ಹುಕ್ಕೇರಿ

ಮಂಟಮುರಿಯಿಂದ ಹುಕ್ಕೇರಿಗೆ ಬಂದೆನು. ಇದು ಈಗ ತಾಲೂಕಿನ ಸ್ಥಳವಾಗಿದೆ. ಇಂದಿಗೆ ನಾಲ್ಕು ನೂರು ವರ್ಷಗಳ ಹಿಂದೆ ವಿಜಾಪುರದ ಬಾದಶಹನ ಸರದಾರನಾದ ಐನ ಉಲ್ಮುಲ್ಕ ಗಿಲಾನೀ ಎಂಬುವನು ಈ ಹುಕ್ಕೇರಿ ಗ್ರಾಮವನ್ನು ತನ್ನ ನೆಲೆವೀಡನ್ನಾಗಿ ಮಾಡಿಕೊಂಡು, ಕ್ರಿ. ಶ. ೧೫೦೩ ರಿಂದ ೧೫೪೬ರ ವರೆಗೆ ೪೩ ವರ್ಷ ಸುಖ ಸಂಕಥಾ ವಿನೋದದಿಂದ ರಾಜ್ಯವಾಳಿದನು. ಈತನು ಈ ಹುಕ್ಕೇರಿ ಗ್ರಾಮಕ್ಕೆ ದೊಡ್ಡದೊಂದು ಉಪಕಾರವನ್ನು ಮಾಡಿದ್ದಾನೆ. ಅದೇನೆಂದರೆ, ಹುಕ್ಕೇರಿಯಿಂದ ೨ ಮೈಲುಗಳ ಮೇಲೆ ತಕ್ಕ ಸ್ಥಳದಲ್ಲಿ ಒಂದು ಸಮೃದ್ಧವಾದ ಜಲನಿಧಿಯನ್ನು ನಿರ್ಮಾಣ ಮಾಡಿ, ಅಲ್ಲಿಂದ ಊರತನಕ ಮಣ್ಣಿನ ದೊಡ್ಡ ನಳಗಳನ್ನು ಹಾಕಿಸಿ, ಮೂರು ಕಾರಂಜಿಗಳನ್ನು ಮಾಡಿಸಿದ್ದಾನೆ. ಈಗಲೂ ಸಹ ಈ ಕಾರಂಜಿಗಳು ನಿರ್ಮಲವಾದ ಹಾಗೂ ಆರೋಗ್ಯಕರವಾದ ನೀರಿನಿಂದ ತುಂಬಿ ಹೊರಚಲ್ಲುತ್ತಿರುತ್ತವೆ. ಇವು ಊರೊಳಗಿನ ಎಲ್ಲ ಜನರಿಗೂ ಕುಡಿಯುವುದಕ್ಕೂ, ಅಡಿಗೆಗೂ, ಬಳಕೆಗೂ ೧೨ ತಿಂಗಳೂ ಸಾಕಷ್ಟು ನೀರನ್ನು ಪೂರೈಸುತ್ತವೆ.

ಇಲ್ಲಿಯ ತಾಲ್ಲೂಕ ಲೋಕಲ್‌ ಬೋರ್ಡದ ಪ್ರೆಸಿಡೆಂಟರಾದ ಶ್ರೀಮಾನ್‌ ಎಮ್‌. ಪಿ. ಪಾಟೀಲ ಬಿ.ಎ. ಎಲ್‌.ಎಲ್‌.ಬಿ. ವಕೀಲರವರು ಕರ್ನಾಟಕ ಇತಿಹಾಸ ಮಂಡಳದ ಕಾರ್ಯಕ್ಕೆ ಚೆನ್ನಾಗಿ ಸಹಾನುಭೂತಿಯನ್ನು ವ್ಯಕ್ತಪಡಿಸಿ ತಾ|| ೧೩.೧೧.೧೯೨೬ನೆಯ ದಿವಸ ಪೇಟೆಯಲ್ಲಿರುವ ಹಿರೇಮಠದ ಪಟಾಂಗದಲ್ಲಿ ಸಭೆಯನ್ನು ನೆರೆಯಿಸಿ, ಈ ಸಭೆಯ ಅಧ್ಯಕ್ಷ ಸ್ಥಾನವನ್ನು ಬೆಳಗಾಂವಿ ಜಿಲ್ಲೆಯ ಎಜ್ಯುಕೇಶನಲ್‌ ಡೆಪ್ಯುಟಿ ಇನಸ್ಪೆಕ್ಟರರಾದ ಶ್ರೀಮಾನ್‌ ಬೋಧರಾವ ಪುರೋಹಿತ ಬಿ.ಎ. ಇವರು ಸ್ವೀಕರಿಸಬೇಕೆಂದು ಸೂಚಿಸಿದರು. ಇವರ ಸೂಚನೆಯ ಮೇರೆಗೆ ಶ್ರೀ. ಪೊರೋಹಿತರವರು ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿ, ಪ್ರಸ್ತಾವಿಕ ಭಾಷಣ ಮಾಡಿದ ನಂತರ ನಾನು “ಕರ್ನಾಟಕ ಇತಿಹಾಸ ಸಂಶೋಧನ” ಎಂಬ ವಿಷಯವನ್ನು ಕುರಿತು ಭಾಷಣ ಮಾಡಿದೆನು.

ಕೊನೆಗೆ ಅಧ್ಯಕ್ಷ ಮಹಾಶಯರು “ಕರ್ನಾಟಕದ ಇತಿಹಾಸದ ಹಾಗೂ ಭಾಷೆಯ ಅಭಿಮಾನವನ್ನು ವಹಿಸಿ ಅಚ್ಚ ಕನ್ನಡಿಗರಾಗಿರಿ” ಎಂದು ಹೇಳಿದರು. ತರುವಾಯ ಶ್ರೀಮಾನ್‌ ಎಮ್‌.ಎಚ್‌. ಪಾಟೀಲ ವಕೀಲರವರು ಅಧ್ಯಕ್ಷರ ಆಭಾರಮನ್ನಿಸುವ ಕಾಲಕ್ಕೆ ಇತಿಹಾಸದ ಮಹತ್ವನ್ನು ವಿಶದ ಮಾಡಿ ಹೇಳಿದರು.

ಶ್ರೀಮಾನ್‌ ಎಮ್‌. ಪಿ. ಪಾಟೀಲ ವಕೀಲ, ಶ್ರೀ. ಎಸ್‌.ಎಲ್‌. ಸೊಲ್ಲಾಪುರೆ ವಕಿಳ. ಶ್ರೀ. ಯಶವಂತಪ್ಪ ರಂಗೊಳಿ, ಶ್ರೀ ನಾರಾಯಣರಾವ ಕುಲಕರ್ಣಿ ವಕೀಲ, ಶ್ರೀ ಧೂಮಾಚಾರ್ಯ ಹುಕ್ಕೇರಿ ಪ್ರಭೃತಿಗಳ ಸಹಾದಿಂದ ಇತಿಹಾಸ ಮಂಡಳದ ಕಾರ್ಯವು ಇಲ್ಲಿ ಜಯಪ್ರದವಾಯಿತು. ಮತ್ತು ಇನ್ನೂ ಆಗುವದಿರುತ್ತದೆ. ಆದ್ದರಿಂದ ಈ ಮಹನೀಯರಿಗೆ ಇತಿಹಾಸ ಮಂಡಳವು ಅತ್ಯಂತ ಉಪಕೃತವಾಗಿದೆ.

ಪ್ರತಿ ವಾರ್ಷಿಕ ೫ ರೂ. ಗಳನ್ನು ಕೊಟ್ಟು ಆದಂಥ ಸಹಾಯಕ ಸದಸ್ಯರು.

ಶ್ರೀಮಾನ್‌ ಆನಂದರಾವ ಶೇಷಗಿರಿರಾವ ಮುಂಡಕೂರ ಬಿ. ಎ. ಚೀಫ್‌ ಆಫೀಸರ, ಡಿ.ಎಲ್‌.ಬಿ. ಬೆಳಗಾಂವ, ಶ್ರೀಮಾನ್‌ ಬಾಳನಗೌಡ ಅಲ್ಲಗೌಡ ಪಾಟೀಲ ಅಮ್ಮಣಗಿ, ಶ್ರೀಮಾನ್‌ ಎಮ್‌.ಪಿ. ಪಾಟೀಲ ಬಿ.ಎ. ಎಲ್‌.ಎಲ್‌.ಬಿ., ಶ್ರೀಮಾನ್‌, ನಾರಾಯಣರಾವ ಶಾಮರಾಯವ ಬೆಟಗೇರಿ ವಕೀಲ, ಶ್ರೀಮಾನ್‌ ನಾರಾಯಣ ರಾಮಚಂದ್ರ ಕುಲಕರ್ಣಿ. ಬಿ.ಎ. ಎಲ್‌.ಎಲ್‌.ಬಿ, ಶ್ರೀಮಾನ್‌ ಧೂಮಾಚಾರ್ಯ ರಾಘವೇಂದ್ರಾಚಾರ್ಯ ಹುಕ್ಕೇರಿ ಪ್ರತಿವಾರ್ಷಿಕ ೧ ರೂ. ಕೊಟ್ಟು ಆದಂಥ ಹಿತಚಿಂತಕ ಸದಸ್ಯರು.

ಶ್ರೀಯುರಾದ ಶಾಂತಪ್ಪ ಲಕ್ಷ್ಮಣಪ್ಪ ಸೊಲ್ಲಾಪುರೆ ಬಿ.ಎ.ಎಲ್‌.ಬಿ. ವಿಠ್ಠಲ ನಾರಾಯಣ ಪೈ, ಗೋಪಾಲ ರಾಘವೇಂದ್ರ ಸಾಂಗಲಿ, ಭೀಮಾಜಿ ರಾಘ ಕಟ್ಟಿ, ಪಾಂಡುರಂಗ ವಿಷ್ಣು ಫಾಟಕ ವಕೀಲ, ಶ್ರೀನಿವಾಸರಾವ ದೇಶಪಾಂಡೆ ವಕೀಲ.

(ಕರ್ಮವೀರ ೦೭.೦೧.೧೯೨೭)