ಮಹಾಮಹೋಪಾಧ್ಯಾಯ ದ.ವಾ. ಪೋತದಾರರ ಶ್ರದ್ಧಾಂಜಲಿ

ನಾರಾಯಣರಾವ ರಾಜಪುರೋಹಿತರು ನನ್ನ ಒಬ್ಬ ಘನಿಷ್ಟ ಮಿತ್ರರಾಗಿದ್ದರು. ೪೦ ವರುಷಗಳ ಹಿಂದೆ ನಾನು ಧಾರವಾಡಕ್ಕೆ ಬಂದಾಗ ನನ್ನ ಅವರ ಮೊದಲ ಪರಿಚಯವಾಗಿತ್ತು. ನನ್ನ ಸ್ನೇಹಿತರಾದ ಶ್ರೀ ಹುಕ್ಕೇರಿಕರರು ಅವರ ಪರಿಚಯ ಮಾಡಿಸಿದರು. ಶ್ರೀ ರಾಜಪುರೋಹಿತರು ಬಹಳ ಬಡತನದಲ್ಲಿದ್ದರು. ಆದರೂ ಅತ್ಯಂತ ಸ್ವಾಭಿಮಾನಿಗಳಾಗಿದ್ದರು. ಪ್ರಾಚೀನ ಶಿಲಾ – ತಾಮ್ರ ಶಾಸನಗಳ ಅಭ್ಯಾಸವನ್ನು ಅವರು ಬಹಳ ಆಳವಾಗಿ ಮಾಡಿದ್ದರು. ಕರ್ನಾಟಕದಲ್ಲೆಲ್ಲ ಸ್ವತಃ ತಿರುಗಾಡಿ ನಿರ್ಲಕ್ಷ್ಯ ಶಿಲಾಶಾಸನಗಳನ್ನು ಹುಡುಕಿ ಅವುಗಳನ್ನು ಓದಿ ಮತ್ತು ಅವುಗಳ ಮುದ್ರೆಗಳನ್ನು ತೆಗೆದುಕೊಂಡು ಬಹಳಷ್ಟು ಲೇಖನಗಳನ್ನು ಬರೆದರು. ಹೊಸ ಜ್ಞಾನವನ್ನು ಜನರಿಗೆ ನೀಡಿದರು. ಕರ್ನಾಟಕದ ಚಾಲುಕ್ಯಾದಿಗಳ ಇತಿಹಾಸವನ್ನು ಪ್ರಕಟಿಸಿದರು. ಹಾಗೆ ನೋಡಿದರೆ ಕರ್ನಾಟಕ ರಾಜ್ಯದ ಪ್ರಾಚೀನ ಇತಿಹಾಸವು ಬಹಳ ಗೌರವಾದರಳಿಂದ ಮತ್ತು ವಿಜಯಗಳಿಂದ ಕೂಡಿದೆ. ವಿದ್ವಾಂಸರು, ಕವಿಗಳು ಮತ್ತು ವೀರರು ಇವರುಗಳಿಂದಲೇ ಆ ಇತಿಹಾಸವು ತುಂಬಿ ಹೋಗಿದೆ. ಸುಶೋಭಿತವೂ, ಸ್ಪೂರ್ತಿದಾಯಕವು ಮತ್ತು ವೈಭವ ಸೂಚಕವೂ ಆಗಿವೆ. ಶಿಲಾಶಾಸನಗಳಿಂದ ಇದು ಸಿದ್ಧವಾಗಿದ್ದರೂ ಹಳೆಬೀಡು ಮೊದಲಾದ ಸ್ಥಳಗಳ ಸಾಮಗ್ರಿಗಳು ಉಪೇಕ್ಷಿತವಾಗಿಯೇ ಉಳಿದುಕೊಂಡಿವೆ. ಊರೂರುಗಳಿಗೆ ತಿರುಗಿ ನಾರಾಯಣರಾಯರು ಶ್ರಮ ಪಡುತ್ತಿದ್ದರು. ಜಾಗೃತಿಯನ್ನೂ ಮಾಡುತ್ತಿದ್ದರು. ಉತ್ತರ ಆಯುಷ್ಯದಲ್ಲಿ ಅವರು ಮಹಾರಾಷ್ಟ್ರದಲ್ಲೂ ಸಾಕಷ್ಟು ತಿರುಗಾಡಿದ್ದಾರೆ. ಅವರು ಬಹಳ ಬೇಗ ಇಹಲೋಕವನ್ನು ತ್ಯಜಿಸಿ ಹೊರಟು ಹೋದರು. ಇದರಿಂದ ನಮಗೆ ತುಂಬ ದುಃಖವಾಗಿದೆ. ಇತಿಹಾಸಕ್ಕೆ ತುಂಬ ಹಾನಿಯಾಗಿದೆ. ಮತ್ತೆ ಕರ್ನಾಟಕವು ಜಾಗೃತವಾಗಿ ತನ್ನ ಮೊದಲಿನ ಗೌರವಗಳಿಗೆ ಮುಟ್ಟಿದಾಗ ಅದನ್ನು ಉನ್ನತಿ ಮಾರ್ಗದಲ್ಲಿ ನಡೆಸಿದವರಲ್ಲಿ ಶ್ರೀ ರಾಜಪುರೋಹಿತರ ಹೆಸರು ಅವಶ್ಯವಾಗಿ ಇರಬೇಕಾಗುತ್ತದೆ.

ದ.ವಾ. ಪೋತದಾರ
ತಾ. ೧೦.೦೧.೧೯೫೮
ಪುಣೆ