ದಿನಾಂಕ ೧೮.೦೭.೧೯೩೭ ರಂದು ಬೆಂಗಳೂರಿನಲ್ಲಿ ಅರ್ಪಿಸಿದ ಮಾನಪತ್ರ

ಶ್ರೀ:
ಕರ್ಣಾಟಕ ಇತಿಹಾಸ ಸಂಶೋಧಕರಾದ
ಶ್ರೀಮಾನ್‌ ನಾರಾಣಾಚಾರ್ಯ ಶ್ರೀನಿವಾಸಾಚಾರ್ಯ
ರಾಜಪುರೋಹಿತರು, ಧಾರವಾಡ
ಅವರ ಸನ್ನಿಧಿಯಲ್ಲಿ

ಮಹನೀಯರೇ,

ತಾವು ಕರ್ಣಾಟಕ ಚರಿತ್ರೆಯ ಸಂಶೊಧನಕ್ಕೆ ತಮ್ಮ ಜೀವಮಾನವನ್ನೇ ಸಮರ್ಪಿಸಿ, ಈ ಮೂವತ್ತು ವರ್ಷಗಳಿಂದ ಅನೇಕ ಸಂಶೋಧನೆಗಳನ್ನು ನಡೆಯಿಸಿರುವಿರಿ. ಧಾರವಾಡದ ಇತಿಹಾಸ ಸಂಶೋಧಕ ಮಂಡಲದ ಸ್ಥಾಪಕರಲ್ಲಿ ಒಬ್ಬರಾಗಿರುವಿರಿ. ಅಲ್ಲದೆ ಮೊನ್ನೆ ಬೊಂಬಾಯಿಯಲ್ಲಿ ಜರುಗಿದ ಕರ್ಣಾಟಕ ಸಾಹಿತ್ಯ ಸಮ್ಮೇಳನದ ಅಂಗವಾದ ಸಂಶೊಧಕ ಗೋಷ್ಠಿಯ ಅಧ್ಯಕ್ಷರಾಗಿದ್ದಿರಿ. ಕರ್ಣಾಟಕದಲ್ಲೆಲ್ಲಾ ಸುಪ್ರಸಿದ್ಧರಾಗಿರುವಿರಿ.

ತಮ್ಮ “ಕರ್ಣಾಟಕ ಇತಿಹಾಸ”ವು ಕನ್ನಡ ತರುಣರಿಗೆ ಬೋಧಪ್ರದವಾಗಿದೆ. ಅಲ್ಲದೆ ಸ್ಪೂರ್ತಿದಾಯಕವಾಗಿದೆ. ಹಿರಿಯರಿಗೂ ಅದು ಅನೇಕ ವಿಷಯಗಳಲ್ಲಿ ಕಣ್ಣುತೆರಸುವುದಾಗಿದೆ.

ತಾವು ಪರಿಷತ್ಪತ್ರಿಕೆ, ಪ್ರಾಚೀನ ಕರ್ಣಾಟಕ, ಜಯ ಕರ್ಣಾಟಕ, ಇವೇ ಮೊದಲಾದ ಪತ್ರಿಕೆಗಳಲ್ಲಿ ಬರೆದ ಸಂಶೋಧನಾತ್ಮಕ ಲೇಖನಗಳು ಕನ್ನಡ ಸಾಹಿತಿಗಳಲ್ಲಿ ತಮಗೊಂದು ಗಣ್ಯಸ್ಥಾನವನ್ನು ದೊರಕಿಸಿವೆ. ತಮ್ಮ “ಶ್ರೀ ಸುರೇಶ್ವರಾಚಾರ್ಯರ ಚರಿತ್ರೆ”, “ಶ್ರೀ ಮನ್ಮಧ್ವಾಚಾರ್ಯರ ಚರಿತ್ರೆ”, ಮತ್ತು “ಶ್ರೀ ಮಜ್ಜಯತೀರ್ಥರ ಚರಿತ್ರೆ” ಇವುಗಳು ತಮ್ಮ ಪ್ರೌಢಿಮೆಯನ್ನು ವ್ಯಕ್ತಗೊಳಿಸುತ್ತಿವೆ. ಸತ್ಯಾನ್ವೇಷಣ ಬುದ್ಧಿ, ಚಿಕಿತ್ಸಕ ದೃಷ್ಟಿ, ಗಂಭೀರವಾದ ವಾಕ್ಸರಣಿ, ಇವು ತಮ್ಮ ಬರವಣೆಗೆಗಳಲೆಲ್ಲಾ ಎದ್ದು ಕಾಣುತ್ತಿವೆ.

ಹೆಚ್ಚಿನದಾಗಿ ತಾವು ಪ್ರಾಚೀನ ಕಾಲದ ನಮ್ಮ ಕಾಣ್ವಶಾಖಾ ಬ್ರಾಹ್ಮಣ ಮಹಾಪುರಷರಾದ ಜಗದ್ಗುರುಗಳಾದಂಥ ಶ್ರೀ ಸುರೇಶ್ವರಾಚಾರ್ಯರು, ಶ್ರೀ ಮನ್ಮಧ್ವಾಚಾರ್ಯರು, ಮತ್ತು ಶ್ರೀ ಟೀಕಾಚಾರ್ಯರು; ಚಕ್ರವರ್ತಿಗಳಾಗಿದ್ದಂಥ ಕಾಣ್ವ ಸಾಮ್ರಾಜ್ಯ ಚಕ್ರವರ್ತಿಗಳು; ಮಹಾಮಂತ್ರಿಗಳಾಗಿದ್ದಂಥ ಶುಂಗವಂಶದ ಚಕ್ರವರ್ತಿಯ ಮಂತ್ರಿಗಳು, ರಾಷ್ಟ್ರಕೂಟ ವಂಶದ ಚಕ್ರವರ್ತಿ ಮುಮ್ಮಡಿ ಕೃಷ್ಣದೇವನ ಮಂತ್ರಿ ಗಜಾಂಕುಶ, ಸಾಲೋಟಿಗೆಯಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದಂಥ ರಾಷ್ಟ್ರಕೂಟದ ಮಹಾಮಂತ್ರಿ ಚಕ್ರಾಯುಧ ಬುಧ, ಚಾಳುಕ್ಯ ಸಾಮ್ರಾಟ ಜಗದೇಕಮಲ್ಲನ ಮಂತ್ರಿ ದುರ್ಗಸಿಂಹ, ವಿಕ್ರಮಾದಿತ್ಯನ ಮಂತ್ರಿ ವಿಜ್ಞಾನೇಶ್ವರ ಪಂಡಿತ ಹೊಯ್ಸಳರ ಮಂತ್ರಿ ಲಕುಮಯ್ಯ, ಯಾದವ ರಾಮದೇವರಾಯನ ಮಂತ್ರಿ ಹೇಮಾದ್ರಿ, ಇವರುಗಳೂ, ಕವಿ ಪುಂಗವರಾದ ಗದಾಯುದ್ಧದ ರನ್ನ, ರುದ್ರಭಟ್ಟ, ವಚನಕಾರ ಬಸವೇಶ್ವರ, ತೆನ್ನಾಲಿ ರಾಮಕೃಷ್ಣ, ಭದ್ರಾಚಲ ರಾಮದಾಸ, ಈ ಮಹನೀಯರುಗಳ ಚರಿತ್ರೆಗಳನ್ನು ಶೋಧನೆ ಮಾಡಿ, ಬರೆದು ಪ್ರಸಿದ್ಧಪಡಿಸಿ, ಕಾಣ್ವಶಾಖೆಯವರಾದ ನಮಗೆ ಮಹದುಪಕಾರವನ್ನು ಮಾಡಿರುವಿರಿ.

ಮಹನೀಯರೇ, ತಮಗೆ ಶುಭವಾಗಲಿ. ಮುಂದೆ ತಾವು ಇನ್ನೂ ಶಾಶ್ವತ ಕೀರ್ತಿಯನ್ನು ಪಡೆಯುವಂತೆ ಜಗದೀಶ್ವರನು ತಮಗೆ ದೀರ್ಘಾಯುರಾರೋಗ್ಯಗಳನ್ನೂ ಸಂಪತ್ತನ್ನೂ ಸುಖ ಸಂತೋಷಗಳನ್ನೂ ಕರುಣಿಸಲಿ.

ಇಂತು
ಶ್ರೀ ಶುಕ್ಲ ಯುಜುರ್ವೇದ ಸಭಾ ಸದಸ್ಯರ ಬಿನ್ನಹಗಳು
ಶ್ರೀ ಯಾಜ್ಞವಲ್ಕ್ಯಾಶ್ರಮ, ಚಾಮರಾಜಪೇಟೆ – ಬೆಂಗಳೂರು ನಗರ
೧೮ನೆಯ ಅಗಸ್ಟ್‌ ೧೯೩೨