ಬದುಕಿನ ನಿರ್ಧಾರ

ಇತಿಹಾಸದಲ್ಲಿ ಹೊಸದನ್ನು ಕಂಡುಹಿಡಿಯುವುದರೊಂದಿಗೆ ಧರ್ಮ ತತ್ವಜ್ಞಾನಗಳ ಅಭ್ಯಾಸದಲ್ಲೂ ಹಿಂದೆ ಬೀಳಲಿಲ್ಲ. ಭಾರತೀಯರ ತತ್ವಜ್ಞಾನ, ಧರ್ಮ ಸಂಸ್ಕೃತಿಗಳನ್ನು ಅರಿಯಲು ಸಂಸ್ಕೃತ ಭಾಷೆಯ ಜ್ಞಾನ ಅಗತ್ಯವಾಗಿ ಬೇಕಷ್ಟೆ. ಅಂದಿನ ದಿನಗಳಲ್ಲಿ ಸಂಸ್ಕೃತ ಅಭ್ಯಾಸಕ್ಕಾಗಿ ತಾವಾಗಿಯೆ ರಾಜಪುರೋಹಿತರು ಕಾಶಿಗೆ ಹೋದರು. ಅಲ್ಲಿ ಒಂದೂವರೆ ವರುಷಕಾಲ ಇದ್ದು ಧರ್ಮಶಾಸ್ತ್ರ, ಮೀಮಾಂಸೆ, ವ್ಯಾಕರಣಗಳನ್ನು ಅಭ್ಯಸಿಸಿದರು. ತಿರುಗಿ ಬರುವಾಗ ಬಡೋದೆಯ ಗಾಯಕವಾಡ ಪ್ರಾಚ್ಯ ಗ್ರಂಥಾಲಯದಲ್ಲಿ ಎರಡು ಮೂರು ತಿಂಗಳುಗಳಷ್ಟು ಕಾಲ ಇದ್ದು ಅಲ್ಲಿಯ ಗ್ರಂಥಗಳ ಅಭ್ಯಾಸ ಮಾಡಿ, ಟಿಪ್ಪಣಿಗಳನ್ನು ಮಾಡಿಕೊಂಡು ೧೯೧೪ರಲ್ಲಿ ತಿರುಗಿ ಧಾರವಾಡಕ್ಕೆ ಬಂದರು. ನಶ್ರೀ ಈಗ ಪುಟಕ್ಕಿಟ್ಟ ಚಿನ್ನದಂತಾಗಿದ್ದರು.

ಕ್ರಿ. ಶ. ೧೯೧೪, ರಾಜಪುರೋಹಿತರ ಬದುಕಿನಲ್ಲಿ ಒಂದು ಮಹತ್ವರ ವರುಷ. ತಮ್ಮ ಮುಂದಿನ ಜೀವನದ ಬಗ್ಗೆ ಒಂದು ಖಚಿತ ನಿರ್ಧಾರವನ್ನು ತೆಗೆದುಕೊಂಡ ವರುಷ ಅದು. ಇನ್ನೊಂದು ದೃಷ್ಟಿಯಲ್ಲಿ ರಾಜಪುರೋಹಿತರು ೧೯೧೪ರಿಂದ ತಮ್ಮ ದಿನಚರಿಯನ್ನು ಬರೆದಿಡಲು ಪ್ರಾರಂಭಿಸಿದರು. ಮುಂದೆ ಸುಮಾರು ೪೦ ವರುಷಗಳವರೆಗೆ ಅಂದರೆ ೧೯೫೩ ಆಗಸ್ಟ್‌ ೨೪ ರಂದು ಅವರು ತೀರಿಕೊಳ್ಳುವ ೧೫ ದಿನಗಳ ಮೊದಲು ೦೭.೦೮.೧೯೫೩ ರವರೆಗೆ ದಿನಚರಿಯನ್ನು ಬರೆದಿಟ್ಟಿದ್ದಾರೆ. ಕನ್ನಡದ ಬಹುಶಃ ಯಾವ ಬರಹಗಾರರೂ ಇಷ್ಟೊಂದು ದೀರ್ಘ ಅವಧಿಯವರೆಗೆ ದಿನಚರಿಯನ್ನು ಬರೆದಿಟ್ಟ ಉದಾಹರಣೆಗಳು ಈವರೆಗೆ ಕಂಡು ಬಂದಿಲ್ಲ. ೪೦ ವರುಷಗಳಲ್ಲಿ ೩೫ ವರುಷಗಳ ದಿನಚರಿ ಪುಸ್ತಕಗಳು ಪ್ರಸ್ತುತ ಲಭ್ಯ ಇವೆ. ಕಳೆದ ೫೦ ವರುಷಗಳಲ್ಲಿ ೫ ದಿನಚರಿಗಳು ಅಲ್ಲಲ್ಲಿ ಚದುರಿಹೋಗಿವೆ.

[1]

ಅವರಿಗೆ ಆಗ ೨೭ ವರುಷ, ಸಂಸ್ಕೃತ ಅಭ್ಯಾಸ ಧರ್ಮಶಾಸ್ತ್ರಗಳನ್ನು, ತತ್ವಜ್ಞಾನಗಳನ್ನು ಆಳವಾಗಿ ಅಭ್ಯಾಸ ಮಾಡಿದುದರಿಂದ ಒಂದೊಮ್ಮೆ ಅವರನ್ನು ಸನ್ಯಾಸಾಶ್ರಮಕ್ಕೆ ಎಳೆಯಿತೆಂದು ಕಾಣುತ್ತದೆ.

೧೯೧೪ ಮಾರ್ಚ್‌ ೭ ರಂದು ತಮ್ಮ ದಿನಚರಿಯನ್ನು ಬರೆಯುತ್ತ ಕೊನೆಗೆ ಹೀಗೆ ಹೇಳಿದ್ದಾರೆ.

“ನಾನು ಸಂನ್ಯಾಸವನ್ನು ಸ್ವೀಕರಿಸಬೇಕೋ, ಗೃಹಸ್ಥಾಶ್ರಮ ಸ್ವೀಕರಿಸಬೇಕೋ, ಎಂಬ ವಿಷಯವಾಗಿ ಈ ದಿವಸ ರಾತ್ರಿ ೧೨ ಹೊಡೆಯುವ ತನಕ ವಿಚಾರಿಸಿದೆನು. ಆದರೆ ಕೊನೆಗೆ ಹೀಗೆ ನಿರ್ಣಯವಾಯಿತು. ಜೇಷ್ಠ ಮಾಸದ ಅಖೈರಕ್ಕೆ (೧೯೧೪ ಜೂನ್೨೨ ತಾರೀಖಿನೊಳಗೆ) ಒಂದು ಆಶ್ರಮವನ್ನು ನಿರ್ಣಯಿಸಿ ಬಿಡುತ್ತೇನೆ.” ಎಂದಿದ್ದಾರೆ.

ಮದುವೆಯಾಗದ ೨೭ ವರುಷದ ತರುಣ ರಾಜಪುರೋಹಿತರು ಆಗಲೇ ಕರ್ನಾಟಕ ಮಹಾರಾಷ್ಟ್ರಗಳಲ್ಲಿ ಪರಿಚಿತರಾಗಿದ್ದರು. ಅಭ್ಯಾಸದ ಪ್ರವೃತ್ತಿ ಬರೆಯುವ ಅಭಿರುಚಿ ಇದ್ದ ನಾಶ್ರೀ ರಾಜಪುರೋಹಿತರು ಹೀಗೇಕೆ ವಿಚಾರಿಸುತ್ತಿದ್ದರು ಎನ್ನಲು ಕಾರಣಗಳು ಸಿಗುತ್ತಿಲ್ಲ. ೧೯೧೪ ರ ಮೊದಲಿನ ದಿನಚರಿಗಳು ಇದ್ದರೆ ಕಿಂಚಿತ್‌ ಊಹಿಸಬಹುದೇನೋ. ಆದರೂ ಅವರ ಮನೆತನ ಹಾಗೂ ನಡೆದುಬಂದ ದಾರಿಯನ್ನು ಲಕ್ಷಿಸಿದರೆ ಇದಕ್ಕೆ ಉತ್ತರ ದೊರೆಯಬಹುದೇನೋ.

ರಾಜಪುರೋಹಿತರ ಮನೆತವು ಮೂಲತಃ ಮಾಧ್ವ ಸಂಪ್ರದಾಯದ ಕಾಣ್ವ ಬ್ರಾಹ್ಮಾಣರ ಮನೆತವು. ಬಾಲ್ಯದಲ್ಲಿಯೆ ತಂದೆತಾಯಿಗಳನ್ನು ಕಳೆದುಕೊಂಡ ನಾರಾಯಣಾಚಾರ್ಯರು ಎಲ್ಲಿ ಹೇಗೆ ಬೆಳೆದರು ಎಂಬುದಕ್ಕೂ ಖಚಿತ ದಾಖಲೆಗಳಿಲ್ಲ. ಅಂತು ಅಗಡಿ ಹಾವೇರಿಗಳಲ್ಲಿ ಕಲಿತು ಪ್ರೌಢ ಅವಸ್ಥೆಗೆ ಬರುವ ಹೊತ್ತಿಗೆ ಅವರಲ್ಲಿ ಸ್ವತಂತ್ರ ಪ್ರವೃತ್ತಿ ಬೆಳೆದುಬಿಟ್ಟಿತ್ತು. ಅಂತೆಯೇ ನೌಕರಿ ಹೋದಾಗ ಸ್ವಯಂ ನಿರ್ಧಾರದಿಂದ ಸಂಸ್ಕೃತ ಕಲಿಯಲು ಕಾಶಿಗೆ ಹೋಗಿಬಿಟ್ಟರು. ಅಲ್ಲಿ ಎಲ್ಲಿದ್ದರು ಯಾರ ಹತ್ತಿರ ಕಲಿತರು ಎಂಬ ಬಗ್ಗೆಯೂ ವಿವರಗಳಿಲ್ಲ. ದಾರಿಯಲ್ಲಿ ಬರುವಾಗ ಬಡೋದೆಯ ಗ್ರಂಥಾಲಯದಲ್ಲಿ ಒಳ್ಳೆಯ ಪುಸ್ತಕಗಳಿವೆ ಎಂದು ಬಡೋದಗೆ ಹೋದರು. ೧೯೧೪ ರಲ್ಲಿ ಜನವರಿ ೧ನೆಯ ತಾರೀಖಿನ ದಿನಚರಿಯಲ್ಲಿ ಹೀಗೆ ಉಲ್ಲೇಖಿಸಿದ್ದಾರೆ.

“ಬಡೋದೆಯಲ್ಲಿ ಸೆಂಟ್ರಲ್ಲಾಯಬ್ರರಿಯಲ್ಲಿ ಓದುವುದಕ್ಕೆ ಆರಂಭಿಸಿದ್ದು ವಾಚನವು ಚೆನ್ನಾಗಿ ಸಾಗಿದೆ.”

ಮುಂದೆ ಫೆಬ್ರುವರಿ ೨೩ ರವರೆಗೆ ತಾವು ಇದ್ದ ಬಡೋದೆಯ ಉಲ್ಲೇಖವನ್ನು ಬಿಟ್ಟು ಇನ್ನೇನನ್ನೂ ಬರೆದಿಲ್ಲ. ಫೆಬ್ರುವರಿ ೨೩ ರ ದಿನಚರಿಯಲ್ಲಿ

“ಪ್ಯಾಸೆಂಜರ್ಗಾಡಿಗೆ ಪ್ರಾತಃಕಾಲಕ್ಕೆ ಧಾರವಾಡಕ್ಕೆ ಬಂದೆನು

ಎಂದಷ್ಟೆ ಬರೆದಿದ್ದಾರೆ.

ಅನಂತರ ಮಾರ್ಚ್‌ ೭ರಂದು ಸಂನ್ಯಾಸ / ಗೃಹಸ್ಥಾಶ್ರಮದ ಉಲ್ಲೇಖ ಬಂದಿದೆ. ಆ ದಿನಗಳಲ್ಲಿ ಅವರು ವಿಠಲಭಕ್ತಿಯ ಇತಿಹಾಸವನ್ನು ಬರೆಯುತ್ತಿದ್ದರು ಮರುದಿನದ ಮರುದಿನ ಅಂದರೆ ಮಾರ್ಚ್‌ ೯ರಂದು ದಿನನಿತ್ಯದ ವಿವರಗಳನ್ನು ಬರೆದು ಅನಂತರ ಕೊನೆಯಲ್ಲಿ

“ಸರ್ವ ಆಶೆಗಳನ್ನು ತೊರೆದು ಜಗಜ್ಜನನಿಯ ಮೇಲೆ ವಿಶ್ವಾಸವನ್ನಿಟ್ಟು ಕಾರ್ಯಕ್ಕೆ ಆರಂಭಿಸಿದರೆ ನಿಶ್ಚಯವಾಗಿ ಜಯವು ಸಿಗುವುದು. ಜಗಜ್ಜನನಿಯ ಕೃಪಾ ಮಹಿಮೆಯನ್ನು ನನ್ನಲ್ಲಿ ಶಕ್ತಿ ಇಲ್ಲ”

ಎಂದು ಬರೆದಿದ್ದಾರೆ.

ಮಾಧ್ವ ಸಂಪ್ರದಾಯದ, ಧರ್ಮಶಾಸ್ತ್ರಗಳನ್ನು ಓದಿದ ನಾಶ್ರೀ ಅವರಿಗೆ ಈ ‘ಜಗಜ್ಜನನಿಯ’ ಹುಚ್ಚು ಎಂದಿನಿಂದ ಪ್ರಾರಂಭವಾಯಿತು? ಎಂಬುದನ್ನು ಖಚಿತವಾಗಿ ಹೇಳುವುದು ಸಾಧ್ಯವಿಲ್ಲವಾದರೂ ಅವರ ಕಾಶೀ ಯಾತ್ರೆ, ಅಲ್ಲಿಯ ಅಭ್ಯಾಸ ಬಹುಶಃ ಅವರನ್ನು ಶಕ್ತಿದೇವತೆಯ ಉಪಾಸಕರನ್ನಾಗಿ ಮಾಡಿರಬೇಕು. ಮುಂದೆ ಬಹುದಿನಗಳವರೆಗೆ ಈ ಜಗಜ್ಜನನಿಯ ಪ್ರಸ್ತಾಪವು ಅವರ ದಿನಚರಿಯಲ್ಲಿ ಕಾಣಸಿಗುತ್ತದೆ. ಮಾರ್ಚ್‌ ೧೭ರ ದಿನಚರಿಯಲ್ಲಿ

“ಇವತ್ತಿನ ದಿವಸ ಮನಸ್ಸು ಉದ್ವಿಗ್ನವಾಗಿತ್ತು. ಯಾಕೆಂದರೆ, ನನ್ನ ಮನಸ್ಸಿನಂತ ಧ್ಯೇಯವು ಸಿಕ್ಕಿಲ್ಲ. ಸಿಗವಲ್ಲದು. ಏಪ್ರಿಲ್ತಿಂಗಳ ಅಖೈರಕ್ಕೆ ನಾನು ಅಗಡಿಯಿಂದ ಧಾರವಾಡಕ್ಕೆ ಬರುತ್ತೇನೆ. ಆಗ ನನ್ನ ಆಯುಷ್ಯಕ್ಕೆ ನಿಶ್ಚಿತ ಸ್ವರೂಪ ಬರದಿದ್ದರೆ, ಸೆಪ್ಟೆಂಬರ್ತಿಂಗಳತನಕ ದಾರಿ ಕಾಯಬೇಕು. ಸೆಪ್ಟೆಂಬರ್ತಿಂಗಳಲ್ಲಿಯೂ ಬರದಿದ್ದರೆ, ಜನವರಿ ಪರ್ಯಂತ ಹಾದಿ ಕಾಯಬೇಕು. ಆಗೂ ಬರದಿದ್ದರೆ ಜೂನ್ತಿಂಗಳತನಕ ಹಾದಿ ಕಾಯಬೇಕು. ನಂತರ ತಿಲಮಾತ್ರವೂ ವಿಚಾರ ಮಾಡದೇ ಸನ್ಯಾಸಾಶ್ರಮವನ್ನು ಸ್ವೀಕರಿಸಬೇಕು. ನಿನ್ನೆ ಕೇವಲ ವಿಠಲಭಕ್ತಿಯ ಇತಿಹಾಸವನ್ನು ಬರೆಯುವುದರಲ್ಲಿಯೇ ವೇಳೆ ಹೋಯಿತು. (ಧಾರವಾಡ)”

ಅಂತು ೧೫ ತಿಂಗಳ ಗಡುವು ನೀಡಿದ್ದಾರೆ. ಸನ್ಯಾಸಾಶ್ರಮ ಸ್ವೀಕರಿಸಲಿಕ್ಕೆ, ಆದರೆ ಯಾವುದರ ದಾರಿ ಕಾಯುತ್ತಿದ್ದರೆಂಬುದು ಗೊತ್ತಾಗುವುದಿಲ್ಲ. ಮರುದಿನ ಅಂದರೆ ೧೮.೦೩.೧೯೯೪ರ ದಿನಚರಿಯಲ್ಲಿ ಈ ಕೋಷ್ಟಕ ಇದೆ.

ಸಾಮಾಜಿಕ + ರಾಜಕೀಯ + ಧಾರ್ಮಿಕ
ಗೃಹಸ್ಥ + ವಾನಪ್ರಸ್ಥ + ಸನ್ಯಾಸ
ಚಂಚಲ + ಚಂಚಲ + ಧ್ಯೇಯನಿಶ್ಚಿತ

ಹಾದೀಕಾಯು ಹಾದೀಕಾಯು ಹಾದೀಕಾಯುವ ಕಾರಣವಿಲ ದೈವಿಕ ದೈವಿಕ ಮಾನವೀ

‘ನನ್ನ ವಯಸ್ಸಿನ ೩೦ನೆಯ ವರುಷದ ತನಕ (೧೯೧೭ ಜನವರಿ ಪರ್ಯಂತ) ನನ್ನ ಆಯುಷ್ಯವು ಚಂಚಲ’ ಎಂಬುದಾಗಿ ನಮೂದಿಸಿದ್ದನ್ನು ಗಮನಿಸಿದರೆ ಅವರಿಗೆ ಜ್ಯೋತಿಷ್ಯದಲ್ಲೂ ಗತಿ ಇತ್ತು ಎಂದು ಕಾಣುತ್ತದೆ.

ಗೃಹಸ್ಥ ಸನ್ಯಾಸ ಆಶ್ರಮಗಳಲ್ಲಿ ಒಂದನ್ನು ನಿರ್ಧರಿಸಲು ೧೫ ತಿಂಗಳು ಗಡುವು ನೀಡಿದ್ದರೂ ವರ್ಷಾಂತ್ಯದಲ್ಲಿ ಅವರು ಗೃಸ್ಥಾಶ್ರಮಿಗಳಾದರು. ನೆಗವಾಡಿಯ ಶಾನುಭೋಗರ ಮಗಳು ನಾಗೂಬಾಯಿಯೊಂದಿಗೆ ಅವರ ಮದುವೆಯಾಯಿತು. ಆದರೆ ಅಲ್ಲಿಯವರೆಗೆ ಅವರ ತೊಳಾಲಟ ನಡೆದಿದ್ದುದ್ದು ಅವರ ದಿನಚರಿಯ ಪುಟಗಳು ಹೇಳುತ್ತವೆ. ಏಪ್ರಿಲ್‌ ೭ರ ದಿನಚರಿಯಲ್ಲಿ

“ಇವತ್ತಿನ ದಿವಸ ನನ್ನ ವಿವಾಹದ ವಿಷಯವಾಗಿ ಪುನಃ ಇಲ್ಲಿ ವಿಚಾರವು ಪ್ರಾರಂಭವಾಗಿದೆ. ಮುಂದೆ ಏನೇನು ಆಗುತ್ತದೋ ನೋಡಬೇಕು. ಸಧ್ಯಕ್ಕೆ ಸಂಕ್ರಮಣ ಕಾಲವು ಒದಗಿರುತ್ತದೆ. ಈ ಸ್ಥಿತಿಯು ಬಹು ತ್ರಾಸದಾಯಕವಿರುತ್ತದೆ. ಗ್ರಹಸ್ಥ, ವಾನಪ್ರಸ್ಥ ಸನ್ಯಾಸ? ನನ್ನ ಆಯುಷ್ಯಕ್ಕೆ ಧ್ಯೇಯ ಸಿಕ್ಕರೆ ಸಾಕು, ಓ ಜಗಜ್ಜನನಿಯೇ ನನ್ನ ಅಯುಷ್ಯಕ್ಕೆ ಒಂದು ಧ್ಯೇಯವನ್ನು ಕೊಟ್ಟುಬಿಟ್ಟರೆ ಸಾಕು ಸಾಕಾಗಿದೆ. ನನಗೆ ಸುಖದ ಅಕಾಂಕ್ಷೆಯಿಲ್ಲ. ಧ್ಯೇಯದ ಅಪೇಕ್ಷೆಯಿದೆ. ಸಹಜ ಕರ್ಮ ಯಾವುದು?” ಎಂದಿದ್ದಾರೆ.

ಮುಂದಿನ ಮೂರು ತಿಂಗಳು ಪ್ರತಿದಿನ ದಿನಚರಿಯ ಮೊಟ್ಟಮೊದಲಿಗೆ ‘ಸಹಜ ಕರ್ಮ ಯಾವುದು? ‘ ಎಂದು ನಮೂದಿಸಿಯೇ ದಿನಚರಿಯನ್ನು ಬರೆಯಲು ಉಪಕ್ರಮಿಸಿದ್ದಾರೆ. ತಂದೆತಾಯಿ ಇಲ್ಲದ ರಾಜಪುರೋಹಿತರಿಗೆ ಆ ದಿನಗಳಲ್ಲಿ ಇಂಥ ವಿಷಯಗಳಲ್ಲಿ ಜವಾಬ್ದಾರಿಯಿಂದ ಸೂಚಿಸುವ ಯಾರೂ ಇದ್ದಿಲ್ಲವೆಂದು ಕಾಣುತ್ತದೆ. ಮದುವೆಯಂಥ ವಿಷಯಗಳಲ್ಲಿ ಹಿರಿಯರ ಮಧ್ಯಸ್ಥಿಕೆ, ಖಚಿತ ನಿರ್ಧಾರಗಳ ಆಗತ್ಯ ಇವುಗಳಿಲ್ಲದ್ದರಿಂದ ಅವರ ತೋಳಲಾಟ ಮುಂದುವರೆದಿದೆ. ‘ವಾನಪ್ರಸ್ಥ ಆಶ್ರಮವು’ ಸಾಕಾಗಿದೆ ಎಂದು ಅನೇಕ ಬಾರಿ ಬರೆದಿದ್ದಾರೆ. ಒಬ್ಬಂಟಿ ಜೀವನ ಅವರಿಗೆ ಸಾಕಾಗಿತ್ತು. ಅದರ ಅರ್ಥ ಮದುವೆ ಬೇಕೆ ಬೇಕು ಎಂಬುದೂ ಆಗಿರಲಿಲ್ಲ. ದೂರದ ಸಂಬಂಧಿಕರು ಮತ್ತು ಅವರ ಕುರಿತು ಚಿಂತಿಸುವ ವ್ಯಕ್ತಿ ಇರದಿದ್ದಾಗ ಸಮಾಜದ ಮಧ್ಯ ಜೀವಿಸುವ ಪ್ರಜ್ಞಾವಂತ ವ್ಯಕ್ತಿಗೆ ತಕ್ಷಣ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಾರದು ಎಂಬುದನ್ನೆ ಇದು ತೋರಿಸುತ್ತದೆ. ಮೆ. ೨೩ರ ಅವರ ದಿನಚರಿಯಲ್ಲಿಯ ಉಲ್ಲೇಖ ಹೀಗಿದೆ.

ಸಹಜ ಕರ್ಮವು ಯಾವುದು? ಎಂದು ಪ್ರಶ್ನಸಿ ಅನಂತರ “ಇವತ್ತಿನ ಪ್ರಾತಃಕಾಲಕ್ಕೆ ಸ್ನಾನಮಾಡಿ ಬೆಲ್ಲಾಹಿಟ್ಟು ತಿಂದು ಕನವಳ್ಳಿಗೆ ಬಂದೆನು….. ಸೋಮಪ್ಪ ಕುಲಕರ್ಣಿ ಇವರ ಮನೆಯಲ್ಲಿ ಲಗ್ನದ ಊಟ ತೀರಿಸಿಕೊಂಡು ವಿಶ್ರಮಿಸಿದೆನು. ಜನರ ಸ್ವಾಭಾವವು ಎಷ್ಟು ಹೀನತರದ್ದು ಇರುತ್ತದೆ. (ಕಾ. ಸು.)

ಸಾಧುವರ್ಯ ಸಾಕ್ರೇಟೀಸನು ಪ್ರಾರ್ಥಿಸಿದಂತೆ, ನನಗೆ ಯಾವುದು ಹಿತವಾಗುವುದೋ ಅದನ್ನು ನೀನೇ ನಿರ್ಣಿಯಿಸಿಕೊಂಡು ಜಗಜ್ಜನನಿಯಾ ಕೃಪೆಯು ನನ್ನ ಮೇಲೆ ಇದ್ದುದರಿಂದಲೇ ನನ್ನ ಸ್ಥಿತಿಯು ಇಷ್ಟು ಉತ್ತಮವಾಗಿದೆ” ಎಂದಿದ್ದಾರೆ.

ಈ ದಿನಗಳಲ್ಲಿಯೇ ನೆಗವಾಡಿಯ ಕನ್ಯೆಯ ಪ್ರಸ್ತಾಪ ಬಂದಂತೆ ಕಾಣುತ್ತದೆ ಜೂನ್೪ರ ದಿನಚರಿಯಲ್ಲಿ.

“ಜಗಜ್ಜನನಿಯ ಇಚ್ಛಾ ಪ್ರಕಾರ ನಾನು ನೆಗವಾಡಿ ಕನ್ಯಾದಂಥ ಸರ್ವದೃಷ್ಟಿಯಿಂದ ಹಿತಕರವಾದಂಥ ವಧು ದೊರಕಿದರೆ ಮಾತ್ರ ವಿವಾಹಕಾರ್ಯ, ಇಲ್ಲದಿದ್ದರೆ ಇಲ್ಲ” ಎಂದು

ಬರೆದಿದ್ದಾರೆ. ಅದರ ಅರ್ಥ ಅಷ್ಟು ಹೊತ್ತಿಗೆ ಕನ್ಯೆಯನ್ನು ನೋಡಿದ್ದರು ಎಂತಲ್ಲ. ಮುಂದೆ ಹತ್ತುದಿನಗಳ ಮೇಲೆ ಜೂನ್‌ ೧೫ರಂದು ಕನ್ಯಾದರ್ಶನಕ್ಕಾಗಿ ನೆಗವಾಡಿಗೆ ಹೋದ ಉಲ್ಲೇಖವಿದೆ. ಹಾಗೆ ನೋಡಿದರೆ ನೆಗವಾಡಿ ಕನ್ಯೆಯೂ, ಒಂದು ರೀತಿಯಲ್ಲಿ ಅನಾಥಳೇ. ಶ್ರೀಮಂತ ಶಾನುಬೋಗರ ಮನೆತನವಾಗಿದ್ದರೂ ತಂದೆ ತಾಯಿ ಇರಲಿಲ್ಲ. ತಾಯಿಯ ತಾಯಿ ಹಾಗೂ ದೊಡ್ದಮ್ಮ ಮನೆಯನ್ನು ನೋಡಿಕೊಳ್ಳುತ್ತಿದ್ದರು. ೧೦ ವರುಷದ ಕನ್ಯೆಗೆ ೬ ವರುಷದ ಒಬ್ಬ ತಮ್ಮನಿದ್ದ. ಆತನೆ ಯಜಮಾನ ಶಾನುಭೋಗ ಮಧ್ವರಾಯ. ಈ ದಿನಗಳಲ್ಲಿ ಆರ್. ಜಿ. ಭಾಂಡಾರಕಾರರ ಶೈವಿಜಂ ವೈಷ್ಣವಿಜಂ ಅಭ್ಯಾಸ ನಡೆದಿತ್ತು. ಟಾಲೆಮಿಯ ಭೂಗೋಳದಲ್ಲಿ ಬರುವ ಬದಿಯಾಮೆಯಿ (ಬದಾಮಿ) ಇಂಡಿ (ಇಂಡಿ), ಕಲ್ಲಿಗೇರಿ (ಕಲಗೇರಿ) ಮೊದೊಗುಲ್ಲ (ಮುದಗಲ್ಲ) ಪೆತಿರಗಲ್ಲ (ಪಟ್ಟದಕಲ್ಲು) ತಗರ (ಕೊಲ್ಲಾಪುರ) ಇತ್ಯಾದಿಗಳ ಉಲೇಖ ಜುಲೈ ಏಳರ ದಿನಚರಿಯಲ್ಲಿದೆ. ಈ ಹೊತ್ತಿಗೆ ಅವರ ‘ಪಂಢರಪುರ ವಿಠಲಭಕ್ತಿ’ ಎಂಬ ಮರಾಠಿ ಲೇಖನವು ಕೇಸರಿಯಲ್ಲಿ ಪ್ರಕಟವಾಗಿತ್ತು. ‘ಇದರಿಂದ ಕೇಸರಿಕಾರರು ಉದಾರ ಮತವಾದಿಗಳಿದ್ದಾರೆಂದು ವ್ಯಕ್ತ ವಾಗುತ್ತದೆ’ ಎಂದು ಜುಲೈ ೨೨ರಂದು ಉಲ್ಲೇಖಿಸಿದ್ದಾರೆ.

ಆಗಸ್ಟ್‌ ೯, ೧೯೧೪ ಭಾನುವಾರ ದಿನಚರಿಯಲ್ಲಿಯ ಉಲ್ಲೇಖಗಳು ಅವರ ಮುಂದಿನ ಬದುಕಿನ ಆಶಯಗಳನ್ನು ತಿಳಿಸುತ್ತವೆ. ಆಗಿನ್ನೂ ಮದುವೆಯಾಗಿರಲಿಲ್ಲ. ನೆಗವಾಡಿಯ ಕನ್ಯೆಯ ನಿಶ್ಚಯವಾಗಿರಲು ಸಾಕು.

“ಜನನಿಯ ಕೃಪೆಯಿಂದ ನನಗೆ ದೊರೆಯತಕ್ಕ ವರಗಳು” ಎಂದು ಪ್ರಾರಂಭಿಸಿ ಒಂದೊಂದಾಗಿ ೧೨ ವರಗಳ ಪಟ್ಟಿಯನ್ನು ನೀಡಿದ್ದಾರೆ.

. ಪಂಚದ್ರಾವಿಡರ ಪೈಕಿ ಭಗತ್ಪಾದರು ಆಗಬೇಕು.

. ಉತ್ತರಾದಿ ಮಠದಲ್ಲಿ ಒಬ್ಬ ಕಾಣ್ವಗುರುಗಳು ಬೇಕು.

. ಸವೋತ್ಕೃಷ್ಟ ಸಾಂಪತ್ತಿಕ ಸ್ಥಿತಿಯು ಬೇಕು.

. ಅರ್ಧಾಂಗವಾಯುವಿನ ನಾಶಕ್ಕೆ ರಾಮಬಾಣ ಉಪಾಯವು ನನಗೆ ಸಿಗಬೇಕು. ಅಥವಾ ದ್ರವ್ಯೋತ್ಪಾದಕ ವೈದ್ಯಕೀ ಕಾರ್ಯದ ಶೋಧವು ನನಗೆ ಆಗಬೇಕು.

. ಗೋದಾವರಿ ಕೃಷ್ಣಾಗಳ ಮದ್ಯಪ್ರದೇಶದಲ್ಲಿ ಕನ್ನಡ ಪ್ರಾಚೀನ ಪುಸ್ತಕಾಲಯ, ಶಿಲಾಲೇಖಗಳು ದೊರೆಯುವ ಶೋಧವು ನನಗೆ ಆಗಬೇಕು.

. ದು. ನಿ. (ದುಷ್ಟ ನಿಗ್ರಹ?) ಮಾಡುವ ಭಯಂಕರ ಶಕ್ತಿಯ ಶೋಧವು ನನಗೆ ಅಗಬೇಕು. ತಾಡವಾಳ ಗ್ರಂಥಗಳು ಸಿಗಬೇಕು.

. ಸಂ. (ಸಂಸ್ಕೃತ?) ಅಧ್ಯಯನವಾಗಿ ಪ್ರವೀಣನಾಗಬೇಕು.

. ಶರೀರ ಕಾಂತಿ, ತೇಜಸ್ಸುಗಳಿಂದ ಪ್ರಬಲನಾಗಬೇಕು.

. ಮೈಸೂರು ಶೋಧವಾಗಬೇಕು.

೧೦. ಮನೆ ಹೊಲ ಸಾಮಾನು, ಹೆಂ. ಆ, ಉತಾರು (?) ಸಿದ್ಧವಾಗಬೇಕು.

೧೧. ಇಂಗ್ಲಿಷ್‌ ಮರಾಠಿ ಹಿಂದುಸ್ತಾನಿ ಭಾಷೆಗಳ ಪ್ರಾವಿಣ್ಯ.

೧೨. ನಮ್ಮ ಫ…. ಯ…ಗ… ಚಾಳರ ನಾಶ (ಸ್ಪಷ್ಟವಾಗಿಲ್ಲ.)

ಇದು ಬಹುಶಃ ನಾಶ್ರೀ ರಾಜಪುರೋಹಿತರ ಸಮಗ್ರ ಜೀವನದ ಚಿತ್ರವನ್ನು ನೀಡುತ್ತದೆ ಸಾಯುವುದಕ್ಕಿಂತ ಸುಮಾರು ೪೦ ವರುಷಗಳ ಮುನ್ನ ಅವಿವಾಹಿತ ರಾಜಪುರೋಹಿತರು ಬಯಸಿದ ವರಗಳಿವು. ಅವುಗಳಲ್ಲಿ ಸಾಂಪತ್ತಿಕ ಸ್ಥಿತಿಯ ಉತ್ಕರ್ಷ ಬಿಟ್ಟರೆ ಬಹುತೇಕ ವರಗಳ ಸಿದ್ಧಿಯನ್ನು ತಮ್ಮ ಜಿವಿತಕಾದಲ್ಲಿ ಮಾಡಿಕೊಂಡಿದ್ದಾರೆ. ಅರ್ಧಾಂಗವಾಯುವಿನ ಕುರಿತು ಅದೇಕೆ ಅಂಥ ವರವನ್ನು ಬಯಸಿದರು ಎಂಬುದಕ್ಕೆ ಕಾರಣಗಳು ದೊರೆಯುತ್ತಿಲ್ಲವಾದರೂ ಬಹುಶಃ ಅವರು ಆ ಬೇನೆಯ ಅಸಹನೀಯ ದೃಶ್ಯಗಳನ್ನು ಮನೆಯಲ್ಲಿ, ಮನೆಯ ಹೊರಗೆ ನೋಡಿ ಆ ರೀತಿಯ ವರವನ್ನು ಅಪೇಕ್ಷಿಸಿರ ಬೇಕು. ಅದಂತೆ ಪಂಚದ್ರಾವಿಡರ ಪೈಕಿ ಭಗವತ್ಪಾದರು ಮತ್ತು ಉತ್ತರಾದಿ ಮಠದಲ್ಲಿ ಕಾಣ್ವ ಗುರುಗಳು ಬೇಕು ಎಂಬ ವರಗಳೂ ವಿಚಿತ್ರವಾಗಿವೆ.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ನೆಗವಾಡಿಯ ನಾಗೂಬಾಯಿಯನ್ನು ಕೈಹಿಡಿದ ಮೇಲೆ ರಾಜಪುರೋಹಿತರು ಮುಂದಿನ ಎರಡು ಮೂರು ವರುಷ ಮನೆಯ ಅಳಿಯನಾಗಿ ನೆಗವಾಡಿಯಲ್ಲೆ ನೆಲೆ ನಿಂತರು. ಈ ಮೊದಲೆ ಹೇಳಿದಂತೆ ಅಲ್ಲಿ ಹಿರಿಯರೆನ್ನುವ ಯಾವ ಗಡಾಸೂ ಮನೆಯಲ್ಲಿರಲಿಲ್ಲ. ‘ಮನೆ ಅಳಿಯನಾಗಿರಬೇಕು’ ಎಂಬ ಕರಾರಿನಿಂದಲೇ ಈ ಮದುವೆಯ ನಿಶ್ಚಿತಾರ್ಥವಾಗಿತ್ತೆಂದು ಅವರ ಕಿರಿಯ ಮಗಳು ಶ್ರೀಮತಿ ಸರೋಜಿನಿ ಅವರು ಹೆಳುವಲ್ಲಿ ಅರ್ಥವಿದೆ ಎನಿಸುತ್ತದೆ.[2] ಈಗ ಓದು ಬರೆಹ ಕಲಿತಿರದ ೧೦ ವರುಷದ ನಾಗೂಬಾಯಿ ಮತ್ತು ಅವರ ಮನೆತನವು ರಾಜಪುರೋಹಿತರಿಗೆ ಹಿತವನ್ನುಂಟು ಮಾಡಿರಬೇಕು. ತಿಳುವಳಿಕೆ ಬಂದಾಗಿನಿಂದ ಈ ೨೭ ವರುಷಗಳಲ್ಲಿ ತಮ್ಮದೆನ್ನುವ ಮನೆ, ಊರು ನಿಶ್ಚಿತವಾಗಿರದಿದ್ದಾಗ ನೆಗವಾಡಿಯ ವಾಸ್ತವ್ಯ ಅವರಿಗೆ ತಕ್ಷಣ ಖುಷಿ ತಂದಿದ್ದರೆ ಆಶ್ಚರ್ಯವೇನೂ ಇಲ್ಲ. ಮುಂದೆ ಅಲ್ಲಿಯೇ ಕೆಲಕಾಲ ಆ ಗ್ರಾಮದ ಶಾನುಬೋಗರೂ ಆಗಿದ್ದರೆಂದು ಹೇಳುತ್ತಾರೆ. ಗಂಡಹೆಂಡತಿ ಮಧ್ಯ ೧೭ ವರುಷಗಳ ಅಂತರವಿದೆ.

ನೆಗವಾಡಿಯಲ್ಲಿದ್ದಾಗಲೆ ಕೆಲಕಾಲ ಅವರು ಮೈಸೂರು ಸಂಸ್ಥಾನದ ‘ಸಂಚಾರೀ ಭಾಷಣಕಾರ’ ಎಂಬ ನೌಕರಿಯನ್ನು ಮಾಡಿದರು. ಅವರಿಗೆ ಇಂಥ ನೌಕರಿ ದೊರಕಿದ್ದು ಒಂದು ವಿಶೇಷ ಘಟನೆಯಿಂದಾಗಿದೆ. ಆದಾಗಲೇ ಅವರು ಕರ್ನಾಟಕದ ಇತಿಹಾಸ, ಸಂಸ್ಕೃತಿಗಳ ಬಗ್ಗೆ ಸಾಕಷ್ಟು ಅಭ್ಯಾಸ ಮಾಡಿದ್ದರು, ಲೇಖನಗಳನ್ನು ಬರೆದಿದ್ದರಷ್ಟೆ, ಅದರಿಂದಾಗಿ ಅವರನ್ನು ಆಗೀಗ ಭಾಷಣ ಉಪನ್ಯಾಸಗಳನ್ನು ಮಾಡಲು ಕರೆಯುತ್ತಿದ್ದರು. ‘ಒಮ್ಮೆ ನೆಗವಾಡಿಗೆ ಸೊರಬ ತಾಲೂಕಿನ ಶಿಕ್ಷಣ ಅಧಿಕಾರಿಯು ಬಂದಿದ್ದನು. ಅಂದು ಒಂದು ಸಣ್ಣ ಸಭೆಯನ್ನು ಕೂಡಿಸಿದ್ದರು. ಆ ಸಭೆಯಲ್ಲಿ ಪ್ರಾಸಂಗೀಕವಾಗಿ ವಿವೇಕಾನಂದರ ಧರ್ಮ ಬೋಧವನ್ನು ಕುರಿತು ಚಿಕ್ಕ ಭಾಷಣವನ್ನು ರಾಜಪುರೋಹಿತರು ಮಾಡಿದರು. ಶಿಕ್ಷಣ ಅಧಿಕಾರಿಗೆ ಅವರ ಭಾಷಣ ತುಂಬ ಮೆಚ್ಚಿಗೆಯಾಯಿತು. ಅತ ಸೊರಬಕ್ಕೆ ಹೋದಮೇಲೆ ತನ್ನ ಮೇಲಧಿಕಾರಿಗೆ ಪತ್ರ ಬರೆದು ರಾಜಪುರೋಹಿತರ ಬಗ್ಗೆ ಬರೆದನಂತೆ. ಜೊತೆಗೆ ಅವರನ್ನು ಯಾವುದೊಂದು ರೀತಿಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಸೇರಿಸಿದರೆ ಇಲಾಖೆಗೆ ತುಂಬ ಸಹಾಯವಾಗುತ್ತದೆ ಎಂದು ಬರೆದನಂತೆ. ಅದಾಗ ಮೈಸೂರು ಸಂಸ್ಥಾನದಲ್ಲಿ ಸರ್‌ ಎಂ. ವಿಶ್ವೇಶ್ವರಯ್ಯನವರು ದಿವಾನರಾಗಿದ್ದರು. ಈ ವಿಷಯ ಅವರ ಕಿವಿಯವರೆಗೂ ಹೋಯಿತು. ಗ್ರಾಮಗಳ ಸಾಮಾಜಿಕ ಸುಧಾರಣೆಗಾಗಿ ಸರ್. ಎಂ. ವಿಶ್ವೇಶ್ವರಯ್ಯನವರು ಹಲವಾರು ಯೋಜನೆಗಳನ್ನು ರೂಪಿಸಿದ್ದರು. ಅದರಲ್ಲೊಂದು, ಕನ್ನಡ ಇತಿಹಾಸ ಸಂಸ್ಕೃತಿಗಳನ್ನು ಹಳ್ಳಿಹಳ್ಳಿಗೆ ಹೋಗಿ ಪ್ರಚಾರ ಮಾಡುವ ಕೆಲಸವೂ ಒಂದಾಗಿತ್ತು. ಅದಕ್ಕೆ ಸಂಚಾರೀ ಭಾಷಣಕಾರ, (Itinerate Lecturer) ಎಂಬ ಹೆಸರು. ಶ್ರೀ ರಾಜಪುರೋಹಿತರನ್ನು ಆ ಕೆಲಸಕ್ಕಾಗಿ ನಿಯಮಿಸಿದರು. ಅವರು ನೆಗವಾಡಿಯಲ್ಲಿ ವಾಸಿಸುತ್ತಿರುವವರೆಗೂ ಆ ಕೆಲಸವನ್ನು ಮಾಡಿದರೆಂದು ಕಾಣುತ್ತದೆ.

ಈ ಎಲ್ಲದರ ಮಧ್ಯೆ ನೆಗವಾಡಿಯ ಜೀವನ ಅವರಿಗೆ ಬಹಳ ದಿನ ಹಿಡಿಸಲಿಲ್ಲವೆಂದು ಕಾಣುತ್ತದೆ. ಮದುವೆಯಾದ ಮೂರು ನಾಲ್ಕು ತಿಂಗಳುಗಳಲ್ಲಿ ಅಂದರೆ ದಿನಾಂಕ ೩೦.೦೪.೧೯೧೫ ರಂದು ತಮ್ಮ ದಿನಚರಿಯಲ್ಲಿ ಹೀಗೆ ನಮೂದಿಸಿದ್ದಾರೆ.

ನೆಗವಾಡಿ ಅಗಡಿ
೧. ಸ್ವಂತ ಅಲ್ಲ, ಹೆಂಡಿರು ಮಕ್ಕಳಿಗೆ ಅಭಾವ ೧. ಸ್ವಂತ ಆದ್ದರಿಂದ ಹೆಂಡರು ಮಕ್ಕಳಿಗೆ ಉಂಟು
೨. ಪರಿಸ್ಥಿತಿ ವಾಯಿಟ* ೨. ಪರಿಸ್ಥಿತಿ ಉತ್ತಮ
೩. ಉತ್ಪನ್ನ ಕಡ್ಮಿ ೩. ಉತ್ಪನ್ನ ಅಲ್ಪ ಅಧಿಕ
೪. ಆಶ್ರಯ ಉಂಟು ೪. ಆಶ್ರಯವಿಲ್ಲ

* ‘ವಾಯಿಟ್‌ ‘ (ಮರಾಠಿ ಶಬ್ಧ) = ಚೆನ್ನಾಗಿಲ್ಲ, ಕೆಟ್ಟದ್ದು.

ನೆಗವಾಡಿ ಎಂದರೆ, ಒಂದು ರೀತಿಯ ಪರಾಶ್ರಯದಲ್ಲಿದ್ದಂತೆ ಎಂದು ಅವರು ಭಾವಿಸಿದ್ದರು. ಮತ್ತು ಅಂದಿನಿಂದಲೆ ಅವರು ಬಹುಶಃ ಆದಷ್ಟು ಬೇಗ ಮಾವನ ಮನೆಯಿಂದ ಹೊರಬೀಳಬೇಕೆಂದು ಯೋಚಿಸುತ್ತಿದ್ದರೆಂದು ಕಾಣುತ್ತವೆ. ಮುಂದೆ, ದಿನಾಂಕ ೦೯.೦೫.೧೯೧೬ರ ದಿನಚರಿಯಲ್ಲಿ

“೧೯೧೮ ಜೂನ್‌ ೧೨ನೆಯ ತಾರೀಖಿಗೆ ಸ್ವತಂತ್ರ ಗೃಹತ್ವವನ್ನು ಆರಂಭ ಮಾಡಿದೆನು” ಎಂದು ಬರೆದು

ಮನೆಗಾಗಿ ಸಾಮಾನು ತಂದ ವಿವರಗಳನ್ನು ಕೊಟ್ಟಿದ್ದಾರೆ. ಬಹುಶಃ ಅನಂತರ ಖಾಲಿ ಇದ್ದ ಸ್ಥಳದಲ್ಲಿ ಬರೆದ ಟಿಪ್ಪಣಿ ಇದಾಗಿರಬೇಕು. ಇಲ್ಲಿ ಒಂದು ಮಾತನ್ನು ಹೇಳಬೇಕು. ಅವರು ೧೯೧೪ರಿಂದ ದಿನಚರಿಯನ್ನು ಬರೆದ ಉಲ್ಲೇಖಗಳು ದೊರೆಯುತ್ತವೆ. ಅನಂತರ ೧೯೧೭ರಿಂದ ೧೯೨೩ರವರೆಗೆ ಬರೆದ ದಿನಚರಿಗಳ ಉಲ್ಲೇಖ ದೊರೆಯುವುದಿಲ್ಲ. ದಿನಾಂಕಗಳಿಲ್ಲದ ನಾಲ್ಕು ಚಿಕ್ಕ ನೋಟ್‌ ಬುಕ್‌ಗಳೇನೋ ಇವೆ. ಅದರಲೊಂದರಲ್ಲಿ ೧೯೨೦ರಲ್ಲಿಯ ಘಟನೆಗಳ ವಿವರಗಳಿವೆ. ಅದೇನೇ ಇರಲಿ, ನೆಗವಾಡಿಯ ವಾಸ್ತವ್ಯದಲ್ಲಿಯ ವಿವರಗಳು ದೊರೆಯುವುದಿಲ್ಲ. ಮಾವನ ಮನೆಯ ಗೃಹಕೃತ್ಯಗಳು, ಏಳುಗ್ರಾಮಗಳ ಶಾನುಭೋಗಿಕೆ ಜೊತೆಗೆ ಮೈಸೂರು ಸಂಸ್ಥಾನದ ಸಂಚಾರೀ ಭಾಷಣಕಾರ ನೌಕರಿ ಇವಿಷ್ಟರ ಜೊತೆಗೆ ತಮ್ಮ ಅಭ್ಯಾಸ ಸಂಶೋಧನೆ ಮುಂದುವರೆದಂತೆ ಕಾಣುತ್ತದೆ. ಸುಮಾರು ಮೂರವರೆ ವರುಷ ಅವರು ನೆಗವಾಡಿಯಲ್ಲಿದ್ದು ೧೯೧೮ರ ಜೂನ್‌ ೧೨ರಂದು ಧಾರವಾದಾಕ್ಕೆ ಬಂದಿರಬೇಕು.

ದಿನಚರಿ ಇಲ್ಲದ ನೋಟ್‌ಬುಕ್ಕ ಒಂದರಲ್ಲಿ ಒಂದೆಡೆ ಬರೆದಿದ್ದಾರೆ.

“ನಾರಾಯಣ ಶ್ರೀನಿವಾಸ ರಾಜಪುರೋಹಿತ ಸಹಕಾರೀ ಸಂಪಾದಕ ‘ಲೋಕಬಂಧು’ ಧಾರವಾಡ”

ಎಂದು ಬರೆದು, ಇನ್ನೊಂದೆಡೆ

“ಸನ್೧೯೨೦ನೆಯ ಆಗಸ್ಟ್೨೬ನೆಯ ತಾರೀಖು ಗುರುವಾರ ದಿವಸ ‘ಲೋಕಬಂಧು’ ವೃತ್ತ ಪತ್ರದ ಸಹಕಾರೀ ಸಂಪಾದಕತ್ವವನ್ನು ಸ್ವೀಕರಿಸಿದ್ದೇನೆ”

ಎಂದು ಬರೆದಿದ್ದಾರೆ.

ಈ ‘ಲೋಕಬಂಧು’ ವೃತ್ತ ಪತ್ರದ ಸಹಕಾರೀ ಸಂಪಾದಕತ್ವವನ್ನು ಎಷ್ಟೂ ದಿನ ವಹಿಸಿದರು. ಅಲ್ಲಿ ಏನು ಮಾಡಿದರು ಎಂಬ ಬಗ್ಗೆ ಮುಂದೆ ಎಲ್ಲಿಯೂ ಉಲ್ಲೇಖವಿಲ್ಲ. ಆದ್ರೆ ಮುಂದೆ ಮೂರೇ ದಿನಗಳಲ್ಲಿ ಅಂದರೆ,

“ಸನ್೧೯೨೦ನೆಯ ಆಗಸ್ಟ್೨೬ನೆಯ ತಾರೀಖು ರವಿವಾರ ದಿವಸ ‘ಜಯಕರ್ನಾಟಕ’ ಎಂಬ ಮಾಸಪ್ರತ್ರಿಕೆಯನ್ನು ೧೯೨೧ನೆಯ ಜನವರಿ ೧ನೆಯ ತಾರೀಖಿಗೆ ನಾನು ಹಾಗೂ ಶ್ರೀಯುತ ವೆಂಕಟರಾವ ಆಲೂರ ನಾವಿಬ್ಬರೂ ಸೇರಿ ಹೊರಡಿಸುವ ನಿಶ್ಚಯ ಮಾಡಿದೆವು” ಎಂದು ಬರೆದಿದ್ದಾರೆ. ಅದರ ಕೆಳಗಡೆ ಪೆನ್ಸಿಲ್ಲಿನಲ್ಲಿ. ೧. ಬೇಂದ್ರೆ, ೨. ಗುತ್ತಲ, ೩. ಕುಂಭಕೋಣ, ೪. ನೀರ್ಲ್ಗಿ, ೫. ಹುಕ್ಕೇರಿಕರ, ೬. ದಿವಾಕರ, ೭. …..ಹೀಗೆ ನಮೂದಿಸಿದ್ದನ್ನು ಗಮನಿಸಿದರೆ, ಜಯಕರ್ನಾಟಕದ ಬಗ್ಗೆ ಈ ವ್ಯಕ್ತಿಗಳೊಂದಿಗೆ ಚರ್ಚಿಸಬೇಕು ಎಂಬುದಾಗಿರಬೇಕು. ರಾಜಪುರೋಹಿತರಿಗೆ ಪ್ರತಿಕೆಯನ್ನು ಪ್ರಕಟಿಸಬೇಕು ಎಂಬ ಹುಚ್ಚು ಬಹಳದಿನಗಳಿಂದ ಇತ್ತು ಎಂಬುದನ್ನು ಅವರ ದಿನಚರಿಯ ಅನೇಕ ಕಡೆಗಳಲ್ಲಿಯ ಉಲ್ಲೇಖದಿಂದ ಕಾಣಬುದಾಗಿದೆ.

ದಿನಾಂಕ ೨೫.೧೨.೧೯೧೬ರ ದಿನಚರಿಯಲ್ಲಿ.

“ಕಾಳಯುಕ್ತಿ ಸಂವತ್ಸರ (ಶಕೆ ೧೮೪೦) ಚೈತ್ರ ಯುಗಾದಿ ದಿವಸದಲ್ಲಿ (ಧಾರವಾಡದಲ್ಲಿ) ಸ್ಥಾಪಿಸಲ್ಪಡುವ ಆಯುಷ್ಯದ ಧ್ಯೇಯಗಳು” ಎಂದು ಬರೆದು ಕೆಳಗೆ ಧ್ಯೇಯಗಳ ಪಟ್ಟಿಯನ್ನು ಮಾಡಿದ್ದಾರೆ.

. ಸ್ವತ್ರಂತ್ರ ಗೃಹತ್ವ

. ಮನೋಹರ ಪ್ರಿಂಟಿಂಗ್‌ ಪ್ರೇಸ್.

. ಕಾವ್ಯಶಾಸ್ತ್ರ ವಿನೋದ ಮಾಸಿಕ ಪುಸ್ತಕ

. ಔದ್ಯೋಗಿಕ ವಿನೋದ ಮಾಸಿಕ ಪುಸ್ತಕ

. ವೈದ್ಯ ವಿಷಯಕ

. ರಾಷ್ಟ್ರವಿಷಯಕ, ಪರೋಪಕಾರ ವಿಷಯಕ ಎಂಬುದಾಗಿ ಆರು ಪಟ್ಟಿಗಳನ್ನು ಮಾಡಿ ಅದರ ಕೆಳಗಡೆ

ಬ್ರಾಹ್ಮೀಸ್ಥಿತಿ
ಸಮೃದ್ಧಿ
ಧ್ಯೇಯಗಳು

ಎಂಬುದಾಗಿ ನಕ್ಷೆಯನ್ನು ತೆಗೆದಿದ್ದಾರೆ. ಇದನ್ನು ಬರೆದದ್ದು ೧೯೧೬ರ ಕೊನೆಯ ದಿನಗಳಲ್ಲಿ. ಆಗ ಅವರಿನ್ನೂ ನೆಗವಾಡಿಯಲ್ಲೆ ಇದ್ದರು. ಶಕೆ ೧೮೪೦ರ ಯುಗಾದಿ ಕ್ರಿ. ಶ. ೧೯೧೮ ರ ಮಾರ್ಚ್‌ ತಿಂಗಳಲ್ಲಿ ಬರುತ್ತದೆ. ಅದೇ ವರುಷದ ಜೂನ್‌ ೧೨ನೆಯ ತಾರೀಖಿಗೆ ಸ್ವತಂತ್ರ ಗೃಹತ್ವವನ್ನು ಮಾಡಿದ ಉಲ್ಲೇಖ ಮೊದಲೆ ಬಂದಿದೆ. ಅವರ ಧ್ಯೇಯಗಳಲ್ಲಿಯಾ ಒಂದನ್ನು ಸಾಧಿಸಿದ್ದರು. ಉಳಿದ ಧ್ಯೇಯಗಳ ಕುರಿತು ಅನಂತರ ಅನೇಕ ಸಲ ಉಲ್ಲೇಖಿಸಿದ್ದರೂ ಧ್ಯೇಯ ಈಡೇರದಿದ್ದುದು ವಿಷಾದದ ವಿಷಯ.

ಇಲ್ಲಿ ವಿಶೇಷವಾಗಿ ಗಮನಿಸಬೇಕಾದ ಸಂಗತಿಯೆಂದರೆ, ಈವರೆಗೆ ಉಲ್ಲೇಖಿಸುತ್ತಿದ್ದ ‘ಜಗಜ್ಜನನಿ’ ಮಾಯವಾಗಿ ‘ಬ್ರಾಹ್ಮೀಸ್ಥಿತಿ’ ಬಂದದು ಬ್ರಾಹ್ಮೀಸ್ಥೀತಿಯ ಬಗ್ಗೆ ಅನಂತರದ ದಿನಗಳಲ್ಲಿ ಸಾಕಷ್ಟು ಚರ್ಚಿಸಿದ್ದಾರೆ. ಅವರ ಮುಂದಿನ ಧಾರವಾಡ ಜೀವನ ಬಹುತೇಕ ಬ್ರಾಹ್ಮೀ ಸ್ಥಿತಿಯಲ್ಲೆ ಕಳೆದಿದೆ.

 

[1] ೩೫ ದಿನಚರಿಗಳಲ್ಲಿಯ ಕೆಲವು ಮಹತ್ವದ ಉಲ್ಲೇಖಗಳನ್ನು ಅನುಬಂಧ ೧ ರಲ್ಲಿ ಕೊಡಲಾಗಿದೆ.

[2] ೬. ನಾ ಶ್ರೀ ರಾಜಪುರೋಹಿತರ ಮಕ್ಕಳಲ್ಲಿ ಕೊನೆಯವರು, ಶ್ರೀಮತಿ ಸರೋಜಿನಿ ಕುಲಕರ್ಣಿ, ವಯಸ್ಸು೬೮, ಈಗ ಬಿಜಾಪುರದಲ್ಲಿದ್ದಾರೆ.