. ಶ್ರೀ ಸುರೇಶ್ವರಾಚಾರ್ಯರ ಚರಿತ್ರೆ

ಧಾರವಾಡಕ್ಕ ಬಂದ ಮೇಲೆ ಅವರ ಬರೆಹ ಚುರುಕುಗೊಂಡಿತು. ಸಂಶೋಧನೆ, ಜಯ ಕರ್ನಾಟಕ, ಕರ್ನಾಟಕ ಇತಿಹಾಸ ಸಂಶೋಧನ ಮಂಡಳಗಳಲ್ಲಿ ಮಗ್ನರಾದರು. ಮಾಧ್ವ ಸಂಪ್ರದಾಯದ ರಾಜಪುರೋಹಿತರಿಗೆ ಸ್ಮಾರ್ತ ಸಂಪ್ರದಾಯದ ಶೃಂಗೇರಿ ಶಂಕರಮಠ ಮತ್ತು ಅದರ ಆದ್ಯ ಗುರುಗಳಾದ ಸುರೇಶ್ವರಾಚಾರ್ಯರ ಬಗ್ಗೆ ಆಕರ್ಷಣೆ ಹೇಗೆ ಆಯಿತು ಎಂದಿನಿಂದ ಆಯಿತು ಎಂದು ಖಚಿತವಾಗಿ ಹೇಳಲು ದಾಖಲೆಗಳಿಲ್ಲ. ಅದರೆ ಅಗಡಿಯ ಶೇಷಾಚಲರು ಮತ್ತು ಅಲ್ಲಿಯ ಅನಂದವನ ಸ್ಮಾರ್ತ ಸಂಪ್ರದಾಯದ್ದು. ಅವರ ಹಿರಿಯ ಅಣ್ಣ ನರಸಿಂಹನಿಗೆ ಅಲ್ಲಿಯ ಸಂಪರ್ಕ ಬಂದು ಕೊನೆಗೆ ಅಲ್ಲಿಯೇ ನೆಲೆಸಿ ನರಸಿಂಹ ಭಟ್ಟರಾದರು. ಬಹುಶಃ ಈ ಸಂದರ್ಭದಲ್ಲಿ ರಾಜಪುರೋಹಿತರಿಗೂ ಶಂಕರ ಸಂಪ್ರದಾಯದ ಸಂಪರ್ಕ ಬಂದಿರಬೇಕು. ಅನಂತರದ ಅವರ ಕಾಶೀ ವಿದ್ಯಾಭ್ಯಾಸದ ಯಾತ್ರೆಯ ಸಮಯದಲ್ಲಿ ವೈದಿಕ ಮತವನ್ನು ಪುನರುತ್ಥಾನ ಮಾಡಿದ ಶಂಕರಾಚಾರ್ಯರ ಬಗ್ಗೆ ಆದರ ಗೌರವಗಳು ಉಂಟಾಗಿರಬೇಕು. ಹಾಗೆ ಅಭ್ಯಾಸ ಮಾಡುವಾಗ ಕರ್ನಾಟಕದಲ್ಲಿಯ ಶೃಂಗೇರಿ ಮಠಕ್ಕೆ ಆದ್ಯಗುರುಗಳಾಗಿ ಬಂದ ಸುರೇಶ್ವರಾಚಾರ್ಯರ ಬಗ್ಗೆ ಕುತೂಹಲ ಸಂಶೋಧನೆಗೆ ಕಾರಣವಾಗಿರಬೇಕು.

೧೯೧೨ರಷ್ಟು ಹಿಂದೆಯೇ ಸುರೇಶ್ವರಾಚಾರ್ಯರ ಗ್ರಂಥಗಳನ್ನು ಅಭ್ಯಾಸ ಮಾಡಿದ್ದರು. ‘ಕರ್ನಾಟಕ ಮಹಾರಾಷ್ಟ್ರ’ ಕೇಸರಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಮಾಲೆಯಲ್ಲಿ ನರ್ಮದೆಯವರೆಗೆ ಹಬ್ಬಿದ ಕರ್ನಾಟಕವನ್ನು ಪರಿಚಯಿಸುವ ಸಂದರ್ಭದಲ್ಲಿ ಸುರೇಶ್ವರಾಚಾರ್ಯರ ಕಾಲ ಸ್ಥಳಗಳ ಬಗ್ಗೆಯೂ ಚರ್ಚಿಸಿದ್ದಾರೆ. ಆ ದಿನಗಳಲ್ಲಿ ‘ಆಚಾರ್ಯ’ ಎಂಬ ಮರಾಠಿ ಪತ್ರಿಕೆಯಲ್ಲಿ ಸುರೇಶ್ವರಾಚಾರ್ಯರ ಬಗ್ಗೆ ಪ್ರತ್ಯೇಕ ಲೇಖನವನ್ನೂ ಬರೆದಿದ್ದಾರೆ.

ಸುರೇಶ್ವರಾಚಾರ್ಯರ ಚರಿತ್ರೆಯನ್ನು ಬರೆಯುವ ಮುಖ್ಯ ಉದ್ದೇಶವನ್ನು ಅವರು ಪ್ರಸ್ತವನೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

“ಈ ಮಹನೀಯರು ಅದ್ವಿತೀಯ ಪಾಂಡಿತ್ಯದಿಂದಲೂ ಅತುಲ ಸ್ವಾರ್ಥ ತ್ಯಾಗದಿಂದಲೂ ವೈದಿಕ ಧರ್ಮದ ಪುನರುಜ್ಜಿವನದ ಕಾರ್ಯದಲ್ಲಿ ಆರಂಭದಿಂದ ಕೊನೆಯವರೆಗೂ ಹೋರಾಡಿರುವುದರಿಂದ ಇವರ ಚರಿತ್ರೆಯೆಂದರೆ, ವೈದಿಕ ಧರ್ಮದ ಪುನರುಜ್ಜಿವನದ ಸಾಂದ್ಯಂತವಾದ ಸಂಕ್ಷಿಪ್ತ ಇತಿಹಾಸವೇ ಸರಿ.”[1]

ವೈದಿಕ ಧರ್ಮದ ಅನುಯಾಯಿಗಳಾದ ರಾಜಪುರೋಹಿತರು ಕರ್ನಾಟಕದಲ್ಲಿ ಶಂಕರ ಮಠದ ಆದ್ಯ ಜಗದ್ಗುರುಗಳ ಕುರಿತು ಬರೆಯುವುದು ಸ್ವಾಭಾವಿಕವಾಗಿತ್ತು. ಜೊತೆಗೆ ಸುರೇಶ್ವರಾಚಾರ್ಯರು ಮೂಲತಃ ಕಾಣ್ವಶಾಖೆಯವರು ಎಂದು ಗೊತ್ತಾದಾಗ ರಾಜಪುರೋಹಿತರು ಅವರ ಚರಿತ್ರೆಯನ್ನು ಬರೆಯುವುದೆಂದೇ ನಿರ್ಧರಿಸಿದರು. ಬಡೋದೆಯ ವಾಸ್ತವ್ಯದಲ್ಲಿ ಅಲ್ಲಿಯ ಗ್ರಂಥಾಲಯದಲ್ಲಿಯ ಅನೇಕ ಗ್ರಂಥಗಳನ್ನು ಪರಾಮರ್ಶಿಸಿದರು. ಗ್ರಂಥವನ್ನು ಬರೆಯುವ ಉದ್ದೇಶದಿಂದ ಟಿಪ್ಪಣಿಗಳನ್ನು ಮಾಡಿಕೊಂಡು ಬಂದುದಾಗಿಯೂ ಪ್ರತ್ಸಾವನೆಯಲ್ಲಿ ಹೇಳಿದ್ದಾರೆ. ಚರಿತ್ರೆಯ ಕೆಲವು ಬಗ ೧೯೧೫ರಷ್ಟು ಹಿಂದೆ ಅಗಡಿಯ ‘ಸದ್ಬೋಧ ಚಂದ್ರಿಕೆ’ ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅನಂತರ ಭೀ. ಪ. ಕಾಳೆ ಅವರು ೧೯೨೨ ರಲ್ಲಿ ಪೂರ್ತಿಯಾಗಿ ಪುಸ್ತಕ ರೂಪದಲ್ಲಿ ಪ್ರಕಟಿಸಿದರು.

ಸುರೇಶ್ವರಾಚಾರ್ಯರ ಚರಿತ್ರೆಯನ್ನು ಶುದ್ಧ ಧಾರ್ಮಿಕ ಹಾಗೂ ಸಂಪ್ರದಾಯಕ ರೀತಿಯಲ್ಲಿ ಬರದಿದ್ದರೂ ಅದನ್ನು ಬರೆಯುವಲ್ಲಿಯ ಚಿಕಿತ್ಸಕ ಬುದ್ಧಿ, ಸಂಶೋಧನೆಯ ಗತ್ತು ಅನನ್ಯವಾಗಿದೆ. ‘ಅವರ ನಿಜವಾದ ಸಂಶೋಧನೆಯ ಕಾರ್ಯ ಈ ಕೃತಿಯಿಂದಲೇ ಪ್ರಾರಂಬವಾಯಿತು.’ ಎಂಬುದು ಸುಳ್ಳಲ್ಲ.

ಸುರೇಶ್ವರಾಚಾರ್ಯರ ಚರಿತ್ರೆಯ ಪ್ರಕಟನೆಯಿಂದ ಜನತೆಯ ಇನ್ನೊಂದು ವರ್ಗದ ಗಮನವು ರಾಜಪುರೋಹಿತರತ್ತ ಹೋದದ್ದು ವಿಶೇಷವಾಗಿದೆ. ಮಾಧ್ವ ಸಂಪ್ರದಾಯದ ರಾಜಪುರೋಹಿತರು ಸ್ಮಾರ್ತ ಸಂಪ್ರದಾಯದ ಜಗದ್ಗುರುಗಳ ಬಗ್ಗೆ ಬರೆದದ್ದು ಅವರಿಗೆ ಎಳ್ಳಷ್ಟು ಸರಿ ಬರಲಿಲ್ಲ. ಧಾರವಾಡದಿಂದ ಹೊರಡುತ್ತಿದ್ದ ‘ವಿಜಯ’ ಎಂಬ ಆಗಿನ ಪತ್ರಿಕೆಯಲ್ಲಿ ಮತ್ತು ಇತರ ಕಡೆಗಳಲ್ಲಿ ಅವರ ಬಗ್ಗೆ ಟಿಕೆಗಳು ಬಂದವು. ಅದಕ್ಕೆ ರಾಜಪುರೋಹಿತರೇನೂ ಮಣಿಯಲಿಲ್ಲ. ಪ್ರತಿಯಾಗಿ ಅದೇ ವಿಜಯ ಪತ್ರಿಕೆಯಲ್ಲಿ ಉತ್ತರ ಕೊಟ್ಟರು. ದಿನಾಂಕ ೧೭.೦೧.೧೯೨೮ರ ಸಂಚಿಕೆಯಲ್ಲಿ ಪ್ರಕಟವಾದ ಅವರ ಲೇಖನಕ್ಕೆ ‘ನಾ. ಶ್ರೀ ರಾಜಪುರೋಹಿತ ಕೈಪಿಯತ್ತು’ ಎಂದೇ ಹೆಸರನ್ನು ಕೊಟ್ಟಿದ್ದಾರೆ.[2] ‘ವಸ್ತುತಃ ನಾನು ಮಾಧ್ವ ಮತಸ್ಥನಾಗಿದ್ದೇನೆ’ ಎಂದು ಹೇಳಿ ಆದರೆ ತ್ರಿಮತಗಳಲ್ಲೂ ಆದರದ ಭಾವವಿದೆ. ಭರತಖಂಡವೆಲ್ಲ ಬೌದ್ಧಮಯವಾಗಿ ಹೋಗುತ್ತಿರುವಾಗ ಶ್ರೀ ಸುರೇಶ್ವರಾಚಾರ್ಯರು ಬ್ರಾಹ್ಮಣ ಧರ್ಮದ ಪುನರುಜ್ಜೀವ ಮಾಡಿದ್ದಾರೆ. ಆದ್ದರಿಂದ ತ್ರಿಮತಸ್ಥರೂ ಅವರಿಗೆ ಋಣಿಯಾಗಿರಬೇಕು ಎಂದಿದ್ದಾರೆ. ಹಾಗೆಯೇ ಮುಂದುವರೆದು ಆಚಾರ್ಯನಾದ ನಾನು ಸುರೇಶ್ವರಾಚಾರ್ಯರ ಬಗ್ಗೆ ಬರೆದ್ದನಾದ್ದರಿಂದ ‘ಭಟ್ಟ’ ನಾಗುತ್ತಿದ್ದರೆ, ಮುಂದೆ ರಾಮನುಜಾಚಾರ್ಯರ ಬಗ್ಗೆ ಬರೆದರೆ ಅಯ್ಯಂಗಾರನಾಗಬೇಕೆ? ಎಂದು ಪ್ರಶ್ನಿಸಿದ್ದಾರೆ.

ಹೀಗೆ ಒಂದು ವರ್ಗದ ಜನರಿಂದ ರಾಜಪುರೋಹಿತರು ದೂಷಣೆಗೆ ಒಳಗಾದರು. ಆದರೆ, ಅವರು ತಮ್ಮ ದೃಷ್ಟಿಯನ್ನು ಬದಲಾಯಿಸಲಿಲ್ಲ. ಪ್ರತಿಯಾಗಿ ಅವರ ಪುಸ್ತಕ ಪ್ರತಟವಾದನಂತರ ಪ್ರತಿ ವರುಷ ಶ್ರೀ ಸುರೇಶ್ವರಾಚಾರ್ಯರ ಉತ್ಸವನ್ನು ಆಚರಿಸಲು ಜನರಲ್ಲಿ ಪ್ರಚಾರ ಮಾಡಿದರು. ತಾವು ಸ್ವತಃ ಪ್ರತಿವರುಷ ಅವರ ಉತ್ಸವವನ್ನು ಆಚರಿಸಿದರು. ಭಾವಚಿತ್ರವನ್ನು ತೆಗಿಸಿ ನಾಡಿನಾದ್ಯಂತ ವಿತರಿಸಿದರು. ಅಷ್ಟೇ ಅಲ್ಲ ಈ ದಿನಗಳಲ್ಲೆ ಅವರ ಸೌಭಾಗ್ಯವತಿಯು ಗಂಡು ಮಗುವನ್ನು ಹೆತ್ತಾಗ ಮಗುವಿಗೆ ‘ಸುರೇಶ್ವರ’ ಎಂದೇ ಹೆಸರಿಟ್ಟರು! ಶೃಂಗೇರಿ ಮಠವು ರಾಪುರೋಹಿತರನ್ನು ಆಮಂತ್ರಿಸಿ ಸನ್ಮಾನ ಮಾಡಿ ಸಂಭವನೆ ನೀಡಿದ್ದು ಸಹಜವಾಗಿತ್ತು.[3]

. ಕರ್ನಾಟಕದ ವರ್ಣನೆಯೂ ಇತಿಹಾಸವೂ

ರಾಜಪುರೋಹಿತರ ಸಂಶೋಧನೆ ಮತ್ತು ಅಭ್ಯಾಸದಿಂದಾಗಿ ಕರ್ನಾಟಕದ ಬಗ್ಗೆ ಅನೇಕ ಐತಿಹಾಸಿಕ ಸಂಗತಿಗಳು ಅವರ ಲೇಖನಗಳ ಮೂಲಕ ಬೆಳಕಿಗೆ ಬಂದಿದ್ದುವು. ಅವುಗಳ ಆಧಾರದಿಂದ ಕರ್ನಾಟಕದ ಸಮಗ್ರ ಇತಿಹಾಸವನ್ನು ಬರೆಯಬೇಕೆಂದು ಬಹುಕಾಲದಿಂದ ಅವರು ಮನಸು ಮಾಡಿದ್ದರು. ೧೯೨೪ – ೩೦ರ ಮಧ್ಯ ಅದಕ್ಕೊಂದು ರೂಪವನ್ನು ಕೊಡಬೇಕೆಂದಿದ್ದರು. ಈ ಕುರಿತು ಅನೇಕ ಟಿಪ್ಪಣಿಗಳನ್ನು ತಮ್ಮ ದಿನಚರಿಯ ಪುಟಗಳಲ್ಲಿ ಮಾಡಿಕೊಂಡಿದ್ದರು.

ನೆಗವಾದಡಿಯಿಂದ ಧಾರವಾಡಕ್ಕೆ ಬಂದು ಮನೆ ಮಾಡಿದ ಅವರಿಗೆ ಒಂದು ನಿರ್ದಿಷ್ಟ ಮಾಸಿಕ ಆದಾಯ ಎಂಬುದು ಇರಲಿಲ್ಲ. ಹೀಗಾಗಿ ಕೈಗಡ ಸಾಲಗಳು ಈ ದಿನಗಳೀಂದಲೇ ವಿಶೇಷವಾಗಿ ಪ್ರಾರಂಭವಾಗಿವೆ. ಮದುವೆಯ ಮೊದಲು ಕೂಡ ಮಧ್ಯದ ನೌಕರಿಯ ವರುಷ ಎರಡು ವರುಷಗಳ ಸಮಯವನ್ನು ಬಿಟ್ಟರೆ, ಆಗಲೂ ಕೂಡ ನಿರ್ದಿಷ್ಟ ಆದಾಯ ಇರಲಿಲ್ಲ. ಆದರೆ ಬ್ರಹ್ಮಚಾರಿ ಒಬ್ಬಂಟಿ ಜೀವನ ಅದಕ್ಕೆಯೇ ಅವರು ವಾನಪ್ರಸ್ಥ ಜೀವನ ಎಂದಿದ್ದಾರೆ. ಆದಿನಗಳಲ್ಲಿ ಕ್ವಚಿತ್ತಾಗಿ ಕೈ ಒಡ್ಡಿದ್ದಾರೆ. ಹೊಲದ ಲಾವಣಿ ಇತ್ಯಾದಿಗಳ ಮೂಲಕ ಜೀವನ ಹೇಗೋ ಸಾಗುತ್ತಿತ್ತು. ಸಂಸಾರಸ್ಥರಾದ ಮೇಲೆ ಹಾಗೆ ಜೀವನ ಸಾಗಿಸುವುದು ಕಠಿಣವಾಯಿತು. ಅದಕ್ಕಾಗಿಯೇ ಅವರು ಒಂದು ಆಶ್ರಯವನ್ನು ಬಯಸಿ ನೆಗವಾಡಿಯ ವಧುವಿನ ಕೈ ಹಿಡಿದಿದ್ದರು. ಆ ಆಶ್ರಯ ಅವರ ಮನಸ್ಸಿಗೆ ಹಿಡಿಸದಿದ್ದಾಗ ಧಾರವಾಡಕ್ಕೆ ಸಂಸಾರ ಸಮೇತ ಬಂದು ಮನೆ ಮಾಡಿದರು. ಚೊಚ್ಚಿಲು ತೀರಿಕೊಂಡ ಮೇಲೆ ಮೊದಲ ಮಗು ಹೆಣ್ಣು ಹುಟ್ಟಿತು. ಹೆಸರು ಸುಶೀಲಬಾಯಿ[4] ಅನಂತರ ೧೯೨೪ರಲ್ಲಿ ಅವತರಿಸಿದವರೇ ಸುರೇಶ್ವರಾಚಾರ್ಯರು. ಹಿಗೆ ಸಂಸಾರ ಬೆಳೆಯಿತು. ಅದಕ್ಕೆ ಅನುಗುಣವಾಗಿ ಕೈಗಡದ ಸಾಲಗಳೂ ಬೆಳೆದವು. ಇಂಥ ಒಂದು ಸಂದರ್ಭದಲ್ಲಿ, ಮಾಡಿದ ಸಾಲವನ್ನು ತೀರಿಸಲು ಮಿತ್ರರೊಬ್ಬರು ಒಂದು ಸಲಹೆಯನ್ನು ನೀಡಿದರು.

‘ಕರ್ನಾಟಕದ ಇತಿಹಾಸವನ್ನು ಸದ್ಯಕ್ಕೆ ನೀವು ಪಠ್ಯಪುಸ್ತಕದ ರೀತಿಯಲ್ಲಿ ಬರೆದರೆ ಒಳ್ಳೆಯದು’ ಎಂದು ಸೂಚಿಸಿದರು. ರಾಜಪುರೋಹಿತರು ಅದನ್ನು ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಬೇಕಾಯಿತು. ಅಧಿಕೃತವಾದ ಸಾಧಾರ ಪೂರ್ವಕವಾದ ಕರ್ನಾಟಕದ ಒಂದು ಸಮಗ್ರ ಇತಿಹಾಸವನ್ನು ಅನಂತರ ಬರೆಯುವುದೆಂದು ಸಮಾಧಾನ ಪಟ್ಟುಕೊಂಡು ಪಠ್ಯಪುಸ್ತಕಕ್ಕಾಗಿ ‘ ಕರ್ನಾಟಕದ ವರ್ಣನೆಯೂ ಇತಿಹಾಸವೂ’ ಎಂಬುದಾಗಿ ಒಂದು ಪುಸ್ತಕವನ್ನು ಬರೆದರು.

ಹುಬ್ಬಳಿಯ ವಾಗ್ವಿಲಾಸ ಪುಸ್ತಕ ಪ್ರಕಾಶನದ ಏ. ಆರ್‌. ಶಿವನಾಗಪ್ಪನವರಿಗೆ ೪೫೦ ರೂಪಾಯಿಗಳಿಗೆ ಹಸ್ತಪ್ರತಿಯನ್ನು ಮಾರಿದರು. ೦೮.೦೪.೧೯೨೯ರಂದು ಉಭಯತರ ಮಧ್ಯ ಒಂದು ಕರಾರು ಪತ್ರವು ಸಿದ್ಧವಾಯಿತು.[5] ಅದರಲ್ಲಿ ತಿಳಿಸಿದಂತೆ ಹಸ್ತಪ್ರತಿಯನ್ನು ಕೊಡುವ ಕಾಲಕ್ಕೆ ೨೮೦ ರೂಪಾಯಿಗಳನ್ನು ಕೊಡಲಾಗಿದೆ. ಅನಂತರ ಪುಸ್ತಕ ಪ್ರಕಟವಾಗಿ ಪಠ್ಯಪುಸ್ತಕವೆಂದು ಸ್ವೀಕೃತಿಯಾದ ಮೇಲೆ ಇನ್ನು ಉಳಿದ ೧೭೦ ರೂಪಾಯಿಗಳನ್ನು ಕೊಡಬೇಕೆಂದು ಕರಾರು ಆಗಿದೆ. ಪುಸ್ತಕವು ಪ್ರಕಟವಾದ ಮೇಲೆ ಅದು ಪಠ್ಯಪುಸ್ತಕವೆಂದೂ ಸ್ವೀಕೃತಿಯಾಗಿದೆ. ಆದರೆ ಕರಾರಿನಂತೆ ಪ್ರಕಾಶಕರು ಉಳಿದ ಹಣವನ್ನು ಕೊಡಲಿಲ್ಲವೋ, ಅಥವಾ ಕಡಿಮೆ ಕೊಟ್ಟರೊ ಅಂತು ‘ಅವರ ಮೇಲೆ ಕೋರ್ಟಿನಲ್ಲಿ ದಾವೆಯನ್ನು ಹೂಡುವ ಪ್ರಸಂಗವೂ ಬಂದಿದೆ’ ಎಂದು ರಾಜಪುರೋಹಿತರು ತಮ್ಮ ದಿನಚರಿಯೊಂದರ ಪುಟದಲ್ಲಿ ನಮೂದಿಸಿದ್ದಾರೆ.

ವಿದ್ಯಾರ್ಥಿಗಳಿಗಾಗಿ ಪಠ್ಯ ಪುಸ್ತಕ ರೂಪದಲ್ಲಿ ಬರೆಯುವುದು ಎಂದು ನಿರ್ಧರಿಸಿದ ಮೇಲೆ ರಾಜಪುರೋಹಿತರು ಇಲ್ಲಿ ಶಿಕ್ಷಕ ಬುದ್ಧಿಯನ್ನು ಉಪಯೋಗಿಸಿಕೊಂಡರು. ವಿದ್ಯಾರ್ಥಿಗಳಿಗೆ ಇತಿಹಾಸದ ಅಭ್ಯಾಸವು ಯಾವತ್ತಿನಿಂದ ಪ್ರಾರಂಭವಾಗುವುದೋ, ಆ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಸುಲಭ ಶೈಲಿಯಲ್ಲಿ ಮನೋರಂಜಕ ಆಗುವಂತೆ ಬರಯುವ ದೃಷ್ಟಿಯನ್ನಿಟ್ಟುಕೊಂಡರು. ಅಲ್ಲಲ್ಲಿ ನಕ್ಷೆಗಳನ್ನೂ ನಾಡಿನ ರಾಜಮನೆತನದ ವಂಶಾವಳಿಗಳನ್ನೂ ತಾವೇ ಸಿದ್ಧಗೊಳಿಸಿದರು. ಪ್ರಕಾಶಕರು ಕೂಡ ಪುಸ್ತಕವು ಸುಂದರವಾಗಿ ಬರುವಂತೆ ಆ ದಿನಗಳಲ್ಲಿ ಪ್ರಯತ್ನಿಸಿದ್ದಾರೆ.

ರಾಜಪುರೋಹಿತರು ಬರೆದ ಪುಸ್ತಕ ಎಂದ ಮೇಲೆ ವಿಷಯದ ಪ್ರಾಮಾಣ್ಯವನ್ನು ಶಂಕಿಸುವ ಪ್ರಶ್ನೆಯೇ ಇರಲಿಲ್ಲ. ಕೂಡಲೇ ಅದು ಪಠ್ಯಪುಸ್ತಕವೆಂದು ಮಂಜೂರಾಯಿತು. ಸುಮಾರು ೧೨ ವರುಷಗಳ ಕಾಲ ಅದು ಏಕೈಕ ಪಠ್ಯವಾಗಿತ್ತು. ಅದರ ಏಳೆಂಟು ಆವೃತ್ತಿಗಳು ಪ್ರಕಟವಾಗಿ ೨೫ ಸಾವಿರಕ್ಕೂ ಅಧಿಕ ಪ್ರತಿಗಳು ಮಾರಾಟವಾದವು. ಆದರೆ ಆದರಿಂದ ಲೇಖಕರಿಗೆ ದೊರೆಯುಬೇಕಾದಷ್ಟು ಆರ್ಥಿಕ ಅನುಕೂಲ ಆಗಲಿಲ್ಲ ಎಂದು ಕಾಣುತ್ತದೆ. ಮುಂದಿನ ದಿನಗಳಲ್ಲಿ ಆದರ ಮರಾಠಿ ಅನುವಾದವನ್ನು ಹುಬ್ಬಳ್ಳಿಯ ಬೇಡೇಕರ ಮತ್ತು ಸಿಂಧೆ ಎಂಬ ಮಾಸ್ತರರು ಮಾಡಿದ್ದಾರೆ. ಕರ್ನಾಟಕದಲ್ಲಿಯ ಮರಾಠಿ ಮಕ್ಕಳಿಗೆ ಇತಿಹಾಸ ತಿಳಿಯಲು ಸಹಾಯವಾಯಿತು.

. ಶ್ರೀ ಮನ್ಮಾಧ್ವಾಚಾರ್ಯರು ಹಾಗೂ ಶ್ರೀ ಜಯತೀರ್ಥರ ಚರಿತ್ರೆಯು

ಕರ್ನಾಟಕದ ವರ್ಣನೆಯ ಇತಿಹಾಸದ ಅನಂತರ ರಾಜಪುರೋಹಿತರು ಮುಂದಿನ ಪುಸ್ತಕ ಶ್ರೀ ಮಧ್ವಾಚಾರ್ಯರು ಮತ್ತು ಜಯತೀರ್ಥರ ಕುರಿತದ್ದಾಗಿದೆ. ಮೂಲತಃ ಮಾಧ್ವ ಸಂಪ್ರದಾಯದವರಾದ್ದರಿಂದ ಅವರಲ್ಲಿ ಮಧ್ವಾಚಾರ್ಯರ ಕುರಿತು ಮೊದಲಿನಿಂದಲೂ ಅಭ್ಯಾಸ ನಡೆದಿತ್ತು. ೧೯೧೪ರಷ್ಟು ಹಿಂದೆಯೇ ಅವರ ಬಗ್ಗೆ, ಅವರ ಕಾಲದ ಬಗ್ಗೆ ಸಂಶೋಧನೆಯನ್ನು ನಡೆಸಿದ್ದರು. ಅನೇಕ ಹಿರಿಯ ವಿದ್ವಾಂಸರೊಂದಿಗೆ, ಪಂಡಿತರೊಂದಿಗೆ ಈ ಉಭಯತರ ಬಗ್ಗೆ ಹಲವಾರು ಸಲ ಚರ್ಚಿಸಿದ ಉಲ್ಲೇಖ ಅವರ ದಿನಚರಿಯಲ್ಲಿ ಬರುತ್ತದೆ. ಅವರಿಬ್ಬರು ಹುಟ್ಟಿದರೆಂದು ಹೇಳಲಾದ ಸ್ಥಳಗಳಿಗೆ ಅನೇಕ ಸಲ ಹೋಗಿ ಬಂದಿದ್ದಾರೆ. ದೇಹವಿಟ್ಟ ಸ್ಥಳಗಳಿಗೂ ಹೋಗಿದ್ದಾರೆ. ಆದರೂ ಬರವಣಿಗೆ ಪ್ರಾರಂಭವಾದದ್ದು ೧೯೩೩ರಲ್ಲಿ. ಪ್ರತಿಯೊಂದು ವಿಷಯವನ್ನು ಒರೆಗೆಹಚ್ಚಿ ಖಚಿತ ನಿಲುವು ಬರುವವರೆಗೆ ಬರವಣಿಗೆಯನ್ನು ಪ್ರಾರಂಭಿಸಿಲ್ಲ. ಒಂದು ಸಲ ವಿಷಯದ ಬಗ್ಗೆ ಖಾತ್ರಿಯಾದ ಅನಂತರ ಅದರಲ್ಲಿ ಬದಲಾವಣೆ ಇಲ್ಲ. ಮಧ್ವಾಚಾರ್ಯರ ಕಾಲನಿರ್ಣಯದ ಬಗ್ಗೆ ನಾಡಿನ ಅನೇಕ ವಿದ್ವಾಂಸರು ಚರ್ಚಿಸಿದ್ದಾರೆ. ರಾಜಪುರೋಹಿತರು ಬರೆಯುವ ಮೊದಲು ನಿರ್ಧರಿಸಿದ ಕಾಲವನ್ನು ಸಾಧಾರ ಪೂರ್ವಕವಾಗಿ ಬದಲಿಸಿದ್ದಾರೆ. ಅನಂತರ ತಮ್ಮ ನಿಲುವನ್ನು ಬದಲಿಸಿಲ್ಲ. ಶ್ರೀ ಮಧ್ವಾಚಾರ್ಯರ ಕಾಲ ನಿರ್ಣಯ ಮಾಡಲು ಒಂದಲ್ಲ ಹತ್ತು ಹನ್ನೆರಡು ಅಂತರ ಬಾಹ್ಯ ಪ್ರಮಾಣಗಳನ್ನು ತೋರಿಸಿದ್ದಾರೆ. ಈ ಮೊದಲಿನ ಪುಸ್ತಕಗಳಿಗಿಂತ ಇಲ್ಲಿ ಅವರ ಸಂಶೋಧನೆ ಹರಳು ಗಟ್ಟಿದೆ. ಅಷ್ಟಾಗಿಯೂ ಅವರ ಅನೇಕ ಪ್ರಮಾಣಗಳು ಮತ್ತು ಅದರಿಂದ ನಿಷ್ಪನ್ನವಾಗುವ ನಿರ್ಧಾರಗಳು ಬದಲಾಗಬಹುದು. ಆದರೆ ಸಂಶೋಧಕನ ದೃಷ್ಟಿಯಿಂದ ಅವರ ಬರವಣಿಗೆ ಮಾದರಿಯಾಗಿದೆ. ಕನ್ನಡ ಭಾಷೆಯಲ್ಲಿ ಈ ರೀತಿಯ ಸಂಶೋಧನೆ ಅಷ್ಟೊಂದು ಬೆಳೆಯದಿದ್ದಾಗ ರಾಜಪುರೋಹಿತರ ಸಂಶೋಧನೆಯ ರೀತಿ, ಪ್ರಸ್ತುತ ಪಡಿಸುವ ವಿಧಾನ ಇಂದಿನ ಸಂಶೋಧಕರಿಗೂ ಅನುಕರಣೀಯವಾಗಿದೆ

ಪೂರ್ವಕಾಲದಿಂದಲೂ ಗ್ರಾಹ್ಯವಾದ ಒಂದು ಸಂಗತಿಯನ್ನು ಅದು ಘಟಿಸಲೇ ಇಲ್ಲ. ಎಂದು ಸಿದ್ಧಪಡಿಸಿದ ರೀತಿ ವಿಧಾನಗಳು ಅನನ್ಯವಾಗಿವೆ. ದ್ವೈತ ಅದ್ವೈತ ವಿಶಿಷ್ಟಾದ್ವೈತ ತ್ರಿಮತಗಳಲ್ಲಿ ಅವುಗಳು ಹುಟ್ಟಿದಂದಿನಿಂದ ಪೈಪೋಟಿ ನಡೆದೇ ಇದೆ. ಅಂಥದೊಂದು ಘಟನೆ ಮಾಧ್ವರಲ್ಲಿ ಪ್ರಚಲಿತದಲ್ಲಿದ್ದದ್ದು ಮಧ್ವಾಚಾರ್ಯರ ಸಾಕ್ಷಾತ್‌ ಶಿಷ್ಯರಾದ ಅಕ್ಷೋಭ್ಯತೀರ್ಥರು, ವಿದ್ಯಾರಣ್ಯರನ್ನು ವಾದದಲ್ಲಿ ಸೋಲಿಸಿದ್ದು ಮತ್ತು ಆ ಬಗ್ಗೆ ಮುಳಬಾಗಿಲಿನ ಗುಡ್ಡದ ಮೇಲೆ ಶಿಲಾಲೇಖದೊಂದಿಗೆ ವಿಜಯಸ್ಥಂಬವನ್ನು ನೆಟ್ಟದ್ದು ಯಾವ ಮಾಧ್ವನಿಗಾದರೂ ಅಭಿಮಾನದ ಸಂಗತಿ. ಲೇಖಕರು ಸ್ವತಃ ಮಾಧ್ವ ಸಂಪ್ರದಾಯ ದವರಾಗಿದ್ದರೂ ಅಕ್ಷೋಭ್ಯತೀರ್ಥರು ಮತ್ತು ವಿದ್ಯಾರಣ್ಯರ ಮಧ್ಯ ವಾದ ಆಗಲೇ ಇಲ್ಲ ಎಂದು ಸಪ್ರಮಾಣವಾಗಿ ಸಿದ್ಧಮಾಡಿ ತೋರಿಸಿದ್ದು ಯಾವ ಸಂಶೋಧಕನಿಗೂ ಗೌರವ ಆದರಗಳನ್ನು ಹುಟ್ಟಿಸುವಂಥದ್ದಾಗಿದೆ. ಇಲ್ಲಿ ಧರ್ಮ ಮತ ಒಂದೂ ಹಣಿಕಿಲ್ಲ. ಸತ್ಯಾನ್ವೇಷಣೆಯೇ ಗುರಿಯಾಗಿದೆ. ಯಾರ ಬಗ್ಗೆ ಆಗೌರವವೂ ಇಲ್ಲ. ಇನ್ನೊಬ್ಬರ ಬಗ್ಗೆ ಅತಿಯಾದ ಗೌರವವೂ ಇಲ್ಲ. ಅಕ್ಷೋಭ್ಯತೀರ್ಥರು ಮತ್ತು ವಿದ್ಯಾರಣ್ಯ ಉಭಯತರ ವಿದ್ವತ್ತು ಪಾಂಡ್ಶಿತ್ಯಗಳ ಬಗ್ಗೆ ಲೇಖಕರಿಗೆ ಅಪಾರವಾದ ಗೌರವವಿದೆ. ಆದರೆ ಪ್ರಸ್ತುತದ ಸಂದರ್ಭದಲ್ಲಿ ಅದು ಗೌಣವಾಗಿದೆ. ಸತ್ಯವಾಗಿ ಏನು ನಡೆದಿದೆ ಎಂಬುದರ ಬಗ್ಗೆ ಅವರು ಮಾಡಿದ ಸಂಶೋಧನೆ ಅದಕ್ಕೆ ಪಟ್ಟ ಶ್ರಮ ಅದನ್ನು ಓದಿದರೆ ಗೊತ್ತಾಗದಿರದು. ೧೯೩೪ರಲಿ ಹುಬ್ಬಳ್ಳಿಯ ಅವದೂತ ಗ್ರಂಥಮಾಲೆಯವರು ಇದನ್ನು ಪ್ರಕಟಿಸಿದರು. ಸುರೇಶ್ವರಾಚಾರ್ಯರ ಚರಿತ್ರೆಯನ್ನು ಬರೆದ ಮೇಲೆ ಹುಟ್ಟಿದ ಮಗನಿಗೆ ಸುರೇಶ್ವರ ಎಂದು ನಾಮಕರಣ ಮಾಡಿದಂತೆ, ಮಧ್ವಾಚಾರ್ಯರ ಚರಿತ್ರೆಯನ್ನು ಪ್ರಕಟಿಸಿದ ಅನಂತರ ತಮ್ಮ ಎರಡನೆಯ ಮಗನಿಗೆ ‘ಮಧ್ವ’ ನೆಂದು ಹೆಸರಿಟ್ಟರು.

ಮಧ್ವಾಚಾರ್ಯರು ಮತ್ತು ಜಯತೀರ್ಥರ ಚರಿತ್ರೆ ರಚನೆಯಲೂ ಸಂಶೋಧನೆಯೇ ಮುಖ್ಯಗುರಿಯಾಗಿತ್ತಷ್ಟೇ, ಆದರೆ ಅವರಿಬ್ಬರೂ ಕಾಣ್ವಮತ ಮೂಲದವರು ಎಂದು ಸಾಧಿಸಿದ್ದು ಮತ್ತೆ ಕೆಲವು ಜನರು ಅಪಾರ್ಥ ಮಾಡಿಕೊಳ್ಳಲು ಕಾರಣವಾಯಿತು. ಮುಂದಿನ ಎರಡು ಮೂರು ವರುಷಗಳಷ್ಟು ಕಾಲ ಸಾಕಷ್ಟು ಖಂಡನೆ, ಚರ್ಚೆ ವಾದ ವಿವಾದಗಳು ನಾಡಿನಾದ್ಯಂತ ನಡೆದವು. ಈ ವಿಷಯವು ಅಂದಿನ ಉತ್ತರಾಧಿ ಮಠಾಧೀಶರವರೆಗೂ ಹೋಯಿತು. ಅಂದು ಮಠಾಧೀಶರಾಗಿದ್ದವರು ಶ್ರೀ ಸತ್ಯಧ್ಯಾನ ತೀರ್ಥರು, ಪಾಂಡಿತ್ಯಕ್ಕೆ ಭಾರತದಾದ್ಯಂತ ಇನ್ನಿಂದು ಹೆಸರಾಗಿದ್ದರು. ಲೋಕಮಾನ್ಯ ತಿಳಕರು ಗೀತಾ ರಹಸ್ಯವನ್ನು ಬರೆದು ಪ್ರಕಟಿಸಿದಾಗ ಅದ್ವೈತ ಪರವಾದ ಅವರ ಟೀಕೆಯ ಕುರಿತು ಅವರೊಂದಿಗೆಯೇ ಚರ್ಚಿಸಿದ್ದಾರೆ. ಅಂಥ ಸ್ವಾಮಿಗಳನ್ನು ಹುಡುಕಿಕೊಂಡು ಹೋಗಿ ತಮ್ಮೆಲ್ಲ ಪ್ರಮಾಣಗಳನ್ನು ರಾಜಪುರೋಹಿತರು ಶ್ರೀಗಳವರ ಮುಂದಿಟ್ಟರು. ವಾದಮಾಡಿದರು. ಕೊನೆಗೆ ಶ್ರೀಗಳವರು ‘ಮಧ್ವಾಚಾರ್ಯರು ಕಾಣ್ವ ಮೂಲದವಾರಾಗಿದ್ದರೆ ಅದರಿಂದನೇನೂ ಬಾಧಕಲಿಲ್ಲ’ ಎಂದು ಹೇಳಿದರು.[6]

ಭಾರತೀಯರ ಮಹಾತ್ಮರ, ಮತ ಸಂಸ್ಥಾಪಕರ ಮತ್ತು ಇತರ ರಾಜ ಮಹಾರಾಜರ ಚರಿತ್ರೆಗಳಲ್ಲಿ ಬಹುತೇಕವಾಗಿ ಅತಿರಂಜಿತ ವಿವರಣೆಗಳೇ ಆಧಿಕವಾಗಿರುತ್ತವೆ. ಹೀಗಾಗಿ ವಾಸ್ತವ ಚಿತ್ರವನ್ನು ಕಂಡು ಹಿಡಿಯುವುದು ಸಂಶೋಧಕನ ಕರ್ತವ್ಯವಾಗಿರುತ್ತದೆ. ಅಂಥ ಸಂದರ್ಭಗಳಲ್ಲಿ ಅನೇಕ ಅತಿರಂಜಿತ ಅವಾಸ್ತವ ಚಿತ್ರಗಳು ಬರುತ್ತವೆ. ಅಂಥ ಎಡೆಗಳಲ್ಲೆಲ್ಲ ರಾಜಪುರೋಹಿತರು ತುಂಬ ಸಂಯಮದಿಂದ ವರ್ತಿಸುತ್ತ ಬೆಣ್ಣೆಯಲ್ಲಿಯ ಕೂದಲೆಳೆಯನ್ನು ತೆಗೆದಂತೆ ತೆಗೆದಿರುತ್ತಾರೆ. ಉದಾಹರಣೆಗೆ ಒಂದು ಪ್ರಸಂಗವನ್ನು ಉದ್ಧರಿಸುವುದಾದರೆ, ಮಧ್ವಾಚಾರ್ಯರ ಚರಿತ್ರಕ್ಕೆ ಮೂಲ ಆಕರವೆಂದರೆ ಅವರು ಅದೃಶ್ಯರಾದ ಕೆಲವು ವರುಷಗಳ ಅಂತರದಲ್ಲಿ ರಚಿತವಾದ ಸುಮಧ್ವವಿಜಯ ಎಂಬ ಸುಂದರ ಕಾವ್ಯವು ಅದನ್ನು ಮಧ್ವಾಚಾರ್ಯರ ಹತ್ತಿರದ ಶಿಷ್ಯರಾದ ತ್ರಿವಿಕ್ರಮ ಪಂಡಿತಾ ಚಾರ್ಯರ ಮಗ ನಾರಾಯಣ ಪಂಡಿತಾಚಾರ್ಯರು ರಚಿಸಿದ್ದಾರೆ. ಅದರಲ್ಲಿ ಒಂದು ಪ್ರಸಂಗ ಬರುತ್ತದೆ. ಮಧ್ವಾಚಾರ್ಯರು ಬದರಿಯಾತ್ರೆಯನ್ನು ಮಾಡಿಕೊಂಡು ಬರುವಾಗ ದಾರಿಯಲ್ಲಿ ಮ್ಲೇಂಛ ರಾಜ ಮುಸಲ್ಮಾನ ಬಾದಶನ ನೊಬ್ಬ ಅವರನ್ನು ತಡೆದು ಬಂಧಿಸಲು ಯತ್ನಿಸಿದಾಗ ಮಧ್ವಾಚಾರ್ಯರು ಆ ಬಾದಶಹನೊಂದಿಗೆ ಆತನ ಭಾಷೆಯಲ್ಲೆ ಮಾತನಾಡುತ್ತಾರೆ. ಇತ್ಯಾದಿಯಾಗಿ ವರ್ಣನೆ ಸಾಗುತ್ತದೆ. ಸರ್ವಜ್ಞರಾದ ಮಧ್ವಾಚಾರ್ಯರಿಗೆ ಹೀಗೆ ಎಲ್ಲ ಭಾಷೆಗಳೂ ಬರುತ್ತಿದ್ದವು ಎಂಬುದು ಕವಿ ಅಲ್ಲಿ ಹೇಳುವ ಉದ್ದೇಶವಾಗಿತ್ತು. ಈ ವಿಷಯದಲ್ಲಿ ರಾಜಪುರೋಹಿತರು ಉಲ್ಲೇಖಿಸುತ್ತ ಅಡಿ ಟಿಪ್ಪಣಿಯಲ್ಲಿ ಹೀಗೆ ಹೇಳಿದ್ದಾರೆ.

“ಶ್ರೀ ಮಧ್ವಾಚಾರ್ಯರು ಮೊದಲನೆಯ ಸಾರೆ ಬದರಿಕಾಶ್ರಮಕ್ಕೆ ಹೋಗಿ ತಿರುಗಿ ಬರುವಾಗ ಬಂಗಾಲ ಮುಂತಾದ ಉತ್ತರ ಹಿಂದೂಸ್ತಾನದ ಪ್ರಾಂತಗಳಲ್ಲಿ ದ್ವೈತ ಮತ ಸಿದ್ಧಾಂತವನ್ನು ವಿಷ್ಣು ಭಕ್ತಿಯನ್ನು ಪ್ರಸಾರ ಮಾಡುವುದಕ್ಕೋಸ್ಕರ ಕೆಲವು ದಿವಸ ವಾಸ ಮಾಡಿದಾಗ್ಗೆ ಆ ಉತ್ತರ ಹಿಂದೂಸ್ಥಾನದಲ್ಲಿ ಆಗ ರಾಜಕೀಯ ಭಾಷೆಯಾದ ಮುಸಲ್ಮಾನೀ ಭಾಷೆಯನ್ನು ಆ ಆಚಾರ್ಯರು ಮಾತಾನಾಡುವುದಕ್ಕೆ ಕಲಿತಿರಲಿಕ್ಕೆ ಸಾಕು”[7] ಅದನ್ನು ಅವರು ಪವಾಡ ಎನ್ನಲಿಲ್ಲ!

ಹೀಗೆ ಜಯತೀರ್ಥರ ಪೂರ್ವಜರ ಬಗ್ಗೆ ಮತ್ತು ಇನ್ನಿತರ ಕಡೇಗಳಲ್ಲಿ ತಮ್ಮ ಸಂಶೋಧನ ಪ್ರಜ್ಞೆಯನ್ನು ಮೆರೆದಿದ್ದಾರೆ.

. ಯಾಜ್ಞವಲ್ಕ್ಯರ ಚರಿತ್ರೆ

ರಾಜಪುರೋಹಿತರು ರಚಿಸಿದ ದೊಡ್ಡ ಕೃತಿಗಳಲ್ಲಿ ಶ್ರೀ ಯಾಜ್ಞವಲ್ಕ್ಯರ ಚರಿತ್ರೆಯು ಕೊನೆಯದು. ಉಪನಿಷತ್ಕಾಲದ ದೊಡ್ಡ ತತ್ವವೇತ್ತರಾದ ಶ್ರೀ ಯಾಜ್ಞವಲ್ಕ್ಯರ ಚರಿತ್ರೆ ಅಪೂರ್ವವಾದದ್ದು. ಇಲ್ಲಿ ರಾಜಪುರೋಹಿತರ ಬಹುಶ್ರುತತ್ವ ಹರುಳಗಟ್ಟಿದೆ. ವೇದ, ಉಪನಿಷತ್ತು ಅವುಗಳಲ್ಲಿ ಬರುವ ಸಂಹಿತೆಗಳು, ಬ್ರಾಹ್ಮಣಗಳ ಅಭ್ಯಾಸ ಲೇಖಕರ ಅಭ್ಯಾಸದ ಆಳವನ್ನು ಸೂಚಿಸುತ್ತದೆ. ‘ಯಾಜ್ಞವಲ್ಕ್ಯರ ಚರಿತ್ರೆಯ ಅಂಶಗಳು, ತಮ್ಮ ಕಾಣ್ವ ಹಾಗೂ ಯಜುರ್ವೇದ ಸಂಪ್ರದಾಯದ ಅಭ್ಯಾಸದಲ್ಲಿ ಆಗಲೇ ರಾಜಪುರೋಹಿತರಿಗೆ ದೊರೆತಿದ್ದವು. ಉಪನಿಷತ್ತುಗಳು, ಅವುಗಳ ಮೇಲಿನ ವ್ಯಾಖ್ಯೆಗಳು ಇವುಗಳನ್ನೆಲ್ಲ ಅಭ್ಯಸಿಸಿ ಈ ಋಷಿವರೇಣ್ಯರ ಬಗ್ಗೆ ಇದ್ದ ಅಬದ್ಧ ಕಥೆ ಕಲ್ಪನೆಗಳನ್ನೆಲ್ಲ ಸಂಶೋಧಕ ದೃಷ್ಟಿಯಿಂದ ಉಜ್ಜಿ ನೋಡಿ’ ಈ ಗ್ರಂಥವನ್ನು ಬರೆದರು. ತಮಗೆ ಬಂದಿದ್ದ ಅಲ್ಲಲ್ಲಿಯ ಗೌರವಧನದಿಂದ ಕ್ರಿ.ಶ. ೧೯೩೮ರಲ್ಲಿ ಗ್ರಂಥವನ್ನು ರಾಜಪುರೋಹಿತರೇ ಪ್ರಕಟಿಸಿದ್ದಾರೆ. ಈ ಗ್ರಂಥಕ್ಕೆ ಖ್ಯಾತ ತತ್ವವೇತ್ತರಾಗಿದ್ದ ಪ್ರೊ. ಎನ್‌.ಆರ್. ಕುಲಕರ್ಣಿ ಅವರು ಒಂದು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಮುನ್ನುಡಿಯಲ್ಲಿ ಒಂದಡೆ ರಾಜಪುರೋಹಿತರ ಸಂಶೋಧನೆ ಮತ್ತು ಅವರ ಬರವಣಿಗೆಯ ಬಗ್ಗೆ ಚರ್ಚಿಸುತ್ತ ಹೀಗೆ ಹೇಳಿದ್ದಾರೆ.

ಅನೇಕ ಐತಿಹಾಸಿಕ ಪುರುಷರ ಚರಿತ್ರೆಯ ಸುತ್ತಮುತ್ತು ಸುಳ್ಳು ಕಥೆಗಳು ಮಲೆತು ನಿಂತಿವೆ. ಆಯಾ ಮಹಾಪುರುಷರ ಹೆಚ್ಚಳವನ್ನು ಬೆಳಸಬೇಕೆಂಬ ಸದ್ದೇತುವಿನಿಂದ ಅವು ಪ್ರೇರಿತವಾಗಿರಬಹುದಾದರೂ ಅವುಗಳ ಉದ್ದೇಶವು ಮಾತ್ರ ಕೆಲವು ಸಾರೆಯಂತೂ ತೀರ ವಿಪರೀತವಾಗಿಬಿಟ್ಟಿರುವುದು ಕಂಡು ಬರುತ್ತದೆ. ಇಂತಹ ಸುಳ್ಳು ಕಥೆಗಳ ಜಾಲವನ್ನೆಲ್ಲ ಹರಿದೊಗೆದು ಮಹಾಪುರುಷರ ಜೀವನವನ್ನಷ್ಟೆ ಆರಿಸಿ ತೆಗೆಯುವುದು ಕಠಿಣವಾದ ಮಾತು. ಇದಕ್ಕೆ ಹಿರಿದಾದ ಧೈರ್ಯವೂ ಬೇಕು. ಈ ಕಥೆಗಳೆಲ್ಲ ಇದ್ದಕ್ಕಿದ್ದಂತೆ ಸತ್ಯವಾಗಿರುವುದೆಂದು, ಅವುಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸುವುದೇ ಪಾಪಕರೆವೆಂದು ತಿಳಿಯುವ ಪುಕ್ಕ ಜನರು ಈ ಕೆಲಸಕ್ಕೆ ತಿರ ಅಯೋಗ್ಯರು. ಆದರೆ ರಾಜಪುರೋಹಿತರ ಈ ವಿಷಯಕರವಾದ ಸಾಹಸವು ಪ್ರಸಿದ್ಧವೇ ಆಗಿದೆ. ಅವರು ಯಾರ ಹಂಗನ್ನೂ ಹಿಡಿಯದೆ ನಿರ್ದಾಕ್ಷಿಣ್ಯವಾಗಿ ಸತ್ಯವನ್ನು ಪರೀಕ್ಷಿಸಿ ಹೇಳುವವರು. ಐತಿಹಾಸಿಕ ಸಂಗತಿಗಳನ್ನು ಮೀಮಾಂಸಾಪದ್ಧತಿಯ ಝರಡಿಗೆ ಹಾಕಿ ತೆಗೆಯುವುದು ಅವರ ಶೈಲಿಯ ವೈಶಿಷ್ಟ್ಯ. ಹಳೆಯ ಮಾತುಗಳನ್ನು ಹೊಸ ಶೈಲಿ, ಹೊಸ ಪದ್ಧತಿಗಳಲ್ಲಿ ಹೇಳುವ ಅವರ ರೀತಿಯೇ ನಿರುಪಮವಾಗಿದೆ.“[8]

ರಾಜಪುರೋಹಿತರ ಬರವಣಿಗೆ ಬಗ್ಗೆ ಹೇಳಿದ ಮುನ್ನುಡಿಕಾರರ ಮಾತುಗಳು ಇಂದಿನ ಸಂಶೋಧಕರಿಗೂ ದಾರಿದೀಪವಾಗಿದೆ. ಮುಂದುವರೆದು ಶ್ರೀ ರಾಜಪುರೋಹಿತರು ‘ಶ್ರೀ ಯಾಜ್ಷವಲ್ಕ್ಯರಿಗೆ ಕೊಡಬೇಕಾದ ಋಷಿ ಋಣವನ್ನು ಈ ಸಂಶೋಧನೆಯಿಂದ ತೀರಿಸಿಬಿಟ್ಟಿದ್ದಾರೆ’ ಎಂದು ಹೇಳಿದ್ದುದು ಈ ಕೃತಿಯಲ್ಲಿ ಸಾರ್ಥಕವಾಗಿದೆ.

. ಮಹಾಸಾಧ್ವಿ ತಿಮ್ಮಮ್ಮನವರ ಚರಿತ್ರೆ

ರಾಜಪುರೋಹಿತರು ಬರೆದ ತಿಮ್ಮಮ್ಮನವರ ಚರಿತ್ರೆಯು ಅವರು ಕಾಲವಾದಮೇಲೆ ಪುಸ್ತಕ ರೂಪದಲ್ಲಿ ಬಂದಿತು. ಅದಕ್ಕೂ ಮೊದಲು ಅವರ ಜೀವಿತಕಾಲದಲ್ಲಿ ಧಾರವಾಡದ ವನಿತಾ ಸಮಾಜದ ‘ವೀರಮಾತೆ’ ಮಾಸಿಕದಲ್ಲಿ ಧಾರವಾಹಿಯಾಗಿ ಪ್ರಕಟವಾಯಿತು. ‘ಈ ಚರಿತ್ರೆಯೇ ಅವರ ಜೀವನದ ಕೊನೆಯ ಕೃತಿ’ ಎಂದು ಅವರ ಮಗ ಪ್ರಸ್ತಾವನೆಯಲ್ಲಿ ಹೇಳಿದ್ದಾರೆ.[9]

ರಾಯಚೂರು ಜಿಲ್ಲೆಯ ತುರಡಗಿ ಗ್ರಾಮದ ತಿಮ್ಮಮ್ಮನವರು ೧೮ನೆಯ ಶತಮಾನದ ಮಧ್ಯದಲ್ಲಿದ್ದವರು. ಬಾಲ್ಯದಲ್ಲಿಯೆ ವಿಧವೆಯಾಗಿ ಜೀವನದುದ್ದಕ್ಕೂ ತಿರುಪತಿಯ ವೆಂಕಟೇಶ ಹಾಗೂ ಕೊಪ್ಪರದ ನರಸಿಂಹ ದೇವರ ಸೇವೆಯಲ್ಲಿ ಕಳೆದು ಮಹಾಸಾಧ್ವಿ ಶಿರೋಮಣಿ ಎನಿಸಿದರು. ಅದೊಂದು ಸಾಮಾನ್ಯ ಭಾವಿಕ ಓದುಗರ ಪುಟ್ಟ ಪುಸ್ತಕವೆಂದು, ಪುಸ್ತಕದ ಹೆಸರಿನಿಂದಲೇ ಗುರುತಿಸಬಹುದು. ಆದರೆ ಒಬ್ಬ ಸಾಧ್ವಿ ಮಹಿಳೆಯ ಚರಿತ್ರೆಯನ್ನು ಬರೆಯುವಾಗಲೂ ರಾಜಪುರೋಹಿತರು ತಮ್ಮ ಸಂಶೋಧನೆಯ ಛಾಪನ್ನು ಒತ್ತದೆ ಬಿಟ್ಟಿಲ್ಲ ಎಂಬುದು ವಿಶೇಷವಾಗಿದೆ.

ಸಾಧ್ವಿ ತಿಮ್ಮಮ್ಮನ ಜನನ ಬಾಲ್ಯ ವಿವಾಹ ವೈಧವ್ಯ ಆಧ್ಯಾತ್ಮದತ್ತ ಒಲವು ಮತ್ತು ನಿರ್ಯಾಣದಲ್ಲಿ, ಸಂಶೋಧನೆ ಏನಿದ್ದೀತು. ಆದರೆ ರಾಜಪುರೋಹಿತರು ತಿಮ್ಮಮ್ಮನ ಆರಾಧ್ಯ ದೈವಗಳಾದ ತಿರುಪತಿ ವೆಂಕಟೇಶ ಹಾಗೂ ಕೊಪ್ಪರದ ನರಸಿಂಹ ದೇವರ ಮೂಲವನ್ನು ಕೆದಕಿದ್ದಾರೆ. ಚರಿತ್ರೆಯ ಪ್ರಾರಂಭದ ಮೊದಲು ಉಪಕ್ರಮ ಎಂಬುದಾಗಿ ಒಂದು ಆಧ್ಯಾಯವನ್ನೇ ಇದಕ್ಕೆ ಮೀಸಲಿಟ್ಟಿದ್ದಾರೆ.

‘ಕ್ರಿ. ಶ. ವರ್ಷದ ೧೦೦೦ರಲ್ಲಿ ಶ್ರೀರಾಮಾನುಜಾಚಾರ್ಯರು ವೆಂಕಟಯಗಿರಿಯ ಮೇಲೆ ಈ ಮೂರ್ತಿಯನ್ನು ಹುತ್ತದೊಳಗಿಂದ ಹೊರಗೆ ತೆಗೆಯಿಸಿ ದೇವಾಲಯದಲ್ಲಿ ಪ್ರತಿಷ್ಠೆಯನ್ನು ಮಾಡಿ ಪೂಜಿಸಿದರು. ಈ ಮೂರ್ತಿಯು ಎರಡೂ ಕೈಗಳು ನರ್ತನ ಮಾಡುವ ಸಂದರ್ಭದಲ್ಲಿಯ ಅಭಿನಯ ಶೈಲಿಯಂತೆ ಇರುತ್ತವೆ. ಆದ್ದರಿಂದ ಶ್ರೀ ರಾಮಾನುಜಾ ಚಾರ್ಯರು ಈ ಮೂರ್ತಿಗೆ ‘ಬಾಲ ಗೋಪಾಲಕೃಷ್ಣ’ ಎಂದು ನಾಮಕರಣ ಮಾಡಿದರು. ಯಾಕೆಂದರೆ, ಕೃಷ್ಣನು ಗೋಕುಲದಲ್ಲಿ ಬಾಲಗೋಪಾಲನಾಗಿದ್ದಾಗ ಗೋಪ ಬಾಲರೊಡನೆ ನರ್ತನ ಮಾಡುತ್ತಿದ್ದಾನೆಂಬುದು ಭಾಗವತ ಪುರಾಣದಲ್ಲಿ ಪ್ರಸಿದ್ಧವೇ ಇದೆ. ಶ್ರೀ ರಾಮಾನುಜಾಚಾರ್ಯರ ಶಿಷ್ಯರಾದ ವೈದಿಕವೈಶ್ಯ ಮರವಾಡಿ ಜನರು ‘ಬಾಲಗೋಪಾಲ’ ಈ ಸಮಾ ಸಂಘಟಿತ ನಾಮದಲ್ಲಿಯ ಬಾಲ ಎಂಬ ಪೂರ್ವ ಪದವನ್ನಷ್ಟೇ ಉಚ್ಚಾರದ ಸೌಲಭ್ಯಾರ್ಥವಾಗಿ ಸ್ವೀಕರಿಸಿ ಗೌರವಾರ್ಥ ಜೀ ಪ್ರತ್ಯವನ್ನು ಹಚ್ಚಿ ಬಾಲ ಜೀ ಬಾಲಾಝೀ ಎಂದು ಈ ವೆಂಕಟೇಶ ದೇವರನ್ನು ಸಂಬೋಧಿಸುತ್ತಾರೆ…… (ಅಡಿಟಿಪ್ಪಣಿಯಲ್ಲಿ ಹೀಗೆ ಪೂರ್ವಪದವನ್ನು ಉಪಯೋಗಿಸಿ ಬದಲಾದ ಸನ್ನತಿಯ ಚಂದ್ರಲಾಪರಮೇಶ್ವರಿಯು, ಸಂತಿ ಚಂದಮ್ಮ ಆದುದನ್ನು ಚರ್ಚಿಸಿದ್ದಾರೆ.)

ಅದರಂತೆ ‘ಗೋಪಾಳ ಬೇಡುವುದು’, ‘ಗೋಪಾಳ ಬುಟ್ಟಿ’ – ಇವುಗಳು ಹೇಗೆ ಬಂದವು. ಕರ್ನಾಟಕ ಪ್ರಾಂತದಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ತಿರುಮಲೆಯ ವೆಂಕಟೇಶನ ಪ್ರಭಾವ ಎಂದಿನಿಂದ ಬಂದಿತು ಕರ್ನಾಟಕದಲ್ಲಿಯ ವೆಂಕಟೇಶ ದೇವರ ಗುಡಿಯ ಪ್ರಾಚೀನತೆ ಇತ್ಯಾದಿ ಅನೇಕ ವಿಷಯಗಳನ್ನು ಸಾಧ್ವಿ ತಿಮಮ್ಮನವರ ಚರಿತ್ರೆಯಲ್ಲಿ ಚರ್ಚಿಸಿದ್ದಾರೆ.[10] ತಿರುಪತಿ ತಿಮ್ಮಪ್ಪನ ಮೇಲೆ ಅನಂತರ ೫೦ ವರುಷಗಳಲ್ಲಿ ಅನೇಕ ಪುಸ್ತಕಗಳು ಬಂದಿವೆ. ಈ ತರದ ಸಂಶೋಧನಾ ದೃಷ್ಟಿ , ಮೊದಲಾಗಿದೆ.

ಹೀಗೆ ದಾನ ಧರ್ಮ ಪದ್ಧತಿ ಪುಸ್ತಕವನ್ನು ಹಿಡಿದು ಪುಸ್ತಕ ರೂಪದಲ್ಲಿ ಪ್ರಕಟವಾದ ಅವರ ಆರು ಪುಸ್ತಕಗಳು ದೊರೆಯುತ್ತವೆ.ಐದು ಪುಸ್ತಕಗಳು ಅವರ ಜೀವಿತ ಕಾಲದಲ್ಲಿ ಪ್ರಕಟವಾಗಿದ್ದರೆ,ತಿಮ್ಮಮ್ಮನವರ ಚರಿತ್ರೆಯ ಅನಂತರ ಪ್ರಕಟವಾಗಿದೆ.ಪ್ರತಿ ಪುಸ್ತಕದಲ್ಲೂ ಅವರದೇ ಆದ, ‘ರಾಜಪುರೋಹಿತ ಸಂಶೋಧನ ಛಾಪು’ಇದೆ.

 

[1] ಶುಕ್ಲ ಯಜುರ್ವೇದಿ ಮಹಾತ್ಮರು ೨೦೦೨ ಪು. ೧೪೯

[2] ಪೂರ್ತಿಪಾಠಕ್ಕಾಗಿ ಅನುಬಂಧ ೫ ರಲ್ಲಿ ನೋಡಿ

[3] ಶೃಂಗೇರಿ ಮಠದ ಪತ್ರ ಅನುಬಂಧ ೫ ನೋಡಿ

[4] ಸುಶೀಲಬಾಯಿ ವಯಸ್ಸು ೮೨ ದಾಂಡೇಲಿಯಲ್ಲಿ ಮಗಳ ಮನೆಯಲ್ಲಿದ್ದಾರೆ.

[5] ಕರಾರು ಪತ್ರದ ಪೂರ್ಣಪಾಠಕ್ಕೆ ಅನುಬಂಧ ೭ರಲ್ಲಿ ನೋಡಿ.

[6] ಅನುಬಂಧ ೮ರಲ್ಲಿ ಪೂರ್ತಿ ಪಾಠವನ್ನು ಕೊಟ್ಟಿದೆ.

[7] ಶುಕ್ಲಯಜುರ್ವೇದಿ ಮಾಹಾತ್ಮರು ೨೦೦೨ ಪು. ೨೬೧

[8] ಅದೇ. ಪು. ೬೦, ೬೧.

[9] ಅದೇ. ಪು. ೪೪೩.

[10] ಅದೇ. ಪು. ೪೪೩., ೪೪೭