ನಮಗೆಷ್ಟು ಇಂದ್ರಿಯಗಳು ಎಂದು ಯಾರು ಕೇಳಿದರೂ ತಕ್ಷಣ ಬರುವ ಉತ್ತರ ಐದು ತಾನೆ?  ಅವುಗಳಿಂದ ವಿಭಿನ್ನ ರೀತಿಯ ಸಂವೇದನೆಗಳು ಸಂವಹನವಾಗುತ್ತಿರುತ್ತವೆ.  ಇವುಗಳನ್ನಾಧರಿಸಿ ನಾವು ನಮ್ಮ ಚಟುವಟಿಕೆಗಳನ್ನು ಹೇಗೆ ನಡೆಸಬೇಕೆಂಬ ತೀರ್ಮಾನ ಕೈಗೊಳ್ಳುತ್ತೇವೆ.

ಬರೀ ಐದೇ ಸಂವೇದನೆಗಳನ್ನು ಮಾತ್ರ ತೆಗೆದುಕೊಳ್ಳುತ್ತೇವೆಯೇ ಅಥವಾ ಅದಕ್ಕೂ ಹೊರತಾಗಿ ಬೇರೇನನ್ನಾದರೂ ಬಳಸುತ್ತೇವಾ?

ಮೊದಲು ನಮಗೆ ನೋವಾಗುವುದು ಹೇಗೆ ತಿಳಿಯೋಣ.

ನಮ್ಮಲ್ಲಿ ಅನೇಕ ಸಂವೇದನಾ ತಂತುಗಳಿವೆ.  ಚಳಿಯನ್ನು, ಬಿಸಿಯನ್ನು, ನೋವನ್ನು, ಸ್ಪರ್ಶವನ್ನು ತಿಳಿಸುವ ಪ್ರತಿ ತಂತುಗಳು ಬೇರೆ ಬೇರೆ.  ಅವೆಲ್ಲಾ ಚರ್ಮದಲ್ಲಿ ಹರಡಿಕೊಂಡಿವೆ.  ನೋವನ್ನು ತಿಳಿಸುವ ತಂತುಗಳು ಅಂಟಿಕೊಂಡಿಲ್ಲ.  ಅದಕ್ಕಾಗಿ ಸೊಳ್ಳೆ ಕಡಿದಾಗ ನೋವಾಗುವುದಿಲ್ಲ.  ಆದರೆ ನೋವನ್ನು ಸಾಗಿಸಲು ಎರಡು ರೀತಿಯ ವಾಹಕಗಳಿವೆ.  ಒಂದು ತೆಳುವಾದ  ನಾರಿನಂತಹುದು.  ಮತ್ತೊಂದು ಒತ್ತಾಗಿರುವುದು.  ಹೀಗಾಗಿ ಜೇನುಹುಳು ಕಚ್ಚಿದ್ದನ್ನು ಒತ್ತಾಗಿರುವ ವಾಹಕ ಒಯ್ಯುತ್ತದೆ.  ತಕ್ಷಣ ನೋವು ತಿಳಿಯುತ್ತದೆ.  ಗಾಯವಾದಾಗ ತೆಳುವಾಹಕ ಒಯ್ಯುವ ಕಾರಣ ನೋವು ತಡವಾಗಿ ಪ್ರಾರಂಭವಾಗುತ್ತದೆ.

ಆಡುವ ಮಕ್ಕಳಿಗೆ/ಆಟಗಾರರಿಗೆ, ಆಡುತ್ತಿರುವಾಗ ಗಾಯವಾದರೆ ನೋವೇ ಆಗದು.  ಮನೆಗೆ ಬಂದ ಮೇಲೆ ತಿಳಿಯುತ್ತದೆ.  ಮಕ್ಕಳು ರಂಪಾಟ ಮಾಡುತ್ತಾರೆ ಏಕೆ ಎಂಬುದು ಪೋಷಕರ ದೂರು.

ಕಾರಣ ಮಿದುಳು.  ಆಟ ಆಡುವಾಗ ಮಿದುಳಿಗೆ ಕೈಕಾಲುಗಳನ್ನು ಆಟಕ್ಕೆ ತಕ್ಕ ತಂತ್ರಗಳೊಂದಿಗೆ ಸಮನ್ವಯಗೊಳಿಸುವ ತುರ್ತಿನ ಕೆಲಸ.  ಆಗ ಆಗುವ ಸಣ್ಣಪುಟ್ಟ ಗಾಯಗಳನ್ನು ನಿರ್ಲಕ್ಷ್ಯ ಮಾಡುತ್ತದೆ.  ಕೊನೆಗೆ ಆಟ ಮುಗಿದು ಖುಷಿ/ದುಃಖ ಎಲ್ಲಾ ಮುಗಿದ ಮೇಲೆ ಗಾಯದ ಕಡೆ ಮನಸ್ಸು ಹರಿಸುತ್ತದೆ.

ವಾಸನೆಯ ಗ್ರಹಿಕೆ ವಿಭಿನ್ನ.  ನಮ್ಮ ಮೂಗಿನಲ್ಲಿರುವ ವಾಸನಾಗ್ರಹಿಕೆಯ ತಂತುಗಳು ಓಲ್‌ಫ್ಯಾಕ್ಟರಿ ಎಪಿಥೀಲಿಯಂನಲ್ಲಿದೆ.  ೧೦ ಮಿಲಿಯನ್ ತಂತುಗಳು ಸುಮಾರು ೧೦,೦೦೦ ರೀತಿಯ ವಾಸನೆಯನ್ನು ಗ್ರಹಿಸಬಲ್ಲವು.  ಅಂದರೆ ವಾಸನೆಯು ಗ್ರಾಹಕಗಳನ್ನು ಪ್ರಚೋದಿಸುತ್ತವೆ.  ಅದರ ಆಧಾರದ ಮೇಲೆ ಮಿದುಳು ತನಗೆ ತಿಳಿದ ಈ ವಾಸನೆ ಯಾವುದು ಎಂದು ನಿರ್ಧರಿಸುತ್ತದೆ ಹಾಗೂ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡುತ್ತದೆ.  ರುಚಿ ತಿಳಿಯಲು ನಾಲಿಗೆಯ ಮೇಲೆ ರುಚಿಮೊಗ್ಗುಗಳಿವೆ.  ಇವೂ ಸಹ ರುಚಿಗ್ರಾಹಕಗಳನ್ನು ಹೊಂದಿವೆ.  ರುಚಿಮೊಗ್ಗು ನಾಲಿಗೆಗೆ ಅಂಟಿಕೊಂಡಿದೆ.  ಅಂಟಿಕೊಂಡ ಭಾಗದಲ್ಲಿ ನರಗಳ ಸಮೂಹವಿದೆ.  ಅವು ಮಿದುಳಿಗೆ ಸಂದೇಶವನ್ನು ರವಾನಿಸುತ್ತವೆ.  ನಾಲಿಗೆಯಲ್ಲಿ ಈ ರೀತಿ ೯,೦೦೦ ರುಚಿಮೊಗ್ಗುಗಳಿವೆ.

ರುಚಿಮೊಗ್ಗುಗಳ ಮೇಲೆ ಕೂದಲಿನಂತಹ ಎಳೆಗಳಿವೆ.  ಇವುಗಳಲ್ಲಿ ಗ್ರಾಹಕ ಕೋಶಗಳಿವೆ.  ಇವು ಮುಖ್ಯವಾಗಿ ಐದು ರೀತಿಯ ರುಚಿಗಳನ್ನು ಕಂಡುಹಿಡಿಯಬಲ್ಲವು.  ಸಿಹಿ, ಕಹಿ, ಉಪ್ಪು, ಒಗರು ಅಥವಾ ಹುಳಿ ಹಾಗೂ ಒಂದು ರೀತಿಯ ಹಿತವಾದ ರುಚಿ.  ಇದು ಅಮೈನೋ ಆಸಿಡ್‌ನಿಂದ ರೂಪಿತವಾಗಿರುತ್ತದೆ.  ಇದನ್ನು ವರ್ಣಿಸಲಾಗದು.  ಗ್ರಹಿಸಲು ಮಾತ್ರ ಸಾಧ್ಯ.  ಅನೇಕ ರೀತಿಯ ರಾಸಾಯನಿಕಗಳಿಂದ ಆಹಾರ ಸಿದ್ಧವಾಗಿರುತ್ತದೆ.  ಅವುಗಳು ನೀಡುವ ವಿಭಿನ್ನ ಪ್ರಚೋದನೆಗಳನ್ನು ಆಧರಿಸಿ ರುಚಿ ನಿರ್ಧಾರವಾಗುತ್ತದೆ.

ಕಣ್ಣು ತನ್ನ ಅಕ್ಷಿಪಟಲದ ಮೇಲೆ ಬಿದ್ದ ಚಿತ್ರಣಗಳನ್ನೆಲ್ಲಾ ರವಾನಿಸುತ್ತದೆ.  ಕಿವಿ ತನ್ನ ತಮಟೆಗೆ ಬಂದು ಅಪ್ಪಳಿಸಿದ ಶಬ್ದಗಳನ್ನೆಲ್ಲಾ ರವಾನಿಸುತ್ತದೆ.  ಹೀಗೆ ಮಿದುಳು ಇವನ್ನೆಲ್ಲಾ ಕ್ರೋಢೀಕರಿಸಿ ಪ್ರತಿಕ್ರಿಯಿಸುತ್ತದೆ.

ಕೇವಲ ಈ ರೀತಿಯ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಿದರಷ್ಟೇ ಸಾಕೆ?  ಪ್ರತಿಬಾರಿಯೂ ಪ್ರತಿಕ್ರಿಯೆ ವಿಭಿನ್ನ ಹೇಗೆ?  ಆಗಲೇ ಮಿದುಳಿನ ಶಕ್ತಿ ತಿಳಿಯುವುದು, ತರ್ಕದ ಪ್ರವೇಶವಾಗುವುದು.  ಅಂದರೆ ತನಗೆ ಸಿಕ್ಕ ಸಂದೇಶಗಳಿಗೆ ತರ್ಕಬದ್ಧವಾಗಿ ಪ್ರತಿಕ್ರಿಯೆಯನ್ನು, ವಾತಾವರಣಕ್ಕೆ ತಕ್ಕ ಪ್ರತ್ಯುತ್ತರವನ್ನು ನೀಡುತ್ತದೆ.  ಹೀಗೆ ಉತ್ತರಿಸುವಾಗ ಮಿದುಳು ಮತ್ತೊಂದು ಸಂವೇದನೆಯನ್ನು ಬಳಸಿಕೊಳ್ಳುತ್ತದೆ.   ಅದೇ ಆರನೇ ಸಂವೇದನೆ.  ಇದನ್ನು ನೀಡಲು ಯಾವುದೇ ಇಂದ್ರಿಯಗಳಿಲ್ಲ.  ಇದು ನೆನಪುಗಳಲ್ಲಿ ಹುದುಗಿರಬಹುದು.  ತತ್‌ಕ್ಷಣದಲ್ಲಿ ಉದ್ಭವವಾಗಬಹುದು.  ಹೀಗೆ ಸಾಕಷ್ಟು ರೀತಿಗಳಲ್ಲಿ ಸಮಯಕ್ಕೆ ಸರಿಯಾಗಿ ಒದಗಿದರೆ ಅತ್ಯುತ್ತಮ ಸಮಯಪ್ರಜ್ಞೆ ಇರುವ ವ್ಯಕ್ತಿ ಎನಿಸಿಕೊಳ್ಳುತ್ತಾನೆ.  ಆರನೇ ಸಂವೇದನೆ ಕೆಲಸ ಮಾಡದಿದ್ದಲ್ಲಿ ತೀರಾ ಸಾಮಾನ್ಯ ವ್ಯಕ್ತಿಯಾಗಬಹುದು.

ಇದು ವ್ಯಕ್ತಿಗಳಿಗಷ್ಟೇ ಸೀಮಿತವೆ?  ಇತ್ತೀಚಿನ ವಿಶ್ಲೇಷಣೆಗಳು ಹಾಗೇನಿಲ್ಲ, ಪ್ರಾಣಿಗಳಲ್ಲಿ, ಪಕ್ಷಿಗಳಲ್ಲಿ ಹಾಗೂ ಕೀಟಗಳಲ್ಲೂ ಇದೆ ಎಂದು ಪ್ರತಿಪಾದಿಸಿವೆ.  ಇದಕ್ಕಾಗಿ ಪ್ರಯೋಗಗಳನ್ನು ಕೈಗೊಂಡಿವೆ.

ಮಂಗಗಳ ಕತೆ ಗಮನಿಸೋಣ.

ಟೋಪಿ ಮಾರುವವನ ಕತೆ ಗೊತ್ತಲ್ಲ.  ಆಲದ ಮರದ ಕೆಳಗೆ ಮಲಗಿದ್ದ ಟೋಪಿ ಮಾರುವವನ ಚೀಲದಲ್ಲಿದ್ದ ಟೋಪಿಗಳನ್ನೆಲ್ಲಾ ಮಂಗಗಳು ಹೊತ್ತೊಯ್ಯುತ್ತವೆ.  ಆತನಂತೆ ಟೋಪಿಯನ್ನು ತಲೆಯ ಮೆಲೆ ಇಟ್ಟುಕೊಳ್ಳುತ್ತವೆ.  ನಿದ್ದೆಯಿಂದೆದ್ದ ಟೋಪಿ ಮಾರುವವ ಇದನ್ನೆಲ್ಲಾ ನೋಡಿ ಗಾಬರಿಯಾಗುತ್ತಾನೆ.  ತನ್ನ ಟೋಪಿಯನ್ನು ತಲೆಯಿಂದ ತೆಗೆದು ನೆಲಕ್ಕೆ ಹಾಕುತ್ತಾನೆ.  ಮಂಗಗಳೆಲ್ಲವೂ ಅದನ್ನು ತೆಗೆದು ನೆಲಕ್ಕೆ ಹಾಕುತ್ತವೆ.  ಟೋಪಿ ಮಾರುವವ ಅದನ್ನೆಲ್ಲಾ ಆರಿಸಿಕೊಂಡು ಚೀಲಕ್ಕೆ ತುಂಬಿ ಹೊರಡುತ್ತಾನೆ.  ತನ್ನ ಉಪಾಯ ಫಲಿಸಿದ್ದಕ್ಕಾಗಿ ಖುಷಿಗೊಳ್ಳುತ್ತಾನೆ.  ಮುಂದೇನಾಯಿತು?

ಟೋಪಿ ಮಾರುವವನ ಮಗ ಮತ್ತೆ ಅದೇ ಆಲದ ಮರದ ಕೆಳಗೆ ಮಲಗುತ್ತಾನೆ.  ಎರಡನೆ ಪೀಳಿಗೆಯ ಮಂಗಗಳು ಹಿಂದಿನಂತೆ ಟೋಪಿಗಳನ್ನು ತೆಗೆದುಕೊಂಡು ಹೋಗುತ್ತವೆ.  ಟೋಪಿ ಮಾರುವವನಿಗೆ ಅಪ್ಪ ಹೇಳಿದ ಕತೆ ನೆನಪಾಗುತ್ತದೆ.  ತನ್ನ ತಲೆಯ ಮೇಲಿದ್ದ ಟೊಪ್ಪಿಯನ್ನು ತೆಗೆದು ನೆಲಕ್ಕೆ ಎಸೆಯುತ್ತಾನೆ.  ತಕ್ಷಣ ಟೊಪ್ಪಿ ಸಿಗದ ಮರಿಕೋತಿಯೊಂದು ಓಡಿಬಂದು ಎಸೆದ ಟೊಪ್ಪಿಯನ್ನು ಹೊತ್ತೊಯ್ಯುತ್ತದೆ.  ಇಲ್ಲಿ ಟೊಪ್ಪಿ ಮಾರುವವನ ಮಗನಿಗೆ ಪ್ರತಿಕ್ರಿಯಾತ್ಮಕವಾಗಿ ಹೊಳೆದದ್ದು ಅಪ್ಪನ ಕತೆಯನ್ನಾಧರಿಸಿದ ಹಳೆಯ ಉಪಾಯ.  ಅದೇ ರೀತಿ ಮಂಗಗಳಿಗೂ ಪೂರ್ವಜರು ಮೋಸಹೋದ ಸ್ಥಿತಿಯನ್ನಾಧರಿಸಿದ ಪ್ರತಿಕ್ರಿಯೆ.

ಇಲ್ಲಿ ಗೆಲುವಿನ ನೆನಪನ್ನಾಧರಿಸಿದ ಸಂವೇದನೆ ಹಾಗು ಸೋಲಿನ ನೆನಪನ್ನಾಧರಿಸಿದ ಸಂವೇದನೆ.  ಎರಡೂ ವಿಭಿನ್ನ ಪ್ರತಿಕ್ರಿಯೆಗಳಿಗೆ ಕಾರಣವಾಗುತ್ತದೆ.

ಇದು ಕತೆ ಎಂದು ಕೊಂಕು ಮಾಡದಿರಿ.  ನೈಜ ದೃಷ್ಟಾಂತದಲ್ಲಿ ಕಪಿಗಳ ಪ್ರತಿಕ್ರಿಯೆ ನೋಡೋಣ.

ಒಂದು ಕಿಂಡಿ ಇರುವ ಗಾಜಿನ ಕಿಟಕಿಯ ಪಕ್ಕದಲ್ಲಿ ಗಾಜಿನ ಡಬ್ಬಿಯಲ್ಲಿ ಬಾದಾಮಿ ಬೀಜಗಳಿವೆ.  ಗಾಜಿನ ಡಬ್ಬಿಗೆ ಸಣ್ಣ ಬಾಯಿಯ ರಟ್ಟಿನ ಮುಚ್ಚಳ ಹಾಕಲಾಗಿದೆ.  ಅಲ್ಲಿಗೆ ಒಂದು ಮಂಗಣ್ಣನನ್ನು ಬಿಡಲಾಯಿತು ಹಾಗೂ ಕಿಟಕಿಯ ಹೊರಗೂ ಒಂದು ಮಂಗಣ್ಣನನ್ನು ಬಿಡಲಾಯಿತು.

ಡಬ್ಬಿಯಲ್ಲಿರುವ ಬೀಜಗಳನ್ನು ಕೈಹಾಕಿ ತೆಗೆಯಲು ಅಲ್ಲಿರುವ ಮಂಗಣ್ಣನಿಗೆ ಸಾಧ್ಯವಾಗಲಿಲ್ಲ.  ಹೊರಗೆ ಕೂತ ಮಂಗಣ್ಣ ಸುಮ್ಮನೆ ನೋಡುತ್ತಿತ್ತು.  ಕಿಟಕಿಯ ಹೊರಗೆ ಕಲ್ಲನ್ನು ಹಾಕಲಾಯಿತು.  ಈಗ ಕಿಟಕಿಯ ಹೊರಗಿನ ಮಂಗಣ್ಣ ಕಲ್ಲನ್ನು ಕಿಂಡಿಯಲ್ಲಿ ಒಳಗಿನ ಮಂಗಣ್ಣನಿಗೆ ನೀಡಿತು.  ಅದು ಡಬ್ಬಿಯ ರಟ್ಟಿನ ಮುಚ್ಚಳದ ಸಣ್ಣ ಕಿಂಡಿಯನ್ನು ಕಲ್ಲು ತುರುಕಿ ದೊಡ್ಡ ಮಾಡಿತು.  ಡಬ್ಬಿಯಲ್ಲಿರುವ ಬೀಜಗಳನ್ನೆಲ್ಲಾ ಹೊರತೆಗೆಯಿತು. ಈಗ ನಿಮ್ಮ ತರ್ಕ ಹೇಳಿರಿ.

ಬದಾಮಿ ಬೀಜ ತೆಗೆದ ಮಂಗಣ್ಣ ಎಲ್ಲವನ್ನೂ ತಿಂದಿತೆ?  ಕಿಟಕಿಯ ಆಚೆಯ ಮಂಗಣ್ಣನಿಗೆ ಏನಾದರು ಕೊಟ್ಟಿತೆ?  ಕಿಟಕಿಯಾಚೆಯ ಮಂಗಣ್ಣ ಗುರ್‌ಗುರ್, ಕೆಸ್‌ಪಸ್ ಎಂದಿತೆ?  ಏನೆಲ್ಲಾ ಮಾಡಿರಲು ಸಾಧ್ಯ?  ಉತ್ತರವನ್ನು ಲೇಖನದ ಕೊನೆಯಲ್ಲಿ ಹೇಳುತ್ತೇನೆ.  ಅದಕ್ಕೂ ಮೊದಲು ಕಾಗೆಯ ಬುದ್ಧಿವಂತಿಕೆಯ ಕತೆ ಹೇಳುತ್ತೇನೆ, ಕೇಳಿ.

ಕಾಗೆಗೆ ತುಂಬಾ ಬಾಯಾರಿಕೆಯಾಗಿತ್ತು.  ಹೂಜಿಯ ತಳದಲ್ಲಿ ನೀರಿರುವುದು ಕಾಗೆಗೆ ತಿಳಿಯಿತು.  ಎಲ್ಲಿಂದಲೋ ಕಲ್ಲುಗಳನ್ನು ತಂದು ತಂದು ಹೂಜಿಗೆ ಹಾಕಿತು.  ನೀರು ಮೇಲೆ ಬಂದಾಗ ಕುಡಿದು ಬಾಯಾರಿಕೆಯನ್ನು ನೀಗಿಸಿಕೊಂಡಿತು.

ಇದರ ಪ್ರಯೋಗ ಹೀಗಿದೆ.

ಹೂಜಿಯ ತಳದಲ್ಲಿರುವ ನೀರಿಗೆ ಮಾಂಸದ ತುಂಡನ್ನು ಹಾಕಲಾಯಿತು.  ಕಾಗೆಯನ್ನು ಹೂಜಿಯ ಪಕ್ಕ ಬಿಡಲಾಯಿತು.  ಹೂಜಿಯ ಪಕ್ಕ ಒಂದಿಷ್ಟು ಕಲ್ಲುಗಳನ್ನೂ ಇಡಲಾಯಿತು.  ಹೂಜಿಗೆ ಬಾಯಿ ಹಾಕಿದ ಕಾಗೆಗೆ ಮಾಂಸದ ತುಂಡು ಎಟುಕಲಿಲ್ಲ.  ಅಲ್ಲಿರುವ ಕಲ್ಲುಗಳನ್ನೆಲ್ಲಾ ನೋಡಿತು.  ಅದರಲ್ಲಿ ಸಣ್ಣಕಲ್ಲುಗಳನ್ನು ಆಚೆ ಸರಿಸಿತು.  ದೊಡ್ಡಕಲ್ಲನ್ನು ಹೂಜಿಗೆ ಹಾಕಿತು.  ಮೇಲೆ ಬಂದು ಸಿಗುವುದೇ ಮತ್ತೆ ಪ್ರಯತ್ನಿಸಿತು.  ಸಿಗಲಿಲ್ಲ.  ಮತ್ತೆರಡು ಕಲ್ಲು ಹಾಕಿದ ಮೇಲೆ ಸಿಕ್ಕಿತು.  ಆದರೆ ದೊಡ್ಡಕಲ್ಲುಗಳನ್ನೇ ಆರಿಸಿ ಹಾಕುತ್ತಿತ್ತು.  ಮತ್ತೊಂದು ಕಾಗೆಯನ್ನು ಬಿಟ್ಟಾಗಲೂ ಇದನ್ನೇ ಮಾಡಿತು.  ಈ ಪ್ರತಿಕ್ರಿಯೆ ಮೂಡಿಬರಲು ಯಾವ ಸಂವೇದನೆ ಕಾರಣ?

ಕೀಟಗಳ ಪ್ರಯೋಗ ನೋಡೋಣ.

ಕಿಂಡಿಯಿಂದ ಹೊರಹೊರಟ ಜೇನ್ನೊಣವೊಂದನ್ನು ಕೀಟಲೆ ಜೇನ್ನೊಣವೆಂದು ಹಾರಲು ಬಿಡದೆ ಕಾಲು ಎಳೆಯುತ್ತಿತ್ತು.   ತಾನು ಹಾರಿದ ಮೇಲೆ ಅದಕ್ಕೆ ಹಾರಲು ಅವಕಾಶ.  ಪ್ರತಿಸಾರಿಯೂ ಹೀಗೇ ಆಗುತ್ತಿತ್ತು.  ಕೊನೆಗೆ ಪಾಪದ ಜೇನ್ನೊಣ ಹಿಂದೆ ಗುಂಯೆಂದು ಶಬ್ದವಾದರೆ ಸಾಕು.  ಹಿಂದಿರುವ ಕೀಟಲೆ ಜೇನ್ನೊಣ ಹಾರಿಹೋಗಲಿ ಎಂದು ಸುಮ್ಮನೆ ನಿಂತುಬಿಡುತ್ತಿತ್ತು.  ಕೀಟಲೆ ಜೇನ್ನೊಣ ಎಲ್ಲೋ ಹೋಯಿತು.  ಆದರೆ ಪಾಪದ ಜೇನ್ನೊಣ ಮಾತ್ರ ಪ್ರತಿಬಾರಿ ಹೊರಹೋಗುವ ವೇಳೆ ಹಿಂದಿನಿಂದ ಗುಂಯೆನ್ನುವ ಶಬ್ದ ಕೇಳಿದರೂ ಸಾಕು.  ತಕ್ಷಣ ಹಿಂದಿನ ಜೇನ್ನೊಣಕ್ಕೆ ದಾರಿಬಿಟ್ಟು ಆಮೇಲೆ ತಾನು ಹಾರುತ್ತಿತ್ತು.  ಹೀಗೆ ಬಲಿಷ್ಠರೊಡನೆ ಪ್ರತಿಬಾರಿ ಹೋರಾಡಿ ಸೋಲು ಉಂಟಾದಾಗ, ಅವರು ಬಂದಾಗ ಅವರಿಗೆ ಪ್ರಾಧಾನ್ಯತೆಯಿರಲಿ ಎಂದು ದಾರಿ ಬಿಡುವಿಕೆ ಎಲ್ಲಾ ಪ್ರಾಣಿ, ಪಕ್ಷಿ, ಕೀಟಗಳಲ್ಲಿ ಕಾಣಬಹುದು.  ಮುಂದೊಂದು ದಿನ ಅವರು ಬಲಹೀನರಾಗಿದ್ದರೂ ಅಥವಾ ಅವರದೇ ರೀತಿಯ ಮತ್ತೊಬ್ಬರು ಬಂದಾಗಲೂ ಜೀವಿಗಳು ನೀಡುವ ಪ್ರತಿಕ್ರಿಯೆ ಹಳೆಯ ಅನುಭವಗಳ ನೆನಪುಗಳನ್ನೇ ಆಧರಿಸಿರುತ್ತದೆ.

ಈ ಪ್ರಯೋಗಗಳ ಚಿತ್ರಣವನ್ನು ಪೂನಾದ ಐಎಸ್‌ಇಆರ್‌ನ ಜೀವಿವಿಜ್ಞಾನಿ ಡಾ. ಎಂ. ಶಶಿಧರ್‌ರವರು ತೋರಿಸುತ್ತಾರೆ.  ಅಂದರೆ ಆರನೇ ಸಂವೇದನೆಯು ಯಾವುದೇ ಇಂದ್ರಿಯವಿಲ್ಲದೇ ಉಂಟಾಗುವ ಸಂಮಿಳಿತ ಪ್ರತಿಕ್ರಿಯೆ.  ಈ ಪ್ರತಿಕ್ರಿಯೆಯೂ ಯಾವ ರೀತಿಯಲ್ಲಿ ಮೂಡಬಹುದು ಎಂಬುದನ್ನು ಎಲ್ಲಾ ಸಾರಿಯೂ ನಿಖರವಾಗಿ ಊಹಿಸಲು ಸಾಧ್ಯವಾಗದು.

ಸಸ್ಯಗಳಲ್ಲಿ ಸಂವೇದನೆಗಳು ಇವೆಯೇ ಅಥವಾ ಪ್ರತಿಕ್ರಿಯಿಸುವ ರೀತಿ ಹೇಗೆ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.  ಸಸ್ಯಗಳಲ್ಲಿ ಮಿದುಳು ಎನ್ನುವ ಅಂಗವನ್ನು ನಿರ್ದಿಷ್ಟವಾಗಿ ಗುರುತಿಸಲು ಸಾಧ್ಯವಾಗಿಲ್ಲ.  ಆದರೆ ಗಾಯವಾದಾಗ ಅವುಗಳ ಉಸಿರಾಟದ ವೇಗ ಪ್ರಾಣಿಗಳಂತೆ ಹೆಚ್ಚಾಗುವಿಕೆ ಗೊತ್ತಾಗಿದೆ.  ಮುಟ್ಟಿದರೆ ಮುನಿ ಸಸ್ಯ ಸ್ಪರ್ಶಕ್ಕೆ ಸ್ಪಂದಿಸುವುದೂ ಸಹ ತಿಳಿದಿದೆ.  (ಮಿಮೋಸಾ ಪೂಡಿಕಾ)  ಆದರೆ ಆರನೇ ಸಂವೇದನೆ ಇದೆಯೋ ಇಲ್ಲವೋ ಎಂದು ತಿಳಿದಿಲ್ಲ.

ಮನುಷ್ಯರಲ್ಲಿಯ ಆರನೇ ಸಂವೇದನೆ ಅನೇಕ ವೇಳೆ ದ್ವಂದ್ವವನ್ನು ಹುಟ್ಟು ಹಾಕುತ್ತದೆ.  ಉದಾಹರಣೆಗೆ ನಮ್ಮ ನಂಬಿಕೆಗಳು, ಕರುಳಿನ ಮಿಡಿತಗಳು, ಹೃದಯ ಭಾವಗಳು ಇವುಗಳು ನೀಡುವ ಪ್ರತಿಕ್ರಿಯೆ ಹಾಗೂ ಪಂಚೇಂದ್ರಿಯಗಳಿಂದ ಬಂದ ಸಂದೇಶದಿಂದ ಉಂಟಾಗುವ ಪ್ರತಿಕ್ರಿಯೆ ವಿಭಿನ್ನವಾಗಿರಬಹುದು.  ಹೀಗಾಗಲು ಕಾರಣವೇನೆಂದು ವೈಜ್ಞ್ಞಾನಿಕ ವಿಶ್ಲೇಷಣೆ ಕಷ್ಟಸಾಧ್ಯ.

ಸಮಯದ ಕುರಿತಾದ ಸಾಪೇಕ್ಷ ಚಿಂತನೆಯ ಪ್ರತಿಪಾದನೆ ಗಮನಿಸೋಣ.  ಉಪನ್ಯಾಸಕರೊಬ್ಬರು ಪಾಠ ಮಾಡುವಿಕೆ ಬೇಸರ ತರಿಸುವಂತಿದ್ದರೆ ಕ್ಷಣಗಳೂ ಹಿಗ್ಗುವಂತೆ ಅನ್ನಿಸುತ್ತದೆ.  ಅದೇ ಪೋನಿನಲ್ಲಿ ಸ್ನೇಹಿತರೊಂದಿಗೆ, ಪ್ರೇಮಿಗಳೊಂದಿಗೆ ಮಾತನಾಡುತ್ತಿದ್ದರೆ ಗಂಟೆಗಳು ಕ್ಷಣವಾದಂತೆ ಅನ್ನಿಸುತ್ತದೆ.  ಮತ್ತೊಂದು ಸಂಶೋಧನೆ ಎಂದರೆ ಅತ್ಯಂತ ಹೆಚ್ಚಿನ ವೇಗದ ಪ್ರಮಾಣದಲ್ಲಿ ಸಮಯದ ವೇಗ ತಗ್ಗುತ್ತದೆ.  ಕಚ್ಚುವ ಶೂ ಹಾಕಿಕೊಂಡಾಗ ಅಥವಾ ಚಪ್ಪಲಿ ಕಿರಿಕಿರಿಯುಂಟುಮಾಡಿದರೆ ಮನೆ ಏಕೋ ತುಂಬಾ ದೂರವಿದೆ ಎನಿಸುತ್ತದೆ.  ನಮಗಿಷ್ಟವಾದ ಹಾಡು ಬರುತ್ತಿದ್ದರೆ ಮನೆಗೆ ಬಂದಿದ್ದೇ ತಿಳಿಯುವುದಿಲ್ಲ.

ಆರನೇ ಸಂವೇದನೆಗೆ ವೈಜ್ಞಾನಿಕ ವಿಶ್ಲೇಷಣೆ ಸಿಗದು.  ತಾಳೆ ನೋಡಲು ಆಗದು.  ಆದರೂ ಮಿದುಳು ಅನೇಕ ಚಿಂತನೆಗಳಲ್ಲಿ ಸಾಧ್ಯಾಸಾಧ್ಯತೆಗಳನ್ನು ಪರಿಗಣಿಸಿ ತನ್ನದೇ ಆದ ನಿರ್ಣಯ ಕೈಗೊಳ್ಳುತ್ತದೆ.  ಅದು ಅರಿವಿನ ಮೂಲಕ, ಪದೆ ಪದೇ ಆದ ಅನುಭವಗಳ ಮೂಲಕ ಅಥವಾ ಇನ್ನಾವುದೇ ಮೂಲದಿಂದಲಾದರೂ ಬಂದಿರಬಹುದು.  ಆದರೆ ಅದು ಕುರುಡು ತೀರ್ಮಾನವಲ್ಲ.

ಮತ್ತೆ ಮಂಗಣ್ಣಗಳು ಹಾಗೂ ಬಾದಾಮಿ ಬೀಜಗಳಿಗೆ ಬರೋಣ.  ವಿನಯನ ತರ್ಕ ಹೀಗಿತ್ತು;  ಡಬ್ಬಿಯಿಂದ ಬೀಜವನ್ನು ತೆಗೆದ ಮಂಗಣ್ಣ ಅದನ್ನೆಲ್ಲಾ ತಿಂದು ಕಲ್ಲನ್ನು ಹೊರಗಿದ್ದ ಮಂಗಕ್ಕೆ ನೀಡಿತು.  ಸೂರ್ಯನ ತರ್ಕ; ಒಳಗಿದ್ದ ಮಂಗಣ್ಣ ಬೀಜಗಳನ್ನೆಲ್ಲಾ ಬಾಯಿಗೆ ತುರುಕಿಕೊಂಡಿರುವುದ ನೋಡಿ ಹೊರಗಿದ್ದ ಮಂಗಣ್ಣ ಗುರ್ ಗುರ್ ಎಂದಿತು.  ಲಕ್ಷ್ಮಿಯ ಅನಿಸಿಕೆ; ಒಂದಿಷ್ಟು ಬೀಜಗಳನ್ನು ತಾನು ತಿಂದಿತು.  ಒಂದಿಷ್ಟನ್ನು ಕಿಂಡಿಯ ಮೂಲಕ ಹೊರಗಿದ್ದ ಮಂಗಣ್ಣನಿಗೆ ಎಸೆಯಿತು.  ಈ ರೀತಿಯ ನೂರಾರು ಉತ್ತರಗಳು ಸಿಗಲು ಸಾಧ್ಯ.  ಆದರೆ ವಾಸ್ತವದಲ್ಲಿ ಆ ಪ್ರಯೋಗ ನಡೆಸಿದಾಗಲೆಲ್ಲ ಡಬ್ಬಿಯಿಂದ ಬೀಜಗಳನ್ನು ತೆಗೆದ ಮಂಗಣ್ಣ ಅದರಲ್ಲಿರುವ ಬೀಜಗಳನ್ನು ಎಣಿಸುತ್ತಿತ್ತು.  ಸರಿಯಾಗಿ ಅರ್ಧಭಾಗವನ್ನು ಅಂದರೆ ೧೦ ಬೀಜಗಳಿದ್ದರೆ ಐದನ್ನು ಕಿಂಡಿಯ ಮೂಲಕ ಹೊರಗಿದ್ದ ಮಂಗಣ್ಣನ ಕೈಗೇ ಕೊಡುತ್ತಿತ್ತು ಹಾಗೂ ಎರಡೂ ಯಾವುದೇ ಭಾವನೆಗಳನ್ನು ಮುಖದಲ್ಲಿ ತೋರುತ್ತಿರಲಿಲ್ಲ.  ಡಬ್ಬಿ ಹಾಗೂ ಕಲ್ಲುಗಳು ಅಲ್ಲಿ ಅನಾಥವಾಗಿ ಬಿದ್ದಿರುತ್ತಿದ್ದವು.  ಈಗ ಹೇಳಿ ಈ ಪ್ರತಿಕ್ರಿಯೆ ಅಥವಾ ನಿಮ್ಮ ಉತ್ತರಗಳು ಯಾವ ಸಂವೇದನೆಯನ್ನು ಆಧರಿಸಿತ್ತು?!