೦೩.೦೧.೧೯೪೬
ಲಕ್ಷ್ಮಣೇಶ್ವರ (ಲಕ್ಷ್ಮೇಶ್ವರ)

ಶ್ರೀ ಅಭ್ಯಂಕರ ಮಾಸ್ತರರ ಮನೆಯಲ್ಲಿ ವೇ ನಂಜನಗೂಡ ಆಚಾರರೊಡನೆ, ತಾಳಗುಂದ ಅಗ್ರಹಾರ ಮತ್ತು ಚಿಪಳೂಣ ಅಗ್ರಹಾರಗಳ ಬಗ್ಗೆ ವಿಚಾರ ವಿನಿಮಯ ಮಾಡಿದೆನು. ಗೌತಮ ಭಾರದ್ವಾಜ ಗೋತ್ರದ್ವಯರೇ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಜಗದ್ಗುರು.

೧೬.೦೩.೧೯೪೬
ಮಲಗುಂದ – ಕೂಸನೂರು

ಶ್ರೀ ಉತ್ತರಾದಿ ಮಠಾದೀಶರಾದ ಶ್ರೀ ಸತ್ಯಾಭಿಜ್ಞ ತೀರ್ಥರು ಪೂರ್ವಾಶ್ರಮದಲ್ಲಿ ತೈತ್ತರೀಯ ಶಾಖೆಯವರು ಆಪಸ್ತಂಬ ಸೂತ್ರಾನುಯಾಯಿಗಳು

೧೭.೦೪.೧೯೪೬
ಧಾರವಾಡ

ಹಾವನೂರು ಸಂಸ್ಥಾನದ ಇತಿಹಾಸವನ್ನು ಬರೆಯುವುದಕ್ಕೆ ಉಪಕ್ರಮಿಸಿದೆನು.

೧೮.೦೪.೧೯೪೬

ವೇದವಿದ್‌ ಮತ್ತು ವೇದವಾದಿರಾಟ್‌ ಇವೆರಡು ಸಮಾಸ ಘಟಿತ ಪದಗಳ ನಿರ್ಣಯವನ್ನು ಮಾಡಿದೆನು.

೨೧.೦೪.೧೯೪೬

ಆಲೂರ ವೆಂಕಟರಾಯರನ್ನು ಭೆಟ್ಟಿಯಾಗಿ ಬ್ರಾಹ್ಮಣ ಶಿಕ್ಷಣ ಸಮಾಜದ ಪ್ರಚಾರಕನಾಗುವೆನೆಂದು ಹೇಳಿಬಂದೆನು.

೨೫.೦೪.೧೯೪೬
ಮಿರಜ ಪಂಢರಪುರ

ಮಿರಜ ಪಂಢರಪುರ ನಡುವೆ, ಬೆಳ್ಳಂಕಿ, ಸಲಗರ, ಸಾಂಗೋಲೆ, ಬಾಮಣಿ, ಬೋಹಾಳಿ, ಪಂಢರಪುರ ಇತ್ಯಾದಿ ಕನ್ನಡ ಹೆಸರಿನ ಸ್ಟೇಷನ್ನುಗಳು ಇದೆ.

೧೮.೦೫.೧೯೪೬
ಧಾರವಾಡ

ಮುಮುಕ್ಷು ಬೇಂದ್ರೆ ಎಂಬ ಲೇಖ ಬರೆದು ಶ್ರೀ ಚುಳಕಿ ಇವರಿಗೆ ಕೊಟ್ಟೆ.

೧೪.೦೬.೧೯೪೬

ಕರ್ನಾಟಕ ಇತಿಹಾಸದ ಉಗಮ ಸ್ಥಾನದ ಉಪಸಂಹಾರಾತ್ಮಕವಾದ ಇತಿಹಾಸವನ್ನು ಬರೆದು ಮುಗಿಸಿದೆನು.

೧೦.೦೯.೧೯೪೬

ನಿಷಿಧಿಗಲ್ಲುಗಳು ಎಂಬ ೪ನೇ ಪ್ರಕರಣ ಬರೆದೆನು. ತ್ಯಾಗದ ಮೂರ್ತಿ ತಪಸ್ವಿಕಲ್ಲುಗಳು ಎಂಬ ೫ನೆಯ ಪ್ರಕರಣವನ್ನು ಬರೆದು ಮುಗಿಸಿದೆನು.

೧೧.೦೯.೧೯೪೬
ಸಂಗೂರು

ಪ್ರಾತರ್ವಿಧಿಯಾದ ಬಳಿಕ ಕರ್ನಾಟಕ ವಾಙ್ಮಯದಲ್ಲಿ ಇತಿಹಾಸ ವಿಷಯಕ ಕಲ್ಪನಾ ಎಂಬ ಪ್ರಬಂಧ ರೂಪರೇಷೆಯನ್ನು ತೆಗೆದು, ಸ್ನಾನ ಭೋಜನಗಳನ್ನು ಮಾಡಿದೆನು. ತದನಂತರ ಈ ಪ್ರಬಂಧದ ಉಫೋದ್ಘಾತವನ್ನು ಮತ್ತು ಉಗಮದ ಪೀಠಿಕೆಯನ್ನು ಬರೆದೆನು.

ಶಿಲಾಶಾಸನಗಳು ಎಂಬ ವಿಷಯವನ್ನು ಕುರಿತು ವಿವೇಚಿಸಿ ಬರೆದೆನು.

೧೨.೦೯.೧೯೪೬

ವೀರಗಲ್ಲುಗಳು ಎಂಬ ಪ್ರಕರಣ ಬರೆದೆನು. ಮಹಾಸತಿಕಲ್ಲುಗಳು ಎಂಬ ೩ನೇ ಪ್ರಕರಣ ಬರೆದೆನು.

೨೦.೦೯.೧೯೪೬
ಧಾರವಾಡ

‘ಕರ್ನಾಟಕ ಇತಿಹಾಸದ ವಿಕಾಸ’ ಎಂಬ ಲೇಖನವನ್ನು ಬರೆದೆನು.

೨೦.೦೯.೧೯೪೬

ಪಾರುಪತ್ಯಗಾರ ಶಬ್ದದ ಶೋಧ

೦೩.೧೦.೧೯೪೬
ಹುಬ್ಬಳ್ಳಿ

ಕಾಶ್ಯಪ, ಭಾರದ್ವಾಜ, ವಾಸಿಷ್ಠ, ಕೌಶಿಕ, ಅತ್ರಿ, ಶಾಂಡಿಲ್ಯ ಗಾರ್ಗ್ಯ ಜಾಮದಗ್ನ ಈ ೮ ಗೋತ್ರಗಳು ಎಲ್ಲ ಬ್ರಾಹ್ಮಣರಲ್ಲಿ ಇರುತ್ತವೆ.

ಸ್ಮರಣಾರ್ಥ ಟಿಪ್ಪಣಿ

ಟೀಪು – ಹಾವನೂರ ಸಂಸ್ಥಾನವನ್ನು ೧೭೮೭ರಲ್ಲಿ ಹಾಳು ಮಾಡಿದನು

೧೯೪೮

೦೮.೦೨.೧೯೪೮
ಧಾರವಾಡ

ಶ್ರೀ ಮ ಪ್ರ ಪೂಜಾರ ಕನ್ನಡ ಪಂಡಿತರ ಕಡೆಗೆ ಹೋಗಿ ಕರಹಟ ಮತ್ತು ಕರಹಟಗ ಈ ಶಬ್ದಗಳ ಅರ್ಥದ ಬಗ್ಗೆ ವಿಚಾರ ವಿನಿಮಯ ಮಾಡಿದೆನು.

ಕರಪ್ರಕಟ > ಕರಹಕಟ > ಕರಹಟಿ
ಕರುಹಟ್ಟಿ > ಕರಹಟ
ಕರಿಹಟ್ಟಿ > ಕರಹಟಿ

ಇವುಗಳ ಬಗ್ಗೆ ವಿಚಾರ ಮಾಡಿದೆ.

೧೦.೦೨.೧೯೪೮

ಕರ್ಹಾಡೆ ಬ್ರಾಹ್ಮಣರ ವಿಷಯವಾಗಿ ಬರೆಯುವ ಲೇಖನದಲ್ಲಿ ಯಾವ ಯಾವ ಸಂಗತಿಗಳು ಬರತಕ್ಕದ್ದು ಅವುಗಳನ್ನು ಬರೆದೆನು.

೧೨.೦೨.೧೯೪೮

ರಾಷ್ಟ್ರಕೂಟ ವಂಶದ ೩ನೆಯ ಕೃಷ್ಣರಾಜನ ೮೮೦ನೆಯ ಶಕವರ್ಷದ ತಾಪ್ರಪಟದಲ್ಲಿದ್ದ ‘ಕರಹಾಟ’ದ ಉಲ್ಲೇಖವನ್ನು ನೋಡಿದೆನು.

೨೨.೦೨.೧೯೪೮

‘ಬ್ರಹ್ವೃಚ’ ಋಗ್ವೇದ ಎಂಬ ಶಬ್ದ ವ್ಯುತ್ಪತ್ತಿಯನ್ನು ಕಂಡು ಹಿಡಿದೆನು.

೦೭.೦೪.೧೯೪೮
ಧಾರವಾಡ

ವೇಶಾಸಂ ಭಾಲಚಂದ್ರ ಶಾಸ್ತ್ರಿಗಳವರಿಂದ ಛಾಂದೋಗ್ಯ ಉಪನಿಷತ್‌ ೪ನೆಯ ಅಧ್ಯಾಯ ೧೫ನೆಯ ಖಂಡದಲ್ಲಿ ದೇವಯಾನ ನೋಡಿದೆ.

೦೯.೦೪.೧೯೪೮

ಶ್ರೀ ಸು ಶಿ. ದೇಸಾಯಿ ಇವರ ಮನೆಗೆ ಹೋಗಿ ಇವರೊಡನೆ ಪಿತೃಯಾನ ದೇವಯಾನಗಳ ಬಗ್ಗೆ ವಿಚಾರವಿನಿಮಯ ಮಾಡಿದೆನು. ಏನೂ ನಿಷ್ಪನ್ನವಾಗಲಿಲ್ಲ ಮನೆಗೆ ಬಂದು ಮುಂಡಕೋಪನಿಷತ್ತಿನಲ್ಲಿ ೦೩.೦೧.೬ರಲ್ಲಿ ದೇವಯಾನದ ಬಗ್ಗೆ ಸುಂದರವಾದ ವಿವೇಚನೆಯಿದೆ ಈಗ ಮನಸ್ಸಿಗೆ ತೃಪ್ತಿಯಾಯಿತು.

೧೦.೦೪.೧೯೪೮

ಪಿತೃಯಾನ ದೇವಯಾಗಳ ವಸ್ತು ಸ್ಥಿತಿಯನ್ನು ಮುಂಡಕೋಪನಿಷತ್ತಿನಿಂದ ಕಂಡು ಹಿಡಿದೆನು.

೧೧.೦೪.೧೯೪೮

ಶ್ರೀ ಸು. ಶಿ. ದೇಸಾಯಿ ಇವರನ್ನು ಕಂಡು ಪಿತೃಯಾನ ಸ್ವರ್ಗಮಾರ್ಗ, ದೇವಯಾನ ಮೋಕ್ಷಮಾರ್ಗ ಎಂಬುದನ್ನು ತಿಳಿಸಿ ಮುಂಡಕೋಪನಿಷತ್ತನ್ನು ತೋರಿಸಿದೆನು (೩.೧.೬)

ಮ್ಯಾಕ್ಸಮುಲ್ಲರ ಉಪನ್ಯಾಸವನ್ನು ಓದಿ ಅವರ ತಪ್ಪನ್ನು ಕಂಡು ಹಿಡಿದೆನು.

೧೭.೦೪.೧೯೪೮

ವೇ || ದಕ್ಷಿಣಾಮೂರ್ತಿ ಶಾಸ್ತ್ರಿಗಳ ಸಂಗಡ ಸಕಲಾಪುರ ‘ಹಬ್ಬು ಬ್ರಾಹ್ಮಣ’ರ ವಿಷಯವಾಗಿ ವಿಚಾರ ವಿನಿಮಯ.

೨೨.೦೪.೧೯೪೮

ಪ್ರಬುದ್ಧ ಕರ್ನಾಟಕ ಎಂಬ ತ್ರೈಮಾಸಿಕ ೨೯ – ೧ ಪತ್ರಿಕೆಯಲ್ಲಿ (ಸರ್ವಜಿತ್‌ ಸಂ|| ವಿನಾಯಕ ಸಂಚಿಕೆ) ನನ್ನ ಷಷ್ಟ್ಯಬ್ದ ಪೂರ್ತಿ ಸಮಾರಂಭದ ಬಗ್ಗೆ ಸ್ಫುಟವನ್ನು ಓದಿದೆನು.

೨೨.೦೫.೧೯೪೮
ಧಾರವಾಡ

‘ಫಳಿಸಾಸ’ ಎಂಬ ಉಪನಾಮವನ್ನು ಶಿಕಾರಿಪುರ ತಾ. ೨೩೫ನೆಯ ಶಿಲಾಶಾಸನದಲ್ಲಿ ಕಂಡು ಹಿಡಿದೆನು. ಫಳಿಲ್‌=ಶಿಘ್ರ, ಸಾಸ=ಸಾಹಸ, ಪರಾಕ್ರಮ, ದರ್ಪ. ರಾತ್ರಿ ಶ್ರೀ ವಿಟ್ಠಲರಾವ ಜಠಾರ ಇವರ ಕಡೆಗೆ ಹೋಗಿ, ಕರ್ಹಾಡೆ ಪ್ರಬಂಧದಲ್ಲಿ ಫಳಿಸಾಸ, ಘೈಸಾಸ ಶಬ್ದಗಳ ವಿಷಯವಾಗಿ ಶ್ರೀ ವಿ.ಕೆ. ರಾಜವಾಡೆ ಇವರ ಅಭಿಪ್ರಾಯವನ್ನು ಉಲ್ಲೇಖ ಮಾಡಿದೆನು.

೧೦.೦೮.೧೯೪೮
ಧಾರವಾಡ

ನಯಸೇನನ ಧರ್ಮಾಮೃತದಲ್ಲಿ ೧೦ನೆಯ ಆಶ್ವಾಸದಲ್ಲಿ ತುರುಗಾಅ, ತುರುಗಾರ್ತಿ, ತುರುಪಟ್ಟಿ (=ಕರುಹಟ್ಟಿ > ಕರಹಟ > ಕರಹಡ = ಗವಳಿಗರ ವಸತಿ ಸ್ಥಾನ)

೧೧.೦೮.೧೯೪೮

ಪ್ರೊ ಮಳಗಿ ಇವರಿಗೆ ನನ್ನ ಲೇಖನವನ್ನು ತೋರಿಸಿದ್ದಲ್ಲದೆ ಶಬ್ದಮಣಿ ದರ್ಪಣದಲ್ಲಿಯ “ಕರಹಟಗ” ಎಂಬ ಶಬ್ದವನ್ನು ಮತ್ತು ಶಬ್ದಾನು ಶಾಸನದಲ್ಲಿಯ “ಕರಹಡಿಚೆ” ಎಂಬ ಶಬ್ದವನ್ನು ತೋರಿಸಿ ಚರ್ಚೆಯನ್ನು ಮಾಡಿದೆನು.

೧೫.೦೯.೧೯೪೮

ಗದಗ – ಧಾರವಾಡ
‘ಪರಾಗ’ ಮಾಸಿಕದಲ್ಲಿ ನನ್ನ ಲೇಖದ ಬಗ್ಗೆ ಆಕ್ಷೇಪಾತ್ಮಕ ಲೇಖನ ಬಂದಿದೆ ಓದಿದೆನು.

೨೩.೧೦.೧೯೪೮

ಚಿಕ್ಕೋಡಿ – ಎಕ್ಷಂಬಾ – ಚಿಕ್ಕೋಡಿ
ಎಕ್ಷಂಬ ಮೋಟಾರ ಸ್ಟ್ಯಾಂಡಿನಲ್ಲಿ ಶ್ರೀ ಮುಲ್ಲಾ ಇವರ ಅಂಗಡಿಯಲ್ಲಿ ಕುಳಿತಾಗ ಹಜರತ ಮಹಮ್ಮದ ಪೈಗಂಬರರ ಧ್ವಜ ಚಿಹ್ನವು “ಚಾಂದ ತಾರಾ” ಏಕೆ? ಇದಕ್ಕೆ ಐತಿಹಾಸಿಕ ಅಥವಾ ಧಾರ್ಮಿಕ ಕಾರಣವೇನು ಪ್ರಶ್ನೆ ಮಾಡಿದೆ.

೦೯.೧೧.೧೯೪೮
ಪುಣೆ

ಮಾರಸಿಂಹನ ತಾಮ್ರ ಶಾಸನದಲ್ಲಿ ಇದ್ದ ‘ಕರಹಾಟ – ಕುಣ್ಡಿ ವಿಷಯ’ ಎಂಬ ಉಲ್ಲೇಖವನ್ನು ಕಂಡು ಹಿಡಿದೆನು.

೧೧.೧೧.೧೯೪೮

ಅಯನ ಈ ಸಂಸ್ಕೃತ ಶಬ್ದದ ಉಲ್ಲೇಖವನ್ನು ಕಂಡು ಹಿಡಿದೆನು.

೧೨.೧೧.೧೯೪೮
ಪುಣೆ

ಶ್ರೀ ಮಹಾಮಹೋಪಾಧ್ಯಾಯ ದತ್ತೋ ವಾಮನ ಪೋತದಾರ ಇವರ ಭೆಟ್ಟಿಯಾಗಿ ನನ್ನ ಲೇಖನದ ಬಗ್ಗೆ ಕೇಳಲು ನಿಮ್ಮ ಲೇಖವು ಸಪ್ರಮಾಣ ಇದ್ದು ಉತ್ಕೃಷ್ಟವಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಬ್ರಹ್ಮಪುರಿಯ ಬಗ್ಗೆ ರಜಪೂತಸ್ಥಾನದಲ್ಲಿಯ ಜಯಪುರ ರಾಜಧಾನಿಯಲ್ಲಿಯ ಬ್ರಹ್ಮಪುರಿಯನ್ನು ವರ್ಣಿಸಿ ಹೇಳಿದರು.

೨೧.೧೧.೧೯೪೮
ಪುಣೆ

ಭೋಜನೋತ್ತರದಲ್ಲಿ ವೇ. ಶಾ. ಸಂಪನ್ನ ಸಿದ್ದೇಶ್ವರಶಾಸ್ತ್ರಿ ಚಿತ್ರಾವ ಇವರ ಮನೆಗೆ ಹೋಗಿ ಸುರೇಶ್ವರಾಚಾರ್ಯರು ಕಾಣ್ವ ಶಾಖೆಯ ಬ್ರಾಹ್ಮಣರು. ಶ್ರೀ ಮಧ್ವಾಚಾರ್ಯರು, ಶ್ರೀ ಜಯತೀರ್ಥರು ಕಾಣ್ವ ಶಾಖಾ ಬ್ರಾಹ್ಮಣರು ಎಂಬುದನ್ನು ಸಿದ್ಧ ಮಾಡಿತೋರಿಸಿದೆನು ಮತ್ತು ಅಯನ ಎಂಬ ಶಬ್ದ ಪ್ರಯೋಗದ ಬಗ್ಗೆ ವಿಚಾರ ವಿನಿಮಯ ಮಾಡಿದೆನು.

P.S. ಸತ್ಕಾರನಿಧಿ ಸಂಗ್ರಹ ಕರ್ನಾಟಕ ಮಹಾರಾಷ್ಟ್ರಗಳಲ್ಲಿ.

೧೯೪೯

೦೨.೦೭.೧೯೪೯
ಮೈಸೂರು

ಪ್ರಾ. ಡಿ. ಎಲ್‌. ನರಸಿಂಹಾಚಾರ್ಯರೊಡನೆ ‘ಕರಹಾಟ’ ಶಬ್ದದ ಬಗ್ಗೆ ಚರ್ಚಿಸಿದೆನು. ಭಾಷಾಭೂಷಣ, ಕಾವ್ಯಾವ ಲೋಕನ, ಜನ್ನ ಕವಿಯ ಯಶೋಧರಚರಿತ್ರೆ (ಕರಹಟ) ಕರಹಡಿಚ ಶಬ್ದಗಳ ಭೆಟ್ಟಿಯಾದುವು.

೦೬.೦೭.೧೯೪೯
ಮೈಸೂರು

ಮೈಸೂರು ಯುನಿರ್ವಸಿಟಿಯ ಲೈಬ್ರರಿಗೆ ಹೋಗಿ ‘ಕಾಣ್ವಾಯನ ಗೋತ್ರ’ ಎಂದು ಉಲ್ಲೇಖ ಮಾಡಿದ ಸ್ಥಳವನ್ನು ಕಂಡುಹಿಡಿದೆನು.

ಡಾ. ತ್ರಿಭುವನದಾಸ ಎಲ್‌. ಶಹಾ ಎಲ್‌. ಎಮ್‌ ಆಂಡ್‌ ಎಸ್‌. ಇವರು ಬರೆದ ‘ಎನಿಸೆಂಟ ಇಂಡಿಯಾ’ ವ್ಹಾ III ಪುಟ ೨೩ರಲ್ಲಿ ಅಡಿ ಟಿಪ್ಪಣಿಯಲ್ಲಿ ಬಾಂಬೆ ಬ್ರಾಂಚ್‌ ರಾಯಲ್‌ ಏಸಿಯಾಟಿಕ್‌ ಸೋಸಾಯಿಟಿಯ ಜರ್ನಲ್‌ (೧೯೨೮ ಇಸ್ವಿ) III ವ್ಹ್ಯಾ ಪುಟ ೪೬ ರಲ್ಲಿ ಶ್ರೀ ವಿ. ಎಸ್‌. ಬಖಲೆ ಎಂ. ಎ., ಎಲ್‌ ಎಲ್‌ ಬಿ ಇವರು ‘ಪ್ರಾಚೀನ ಸಾತವಾಹನರು’ ಎಂಬ ತಮ್ಮ ಪ್ರಬಂಧದಲ್ಲಿ ‘ಕಾಣ್ವಾಯನ ಗೋತ್ರದ ಮಂತ್ರಿಯು ಸುಂಗ ವಂಶದ ಕೊನೆಯ ರಾಜನ್ನು ಕೊಂದದನು’ ಎಂದು ಬರೆದದ್ದನ್ನು ಕಂಡು ಹಿಡಿದೆನು.

೦೭.೦೭.೧೯೪೯
ಮೈಸೂರು

ಯುನಿವರ್ಸಿಟಿ ಲಾಯಬ್ರರಿಗೆ ಹೋಗಿ ಡಾ. ಆರ್. ಜೆ. ಭಾಂಡರಕರ ‘ಅರ್ಲಿ ಹಿಸ್ಟರಿ ಆಫ್‌ ಡೆಕ್ಕನ್‌’ ಗ್ರಂಥದಲ್ಲಿಯ ವಾಯು ಪುರಾಣದ ಶ್ಲೋಕಗಳನ್ನು ಬರೆದುಕೊಂಡೆನು.

ಮಧ್ಯಾಹ್ನ – ಕಲಕತ್ತಾ ವಾಯುಪುರಾಣ ಮತ್ತು ಹರ್ಷಚರಿತ (ನಿರ್ಣಯ ಸಾಗರ ಮುದ್ರಣಾಲಯದ ಪ್ರತಿ) ಓದಿ ಬರೆದು ಕೊಂಡೆನು.

೧೮.೦೮.೧೯೪೯
ಬೆಂಗಳೂರು

ಬೆಟ್ಟದ ಅನಂತ ಕೃಷ್ಣಾಚಾರ್ಯರ ಮನೆಗೆ ಹೋಗಿ ಅವರ ಸಂಗಡ ವಿಚಾರ ವಿನಿಮಯ ಮಾಡಿ ಅವರ ಕಲವು ವಿಚಾರಗಳನ್ನು ಖಂಡಿಸಿ ಮನೆಗೆ ಬಂದೆನು.

೨೨.೦೮.೧೯೪೯
ಧಾರವಾಡ

ನಾರಾಯಣ ಶರ್ಮಾ ಇವರ ಮನೆಗೆ ಹೋಗಿ ಅವರಲ್ಲಿದ್ದ ಗೀತಾಭಾಷ್ಯ ಟೀಕಾ (ಅಧ್ಯಾಯ ೩ ಶ್ಲೋಕ ೨೮) ಇದರಲ್ಲಿ ‘ನಾಹಂ ಕರ್ತಾ ಹರಿಃ ಕರ್ತಾ ತತ್ಪೂಜಾ ಕರ್ಮಚಾಖಿಲಂ’ ಎಂಬ ವಚನವು ‘ಗೀತಾ ತಾತ್ಪರ್ಯ ನಿರ್ಣಯ’ ಎಂಬ ಶ್ರೀ ಮಧ್ವವಿರಚಿತ ಗ್ರಂಥದಲ್ಲಿದೆ ಎಂಬುದನ್ನು ಉಲ್ಲೇಖ ಮಾಡಿದ್ದನ್ನು ಓದಿ ಬರೆದುಕೊಂಡೆನು.

೧೯೫೦

೦೨.೦೧.೧೯೫೦
ಧಾರವಾಡ

‘ನಿರೀಕ್ಷಕ’ ವಾರಪತ್ರಿಕೆಯ ಸಂಪಾದಕರಾದ ಶ್ರೀಮಾನ್‌ ಮಳಯ ಗೋವರ್ಧನರಾಯರನ್ನು ಕಂಡು ‘ಇಬ್ಬರು ರನ್ನ ಕವಿಗಳು’ ಎಂಬ ವಿಷಯವನ್ನೂ, ‘ಕರ್ನಾಟಕ ಇತಿಹಾಸ ಸಂಶೋಧಕ ಮಂಡಳ’ ಎಂಬ ಸಂಸ್ಥೆಗೆ ಈಗಿನ ಸರಕಾರದಿಂದ ಗ್ಯ್ರಾಂಟ ದೊರಕಿಸುವ ಏರ್ಪಾಡಿನ ವಿಷಯದಲ್ಲಿ ಸಂಪಾದಕೀಯ ಸ್ಥೂಲ ಸೂಚನೆಗಳನ್ನು ಬರೆಯಿರಿ ಎಂದು ಹೇಳಿದೆನು.

ಶ್ರೀ ನಾರಾಯಣ ಶರ್ಮಾ ಇವರಲ್ಲಿ ಶ್ರೀ ಚೆನ್ನಪ್ಪ ಉತ್ತಂಗಿ ಇವರೊಡನೆ ವಿಚಾರ ವಿನಿಮಯ ಮಾಡಿದೆನು.

೦೪.೦೧.೧೯೫೦
ಧಾರವಾಡ

ಶ್ರೀ ವಿ. ಬಿ. ನಾಯಕ ಎಂ.ಎ. ಎಲ್‌.ಎಲ್‌.ಬಿ. ಸಂಪಾದಕ ಸಂಯುಕ್ತ ಕರ್ನಾಟಕ ಇವರಿಗೆ ‘ಇಬ್ಬರು ರನ್ನರು…’ ಬಗ್ಗೆ ಬರೆಯಲು ಹೇಳಿದೆನು.

೦೭.೦೧.೧೯೫೦
ಧಾರವಾಡ

ಶ್ರೀ ದಿವಾಕರರ ಬಗ್ಗೆ ‘ಅಂತರಾತ್ಮನ ಅಂತರಂಗ’ ಎಂಬ ಟೀಕಾ ಪತ್ರವನ್ನು ಓದಿದೆ.

೦೮.೦೧.೧೯೫೦
ಧಾರವಾಡ

ಶ್ರೀ ಆಲೂರು ವೆಂಕಟರಾಯರ ಮನೆಗೆ ಹೋಗಿ ವಿಚಾರ ವಿನಿಮಯ ಮಾಡಿದೆನು.

೦೯.೦೧.೧೯೫೦
ಧಾರವಾಡ

‘ಸರಸ್ವತಿ ಪರಿಣಯ’ ಗ್ರಂಥವನ್ನು ೧೯ನೆಯ ಶತಮಾನದ ಆದಿಯಲ್ಲಿ ದೊಡ್ಡಬಳ್ಳಾಪುರದ ರಾಘವೇಂದ್ರಪ್ಪನೆಂಬ ಅರವತ್ತೊಕ್ಕಲು ಬ್ರಾಹ್ಮಣ ಕವಿಯು ಬರೆದಿದ್ದಾನೆಂಬುದನ್ನು ಕಂಡು ಹಿಡಿದೆನು. ಈ ಗ್ರಂಥವು ಕನ್ನಡ ಭಾಷೆಯಲ್ಲಿ ಷಟ್ಪದಿಯಲ್ಲಿ ಬರೆಯಲ್ಪಟ್ಟಿದೆ.

೧೪.೦೧.೧೯೫೦
ಧಾರವಾಡ

ಶ್ರೀ ವಿದ್ಯಾನಿಧಿ ತೀರ್ಥರ ವಸ್ತುಸ್ಥಿತಿಯನ್ನು ಕಂಡು ಹಿಡಿದೆನು.

೨೫.೦೧.೧೯೫೦
ಆದವಾನಿ

ಶ್ರೀ ರಂಗರಾವನ ಖಾತೆ ಇವರ ಕಡೆಗೆ ಹೋಗಲು ‘ನಮಗೆ ಕೀರ್ತಿ, ಇತಿಹಾಸ, ಏನೂ ಬೇಕಿಲ್ಲ ಎಂದು ನುಡಿದು ೧/೨ ರೂ’ ಕೊಟ್ಟರು.

೨೭.೦೧.೧೯೫೦
ರಾಯಚೂರು

ಸಾಯಂಕಾಲ ೬ ಗಂಟೆಗೆ ವೈಕುಂಠರಾಯ ಮಾರುತಿ ದೇವಾಲಯದಲ್ಲಿ ಶ್ರೀ ಗಧಾರ ಶ್ರೀನಿವಾಸರಾಯರ ಅಧ್ಯಕ್ಷತೆಯಲ್ಲಿ ನಾನು ಶ್ರೀ ಮನ್ಮಧ್ವಚರಿತ್ರೆ ಕುರಿತು ಭಾಷಣ ಮಾಡಿದೆನು.

೦೪.೦೨.೧೯೫೦
ಹೈದರಾಬಾದ

ನಾಳೆ ೫ ಗಂಟೆಗೆ ಶಾರದಾ ಬ್ಯಾಂಕದ ಪಟಾಂಗಣದಲ್ಲಿ ‘ವೈದಿಕ ಧರ್ಮದ ಪುನರುಜ್ಜೀವನ’ ಎಂಬ ವಿಷಯ ಭಾಷಣ ಮಾಡಬೇಕೆಂಬ ನಿರ್ಣಯ

೦೯.೦೨.೧೯೫೦
ಹೈದರಾಬಾದ

ನಿಜಾಮ ಕಾಲೇಜದಲ್ಲಿ ‘ವಿಜಯನಗರ ಸಾಮ್ರಾಜ್ಯ’ ಭಾಷಣ ಮಾಡಿದೆನು.

೧೪.೦೨.೧೯೫೦
ಹೈದರಾಬಾದ

ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ‘ಕರ್ನಾಟಕವು ಭಾರತಕ್ಕೆ ಮಾಡಿದ ಸೇವೆ’ ಭಾಷಣ ಪ್ರೊ ಡಿ. ಕೆ. ಭೀಮಸೇನರಾಯರ ಅಧ್ಯಕ್ಷತೆ.

೦೪.೦೩.೧೯೫೦
ಹೈದರಾಬಾದ

ಕಲ್ಲೂರು ಸುಬ್ಬಣ್ಣದಾಸರು ವ್ಯಾಸವಿಠಲ ಅಂಕಿತ ಕಾಲ ೧೭೭೫ ಇಸ್ವಿ ಸ್ಥಳ ಕಲ್ಲೂರು (ಜಿ. ರಾಯಚೂರು)

ಶ್ರೀ ಗೋರಾಬಾಳ ಹನುಮಂತರಾಯರು ಲಿಂಗಸೂಗೂರ ಇವರು ಬಂದು ಭೆಟ್ಟಿಯಾದರು.

೦೭.೦೩.೧೯೫೦
ಕಲಬುರ್ಗಿ

ಕರ್ನಾಟಕ ಸಂಘದಲ್ಲಿ ‘ಚಾಲುಕ್ಯ ಸಾಮ್ರಾಜ್ಯ’ ಭಾಷಣ.

೧೯.೦೩.೧೯೫೦
ಪಾಮನಕಲ್ಲೂರು

ಶ್ರೀ ಚಂದ್ರಶೇಖರ ಶಾಸ್ತ್ರಿಗಳ ಮನೆಗೆ ಹೋಗಿ ಶ್ರೀ ಬಸವಣ್ಣನವರ ಚರಿತ್ರವನ್ನು ಸ್ಥೂಲ ಮಾನದಿಂದ ಓದಿ ನೋಡಿದೆನು.

ಮಸ್ಕಿ

ಉತ್ಖನನ, ಅಶೋಕನ ಬೌದ್ಧ ಶಿಲಾಶಾಸನ ನಿರೀಕ್ಷಣ.