ಯೇಕ ಘಟಕಗಳ ಸರಣಿಯಾಗಿದೆ. ಎಷ್ಟೇ ಉದ್ದದ ಮಾತಿನ ಸರಣಿಯಲ್ಲಾದರೂ ಬಿಡಿ ಬಿಡಿ ಧ್ವನಿಗಳನ್ನು ತೆಗೆದು ತೋರಿಸುವುದು ಸಾಧ್ಯ. ಇತರ ಸಂಕೇತ ವ್ಯವಸ್ಥೆಗಳಲ್ಲಿ ಇದು ಅಸಾಧ್ಯ. ಗುರುಗುಟ್ಟುವ ನಾಯಿ ತನ್ನ ಅಸಮಾಧಾನವನ್ನು ತಿಳಿಸುವುದೆ ನ್ನೋಣ. ಅಲ್ಲಿ ಗುರುಗುಟ್ಟುವ ಧ್ವನಿ ಸರಣಿಯನ್ನು ಇಡಿಯಾಗಿಯೇ ಪರಿಗಣಿಸ ಬೇಕಾಗುತ್ತದೆ.

10. ದೇಶಕಾಲ ಭಗ್ನತೆ : ಮಾನವ ಭಾಷೆಯಲ್ಲಿ ಕಣ್ಣೆದುರಿಗೆ ಇರದ ಎಲ್ಲೋ ಎಂದೋ ನಡೆದ, ನಡೆಯಬಹುದಾದ ನಡೆಯಲಾಗದ ಸಂಗತಿಗಳನ್ನು ಕುರಿತು ಮಾತಾಡಬಹುದು. ಈ ಸಾಧ್ಯತೆ ಇತರ ಎಲ್ಲ ಸಂವಹನ ವ್ಯವಸ್ಥೆಗಳಲ್ಲೂ ಇರುವುದಿಲ್ಲ. ಉದಾ: ಇಂದ್ರಿಯ ಗೋಚರವಲ್ಲದ ಪ್ರಚೋದಕಗಳಿಗೆ ಪ್ರಾಣಿಗಳು ಪ್ರತಿಕ್ರಿಯಿಸುವುದು ಅಪರೂಪ. ಆಹಾರ ಎದುರಿದ್ದಾಗ ಮಾತ್ರ ನಾಯಿ ಅದನ್ನು ಹಾತೊರೆಯುವ ಸೂಚನೆಗಳನ್ನು ನೀಡಬಲ್ಲುದು.

11. ಸಮೃದ್ದಿ : ಮಾನವ ಭಾಷೆಯಲ್ಲಿ ಸೀಮಿತ ಸಂಖ್ಯೆಯ ಸಂಕೇತಗಳಿವೆ. ಅವುಗಳನ್ನು ಬಗೆಬಗೆಯಾಗಿ ಸಂಯೋಜಿಸಲು ಸಾಧ್ಯ. ಆ ಮೂಲಕ ಹೊಸ ಅರ್ಥಗಳನ್ನು ರೂಪಿಸಬಹುದು. ಹಾಗಾಗಿ ಮಾನವ ಭಾಷೆಯ ಸಂವಹನ ಸಾಮರ್ಥ್ಯಕ್ಕೆ ಮಿತಿಗಳೇ ಇಲ್ಲ. ಆದರೆ ಎಲ್ಲ ಸಂವಹನ ವ್ಯವಸ್ಥೆಗಳಿಗೂ ಈ ಸಾಧ್ಯತೆಯಿಲ್ಲ. ಅವುಗಳ ಉದ್ದೇಶ ಮತ್ತು ಸಾಮರ್ಥ್ಯಗಳು ಸೀಮಿತ.

12. ಕಲಿಯುವಿಕೆ : ಮಾನವ ಭಾಷೆ ಜನ್ಮದತ್ತವಲ್ಲ. ಅದನ್ನು ಎಲ್ಲ ಮಾನವರೂ ಕಲಿಕೆಯಿಂದ ಪಡೆಯುತ್ತಾರೆ. ಭಾಷಾ ಬೋಧನೆ ಮತ್ತು ಕಲಿಕೆ ಇವೆರಡೂ ಮಾನವ ಭಾಷೆಯಲ್ಲಿ ಸಾಧ್ಯ. ಇತರ ಕೆಲವು ಪ್ರಾಣಿ ಸಂವಹನ ವ್ಯವಸ್ಥೆಗಳು ಹುಟ್ಟಿನಿಂದ ಬರುತ್ತವೆ, ಅವನ್ನು ಕಲಿಯಬೇಕಾಗಿಲ್ಲ. ಕಲಿಯಲು ಸಾಧ್ಯವೂ ಇಲ್ಲ.

13. ದ್ವಿಸ್ತರ ರಚನೆ : ಮಾವನ ಭಾಷೆಯಲ್ಲಿ ಮಾತ್ರ ಧ್ವನಿಸ್ತರ ಮತ್ತು ಅರ್ಥಸ್ತರ ಎಂಬ ಎರಡೂ ರಚನೆಗಳಿರುತ್ತವೆ. ಧ್ವನಿ ಸ್ತರದ ಘಟಕಗಳ ಒಂದು ರಚನೆಯಿಂದ ಒಂದು ಅರ್ಥ ಮೂಡುವುದು. ಅವೇ ಘಟಕಗಳ ಇನ್ನೊಂದು ರಚನೆ ಬೇರೊಂದು ಅರ್ಥವನ್ನು ನೀಡಲು ಸಾಧ್ಯ. ಸರಳ ಉದಾಹರಣೆ ರಾಮ ಪದದಲ್ಲಿ ರ್, ಆ, ಮ್ ಮತ್ತು ಅ ಎಂಬ ಧ್ವನಿಗಳು ಇವೆ. ಇವೇ ಧ್ವನಿಗಳನ್ನು ಬೇರೊಂದು ರೀತಿಯಲ್ಲಿ ಜೋಡಿಸಿದಾಗ ಮಾರ ಎಂದಾಗುತ್ತದೆ. ರಾಮ, ಮಾರ ಪದಗಳ ಅರ್ಥವೇ ಬೇರೆ. ಪ್ರಾಣಿ ಸಂವಹನ ಗಳಲ್ಲಿ ಸಂಕೇತಗಳನ್ನು ಘಟಕಗಳನ್ನಾಗಿ ಒಡೆದು ಮರು ಜೋಡಣೆಯಿಂದ ಸಂಪೂರ್ಣವಾಗಿ ಬೇರೆಯ ಅರ್ಥವನ್ನು ಪ್ರಕಟಿಸಲು ಸಾಧ್ಯವಾಗುವುದಿಲ್ಲ.

ಈ ಮೊದಲೇ ಹೇಳಿದಂತೆ ಮಾನವರು ಭಾಷೆಯಲ್ಲದೆ ಬೇರೆ ಸಂವಹನ ವ್ಯವಸ್ಥೆಗಳನ್ನು ಬಳಸುತ್ತಾರೆ. ಪ್ರಾಣಿಗಳು ತಮ್ಮದೇ ಆದ ಸಂವಹನ ವ್ಯವಸ್ಥೆ ಗಳನ್ನು ಹೊಂದಿವೆ. ಕೀಟ ಜಗತ್ತಿನ ಸಂವಹನ ವ್ಯವಸ್ಥೆಗಳು ಸಾಕಷ್ಟು ಸಂಕೀರ್ಣ ವಾಗಿವೆ. ಮಾನವ ಭಾಷೆಗಿಂತ ಅವು ಭಿನ್ನವಾಗಿವೆ ಎಂದ ಮಾತ್ರಕ್ಕೆ ಸರಳ ವಾಗಿವೆಯೆಂದು ಹೇಳುವುದು ಅವರಸದ ತೀರ್ಮಾನ. ಕೀಟಗಳಲ್ಲಿ ಜೇನ್ನೊಣಗಳು ಹೊಂದಿರುವ ಸಂವಹನ ಕ್ರಮ ಹಲವು ಅಧ್ಯಯನಗಳಿಗೆ ಕಾರಣವಾಗಿವೆ. ಆಸ್ಟ್ರಿಯಾ ದೇಶದ ಕಾರ್ಲ್‌ವಾನ್ ಫ್ರಿಶ್ಚ್ ಜೇನ್ನೊಣಗಳ ಸಂವಹನ ವ್ಯವಸ್ಥೆ ಯನ್ನು ಸಮಗ್ರವಾಗಿ ವಿವರಿಸಿದ್ದಾನೆ. ಜೇನು ದಂಡಿನಲ್ಲಿ ಕೆಲವು ನೊಣಗಳು ಮುಂದಾಗಿ ಹೋಗಿ ಪರಿಸರದಲ್ಲಿ ಸುತ್ತಾಡಿ ಎಲ್ಲೆಲ್ಲಿ ಮಕರಂದವಿದೆ ಎಷ್ಟು ಪ್ರಮಾಣದಲ್ಲಿದೆ ಎಂದು ತಿಳಿದುಕೊಳ್ಳುತ್ತವೆ. ಈ ಮಾಹಿತಿಯನ್ನು, ಹಿಂದಿರುಗಿ ಬಂದು ಮಕರಂದ ಸಂಗ್ರಹಿಸುವ ಜೇನ್ನೊಣಗಳಿಗೆ ತಿಳಿಸಲು ಅವುಗಳೆದುರು ನರ್ತಿಸುತ್ತವೆ. ಈ ನರ್ತನದ ಚಲನೆ, ಗತಿ, ವೇಗ ಇವೆಲ್ಲಕ್ಕೂ ನಿರ್ದಿಷ್ಟ ಅರ್ಥಗಳಿವೆ. ನರ್ತಿಸಿ ಮಕರಂದ ಎಷ್ಟು ದೂರದಲ್ಲಿದೆ ಹಾಗೂ ಎಷ್ಟು ಪ್ರಮಾಣ ದಲ್ಲಿದೆ ಎನ್ನುವುದನ್ನು ಸಂಗ್ರಾಹಕ ಜೇನ್ನೊಣಗಳಿಗೆ ತಿಳಿಸುತ್ತವೆ. ಮಕರಂದ ಹತ್ತಿರದಲ್ಲೇ ಇದ್ದರೆ ನೊಣಗಳು ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಸುತ್ತುತ್ತಾ ವೃತ್ತಾಕಾರವಾಗಿ ನರ್ತಿಸುತ್ತವೆ. ದೂರದಲ್ಲಿದ್ದರೆ ನರ್ತನದ ಪರಿ ಬೇರೆ. ಒಂದು ರೇಖೆಯಲ್ಲಿ ಮೊದಲು ಚಲಿಸಿ ಮತ್ತೆ ಮೊದಲಿನ ಬಿಂದುವಿಗೆ ಹಿಂದಿರುಗುತ್ತದೆ. ಈ ರೇಖೆ ಮಕರಂದವಿರುವ ದಿಕ್ಕನ್ನು ತೋರಿಸುತ್ತದೆ. ಹೀಗೆ ಚಲಿಸುವಾಗ ತನ್ನ ಹೊಟ್ಟೆಯ ಭಾಗವನ್ನು ಅಕ್ಕಪಕ್ಕಕ್ಕೆ ತೊನೆಯುವಂತೆ ಮಾಡುತ್ತದೆ. ಒಂದು ಪ್ರಯೋಗವನ್ನು ಮಾಡಿದಾಗ ಈ ನರ್ತನದ ಇನ್ನೊಂದು ಸಂಗತಿಯನ್ನೂ ತಿಳಿಯಲು ಸಾಧ್ಯವಾಯಿತು. ಮಕರಂದವಿರುವ ಪಾತ್ರೆಯೊಂದನ್ನು ಗೂಡಿನಿಂದ 220 ಮೀಟರು ದೂರದಲ್ಲಿ ಇರಿಸಿದ್ದರು. ಅದನ್ನು ನೋಡಿ ಬಂದ ನೊಣಗಳು 30 ಸೆಕೆಂಡುಗಳಲ್ಲಿ 15 ಬಾರಿ ಗರಗರ ಸುತ್ತಿದವು. ಈ ಪಾತ್ರೆಯನ್ನು ಸುಮಾರು 200 ಮೀಟರು ದೂರದಲ್ಲಿ ಇರಿಸಿದರು. ಅದನ್ನು ನೋಡಿ ಬಂದು ಅದೇ ಅವಧಿಯಲ್ಲಿ 11 ಬಾರಿ ಮಾತ್ರ ಸುತ್ತಿದವು. ಈ ಇಂಥ ಪ್ರಯೋಗಗಳಿಂದ ಜೇನ್ನೊಣಗಳು ಮಕರಂದವಿರುವ ದೂರವನ್ನು ಕೂಡ ಸಂಗ್ರಾಹಕ ನೊಣಗಳಿಗೆ ಕರಾರುವಾಕ್ಕಾಗಿ ತಿಳಿಯುವಂತೆ ನರ್ತಿಸುವುದು ಗೊತ್ತಾಯಿತು. ಮಾನವ ಭಾಷೆಯನ್ನು ಹೊರತುಪಡಿಸಿದರೆ ಜೇನ್ನೊಣಗಳ ನರ್ತನದಷ್ಟು ಸಂಕೀರ್ಣ ಸಂವಹನ ವ್ಯವಸ್ಥೆ ಇನ್ನೊಂದು ಇರಲಾರದು.

ಹೀಗೆಯೇ ಇನ್ನಿತರ ಪ್ರಾಣಿಗಳ ಸಂವಹನ ವ್ಯವಸ್ಥೆಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ್ದಾರೆ. ಅವುಗಳಿಗೂ ಮಾನವ ಭಾಷೆಗೂ ಇರುವ ಅಗಾಧ ಅಂತರವೀಗ ಸ್ಪಷ್ಟವಾಗಿದೆ. ಮನುಷ್ಯ ರೂಪಿಸಿಕೊಂಡ ಈ ಸಂಕೀರ್ಣ ವ್ಯವಸ್ಥೆ ಇತರ ಪ್ರಾಣಿಗಳಲ್ಲಿ ಬೆಳೆಯದಿರಲು ಆ ಪ್ರಾಣಿಗಳು ವಿಕಾಸಪಥದಲ್ಲಿ ಹಿಂದುಳಿದಿರುವುದೇ ಕಾರಣವೆಂದು ತಿಳಿದಿದ್ದೆವು. ಹಾಗೆ ನೋಡಿದರೆ ವಾನರ ಹಂತದಿಂದ ಮಾನವ ಹಂತಕ್ಕೆ ಜೀವವಿಕಾಸ ಪಥದಲ್ಲಿ ಆಗಿರುವ ಜಿಗಿತಕ್ಕೆ ಬಹು ಮುಖ್ಯವಾದ ಕಾರಣ ಭಾಷೆಯೆಂಬ ವಾದವೂ ಇದೆ. ಅಂದರೆ ಪ್ರಾಣಿಗಳು ನಮ್ಮ ಭಾಷೆಯಷ್ಟು ಸಂಕೀರ್ಣವಾದ ಸಂವಹನ ವ್ಯವಸ್ಥೆಯನ್ನು ಪಡೆಯಲಾರ ದಷ್ಟು ಅವಿಕಸಿತ ಹಂತದಲ್ಲಿವೆ ಎಂದಾಗುತ್ತದೆ. ಆದರೆ ಮಾನವರಿಗೆ ಅತಿ ನಿಕಟ ಪೂರ್ವಜರಾದ ಚಿಂಪಾಂಜಿಗಳಿಗೆ ಮಾನವ ಭಾಷೆಯನ್ನು ಕಲಿಸಲು ಈಚೆಗೆ ನಡೆಸಿರುವ ಪ್ರಯೋಗಗಳಿಂದ ನಮ್ಮ ತಿಳುವಳಿಕೆಯ ಮಿತಿಗಳು ಗೊತ್ತಾಗಿವೆ. ಪ್ರಾಣಿಗಳು ಭಾಷೆಯಂಥ ಸಂವಹನ ವ್ಯವಸ್ಥೆಯನ್ನು ಹೊಂದಿಲ್ಲ ದಿದ್ದರೂ ಅಂಥ ವ್ಯವಸ್ಥೆಯನ್ನು ಕಲಿಯಲು ನಾವು ತಿಳಿದಷ್ಟು ಅಸಮರ್ಥತೆ ಯನ್ನು ಹೊಂದಿಲ್ಲ.

ಪ್ರಾಣಿಗಳಿಗೆ ಅದರಲ್ಲೂ ಚಿಂಪಾಂಜಿಗಳಿಗೆ ಮಾತುಕಲಿಸಲು ಪ್ರಯೋಗ ಗಳು ನಡೆದಿವೆ. ಚಿಂಪಾಂಜಿಗಳ ಧ್ವನ್ಯಂಗಗಳು ಮಾನವರ ದೇಹದಲ್ಲಿರುವ ಧ್ವನ್ಯಂಗಗಳಷ್ಟು ವಿಕಾಸ ಹೊಂದಿಲ್ಲ. ಆದ್ದರಿಂದ ಅವುಗಳಿಗೆ ‘ಮಾತಾಡು ವುದು’ ಕಷ್ಟ. ಮಾತಾಡಲು ಕಲಿಸುವುದೂ ಕಷ್ಟ. ಈ ಅಂಶವನ್ನು ಮನಗಂಡು ಚಿಂಪಾಂಜಿಗಳಿಗೆ ಮಾತು ಕಲಿಸುವ ಬದಲು ಸಂಕೇತಗಳನ್ನು ಅರ್ಥಮಾಡಿ ಕೊಳ್ಳುವುದನ್ನು ಕಲಿಸಲು ಯೋಜಿಸಿದರು. ಮನುಷ್ಯ ರೂಪಿಸಿಕೊಂಡ ಹಲವು ಸಂವಹನ ವ್ಯವಸ್ಥೆಗಳಲ್ಲಿ ಅಂಗಸಂಜ್ಞಾ ವ್ಯವಸ್ಥೆಯೂ ಒಂದಾಗಿದೆ. ಇದು ಭಾಷೆಯನ್ನು ಆಧರಿಸಿದ ವ್ಯವಸ್ಥೆ. ಮೂಕರು ಕಿವುಡರು ಧ್ವನಿಸಂಕೇತಗಳ ಉತ್ಪಾದನೆಗೆ ಹಾಗೂ ಶ್ರವಣಕ್ಕೆ ಅಸಮರ್ಥರು. ಅವರಿಗಾಗಿ ಕೈಬೆರಳುಗಳ ಚಲನವಲನದ ಸಂಜ್ಞಾಭಾಷೆಯನ್ನು ರೂಪಿಸಿದ್ದಾರೆ. ಅವರಿಗಾಗಿ ಕೈಬೆರಳುಗಳ ಚಲನವಲನದ ಸಂಜ್ಞಾಭಾಷೆಯನ್ನು ರೂಪಿಸಿದ್ದಾರೆ. ಕಿವುಡ ಮೂಗರು ತಂತಮ್ಮಲ್ಲಿ ಮತ್ತು ಇತರರೊಡನೆ ‘ಮಾತಾಡಲು’ ಈ ಭಾಷೆ ನೆರವಾಗುತ್ತದೆ. ಚಿಂಪಾಂಜಿಗಳಿಗೆ ಈ ಭಾಷೆಯನ್ನು ಕಲಿಸಲು ಒಂದು ಯೋಜನೆಯನ್ನು ರೂಪಿಸಿದರು. 1966ರಲ್ಲಿ ಮೊದಲಾದ ಇಂಥ ಪ್ರಯೋಗದಲ್ಲಿ ಒಂದು ವರ್ಷ ವಯೋಮಾನದ ಹೆಣ್ಣು ಚಿಂಪಾಂಜಿ ವಶೋಗೆ ಈ ಭಾಷೆಯನ್ನು ಕಲಿಸತೊಡಗಿದರು. ಆ ಚಿಂಪಾಂಜಿ ಕಲಿಕೆಯಲ್ಲಿ ಉತ್ತಮ ಪ್ರಗತಿಯನ್ನು ತೋರಿಸಿತು. ಮುಂದಿನ ನಾಲ್ಕು ವರ್ಷಗಳಲ್ಲಿ 132 ಚಿಹ್ನೆಗಳನ್ನು ಕಲಿತು ಕೊಂಡಿತು. ಮಾನವಶಿಶುಗಳು ಭಾಷೆಯನ್ನು ಕಲಿಯುವ ವಿಧಾನಕ್ಕೂ ವಶೋ ಈ ಸಂಜ್ಞಾಭಾಷೆಯನ್ನು ಕಲಿತದಕ್ಕೂ ಹಲವಾರು ಹೋಲಿಕೆಗಳಿದ್ದವು. ಈ ಚಿಂಪಾಂಜಿ ತಾನು ಕಲಿತ ಚಿಹ್ನೆಗಳನ್ನು ಬಳಸುವಾಗ ಚಿಕ್ಕ ಚಿಕ್ಕ ವಾಕ್ಯಗಳನ್ನು ರಚಿಸುವುದನ್ನು ಕೂಡ ಕಲಿತಿತ್ತು. ಅಂದರೆ ಚಿಹ್ನೆಗಳನ್ನು ಸೂಕ್ತವಾಗಿ ಜೋಡಿಸುವುದೂ ಅದಕ್ಕೆ ಸಾಧ್ಯವಿತ್ತು. ಅಂಥ ಕೆಲವು ವಾಕ್ಯಗಳು ಮಾನವ ಶಿಶುಗಳ ಮೊದಮೊದಲ ವಾಕ್ಯಗಳಂತಿದ್ದವು. ವಶೋ ಕಲಿತ ಚಿಹ್ನೆಗಳಲ್ಲಿ ಹೆಚ್ಚು ರೂಢನಾಮಗಳಿದ್ದವು. ತನ್ನೊಡನೆ ಸದಾ ಇರುತ್ತಿದ್ದವರ ಹೆಸರುಗಳೂ ತಿಳಿದಿದ್ದವು. ನಾನು, ನಾವು, ನೀವು ಎಂಬ ಅರ್ಥದ ಸರ್ವನಾಮಗಳು, ಕಪ್ಪು, ಬಿಳಿ, ಹಸಿರು, ಕೆಂಪು ಬಣ್ಣಗಳ ಹೆಸರುಗಳು, ಕಚ್ಚು, ಹಿಡಿ, ಅಳು, ಹೋಗು, ತಬ್ಬು, ತೆರೆ, ನಗು ಮುಂತಾದ ಕ್ರಿಯೆಗಳಿಗೆ ತಕ್ಕ ಕ್ರಿಯಾಪದಗಳೂ ವಶೋಗೆ ತಿಳಿದಿದ್ದವು.

ಈ ಪ್ರಯೋಗದ ಯಶಸ್ಸಿನಿಂದ ಉತ್ತೇಜಿತರಾಗಿ ಮತ್ತೆ ಕೆಲವು ಚಿಂಪಾಂಜಿ ಗಳಿಗೆ, ಕೆಲವು ಗೊರಿಲ್ಲಾಗಳಿಗೆ ಕೂಡ ಸಂಜ್ಞಾಭಾಷೆಯನ್ನು ಕಲಿಸುವ ಪ್ರಯತ್ನ ಗಳನ್ನು ಮುಂದುವರೆಸಿದರು. ಮತ್ತೆ ಕೆಲವರು ಈ ಪ್ರಾಣಿಗಳಿಗೆ ಬೇರೊಂದು ಬಗೆಯ ಸಂವಹನ ವ್ಯವಸ್ಥೆಯನ್ನು ಕಲಿಸುವ ಸಾಧ್ಯತೆಯನ್ನೂ ಪರಿಶೀಲಿಸುತ್ತಿ ದ್ದರು. ಅಲ್ಲದೆ ಕೈಬೆರಳುಗಳ ಸಂಜ್ಞಾಭಾಷೆಯನ್ನು ಕಲಿಸುವ ವಿಧಾನದಲ್ಲಿ ಕೆಲವರು ಹೊಸ ಪ್ರಯೋಗಗಳನ್ನು ಮಾಡಿದರು. ಚಿಂಪಾಂಜಿಗಳು ಇನ್ನೂ ಚಿಕ್ಕವಿರುವಾಗಲೇ ಸಂಜ್ಞಾಭಾಷೆಯನ್ನು ದಿನವೂ ಬಳಸುವವರ ಮೂಲಕವೇ ಕಲಿಕೆಯನ್ನು ಆರಂಭಿಸಿದರು. ಈ ಚಿಂಪಾಂಜಿಗಳಲ್ಲಿ ಕಲಿಕೆಯ ವೇಗ ಮತ್ತು ಪ್ರಮಾಣಗಳು ಗಮನಾರ್ಹವಾಗಿ ಹೆಚ್ಚಾಗಿದ್ದವು. ಮೂರೇ ತಿಂಗಳ ಅವಧಿಯಲ್ಲಿ 12 ಇವು ಚಿಹ್ನೆಗಳನ್ನು ಕಲಿತರೆ ವಶೋ ಆರು ತಿಂಗಳಲ್ಲಿ ಕಲಿತಿದ್ದುದು 2 ಚಿಹ್ನೆಗಳ ಬಳಕೆಯನ್ನು ಮಾತ್ರ.

ಕೈ ಬೆರಳುಗಳ ಚಲನೆಯ ಸಂಜ್ಞಾಭಾಷೆಯ ಬದಲು ಚಿತ್ರಗಳನ್ನು ಚಿಹ್ನೆ ಗಳನ್ನಾಗಿ ಬಳಸುವ ಚಿತ್ರಲಿಪಿಯ ಮೂಲಕ ಸಂವಹನ ವ್ಯವಸ್ಥೆಯೊಂದನ್ನು ಚಿಂಪಾಂಜಿಗಳಿಗೆ ಕಲಿಸುವ ಪ್ರಯೋಗಗಳೂ ನಡೆದಿವೆ. ಹಲಗೆಯೊಂದರ ಮೇಲೆ ಈ ಚಿಹ್ನೆಗಳನ್ನು ಉದ್ದ ಅಡ್ಡ ಸಾಲುಗಳಲ್ಲಿ ಜೋಡಿಸಿಟ್ಟು ಕಲಿಸುತ್ತಿ ದ್ದರು. ಚಿಂಪಾಂಜಿಗಳು ಈ ಚಿಹ್ನೆಗಳನ್ನು ಅಂದರೆ ಅವುಗಳ ಅರ್ಥಗಳನ್ನು ಗ್ರಹಿಸಬೇಕಿತ್ತು ಮತ್ತು ಏನನ್ನಾದರೂ ಹೇಳಬೇಕಾದಾಗ ಅದೇ ಚಿಹ್ನೆಗಳಲ್ಲಿ ಆಯ್ದು ಸಂಯೋಜಿಸಬೇಕಿತ್ತು. ಇಂಥ ಕಲಿಕೆಯ ಪ್ರಯೋಗಗಳಿಗೂ ಸಾಕಷ್ಟು ಪ್ರಮಾಣದ ಯಶಸ್ಸು ದೊರಕಿದೆ.

ಇಂಥ ಪ್ರಯೋಗಗಳು ಎಷ್ಟೇ ನಡೆಯಲಿ, ಮೂಲಭೂತ ಪ್ರಶ್ನೆಯೆಂದರೆ ಈ ಪ್ರಯೋಗಗಳಿಂದ ಆಗುವ ಪ್ರಯೋಜನಗಳೇನು? ಚಿಂಪಾಂಜಿಗಳೂ ಸಂವಹನ ವ್ಯವಸ್ಥೆಯೊಂದನ್ನು ಕಲಿಯಬಲ್ಲವೆಂದು ಇದರಿಂದ ತಿಳಿಯಿತು. ಆದರೆ ಈ ವ್ಯವಸ್ಥೆಗಳು ಮನುಷ್ಯರಿಂದ ರೂಪಿತರಾಗಿವೆ. ಮನುಷ್ಯರಿಗಾಗಿ ರೂಪುಗೊಂಡಿವೆ. ಇದನ್ನು ಬಳಸಲು ಕಲಿತ ಚಿಂಪಾಂಜಿ ಸೀಮಿತ ಪ್ರಮಾಣ ದಲ್ಲಿ ಮನುಷ್ಯರೊಡನೆ ಸಂಪರ್ಕವನ್ನು ಬೆಳಸಿತು. ಆದರೆ ಚಿಂಪಾಂಜಿಗಳೇ ತಮತಮಗೇ ಈ ವ್ಯವಸ್ಥೆಯ ಮೂಲಕ ಸಂವಹನ ನಡೆಸುವುದು ಅಸಂಭವ ನೀಯ. ಚಿಂಪಾಂಜಿಗಳ ಜಗತ್ತಿನ ಗ್ರಹಿಕೆಯ ಸ್ವರೂಪವನ್ನು ಪ್ರಕಟಿಸಲು ಈ ಸಂವಹನ ವ್ಯವಸ್ಥೆಗಳಿಂದ ಸಾಧ್ಯವಿಲ್ಲ. ಆದ್ದರಿಂದ ಇಂಥ ಪ್ರಯೋಗಗಳು ಕುತೂಹಲದ ವಿಷಯಗಳಾಗಿ ಮಾತ್ರ ಉಳಿಯುತ್ತವೆ.

ಅಲ್ಲದೆ ಚಿಂಪಾಂಜಿಗಳು ಕಲಿಯುತ್ತವೆ ಎಂದರೇನು? ಕಲಿಕೆಯಲ್ಲಿ ಪ್ರಯೋಜನಕ್ಕೆ ಬರುವ ಅನುಕರಣೆ ಅವುಗಳ ಕಲಿಕೆಯಲ್ಲಿ ಮುಖ್ಯ ಪಾತ್ರ ವಹಿಸುವಂತೆ ಕಂಡುಬಂದಿದೆ. ಮಾನವರು ಭಾಷೆಯನ್ನು ಕಲಿಯಲು ಬಳಸುವ ವಿಧಾನಗಳೆಲ್ಲವನ್ನೂ ಚಿಂಪಾಂಜಿಯೂ ಬಳಸುತ್ತಿದೆಯೇ ಎಂಬ ಪ್ರಶ್ನೆಗೆ ಇಲ್ಲವೆಂದೇ ಉತ್ತರ. ಆದರೆ ಹೆಚ್ಚಿನ ಪ್ರಯೋಗಗಳಿಂದ ದೊರಕುವ ಮಾಹಿತಿಯಿಂದ ಚಿಂಪಾಂಜಿಯ ಭಾಷಾಕಲಿಕೆಯ ಬಗೆ ನಮಗೆ ಗೊತ್ತಾಗ ಬಹುದು.

ಭಾಷೆಯನ್ನು ಅಧ್ಯಯನ ಮಾಡುವಾಗ ಕೇವಲ ಮಾತಿಗೆ ಸೀಮಿತಗೊಳ್ಳದೆ ಇನ್ನೂ ಸ್ವಲ್ಪ ವಿಸ್ತರಿಸಿದರೆ, ಮಾನವ ಸಂವಹನದ ಇತರ ಸಂಕೇತ ವ್ಯವಸ್ಥೆಗಳೂ ಇದರ ಅಧ್ಯಯನದ ವ್ಯಾಪ್ತಿಗೆ ಬರುತ್ತವೆ. ಉದಾ: ವಿವಿಧ ಸಂಕೇತ ಭಾಷಾ ವ್ಯವಸ್ಥೆಗಳು, ಅಶಾಬ್ದಿಕ ಸಂವಹನ ಇತ್ಯಾದಿ. ಸಂವಹನದ ಇತರ ಅಂಶಗಳ ಜೊತೆಗೆ ಭಾಷೆಗಿರುವ ಸಂಬಂಧವನ್ನು ತಿಳಿದಾಗ ಸಂವಹನ ಹೆಚ್ಚು ಪರಿಣಾಮಕಾರಿಯಾಗುವುದು. ಸಂವಹನದಲ್ಲಿ ಶ್ರಾವ್ಯ, ಚಾಕ್ಷುಷ ಮತ್ತು ಸ್ಪಾರ್ಶಿಕ ಎಂದು ಮೂರು ಬಗೆಯನ್ನು ಗುರುತಿಸಬಹುದು.

ಶ್ರಾವ್ಯ ಅಂದರೆ ಕೇಳುವಿಕೆಯ ಮೂಲಕ ನಡೆಯುವ ಸಂವಹನದಲ್ಲಿ ಮುಖ್ಯವಾಗಿ ಮಾತು ಮತ್ತು ಪರ್ಯಾಯ ರೂಪಗಳ (ಸೀಟಿ ಊದುವುದು, ನಗಾರಿ ಬಾರಿಸುವುದು, ಸಂಗೀತ ಇತ್ಯಾದಿ) ಬಳಕೆಯನ್ನು ಕಾಣಬಹುದು. ಮಾತು ಪೂರ್ಣವಾಗಿ ಭಾಷಿಕ ವಲಯದಲ್ಲಿ ಬರುತ್ತದೆ ಉದಾ: ಒಂದು ಧ್ವನಿಮುದ್ರಿತ ವಾಕ್ಯವನ್ನು ಕೇಳಿದಾಗ ಅದು ನಿರ್ದಿಷ್ಟವಾದ ಒಂದು ಅರ್ಥ ವನ್ನು ನೀಡುತ್ತದೆ. ಇದಲ್ಲದೆ ಇನ್ನೂ ಕೆಲವು ಅಂಶಗಳು ಗೋಚರಿಸುತ್ತವೆ. ಮಾತಾಡುತ್ತಿರವವರ ವ್ಯಕ್ತಿತ್ವ, ಲಿಂಗ, ವಯಸ್ಸಾದವರೋ/ಯುವಕರೋ/ಮಕ್ಕಳೋ, ಆಗಿನ ಮನಸ್ಥಿತಿ (ಸಿಟ್ಟು, ತಾಳ್ಮೆ) ಅಂತಸ್ತು ಇತ್ಯಾದಿಗಳೂ ಸಹಾ ಗೋಚರಿಸುತ್ತವೆ. ಇವನ್ನೂ ಭಾಷಿಕ ವಲಯದಲ್ಲಿ ಅಧ್ಯಯನ ಮಾಡಿದರೂ ಸಹಾ ಮಾತಿನ ಬಗ್ಗೆ ಹೇಳದೆ ಬೇರೇನನ್ನೋ ಸೂಚಿಸುತ್ತದೆ. ಅಂದರೆ ಮಾತಷ್ಟೇ ಅಲ್ಲದೆ ಅಶಾಬ್ದಿಕವಾದುದನ್ನು ನಾವು ತಿಳಿದು ಕೊಳ್ಳಬಹುದು.

ಕೆಲವು ಪ್ರದೇಶಗಳಲ್ಲಿ ಭಾಷೆಗೆ ಬದಲಾಗಿ ‘ಸೀಟಿ ಹೊಡೆಯುವುದರ/ಊದುವುದರ’ ಮೂಲಕ ಸಂವಹನ ನಡೆಯುತ್ತದೆ. ಇಲ್ಲಿ ಸೀಟಿ ಹೊಡೆಯುವು ದರ ಉದ್ದೇಶ, ಕೇವಲ ಒಂದು ಶಬ್ದವನ್ನು ಉಂಟುಮಾಡಿ ಗಮನ ಸೆಳೆಯುವು ದಲ್ಲ. ಆಡುಭಾಷೆಯ ಧ್ವನಿ ಮತ್ತು ಲಯವನ್ನು ಆಧಾರವಾಗಿಟ್ಟುಕೊಂಡು ಸೀಟಿ ಹೊಡೆಯಲಾಗುತ್ತದೆ. ಪರಸ್ಪರರಿಗೆ ಸನ್ನಿವೇಶದ ಅರಿವೂ ಸಹಾ ಇಲ್ಲಿ ಮುಖ್ಯವಾಗಿರುತ್ತದೆ. ಸೀಟಿಯು ಸಾಮಾನ್ಯವಾಗಿ ಚಿಕ್ಕ ಚಿಕ್ಕ ಸಂಭಾಷಣೆಗಳನ್ನು ನಡೆಸಲು ಬಳಕೆಯಾಗುತ್ತದೆ. ಏಕೆಂದರೆ ಹೆಚ್ಚು ಉದ್ದ ವಾದಷ್ಟು ಗ್ರಹಿಸುವುದು ಕಷ್ಟವಾಗುತ್ತದೆ. ಸಾಮಾನ್ಯವಾಗಿ ದೂರದಲ್ಲಿರು ವವರು ಇದರ ಬಳಕೆಯನ್ನು ಮಾಡುತ್ತಾರೆ. ಏಕೆಂದರೆ, ಮಾತಿಗಿಂತ ಸೀಟಿ ಹೆಚ್ಚು ದೂರಕ್ಕೆ ಕೇಳಿಸುತ್ತದೆ. ಹೆಂಗಸರು ಸೀಟಿಯ ಮೂಲಕ ನಡೆಸುವ ಸಂಭಾಷಣೆಯನ್ನು ಅರ್ಥ ಮಾಡಿ ಕೊಳ್ಳಬಲ್ಲರಾದರೂ, ಗಂಡಸರು ಪರಸ್ಪರ ಸಂಭಾಷಣೆಗೆ ಇದನ್ನು ಬಳಸುತ್ತಾರೆ. ಇಲ್ಲೆಲ್ಲೂ ಸೀಟಿಯನ್ನು ಒಂದು ರೀತಿಯ ಸಂಕೇತವನ್ನಾಗಿ ಬಳಸಲಾಗುವುದಿಲ್ಲ. ಭಾಷೆ ತಿಳಿದಿರುವವರು, ಮಾತಿನ ಮೂಲಕ ಸಂವಹನ ಸಾಧ್ಯವಾಗದಿದ್ದಾಗ, ಅಥವಾ ದೂರದ ವ್ಯಕ್ತಿಯೊಡನೆ ಸಂಭಾಷಿಸಬೇಕಾದಾಗ, ಆ ಭಾಷೆಯ ಧ್ವನಿ ಮತ್ತು ಲಯವನ್ನು ಬಳಸಿ ಮಾತನಾಡುತ್ತಾರೆ.

ಕೆಲವೊಂದು ವ್ಯವಸ್ಥೆಗಳಲ್ಲಿ, ಇನ್ನೊಂದು ಒಂದು ರೀತಿಯಲ್ಲಿ ಸೀಟಿಯನ್ನು ಸಂಕೇತವಾಗಿ ಬಳಸುವರು. ಉದಾಹರಣೆ ಬಸ್ಸು; ನಿರ್ವಾಹಕರು ಚಾಲಕರಿಗೆ ನಿಲ್ಲಲು ಮತ್ತು ಹೊರಡಲು ಸೀಟಿ ಊದಿ ಸಂಕೇತ ನೀಡುತ್ತಾರೆ. ಇಲ್ಲಿ ಸೀಟಿಯು ಒಂದು ನಿರ್ದಿಷ್ಟವಾದ ಅರ್ಥಕ್ಕೆ ಮಾತ್ರ ಸೀಮಿತ. ಮೊದಲೇ ತೀರ್ಮಾನಿಸಲಾಗಿರುವಂತೆ ಈ ಸಂಕೇತ ಅರ್ಥ ನೀಡುತ್ತದೆ.

ಹದಿಹರೆಯದ ವಯಸ್ಸಿನವರೂ ಸದಾ ಈ ರೀತಿಯ ಸಂಕೇತಗಳನ್ನೂ ಬಳಸಿ ತಮ್ಮ ಸ್ನೇಹಿತರಿಗೆ ಸೂಚನೆಗಳನ್ನು ನೀಡುತ್ತಾರೆ. ಇಲ್ಲಿ ಗುಟ್ಟನ್ನು ಕಾಪಾಡುವ ಉದ್ದೇಶದಿಂದ ಭಾಷೆಯನ್ನು ಬಳಸದೇ ಸೀಟಿಯ ಮೂಲಕ ಸಂದೇಶ ನೀಡುತ್ತಾರೆ.

ಶ್ರಾವ್ಯ ವಿಭಾಗಕ್ಕೆ ಸೇರುವ ಇನ್ನೊಂದು ವ್ಯವಸ್ಥೆಯಲ್ಲಿ ‘ನಗಾರಿ ಬಾರಿಸು’ವುದರ ಮೂಲಕ ಹೇಳಬೇಕಾದುದನ್ನು ಹೇಳುತ್ತಾರೆ. ಇಲ್ಲೂ ಸಹಾ ಮೊದಲೇ ಅರ್ಥವನ್ನು ನಿರ್ದಿಷ್ಟಪಡಿಸಲಾಗಿರುತ್ತದೆ. ನಾವು ಕೇಳುವ ಸಂಗೀತವೂ ಸಹಾ ಒಂದು ರೀತಿಯಲ್ಲಿ ಸಂವಹನವೆ ಆಗಿದೆ. ರಾಗಗಳು ಭಾವಗಳನ್ನು ಹೊಮ್ಮಿಸುತ್ತವೆ.

ಚಾಕ್ಷುಷ ಅಂದರೆ ನೋಡುವುದರ ಮೂಲಕ ನಡೆಯುವ ಸಂವಹನದಲ್ಲಿ ಒಳಗೊಳ್ಳುವ ಅಂಶವೆಂದರೆ, ಅಕ್ಷರ ರೂಪ, ಸಂಕೇತ ಭಾಷೆಗಳು (ಕಿವುಡರು ಮೂಗರು ಬಳಸುವ) ದೇಹದ ಅಂಗಗಳ ಚಲನೆಯಿಂದ ಆಗಬಹುದಾದ ಸಂವಹನ ಇತ್ಯಾದಿ. ಬರೆಹ ರೂಪದಲ್ಲಿರುವುದು ಶಾಬ್ದಿಕವೆನ್ನಿಸಿಕೊಂಡರೆ, ಉಳಿದವು ಅಶಾಬ್ದಿಕ. ವ್ಯಕ್ತಿಗಳ ನಡುವೆ ನಡೆಯುವ ಮಾತುಕತೆಯಲ್ಲಿ ಇಬ್ಬರ ಕಣ್ಣುಗಳೂ ಪೂರಕ ಮಾಹಿತಿಗಾಗಿ ಹುಡುಕುತ್ತಿರುತ್ತವೆ. ಪೂರಕ ಮಾಹಿತಿಯ ಆಧಾರದ ಮೇಲೆ ಸಂವಹನ ಮುಂದುವರೆಯುತ್ತದೆ. ದೇಹದ ಅಂಗಗಳ ಚಲನೆ, ಹಾವಭಾವಗಳು, ಆಡುವ ಮಾತಿಗೆ ಪೂರಕವಾಗಿ ಕೆಲಸ ಮಾಡು ತ್ತಿವೆಯೇ ಎಂಬುದನ್ನು ನಮ್ಮ ನೋಟ ಗಮನಿಸುತ್ತಿರುತ್ತದೆ. ಉದಾ: ಮುಖ ನೋಡದೆ ಮಾತನಾಡುವುದು. ಒಂದು: ಮಾತಿನಲ್ಲಿ/ವ್ಯಕ್ತಿಯಲ್ಲಿ ಆಸಕ್ತಿಯಿಲ್ಲ ದಿರುವುದನ್ನು ಸೂಚಿಸಿದರೆ, ಇನ್ನೊಂದು: ಮಾತನಾಡುವ ವ್ಯಕ್ತಿಯ ಸ್ಥಾನಮಾನ ವನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಉನ್ನತ ವ್ಯಕ್ತಿಗಳು ಎಲ್ಲೋ ನೋಡುತ್ತಾ ಮಾತನಾಡಿದರೂ ಬೇರೆಯವರು ಅದನ್ನು ಆಸಕ್ತಿಯಿಂದಲೇ ಆಲಿಸುತ್ತಿರುತ್ತಾರೆ. ಅಲ್ಲದೆ, ಯಾವುದಾದರೂ ಕೆಲಸವಾಗಬೇಕಾಗಿದ್ದರೆ, ಕೆಲಸ ಮಾಡಿಸಿಕೊಡು ವವರನ್ನು/ಅವರಾಡುವ ಮಾತುಗಳನ್ನು ಆಸಕ್ತಿಯಿಂದ ನೋಡುತ್ತಲೇ/ ಕೇಳುತ್ತಲೇ ಇರುತ್ತಾರೆ. ಅಲ್ಲದೆ, ಆಸಕ್ತಿಗೆ ವಿಷಯದ ಪ್ರಾಮುಖ್ಯವೂ ಕಾರಣವಾಗುತ್ತದೆ. ಅಂದರೆ ಇಲ್ಲಿ ಮಾತನ್ನು ಕೇಳುವ ಕ್ರಿಯೆ ನಡೆಯುತ್ತಿದ್ದರೂ, ಅದಕ್ಕೆ ಪೂರಕವಾಗಿ ಸಹಕರಿಸುವ ಕ್ರಿಯೆ ನಡೆಯುತ್ತಿರುವುದನ್ನು ಕಣ್ಣು ತಿಳಿಸುತ್ತದೆ. ಮಾತು ಶಾಬ್ದಿಕವಾದರೆ ಕ್ರಿಯೆಗಳು ಅಶಾಬ್ದಿಕವಾಗಿರುತ್ತವೆ.

ಸ್ಪಾರ್ಶಿಕ ವಲಯದಲ್ಲಿ ಅಂದರೆ ಶರೀರ ಸಂಪರ್ಕದಲ್ಲಿ ಒಂದು ಗೊತ್ತಾದ ಸ್ಥಳವನ್ನು ಸ್ಪರ್ಶಿಸುವುದರ ಮೂಲಕ ಸಂವಹನ ನಡೆಸುವುದು. ಭಾಷಿಕವಾಗಿ ಹೇಳುವುದಾದರೆ, ಕಿವುಡರು, ಮೂಗರು, ಅಂಧರು ಉಪಯೋಗಿಸುವ ಕೆಲವು ಸಂಕೇತ ವ್ಯವಸ್ಥೆಗಳು ಇದಕ್ಕೆ ಉದಾಹರಣೆ. ತಡೋಮಾ ಎಂಬ ಒಂದು ವ್ಯವಸ್ಥೆಯ ಪ್ರಕಾರ ಕುರುಡರು, ಕಿವುಡರು ಹೆಬ್ಬೆರಳನ್ನು ಉಪಯೋಗಿಸಿ ಇನ್ನೊಬ್ಬರ ತುಟಿಯನ್ನು ಸ್ಪರ್ಶಿಸಿ ಅದರ ಚಲನೆಯನ್ನು ತಿಳಿಯುವುದರ ಮೂಲಕ ಸಂವಹನ ನಡೆಸುತ್ತಾರೆ.

ಇನ್ನೊಂದು ಅಶಾಬ್ದಿಕ ರೂಪ. ಇದಕ್ಕೆ ಭಾಷೆಯ ಸ್ಥಾನಮಾನವಿರುವು ದಿಲ್ಲ. ಆದರೆ ಒಂದು ಗೊತ್ತಾದ ಅರ್ಥವಿರುತ್ತದೆ. ಉದಾಹರಣೆ ಬೆನ್ನು ತಟ್ಟುವುದು (ಉತ್ತೇಜನ), ಬೆನ್ನ ಮೇಲೆ ಕೈ ಆಡಿಸುವುದು (ಸಾಂತ್ವನ, ಪ್ರೀತಿ), ಹಸ್ತಲಾಘವ ಇತ್ಯಾದಿ. ಪ್ರತಿಯೊಂದು ಸಂಸ್ಕೃತಿಯಲ್ಲೂ ಯಾರು ಯಾರನ್ನೂ ಮುಟ್ಟಬಹುದು. ಆಲಿಂಗನ ಮಾಡಬಹುದು ಇತ್ಯಾದಿಗಳಿಗೆ ನಿರ್ಬಂಧವಿರು ತ್ತದೆ. ಉದಾಹರಣೆ ವೈದ್ಯರು ಶರೀರದ ಯಾವ ಭಾಗವನ್ನಾದರೂ ಮುಟ್ಟ ಬಹುದು; ಬಳೆಗಾರನಿಗೆ ಕೈ ಮುಟ್ಟುವಷ್ಟು ಮಾತ್ರ ಸ್ವಾತಂತ್ರ್ಯ. ಚಪ್ಪಲಿ ಮಾರುವವರು ಕಾಲುಗಳನ್ನು ಮಾತ್ರ ಮುಟ್ಟಬಹುದು. ಇದು ಸಾಮಾನ್ಯ ಸಂದರ್ಭಗಳಲ್ಲಿ ಬಳಕೆಯಲ್ಲಿರುವ ರೂಪಗಳು ಅಂದರೆ ಸಂವಹನ ಕ್ರಿಯೆಯಲ್ಲಿ ಸ್ಪರ್ಶವೂ ಸಹಾ ಅನೇಕ ಸಂಗತಿಗಳನ್ನು ಹೊರಗೆಡಹುತ್ತವೆ ಎಂಬುದು ಗೊತ್ತಾಗುತ್ತದೆ.