೨೮.೦೧.೧೯೪೧
ಕುರುವತ್ತಿ

. ಕಲ್ಯಾಣ ಚಾಳುಕ್ಯ ಚಕ್ರವರ್ತಿಯಾದ – ಆಹವ ಮಲ್ಲನು ಜಲಸಮಾಧಿಯನ್ನು ತೆಗದುಕೊಂಡ ಸ್ಥಳವನ್ನು (ಮಡುವನ್ನು) ನೋಡಿದೆನು.
೨. ಆಭಿನವ ಸೋಮೇಶ್ವರ ದೇವಾಲಯವನ್ನೂ ಶಿಲಾಸಾಸನವನ್ನೂ ನೋಡಿದೆನು.

೨೯.೦೧.೧೯೪೧
ಕುರುವತ್ತಿ – ಮೈಲಾರ

ಮೊಸಲವಾಡ (ಮೈಲಾರದ ಹಾಲಯ್ಯನವರು) ಇವರ ಮನೆಯಲ್ಲಿ ತಾಡವಾಲಿ ಗ್ರಂಥಗಳಿವೆ. ಹಿರೇಹಡಗಲಿ ಹತ್ತಿರ ೩ ಮೈಲು ಗದಗಿನ ಶಾಂತವೀರಪ್ಪನವರು ಮೊಸಲವಾಡ

೩೧.೦೧.೧೯೪೧
ಮೈಲಾರ – ಹಾವನೂರು

ಹಾವನೂರು ಸಂಸ್ಥಾನದ ಶ್ರೀ ಹನುಮಂತಗೌಡನ ಕೋಟೆ ಕೊತ್ತಲಗಳನ್ನು ನೋಡಿದೆನು.

೦೨.೦೨.೧೯೪೧
ಗಳಗನಾಥ ಹಾವನೂರು ಗುತ್ತಲ

ಗಳಗನಾಥ ಗ್ರಾಮದ ಪ್ರಾಚೀನ ಹೆಸರು ‘ಪಲ್ಗುಣಿ’

“ಪಲ್ಗುಣಿಯ ತೀರ್ಥವಂ ಮಿನ್ದು”

೦೬.೦೧.೧೯೪೧
ಹಾವನೂರು

. ಕಂಚಿನ ಪತ್ರದ ನಕಲನ್ನು ತೆಗದುಕೊಂಡೆನು
೨. ೫ ತಾಮ್ರದ ಪ್ರಾಚೀನ ನಾಣ್ಯಗಳನ್ನು ಸಂಪಾದಿಸಿದನು

೧೬.೦೨.೧೯೪೧
ಮಾಗಳ

ಮಾಂಗೊಳ ಅಗ್ರಹಾರದಲ್ಲಿ ೨೫ ಮನೆತನಗಳು ಪಂಚಮ ಜೈನರವು ಇವೆ.

೧೫.೦೩.೧೯೪೧
ಸವಣೂರ – ಮಾಹುರ

ಶಕವರ್ಷ ೧೫೧೪ನೆಯ ನಂದನ ಸಂವತ್ಸರದ ವೈಶಾಖ ಶುದ್ಧ ಪಂಚಮಿ ಶುಕ್ರವಾರ ತಿಮ್ಮಪ್ಪಗೌಡನ ಮಾನ್ಯ.

೨೩.೦೩.೧೯೪೧
ಮೊಲಗುನ್ದ – ಹತ್ತಿಗುನ್ದ (ಶೇಷಗಿರಿ)

ಎರಡು ಸನದುಗಳನ್ನು ಬರೆದುಕೊಂಡೆನು. ಶಿಲಾಲೇಖನವನ್ನು ಓದಿದೆನು. ಚಾಳುಕ್ಯ ವಿಕ್ರಮ ಕಾಲದ ೫ನೆಯ ದುಂದುಭಿ ಸಂವತ್ಸರದ ಶಿಲಾಶಾಸನ ರೇವೇಶ್ವರ ದೇವರ್ಗ್ಗೆ ಸ್ನಾನ ನೈವೇದ್ಯಕ್ಕೆ ದಾನ ಮಾಡಿದ್ದು.

೦೪.೦೬.೧೯೪೧
ಧಾರವಾಡ

ಗೋಕಾಕ, ಜಮಖಂಡಿ, ಸಾವಳಗಿ, ಗೋರೆ, ತೆಲಸಂಗ, ಅಥಣಿ, ವಿಜಾಪುರ, ಇಂಡಿ, ನಿಂಬರಗಿ, ಸಾಲೋಟಗಿ, ಹಲಸಂಗಿ, ಸಾರವಾಡ, ಶಾಕಂಡಕಿ, ಶಿಂದಗಿ ತಾ. ಪ್ರವಾಸ ನಿರ್ಣಯ

೦೨.೦೭.೧೯೪೧
ಧಾರವಾಡ

ದೇವಗತಿ, ನಾರಕಗತಿ, ತಿರ್ಯಕಗತಿ
ಮನುಷ್ಯಗತಿ – ಗತಿಚತುಷ್ಟಯ

೨೨.೦೯.೧೯೪೧
ಮಿರಜ

ವಿವೇಕ ಶೂನ್ಯ ಚಳವಳಿ
ಕರ್ತೃತ್ವ ಶೂನ್ಯ ಆವೇಶ
ನಿರಾಶಾಜನ್ಯ ಔದಾಸೀನ್ಯ

೦೫.೧೧.೧೯೪೧
ಮುಂಬಯಿ

ತುಕಂಭಟ್ಟ ಪಳಸೀಕರ (ಪಳಸಿ ಗ್ರಾಮ ಅಹಮದ ನಗರ ಜಿಲ್ಲೆಯಲ್ಲಿ ಪುಣತಾಂಬೆ ಗ್ರಾಮದ ಹತ್ತಿರ) ಬಿಂಬರಾಜ ಶಿಲಾಹಾರ

೦೪.೧೨.೧೯೪೧
ಮುಂಬಯಿ

ಧಾರವಾಡ ಬಿಟ್ಟು ೮೦ ದಿವಸಗಳಾದವು.

೧೯೪೨

೦೧.೦೧.೧೯೪೨
ಸಂಗೂರು

. ಸ್ವಸ್ತಿ ಸಮಸ್ತ ಭುವನಾಶ್ರಯ ಶ್ರೀ… ಮಹಾರಾಜಾಧಿರಾಜ ಪರಮೇಶ್ವರ ಸತ್ಯಾ.
೨. ಶ್ರಯ ಕುಳತಿಳಕಂ ಶ್ರೀ ವೀರ ಪ್ರತಾಪ ಹರಿಯರ ಮಹಾರಾಯರ ಕುಮಾರ ದೇವರಾಯ
೩. ರು ಸುಖದಿಂ ರಾಜ್ಯಂಗೆಯ್ದು ಕುಮಾರನಾಥ ದೇವರ ಪ್ರತಿಷ್ಠೆ ಶಕ ೧೩೨೯ನೆಯ ಸರ್ವಜಿತು ಸಂವತ್ಸರ ಆಶ್ವಿಯುಜ ಶುದ್ಧ ಆದಿತ್ಯವಾರದಲ್ಲು.

೦೪.೦೧.೧೯೪೨
ಸಂಗೂರು

ಕುಮಾರ ರಾಮನ ವಿಗ್ರದಹ ಕೆಳಗಿನ ಶಿಲಾಶಾಸನವನ್ನು ಓದಿ ಬರೆದುಕೊಂಡೆನು.

೧೮.೦೧.೧೯೪೨
ಹಾವೇರಿ – ಧಾರವಾಡ

‘ಗಂಡುಗಲಿ ಕುಮಾರ ರಾಮ’ ಎಂಬ ಲೇಖವನ್ನು ಬರೆದೆನು.

೦೨.೦೨.೧೯೪೨
ಧಾರವಾಡ

ಕರ್ಮವೀರ ಹುಬ್ಬಳ್ಳಿ ಈ ವಾರ ಪತ್ರಿಕೆಯಲ್ಲಿ (೦೨.೦೨.೧೯೪೨) ನಾನು ಬರೆದ ‘ಗಂಡುಗಲಿ ಕುಮಾರ ರಾಮ’ ಎಂಬ ಲೇಖವು ಪ್ರಸಿದ್ಧವಾಗಿದೆ.

೧೫.೦೨.೧೯೪೨
ಧಾರವಾಡ

ಕರ್ಮವೀರ ಪತ್ರಿಕೆಯಲ್ಲಿ ಕುಮಾರರಾಮನನ್ನು ಕುರಿತು ಲೇಖ ಪಾ. ಭೀ. ದೇಸಾಯಿ

೨೨.೦೨.೧೯೪೨
ಧಾರವಾಡ

‘ಕುಮಾರರಾಮನು ವಿಜಯನಗರ ದೇವರಾಯನ ಕಾಲದವನೇ ಹೌದು’ ಎಂಬ ಲೇಖ ಬರೆದೆ. (ಅದು ಕರ್ಮವೀರ ೦೨.೦೩.೧೯೪೨ರಲ್ಲಿ ಪ್ರಕಟವಾಗಿದೆ).

೩೦.೦೩.೧೯೪೨
ಧಾರವಾಡ – ಹಾನಗಲ್ಲ

ತೀರ್ಥಹಳ್ಳಿ ಹೋಬಳಿ ಕೊಕ್ಕೊಡುಗ್ರಾಮದ ಮಜರೆ ಕೊಳವಳ್ಳಿ ಗ್ರಾಮದ ಮಾಸ್ತಿ ದೇವಸ್ಥಾನದಲ್ಲಿ ವೀರಕಲ್ಲು (ತೀರ್ಥಹಳ್ಳಿ ತಾ. ೨೩)

ಕುಮಾರರಾಮನಾಥನ ಶಾಸನ

೨೭.೦೪.೧೯೪೨
ಹಾವೇರಿ – ಧಾರವಾಡ

. ಕೊಳವಳ್ಳಿ ವೀರಗಲ್ಲು
೨. ಇಬ್ನಬತ್ತೂತ ಕಂಪಲಿರಾಜ
೩. ಪೆರ್ಗಡೆ ಎಂಬ ಅಧಿಕಾರ
೪. ಜೀವಿಸಿರುವಾಗ್ಗೆ ಸ್ಮಾರಕಗಳು
ಅ) ಲೇಪಾಕ್ಷಿ
ಆ) ತಿರುವಣ್ಣಮಲಾಯಿ
೫. ಸಂಗೂರು ಜೈನರ ಕೇಂದ್ರ ಜೈನ ಬೈಚಪ್ಪ ಮಂತ್ರಿ ಜನ್ಮ ಸ್ಥಳ.

೦೪.೦೮.೧೯೪೨
ಧಾರವಾಡ

ಬಾಗಲಕೋಟೆಯಿಂದ ಶ್ರೀ ಬಿಂದುಮಾಧವ ಬುರ್ಲಿ ಇವರು ಹುಣಶಿಹೊಳೆ ಕಣ್ವಮಠಕ್ಕೆ ನಾ. ಶ್ರೀ ರಾಜಪುರೋಹಿತರನ್ನು ಮಠಾಧೀಶರನ್ನಾಗಿ ಮಾಡಬೇಕೆಂದು ವಿಚಾರ ಮಾಡುತ್ತಾರೆಂಬ ಸುದ್ದಿ ತಂದಿದ್ದಾರೆ.

೧೫.೧೦.೧೯೪೨
ತುಮ್ಮಿನಕಟ್ಟಿ

ಈ ದಿನ ರಾತ್ರಿ ೮ ಗಂಟೆಗೆ ಚಾಲುಕ್ಯ ತಾಮ್ರ ಪಟವು ಶ್ರೀ ಮಲ್ಲಪ್ಪ ನೀಲಪ್ಪ ಬಾಣಾವರ ಇವರಿಂದ ನನ್ನ ವಶಕ್ಕೆ ಬಂದಿತು.

೧೯೪೩

೦೧.೦೧.೧೯೪೩
ಸೂಡಿ – ರೋಣ

. ವಿಷ್ಣುಶರ್ಮನ ಪಂಚತಂತ್ರ ಕನ್ನಡ ತಾಳೆಯೋಲೆಯ ಪುಸ್ತಕ
೨. ಸಪ್ತಮಾತೃಕಶಿಲೆಯ ತುಂಡು ಇವೆರಡರ ಸಂಪಾದನೆ

೦೨.೦೧.೧೯೪೩
ರೋಣ – ಸಯ್ಯಡಿ

ರೋಣದ ಶಿವಾಲಯ ಜಿನಾಲಯ ವೈಷ್ಣವ ದೇವಾಲಯಗಳನ್ನು ಶಿಲಾಶಾಸನಗಳನ್ನು ವೀರಗಲ್ಲುಗಳನ್ನು ಸಂಶೋಧಿಸಿ ನೋಡಿದೆನು.

೦೩.೦೧.೧೯೪೩
ಸಯ್ಯಡಿ

ಈ ಗ್ರಾಮದ ಎಲ್ಲ ದೇವಾಲಯಗಳನ್ನು ಶಿಲಾಶಾನಗಳನ್ನು ನೋಡಿದೆನು.

ಲಕ್ಷ್ಮೇಶ ಕವಿಯ ಜೈಮಿನಿ ಭಾರತದ ತಾಳೆಯೋಲೆಯ ಗ್ರಂಥವನ್ನು ಸಂಪಾದಿಸಿದೆ.

೦೮.೦೧.೧೯೪೩
ಜಕ್ಕಲಿ

೯+೨=೧೧ ತಾಮ್ರದ ನಾಣ್ಯಗಳು ಸಿಕ್ಕವು.

೦೪.೦೨.೧೯೪೩
ಧಾರವಾಡ

ದುರ್ಗಸಿಂಹನು ಕ್ರಿಪೂ ೧೦೨೪ರಿಂದ ೧೦೪೨ರ ಒಳಗೆ ತನ್ನ ಪಂಚತಂತ್ರವನ್ನು ಬರೆದನೆಂದು ಮೇಲೆ ವ್ಯಕ್ತ ಮಾಡಲ್ಪಟ್ಟಿರುವುದರಿಂದ ಆ ಗ್ರಂಥದಲ್ಲಿ ಸ್ತುತಿಸಲ್ಪಟ್ಟ ನಾಗಚಂದ್ರನೂ ಕೂಡ ೧೦೪೨ ಹಿಂದೆಯೇ ಇದ್ದನೆಂಬುದು ಸ್ಪಷ್ಟವಾಗುವುದಷ್ಟೆ.

೦೮.೦೨.೧೯೪೩
ಧಾರವಾಡ

“ಕಳಸಾಪುರದ ಶಾಸನದಲ್ಲಿ ಸ್ತುತನಾಗಿರುವ ಭಾಲಚಂದ್ರನೂ ಶ್ರವಣಬೆಳ್ಗೊಳದ ಶಾಸನದ ಬಾಲಚಂದ್ರನೂ ಅಭಿನ್ನರೆಂಬುದರಲ್ಲಿ ಸಂದೇಹಕ್ಕೆ ಅವಕಾಶವೇ ಇಲ್ಲ.”

೨೭.೦೨.೧೯೪೩
ಧಾರವಾಡ

* ಮೂಲ ಕರ್ನಾಟಕ ಕಾದಂಬರಿಯ ಪೂರ್ವ ಭಾಗದ ವಾಚನಕ್ಕೆ ಪ್ರಾರಂಭಮಾಡಿ ಶೋಧ ಮಾಡಿದೆನು.
* ಸಾಹಿತ್ಯ ದರ್ಪಣ ಓದಿ ‘ವಿರುದ್ದ ಮತಿಕೃತ್‌’ ಎಂಬ ಕಾವ್ಯ ದೋಷದ ತತ್ವವನ್ನು ಕಂಡು ಹಿಡಿದೆನು.

೨೮.೦೨.೧೯೪೩
ಧಾರವಾಡ

‘ವಿರುದ್ದ ಮತಿಕೃತ್‌’ ಎಂಬ ಕಾವ್ಯದೋಷದ ಚರ್ಚೆಯನ್ನು ಶ್ರೀ ಮ ಪ್ರ ಪೂಜಾರ ಇವರ ಸಂಗಡ ಮಾಡಿದೆನು.

೦೩.೦೩.೧೯೪೩
ಧಾರವಾಡ

ಹೇಮಚಂದ್ರ ಪ್ರಣೀತ ಕಾವ್ಯಾನುಶಾಸನ ೩ನೆಯ ಅಧ್ಯಾಯ ‘ವಿರುದ್ಧ ಬುದ್ಧಿ ಕೃತ್‌ ವಿರುದ್ಧ ಬುದ್ಧಿ ಕೃತ್ವಾನುಭಯೋಃ’

ಮಮ್ಮಟಿ, ಹೇಮಚಂದ್ರ, ಬಾಣಭಟ್ಟ ಇವರ ಗ್ರಂಥದ ಅಭ್ಯಾಸ.

೦೫.೦೩.೧೯೪೩
ಧಾರವಾಡ

ಕರ್ನಾಟಕ ಹಿಸ್ಟಾರಿಕಲ್‌ ರಿವ್ಹ್ಯೂಜ್ಯುಬಲೀ ಸಂಚಿಕೆಯಲ್ಲಿ ನನ್ನ ಭಾವಚಿತ್ರವನ್ನು ಹಾಕಿದ್ದಾರೆ.

೧೦.೦೩.೧೯೪೩
ಧಾರವಾಡ

ಕರ್ನಾಟಕ ಕಾದಂಬರಿಯ ಕರ್ತೃವಾದ ನಾಗವರ್ಮನು ಛಂದೋಂಬುಧಿಯ ಕರ್ತೃವಾದ ನಾಗವರ್ಮನಿಂದ ಅಭಿನನ್ನೆಂದು ಸಿದ್ಧಮಾಡಿದ್ದೇನೆ.

೨೨.೦೩.೧೯೪೩
ಧಾರವಾಡ

ನಾಗವರ್ಮನ ಲೇಖವನ್ನು ಪೂರ್ಣ ಬರೆದು ಮುಗಿಸಿದೆನು.

೦೬.೦೬.೧೯೪೩
ಧಾರವಾಡ

ಶಾಂತವೀರ ರಾಚಿದೇವ ಕಿತ್ತೂರ ಇವರ ಚರಿತ್ರೆ ಬರೆಯುವುದಕ್ಕೆ ಸಾಧನ ಸಂಗ್ರಹ ಮಾಡಿದ್ದು.

೧೫.೦೬.೧೯೪೩
ಧಾರವಾಡ

ಶ್ರೀ ಶಾಂತವೀರಯ್ಯನವರ ಚರಿತ್ರೆಯನ್ನು ಬರೆದದ್ದು.

೦೯.೦೭.೧೯೪೩
ಧಾರವಾಡ

ಪ್ರಸಂಗಾವಧಾನ

೧೮೮೦ – ೮೨ ೫೪ ವಯಸ್ಸು

೧೮೮೩ – ೧೮೮೪ ಮರಣ ವಿನೋದಿ ಸ್ವಭಾವ ಅಶಕ್ತತೆಯಿಂದ ಮರಣ ವೃದ್ಧಾಪ್ಯದಲ್ಲಿ ಲಗ್ನ II.

ಧೋಂಡೋ ನರಸಿಂಹ ಮುಳಬಾಗಲ (೮೪) ಗಾಂಜಬಡಕ.

೧೪.೦೭.೧೯೪೩
ಧಾರವಾಡ

೩ನೆಯ ಶನಿಯು ಐಶ್ವರ್ಯಯುಕ್ತವಾದದ್ದು ಪ್ರಾರಂಭವಾಗಿದೆ.

೧೭.೦೭.೧೯೪೩
ಧಾರವಾಡ

ಶ್ರೀಮಾನ್‌ ಎನ್‌. ಎಸ್‌. ಸುಬ್ಬರಾಯರ ಆಖ್ಯಾಯಿಕೆಯನ್ನು ಬರೆದೆನು.

೨೩.೦೭.೧೯೪೩
ಧಾರವಾಡ

ಶ್ರೀ ಮಾನ್‌ ಎಸ್‌. ಎಸ್‌. ಸುಬ್ಬರಾಯರ ವಿಷಯವಾಗಿ ನಾನು ಬರೆದ ಲೇಖವು ಇಂದಿನ ‘ಕನ್ನಡ ನುಡಿ’ ಎಂಬ ಸಾ. ಪರಿಷತ್ತಿನ ಪತ್ರಿಕೆಯಲ್ಲಿ ಪ್ರಸಿದ್ಧವಾಗಿದೆ.

೨೨.೦೮.೧೯೪೩
ಧಾರವಾಡ

ಬ್ರಾಹ್ಮೀ ಸ್ಥಿತಿಯ ಆಚರಣೆಯ ರಹಸ್ಯವು ತಿಳಿದು ಪ್ರಾರಂಭವಾಯಿತು.

೦೯.೧೦.೧೯೪೩
ಸಂಗೂರ

ರತ್ನಕರವರ್ಣಿಯ ಕಾಲನಿರ್ಣಯದ ಲೇಖವನ್ನು ಪೂರ್ಣವಾಗಿ ಬರೆದು ಮುಗಿಸಿದೆನು.

೧೫.೧೧.೧೯೪೩
ಧಾರವಾಡ

ಶ್ರೀ ಅಣ್ಣಿಗೇರಿ ಇವರಲ್ಲಿ ಕನಕದಾಸನ ಮೋಹಿನಿತರಂಗಿಣಿ ಓದಿ ಕನಕದಾಸನು ರಾಮಾನುಜ ಮತಾನುಯಾಯಿ ಎಂಬುದನ್ನು ನಿಶ್ಚಯಿಸಿದೆನು.

೨೩.೧೧.೧೯೪೩
ಸಂಗೂರು – ಕಾಗಿನೆಲೆ

ಆದಿ ಬಣಜಿಗರು ವಿಷ್ಣು ಭಕ್ತರು ರಾಮಾನುಜ ಮತಾನುಯಾಯಿಗಳು ೩೦ ವರ್ಷಗಳ ಹಿಂದೆ ಲಿಂಗಧಾರಣೆಯನ್ನು ಮಾಡಿದರು.

೧೯೪೪

೦೪.೦೩.೧೯೪೪
ಧಾರವಾಡ

೦೧. ಪೂಜ್ಯ ಚಿದಂಬರ ದೀಕ್ಷಿತರನ್ನು ಭೆಟ್ಟಿಯಾಗಿ ಪದಕಿ ವರನ ಬಗ್ಗೆ ವೃತ್ತಾಂತ ತಿಳಿದುಕೊಂಡೆ.
೦೨. ಶ್ರೀ ಕಾಳೆ ಇವರಲ್ಲಿದ್ದ ಸಹ್ಯಾದ್ರಿ ಮಾಸಿಕ ಓದಿದೆ.
೦೩. ಉಂತಮ್ಮಣಭಟ್ಟರಿಂದ ೨ ಅ. ಇಸ್‌ಕೊಂಡು ಜ್ಯೋತಿ ನಾಮಕಸಾಬಾಣ ತಂದೆನು.
೦೪. ಪದಕಿ ವರನ ವೃತ್ತಾಂತವನ್ನು ಶ್ರೀ ಹುಕ್ಕೇರಿಗೆ ತಿಳಿಸಿದೆನು.
೦೫. ಸ್ನಾನ, ದೇವ ಪೂಜಾ ಮಾಡಿದೆನು.
೦೬. ಕನಕದಾಸನ ಜಾತಿ ನಿರ್ಣಯದ ಲೇಖವನ್ನು ಬರೆದೆನು.
೦೭. ಜಿ. ಮಧ್ವನ ಕ್ಷೌರವನ್ನು ಮಾಡಿಸಿದೆನು.
೦೮. ಕನಕದಾಸನ ಜಾತಿ ನಿರ್ಣಯದ ಲೇಖವನ್ನು ಪ್ರೊ. ಬಸವನಾಳ ಮತ್ತು ಶ್ರೀಮಾನ್‌ ಕೂಡಲ ಸಿದ್ಧರಾಮಯ್ಯನವರು ಇವರಿಬ್ಬರಿಗೆ ತೋರಿಸಿದೆನು.
೦೯. ಶ್ರೀ ರಾಮರೆ ೧೨ ರೆ. ಟಿ. ೧೨ ಆ. ಪಲಕ್ತನದಲ್ಲು ತಂದೆ.
೧೦. ಶ್ರೀ ರಾಮರೆ, ೧ ಆ. ಕೊಟ್ಟು ಟೀಖಾಕ ಮಳೆ ಬಂದು ಮನೆಯಲ್ಲಿ ಸೋರಿತು.

೦೫.೦೩.೧೯೪೪
ಧಾರವಾಡ

೦೧. ಡಾ. ಜೋಷಿ ಇವರಿಂದ ೫ ರೂ ಕೈಗಡ ಇಸಕೊಂಡೆ
೦೨. ಸಂಯುಕ್ತ ಕರ್ನಾಟಕ ಓದಿದೆನು.
೦೩. ಶ್ರೀ ಡಿ. ಪಿ. ನರಗುಂದಕರರ ಭೆಟ್ಟಿ, ಚಿತ್ರಮಯ ಜಗತ್‌ ಇನ್ನೂ ಬಂದಿಲ್ಲ.
೦೪. ೨ ಶೇರು ಬೆಲ್ಲ ೧೨ ಆ. ಶಿಗೆಣಕಾಯಿ ಪುಡಿ ೧ ಶೇರು ಖೋಬ್ರಿಎಣ್ಣೆ ರೋಖ ಕೊಟ್ಟು ತಂದೆ.
೦೫. ಸ್ನಾನ, ದೇವಪೂಜಾ, ಫಲಹಾರ ಇತ್ಯಾದಿ
೦೬. ಶ್ರೀ ರಾಮಕೃಷ್ಣಪಂತ ಪದಕಿ ಇವರಿಗೆ ೫ ಶೇರು ಅಕ್ಕಿ ಬಾಬತು ೧ ರೂ. ೫ ಆ ೩ ಪೈ ರೋಖ ಕೊಟ್ಟೆ. ಇಂದು ರೇಶನಿಂಗ ಅಂಗಡಿ ಬೇಗನೆ ಬಂದಾದ್ದರಿಂದ ೫ ಶೇರು ಅಕ್ಕಿ ನಾಳೆ ತರುತ್ತೇವೆಂದು ಹೇಳಿದರು.
೦೭. ಅಂಬಕ್ಕಾ ಕುಲಕುರ್ಣಿ ಇವರ ಕೂಪನ್ನಿನಿಂದ ೧ ರೂ. ೧. ಆ. ರೋಖ ಕೊಟ್ಟು ೪ ಶೇರು ಅಕ್ಕಿ ತಂದೆ ೮ ಬ್ಯಾಂ. ರೆ. ೧೮ ಕೊಟ್ಟೆ.

೧೯೪೬

೦೩.೦೧.೧೯೪೬
ಕಮಡೊಳ್ಳ – ದೇವನೂರು

ದೇವನೂರು ಹೊರಮಗ್ಗಲಿಗೆ ಚಿಕ್ಕದೊಂದು ಶಿವಾಲಯವಿದೆ. ಇದು ಚಾಲುಕ್ಯ ಶಿಲ್ಪಕಲಾಕೌಶಲ್ಯದಿಂದ ಶೋಭಿಸುತ್ತದೆ.