ದಿನಾಂಕ ೨೪.೦೮.೧೯೫೩ ಅಂದು ಶ್ರಾವಣ ಶುದ್ಧ ಪೂರ್ಣಿಮೆಯಾಗಿತ್ತು. ರಾಜಪುರೋಹಿತರ ಹಿರಿಯ ಮಗ ಸುರೇಶ್ವರಾರ್ಚಾಯರು ಒಂದೆಡೆ ಹೀಗೆ ಆ ದಿನವನ್ನು ಬಣ್ಣಿಸಿದ್ದಾರೆ.

‘ಮನೆಯ ಹೊರಗೆ ಬೆಳದಿಂಗಳು ವ್ಯಾಪಿಸಿತ್ತು. ಆದರೆ ಮನೆಯೊಳಗೆ? ವೇದನೆಯಿಂದ ಬಳಲುತ್ತಿದ್ದ ನನ್ನ ತಂದೆ, ಅವರ ಹತ್ತಿರ ನನ್ನ ತಾಯಿ, ಇಬರು ತಂಗಿಯರು ಮತ್ತು ನನ್ನ ‘ತಾಯಿಯ’ ಸೋದರತ್ತೆ ಇಷ್ಟು ಜನ ಕುಳಿತಿದ್ದೇವು.

ತಂದೆ ಕುಡಿಯಲು ನೀರು ಬೇಡಿದರು. ತಾಯಿ ನೀರು ತಂದು ಕುಡಿಸುತ್ತಿದ್ದಾಗ ಅವರು ಗಟಗಟನೆ ಕುಡಿಯ ಹತ್ತಿದರು….. ನೀರು ಕುಡಿಯುವ ರೀತಿಯನ್ನು ನೋಡಿ ಗಾಬರಿಯಾಯಿತು. ಸಾಯುವ ಕಾಲದ ದಾಹವಿರಬೇಕು ಎನಿಸಿತು.

….ಹಾಸಿಗೆಯಲ್ಲಿ ಸ್ಪಲ್ಪ ಎದ್ದು ಕೂಡುವ ಪ್ರಯತ್ನ ಮಾಡಿದರು. ಅವರಿಗೆ ನನ್ನ ತೊಡೆಯ ಆಶ್ರಯವನ್ನು ಕೊಟ್ಟೆನು.

“ನಿನಗೆ ಎಷ್ಟೇ ಆದರೂ ನೌಕರಿಯಿಂದ ಸಂಬಳ ಸಿಗುವುದು. ನನಗೆ ಇಷ್ಟೇ ಎಂದು ಗಳಿಕೆ ಇರಲಿಲ್ಲ. ನನ್ನ ಸನ್ಮಿತ್ರರೇ ನನಗೆ ಕಾಲಕಾಲಕ್ಕೆ ಸಹಾಯ ಸಲ್ಲಿಸಿದರು. ಜಾತಿ, ಮತ, ಪಂಥ ಎಣಿಸದೇ ಅಖಿಲ ಕರ್ನಾಟಕ ಅದೇಕೆ ಮಹಾರಾಷ್ಟ್ರದ ಮಿತ್ರರೂ ಸಹಿತ ನನ್ನನ್ನು ಮುನ್ನಡೆಸಿದರು…. ಮಾತನಾಡುತ್ತ ಆಡುತ್ತ ಅವರು ಶಾಂತರಾದರು “.[1]

ನಾಡು ಅವರನ್ನು ಗುರುತಿಸಿದ ಬಗೆಯನ್ನು ಅವರ ಮಾತಿನಲ್ಲೇ ಹೇಳಲು ಮಗನ ಈ ನಾಲ್ಕು ಸಾಲುಗಳನ್ನು ಉಲ್ಲೇಖಿಸಲಾಗಿದೆ. ತಮ್ಮ ಸಂಶೋಧನ ಲೇಖನಗಳು, ಗ್ರಂಥ ಗಳಿಂದ, ನಿರಂತರ ಸಂಚಾರದಲ್ಲಿಯೂ ಜನ ಸಂಪರ್ಕದಿಂದ ಅವರು ಅಂದಿನ ದಿನಗಳಲ್ಲಿ ಹರಿದು ಹಂಚಿ ಹೋಗಿದ್ದ ಕರ್ನಾಟಕ, ಮಹಾರಾಷ್ಟ್ರಗಳಲ್ಲೂ ಪರಿಚಿತರಾಗಿದ್ದರು. ಅದರಿಂದಾಗಿ ಅವರ ಜೀವಿತ ಕಾಲದಲೆ ದೊರೆಯಬಹುದಾಗಿದ್ದ ಗೌರವ ಸನ್ಮಾನಗಳು ದೊರೆಯಲಿಲ್ಲ ಎಂದು ಹೇಳುವಂತಿಲ್ಲ. ಆ ದಿನಗಳಲ್ಲಿ ಸಾಧ್ಯವಿದ್ದಷ್ಟು ಅವರನ್ನು ಗುರುತಿಸಿ ಗೌರವಿಸಿದ್ದಾರೆ.

೧೯೧೦ರಲ್ಲಿ ಅವರ ಮೊದಲ ಕೃತಿ ‘ದಾನ ಧರ್ಮ ಪದ್ಧತಿ’ ಪ್ರತಟವಾಯಿತಷ್ಟೆ. ಅಂದಿನಿಂದ ಅವರ ಸಾಹಿತ್ಯ ಸಂಶೋಧನ ಮಾರ್ಗದಲ್ಲಿ ಮಾಡಿದ ಸಾಧನೆಯ ದ್ಯೋತಕ ಎಂಬಂತೆ ೧೯೩೫ರ ಡಿಸೆಂಬರ್‌ದಲ್ಲಿ ಮುಂಬಯಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿಯ ಸಂಶೋಧನ ಗೋಷ್ಠಿಗೆ ಅವರನ್ನು ಅಧ್ಯಕ್ಷರನ್ನಾಗಿ ನಿಯೋಜಿಸಲಾಗಿತ್ತು. ಕಾಕತಾಲೀಯ ಎಂಬಂತೆ ಅದು ಅವರ ಬರವಣಿಗೆಯ ಬೆಳ್ಳಿಹಬ್ಬದ ವರುಷವೂ ಆಗಿತ್ತು. ಸಂಶೋಧನ ರಂಗದಲ್ಲಿ ಅಂದಿನ ದಿನಗಳಲ್ಲಿ ಅಷ್ಟು ದೀರ್ಘಕಾಲ ಸಾಧನೆಯನ್ನು ಮಾಡಿದವರೂ ಅವರೊಬ್ಬರೆ ಆಗಿದ್ದರು. ಪರಿಷತ್ಪತ್ರಿಕೆ, ಕನ್ನಡ ಮರಾಠಿ ಇತರ ಜನಪ್ರಿಯ, ಪತ್ರಿಕೆ ನಿಯತಕಾಲಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗಿ ಎಲ್ಲೆಡೆ ಅವರ ಬಗ್ಗೆ ಒಂದು ಬಗೆಯ ಗೌರವ ಭಾವನೆ ಉಂಟಾಗಿದ್ದಿತು.

ರಾಜಪುರೋಹಿತರು ಈ ಸಮ್ಮೇಳನದಲ್ಲಿ ತಮ್ಮ ಅಧ್ಯಕ್ಷ ಭಾಷಣವಲ್ಲದೆ, ‘ಸಹವಾಸೀ ಬ್ರಾಹ್ಮಣರು’ ಎಂಬ ಸಂಶೋಧನ ಪ್ರಬಂಧವನ್ನು ಮಂಡಿಸಿದ್ದಾರೆ.**

ಅನಂತರ ೧೯೩೭ರಲ್ಲಿ ರಾಜಪುರೋಹಿತರನ್ನು ಬೆಂಗಳೂರಲ್ಲಿ ಸತ್ಕರಿಸಲಾಯಿತು. ಷರಿಷತ್ತಿನಲ್ಲಿ ನಡೆದ ಸತ್ಕಾರ ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡದ ಕಣ್ವರೆಂದೇ ಹೆಸರಾದ ‘ಬಿ. ಎಂ. ಶ್ರೀ’ ಅವರ ಪ್ರಾರ್ಥನೆಯ ಮೇರೆಗೆ ಶ್ರೀ ಬೆಳ್ಳಾವೆ ವೆಂಕಟನಾರಾಯಣಪ್ಪನವರು ವಹಿಸಿದ್ದರು. ದಿನಾಂಕ ೧೫.೦೮.೧೯೩೭ ಭಾನುವಾರ ಸಾಯಂಕಾಲ ೫ ಗಂಟೆಗೆ ಶ್ರೀ ಕೃಷ್ಣರಾಜೇಂದ್ರ ಪರಿಷನ್ಮಂದಿರದಲ್ಲಿ ನಡೆದ ಸಭೆಯಲ್ಲಿ ಬಿ. ಎಂ. ಶ್ರೀ., ಬೆಳ್ಳಾವೆ ವೆಂಕಟನಾರಾಯಣಪ್ಪನವರಲ್ಲದೆ, ರಾವಬಹುದ್ದೂರ ಬಿ. ವೆಂಕಟೇಶಾಚಾರ್ಯ, ಏ. ಆರ್‌. ಕೃಷ್ಣಶಾಸ್ತ್ರಿಗಳು, ಬೆನಗಲ್‌ ರಾಮರಾಯರು, ಮಾಸ್ತಿ ವೆಂಕಟೇಶಯ್ಯಂಗಾರ್ಯರು, ಡಿ. ಸಿ. ಸುಬ್ಬರಾಯಪ್ಪ, ಬಿ. ಪುಟ್ಟಯ್ಯನ್ಸವರು, ಶ್ರೀಮತಿ ಆರ್‌ ಕಲ್ಯಾಣಮ್ಮನವರು ಮುಂತಾಗಿ ಹಲವು ಮಂದಿ ಅಭಿಮಾನಿಗಳು ಸಭೆಗೆ ದಯಮಾಡಿಸಿದ್ದರು. ಅದು ಅವರು ಹುಟ್ಟಿದ ೫೦ನೆಯ ವರ್ಷವೂ ಆಗಿತ್ತು.

ಶ್ರೀ ವೆಂಕಟನಾರಾಯಣಪ್ಪನವರು “ತಾವು ಷರಿಷತ್ಪತ್ರಿಕೆಯ ಸಂಪಾದಕರಾಗಿದ್ದ ಕಾಲದಲ್ಲಿ ಶ್ರೀ ರಾಜಪುರೋಹಿತರ ಸಂಶೋಧನ ಸಾಮರ್ಥ್ಯ ಕನ್ನಡದ ಮೇಲೆ ಅವರಿಗಿರುವ ಅಭಿಮಾನ ಇವುಗಳು ತಮಗೆ ಚೆನ್ನಾಗಿ ಪರಿಚಯವಾಗಿವೆ” ಎಂದು ತಿಳಿಸಿದರು ಮತ್ತು ಸಂಶೋಧನ ಕಾರ್ಯದಲ್ಲಿ ಶ್ರೀ ರಾಜಪುರೋಹಿತರಿಗಿರುವ ಆಸಕ್ತಿ, ಶ್ರದ್ಧೆ ದಕ್ಷತೆ ಇವುಗಳನ್ನು ಕುರಿತು ಪ್ರಶಂಸಿದರು. ಶ್ರೀ ರಾಜಪುರೋಹಿತರು ಒಂದು ವಿಷಯವನ್ನು ವಿಚಾರಕ್ಕೆ ತೆಗೆದುಕೊಂಡರೆ, ಹೇಗೆ ಕೂಲಂಕಷವಾಗಿ ಚರ್ಚಿಸುತ್ತಾರೆಂಬುದನ್ನೂ ತಮಗೆ ಸರಿ ಎಂದು ಕಂಡದ್ದನ್ನು ಕೊನೆಯವರೆಗೂ ಬಿಡದೆ ಹೇಗೆ ಸಾಧಿಸುತ್ತಾರೆ ಎಂಬುದನ್ನೂ ಮತ್ತು ಅವರ ಲೇಖನಗಳ ಭಾಷೆ ಎಷ್ಟೂ ತೀಕ್ಷ್ಣವಾಗಿರುತ್ತದೆಂಬುದನ್ನು ಶ್ರೀ ವೆಂಕಟನಾರಾಯಣಪ್ಪನವರು ವಿವರಿಸಿದರು.

ಶ್ರೀ ಬಿ. ಎಂ. ಶ್ರೀಕಂಠಯ್ಯನವರು ಮಾತನಾಡುತ್ತ ಸಂಶೋಧಕರಿಗೆ ಅದರಲ್ಲಿಯೂ ಕನ್ನಡ ಸಂಶೋಧಕರಿಗೆ ಇರುವ ಕಷ್ಟನಿಷ್ಠುಗಳನ್ನು ತಿಳಿಸಿ, ನಮ್ಮ ನಾಡಿನಲ್ಲಿ ಅವರಿಗೆ ತಕ್ಕ ಉತ್ತೇಜನ ದೊರೆಯುತ್ತಿಲ್ಲವೆಂದು ಹೇಳಿದರು. ಅಂಥ ಪರಿಸ್ಥಿತಿಯಲ್ಲಿ ರಾಜಪುರೋಹಿತರು ಧೈರ್ಯಗೆಡದೆ ಕೆಲಸ ಮಾಡುತ್ತಿರುವುದು. ಅಭಿನಂದನೀಯವೆಂದು ಹೇಳಿದರು, ಅಲದೆ ಈ ಸಂದರ್ಭದಲ್ಲಿ ಬೆಂಗಳೂರು ಅಭಿಮಾನಿಗಳು ಅಲ್ಪನಿಧಿಯನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ಅದು ಅವರ ಗೌರವ ದ್ಯೋಕತವಾಗಿಯೆ ಹೊರತು ಸಹಾಯವೆಂದು ಎಣಿಸಬಾರದೆಂದು ವಿನಂತಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ರಾಜಪುರೋಹಿತರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತ ಆಡಿದ ಮಾತುಗಳು ಇಂದಿನ ಸಂಶೋಧಕರಿಗೂ ಮಾರ್ಗದರ್ಶಾಕವಾಗಿವೆ. ಅವರು ಮಾತನಾಡುತ್ತ ‘ಒಂದು ಐತಿಹಾಸಿಕ ಸಂಗತಿಯೇ ಆಗಲಿ, ಸ್ಥಳ ಪುರಾಣವೇ ಆಗಲಿ, ಕವಿಯ ಸ್ಥಳ, ಕಾಲ, ಮತ ವಿಷಯಗಾಳಾಗಲಿ ಯಾವ ವಿಷಯ ಪುರಾಣವೇ ಆಗಲಿ ಅದನ್ನು ತಿಳಿಯಲು ಅವರು ಅಯ ಸ್ಥಳಗಳಿಗೆ ಹೋಗಿ ಆ ವಿಷಯಕ್ಕೆ ಸಂಬಂಧಪಟ್ಟ ಎಲ್ಲ ಗ್ರಂಥಗಳನ್ನು ಪರಿಶೀಲಿಸಿ, ಆ ವಿಷಯದಲ್ಲಿ ಕೆಲಸ ಮಾಡುತ್ತಿರುವ ಇತರರೊಡನೆ ಚರ್ಚಿಸಿ ಒಂದು ಸಿದ್ಧಾಂತಕ್ಕೆ ಬರುವುದು ತಮ್ಮ ವಾಡಿಕೆ ಎಂಬುದನ್ನು ಉದಾಹಣ ಸಹಿತವಾಗಿ ನಿರೂಪಿಸಿದರು. ತಮ್ಮ ಸಂಶೋಧನೆಯ ಫಲಿಂತಾಶವನ್ನು ಜನರ ಮುಂದಿಡುವಾಗ ಅವರ ಭಾಷೆ ಕಟುವಾಗಿರಬಹುದು. ತಮ್ಮ ಸಿದ್ಧಾಂತ ಅನೇಕರ ಸಿದ್ಧಾಂತಕ್ಕೆ ವಿರೋಧವಾಗಿರಬಹುದು. ಅಂದ ಮಾತ್ರಕ್ಕೆ ಯಾರ ಮನಸ್ಸನ್ನು ನೋಯಿಸುವುದು ಎಂದಲ್ಲ. ಆ ಉದ್ದೇಶವೂ ಇರುವುದಿಲ್ಲ. ಸತ್ಯಾನ್ವೇಷಣೆಯೇ ಸಂಶೋಧಕನ ಗುರಿಯಾಗಿರಬೇಕು. ಈ ಸತ್ಯಾನ್ವೇಷಣೆಯ ಕೆಲಸದಲ್ಲಿ ಅನೇಕರಿಗೆ ಅಪ್ರಿಯವಾಗಿದೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಅದರಿಂದ ಅವರಿಗೆ ತೊಂದರೆಗಳಾಗಿರುವುದನ್ನು ಹೇಳಿದ್ದಾರೆ. ಆದರೆ ಅದರಿಂದ ಸತ್ಯಾನ್ವೇಷಣೆಯ ಕೆಲಸದಲ್ಲಿ ಹಿಂದೆ ಬೀಲಲಿಲ್ಲ ಎಂಬುದು ಬಹು ಮುಖ್ಯವಾಗಿದೆ.[2]

ಮುಂದೆ ಮೂರು ದಿನಗಳಲ್ಲಿ ದಿನಾಂಕ ೧೮. ೮. ೧೯೩೭ರಂದು ಬೆಂಗಳೂರಿನಲ್ಲಿ ಶುಕ್ಲ ಯಜುರ್ವೇದ ಸಭಾ ಸದಸ್ಯರು ಚಾಮರಾಜಪೇಟೆಯ ಶ್ರೀಯಾಜ್ಞವಲ್ಕ್ಯಾಶ್ರಮದಲ್ಲಿ ಶ್ರೀ ರಾಜಪುರೋಹಿತರಿಗೆ ಸನ್ಮಾನ ಮಾಡಿ ಮಾನ ಪತ್ರವನ್ನೂ ಅರ್ಪಿಸಿದ್ದಾರೆ. ಜೊತೆಗೆ ಒಂದಿಷ್ಟು ನಿಧಿಯನ್ನು ಸಂಗ್ರಹಿಸಿ ನೀಡಿದ್ದಾರೆ.[3]

ಅವರ ಅರವತ್ತರಾ ಹುಟ್ಟು ಹಬ್ಬವನ್ನು ೧೯೪೭ರ ಜುಲೈ ೧೭ರಂದು ಧಾರವಾಡದಲ್ಲಿ ಆಚರಿಸಬೇಕೆಂದು ಅಲ್ಲಿಯ ಜನ ನಿರ್ಧರಿಸಿದರು. ಆ ಸಂದರ್ಭದಲ್ಲಿ ಒಂದು ನಿಧಿಯನ್ನು ಸಂಗ್ರಹಿಸಿ ಆರ್ಪಿಸಬೇಕೆಂದೂ ನಿರ್ಣಯವಾಯಿತು. ಆವರು ಸಂಶೋಧನೆಯ ಮೂಲಕ ನಾಡಿಗಾಗಿ ಸಲಿಸಿದ ಸೇವೆಗೆ ಸಮಾರಂಭ ಉಚಿತವಾಗಿತ್ತು. ‘ಅವರು ತಮ್ಮ ಬದುಕಿನಲ್ಲಿ ಅನುಭವಿಸಿದ ಬಡತನ ಕಷ್ಟ ನಷ್ಟಗಳನ್ನರಿತ ಜೊತೆಗಾರರು, ಮುಪ್ಪಿನ ಕಾಲದಲ್ಲಿ ನಾಲ್ಕು ದಿನ ಸುಖದಿಂದ ಇರಲಿ ಎಂದು ಬಯಸಿದ್ದರು. ಅದಕಾಗಿಯೇ ನಿಧಿಯನ್ನು ಸಂಗ್ರಹಿಸ ಹತ್ತಿದರು. ಈ ಎಲ್ಲ ಕಾರ್ಯಕ್ರಮಗಳನ್ನು ಏರ್ಪಡಿಸುವ ನಿರ್ಣಯವನ್ನು ಸಾಕಷ್ಟು ಮೊದಲೆ ತೆಗೆದುಕೊಂಡಿದ್ದರಾದರೂ, ಅವರ ಷಷ್ಟಿಪೂರ್ತಿ ಸಮಾರಂಭದ ಹೊತ್ತಿಗೆ ಹೇಳಿಕೊಳ್ಳುವಷ್ಟು ಹಣ ಕೂಡಲೇ ಇಲ್ಲ. ಅದಕ್ಕಾಗಿ ಸಮಾರಂಭವನ್ನು ಮುಂದೆ ಹಾಕಬೇಕೆಂದು ನಿರ್ಣಯಿಸಿದರು. ಆದರೆ ರಾಜಪುರೋಹಿತರಿಗೆ ಅದು ಸರಿ ಕಾಣಲಿಲ್ಲ. ಹಣ ಸಂಗ್ರಹಾವಾಗಲಿಲ್ಲವೆಂದು ಸಮಾರಂಭವನ್ನು ಮುಂದೆ ಹಾಕುವುದಕ್ಕೆ ಒಪ್ಪಲಿಲ್ಲ. ನಿಗದಿತ ಸಮಯದಲ್ಲಿ ಸಮಾರಂಭ ನಡೆಯಲಿ ಎಂದರು. ಆದರೂ ಸುಮಾರು ೨೦ ದಿನಗಳಷ್ಟು ಕಾಲ ಮುಂದೆ ಹಾಕಿ ಆಗಸ್ಟ್‌ ೧೦ ರಂದು ಸಮಾರಂಭ ಏರ್ಪಡಿಸಿದರು. ಆ ಇಪ್ಪತ್ತು ದಿನ ಸಮಿತಿಯ ಸದ್ಯರು ಮತ್ತೆ ತಿರುಗಾಡಿ ಅಂತು ಒಟ್ಟು ೧೫೦೦ ರೂಪಾಯಿಗಳನ್ನು ಸಂಗ್ರಹಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಮುದವೀಡು ಕೃಷ್ಣರಾಯರು ವಹಿಸಿದ್ದರು. ಅಂದಿನ ದಿನಗಳಲ್ಲಿ ನಾಡಿನ ಬಹುತೇಕ ಪತ್ರಿಕೆಗಳು ಈ ಸಮಾರಂಭದ ವರದಿಯನ್ನು ಪ್ರಕಟಿಸಿವೆ.

ಸತ್ಕಾರ ನಿಧಿ ಸಂಹ್ರಹಕ್ಕೆ ಪಾವತಿ ಪುಸ್ತಕಗಳನ್ನು ಪ್ರಕಟಿಸಿದ್ದು ಸಹಜವಾಗಿತ್ತು. ಅದಕ್ಕೆ ರಾಜಪುರೋಹಿತ ಸತ್ಕಾರ ಸಮಿತಿ ಎಂಬ ಹೆಸರೇ ಇತ್ತು. ನಿಧಿ ಸಂಗ್ರಹ ಕಾರ್ಯದಲ್ಲಿ ರಾಜಪುರೋಹಿತರೂ ಸೇರಿದ್ದರೆಂಬುದು ವಿಶೇಷವಾಗಿದೆ. ರಾಜಪುರೋಹಿತರ ಸತ್ಕಾರಕ್ಕೆ ರಾಜಪುರೋಹಿತರೆ ನಿಧಿ ಸಂಹ್ರಹಿಸಿ ಪಾವತಿಗಳನ್ನು ಮಾಡಿದ ಹಲವಾರು ಉಲ್ಲೇಖಗಳು ದಿನಚರಿಯ ಪುಟಗಳಲ್ಲಿ ದೊರೆಯುತ್ತವೆ. ಬಹುಶಃ ಅವರು ಸಂಶೋಧನಕ್ಕಾಗಿ ಊರೂರು ಹಳ್ಳಿ ಹಳ್ಳಿಗಳನ್ನು ತಿರುಗುತ್ತಿದ್ದರಾದ್ದರಿಂದ ಸಮಿತಿಯವರು ಅವರ ಕೈಯಲ್ಲೂ ಪಾವತಿ ಪುಸ್ತಕಗಳನ್ನು ಕೊಟ್ಟಿರಬೇಕು. ಒಬ್ಬ ಪ್ರಾಮಾಣಿಕ ಕಾರ್ಯಕರ್ತನಂತೆ ಅವರು ಆ ಕೆಲಸವನ್ನು ಮಾಡಿರಬೇಕೇ ಹೊರತು ಧನದ ಆಶೆಯಿಂದ ರಾಜಪುರೋಹಿತರು ಹಾಗೆ ಮಾಡಿದರೆಂದು ತಿಳಿಯುವುದು ತಪ್ಪಾಗುತ್ತದೆ. ‘ಇದರಿಂದಾಗಿ ನಾಲ್ಕು ಜನ ಅವರನ್ನು ಹಾಸ್ಯಸ್ಪದವಾಗಿ ಕಾಣುವಂತಾಯಿತು’ ಎಂದು ಹೇಳಲಾಗಿದೆ. ಅದು ನಮ್ಮ ಜನರ ಗುಣ.

ಸಂಶೋಧನೆಯನ್ನು ಒಂದು ವೃತ್ತಿಯನ್ನಾಗಿ ಮಾಡಿಕೊಂಡು ತಿರುಗಾಡುವಾಗಲೂ ಅವರ ಹತ್ತಿರ ಗಮ್ಯ ಸ್ಥಳಗಳಿಗೆ ಹೋಗಲು ಗಾಡಿಯ ಖರ್ಚಿನ ಹಣವೂ ಇರುತ್ತಿರಲಿಲ್ಲ. ಗೆಳೆತನ, ಆಪತ್ತೆ, ಧಾರ್ಮಿಕ ಸಭೆ ಸಮಾರಂಭಗಳ ಉತ್ಸವಗಳ ಏರ್ಪಾಡುಗಳಲ್ಲಿ ಉಪನ್ಯಾಸಕಾರರಾಗಿ ಭಾಷಣಕಾರರಾಗಿ ಹೋಗಿ ಸಂಶೋಧನೆಯ ಕೆಲಸವನ್ನು ಮಾಡಿದ ಅನೇಕ ದೃಷ್ಟಾಂತಗಳು ಅವರ ದಿನಚರಿಯಲ್ಲಿ ಉಲ್ಲೇಖವಾಗಿವೆ. ಅವರಿಗೆ ನಾಡಿನಾದ್ಯಂತ ಅನೇಕ ಜನರ ಸಂಪರ್ಕ ಇದ್ದಿತು. ಆದಾಗ್ಯೂ ಸತ್ಕಾರ ಸಮಿತಿಯ ಸದಸ್ಯರು ಕಾರ್ಯ ಕರ್ತರು ಶ್ರದ್ಧೆಯಿಂದ ಸತ್ಕಾರ ನಿಧಿ ಸಂಗ್ರಹಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದರೂ ನಿಧಿ ಸಂಗ್ರಹ ಆಗಲಿಲ್ಲ. ಅಥವಾ ವಿಶೇಷವಾಗಿ ಸಂಗ್ರಹ ಆಗಲಿಲ್ಲ ಎನ್ನಬಹುದು. ಅದಕ್ಕೆ ಕಾರಣಗಳನ್ನು ಹುಡುಕುವುದಕ್ಕಿಂತ, ಇಂಥ ಸ್ಥಿತಿಯಲ್ಲಿ ತಾನೂ ಒಬ್ಬ ಸ್ವಯಂ ಸೇವಕ ಎಂಬ ಭಾವನೆ ಅವರಿಗಿತ್ತು. ಆದ್ದರಿಂದ ತಾವು ಮಾಡುವುದು ಅನೌಚಿತ್ಯವಾದ ಹೀನಾಯವಾದ ಒಂದು ಕಾರ್ಯ ಎಂದು ಅವರಿಗೆ ಅನಿಸಲಿಲ್ಲ. ಹೋದಲ್ಲೆಲ್ಲ ತಮ್ಮ ಕೆಲಸವಾದ ಮೇಲೆ ಸತ್ಕಾರ ನಿಧಿಯ ಪಾವತಿಗಳನ್ನು ಹರಿದಿದ್ದಾರೆ. ಯಾರು ಎಷ್ಟು ಕೊಟ್ಟರು ಎಂಬುದನ್ನೂ ದಾಖಲಿಸಿದ್ದಾರೆ. ದೊಡ್ಡ ಹೆಸರಿನ ಕೆಲವರ ನಕಾರಾತ್ಮಕ ಉತ್ತರಗಳನ್ನೂ ನಮೂದಿಸಿದ್ದಾರೆ. ಇಷ್ಟಾಗಿಯೂ ಹಣ ಕೂಡಲಿಲ್ಲವೆಂದು ಸಮಾರಂಭವನ್ನು ಮುಂದೆ ಹಾಕಬೇಕೆಂದು ಸಮಿತಿಯವರು ಸೂಚಿಸಿದಾಗ ಅದು ಬೇಡ ಎಂದು ಹೇಗೆ ನಿರ್ಲಿಪ್ತತೆಯಿಂದ ಹೇಳಿದರೋ ಅದೇ ನಿರ್ಲಿಪ್ತ ಭಾವನೆಯಿಂದ ತಮ್ಮ ಸತ್ಕಾರಕ್ಕಾಗಿ ತಾವೆಯೇ ಧನ ಸಂಗ್ರಹ ಮಾಡಿದರು, ಇನ್ನೊಬ್ಬರ ಮಾತುಗಳ ಕಡೆಗೆ ಗಮನ ಕೊಡಲಿಲ್ಲ ‘ನಮ್ಮ ಸಾಮಾಜಿಕ ವಿವೇಕಕ್ಕೆ ಇದಕ್ಕಿಂತ ಹೆಚ್ಚಿನ ಅಣಕ ಬೇಡವೆಂದು ತೋರುತ್ತದೆ’ ಎಂಬುದು ಯಥಾ ಯೋಗ್ಯವಾಗಿದೆ.

ಶ್ರೀ ರಾಜಪುರೋಹಿತರ ಷಷ್ಟಿ ಪೂರ್ತಿ ಸಮಾರಂಭದಲ್ಲಿ ಅಂದಿನ ಗಣ್ಯರಾದ ರಾಮರಾವ ಹುಕ್ಕೇರಿ, ಅಲೂರ ವೆಂಕಟರಾಮ್, ಹೊರ್ಲಹಳ್ಳಿ, ವೆಂಕಟರಾವ್‌ ನಾಯಕ, ಸಣ್ಣಪ್ಪ ಗಾಂವಕರ, ಪಂಡಿತ ಕೇಶವಶರ್ಮಾ ಗಲಗಲಿ ಮತ್ತು ಆರ್‌. ಎಸ್‌. ಪಂಚಮುಖಿ ಅವರು ರಾಜಪುರೋಹಿತರ ವ್ಯಕ್ತಿತ್ವ ಮತ್ತು ಅವರ ಕಾರ್ಯದ ಬಗ್ಗೆ ಮಾತಾನಾಡಿದ್ದಾರೆ. ಪ್ರಶಂಸಾಪರ ಹಾಗೂ ಅವರ ಗುಣಗೌರವರದ ಮಾತುಗಳಾಗಿದ್ದರೂ, ಅದರಲ್ಲಿ ರಾಜಪುರೋಹಿತರ ವ್ಯಕ್ತಿತ್ವ ತೆರೆದಿಟ್ಟಿದೆ.

‘ಅವರು ಇತರ ದೇಶಗಳಲ್ಲಿ ಇದ್ದುದ್ದಾಗಿದ್ದರೆ, ತಮ್ಮ ಈ ಕಾರ್ಯದಲ್ಲಿ ಪಲ್ಲಕ್ಕಿಯಲ್ಲಿ ಮೆರೆಯಬಹುದಾಗಿತ್ತು. ಅವರ ವೆಚ್ಚವನ್ನು ಸರಕಾರವು ವಹಿಸಿ, ಅವರಿಂದ ಹೆಚ್ಚು ಕಾರ್ಯ ತೆಗೆದುಕೊಳ್ಳುವುದು ಜನತಾ ಸರಕಾರದ ಕರ್ತವ್ಯವಾಗಿದೆ. ಇನ್ನು ಸ್ಪಲ್ಪ ದಿನಗಳಲ್ಲಿ ಕರ್ನಾಟಕವು ಸ್ವತಂತ್ರವಾಗುವದು. ಆಗ ಶ್ರೀ ರಾಜಪುರೋಹಿತರಂಥವರಿಂದ ಹೆಚ್ಚಿನ ಕಾರ್ಯ ತೆಗೆದುಕೊಳ್ಳಬೇಕಾಗುವದು. ಅವರಿಗೆ ಕನ್ನಡಿಗರು ಸಹಾಯಮಾಡಬೇಕು.

ಶ್ರೀರಾಜಪುರೋಹಿತರು ಒಂದು ಮೂಲೆಯಲ್ಲಿ ಕುಳಿತು ಪರದೇಶಗಳಲ್ಲಿಯ ನಮ್ಮ ರಾಯಭಾರಿಗಳ ಸಮಾನವಾದ ಕಾರ್ಯ ಮಾಡಿದ್ದಾರೆ. ಕರ್ನಾಟಕವು ಅದನ್ನು ನೆನೆಯದ್ದಿದ್ದರೆ, ಕೃತಘ್ನತೆಯಾಗುವುದು ಎಂದು ಹೇಳಿದ್ದು ಅವರು ಮಾಡಿದ ಕಾರ್ಯದ ಮಹತ್ವವನ್ನು ಎತ್ತಿತೋರಿಸುತ್ತದೆ.

ರಾಜಪುರೋಹಿತರ ಜೀವನವು ಋಷಿ ಜೀವನವಿದ್ದು ಅವರ ಕಾರ್ಯದ ಜ್ಯೋತಿಯು ಬಹು ಪ್ರಕಾಶಮಾನವಿರುವದು. ಅವರ ಕಷ್ಟಗಳನ್ನು ನಾವು ನಿವಾರಿಸಬೇಕು. ಅವರನ್ನು ತೃಪ್ತಿ ಪಡಿಸಿದರೆ ಸಂಶೋಧನ ದೇವತೆಯನ್ನು ತೃಪ್ತಿ ಪಡಿಸಿದಂತಾಗುವುದು. ರಾಜಪುರೋಹಿತರು ಯಾವುದೇ ಜಾತಿ, ಪಂಥ ಮತಗಳ ಪಕ್ಷಪಾತಿಯಿರುವುದಿಲ್ಲ. ಅವರು ಮಾಡಿದ ಸಂಶೋಧನೆಯು ಉಚ್ಚಪ್ರತಿಯದಿರುವದು. ಇವರಂಥ ನಿಸ್ವಾರ್ಥಿಗಳು ಸಿಗುವುದು ವಿರಳ… ಇವರಿಗೆ ಎಲ್ಲ ಬಗೆಯ ಸಹಾಯ, ಮಾಡುವದಷ್ಟೇ ಅಲ್ಲದೆ ಕರ್ನಾಟಕ ಇತಿಹಾಸ ಮಂಡಲವನ್ನು ಇವರ ವಶಕ್ಕೆ ಕೊಟ್ಟು ಇವರನ್ನು ಪಟ್ಟಕ್ಕೆ ಕೂಡಿಸಬೇಕು… ಇತ್ಯಾದಿಯಾಗಿ ರಾಜಪುರೋಹಿತರ ಬಗ್ಗೆ ಗಣ್ಯರು ಅಂದು ಮಾತನಾಡಿದ್ದಾರೆ.[4] ಅವರ ಷಷ್ಟಿಪೂರ್ತಿ ಸಮಾರಂಭ ನಡೆದ ಐದನೆಯ ದಿನ ಭಾರತಕ್ಕೆ ಸ್ವಾತಂತ್ರ್ಯದೊರೆಯಿತು ಸ್ವತಂತ್ರ ಭಾರತದಲ್ಲೂ ಅವರಿಗೆ ಸಹಾಯ ದೊರೆತು ಸುಖದಿಂದ ನಾಲ್ಕು ದಿನ ಮನಸೋ ಇಚ್ಛೆ ಸಂಶೋಧನೆ ಬರವಣಿಗೆ ಮಾಡುವ ದಿನಗಳನ್ನು ಕಾಣದಿದ್ದುದು ದುರ್ದೈವ. ಕರ್ನಾಟಕ ಇತಿಹಾಸ ಸಂಶೋಧನ ಮಂಡಳವನ್ನು ಅವರ ವಶಕ್ಕೆ ಕೊಡುವ ಮಾತಂತೂ ದೂರ ಉಳಿಯಿತು. ಜೀವಮಾನವಿಡೀ ಅದಕ್ಕಾಗಿ ದುಡಿದ ವ್ಯಕ್ತಿಯ ಭಾವಚಿತ್ರವೂ ಅಲ್ಲಿ ಇಲ್ಲ. ಅನಂತರದ ದಿನಗಳಲ್ಲಿ ಅವರ ಮನೆಯವರು ಕೊಟ್ಟ ಆಲೂರ ವೆಂಕಟರಾಯರ ಮತ್ತು ನಾ ಶ್ರೀ ರಾಜಪುರೋಹಿತರ ಭಾವಚಿತ್ರವೂ ಇಲ್ಲ. ವಾಸ್ತವದಲ್ಲಿ ಅವರಿಬ್ಬರ ಕಂಚಿನ ಮೂರ್ತಿಗಳನ್ನು ಸ್ಥಾಪಿಸುವುದು ಕನ್ನಡಿಗರ ಕರ್ತವ್ಯವಾಗಿದೆ. ಇದ್ದಾಗ ನಾಡು ಅವರನ್ನು ಗುರುತಿಸಿತು. ಅನಂತರ ಮರೆತೂಬಿಟ್ಟಿತು!

 

[1] ಕರ್ತವ್ಯಾನಂದ ನಾ ಶ್ರೀ ರಾಜಪುರೋಹಿತರು ಪ್ರಸ್ತಾವನೆ

** ಅಧ್ಯಕ್ಷ ಭಾಷಣದ ಹಸ್ತಪ್ರತಿಯ ಮಾದರಿ ಪುಟ ಅನುಬಂದದಲ್ಲಿ ೩ ಕೊಟ್ಟಿದೆ.

[2] ತಾಯಿನಾಡು ದಿನಪ್ರತ್ರಿಕೆ ವರದಿ ಬೆಂಗಳೂರು ದಿ. ೨೦.೦೮.೧೯೩೭

[3] ಮಾನಪತ್ರದ ಪೂರ್ತಿ ಪಾಠ ಅನುಬಂಧ ೪ ರಲ್ಲಿದೆ.

[4] ಸಂಯುಕ್ತ ಕರ್ನಾಟಕ ದಿನಪ್ರತಿಕೆ ವರದಿ ದಿ. ೧೩.೦೮.೧೯೪೭