09_280_SNSR-KUH

(ಕ್ರಿ.ಶ. ೧೯೩೫ರಲ್ಲಿ ಮುಂಬಯಿ ಸಾಹಿತ್ಯ ಸಮ್ಮೇಳನದಲ್ಲಿ ‘ಸಂಶೋಧನ ಗೋಷ್ಠಿ ಅಧ್ಯಕ್ಷ ಭಾಷಣದ ಟಿಪ್ಪಣಿಯ ಒಂದು ಪುಟ ರಾಜಪುರೋಹಿತರ ಕೈ ಬರಹದಲ್ಲಿ)

ಭಾಷಣ ಪ್ರತಿ

ಈ ಸಂಶೋಧಕ ಸಭೆಯು ಸಾಹಿತ್ಯ ಸಮ್ಮೇಳನದ ಅಂಗವಾಗಿದ್ದುದರಿಂದ ಸಾಹಿತ್ಯ ಸಂಶೋಧನವನ್ನು ಹೇಗೆ ಮಾಡಬೇಕೆಂಬುದನ್ನು ಕುರಿತು ವಿವೇಚಿಸುವುದೇ ಪ್ರಸ್ತುತ ನಮ್ಮ ಕರ್ತವ್ಯವಾಗಿದೆ. ಯಾವುದೊಂದು ಪ್ರಾಚೀನ ಹಸ್ತಲಿಖಿತ ಗ್ರಂಥವು ನಮಗೆ ಉಪಲಬ್ಧವಾಯಿತೆಂದರೆ, ಆ ಗ್ರಂಥವು ನಿರ್ಮಾಣವಾದಂದಿನಿಂದ ಇಂದಿನವರೆಗೆ ಅದರ ಸ್ವರೂಪದಲ್ಲಿ ಏನೇನು ಸ್ಥಿತ್ಯಂತರವಾಗಿರುತ್ತದೆಂಬುದನ್ನೂ, ಅದರ ಮೂಲಸ್ವರೂಪವು ಹೇಗಿತ್ತೆಂಬುದನ್ನೂ ಕಂಡು ಹಿಡಿಯುವುದು ಆದ್ಯ ಕರ್ತವ್ಯವಾಗಿದೆ. ಈ ಪ್ರಕ್ರಿಯೆಗೆ “ಬಾಹ್ಯ ಚಿಕಿತ್ಸಾ” ಎಂದು ಹೆಸರು. ಮೊಟ್ಟ ಮೊದಲು ಮೂಲ ಹಸ್ತಲಿಖಿತ ಪ್ರತಿಯ ನಕಲನ್ನು ಮಾಡಿದ ಬಳಿಕ ಆ ನಕಲಿನ ನಕಲುಗಳು ಮೇಲಿಂದ ಮೇಲೆ ಆಗುತ್ತ ಆಗುತ್ತ ಅನೇಕ ಶತಮಾನಗಳವರೆಗೆ ‘ನಕಲ’ಕಾರರ ಅನೇಕ ಜನರ ಕೈಯಿಂದ ನಕಲಿನ ನಕಲ ಪುನಃ ಆ ನಕಲಿನ ಮತ್ತೊಂದು ನಕಲು ಹೀಗೆ ಆಗುತ್ತ ಹೊದುದರಿಂದ ಮೂಲ ಹಸ್ತಲಿಖಿತ ಪ್ರತಿಯಲ್ಲಿ ಬದಲಾವಣೆಯಾದರೆ ಆಶ್ಚರ್ಯವೇನು? ಹೀಗಾಗುವುದು ಸ್ವಾಭಾವಿಕವಾಗಿದೆ. ಆದುದರಿಂದ ಪ್ರಾಚೀನ ಗ್ರಂಥದ ಮೂಲ ಸ್ವರೂಪವು ಹೇಗಿತ್ತೆಂಬುದನ್ನು ಕಂಡು ಹಿಡಿಯುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ.