ಸಾಹಿತ್ಯವನ್ನು ಗ್ರಹಿಸುತ್ತಿರುವ ವಿವಿಧ ವಿಧಾನಗಳಲ್ಲಿ ಸಮಾಜಶಾಸ್ತ್ರೀಯ ನೆಲೆಯೂ ಒಂದು. ಈ ವಿಧಾನವನ್ನು ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಕಾರಣಗಳಿಗಾಗಿ ಬಹಳ ಗಟ್ಟಿಯಾಗಿ ನಂಬಿ ಬಳಸಲಾಗುತ್ತಿದೆ. ಈ ನಂಬಿಕೆಯಿಂದಾಗಿ ಅದು ಬಹಳ ವ್ಯಾಪಕವೂ ಮತ್ತು ಬಹಳ ಜನಪ್ರಿಯವೂ ಆಗಿದೆ. ಸಾಹಿತ್ಯವನ್ನು ಸೌಂದರ್ಯಾತ್ಮಕ ಮತ್ತು ಕಲಾತ್ಮಕ ನೆಲೆಗಳಲ್ಲಿ ಗ್ರಹಿಸುವ ವಿಧಾನಗಳಿವೆ. ಭಾರತೀಯ ಕಾವ್ಯ ಮೀಮಾಂಸೆಯ ಭಾಗಶಃ ನೆರವಿನಿಂದ ಅರಿಯುವ, ಆನಂದಿಸುವ ಕ್ರಮಗಳೂ ಇವೆ. ಆ ಬಗೆಯ ಸಾಹಿತ್ಯ ಗ್ರಹಿಕೆಗಳಿಗೆ ಪ್ರತ್ಯಕ್ಷ ಇಲ್ಲವೆ ಪರೋಕ್ಷ ಪ್ರತಿಕ್ರಿಯೆ/ ಪರ್ಯಾಯ ಎಂಬ ಸಾಂಸ್ಕೃತಿಕ ಒತ್ತಡದಲ್ಲಿ ಸಾಹಿತ್ಯವನ್ನು ನೋಡುವ ವಿಧಾನಗಳು ಬದಲಾಗತೊಡಗಿದವು. ಸಾಹಿತ್ಯವನ್ನು ನೋಡುವ ಕ್ರಮಗಳಲ್ಲಿ ನಡೆದ ಬದಲಾವಣೆಗಳು ಕೇವಲ ಸಾಹಿತ್ಯಕ ಮತ್ತು ಅಕಡೆಮಿಕ್ ವಲಯದಿಂದ ಮಾತ್ರ ಪ್ರಭಾವಿತವಾಗಿರಲಿಲ್ಲ. ಇದಕ್ಕೆ ಅದಕ್ಕಿಂತ ವಿಶಾಲವೂ, ಸಂಕೀರ್ಣವೂ ಆದ ಆರ್ಥಿಕ ರಾಜಕೀಯ ಕಾರಣಗಳಿದ್ದವು. ಇದು ಜಾಗತಿಕ ಮಟ್ಟದಲ್ಲಿ ಮತ್ತು ಕನ್ನಡದಲ್ಲಿ ದಿಡೀರನೆ ಒಂದು ಘಟನೆಯ ಮೂಲಕ ಹುಟ್ಟಿದ ಸಂಗತಿಯಲ್ಲ. ಎಷ್ಟೂ ಸಲ ಇಂತಹ ವೈಚಾರಿಕ ಬದಲಾವಣೆಯ ಸಂಗತಿಗಳನ್ನು ಒಂದು ಘಟನೆಯಿಂದ ಮತ್ತು ಒಬ್ಬ ವ್ಯಕ್ತಿಯಿಂದ, ಒಂದು ನಿರ್ದಿಷ್ಟ ದಿನಾಂಕದಲ್ಲಿ ಹುಟ್ಟಿದವು ಎಂಬಂತೆ ಸರಳೀಕರಿಸಲಾಗುತ್ತದೆ. ವೈಚಾರಿಕ ವಲಯದ ಬದಲಾವಣೆಗಳು ಹಾಗೆ ಒಂದು ಘಟನಾತ್ಮಕ ಕಾರಣಗಳಿಗಿಂತಲೂ ಹೆಚ್ಚಾಗಿ ಪ್ರಕ್ರಿಯಾತ್ಮಕ ಕಾರಣಗಳಿರುತ್ತವೆ. ಇದು ಸಾಹಿತ್ಯಕ ಮತ್ತು ಸಾಂಸ್ಕೃತಿಕ ವಲಯದ ಬೆಳವಣಿಗೆ. ಇದನ್ನು ರಾಜಕೀಯವಾಗಿ ಪರಿಶೀಲಿಸಿದರೆ ಎರಡನೆ ಸಾಮ್ರಾಜ್ಯಶಾಹಿ ಯುದ್ಧದ ಸಂದರ್ಭದಿಂದಲೂ ಅದರ ಬದಲಾದ ಸ್ವರೂಪವನ್ನು ಗುರುತಿಸಬಹುದು.

೧೯೪೫ರ ಚರ್ಚಿಲ್ ಅಗ್ರಿಮೆಂಟ್ ಮತ್ತು ಬ್ರಿಟನ್‌ವುಡ್ ಅಗ್ರಿಮೆಂಟ್ ಇವುಗಳ ಪರಿಣಾಮದ ಫಲವಾಗಿ ಇಂಡಿಯಾಕ್ಕೆ ೧೯೪೭ ರಲ್ಲಿ ಅಧಿಕಾರ ಹಸ್ತಾಂತರ ಮಾಡಲಾಯಿತು. ಭಾರತದ ಆಳುವ ವರ್ಗ ಇದನ್ನೆ ‘ಸ್ವಾತಂತ್ರ್ಯ’ ಎಂದು ಕರೆಯಿತು ಮತ್ತು ನಂಬಿಸಿತು. ೧೯೪೫ರ ಚರ್ಚಿಲ್ ಅಗ್ರಿಮೆಂಟ್ ಮತ್ತು ಬ್ರಿಟನ್ ವುಡ್ ಅಗ್ರಿಮೆಂಟ್‌ಇವು ಎರಡನೆ ಪ್ರಪಂಚ ಯುದ್ಧದ ಮಹತ್ವದ ತಿರುವುಗಳನ್ನು ಆಧರಿಸಿದ್ದವು. ಭಾರತದ ಸಂಪತ್ತನ್ನು ಮತ್ತು ಇಲ್ಲಿಯ ದುಡಿಯುವ ವರ್ಗಗಳ ಶ್ರಮವನ್ನು ವಸಾಹತು ಶಕ್ತಿಗಳು ನೇರವಾಗಿ ಮತ್ತು ದಬ್ಬಾಳಿಕೆಯಿಂದ ಲೂಟಿ ಮಾಡುತ್ತಿದ್ದವು. ಈ ನೇರ ಮತ್ತು ಪ್ರತ್ಯಕ್ಷ ದಬ್ಬಾಳಿಕೆಯ ಲೂಟಿಯ ವಿರುದ್ಧವೇ ಭಾರತದ ಮೂಲೆಮೂಲೆಯ ಆದಿ ವಾಸಿಗಳು, ಬುಡಕಟ್ಟು ಜನರು, ಕಾರ್ಮಿಕರು, ರೈತಾಪಿಗಳು ತಿರುಗಿಬಿದ್ದರು. ವಸಾಹತು ಶಾಹಿಗಳು ಭಾರತೀಯರ ವಿವಿಧ ಮಾದರಿಗಳ ಪ್ರತಿರೋಧಗಳ ಕಾರಣಗಳನ್ನು ಗುರುತಿಸಲು ಮುಂದಾದರು. ಅದಕ್ಕೆ ಬೇರೆಬೇರೆ ವಿಧಾನಗಳನ್ನು ಅನುಸರಿಸಿದರು. ಅವರಿಗೆ ಮುಖ್ಯವಾಗಿ ಕಂಡದ್ದು ತಾವು ನಡೆಸುತ್ತಿದ್ದ ಲೂಟಿಯ ಸ್ವರೂಪ. ಆ ಲೂಟಿಯು ನೇರವಾಗಿತ್ತು ಮತ್ತು ದಬ್ಬಾಳಿಕೆಯದಾಗಿತ್ತು. ಆಗ ಅವರಿಗೆ ಹೊಳೆದದ್ದು ಲೂಟಿಯನ್ನು ಮುಂದುವರಿಸಬೇಕು. ಅದಕ್ಕಾಗಿಅದರ ವಿಧಾನವನ್ನು ಬದಲಾಯಿಸಬೇಕು. ಲೂಟಿಯ ವಿಧಾನವನ್ನು ಬದಲಾಯಿಸದೆ ಹೋದರೆ ತಮ್ಮ ವಿರುದ್ಧದ ಪ್ರತಿರೋಧಗಳು ಬೇರೊಂದು ರೂಪವನ್ನು ಪಡೆಯಬಹುದು. ಹಾಗಾಗಿ ಅದಕ್ಕೆ ಅವಕಾಶ ಕೊಡಕೂಡದು. ಈ ಹಿನ್ನೆಲೆಯಲ್ಲಿ ತಾವು ನಡೆಸುತ್ತಿದ್ದ ಕಾನೂನು ರಹಿತ ದಬ್ಬಾಳಿಕೆಯ ಲೂಟಿಯ ವಿಧಾನವನ್ನು ಬದಲಾಯಿಸಲು ಮುಂದಾದರು. ಇದನ್ನು ಬದಲಾಯಿಸಲು ಕೆಲವು ಒಪ್ಪಂದಗಳನ್ನು ಮಾಡಿಕೊಂಡರು. ಆ ಒಪ್ಪಂದಗಳೇ ಚರ್ಚಿಲ್ ಅಗ್ರಿಮೆಂಟ್ ಮತ್ತು ಬ್ರಿಟನ್‌ವುಡ್ ಅಗ್ರಿಮೆಂಟ್. ಅದರ ಆಧಾರದ ಮೇಲೆ ೧೯೪೭ ರಲ್ಲಿ ಭಾರತದ ಶೋಷಕ ಶಕ್ತಿಗಳಿಗೆ ಅಧಿಕಾರವನ್ನು ಹಸ್ತಾಂತರಿಸಲಾಯಿತು. ವಸಾಹತು ಶಾಹಿಗಳು ತಮ್ಮ ಲೂಟಿಯನ್ನು ಕಾನೂನು ರಹಿತ ವಿಧಾನದಿಂದ ಕಾನೂನಾತ್ಮಕ ವಿಧಾನಕ್ಕೆ ಬದಲಾಯಿಸಿಕೊಂಡರು. ೧೯೪೭ ರಿಂದ ಇಲ್ಲಿಯವರೆಗೆ ಕಾನೂನುಗಳ ನೆರವಿನಿಂದಲೆ ಲೂಟಿ ಮಾಡಲಾಗುತ್ತಿದೆ. ಹೀಗೆ ಲೂಟಿಯನ್ನು ಕಾನೂನು ರಹಿತ ವಿಧಾನದಿಂದ ಕಾನೂನಾತ್ಮಕ ವಿಧಾನಕ್ಕೆ ಬದಲಾಯಿಸಿದಾಗ ಲೂಟಿಯ ವಿರುದ್ಧದ ಆಕ್ರೋಶಗಳು ಕ್ರಮೇಣ ಶಮನವಾಗತೊಡಗಿದವು; ಪ್ರತಿರೋಧಗಳು ದುರ್ಬಲವಾಗತೊಡಗಿದವು.

ಕಳೆದ ಶತಮಾನದ ಆರಂಭದ ಕಾಲದಿಂದಲೆ ಸಮಾಜವಾದಿ ಆಶಯದ ಪ್ರಗತಿಶೀಲ ಸಾಹಿತ್ಯ ಜಗತ್ತಿನ ಬೇರೆಬೇರೆ ಭಾಗಗಳಲ್ಲಿ ರಚನೆಯಾಗತೊಡಗಿತು. ಜೊತೆಗೆ ಆ ಸಾಹಿತ್ಯವನ್ನು ಗ್ರಹಿಸುವ, ವಿಮರ್ಶಿಸುವ ವಿಧಾನಗಳನ್ನು ನಿರ್ಮಾಣ ಮಾಡಲಾಯಿತು. ಅವು ಸಮಾಜವಾದಿ ಆಶಯಗಳ ಜೊತೆಗೆ ಸಮಾಜವಾದಿ ವಿಧಾನಗಳ ಮೂಲಕ ಕಲೆ ಮತ್ತು ಸಾಹಿತ್ಯವನ್ನು ವಿಮರ್ಶಿಸುವ ಕ್ರಮಗಳಾಗಿದ್ದವು. ಅದೆ ಕಾಲಕ್ಕೆ ಸಾಮ್ರಾಜ್ಯ ಶಾಹಿ ತನ್ನ ದಬ್ಬಾಳಿಕೆಯ ಲೂಟಿಯನ್ನು ಒಂದು ಸಹಜ ಕ್ರಿಯೆ ಎಂದು ಒಪ್ಪಿಸಲು ಮತ್ತು ನಂಬಿಸಲು ಮುಂದಾಯಿತು. ಪರಿಣಾಮವಾಗಿ ಸಾಹಿತ್ಯವನ್ನು ವಿಮರ್ಶಿಸುವ ಸಮಾಜವಾದಿ, ಜನತೆಯ ನೆಲೆಯ ಮಾನದಂಡಗಳ ಜಾಗದಲ್ಲಿ ಕೇವಲ ಕಲಾತ್ಮಕ ಮಾನದಂಡಗಳನ್ನು ನಿರ್ಮಿಸಲು ಮುಂದಾಯಿತು. ಜೊತೆಗೆ ಆ ಬಗೆಯ ಸಾಹಿತ್ಯವೂ ಕೂಡ ರಚನೆಯಾಗತೊಡಗಿತು. ಕನ್ನಡದ ನವ್ಯ ಸಾಹಿತ್ಯ ಮತ್ತು ಅದರ ವಿಮರ್ಶೆಯ ಹಿಂದಿನ ರಾಜಕೀಯವನ್ನು ಸ್ಥೂಲವಾಗಿ ಈ ಹಿನ್ನೆಲೆಯಲ್ಲೆ ಅರ್ಥೈಸಿಕೊಳ್ಳಬೇಕು. ಮೊದಲ ಸಾಮ್ರಾಜ್ಯಶಾಹಿ ಯುದ್ಧದ ಸಂದರ್ಭದಲ್ಲಿ ಸಾಹಿತ್ಯವನ್ನು ನೋಡುವ ತದ್ವಿರುದ್ಧ ಎರಡು ಮಾರ್ಗಗಳ ನಡುವೆ ಚಾರಿತ್ರಿಕವಾಗಿ ಸಂಘರ್ಷ ಶುರುವಾಯಿತು. ಎರಡನೇ ಪ್ರಪಂಚ ಯುದ್ಧದ ಹೊತ್ತಿಗೆ ಜಗತ್ತಿನ ಬೇರೆಬೇರೆ ಭಾಗಗಳಲ್ಲಿ ಪ್ರಗತಿಶೀಲ ಸಾಹಿತ್ಯ ನಿರ್ಮಾಣವಾಗತೊಡಗಿತು. ಭಾರತದಲ್ಲಿ ಇದಕ್ಕೆ ಒಂದು ಕಡೆ ಸಂಘಟನಾತ್ಮಕ ವಾತಾವರಣವೂ; ಮತ್ತೊಂದು ಕಡೆ ಅಸಂಘಟನಾತ್ಮಕ ವಾತಾವರಣವೂ ಇತ್ತು. ಆದರೆ ಸಾಹಿತ್ಯ ರಚನೆ ಮತ್ತು ಸಾಹಿತ್ಯ ವಿಮರ್ಶೆಯ ಮಾನದಂಡಗಳ ನೆಲೆಯಲ್ಲಿ ಸೌಂದರ್ಯಾತ್ಮಕ/ಕಲಾತ್ಮಕ ಮಾನದಂಡಗಳಿಗೂ ಮತ್ತು ಸಮಾಜವಾದಿ ಮಾನದಂಡಗಳಿಗೂ ಸಂಘರ್ಷ ನಡೆದೇ ಇತ್ತು. ಬರಹಗಾರರು ಮತ್ತು ಕಲಾವಿದರು ಬಂಡವಾಳ ಶಾಹಿಗಳ ಪರವಾಗಿ, ಶೋಷಣೆಯ ಪರವಾಗಿ ಇರಬೇಕೊ, ಅಥವಾ ಶ್ರಮಜೀವಿಗಳ ಪರವಾಗಿ, ಶೋಷಿತರ ಪರವಾಗಿ ಇರಬೇಕೊ ಎಂಬ ರಾಜಕೀಯ ವಾತಾವರಣ ನಿರ್ಮಾಣವಾಯಿತು. ಕೇವಲ ಸೌಂದರ್ಯಾತ್ಮಕ ಹಾಗೂ ಕಲಾತ್ಮಕ ನೆಲೆಗಳನ್ನು ಕಲೆ ಮತ್ತು ಸಾಹಿತ್ಯದ ಬುನಾದಿ ಎಂದು ನಿರೂಪಿಸುವ, ಒಪ್ಪಿಸುವ ಕೆಲಸ ನಡೆಯ ತೊಡಗಿತು. ಕಲೆ ಮತ್ತು ಸಾಹಿತ್ಯಕ್ಕೆ ರಾಜಕೀಯ ಪ್ರಶ್ನೆಗಳು, ಸಾಮಾಜಿಕ ಪ್ರಶ್ನೆಗಳು ಮತ್ತು ಆರ್ಥಿಕ ಪ್ರಶ್ನೆಗಳು ಮುಖ್ಯವಾಗಬೇಕಿಲ್ಲ. ಆ ಪ್ರಶ್ನೆಗಳ ಚರ್ಚೆಗೆ ಪ್ರತ್ಯೇಕ ಜ್ಞಾನಶಾಖೆಗಳೇ ಇರುವುದರಿಂದ ಸಾಮಾಜಿಕ ಮತ್ತು ರಾಜಕೀಯ ಪ್ರಶ್ನೆಗಳಿಗೆ ಸಾಹಿತ್ಯ ಪ್ರವೇಶ ಮಾಡಬಾರದು ಎಂಬುದು ಸಾಮ್ರಾಜ್ಯಶಾಹಿಯ ಅಕಡೆಮಿಕ್ ವಲಯದ ಪ್ರಧಾನ ಧೋರಣೆಯಾಗಿತ್ತು. ಈ ಧೋರಣೆಗಳನ್ನು ವಿರೋಧಿಸುತ್ತಲೆ ಪ್ರಗತಿಶೀಲ ಸಾಹಿತ್ಯ ನಿರ್ಮಾಣದ ಅಗತ್ಯತೆಯನ್ನು ಪ್ರತಿಪಾದಿಸುವ ಸಂಘಟನೆಗಳು ಹುಟ್ಟಿದವು. ಕೆಲವು ಸಮ್ಮೇಳನಗಳನ್ನೂ ನಡೆಸಿದವು. ಈ ಹಿನ್ನೆಲೆಯಲ್ಲಿ ಪ್ರಗತಿಶೀಲ ಸಾಹಿತ್ಯ ರಚನೆಯ ಇತಿಹಾಸವು ರಾಜಕೀಯವಾಗಿ ಜಾಗತಿಕ ವ್ಯಾಪ್ತಿಯನ್ನು ಪಡೆಯಿತು.

ಭಾರತಕ್ಕೆ ಅಧಿಕಾರ ಹಸ್ತಾಂತರ ಮಾಡಿದ ನಂತರ ಇಲ್ಲಿಯ ಸಾಮಾನ್ಯರ ಸ್ಥಿತಿಗತಿಗಳು ಬದಲಾಗುತ್ತವೆ ಎಂದೂ, ಪ್ರಭುತ್ವ ಮತ್ತು ಆಡಳಿತ ಸಾಮಾನ್ಯರ ಅಗತ್ಯಗಳನ್ನು ಪೂರೈಸುತ್ತದೆ ಎಂದೂ ನಿರೀಕ್ಷೆ ಮಾಡಲಾಗಿತ್ತು. ಆದರೆ ಎರಡು ಮೂರು ದಶಕಗಳು ಕಳೆದರೂ ಈ ನಿರೀಕ್ಷೆ ಈಡೇರದೆ ಹುಸಿಯಾಗತೊಡಗಿತು. ಪರಿಣಾಮವಾಗಿ ಬಿಡಿಬಿಡಿಯಾಗಿ ರೂಪುಗೊಂಡ ಸಾಮಾಜಿಕ ಅಸಮಾಧಾನಗಳು ಸಂಘಟಿತಗೊಳ್ಳತೊಡಗಿದವು. ಇವು ಒಂದು ಕಡೆ ಸ್ಥಳೀಯ ಬಿಡಿ ಹೋರಾಟಗಳಾಗಿ, ವೈಚಾರಿಕ ಶಕ್ತಿಗಳಾಗಿ ಬೆಳೆಯತೊಡಗಿದವು. ಹೋರಾಟಗಳು ವೈಚಾರಿಕ ಶಕ್ತಿಗಳನ್ನೂ, ವೈಚಾರಿಕ ಶಕ್ತಿಗಳು ಹೋರಾಟಗಳನ್ನೂ ಪರಸ್ಪರ ಪ್ರಭಾವಿಸತೊಡಗಿದವು. ಅದೇ ಸಮಯದಲ್ಲಿ ಅದುವರೆಗೆ ಚಾರಿತ್ರಿಕವಾಗಿ ಯಾವ ಸಮುದಾಯಗಳಿಗೆ ಔಪಚಾರಿಕ ಶಿಕ್ಷಣವನ್ನು ನಿರಾಕರಿಸಲಾಗಿತ್ತೊ, ಅಂತಹ ಸಮುದಾಯಗಳ ಕೆಲವರು ಶಿಕ್ಷಣ ಪಡೆದರು. ಈ ಶಿಕ್ಷಣ ಇವರಿಗೆ ಒಂದು ಬಗೆಯ ಆತ್ಮಸ್ಥೈರ್ಯವನ್ನು, ಸ್ವಾಭಿಮಾನವನ್ನು, ವೈಚಾರಿಕ ಆಲೋಚನೆಯನ್ನು ತಂದುಕೊಟ್ಟಿತು. ಆ ಮೂಲಕ ಸಮಾಜ ಮತ್ತು ರಾಜಕೀಯವನ್ನು ಕುರಿತು ಇವರು ಆಲೊಚಿಸತೊಡಗಿದರು. ಆಗ ಸಮಾಜದ ಶೋಷಣೆಯ ಮತ್ತು ದಬ್ಬಾಳಿಕೆಯ ಆಯಾಮಗಳು ಗೋಚರಿಸತೊಡಗಿದವು. ಅವುಗಳ ವಿರುದ್ಧದ ವೈಚಾರಿಕ ಅಭಿವ್ಯಕ್ತಿಗಳು ಸಾಹಿತ್ಯ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡವು. ಮೊದಲ ಹಂತದಲ್ಲಿ ಇದು ವಿವಿಧ ಪ್ರಕಾರದ ಸಾಹಿತ್ಯವಾಗಿ ರಚನೆಯಾಗತೊಡಗಿತು.

ಸಾಹಿತ್ಯವನ್ನು ಗ್ರಹಿಸುವ, ವಿಮರ್ಶಿಸುವ ಮನೋಧರ್ಮಗಳು ಈ ಸಾಮಾಜಿಕ ವಸ್ತುಸ್ಥಿತಿಯಿಂದ ಹೊರಗುಳಿಯಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಸಾಹಿತ್ಯವನ್ನು ವಿಮರ್ಶೆ ಮಾಡುವ ಮಾನದಂಡಗಳಲ್ಲಿ ಕೆಲವು ಗುಣಾತ್ಮಕ ಬದಲಾವಣೆಗಳು ನಡೆಯತೊಡಗಿದವು. ಈ ಬದಲಾವಣೆಯ ಪರಿಣಾಮವಾಗಿ ಸಾಹಿತ್ಯವನ್ನು ಸಾಮಾಜಿಕ ನೆಲೆಯಲ್ಲಿ ನೋಡುವ ಇಲ್ಲವೆ ಸಾಮಾಜಿಕ ಆಯಾಮದಿಂದ ಗ್ರಹಿಸುವ ವಿಧಾನಗಳು ನಿರ್ಮಾಣಗೊಂಡು ಬೆಳೆಯತೊಡಗಿದವು. ಅವುಗಳನ್ನು ಈ ಮುಂದಿನಂತೆ ಗುರುತಿಸಬಹುದು. ಒಂದು: ಸಮಾಜದಲ್ಲಿ ಪ್ರತಿಯೊಬ್ಬ ಬರಹಗಾರರು ಯಾವುದಾದರೂ ಸಮುದಾಯ, ಜಾತಿ, ಲಿಂಗ ಇಲ್ಲವೆ ವರ್ಗದ ಅನುಭವ, ಆಲೋಚನೆ, ಅರಿವು, ಸ್ವಭಾವ, ಧೋರಣೆ ಹಾಗೂ ಲೋಕದೃಷ್ಟಿಯನ್ನು ಪಡೆದಿರುತ್ತಾರೆ. ಇದರಿಂದ ಯಾವ ಬರಹಗಾರರೂ ಹೊರತಾಗಿರುವುದಿಲ್ಲ. ಅಂದರೆ ಬರಹಗಾರರು ಪ್ರಜ್ಞೆಯನ್ನು, ಅವರ ಲೋಕಾನುಭವವನ್ನು ಅವರ ಜಾತಿ, ಸಮುದಾಯ ಇಲ್ಲವೆ ವರ್ಗ ಅಂತಸ್ತುಗಳೇ ನಿರ್ಧರಿಸಿರುತ್ತವೆ. ಆ ಹಿನ್ನೆಲೆಗಳ ಆಸೆ ಅಭೀಪ್ಸೆಗಳು, ವೈಚಾರಿಕ ಧೋರಣೆಗಳು ಬರಹಗಾರರ ಪ್ರಜ್ಞೆಯ ಭಾಗವಾಗಿರುತ್ತವೆ. ಹಾಗಾಗಿ ಬರಹಗಾರರ ಸಾಮಾಜಿಕ ಅರಿವು ಮತ್ತು ಅವರ ಅನುಭವವೇ ಅವರ ಸಾಹಿತ್ಯಕ ಪಠ್ಯದಲ್ಲಿ ಒಡಮೂಡಿರುತ್ತದೆ. ಎರಡು: ಕೃತಿಕಾರರ ಸಾಮಾಜಿಕ ಧೋರಣೆಯು ಅವರ ಪ್ರತ್ಯಕ್ಷ ಮತ್ತು ನೇರ ಅನುಭವದಿಂದಲೇ ನಿರ್ಮಾಣವಾಗುತ್ತದೆ. ಹಾಗಾಗಿ ಕೃತಿಕಾರರ ಬಗೆಗಿನ ಸಕಲ ವಿವರಗಳು ಗೊತ್ತಿದ್ದರೆ ಅವರು ಬರೆದಿರುವ ಪಠ್ಯದ ಸಾಮಾಜಿಕ ಸಂಗತಿಗಳನ್ನು ತಿಳಿಯಲು ಅನುಕೂಲವಾಗುತ್ತದೆ. ಬರಹಗಾರರು ತಮ್ಮ ಅನುಭವನಗಳನ್ನು ಮೀರಿ ಬರೆಯಲಾರರು. ಹಾಗೊಂದು ವೇಳೆ ಬರೆದರೆ ಅದು ಅಧಿಕೃತವಿರಲಾರದು. ಮೂರು: ಸಾಹಿತ್ಯಕ ಪಠ್ಯದ ಸಾಮಾಜಿಕ ಆಯಾಮಗಳು ಆ ಪಠ್ಯ ರಚನೆಯಾದ ಕಾಲದ ಸಮಾಜದ ವಾಸ್ತವ. ಸ್ಥಿತಿಯ ಪಡಿಯಚ್ಚುಗಳಾಗಿರುತ್ತವೆ. ಸಾಹಿತ್ಯ ಕೃತಿ ತಾನು ರಚನೆಯಾದ ಕಾಲದ ಚರಿತ್ರೆಯ ಮುಖ್ಯ ಸಂಗತಿಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುತ್ತದೆ. ಅದು ತಾನು ರಚನೆಯಾದ ಕಾಲದ ಚರಿತ್ರೆಯ ವಾಸ್ತವ ಸಂಗತಿಗಳನ್ನು ಒಳಗೊಂಡಿರುತ್ತದೆ. ಅದು ತಾನು ರಚನೆಯಾದ ಕಾಲದ ಚರಿತ್ರೆಯ ಯುಗದ ಪ್ರಧಾನ ಧೋರಣೆಗಳನ್ನು, ಮೌಲ್ಯಗಳನ್ನು ಒಳಗೊಂಡಿರುತ್ತದೆ. ಅದು ತಾನು ರಚನೆಯಾದ ಕಾಲದ ಚರಿತ್ರೆಯ ಪಲ್ಲಟಗಳನ್ನು, ಸಂಘರ್ಷಗಳನ್ನು ಅಂದು ಇದ್ದಂತೆಯೇ ದಾಖಲಿಸಿರುತ್ತದೆ. ಹಾಗಾಗಿ ಸಾಹಿತ್ಯ ಕೃತಿಗಳನ್ನು ಓದುವ ಮೂಲಕ ಆ ಕೃತಿಗಳು ರಚನೆಯಾದ ಕಾಲದ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಸಂಗತಿಗಳನ್ನು ತಿಳಿಯಬಹುದು. ಅಷ್ಟು ಮಾತ್ರವಲ್ಲ; ಆ ಕಾಲದಲ್ಲಿದ್ದ ಜನಜೀವನ, ಕೌಟುಂಬಿಕ ವ್ಯವಸ್ಥೆ, ಗಂಡು ಹೆಣ್ಣಿನ ಸಂಬಂಧಗಳು, ಸಾಮಾಜಿಕ ಮೌಲ್ಯಗಳು ಇವೇ ಮೊದಲಾದ ಸಂಗತಿಗಳನ್ನು ತಿಳಿಯಬಹುದು. ನಾಲ್ಕು: ಸಾಹಿತ್ಯ ಪಠ್ಯದಲ್ಲಿರುವ ಸಾಮಾಜಿಕ ಸಂಗತಿಗಳನ್ನು ಅರಿಯುವುದು ಎಂದರೆ ಆ ಕೃತಿಯನ್ನು ರಚನೆ ಮಾಡಿದ ಕೃತಿಕಾರರು ಪ್ರತಿನಿಧಿಸುವ ಜಾತಿ, ಸಮುದಾಯ ಮತ್ತು ವರ್ಗ ಹಿನ್ನೆಲೆಯ ವಿವರ, ಸ್ವಭಾವ ಮತ್ತು ಮನೋಧರ್ಮಗಳನ್ನು ಅರಿತಂತೆ. ಅಂದರೆ ವ್ಯಕ್ತಿಗಳ, ಕುಟುಂಬಗಳ, ಸಮುದಾಯಗಳ, ವಿವಿಧ ಜಾತಿ ಧರ್ಮಗಳ ಜೀವನ ವಿವರಗಳು ಹಾಗೂ ಸಾಮಾಜಿಕ ಸಂಗತಿಗಳನ್ನು ತಿಳಿಯಬೇಕೆಂದರೆ ಸಾಹಿತ್ಯ ಪಠ್ಯಗಳನ್ನು ಅವಲಂಬಿಸಬೇಕು. ಸಾಹಿತ್ಯ ಕೃತಿಗಳಲ್ಲಿ ಅವು ಸಿಗುತ್ತವೆ. ಐದು: ಸಾಹಿತ್ಯ ಕೃತಿಗಳನ್ನು ಸಾಮಾಜಿಕ ನೆಲೆಯಿಂದ ಗ್ರಹಿಸಲು ಸಾಹಿತ್ಯ ಕೃತಿಯ ವಿವರಗಳ ಜೊತೆಗೆ ಅವುಗಳನ್ನು ಬೇರೆ ಬರವಣಿಗೆಗಳ ಮೂಲಕವೊ ಅಥವಾ ಪ್ರತ್ಯಕ್ಷ ಅನುಭವದ ಮೂಲಕವೊ ತಿಳಿದರಬೇಕು. ಈ ತಿಳುವಳಿಕೆ ಮತ್ತು ಅನುಭವದ ಮೂಲಕ ಸಾಹಿತ್ಯವನ್ನು ಗ್ರಹಿಸಬೇಕು.

ಸಾಹಿತ್ಯವು ಲೋಕ ವಿವರಗಳ ದಾಖಲೆ ಎಂಬುದು ಸಾಮಾಜಿಕ ನೆಲೆಯಿಂದ ಸಾಹಿತ್ಯವನ್ನು ಗ್ರಹಿಸುವ ಒಂದು ಜನಪ್ರಿಯ ವಿಧಾನ. ಇಲ್ಲಿ ಲೋಕ ವಿವರಗಳು ಎಂಬುದು, ಕೃತಿಕಾರರ ಹಿನ್ನೆಲೆಯ ವಿವರಗಳು, ಜಾತಿ, ಧರ್ಮ, ಸಮುದಾಯ, ಲಿಂಗ ಮತ್ತು ವರ್ಗ ಹಿನ್ನೆಲೆಯ ವಿವರಗಳಾಗಿರುತ್ತವೆ. ಈ ಎಲ್ಲಾ ವಿವರಗಳ ವಾಸ್ತವಗಳು ಕೃತಿಯಲ್ಲಿ ದಾಖಲಾಗಿರುತ್ತವೆ. ಪ್ರತಿಯೊಬ್ಬ ಬರಹಗಾರರು ತಮ್ಮ ಕಾಲದ ಲೋಕ ವಿವರಗಳ ವಾಸ್ತವವನ್ನು ತನ್ನ ಕೃತಿಯಲ್ಲಿ ದಾಖಲಿಸುತ್ತಾರೆ ಮತ್ತು ಅವನ್ನು ವಿವರಿಸುತ್ತಾರೆ. ಕೃತಿಯಲ್ಲಿ ದಾಖಲಾಗುವ ವಾಸ್ತವಗಳು ಕೃತಿಯ ಆಶಯವಾಗಿ, ಧೋರಣೆಯಾಗಿ ರೂಪುಪಡೆಯುತ್ತವೆ. ಆ ವಾಸ್ತವಗಳನ್ನು ವಿವರಿಸುವ ವಿಧಾನವು ಸಾಹಿತ್ಯ ಆಕೃತಿಯ ಅಥವಾ ರೂಪದ ಸ್ವರೂಪವನ್ನು ಪಡೆಯುತ್ತದೆ. ಈ ಕಾರಣದಿಂದ ಸಾಹಿತ್ಯವನ್ನು ಯಾರು ಬರೆದಿದ್ದಾರೆ ಎಂಬುದು ಬಹಳ ಮುಖ್ಯ ಎನಿಸಿದೆ. ಸಾಹಿತ್ಯವನ್ನು ಜೈನರು ಬರೆದಿರುವುದರಿಂದ ಜೈನ ಸಾಹಿತ್ಯ, ವೀರಶೈವರು ಬರೆದಿರುವುದರಿಂದ ವೀರಶೈವ ಸಾಹಿತ್ಯ, ದಲಿತರು ಬರೆದಿರುವುದರಿಂದ ದಲಿತ ಸಾಹಿತ್ಯ, ಮಹಿಳೆಯರು ಬರೆದಿರುವುದರಿಂದ ಮಹಿಳಾ ಸಾಹಿತ್ಯ, ಮುಸ್ಲಿಮರು ಬರೆದಿರುವುದರಿಂದ ಮುಸ್ಲಿಂ ಸಾಹಿತ್ಯ ಎಂದು ವಿಭಾಗ ಮಾಡಲಾಗಿದೆ. ಹೀಗೆ ಸಾಹಿತ್ಯವನ್ನು ವಿಭಾಗ ಮಾಡಲು ಬಳಸಿರುವ ಮಾನದಂಡಗಳೇ ಆ ಸಾಹಿತ್ಯಗಳ ಅಧ್ಯಯನಕ್ಕೂ ಮಾನದಂಡಗಳಾಗಿವೆ. ಜೈನ ಸಾಹಿತ್ಯದಲ್ಲಿ ಜೈನ ಧರ್ಮದ ಅಥವಾ ಜೈನ ಸಂಸ್ಕೃತಿಯ ವಿವರಗಳು ಇವೆ ಎಂದು ತಿಳಿಯುವುದು, ಹಾಗೆ ತೀರ್ಮಾನಿಸುವುದು. ಇದೇ ರೀತಿಯಲ್ಲಿ ವೀರಶೈವ ಸಾಹಿತ್ಯದಲ್ಲಿ ವೀರಶೈವ ಧರ್ಮದ ಅಥವಾ ವೀರಶೈವ ಸಂಸ್ಕೃತಿಯ ವಿವರಗಳು ಇವೆ ಎಂದು ತಿಳಿದು, ಅದನ್ನು ತೀರ್ಮಾನಿಸುವುದು. ದಲಿತ ಸಾಹಿತ್ಯದಲ್ಲಿ ದಲಿತ ಸಂಸ್ಕೃತಿಯ ವಿವರಗಳು ಇವೆ ಎಂದು ತಿಳಿದು, ಅದನ್ನು ತೀರ್ಮಾನಿಸುವುದು. ಮಹಿಳಾ ಸಾಹಿತ್ಯದಲ್ಲಿ ಮಹಿಳಾ ಸಂಸ್ಕೃತಿಯ ವಿವರಗಳು ಇವೆ ಎಂದು ತೀರ್ಮಾನಿಸುವುದು. ಮುಸ್ಲಿಂ ಬರಹಗಳಲ್ಲಿ ಮುಸ್ಲಿಂ ಸಮುದಾಯದ ಅಥವಾ ಮುಸ್ಲಿಂ ಸಂಸ್ಕೃತಿಯ ವಿವರಗಳು ಇವೆ ಎಂದು ತೀರ್ಮಾನಿಸುವುದು. ಸಾಹಿತ್ಯವು ವಿಭಿನ್ನ ಸಮುದಾಯ, ಜಾತಿ, ವರ್ಗ, ಧರ್ಮ, ಲಿಂಗ ಮುಂತಾದುವುಗಳನ್ನು ‘ಅವು ಸಮಾಜದಲ್ಲಿ ಇರುವಂತೆಯೇ ದಾಖಲಿಸುತ್ತದೆ’ ಎಂಬ ಧೋರಣೆ ಈ ಬಗೆಯ ಸಾಹಿತ್ಯಗ್ರಹಿಕೆಯಲ್ಲಿ ಮುಖ್ಯವಾಗಿದೆ.

ಸಾಹಿತ್ಯವು ಸಂಸ್ಕೃತಿ ವಿಶಿಷ್ಟತೆಯ ದಾಖಲೆ ಎನ್ನುವುದು ಸಾಮಾಜಿಕ ನೆಲೆಯಿಂದ ಸಾಹಿತ್ಯವನ್ನು ಗ್ರಹಿಸುವ ಮತ್ತೊಂದು ವಿಧಾನ. ಪ್ರತಿಯೊಂದು ಸಮುದಾಯ, ಜಾತಿ, ಧರ್ಮ, ಪ್ರದೇಶ ಮುಂತಾದುವುಗಳಿಗೆ ಅವುಗಳದ್ದೇ ಆದ ಸಂಸ್ಕೃತಿ ವಿಶಿಷ್ಟತೆಗಳಿರುತ್ತವೆ. ಆ ಸಂಸ್ಕೃತಿಯ ಒಳವಿವರಗಳನ್ನು, ಸಂಗತಿಗಳನ್ನು ಸಾಹಿತ್ಯ ಕೃತಿ ದಾಖಲಿಸುತ್ತದೆ ಎಂಬುದು ಇಲ್ಲಿಯ ನಂಬಿಕೆ. ಹಾಗೆ ಆಯಾ ಸಮುದಾಯ, ಜಾತಿ, ಧರ್ಮ, ಪ್ರದೇಶ ಮುಂತಾದುವುಗಳ ಸಂಸ್ಕೃತಿ ವಿಶಿಷ್ಟತೆಗಳನ್ನು ಸಾಹಿತ್ಯದಲ್ಲಿ ದಾಖಲಿಸಬೇಕಾದರೆ, ಬರಹಗಾರರು ಆಯಾ ಸಂಸ್ಕೃತಿ ವಿಶಿಷ್ಟತೆಯ ಒಳಗಿನವರೇ ಆಗಿರಬೇಕು, ಆಗಿರುತ್ತಾರೆ ಎಂಬುದು ಇಲ್ಲಿಯ ತೀರ್ಮಾನ. ಅಸ್ಪೃಶ್ಯ ಸಮುದಾಯಗಳನ್ನು ಕುರಿತು ಅಸ್ಪೃಶ್ಯರಲ್ಲದ ಮಧ್ಯಮ ಇಲ್ಲವೆ ಮೇಲು ಜಾತಿಯ ಬರಹಗಾರರು ಬರೆದಾಗ ಏನಾಗುತ್ತದೆ ಎಂಬ ಚರ್ಚೆಗಳು ನಡೆದಿವೆ. (ಉದಾಹರಣೆಗೆ ಪ್ರೊ. ಬಿ. ಕೃಷ್ಣಪ್ಪ ಅವರ, ‘ಕುವೆಂಪು ಕಾದಂಬರಿಗಳಲ್ಲಿ ದಲಿತ ಜೀವನ ಚಿತ್ರಣ’ ಎಂಬ ಲೇಖನ, ಶಿವರಾಮ ಕಾರಂತರ ‘ಚೋಮನ ದುಡಿ’ಯ ಮೇಲೆ ಬಂದಿರುವ ಕೆಲವು ಲೇಖನಗಳು. ಇದಕ್ಕೆ ಇನ್ನೂ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.) ಒಂದು ಪ್ರದೇಶದ ಬರಹಗಾರರು ತಮ್ಮ ಪ್ರದೇಶದ ಸಂಸ್ಕೃತಿ ವಿಶಿಷ್ಟತೆಗಳನ್ನು ತಮ್ಮ ಕೃತಿಗಳಲ್ಲಿ ದಾಖಲಿಸುತ್ತಾರೆ. ಯಾಕೆಂದರೆ ಸಂಸ್ಕೃತಿಯೂ ಕೂಡ ಪ್ರಾದೇಶಿಕವಾದುದು ಎಂಬುದು ಇಲ್ಲಿಯ ಗ್ರಹಿಕೆ. ಹಾಗಾಗಿ ಕುವೆಂಪು ಅವರ ಕಾದಂಬರಿಗಳು ಮಲೆನಾಡಿನ ಸಂಸ್ಕೃತಿ ವಿಶಿಷ್ಟತೆಗಳನ್ನು ದಾಖಲಿಸಿದರೆ, ಗ್ರಾಮಾಯಣವು ಬಯಲು ಸೀಮೆಯ ಸಂಸ್ಕೃತಿ ವಿಶಿಷ್ಟತೆಯನ್ನು ದಾಖಲಿಸುತ್ತದೆ ಎಂಬುದು ಇಲ್ಲಿಯ ನಂಬಿಕೆ. ಈ ಬಗೆಯ ಸಾಹಿತ್ಯ ಗ್ರಹಿಕೆಯು ಸಾಹಿತ್ಯದ ಕೆಲವು ಪ್ರಕಾರಗಳಿಗೆ ಮಾತ್ರ ಅನ್ವಯಿಸುತ್ತದೆ. ಆದರೆ ಸಾಹಿತ್ಯದ ಎಲ್ಲಾ ಪ್ರಕಾರಗಳಿಗೂ ಅನ್ವಯವಾಗುವುದಿಲ್ಲ. ಪ್ರಬಂಧ, ವಿಚಾರ ಸಾಹಿತ್ಯ, ವಿಮರ್ಶೆ ಮತ್ತು ಸಂಶೋಧನೆ ಮುಂತಾದ ಸಾಹಿತ್ಯ ಪ್ರಕಾರಗಳಿಗೆ ಸಾಹಿತ್ಯ ಗ್ರಹಿಕೆಯ ಈ ಕ್ರಮವನ್ನು ಯಥಾವತ್ತಾಗಿ ಅನ್ವಯಿಸಲು ಬರುವುದಿಲ್ಲ.

ಸಾಹಿತ್ಯಕ್ಕೆ ಆಶಯ ಮುಖ್ಯ, ಧೋರಣೆ ಮುಖ್ಯ. ಹಾಗಾಗಿ ಸಾಹಿತ್ಯ ಸಂಶೋಧನೆಯಲ್ಲಿ ಸಾಹಿತ್ಯದ ಆಶಯಗಳನ್ನು, ಧೋರಣೆಗಳನ್ನು ಗುರುತಿಸಬೇಕು ಎಂಬುದು ಇಲ್ಲಿಯ ಮತ್ತೊಂದು ಗ್ರಹಿಕೆ. ಸಾಹಿತ್ಯ ಪಠ್ಯಗಳಲ್ಲಿ ಆಶಯಗಳು, ಧೋರಣೆಗಳು ದಾಖಲಾಗಿರುತ್ತವೆ. ಅವು ಆಯಾ ಸಮುದಾಯ, ಜಾತಿ, ಧರ್ಮ, ಲಿಂಗ ಮುಂತಾದುವುಗಳ ಒಳ ಅಪೇಕ್ಷೆಗಳಾಗಿಯೂ ಸಾಹಿತ್ಯದಲ್ಲಿ ದಾಖಲಾಗಿರುತ್ತವೆ. ಆಯಾ ಸಮುದಾಯ, ಜಾತಿ ಮುಂತಾದುವುಗಳನ್ನು ಪ್ರತಿನಿಧಿಸುವ ಬರಹಗಾರರು ಆ ಸಮುದಾಯಗಳ ವಸ್ತುಸ್ಥಿತಿಯ ಜೊತೆಗೆ ಸಾಮಾನ್ಯ ಆಶೋತ್ತರಗಳನ್ನು ತಮ್ಮ ಕೃತಿಗಳಲ್ಲಿ ದಾಖಲಿಸಿರುತ್ತಾರೆ ಎಂದು ಇಲ್ಲಿ ತಿಳಿಯಲಗುತ್ತದೆ. ಹಾಗಾಗಿ ಸಾಹಿತ್ಯ ಕೃತಿಗಳ ಕೆಲವು ‘ಪ್ರಸಿದ್ಧ ಪಾತ್ರಗಳ’ನ್ನು ಚರ್ಚೆ ಮಾಡುತ್ತಾ, ಬರಹಗಾರರು ಆ ಸಮುದಾಯ, ಜಾತಿಯ ಆಶಯ/ಅಪೇಕ್ಷೆಗಳನ್ನು ಈ ಪಾತ್ರದ ಮೂಲಕ ದಾಖಲಿಸಿದ್ದಾರೆ ಎಂಬ ತೀರ್ಮಾನಕ್ಕೆ ಬರಲಾಗುತ್ತದೆ. ಇಂತಹ ಸರಳ ತೀರ್ಮಾನಗಳನ್ನು ಮರುಪರಿಶೀಲಿಸುವ ಅಗತ್ಯವಿದೆ. ಯಾಕೆಂದರೆ ಸಾಹಿತ್ಯ ಕೃತಿಯೊಂದು ಆಯಾ ಸಮುದಾಯ, ಜಾತಿ ಮುಂತಾದುವುಗಳ ರಾಜಕೀಯ ಬೇಡಿಕೆಯ ಅಥವಾ ಹಕ್ಕೊತ್ತಾಯದ ವೈಚಾರಿಕ ಅಪೇಕ್ಷೆಯನ್ನು ಹಾಗೆ ಮೂರ್ತರೂಪದಲ್ಲಿ ಮಂಡಿಸುವುದಿಲ್ಲ. ಆದರೆ ಸಾಹಿತ್ಯ ಕೃತಿಗಳು ಹಕ್ಕೊತ್ತಾಯಗಳನ್ನು ಮಂಡಿಸುತ್ತಿವೆ ಎಂದು ಓದಲಾಗುತ್ತಿದೆ.

ಸಾಹಿತ್ಯ ಕೃತಿಗಳನ್ನು ಓದಿದಾಗ ಅದರೊಳಗೆ ಕೃತಿಯ ವಿವರಗಳು ಕಾಣಿಸುತ್ತವೆ. (ಕೆಲವರ ಪ್ರಕಾರ ಇರುತ್ತವೆ). ಅಥವಾ ಕೃತಿಯ ವಿವರಗಳನ್ನು ಗ್ರಹಿಸಬಹುದು. ಮತ್ತೊಂದು ಕಡೆ ಲೋಕದ/ಸಾಮಾಜಿಕ ವಿವರಗಳು ಆ ಸಾಹಿತ್ಯ ಓದುಗರಿಗೆ ತಿಳಿದಿರುತ್ತವೆ. ಅಂದರೆ ಒಂದು ಕಡೆ ಸಾಹಿತ್ಯ ಕೃತಿಯ ವಿವರಗಳು ಮತ್ತೊಂದು ಕಡೆ ಓದುಗರ ಪ್ರಜ್ಞೆಯ ಲೋಕ ವಿವರಗಳು ಏಕಕಾಲಕ್ಕೆ ಬಂದು ಎದುರುಬದುರು ಆಗುತ್ತವೆ. ಎಷ್ಟೋ ಸಲ ಕೃತಿಯ ವಿವರಗಳನ್ನೂ, ಲೋಕ ವಿವರಗಳನ್ನೂ ಪರಸ್ಪರ ಹೋಲಿಕೆ ಮಾಡಲಾಗುತ್ತದೆ. ಹಾಗೆ ಹೋಲಿಕೆ ಮಾಡಲು ಹೋದಾಗ ಅನೇಕ ಸಲ ಅವೆರಡೂ ಪರಸ್ಪರ ಹೋಲಿಕೆ ಆಗುವುದೇ ಇಲ್ಲ. ಲೋಕ ವಿವರಗಳೇ ಒಂದು; ಕೃತಿಯ ವಿವರಗಳು ಮತ್ತೊಂದಾಗಿ ಕಾಣಿಸಲು ಶುರುವಾಗುತ್ತವೆ. ಇವೆರಡೂ ಪರಸ್ಪರ ಬೇರೆಯಾಗಿ ನಿಲ್ಲುತ್ತವೆ. ಆಗ ಓದುಗರ ಮನಸ್ಸಿನಲ್ಲಿ ತೆಳುವಾದ ಅನುಮಾನ, ಒಂದು ಬಗೆಯ ಹೊಯ್ದಾಟ ಶುರುವಾಗುತ್ತದೆ. ಬೇರೆಬೇರೆಯಾಗಿ ಅಥವಾ ಪರಸ್ಪರ ವಿರುದ್ಧವಾಗಿ ಕಾಣುತ್ತಿರುವ, ಸಾಮಾಜಿಕ ವಿವರಗಳು ಮತ್ತು ಕೃತಿಯ ವಿವರಗಳು; ಈ ಎರಡರಲ್ಲಿ ಯಾವುದನ್ನು ನಂಬಬೇಕು – ಯಾವುದನ್ನು ನಂಬಬಾರದು. ಈ ಎರಡಲ್ಲಿ ಯಾವುದು ಸತ್ಯ-ಯಾವುದು ಸುಳ್ಳು. ಯಾವುದು ಅಧಿಕೃತ-ಯಾವುದು ಅಧಿಕೃತವಲ್ಲ. ಸಾಮಾಜಿಕ ವಿವರಗಳು ಸತ್ಯ ಎಂದು ಅವನ್ನು ನಂಬಿದರೆ, ಕೃತಿಯ ವಿವರಗಳು ಸುಳ್ಳಾಗುತ್ತವೆ. ಕೃತಿಯ ವಿವರಗಳು ಸತ್ಯ ಎಂದು ಅವನ್ನು ನಂಬಿದರೆ ಸಾಮಾಜಿಕ ವಿವರಗಳು ಸುಳ್ಳಾಗುತ್ತವೆ. ಹೀಗೆ ಪ್ರಶ್ನೆ ಎದುರಾಗುವ ಸೂಕ್ಷ್ಮ ಸನ್ನಿವೇಶಗಳನ್ನು ಗಮನಿಸುವುದಾದರೆ, ‘ಕುಸುಮ ಬಾಲೆ’ಯನ್ನು ತೊರಾರ ಹಟ್ಟಿ ಜೋತಮ್ಮ ಕುರಿಯಯ್ಯನ ಮೈದುಂಬಿ ತಲತಲಾಂತರದ ನನ್ನಿಯನ್ನು ನುಡಿಯುವುದು, ಇಂಗ್ಲಿಷ್ ಗೊತ್ತಿಲ್ಲದ ಕುಸುಮಾಳು ‘ಐ ವಾಮಟ್‌ಬಿ ಇನ್‌ಮೈ ಹೌಸ್’ ಎನ್ನುವುದು, ವಡ್ಡಾರಾಧನೆಯ ಕಾರ್ತಿಕ ಋಷಿಯ ಕಥೆಯಲ್ಲಿ, ಅಗ್ನಿರಾಜ ತನ್ನ ಮಗಳಾದ ಕೃತ್ತಿಕೆಯನ್ನೇ ಮದುವೆಯಾಗುವುದು, ಜನ್ನನ ಯಶೋಧರ ಚರಿತ್ರೆಯ ಅಷ್ಟಾವಂಕ ಮತ್ತು ಅಮೃತಮತಿಯ ಪ್ರಣಯ ಇತ್ಯಾದಿ. ಇಂತಹ ನೂರಾರು ಸನ್ನಿವೇಶಗಳನ್ನು ಉದಾಹರಿಸಬಹುದು. ಅದಿರಲಿ. ಈ ಪ್ರಶ್ನೆ ವಿಶೇಷವಾಗಿ ಒಂದೊ ಕೆಳಜಾತಿಗಳಿಗೆ ಸಂಬಂಧಿಸಿ ಬರುತ್ತಿದೆ. ಇಲ್ಲವೆ ನೈತಿಕ ಮೌಲ್ಯಗಳ ನಂಬಿಕೆಗೆ ಸಂಬಂಧಿಸಿ ಬರುತ್ತಿದೆ. ‘ಆನು ದೇವಾ ಹೊರಗಣವನು’, ‘ಮಹಾಚೈತ್ರ’ ಮುಂತಾದ ಹಲವು ಕೃತಿಗಳ ಬಗ್ಗೆ ನಡೆದಿರುವ ವಿವಾದಗಳನ್ನು ಈ ಹಿನ್ನೆಲೆಯಲ್ಲಿ ನೆನಪಿಸಿಕೊಳ್ಳಬಹುದು. ಹೀಗೆ ಓದುಗರಿಗೆ ಸತ್ಯ-ಸುಳ್ಳು, ಅಧಿಕೃತಿ-ಅಧಿಕೃತವಲ್ಲ, ನಂಬಬೇಕು – ನಂಬಬಾರದು ಎಂಬ ಸಮಸ್ಯೆ ಎದುರಾಗುತ್ತದೆ. ಆಗ ಯಾವುದರ ಪರ ವಕಾಲತ್ತು ವಹಿಸಬೇಕು ಎಂಬ ಆಯ್ಕೆಯ ಪ್ರಶ್ನೆ ಬರುತ್ತದೆ. ಆಗ ಬಹುತೇಕ ಓದುಗರು ಸಾಮಾಜಿಕ ವಿವರಗಳ ಪರ ವಕಾಲತ್ತು ವಹಿಸುತ್ತಾರೆ. ‘ನಮಗೆ ಗೊತ್ತಿರುವ ಸಾಮಾಜಿಕ ವಿವರ ಸಾಹಿತ್ಯ ಕೃತಿಯೊಂದರಲ್ಲಿ ಅದೇ ರೀತಿಯಲ್ಲಿ ಬಂದಿಲ್ಲ. ಹಾಗಾಗಿ ಸಾಹಿತ್ಯ ಕೃತಿಯಲ್ಲಿ ಬಂದಿರುವ ವಿವರವನ್ನು ಒಪ್ಪಲು, ನಂಬಲು ಆಗುವುದಿಲ್ಲ’ ಎಂದು ತೀರ್ಮಾನಿಸುತ್ತಾರೆ. ಚರ್ಚೆಯ ಈ ಹಂತದಲ್ಲಿ ಮುಖ್ಯವಾಗಿರುವ ಒಂದು ಅಂಶ ಮುಂಚೂಣಿಗೆ ಬರುತ್ತದೆ. ಅದು ‘ಒಪ್ಪಲು ಆಗುವುದಿಲ್ಲ’ ಎಂಬುದು. ಅಂದರೆ ಸಾಹಿತ್ಯವನ್ನು ಓದಿ, ಅರ್ಥೈಸಿಕೊಂಡ ಮೇಲೆ ಅದನ್ನು ಒಪ್ಪಬೇಕು ಎಂದೂ ಆಯಿತು. ಅಥವಾ ಬರಹಗಾರರು ತಮ್ಮ ಕೃತಿಗಳನ್ನು, ಓದುಗರು ಒಪ್ಪುವಂತೆ ಬರೆಯಬೇಕು ಎಂದಾಯಿತು. ಹಾಗಿದ್ದರೆ ಓದುಗರು ‘ಒಪ್ಪುವ ಅಥವಾ ಒಪ್ಪದಿರುವ’ ನೆಲೆಗಳು ಯಾವುವು ಎಂಬುದು ಎದುರಾಗುತ್ತದೆ. ಇವನ್ನು ಬರಹಗಾರರು ಮೊದಲೆ ತಿಳಿದುಕೊಂಡು ತಮ್ಮ ಕೃತಿ ರಚನೆ ಮಾಡಬೇಕು ಎಂದು ಹೇಳಿದಂತೆ ಆಗುತ್ತದೆ.

ಈ ಭಾಗದಲ್ಲಿ ಸಾಹಿತ್ಯವನ್ನು ಓದುವಾಗ ಎದುರಾಗುವ ಮುಖ್ಯ ಸಮಸ್ಯೆಯೊಂದನ್ನು ಚರ್ಚಿಸಲಾಗುತ್ತಿದೆ. ಆದರೆ ಈ ಸಮಸ್ಯೆಗೆ ರೆಡಿಮೇಡ್ ಉತ್ತರ ಇದೆ ಎಂದು ಅಭಿಪ್ರಾಯಪಟ್ಟು ತಕ್ಷಣ ಅದನ್ನು ಸೂಚಿಸಲು ಆಗುತ್ತಿಲ್ಲ. ಯಾಕೆಂದರೆ ಸಮಸ್ಯೆಯ ಸ್ವರೂಪದ ವಿಭಿನ್ನ ಸೂಕ್ಷ್ಮ ಮುಖಗಳು ತಿಳಿಯದಿದ್ದರೆ ಅದರ ಪರಿಹಾರದ ಸಾಧ್ಯತೆಗಳೂ ಸರಳವಾಗಿ ತಿಳಿಯುವುದಿಲ್ಲ. ಈ ಮೊದಲಿನ ಚರ್ಚೆಯಲ್ಲಿ, ವಿಭಿನ್ನ ಸಮುದಾಯ, ಜಾತಿ, ಧರ್ಮ, ಲಿಂಗ, ಪ್ರದೇಶ ಮುಂತಾದುವುಗಳ ವಿವರಗಳನ್ನು, ದಾಖಲೆಗಳನ್ನು ಸಾಹಿತ್ಯ ಕೃತಿಗಳು ಹೊಂದಿರುತ್ತವೆ. ಸಮಾಜದ ವಾಸ್ತವಗಳನ್ನು ಸಾಹಿತ್ಯ ಒಳಗೊಂಡಿರುತ್ತದೆ. ಅ ವಾಸ್ತವಗಳನ್ನು ಅರಿಯಲು ಸಾಹಿತ್ಯವನ್ನು ಓದಬೇಕು, ಸಾಹಿತ್ಯವನ್ನು ಓದುವುದು ಎಂದರೆ ಸಮುದಾಯ, ಸಮಾಜ ಮುಂತಾದುವುಗಳ ವಾಸ್ತವಗಳನ್ನು ಅರಿತಂತೆ ಎಂಬ ಸ್ಥೂಲ ತೀರ್ಮಾನಗಳನ್ನು ಗಮನಿಸಿದೆವು. ಒಂದು ಕಡೆ ಸಾಹಿತ್ಯ ಕೃತಿಗಳು ಸಮುದಾಯ, ಜಾತಿ, ವರ್ಗ, ಧರ್ಮ ಮುಂತಾದುವುಗಳ ವಾಸ್ತವಗಳನ್ನು ಅಲ್ಲಿ ಇದ್ದಂತೆಯೇ ಚಿತ್ರಿಸುತ್ತವೆ ಎಂಬ ವಾದವಿದೆ. ಜೊತೆಗೆ ನಮಗೆ ಗೊತ್ತಿರುವ ಸಾಮಾಜಿಕ ವಿವರಗಳು ಅವು ಇದ್ದಂತೆಯೇ ಸಾಹಿತ್ಯ ಕೃತಿಯಲ್ಲಿ ಬಂದಿಲ್ಲ ಎಂಬ ವಾದವೂ ಇದೆ. ಹಾಗಿದ್ದರೆ ಈಗ ಎದುರಾಗಿರುವ ಸಮಸ್ಯೆ ಸಮಾಜದ ವಾಸ್ತವಗಳನ್ನು ಸಾಹಿತ್ಯ ಕೃತಿಗಳು, ಅಲ್ಲಿ ಇದ್ದಂತೆಯೇ ಚಿತ್ರಿಸುತ್ತವೆಯೇ ಎಂಬುದು. ಹಾಗಾಗಿ ಸಾಹಿತ್ಯ ಕರತಿಗಳ ಕೆಲವು ಸನ್ನಿವೇಶಗಳನ್ನು, ಚಿತ್ರಣಗಳನ್ನು ನಂಬಲು, ಒಪ್ಪು ಆಗುವುದಿಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ. ಹಾಗಿದ್ದರೆ ಈ ಸಮಸ್ಯೆಗೆ ಉತ್ತರ ಎಲ್ಲಿದೆ ಎಂದು ಕೇಳುವ ಬದಲಾಗಿ, ಈ ಸಮಸ್ಯೆಯ ಮೂಲ ಎಲ್ಲಿದೆ ಎಂದು ಪ್ರಶ್ನೆಯ ರೂಪವನ್ನು ಬದಲಾಯಿಸಿಕೊಳ್ಳಬೇಕು.

ಸಾಮಾಜಿಕ ಹಿನ್ನೆಲೆಯಲ್ಲಿ ಸಾಹಿತ್ಯವನ್ನು ಓದುವ ಕ್ರಮವು ಕೆಲವು ಸರಳವೂ, ಸಿದ್ಧಮಾದರಿಯೂ ಆದ ಸೂತ್ರಗಳನ್ನು ಮೊದಲೇ ನಂಬಿಬಿಟ್ಟಿದೆ. ಅಂತಹ ಸರಳ ಸೂತ್ರಗಳನ್ನು ಹೀಗೆ ಗುರುತಿಸಬಹುದು. ಸಮುದಾಯ, ಜಾತಿ, ಧರ್ಮ ಇತ್ಯಾದಿ-ಕೃತಿಕಾರ= ಸಾಹಿತ್ಯ ಕೃತಿ. ಇದು ಒಂದು ಸರಳ ಸೂತ್ರ. ಇದಲ್ಲದೆ ಲೋಕ/ಸಾಮಾಜಿಕ ವಿವರಗಳು= ಸಾಹಿತ್ಯ ಕೃತಿಯ ವಿವರಗಳು. ಇದು ಮತ್ತೊಂದು ಸರಳ ಸೂತ್ರ. ಈ ಗ್ರಹಿಕೆಯ ಪ್ರಕಾರ ಸಾಮಾಜಿಕ ವಿವರಗಳು ಇದ್ದಂತೆಯೇ ಮತ್ತು ಅವು ಬದಲಾಗದೆ ಬರಹಗಾರರ ಮೂಲಕ ಸಾಹಿತ್ಯ ಕೃತಿಗೆ ಬರುತ್ತವೆ. ಸಾಹಿತ್ಯ ಕೃತಿಯಲ್ಲಿ ಬದಲಾಗದೆ ಇರುವ ಕೃತಿಯ ವಿವರಗಳು ಓದುಗರಿಗೆ ಬರುತ್ತವೆ. ಅಂದರೆ ಸಾಹಿತ್ಯವು ಸಾಮಾಜಿಕ ವಿವರಗಳನ್ನು ಅವು ಇದ್ದಂತೆಯೇ ಓದುಗರಿಗೆ ದಾಟಿಸುವ ಒಂದು ಸಾಧನ ಎಂದು ಹೇಳಿದಂತೆ ಆಯಿತು. ‘ಸಾಹಿತ್ಯ ಕೃತಿಯು ವಾಸ್ತವದ ಜೆರಾಕ್ಸ್’ ಎಂಬುದು ಈ ನಂಬಿಕೆಯ ಸಾಮಾನ್ಯ ಸ್ವರೂಪ.

ಸಾಹಿತ್ಯ ಕೃತಿಗಳಲ್ಲಿ ನಂಬಿಕೆಯ ವಾಸ್ತವಗಳನ್ನು ಹುಡುಕುವ ನೆಲೆಯಲ್ಲೆ ಸಾಹಿತ್ಯವನ್ನು ಓದಲಾಗುತ್ತಿದೆ. ಹೀಗೆ ಓದುತ್ತಿರುವುದರಿಂದ, ಕೃತಿಯ ವಿವರಗಳಲ್ಲಿ ಯಾವ ವಾಸ್ತವಗಳು ನಂಬಲು ಮತ್ತು ಒಪ್ಪಲು ಅರ್ಹವೊ, ಅಂತವನ್ನು ಮತ್ತೊಮ್ಮೆ ದೃಡಪಡಿಸಿಕೊಳ್ಳಲು ಸಾಮಾಜಿಕ ವಿವರಗಳಿಗೇ ಹೋಗಲಾಗುತ್ತದೆ. ಅಂದರೆ ಸಾಹಿತ್ಯ ಕೃತಿಯ ವಿವರಗಳನ್ನು ನಿಜ  ಎಂದು ಒಪ್ಪಲು ಸಾಮಾಜಿಕ ವಿವರಗಳನ್ನು ಅವಲಂಬಿಸಲಾಗುತ್ತದೆ, ಆಧರಿಸಲಾಗುತ್ತದೆ. ಹೀಗೆ ಸಾಮಾಜಿಕ ವಿವರಗಳನ್ನು ಅವಲಂಬಿಸಲು ಮತ್ತು ಆಧರಿಸಲು ಕಾರಣ, ಅದು ಕಣ್ಣಿಗೆ ಕಾಣುತ್ತದೆ, ಹಾಗಾಗಿ ಅದು ನಿಜ ಎಂಬುದಾಗಿದೆ. ಓದುಗರಿಗೆ ಗೊತ್ತಿರುವ, ಗೊತ್ತಿದೆ ಎಂದು ತಿಳಿದಿರುವ ಮತ್ತು ನಂಬಿರುವ ಸಾಮಾಜಿಕ ವಾಸ್ತವಗಳೇ ಪ್ರಧಾನ, ಮುಖ್ಯ. ಸಾಹಿತ್ಯ ಕೃತಿಗಳು ಇವುಗಳನ್ನು ಇದ್ದಂತೆಯೇ ಚಿತ್ರಿಸಲ್ಲ; ಚಿತ್ರಿಸುತ್ತಿಲ್ಲ ಎನ್ನುವುದಾದರೆ ಆಗ ಸಾಹಿತ್ಯ ರಚನೆಯಾಗಲಿ, ಅದನ್ನು ಕುರಿತ ಓದು, ವಿಮರ್ಶೆ, ಸಂಶೋಧನೆಯಾಗಲಿ ಯಾಕೆ ಬೇಕು ಎಂಬ ಮತ್ತೊಂದು ಪ್ರಶ್ನೆ ಎದುರಾಗುತ್ತದೆ.

ಹಾಗಿದ್ದರೆ ‘ಸಾಮಾಜಿಕ ವಾಸ್ತವಗಳಿಗೆ ಸಂಬಂಧಿಸಿ ಸಾಹಿತ್ಯ ಕೃತಿಗಳು ಸುಳ್ಳು ಹೇಳುತ್ತವೆ’ ಎಂಬ ತೀರ್ಮಾನಕ್ಕೆ ಹೋಗಬಹುದೆ? ‘ಸಾಹಿತ್ಯ ಕೃತಿಗಳು ಸುಳ್ಳು ಹೇಳುತ್ತವೆ’ ಎನ್ನುವುದಾದರೆ ಅದರ ಸ್ವರೂಪ ಯಾವುದು? ರಾವಣನಿಗೆ ತಲೆ ಇರುವುದು ವಾಸ್ತವ. ಆದರೆ ರಾವಣನಿಗೆ ಹತ್ತು ತಲೆಗಳಿದ್ದವು ಎಂಬುದು ವಾಸ್ತವವೆ? ಅಂದರೆ ಸಾಮಾಜಿಕ ವಾಸ್ತವ ಎಂಬುದು ಕವಿಗಳ, ಬರಹಗಾರರ ಸೃಜನಶೀಲತೆಯಲ್ಲಿ ಸೃಜನಶೀಲ ವಾಸ್ತವವಾಗಿ ರೂಪಾಂತರ ಹೊಂದುತ್ತದೆ. ಆ ಮೂಲಕ ಸಾಹಿತ್ಯ ರೂಪುಗೊಳ್ಳುತ್ತದೆ. ಇದು ಸಾಹಿತ್ಯಕ ವಾಸ್ತವ ಎಂಬುದು ಒಂದು ವಾದ. ಹಾಗಾಗಿ ಸಾಹಿತ್ಯದಲ್ಲಿ ನಿರೂಪಿತವಾಗಿರುವ ವಾಸ್ತವಗಳು ಸಾಮಾಜಿಕ ವಾಸ್ತವಗಳ ಸೃಜನಶೀಲ ನಿರೂಪಣೆಗಳು ಎಂಬುದು ಇನ್ನೊಂದು ವಾದ.

ಈಗ ಸಾಹಿತ್ಯದ ವಿಷಯವನ್ನು ಬಿಟ್ಟು, ಸಾಮಾಜಿಕ ವಾಸ್ತವ ಎಂಬುದರ ಸ್ವರೂಪವನ್ನೆ ಕುರಿತು ಚರ್ಚಿಸೋಣ. ‘ಇದು ಸಾಮಾಜಿಕ ವಾಸ್ತವ’ ಎಂದು ತಿಳಿದಿರುವ ಅಥವಾ ನಂಬಿರುವ ‘ಸಾಮಾಜಿಕ ವಾಸ್ತವ’ದ ಸ್ವರೂಪವಾದರೂ ಯಾವುದು? ‘ಈ ಸಾಮಾಜಿಕ ವಾಸ್ತವ ನಮಗೆ ಗೊತ್ತಿದೆ’ ಎಂಬುದು ನಿಜವಾಗಿಯೂ ಅದು ವಾಸ್ತವವೊ ಅಥವಾ ವಾಸ್ತವ ಎಂಬುದರ ಬಗೆಗೆ ಸೃಷ್ಟಿಸಲಾಗಿರುವ ನಂಬಿಕೆಯೊ? ನಿಜವಾಗಿಯೂ ‘ವಾಸ್ತವ ಎಂಬುದು ಒಂದು ಇದೆ’ ಎಂಬುದಾಗಿ ಅದನ್ನೇ ನಂಬಲಾಗುತ್ತದೊ ಅಥವಾ ‘ವಾಸ್ತವ ಎಂದರೆ ಹೀಗಿತ್ತು, ವಾಸ್ತವ ಎಂದರೆ ಹೀಗಿದೆ, ವಾಸ್ತವ ಎಂದರೆ ಹೀಗಿರುತ್ತದೆ, ವಾಸ್ತವ ಎಂದರೆ ಹೀಗಿರಬೇಕು’ ಎಂಬ ಭಾಷಿಕ ನಿರೂಪಣೆಯನ್ನು, ನಂಬಿಕೆಯನ್ನು ನಂಬುತ್ತೇವೊ? ಸಾಮಾಜಿಕ ವಾಸ್ತವ ಎಂಬುದು ತಿಳುವಳಿಕೆಯ ಒಂದು ಭಾಗವೊ? ಸಾಮಾಜಿಕ ವಾಸ್ತವ ಎಂಬುದು ಅನುಭವದ ಒಂದು ಭಾಗವೊ? ಸಾಮಾಜಿಕ ವಾಸ್ತವ ಎಂಬುದು ಭಾಷಿಕ ನಿರೂಪಣೆಯ ಒಂದು ಭಾಗವೊ? ಸಾಮಾಜಿಕ ವಾಸ್ತವ ಎಂಬುದು ನಂಬಿಕೆಯ ಒಂದು ಭಾಗವೊ? ಈ ಚರ್ಚೆಗೆ ಸಾಹಿತ್ಯ ಕೃತಿಗಳಿಂದಲೇ ಉದಾಹರಣೆ ತೆಗೆದುಕೊಳ್ಳೋಣ. ದೇವನೂರು ಮಹಾದೇವ ಅವರ ‘ಕುಸುಮಬಾಲೆ’ಯಲ್ಲಿ ಜೋತಮ್ಮಗಳು (ದೀಪಗಳು) ಮಾತಾಡುವ ಸನ್ನಿವೇಶ ನಿರೂಪಿತವಾಗಿದೆ. ‘ತೊರಾರ ಹಟ್ಟೀ ಜೋತಮ್ಮನು, ‘ಅದಿಯಾ ಅತ್ಗಮ್ಮೋರ ನಿಂ ಕುಸುಮುವಿ ಆ ಹೊಲಾರ ಚೆನ್ನನೂವಿ ಕೂಡೋ ತಳವು ನಮ್ ಜೋಪಡಿ ತಾನೀಯ? ಕೆಂಪಾಗಿರೊ ಹೆಂಡತೀಗ ಹುಟ್ಟಿರೋ ಕೂಸು ಚೆನ್ನನ ಥರ‍್ವಾಗಿ ಕಪ್ಪಾಗಿ ಅದು ಹುಟ್ಟೀ ಅದನೀಗ ಕುಸುಮಳ ಗಂಡ ಅರುತ್ಗಂಡು …. ಅಂತೇನಾರು …. ‘ಅಂತ ಅದು ಮುಗಿಯುವುದರೊಳಗ, ಹಾರೂರ ಮನೆಯ ಜೋತಮ್ಮ ‘ಐ… ಎಲ್ರೂ ಮಾಡೋ ಯಥಾರ್ಥನೆ ಹೇಳ್ತಳ. ಏನ್ ವಿಚಾರ್‌ವ ಅದು’ ಎನ್ನುವಳು. ತೊರಾರ ಹಟ್ಟಿ ಜೋತಮ್ಮಳ ಪ್ರಕಾರ ಮೇಲುಜಾತಿಯ ಕುಸುಮ ಮತ್ತು ಹೊಲೆಯರ ಚೆನ್ನ ಕೂಡುವುದು ಸಾಮಾಜಿಕವಾಗಿ ಅಸಾಧ್ಯದ ಮಾತು. ಅದು ಕುಸುಮಳ ಗಂಡನಿಗೇನಾದರೂ ಗೊತ್ತಾದರೆ ಪರಿಣಾಮ ಏನಾಗಬಹುದು?! ಎಂಬ ಬಗ್ಗೆ ಭಯ, ಆತಂಕ. ಹಾಗಾಗಿ ಅವಳ ಪ್ರಕಾರ ನಡೆಯಬಾರದ್ದು, ನಡೆಯಲಾರದ್ದು ನಡೆದುಹೋಗಿದೆ! ಎಂಬ ಆಶ್ಚರ್ಯ, ಆತಂಕ, ವಿಸ್ಮಯ. ಹಾರೂರ ಮನೆಯ ಜೋತಮ್ಮಳ ಪ್ರಕಾರ ಅದೆಲ್ಲ ಮಾಮೂಲಿ. ಅದು ಮಾತಾಡುವ ವಿಚಾರವೆ ಅಲ್ಲ. ಈ ಕಾರಣಕ್ಕಾಗಿ ಇವಳಿಗೆ ಅದು ಸೋಜಿಗವೂ ಅಲ್ಲ, ಆಶ್ಚರ್ಯವೂ ಅಲ್ಲ, ಅಸಹಜವೂ ಅಲ್ಲ. ಹಾಗಿದರೆ ಈ ಎರಡರಲ್ಲಿ ಯಾವುದು ವಾಸ್ತವ?, ಯಾವುದು ವಾಸ್ತವ ಅಲ್ಲ? ಕನ್ನಡದ ಬಹುತೇಕ ಕಥೆ ಕಾದಂಬರಿಗಳಲ್ಲಿ ಕೆಳಜಾತಿಯ ಹೆಣ್ಣು ಮತ್ತು ಮೇಲುಜಾತಿಯ ಗಂಡುಗಳ ನಡುವಿನ ಸಂಬಂಧಗಳು ನಿರೂಪಣೆಯಾಗಿವೆ. ಆದರೆ ತಳಸಮುದಾಯದ ಬರಹಗಾರರ ಕಥೆ ಕಾದಂಬರಿಗಳಲ್ಲಿ ಮೇಲುಜಾತಿಯ ಹೆಣ್ಣು ಮತ್ತು ಕೆಳಜಾತಿಯ ಗಂಡುಗಳ ನಡುವಿನ ಸಂಬಂಧಗಳು ನಿರೂಪಣೆಯಾಗಿವೆ. ಹಾಗಿದ್ದರೆ ಈ ಎರಡರಲ್ಲಿ ಯಾವುದು ವಾಸ್ತವ?, ಯಾವುದು ವಾಸ್ತವ ಅಲ್ಲ?

ಸಾಮಾಜಿಕ ಜೀವನದಲ್ಲಿ ಮೇಲುಜಾತಿಯ ಹೆಣ್ಣು ಮತ್ತು ಕೆಳಜಾತಿಯ ಗಂಡುಗಳ ನಡುವಿನ ಸಂಬಂಧಗಳು ವಾಸ್ತವವೊ? ಅಥವಾ ಕೆಳಜಾತಿಯ ಹೆಣ್ಣು ಮತ್ತು ಮೇಲುಜಾತಿಯ ಗಂಡುಗಳ ನಡುವಿನ ಸಂಬಂಧಗಳು ವಾಸ್ತವವೊ? ಇವುಗಳಲ್ಲಿ ಯಾವ ವಾಸ್ತವವನ್ನು ನಂಬಿಸಲಾಗಿದೆ, ನಂಬಲಾಗಿದೆ? ಇವುಗಳಲ್ಲಿ ಯಾವ ವಾಸ್ತವವನ್ನು ಒಪ್ಪಿಸಲಾಗಿದೆ? ಒಪ್ಪಲಾಗಿದೆ? ಹೀಗೆ ಸಾಮಾಜಿಕ ವಾಸ್ತವ ಎಂಬುದನ್ನು ನಿರೂಪಿಸಲು, ನಂಬಿಸಲು ಮತ್ತು ಒಪ್ಪಿಸಲು ಯಾವ ಧೋರಣೆಗಳು ಹಾಗೂ ಯಾರ ಧೋರಣೆಗಳು ಕೆಲಸ ಮಾಡುತ್ತವೆ? ಇವುಗಳಲ್ಲಿ ಯಾವ ವಾಸ್ತವವನ್ನು ಸಾಹಿತ್ಯ ಪ್ರಕಟಿಸುತ್ತದೆ? ಅತವಾ ಸಾಹಿತ್ಯದಲ್ಲಿ ಪ್ರಕಟವಾಗಿರುವ ಹೆಣ್ಣು ಗಂಡುಗಳ ನಡುವಿನ ಎರಡು ಬಗೆಯ ವಾಸ್ತವಗಳನ್ನು ‘ನಮಗೆ ಗೊತ್ತಿದೆ ಎಂದು ತಿಳಿದಿರುವ’ ಯಾವ ವಾಸ್ತವದೊಂದಿಗೆ ಹೋಲಿಕೆಮಾಡಿ ನೋಡುವುದು? ಯಾವ ವಾಸ್ತವವನ್ನು ಆಧರಿಸಿ ‘ಇದು ನಿಜ- ಇದು ನಿಜವಲ್ಲ’ ಎಂದು ತೀರ್ಮಾನಿಸುವುದು? ‘ಸಾಮಾಜಿಕ ವಾಸ್ತವ ಎಂದರೆ ಹೀಗಿತ್ತು, ಹೀಗಿದೆ, ಹೀಗಿರುತ್ತದೆ, ಹೀಗಿರಬೇಕು’ ಎಂದು ಹೇಳಿಕೊಡಲಾಗಿರುತ್ತದೆ. ಹಾಗೆ ಹೇಳಿಕೊಟ್ಟಿರುವುದನ್ನು ನಂಬಲಾಗಿರುತ್ತದೆ. ಮೊದಲ ಹಂತದಲ್ಲಿ ಅದನ್ನು ನಂಬುವಾಗ ಪ್ರಜ್ಞಾಪೂರ್ವಕವಾಗಿರುತ್ತದೆ. ಅನಂತರ ಅದನ್ನು ಮೇಲಿಂದ ಮೇಲೆ ನಂಬಿಸಿ ನಂಬಿಸಿ, ನಂಬಿನಂಬಿ ಗಟ್ಟಿಗೊಂಡು, ತದನಂತರ ಅದು ಅಪ್ರಜ್ಞಾಪೂರ್ವಕ ಸ್ಥಿತಿಯವರೆಗೂ ಹೋಗಿರುತ್ತದೆ. ಹಾಗಾಗಿ ವಾಸ್ತವ ಎಂಬುದು ಎಷ್ಟೋ ಸಲ ಅಪ್ರಜ್ಞಾಪೂರ್ವಕ ನಂಬಿಕೆಯ ಸ್ಥಿತಿಯದೂ ಆಗಿರುತ್ತದೆ.

‘ಗೊತ್ತಿದೆ ಎಂದು ತಿಳಿಯಲಾಗಿರುವ, ನಂಬಲಾಗಿರುವ ಮತ್ತು ಒಪ್ಪಲಾಗಿರುವ’ ವಾಸ್ತವದ ಬಗ್ಗೆ ಸಾಹಿತ್ಯಕ್ಕೆ ಆಸಕ್ತಿ ಕಡಿಮೆ. ಹಾಗೆ ನೋಡಿದರೆ ‘ಗೊತ್ತಿದೆ ಎಂದು ತಿಳಿಯಲಾಗಿರುವ, ನಂಬಲಾಗಿರುವ ಮತ್ತು ಒಪ್ಪಲಾಗಿರುವ’ ವಾಸ್ತವದ ಮತ್ತೊಂದು ಆಯಾಮವನ್ನು, ಇನ್ನೊಂದು ಮಗ್ಗುಲನ್ನು ಶೋಧಿಸುವುದು, ನಿರೂಪಿಸುವುದು, ಕಾಣಿಸುವುದು ಸಾಹಿತ್ಯದ ಆಸಕ್ತಿ ಮತ್ತು ಅದರ ಸ್ವಭಾವ. ಸಾಹಿತ್ಯದಲ್ಲಿ ಇದು ಕಲ್ಪನೆಯ ಭಾಗ ಎಂದು ಸರಳೀಕರಿಸಬಾರದು. ಬರಹಗಾರರು ಅನುಭವವನ್ನು ಭಾಷಿಕವಾಗಿ ನಿರೂಪಿಸುತ್ತಾರೆ ಎಂಬುದು ಒಂದು ದೃಷ್ಟಿಕೋನ. ಬರಹಗಾರರು ನಿರೂಪಿಸುತ್ತಲೇ ಭಾಷಿಕವಾಗಿ ಅನುಭವವನ್ನು ರೂಪಿಸುತ್ತಾರೆ ಎಂಬುದು ಇನ್ನೊಂದು ದೃಷ್ಟಿಕೋನ. ಇದೇ ಬರವಣಿಗೆಯಲ್ಲಿ ಬೇರೊಂದು ಕಡೆ ಪ್ರಸ್ತಾಪ ಮಾಡಿದ್ದ ಚರ್ಚೆಯನ್ನು ಮತ್ತೆ ಪ್ರಯೋಗಿಸಿ ಹೇಳುವುದಾದರೆ, ‘ಸೂರ್ಯ ಪೂರ್ವದಲ್ಲಿ ಹುಟ್ಟುತ್ತಾನೆ’ ಎಂಬುದು ನಂಬಲಾಗಿರುವ, ಒಪ್ಪಲಾಗಿರುವ ವಾಸ್ತವ. ‘ಸೂರ್ಯ ಹುಟ್ಟುವ ದಿಕ್ಕಿಗೆ ಪೂರ್ವ ಎಂದು ಕರೆಯುತ್ತೇವೆ, ಪೂರ್ವ ಎಂದು ಹೆಸರಿಟ್ಟಿದ್ದೇವೆ’ ಎಂಬುದು ಭಾಷಿಕವಾಗಿ ರೂಪುಗೊಳ್ಳುವ ಮತ್ತೊಂದು ವಾಸ್ತವ. ಸಮಾಜವನ್ನು ನಿಂತ ನೀರು ಎಂದು ಭಾವಿಸಲು ಆಗುವುದಿಲ್ಲ. ಅದು ನಿರಂತರವಾಗಿ ಬದಲಾಗುತ್ತಲೇ ಹೋಗುತ್ತಿರುತ್ತದೆ. ಹೀಗೆ ನಿರಂತರವಾಗಿ ಬದಲಾಗುತ್ತಾ ಹೋಗುವ ಸಾಮಾಜಿಕ ಆಯಾಮಗಳನ್ನೆ ಸಾಹಿತ್ಯ ಭಾಷಿಕವಾಗಿ ನಿರೂಪಿಸುತ್ತದೆ. ಸಾಹಿತ್ಯದಲ್ಲಿ ನಿರೂಪಿತವಾಗಿರುವ ಸಾಮಾಜಿಕ ಆಯಾಮಗಳು ಬದಲಾಗುತ್ತಲೆ ಹೋಗುತ್ತವೆ. ಆದ್ದರಿಂದ ಈ ನೆಲೆಯಿಂದ ಸಾಹಿತ್ಯವನ್ನು ಗ್ರಹಿಸುವ ವಿಧಾನಗಳೂ ನಿರಂತರವಾಗಿ ಬದಲಾಗುತ್ತಿರುತ್ತವೆ; ಬದಲಾಗಲೂಬೇಕು.