‘ಧಾರವಾಡ ವಿಜಯ’ ಮಂಗಳವಾರ ತಾರೀಖು ೧೭ನೇ ಜನವರಿ ೧೯೨೮ ಇಸ್ವಿ ನಾ ಶ್ರೀ ರಾಜಪುರೋಹಿತ ಕೈಫಿಯತ್ತು

ನಾನು ವಸ್ತುತಃ ಮಾಧ್ವಮತಸ್ಥನಾಗಿದ್ದೇನೆ. ಆರ್ಯ ಸಂಸ್ಕೃತಿಯ ದೃಷ್ಟಿಯಿಂದ ಶ್ರುತಿಸಮ್ಮತವಾದ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಪ್ರಭೃತಿ ಮತಗಳ ವಿಷಯವಾಗಿ ಸಂಪೂರ್ಣ ಆದರ ಭಾವವುಳ್ಳಂಥ ನವಮತವಾದಿಯಾಗಿದ್ದೇನೆ. ಆತ ಏವ, ಶೃಂಗೇರಿ ಮಠದ ಆದ್ಯ ಜಗದ್ಗುರುಗಳಾದ ಭಗವತ್ಪೂಜ್ಯರಾದ ಶ್ರೀಮತ್‌ ಸುರೇಶ್ವರಾಚಾರ್ಯರ ಚರಿತ್ರೆಯನ್ನು ಬರೆದು, ಅದಕ್ಕೋಸ್ಕರ ಶ್ರೀ ಶೃಂಗೇರಿ ಮಠದ ಈಗಿನ ಜಗದ್ಗುರುಗಳಾದ ಭಗವತ್ಪೂಜ್ಯರಾದ ಶ್ರೀ ಮಚ್ಚಂದ್ರಶೇಖರ ಭಾರತಿ ಮಹಾಸ್ವಾಮಿಗಳವರ ಸನ್ನಿಧಿಯಿಂದ ಸಂಭಾವನೆಯನ್ನು ಪಡೆದು, ಪ್ರತಿವರ್ಷ ಮಾಘಶುದ್ಧ ದ್ವಾದಶಿಗೆ ಶ್ರೀ ಸುರೇಶ್ವರಾಚಾರ್ಯರ ಪುಣ್ಯತಿಥಿಯ ಮಹೋತ್ಸವವನ್ನು ಸಾರ್ವಜನಿಕ ರೀತಿಯಿಂದ ಅಗಡಿ, ಹಾನಗಲ್ಲ, ಹುಲಗೂರು, ರಾಣೆಬೆನ್ನೂರ, ತಡಕೋಡ ಮುಂತಾದ ಗ್ರಾಮಗಳಲ್ಲಿ ಪ್ರತಿವರ್ಷ ಒಂದೊಂದು ಕಡೆಗೆ ಮಾಡುತ್ತ ಇಂದಿನವರೆಗೆ ಬಂದಿದ್ದೆನೆ. ಈ ವರ್ಷ ಕೆಲವರು ಮಹನೀಯರು ಪುರಾಣ ಮತವಾದಿಗಳು ಶ್ರೀ ಸುರೇಶ್ವರಾಚಾರ್ಯೋತ್ಸವವನ್ನು ಮಾಡುತ್ತಿರುವುದು ದೊಡ್ಡ ಅಪರಾಧವೆಂದು ಭಾವಿಸಿ, ನನ್ನ ಮೇಲೆ ಗಲಭೆಯನ್ನು ಎಬ್ಬಿಸಿ, ಉದಾತ್ತಾರ್ಥವಾಹಕವಾದ “ಆಚಾರ್ಯ” “ಭಟ್ಟ” ಈ ಪೂಜ್ಯ ಶಬ್ದಗಳ ವಿಡಂಬನೆಯನ್ನು ತಮ್ಮ ವಿಜಯ ಪತ್ರಿಕೆಯ ಮುಖಾಂತರ ಮಾಡಿರುತ್ತಾರೆ. ಈಗ ನಾನು ಅಜಾರಿಯಲ್ಲಿದ್ದುದರಿಂದ ತಮ್ಮ ಪತ್ರಿಕೆಗೆ ಆಗಿಂದಾಗ್ಗೆ ಸೋಪಪತ್ತಿಕವಾಗಿ ಹಾಗೂ ವಿಸ್ತಾರವಾಗಿ ಉತ್ತರವನ್ನು ಬರೆಯಲು ಶಕ್ತನಾಗಲಿಲ್ಲ. ಈ ಅಜಾರಿಯಿಂದ ಗುಣವಾದ ನಂತರ ಈ ವಿಷಯವಾಗಿ ಒಂದು ವಿಸ್ತೃತ ಲೇಖವನ್ನು ಬರೆದು ತಮ್ಮ ಕಡೆಗೆ ಕಳುಹಿಸುತ್ತೇನೆ. ಇದೇ ವಿಷಯವಾಗಿ ಪರಮಪೂಜ್ಯ ವೇ ಶಾ.ಸಂ. ಗಲಗಲಿ ಕೂರ್ಮಾಚಾರ್ಯರವರು ಹಾನಗಲ್ಲ ಗ್ರಾಮದಲ್ಲಿ ಜರುಗಿದ ಶ್ರೀ ಸುರೇಶ್ವರಾಚಾರ್ಯರ ಪುಣ್ಯತಿಥಿಯ ಮಹೋತ್ಸವ ಕಾಲದಲ್ಲಿ, ತಾವು ಉಪನ್ಯಾಸ ಮಾಡುವಾಗ್ಗೆ ಹೀಗೆ ಹೇಳಿದರು. “ಶ್ರೀಮತ್‌” ಸುರೇಶ್ವರಾಚಾರ್ಯರು ವೇದಧರ್ಮವನ್ನು ಬೌದ್ಧಧರ್ಮದ ಗಂಡಾಂತರದಿಂದ ಸಂರಕ್ಷಿಸಿದ್ದಾರೆ. ಇವರು ಅವತರಿಸಿದ್ದರಿಂದಲೇ ಬ್ರಾಹ್ಮಣ ಧರ್ಮವು ಇಂದಿಗೂ ಜೀವಂತವಾಗಿ ಉಳಿದಿದೆ. ಇಲ್ಲದಿದ್ದರೆ, ಎಂದೋ ವೇದಧರ್ಮವು ನಷ್ಟವಾಗಿ ನಮ್ಮ ಭರತ ಖಂಡವೆಲ್ಲ ಬೌದ್ಧಮಯವಾಗಿ ಹೋಗುತ್ತಿತ್ತು. ಇಂಥ ಭಯಂಕರವಾದ ಗಂಡಾಂತರದಿಂದ ಶ್ರೀ ಸುರೇಶ್ವರಾಚಾರ್ಯರು ಬ್ರಾಹ್ಮಣ ಧರ್ಮದ ಪುನರುಜ್ಜೀವನ ಮಾಡಿದ್ದಾರೆ. ಅರ್ಥಾತ್‌ ಶ್ರೀ ಸುರೇಶ್ವರಾಚಾರ್ಯರ ಪುಣ್ಯತಿಥಿಯ ಉತ್ಸವವನ್ನು ಅದ್ವೈತ ಮತಸ್ಥರಷ್ಟೇ ಅಲ್ಲ; ದ್ವೈತ ವಿಶಿಷ್ಟಾದ್ವೈತ ಮುಂತಾದ ಸರ್ವವೈದಿಕ ಮತಗಳ ಬ್ರಾಹ್ಮಣರೆಲ್ಲರೂ ಮಾಡುವುದು ಅವರ ಅನುಲ್ಲಂಘನೀಯವಾದ ಕರ್ತವ್ಯವಾಗಿದೆ.

ಇದೇ ರೀತಿಯಾಗಿ ರಾಣೆಬೆನ್ನೂರಲ್ಲಾದ ಉತ್ಸವಕಾಲಕ್ಕೆ ಸುಪ್ರಸಿದ್ಧ ಶ್ರೀಮಾನ್‌ ವೇ ತೀ ಗಳಗನಾಥರವರು ತಮ್ಮ ಉಪನ್ಯಾಸದಲ್ಲಿ ಈ ಶ್ರೀ ಸುರೇಶ್ವರಾಚಾರ್ಯೋತ್ಸವವನ್ನು ಮಾಡುವುದಕ್ಕೆ ರಾಜಪುರೋಹಿತರು ಹೇಗೆ ಅಧಿಕಾರಿಯಾಗಿದ್ದರೆಂಬುದನ್ನು ಸ್ಪಷ್ಟೀಕರಣ ಮಾಡಿ ಹೇಳಿದರು.

ನಾನು ಈಗ ಭಗವತ್ಪೂಜ್ಯ ಪಾದಾಚಾರ್ಯರಾದ ಶ್ರೀ ಮಜ್ಜಯತೀರ್ಥರು ಎಂದರೆ ಶ್ರೀ ಮಟ್ಟಿಕಾಚಾರ್ಯರ ಚರಿತ್ರೆಯನ್ನು ಬರೆಯುವುದಕ್ಕೆ ಉಪಕ್ರಮಿಸಿದ್ದೇನೆ. ಈ ಕಾರ್ಯವು ಮುಗಿದ ಕೂಡಲೆ ವಿಶಿಷ್ಟಾದ್ವೈತ ಮತದ ಸುಪ್ರಸಿದ್ಧ ಭಗವತ್ಪೂಜ್ಯಪಾದರಾದ ಶ್ರೀ ಮದ್ವೇದಾಂತ ದೇಶಿಕಾಚಾರ್ಯರ ಚರಿತ್ರೆಯನ್ನು ಬರೆಯಬೇಕೆಂದು ನಿಶ್ಚಯ ಮಾಡಿದ್ದೇನೆ. ವಿಶಿಷ್ಟಾದ್ವೈತ ಮತ ಪ್ರವರ್ತಕರಾದ ಪುಣ್ಯಶ್ಲೋಕ ಚರಿತ್ರೆಯನ್ನು ನಾನು ಬರೆದ ಕೂಡಲೆ ಪುರಾಣ ಮತವಾದಿಗಳಲ್ಲಿ ಕೆಲವರು ಮಹನೀಯರು ನನ್ನನ್ನು ನಾರಾಣಯ್ಯಂಗಾರನೆಂದು ಕರೆಯುವ ಹೂಲಿಯನ್ನು ಎಬ್ಬಿಸುವರೋ ಹೇಗೆ? ನೋಡಬೇಕಾಗಿದೆ.

ನಾರಾಯಣ ಶ್ರೀನಿವಾಸ ರಾಜಪುರೋಹಿತ
ಧಾರವಾಡ.