ಪೀಠಿಕೆ

ಕೆಲವರಿರುತ್ತಾರೆ. ಅವರಿಗೆ ತಾವು ಮಾಡುವ ಕೆಲಸದಲ್ಲಿಯೆ ಪ್ರೀತಿ, ನಿಷ್ಠೆ. ಅದಕ್ಕಾಗಿ ಅವರಿಗೆ ಇನ್ನಾವುದರ ಪರಿವೆಯೂ ಇರುವುದಿಲ್ಲ. ಬಡತನವಿರಲಿ, ಭಾಗ್ಯತನವಿರಲಿ, ಮಾಡುವ ಕೆಲಸದಲ್ಲಿ ಏನೆಲ್ಲ ಅಡೆತಡೆಗಳು ಬಂದರೂ, ಅವುಗಳನ್ನು ಅವರು ಸಹಿಸಬಲ್ಲರು. ಅದು ಒಂದು ಕೆಲಸಕ್ಕಾಗಿ ಅಂತಲ್ಲ. ಜೀವನಾದ್ಯಂತ ಅದನ್ನೆ ಮಾಡುತ್ತಾರೆ. ಅದೊಂದು ರೀತಿಯ ಹುಚ್ಚು ಎಂದು ಯಾರಿಗೂ ಅನಿಸಬಹುದು. ಅದರೆ ಅದನ್ನು ಅವರು ತಲೆಗೆ ಹಚ್ಚಿಕೊಳ್ಳುವುದಿಲ್ಲ. ತಾವು ಹಿಡಿದ ಕೆಲಸವನ್ನು ಪೂರ್ತಿಗೊಳಿಸುತ್ತಾರೆ. ಅದಕ್ಕಾಗಿ ಇನ್ನೊಬ್ಬರು ಅವರನ್ನು ಹುಚ್ಚ ಎಂದರೂ, ಇನ್ನೊಬ್ಬರೇಕೆ ಮನೆ ಮಂದಿಯೇ ತಲೆಕೆಟ್ಟವ ಅಂದರೂ ಸಹಿಸಿಕೊಳ್ಳುತ್ತಾರೆ. ಕೆಲಸದ ಮೇಲಿನ ಪ್ರೀತಿಯಿಂದ ಅವರು ಅದನ್ನು ತಮ್ಮ ಕರ್ತವ್ಯವೆಂದು ತಿಳಿದು ಮಾಡಿರುತ್ತಾರೆ. ಅಂಥ ವ್ಯಕ್ತಿಗಳು ದೊರೆಯುವುದು ತುಂಬ ವಿರಳ. ಪ್ರಸಿದ್ಧಿ ದುಡ್ಡು ಎರಡನ್ನೂ ಪಡೆಯದೆ ಮಾಡುವ ಕೆಲಸ ಅದು, ಅಂಥ ಒಬ್ಬ ವ್ಯಕ್ತಿ ನಾಲ್ಕು ತಲೆಮಾರುಗಳ ಹಿಂದೆ ಕನ್ನಡ ನಾಡಿನಲ್ಲಿ ಹುಟ್ಟಿಬೆಳೆದು ತೀರಿಹೋಗಿ ಸರಿಯಾಗಿ ಐವತ್ತು ವರುಷಗಳಾದವು. ಅವರು ಕರ್ತವ್ಯಾನಂದ, ಇತಿಹಾಸ ಸಂಶೋಧಕ ನಾರಾಯಣಾಚಾರ್ಯ ಶ್ರೀನಿವಾಸಾಚಾರ್ಯ ರಾಜಪುರೋಹಿತ, ಕನ್ನಡನಾಡು ನುಡಿಗಾಗಿ ತಮ್ಮ ಜೀವನವನ್ನೆ ಮುಡಿಪಿಟ್ಟು ದುಡಿದ ಕನ್ನಡದ ಸಪ್ತರ್ಷಿಗಳಲ್ಲಿ ಅವರೊಬ್ಬರು. ಕನ್ನಡ ಸಾಹಿತ್ಯ, ಇತಿಹಾಸ ಮತ್ತು ಧರ್ಮಗಳ ಕುರಿತು ಪ್ರಾಮಾಣಿಕವಾಗಿ ಚಿಂತನ ಮಂಥನ, ಸಂಶೋಧನ ಮಾಡುವ ಯಾವ ಕನ್ನಾಡಿಗನೂ ಅವರಿಗೊಂದು ‘ಮುಜುರೆ’ ಸಲ್ಲಿಸಿಯೇ ಮುಂದೆ ಹೋಗಬೇಕಾಗುತ್ತದೆ. ಯಾರು ಈ ರಾಜಪುರೋಹಿತರು?

ಹೆಸರಿಗೆ ರಾಜಪುರೋಹಿತರು

ಹೆಸರಿಗೆ ರಾಜಪುರೋಹಿತರು. ಯಾವುದೋ ಕಾಲದಲ್ಲಿ ಇಂದಿನ ಹಾವೇರಿ ಜಿಲ್ಲೆಯ ಹಾವನೂರು, ಅಗಡಿ ಸಂಸ್ಥಾನಿಕರಿಗೆ ಅವರ ಪೂರ್ವಜರು ರಾಜಪುರೋಹಿತರಾಗಿದ್ದರಂತೆ. ಅಂತೆಯೇ ಅದೇ ಅಡ್ಡ ಹೆಸರು ಮುಂದುವರಿಯಿತು. ಅಲ್ಲಿ ನಾರಾಯಣಾಚಾರ್ಯರು ಶ್ರೀನಿವಾಸಾಚಾರ್ಯರ ಕಿರಿಯ ಮಗನಾಗಿ ಹುಟ್ಟಿದರು. ಸರಿಯಾಗಿ ಇಂದಿಗೆ ೧೧೬ ವರುಷಗಳ ಹಿಂದೆ ದಿನಾಂಕ ೧೭.೦೭.೧೮೮೭ರಂದು ಅಗಡಿಯಲ್ಲಿ ಹುಟ್ಟಿದರು. ಅವರಿಗೊಬ್ಬ ಅಣ್ಣ ನರಸಿಂಹಭಟ್ಟರು, ಅವರ ಮನೆತನವೂ ಹಾವೇರಿಯಲ್ಲಿ ಇದೆ. ಅವರು ಭಟ್ಟರು, ಇವರು ಆಚಾರ್ಯರು! ಮಕ್ಕಳು ನಾರಾಯಣಾಚಾರ್ಯರನ್ನು ಕೇಳಿದರೆ ನಕ್ಕು ಸುಮ್ಮನಾಗುತ್ತಿದ್ದರಂತೆ.

ಕನ್ನಡ ನಾಡಿನ ಇತಿಹಾಸವನ್ನು ಹೇಳಿದ ನಾ ಶ್ರೀ ರಾಜಪುರೋಹಿತರು ತಮ್ಮ ಕುರಿತು, ತಮ್ಮ ಮನೆತನದ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಅದರಿಂದಾಗಿ ಅವರ ಬಾಲ್ಯ ಹೇಗೆ ಕಳೆಯಿತು, ಅವರ ಬಾಲ್ಯ ಸ್ನೇಹಿತರು, ಆ ದಿನಗಳಲ್ಲಿಯೂ ಅವರ ಆಸ್ಥೆ, ಒಲವುಗಳು ಏನಿದ್ದವು ಎಂಬ ಬಗ್ಗೆ ಏನೊಂದು ಗೊತ್ತಾಗುವುದಿಲ್ಲ. ಅಗಡಿಯಲ್ಲೆ ಅವರ ಮನೆತನದವರು ವಾಸಿಸುತ್ತಿದ್ದರು, ಅಲ್ಲಿ ಅವರಿಗೆ ಹೇಳಿಕೊಳ್ಳುವಂಥ ಅಸ್ತಿಪಾಸ್ತಿ ಇರಲಿಲ್ಲ. ಮನೆ, ನಾಲ್ಕೆಂಟು ಜಮೀನುಗಳಿಗೆ ಸೀಮಿತವಾಗಿತ್ತು.

ದಾರ್ಮಿಕ ವಾತಾವರಣದಲ್ಲೆ ಬೆಳೆದ ನಾಶ್ರೀ, ಮಾಸ ತರ್ಪಣದ ಕಾಲಕ್ಕೆ ಗುರುಗಳ ಹೆಸರಿನಲ್ಲಿ ತರ್ಪಣ ಬಿಡುವಾಗ ಕನವಳ್ಳಿಯ ಅಕ್ಕೂರ ಮಾಸ್ತರರ ಹೆಸರಿನಲ್ಲೂ ತರ್ಪಣ ಬಿಡುತ್ತಿದ್ದರಂತೆ, ಅದರಿಂದಾಗಿ, ಅಕ್ಕೂರ ಮಾಸ್ತರರು ಅವರಿಗೆ ಗುರುಗಳಾಗಿದ್ದರು. ಮತ್ತು ಅವರೆ ರಾಜಪುರೋಹಿತರಲ್ಲಿ ಕನ್ನಡ ಭಾಷೆಯ ಬಗ್ಗೆ ಪ್ರೀತಿಯನ್ನು ಹುಟ್ಟಿಸಿದವರೆಂತಲೂ ಹೇಳುತ್ತಾರೆ.

ಕಲಿತದ್ದು ಕೇವಲ ಮುಲ್ಕೀ ಪರೀಕ್ಷೆವರೆಗೆ ಮಾತ್ರ. ಅಂದರೆ ಇಂದಿನ ಕನ್ನಡ ಏಳನೆಯ ವರ್ಗದವರಿಗೆ! ಆದರೆ ಸಾಧಿಸಿದ್ದು ಊಹಗೆ ನಿಲುಕದ್ದು. ಇಂದು ಹೆಮ್ಮೆಯಿಂದ ಹೇಳಿ ಕೊಳ್ಳುತ್ತ ಬಂದ ಸಾವಿರ ವರುಷಗಳಷ್ಟು ಹಳೆಯದಾದ ಕನ್ನಡನಾಡು, ನಾಡವರು, ಭಾಷೆ, ಸಂಕ್ಕೃತಿ ರಾಜಮನೆತನಗಳ ಪ್ರಾಚೀನತೆಯನ್ನು ಮೊಟ್ಟಮೊದಲಿಗೆ ಕಂಡುಹಿಡಿದು ನಮಗೆ ಹೇಳಿದವರು ನಾ. ಶ್ರೀ. ರಾಜಪುರೋಹಿತರು. ಅದನ್ನು ಕಳೆದ ಶತಮಾನದ ಆರಂಭದ ಕಾಲದಲ್ಲಿಯ ಮೈಸೂರು ಸಂಸ್ಥಾನ, ಕನ್ನಡಬಲ್ಲ ಎಲ್ಲೆಡೆಯ ಅತಿರಥ ಮಹಾರಥರಾದ, ಆರ್, ನರಸಿಂಹಚಾರ್ಯರು, ಎಂ. ಎಚ್. ಕೃಷ್ಣ, ಬಿ. ಎಂ. ಶ್ರೀಕಂಠಯ್ಯ ಮೊದಲಾದವರು ಅಂದೆಯೇ ಒಪ್ಪಿಕೊಂಡಿದ್ದಾರೆ. ಬೆಂಗಳೂರಿಗೆ ಕರೆದು ಸನ್ಮಾನಿಸಿದ್ದಾರೆ.

ಸಾಧನೆಗೆ ಡಿಗ್ರಿಗಳ ಅವಶ್ಯಕತೆ ಇಲ್ಲ

ಅಂಥ ಸಾಧನೆಯನ್ನು ಮಾಡಲು ಅವರೇನೂ ಎಂ. ಎ. ಪಾಸಾಗಿರಲಿಲ್ಲ. ಪಿಎಚ್‌.ಡಿಯಂಥ ಪದವಿಯನ್ನು ಪಡೆದಿರಲಿಲ್ಲ. ವಾಸ್ತವದಲ್ಲಿ ಸಾಧನೆಗೆ ಬೇಕಾದ ಪರಿಸರ ವಾತಾವರಣವೂ ಇರಲಿಲ್ಲ. ಆದರೆ ಛಲದಿಂದ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟರು. ಒಲವು, ಏಕನಿಷ್ಠೆ, ಉದ್ದೇಶ ಸಾಧನೆಯ ಗುರಿ ಇದ್ದರೆ ಅಂಥದ್ದಕ್ಕೆ ಗೈಡುಗಳು, ಮಾರ್ಗದರ್ಶಕರು ಬೇಕಾಗುತ್ತಾರೆ ಎಂದೇನೋ ಅಲ್ಲ. ಅದೊಂದು ರೀತಿಯ ಸ್ವಯಂ ಉದ್ಭವ ಲಿಂಗವಿದ್ದಂತೆ. ಉದ್ಭವ ಗಣೇಶ, ಈಶ್ವರಲಿಂಗ, ಹನುಮಂತ, ವೀರಭದ್ರ ಮೊದಲಾದ ದೇವರುಗಳ ಬಗ್ಗೆ ಅಲ್ಲಲ್ಲಿ ಕೇಳುತ್ತಿರುತ್ತೇವೆ. ದಿನದಿನಕ್ಕೆ ಬೆಳೆಯುತ್ತಿರುವ ಪವಾಡಗಳಿಗೂ ಲೆಕ್ಕವಿಲ್ಲ. ಅದರಲ್ಲಿ ಎಷ್ಟು ನಿಜ ಎಷ್ಟು ಸುಳ್ಳು? ಗೊತ್ತಿಲ್ಲ. ಆದರೀ ಶೂನ್ಯದಲ್ಲಿ ಹುಟ್ಟಿ ಸ್ವಯಂ ಪ್ರೇರಣೆಯಿಂದ, ಸತತ ಪ್ರಯತ್ನದಿಂದ ಹಂತಹಂತವಾಗಿ ಬೆಳೆದು ಒಂದು ಜನಾಂಗಕ್ಕೆ, ಒಂದು ನಾಡಿಗೆ ಮಾದರಿಯಾಗಿ ಗಗನಾಕಾರವಾಗಿ ಬೆಳೆದು ನಿಲ್ಲುವಂಥ ವ್ಯಕ್ತಿತ್ವ ನಾ ಶ್ರೀ ರಾಜಪುರೋಹಿತರದು.

“ಅಕ್ಕಿ ಜೋಳಗಳಿಲ್ಲವೆಂದು ಹೆಂಡತಿ ಕನಲಿ
ದುರದುರನೆ ನೋಡಿರಲು ನಿನ್ನ ಮೊಗವ
ಶೂನ್ಯ ಮಂಟಪವಾವ ತಾಣದಲ್ಲಿತ್ತೆಂಬು
ದನು ಕಂಡನೆಂದು ನೀ ತಾಳ್ದೆ ಸೊಗವ”

ವಿನಾಯಕ ಕೃಷ್ಣ ಗೋಕಾಕ ಅವರ ಸುಪ್ರಸಿದ್ಧ ಕವನ ಸಂಕಲನ, ‘ಬಾಳದೇಗುಲ’ ದಲ್ಲಿ ಬರುವ ಕವಿತೆಯೊಂದರ ನಾಲ್ಕು ಸಾಲುಗಳಿವು. ಕವಿತೆಯ ಹೆಸರು ‘ಜ್ಞಾನಿ’, ಅದು ನಾ. ಶ್ರೀ ರಾಜಪುರೋಹಿತರ ಕುರಿತಾಗಿಯೇ ಬರೆದ ೩೨ ಸಾಲುಗಳ ಪದ್ಯ. ಅವರ ಸಮಗ್ರಜೀವನ ಚಿತ್ರವನ್ನೆ ನೀಡುತ್ತದೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಹೆಂಡತಿ, ಮನೆತುಂಬ ಮಕ್ಕಳು ಬದುಕಿನುದ್ದಕ್ಕೂ ಅಕ್ಕಿ – ಜೋಳಗಳಿಗಾಗಿ ಪರಿತಪಿಸಿದ ಜೀವ ಅದು. ಆದರೆ ಅದಕ್ಕಾಗಿಯೇ ಬಂದಿರುವ ಜೀವ ಎಂದಿಗೂ ತಿಳಿಯಲಿಲ್ಲ. ಹುಟ್ಟಿ ಬಂದಮೇಲೆ ಆಹಾರ, ನಿದ್ರೆ, ಮೈಥುನಗಳು ಪ್ರಕೃತಿ ಸಹಜ ಅಗತ್ಯಗಳು. ಬಹುತೇಕವಾಗಿ ಅದಕ್ಕಾಗಿಯೇ ಹುಟ್ಟಿಬಂದವೆಂದು ತಿಳಿದುಕೊಳ್ಳುವ ಜೀವಗಳೇ ಅಧಿಕ. ಮಾಡುವ ಕೆಲಸಗಳೆಲ್ಲ ಈ ಮೂರರ ಸುತ್ತಲೇ ತಿರುಗುತ್ತವೆ. ಈ ಮೂರರ ವ್ಯತಿರಿಕ್ತ ಏನೆಲ್ಲ ಸಾಧಿಸಬಹುದು ಎಂದು ತೋರಿಸಿದವರು ನಾ ಶಿ ರಾಜಪುರೋಹಿತರು.

ರಾಜಪುರೋಹಿತರು ಯಾರ ಪ್ರಭಾವದಿಂದ ಇಷ್ಟೆಲ್ಲ ಕೆಲಸ ಮಾಡಿದರು? ಯಾವುದಾದರೂ ಪುಸ್ತಕ, ಅಥವಾ ಇನ್ನೇನಾದರೂ ಅವರನ್ನು ಈ ದಾರಿಯಲ್ಲಿ ತಂದಿತೆಂದು ಹುಡುಕಲು ಹೋದರೆ ಅದು ಹುಚ್ಚುತನದ ಕೆಲಸವಾದೀತು. ಅವರ ಚರಿತ್ರೆಯನ್ನು ನೋಡಲು ಹೋದಾಗ, ಪ್ರಾಥಮಿಕ ಶಾಲೆಯಲ್ಲಿ ಅವರಿಗೆ ಕಲಿಸದ ಕನವಳ್ಳಿಯ ಅಕ್ಕೂರ ಮಾಸ್ತರರನ್ನು ಬಿಟ್ಟರೆ, ಇನ್ನಾರ ಹೆಸರೂ ಸಿಗುವುದಿಲ್ಲ. ಧಾರವಾಡ ಜಿಲ್ಲೆಗೇ ಪ್ರಥಮರಾಗಿ ಮುಲ್ಕೀ ಪರೀಕ್ಷೆಯನ್ನು ಪಾಸಾದ ಮೇಲೆ ಗುರುಗಳ ಇಚ್ಚೆಯಂತೆ ಮೂರು ವರ್ಷ ಶಿಕ್ಷಕ ವೃತ್ತಿಯ ಬೇಸಿಕ್‌ ಟ್ರೇನಿಂಗ್‌ಗೆ ಹೋದರು. ಅಂದಿನ ದಿನಗಳಲ್ಲಿ ಆ ವೃತ್ತಿಗೆ ಹೋಗುವುದೂ ಒಂದು ಗೌರವದ ವೃತ್ತಿಯಾಗಿತ್ತು. ತರಬೇತಿ ಮುಗಿದ ಅನಂತರ ೧೯೦೫ರಲ್ಲಿ ಕನ್ನಡ ಶಾಲೆಯ ಶಿಕ್ಷಕರಾಗಿ ನೌಕರಿ ಪ್ರಾರಂಭಿಸಿದರು. ಅದನ್ನೇ ಮುಂದುವರಿಸಿದ್ದರೆ ತುತ್ತು ಅನ್ನಕ್ಕಾಗಿ ಜೀವನದುದ್ದಕೂ ಪರಿತಪಿಸಬೇಕಾಗಿರಲಿಲ್ಲ. ಅದರೆ ಹಾಗೆ ಮುಂದುವರಿದಿದ್ದರೆ ಕನ್ನಡಕೊಬ್ಬ ಕರ್ತವ್ಯಾನಂದ ದೊರಕುತ್ತಿದ್ದನೋ ಇಲ್ಲವೋ ಎಂಬುದು ಬೇರೆ ಪ್ರಶ್ನೆ.

ಆದಾಗ ದೇಶದಲ್ಲಿ ರಾಜಕೀಯ ಜಾಗೃತಿಯ ದಿನಗಳು. ಲೋಕಮಾನ್ಯ ತಿಳಕರು ಮತ್ತು ಅವರ ಕೇಸರಿ ಪ್ರತ್ರಿಕೆ ಉತ್ತರ ಕರ್ನಾಟಕದ ಅಕ್ಷರಬಲ್ಲ ಎಲ್ಲರಿಗೂ ಪರಿಚಿತವಾದ ಹೆಸರುಗಳು. ತರುಣ ವಯಸ್ಸಿನ ಪ್ರತಿಭಾವಂತ ರಾಜಪುರೋಹಿತರು ಅವರ ಪ್ರಭಾವದಿಂದ ಹೊರಗೆ ಉಳಿಯಲು ಸಾಧ್ಯವೇ ಇರಲಿಲ್ಲ. ದೇಶದ ಪಾರತಂತ್ರ್ಯ, ಬ್ರಿಟಿಷರ ದಬ್ಬಾಳಿಕೆ, ತಿಳಿಕರ ನೇರ ನುಡಿಗಳು, ಕೇಸರಿ ಪತ್ರಿಕೆಯಲ್ಲಿ ಬರುವ ಸ್ಫುಟ ಲೇಖನಗಳು ರಾಜಪುರೋಹಿತರ ಮೇಲೆ ತುಂಬ ಪ್ರಭಾವ ಬೀರಿದವು. ಅಷ್ಟು ಹೊತ್ತಿಗೆ ವಂಗಭಂಗ ಚಳುವಳಿ ಪ್ರಾರಂಭವಾಯಿತು. ರಾಜಪುರೋಹಿತರು ಪತ್ರಿಕೆಗಳಿಗೆ ತಮ್ಮ ಅನಿಸಿಕೆಗಳನ್ನು ಬರೆಯುತ್ತಿದ್ದರಂತೆ ಅಂಥದೊಂದು ಅನಿಸಿಕೆ ‘ಆಗಿನ ಸರಕಾರದ ದೃಷ್ಟಿಯಲ್ಲಿ ಅಪರಾಧವೆಂದಾಯಿತು’ ರಾಜಪುರೋಹಿತರಿಗೆ ಕ್ಷಮೆ ಕೇಳಲು ಅಧಿಕಾರಿಗಳು ಒತ್ತಾಯಿಸಿದರು. ಸ್ವಾಭಿಮಾನಿ, ದೇಶಾಭಿಮಾನಿ ನಾ. ಶ್ರೀ ‘ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ’ ಎಂದರು. ಸರಿ, ನೌಕರಿಯಿಂದ ತೆಗೆದರು. ಮೂರು ವರುಷಗಳ ತರಬೇತಿಯ ಹಣವನ್ನು ಹಿಂತಿರುಗಿಸಲು ಸರಕಾರಿ ಆಜ್ಞೆಯಾಯಿತು. ಅದಕ್ಕೆ ನಾ. ಶ್ರೀ ಅವರು ‘ಕೆಲಸವನ್ನು ಬಿಟ್ಟಿದ್ದು ನಾನಲ್ಲ ಬಿಡಿಸಿದ್ದು ನೀವು. ಹಣವನ್ನು ಹಿಂತಿರುಗಿಸುವ ಪ್ರಶ್ನೆಯೇ ಇಲ್ಲ’ ಎಂದು ಉತ್ತರಿಸಿ ಹೊರಬಂದರು. ಇದು ನಡೆದದ್ದು ೧೯೦೮ – ೯ರ ಕಾಲದಲ್ಲಿ. ಆಗ ಅವರಿಗೆ ಇಪ್ಪತ್ತರ ಹರೆಯ. ಮತ್ತೆ ಅವರು ಜೀವಂತ ಇರುವವರೆಗೆ ಸರಕಾರಿ ನೌಕರಿಯತ್ತ ಕಣ್ಣು ಹಾಕಲಿಲ್ಲ.

ಕರ್ನಾಟಕದ ಕುಲಪುರೋಹಿತರರೆಂದೆ ಹೆಸರಾದ ಆಲೂರು ವೆಂಕಟರಾಯರು ಆ ದಿನಗಳಲ್ಲಿ, ಧಾರವಾಡದಲ್ಲಿ ರಾಷ್ಟ್ರೀಯ ಶಾಲೆಯೊಂದನ್ನು ನಡೆಸುತ್ತಿದ್ದರು. ಅಲ್ಲಿ ಶಿಕ್ಷಕರೆಂದು ಕೆಲಸ ಮಾಡಲು ಆಲೂರರನ್ನು ಕಂಡರು. ಅದುವೆ ಉಭಯತರ ಮೊದಲ ಭೆಟ್ಟಿಯಾಗಿತ್ತು. ಹುಡುಗನಂತಿದ್ದ ರಾಜಪುರೋಹಿತರನ್ನು ಕಂಡು ಆಲೂರರು ಕಲಿಯಬೇಕೆಂದು ಬಂದಿರಬೇಕು ಎಂದುಕೊಂಡರಂತೆ. ಅನಂತರದ ದಿನಗಳಲ್ಲಿ ವೆಂಕಟರಾಯರು ಅದನ್ನು ನೆನಪಿಸಿಕೊಂಡು ಹೇಳುತ್ತಿದ್ದರು.

‘ಕ್ಲಾಸಿಗೆ ಸೇರಬೇಕೆಂದಿರುವೆಯಾ?’ ಎಂದರಂತೆ ಆಲೂರರು.

‘ಹೌದು! ಕಲಿಯಲಿಕ್ಕಲ್ಲ, ಕಲಿಸಲು’ ಎಂದರಂತೆ ರಾಜಪುರೋಹಿತರು. ಆ ದಿನದಿಂದಲೇ ಅವರು ಅಲ್ಲಿ ಶಿಕ್ಷಕರಾಗಿ ಸೇರಿಕೊಂಡರು. ಕಲಿಸುವ ವಿಷಯದಲ್ಲಿ ಅತ್ಯಂತ ಆಸ್ಥೆಯಂತೆ. ಹಾಗೆ ಅವರಿಂದ ಕಲಿತವರಲ್ಲಿ ವರಕವಿ ಬೇಂದ್ರೆಯವರೂ ಒಬ್ಬರು. ಮುಂದಿನ ದಿನಗಳಲ್ಲಿ ಶಿಷ್ಯನ ಮೇಲೆ ತುಂಬ ಪ್ರೀತಿ. ‘ಸರಕಾರದ ದಬ್ಬಾಳಿಕೆಯ ಮೂಲಕ ಆ ಶಾಲೆ ಹಳ್ಳ ಕೂಡಿದಾಗ ರಾಜಪುರೋಹಿತರು ಮತ್ತೆ ಕೆಲಸವಿಲ್ಲದವರಾದರು.’ ಆದರೆ ಆಲೂರು ವೆಂಕಟರಾಯರ ಸಂಪರ್ಕದಿಂದ ಮತ್ತು ಅವರ ತಂದೆಯವರಾದ ಭೀಮರಾಯರೊಂದಿಗಿನ ಚರ್ಚೆಯಿಂದಾಗಿ ರಾಜಪುರೋಹಿತರಿಗೆ ಕರ್ನಾಟಕದ ಗತವೈಭವದ ಹುಚ್ಚು ಒಂದಿಷ್ಟು ಹಿಡಿದಿತ್ತು. ಮಹಾರಾಷ್ಟ್ರದ ಇತಿಹಾಸದತ್ತ ಒಲವು ಬೆಳೆದಿತ್ತು. ಜ್ಞಾನಲಾಲಸೆಯಿಂದಾಗಿ ತಮ್ಮ ಬಹುತೇಕ ಸಮಯವನ್ನು ಓದುವುದರಲ್ಲಿ ಕಳೆಯಹತ್ತಿದರು. ಅದರ ಪ್ರತಿಫಲವಾಗಿ ಅವರ ಮೊದಲ ಪುಸ್ತಕ ‘ದಾನಧರ್ಮ ಪದ್ಧತಿ’ ಹೊರಬಂದಿತು. ೧೯೧೦ರಲ್ಲಿ ಅದನ್ನು ಆಲೂರು ವೆಂಕಟರಾಯರೇ ಪ್ರಕಟಿಸಿದ್ದಾರೆ. ಆ ಕಾಲದಲ್ಲಿಯೆ ಅದು ತೆಲುಗುಭಾಷೆಗೆ ಅನುವಾದವಾಗಿ ಪ್ರಕಟವಾಗಿತ್ತು. ಕಳೆದ ವರುಷ ಅವರ ಕೊನೆಯ ಮಗಳು ಪುಸ್ತಕದ ಮರು ಪ್ರಕಟನೆಯನ್ನು ಮಾಡಿದ್ದಾರೆ.

ಪ್ರಸ್ತಾವನೆಯಲ್ಲಿ ರಾಜಪುರೋಹಿತರು ‘ದಾನಧರ್ಮವೆಂಬುದಕ್ಕೆ ಎರಡು ಮುಖಗಳಿರುವವು. ಒಂದು ಮುಖ ಆಧ್ಯಾತ್ಮಿಕ (ಅಂತರಂಗ) ಉನ್ನತಿ. ಎರಡನೆಯ ಮುಖ ಸಾಮಾಜಿಕೋನ್ನತಿ (ಬಹಿರಂಗ)’ ಎಂದು ಹೇಳಿದ್ದಾರೆ. ಪುಸ್ತಕವನ್ನು ಬರೆದ ಉದ್ದೇಶ ಸ್ಪಷ್ಟವಾಗಿದೆ. ಸಾರ್ವಜನಿಕ ಸೇವೆಯನ್ನು ಮಾಡಬೇಕು ಎಂಬವರಿಗೆ ಇಂದಿಗೂ ಕೈದೀವಿಗೆಯಾಗಿದೆ. ನಮ್ಮ ಪ್ರಾಚೀನರು ಈ ವಿಷಯದಲ್ಲಿ ಏನು ಹೇಳಿದ್ದಾರೆಂಬುದನ್ನು ಮೊದಲು ವಿವರಿಸಿದ್ದಾರೆ. ಅನಂತರ ಹಿಂದಿನ ಮತ್ತು ಅಂದಿನವರೆಗಿನ ಹಲವು ದಾನಶೂರರ ಚರಿತ್ರೆಗಳನ್ನು ಕೊಟ್ಟಿದ್ದಾರೆ. ಸುಮಾರು ೧೦೦ ಪುಟಗಳ ಪುಟ್ಟ ಪುಸ್ತಕದಿಂದ ರಾಜಪುರೋಹಿತರ ವ್ಯಾಸಂಗ ವೈವಿಧ್ಯತೆಯನ್ನು ಕಾಣಬಹುದು. ಮತ್ತು ಅಂಥ ಬಿಸಿ ರಕ್ತದ ವಯಸ್ಸಿನಲ್ಲಿಯೆ ಅವರಲ್ಲಿ ಎಂಥ ಉದಾತ್ತ ಧ್ಯೇಯ ಬೆಳೆದಿತ್ತು ಎಂಬುದನ್ನು ಕಾಣಬಹುದು. ಆ ದಿಸೆಯಲ್ಲಿಯೇ. ಅವರು ಮುಂದೆ ಬೆಳೆದರು ಎಂಬುದನ್ನು ಕಾಣಬಹುದಾಗಿದೆ.

ಈ ದಿನಗಳನ್ನು ನೆನೆಸುತ್ತ ಬೇಂದ್ರೆ ಅವರು ಒಂದೆಡೆ ಹೇಳುತ್ತಾ ‘ದಿವಂಗತ ರಾಜಪುರೋಹಿತರು ನನಗೆ ವಯಸ್ಸಿನಿಂದ ಹಿರಿಯರು. ಅವರು ನಮ್ಮ ಊಟದ ಮನೆಯಲ್ಲೆ ಊಟ ಮಾಡಿಕೊಂಡು ಇದುರಿನ ಶ್ರೀ ಅಲೂರು ವೆಂಕಟರಾಯರ ಮನೆಯಲ್ಲಿ ನಿವಾಸವಿದ್ದು, ಹಗಲ್ಲೆಲ್ಲವನ್ನೂ ನಮ್ಮ ಮನೆಯ ಬದಿಯ ಅಟ್ಟದ ಮೇಲೆ ವಾಚನಾಲಯದಲ್ಲಿ ವಿದ್ಯಾ ವ್ಯಾಸಂಗದಲ್ಲಿ ಕಾಲ ಕಳೆಯುತ್ತಿದ್ದರು. ಆ ಕಾಲವೆಂದರೆ ರಾಷ್ಟ್ರೀಯ ಚಳುವಳಿಯ ದಿನಗಳು. ಶ್ರೀ ಆಲೂರವರ ರಾಷ್ಟ್ರೀಯ ವಿದ್ಯಾಲಯಕ್ಕೆ ಶಿಕ್ಷಕರೆಂದು ಬಂದರು. ಆ ವಿದ್ಯಾಲಯವು ಹೇಗೋ ಮುಗಿತಾಯಗೊಂಡರೂ ಅವರ ವಿದ್ಯಾವ್ಯಾಸಂಗವು ಮಾತ್ರ ಮುಮ್ಮುಡಿ ಉತ್ಸಾಹದಿಂದ ಮುಂದೆ ಸಾಗಿತ್ತು. ಮಹಾರಾಷ್ಟ್ರ ಬಂಗಾಲ ಈ ದೇಶದೊಳಗಿನ ಚಟುವಟಿಕೆಗಳ ಬಗ್ಗೆ ಅವರಿಗೆ ತುಂಬಾ ಆದರವಿತ್ತು. ಇತಿಹಾಸ ಸಂಶೋಧನದ ಪೂವ ಸಿದ್ಧತೆಯನ್ನು ಅವರ ವಾಚನಾಲಯ ಗರುಡಿಯಲ್ಲಿ ಮಾಡಿದರು. ರಾಜಪುರೋಹಿತರು ಮಿತಭಾಷಿಗಳು, ಎಕಾಂತ ಪ್ರಿಯರು ಚಿಂತನಶೀಲರು. ಅವರು ಹತ್ತು ಜನರಲ್ಲಿ ನಗುವಾಗಲು ಮುಖ ಕೆಳಗೆ ಹಾಕಿ ಪ್ರಹಾಸ್ಯವೆನಿಸಿದಂತೆ ‘ಸ್ಮಿತ’ ಮಾಡುತ್ತಿದ್ದರು. ಅವು ಅವರ ಬ್ರಹ್ಮಚರ್ಯದ ನಿತಾಂತ ದಿನಗಳು. ಈ ಕಾಲದಲ್ಲಿಯೇ ಅವರು ವಿದ್ಯಾರಣ್ಯ ಪ್ರಬಂಧ, ‘ದಾನಧರ್ಮಪದ್ಧತಿ’ ಗಳನ್ನು ಸಜ್ಜುಗೊಳಿಸಿದರು ಎಂದು ಮುಂತಾಗಿ ರಾಜಪುರೋಹಿತರ ಬ್ರಹ್ಮಚರ್ಯದ ದಿನಗಳನ್ನು ಬಣ್ಣಿಸಿದ್ದಾರೆ.[1]

ಶ್ರೀ ದ. ರಾ. ಬೇಂದ್ರೆ ಅವರ ಮಾತುಗಳನ್ನು ಪುಷ್ಟೀಕರಿಸುವಂತ, ಶ್ರೀ ಅಲೂರ ವೆಂಕಟರಾಯರು ರಾಜಪುರೋಹಿತರ ಬಗ್ಗೆ ಹೇಳುತ್ತ, (ನೌಕರಿ ಹೋದದ್ದರ ಬಗ್ಗೆ ) “….. ಆ ಬಗ್ಗೆ ಅವರು ಧೃತಿಗೆಡಲಿಲ್ಲ. ಅವರ ಲಗ್ನವಾಗಿದ್ದಿಲ್ಲ. ಬ್ರಹ್ಮಚರ್ಯದಿಂದ ಇದ್ದು ಏನಾದರೂ ಧರ್ಮಸೇವೆ ಅಥವಾ ದೇಶಸೇವೆ ಮಾಡಬೇಕೆಂದು ಯೋಚಿಸಿದರು. ನಮ್ಮ ಮನೆಯೇ ಅವರ ಮನೆ, ಹೆಸರಿಗೆ ಮಾತ್ರ ಬೇರೆ ಕಡೆಗೆ ಊಟಮಾಡಿ ನಮ್ಮ ಮನೆಯಲ್ಲಿದ್ದ ನನ್ನ ‘ಭಾರತ ಪುಸ್ತಕಾಲಯ’ ವೆಂಬ ಭಂಡಾರದೊಳಗಿನ ಕನ್ನಡ ಮರಾಠೀ ಪುಸ್ತಕಗಳನ್ನೆಲ್ಲ (ಅವರಿಗೆ ಇಂಗ್ಲಿಷ್‌ ಬರುತ್ತಿರಲಿಲ್ಲ) ಓದಿಬಿಟ್ಟರು. ೧೯೦೭ ಇಸ್ವಿಯಲ್ಲಿ ನಾನು ಶ್ರೀ ವಿದ್ಯಾರಣ್ಯರ ಚರಿತ್ರೆ ಬರೆದಿದ್ದೆ. ಅವರಿಗೂ ಇತಿಹಾಸದ ಕಡೆಗೆ ಒಲವು ಹುಟ್ಟಿತು. ಅದರಲ್ಲಿಯೂ ಸಂಶೋಧನ ಕಾರ್ಯವು ಅವರ ಮನಸ್ಸನ್ನು ಪೂರಾ ಸೆಳೆಯಿತು’ ಎಂದಿದ್ದಾರೆ.[2]

ಜ್ಞಾನದ ಹಸಿವು ಇದ್ದವನಿಗೆ ಹೊಟ್ಟೆಯ ಹಸಿವಿನ ಮೇಲೆ ಲಕ್ಷ್ಯವಿರುವುದಿಲ್ಲ ಎಂಬುದು ರಾಜಪುರೋಹಿತರು ತೋರಿಸಿಕೊಟ್ಟಿದ್ದಾರೆ. ಈ ದಿನಗಳಲ್ಲಿ ರಾಜಪುರೋಹಿತರ ಓದು ಇಬ್ಬಗೆಯದಾಗಿತ್ತು. ಒಂದುಕಡೆಗೆ ಅಂದು ಪ್ರಚಲಿತದಲ್ಲಿದ್ದ ರಾಮಕೃಷ್ಣ ಪರಮ ಹಂಸರು, ವಿವೇಕಾನಂದರು, ಆದಾಗ ಆಧ್ಯಾತ್ಮರಂಗದಲ್ಲಿ ಉದಯಿಸುತ್ತಿದ್ದ ಶ್ರೀ ಅರವಿಂದ ಘೋಷ್‌ರ ವಿಚಾರಗಳ ಜೊತೆಗೆ ತಾವು ನಂಬಿಕೊಂಡು ಬಂದ ಕಾಣ್ವಮತ ಧರ್ಮ, ತತ್ವಜ್ಞಾನಗಳ ಅಭ್ಯಾಸ ನಡೆದಿತ್ತು. ಇನ್ನೊಂದು ಕಡೆಗೆ ಕರ್ನಾಟಕವನ್ನು ಹುಡುಕುತ್ತಿದ್ದರು. ಅಂದಿನ ದಿನಗಳೆಂದರೆ ಇಡೀ ದೇಶದಲ್ಲಿಯೆ ಒಂದು ಬಗೆಯ ಮರಾಠಿ ಪ್ರಾಬಲ್ಯದ ದಿನಗಳು, ರಾಜಪುರೋಹಿತರು ಇದ್ದ ಮುಂಬಯಿ ಕರ್ನಾಟಕವು ದಕ್ಷಿಣ ಮಹಾರಾಷ್ಟ್ರ ಎಂದೇ ಹೆಸರಾಗಿತ್ತು. ಇಡೀ ಭರತಖಂಡದಲ್ಲಿ ಇತಿಹಾಸವಿದ್ದ ರಾಜ್ಯಗಳೆಂದರೆ ಪೂರ್ವದಲ್ಲಿ ಬಂಗಾಲ ಪಶ್ಚಿಮದಲ್ಲಿ ಮಹಾರಾಷ್ಟ್ರ, ಉತ್ತರದಲ್ಲಿ ಪಂಜಾಬ, ಲಾಲಬಾಲಪಾಲರ ದಿನಗಳವು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಚೂಣಿಯಲ್ಲಿದ್ದವರೂ ಈ ರಾಜ್ಯದ ಜನಗಳು. ಕಾವ್ಯಸಾಹಿತ್ಯ ಮತ್ತು ಸಂಗೀತಗಳಲ್ಲಿ ಬಂಗಾಲ ಮಹಾರಾಷ್ಟ್ರಗಳೇ ಎರಡು ರಾಜ್ಯಗಳು ಎಂಬ ಅನಿಸೆಕೆ ದೇಶದಾದ್ಯಂತ ಇತ್ತು.

ಮಹಾರಾಷ್ಟ್ರದ ಪುಣೆಯಲ್ಲಿ ಭಾರತ ಇತಿಹಾಸ ಸಂಶೋಧಕ ಮಂಡಳವು ಪ್ರಾರಂಭವಾಗಿತ್ತು. ಹಿಂದೂ ರಾಷ್ಟ್ರ ಪುನರುತ್ಥಾನದ ಅಧಿನಾಯಕ ಶಿವಾಜಿಯ ಅಭ್ಯಾಸ, ಆತನ ನಾಯಕತ್ವ ಭಾರತದಾದ್ಯಂತ ದುಮದುಮಿಸುತಿತ್ತು. ಹೆಸರಿಗೆ ಭಾರತ ಇತಿಹಾಸ ಸಂಶೋಧನ ಮಂಡಳವಾಗಿದ್ದರೂ ಅಭ್ಯಾಸ ಮಹಾರಾಷ್ಟ್ರ ಇತಿಹಾಸ ಸಂಶೋಧನಕ್ಕೆ ಬಹುತೇಕ ಮೀಸಲಾಗಿತ್ತು.

ಕರ್ನಾಟಕಕ್ಕೆ ಇತಿಹಾಸವೇ ಇಲ್ಲ. ಸಾಹಿತ್ಯವಿಲ್ಲ. ಸಂಗೀತವಿಲ್ಲ ಎಂಬುಷ್ಟು ಕೀಳಿರಿಮೆ ಕನ್ನಡಿಗರಲ್ಲಿ. ಮರಾಠೀ ಪ್ರಭಾವದ ಮುಂಬಯಿ ಕರ್ನಾಟಕದ ಜಿಲ್ಲೆಗಳಲ್ಲಿ ಮರಾಟಿಗರ ಅಹಂ ಎಲ್ಲೆ ಮೀರಿದ ದಿನಗಳವು. ಧಾರವಾಡ ಬಿಜಾಪುರಗಳಲ್ಲಿ ಪ್ರಾದೇಶಿಕ ಭಾಷೆಯ ಶಾಲೆಗಳನ್ನು ತೆರೆಯಬೇಕು ಎಂದು ಅಂದಿನ ಬ್ರಿಟಿಷ್‌ ಸರಕಾರ ಈ ಜನರ ಮೇಲೆ ಉಪಕಾರ ಮಾಡುವಂತೆ ಆದೇಶ ಹೊರಡಿಸಿದಾಗ ಇಲ್ಲಿ ಮರಾಠಿ ಶಾಲೆಗಳನ್ನು ಪ್ರಾರಂಬಿಸುವಷ್ಟರ ಮಟ್ಟಿಗೆ ಮರಾಠಿಮಯವಾಗಿತ್ತು. ಆದಿನಗಳಲ್ಲಿ ಮಹಾರಾಷ್ಟ್ರದ ಕೇಸರಿ ಮರಾಠಿ ದಿನಪತ್ರಿಕೆಯ ಸಂಪಾದಕರಾದ ನ. ಚಿ. ಕೇಳಕರ ಅವರು ಮರಾಠಿ ಭಾಷೆಯ ಇತಿಹಾಸದ ಬಗ್ಗೆ ಲೇಖನಗಳನ್ನು ಆಮಂತ್ರಿಸಿದ್ದರು. ಆ ಹೊತ್ತಿಗಾಗಲೇ ಮಹಾರಾಷ್ಟ್ರದ ಇತಿಹಾಸದಲ್ಲಿ ಕರ್ನಾಟಕ ಇತಿಹಾಸದ ಬಗ್ಗೆ ಸಾಕಷ್ಟು ತಪ್ಪು ಅಭಿಪ್ರಾಯಗಳನ್ನು ಡಾ. ಭಾಂಡಾರಕರ ಅವರಂಥವರೇ ಮಾಡಿದ್ದನ್ನು ರಾಜಪುರೋಹಿತರು ಗಮನಿಸಿದ್ದರು. ಈಗ ಮರಾಠಿ ಭಾಷೆಯ ಇತಿಹಾಸದಲ್ಲಿ ಕನ್ನಡ ಭಾಷೆ ಕರುಗುವುದು ನಿಶ್ಚಿತವೆಂದು ತಿಳಿದರೋ ಏನೋ. ರಾಜಪುರೋಹಿತರು ಮರಾಠಿಯಲ್ಲೆ ವಾಚಕನ ಪತ್ರ ವಿಭಾಗದಲ್ಲಿ ಲೇಖನಗಳನ್ನು ಬರೆಯಯೊಡಗಿದರು. ಸಂಪಾದಕರು ಈ ಲೇಖನಗಳಿಗೆ ‘ಮಹಾರಾಷ್ಟ್ರ ವ ಕರ್ನಾಟಕ’ ಎಂಬುದಾಗಿ ವಿಶೇಷ ತಲೆಬರಹಕೊಟ್ಟು ಅವುಗಳನ್ನು ಪ್ರಕಟಿಸಿದರು. ಎರಡು ವರುಷಗಳ ಕಾಲಾವಧಿಯಲ್ಲಿ ರಾಜಪುರೋಹಿತರು ಒಟ್ಟು ಏಳು ಲೇಖನಗಳನ್ನು ಬರೆದರು.

ಈ ಬಗ್ಗೆ ಶ್ರೀ ಬೆಂದ್ರೆ ಅವರು ನೆನಪಿಸಿಕೊಳ್ಳುತ್ತ ‘ನಮ್ಮ ಅಜ್ಜಿ ತೀರಿಕೊಂಡಮೇಲೆ ಅದೇ ಕಾಲಕ್ಕೆ ನಾನು ಮ್ಯಾಟ್ರಿಕ್ಯುಲೇಶನ್ ಮುಗಿಸಿದ್ದು, ನಮ್ಮ ಚಿಕ್ಕಪ್ಪನಿದ್ದ ಪೂನಾ ಪಟ್ಟಣಕ್ಕೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಹೋದೆನು. ರಾಜಪುರೋಹಿತರೂ ಬೇಗನೆ ಧಾರವಾಡ ಬಿಟ್ಟು ಬಡೋದಾ ಕಾಶೀ ಮೊದಲಾದ ವಿದ್ಯಾಸ್ಥಾನಗಳಲ್ಲಿ ಕೆಲಕಾಲ ಕಳೆದು ಸ್ಪಲ್ಪ ತೀರ್ಥಯಾತ್ರೆಯನ್ನು ಮಾಡಿ….. ಮಧ್ಯ ಪೂನಕ್ಕೂ ಬಂದರು. ನಾನಾಗ ಇನ್ನೂ ಪೂನಾದಲ್ಲೇ ಇದ್ದೆ. ಈ ಪೂನಾದ ಸಂದರ್ಶನ ಅವರ ಕರ್ನಾಟಕ ಮಹಾರಾಷ್ಟ್ರವೆಂಬ ಲೇಖನಮಾಲೆಗೆ ಕಾರಣವಾಯಿತು. ಅಷ್ಟೆ, ಪೋದಾರ, ರಾಜವಾಡೆ, ಚಾಂದೋರಕರ ಮೊದಲಾದ ಇತಿಹಾಸತಜ್ಞರ ಮೈತ್ರಿಯೂ ಆಯಿತು. ಎಂದಿದ್ದಾರೆ.[3]

ಈ ಲೇಖನಗಳಲ್ಲಿ ರಾಜಪುರೋತಹಿರು ಪ್ರಾಚೀನ ಕರ್ನಾಟಕದ ಗಡಿಗಳನ್ನು, ದಕ್ಷಿಣ ಭಾರತದಲ್ಲಿ ಆಳಿದ ಪ್ರಸಿದ್ದ ಕನ್ನಡ ರಾಜಮನೆತನಗಳು, ಅವರ ಕನ್ನಡತನ, ಮರಾಠಿಗರ ಬೈಬಲ್‌ ಎನಿಸಿದ ಜ್ಞಾನೇಶ್ವರಿಯಲ್ಲಿ ಬಂದ ಕನ್ನಡ ಶಬ್ದಗಳಾದ ‘ಅಕ್ಕಾ ಕೇಳೆ…’ ಇತ್ಯಾದಿಗಳನ್ನು ವಿವರಿಸಿದರು. ಅನಂತರದ ಈ ನೂರು ವರುಷಗಳಲ್ಲಿ ಕನ್ನಡ ಮರಾಠಿಯ ಅನೇಕ ಪಂಡಿತರು ಜ್ಞಾನೇಶ್ವರಿಯಲ್ಲಿ ಬಂದ ಕನ್ನಡ ಶಬ್ಧಗಳ ಬಗ್ಗೆ ಹೊರೆಗಟ್ಟಲೆ ಬರೆದಿದ್ದಾರೆ. ಆದರೆ ಅದನ್ನು ಮೊದಲು ಕಂಡು, ತೋರಿದವರು ರಾಜಪುರೋಹಿತರು.

‘ಮಹಾರಾಷ್ಟ್ರದಿಂದ ಕರ್ನಾಟಕದ ಇತಿಹಾಸವನ್ನು ಬೇರ್ಪಡಿಸಿದುದೇ ಈ ಲೇಖನಗಳ ಮುಖ್ಯ ಸಾಧನೆಯಾಗಿದ್ದಿತು’. ಮರಾಠಿಗರು ತಾವು ‘ಮಹಾರಾಷ್ಟ್ರದ’ ದವರೆಂದು ಜಂಬ ಕೊಚ್ಚಿಕೊಳ್ಳುತ್ತಿದ್ದರೂ, ಮಹಾರಾಷ್ಟ್ರದವೆಂದರೆ ಕರ್ನಾಟಕದ ಪರ್ಯಾಯ ಹೆಸರು. ಇಂದು ಮತ್ತು ಹಿಂದೆ ಮಹಾರಾಷ್ಟ್ರವೆಂದು ಕರೆಯಿಸಿಕೊಳ್ಳುವ ಪ್ರದೇಶವೆಲ್ಲ ಕರ್ನಾಟಕ ಪ್ರದೇಶವಾಗಿದ್ದಿತು ಎಂಬುದನ್ನು ಸಾಧಾರವಾಗಿ ತೋರಿಸಿಕೊಟ್ಟರು. ರಾಷ್ಟ್ರ ಮಹಾರಾಷ್ಟ್ರ ಮಹಾಲೋಕ ಎಂಬುದರ ವ್ಯಾಖ್ಯೆಯನ್ನು ಅಂಕಿಸಂಖ್ಯೆಗಳ ಸಹಿತವಾಗಿ ನಮೂದಿಸಿದರು.[4]

ಲೇಖನಗಳು ಪ್ರಕಟವಾದ ಹಾಗೆಲ್ಲ ರಾಜಪುರೋಹಿತರಿಗೆ ಧೈರ್ಯಬಂದಿತು. ಇದೀಗ ಮಹಾರಾಷ್ಟ್ರದ ಕುಲದೈವವೆಂದೇ ತಿಳಿದ ಪಂಢರಪುರದ ವಿಠಲನು ಕರ್ನಾಟಕದವನು ಎಂದು ಹೇಳಿದರು. ‘ಪಂಢರಪುರ ವ ವಿಠಲಭಕ್ತಿ’ ಎಂಬ ತಮ್ಮ ಮರಾಠಿ ಲೇಖನದಲ್ಲಿ ಪಾಂಡುರಂಗ ಇದು ಗ್ರಾಮ್ಯ ಶಬ್ದ ‘ಪಂಡರಿಗೆ’ ಎಂಬ ಕನ್ನಡ ಶಬ್ದದ ಮೇಲಿಂದ ಅಲ್ಲಿಯ ದೇವರು ಪಾಂಡುರಂಗನಾದನು. ಸು. ೧೩೦೦ನೆಯ ಶತಮಾನದ ಚೌಂಡರಸ ಕವಿಯ ದಶಕುಮಾರ ಚರಿತ್ರೆಯಲ್ಲಿ ಪಂಢರಪುರಕ್ಕೆ ಪಾಂಡುರಂಗಪುರ ಎಂಬ ಹೆಸರಿದ್ದದನ್ನು ಎತ್ತಿ ತೋರಿಸದರು. ಪಂಢರಪುರ ಪಾಂಡುರಂಗ, ಊರು – ಊರಿನ ದೇವರು ಎಂಬುದಾಗಿ ಕವಿಯು ಕೊಟ್ಟಿದ್ದಾನೆಂದು ಹೇಳಿದರು. ಹೀಗೆ ‘ವಿಠಲನನ್ನು ಕರ್ನಾಟಕದ ಧಾರ್ಮಿಕ ಇತಿಹಾಸದ ಪೀಠದ ಮೇಲೆ ಪುನಃ ಪ್ರತಿಷ್ಠಾಪಿಸಿದರು. ಅಂದಿನ ದಿನಗಳಲ್ಲಿ ಮರಾಟಿಗರಿಗೆ ರಾಜಪುರೋಹಿತರ ಈ ವಿಚಾರಳು ಅಚ್ಚ ಹೊಸದಾಗಿದ್ದವು. ಅವರ ‘ಅಹಂ’ಗೆ ಪೆಟ್ಟು ಬಿದ್ದುದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಕನ್ನಡಿಗರು ಕೆಲವು ಶತಮಾನಗಳ ಹಿಂದೆ ತಮ್ಮನ್ನು ಆಳಿದರೆಂಬ ವಿಚಾರ ಅವರಿಗೆ ರುಚಿಸಲಿಲ್ಲ. ಅವರೆಲ್ಲ. ಆ ಮೊದಲು ಕನ್ನಡಿಗರೇ ಆಗಿದ್ದರೆಂಬುದನ್ನು ಒಪ್ಪಲು ಸಿದ್ಧರಿರಲಿಲ್ಲ. ಆದರೆ ರಾಜಪುರೋಹಿತರು ‘ಈ ಶಸ್ತ್ರಕ್ರಿಯೆಯನ್ನು ಅರೆವಳಿಕೆ ಔಷಧವನ್ನು (ಕ್ಲೋರೋಫಾರ್ಮ) ಕೊಟ್ಟೇ ನಡೆಸಿದ್ದರು. ಎಂಬುದೂ ಕೌತುಕದ ವಿಷಯವಾಗಿದೆ. ಅವರು ತಮ್ಮ ಮರಾಠಿ ಲೇಖನಗಳ ಪ್ರಾರಂಭದಲ್ಲಿ ‘ಶ್ರೀಮಾನ್‌ ತಿಳಕರು ಗುರ್ಲಹೊಸೂರಿನಲ್ಲಿ ಭಾಷಣ ಮಾಡುತ್ತ ನಮ್ಮ ಪೂರ್ವಜರಿಗೆ ಕನ್ನಡ ಬರುತ್ತಿತ್ತು. ಸಂತ ಜ್ಞಾನೇಶ್ವರಿಗೂ ಕನ್ನಡವು ಚೆನ್ನಾಗಿ ಬರುತ್ತಿತ್ತು ಎಂದು ಹೇಳಿದರು ಎಂಬುದಾಗಿ ಹೇಳಿ ತಮ್ಮ ವಿಚಾರಗಳನ್ನು ಎಳೆಎಳೆಯಾಗಿ ಬಿಡಿಸಿ ಹೊರಗೆಡವಿದರು. ಅದು ಮಹಾರಾಷ್ಟ್ರಿಯರಿಗೆ ನುಂಗಲಾರದ ತುತ್ತಾಯಿತು. ಕ್ರಾಂತಿಕಾರಿ ಲೇಖನಗಳು ಮಹಾರಾಷ್ಟ್ರದಾದ್ಯಂತ ಕೋಲಾಹಲವನ್ನೆಬ್ಬಿಸಿದವು. ಆದರೆ ಲೇಖಕರ ವಿರುದ್ಧ ಸಾಧಾರ ಖಂಡನಾಪೂರಕವಾದ ಒಂದೇ ಒಂದು ಲೇಖನವೂ ಬರಲಿಲ್ಲ. ಕನ್ನಡಿಗರಿಗೆ ತಮ್ಮ ಬಗ್ಗೆ ಕಿಂಚಿತ್‌ ಅರಿವನ್ನು ಮೂಡಿಸಿ ಜಾಗೃತರಾಗಲು ಸಹಾಯವಾಯಿತು. ಅನಂತರದ ದಿನಗಳಲ್ಲಿ ರಾಜಪುರೋಹಿತರ ವಿಚಾರಗಳನ್ನು ಮರಾಠಿ ವಿದ್ವಾಂಸರು ಮನಃ ಪೂರ್ವಕವಾಗಿ ಒಪ್ಪಿಕೊಂಡಿದ್ದಾರೆ. ಅವರ ಹಲವಾರು ಸಂಶೋಧನ ಲೇಖನ ಗ್ರಂಥ ಇತ್ಯಾದಿಗಳಲ್ಲಿ ನಾ. ಶ್ರೀ. ರಾಜಪುರೋಹಿತರನ್ನು ಉಲ್ಲೇಖಿಸಿ ಅವರ ವಿಚಾರಗಳನ್ನು ಒಪ್ಪಿದ ದಾಖಲೆಗಳಿವೆ. ಮರಾಠಿಯ ಹೆರಾಂತ ಸಂಶೋಧಕ ಡಾ. ರಾ.ಚಿಂ. ಢೇರೆ ಅವರು ಶ್ರೀ ವಿಠಲ ಏಕ ಸಮನ್ವಯ ಎಂಬ ಬೃಹತ್‌ ಸಂಶೋಧನ ಗ್ರಂಥದಲ್ಲಿ ೧೯೧೨ರಷ್ಟು ಹಿಂದೆ ಪ್ರಕಟವಾದ ರಾಜಪುರೋಹಿತರ ಲೇಖನವನ್ನು ಉಲ್ಲೇಖಿಸುವುದಲ್ಲದೆ ಅವರ ವಿಚಾರಗಳನ್ನು ಮನ್ನಿಸಿದ್ದಾರೆ. ಅಂಥ ಅನೇಕ ಉದಾಹರಣೆಗಳಿವೆ. ಈ ಲೇಖನಗಳನ್ನು ಬರೆದ ಕಾಲದಲ್ಲಿ ರಾಜಪುರೋಹಿತರು ಕೇವಲ ಇಪ್ಪತ್ತೆರಡರ ತರುಣರು. ಅವಿವಾಹಿತರು. ಆಗಲೆ ಅವರು ಅಖಿಲ ಕರ್ನಾಟಕ ಹಾಗೂ ಮಹಾರಾಷ್ಟ್ರದ ಮನೆ ಮಾತಾಗಿದ್ದರು.

 

[1] ಕರ್ತವ್ಯಾನಂದ, ನಾ. ಶ್ರೀ ರಾಜಪುರೋಹಿತರು (೧೯೫೮) ಪು. ೬೨

[2] ಅದೇಪುಟ. ೬೬

[3] ಅದೇ. ಪು. ೬೮

[4] ೧೧೦೦೦ ಗ್ರಾಮ – ೧ ರಾಷ್ಟ್ರ, ೩೩೦೦೦ ಗ್ರಾಮ – ೧ ಮಹಾರಾಷ್ಟ್ರ೯೯೦೦೦ – ಗ್ರಾಮ ೧ ಮಹಾಲೋಕ.