೧೯.೦೫.೧೯೫೦
ಹೈದರಾಬಾದ

ದೇವರು ಅಯ್ಯನವರ ವಂಶವೃಕ್ಷ (ದೇವದುರ್ಗ)

07_280_SNSR-KUH

೨೦.೦೫.೧೯೫೦
ಹೈದರಾಬಾದ

08_280_SNSR-KUH

೦೭.೦೬.೧೯೫೦
ಸಕಲಾತಪುರ – ಗುರುಮಠಕಲ್
‌ – ಯಾದಗಿರಿ

. ಔರಂಗಜೇಬನ ಕೊನೆಯ ಕಾಲದಲ್ಲಿ (ಕ್ರಿ.ಶ. ಸು ೧೭೦೫ – ೧೭೦೯) ದೇವದುರ್ಗದ ಕುಂಟ ವಾಸುದೇವ ನಾಯಕನು ಇದ್ದು ಸುರಪುರದ ನಾಯಕರ ವಿರುದ್ದ ಮೊಗಲರ ಪಕ್ಷವನ್ನು ಸ್ವೀಕರಿಸಿದ್ದನು.
೨. ಸುರಪುರದ ವೆಂಕಟಪ್ಪನಾಯಕನು (ಕ್ರಿ. ಪೂ. ೧೭೭೪ – ೧೮೦೨) ದೇವದುರ್ಗದ ಕಿಲಚು ನಾಯಕನ ಮಗ ಕೊಳ್ಳಿರಂಗಪ್ಪ ನಾಯಕನ ಸಂಗಡ ಯುದ್ಧ ಮಾಡಿದನು. ಇದರ ಕಾರಣವೇನೆಂದರೆ. ವೆಂಕಟಪ್ಪನಾಯಕನು ಒಬ್ಬ ಮುಸಲ್ಮಾನನ ಸ್ತ್ರೀಯನ್ನು ಸಹ ಲಗ್ನವಾದನು. ಎಂದರೆ ತಾಳಿಕಟ್ಟಿ ಕೊಂಡಿದ್ದನು. ಆದ್ದರಿಂದ ಇವನ ಆಪ್ತ ಇಷ್ಟರಾದ ಬೇಡ ನಾಯಕರೆಲ್ಲರೂ ಇವನ ಮೇಲೆ ಬಹಿಷ್ಕಾರವನ್ನು ಹಾಕಿದರು. ಇದಕ್ಕೆ ತನ್ನ ಸೋದರಮಾವನಾದ ಕೊಳ್ಳಿ ರಂಗಪ್ಪ ನಾಯಕನೇ ಮುಖ್ಯ ಕಾರ್ಯಕರ್ತೃವೆಂದು ತಿಳಿದು ಇವನ ಸಂಗಡ ಯುದ್ಧವನ್ನು ಹೂಡಿದನು. (ಈ ವೆಂಕಟಪ್ಪ ನಾಯಕನ ಮಗನ ಜಾವಳ ಸಮಾರಂಭಕ್ಕೆ ಯಾರೂ ಬರಲಿಲ್ಲ).

೦೮.೦೬.೧೯೫೦

ದೇವದುರ್ಗ ನಾಯಕರ ವಂಶವೃಕ್ಷ
|
ಕುಂಟ ವಾಸುದೇವ ನಾಯಕ (ಕ್ರಿ.ಶ. ೧೭೦೭)
|
ಕಿಲಚನಾಯಕ (ಕ್ರಿ.ಶ. ೧೭೭೪)
|
ಕೊಳ್ಳಿರಂಗಪ್ಪ ನಾಯಕ (ಕ್ರಿ.ಶ. ೧೮೦೨)
|
ಕೃಷ್ಣನಾಯಕ

೨೨.೦೬.೧೯೫೦
ಹೊಸಪೇಟೆ

ಮೋತಂಪಲ್ಲಿ ಶಿಲಾಶಾಸನದ ಇತ್ಯರ್ಥ ಮಾಡಿದೆನು

೩೦.೦೭.೧೯೫೦
ಧಾರವಾಡ

ಶ್ರೀ ಗೊಮ್ಮಟೇಶ್ವರ ಲೇಖವನ್ನು ಬರೆದೆನು.

೨೭.೦೮.೧೯೫೦
ಧಾರವಾಡ

ಶ್ರೀ ಚಂದಲಾ ಪರಮೇಶ್ವರಿ ಚರಿತ್ರೆಯನ್ನು ಬರೆಯಲು ಉಪಕ್ರಮಿಸಿದೆನು.

೧೯೫೧

೦೧.೦೧.೧೯೫೧
ಅಮಳನೇರ

ಶ್ರೀ ಶ್ರೀಮಾನ್‌ ಪ್ರತಾಪಶೇಟರ ‘ತತ್ವಜ್ಞಾನ ಮಂದಿರ’ಕ್ಕೆ ಹೋಗಿ ಭಗವತ್ಪೂಜ್ಯಪಾದ ಶ್ರೀ ಸುರೇಶ್ವರಾಚಾರ್ಯರ ಶ್ರೀ ಬೃಹದಾರಣ್ಯಕೋಪನಿಷತ್‌ ಭಾಷ್ಯ ವಾರ್ತಿಕವನ್ನು ಓದಿ ಟಿಪ್ಪಣಿ ಬರೆದುಕೊಂಡು ಬಂದೆನು.

೦೨.೦೧.೧೯೫೧
ಅಮಳನೇರ

ತತ್ವಜ್ಞಾನ ಮಂದಿರಕ್ಕೆ ಹೋಗಿ ಶ್ರೀ ಮಂಡನಮಿಶ್ರ ಆಚಾರ್ಯರ ಬ್ರಹ್ಮಸಿದ್ಧಿ ಮತ್ತು ವಿಧಿ ವಿವೇಕ ಈ ಎರಡು ಗ್ರಂಥಗಳನ್ನು ಓದಿ ನೋಡಿದೆನು.

೦೫.೦೧.೧೯೫೧
ಧುಳೆ

ರಾಜವಾಡೆ ಸಂಶೊಧನ ಮಂದಿರ ಸಂದರ್ಶನ

೧೦.೦೧.೧೯೫೧
ಪುಣೆ

ಋದ್ಧಪುರದಲ್ಲಿ ಭೂಮಿಯನ್ನು ಅಗಿಯುತ್ತಿರುವಾಗ್ಗೆ ದೊರೆತ ೫ನೆಯ, ೬ನೆಯ ಶತಮಾನದ ಎರಡು ತಾಮ್ರ ಶಾಸನಗಳ ಪರಿಚಯ. ರಾತ್ರಿ ೧೦ ಗಂಟೆಯವರೆಗೆ ಕುಳಿತು ಇವೆರಡೂ ತಾಮ್ರ ಶಾಸನಗಳ ಮುಖ್ಯ ಅಂಶಗಳನ್ನು ಬರೆದುಕೊಂಡೆನು.

೧೩.೦೧.೧೯೫೧
ಪುಣೆ

ಯಶೋಧರನ ಟೀಕೆಗೆ ಯಾವ ವಾತ್ಸಯನ ಕಾಮಸೂತ್ರವು ಆಧಾರವಾಗಿದೆ. (ಅಧಿಕರಣ ೨ ಅಧ್ಯಾಯ ೫ ಸೂತ್ರ ೯) ಎಂಬುದನ್ನು ಶ್ರೀ ಶೇಟೆ ಇವರಿಗೆ ಹೇಳಿ ಬಂದೆನು.

೧೭.೦೧.೧೯೫೧
ಸಾಂಗಲಿ ಮಿರ್ಜಿ

ಪ್ರೊ. ಎಸ್‌. ಎಸ್‌. ಸೂರ್ಯನಾರಾಯಣಶಾಸ್ತ್ರಿ ಎಂ.ಎ ಇವರು ಗೋರಖಪುರದ ‘ಕಲ್ಯಾಣ’ ಮಾಸಪತ್ರಿಕೆಯ ವಿಶೇಷ ಅಂಕ ಎಂದರೆ ವೇದಾಂತ ಅಂಕದ ೪೧೩ – ೪೧೫ ಪುಟಗಳಲ್ಲಿ ಬರೆದ ಮಂಡನ ಮಿಶ್ರಕಾ ಬ್ರಹ್ಮಾದ್ವೈತವಾದ ಎಂಬ ಲೇಖನವನ್ನು ನೋಡಿದೆ. ಮಂಡನ ಮಿಶ್ರರ ಬ್ರಹ್ಮ ಸಿದ್ದಿಗೂ ಶ್ರೀ ಸುರೇಶ್ವರಾಚಾರ್ಯರ ನೈಷ್ಕರ್ಮ್ಯಸಿದ್ಧಿಗೂ ೭ ಮತ ಭೇದಗಳಿವೆ ೬ ಮತೈಕ್ಯಗಳಿವೆ.

೨೫.೦೧.೧೯೫೧
ಹುಬ್ಬಳ್ಳಿ – ಧಾರವಾಡ

ಶ್ರೀ ಲೋಖಂಡೆ ಇವರ ಭೆಟ್ಟಿಯಾಗಿ ಇನ್ನಿಬ್ಬರು ಮಹಾಜನರ ಸಂಗಡ ಹಂಪಿಯ ವಿಜಯ ವಿಟ್ಠಲ ದೇವಾಲಯದಲ್ಲಿ ಶ್ರೀ ವಿಟ್ಠಲದೇವರ ಮೂರ್ತಿಯನ್ನು ಪ್ರತಿಷ್ಠೆ ಮಾಡುವ ವಿಷಯದಲ್ಲಿ ಚರ್ಚಿಸಿದೆನು.

೦೨.೦೨.೧೯೫೧
ಧಾರವಾಡ

ಪ್ರೊ. ಎಸ್‌. ಆರ್. ಮಳಗಿ ಇವರಿಗೆ ಕಾಣ್ವ ವಿಕಾಸದಲ್ಲಿಯ ಎಲ್ಲ ಲೇಖಗಳನ್ನು ತೋರಿಸಿದೆನು. ಶ್ರೀ ಕೃಷ್ಣನ ಬಗ್ಗೆ ಆಧುನಿಕದಲ್ಲಿರುವ ತಪ್ಪು ತಿಳುವಳಿಕೆಯನ್ನು ಪರಿಹಾರ ಮಾಡಿದೆನು.

೧೮.೦೨.೧೯೫೧

ವಿಜಯ ವಿಟ್ಠಲ ದೇವಾಲಯದಲ್ಲಿ ಶ್ರೀ ವಿಟ್ಠಲ ದೇವರ ಪ್ರತಿಷ್ಠಾಪನೆಯ ವಿಷಯ ಕಾರ್ಯವು ಅವ್ಯವಹಾರ್ಯವೆಂದು ಸಿದ್ಧವಾಯಿತು.

೧೯.೦೨.೧೯೫೧
ಹುಬ್ಬಳ್ಳಿ – ಧಾರವಾಡ

ಶ್ರೀ ಮೊಹರೆ ಹಣಮಂತರಾಯರು ಇಂಪೀರಿಯಲ್‌ ಬ್ಯಾಂಕಿನ ಒಂದು ನೂರು ನೂರುಗಳ ಚೆಕ್‌ ಕೊಟ್ಟರು.

೦೨.೦೩.೧೯೫೧
ಧಾರವಾಡ

. ‘ಉರಯೂರು’ ಚೋಳರಾಜರ ರಾಜಧಾನಿ
೨. ಮಹೇಶ್ವರದ ಎರಡೂ ಶಿಲಾಲೇಖಗಳಲ್ಲಿ ಮಾಹಿಷ್ಮತಿಯ ಉಲ್ಲೇಖ ಬಂದದ್ದನ್ನು ಪಿ.ಬಿ. ದೇಸಾಯಿ ಇವರಿಗೆ ತೋರಿಸಿದೆನು.
೩. ಕರ್ನಾಟಕ ಇತಿಹಾಸದ ಬಗ್ಗೆ ದಾವಾ ನಡೆಯುವ ಸಂದರ್ಭವು ಬಂದಿದೆ ಈ ಬಗ್ಗೆ ನನ್ನ ಸಾಹಾಯ್ಯವನ್ನು ಇಚ್ಚಿಸಿದ್ದಾರೆ.

೦೫.೦೩.೧೯೫೧
ಧಾರವಾಡ

ಶ್ರೀ ಶಂಕರಾಚಾರ್ಯರ ಸಮಕಾಲೀನರು ಶ್ರೀ ಗೌಡಪಾದಾಚಾರ್ಯರೂ ಹೌದು ಮತ್ತು ಈ ಗೌಡ ಪಾದರ ಶಿಷ್ಯರಾದ ಗೋವಿಂದಯತಿಗಳೂ ಹೌದು. ಆದರೆ ಶ್ರೀ ಶಂಕರಾಚಾರ್ಯರು ಗೌಡಪಾದರಿಂದ ಸನ್ಯಾಸಾಶ್ರಮವನ್ನು ಸ್ವೀಕರಿಸದೆ ಗೋವಿಂದಯತಿಗಳಿಂದ ಸ್ವೀಕರಿಸಿದರು. ಈ ಶೋಧ ಈ ದಿನ ಕಂಡು ಹಿಡಿದೆನು.

೧೩.೦೩.೧೯೫೧
ಧಾರವಾಡ

ಶ್ರೀ ರಂಗರಾವ ದಿವಾಕರ, ಶ್ರೀ ಡಿ.ಪಿ. ಕರಮರಕರ ದಿಲ್ಲಿ ಇವರಿಗೆ ಪತ್ರ ಬರೆದೆನು.

೧೮.೦೩.೧೯೫೧
ಧಾರವಾಡ

. ಶ್ರೀ ಗುತ್ತಲ ವಕೀಲರನ್ನು ಕಂಡು ಸಾಹಾಯ್ಯ ಕೇಳಿದೆನು ಸಧ್ಯಕ್ಕೆ ಸಾಧ್ಯವಿಲ್ಲ ಎಂಬ ಉತ್ತರ ದೊರೆಯಿತು.
೨. ಮದಿಹಾಳ ತಮ್ಮಣ್ಣ ಭಟ್ಟರಿಗೆ ಭೆಟ್ಟಿಯಾಗಿ ಪೂಜ್ಯ ಹೂನೂರು ತಿಮ್ಮಮ್ಮನವರ ಚರಿತ್ರೆಯನ್ನು ಓದಿ ತೋರಿಸಿದೆನು.

೨೩.೦೩.೧೯೫೧
ಧಾರವಾಡ

ಈ ದಿವಸ ದಿಲ್ಲಿಯಿಂದ ಮಂತ್ರಿವರ್ಯ ಶ್ರೀ ದಿವಾಕರ ರಾಯರಿಂದ ಸಾಹಾಯ್ಯದ ‘ನ’ ಕಾರಾತ್ಮಕ ಉತ್ತರವು ಬಂದಿದೆ.

೦೨.೦೭.೧೯೫೧
ದೇವರ ಹಿಪ್ಪರಗಿ

ಕುಂಬಾರ ಬಾಲಿಯ ಶಿಲಾಲೇಖ, ಶ್ರೀ ಮಾರುತಿ ದೇವಾಲಯದ ಶಿಲಾಲೇಖ ನೋಡಿ ಬಂದೆನು.
೨ ವೀರಗಲ್ಲುಗಳನ್ನು ಮಾಲಗಂಬವನ್ನು ಬಾವಡಿಯನ್ನು ನೋಡಿ ಬಂದೆನು.

೦೫.೦೭.೧೯೫೧
ಯಂಕಂಚಿ

ಶ್ರೀ ತ್ರಿಕೂಟೇಶ್ವರ ದೇವಾಲಯವು ಪ್ರಾಚೀನ ಶಿಲ್ಪ ಕಲಾ ಕೌಶಲ್ಯದಿಂದ ಶೋಭಿಸುತ್ತದೆ. ದಾವಲ ಮಲಿಕ ಎಂಬ ಇಸ್ಲಾಮ ಪೀರನ ಮಜಾರ ಎಂಬ ದರ್ಗಾಸ್ಥಾನವು ಯಂಕಂಚಿ ಗ್ರಾಮದಲ್ಲಿದೆ. ಈ ದರ್ಗಾದ ಪ್ರಾಕಾರದ ಹಿಂದಿನ ಗೋಡೆಯಲ್ಲಿ ವೈದಿಕ ಮೂರ್ತಿಯ ಎರಡು ಪಾದಗಳು ಇವೆ.

೦೮.೦೭.೧೯೫೧
ಹಿಪ್ಪರಗಿ ದೇವೂರು ಮಣೂರು

ದೇವೂರು – ಅಲ್ಲಿಯ ಶಿವಾಲಯ, ೩ ವೀರಗಲ್ಲು ೨ ಶೈವ ಶಿಲಾಶಾಸನ, ೧ ಜೈನಶಿಲಾಶಾಸನ ನೋಡಿ ಓದಿ ಬಂದೆನು.
ಮಣೂರು – ಇಲ್ಲಿಯ ಊರ ಹೊರಗಿನ ಶಿವಾಲಯದ ಹೊರಭಾಗದ ಎಡ ಬಲದ ಗೋಡೆಯಲ್ಲಿದ್ದ ಎರಡು ಶಿಲಾ ಲೇಖಗಳನ್ನು ಬರೆದುಕೊಂಡೆನು.

ಮಾರುತಿ ದೇವಾಲಯದ ಮುಂದಿನ ೩ ವೀರಗಲ್ಲು ಸಪ್ತ ಮಾತೃಕೆಗಳನ್ನು ಭಿನ್ನವಾದ ಪಾರ್ವತಿ ವಿಗ್ರಹವನ್ನು ನೋಡಿ ಬಂದೆನು.

೧೦.೦೭.೧೯೫೧
ಮಣೂರು ಬಂಥನಾಳ

ಶ್ರೀ ದತ್ತಪ್ಪಯ್ಯ ಸ್ವಾಮಿಗಳವರು (ಸಿಂದಗಿ) ದೇವೂರಿಗೆ ಪ್ರಯಾಣ ಮಾಡಿದರು. ಹೋಗುವಾಗ್ಗೆ ಶೇಡಂ ತಾಲೂಕಿನಲ್ಲಿರುವ ‘ಸಿಂದನ ಮಡುವು’ (ಸಿದ್ಧರ ಮಡುವು) ಎಂಬ ಗ್ರಾಮದಲ್ಲಿ ಶ್ರೀ ಸಹಜಾನಂದ ಪ್ರಭೃತಿ ೩ ಜನ ಸ್ವಾಮಿಗಳ ಸಮಾಧಿಗಳಿದ್ದು, ಇವು ಇಸ್ಲಾಮ ಧರ್ಮದ ‘ಮಜಾರ’ ಇದ್ದಂತೆ ಇವೆ ಎಂದು ಹೇಳಿದರು.

೧೬.೦೮.೧೯೫೧
ಧಾರವಾಡ

ಸಿಂದಗಿ ತಾಲೂಕಿನ ಸಂಚಾರದ ವರದಿಯನ್ನು ಬರೆದು ೩ ತಾಡವಾಲಿ ಗ್ರಂಥ ೩೫ ತಾಮ್ರದ ಪ್ರಾಚೀನ ನಾಣ್ಯಗಳನ್ನು ಸಂಶೋಧನ ಸಂಸ್ಥೆಗೆ ಸಾದರ ಮಾಡಿದೆನು.

೨೧.೦೮.೧೯೫೧
ಧಾರವಾಡ

ಈ ದಿವಸ ರೇಶನಿಂಗ ತರುವುದಕ್ಕೆ ಧನವಿಲ್ಲದ್ದರಿಂದ ಅನಶನವ್ರತವನ್ನು ಸ್ವೀಕರಿಸ ಬೇಕಾಯಿತು.

೧೦.೦೯.೧೯೫೧
ಧಾರವಾಡ

ವೀರಬಲ್ಲಾಳನು ಶನಿವಾರ ಸಿದ್ಧಿ ಗಿರಿದುರ್ಗ ಮಲ್ಲ ಎಂಬ ಬಿರುದುಗಳನ್ನು ಸಂಪಾದಿಸಿದ ವೃತ್ತಾಂತವಿದ್ದ ಶಿಲಾಶಾಸನವನ್ನು ಕಂಡು ಹಿಡಿದೆನು.

೧೨.೦೯.೧೯೫೧
ಧಾರವಾಡ

ಶ್ರೀ ಎಸ್‌. ಎಸ್‌. ಕುಲಕರ್ಣಿ ಇವರ ಮನೆಗೆ ಹೋಗಿ ಮಯೂರ ಶರ್ಮನಿಗೆ ‘ಮಯೂರ’ ಎಂಬ ಪಕ್ಷಿಯ ಹೆಸರನ್ನು ಏಕೆ ಇಟ್ಟಿದ್ದರೆಂಬ ವಿಷಯವನ್ನು ಕುರಿತು ಸೋಪಪತ್ತಿಕವಾಗಿ ವಿವೇಚಿಸಿ ಬರೆದು ಬಂದೆನು. ಅಸಂಬದ್ಧ ಪ್ರಲಾಪವನ್ನು ಖಂಡಿಸಿದೆನು.

೧೦.೧೨.೧೯೫೧
ಬಾಗಲಕೋಟ

ಸಾಧ್ವಿ ತಿಮ್ಮಮ್ಮನವರ ಚರಿತ್ರೆಯನ್ನು ಬರೆದು ಮುಗಿಸಿದೆನು.

೧೯೫೨

೦೩.೦೧.೧೯೫೨
ಬಾಗಲಕೋಟ

ನವಿಲೆಯ ಜಡೆ ಶಂಕರ ದೇವಾಲಯ, ನವಿಲೆಯ ಹತ್ತಿರವಿದ್ದ ಕಂದಗಲ್ಲು ಶಂಕರದಾಸಿಮಯ್ಯನ ಜನ್ಮಸ್ಥಾನ. ಬಳ್ಳಾರಿ ಜಿಲ್ಲಾ ಹಡಗಲಿ ತಾ. ಕಂದಗಲ್ಲು, ನವಿಲೆ. ಕೃಷ್ಣಾನದಿಯ ತಡಿಯ ತೀರ್ತ್ಥಂ ಶ್ರೀ ಜಡೆಯ ಶಂಕರ ದೇವರ್ಗ್ಗೆ ನವಿಲೆಯ ಮನ್ನೆಯಮಂ ಶ್ರೀ ಜಡೆಯ ಶಂಕರ ದೇವರ್ಗ್ಗೆ. ಕ್ರಿ. ವ. ೧೦೬೬ನೆಯ ಜೂನ ಆದಿತ್ಯವಾರ ಕಂದಗಲ್ಲು, ವಿಜಾಪುರ ಜಿಲ್ಲಾ ಹುನಗುಂದ ತಾ. ನವಿಲೆ ರಾಯಚೂರು ಜಿಲ್ಲಾ ಲಿಂಗಸುಗೂರ ತಾ. ಗೋವಿಂದ ಭಟ್ಟ ಹೆಂಡತಿ. ಸುಮ್ಮವೈ ಕಂದಶಿಲೆ.

೨೧.೦೧.೧೯೫೨
ಬಾಗಲಕೋಟ

. ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನಲ್ಲಿ ಹಡಗಲಿಯಿಂದ ಉತ್ತರಕ್ಕೆ ೮ ಮೈಲುಗಳ ಅಂತರದಲ್ಲಿ ಕಂದಗಲ್ಲು ಎಂಬ ಗ್ರಾಮವಿದೆ. ಅಲ್ಲಿಂದ ದಕ್ಷಿಣಕ್ಕೆ ೭ ಮೈಲುಗಳ ಅಂತರದಲ್ಲಿ ನದಿಯ ಅದೇ ದಂಡೆಯ ಮೇಲೆ ನವಿಲೆಯು (ತುಂಗಭದ್ರಾ).
೨. ವಿಜಾಪುರ ಜಿಲ್ಹೆಯ ಹುನಗುಂದ ತಾಲೂಕಿನಲ್ಲಿ ಕಂದಗಲ್ಲು ಗ್ರಾಮವಿದೆ. ಅದರ ಉತ್ತರಕ್ಕೆ ೧೨ ಮೈಲುಗಳ ಮೇಲೆ ನವಿಲೆ ಗ್ರಾವಿದೆ. (ರಾಯಚೂರು ಜಿಲ್ಹಾ ಛಾವಣಿ ತಾಲುಕು).
೩. ನಾಮಲಾನ್ವಯ (ಸದ್ಭ್ರಾಹ್ಮಣೋತ್ತಮ ಭರಿತನಹ ಗೋವಿಂದ ದೇವಗಳು (೧/೪೭)
೪. ಕಂದಶಿಲೆ (೧/೪೪ – ೪೫)
೫. ನವಿಲೆ (೨/೨೪) ಜಡೆಯಶಂಕರ (೨/೨೯)

೨೭.೦೧.೧೯೫೨
ಹೂನೂರು

ಮಹಾಸಾಧ್ವಿ ಶ್ರೀ ತಿಮ್ಮಮ್ಮನವರ ವೃಂದಾವನದ ಬಳಿಯಲ್ಲಿ ಪೂರ್ವ ಪಕ್ಕದಲ್ಲಿ ಶ್ರೀ ಮನ್ಮಧ್ವಾಚಾರ್ಯರು, ಪಶ್ಚಿಮ ಪಕ್ಕದಲ್ಲಿ ಶ್ರೀ ಭೀಮಸೇನದೇವರು, ದಕ್ಷಿಣ ಪಕ್ಕದಲ್ಲಿ ಶ್ರೀ ಹನುಮಂತದೇವರು, ಉತ್ತರ ಪಕ್ಕದಲ್ಲಿ ಶ್ರೀ ಅಮ್ಮನವರು ಪೂಜಿಸಿದ ಶ್ರೀ ಮುಖ್ಯ ಪ್ರಾಣದೇವರು ಶ್ರೀ ವೆಂಕಟರಮಣ ದೇವರು.

೧೮.೦೨.೧೯೫೨
ಧಾರವಾಡ

ಪೊಳಲ್ಗುಂದದ ಪಂಡಿತ ಮಲ್ಲಿಕಾರ್ಜುನ ಕವಿಯು ಕ್ರಿ. ವ. ೧೬೮೭ರಲ್ಲಿ ಶ್ರೀ ಶಂಕರ ದಾಸಿಮಯ್ಯನ ಚರಿತ್ರವನ್ನು ಭಾಮಿನಿ ಷಟ್ಪದಿಯಲ್ಲಿ ಬರೆದನು.

೧೦.೦೩.೧೯೫೨
ಧಾರವಾಡ

ಮೇ ಶಾ ಸಂ ರಂಗಭಟ್ಟರು ಜೋತಿಷಿ ಮೊರಬ ಇವರ ಮನೆಗೆ ಹೋಗಿ ಋಗ್ವೇದದ ಯಾಜ್ಞಿಕ ಪುಸ್ತಕವನ್ನು ಓದಿ ನೋಡಲು ಅಲ್ಲಿಯೂ “ಅಷ್ಟವರ್ಷಾತ್ವಿಯಂ ಕನ್ಯಾ” ಎಂದು ಇದ್ದಿತು. ಸೋಮ ಗಂಧರ್ವ – ಅಗ್ನಿ – ಮನುಷ್ಯ ಈ ಕ್ರಮದಿಂದ ಕನ್ಯೆಗೆ ಪತಿಗಳೆಂದೇ ಉಲ್ಲೇಖ ಇದ್ದಿತು.

೧೯.೦೪.೧೯೫೨
ಹಾನಗಲ್ಲ

ಮಹಲಿಂಗರಂಗನ ಅನುಭವಾಮೃತ ಗ್ರಂಥದ ೨ನೆಯ ಅಧ್ಯಾಯದ ೬೦ನೆಯ ಪದ್ಯದಲ್ಲಿ ಶ್ರೀ ಯಾಜ್ಞ್ಯವಲ್ಕ್ಯ ಮಹರ್ಷಿಗಳ ಬಗ್ಗೆ ವಿಷ್ಣು ಪುರಾಣದಲ್ಲಿದ್ದ ರೂಪಕ ಕಥೆಯ ರಹಸ್ಯವನ್ನು ತಿಳಿದುಕೊಳ್ಳದೆ ಯಪಯೋಗಿಸಿದ ಬಾಲಿಶ ವಿಚಾರ.

೦೪.೦೫.೧೯೫೨
ಧಾರವಾಡ

ಶ್ರೀ ಮಧ್ವಾಚಾರ್ಯರ ಕಾಲ ನಿರ್ಣಯದ ಶ್ರೀ ಪೈ ಇವರ ಅಸಂಬದ್ಧ ಪ್ರಲಾಪದ ಲೇಖನವನ್ನು ಓದಿದೆ.

೦೬.೦೫.೧೯೫೨
ಧಾರವಾಡ

ಶ್ರೀ ತಿಮ್ಮಮ್ಮನವರ ಜನ್ಮ ಮತ್ತು ಬಾಲ್ಯ ಎಂಬ ಮೊದಲನೆಯ ಅಧ್ಯಾಯವನ್ನು ಬರೆದು ಮುಗಿಸಿದೆನು.

೧೭.೦೫.೧೯೫೨

ಶ್ರೀ ತಿಮ್ಮಮ್ಮನವರ ಚರಿತ್ರೆಯ ೪ನೆಯ ಅಧ್ಯಾಯದವರೆಗೆ ಬರೆದೆನು.

೧೭.೧೨.೧೯೫೨
ಧಾರವಾಡ

ಶ್ರೀ ತಿಮ್ಮಮ್ಮನವರ ಚರಿತ್ರೆಯನ್ನು ಸಂಪೂರ್ಣವಾಗಿ ಬರೆದು ಶ್ರೀ ಕುರಡಿ ಇವರ ಸರಸ್ವತಿ ಮುದ್ರಣಾಲಯಕ್ಕೆ ಕೊಟ್ಟು ಬಂದೆನು.

೩೧.೧೨.೧೯೫೨
ಧಾರವಾಡ

ತಾಳಗುಂದದ ಶಿಲಾಶಾಸನವನ್ನು ಶ್ರೀ ನಾರಾಯಣರಾವ್‌ ಕುರಡಿ ಇವರಿಗೆ ತೋರಿಸಿ ಬಂದೆನು.

೧೯೫೩

೦೧.೦೧.೧೯೫೩
ಧಾರವಾಡ

‘ತತ್ವಜ್ಞಾನವು ಆಚರಣೆಯಲ್ಲಿ ವ್ಯಕ್ತವಾಗದಿದ್ದರೆ ಅದು ಕೇವಲ ಕಲ್ಪನಾ ವಿಲಾಸವೇ ಸರಿ’

‘ಅದೇ ಅರ್ಥವು ಭಗವತ್ಪೂಜ್ಯಪಾದ ಶ್ರೀ ಶಂಕರಾಚಾರ್ಯರಿಗೆ ಅಭಿಪ್ರೇತವಾಗಿತ್ತು’.

‘ಶಬ್ದ ಪ್ರಾಮಾಣ್ಯ ಮತ್ತು ವ್ಯಕ್ತಿ ಪ್ರಾಮಾಣ್ಯ ಇವುಗಳನ್ನು ಹೆಚ್ಚು ಆಶ್ರಯಿಸುವುದೆಂದರೆ ಒಂದು ಪ್ರಕಾರದ ಬೌದ್ಧಿಕ ಆಲಸ್ಯವೇ ಸರಿ’.

‘ಸತ್ಯಜ್ಞಾನದಲ್ಲಿ ಉಪಯುಕ್ತತೆಯ ಪ್ರತಿಷ್ಠಾಪನಾ ಮಾಡುವಂಥ ತತ್ವಜ್ಞಾನವೂ ಸಾಹಜಿಕವೇ ಜಗತ್ತಿಗೆ ಚಿತ್ತಾಕರ್ಷಕವಾಗುತ್ತದೆ’.

‘ತತ್ವಜ್ಞಾನದ ಸತ್ಯತೆಯ ಪ್ರತ್ಯಕ್ಷವ್ಯವಹಾರದಲ್ಲಿ ಸಿದ್ದವಾಗಲಿಕ್ಕೆ ಬೇಕು’ ಎಂದು ಅಮೇರಿಕನ್‌ ಸುವಿಖ್ಯಾತ ತತ್ವಜ್ಞ ಜಾನ್‌ ಡ್ಯೂಯಿ ಇವರ “ವ್ಯವಹಾರ ಸಿದ್ಧತಾವಾದ”ದ ಸಿದ್ಧಾಂತವಾಗಿದೆ.

೦೨.೦೧.೧೯೫೩
ಧಾರವಾಡ

“ಧಿಯೋ ಯೋ ನಃ ಪ್ರಚೋದಯಾತ್‌” ಧ್ಯೇಯವಾದಿಗಳಿಗಿಂತ ವ್ಯವಹಾರವಾದಿಗಳ ಜನರೇ ಹೆಚ್ಚಾಗಿದ್ದಾರೆ. ಆದುದರಿಂದ ‘ಸತ್ಯಜ್ಞಾನದಲ್ಲಿ ಉಪಯುಕ್ತತೆಯನ್ನು ಪ್ರತಿಷ್ಠಾಪನೆಯನ್ನು ಮಾಡುವ ತತ್ವಜ್ಞಾನವೇ ಜಗತ್ತಿನ ಜನರಿಗೆ ಬಹಳ ಚಿತ್ತಾಕರ್ಷಕವೆನಿಸುತ್ತದೆ’, ತತ್ವಜ್ಞಾನವನ್ನು ಶಾಸ್ತ್ರ ಶುದ್ಧ ಹಾಗೂ ತರ್ಕಧಿಷ್ಠಿತ ಮಾಡುವ ಪ್ರಯತ್ನವನ್ನು ನಾವು ಮಾಡಿದ್ದೇವೆ.

೦೪.೦೧.೧೯೫೩
ಧಾರವಾಡ

ಧೈವಿಕ ಜೀವನವನ್ನು ಪ್ರಾಪ್ತ ಮಾಡಿಕೊಳ್ಳುವ ಅಧಿಕಾರವು ಎಲ್ಲರಿಗೂ ಇದೆ. ಎಂದು ಸರ್ವಧರ್ಮಗಳು ಹೇಳುತ್ತವೆ. ಶಿಸ್ತಿನಿಂದ ನೈತಿಕ ದೀರ್ಘ ಪ್ರಯತ್ನ ಹಾಗೂ ಚಿಂತನ ಇವುಗಳ ಅವಶ್ಯಕತೆ ಇದೆ.

ಈಗ ನಾಸ್ತಿಕವಾದವೂ ಭೌತಿಕವಾದವೂ ವಿಶೇಷವಾಗಿ ಸಮಾಜದಲ್ಲಿ ಗಲಭೆಯನ್ನುಂಟು ಮಾಡುತ್ತಿವೆ. ಇದಕ್ಕೆ ಕಾರಣವೇನೆಂದರೆ, ನಾವು ಧರ್ಮದ ಆಚರಣೆಯನ್ನು ಕೃತ್ರಿಮತನದಿಂದ, ಢೋಂಗಿತನದಿಂದ ಸುಳ್ಳುತನದಿಂದ ಮಾಡುತ್ತೇವೆ. ಇದೇ ನಮ್ಮ ದೈನಂದಿನ ಜೀವನದಲ್ಲಿ ಅಂತರಾಷ್ಟ್ರೀಯ ಕಾರಭಾರದಲ್ಲಿಯೂ ಸಹ ಬ್ರಾಹ್ಮೀಸ್ಥಿತಿಯಿಂದ ಆಚರಿಸುವುದು ನಮ್ಮ ಕರ್ತವ್ಯವೆಂದು ತಿಳಿಯಬೇಕು. ತಪ್ಪುಗಳನ್ನು ತಿದ್ದುವುದು. ಅನ್ಯಾಯಗಳನ್ನು ಪರಿಹಾರ ಮಾಡುವುದು ಪ್ರತಿಯೊಬ್ಬ ಧಾರ್ಮಿಕ ಮನುಷ್ಯನ ಕರ್ತವ್ಯವಾಗಿದೆ. ಹೀಗೆ ಆಚರಿಸಿದರೇ ಎಲ್ಲ ‘ಇಝಮ್ಮಗಳೂ’ ನಾಶವಾಗುತ್ತವೆ.

೦೯.೦೧.೧೯೫೩
ಧಾರವಾಡ

ಪುರಾಣಗಳು ಮತ್ತು ದಂತಕಥೆಗಳು ಎಂಬ ರೆಡಿಯೋ ಭಾಷಣವನ್ನು ಬರೆದೆನು.

೧೧.೦೧.೧೯೫೩
ಧಾರವಾಡ

ಸಾಧ್ವಿಶಿರೋಮಣಿ ಶ್ರೀ ತಿಮ್ಮಮ್ಮನವರ ಚರಿತ್ರದ ೫ ಪ್ರತಿಗಳನ್ನು ಬಾಯಿಂಡಿಂಗ ಮಾಡಿಸಿ ತಂದೆನು.

೦೧.೦೫.೧೯೫೩
ಧಾರವಾಡ

ನಂದಿ ಆಗಮ ಓದಿ ಶ್ರೀ ಬಸವಣ್ಣನವರ ಸಮಾಧಿ ಲೇಖಕ್ಕೆ ಸರಿಪಡಿಸಿದೆನು.

೦೯.೦೫.೧೯೫೩
ಧಾರವಾಡ

೮೬೨ನೆಯ ಶಕವರ್ಷದ ಶಾರ್ವರಿ ಸಂವತ್ಸರದ ವೈಶಾಖ ಬಹುಳ ಪಂಚಮಿ (೮೬೨+೭೮=೯೪೦) ದಿನ ರಾಷ್ಟ್ರಕೂಟ ಚಕ್ರವರ್ತಿ ೩ನೆಯ ಕೃಷ್ಣರಾಜನು ಋಷಿಯಪ್ಪಯ್ಯನೆಂಬ ತೆಲುಗು ದೇಶದ ಕಾಣ್ವಬ್ರಾಹ್ಮಣನಿಗೆ ನಾಗಪುರ ನಂದಿ ವರ್ಧನದ ಬಳಿಯಲ್ಲಿರುವ ತಾಲಪುರುಷಕ ಗ್ರಾಮವನ್ನು ದತ್ತಿಯಾಗಿ ಕೊಟ್ಟಿದ್ದಾನೆ. ರಾಷ್ಟ್ರಕೂಟ ಚಕ್ರವರ್ತಿ ತೃತೀಯ ಕೃಷ್ಣರಾಜನು (ಕ್ರಿ. ವ. ೯೩೯ – ೯೬೪) ಆಳಿದನು.

೧೭.೦೬.೧೯೫೩
ಧಾರವಾಡ

ಮಹಾಮಹೋಪಾಧ್ಯಾಯ ದತ್ತೋ ವಾಮನ ಪೋತದಾರ ಇವರಿಗೆ ‘ಶಹಾಜಿ ಛತ್ರಿ’ ಬಗ್ಗೆ ಲೇಖ ಬರೆದು ಟಪಾಲದ್ವಾರದಿಂದ ಕಳಿಸಿದೆನು.

೧೦.೦೭.೧೯೫೩
ಧಾರವಾಡ

ಈ ದಿವಸ ದಿಲ್ಲಿಗೆ ನನ್ನ ಇತಿಹಾಸ ಸಂಶೋಧನ ವೃತ್ತಾಂತವು ಶಿಕ್ಷಣ ಮಂತ್ರಿಗಳ ಕಾರ್ಯಾಮಂದಿರಕ್ಕೆ ಹೋಗಿ ತಲುಪಿದೆ.

ಪರಮಾತ್ಮನ ಅಗಾಧ ಲೀಲೆಯು ಶೀಘ್ರವಾಗಿ ಪ್ರಕಟವಾಗಲಿದೆ.

೧೧.೦೭.೧೯೫೩
ಧಾರವಾಡ

ಈ ದಿನ ರಾತ್ರಿ ೧೦ ಗಂಟೆಗೆ ವಕ್ರೀ ೬ನೆಯ ಶನಿಯು ಹೋಗಿ ೭ನೆಯ ಶನಿಯು ಬರುತ್ತಾನೆ.

೨೦.೦೭.೧೯೫೩
ಧಾರವಾಡ

ಈ ದಿವಸ ಹೇಮಲಿ ಗಲ್ಲಿಯಲ್ಲಿರುವ ಮನೆಯನ್ನು ಬಿಟ್ಟು ಚಾಪೇಕರ ಗಲ್ಲಿಯಲ್ಲಿರುವ ಮನೆಗೆ ವಾಸಿಸುವುದಕ್ಕೆ ಬಂದಿದ್ದೇನೆ.

೨೪.೦೭.೧೯೫೩
ಧಾರವಾಡ

ಈ ಚಾಪೇಕರ ಗಲ್ಲಿಯಲ್ಲಿರುವ ಮನೆಗೆ ಬಂದ ಬಳಿಕ ನನಗೆ ಶಕ್ತಿಪಾತವು ಆದಂತೆ ಭಾಸವಾಗುತ್ತದೆ. ಉತ್ಸಾಹವಿಲ್ಲ. ನಡಿಗೆಯಲ್ಲಿ ಮಂದಗತಿಯು ಪ್ರಾಪ್ತವಾಗಿದೆ.

೦೨.೦೮.೧೯೫೩
ಧಾರವಾಡ

ಶ್ರೀ ಡಿ. ಆರ್. ಕುಲಕರ್ಣಿ ವಕೀಲರಿಂದ ೧ ರೂ ಕೈಗಡ ತಂದೆನು.

೦೪.೦೮.೧೯೫೩
ಧಾರವಾಡ

ಧಾರವಾಡದಿಂದ ಸಂಗೂರ

೦೭.೦೮.೧೯೫೩
ಸಂಗೂರ

ಗೋಕ್ಷೀರ ಧಾರೋಣ್ಯ ಸ್ವೀಕರಿಸಿದೆನು. (ಕೊನೆಯ ಉಲ್ಲೇಖ)