ರಾಜಪುರೋಹಿತರ ಲೇಖನದ ಪ್ರತಿಕ್ರಿಯೆಗಳಿಗೆ ಒಂದು ಉತ್ತರದ ಮಾದರಿ

ಲೇಖಕ : – ಶ್ರೀ. ನಾ. ಶ್ರೀ. ರಾಜಪುರೋಹಿತ – ಧಾರವಾಡ

ಕುಮಾರರಾಮನು ವಿಜಯನಗರದ ದೇವರಾಯನ ಕಾಲದವನೇ ಹೌದು

ಶ್ರೀಮಾನ್‌ ದೇಸಾಯಿ ಪಾಂಡುರಂಗರಾಯರು ಮತ್ತು ಶ್ರೀಮಾನ್‌ ಹುಲ್ಲೂರು ಶ್ರೀನಿವಾಸ ಜೋಯಿಸ ವಕೀಲರು ಹಿಂದಿನ ಎರಡು ವಾರಗಳ (ತಾ. ೧೬.೦೨.೧೯೪೨ ಮತ್ತು ತಾ. ೨೩.೦೨.೧೯೪೨) ಕರ್ಮವೀರ ಪತ್ರಿಕೆಯಲ್ಲಿ ತಾ. ೦೨.೦೨.೧೯೪೨ನೇಯ ಕರ್ಮವೀರ ಸಂಚಿಕೆಯಲ್ಲಿ ಪ್ರಸಿದ್ಧವಾದ ನನ್ನ ಲೇಖದ ಮೇಲೆ ಆವೇಶದಿಂದ ದಾಳಿ ಮಾಡುವುದಕ್ಕೆ ಹೊರಟು, ವಿಜಯನಗರ ಸ್ಥಾಪನೆಗಿಂತ ಪ್ರಾಚೀನಕಾಲದ ಸಾವಿರಾರು ಶಿಲಾಶಾನಗಳನ್ನು ನನ್ನ ಮುಂದೆ ತಂದು ನಿಲ್ಲಿಸದ್ದಾರೆ. ಆದರೇನು? ಮದುಮಗನನ್ನು (ಎಂದರೆ ವರನನ್ನು) ಬಿಟ್ಟು ಮದುವಿಗೆ ಹೋದಂತೆ ಈ ನಮ್ಮ ಮಾನ್ಯ ಮಿತ್ರರಿಬ್ಬರ ಸ್ಥಿತಿಯಾಗಿದೆ. ಇವರು ತೋರಿಸಿದ ಶಿಲಾಶಾಸನಗಳಲ್ಲಿ ಒಂದರಲ್ಲಿಯೂ ಸಹ ಕುಮಾರರಾಮನು ಇರುವುದಿಲ್ಲ! ಇಷ್ಟು ಮಾತ್ರವೇ ಅಲ್ಲ. ಇವುಗಳಲ್ಲಿ ಒಂದೆರೆಡು ಶಿಲಾಶಾಸನಗಳನ್ನು ಸ್ವತಃ ಇವರು ಓದಿರುವುದೇ ಇಲ್ಲ. ನಮ್ಮ ಪಾಂಡುರಂಗರಾಯರು ತೋರಿಸಿದ ದಾವಣಗೆರೆ ತಾಲೂಕಿನ ೨೬ನೆಯ ಶಾಸನದಲ್ಲಿ “ಮುಮ್ಮಡಿಸಿಂಗಯ್ಯ ನಾಯಕ ಸಮಗ್ರ ಖಂಡೇರಾಯನೆಂದು ಹೇಳಿದೆ”ಯೇ ಹೊರತು ಕಂಪಿಲದೇವನೆಂದು ಹೇಳಿರುವುದಿಲ್ಲ. ಅರ್ಥಾತ್‌ ದೇವಗಿರಿಯಾದವ ರಾಯದೇವನಿಗೆ ಅಂಕಿತನಾಗಿ ಮುಮ್ಮುಡಿಸಿಂಗಯ್ಯ ನಾಯಕನ ಮಗನಾದ ಖಂಡೇರಾಯನು ಹರಿಹರಪುರವನ್ನು ಪುನರ್ದತ್ತಿಯಾಗಿ ಬಿಟ್ಟನೆ ಹೊರತು ಪಾಂಡುರಂಗರಾಯರು ಹೇಳಿದಂತೆ ಕಂಪಿಲದೇವನು ಹರಿಹರಪುರವನ್ನು ಪುನರ್ದತ್ತಿಯಾಗಿ ಬಿಟ್ಟಿರುವುದಿಲ್ಲ. ಆತ ಏವ ಮುಮ್ಮಡಿಸಿಂಗಯ್ಯ ನಾಯಕನ ಮಗ ಖಂಡೇರಾಯನೆಂಬುದು ಈ ಶಿಲಾಶಾಸನದಿಂದ ವ್ಯಕ್ತವಾಯಿತೇ ಹೊರತು ಕಂಪಿಲ ದೇವನೆಂದು ವ್ಯಕ್ತವಾಗಲಿಲ್ಲವೆಂದು ಇತ್ಯರ್ಥ.

ಇದೂ ಅಲ್ಲದೆ ಇವರಿಬ್ಬರೂ ತೋರಿಸಿದ ಶಿವಮೊಗ್ಗ ಜಿಲ್ಲೆಯ ನಗರ ತಾಲೂಕಿನ ೧೯ನೆಯ ಶಿಲಾಶಾಸನದಲ್ಲಿ ಮೂರು ಸಾರೆ “ಕಪಿಲ ದೇವ”, “ಕಪಿಲದೇವ”, ಎಂದು ಉಕ್ತವಾಗಿದೆಯೇ ಹೊರತು “ಕಂಪಿಲ ದೇವ” ಎಂದು ಒಂದುಸಲವೂ ಸಹ ಉಕ್ತವಾಗಿರುವುದಿಲ್ಲ. ‘ಕಪಿಲ’ ಎಂಬ ನಾಮವು ಭಾರತೀಯರಿಗೆ ಅಪರಿಚಿತವಲ್ಲ. ಸಾಂಖ್ಯ ಶಾಸ್ತ್ರ ಪ್ರವರ್ತಕ ಋಷಿಯ ಹೆಸರೂ ಸಹ “ಕಪಿಲ” ಎಂದು ಇರುತ್ತದೆಂಬುದು ಸುಪ್ರಸಿದ್ದವೇ ಇದೆ. ಈ ಉಭಯ ಲೇಖಕರು ಈ ಶಾಸನವನ್ನು ಓದದೇ ಇದರಲ್ಲಿ “ಕಂಪಿಲ ದೇವ” ಎಂಬ ನಾಮವೇ ಉಕ್ತವಾಗಿದೆಯೆಂದು ಭಾವಿಸಿಕೊಂಡು ಬಿಟ್ಟಿದ್ದಾರೆ.

ಮುಮ್ಮಡಿ ಸಿಂಗಯ್ಯ ನಾಯಕನ ಮಗನು ಕಂಪಿಲದೇವನು ಆಗಿರಲಿ ಆಗದೇ ಇರಲಿ; ಮತ್ತು ಇವನ ಹೆಸರು ಕಪಿಲದೇವನೆಂದೇ ಇರಲಿ ಕಂಪಿಲ ದೇವನೆಂದೇ ಇರಲಿ. ಹೇಗಿದ್ದರೂ ದೇವಗಿರಿ ಯಾದವ ರಾಮದೇವನ ಕಾಲದಲ್ಲಿದ್ದ ಕಪಿಲದೇವ (ಅಥವಾ ಕಂಪಿಲದೇವ)ನೇ ಬೇರೆ, ವಿಜಯನಗರದ ದೇವರಾಯನ ಕಾಲದಲ್ಲಿದ್ದ ಕಂಪಿಲರಾಯನೇ ಬೇರೆ ಎಂಬ ಸಿದ್ಧಾಂತವನ್ನು ಸಂಗೂರು ಗ್ರಾಮದ ಕುಮಾರರಾಮನ ಶಿಲಾಶಾಸನವು ಸಾರಿ ಹೇಳುತ್ತದೆ. ಇಷ್ಟು ಮಾತ್ರವೇ ಅಲ್ಲ. ತೀರ್ಥಹಳ್ಳಿ ತಾಲೂಕಿನ ೨೩ನೆಯ ಶಾಸನವೂ, ಕುಮಾರರಾಮನ ಕಥೆಯೂ ಹಾಗೂ ಕುಮಾರವ್ಯಾಸನ ಭಾರತವೂ ಈ ಸಿದ್ಧಾಂತವನ್ನು ದೃಢೀಕರಿಸುತ್ತವೆ. ಅದು ಹೇಗೆಂದರೆ : –

ಮೊಟ್ಟ ಮೊದಲು ಒಂದು ಸಂಗತಿಯನ್ನು ಸಾರಿ ಹೇಳುತ್ತೇನೆ; ಏನೆಂದರೆ : – ಸಂಗೂರು ಗ್ರಾಮದಲ್ಲಿದ್ದ ಕುಮಾರರಾಮನ ಶಿಲಾಶಾಸನವು ಕರ್ನಾಟಕದ ಇತಿಹಾಸದ ಮೇಲೆ ನೂತನವಾದ ಪ್ರಕಾಶವನ್ನು ಬೀರಿರುತ್ತದೆ. ಇದೂ ಅಲ್ಲದೆ ಈ ಸಂಗೂರು ಗ್ರಾಮದ ಶಾಸನ, ತೀರ್ಥಹಳ್ಳಿ ತಾಲ್ಲೂಕಿನ ೨೩ನೆಯ ಶಾಸನ, ಕುಮಾರರಾಮನ ಕಥೆ ಹಾಗೂ ಕುಮಾರವ್ಯಾಸನ ಭಾರತ ಇವು ನಾಲ್ಕು ಸಾಧನಗಳು ಪರಸ್ಪರ ಸಮರ್ಥಕ ಪ್ರಮಾಣಗಳಾಗಿವೆ ಎಂದರೆ ಒಂದನ್ನೊಂದು ಪೋಷಿಸುವ ಪ್ರಮಾಣಗಳಾಗಿವೆ. ಆದುದರಿಂದ ಮೊದಲು ಸಂಗೂರು ಗ್ರಾಮದ ಶಾಸನವನ್ನೂ ತೀರ್ಥಹಳ್ಳಿ ತಾಲೂಕಿನ ೨೩ನೆಯ ಶಾಸನವನ್ನೂ ಸಂಪೂರ್ಣವಾಗಿ ವಾಚಕರ ಮುಂದೆ ಇಟ್ಟು, ಆ ಬಳಿಕ ವಿವೇಚನೆಯನ್ನು ಮಾಡಲುಪಕ್ರಮಿಸುತ್ತೇನೆ.

(ಸಂಗೂರು ಗ್ರಾಮದ ಶಾಸನ) (ಸ್ವಸ್ತಿ ಸಮಸ್ತ ಭುವನಾಶ್ರಯ…. ಇತ್ಯಾದಿ ಶಾಸನದಲ್ಲಿದ್ದ ಬಿರುದಾವಳಿಗಳನ್ನು ಬಿಟ್ಟು) … ಶ್ರೀ ವೀರ ಪ್ರತಾಪ ಹರಿಹರ ಮಹಾರಾಯರ ಕುಮಾರ ದೇವರಾಯರು ಸುಖದಿಂ ರಾಜ್ಯಂಗೆಯ್ಯುತ್ತಿರಲ್‌ ಗೋವೆಯ ರಾಜ್ಯಕ್ಕೆ ಸಲ್ಲುವ ಚಂದ್ರಗುತ್ತಿಯ ನಾಡೊಳಗಣ ಚಂಗಾಪುರದಲ್ಲೂ (ಸಂಗಾಪೂರ – ಸಂಗೂರು) ಕಂಪಿಲರಾಯನ ಬಾಹತ್ತರ ನಿಯೋಗಾಧಿಪತಿ ಪತಿಕಾರ್ಯ ದುರಂಧರ ನುಮಪ್ಪ ಬಯಿಚ, ವೆಗ್ಗಡೆಯ ಬೊಮ್ಮ, ಸೇನಾಧಿಪತಿ ಸಂಗಮನ ಕುಮಾರ ಮಾದರಸರು ಕುಮಾರರಾಮನಾಥ ದೇವರ ಪ್ರತಿಷ್ಠೆಯ ಶಕ ವರ್ಷ ೧೩೨೯ನೆಯ ಸರ್ವಜಿತು ಸಂವತ್ಸರದ ಆಶ್ವಿಯುಜ ಶುದ್ಧ ೧೦ ಆದಿತ್ಯವಾರದಲ್ಲು ಮಾಡಿಸಿದರು. ಮಂಗಳ ಮಹಾ (ತೀರ್ಥಹಳ್ಳಿ ತಾಲೂಕಿನ ೨೩ನೆಯ ಶಾಸನ) “ಸ್ವಸ್ತಿ ಶ್ರೀ ಜಯಾಭ್ಯುದಯ ಶಕ ವರುಷ ೧೩೫೪ನೆಯ ಪರಿಧಾವಿ ಸಂವತ್ಸರದ ಮಾರ್ಗಶಿರ ಬಹುಳ ಬಿದಿಗೆಯ ಬುಧವಾರದಲ್ಲು…. ಶ್ರೀ ವೀರ ಪ್ರತಾಪ ದೇವರಾಯ ಮಹಾರಾಯರು … ಸಮಸ್ತ ಧರ್ಮಾಶ್ರಮಂಗಳನು ಪಾಲಿಸುತ್ತಿಹ ಕಾಲದಲ್ಲಿ … ಸಾತಳಿಗೆಯ ನಾಡ ಕೊಳವಳ್ಳಿಗೆ ಪತಾವಳಿ ಒಂದು ಕಾದಿದಲ್ಲಿ ಆ ಬೊಮ್ಮರಸನ ಹೆಗ್ಗಡೆಯರ ಮಗ ಪುಟ್ಟಗಡೆದಳವನು ಮುರಿದು ಆರಣದೊಳಗೆ ಕುಮಾರರಾಮನಾಥನ ಪ್ರತಾಪವಾಗಿ ಅಂಬುಗೂಡಾಗಿ ಸ್ವರ್ಗವನು ಸೂರೆಕೊಂಡದಕೆ ಬೊಮ್ಮರಸ ಹೆಗ್ಗೆಡೆಯರು ಆ ಬಯಲು ಭೂಮಿಯ ಒಳಗೆ ಜೋಯಿಸ ಸಿಂಗಣ್ಣಗಳಿಗೆ ಆಯಿದು ಸಲಗೆಯ ಭೂಮಿಯನು ದಾನ ಧಾರಪೂರ್ವಕವಾಗಿ ಕೊಟ್ಟರು.”

ಮೊದಲು ಸಂಗೂರು ಗ್ರಾಮದ ಶಿಲಾಶಾಸನವನ್ನು ಕುರಿತು ವಿಚಾರ ಮಾಡಲುಪಕ್ರಮಿಸುವಾ,

ವಿಜಯನಗರದ ೧ನೆಯ ದೇವರಾಯನ ಆಳಿಕೆಯ ಕಾಲದಲ್ಲಿ (ಕ್ರಿ. ವ. ೧೪೦೬ – ೧೪೧೬) ಶಕ ವರ್ಷ ೧೩೨೯ನೆಯ (=ಕ್ರಿ.ವ. ೧೪೦೭ನೆಯ) ಸರ್ವಜಿತು ಸಂವತ್ಸರದ ವಿಜಯದಶಮಿಯ ದಿನ ಸಂಗೂರ ಗ್ರಾಮದಲ್ಲಿ ಕಂಪಿಲರಾಯನ ಬಾಹತ್ತರ, ನಿಯೋಗಾಧಿಪತಿಯಾದ ಬಯಿಚಪ್ಪ, ಬೊಮ್ಮರಸು ಹೆಗ್ಗಡೆ, ಹಾಗೂ ಸೇನಾಧಿಪತಿ ಸಂಗಮನ ಕುಮಾರ ಮಾದರಸು ಈ ಮೂವರು ಕೂಡಿ ತಮ್ಮ ಒಡೆಯನ ಯುವರಾಜನಾದ ಕುಮಾರರಾಮನಾಥನ ಪ್ರತಿಷ್ಠೆಯನ್ನು ಮಾಡಿಸಿ ತಮ್ಮ ರಾಜ ಭಕ್ತಿಯ ಮತ್ತು ಯುವರಾಜ ಭಕ್ತಿಯ ಕಾಣಿಕೆಯನ್ನು ಸಲ್ಲಿಸದ್ದಾರೆ. ಪ್ರತಿಷ್ಠೆಯನ್ನು ಮಾಡಿಸಿದರು ಮೂರು ಜನರು ಇರುವುದರಿಂದ ಇವರಲ್ಲಿಯ ಕೊನೆಯ ನಾಮವು ಬಹು ವಚನಾಂತವಾಗಿ ಇರುವುದು ವ್ಯಾಕರಣ ನಿಯಮಕ್ಕನುಸರಿಸಿ ಕ್ರಮ ಪ್ರಾಪ್ತವಾಗಿದೆ. ಆದುದರಿಂದಲೇ ಈ ಶಾಸನದಲ್ಲಿ ಕೊನೆಯ ನಾಮವು “ಮಾದರಸರು” ಎಂದು ಬಹುವಚನಾಂತುವೇ ಇದೆ.

ಇನ್ನು ಈ ಮೂವರಲ್ಲಿ ಬಾಹತ್ತರ ನಿಯೋಗಾಧಿಪತಿಯಾದ ಬಯಿಚಪ್ಪನು ಕುಮಾರರಾಮನ ಕಥೆಯಲ್ಲಿ (ಪುಟ – ೭೮) “ಪ್ರಧಾನಿಗಳರಸನಾದ ಬೈಚಪ್ಪನು” ಎಂದು ಕೀರ್ತಿತನಾಗಿಯೇ ಇದ್ದಾನೆ. ಪ್ರಧಾನಿಗಳ ಅರಸನೆಂದರೂ ಒಂದೇ, ಬಾಹತ್ತ ನಿಯೋಗಾಧಿಪತಿಯೆಂದರೂ ಒಂದೇ. ಅದು ಹೇಗೆಂದರೆ, ನಿಯೋಗ ಎಂದರೆ ಅಧಿಕಾರ. ನಿಯೋಗಿಗಳು ಎಂದರೆ ಅಧಿಕಾರಿಗಳು ಅಥವಾ ಪ್ರಧಾನಿಗಳು ‘ಬಾಹತ್ತರ’ ಎಂಬುದು ಮರಾಠಿ ಸಂಖ್ಯಾವಾಚಕ ಶಬ್ದವಾಗಿದ್ದು, ಇದರ ಅರ್ಥವು ‘೭೨’ ಎಂದು ಇದೆ. ಕಲಬುರ್ಗಿಯ ಬಹಮನೀ ಸುಲ್ತಾನರ ಆಳಿಕೆಯಲ್ಲಿ ರಾಜಕೀಯ ಅಧಿಕಾರಿಗಳು ಮರಾಠಿ ಜನರು ಬಹುಜನರು ಇದ್ದುದರಿಂದ “ಬಾಹತ್ತರ ನಿಯೋಗಿಗಳು” ಅಥವಾ ಬಾಹತ್ತ ನಿಯೋಗಾಧಿಪತಿ” ಎಂಬ ಪಾರಿಭಾಷಿಕ ಶಬ್ದವು ಬಹಮನೀ ರಾಜ್ಯದ ರಾಜಕಾರಣದಲ್ಲಿ ರೂಢವಾಯಿತು. ಮುಂದೆ ತುಸು ದಿವಸಗಳಲ್ಲಿಯೇ ಬಹಮನೀ ರಾಜ್ಯಕ್ಕೆ ಹೊಂದಿದ ವಿಜಯನಗರ ರಾಜ್ಯದ ರಾಜಕಾರಣದಲ್ಲಿಯೂ ಈ ಪಾರಿಭಾಷಿಕ ಶಬ್ದದ ಪ್ರವೇಶವು ವೇಗದಿಂದ ಆಗಿ, ಇಲ್ಲಿಯೂ ಅದು ಚೆನ್ನಾಗಿ ನೆಲೆಗೊಂಡಿತು. ಆಗ್ಗೆ ವಿಜಯನಗರ ಅರಸರ ಕಾಲದಲ್ಲಿದ್ದ ಕುಮಾರವ್ಯಾಸನು ತಾನು ಬರೆದ ಭಾರತ ಗ್ರಂಥದಲ್ಲಿ ಈ ಪಾರಿಭಾಷಿಕ ಶಬ್ದವನ್ನು ಹೀಗೆ ಪ್ರಯೋಗಿಸಿದ್ದಾನೆ : – “ಬಾಹತ್ತರ ನಿಯೋಗಿಗಳ ನಂಬುವುದು ಚಿತವೇ ಹೇಳೆಂದನಾ ಶಕುನಿ ||” (೦೧ – ೨೧ – ೧೯೩೫ ಮೈಸೂರು ಓರಿಯಂಟಲ್‌ ಲೈಬ್ರರಿಯ ಪ್ರತಿಯಲ್ಲಿ.)

ಇಷ್ಟೆಲ್ಲ ವಿವರಣೆಯ ಫಲಿತಾರ್ಥವೇನೆಂದರೆ, ಕಂಪಿಲರಾಯನ ಓಲಗದ ಬಾಹತ್ತರ ನಿಯೋಗಾಧಿಪತಿಯಾದ ಬೈಚಪ್ಪನು ವಿಜಯನಗರದ ೧ನೆಯ ದೇವರಾಯನ ಕಾಲದಲ್ಲಿ ಸಂಗೂರು ಗ್ರಾಮದಲ್ಲಿ ಕಂಪಿಲರಾಯನ ಮಗನಾದ ಕುಮಾರರಾಮನಾಥನ ಕಲ್ಲಿನ ಭಾವಚಿತ್ರವನ್ನು ಪ್ರತಿಷ್ಠೆ ಮಾಡಿಸಿರುವುದನ್ನು ನೋಡಿದರೆ, ಈ ವಿಜಯನಗರದ ದೇವರಾಯನ ಕಾಲದಲ್ಲಿಯೇ ಕಂಪಿಲರಾಯನೂ ಮತ್ತು ಈತನ ಮಗನಾದ ಕುಮಾರರಾಮನೂ ಹಾಗೂ ಈತನ ಸೇನಾಧಿಪತಿಯಾದ ಸಂಗಮ ಪ್ರಭೃತಿ ಅಧಿಕಾರಿಗಳೂ, ಜೀವಿಸಿದ್ದೆಂಬುದೂ ಸೂರ್ಯ ಪ್ರಕಾಶದಷ್ಟು ಸ್ಪಷ್ಟವಾಗಿ ಸಿದ್ಧವಾಯಿತು.

ಮಹಾತ್ಮಾ ಗಾಂಧಿಯವರು ಈಗ ಜೀವಿಸಿರುವಾಗಲೇ ಇವರ ಸ್ಮಾರಕಗಳು ಭಾವಚಿತ್ರಗಳ ರೂಪದಿಂದಾಗಲಿ ಮೂರ್ತಿಗಳ ರೂಪದಿಂದಾಗಲಿ ಅಖಿಲ ಭರತ ಖಂಡದಲ್ಲಿ ಎಲ್ಲ ಪ್ರಾಂತಗಳಲ್ಲಿ ಪ್ರತಿಷ್ಠೆಯಾದದ್ದು ಸಕಲರಿಗೂ ತಿಳಿದ ಸಂಗತಿಯಾಗಿದೆ. ಆದರೆ ನಮ್ಮ ಮಾನ್ಯ ಮಿತ್ರರಿಬ್ಬರೂ “ಮಹಾಪುರುಷರು ಸತ್ತ ಮೇಲೇನೇ ಮಾತ್ರ ಅವರ ಸ್ಮಾರಕಗಳಾಗುತ್ತದೆಂದು” ತಪ್ಪು ತಿಳಿದುಕೊಂಡು, ಕುಮಾರರಾಮನ ಸ್ಮಾರಕವನ್ನು ಸಂಗೂರು ಗ್ರಾಮದಲ್ಲಿ ನೋಡಿದಾಕ್ಷಣವೇ ಈ ಸ್ಮಾರಕವು ಆಗುವ ಪೂರ್ವದಲ್ಲಿಯೇ ಕುಮಾರರಾಮನು ಸತ್ತು ಹೋಗಿದ್ದನೆಂದು ಈ ಉಭಯ ಮಿತ್ರರು ಅಟ್ಟಹಾಸದಿಂದ ಹೇಳುವುದಕ್ಕೆ ಹೋಗಿ, ತಮ್ಮ ಹುಚ್ಚತನವನ್ನು ವ್ಯಕ್ತಪಡಿಸಿಕೊಂಡಿದ್ದಾರೆ.

ಇನ್ನು, ತೀರ್ಥಹಳ್ಳಿ ತಾಲೂಕಿನ ೨೩ನೆಯ ಶಾಸನದಲ್ಲಿ “ಆ ರಣದೊಳಗೆ ಕುಮಾರರಾಮನಾಥನ ಪ್ರತಾಪವಾಗಿ” ಎಂದು ಕಂಠೋಕ್ತವಾಗಿ ಹೇಳಿದ್ದರೂ ನಮ್ಮ ಶ್ರೀನಿವಾಸ ಜೋಯಿಸ ವಕೀಲರು “ಅಂತೆ” ಎಂಬ ರೀತಿ ವಾಚಕ ಅವ್ಯಯವನ್ನು ಇದರಲ್ಲಿ ತಮ್ಮ ಕೈಯಿಂದ ಸೆರಿಸಿ, ತಮ್ಮ ಮತವನ್ನು ಸಮರ್ಥನ ಮಾಡಿಕೊಳ್ಳುವುದಕ್ಕೆ ಹೋಗಿದ್ದಾರೆ. ಹೀಗೆ ಮಾಡುವುದು ಅನ್ಯಾಯವಾಗಿದೆ. ಇವರ ಅಭಿಪ್ರಾಯವನ್ನೇ ಶಿಲಾಶಾಸನಕಾರನು ಹೇಳುವುದಿದ್ದರೆ, “ಕುಮಾರ ರಾಮನಾಥನೊಲ್‌” ಕುಮಾರ ರಾಮನಾಥನಂತೆ ಕುಮಾರ ರಾಮನಥನ ಹಾಗೆ” ಎಂಬ ರೂಪಗಳಿಂದ ಎಂದರೆ “ಒಲ್‌, ಅಂತೆ, ಹಾಗೆ” ಎಂಬ ರೀತಿ ವಾಚಕ ಅವ್ಯಯಗಳಿಂದ ಯುಕ್ತವಾಗಿ ಆತನು ಬರೆಯುತ್ತಿದ್ದನು. ಇರಲಿ.

ಇನ್ನು ಇಬ್ನಬತ್ತೂತನ ಪ್ರವಾಸ ವೃತ್ತಾಂತವನ್ನು ನೋಡುವಾ. ಈ ಪ್ರವಾಸ ವೃತ್ತಾಂತದಲ್ಲಿ ಮಹಮ್ಮದ ತಘಲಖಸುಲ್ತಾನನ ತಮ್ಮನ ಮಗನಾದ ಬಹಾವುದ್ದೀನ ಗುಶಾಸ್ವ ಎಂಬುವನು, ಕಂಪಿಲದೇವನನ್ನ ಮೊರೆ ಹೊಕ್ಕನು.

ಕುಮಾರ ರಾಮನ ಕಥೆಯಲ್ಲಿ (ಪುಟ ೪೯) ಸುಲ್ತಾನನ ಕೋಪಕ್ಕೆ ಪಾತ್ರನಾದ ಬಾದೂರ ಖಾನನೆಂಬ ಸರದಾರನು ಕುಮಾರ ರಾಮನನ್ನು ಮರೆಹೊಕ್ಕನು.

ಈ ನಿರೂಪಣದಲ್ಲಿ ಘಟನೆಯು ಒಂದೇ ಮಾದರಿಯುಳ್ಳದ್ದು ಆಗಿದ್ದರೂ ಹೆಸರುಗಳು ಮಾತ್ರ ಬೇರೆ ಬೇರೆಯಾಗಿವೆ.

ಈ ರೀತಿಯನ್ನು ನೋಡಿದರೆ ಇತಿಹಾಸ ಶಾಸ್ತ್ರಜ್ಞರ ಅಭಿಪ್ರಾಯವು ನೆನಪಿಗೆ ಬರುತ್ತದೆ. ಅದೇನೆಂದರೆ, “ಇತಿಹಾಸದ ಪುನರಾವೃತ್ತಿಯಾಗುತ್ತಿರುತ್ತದೆ” (ಎಂದರೆ ಒಂದೇ ಮಾದರಿಯ ಘಟನೆಗಳು ಕಾಲಕಾಲಕ್ಕೆ ಉಂಟಾಗುತ್ತಿರುತ್ತವೆಂಬುದು ಇತಿಹಾಸದಲ್ಲಿ ದೃಷ್ಟಿ ಗೋಚರವಾಗುತ್ತದೆಂದು ಇತ್ಯರ್ಥ.) ಎಂದು ಇತಿಹಾಸಶಾಸ್ತ್ರಜ್ಞರ ಸಿದ್ಧಾಂತವಿದೆ.

ತಾತ್ಪರ್ಯಾರ್ಥವೇನೆಂದರೆ, ದೇವಗಿರಿ ಯಾದವ ರಾಮದೇವನ ಕಾಲದಲ್ಲಿದ್ದ ಕಂಪಿಲದೇವನನ್ನು ಮರೆಹೊಕ್ಕವನು, ದಿಲ್ಲಿಯ ತುಘಲಕ ಸುಲ್ತಾನನ ತಮ್ಮನ ಮಗನಾದ ಬಹಾವುದ್ದೀನ ಗುಶಾಸ್ವ ಎಂಬುವನು. ವಿಜಯನಗರದ ೧ನೆಯ ದೇವರಾಯನ ಕಾಲದಲ್ಲಿದ್ದ ಕುಮಾರರಾಮನನ್ನು ಮರೆಹೊಕ್ಕವನು, ಕಲಬುರ್ಗಿಯ ಬಹಮನೀ ಸುಲ್ತಾನನ ಸರದಾರನಾದ ಬಾದೂರಖಾನನೆಂಬುವನು ಎಂಬುದು ಐತಿಹಾಸಿಕ ಸತ್ಯವೆಂದು ಮೇಲೆ ಹೇಳಿದ ವಿವರಣೆಯಿಂದ ನಿಷ್ಪನ್ನವಾಯಿತು.

ವಿಜಯನಗರದ ಸ್ಮಾರಕೋತ್ಸವ ಸಂಚಿಕೆಯಲ್ಲಿ ಲೇಖನಗಳನ್ನು ಬರೆದ ಫಾದರ ಹೆರಾಸ, ಸಾಲತೊರೆ, ಆರ್. ರಾಮರಾವ ಪ್ರಭೃತಿಗಳಿಗೆ ಸಂಗೂರು ಗ್ರಾಮದಲ್ಲಿದ್ದ ಕುಮಾರರಾಮನ ಶಿಲಾಶಾಸನದ ಪರಿಚಯವಿಲ್ಲದ್ದರಿಂದ ಇವರೆಲ್ಲರ ಲೇಖನಗಳಲ್ಲಿ ಪ್ರಮಾದವಾಗಿರುವುದು ಅನಿವಾರ್ಯವಾಗಿದೆ.

ನಮ್ಮ ಶ್ರೀನಿವಾಸ ಜೋಯಿಸ ವಕೀಲರು “ವಿದ್ಯಾರಣ್ಯ ಕೃತಿ” ಎಂಬ ಪುಸ್ತಕವನ್ನು ಪ್ರಮಾಣವೆಂದು ಮುಂದೆ ಇಟ್ಟಿದ್ದಾರೆ. ಆದರೆ ಈ ಪುಸ್ತಕದ ಹೆಸರೇ ತಾನು ಪ್ರಕ್ಷಿಪ್ತ ಗ್ರಂಥವೆಂದು ಸಾರಿ ಹೇಳುತ್ತದೆ. ಅರ್ಥಾತ್‌ ಈ ಗ್ರಂಥವು ಪ್ರಮಾಣಕ್ಕೆ ಸರ್ವಥೈವ ಅನರ್ಹವಾಗಿದೆ.