ರಾಜಪುರೋಹಿತರು ಸಂಶೋಧನ ಕಾರ್ಯದಲ್ಲಿ ಹೇಗೆ ತೊಡಗಿದರು? ಎಂದು ವಿಚಾರಿಸಿದರೆ ಅದಕ್ಕೆ ಅವರ ದಿನಚರಿಗಳಲ್ಲಿ ಉತ್ತರ ದೊರೆಯಬೇಕಾಗಿತ್ತು. ಆದರೆ ದೊರೆಯುವುದಿಲ್ಲ. ಬಹುಶಃ ಅದಕ್ಕೆ ಕಾರಣ ನಮಗೆ ದೊರೆತಿರುವ ಮೊದಲ ದಿನಚರಿ ಪುಸ್ತಕ ೧೯೧೪ರದ್ದು, ಆದಾಗಲೇ ಅವರ ‘ದಾನಧರ್ಮ ಪದ್ಧತಿ’ ಪುಸ್ತಕ ಪ್ರಕಟವಾಗಿತ್ತು. ಜೊತೆಗೆ ‘ಕರ್ನಾಟಕ ಮಹಾರಾಷ್ಟ್ರ’ ಲೇಖನಮಾಲೆಯೂ ಪ್ರಕಟವಾಗಿ ಅವರೊಬ್ಬ ಸಂಶೋಧಕರೆಂದು ಕನ್ನಡ – ಮರಾಠಿ ಬಲ್ಲ ಬಹುತೇಕ ವಿದ್ವಾಂಸರಲ್ಲಿ ಗುರುತಿಸಲಾಗಿತ್ತು. ಅವರೆ ಹೇಳಿದಂತೆ ಇತಿಹಾಸವೆಂದರೆ ಆಗಿ ಹೋದದ್ದು. ಅದು ಯಾವುದೇ ಇರಲಿ ಅದನ್ನು ಹುಡುಕಿ ತೆಗೆಯುವುದು. ಅದನ್ನು ಅವರು ಮಾಡುತ್ತಿದ್ದರು. ಹಳೆಯದನ್ನು ಹುಡುಕಿ ತೆಗೆಯುತ್ತಿದ್ದರೆಂದು ಹೇಳಿದರೆ, ತಪ್ಪಾದೀತು, ಹೊಸದನ್ನು ಹುಡುಕಿ ತೆಗೆಯುತ್ತಿದ್ದರು. ಉದಾಹರಣೆಗೆ ತಿಮ್ಮಮ್ಮನವರ ಚರಿತ್ರೆಯನ್ನು ಬರೆಯುವಾಗ ತಿಮ್ಮಮ್ಮನ ಮದುವೆಯ ಪ್ರಸಂಗ ಬರುತ್ತದೆ. ಅದನ್ನು ವರ್ಣಿಸುವಾಗ ಮದುವೆಯ ಹಿಂದಿನ ದಿನ ಗಂಡಿನ ಬೀಗರು ಬಂದಾಗ ಹೆಣ್ಣಿನವರು ಒಂದು ಊಟವನ್ನು ಕೊಡುತ್ತಾರೆ. ಅದಕ್ಕೆ ‘ರುಖೋತ’ ಎಂದು ಹೆಸರು.[1] ‘ರುಖೋತ’ ಶಬ್ಧವನ್ನು ‘ರುಖವತ’ ಎಂದು ಉಪಯೋಗಿಸಿದ್ದಾರೆ. ಈ ಶಬ್ಧಕ್ಕೆ ಮರಾಠಿ ಶಬ್ಧಕೋಶದಲ್ಲಿ ಅದೇ ಅರ್ಥವಿದೆ.[2] ಅದು ಮರಾಠಿಯಿಂದ ಬಂದ ಶಬ್ಧಾಪಭ್ರಂಶವಾಗಿ ಕನ್ನಡಕ್ಕೆ ರುಕ್ಕೋತ ರುಖೋತ ಆಗಿದೆಯೇ ಎಂದು ನೋಡಲು ಅನೇಕ ಪ್ರಯೋಗಗಳನ್ನು ರುಖ + ಊಟ, ರೋಖ + ಊಟ, ರುಕ್‌ + ಊಟ ಇತ್ಯಾದಿಯಾಗಿ ಪ್ರಯೋಗಿಸಿ ನೋಡಿದ್ದನ್ನು ಅವರ ದಿನಚರಿಯ ಪುಟಗಳಲ್ಲಿ ಕಾಣಬಹುದು. ವಾಸ್ತವದಲ್ಲಿ ಆ ಸಂದರ್ಭದಲ್ಲಿ ಮೊದಲ ದಿನ ಗಂಡಿನ ಬೀಗರು ಬಂದಮೇಲೆ ಆದರಿಸಿ ಊಟ ಹಾಕಿದರು ಎಂದು ಬರೆದಿದ್ದರೂ ಸಾಕಾಗುತ್ತಿತ್ತು. ಆದರೆ ರಾಜಪುರೋಹಿತರ ಚಿಕತ್ಸಕ ಬುದ್ಧಿ ಅದನ್ನು ಒಪ್ಪಲಿಲ್ಲ. ಹೀಗೆ ದೊರೆತ ಅವರ ೩೫ ದಿನಚರಿ ಪುಸ್ತಕಗಳಲ್ಲಿ ಸಾವಿರಾರು ಇಂಥ ಪ್ರಯೋಗಗಳು ಕಾಣಸಿಗುತ್ತವೆ. ಇದರಿಂದ ಒಂದು ವಿಷಯ ಸ್ಪಷ್ಟವಾಗುವುದೆಂದರೆ, ಚಿಕಿತ್ಸಕ ಬುದ್ಧಿ ಅವರಿಗೆ ಜನ್ಮಧಾರಭ್ಯ ಇತ್ತು. ಅದರ ಜೊತೆಗೆ ಅಭ್ಯಾಸ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದರಿಂದ ಅದಕ್ಕೊಂದು ವಿಶಿಷ್ಟ ರೂಪ ಬಂದಿತು.

ಬರವಣಿಗೆ ಒಂದು ಕಲೆ ಇದ್ದಂತೆ ಸಂಶೋಧನವೂ ಒಂದು ಕಲೆಯೇ ಆಗಿದೆ. ಕಲೆ ಅದು ದೈವದತ್ತವಾಗಿರಬೇಕು. ಹಾಗೆ ದೈವದತ್ತವಾಗಿ ಬಂದ ಕಲೆಗೆ ಪೋಷಕವಾಗುವಂಥ ಪರಿಸರವನ್ನು ಬೆಳೆಸಿಕೊಂಡರೆ ಆ ವ್ಯಕ್ತಿ ಯಶಸ್ವಿಯಾಗುವುದರಲ್ಲಿ ಸಂದೇಹವೇ ಇಲ್ಲ. ‘ವಿಪರೀತವಾಗಿ ಬಳಸಿಕೊಂಡರೆ’ ಮಾರಕವಾಗಿ ಪರಿಣಮಿಸಬಹುದು.

ರಾಜಪುರೋಹಿತರ ಸಂಶೋಧನೆಯನ್ನು ಗಮನಿಸಿದಾಗ ಮೂರು ಸ್ಪಷ್ಟ ಪ್ರತ್ಯೇಕ ದಾರಿಗಳು ಕಾಣುತ್ತವೆ. ಅವುಗಳನ್ನು ಈ ಇತಿಯಾಗಿ ಹೇಳಬಹುದು.

೧. ಇತಿಹಾಸ ೨. ಸಾಹಿತ್ಯ ೩. ಧರ್ಮ

. ಇತಿಹಾಸ

ಈ ಮೊದಲೆ ಹೇಳಿದಂತೆ, ರಾಜಪುರೋಹಿತರು ಇದ್ದ ಪ್ರದೇಶವು ಮರಾಠಿಮಯವಾಗಿತ್ತು. ಕನ್ನಡ ಭಾಷೆಗೆ ಅತ್ಯಂತ ಕಡಿಮೆ ಅವಕಾಶವಿದ್ದಿತು. ಆ ಹೊತ್ತಿಗೆ ಮರಾಠಿಯಿಂದ ಕನ್ನಡವನ್ನು ಮೇಲೆತ್ತುವ ನಾಡ ಚಳುವಳಿ ಈ ಪ್ರದೇಶದಲ್ಲಿ ನಡೆದಿತ್ತು. ‘ ಉತ್ತರ ಕರ್ನಾಟಕದಲ್ಲಿ ಕಡಪಾ ರಾಘವೇಂದ್ರರಾಯರ ಕರ್ನಾಟಕ ಏಕೀಕರಣದ ಕಹಳೆ, ಶಾಂತಕವಿಗಳ ರಾಷ್ಟ್ರೀಯ ಕೀರ್ತನೆಗಳು, ಮುದವೀಡು ಕೃಷ್ಣರಾಯರ ಸಿಂಹವಾಣಿ, ರಾ ಹ ದೇಶಪಾಂಡೆ ಅವರ ಸಂಸ್ಥಾ ಕಾರ್ಯ ಆಲೂರು ವೆಂಕಟರಾಯರ ಮಾರ್ಗದರ್ಶನ ಇವುಗಳು ಯಾರನ್ನೂ ಬಡಿದೆಬ್ಬಿಸಿ ಉದಾತ್ತ ಕೆಲಸಕ್ಕೆ ಹಚ್ಚುವಂತಹವಾಗಿದ್ದವು’.

ಸ್ವದೇಶಿ ಸ್ವಾತ್ರಂತ್ರ್ಯ ಮಂತ್ರಗಳು ಹೇಗೆ ರಾಷ್ಟ್ರೀಯ ಚಳುವಳಿಗೆ ಪ್ರಚೋದನೆಯನ್ನು ನೀಡಿ ದೇಶಾದ್ಯಂತದ ಜನರ ಭಾವನೋದ್ವೇಗದ ಬೆಂಬಲವು ಒದಗಿ ಬಂದಿತೋ. ಹಾಗೆಯೇ ಕನ್ನಡ ನಾಡು, ಕನ್ನಡ ಭಾಷೆ, ಕರ್ನಾಟಕದ ಗತವೈಭವಗಳು ಕನ್ನಡ ತಾಯಿಯ ಸೇವೆಗೆ ಕಟಿಬದ್ಧವಾಗಿಸಿದುವು. ಆ ಪ್ರವಾಹದಲ್ಲಿ ರಾಜಪುರೋಹಿತರೂ ಈಜಿದರು. ಅವರಿದ್ದ ಕಾಲದಲ್ಲಿ ಕನ್ನಡನಾಡು ನುಡಿಯ ಇತಿಹಾಸದ ಸ್ಪರ್ಧೆಯಲ್ಲಿ ಬಹುತೇಕ ಎಲ್ಲರನ್ನೂ ಹಿಂದೆಹಾಕಿ ಮುಂಚೂಣಿಯಲ್ಲಿದ್ದುದು ಅವರ ಸಂಶೋಧನೆಯ ವೈಶಿಷ್ಟ್ಯವಾಗಿದೆ. ಈ ಹಿನ್ನೆಲೆಯಲ್ಲಿಯ ಅವರ ಇತಿಹಾಸ ಸಂಶೋಧನಾ ಲೇಖನಗಳಾದ ಮಹಾರಾಷ್ಟ್ರ ವ ಕರ್ನಾಟಕ (ಮರಾಠಿ). ಸತ್ಯಾಶ್ರಯ ಪುಲಕೇಶಿ ವಲ್ಲಭ, ವಿಜಯನಗರದ ಕೃಷ್ಣದೇವರಾಯನು ಕನ್ನಡಿಗನು, ರಕ್ಕಸತಂಗಡಗಿ ರಣಬೂಮಿ, ತಿರುಳ್ಗಡ ನಾಡು ಇತ್ಯಾದಿ ಲೇಖನಗಳು ಕನ್ನಡಿಗರನ್ನು ಎಚ್ಚರಿಸಲು ಕಾರಣವಾದವು. ಅವುಗಳಲ್ಲಿಯ ಅವರ ತೀಕ್ಷ್ಣ ಶೋಧಬುದ್ಧಿ ವಿದ್ವಾಂಸರನ್ನು ಅಚ್ಚರಿಗೊಳಿಸಿದವು.

. ಸಾಹಿತ್ಯ

ಸಾಮಾನ್ಯವಾಗಿ ಇತಿಹಾಸದ ಸಂಶೋಧಕರಿಗೆ ಸಾಹಿತ್ಯ ಹಾಗೂ ಭಾಷೆಯ ವಿಷಯಗಳಲ್ಲಿ ಅಷ್ಟಕಷ್ಟೆ. ಸಾಂದರ್ಭಿಕವಾಗಿ ಬಂದ ಕವಿ ಸಾಹಿತಿಗಳನ್ನೊ, ಅವರ ಕಾಲ ವಿಚಾರವನ್ನೊ ಮಾಡಿಯಾರು. ಆದರೆ ರಾಜಪುರೋಹಿತರು ಮಾತನಾಡುವ ಭಾಷೆಗೆ ವ್ಯಾಕರಣ ರಚನೆ, ಕನ್ನಡ ಲಾಕ್ಷಣಿಕರು ಮತ್ತು ಪ್ರಾಕೃತ ಭಾಷೆ ಮುಂತಾದ ಭಾಷೆಗೆ ಸಂಬಂಧಪಟ್ಟ ವಿಷಯಗಳಲ್ಲೂ ಸಂಶೋಧನೆ ಮಾಡಿದ್ದು ವಿಶೇಷವಾಗಿದೆ. ಜೊತೆಗೆ ನೃಪತುಂಗನ ಹಿಡಿದು ಕನ್ನಡದ ಸುಮಾರು ಹತ್ತು ಕಾವಿಗಳ ಕಾಲ, ಮತ ನಿರ್ಣಯಗಳನ್ನು ಮಾಡಿದ್ದಾರೆ! ಹಳಗನ್ನಡ ಸಾಹಿತ್ಯದಲ್ಲಿ ಅವರಿಗೆ ಆಳವಾದ ಅಭ್ಯಾಸವಿತ್ತು. ಅದಕ್ಕೆ ಕಾರಣ ಅವರು ಅಂದಿನ ಕಾಲದ ಏಳನೆಯ ವರ್ಗದ ಪಬ್ಲಿಕ್‌ ಪರೀಕ್ಷೆಯನ್ನು ಧಾರವಾಡ ಜಿಲ್ಲೆಗೆ ಪ್ರಥಮರಾಗಿ ಪಾಸಾದದ್ದು ಮತ್ತು ಆ ಮೂರು ವರುಷದ ಶಿಕ್ಷಕ ತರಬೇತಿ, ಅಖಂಡ ನಾಲ್ಕು ವರುಷಗಳ ಸಾಹಿತ್ಯದ ಅಭ್ಯಾಸದಿಂದ ಕನ್ನಡದ ಕಾವ್ಯ ಸಾಹಿತ್ಯವನ್ನು ಕರತಲಾ ಮಲಕ ಮಾಡಿಕೊಂಡಿದ್ದರು. ಅದಕ್ಕೆ ಸಮನಾಗಿ ಸಂಸ್ಕೃತದ ಅಭ್ಯಾಸವೂ ಆದ ಮೇಲೆ ಅದಕ್ಕೆ ಇನ್ನಷ್ಟು ಚುರುಕುತನ ಬಂದಿತ್ತು. ಕವಿರಾಜಮಾರ್ಗದ ಕರ್ತೃವು ಯಾರು ನೃಪತುಂಗನೇ ಕವಿರಾಜ ಮಾರ್ಗಕಾರನು, ಕುಮಾರವ್ಯಾಸನು, ಚಾಮರಸನ ಸಮಕಾಲೀನನಲ್ಲ, ಇತ್ಯಾದಿ ಸಂಶೋಧನ ಲೇಖನಗಳಲ್ಲಿ ಕಾವ್ಯಗಳ ಅಭ್ಯಾಸದಲ್ಲಿಯ ಆಳ ಗೊತ್ತಾಗುತ್ತದೆ.

. ಧರ್ಮ

‘ಕರ್ನಾಟಕದ ವರ್ಣನೆಯೂ ಇತಿಹಾಸವೂ’ ಒಂದನ್ನು ಬಿಟ್ಟರೆ ಉಳಿದ ಅವರ ಎಲ್ಲ ಐದು ಕೃತಿಗಳು ಧಾರ್ಮಿಕವಾಗಿವೆ. ಇವುಗಳನ್ನು ರಚಿಸುವಾಗ ದೊರೆತ ಸಾಮಗ್ರಿಗಳಿಂದ ಈ ಗ್ರಂಥಗಳಿಗೆ ಪೋಷಕವಾಗುವಂಥ ಹಲವು ಸಂಶೋಧನ ಲೇಖನಗಳನ್ನು ಬರೆದಿದ್ದಾರೆ. ಮರಾಠಿಯಲ್ಲಿ ಸುರೇಶ್ವರಾಚಾರ್ಯ, ಮಾಹಿಷ್ಮತೀ, ಕರ್ಮವೀರದಲ್ಲಿ ವಿದ್ಯಾರಣ್ಯರನ್ನು ಕುರಿತು ೫ ಲೇಖನಗಳು, ವಿಠಲ ಭಕ್ತಿಯ ಇತಿಹಾಸ ೩ ಲೇಖನಗಳು, ಮಂಗಳವೇಢೆ, ದೇಶಪಾಂಡೆಯವರು ಜಯತೀರ್ಥರ ವಂಶಿಜರಲ್ಲ…. ಇತ್ಯಾದಿ ಸುಮಾರು ೨೦ ಲೇಖನಗಳಿವೆ. ಈ ಎಲ್ಲ ಸಂಶೋಧನೆಯ ಮುಖ್ಯವಾಗಿ ಒಂದು ಸೂತ್ರದ ಸುತ್ತ ಹೆಣೆದು ಕೊಂಡಿತ್ತು ಎಂಬುದನ್ನು ತಟ್ಟನೆ ಗುರುತಿಸಬಹುದಾಗಿದೆ. ಅದು ಕಾಣ್ವ ಶಾಖೆಯ ಮೂಲ ಮತ್ತು ವಿಸ್ತಾರದ ವಿಚಾರವಾಗಿತ್ತು. ಅವರ ಸಂಶೋಧನೆಯ ಬಹುಭಾಗವು ಕಾಣ್ವಾಯನದಲ್ಲಿಯೆ ಇದೆ. ಈಶಾವಾಸ್ಯ, ಬೃಹದಾರಣ್ಯಕ ಇವೆರಡು ಉಪನಿಷತ್ತುಗಳಲ್ಲಿ ಅದರ ಮೂಲವನ್ನು ಗುರುತಿಸಿ, ಶ್ರೀ ಯಾಜ್ಞವಲ್ಕ್ಯರ ಶಿಷ್ಯರಾದ ಕಣ್ವರಿಂದ ಇದು ಪ್ರತಿಪಾದಿತವಾದುದೆಂದು ಕಂಡುಕೊಂಡರು. ಪ್ರಾಚೀನ ಕಾಲದಲ್ಲಿ ಕಾಣ್ವಶಾಖೀಯರು ಚಕ್ರವರ್ತಿಗಳು, ಮಂತ್ರಿಗಳು, ಸೇನಾಪತಿಗಳು ಆಗಿದ್ದರೆಂದು ವಿವರಿಸಿದ್ದಾರೆ. ಕಾಣ್ವಶಾಖೀಯರ ಭೌಗೋಳಿಕ ವಿಸ್ತಾರವನ್ನೂ ಹೇಳಿದ್ದಾರೆ. ಕೊನೆಯ ವರುಷಗಳಲ್ಲಂತೂ ಅವರ ಲೇಖನಗಳು ಕಾಣ್ವ ವಿಷಯದ ಮೇಲೇಯೇ ಇದ್ದವು. ಅವರು ತೀರಿಕೊಂಡ ಹಿಂದಿನ ತಿಂಗಳುಗಳಲ್ಲಿ ಕಾಣ್ವ ಮತ್ತು ಆಂಧ್ರಪ್ರಾಂತ ಎಂಬ ತಮ್ಮ ಲೇಖನವನ್ನು ಧಾರವಾಡದ ಶ್ರೀ ಜಠಾರದಿಂದ ಭಾಷಾಂತರಿಸುವ ಕಾರ್ಯದಲ್ಲಿ ತೊಡಗಿದ್ದರೆಂಬುದನ್ನು ೧೯೫೩ರ ದಿನಚರಿಯ ಪುಟಗಳು ಹೇಳುತ್ತವೆ. ಕೊನೆಕೊನೆಗೆ ಅವರ ಬಹುತೇಕ ಬರವಣಿಗೆಗಳಲ್ಲಿ ಪ್ರತಿಯೊಂದರಲ್ಲಿ ಕಾಣ್ವ ಮೂಲವನ್ನು ಹುಡುಕುವ ಪ್ರವೃತ್ತಿಯು ತಲೆದೋರಿ, ಅವರ ವಿಚಾರಧಾರೆಯು ಒಮ್ಮುಖವಾಗಿತ್ತೆಂಬ ಶಂಕೆಯೂ ಬರದಿರಲಾರದು.

ಈ ಕಾಣ್ವ ಶಾಖೆಗೆ ಪೂರಕವಾಗಿ ಬ್ರಾಹ್ಮಣರ ಸುಮಾರು ೩೬ ಒಳಪಂಗಡಗಳನ್ನು ಅವುಗಳಲ್ಲಿಯ ಭೇದಗಳ ಆಭ್ಯಾಸವನ್ನೂ ಮಾಡಿದ್ದರು. ಮುಖ್ಯವಾಗಿ ಮಾಧ್ಯಂದಿನ, ಕರ್ಹಾಡೆ, ಅರವತ್ತೊಕ್ಕಲು ಸಹವಾಸೀ ಸವ್ವಾಸೀ ಈ ಜನರ ಬಗ್ಗೆ ಅವರು ಬೆಲೆಯುಳ್ಳ ಲೇಖನಗಳನ್ನು ಬರೆದಿದ್ದಾರೆ. ಅರತ್ತೊಕ್ಕಲದವರು ತಾಲಗುಂದ ಚಿಪಳೂಣ ಅಗ್ರಹಾರಗಳಲ್ಲಿ ನೆಲೆನಿಂತುದನ್ನು ಪ್ರಬುದ್ಧ ಕರ್ನಾಟಕದ ಲೇಖನದಲ್ಲಿ ವಿವರಿಸಿದ್ದಾರೆ. ಅವುಗಳು ಮೊದಲು ಮರಾಠಿ ತಿಂಗಳು ಪತ್ರಿಕೆ ಸಹ್ಯಾದ್ರಿಯಲ್ಲಿ ಪ್ರಕಟವಾದುವು. ಅದರಂತೆ ಕರಹಟ ಕರ್ಹಾಡ ಅಗ್ರಹಾರದ ಮೂಲಸ್ವರೂಪದ ಬಗ್ಗೆ ಆಳವಾಗಿ ಅಭ್ಯಾಸ ಮಾಡಿ ಮರಾಠಿಯಲ್ಲೆ ಲೇಖನವನ್ನು ಬರೆದರು. ಈ ಲೇಖನವು ಮರಾಠಿಯ ಬಹುಜನರ ಮೆಚ್ಚುಗೆಯನ್ನು ತಂದಿತು. ಗುರುತಿಲ್ಲದ ಅನೇಕ ಜನರಿಂದ ಮೆಚ್ಚುಗೆಯ ಕಾಗದಗಳು ಬಂದವು. ಅದರಂತೆ ಸಹವಾಸಿ ಬ್ರಾಹ್ಮಣರು, ಚಿತ್ಪಾವನ ಬ್ರಾಹ್ಮಣರ ಬಗ್ಗೆಯೂ ಅಷ್ಟೇ ಬೆಲೆಯುಳ್ಳ ಲೇಖನಗಳು ಮರಾಠಿಯಲ್ಲಿ ಪ್ರಕಟವಾದವು. ಕನ್ನಡದಲ್ಲಿ ಸಂಶೋಧನ ಬರವಣಿಗೆಗೆ ಮನ್ನಣೆಯಾಗಲೀ, ಪುರಸ್ಕಾರವಾಗಲೀ ಅಷ್ಟಕಷ್ಟೆ ಎಂಬುದು ಅವರಿಗೆ ತೋರಿಬಂದಿತ್ತು.

ಕರಹಟ ಅಗ್ರಹಾರದ ಮೇಲಿನ ಮರಾಟೀ ಲೇಖನದಿಂದಾಗಿ ಮಹಾರಾಷ್ಟ್ರದ ಸಾರ್ವಜನಿಕ ಜೀವನದಲ್ಲಿ ಮುಂದಾಳಾಗಿದ್ದ ಅನೇಕ ಕರ್ಹಾಡೆ ಜನರು ತಮ್ಮ ಮತದ ಮೂಲ ಚರಿತ್ರೆಯನ್ನು ಅರಿತು ರಾಜಪುರೋಹಿತರಿಗೆ ಅಭಿನಂದನ ಪತ್ರಗಳನ್ನು ಬರೆದರು.

ಅವರ ಇನ್ನಿತರ ಧಾರ್ಮಿಕ ಸಂಶೋಧನ ಲೇಖನಗಳಾದ ಸುರೇಶ್ವಚಾರ್ಯ ವಿದ್ಯಾರಣ್ಯ, ಮಧ್ವಾಚಾರ್ಯ, ಜಯತೀರ್ಥ, ತಿಮ್ಮಮ್ಮನವರ ಬಗ್ಗೆ ಈ ಹಿಂದೆ ಉಲ್ಲೇಖಿಸಲಾಗಿದೆ. ಈ ಎಲ್ಲ ಲೇಖನಗಳ ಕೇಂದ್ರ ಬಿಂದು ಕಾಣ್ವಮತವಾಗಿದ್ದುದು ಒಂದು ಕಾಕತಾಲೀಯ ಎನ್ನಬಹುದಾದರೂ ‘ಬಾದರಾಯಣ’ ಸಂಬಂಧದಂತೆ ಎಲ್ಲವನ್ನೂ ಕಾಣ್ವ ಮೂಲದಲ್ಲೆ ಹುಡುಕಿದ್ದುದು ಕಾಣದೆ ಇರದು. ಗಜಾಂಕುಶ ದುರ್ಗಸಿಂಹ, ಬಸವಣ್ಣ, ರನ್ನ ರುದ್ರ ಭಟ್ಟರ ಶಾಖೆಯನ್ನು ಕಂಡಿದ್ದಾರೆ.

ರಾಜಪುರೋಹಿತರು ಮಾಧ್ವ ಸಂಪ್ರದಾಯದ ಕಾಣ್ವರು ಎಂದು ಹಿಂದೆಯೇ ಹೇಳಲಾಗಿದೆ. ಅವರಿಗೆ ತಮ್ಮ ಕಾಣ್ವ ಶಾಖೆಯ ಬಗ್ಗೆ ಇರುವ ಅಭಿಮಾನ ಗೌರವಗಳು ಆ ಶಾಖೆಗೆ ಅಪರಿಮಿತವಾದ ಸೇವೆಯನ್ನು ಸಲ್ಲಿಸಲು ಕಾರಣವಾದವು. ಕಾಣ್ವ ಶಾಖೆಗೆ ಅವರು ಸಲ್ಲಿಸಿದಷ್ಟು ಸೇವೆಯನ್ನು ಕರ್ನಾಟಕದಲ್ಲಿ ಇನ್ನಾರೂ ಸಲ್ಲಿಸಿಲ್ಲವೆಂದು ಹೇಳಬಹುದು.

ಒಂದು ವಿಷಯದ ಮೂಲವೆಲ್ಲಿದೆ, ಅದರ ನಿಜ ಸಂಗತಿ ಏನು, ಅದು ಏನಿರಬೇಕು ಇಂಥವರು ಈ ವಿಷಯದಲ್ಲಿ ಹೀಗೆ ಹೇಳಿದ್ದಾರೆ, ಇದು ಸರಿಯೆ, ಈ ಒಂದು ಪ್ರಮಾಣದಿಂದ ಹೊರಡುವ ಈ ಅಂಶದ ಸತ್ಯತೆಯನ್ನು ಸ್ವೀಕರಿಸುವ ಬೇರೆ ಆಧಾರಗಳು ಮತ್ತೆಲ್ಲಿವೆ ಇತ್ಯಾದಿ ಯೋಚನೆ ನಿರಂತರವೂ ಅವರ ಚಿಂತನೆಯ ವಿಷಯವಾಗಿರುತ್ತಿದ್ದಿತು. ಚರಿತ್ರೆಯ ವಿಷಯದಲ್ಲಿ ಸತ್ಯವನ್ನು ಅರಸಬೇಕಾಗುತ್ತದೆ. ಪ್ರಮಾಣಿಸಿ ನೋಡಬೇಕಾಗುತ್ತದೆ. ಇದ್ದಂತೆ ತೆಗೆದುಕೊಳ್ಳುವುದಿರುವುದಿಲ್ಲ. ಅದರಲ್ಲಿ ಸತ್ಯವಿದ್ದರೆಯೇ ಅದು ಇತಿಹಾಸ ಎನಿಸಿಕೊಳ್ಳುತ್ತದೆ, ಎಂಬ ಎಚ್ಚರವು ರಾಜಪುರೋಹಿತರಲ್ಲಿ ಸದಾಕಾಲ ಜಾಗೃತವಾಗಿರುತ್ತಿದ್ದಿತು. ಮಧ್ವಾಚಾರ್ಯರ ಶಾಖಾ ನಿರ್ಣಯವನ್ನು ಒಂದಲ್ಲ ಎಂಟು ಪ್ರಮಾಣಗಳನ್ನು ಕೊಟ್ಟು ತಮ್ಮ ಗ್ರಂಥದಲ್ಲಿ ಹೇಳಿದ್ದರು. ಪುಸ್ತಕ ಪ್ರಕಟವಾದ ಮೇಲೆ ಮುಂದೆ ಒಂಬತ್ತನೆಯ ಪ್ರಮಾಣವೊಂದು ಸಿಕ್ಕಿತು. ಆ ಕೂಡಲೇ ಜಯಕರ್ನಾಟಕದಲ್ಲಿ ಒಂದೇ ಒಂದು ಪುಟದ ಲೇಖನವನ್ನು ಪ್ರಕಟಿಸಿದರು. ಅದು ಅವರ ಸಂಶೋಧನೆಯ ಕಾರ್ಯದಲ್ಲಿಯ ತತ್ಪರತೆಯನ್ನು ತೋರಿಸುತ್ತದೆ. ಅಂತೆಯೇ ಕಳೆದ ಶತಮಾನದ ಮೊದಲರ್ಧದಲ್ಲಿ ಭಾರತಾದ್ಯಂತ ಗೌರವಾನ್ವಿತ ವಿದ್ವಾಂಸರೆನಿಸಿದ ಉತ್ತರಾದಿ ಮಠದ ಜಗದ್ಗುರುಗಳಾದ ಶ್ರೀ ಸತ್ಯಧ್ಯಾನ ತೀರ್ಥರು ‘ಮಧ್ವಾಚಾರ್ಯರ ಮೂಲ ಕಾಣ್ವ ಶಾಖೆಯಾಗಿದ್ದರೆ ಅದರಿಂದ ನಮಗೇನೂ ಬಾಧಕವಿಲ್ಲ’ ಎಂದು ಹೇಳಬೇಕಾಯಿತು. ಅವರ ಈ ಮಾತು ರಾಜಪುರೋಹಿತರ ಇಡೀ ಸಂಶೋಧನ ರಂಗಕ್ಕೂ ಅದರಿಂದ ಹೊರಬಂದ ಪರಿಣಾಮಗಳಿಗೂ ಅನ್ವಯಿಸುತ್ತದೆ. ಅದರಿಂದಾಗಿ ರಾಜಪುರೋಹಿತರ ಗ್ರಂಥಲೇಖನಗಳ ಹಿನ್ನೆಲೆಯಲ್ಲಿ ಮತೀಯ ದೃಷ್ಟಿಯನ್ನಿಟ್ಟುಕೊಂಡು ನೋಡುವ ಅಗತ್ಯವೂ ಇಲ್ಲ. ಮಧ್ವಾಚಾರ್ಯರ ಚರಿತ್ರೆಯ ಬಗ್ಗೆ ಡಾ. ಡಿ. ವಿ. ಗುಂಡಪ್ಪನವರು ರಾಜಪುರೋಹಿತರಿಗೆ ಬರೆದ ಪತ್ರದಲ್ಲಿ ‘ಶೋಧನ ಬುದ್ಧಿಯ ತೀಕ್ಷ್ಣ ವ್ಯಾಪಾರದಲ್ಲಿ ನೀವು ಭಕ್ತಿಶ್ರದ್ಧೆಗಳನ್ನು ತೊರೆಯುವವರಲ್ಲ. ಹಾಗೆಯೇ ಭಕ್ತಿ ಶ್ರದ್ಧೆಗಳ ಆವೇಶದಲ್ಲಿ ಶೋಧಕನಿಗಿರಬೇಕಾದ ಜಾಗರೂಕತೆಯನ್ನು ಬಿಡುವವರೂ ನೀವಲ್ಲ. ಹೀಗೆ ಅಪಾತತಃ ಸೇರಲಾಗದ ಎರಡು ಗುಣಗಳು ನಿಮ್ಮಲ್ಲಿ ಸೇರಿವೆ’ ಎಂದು ಬರೆದಿದ್ದಾರೆ. ಅವರ ಸಂಶೋಧನೆಗೊಂದು ಸುವರ್ಣಚೌಕಟ್ಟನ್ನು ತೊಡಿಸಿದ್ದಾರೆ.

ಇನ್ನುಳಿದಂತೆ, ನಾಡಿನ ಇತಿಹಾಸದಲ್ಲಿ ಹೊಸ ಬೆಳಕನ್ನು ಚೆಲ್ಲಿದ ಅವರ ಕೆಲವು ಲೇಖನಗಳ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕು. ಅವುಗಳಲ್ಲಿ ರಕ್ಕಸ ತಂಗಡಗಿ ರಣಭೂಮಿಯ ಸಂಶೋಧನಕ್ಕೆ ವಿಶೇಷ ಮಹತ್ವವಿದೆ. ಈ ಕುರಿತು ಮರಾಠಿ ಕನ್ನಡ ಎರಡೂ ಭಾಷೆಗಳಲ್ಲಿ ದೀರ್ಘ ಲೇಖನಗಳನ್ನು ಬರೆದಿದ್ದಾರೆ.

ವಿಜಯನಗರ ಸಾಮ್ರಾಜ್ಯದ ಪತನವು ತಾಳೀಕೋಟೆಯ ಯುದ್ಧದಲ್ಲಾಯಿತೆಂದು ಈ ಮೊದಲು ಎಲ್ಲ ಇತಿಹಾಸಕಾರರು ಉಲ್ಲೇಖಿಸಿದ್ದರು. ವಿಜಯನಗರದ ರಾಮರಾಯನ ಆಸ್ಥಾನದಲ್ಲಿ ಸಮಕಾಲೀನನಾಗಿದ್ದ ಹರಕಾರ ಎಂಬುವವನ ಬಖರನ್ನು ನೋಡಿದ ಮೇಲೆ ಈ ವಿಷಯದಲ್ಲಿ ಸಂಶಯ ಬಂದಿತ್ತು. ಅದನ್ನು ನೋಡಿದ ರಾಜಪುರೋಹಿತರು ಆತ ಬಖರಿನಲ್ಲಿ ಉಲ್ಲೇಖಿಸಿದ ಗ್ರಾಮಗಳಿಗೆ ಹೋಗಿಬಂದರು. ಹೀಗೆ ಸುತ್ತುತ್ತಿರುವಾಗ ತಂಗಡಗಿಯ ದಕ್ಷಿಣ ಭಾಗದಲ್ಲಿ ಮೂರು ಎಕರೆಯಷ್ಟು ವಿಶಾಲವಾದ ಸ್ಥಳದಲ್ಲಿ ಬೂದಿಯ ರಾಶಿಯು ಹರಡಿದ್ದನ್ನು ಕಂಡರು. ಆ ರಾಶಿಯು ಮೊದಲು ಒಂದೂವರೆ ಅಡಿ ಆಳ ಎತ್ತರವಾಗಿತ್ತಂತೆ. ಜನರು ತಮ್ಮ ಕೆಲಸಗಳಿಗೆ ಅದನ್ನು ಉಪಯೋಗಿಸಿದ್ದಾಗಿ ಹಳ್ಳಿಯ ವೃದ್ಧ ಜನರಿಂದ ಅರಿತುಕೊಂಡರು. ಸತ್ತವರನ್ನು ದಹನ ಮಾಡಿದ್ದಿರಬೇಕೆಂದು ರಾಜಪುರೋಹಿತರಿಗೆ ಸಂಶಯ ಬಂದಿತು. ಗ್ರಾಮಸ್ಥರ ಸಹಾಯದಿಂದ ಕೆಲವು ಕೂಲಿ ಆಳುಗಳನ್ನು ಕೆಲಸಕ್ಕೆ ಹಿಡಿದು, ದೇವತೆಯ ಪ್ರಾರ್ಥನೆಯನ್ನು ಮಾಡಿ, ಅಗೆಯಲು ಪ್ರಾರಂಭಿಸಿದರಂತೆ. ಅಗೆದಂತೆ ಎಲುಬುಗಳು ಎಲುಬಿನ ಚೂರುಗಳು ದೊರೆತುವಂತೆ. ಜೊತೆಗಿದ್ದ ಡಾ. ಬಕ್ಷಿ ಅವರು ಅವುಗಳು ಸೈನಿಕರ ಮತ್ತು ಕುದುರೆಗಳ ಎಲುಬುಗಳೆಂದು ದೃಢಪಡಿಸಿದಾಗ ರಾಜಪುರೋಹಿತರು ಆನಂದ ಪರವಶರಾದರಂತೆ.

ಬಿಜಾಪುರದ ಆದಿಲಶಹನು ರಾಮರಾಯನಿಗಾಗಿ ಒಂದು ಮಹಲನ್ನು ಕಟ್ಟಿಸಿದ್ದನೆಂದೂ ಹರಕಾರೆಯು ತನ್ನ ಬಖರಿಯಲ್ಲಿ ಹೇಳಿದ್ದಾನೆ. ಅದನ್ನೂ ರಾಜಪುರೋಹಿತರು ಹುಡುಕಿದರು. ತುಸು ದೂರದಲ್ಲಿ ವಿಸ್ತಾರವಾದ ದೊಡ್ಡ ಕಟ್ಟೆಯನ್ನು ಅದರ ಮೇಲಿನ ವೀರಗಲ್ಲನ್ನು ಕಂಡರು. ಇನ್ನೂ ಮುಂದೆ ನಾಲ್ವತ್ವಾಡ ಗ್ರಾಮದತ್ತ ಹೋದಾಗ ರಣಸ್ತಂಭಗಳು ನೋಡಲು ದೊರೆತವು. ಈ ಎಲ್ಲ ಸಾಕ್ಷಿ ಪುರಾವೆಗಳನ್ನು ಗಮನಿಸಿ ಅವುಗಳನ್ನು ಪರಿಶೀಲಿಸಿದ ಮೇಲೆ, ರಕ್ಕಸತಂಗಡಗಿ ಮತ್ತು ನಾಲ್ವತ್ವಾಡಗಳ ಊರುಗಳ ಮಧ್ಯ ಘನಘೋರ ಸಂಗ್ರಾಮವು ನಡೆಯಿತು. ಗ್ರಾಮದ ಇನ್ನೊಂದು ಬದಿಗೆ ವೀರರಿಗೆ ಉಚಿತವಾದ ದಹನ ಕ್ರಿಯೆಯು ನಡೆಯಿತು ಎಂಬ ನಿರ್ವಿವಾದ ಸತ್ಯವು ಹೊರಹೊಮ್ಮಿತು.

ಕ್ರಿ. ಶ. ೧೯೨೯, ರಾಜಪುರೋಹಿತರ ಸಂಶೋಧನಾ ವರ್ಷಗಳಲ್ಲೆ ಅತಿ ಮಹತ್ವದ್ದೆಂದು ಹೇಳಬಹುದು. ಈ ವರುಷವೇ ಅವರು ರಕ್ಕಸತಂಗಡಗಿ ಕಾಳಗದ ಬಗ್ಗೆ ಶೋಧ ಮಾಡಿದರು. ಮುಂದಿನ ೨, ೩ ತಿಂಗಳಲ್ಲಿ ಪುಣೆಯ ಭಾರತ ಇತಿಹಾಸ ಸಂಶೋಧನ ಮಂಡಳದ ಸಮ್ಮೇಳನದಲ್ಲಿ ಈ ವಿಷಯದಲ್ಲಿ ಪ್ರಬಂಧವನ್ನು ಮಂಡಿಸಿದರು. ಅನಂತರ ಕನ್ನಡ ಮರಾಠಿ ಎರಡೂ ಭಾಷೆಗಳಲ್ಲೂ ಪ್ರಬಂಧವನ್ನು ಪ್ರಕಟಿಸಿದರು.

ಪಟರ್ಧನ ಕೇಳಕರ ಮೊದಲಾದ ಇತಿಹಾಸ ಪ್ರಭೃತಿಗಳು ವಿವರವಾಗಿ ಈ ಯುದ್ಧದ ಬಗ್ಗೆ ಮರಾಠಿಯಲ್ಲಿ ಬರೆದಿದ್ದ ಆಭಿಪ್ರಾಯಗಳು ಈ ಶೋಧದಿಂದಾಗಿ ಬುಡಮೇಲಾದವು. ಅವರ ಈ ಶೋಧಕ್ಕೆ ಮಹತ್ವ ಬರಲು ಇನ್ನೂ ಒಂದು ಕಾರಣವಿತ್ತು.

“ಯಾವ ಯುದ್ಧದಿಂದ ಸಮಗ್ರ ದಕ್ಷಿಣ ಹಿಂದುಸ್ತಾನದ ಇತಿಹಾಸ ಸ್ವರೂಪವೇ ಬದಲಾಯಿತೋ ಅಂಥ ಯುದ್ಧ ನಡೆದಲ್ಲಿ, ಭಾರತ ಇತಿಹಾಸ ಸಂಶೋಧಕ ಮಂಡಳದ ಸಲಹೆಯ ಮೇರೆಗೆ, ಆಗಿನ ಬ್ರಿಟಿಷ್‌ ಸರಕಾರವು ಒಂದು ಸ್ಮಾರಕವನ್ನು ಕಟ್ಟಲು ನಿರ್ಧರಿಸಿತ್ತು.”[3]

೧೭ ವರುಷಗಳಷ್ಟು ಹಿಂದೆ ಅಂದರೆ ೧೯೧೨ರಲ್ಲಿ ಪ್ರಕಟವಾದ ಅವರ ಮರಾಠೀ ಲೇಖನಮಾಲೆ ‘ಮಹಾರಾಷ್ಟ್ರ ವ ಕರ್ನಾಟಕ’ ಮುಂದೆ ಪುಸ್ತಕ ರೂಪದಲ್ಲಿ ಬಂದ ಬಗ್ಗೆ ದಾಖಲೆ ಇಲ್ಲವಾದರೂ ಲೇಖಕರೆಂದು ಅವರ ಹೆಸರನ್ನು ಬರೆಯುವಾಗ ದಾನಧರ್ಮಪದ್ಧತಿ ಮತ್ತು ಮಹಾರಾಷ್ಟ್ರ ವ ಕರ್ನಾಟಕ ಎಂಬ ಪುಸ್ತಕಗಳ ಕರ್ತೃಗಳು ಎಂಬ ಉಲ್ಲೇಖವನ್ನು ಅನೇಕ ಸಲ ಕಾಣುತ್ತೇವೆ. ಬಹುಶಃ ಲೇಖನಮಾಲೆಯು ಅನಂತರ ಮರಾಠಿಯಲ್ಲಿ ಪುಸ್ತಕ ರೂಪದಲ್ಲೂ ಬಂದಿರುವ ಸಾಧ್ಯತೆ ಇದೆ.

ದಿನಾಂಕ ೨೦.೦೮.೧೯೧೨ರಂದು ‘ಮಹಾರಾಷ್ಟ್ರ ವ ಕರ್ನಾಟಕ’ ಲೇಖನಮಾಲೆಯ ಮೊದಲ ಲೇಖವು ‘ಕೇಸರಿ’ ಯಲ್ಲಿ ಪ್ರಕಟವಾಯಿತು. ಅದರಲ್ಲಿ ‘ಮರಾಠೀ’ ಭಾಷೆಯ ಇತಿಹಾಸವನ್ನು ಹೇಳುತ್ತ ಈಗಿನ ಮಹಾರಾಷ್ಟ್ರವು ಪೂರ್ವದಲ್ಲಿ ಕರ್ನಾಟಕದ ಒಂದು ಭಾಗವಾಗಿತ್ತು ಎಂದಿದ್ದಾರೆ. ಕರ್ನಾಟಕ ಉತ್ತರದ ಗಡಿಯು ಕ್ರಮೇಣ ಕೆಳಗೆ ಸರಿಯಿತು ಎಂಬುದನ್ನು ತೋರಿಸಿದ್ದಾರೆ. ವಿಶೇಷವಾಗಿ ‘ಮಹಾರಾಷ್ಟ್ರ’ ವೆಂದರೆ ಅದು ಇಂದು ತಿಳಿಯುತ್ತಿರುವ ಮರಾಠೀ ಭಾಷೆಯ ಪ್ರದೇಶವೆಂಬ ಹಾಗೆ ಅದರ ವಿಸ್ತೃತ ಮೇರೆ ಅಥವಾ ಗಡಿ ಎಂರ್ಥವಲ್ಲ. ಮಹಾರಾಷ್ಟ್ರವೆಂದರೆ ದೊಡ್ಡ ರಾಷ್ಟ್ರ ವೆಂದೂ ಅದು ಅಂದಿನ ಕರ್ನಾಟಕಕ್ಕೆ ಅನ್ವಯಿಸುತ್ತದೆಂದು ಪ್ರತಿಪಾದಿಸಿದ್ದಾರೆ. ಅನಂತರ ಭಾಷೆಯತ್ತ ತಿರುಗಿ ಅಂದಿನ ವ್ಯಾಕರಣಕಾರರಾದ ಗೋಡಬೊಲೇ, ರಾ. ಭೀ. ಜೋಶಿ ಮುಂತಾದವರು ಮರಾಠೀ ಭಾಷೆಯ ಬಳಕೆಯಲ್ಲಿ ಎಷ್ಟೋ ಕನ್ನಡ ಶಬ್ಧಗಳಿರುವುದನ್ನು ಒಪ್ಪಿಕೊಂಡದ್ದನ್ನು ಎತ್ತಿ ತೋರಿಸಿದ್ದಾರೆ. ಅದರಂತೆ ಜ್ಞಾನೇಸ್ವರಿ ಅಮೃತಾನುಭವಿಯಲ್ಲಿ ಬಂದ ಕನ್ನಡ ಪದಗಳ ಪಟ್ಟಿಯನ್ನು ಕೊಟ್ಟಿದ್ದಾರೆ. ಅನಂತರ ಊರುಗಳ ಹೆಸರುಗಳ ಮೇಲೆ ಆದ ಕನ್ನಡದ ಪ್ರಭಾವವನ್ನು ಸ್ಥಳಾನುಕ್ರವಾಗಿ ಹೇಳಿದ್ದಾರೆ.

ಗೋವಾ, ಕೊಲ್ಹಾಪುರ, ಸಾತಾರಾ, ಸೊಲ್ಲಾಪುರ, ಪುಣೆ (ಪುರಂದರದಾಸರ ಜನ್ಮ) ಕೊಂಕಣ ಇವುಗಳಲ್ಲಿಯ ಕನ್ನಡದ ಕುರುಹುಗಳನ್ನು ಕೊಟ್ಟಿದ್ದಾರೆ. ಅಲ್ಲಿಂದ ಕನ್ನಡದ ರಾಜಮನೆತನಗಳಾದ ಸವದತ್ತಿ ರಟ್ಟರು, ದೇವಗಿರಿ ಯಾದವರು, ಶಿಲಾಹಾರರು ಕನ್ನಡಿಗರೆಂದೂ ಅವರಲ್ಲಿದ್ದ ಕನ್ನಡ ಕವಿಗಳ ಬಗ್ಗೆಯೂ ಬರೆದರು.

ಮುಂದೆ ದೊರೆತ ಆರನೆಯ ಲೇಖನದಲ್ಲಿ (೧೯೧೩) ಮಂಡನ ಮಿಶ್ರರನ್ನು ಶಂಕರಾಚಾರ್ಯರು ಸೋಲಿಸಿದರು ಎಂದು ಹೇಳಿ ಅವರೇ ಮುಂದೆ ಶೃಂಗೇರಿ ಮಠದ ಜಗದ್ಗುರುಗಳಾದ ಸುರೇಶ್ವರಾಚಾರ್ಯ ಎಂಬ ಹೆಸರಿನಿಂದ ಪ್ರಸಿದ್ಧರಾದರು. ಅವರ ವಸತಿ ಸ್ಥಾನದ ವಿಚಾರ ಮಾಡುತ್ತ ನರ್ಮದಾ ನದಿಯವರೆಗೆ ಕನ್ನಡನಾಡು ಹಬ್ಬಿತ್ತು ಎಂದು ತೋರಿಸಿದ್ದಾರೆ.

ಜುಲೈ ೧೯೧೪ರಲ್ಲಿ ಪಂಢರಪುರ ವಿಠಲನನ್ನು ಕನ್ನಡಿಗನೆಂದು ಪ್ರತಿಪಾದಿಸಿದರು. ಭಾಂಡಾರಕರ, ಪಟವರ್ಥನ ಮೊದಲಾದವರ ಹೇಳಿಕೆಗಳನ್ನೆ ಅವರಿಗೆ ತಿರುಗಿಸಿದ್ದಾರೆ. ವಿಷ್ಣುಭಕ್ತಿಯು ಕರ್ನಾಟಕದಲ್ಲಿ ರಾಮಾನುಜಾಚಾರ್ಯರ ಕಾಲದಿಂದ ಬಂದಿತು ಎಂದಿದ್ದಾರೆ.

ರಾಜಪುರೋಹಿತರ ಲೇಖನಗಳಿಗೆ ಪುರಾವೆಗಳೇ ಇಲ್ಲ ಎಂಬ ಸಣ್ಣ ದನಿ ಮಹಾರಾಷ್ಟ್ರದ ತುಂಬ ಎದ್ದಿತು. ಆದರೆ ಯಾವ ವಿದ್ವಾಂಸರೂ ಈ ಲೇಖನಗಳನ್ನು ಎದುರಿಸಲಿಲ್ಲ. ಪ್ರತಿಭಟಿಸಲಿಲ್ಲ. ಪ್ರತಿಯಾಗಿ ರಾಜಪುರೋಹಿತರ ಲೇಖನಗಳಿಂದಾಗಿ ಪ್ರೇರಿತರಾಗಿ ಛತ್ರೆಯಂತಹ ಅಭಂಗ ಪಾಠಕರು ನಾಮದೇವನಲ್ಲೂ ಕನ್ನಡ ಪದಗಳು ಇದ್ದುದನ್ನು ಪತ್ರ ಬರೆದು ತೋರಿಸಿದರು. ಮುಂದಿನ ದಿನಗಳಲ್ಲಿ ವಿಠಲ ರಾಮಾಜಿ ಶಿಂದೆ ಎಂಬುವರು ೧೯೨೩ರಲ್ಲಿ ಕನಾಡೀ ವ ಮರಾಠೀ ಎಂದು ನಾಲ್ಕೈದು ಲೇಖನಗಳನ್ನು ಬರೆದರು.

ರಾಜಪುರೋಹಿತರ ಸಂಶೊಧನ ಲೇಖನಗಳಲ್ಲಿ ಇನ್ನೊಂದು ಮಹತ್ವದ ಸಂಶೋಧನೆ ಎಂದರೆ ವಿಕ್ರಮಶಕದ ಪ್ರಾರಂಭದ ದಿನವನ್ನು ಕಂಡುಹಿಡಿದದ್ದಾಗಿದೆ. ೯೯೭ನೆಯ ಶಕವರ್ಷದ ನಳ ಸಂವತ್ಸರದ ಫಾಲ್ಗುಣ ಶುದ್ಧ ಪಂಚಮಿ ಗುರುವಾರ ಶ್ರೀ ಮಚ್ಚಾಳುಕ್ಯ ವಿಕ್ರಮಾಂಕ ಚಕ್ರವರ್ತಿಯ ಪಟ್ಟಬಂಧ ಮಹೋತ್ಸವ ನಡೆಯಿತು. ಅದರಂತೆ ಭೂಲೋಕ ಮಲ್ಲ, ಅಪರಾದಿತ್ಯ ಮುಂತಾದ ರಾಜರ ಮೇಲೆ, ಹೊಸ ಬೆಳಕನ್ನು ಚೆಲ್ಲಿದ್ದಾರೆ. ಎರಡರು ನೂರರ ನಾಡು ಯಾವುದೆಂಬುದನ್ನು ವಿಶದೀಕರಿಸಿದ್ದಾರೆ. ವಿದ್ಯಾರಣ್ಯರ ಮೇಲೆ ಐದು ಲೇಖನಗಳನ್ನು ‘ಕರ್ಮವೀರ’ ಪತ್ರಿಕೆಯಲ್ಲಿ ೧೯೨೧ರಲ್ಲಿ ಬರೆದಿದ್ದಾರೆ. ವಿದ್ಯಾರಣ್ಯರ ಕುರಿತು ಒಂದು ಪುಸ್ತಕವಾಗುವಷ್ಟು ಸಾಹಿತ್ಯ ಪಸ್ತಪ್ರತಿಯಲ್ಲಿದೆ. ವಿದ್ಯಾರಣ್ಯರ ಕುರಿತಾದ ಮಹತ್ವದ ಸಂಶೋಧನೆಯೆಂದರೆ ಅವರು ವಿಜಯನಗರ ರಾಜ್ಯ ಸ್ಥಾಪನೆಯ ಕಾಲಕ್ಕೆ ಇರಲಿಲ್ಲ. ಅನಂತರ ಇದ್ದವರು ಎಂದೂ ವಿಜಯನಗರ ವಿದ್ಯಾನಗರ ಎಂಬ ರಾಜಧಾನಿಯ ಹೆಸರಿನ ಮೂಲವನ್ನು ಇಲ್ಲಿ ಕೆದಕಿದ್ದಾರೆ. ಸಮಕಾಲೀನ ಪ್ರವಾಸಿಗರ ವರದಿಗಳು, ಮುಸಲ್ಮಾನ ಇತಿಹಾಸಕಾರರು, ಕನ್ನಡದಲ್ಲಿಯ ಶಿಲೆ ಹಾಗೂ ತಾಮ್ರ ಶಾಸನಗಳನ್ನೆಲ್ಲ ಪರಾಮರ್ಶಿಸಿ ಸುದೀರ್ಘವಾಗಿ ಬರೆದಿದ್ದಾರೆ. ವಿದ್ಯಾರಣ್ಯರ ಕಾಲವನ್ನು ಅನೇಕ ಮೂಲಗಳಿಂದ ನಿರ್ಣಯ ಮಾಡಿದ್ದಾರೆ. ಅವರ ಪುಣ್ಯತಿಥಿಯನ್ನು ಜ್ಯೇಷ್ಠ ಬಹುಳ ತ್ರಯೋದಶಿಯೆಂದು ನಿರ್ಣಯಿಸಿದ್ದಾರೆ.

ಕುಮಾರರಾಮನು ವಿಜಯನಗರದ ದೇವರಾಯನ ಕಾಲದವನು ಎಂದು ದಿನಾಂಕ ೦೨.೦೨.೧೯೪೨ರ ಕರ್ಮವೀರ ಸಂಚಿಕೆಯಲ್ಲಿ ಲೇಖನವನ್ನು ಬರೆದರು. ಅದನ್ನು ಖಂಡಿಸಿ ಪಾಂಡುರಂಗರಾವ ದೇಸಾಯಿ ಮತ್ತು ಹುಲ್ಲೂರು ಶ್ರೀನಿವಾಸ ಜೋಯಿಸ ವಕೀಲರು ಕ್ರಮವಾಗಿ ೧೬/೨ ಮತ್ತು ೨೩.೦೨.೧೯೪೨ರ ಸಂಚಿಕೆಗಳಲ್ಲಿ ಬರೆದಿದ್ದಾರೆ. ಅವರಿಬ್ಬರ ವಾದವನ್ನು ಖಂಡಿಸಿ ರಾಜಪುರೋಹಿತರು ಕುಮಾರರಾಮನು ವಿಜಯನಗರದ ದೇವರಾಯನ ಕಾಲದವನೇ ಹೌದು ಎಂಬುದಾಗಿ ಸಾಧಾರಪೂರ್ವಕವಾಗಿ ವಾದಿಸಿದ್ದಾರೆ. ಅವರ ಬರವಣಿಗೆಯ ಗತ್ತು, ವಾದ ಮಾಡುವ ರೀತಿಯನ್ನು ನೋಡಲು ಅವರ ಹಸ್ತಪ್ರತಿಯಲ್ಲೆ ಅನುಬಂಧದಲ್ಲಿ ಕೊಡಲಾಗಿದೆ.

ಅವರ ಒಟ್ಟು ಸಂಶೋಧನ ಲೇಖನಗಳು ಕನ್ನಡದಲ್ಲಿ ೨೦೦ ಮರಾಠಿಯಲ್ಲಿ ೨೦ ಎಂದು ಅವರೆ ಒಂದೆಡೆ ಹೇಳಿಕೊಂಡಿದ್ದಾರೆ.ಡಾ.ಹಾವನೂರರ ಕರ್ತವ್ಯಾನಂದ ನಾ ಶ್ರೀ ರಾಜಪುರೋಹಿತರು ಪುಸ್ತಕದಲ್ಲಿ ೫೫ ಲೇಖನಗಳ ಪಟ್ಟಿ ಇದೆ.ಅವರ ಎಲ್ಲ ಸಂಶೋಧನ ಲೇಖನಗಳನ್ನು ದೊರಕಿಸಿ ಒಂದೆಡೆ ಸಂಗ್ರಹಿಸಿ ಪ್ರಕಟಿಸುವುದು ಅಗತ್ಯವಾಗಿದೆ.

 

[1] ಸಂಕ್ಷಿಪ್ತ ಕನ್ನಡ ನಿಘಂಟು ಕಸಾಪ ಪು. ೩೨೩., ರುಖೋತ ನೋಡಿ.

[2] ಮರಾಠಿ ಕನ್ನಡ ಶಬ್ಧಕೋಶ ಮಹಾರಾಷ್ಟ್ರ ಸಾಹಿತ್ಯ  ಸಂಸ್ಕೃತಿ ಮಂಡಳ ೧೯೭೬ ಪು. ೫೧೮

[3] ಕರ್ತವ್ಯಾನಂದ ಶ್ರೀ ನಾ. ಶ್ರೀ ರಾಜಪುರೋಹಿತರು (೧೯೫೮) ಪು. ೨೧