ಕರ್ನಾಟಕ ಇತಿಹಾಸ ಸಂಶೋಧಕ ಮಂಡಲ, ಧಾರವಾಡ ಅದರ ಹುಟ್ಟು, ಬೆಳವಣಿಗೆ, ಸಂಕ್ಷಿಪ್ತ ಪರಿಚಯ

ಕರ್ನಾಟಕ ಇತಿಹಾಸ ಸಂಶೋಧಕ ಮಂಡಲವನ್ನು ೧೯೧೪ರಲ್ಲಿ ಕುಲಪುರೋಹಿತರಾದ ಶ್ರೀ ಆಲೂರ ವೆಂಕಟರಾಯರು ಕರ್ನಾಟಕದ ಗತವಯವೈಭವದ ಅಭಿಮಾನಿಗಳೂ ಕರ್ನಾಟಕ ಸಂಸ್ಕೃತಿಯಲ್ಲಿ ಆಸ್ಥೆಯುಳ್ಳವರೂ ಆಗಿದ್ದ ಶ್ರೀ ರಾಮಚಂದ್ರ ಹಣಮಂತ ದೇಶಪಾಂಡೆ, ಶ್ರೀ ಆರ್. ಎಸ್‌. ನರಗುಂದಕರ ಮತ್ತು ಶ್ರೀ ನಾರಾಯಣ ಶ್ರೀನಿವಾಸ ರಾಜಪುರೋಹಿತ ಮೊದಲಾದ ಉತ್ಸಾಹಿಗಳನ್ನೊಡಗೂಡಿಕೊಂಡು ಸ್ಥಾಪಿಸಿದರೆಂಬ ಸಂಗತಿಯು ಸುಪ್ರಸಿದ್ಧವಿದೆ. ಯುವಕರ ಅಂತಃಕರಣದಲ್ಲಿ ತಾಯ್ನಾಡಿನ ಅಭಿಮಾನವನ್ನು ತುಂಬುವುದೇ ಇದರ ಮುಖ್ಯ ಉದ್ದೇಶವಾಗಿತ್ತು. ಶ್ರೀ ಆಲೂರ ವೆಂಕಟರಾಯರು ಬರೆದ ‘ಕರ್ನಾಟಕ ಗತವೈಭವ’ವು ಈ ಉದ್ದೇಶವನ್ನು ಯಶಸ್ವಿಯಾಗಿ ಸಾಧಿಸಿತು. ಶ್ರೀ ವಿದ್ಯಾರಣ್ಯರ ಕೀರ್ತನದಿಂದ ಶಾಂತಕವಿಗಳು ಕರ್ನಾಟಕದ ಪ್ರಾಚೀನ ವೈಭವವನ್ನು ಚೆನ್ನಾಗಿ ಜನತೆಯಲ್ಲಿ ಬಿಂಬಿಸಿದರು. ಕರ್ನಾಟಕ ಇತಿಹಾಸವನ್ನು ಕುರಿತು ಬೇರೆ ಕೆಲ ಲೇಖಕರು ಗ್ರಂಥಗಳನ್ನು ಬರೆದರು. ಶ್ರೀ ರಾಜಪುರೋಹಿತರು ಕರ್ನಾಟಕದ ಮೂಲೆಮೂಲೆಗಳಲ್ಲಿ ಸಂಚರಿಸಿ ಮಹತ್ವದ ಕಾಗದಪತ್ರಗಳನ್ನೂ ತಾಡ ಓಲೆಗಳನ್ನೂ ತಾಮ್ರಪಟಗಳನ್ನೂ ನಾಣ್ಯಗಳನ್ನೂ ಸಂಗ್ರಹಿಸಿದರು. ಅನೇಕ ಪರಿಷತ್ತುಗಳು ಸುವಿಖ್ಯಾತ ಪಂಡಿತರ ಹಿರಿತನದಲ್ಲಿ ಸೇರಿದವಲ್ಲದೆ ಐತಿಹಾಸಿಕ ವಸ್ತುಸಂಗ್ರಹ ಪ್ರದರ್ಶನಗಳೂ ಜರುಗಿದವು. ೧೯೨೯ರಲ್ಲಿ ಈ ಸಂಸ್ಥೆಯು ರಿಜಿಸ್ಟರಾಗಿ ಶ್ರೀ ದತ್ತಾತ್ರಯ ಪರುಶುರಾಮ ಕರಮರಕರರ ಉತ್ಸಾಹಯುಕ್ತ ಪ್ರಯತ್ನಗಳ ಮೂಲಕ ಸ್ಥಿರಸ್ಥಾವರವಾದ ತಳಹದಿಯನ್ನು ಪಡೆಯಿತು. ‘ಪ್ರಾಚೀನ ಕರ್ನಾಟಕ’ ಎಂಬ ಕನ್ನಡ ಷಾಣ್ಮಾಸಿಕವೂ ‘ಕರ್ನಾಟಕ ಹಿಸ್ಟಾರಿಕಲ್‌ ರಿವ್ಯೂ’ ಎಂಬ ಆಂಗ್ಲ ಷಾಷ್ಣಾಸಿಕವೂ ಆರಂಭಿಸಲ್ಪಟ್ಟವು. ಸುಪ್ರಸಿದ್ಧ ಪಂಡಿತರಿಂದ ಪ್ರತಿಭಾಯುಕ್ತ ಲೇಖನಗಳೂ ಈ ಪತ್ರಿಕೆಗಳಲ್ಲಿ ಪ್ರಸಿದ್ಧವಾಗುತ್ತಿದ್ದವು.

೧೯೩೬ರಲ್ಲಿ ವಿಜಯನಗರ ಷಟ್‌ ಶತ ಸಾವಂತ್ಸರಿಕೋತ್ಸವವನ್ನು ಹಂಪೆಯಲ್ಲಿ ಸಡಗರದಿಂದ ನೆರವೇರಿಸಲಾಯ್ತು. ಈ ಕಾರ್ಯದಲ್ಲಿ ನಮ್ಮ ಸಂಸ್ಥೆಯು ಮಾಡಿದ ಸೇವೆಯು ಅಮೌಲ್ಯವಾಗಿದ್ದಿತ್ತೆಂಬುದನ್ನು ಪಂಡಿತಪಾಮರರೆಲ್ಲರೂ ಒಪ್ಪಿರುವರು. ೧೯೩೬ರಲ್ಲಿ ಸಂಸ್ಥೆಯು ಬೆಳ್ಳಿಯ ಹಬ್ಬವನ್ನು ಆಚರಿಸಿತು. ಮತ್ತು ಆ ಕಾಲಕ್ಕೆ ಒಂದು ರಜತೋತ್ಸವ ಸಂಚಿಕೆಯನ್ನು ಪ್ರಕಟಿಸಿತು. ಹಾಗೆಯೇ ವಿದ್ವಜ್ಜನರಿಂದ ಬರೆಯಲ್ಪಟ್ಟ ಮೂರು ಮಹತ್ವದ ಪುಸ್ತಕಗಳನ್ನು ಆ ಕಾಲಕ್ಕೆ ಪ್ರಸಿದ್ಧಿಸಲಾಯ್ತು. ಶ್ರೀ ಪಂಚಮುಖಿಯವರೂ, ಪ್ರೊ. ಎಸ್‌. ಆರ್. ಶರ್ಮಾ ಅವರೂ, ಶ್ರೀ ನಾರಾಯಣ ಶರ್ಮರೂ ಬರೆದ ಗ್ರಂಥಗಳು ಜನರ ಪ್ರಶಂಸೆಗೆ ಪಾತ್ರವಾದವು.

ಧಾರವಾಡ
೨೭.೦೨.೧೯೫೬

ವ್ಹಿ.ಬಿ. ನಾಯಕ
ಗೌರವ ಕಾರ್ಯದರ್ಶಿ

ವ್ಹಿ.ಬಿ. ಹಾಲಭಾವಿ
ಕರ್ನಾಟಕ ಇತಿಹಾಸ ಸಂಶೋಧಕ
ಮಂಡಲದ ಸಭಾಪತಿ