ದಿನಾಂಕ ೨೪.೦೮.೧೯೫೩ರಂದು ರಾಜಪುರೋಹಿತರು ತೀರಿಕೊಂಡ ಮೇಲೆ, ಅವರ ಸಮಕಾಲೀನ ಹಿರಿಯರು, ಪ್ರಾಜ್ಞರು, ಕವಿ ಸಾಹಿತಿಗಳು ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ. ಅವುಗಳ ಪೂರ್ಣ ಪಾಠಗಳು ೧೯೫೮ರಲ್ಲಿ ಪ್ರಕಟವಾದ ಶ್ರೀ ಶ್ರೀನಿವಾಸ ಹಾವನೂರ ಅವರ ‘ಕರ್ತವ್ಯಾನಂದ ನಾ. ಶ್ರೀ ರಾಜಪುರೋಹಿತರು’ ಎಂಬ ಪುಟ್ಟ ಪುಸ್ತಕದಲ್ಲಿ ಪ್ರಕಟವಾಗಿವೆ ಮತ್ತೆ ಅವುಗಳು ‘ಶುಕ್ಲ ಯಜುರ್ವೇದಿ ಮಹಾತ್ಮರು’ ಎಂಬ ಪುಸ್ತಕದಲ್ಲಿ ಮರುಪ್ರಕಟವಾಗಿವೆ. ಆದ್ದರಿಂದ ಮತ್ತೆ ಅವುಗಳನ್ನು ಇಲ್ಲಿ ಮರುಪ್ರಕಟಿಸದೆ. ಹಿರಿಯರು ಅವರನ್ನು ಹೇಗೆ ಕಂಡಿದ್ದರು ಎಂಬುದನ್ನು ಪುನರುಕ್ತಿಗಳ ಹೊರತಾಗಿ ಅವರ ಮಾತುಗಳಲ್ಲೆ ಹೇಳಲು ಪ್ರಯತ್ನಿಸಲಾಗಿದೆ.

ಕರ್ನಾಟಕದ ಕುಲಪುರೋಹಿತರೆಂದೇ ಹೆಸರಾದ ಶ್ರೀ ಆಲೂರ ವೆಂಕಟರಾರಯರ ದೃಷ್ಟಿಯಲ್ಲಿ ಶ್ರೀ ನಾರಾಯಣ ಶ್ರೀನಿವಾಸ ರಾಜಪುರೋಹಿತರು ಸ್ವಾರ್ಥತ್ಯಾಗಿಗಳು. ಇತಿಹಾಸ ಸಂಶೋಧಕರು, ರಾಷ್ಟ್ರೀಯ ಮನೋವೃತ್ತಿಯವರು, ಕರ್ನಾಟಕದ ಉಜ್ವಲ ಅಭಿಮಾನಿಗಳು, ಧರ್ಮಾಭಿಮಾನಿಗಳು, ಸದಾಚಾರಿಗಳು, ಸ್ಪಷ್ಟವಾದಿಗಳು ಒಳ್ಳೇ ವಕ್ತಾರರು, ಖಂಡತುಂಡ ಮಾತನಾಡುವವರು. ಕರ್ನಾಟಕತ್ವದಲ್ಲಿ ಅವರು ಆಲೂರು ವೆಂಕಟರಾಯರಿಗೆ ತುಂಬ ಸಹಾಯ ಮಾಡಿದವರು, ಅವರಿಗೆ ಅತ್ಯಂತ ಸಮೀಪದ ಆಪ್ತರಂತಿದ್ದರು.

ವರಕವಿ ಬೇಂದ್ರೆಯವರು ಅವರ ಬಗ್ಗೆ ಸುದೀರ್ಘವಾಗಿ ಹೇಳಿದ್ದಾರೆ. ಕನ್ನಡ ಚಳುವಳಿಯಲ್ಲಿ ವಿರೋಧ ಕಟ್ಟಿಕೊಂಡೂ ತಮ್ಮ ನಿಸ್ಪೃಹವೃತ್ತಿಯಿಂದ ಹೆಸರು ಗಳಿಸಿಕೊಂಡರು. ಒಳ್ಳೆಯ ಪತ್ರಿಕೆಯ ಸಂಪಾದಕರಾಗಿ ಆದರ್ಶವೊಂದನ್ನು ರಚಿಸಬೇಕೆಂಬ ಅವರ ಮನೀಷೆ ಈಡೇರಲಿಲ್ಲ. ಬಾಳಿನಲ್ಲಿ ಕಹಿ ಕಂಡರೂ ಅದನ್ನು ವಿವೇಕದಿಂದ ಜೀರ್ಣೀಸಿಕೊಂಡರು. ದೇಶಹಿತ ವಿಚಾರದಲ್ಲಿ ಅವರ ವಿವೇಕವು ನನಗೆ ಬಾಲ್ಯದಿಂದಲು ಮಾರ್ಗದರ್ಶಕವಾಗಿತ್ತು. ಆದರ್ಶಕ್ಕಾಗಿ ದುಡಿದು, ಯಾವುದೋ ತಂತ್ರದ ಅಪದ್ದತಿಯಿಂದ ಶ್ರಮಿಸಿ, ಜಯಾಪಜಯಗಳನ್ನು ಸಮನಾಗಿ ಭೊಗಿಸಿ ಸ್ವಾಂತಶಾಂತಿಯಿಂದ ದೇಹವಿಡುವವರೂ ಹುತಾತ್ಮ ಸದೃಶ್ಯರೇ ಸರಿ ಎಂದಿದ್ದಾರೆ. ಜೊತೆಗೆ ‘ಕನ್ನಡದ ಭಕ್ತ ಮಾಲಿಕೆಯಲ್ಲಿ ನಾರಾಯಣ ಶ್ರೀನಿವಾಸ ರಾಜಪುರೋಹಿತರ ಹೆಸರು ಚಿರಕಾಲವಾಗಿ ಸ್ಮರಣೀಯವಾಗಿ ಉಳಿಯುವುದೆಂದು’ ನಂಬಿದ್ದಾರೆ.

ಕನ್ನಡ ಸಾಹಿತ್ಯ ಚರಿತೆಯನ್ನು ಬರೆದ ರಮ್. ಶ್‌ಈ ಮುಗಳಿ ಅವರು ಹೇಳುವಂತೆ ಕರ್ನಾಟಕದ ಇತಿಹಾಸದದ ಮಟ್ಟಗೆ ಅವರು ಸಂಚರಿಸುವ ಜ್ಞಾನ ಕೋಶವೇ ಆಗಿದ್ದರು. ಸಂಶೋಧನೆಗಾಗಿ ಅವರು ಕರ್ನಾಟಕದ ಎಲ್ಲ ಭಾಗಗಳಿಗೆ ಹೋಗಿ ಬಂದಿದ್ದರು. ಎಲ್ಲೆಲ್ಲಿ ಯಾವ ಸಾಮಗ್ರಿ ದೊರೆಯುತ್ತದೆ ಎಂಬುದನ್ನು ಅವರು ಕೇಳಿದ ತಕ್ಷಣ ಹೇಳುತ್ತಿದ್ದರು. ಕಾಲ, ದೇಶ, ಕುಲ, ಗೋತ್ರ ಈ ವಿವರಗಳಂತೂ ಅವರ ನಾಲಿಗೆಯ ತುದಿಯ ಮೇಲೆ ಇರುತ್ತಿದ್ದವು. ಕರ್ನಾಟಕ ಇತಿಹಾಸ ಸಂಶೋಧನೆಯ ದಾರಿಯಲ್ಲಿ ಅವರು ಪ್ರಾರಂಭಕಾರರು. ಅವರು ಕಂಡುಹಿಡಿದ ಸಂಗತಿಗಳಿಂದ ಕನ್ನಡಿಗರಲ್ಲಿ ಇತಿಹಾಸ ಜ್ಞಾನ ಉಂಟಾಯಿತು. ಅಭಿಮಾನ ಜಾಗೃತವಾಯಿತು. ಏಕೀಕೃತ ಕರ್ನಾಟಕದ ಆಂದೋಲನಕ್ಕೆ ಸ್ಫೂರ್ತಿ ದೊರೆಯಿತು. ಅವರಿಂದ ನವ ಕರ್ನಾಟಕದ ತರುಣರು ಸಂಶೋಧನೆ ಅಭ್ಯಾಸ ಇವುಗಳ ಅಖಂಡ ಸಾಧನೆ ಕೈಕೊಳ್ಳಲು ಪ್ರೇರಣೆಹೊಂದಲಿ, ಅವರಿಗೆ ತಮ್ಮ ಋಣ ಸಲ್ಲಿಸಲಿ ಎಂದಿದ್ದಾರೆ.

ಶ್ರೀ ಆರ್. ಸಿ. ಹಿರೇಮಠ ಅವರ ದೃಷ್ಠಿಯಲ್ಲಿ ರಾಜಪುರೋಹಿತರು ಒಬ್ಬ ಪರಮ ತಪಸ್ವಿಗಳು. ಹುತ್ತೇರಿ ಚಿತ್ತ ಬೆಳೆದವರಷ್ಟೇ ತಪಸ್ವಿಗಳಲ್ಲ. ಪವಿತ್ರವಾದ ಸಂಕಲ್ಪವನ್ನಿಟ್ಟುಕೊಂಡು ದೊಡ್ಡ ಧ್ಯೇಯ ಸಾಧನೆಗಾಗಿ ತನುಮನಧನಗಳನ್ನು ಸವೆಸುವುದು ಪರಮತಪಸ್ಸು. ಶ್ರೀ. ನಾ. ಶ್ರೀ. ರಾಜಪುರೋಹಿತರವರು ಇಂತಹ ಪರಮತಪಸ್ವಿಗಳು.

ಕಲ್ಲು ಕರೆದಲ್ಲೆಲ್ಲ ರಾಜಪುರೋಹಿತರು ಧಾವಿಸಿದವರು. ಶಿಲಾಶಾಸನಗಳನ್ನು ಬಯಲಿಗೆ ತರುವಲ್ಲಿ ಅವರು ಪಟ್ಟ ಶ್ರಮ ವರ್ಣನಾತೀತವಾದುದು. ಅವುಗಳ ಪಾಠಗಳನ್ನು ನಿರ್ಣಯಿಸುವಲ್ಲಿ ಅಷ್ಟೇ ಜಾಣ್ಮೆ, ನಿಷ್ಪಕ್ಷಪಾತ ದೃಷ್ಟಿ ಅವರಲ್ಲಿ ಕಂಡುಬರುತ್ತಿದ್ದವು. ಅವರ ಪ್ರಯತ್ನದ ಫಲವಾಗಿ ಕರ್ನಾಟಕ ಇತಿಹಾಸದ ಮೇಲೆ ವಿಪುಲವಾದ ಬೆಳಕು ಬಿದ್ದಿದೆಯೆಂದು ನಿಸ್ಸಂದೇಹವಾಗಿ ಹೇಳಬಹುದು.

ಅರೆಹೊಟ್ಟೆ, ಅರೆಬಟ್ಟೆ, ಪೂರ್ಣದೃಷ್ಟಿಯಿಂದ ಕೊನೆಯವರೆಗೂ ಸತ್ಯಾನ್ವೇಷಣೆಯಲ್ಲಿ ಕಾಲಕಳೆದರು. ಅವರು ಪಟ್ಟ ಕಷ್ಟವನ್ನು ನೆನೆದರೆ ಕಣ್ಣೀರು ತಾನೆ ಹರಿಯುತ್ತದೆ ಎಂದು ಆರ್. ಸಿ. ಹಿರೇಮಠ ಅವರು ಮುಮ್ಮಲ ಮುರಗಿ, ಒಂದು ಜೀವನ ತನ್ನ ಪಾಲಿನ ಕರ್ತವ್ಯವನ್ನು ನೆರವೇರಿಸಿ ಕೃತಾರ್ಥವಾಯಿತೆಂಬ ಸಮಾಧಾನವನ್ನು ಪಟ್ಟಿದ್ದಾರೆ.

ಕನ್ನಡ ನಾಡಿನ ಇನ್ನೊಬ್ಬ ಶ್ರೇಷ್ಠ ಇತಿಹಾಸ ಸಂಶೋಧಕರಾದ ಶ್ರೀ ಪಾಂಡುರಂಗರಾವ ದೇಸಾಯಿ ಅವರು, ರಾಜಪುರೋಹಿತರಲ್ಲಿ ನಿರಂತರ ಪ್ರಜ್ವಲಿಸುತ್ತಿದ್ದ ಜಿಜ್ಞಾಸುತ್ವ ಮತ್ತು ಚಿಕಿತ್ಸಕ ಪ್ರಜ್ಞೆಯನ್ನು ಕಂಡಿದ್ದಾರೆ.

ರಾಜಪುರೋಹಿತರು ಬುಹುಶ್ರುತರು, ಯಾವುದೇ ಒಂದು ವಿಷಯವನ್ನು ಪ್ರತಿಪಾದಿಸುವ ಪೂರ್ವದಲ್ಲಿ ಸಾಧಕ ಬಾಧಕ ವಿಧಾನದಿಂದ, ಅದನ್ನು ಪರೀಕ್ಷಿಸುತ್ತಿದ್ದರು. ಅದು ಅವರ ಪದ್ಧಿತಿಯಾಗಿತ್ತು. ಈ ಉದ್ದೇಶ ಸಾಧನೆಗಾಗಿ ಗ್ರಂಥಾವಲೋಕನ, ಅನ್ವೇಷಣ, ಸಂಚಾರ, ತಜ್ಞರೊಡನೆ ವಿಚಾರ ವಿನಿಮಯ, ಬಾರಿಬಾರಿಗೂ ವಿಚಾರ ವಿಮರ್ಶೆ ಮತ್ತು ಚರ್ಚೆ ಇವು ಅವರು ಅವಲಂಬಿಸಿರುವ ಕ್ರಮಗಳಾಗಿದ್ದವು. ಅನ್ಯರ ಅಭಿಪ್ರಾಯಗಳನ್ನು ಅವರು ಎಷ್ಟೊಂದು ಕೇಳಿದರೂ ತಮ್ಮದೇ ಅಭಿಪ್ರಾಯ ಅವರಿಗೆ ಇದ್ದೇ ಇರುತ್ತಿತ್ತು.

ಲೇಖಕ ಮತ್ತು ಗ್ರಂಥಕಾರರೆಂದು ಮಾತ್ರವಲ್ಲ ಆಧುನಿಕ ಕರ್ನಾಟಕದ ಆರಂಭ ಕಾಲದಲ್ಲಿ ಕರ್ನಾಟಕದ ಚರಿತ್ರೆ, ಇತಿಹಾಸ ಮತ್ತು ಸಂಶೋಧನ ಈ ವಿಷಯಗಳಲ್ಲಿ ಜನಜಾಗೃತಿಯನ್ನು ಸೃಜಿಸಿದ ಕರ್ಮಯೋಗಿ ಎಂಬ ಶ್ರೇಯಸ್ಸಿಗೆ ರಾಜಪುರೋಹಿತರು ಅರ್ಹರು.

ರವಿ ಇನ್ನೂ ಮುಡುವುದರಲ್ಲಿ ಇದ್ದಾನೆ. ಕತ್ತಲೆ ಕವಿದಿದೆ. ಯಾವುದೋ ಒಂದು ಮರದ ಕೊಂಬೆಯ ಮೇಲೆ ಕುಳಿತು ಕೋಗಿಲೆ ಕೂಗುತ್ತದೆ. ಆ ದನಿಯ ಇಂಪು ಒಬ್ಬಿಬ್ಬರಿಗೆ ಕೇಳಿ ಅವರು ಎಚ್ಚರಗೊಳ್ಳುತ್ತಾರೆ.ರಾಜಪುರೋಹಿತರ ಐತಿಹಾಸಿಕ ಪ್ರಚಾರ ಕಾರ್ಯವನ್ನು ಇಂಥದೊಂದು ಕೋಗಿಲೆಗೆ ಹೋಲಿಸಿದ್ದಾರೆ, ದೇಸಾಯಿ ಪಾಂಡುರಂಗ ರಾಯರು.

ರಾಜಪುರೋಹಿತರು ಧ್ಯೇಯವಾದಿಗಳಾಗಿದ್ದರು. ಧ್ಯೇಯವಾದಿಯು ಐಹಿಕ ಸುಖ ಸೌಕರ್ಯಗಳಿಂದ ಎರವಾಗಬೇಕಾಗುತ್ತದೆ. ಕೇವಲ ವ್ಯಾವಹಾರಿಕ ಸೌಲಭ್ಯಗಳನ್ನು ಬೆಂಬತ್ತಿದವನು ಧ್ಯೇಯವನ್ನು ಸಾಧಿಸಲಾರನು. ರಾಜಪುರೋಹಿತರು ತಮ್ಮ ಬದುಕಿನಲ್ಲಿ ಒಂದು ಆದರ್ಶವನ್ನು ಮುಂದಿಟ್ಟುಕೊಂಡು ಅದರ ಸಾಧನೆಗಾಗಿ ಸುಧೀರ್ಘ ಕಾಲದವರೆಗೆ ಕಷ್ಟನಿಷ್ಠುರಗಳನ್ನು ಎದುರಿಸಿದರು. ದಾರಿದ್ರ್ಯದ ಅಂಧಕಾರದಲ್ಲಿಯೇ ಹೊತ್ತಿದ ಅವರ ಜೀವನ ದೀಪ ಅನ್ಯರಿಗೆ ಬೆಳಕನ್ನು ತೋರಿದರೂ ತಾನು ಮಾತ್ರ ಚೈತನ್ಯದ ತೈಲವನ್ನು ಕಾಣದೆ ಅದೇ ಕತ್ತಲೆಯಲ್ಲಿ ಲೀನವಾಯಿತು. ಬುದ್ಧಿಯಿಂದ ಕರ್ಮಕೌಶಲ್ಯದಿಂದ ಅವರಿಗಿಂತ ಕೆಳಮಟ್ಟದಲ್ಲಿ ಇರುವ ಜನಗಳು ನಮ್ಮ ಸಮಾಜದ ಲೌಕಿಕ ರಂಗದಲ್ಲಿ ಮೇಲಿನ ಅಂತಸ್ತನ್ನೂ ಭೋಗಗಳನ್ನೂ ಪಡೆದಿರುವಾಗ, ಮನಸ್ಸು ಮಾಡಿದರೆ ಇಂತಹ ಭದ್ರತೆಯ ಬಾಳನ್ನು ಗಳಿಸುವುದು ರಾಜಪುರೋಹಿತರಿಗೆ ಅಸಾಧ್ಯವಾಗಿರಲಿಲ್ಲ.

ರಾಜಪುರೋಹಿತರಲ್ಲಿ ವೈಗುಣ್ಯಗಳು ಇದ್ದಿರಬಹುದು. ಅವು ಯಾರಲ್ಲಿ ಇಲ್ಲ? ವೈಗುಣ್ಯಗಳನ್ನೇ ನೋಡುವಂತಹ ಕೆಲವರಿಗೆ ಅವು ದೊಡ್ಡದಾಗಿಯೂ ಕಾಣಬಹುದು. ಆದರೆ ಅವರ ಜೀವನದ ತಿರುಳು ಇಂತಹ ವೈಗುಣ್ಯಗಳನ್ನು ಮಿಕ್ಕಿ ಮೀರಿ ಬಾಳಿದ ಒಂದು ತತ್ವಸಾಧನೆಯಲ್ಲಿ ಕೇಂದ್ರಿಕೃತವಾಗಿತ್ತು.

ಸಾಮಾನ್ಯರಿಂತ ವಿಶೇಷ ತರಗತಿಯ ಬದುಕನ್ನು ಕಂಡ ವ್ಯಕ್ತಿ ಉಚ್ಛ ಭಾವದಿಂದ ತನ್ನ ಸಮಾಜಕ್ಕೆ ಶ್ರಮಿಸುತ್ತಾನೆ, ಸರಿಪಡಿಸುತ್ತಾನೆ. ಇಂಥ ವ್ಯಕ್ತಿಗೆ ಹಿತ ಸಂರಕ್ಷಣೆ ನೀಡುವುದು ಸುಶಿಕ್ಷಿತ ಸಮಾಜ ಮತ್ತು ಪ್ರಭುತ್ವದ ಕರ್ತವ್ಯಗಳಲ್ಲಿ ಒಂದಾಗುತ್ತವೆ. ಆದರೆ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿ ವಿಷಮತೆಯಿಂದ ಕೂಡಿದಾಗ ಇಂಥ ಬೆಲೆಗಳು ತಲೆ ಕೆಳಗಾಗುತ್ತವೆ. ಇಂತಹ ಒಂದು ವಿಷಮತೆಯಲ್ಲಿ ರಾಜಪುರೋಹಿತರ ಬದುಕಿನ ದಾರಿಯನ್ನು ತುಳಿದರು. ಈ ವಿಷಮತೆಗೆ ಅವರ ಬದುಕಿನ ಕ್ಲೇಶ ಕಾರ್ಪಣ್ಯಗಳಿಗೆ ಹೊಣೆಗಾರರು ಯಾರು? ಈ ಪ್ರಶ್ನೆಗೆ ಉತ್ತರ ಹೇಳುವುದು ಸುಲಭವಾಗಿಲ್ಲ. ‘ಬಲೀಯಸೀ ಕೇವಲಮ್‌ ಈಶ್ವರೇಚ್ಛಾ’,

ರಾಜಪುರೋಹಿತರ ಬಾಳಿನ ಕಲುಮುಳ್ಳುಗಳನ್ನು ನೆನದಾಗ ನನ್ನ ಎದೆ ಮಿಡಿಯುತ್ತದೆ. ಕಣ್ಣು ತುಂಬಿ ಕಂಬನಿ ನಿಲ್ಲುತ್ತದೆ. ಅವರ ತ್ಯಾಗಮಯ ಜೀವನದ ಪುಣ್ಯಸ್ಮೃತಿಗೆ ಇದೋ ನನ್ನದೊಂದು ಭಾಷ್ಪಾಂಜಲಿ! ಎಂದು ಮಿಡಿದಿದ್ದಾರೆ ಇತಿಹಾಸ ಸಂಶೋಧಕ ಪಾಂಡುರಂಗರಾವ ದೇಸಾಯಿ ಅವರು.

ರಾಜಪುರೋಹಿತರು ಸಂಸಾರ ಮಧ್ಯದಲ್ಲಿದ್ದರೂ ಸನ್ಯಾಸಿಗಳಂತಿದ್ದರು ತಪಸ್ವಿಗಳಾಗಿದ್ದರು ಋಷಿಸದೃಶ ಜೀವನವನ್ನು ಸಾಗಿಸಿದರು. ಕರ್ನಾಟಕ ಕನ್ನಡ ಕುಲ ಅವರ ಆರಾಧ್ಯ ದೈವತವಾಗಿದ್ದಿತು. ಪ್ರದರ್ಶನ, ಪ್ರಕಟನ, ಪ್ರತಿಷ್ಠೆ ಪ್ರತಿಫಲಗಳ ಆಶೆಯಿಲ್ಲದೆ, ಕನ್ನಡ ನಾಡಿನ ಶ್ರೇಯೋಭಿವೃದ್ಧಿಗಾಗಿ ಅವರು ತಮ್ಮ ತನುಮನಧನಗಳನ್ನು ಶ್ರೀಗಂಧದಂತೆ ಸವೆಸಿದರು. ಅವರ ಶಿಕ್ಷಣವಾಗಲಿ, ಆರ್ಥಿಕ ಪರಿಸ್ಥಿತಿಯಾಗಲಿ ಉಚ್ಛ ಪ್ರತಿಯದಾಗಿರಲಿಲ್ಲ. ಆದರೂ ಅವರು ನಿರಾಡಂಬರ ನಿರಪೇಕ್ಷ ಬುದ್ಧಿಯಿಂದ ಕರ್ನಾಟಕಕ್ಕೆ ಸಲ್ಲಿಸಿದ ಸೇವೆ ಅಮೌಲ್ಯವಾದುದಾಗಿದೆ. ಅಪ್ರತಮವಾದುದಾಗಿದೆ. ಚಿರಸ್ಮರಣೀಯವಾಗಿದೆ. ಎಂದಿದ್ದಾರೆ ಧಾರವಾಡದ ಶ್ರೀ ಹುಕ್ಕೇರಿಕರ ಅವರು. ಆದರೆ ಇಂದು ಅವರು ಸತ್ತು ಐವತ್ತು ವರುಷಗಳಾಗಿವೆ. ಧಾರವಾಡ ಕರ್ನಾಟಕ ಇತಿಹಾಸ ಸಂಶೋಧನ ಮಂಡಳದಲ್ಲಿ ಅವರ ನೆನಪಿಗೆಂದು ಅವರ ಒಂದು ಭಾವಚಿತ್ರವೂ ಇಲ್ಲ. ಕಂಚಿನ ಪ್ರತಿಮೆಯನ್ನೇ ನಿಲ್ಲಿಸಬೇಕಾದ ಸ್ಥಳದಲ್ಲಿ ಯಾರದೋ ಕಂಚಿನ ಪ್ರತಿಮೆ ನಿಂತಿದೆ ಬದುಕಿದ್ದಾಗ ಪಡೆದ ದಿವ್ಯ ನಿರ್ಲಕ್ಷ್ಯವನ್ನು ರಾಜಪುರೋಹಿತರ ಸತ್ತಮೇಲೂ ಪಡೆದರಷ್ಟೆ. ಆದರೆ ಅದರಿಂದ ಅವರು ಮಾಡಿದ ಸಾಧನೆಗೇನೂ ಚ್ಯುತಿ ಬಂದಿಲ್ಲವೆಂಬುದೊಂದೇ ಸಮಾಧಾನ. ಇನ್ನೊಬ್ಬ ಹಿರಿಯ ಸಾಹಿತಿಗಳಾದ ಶ್ರೀ ಜಿ. ಆರ್. ಪಾಂಡೇಶ್ವರ ಅವರು ರಾಜಪುರೋಹಿತರ ವ್ಯಕ್ತಿ ಜೀವನದ ಹಿರಿಮೆಯನ್ನು ಈ ರೀತಿ ಕೊಂಡಾಡಿದ್ದಾರೆ.

ತನ್ನ ಶಕ್ತಿ ಸಲಕರಣೆಗಳಿಗೆ ಅನುಗುಣವಾದ ಒಂದು ಕಾರ್ಯಕ್ಷೇತ್ರವನ್ನು ಆರಿಸಿಕೊಂಡು, ಪ್ರಸನ್ನ ಮನೋಭಾವದಿಂದ ತ್ರಿಕರಣಪೂರ್ವಕವಾಗಿ ಯಾವನು ದುಡಿಯುತ್ತಾನೋ ಆತನೊಬ್ಬ ತಪಸ್ವಿ, ಈ ತಪಸ್ಸು ಐದು ಹತ್ತು ವರುಷಗಳ ಅಲ್ಪಾವಧಿಯ ಯೋಜನೆಯಾಗಿರಬಹುದು. ಅಥವಾ ಅನೇಕ ವರುಷಗಳ ಜೀವಾವಧಿ ಯೋಜನೆಯಾಗಿರಬಹುದು, ತಪಸ್ಸಿನ ಫಲವನ್ನು ತಾನೇ ಅನುಭವಿಸುವ ಸ್ಥಿತಿಯೂ ಬರಬಹುದು. ಅಥವಾ ತಪಸ್ಸಿನ ಕೊನೆಯ ಘಟ್ಟದಲ್ಲಿ ತಾನು ಕಣ್ಮೆರೆಯಾಗಿ, ಅದರ ಫಲವನ್ನು ಅನ್ಯರು ಅನುಭವಿಸುವಂತಾಗಬಹುದು. ರಾಷ್ಟ್ರಕ್ಕಿಂದು ಪೂರ್ಣಸ್ವರಾಜ್ಯ ಬಂದಿದ್ದು, ಅಪರಿಮಿತವಾದ ವೈಯಕ್ತಿಕ ಕೀರ್ತಿ, ಧನ ಸುಖ, ಪ್ರಭಾವಗಳನ್ನು ಅನೇಕರು ಅನುಭವಿಸುತ್ತಿದ್ದಾರೆ. ಸಾವಿರಗಟ್ಟಲೆ, ಕೋಟಿಗಟ್ಟಲೆ ರೂಪಾಯಿಗಳನ್ನು ಮನಬಂದಂತೆ ವೆಚ್ಚ ಮಾಡುವ ಸುಯೋಗವೂ ಅವರಿಗೆ ದೊರೆತಿವೆ. ಆದರೆ ಅದರಲ್ಲಿ ಹಲವರು ಅನುಭವಿಸುತ್ತಿರುವುದು ತಮಗಿಂತ ಹಿರಿಯರಾಗಿದ್ದ ಹಿಂದಣವರ ತಪಸ್ಸಿನ ಫಲವನ್ನು, ಶ್ರೀ ರಾಜಪುರೋಹಿತರು ೧೯೧೮ರಿಂದ ಸಾಯುವ ತನಕವೂ ಇತಿಹಾಸ ಸಂಶೋಧನ ಕ್ಷೇತ್ರದಲ್ಲಿ, ಯಾವ ಜೀವವೂ ತಪಸ್ಸು ಮಾಡುತ್ತಲಿದ್ದವರು. ನಖಶಿಖಾಂತ ಖಾದಿಧಾರಿಗಳಾಗಿ, ರಾಷ್ಟ್ರೀಯ ಶಿಕ್ಷಣ ಕ್ಷೇತ್ರದಲ್ಲಿಯೂ ಅವರು ದುಡಿದರು.

ಕನ್ನಡ ನಾಡಿನ ಸರಿಯಾದ ಇತಿಹಾಸವೆಂದರೆ ಅವರು ಬರೆದ ಪುಸ್ತಕವೇ ಎಂಬಷ್ಟರ ಮಟ್ಟಿಗೆ ಅವರ ಇತಿಹಾಸ ಪುಸ್ತಕವು ಲೋಕಪ್ರಿಯವೂ ವಿದ್ವಜ್ಜನ ಸ್ತುತ್ಯವೂ ಆಗಿದ್ದಿತು. ….ಕನ್ನಡ ಮರಾಠಿ, ಹಿಂದೀ ಈ ಮೂರು ಭಾಷೆಗಳಲ್ಲವರು ಪಾಂಡಿತ್ಯ ಪಡೆದಿದ್ದರು. ಮಹಾರಾಷ್ಟ್ರ ವಿದ್ವನ್ಮಂಡಳಿಯ ನಿಷ್ಕಪಟ ಪ್ರೇಮಾದರಗಳಿಸಿದ್ದರು. ಕರ್ನಾಟಕದ ಎಲ್ಲೆಡೆ ಇತಿಹಾಸವಿದ್ದರೂ ಅವರ ಲೇಖನಗಳನ್ನು ಆಧಾರ ಲೇಖನಗಳನ್ನಾಗಿ ಸ್ವೀಕರಿಸುತ್ತಿದ್ದರು. ಅವರ ಲೇಖನಗಳನ್ನೆಲ್ಲ ಸಂಕಲಿಸಿ ಗ್ರಂಥರೂಪದಲ್ಲಿ ಹೊರತರುವುದು ಅಗತ್ಯವಾಗಿದೆ. ಎಂದು ಪಾಂಡೇಶ್ವರರು ಹೇಳಿ ಆರ್ಧ ಶತಮಾನ ಉರುಳಿತು. ಆದರೆ ಈವರೆಗೂ ಅವರ ಸಂಶೋಧನ ಲೇಖನಗಳ ಸಂಗ್ರಹ ಗ್ರಂಥ ಪ್ರಕಟವಾಗಿಲ್ಲ! ಬಡತನದ ಬದುಕಾಗಿದ್ದರೂ, ಅವರ ಹೃದಯದಲ್ಲಿ ಬಡತನವಿದ್ದಿಲ್ಲ. ಅವರನ್ನು ಸ್ಮರಿಸಿದಾಗ ಹೃದಯಕ್ಕೊಂದು ಶುದ್ಧಿ ಬರುವುದು. ಅದೇ ವ್ಯಕ್ತಿ ಜೀವನದ ಹಿರಿಮೆ ಎಂದಿದ್ದಾರೆ.

ಭಾರತದಾದ್ಯಂತ ಖ್ಯಾತಿ ಪಡೆದ ವಿದ್ವಾಂಸ ಮಹಾಮಹೋಪಾಧ್ಯಾಯ ದತ್ತೋ ವಾಮನ ಪೋತದಾರರು ರಾಜಪುರೋಹಿತರ ಬಗ್ಗೆ ಹೇಳುತ್ತ ‘ಕರ್ನಾಟವು ಹಿಂದಿನ ಗರಿಮೆಯನ್ನು ಅವರು ಎತ್ತಿತೋರಿಸಿದರು. ಮುಂದೆ ಮತ್ತೆ ಒಂದು ದಿನ ಕರ್ನಾಟಕವು ಜಾಗೃತಿಯಾದಾಗ ಮತ್ತೆ ಪೂರ್ವ ಗೌರವವನ್ನು ದೊರೆಕಿಸಿಕೊಂಡಾಗ, ಅದನ್ನು ಉನ್ನತಿಗೆ ತರುವವರ ಹೆಸರುಗಳಲ್ಲಿ ಶ್ರೀ ರಾಜಪುರೋಹಿತರ ಹೆಸರು ಅವಶ್ಯವಾಗಿ ಇರಬೇಕಾಗುತ್ತದೆ’ ಎಂದಿದ್ದಾರೆ.[1]

 

[1] ಅನುಬಂಧ ೧೦ರಲ್ಲಿ ಪೂರ್ಣಪಾಠವನ್ನು ಕೊಟ್ಟಿದೆ.