ಕಳೆದ ಶತಮಾನದ ಪೂವಾರ್ಧದಲ್ಲಿ ಕನ್ನಡ ನಾಡು ನುಡಿ, ಚರಿತ್ರೆಗಳನ್ನು ಪ್ರಥಮ ಬಾರಿಗೆ ಕನ್ನಡಿಗರ ಇದುರಿಗೆ ಇಟ್ಟು ಕನ್ನಡಿಗರನ್ನು ಎಚ್ಚರಗೊಳಿಸಿದ ಇತಿಹಾಸ ಸಂಶೋಧಕ ನಾ. ಶ್ರೀ ರಾಜಪುರೋಹಿತರು ಕಣ್ಮರೆಯಾಗಿ ಅರ್ಧ ಶತಮಾನವೇ ಉರುಳಿ ಹೋಯಿತು. ಹಿಂದಿನ ಇಂದಿನ ಮುರು ತಲೆಮಾರುಗಳಿಗೆ ಅವರ ಹೆಸರು ಕೂಡ ಗೊತ್ತಿಲ್ಲ. ಇದೀಗ ಅವರ ನೆನಪಿನಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿ, ಪುಸ್ತಕವನ್ನು ಪ್ರಕಟಿಸುವ ಇಚ್ಚೆಯನ್ನು ವ್ಯಕ್ತಪಡಿಸಿತು. ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಚ್‌. ಜೆ. ಲಕ್ಕಪ್ಪಗೌಡ, ಪ್ರಸಾರಾಂಗ ನಿರ್ದೇಶಕ ಡಾ. ಹಿ. ಚಿ. ಬೋರಲಿಂಗಯ್ಯ ಅವರು ಶ್ರೀ ರಾಜಪುರೋಹಿತರ ಬಗ್ಗೆ ಒಂದು ಗ್ರಂಥವನ್ನು ಬರೆದುಕೊಡಲು ಕೇಳಿಕೊಂಡರು.

೧೭ ವರುಷಗಳ ಹಿಂದೆ ರಾಜಪುರೋಹಿತರ ಜನ್ಮ ಶತಮಾನೋತ್ಸವದಲ್ಲಿ ಅವರ ಬಗ್ಗೆ ಮಾತನಾಡಿದ್ದೆ. ಕಳೆದ ಸುಮಾರು ಮೂರು ದಶಕಗಳಿಗೂ ಮೇಲ್ಪಟ್ಟ ನನ್ನ ಸಂಶೋಧನಕಾರ್ಯದಲ್ಲಿ ಅಪ್ರತ್ಯಕ್ಷವಾಗಿ ಅವರ ಸಂಶೋಧನಕಾರ್ಯ ನನಗೆ ಮಾರ್ಗದರ್ಶಿಯಾಗಿದೆ. ಸಂಶೋಧನೆಯ ಯಾವ ಸಾಧನೆ ಸಲಕರಣೆಗಳಿದಲ್ಲದ ದಿನಗಳಲ್ಲಿ, ಸಂಪರ್ಕ ವ್ಯವಸ್ಥೆ, ಗ್ರಂಥಾಲಯಗಳೇ ಇಲ್ಲದ ದಿನಗಳಲ್ಲಿ ರಾಜಪುರೋಹಿತರು ಕಾಲುನಡಿಗೆಯಲ್ಲಿ ಅಡ್ಡಾಡಿ ಕನ್ನಡ ನಾಡನ್ನು ನಾಡವರಿಗೆ ಪರಿಚಯಿಸಿದ್ದು ಅತ್ಯಂತ ಮಹತ್ವದ ಮತ್ತು ಇಂದಿನ ಸಂಶೋಧಕರಿಗೆ ಮಾರ್ಗದರ್ಶಿಯಾಗಿದೆ.

ಕನ್ನಡದಲ್ಲಿ ಸುಮಾರು ೨೦೦, ಮರಾಠಿಯಲ್ಲಿ ಸುಮಾರು ೨೦ ಅಪ್ಪಟ ಸಂಶೋಧನ ಮೌಲ್ಯದ ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಅಂದಿನ ಬಹುತೇಕ ಸುಪ್ರಸಿದ್ಧ ಪತ್ರಿಕೆ, ನಿಯತಕಾಲಿಕೆಗಳಲ್ಲಿ ಅವುಗಳು ಕ್ರಿ.ಶ. ೧೯೧೦ ಮತ್ತು ೧೯೫೩ರ ಮಧ್ಯದಲ್ಲಿ ಪ್ರಕಟವಾಗಿವೆ. ಅವುಗಳ ಸಂಗ್ರಹ ಮತ್ತು ಪ್ರಕಟಣೆ ಅವಶ್ಯವಾಗಿ ಆಗಬೇಕಾಗಿದೆ. ಅದೇ ರೀತಿಯಲ್ಲಿ ಆರು ಗ್ರಂಥಗಳನ್ನು ಬರೆದಿದ್ದಾರೆ. ಸುದೈವ ಎಂಬಂತೆ, ಅವರ ಕಿರಿಯ ಮಗಳು ತಮ್ಮ ಸೇವಾ ನಿವೃತ್ತಿಯ ಅನಂತರ ಕಳೆದ ವರುಷ ಲಕ್ಷಾವಧಿ ರೂಪಾಯಿಗಳನ್ನು ಖರ್ಚು ಮಾಡಿ ಅವುಗಳನ್ನು ಮರುಪ್ರಕಟಿಸಿದ್ದಾರೆ.

ಶ್ರೀರಾಜಪುರೋಹಿತರು ತೀರಿಕೊಂಡ ಹೊಸತರಲ್ಲಿ ಡಾ. ಶ್ರೀನಿವಾಸ ಹಾವನೂರ ಅವರ ಕರ್ತವ್ಯಾನಂದ ಶ್ರೀ ರಾಜಪುರೋಹಿತರು ಎಂಬ ಐದು ಲೇಖನಗಳನ್ನು ಕರ್ಮವೀರದಲ್ಲಿ ಪ್ರಕಟಿಸಿದರು. ಅವುಗಳು ಮುಂದೆ ೧೯೫೮ರಲ್ಲಿ ಧಾರವಾದ ಪರಾಗ ಪ್ರಕಾಶನದವರಿಂದ ಪುಸ್ತಕ ರೂಪದಲ್ಲಿ ಪ್ರಕಟವಾಯಿತು. ಅದು ಬಿಟ್ಟರೆ ಈವರೆಗೆ ಮತ್ತೆ ಅವರ ಬಗ್ಗೆ ಪುಸ್ತಕಗಳು ಬಂದಿಲ್ಲವೆಂದು ಕಾಣುತ್ತದೆ. ಅವರ ಜನ್ಮ ಶತಮಾನೋತ್ಸವದ ಕಾಲದಲ್ಲಿ ಅಲ್ಲಲ್ಲಿ ಒಂದೆರಡು ಸಾಮಯಿಕ ಲೇಖನಗಳನ್ನು ಬಿಟ್ಟರೆ ಶ್ರೀ ರಾಜಪುರೋಹಿತರು ಇಂದು ನಮಗೆಲ್ಲ ಅಪರಿಚಿತರು. ಅವರ ಗ್ರಂಥಗಳ, ಲೇಖನಗಳ ಮರು ಅಭ್ಯಾಸದ ಅಗತ್ಯ ಇದೆ.

ಹಂಪಿ ವಿಶ್ವವಿದ್ಯಾಲಯದ ಆಣತಿಯಂತೆ ಈ ಪುಸ್ತಕವನ್ನು ಬರೆಯಲು ಪ್ರಾಂರಂಭಿಸಿದಾಗ ಮೂಲದ್ರವ್ಯ ಡಾ. ಹಾವನೂರರ ಪುಟ್ಟ ಪುಸ್ತಕ ಎಂದು ಬೇರೆ ಹೇಳಬೇಕಾಗಿಲ್ಲ. ಅನಂತರ ರಾಜಪುರೋಹಿತರ ಕಿರಿಯ ಮಗಳು ಶ್ರೀಮತಿ ಸರೋಜಿನಿ ಕುಲಕರ್ಣಿ ಅವರು ರಾಜಪುರೋಹಿತರ ೩೫ ದಿನಚರಿ ಪುಸ್ತಕಗಳನ್ನು, ತಮ್ಮಲ್ಲಿದ್ದ ಒಂದಿಷ್ಟು ಹಳೆಯ ಕಾಗದಗಳನ್ನು ಪೇಪರ್‌ ಕಟಿಂಗ್ಸ್‌ಗಳನ್ನು ಕೊಟ್ಟರು. ಡಾ. ಹಾವನೂರ ಅವರಿಗೋ ಪೋನಿಸಿದೆ. ಅವರೂ ತಮ್ಮಲ್ಲಿದ್ದ ಅಂದು ಸಂಗ್ರಹಿಸಿದ ಕಾಗದಗಳನ್ನು ಟಿಪ್ಪಣಿಗಳನ್ನು ರವಾನಿಸಿದರು. ಅವುಗಳನ್ನು ಮುಂದೆ ಇಟ್ಟುಕೊಂಡು ಸಿದ್ಧವಾಗಿದೆ. ಈ ಪುಸ್ತಕ.

ಪುಸ್ತಕ ಬರೆಯುವ ಮೊದಲು ರಾಜಪುರೋಹಿತರ ಸಂಶೋಧನ ಲೇಖನಗಳನ್ನು ಇನ್ನೊಮ್ಮೆ ಪೂರ್ತಿ ಓದಬೇಕೆಂಬ ಇಚ್ಛೆ ಪೂರ್ತಿಗೊಳ್ಳಲಿಲ್ಲ. ದೊರೆತ ಲೇಖನಗಳ ಬಗ್ಗೆ ಒಂದಿಷ್ಟು ಹೇಳಲು ಯತ್ನಿಸಿರುವೆ.

ಪುಸ್ತಕ ಬರೆಯಲು ಪ್ರಚೋದಿಸಿ ಸಾಮಗ್ರಿ ಒದಗಿಸಿದ ಶ್ರೀಮತಿ ಸರೋಜಿನಿ ಕುಲಕರ್ಣಿ, ಅದಕ್ಕೆ ಪೂರಕವಾಗಿ ಉತ್ತೇಜನ ನೀಡಿದ ಗುರು ಡಾ. ಶ್ರೀನಿವಾಸ ಹಾವನೂರ, ಪ್ರಕಟಿಸುತ್ತಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್‌. ಜೆ. ಲಕ್ಕಪ್ಪಗೌಡರಿಗೂ, ಪ್ರಸಾರಾಂಗ ನಿರ್ದೇಶಕ ಡಾ. ಹಿ. ಚಿ. ಬೋರಲಿಂಗಯ್ಯನವರಿಗೆ ನನ್ನ ಕೃತಜ್ಞತೆಗಳು.

ನಾ. ಶ್ರೀ ರಾಜಪುರೋಹಿತರ ಸಂಶೊಧನ ಲೇಖನಗಳ ಸಂಗ್ರಹ ಮತ್ತು ಪ್ರಕಟಣೆಗೆ ಈ ಪುಸ್ತಕ ಪ್ರಚೋದನೆ ನೀಡಿದರೆ ಶ್ರಮ ಸಾರ್ಥಕವೆಂದು ಭಾವಿಸಿರುವೆ.

ಹಂಪ. ನಾಗರಾಜಯ್ಯ
ಮಹೀಪತಿ, ೬೩೩, ಕೀರ್ತಿನಗರ,
ಬಿಜಾಪುರ, ೫೮೬ ೧೦೧.
೮.೮.೨೦೦೩