ರಾಜಪುರೋಹಿತರು ಕೆಲವು ಸಂದರ್ಭಗಳಲ್ಲಿ ವಿಕ್ಷಿಪ್ತವಾಗಿ ಕಾಣಬಹುದು. ೮ ಆಣೆ ಒಂದು ರೂಪಾಯಿಗಳ ಅವರ ಕೈಗಡ, ಮಗು ತೀರಿಕೊಂಡಾಗಲೂ ತಣ್ಣನೆಯ ಪ್ರತಿಕ್ರಿಯೆ, ಸತ್ಕಾರ ನಿಧಿಗೆ ತಾವೇ ನಿಧಿ ಸಂಗ್ರಹಿಸುವುದು, ದಿನಚರಿಯಲ್ಲಿ ಬರುವ ಈ ಉಲ್ಲೇಖಗಳು ವ್ಯಕ್ತಿಯ ಬಗ್ಗೆ ಒಂದು ವಿಚಿತ್ರ ‘ಅನಿಸಿಕೆ’ ಗಳು ಬಂದರೆ ಆಶ್ಚರ್ಯವಿಲ್ಲ. ಆದರೆ ಕೆಲಸದಲ್ಲಿಯಾ ತಾದಾತ್ಮ್ಯತೆ, ಖಚಿತ ನಿರ್ಧಾರಗಳನ್ನು ನೆನಪಿಸಿಕೊಂಡಾಗ ಇದೆಲ್ಲ ಗೌಣ ಎಂದೂ ಅನಿಸಬಹುದು. ಇವೆಲ್ಲವುಗಳ ಹಿನ್ನೆಲೆಯಲ್ಲಿ ಅವರಿಗೆ ತಮ್ಮದೇ ಆದ ಆಧ್ಯಾತ್ಮ ಸಾಧನೆಯ ಬಲವಿತ್ತು ಎಂಬುದು ಬಹುಮುಖ್ಯವಾಗಿದೆ. ಸಂಸಾರವಾಗಲಿ, ಸಂಶೋಧನೆಯಾಗಲಿ, ಸಮಾಜ ಸೇವೆಯಾಗಲಿ ಈ ಎಲ್ಲ ಕಾರ್ಯಗಳನ್ನು ಅವರೇ ಹೇಳುವ ಆ ಒಂದು ಬ್ರಾಹ್ಮಸ್ಥಿಯಲ್ಲಿ ಮಾಡುತ್ತಿದ್ದರು. ಬ್ರಾಹ್ಮಿ ಸ್ಥಿತಿ ಎಂದರೆ, ಭಗವಧ್ಗೀತೆಯಲ್ಲಿ ಹೇಳಿದ ‘ಸ್ಥಿತಪ್ರಜ್ಞ’ ಸ್ಥಿಯಷ್ಟೆ. ಈ ಬ್ರಾಹ್ಮಸ್ಥಿತಿಯ ಬಗ್ಗೆ ಕ್ರಿ. ಶ. ೧೯೧೫ರಿಂದಲೇ ಉಲ್ಲೇಖ ಮಾಡುತ್ತ ಹೋಗಿದ್ದಾರೆ. ಅವರ ಸಾಧನೆ ಯಾವ ತೆರನಾಗಿತ್ತು. ಸ್ಥಿತಿಯ ಹಂತವನ್ನು ಹೇಳುವುದು ಕಷ್ಟ. ಈ ದಿಶೆಯಲ್ಲಿ ಯಾವುದೇ ಆಧ್ಯಾತ್ಮ ಸಾಧಕನ ಸಿದ್ಧಿಯನ್ನು ‘ಇದಮಿತ್ಥಂ’ ಎಂದು ಹೇಳುವುದು ಸಾಧ್ಯವಿಲ್ಲ ಎಂಬುದು ಗೊತ್ತಿದ್ದ ಮಾತೇ ಆಗಿದೆ. ಆದರೂ ದಿನಚರಿಯ ಉಲ್ಲೇಖಗಳಿಂದ ರಾಜಪುರೋಹಿತರ ಆಧ್ಯಾತ್ಮದ ದಾರಿಯನ್ನು ಕಿಂಚಿತ್‌ ಗುರುತಿಸಬಹುದು. ಅದರಿಂದ ಅವರಿಗಾಗಿರ ಬಹುದಾದ ಸಿದ್ಧಿಯನ್ನು ಊಹಿಸಬಹುದು.

ರಾಜಪುರೋಹಿತರು ತಮ್ಮ ದಿನಚರಿಯಲ್ಲಿ ನಮೂದಿಸಿದಂತೆ ೧೯೨೦ರ ಹೊತ್ತಿಗೆಯೇ ಅವರಿಗೆ ಬ್ರಾಹ್ಮಸ್ಥಿತಿಯ ಸಿದ್ಧಿಯತ್ತ ಒಲವು ಬೆಳೆದಿತ್ತು. ಬ್ರಾಹ್ಮಸ್ಥಿತಿಯ ಪ್ರಾಪ್ತಿಯ ನಿಯಮಗಳನ್ನು ಹೇಳುತ್ತ ಭಾವಸಮಾಧಿಯನ್ನು ಮಾಡಿಕೊಂಡರೆ, ಸಾಧನವು ಸುಲಭವೂ ಸುಕರವೂ ಆಗುವುದೆಂದು ಹೇಳಿದ್ದಾರೆ. ಮುಂದುವರಿದು ವಿಚಾರಶಕ್ತಿಯ ಪ್ರಭಾವ ಮತ್ತು ಬ್ರಾಹ್ಮಸ್ಥಿತಿಯ ಪ್ರಭಾವವು ಸಾಧ್ಯವಾದರೆ, ಜೀವನ ಕ್ರಮದಲ್ಲಿ ದೈವಿಕ ಶಕ್ತಿಯನ್ನು ಕ್ಷಣ ಕ್ಷಣಕ್ಕೆ ಸದೈವ ಪ್ರಕಟ ಮಾಡುವುದು ಸಾಧನವಾಗುತ್ತದೆ ಎನ್ನುತ್ತಾರೆ.

ರವಿವಾರ ೨೮.೦೮.೧೯೨೧ನೆಯ ದಿವಸದಿಂದ ಬ್ರಾಹ್ಮಸ್ಥಿತಿಯ ಆಚರಣೆಯನ್ನು ಪ್ರಾರಂಭ ಮಾಡಿದ್ದರೆ, ಬ್ರಾಹ್ಮಸ್ಥಿತಿಯ ಶುದ್ಧ ಸ್ವರೂಪವು ಸನ್‌ ೧೯೨೧ನೆಯ ಇಸ್ವಿ ಸೆಪ್ಟೆಂಬರ್‌ ೧೫ನೆಯ ತಾರೀಖಿನಿಂದ ಭಾದ್ರಪದ ಶುದ್ಧ ೧೩ ಗುರುವಾರ ಪ್ರಾರಂಭವಾಯಿತು ಎನ್ನುತ್ತಾರೆ. ಅವರು ಈ ದಿನಗಳಿಂದ ಸಾಧನೆಯನ್ನು ಮಾಡುತ್ತಲೇ ಇದ್ದರು. ಅಂತೆಯೇ ದಿನಾಂಕ ೦೯.೦೧.೧೯೨೪ರಂದು ಬ್ರಾಹ್ಮಸ್ಥಿತಿಯ ಸತ್ಯ ಪಥ್ಯ ಸನಾತನವೆಂದು ಸಿದ್ಧವಾಯಿತೆಂದು ಹೇಳಿದರಲ್ಲದೆ ಮರುದಿನ ‘ಈ ದಿವಸ ಬ್ರಾಹ್ಮಸ್ಥಿತಿಯೇ ಅತಿಶಯ ಸರ್ವೋತ್ತಮವಾದ ಮಾರ್ಗವೆಂದು ತಿಳಿದುಬಂತು’ ಎಂದಿದ್ದಾರೆ. ಬ್ರಾಹ್ಮಸ್ಥಿತಿಯ ಆಚರಣೆ ಯನ್ನು ಮಾಡುವಾಗ ಕಿಂಚಿತ್‌ ತಪೋಭಂಗವಾಯಿತೆಂದು ಹೇಳುತ್ತ ಇನ್ನು ಮುಂದೆ ಹೀಗೆ ಆಗಗೊಡುವುದಿಲ್ಲ ಎಂದೂ ಅದರ ಸೂಕ್ಷ್ಮ ಅಧ್ಯಯನ ಮಾಡುತ್ತೇನೆಂದು ಹೇಳಿ ಕೊಂಡಿದ್ದಾರೆ. ಮತ್ತು ಮುಂದೆ ವಾರ ಒಪ್ಪತ್ತಿನಲ್ಲೆ ಅದರ ಸಂಪೂರ್ಣ ಸಿದ್ಧಿಯನ್ನು ಪಡೆದು ದಿನಾಂಕ ೨೬.೦೧.೧೯೨೪ರಂದು ‘ಇಂದು ಜೀವಿತ ಸಾಫಲ್ಯವಾಯಿತು’ ಎಂದು ಹೇಳಿಕೊಂಡಿದ್ದಾರೆ.

ಅಧ್ಯಯನ, ಸಂಶೋಧನಗಳೊಂದಿಗೆ ಸಂಸಾರ ಮತ್ತು ಬಡತನಗಳನ್ನು ಮೀರಿ ಅವರು ಜೀವನದಲ್ಲಿ ಯಶಸ್ಸನ್ನು ಕಾಣಲು ಬಹುಶಃ ಈ ಬ್ರಾಹ್ಮೀಸ್ಥಿತಿ ಅಥವ ಸ್ಥಿತಪ್ರಜ್ಞೆಯೇ ಕಾರಣವಾಗಿರಬೇಕು. ಬ್ರಾಹ್ಮೀಸ್ಥಿತಿಯಿಂದ ಸಾಧಿಸಬಹುದಾದ ಅನೇಕ ಸಂಗತಿಗಳನ್ನು ಅವರು ತಮ್ಮ ದಿನಚರಿಯಲ್ಲಿ ಅನೇಕ ಸಲ ನಕ್ಷೆಗಳ ಮೂಲಕವೂ ಹೇಳಲು ಪ್ರಯತ್ನಿಸಿದ್ದಾರೆ. ಹೀಗಾಗಿ ಅವರು ತಮ್ಮ ಸಂಸಾರ ಮತ್ತು ತಾವು ಇದ್ದ ಸಮಾಜದ ಬಗ್ಗೆ ಒಂದು ದಿನವೂ ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲವೆಂದು ಕಾಣುತ್ತದೆ.

ಧರ್ಮ, ಮತ ಮತಾಚಾರ್ಯರ ಬಗ್ಗೆಯೇ ಕೃತಿಗಳನ್ನು ರಚಿಸಿದ್ದರೂ ನಿರ್ದಿಷ್ಟ ಮತ ಪಂಥದ ಬಗ್ಗೆ ಒಲವು ತೋರಿಸಲಿಲ್ಲ. ಕಾಣ್ವ ಮತದ ಬಗ್ಗೆ ಸುದೀರ್ಘವಾಗಿ ಚಿಂತಿಸಿ ಕಾಣ್ವರ ಸಾಮ್ರಜ್ಯ ಸಾಮ್ರಾಟರು, ಮಂತ್ರಿಗಳು, ಇತ್ಯಾದಿ ಬರೆದರೂ, ರಾಮಾನುಜ ಆಚಾರ್ಯರ ಬಗ್ಗೆ ಬರೆದರೆ ನನ್ನನ್ನು ಅಯ್ಯಂಗಾರ್‌ ಎಂದು ಕರೆಯುತ್ತಾರೆಯೆ ಎಂದು ಪ್ರಶ್ನಸಿದ್ದಾರೆ. ತಮ್ಮದೇ ಮಗು ಸತ್ತರೆ ಅದನ್ನು ಸ್ಮಶಾನಕ್ಕೆ ಸಾಗಿಸಿ ಪುಸ್ತಕ ಓದಿದ್ದಾರೆ. ಬರುವಾಗ ೨ ಅಣೆ ಉಡುಪಿಯ ಕೆಫೆಯಲ್ಲಿ ಖರ್ಚಾಯಿತು ಎಂದು ನಮೂದಿಸಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರಿಗೆ ತಮ್ಮದೇ ಮಗುವಿನ ಬಗ್ಗೆ ಜವಾಬ್ದಾರಿಯನ್ನು ವಹಿಸಲಿಲ್ಲ ಎಂದೂ ಅಲ್ಲ. ಅದರ ಹಿಂದಿನ ದಿನಗಳಲ್ಲಿ ಮಗುವನ್ನು ಡಾಕ್ಟರರಿಗೆ ತೋರಿಸಿ ಬಂದುದನ್ನೂ ಔಷಧೋಪಚಾರ ಮಾಡಿದ್ದನ್ನೂ ನಮೂದಿಸುತ್ತ ಸಾಯುವ ಮೂರು ದಿನ ಮೊದಲು ‘ಮಗು ಬದುಕಲಿಕ್ಕಿಲ್ಲ’ ಎಂಬುದನ್ನು ನಮೂದಿಸಿದ್ದಾರೆ.

ಈ ಎಲ್ಲವುಗಳನ್ನು ನೋಡಿದಾಗ ರಾಜಪುರೋಹಿತರು ಸ್ಥಿತಪ್ರಜ್ಞ ಸ್ಥಿತಿಯನ್ನು ಸಾಧಿಸಿಕೊಂಡಿದ್ದರು. ಆ ಸ್ಥಿತಪ್ರಜ್ಞತ್ವ ಯಾವ ಮತ, ಧರ್ಮ, ಪಂಥಗಳಿಗೂ ಸೀಮಿತವಾಗಿರಲಿಲ್ಲ. ಕರ್ಮವನ್ನು ಮಾಡುತ್ತ ಹೋಗುವುದು, ಫಲದ ಆಶೆಯನ್ನು ಮಾಡದಿರುವುದು ಅವರ ಬದುಕಾಗಿತ್ತು. ಅಂತೆಯೇ ಅಂಥ ಕಡುಬಡತನದಲ್ಲೂ ಇಂದಿನ ಒಂದು ವಿಶ್ವವಿದ್ಯಾಲಯ ಮಾಡದಷ್ಟು ಕೆಲಸವನ್ನು ಅವರು ಮಾಡಲು ಸಾಧ್ಯವಾಯಿತೆಂದು ಹೇಳಬಹುದು.

ವರಕವಿ ದ. ರಾ. ಬೇಂದ್ರೆಯವರು ಹೇಳುವಂತೆ “ಅವರು ಅದ್ವೈತ ವೇದಾಂತದ, ಅದರಲ್ಲೂ ಪಂಚದಶಿಯ ಅಭ್ಯಾಸ, ಶ್ರೀ ಅರವಿಂದ ಘೋಷರ ವಾಙ್ಮಯ ಅವಲೋಕನವನ್ನು ಮಾಡಿದ್ದಲ್ಲದೆ, ಹಲ ಕೆಲವು ಕನ್ನಡ ಕವಿಗಳ ಕಾಲ ನಿರ್ಣಯ ವಿಚಾರದಲ್ಲಿ ಶ್ರಮಪಟ್ಟರು. ಅವರು ಸಾಹಿತ್ಯ ಪರಿಷತ್ತಿನ ಹಾಗೂ ಸಮ್ಮೇಳನದ ಪ್ರಾರಂಭದ ಭಕ್ತಗಣದಲ್ಲೊಬ್ಬರಾಗಿದ್ದರು. ಶ್ರೀ ಗಳಾದ ಆಚ್ಯುತರಾವ ಹುಯಿಲಗೋಳ, ಸ.ಪ. ಗಾವಂಕರ, ನಾರಾಯಣ ಶರ್ಮಾ, ಪಂಡಿತ ಪುಜಾರ ಇವರಲ್ಲದೆ ಗಳಗನಾಥ, ತಳಕಿನ ವೆಂಕಣ್ಯಯ್ಯ ಕೋಟಿ ಶ್ರೀನಿವಾಸರಾವ ಮೊದಲಾದವರೊಡನೆ ಸಾಹಿತ್ಯ ಪ್ರೇಮ ದೇಶ ಪ್ರೇಮಗಳ ಸಂಬಂಧ ಬೆಳೆಸಿಕೊಂಡು ಬಂದಿದ್ದರು. ಸಾಧನ ಕೇರಿಯೆಂಬ ಹೆಸರು ಆ ಸ್ಥಳಕ್ಕೆ ರೂಢವಾಗುವ ಪೂರ್ವದಲ್ಲಿ ಅಲ್ಲಿ ವಾರ ವಾರವೂ ಕಲೆಯುವ ಗೆಳೆಯರಲ್ಲಿಯೂ ಅವರೊಬ್ಬರು. ಇತಿಹಾಸ ಮಂಡಳದ ಕಾರ್ಯಕರ್ತರಾಗಿ ಅವರು ಹಲವು ವಿಧದಲ್ಲಿ ಕೆಲಸಮಾಡಿದರು. ಕನ್ನಡ ಸಂಶೋಧನ ಸಂಸ್ಥೆಗೂ ನೆರವಾದರು. ಕನ್ನಡ ಚಳುವಳಿಯಲ್ಲಿ ವಿರೋಧ ಕಟ್ಟಿಕೊಂಡೂ ತಮ್ಮ ನಿಸ್ಪೃಹ ವೃತ್ತಿಯಿಂದ ಹೆಸರುಳಿಸಿಕೊಂಡರು. ಸಾಯಣ, ಯಾಜ್ಞವಲ್ಕ್ಯ ಮಧ್ವ ಈ ಧಾರ್ಮಿಕ ವ್ಯಕ್ತಿಗಳ ಚರಿರ್ತ್ರೆಗಾಗಿ ದುಡಿದು ಹಣ್ಣಾಗಿ ಸಣ್ಣಾಗಿ ಒಂದು ವಿಧವಾದವಾದ ಸರಣಿಯನ್ನು ಬೆಳೆಸಿ ಅದೇ ಶೈಲಿಯಲ್ಲಿ ಕನ್ನಡ ಕವಿಗಳ ಕಾಲಮತ ನಿರ್ಣಾಯಕ್ಕೆ ಹೆಣಗಾಡಿದರು. ಏಕೀಕರಣ, ಸಂಸ್ಕೃತಿ, ಧರ್ಮ, ಬುದ್ಧಿವಾದ ಚರಿತ್ರ ಲೇಖನ ಇವುಗಳ ಬಗ್ಗೆ ಸ್ವಯಂ ಪ್ರಚೋದನೆಯಿಂದಲೇ ಕಾರ್ಯಮಾಡುತ್ತ ಕರ್ನಾಟಕದ ನಾಲ್ಕು ಮೂಲೆಗೂ ಹೋಗಿಬಂದರು. ಅವರೊಬ್ಬ ಕರ್ನಾಟಕದ ಯಾತ್ರಿಕರಾಗಿ ಜನ ಜೀವನ ನೋಡಿಕೊಂಡು ತಮ್ಮ ಜೀವದೊಳಗಿನ ಸಂಕಟಗಳಿಗೂ ಎದೆಗೊಟ್ಟು ಬಾಳಿದರು.” ಬೇಂದ್ರೆಯವರು ರಾಜಪುರೋಹಿತರ ಸಮಗ್ರ ಜೀವನದ ವೈವಿಧ್ಯತೆಗಳನ್ನು ಹಿಡಿದಿಟ್ಟಿದ್ದಾರೆ.[1] ಅಂಥದೊಂದುಜೀವನ ನಡೆಸಲು ಹಿನ್ನೆಲೆಯಲ್ಲಿಯ ಅವರ ಅಧ್ಯಾತ್ಮ ಸಾಧನೆ ಬಹಳಷ್ಟು ಕೆಲಸ ಮಾಡಿದೆ.

ಈ ದಿಶೆಯಲ್ಲಿ ‘ವಿದ್ಯಾರಣ್ಯರ ಬ್ರಾಹ್ಮೀಸ್ಥಿತಿಯ ಆಚರಣೆಯು’ಎಂಬ ಲೇಖನವನ್ನು ಕರ್ಮವೀರ ವಿದ್ಯಾರಣ್ಯ ಸಂಚಿಕೆ ೦೯.೦೭.೧೯೨೬ರಲ್ಲಿ ಬರೆದಿದ್ದಾರೆ.ಬ್ರಹ್ಮಜ್ಞಾನಿಯಾಗಿದ್ದೂ ಲೌಕಿಕದಲ್ಲಿರುವುದೇ ಬ್ರಾಹ್ಮೀಸ್ಥಿತಿ.ಲೌಕಿಕ ವ್ಯವಹಾರ ಧರ್ಮಕ್ಕೆ ವಿರೋಧವಲ್ಲ ಎಂದು ಪ್ರತಿಪಾದಿಸುತ್ತ ಯಾಜ್ಞವಲ್ಕ್ಯ,ಜನರ ಹಾಗೂ ಶ್ರೀ ರಾಮಚಂದ್ರರನ್ನು ಉದಾಹರಿಸಿದ್ದಾರೆ.

 

[1] ಕರ್ತವ್ಯಾನಂದ ನಾ ಶ್ರೀ ರಾಜಪುರೋಹಿತರು ಪು. ೯೮, ೯೯