ಕಾರು-ಬಸ್ಸು-ಸ್ಕೂಟರು-ರಿಕ್ಷಾಗಳ ಬಲೆಯಿಂದ ಪಾರಾಗಿ
ಅಕಸ್ಮಾತ್ತಾಗಿ ಊರಾಚೆ ಬರಲು ಸಾಧ್ಯವಾದಾಗ,
ಈ ಬೆಂಗಳೂರಿನ ಮೇಲೂ ಆಕಾಶವಿದೆ,
ದಿಗಂತದ ತುಂಬ ಬಂಗಾರದ ಸಂಜೆ
ಹುಚ್ಚು ಹಿಡಿಸುತ್ತದೆ,
ಸಂಜೆಯ ಕೆಳಗೆ ಅಲ್ಲಲ್ಲಿ ಸಣ್ಣ ಗುಡ್ಡಗಳು
ಮಂಜಿನಲ್ಲಿ ಕನವರಿಸುತ್ತವೆ
ಎಂದು ಅನ್ನಿಸಿದಾಗ-

ಈ ನಗರ ನಿರ್ಬಂಧ ಧೂಮ ವಲಯದ ಒಳಗೆ,
ಮಹಾತ್ಮಾ ಗಾಂಧೀ ರಸ್ತೆಯಲ್ಲಿರುವ ಬಾರುಗಳಿಂದ
ತೂರಾಡುತ್ತಾ ಹೊರಗೆ ಬಂದು,
ಅನಾಥ ಪ್ರಜ್ಞೆಯ, ಹಿಪ್ಪೀ ಮೋರೆಯ
ಗಂಡೋ ಹೆಣ್ಣೊ ಗುರುತೇ ಹತ್ತದ,
ಅಂದಂದಿನಲೆಗಳ ಮೇಲೆ ಗಾಳಿ ಹೊಡೆದಂತೆ ತೇಲುವ
ಬೇರಿಲ್ಲದ ಈ ‘ಸಸ್ಯ ವಿಶೇಷ’ಗಳನ್ನು ಕಂಡ
ನನ್ನ ಸ್ನೇಹಿತರ ಸಂವೇದನೆಯ ತೆಕ್ಕೆಗೊಳಗಾದ
ಬದುಕಷ್ಟೆ ಸತ್ಯವೋ,
ಅಥವಾ ಅದರಾಚೆಗೂ ಒಂದು ಬದುಕಿದೆ ಎಂದು
ಕಂಡ ನನ್ನ ಸಂವೇದನೆಗೆ ಬುಡವಿಲ್ಲವೋ ಎಂಬ
ಸಂದೇಹಕ್ಕೆ
ಈ ನವೆಂಬರ್ ಸಂಜೆಯ ಕೆಳಗೆ ಮೂಡತೊಡಗಿವೆ ರೆಕ್ಕೆ.