ಸಂಯುಕ್ತ ಕರ್ನಾಟಕ ೨೮ – ೦೫೦ ೧೯೩೬

ಉತ್ತರಾದಿ ಮಠದ ಶ್ರೀ ಪಾದಂಗಳವರ ಸಂದರ್ಶನ
(ಲೇ. ನಾ. ಶ್ರೀ ರಾಜಪುರೋಹಿತ)

ನಾನು ಶ್ರೀಮತ್‌ ಮಧ್ವಾಚಾರ್ಯ ಚರಿತ್ರೆಯನ್ನೂ ಶ್ರೀ ಮಜ್ಜಯತೀರ್ಥರ ಚರಿತ್ರೆಯನ್ನೂ ಸತ್ಯಾನ್ವೇಷಣ ಬುದ್ದಿಯಿಂದ ಬರೆದು ಮುದ್ರಿಸಿ ಪ್ರಸಿದ್ಧಿಸಿರುವೆನಷ್ಟೆ, ಉತ್ತರಾದಿ ಮಠದ ಶ್ರೀಪಾದಂಗಳವರು ಬಾಗಲಕೋಟೆಗೆ ಬಂದಿದ್ದಾರೆಂಬ ಸುದ್ದಿಯನ್ನು ಕೇಳಿ ಈ ಗ್ರಂಥವನ್ನು ವಿದ್ಯಾಪಕ್ಷಪಾತಿಗಳಾದ ಶ್ರೀಗಳವರ ಚರಣ ಸನ್ನಿಧಿಯಲ್ಲಿ ಕಾಣಿಕೆಯಾಗಿ ಸಮರ್ಪಿಸಬೇಕೆಂಬ ತವಕದಿಂದ ಬಾಗಲಕೋಟೆಗೆ ಬಂದೆನು. ಶ್ರೀಗಳವರ ಸನ್ನಿಧಾನದಲ್ಲಿ ಶ್ರೀಮಾನ್‌ ಮಧ್ವಾಚಾರ್ಯರ ಕಾಲನಿರ್ಣಯ ಮತ್ತು ಶಾಖಾ ನಿರ್ಣಯಗಳ ಬಗ್ಗೆ ಪುಸ್ತಕದಲ್ಲಿ ಬರೆದದ್ದನ್ನು ಓದಿ ತೋರಿಸಿದೆನು.

ಶಾಖಾ ನಿರ್ಣಯ

ಶ್ರೀಮನ್‌ ಮಧ್ವಾಚಾರ್ಯರು ಕಾಣ್ವ ಶಾಖೆಯ ಬ್ರಾಹ್ಮಣರೆಂಬುದನ್ನು ಎಂಟು ಪ್ರಮಾಣಗಳಿಂದ ಸಿದ್ದ ಮಾಡಿದ್ದೇನೆ. ಈ ಗ್ರಂಥದ ಶಾಖಾನಿರ್ಣಯವೆಂಬ ಎರಡನೇ ಪರಿಶಿಷ್ಟವನ್ನು ಓದಿರಿ, (ಪುಟಗಳು ೧೪೯ರಿಂದ ೧೬೬ರ ವರೆಗೆ) ಈ ಎಂಟೂ ಪ್ರಮಾಣಗಳನ್ನು ಶ್ರೀ ಪಾದಂಗಳವರ ಸನ್ನಿಧಿಯಲ್ಲಿ ತೋರಿಸಿದೆನು. ಮತ್ತು ಶ್ರೀಮನ್‌ ಮಧ್ವಾಚಾರ್ಯರು ಕಠ ತೈತ್ಯರೀಯ, ರಾಣಾಯನೀಯ, ಪಿಪ್ಪಿಲಾದ, ಕಾಥುಮ, ಶೌನಕೀಯ, ಶಾಕಲ, ಬಾಷ್ಕಲ, ಆಶ್ವಲಾಯನ, ಶಾಂಖಾಯನ, ಮಾಂಡುಕೇಯ ಪ್ರಬೃತಿ ಶಾಖೆಗಳಲ್ಲಿ ಯಾವದೊಂದು ಶಾಖೆಯವರಿದ್ದರೆ ಪ್ರಮಾಣಗಳನ್ನು ತೋರಿಸೋಣವಾಗಬೇಕೆಂದು ಭಿನ್ನವಿಸಿಕೊಂಡೆನು ಆಗ (೧) ಋಗ್ವೇದಕ್ಕೆ ಶ್ರೀಮನ್‌ ಮಧ್ವಾಚಾರ್ಯರು ಭಾಷ್ಯವನ್ನು ಬರೆದಿದ್ದಾರೆ. ಇದಕ್ಕೆ ಅಭಿಪ್ರಾಯವೇನು? ಎಂದು ಪ್ರಶ್ನೆ ಮಾಡಿದರು. ಅದಕ್ಕೆ ನಾನು ಶ್ರೀ ಮಧ್ವಾಚಾರ್ಯರು ಋಗ್ವೇದದ ಮೊದಲನೇ ಮಂಡಲದ ನಾಲ್ವತ್ತು ಸೂತ್ರಗಳಿಗೆ ಮಾತ್ರ ಭಾಷ್ಯವನ್ನು ಬರೆದಿದ್ದಾರೆ. ತೈತ್ರೀಯ ಶಾಖೆಯ ಬ್ರಾಹ್ಮಣರಾದ ಸಾಣಾಚಾರ್ಯರು ಋಗ್ವೇದ ಹತ್ತು ಮಂಡಲಗಳಿಗೂ ಸಂಪೂರ್ಣವಾಗಿ ಭಾಷ್ಯವನ್ನು ಬರೆದಿದ್ದಾರೆ. ಹೀಗೆ ಋಗ್ವೇದಕ್ಕೆ ಬಾಷ್ಯವನ್ನು ಬರೆದ ಮಾತ್ರಕ್ಕೆ ಸಾಯಣಾಚಾರ್ಯರು ಹೇಗೆ ಋಗ್ವೇದಿಗಳಾಗಲಾರರೋ ಹಾಗೆಯೇ ಶ್ರೀ ಮಧ್ವಾಚಾರ್ಯರು ಋಗ್ವೇದಕ್ಕೆ ಬಾಷ್ಯವನ್ನು ಬರೆದ ಮಾತ್ರದಿಂದ ಋಗ್ವೇದಿಗಳಾಗಲಾರರು. (೨) ಶಿವಳ್ಳಿ ಬ್ರಾಹ್ಮಣರಲ್ಲಿ ನಡುಮನಿ. ಭಟ್ಟಮನಿಯವರೆಂದು ಕೆಲವರು ಹೇಳಿಕೊಳ್ಳುವರು. ಇದಕ್ಕೆ ನಿಮ್ಮ ಅಭಿಪ್ರಾಯವೇನು ಎಂದು ಪ್ರಶ್ನೆ ಮಾಡಿದರು. ಅದಕ್ಕೆ ನಾನು ಶ್ರೀಮದಾನಂದ ತೀರ್ಥರೂ ಮತ್ತು ಅವರ ಅನುಜರಾದ ಶ್ರೀ ವಿಷ್ಣು ತೀರ್ಥಾಚಾರ್ಯರೂ ಬ್ರಹ್ಮಚರ್ಯದಿಂದಲೇ ಸನ್ಯಾಸವನ್ನು ಸ್ವೀಕರಿಸಿದ್ದರಿಂದ ಮಧ್ಯಗೇಹ ಭಟ್ಟರ ವಂಶವು ಉಳಿಯಲೇ ಇಲ್ಲವೆಂಬದು ನಿರಾಳವಿದೆ. ಇದಲ್ಲದೆ ಮಧ್ಯಗೇಹ ಭಟ್ಟ ವಂಶಜರು ಇದ್ದಾರೆಂಬುವ ಬಗ್ಗೆ ಎಲ್ಲಿಯೂ ಪ್ರಮಾಣವಿಲ್ಲ. ಆದ್ದರಿಂದ ನಡುಮನೆ ಭಟ್ಟರೆಂದು ಹೇಳಿಕೊಳ್ಳುವವರನ್ನು ಮಧ್ಯೇಗೇಹ ಭಟ್ಟರ ವಂಶಜರೆಂದು ನಂಬಲಿಕ್ಕೆ ಬರುವುದಿಲ್ಲ ಎಂದು ಹೇಳಿದೆನು. ಆಗ ಭಗವತ್ಪಾದಾಚಾರ್ಯರಾದ ಶ್ರೀಮತ್‌ ಸತ್ಯಧ್ಯಾನ ಶ್ರೀ ಪಾದಂಗಳವರು ಅಪ್ಪಣೆ ಕೊಡಿಸಿದ್ದೇನೆಂದರೆ ಶ್ರೀಮನ್‌ ಮಧ್ವಾಚಾರ್ಯರು ಕಾಣ್ವ ಶಾಖೆಯವರಾಗುವುದರಿಂದ ನಮಗೇನು ಬಾಧಕವಿಲ್ಲ. ಶ್ರೀ ಮಧ್ವಾಚಾರ್ಯರು ಕಾಣ್ವ ಶಾಖೆಯವರಾಗರೊಲ್ಲರೇಕೆ ಎಂದು ನುಡಿದು ತಮ್ಮ ಸತ್ಯ ಸಂಧತೆಯನ್ನು ಚೆನ್ನಾಗಿ ವ್ಯಕ್ತಪಡಿಸಿದರು.

ಶ್ರೂಮಾನ್‌ ಕಟ್ಟಿಯವರು ಎಷ್ಟೇ ಆಕ್ರೋಶವನ್ನು ಮಾಡಿದರೂ ಎಷ್ಟೇ ಕುಚೇಷ್ಟೆಯನ್ನು ಮಾಡಿದರೂ ಇಂಥ ಅಸಂಭದ್ಧ ಪ್ರಲಾಪಗಳಿಂದ ಶ್ರೀಮತ್‌ ಮಧ್ವಾಚಾರ್ಯರು ಕಾಣ್ವ ಶಾಖೆಯವರೆಂಬ ಸತ್ಯ ಸಿದ್ಧಾಂತಕ್ಕೆ ಲವಲೇಶವಾದರೂ ಭಾಧೆ ಬರುವಂತಿಲ್ಲ.

ಕಾಲ ನಿರ್ಣಯ

ಮರುದಿವಸ ಕಾಲನಿರ್ಣಯದ ಚರ್ಚೆಯು ಹೊರಟಿತು. ಶ್ರೀಮದಾಚಾರ್ಯರ ತಮ್ಮ ಮಹಾಭಾರತ ತಾತ್ಪರ್ಯ ನಿರ್ಣಯವೆಂಬ ಗ್ರಂಥದಲ್ಲಿ ಒಂದು ಸಾರೆಯಲ್ಲದೆ ಎರಡು ಸಾರೆ ತಾವು ಗತಕಲಿ ಪ್ರಮಾಣ ೪೩೦೦ ರಲ್ಲಿ ಎಂದರೆ ೧೧೨೧ನೆಯ ಶಕವವೊಂದನ್ನೇ ಅನುಸರಿಸಬೇಕಾಗಿರುತ್ತಿರುವ ಹೊರತು ಅನ್ಯಮಾರ್ಗವೇ ಇಲ್ಲವೆಂದು, ಭಾರತ ತಾತ್ಪರ್ಯ ನಿರ್ಣಯದ ಪ್ರಮಾಣ್ಯದ ಬಗ್ಗೆ ಶ್ರೀಗಳವರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ನಾನು ಉಡುಪಿಗೆ ಹೋದಾಗ್ಗೆ ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಕೃಷ್ಣಾಪುರ ಮಠದಲ್ಲಿದ್ದ ೧೩೩೦ನೇ ಶಕ ವರ್ಷದ ಸರ್ವಧಾರೀ ಸಂವತ್ಸರದಲ್ಲಿ ದೇವರಾಯ ಮಹಾರಾಯರು ಶ್ರೀ ವಿದ್ಯಾಧಿರಾಜ ತೀರ್ಥರಿಗೆ ಭೂದಾನ ಮಾಡಿದ ಶಾಸನದ ಬಗ್ಗೆ ಕೃಷ್ಣಾಪುರದ ಮಠದ ಶ್ರೀ ಪದಾಂಗಳವರನ್ನು ವಿಚಾರಿಸಲು ದೇವರಾಯ ಮಹಾರಾಯರು ನಮ್ಮ ಮಠದ ಶ್ರೀ ವಿದ್ಯಾಧಿರಾಜ ತೀರ್ಥರಿಗೇನೇ ಈ ಭೂದಾನ ಮಾಡಿದ್ದಾರೆಯೇ ಹೊರತು ಉತ್ತರಾದಿ ಮಠದ ಶ್ರೀ ವಿದ್ಯಾಧಿರಾಜರಿಗೆ ಈ ದಾನವು ಮಾಡಿದ್ದಲವೆಂದು ಹೇಳಿ ನಮ್ಮ ಕೃಷ್ಣಾಪುರ ಮಠ ಪೀಳಿಗೆಯಲ್ಲಿ ಶ್ರೀ ವಿದ್ಯಾಧಿರಾಜ ತೀರ್ಥರು ಪೀಠಾರೋಹಣ ಮಾಡಿದ ಉಲ್ಲೇಖವಿದ್ದ ಮುದ್ರಿತ ಪುಸ್ತಕವನ್ನು ನನ್ನ ಕೈಯಲ್ಲಿ ಕೊಟ್ಟರು. ಅದೇ ಪುಸ್ತಕವನ್ನೇ ಬಾಗಲಕೋಟೆಯ ಮೊನ್ನಿನ ಸಭೆಯಲ್ಲಿ ತೋರಿಸಿದೆನು. ಅದರಲ್ಲಿ ವಿದ್ಯಾಧಿರಾಜ ತೀರ್ಥರ ನಾಮೊಲ್ಲೇಖವು ಸ್ಪಷ್ಟವಾಗಿ ಇದ್ದದ್ದನ್ನು ನಿಜಗಲ್ಲ ವೆಂಕಟರಾಯರು ಪಾವಂಜೆ ಗುರುರಾಯರೂ ಕೃಷ್ಣಾಪುರ ಮಠದ ಪೀಳಿಗೆಯಲ್ಲಿ ಪ್ರಕಟಿಸಿದ್ದಾರೆ. ಬೇಕಾದವರು ನೋಡಿಕೊಳ್ಳಬಹುದು. ಹೀಗಿದ್ದು ಶ್ರೀಮಾನ್‌ ಕಟ್ಟಿಯವರು ೨೫.೦೫.೧೯೩೬ನೇ ಸಂಯುಕ್ತ ಕರ್ನಾಟಕದಲ್ಲಿ ಕೃಷ್ಣಾಪುರ ಮಠದ ಪೀಠದ ಮೇಲೆ ವಿದ್ಯಾಧಿರಾಜರೆಂಬುವವರು ಇಲ್ಲವೇ ಇಲ್ಲವೆಂದು ಸುವ್ಯಕ್ತವಾಯಿತು. ನಿರುಪಾಯರಾಗಿ ರಾಜ ಪುರುಹೋತರು ತಮ್ಮ ವಿಧಾನವನ್ನು ತಿರುಗಿ ತಕ್ಕೊಂಡರು ಎಂದು ಸುಳ್ಳು ಸುದ್ದಿಯನ್ನು ಪ್ರಕಟಿಸಿ ಜನರಲ್ಲಿ ತಪ್ಪು ತಿಳುವಳಿಕೆಯನ್ನುಂಟು ಮಾಡಲಿಕ್ಕೆ ಯತ್ನಿಸಿದ್ದಾರೆ.

ಉತ್ತರಾಧಿಮಠದ ಪೀಠದ ಮೇಲೆ ೧೩೩೧ನೇ ಶಕ ವರ್ಷದಲ್ಲಿ ಶ್ರೀ ವಿದ್ಯಾಧಿರಾಜ ತೀರ್ಥರವರು ಇದ್ದಿಲ್ಲವೆಂಬದನ್ನೂ ಮತ್ತು ಅವರು ಅದಕ್ಕಿಂತ ಪೂರ್ವದಲ್ಲಿಯೇ ವೃಂದಾವನಸ್ಥರಾಗಿದ್ದರೆಂಬುದನ್ನೂ ಉತ್ತರಾದಿಮಠದ ಎಲ್ಲ ಪೀಳಿಗೆಗಳು ಘಂಟಾ ಘೋಷವಾಗಿ ಹೇಳುತ್ತವೆ.

ಶ್ರೀ ಅಕ್ಷೋಭ್ಯ ತೀರ್ಥರಿಗೂ, ಶ್ರೀ ವಿದ್ಯಾರಣ್ಯರಿಗೂ ವಾದ ವಿವಾದವಾಯಿತೆಂಬ ಕಥೆಯ ಜನಕರಾದ ಸಂಕರ್ಷಣಾಚಾರ್ಯರು ೧೫೯೭ನೇ ಶಕ ವರ್ಷದಲ್ಲಿ ಅಂದರೆ ಕ್ರಿ.ಶ. ೧೬೭೫ರಲ್ಲಿ ಈ ಕಾಲದಲ್ಲಿ ಇದ್ದು ಜಯತೀರ್ಥ ವಿಜಯ ಎಂಬ ಪುಸ್ತಕವನ್ನು ಬರೆದರು. ‘ಆ ಕಾಲದಲ್ಲಿ ಶ್ರೀ ವಿದ್ಯಾರಣ್ಯರು ಸ್ಥಾಪಿಸಿದ ವಿಜಯನಗರ ರಾಜ್ಯವು ಅಸ್ತವಾಗಿ ೧೧೦ ವರ್ಷಗಳು ಸಂದು ಹೋಗಿದ್ದವು. ಇಂತಹ ಕಾಲದಲ್ಲಿ ಈ ಕಥೆಯನ್ನು ಬರೆದವರನ್ನು ಶಿಕ್ಷಿಸುವ ವಿಜಯನಗರದ ರಾಜರೆಲ್ಲಿರುವರು?’