ಧಾರವಾಡದಲ್ಲಿ ಮನೆಮಾಡಿ ಹೆಂಡತಿಯನ್ನು ಕರೆದುಕೊಂಡು ಬರುವ ಮೊದಲೆ ರಾಜಪುರೋಹಿತರಿಗೆ ಧಾರವಾಡ ಸಂಪರ್ಕ ಬಂದಿದ್ದಿತು. ಸರಕಾರಿ ನೌಕರಿ ಹೋದಮೇಲೆ ಇಲ್ಲಿಯ ರಾಷ್ಟ್ರೀಯ ವಿದ್ಯಾಲಯದ ನೌಕರಿ, ಅನಂತರ ಆಲೂರು ವೆಂಕಟರಾಯರೊಡನೆ ಒಡನಾಟ ಇವುಗಳ ಫಲಶ್ರುತಿ ಎಂಬಂತೆ ರಾಜಪುರೋಹಿತರ ಮದುವೆಯ ಮುನ್ನವೇ ಅಥವಾ ಮದುವೆಯಾದ ವರುಷವೇ ‘ಕರ್ನಾಟಕ ಇತಿಹಾಸ ಸಂಶೋಧಕ ಮಂಡಳ’ ಧಾರವಾಡದಲ್ಲಿ ಕ್ರಿ. ಶ. ೧೯೧೪ರಲ್ಲಿ ಸ್ಥಾಪಿತವಾಯಿತು ಎಂದು ಹೇಳಲಾಗುತ್ತದೆ. ಆದರೆ ಖಚಿತವಾದ ಆಧಾರ ದೊರೆಯುವುದಿಲ್ಲ. ಕ್ರಿ. ಶ. ೧೯೧೪ರಲ್ಲಿ ಅಂಥದೊಂದು ಮಂಡಳವನ್ನು ಸ್ಥಾಪಿಸಬೇಕೆಂಬ ವಿಚಾರ ಈ ಜನರಲ್ಲಿ ಬಂದದ್ದು ನಿಜ. ಈ ವಿಷಯವನ್ನು ರಾಜಪುರೋಹಿತರು ಮಾರ್ಚ್‌ ೬, ೧೯೧೪ರ ದಿನಚರಿಯಲ್ಲಿ ಸ್ಪಷ್ಟವಾಗಿ ಹೇಳುತ್ತಾರೆ.

“ಇವತ್ತಿನ ದಿವಸ ಇತಿಹಾಸ ಸಂಶೋಧನ ಮಂಡಳದ ಸಂಸ್ಥೆಯನ್ನು ತೆಗೆಯಬೇಕೋ. ದಾಸರಪದ ಸಂಗ್ರಹವನ್ನು ಮಾಡುವ ಸಂಸ್ಥೆಯನ್ನು ತೆಗೆಯಬೇಕೋ.ಎಂಬ ವಿಷಯವಾಗಿ ವಿಚಾರವು ನಡೆದದೆ. ಈ ವಿಷಯವಾಗಿ ಮ.ರಾ.ರಾ. ವೆಂಕಟರಾವ ಆಲೂರ ಮ. ರಾ. ರಾ. ನಾರಾಯಣರಾವ ದೇಶಪಾಂಡೆ ಇವರೂ ವಿಚಾರ ಮಾಡಹತ್ತಿದ್ದಾರೆ. ಮುಂದೆ ಏನೇನು ನಿರ್ಣಯವಾಗುತ್ತದೋ ನೋಡಬೇಕು. ಪ್ರತಿದಿನ ತಲೆಯಲ್ಲಿ ಒಂದು ವಿಚಾರವು ಬರುತ್ತದೆಯಾದರೂ ನಿರ್ಣಯವಾಗುವುದಿಲ್ಲ.”

ಎಂಬುದಾಗಿ ನಮೂದಿಸಿದ್ದಾರೆ. ಮರುದಿನ ಮಾರ್ಚ್‌ ೯ ಏಳರ ದಿನಚರಿಯಲ್ಲಿ ‘ದಾಸರ ಪದ ಸಂಗ್ರಹ ‘ ಸಂಸ್ಥೆಯನ್ನು ತೆಗೆಯಿಲಾಯಿತೆಂದೂ ಹೇಳಲಾಗಿದೆ. ಆದರೆ ಅದರ ಯಶಸ್ಸಿನ ಬಗ್ಗೆ ಸಂಶಯವನ್ನೂ ವ್ಯಕ್ತಪಡಿಸಿದ್ದಾರೆ.

“ಇವತ್ತಿನ ದಿವಸ ಪ್ರಾತಃ ಕಾಲದಲ್ಲಿ ಪುರಂದರದಾಸ, ಕನಕದಾಸಾದಿ ಭಗವದ್ಭಕ್ತರ ಪದಸಂಗ್ರಹ ಮಾಡುವದರ ಸಲುವಾಗಿ ಒಂದು ಸಂಸ್ಥೆಯನ್ನು ಸ್ಥಾಪಿಸುವುದಕ್ಕಾಗಿ ಒಂದು ಹಸ್ತಪ್ರತಿಯನ್ನು ತೆಗೆದಿದ್ದೇವೆ. ಇದರಲ್ಲಿ ಯಶವು ಸಿಗುವ ಸಂಭವವು ಬಹುಶಃ ಇಲ್ಲ.”

“ಕನ್ನಡಿಗರಲ್ಲಿ ತಾರತಮ್ಯ ಬುದ್ಧಿ ವೇಳೆಯ ಸದುಪಯೋಗ ಮಾಡುವ ಬುದ್ಧಿ, ದೃಢ ನಿಶ್ಚಯ, ವ್ಯವಸ್ಥಿತತನ ಮುಂತಾದ ಸದ್ಗುಣಗಳು ಇಲ್ಲದಿರುವುದರಿಂದ ಅತಿಶಯ ಹೀನ ಸ್ಥಿತಿಯಲ್ಲಿ ಇದ್ದಾರೆ”.

ಎಂಬುದಾಗಿ ಹೇಳಿದ್ದಾರೆ. ಬಹುಶಃ ಇದುವೆ ಮುಂದಿನ ಇತಿಹಾಸ ಸಂಶೋಧನ ಮಂಡಳದ ಪ್ರಾರಂಭವಾಗಿರಬೇಕು. ಯಾಕೆಂದರೆ ಮಾರ್ಚ್‌ ೨೧, ೧೯೧೪ರಂದು.

“ಇವತ್ತಿನ ದಿವಸ ಪ್ರಾತಃಕಾಲದಲ್ಲಿ ನಾನು ರಾ. ರಾ. ವೆಂಕಟರಾವ ಆಲೂರ, ರಾ. ರಾ. ನಾರಾಯಣರಾವ ದೇಶಪಾಂಡೆ ಇವರು ಕೂಡಿ ರಾ. ರಾ. ರಾಮರಾವ ಬಳ್ಳಾರಿ ವಕೀಲ ಇವರ ಮನೆಗೆ ಹೋದೆವು. ಅಲ್ಲಿ ಪುರಂದರದಾಸರ ಪದಗಳನ್ನು ಕೂಡಿಸಿ ‘ದಾಸಕೂಟ’ ಎಂಬ ಮಾಸ್ತಿಕ ಪುಸ್ತಕವನ್ನು ತೆಗೆಯಬೇಕೆಂಬ ವಿಚಾರ ನಡೆದು ೨೦೦೦ ರೂಪಾಯಿಗಳನ್ನು ೨೦ ಜನರು ನೂರು ರೂಪಾಯಿಗಳಂತೆ ಹಾಕಿ ಕೂಡಿಸಬೇಕು ಎಂದು ನಿರ್ಣಾಯವಾಯಿತು”. ಮುಂದೆ ಈ ‘ದಾಸಕೂಟ’ ದ ಬಗ್ಗೆ ಎಲ್ಲಿಯೂ ಉಲ್ಲೇಖ ಬರುವುದಿಲ್ಲ.

ಆದರೆ, ಈ ವಿಷಯದಲ್ಲಿ ಡಾ. ವರದರಾಜ ಹುಯಿಲಗೋಳರು ಕರ್ನಾಟಕ ಇತಿಹಾಸ ಸಂಶೋಧಕ ಮಂಡಳ ಹಾಗೂ ವೆಂಕಟರಾಯರು ಎಂಬ ಲೇಖನದಲ್ಲಿ

ಆಲೂರ ವೆಂಕಟರಾಯರು ಕರ್ನಾಟಕ ಇತಿಹಾಸ ಸಂಶೋಧಕ ಮಂಡಳವನ್ನು ಸ್ಥಾಪಿಸಿದ್ದು ೧೯೧೪ನೆಯ ದಸರೆ ಹಬ್ಬದಂದು ಎಂದು ಸ್ಪಷ್ಟವಾಗಿ ಹೇಳುತ್ತಾರೆ. “ಈ ಮಂಡಳಕ್ಕೆ ನಾ. ಶ್ರೀ ರಾಜಪುರೋಹಿತರು ಅನಂತರ ಕೂಡಿಕೊಂಡು ಇತಿಹಾಸ ಸಂಶೋಧನೆಯಲ್ಲಿ ಅದ್ಭುತ ಸೇವೆ ಸಲ್ಲಿಸಿದರು. ರಾಜಪುರೋಹಿತರಿಗೆ ಬೆಂಬಲವಾಗಿ ನಿಂತು ಸಂಶೋಧನ ಮಂಡಳದಲ್ಲಿ ವಿಶೇಷ ಆಸ್ಥೆ ವಹಿಸಿದವರು ನರಗುಂದಕರ ರಾಮರಾಯರು ಮತ್ತು ದೇಶಪಾಂಡೆ ನಾರಾಯಣರಾಯರು” ಎಂದಿದ್ದಾರೆ.[1]

ಅಶ್ವೀನ ಶುದ್ಧ ದಶಮಿ, ಸೆಷ್ಟಂಬರ್‌ ೨೬, ೧೯೧೪ರಂದು, ರಾಜಪುರೋಹಿತರು ದಿನಚರಿಯಲ್ಲಿ ಏನನ್ನೂ ಬರೆದಿಲ್ಲ. ಅವರು ಮೈಸೂರು, ಬೆಂಗಳೂರು ಪ್ರವಾಸ ಮುಗಿಸಿ ಕೊಂಡು ಸೆಷ್ಟಂಬರ್‌ ೧೫ಕ್ಕೆ ಧಾರವಾಡಕ್ಕೆ ಬಂದ ಉಲ್ಲೇಖವಿದೆ. ಬಹುಶಃ ಅವರು ಮದೆವೆಯಾದ ನಂತರ ಹೆಂಡತಿಯ ಮನೆಯಾದ ‘ನೆಗವಾಡಿ’ ಯಲ್ಲಿ ಇದ್ದಿರಬೇಕು. ಈ ಕುರಿತು ೧೯೧೫ರ ಫೆಬ್ರವರಿ ೨೬ ದಿನಚರಿಯಲ್ಲಿ, ೧೯೧೫ನೆ ಇಸ್ವಿಯಲ್ಲಿ ಮಾಡಿದ ಕಾರ್ಯದ ಒಂದು ಪಟ್ಟಿಯನ್ನೆ ಕೊಟ್ಟಿದ್ದಾರೆ. ಅದರಲ್ಲೂ ಸಂಶೋಧನ ಮಂಡಳದ ಉಲ್ಲೇಖವಿಲ.

ರಾಜಪುರೋಹಿತರ ದೊರೆತ ದಿನಚರಿಗಳಲ್ಲಿ ದಿನಾಂಕವಿಲ್ಲದ ದಿನಚರಿಯೊಂದರಲ್ಲಿ ‘ಬೇಸಿಗೆಯ ಸೂಟಿಯಲ್ಲಿಯ ಕಾರ್ಯಗಳು’ ಎಂದು ಬರೆದು ಅದರ ಅಡಿಯಲ್ಲಿ ಸುಮಾರು ೧೦ ಕಾರ್ಯಗಳ ವಿವರಗಳನ್ನು ಕೊಟ್ಟಿದ್ದಾರೆ. ಅದರಲ್ಲಿ ಮೂರನೆಯ ಕಾರ್ಯವಾಗಿ ‘ಕರ್ನಾಟಕ ಇತಿಹಾಸ ಸಂಶೋಧನೆಯು’ ಎಂಬುದಾಗಿ ಬರೆದದ್ದು ಬಹುಶಃ ಈ ದಿಶೆಯಲ್ಲಿ ಪ್ರಥಮ ಉಲ್ಲೇಖವಾಗಿದೆ. ಹಾಗೆ ನೋಡಿದರೆ ಆ ಹೊತ್ತಿಗೆ ಅವರಾಗಲೇ ಹಲವಾರು ಸಂಶೋಧನ ಲೇಖನಗನ್ನು ಬರೆದಿದ್ದರು. ಕರ್ನಾಟಕ ಇತಿಹಾಸ ಸಂಶೋಧನ ಮಂಡಳದ ಕಾರ್ಯದ ಉಲ್ಲೇಖ ಹಲವಾರು ಕಡೆಗೆ ಬರುತ್ತದೆ. ಸೆಷ್ಟಂಬರ್‌ ೨೬, ೧೯೨೬ ಅಂದರೆ ಸುಮಾರು ೧೨ ವರುಷಗಳ ಅನಂತರ ಅಂದಿನ ದಿನಚರಿಯಲ್ಲಿ

‘ಈ ದಿವಸ ಕರ್ನಾಟಕ ಇತಿಹಾಸ ಮಂಡಳ ಈ ಸಂಸ್ಥೆಯು ಪ್ರಚಾರಕ ಕೆಲಸವನ್ನು ಕೈಕೊಂಡೆನು’ ಎಂಬುದಾಗಿ ಬರೆದಿದ್ದಾರೆ. ಆ ಮೊದಲು ಕೂಡ ಅನೇಕ ಉಲ್ಲೇಖಗಳು ಬಂದಿವೆಯಾದರೂ ಹೀಗೆ ಮಂಡಳದೊಂದಿಗಿನ ನೇರ ಸಂಪರ್ಕದ ಬಗ್ಗೆ ಉಲ್ಲೇಖವಿಲ್ಲ. ಹಿಂದಿನ ವರುಷದ ಅಂದರೆ ೧೯೨೫ರ ಜನವರಿ ೬ನೆಯ ದಿನದ ದಿನಚರಿಯಲ್ಲಿ ಒಂದೆಡೆ

‘ಸಾಯಂಕಾಲ ಇತಿಹಾಸ ಮಂಡಳದ ಪುಸ್ತಕಾಲಯವನ್ನು ನೋಡಿ ವಿಷಾದವಾಯಿತು’ ಎಂದಿದ್ದಾರೆ.

ಈ ದಿನಗಳಲ್ಲಿ ಅವರು ಆಲೂರು ವೆಂಕಟರಾಯರೇ ಸ್ಥಾಪಿಸಿದ ಮಹಿಳಾವಿದ್ಯಾಲಯ, ಲೋಕಬಂಧು, ಜಯಕರ್ನಾಟಕ ಪ್ರತ್ರಿಕೆಗಳೊಂದಿಗೆ ವಿಶೇಷ ಸಂಬಂಧವಿರಬೇಕು. ಈ ಕುರಿತು ಅಲ್ಲಲ್ಲಿ ಅವರ ದಿನಚರಿಗಳಲ್ಲಿ ಉಲ್ಲೇಖಗಳು ಬರುತ್ತವೆ. ಹಾಗೆಂದ ಮಾತ್ರಕ್ಕೆ ಸಂಶೋಧನ ಮಂಡಲದೊಂದಿಗೆ ಸಂಪರ್ಕವೇ ಇರಲಿಲ್ಲ ಎಂದಲ್ಲ. ೧೯೨೩ರ ನವಂಬರ ೬ರಂದು ಇತಿಹಾಸ ಮಂಡಲಕ್ಕೆ ೫೦ ರೂ. ವರ್ಗಣಿ ಕೂಡಿಸಿದ ಉಲ್ಲೇಖವೂ ಇದೆ.*

ಅಲೂರು ವೆಂಕಟರಾಯರ ಬಹುತೇಕ ಎಲ್ಲ ಕಾರ್ಯಾಗಳಲ್ಲೂ ನಾ. ಶ್ರೀ. ರಾಜಪುರೋಹಿತರ ಸಹಬಾಗಿತ್ವ ಇತ್ತು. ದಿವಾಕರ ರಂಗರಾಯರು ಒಂದೆಡೆ ಹೇಳಿದಂತೆ.

‘ನಾವು ಆಗ ಚಿಕ್ಕವರೆಂದೇ ಹೇಳಬೇಕು. ಆದರೆ ವೆಂಕಟರಾಯರ (ಆಲೂರ) ಜೊತೆಗಾರರಲ್ಲಿ ಮುದವೀಡು ಕೃಷ್ಣರಾಯರು, ಮುದವೀಡು ವೆಂಕಟರಾಯರು, ಕಡಪಾ ರಾಘವೇಂದ್ರರಾಯರು, ರಾಜಪುರೋಹಿತರು ಗದಿಗೆಯ್ಯ ಹೊನ್ನಾಪುರಮಠ ಅವರು ಪ್ರಮುಖರು ಎಂಬುದನ್ನು ನೆನೆಯಬೇಕು.[2] ಮುಂದಿನ ವರುಷಗಳಲ್ಲಿ ಕರ್ನಾಟಕ ಇತಿಹಾಸ ಸಂಶೋಧನ ಮಂಡಲ ಅವರ ಜೀವನದಲ್ಲಿ ವೃತ್ತಿಯೇ ಆಯಿತು. ಇಷ್ಟು ದಿನಗಳವರೆಗೆ ರಾಜಪುರೋಹಿತರು ತಮ್ಮ ಸಂಶೋಧನ ಕಾರ್ಯವನ್ನು ಧ್ಯೇಯವಾದಿಗಳಾಗಿ ನಡೆಸಿದ್ದರು. ಅನಂತರ ಅದನ್ನು ಅವರು ವೃತ್ತಿಯನ್ನಾಗಿಯೆ ಮಾಡಿಕೊಂಡರು. ಹಾಗೆ ವೃತ್ತಿಯನ್ನಾಗಿ ಮಾಡಿಕೊಳ್ಳಲು ಕಾರಣವೂ ಇತ್ತು. ಸರಕಾರಿಯ ನೌಕರಿಯನ್ನು ಬಿಟ್ಟ ಮೇಲೆ ಅವರಿಗೆ ನಿಯಮಿತವಾದ ಅದಾಯವಿರಲಿಲ್ಲ. ಪ್ರಾರಂಭದಲ್ಲಿ ಒಂಟಿ ಜೀವನ ಹೇಗೋ ಸಾಗಿತು. ಅನಂತರ ಸ್ಥಿತಿವಂತರ ಮನೆತನದ ಕನ್ಯೆಯೊಂದಿಗೆ ಮದುವೆಯಾಗಿ ಮನೆಯ ಅಳಿಯನೆಂದು ‘ನೆಗವಾಡಿ’ಗೆ ಹೋದರೂ ಅವರ ಸ್ವಾಭಿಮಾನದಿಂದಾಗಿ ಅವರು ಅಲ್ಲಿ ಸ್ಥಿರವಾಗಿ ಉಳಿಯದೆ ಎರಡು ಮೂರು ವರುಷಗಳಲ್ಲಿ ಧಾರವಾಡಕ್ಕೆ ಬಂದುಬಿಟ್ಟರು. ಅದಾಗ ಪ್ರಾರಂಭಿಸಿದ ಮಹಿಳಾ ವಿದ್ಯಾಲಯದಲ್ಲಿ ಕೆಲಕಾಲ ವೃತ್ತಿ ನಡೆಯಿತು. ಇತ್ತ ಸಂಸಾರ ಬೆಳೆಯಹತ್ತಿತು. ಪೂರ್ವಜರ ಮನೆ ಹೊಲಗಳಿಂದ ಬರುವ ತುಸುವೆ ಆದಾಯ ಹಾಗೂ ಪುಡಿಗಾಸಿನ ಆದಾಯದಿಂದ ಸಂಸಾರ ಹಾಗೂ ಹೀಗೂ ನಡೆಯುತ್ತಿತ್ತು. ೧೯೪೦ರ ಹೊತ್ತಿಗೆ ಇಬ್ಬರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು ಮದುವೆ, ಉಳಿದ ಮಕ್ಕಳ ವಿದ್ಯಾಭ್ಯಾಸ ಹೀಗೆ ನಿರಂತರ ಆದಾಯದ ಅಗತ್ಯ ಇತ್ತು. ಆದರೆ ನಿಶ್ಚಿತ ವರಮಾನವಿರಲಿಲ್ಲ. ಬಡತನದ ಮೂಲಕ ಹಿರಿಯ ಮಗ ಸುರೇಶ್ವರಾಚಾರ್ಯನು ಹೆಚ್ಚಿನ ಶಿಕ್ಷಣವನ್ನು ಪಡೆಯಲಾಗದೆ ಮಿಲಿಟರಿ ಸೇರಿದ್ದನು. ಆತನಿಂದ ಬರುತ್ತಿದ್ದ ‘ಫ್ಯಾಮಿಲಿ ಅಲಾಟಮೆಂಟ’ದ ೪೦ – ೪೫ ರೂಪಾಯಿಗಳನ್ನು ಜಾತಕ ಪಕ್ಷಿಯಂತೆ ಎದುರು ನೋಡಬೇಕಾಗುತ್ತಿತ್ತು.

ಈ ದಿನಗಳಲ್ಲಿಯೆ ಅವರ ಸಂಶೋಧನ ಕಾರ್ಯಕ್ಕೆ ವ್ಯವಸಾಯದ ಸ್ವರೂಪ ಬಂದಿತು. ಸಂಶೋಧನೆಗೆಂದು ಮುಂಬಯಿ ಸರಕಾರದಿಂದ ಗ್ರ್ಯಾಂಟು ಬರತೊಡಗಿತು. ಕನ್ನಡ ಸಂಶೋಧನ ಸಂಸ್ಥೆಯ ವತಿಯಿಂದ ಪ್ರತಿ ತಿಂಗಳೂ ಸಂಶೋಧನ ಕಾರ್ಯಕ್ಕಾಗಿ ಅಂದಿನ ಮುಂಬೈ ಕರ್ನಾಟಕದಲ್ಲಿಯ ಒಂದೊಂದು ಭಾಗದಲ್ಲಿ ಸಂಚಾರ ಮಾಡತೊಡಗಿದರು. ಮಂಡಲದ ಪ್ರಚಾರಕರಾಗಿ ಕಾರ್ಯ ಮಾಡುತ್ತ ಇತಿಹಾಸ, ಸಂಶೋಧನೆಯಲ್ಲಿ ಆಸ್ಥೆಯಿದ್ದವರನ್ನು ಮಂಡಲದ ಸದಸ್ಯರನ್ನಾಗಿ ಮಾಡುವುದು. ಜೊತೆಗೆ ಪ್ರಾಚೀನ ಅವಶೇಷಗಳಾದ ನಾಣ್ಯ, ತಾಡವಾಲೆ ಗ್ರಂಥಗಳು ಶಾಸನಗಳ ನಕಲುಗಳು ತಾಮ್ರ ಶಾಸನಗಳು ಮುಂತಾದವುಗಳನ್ನು ಸಂಗ್ರಹಿಸಿ ಮಂಡಲಕ್ಕೆ ತಂದು ನೀಡಿದರು, ಸಂಶೋಧನ ಮಂಡಲದಲ್ಲಿರುವ ಪ್ರತಿಶತ ೯೦ರಷ್ಟು ಸರಕುಗಳು ರಾಜಪುರೋಹಿತರಿಂದಲೇ ಸಂಗ್ರಹಿಸಿದವುಗಳಾಗಿವೆ. ಹೀಗೆ ಸಂಗ್ರಹಿಸಿ ಕೊಡುವಾಗ ಆಯಾ ಭಾಗಗಳ ಸಂಚಾರ ಸಂಗ್ರಹಗಳ ವಿಸ್ತೃತ ವರದಿಗಳನ್ನು ಸಂಸ್ಥೆಗೆ ಒಪ್ಪಿಸಿದ್ದಾರೆ. ಕರ್ನಾಟಕ ಸಂಶೋಧಕ ಸಂಸ್ಥೆ ಮತ್ತು ಕರ್ನಾಟಕ ಇತಿಹಾಸ ಸಂಶೋಧಕ ಮಂಡಲಗಳಲ್ಲಿಯ ರಾಜಪುರೋಹಿತರ ವರದಿಗಳು. ಟಿಪ್ಪಣಿಗಳು ಇತಿಹಾಸ ಸಂಶೋಧನೆಗೆ ನೆರವಾಗುವ ಬೆಲೆಯುಳ್ಳ ಆಕಕರಗಳಾಗಿವೆ. ಅವುಗಳನ್ನು ಒಂದೆಡೇ ಸಂಗ್ರಹಿಸಿ ಪ್ರಕಟ್ಟಿಸುವುದರ ಅಗತ್ಯವನ್ನು ಬೇರೆ ಹೇಳಬೇಕಾಗಿಲ್ಲ. ಅವುಗಳನ್ನು ಅಂದಿನ ದಿನ, ವಾರಪ್ರತ್ರಿಕೆಗಳಲ್ಲಿ ಪ್ರಕಟಿಸಲಾಗಿತ್ತು.[3]

ಹೀಗೆ ಸಂಚಾರ ಮಾಡುವ ಮುನ್ನ ಸಂಶೋಧಕ ಮಂಡಲದ ನಿರ್ದೇಶಕರು ರಾಜಪುರೋಹಿತರಿಗೆ ಆದೇಶ ನೀಡಿ, ಅವರು ಸಂಚಾರ ಮಾಡುವ ತಾಲೂಕಿನ ತಹಶೀಲದಾರರಿಗೂ ತಿಳಿಸುತ್ತಿದ್ದರು. ಪ್ರತಿಯಾಗಿ ತಹಶೀಲದಾರರು ಗ್ರಾಮಗಳಿಗೆ ತಿಳಿಸಿ ರಾಜಪುರೋಹಿತರಿಗೆ ಸಹಕಾರ ನೀಡಲು ಕೋರುತ್ತಿದ್ದರು. ರಾಜಪುರೋಹಿತರು ಹೋದಲ್ಲೆಲ್ಲ ಶಾಸನಗಳ ನಕಲುಗಳನ್ನು, ಪ್ರಾಚೀನ ನಾಣ್ಯಗಳನ್ನು, ತಾಮ್ರ ಪಟಗಳನ್ನು ಸಂಗ್ರಹಿಸಿ, ಟಿಪ್ಪಣಿ ಸಹಿತವಾಗಿ ಅವುಗಳನ್ನು ಸಂಶೋಧನ ಸಂಸ್ಥೆಗೆ ಒಪ್ಪಿಸುತ್ತಿದ್ದರು. ಕ್ರಿ. ಶ. ೧೯೨೬ರಿಂದ ಅವರು ತೀರಿಕೊಳ್ಳುವವರಿಗೆ ಅಂದರೆ ಸುಮಾರು ಕಾಲು ಶತಮಾನಕ್ಕೂ ಮೀರಿ ಈ ಕೆಲಸವನ್ನು ಮಾಡಿದ್ದಾರೆ. ವರುಷ ಪೂರ್ತಿ ಈ ಕೆಲಸ ಇರುತ್ತಿರಲಿಲ್ಲ. ನಿರ್ದೇಶಕರ ಮನಸಿನ ಇಚ್ಛೆಯಂತೆ ಒಂದರಿಂದ ನಾಲ್ಕು ವಾರಗಳವರೆಗೆ ಇರಿತ್ತಿತ್ತು. ಆಗ ಅವರಿಗೆ ದೊರಕುತ್ತಿದ್ದುದು ಕೆಲಸ ಮಾಡಿದ ದಿನ ಒಂದಕ್ಕೆ ಎರಡೂವರೆ ರೂಪಾಯಿಗಳು ಮಾತ್ರ!

ಅವರು ಸಂಚರಿಸಿದ ಗ್ರಾಮಗಳ ಪಟ್ಟಿಯನ್ನು ಮಾಡಿದರೆ ಅದುವೆ ಒಂದು ಹೊತ್ತಿಗೆ ಯಾಗುತ್ತದೆ. ಅಲ್ಲಿ ಸಂದರ್ಶೀಸಿದ ಸ್ಥಳಗಳು, ವ್ಯಕ್ತಿಗಳು, ಇನ್ನಿತರ ವಿವರಗಳು ಅಂದಂದಿನ ದಿನಚರಿಗಳಲ್ಲಿ ದಾಖಲಿಸಿದ್ದಾರೆ!

ಅವರ ಜೀವಿತದ ಕೊನೆಯ ಎರಡು ದಶಕಗಳು ತುಂಬ ಬಡತನದಲ್ಲಿ ಕಳೆದವು ಎಂಬುದನ್ನೂ ಅವರ ದಿನಚರಿಯ ಪುಟಗಳಿಂದ ಕಾಣಬಹುದಾಗಿದೆ. ೮ ಆಣೆ ನಾಲ್ಕು ಆಣೆ (ಇಂದಿನ ೫೦, ೨೫ ಪೈಸೆ) ಗಳಿಂದ ೧೦ ರೂಪಾಯಿಗಳವರೆಗಿನ ಅವರ ಕೈಗಡದ ಉಲ್ಲೇಖಗಳು ಅವರ ದಿನಚರಿಗಳಲ್ಲಿ ಹೇರಳವಾಗಿ ದೊರೆಯುತ್ತವೆ. ೫೦, ೧೦೦, ೧೦೦೦ಗಳ ಉಲ್ಲೇಖ ಇಲ್ಲವೇ ಇಲ್ಲ. ಅದಕ್ಕಾಗಿಯೇ ಅವರು ಎಂದೂ ಸಾಲ ಮಾಡಲಿಲ್ಲ ಎಂದು ಹೇಳುವುದು ಅತ್ಯಂತ ಉಚಿತವೆನಿಸುತ್ತದೆ. ಏನಿದರೂ ಅದು ಪುಡಿಕಾಸಿನ ಕೈಗಡ, ಅದನ್ನು ತಪ್ಪದೆ ತಿರುಗಿಕೊಟ್ಟ ಉಲ್ಲೇಖಗಳನ್ನು ಮಾಡಲು ಮರೆತಿಲ್ಲ. “ಬೇಬಾಕ ಮಾಡಿದೆ” ಎಂಬುದು ಅವರ ಆಪ್ತ ಶಬ್ಧ. ಅಂದರೆ ‘ಬಾಕಿ’ ಉಳಿಯಲಿಲ್ಲ ಎಂದು ಅರ್ಥ. ಬರೆದ ರೀತಿಯಿಂದಲೇ ಅವರಿಗಾದ ತೃಪ್ತಿಯ ಅರಿವೂ ಆದೀತು. ಈ ಹಿನ್ನೆಲೆಯಲ್ಲಿ ಅವರು ಬಡತನದ ತಾಪವನ್ನಾಗಲೀ, ದಾರಿದ್ರ್ಯವನ್ನಾಗಲೀ ಅನುಭವಿಸಿದರು ಎಂದು ಹೇಳುವುದು ಅವರ ವ್ಯಕ್ತಿತ್ವಕೆ ಅಪಚಾರ ಎಸಗಿದಂತಾಗುತ್ತದೆ. ಒಂದೊಂದು ದಿನ ಏನೂ ಇರದಿದ್ದಾಗ, ‘ಇವತ್ತು ರೇಶನ್‌ ಇಲ್ಲದೆ ಅನಶನ ವೃತವನ್ನು ಆಚರಿಸಲಾಯಿತು’ ಎಂದು ತಣ್ಣಗೆ ಬರೆದಿಟ್ಟಿದ್ದಾರೆ. ಹಲವಾರು ಸಂಘ ಸಂಸ್ಥೆಗಳ ಸಂಪರ್ಕ, ಭಾಷಣ ಉಪನ್ಯಾಸಗಳ ಆಮಂತ್ರಣ, ಬರವಣಿಗೆಯ ವಿಚಾರಗಳು, ಅನಂತರದ ಪುಸ್ತಕ ಲೇಖನಗಳ ಪ್ರಕಟಣೆಗಳು. ಇವುಗಳ ಮಧ್ಯ ಒಂದೇ ಒಂದು ದಿನ ಅವರು ತಮ್ಮ ದಾರಿದ್ರ್ಯವನ್ನು, ಬಡತನವನ್ನು ಹಳಿದ, ಪರಿತಪಿಸಿದ ಉಲ್ಲೇಖವನ್ನು ಮಾಡದೇ ಇದ್ದುದು ಅವರ ‘ತುಂಬಿದ’ ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತದೆ. ನಡೆದ ಘಟನೆಯನ್ನು ‘ಕಾಸು ಇರದೆ ಹೊಟ್ಟೆಗೆ ಏನೂ ಇಲ್ಲದ’ ದಿನಗಳನ್ನು ಉಲ್ಲೇಖಿಸುತ್ತ ಜೊತೆಗೆಯೇ ಅಂದಿನ ದಿನದ ಬರವಣಿಗೆ ಜನ ಸಂಪರ್ಕ ಇತ್ಯಾದಿಗಳ ಉಲ್ಲೇಖವೂ ಇರುತ್ತದೆ. ೧೯೪೪ರಲ್ಲಿ ಅವರಿಗೆ ಒಂದು ಗಂಡುಮಗು ಹುಟ್ಟಿತ್ತು. ಆತನಿಗೆ ‘ಜಯತೀರ್ಥ’ ಎಂದು ಹೆಸರಿಡಲಾಗಿತ್ತು. ಅದು ಸುಮಾರು ಮೂರು ತಿಂಗಳು ಬದುಕಿ ಸತ್ತಿತ್ತು! ದಿನಾಂಕ ೨೪.೯.೧೯೪೪ರ ದಿನಚರಿಯಲ್ಲಿ ಹೀಗೆ ಉಲ್ಲೇಖವಿದೆ.

ಧಾರವಾಡ

. ಈ ದಿವಸ ಪ್ರಾತಃಕಾಲ ೫ ೧/೨ ಗಂಟೆಗೆ ೩ ತಿಂಗಳ ಕೂಸು ಮೃತಪಟ್ಟಿತು.

. ವಿದ್ಯುತ್‌ ರೇಖಾ ಎಂಬ ಮರಾಠಿ ಪುಸ್ತಕವನ್ನು ಓದಿದೆನು.

. ‘ಖನನ’ ಕಾರ್ಯಕ್ಕೆ ಸ್ಮ. ದಲ್ಲಿ ೧೪ ಆ ಖರ್ಚು ಹಿಡಿಯಿತು.

. ೨ ಆ ಉಡುಪಿ ಕೆಫೆಯ ಖರ್ಚಾಯಿತು.

. ಅಣ್ಣಪ್ಪ ತಿರಕಪ್ಪಾ ಇವರಿಬ್ಬರು ಸಹಾಯಕ್ಕೆ ಸ್ಮ. ಯಾ. ಬಂದಿದ್ದರು

. ಮಧ್ಯಾಹ್ನ ೧೨ ಗಂಟೆಗೆ ಶ್ರೀ ಪುರಾಣಿಕರು ೧ ರೂ. ಕೊಟ್ಟರು

. ಸಂಯುಕ್ತ ಕರ್ನಾಟಕ ಓದಿದೆನು.

. ಚಿ. ಕೃ. ಹ. ಕುಲಕರ್ಣಿ ಇವರು ರಾತ್ರಿ ಗಾಡಿಗೆ ಸಂಗೂರಿಗೆ ಹೋದರು.

ಇದು ಅವರ ದಿನಚರಿಯ ಒಂದು ಮಾದರಿ ಅಷ್ಟೆ. ಇಂಥ ಹಲವಾರು ಉಲ್ಲೇಖಗಳು. ಅವರ ದಿನಚರಿಯಲ್ಲಿ ದೊರೆಯುತ್ತದೆ. ಯಾವುದಕ್ಕೂ ಸಂತೋಷವಿಲ್ಲ. ದುಃಖವಿಲ್ಲ. ಬಂದದ್ದನ್ನು ಇದ್ದಂತೆ ಅನುಭವಿಸುವುದನ್ನು ಅವರು ಸಾಧಿಸಿದ್ದರು. ಅದಕ್ಕೆ ಅವರು ‘ಬ್ರಾಹ್ಮಿಸ್ಥಿತಿ’ ಎಂದು ಕೆರೆದಿದ್ದಾರೆ. ಒಂದು ರೀತಿಯ ಸ್ಥಿತಿಪ್ರಜ್ಞತೆ. ಈ ಕುರಿತು ೧೯೧೫ರಿಂದಲೇ ಅವರ ದಿನಚರಿಗಳಲ್ಲಿ ಉಲ್ಲೇಖವಿದೆ.

ಸಂಶೋಧನೆಗಾಗಿ ನಿರಂತರ ಪ್ರವಾಸದಲ್ಲಿರುತ್ತಿದ್ದರು ಎಂದು ಹೇಳಿತಷ್ಟೆ. ಹಾಗೆ ಪ್ರವಾಸ ಕೈಗೊಂಡ ಊರಿನಲ್ಲೆಲ್ಲ ರಾಜಪುರೋಹಿತರು ಭಾಷಣ ಮಾಡುತ್ತಿದ್ದರು. ಭಾಷಣದ ವಿಷಯವೂ ಸಂಶೋಧನೆಯದೇ ಆಗುತ್ತಿತ್ತಲ್ಲದೆ, ನಾಡಿನ ಇತಿಹಾಸ, ವಿಶೇಷವಾಗಿ ವಿಜಯನಗರ, ಚಾಲುಕ್ಯ ಸಾಮ್ರಾಜ್ಯಗಳ ಚರಿತ್ರೆ ಅವರ ಮೆಚ್ಚುಗೆಯ ವಿಷಯಗಳಾಗಿದ್ದುವೆಂದು ಕಾಣುತ್ತದೆ. ಈ ವಿಷಯಗಳ ಕುರಿತು ಭಾಷಣ ಮಾಡಿದ ಉಲ್ಲೇಖ ನೂರಾರು ಗ್ರಾಮಗಳ ಹೆಸ್ರುಗಳು ದಿನಚರಿಯ ಪುಟಗಳಲ್ಲಿವೆ. ಇದಲ್ಲದೆ ಶಾಸನಗಳ ಮಹತ್ವ, ಪ್ರಾಚೀನ ಮಹಿಳೆಯರು, ಸನಾತನ ಧರ್ಮ ಇತ್ಯಾದಿ. ಹೋದಲೆಲ್ಲ ‘ಇತಿಹಾಸವನ್ನು ಅರಿತುಕೊಳ್ಳುವುದರ’ ಅಗತ್ಯವನ್ನು ಒತ್ತಿ ಹೇಳುತ್ತಿದ್ದರು. ಹಾಗೆ ಹೇಳುವಾಗ ‘ ನಮ್ಮ ಪೂರ್ವೇತಿಹಾಸ ನಮಗೆ ತಿಳಿದಿರದಿದ್ದರೆ ‘ವೇಶ್ಯಾಪುತ್ರನಿಗೂ ನಮಗೂ ಏನೂ ಅಂತರವಿಲ್ಲ’ ಎಂದು ನಿಷ್ಠುರವಾಗಿ ಹೇಳುತ್ತಿದ್ದರು. ಅವರು ಒಳ್ಳೆಯ ವಾಗ್ಮಿಗಳಾಗಿದ್ದರು ಎಂಬುದಕ್ಕಿಂತ ಅವರ ಭಾಷಣಗಳಲ್ಲಿ ವಿಷಯ ಇರುತ್ತಿತ್ತು. ಮತ್ತು ಆ ವಿಷಯದಲ್ಲಿ ತಲ್ಲೀನತೆ ಹಾಗೂ ಶ್ರದ್ಧೆ ಇದ್ದವು. ಅದನ್ನು ನಾಲ್ಕು ಜನರಿಗೆ ತಿಳಿಸಿಕೊಡಬೇಕೆಂಬ ಉತ್ಕಟ ಇಚ್ಛೆಯಿಂದಾಗಿ ಹಲವಾರು ಗಂಟೆಗಳ ಕಾಲ ಆವೇಶಯುಕ್ತರಾಗಿ ಭಾಷಣ ಮಾಡುತ್ತಿದ್ದರು.

ಅವರ ಮಾತುಗಳನ್ನು ಕೇಳಿಯೇ ಅನೇಕ ಜನರು ಸಭೆಯಲ್ಲಿಯೆ ಕರ್ನಾಟಕ ಇತಿಹಾಸ ಸಂಶೋಧನ ಮಂಡಲದ ಸದ್ಯರಾಗಲು ಮುಂದೆ ಬರುತ್ತಿದ್ದರು. ಇಂಥವರ ಹೆಸರುಗಳನ್ನು ಮತ್ತು ಅಲ್ಲಿ ದೊರೆತ ಪ್ರಾಚೀನ ಅವಶೇಷಗಳು, ಆ ಊರಿನ ಐತಿಹ್ಯ ಐತಿಹಾಸಿಕ ಕುರುಹುಗಳು ಇವೆಲ್ಲವುಗಳ ವರದಿಗಳನ್ನು ‘ಕರ್ನಾಟಕ ಇತಿಹಾಸ ಸಂಶೋಧನ ಮಂಡಲದ ಪ್ರಚಾರಕಾರ್ಯ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಪ್ರತ್ರಿಕೆಗಳಲ್ಲಿ ಪ್ರಕಟಿಸುತ್ತಿದ್ದರು.

 

[1] ಕರ್ನಾಟಕ ಕುಲಪುರೋಹಿತರು ೧೯೮೧, ಪು. ೧೪೦-೧೪೧

* ಕರ್ನಾಟಕ ಇತಿಹಾಸ ಸಂಶೋಧಕ ಮಂಡಲ, ಧಾರವಾಡ, ಹುಟ್ಟು ಬೆಳವಣಿಗೆ ಅನುಬಂಧ ೧೨ ನೋಡಿ

[2] ಅದೇ ಪು. ೨೨

[3] ಮಾದರಿಯಾಗಿ ಒಂದು ವರದಿಯನ್ನು ಅನುಬಂಧ ೨ ನೋಡಿ