ಸಾಹಿತ್ಯ ಕೃತಿಗಳನ್ನು ಕೇವಲ ಅರ್ಥದ ನೆಲೆಯಲ್ಲಿ ಮಾತ್ರ ಅರ್ಥೈಸಿಕೊಳ್ಳಲು ಆಗುವುದಿಲ್ಲ. ಅರ್ಥದ ನೆಲೆಯಲ್ಲಿ ಅರ್ಥೈಸಿಕೊಳ್ಳಲಾಗುತ್ತದೆ ಎಂಬುದನ್ನು ಪೂರ್ಣ ಪ್ರಮಾಣದಲ್ಲಿ ನಂಬಲೂಬೇಕಿಲ್ಲ. ಅನೇಕ ಕತೆ ಕಾದಂಬರಿಗಳಲ್ಲಿ ‘ಕಠಿಣ ಪದಗಳು’ ಎಂಬುವು ಇರುವುದಿಲ್ಲ. ವಿಶಾಲವಾದ ಗದ್ಯ ಬರವಣಿಗೆಯಲ್ಲಿ ಮತ್ತು ವೈಚಾರಿಕ ಸಾಹಿತ್ಯದಲ್ಲಿ ‘ಕಠಿಣ ಪದಗಳು’ ಇರುವುದಿಲ್ಲ. ಆಗ ಅವನ್ನು ಅರ್ಥೈಸಿಕೊಳ್ಳುವ ಕ್ರಮ ಯಾವುದು? ಆಗ ‘ಕಠಿಣ ಪದ’ಗಳಿಗೆ ಅರ್ಥ ಹುಡುಕುವುದು ಕೆಲಸಕ್ಕೆ ಬರುವುದಿಲ್ಲ. ಆಗ ಅದಕ್ಕೆ ಬೇರೆ ವಿಧಾನವನ್ನು ಕಂಡುಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ವಚನದ ಒಂದು ಸಾಲು, ದೇವನೂರು ಮಹಾದೇವರ ಅವರ ‘ಅಮಾಸ’ ಕತೆಯ ಮೊದಲ ಸಾಲು ಮತ್ತು ಎಂ.ಎಂ. ಕಲಬುರ್ಗಿ ಅವರ ‘ಕನ್ನಡ ಸಂಶೋಧನ ಶಾಸ್ತ್ರ’ ಪುಸ್ತಕದ ಮೊದಲ ಅಧ್ಯಾಯದ ಮೊದಲ ಸಾಲು ಇವನ್ನು ಉಲ್ಲೇಖಿಸಿ, ನಂತರ ಅವನ್ನು ಅರ್ಥೈಸಿಕೊಳ್ಳಲು ಕಂಡುಕೊಳ್ಳಬಹುದಾದ ದಾರಿಗಳ  ಬಗ್ಗೆ ಚರ್ಚಿಸಬಹುದು.

೧. ನೋಡುವುದ ನೋಡಲರಿಯದೆ ಕೆಟ್ಟಿತ್ತೀ ಲೊಕವೆಲ್ಲ -ಅಲ್ಲಮನ ವಚನದ ಸಾಲು

೨. ಅಮಾಸ ಎಂಬುದು ಅಮಾಸನ ಹೆಸರು-ಅಮಾಸ ಕತೆಯ ಮೊದಲ ಸಾಲು

೩. ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಆರ್ಯರ ಆಗಮನ, ಮುಸಲ್ಮಾನರ ದಾಳಿ ಮತ್ತು ಆಂಗ್ಲರ ಪ್ರದೇಶಗಳು ಚರಿತಾರ್ಹ ಘಟನೆಗಳೆನಿಸಿವೆ… ಇವುಗಳಲ್ಲಿ ಯುದ್ಧ ಸಂಸ್ಕೃತಿಯ ಮುಸಲ್ಮಾನರಿಗಿಂತ, ಕೃಷಿ ಸಂಸ್ಕೃತಿಯ ಆರ್ಯರ ಮತ್ತು ಯಂತ್ರ ಸಂಸ್ಕೃತಿಯ ಆಂಗ್ಲರ ಪ್ರವೇಶಗಳು ಹೆಚ್ಚು ಮಹತ್ವಪೂರ್ಣವಾದವು. – ಡಾ. ಎಂ.ಎಂ. ಕಲಬುರ್ಗಿ ಅವರ ‘ಕನ್ನಡ ಸಂಶೋಧನ ಶಾಸ್ತ್ರ’ದ ಮೊದಲ ಅಧ್ಯಾಯದ ಮೊದಲ ಸಾಲುಗಳು.

‘ನೋಡುವುದ ನೋಡಲರಿಯದೆ ಕೆಟ್ಟಿತ್ತೀ ಲೋಕವೆಲ್ಲ’. ವಚನದ ಈ ಸಾಲಿನಲ್ಲಿ ಯಾವ ‘ಕಠಿಣ ಪದ’ಗಳೂ ಇಲ್ಲ. ಹಾಗಿದ್ದರೆ ‘ಕಠಿಣ ಪದಗಳ’ ಹಂಗಿಲ್ಲದೆ ಹೋದಾಗ ಆ ಸಾಹಿತ್ಯವನ್ನು ಅರ್ಥೈಸಿಕೊಳ್ಳುವ ಕ್ರಮ ಯಾವುದು? ಅದಕ್ಕೆ ಹಿಡಿಯಬಹುದಾದ ದಾರಿ ಯಾವುದು? ಆಗ ಅರ್ಥದ ನೆಲೆಯಿಂದ ಆ ಭಾಷಿಕ ರಚನೆಯ ಧೋರಣೆಯ ನೆಲೆಗೆ ಅರ್ಥೈಸುವ ಕೆಲಸ ದಾಟುತ್ತದೆ. ಆಗ ಆ ಭಾಷಿಕ ರಚನೆಯ ಧೋರಣೆಯ ಸ್ವರೂಪ ಯಾವುದಾಗಿರಬಹುದು? ಅದನ್ನು ಹೇಗೆ ವಿವರಿಸಿಕೊಳ್ಳಬಹುದು? ಎಂಬುದರ ಕಡೆಗೆ ಗಮನ ಕೊಡಲಾಗುತ್ತದೆ. ಅರ್ಥೈಸುವ ಕೆಲಸವು ವಿಶ್ಲೇಷಿಸುವ ಕೆಲಸವಾಗಿ ಮಾರ್ಪಾಟಾಗುತ್ತದೆ. ಈ ವಿಶ್ಲೇಷಣೆಯ ಕೆಲಸವು ಭಾಷಿಕ ರಚನೆಯ ಧೋರಣೆಯ ಸ್ವರೂಪದ ಒಟ್ಟು ವಿನ್ಯಾಸವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ದೆ.

ಉಲ್ಲೇಖಿತ ‘ನೋಡುವುದ ನೋಡಲರಿಯದೆ ಕೆಟ್ಟಿತ್ತೀ ಲೋಕವೆಲ್ಲ’ ಎಂಬ ವಚನದ ಸಾಲನ್ನೆ, ಇಲ್ಲಿ ಚರ್ಚೆಗೆ ಎತ್ತಿಕೊಳ್ಳೋನ. ನೋಡುವುದನ್ನು ನೋಡಲು ಅರಿಯದೆ (ಕಲಿಯದೆ, ತಿಳಿಯದೆ) ಈ ಲೋಕವೆಲ್ಲ ಕೆಟ್ಟಿದೆ ಎಂದು ಆ ಸಾಲು ಹೇಳುತ್ತಿದೆ. ಹಾಗಿದ್ದರೆ ಇದಕ್ಕೆ ಎಷ್ಟು ಬಗೆಯ ವಿವರಣೆ, ವಿಶ್ಲೇಷಣೆಗಳು ಸಾಧ್ಯ? ಒಂದು: ನೋಡುವುದನ್ನು ಕಲಿಯಬೇಕಾಗಿದೆ, ತಿಳಿಯಬೆಕಾಗಿದೆ. ಎರಡು: ಇದುವರೆಗೆ ನೋಡಿರುವುದು, ಈಗ ನೋಡುತ್ತಿರುವುದು ಸರಿಯಾದುದಲ್ಲ. ಹಾಗಾಗಿಯೇ ಲೋಕ ಕೆಟ್ಟಿದೆ. ಮೂರು: ಲೋಕವನ್ನು ನೋಡುತ್ತಿರುವುದು ತಪ್ಪಾಗಿದೆ. ಲೋಕದಲ್ಲಿ ಅನ್ಯಾಯ, ಅಸಮಾನತೆ, ದುಃಖ ದುಮ್ಮಾನಗಳು ಇರುವುವಾದರೂ ಅವೆಲ್ಲ ಇಲ್ಲ ಎಂಬಂತೆ ನೋಡಲಾಗುತ್ತಿದೆ. ಹೀಗೆ ನೋಡುತ್ತಿರುವುದರಿಂದ ಅವು ಹಾಗೇ ಮುಂದುವರಿಯುತ್ತಿವೆ. ಅವು ಹಾಗೆ ಮುಂದುವರಿಯಲು ಕಾರಣ ಅವೆಲ್ಲ ಇಲ್ಲ ಎಂದು ತಪ್ಪಾಗಿ ನೋಡಿರುವುದೇ ಆಗಿದೆ. ಯಾಕೆ ಹಾಗೆ ತಪ್ಪಾಗಿ ನೋಡಲಾಗುತ್ತಿದೆ ಎಂದರೆ ನೋಡುವುದನ್ನೇ ಇನ್ನೂ ಕಲಿತಿಲ್ಲವಲ್ಲ. ಆ ಕಾರಣಕ್ಕಾಗಿ. ನಾಲ್ಕು: ಪ್ರಜೆಗಳನ್ನು ನೋಡಬೇಕಾದುದು ಪ್ರಭುತ್ವದ ಕರ್ತವ್ಯ. ಮಕ್ಕಳನ್ನು ನೋಡಬೇಕಾದುದು ತಂದೆ ತಾಯಿಗಳ ಕರ್ತವ್ಯ. ವಯಸ್ಸಾದ ತಂದೆ ತಾಯಿಗಳನ್ನು ನೋಡಬೇಕಾದುದು, ಮಕ್ಕಳ, ಮೊಮ್ಮಕ್ಕಳ ಕರ್ತವ್ಯ. ಆದರೆ ಪ್ರಜೆಗಳನ್ನು ನೋಡುವ ಬಗೆಯೇ ಪ್ರಭುತ್ವಕ್ಕೆ ತಿಳಿದಿಲ್ಲ. ಮಕ್ಕಳನ್ನು ನೋಡುವ ಬಗೆಯೇ ತಂದೆ ತಾಯಿಗಳಿಗೆ ತಿಳಿದಿಲ್ಲ. ವಯಸ್ಸಾದ ತಂದೆ ತಾಯಿಗಳನ್ನು ನೋಡುವ ಬಗೆಯೇ ಮಕ್ಕಳು, ಮೊಮ್ಮಕ್ಕಳಿಗೆ ತಿಳಿದಿಲ್ಲ. ಐದು: ಅಸ್ಪೃಶ್ಯತೆ, ಜಾತಿ, ಲಿಂಗ ಅಸಮಾನತೆ, ಬಡತನ, ದಮನ, ದಬ್ಬಾಳಿಕೆ, ಲೂಟಿ ಮುಂತಾದುವನ್ನು ಅಳಿಸಬೇಕು ಎನ್ನುವವರಿಗೆ ಅವುಗಳ ಸ್ವರೂಪವನ್ನು ಅಳಿಸಬೇಕು ಎಂಬುದು ತಿಳಿದಿಲ್ಲ. ಹೀಗೆ ನೋಡುವ ಬಗೆಯೇ ತಿಳಿದಿಲ್ಲವಾದ್ದರಿಂದ ಕುಟುಂಬ ಕೆಟ್ಟಿದೆ, ಸಮುದಾಯ ಕೆಟ್ಟಿದೆ, ಸಮಾಜ ಕೆಟ್ಟಿದೆ, ವ್ಯವಸ್ಥೆ ಕೆಟ್ಟಿದೆ, ಪ್ರಭುತ್ವ ಕೆಟ್ಟಿದೆ, ಅಂತಿಮವಾಗಿ ಲೋಕವೆಲ್ಲವೂ ಕೆಟ್ಟಿದೆ. ಕೇವಲ ನಾಲ್ಕು ಪದಗಳ ವಚನದ ಸಾಲನ್ನು ಕುರಿತ ವಿವರಣೆ ವಿಶ್ಲೇಷಣೆಗೆ ನುರ ಇಪ್ಪತ್ತಕ್ಕೂ ಹೆಚ್ಚು ಪದಗಳನ್ನು ಬಳಸಬೇಕಾಯಿತು. ಎಷ್ಟು ಪದಗಳು ಎಂಬುದು ಯಾಂತ್ರಿಕವಾದುದೂ ಹೌದು. ಆದರೆ ಇದನ್ನು ಹೇಳಲು ಕಾರಣ ಪದಗಳಿಗೆ ಅರ್ಥಗಳನ್ನು ಹೇಳುವಾದ ಇಷ್ಟೊಂದು ಪದಗಳ ಅಗತ್ಯ ಬೀಳುವುದಿಲ್ಲ.

‘ಅಮಾಸ ಎಂಬುದು ಅಮಾಸನ ಹೆಸರು’ ಎಂಬ ಸಾಲಿನ ಮೂಲಕ ‘ಅಮಾಸ ಕತೆ’ ಶುರುವಾಗುತ್ತದೆ. ವ್ಯಕ್ತಿ/ಪಾತ್ರಗಳನ್ನು ಪರಿಚಯ ಮಾಡುವ ಪರಿಚಿತ/ಸಾಂಪ್ರದಾಯಿಕ ಮಾದರಿಯಲ್ಲಿ ಈ ಸಾಲು ಇಲ್ಲ. ತಂದೆ ತಾಯಿ, ಊರು, ಅಂತಸ್ತು, ಸಾಧಕ ಮುಂತಾದವನ್ನು ಮೊದಲು ಹೇಳಿ ಆ ಮೂಲಕ ಪರಿಚಯ ಮಾಡುವುದಿದೆ. ಆದರೆ ಈ ಸಾಲು ಆ ಕ್ರಮಗಳಿಗಿಂತ ಭಿನ್ನವಾಗಿದೆ. ಅಮಾಸನ ಅನನ್ಯತೆಯನ್ನು, ವ್ಯಕ್ತಿತ್ವವನ್ನು ಪರಿಚಯ ಮಾಡುವ ಮೂಲಕವೇ ಅವನನ್ನು ರೂಪಿಸಲಾಗುತ್ತಿದೆ. ಅಆಸ ಈಗಾಗಲೆ ‘ಸ್ಥಾಪಿತ’ವಾಗಿರುವ ಯಾವುದೊ ಒಂದರ ಭಾಗವಲ್ಲ. ಅವನು ಸ್ವತಂತ್ರ ವ್ಯಕ್ತಿತ್ವವುಳ್ಳವನು. ಹಾಗಾಗಿ ಅವನನ್ನು ಬೇರೊಂದರ ಮೂಲಕ ಪರಿಚಯಿಸುವ ಅಗತ್ಯವಿಲ್ಲಿ ಬೀಳುವುದಿಲ್ಲ. ಆಗಿ ಹೋದುದನ್ನು ಕುರಿತು ಕತೆ ಹೇಳುವ ಕ್ರಮ ಇದಲ್ಲ. ಹೇಲುತ್ತಲೇ ಕತೆಯನ್ನು ಆಗಿಸುವ ಕ್ರಮ ಇದು. ಇದು ಜಡವಸ್ತುವಿನ ಒಣಪರಿಚಯವಲ್ಲ. ಆಗುತ್ತಲೆ ಇರುವ ಚಲನಶೀಲತೆಯ ನಿರೂಪಣೆ. ಹಾಗಾಗಿ ಅಮಾಸ ಮಾಸುವವನೂ ಅಲ್ಲ; ಮಾಸಿದವನೂ ಅಲ್ಲ. ಕತೆಯನ್ನು ಹೇಳುತ್ತಲೇ ಕತೆಯನ್ನು ಆಗಿಸುವ ಇಲ್ಲಿ ಸೂಕ್ಷ್ಮ  ಕಲೆಗಾರಿಕೆ ಕತೆಯ ರೂಪಧಾರಣೆಯ ಪ್ರಕ್ರಿಯೆಯನ್ನು ಕುರಿತದ್ದು. ಆಕೃತಿಯನ್ನು ಸೃಷ್ಟಿಸುವ ಸೃಜನಶೀಲ ಕ್ರಿಯೆಯ ಸ್ವರೂಪವನ್ನು ಕುರಿತದ್ದು. ಆಕೃತಿಯನ್ನು ಅಸಾಂಪ್ರದಾಯಿಕವಾಗಿ ರೂಪಿಸುತ್ತ, ಆ ಮುಲಕ ಅಮಾಸನನ್ನು ರೂಪಿಸುತ್ತ, ಅವನ ಅನನ್ಯತೆಯನ್ನು ಪರಿಚಯಿಸಲಾಗಿದೆ. ಈ ಅವಗಾಹನೆ ಕತೆಯ ಧೋರಣೆಯ ಜೊತೆಗೆ ಅದರ ಆಕೃತಿ ನಿರ್ಮಾಣದ ಸ್ವರೂಪ ಮತ್ತು ಸ್ವಭಾವವನ್ನೂ ಆಧರಿಸಿದೆ.

‘ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಆರ್ಯರ ಆಗಮನ, ಮುಸಲ್ಮಾನರ ದಾಳಿ ಮತ್ತು ಆಂಗ್ಲರ ಪ್ರದೇಶಗಳು ಚರಿತ್ರಾರ್ಹ ಘಟನೆಗಳೆನಿಸಿವೆ…. ಇವುಗಳಲ್ಲಿ ಯುದ್ಧ ಸಂಸ್ಕೃತಿಯ ಮುಸಲ್ಮಾನರಿಗಿಂತ, ಕೃಷಿ ಸಂಸ್ಕೃತಿಯ ಆರ್ಯರ ಮತ್ತು ಯಂತ್ರ ಸಂಸ್ಕೃತಿಯ ಆಂಗ್ಲರ ಪ್ರವೇಶಗಳು ಹೆಚ್ಚು ಮಹತ್ವಪೂರ್ಣವಾದವು’. ಇವು ಗದ್ಯದ ಸಾಲುಗಳು. ಇದರಲ್ಲಿನ ಎಲ್ಲ ಪದಗಳ ಅರ್ಥಗಳು ಸ್ಪಷ್ಟವಾಗಿವೆ. ಹಾಗಾಗಿ ಈ ಸಾಲುಗಳು ಅರ್ಥವಾಗಿವೆ. ಇದರಲ್ಲಿ ಅರ್ಥವಾಗದುದು ಯಾವುದೂ ಇಲ್ಲ ಎಂದು ಹೇಳಬಹುದು. ಆದರೆ ಈ ಸಾಲುಗಳು ಅರ್ಥವಾಗಿದ್ದರೆ ಯಾವ ಧೋರಣೆಯಲ್ಲಿ ಅರ್ಥವಾಗಿವೆ ಎಂದು ಕೇಳಬೇಕಾಗಿದೆ. ಯಾಕೆಂದರೆ ಈ ಭಾಗವನ್ನು ಧೋರಣೆಯ ಮೂಲಕ ನೋಡುವ ಮೂಲಕ ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯ. ಧೋರಣೆಯನ್ನು ಅನ್ವಯ ಮಾಡದೆ ಇದು ಅರ್ಥವಾಯಿತು ಎಂದರೆ ತಾತ್ವಿಕವಾಗಿ ಮೋಸ ಹೋದಂತೆಯೇ ಸರಿ. ಯಾಕೆಂದರೆ ಈ ಸಾಲುಗಳಲ್ಲಿ ಆರ್ಯರ, ಮುಸಲ್ಮಾನರ ಮತ್ತು ಆಂಗ್ಲರ ಪ್ರಸ್ತಾಪವಿದೆ. ಈ ಮೂರನ್ನೂ ಧೋರಣೆಯ ತಾರತಮ್ಯದಿಂದ ನಿರೂಪಿಸಲಾಗಿದೆ. ಅದರಲ್ಲಿ ಮುಸಲ್ಮಾನರನ್ನು ದಾಳಿ ಮತ್ತು ಯುದ್ಧ ಸಂಸ್ಕೃತಿ ಎಂದು ತೀರ್ಮಾನಿಸಲಾಗಿದೆ. ಸಂಶೋಧನೆಯ ಓದುಗಳು ಇಂತಹ ಹೇಳಿಕೆಗಳನ್ನು ಸುಮ್ಮನೆ ಒಪ್ಪಿಕೊಂಡು ಹೋಗಬಾರದು. ಮುಸ್ಲಿಮರಿಗೆ ಯಾಕೆ ಈ ಪದಗಳ ಬಳಕೆಯಾಗಿದೆ? ಆ ಮೂಲಕ ಬರವಣಿಗೆಯ ಧೋರಣೆ ಯಾವುದು? ಮುಸ್ಲಿಮರಿಗೆ ದಾಳಿ, ಯುದ್ಧ ಮುಂತಾದುವು ಅಪ್ಲೈ ಆಗುವುದಾದರೆ, ಅವು ಆರ್ಯರಿಗೆ ಮತ್ತು ಆಂಗ್ಲರಿಗೆ ಯಾಕೆ ಅನ್ವಯವಾಗುವುದಿಲ್ಲ? ಅವರು ಯುದ್ಧ ಮಾಡಲೇ ಇಲ್ಲವೆ? ಆರ್ಯರು ಶೂದ್ರರನ್ನು, ಆಂಗ್ಲರು ಭಾರತೀಯರನ್ನು ಕೊಲ್ಲಲೇ ಇಲ್ಲವೆ? ಈ ಮುಂತಾದ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ಸಂಶೋಧನೆಯ ಓದುಗಳು ಪ್ರತಿ ವಾಕ್ಯವನ್ನು ಸೂಕ್ಷ್ಮವಾಗಿ ಮತ್ತು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಮೇಲಿನ ತೀರ್ಮಾನಗಳನ್ನು ಕಣ್ಣುಮುಚ್ಚಿಕೊಂಡು ಸ್ವೀಕರಿಸಬಾರದು; ಒಪ್ಪಬಾರದು. ಅವನ್ನು ಪ್ರಶ್ನೆ ಮಾಡುವ ಮೂಲಕ ಅವುಗಳ ಧೋರಣೆಯನ್ನು ಗುರುತಿಸಬೇಕು. ಆ ಧೋರಣೆಗಳನ್ನು ಗುರುತಿಸಿದರೆ ಅವು ಅರ್ಥವಾಗುತ್ತವೆ. ಇಲ್ಲವಾದರೆ ಅವು ಅರ್ಥವಾಗುವುದಿಲ್ಲ; ಅವನ್ನು ಕೇವಲ ಒಪ್ಪಬೇಕಾಗುತ್ತದೆ ಅಷ್ಟೆ. ಹೀಗೆ ಪ್ರಶ್ನಾತೀತವಾಗಿ ಒಪ್ಪುವ ವಿಧಾನಗಳಿಂದ ಸಂಶೋಧನೆಯ ಓದುಗಳು ಹೊರಬರಬೇಕು.

ಸಾಹಿತ್ಯದ ಓದು ಮತ್ತು ಸಾಹಿತ್ಯದ ಸಂಶೋಧನೆ, ಅರ್ಥದ ನೆಲೆಯನ್ನು ಬಿಟ್ಟು ಧೋರಣೆಯ ನೆಲೆಗೆ ಹೊರಳಿದಾಗ ಅದು ವಿಶ್ಲೇಷಣೆಗೆ ಮುಂದಾಗುತ್ತದೆ. ಆಗ ಸಾಹಿತ್ಯ ಪಠ್ಯವನ್ನು ವಿವಿಧ ಆಯಾಮಗಳಿಂದ, ವಿಭಿನ್ನ ಕೋನಗಳಿಂದ ಗ್ರಹಿಸಲಾಗುತ್ತದೆ. ಈ ವಿವಿಧ ಆಯಾಮಗಳು, ವಿಭಿನ್ನ ಕೋನಗಳು ಸಾಹಿತ್ಯ ಪಠ್ಯವನ್ನು ಪ್ರಶ್ನಿಸುತ್ತವೆ ಮತ್ತು ವಿಸ್ತರಿಸುತ್ತವೆ. ಈ ವಿಸ್ತರಣೆಯಲ್ಲಿ ಸಾಹಿತ್ಯ ಪಠ್ಯವನ್ನು ಓದುಗರಾಗಿ, ಸಂಶೋಧಕರಾಗಿ ಹೇಗೆ ಗ್ರಹಿಸಬೇಕು ಮತ್ತು ಹೇಗೆ ಪ್ರತಿಕ್ರಿಯಿಸಬೆಕು ಎಂಬುದು ಮುಖ್ಯವಾಗುತ್ತದೆ.

ಕೆಲವು ಸಾಹಿತ್ಯ ಪ್ರಕಾರಗಳಲ್ಲಿ ಸಿದ್ಧರೂಪದಲ್ಲಿ ಇಲ್ಲದೆ ಇರಬಹುದು. ಆಗ ಓದುಗರ, ಮತ್ತೆ ಕೆಲವು ಪ್ರಕಾರಗಳಲ್ಲಿ ಸಿದ್ಧರೂಪದಲ್ಲಿ ಇಲ್ಲದೆ ಇರಬಹುದು. ಆಗ ಓದುಗರ, ಸಂಶೋಧಕರ ಧೋರಣೆಯ ಮೂಲಕ ಅದು ರೂಪುಗೊಳ್ಳುತ್ತದೆ. ಸಾಹಿತ್ಯ ಪಠ್ಯಗಳಲ್ಲಿ ಅವುಗಳದ್ದೇ ಆದ ಭಾಷಿಕ ರಚನೆ ಇರುತ್ತದೆ. ಆ ಭಾಷಿಕ ರಚನೆಯ ಒಳಗೆ ಧೋರಣೆಗಳನ್ನು ರೂಪಿಸಬಹುದಾದ ಅತ್ಯಂತ ಸೂಕ್ಷ್ಮವಾದ ಎಳೆಗಳಿರುತ್ತವೆ. ಆ ಅತಿಸೂಕ್ಷ್ಮವಾದ ಭಾಷಿಕ ಎಳೆಗಳನ್ನು ಬಿಟ್ಟು ಧೋರಣೆಯನ್ನು ಗುರುತಿಸಲು ಅಥವಾ ಧೋರಣೆಯ ನೆಲೆಯಿಂದ ಸಾಹಿತ್ಯವನ್ನು ಓದಲು ಆಗುವುಇದ್ಲ. ಹಾಗೆ ಓದಲೂಬಾರದು. ಧೋರಣೆಯಯನ್ನು ರೂಪಿಸಲು ಅನುವು ಮಾಡುವ ಭಾಷಿಕ ಸೂಕ್ಷ್ಮಗಳು, ಬೀಜದಲ್ಲಿರುವ ಸಸಿಯ ರೂಪದಲ್ಲಿ, ಮೊಟ್ಟೆಯಲ್ಲಿರುವ ಮರಿಯ ರೂಪದಲ್ಲಿ, ಹಾಲಿನಲ್ಲಿರುವ ಬೆಣ್ಣೆಯ ರೂಪದಲ್ಲಿ ಇರುತ್ತವೆ. ಬೀಜವು ಸಸಿಯಾಗಲು, ಮೊಟ್ಟೆಯು ಮರಿಯಾಗಲು ಮತ್ತು ಹಾಲಿನಿಂದ ಬೆಣ್ಣೆ ಬರಲು ಸಂದರ್ಭ ಮತ್ತು ಕ್ರಿಯೆಗಳು ಮುಖ್ಯವಾಗುತ್ತವೆ. ಸಾಹಿತ್ಯದ ಓದು ಸಂದರ್ಭ ಮತ್ತು ಕ್ರಿಯೆಯನ್ನು ಅವಲಂಬಿಸಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಅದು ಓದಿನ ಧೋರಣೆಯನ್ನು ಅವಲಂಬಿಸಿದೆ. ಹಾಗಾಗಿ ಸಾಹಿತ್ಯ ಪಠ್ಯದ ಭಾಷಿಕ ರಚನೆಯಲ್ಲಿ ಧೋರಣೆಯನ್ನು ಗುರುತಿಸುವಾಗ ಬೀಜದ ಬಗ್ಗೆ ಚರ್ಚಿಸಿ ‘ಮರಿ ಎಂಬ ಧೋರಣೆ’ಯನ್ನು, ಮೊಟ್ಟೆಯ ಬಗ್ಗೆ ಚರ್ಚಿಸಿ ‘ಸಸಿ ಎಂಬ ಧೋರಣೆ’ಯನ್ನು ಗುರುತಿಸಲು ಆಗುವುದಿಲ್ಲ. ಸಾಹಿತ್ಯ ಪಠ್ಯದಲ್ಲಿ ಧೋರಣೆಯನ್ನು ಗುರುತಿಸುವಾಗ ಆ ಪಠ್ಯದ ಭಾಷಿಕ ರಚನೆಯೇ ಅದಕ್ಕೆ ತಳಹದಿ ಮತ್ತು ಮೂಲ. ಇದರಿಂದ ಹೊರಗೆ ಹೋಗಿ ಧೋರಣೆಯನ್ನು ಗುರುತಿಸಲು ಆಗುವುದಿಲ್ಲ. ಹಾಗೆ ಗುರುತಿಸಲೂಬಾರದು. ಕೆಲವು ಓದುಗಳು ‘ಅವರು ಇದರ ಬಗ್ಗೆ ಯಾಕೆ ಬರೆಯಲಿಲ್ಲ? ಅದರ ಬಗ್ಗೆ ಯಾಕೆ ಬರೆಯಲಿಲ್ಲ?’ ಎಂದು ಪಠ್ಯದ ಹೊರಗೆ ತಮ್ಮ ಪ್ರಶ್ನೆಯನ್ನು ಊರುತ್ತವೆ. ಈ ಬಗೆಯ ಓದು ಸಾಹಿತ್ಯದ ಧೋರಣೆಯ ಓದು ಆಗುವುದಿಲ್ಲ. ಅದು ಬರಹದ ಓದಾಗುವ ಬದಲು ಬರಹಗಾರರ ಮೇಲಿನ ಭಿನ್ನಮತದ ಅಥವಾ ಪೂರ್ವಗ್ರಹದ ಓದಾಗುತ್ತದೆ.

ಸಾಹಿತ್ಯದ ಸಂಶೋಧನೆಯಲ್ಲಿ ಧೋರಣೆಯ ಮೂಲಕ ಸಾಹಿತ್ಯವನ್ನು ಅರ್ಥೈಸುವ ವಿಧಾನವು ಕುತೂಹಲಕಾರಿಯಾದುದು. ಒಂದು ಕಡೆ ಸಾಹಿತ್ಯ ಪಠ್ಯಗಳಲ್ಲಿ ಅವುಗಳದ್ದೇ ಆದ ಭಾಷಿಕ ರಚನೆ ಇರುತ್ತದೆ. ಆ ಭಾಷಿಕ ರಚನೆಯ ಒಳಗೆ ಧೋರಣೆಗಳನ್ನು ರೂಪಿಸಬಹುದಾದ ಅತ್ಯಂತ ಸೂಕ್ಷ್ಮವಾದ ಎಳೆಗಳಿರುತ್ತವೆ. ಮತ್ತೊಂದು ಕಡೆ ಸಾಹಿತ್ಯ ಓದುಗರಿಗೆ, ಸಂಶೋಧಕರಿಗೆ ಅವರದ್ದೇ ಆದ ಭಾಷಿಕ ರಚನೆ ಇರುತ್ತದೆ. ಆ ಭಾಷಿಕ ರಚನೆಯ ಒಳಗೆ ಸಾಹಿತ್ಯ ಪಠ್ಯದ ಧೋರಣೆಗಳನ್ನು ರೂಪಿಸಬಹುದಾದ ಅತ್ಯಂತ ಸೂಕ್ಷ್ಮವಾದ ಎಳೆಗಳಿರುತ್ತವೆ. ಭಾಷಿಕ ರಚನೆಯ ಈ ಎರಡೂ ಒಳಸೂಕ್ಷ್ಮಗಳು ಸಾಹಿತ್ಯ ಓದಿನ ಮೂಲಕ ಪರಸ್ಪರ ಸಂಧಿಸುತ್ತವೆ ಒಂದರೊಳಗೊಂದು ಬೆರೆಯುತ್ತವೆ; ಬೆಸೆಯುತ್ತವೆ. ಒಂದನ್ನೊಂದು ಒಪ್ಪಿಕೊಳ್ಳುತ್ತವೆ. ಈ ಕ್ರಿಯೆ ಏಕಮುಖವಾದುದಲ್ಲ. ಪರಸ್ಪರ ಸಂಧಿಸುವ ಜೊತೆಗೆ ಪರಸ್ಪರ ಸಂಘರ್ಷಿಸುತ್ತವೆ. ಪರಸ್ಪರ ಬೆಸೆಯುವ ಜೊತೆಗೇ ಪರಸ್ಪರ ಬೇರ್ಪಡುತ್ತವೆ. ಪರಸ್ಪರ ಒಪ್ಪಿಕೊಳ್ಳುವ ಜೊತೆಗೇ ಪರಸ್ಪರ ಮುಖಾಮುಖಿಯಾಗುತ್ತವೆ. ಹಾಗಾಗಿಯೇ ಸಾಹಿತ್ಯದ ಓದು ಏಕಮುಖವಾದ ಕ್ರಿಯೆ ಅಲ್ಲ; ಬದಲಾಗಿ ಅದು ದ್ವಿಮುಖಿಯಾದ ಪ್ರಕ್ರಿಯೆ.

ಓದುಗರ ಧೋರಣೆಯ ಭಾಷಿಕ ಚೌಕಟ್ಟಿಗೆ ಸಾಹಿತ್ಯ ಕೃತಿಯ ಭಾಷಿಕ ರಚನೆ ಭಾಷಾಂತರಗೊಳ್ಳುತ್ತದೆ, ರೂಪಾಂತರಗೊಳ್ಳುತ್ತದೆ. ಆಗ ಓದುಗರ ಧೋರಣೆಯ ಭಾಷಿಕ ರಚನೆಯ ಒಳಸೂಕ್ಷ್ಮಗಳು ಕ್ರಿಯಾಶೀಲವಾಗುತ್ತವೆ. ಇವು ತಮ್ಮ ಹಿತಾಸಕ್ತಿಯ ಧೋರಣೆಯನ್ನು ಸೃಷ್ಟಿಸಿಕೊಳ್ಳುತ್ತವೆ. ಆಗ ಸಾಹಿತ್ಯ ಪಠ್ಯದಲ್ಲಿ ವಾಚ್ಯಗೊಳ್ಳದ ಆಯಾಮಗಳು ಕ್ರಿಯಾಶೀಲವಾಗುತ್ತವೆ. ಸಾಹಿತ್ಯ ಕೃತಿಯಲ್ಲಿ ಸಿದ್ಧಮಾದರಿಯಲ್ಲಿ ಇಲ್ಲದ ಹಲವು ಕವಲುಗಳು, ಆಯಾಮಗಳು, ನೋಟಗಳು, ದರ್ಶನಗಳು ರೂಪುಪಡೆಯುತ್ತವೆ. ಓದುಗರ ಭಾಷಿಕ ಸೂಕ್ಷ್ಮತೆ, ಗ್ರಹಿಕೆಯ ಸೂಕ್ಷ್ಮತೆ, ಅನುಭವಗಳ ಸೂಕ್ಷ್ಮತೆ, ರಾಜಕೀಯ ತಿಳುವಳಿಕೆಯ ಗಟ್ಟಿತನ ಇವೆಲ್ಲ ಕೂಡಿಕೊಳ್ಳುತ್ತವೆ. ಇವು ತಮ್ಮನ್ನು ತಾವು ಸಂಘಟಿಸಿಕೊಳ್ಳುತ್ತ, ವಿಘಟಿಸಿಕೊಳ್ಳುತ್ತ ಓದಿನ ಧೋರಣೆಯನ್ನು ರೂಪಿಸುತ್ತವೆ. ಈ ಬಗೆಯ ಸೂಕ್ಷ್ಮವೂ ಮತ್ತು ರಾಜಕೀಯವೂ ಆದ ಓದು ಧೋರಣೆಯ ನೆಲೆಯಿಂದ ಸಾಹಿತ್ಯವನ್ನು ಗ್ರಹಿಸುವ ಕ್ರಮವಾಗಿದೆ. ಇಮತಹ ಧೋರಣೆಯ ಓದಿನಿಂದಲೆ ‘ಛಂದೋ ಕೃತಿ’ ಎಂದು ಕರೆಯಲಾಗಿದ್ದ, ‘ಕವಿರಾಜ ಮಾರ್ಗ’ವನ್ನು ಕೆ.ವಿ.ಸುಬ್ಬಣ್ಣ ಅವರು ‘ಅದೊಂದು ರಾಜಕೀಯ ಪಠ್ಯ’ ಎಂದು ನಿರೂಪಿಸಲು ಸಾಧ್ಯವಾಯಿತು. ಅರವಿಂದ ಮಾಲಗತ್ತಿ ಅವರು ಅದೇ ‘ಕವಿರಾಜ ಮಾರ್ಗ’ದಲ್ಲಿ ‘ಅಸ್ಪೃಶ್ಯತೆಯ ಪ್ರಶ್ನೆ’ಯನ್ನು ಎತ್ತಲು ಸಾಧ್ಯವಾಯಿತು. ಶಂಬಾ ಅವರ ಚಿಂತನೆಗಳಲ್ಲಿ ‘ಜನತೆಯ ಆಶಯಗಳು ಯಾವ ನೆಲೆಗೆ ಸರಿದಿವೆ’ ಎಂದು ರಾಜೇಂದ್ರ ಚೆನ್ನಿಯವರು ಗುರುತಿಸಲು ಸಾಧ್ಯವಾಯಿತು. ವಚನಗಳ ಕೇಂದ್ರ ಚಿಂತನೆಗಳು ನಡೆಗೂ ನುಡಿಗೂ ಯಾವ ಬಗೆಯ ಸಂಬಂಧವನ್ನು ಕಲ್ಪಿಸುತ್ತವೆ ಮತ್ತು ನುಡಿಯಲ್ಲಿ ಬದಲಾವಣೆ ತರಬೇಕು ಎಂಬುದು ಪ್ರಜ್ಞೆಯಲ್ಲಿ ಬದಲಾವಣೆಯನ್ನು ಅಪೇಕ್ಷಿಸುತ್ತದೆ ಪ್ರಜ್ಞೆಯ ಸ್ತರದ ಬದಲಾವಣೆಯನ್ನು ಗುರುತಿಸಲು ಸಾಧ್ಯವೆ ಎಂಬ ಗತಿತಾರ್ಕಿಕ ಅಧ್ಯಯನವನ್ನು ಕೆ.ವಿ. ನಾರಾಯಣ ಅವರು ಮಂಡಿಸಲು ಸಾಧ್ಯವಾಯಿತು. ಕುವೆಂಪು ಅವರು ಭಾರತೀಯ ಸಮಾಜವನ್ನು ವರ್ಣ ಚೌಕಟ್ಟಿನಲ್ಲಿ ಗ್ರಹಿಸಿದ್ದರ ಚಾರಿತ್ರಿಕ ಒತ್ತಡ ಮತ್ತು ಅದರಿಂದ ಕುವೆಂಪು ಅವರ ಸೃಜನಶೀಲತೆಯು ಯಾವ ಬಗೆಯ ವೈರುಧ್ಯಗಳನ್ನು ಮತ್ತು ಮಿತಿಗಳನ್ನು ಎದುರಿಸಬೇಕಾಯಿತು ಎಂಬುದನ್ನು ಡಿ.ಆರ್.ನಾಗರಾಜ್ ಅವರು ಗುರುತಿಸಲು ಸಾಧ್ಯವಾಯಿತು. ಈ ಬಗೆಯ ಹಲವು ಅಧ್ಯಯನಗಳನ್ನು ಹೆಸರಿಸಬಹುದು.

‘ಸಾಹಿತ್ಯ ಅರ್ಥವಾಗುವುದಿಲ್ಲ, ಅದಕ್ಕೆ ಕಾರಣ ಸಾಹಿತ್ಯ ಹಳಗನ್ನಡವೊ, ಅರ್ಥವಾಗದ ಪದಗಳಿಂದ ಕೂಡಿರುವುದೋ ಆಗಿದೆ’ ಎಂಬುದು ಒಂದು ಅಭಿಪ್ರಾಯ. ಸಾಹಿತ್ಯ ಅರ್ಥವಾಗುವುದಿಲ್ಲ ಎಂಬುದಕ್ಕೆ ಕಾರಣವನ್ನು ಪದಗಳ ಹಂತದಲ್ಲಿ ಗುರುತಿಸಿದಾಗ, ಆ ಪದಗಳನ್ನು ಅರ್ಥಮಾಡಿಕೊಳ್ಳಲು ನಿಘಂಟು ಹಾಗೂ ಪದಕೋಶಗಳ ನೆರವನ್ನು ಪಡೆಯಲಾಗುತ್ತದೆ. ಆದರೆ ಕೆಲವು ಗದ್ಯ ಬರವಣಿಗೆಗಳು, ವಿಮರ್ಶೆಯ ಬರವಣಿಗೆಗಳು ಅರ್ಥವಾಗುವುದಿಲ್ಲ ಎಂದೂ ಹೇಳುವುದಿದೆ. ಇದು ಅರ್ಥವಾಗದ ಪದಗಳ ಹಂತದಲ್ಲಿ ಇರುವ ಕಾರಣವಲ್ಲ. ಹಾಗಾಗಿ ಇದಕ್ಕೆ ನಿಘಂಟು ಹಾಗೂ ಪದಕೋಶಗಳ ನೆರವು ಪಡೆಯಲು ಆಗುವುದಿಲ್ಲ. ಹಾಗಿದ್ದರೆ ಇದಕ್ಕೆ ಏನು ಮಾಡಬೇಕು ಎಂಬುದು ಪ್ರಶ್ನೆಯೂ ಹೌದು; ಸಮಸ್ಯೆಯೂ ಹೌದು. ಇದಕ್ಕೆ ಪರಿಹಾರವಾಗಿ ‘ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಬರೆಯಬೇಕು’ ಎಂಬ ಪರಿಹಾರದ ಮಾತುಗಳನ್ನು ಕೆಲವರು ಹೇಳುತ್ತಾರೆ. ಈ ರೀತಿಯಲ್ಲಿ ಪರಿಹಾರವನ್ನು ಯಾಕೆ ಹೇಳುತ್ತಾರೆ ಎಂದರೆ ‘ಬರವಣಿಗೆಯನ್ನು ಅರ್ಥವಾಗದಂತೆ ಬರೆದಿದ್ದಾರೆ’ ಎಂದು (ತಪ್ಪಾಗಿ) ಗ್ರಹಿಸಿರುವುದರಿಂದ ಹಾಗೆ ಹೇಳುತ್ತಾರೆ. ಹಾಗಿದ್ದರೆ ಗದ್ಯವನ್ನೊ, ಸಾಹಿತ್ಯ ವಿಮರ್ಶೆಯನ್ನೊ, ವೈಚಾರಿಕ ಲೇಖನವನ್ನೊ ಅರ್ಥವಾಗದಂತೆ ಬರೆಯುವುದು ಎಂದರೆ ಏನು? ಅಥವಾ ವಿಮರ್ಶೆಯನ್ನೊ, ವೈಚಾರಿಕ ಲೇಖನವನ್ನೊ ಅರ್ಥವಾಗುವಂತೆ ಬರೆಯುವುದು ಎಂದರೆ ಏನು? ಯಾಕೆ ಕೆಲವರ ಗದ್ಯ, ವಿಮರ್ಶೆ ಬರವಣಿಗೆ ಹಾಗೂ ವೈಚಾರಿಕ ಬರವಣಿಗೆ ಅರ್ಥವಾಗುವುದಿಲ್ಲ? ಯಾಕೆ ಕೆಲವರ ಗದ್ಯ, ವಿಮರ್ಶೆ ಬರವಣಿಗೆ ಹಾಗೂ ವೈಚಾರಿಕ ಬರವಣಿಗೆ ಅರ್ಥವಾಗುತ್ತದೆ? ಇದನ್ನು ಬಿಡಿಸಿ ನೋಡುವ ಅಗತ್ಯವಿದೆ.

ಗದ್ಯ, ವಿಮರ್ಶೆ ಮತ್ತು ವೈಚಾರಿಕ ಬರವಣಿಗೆಯಲ್ಲಿ ಉಳಿದ ಪ್ರಕಾರಗಳಿಗಿಂತ ಧೋರಣೆ ಎಂಬುದು ಹೆಚ್ಚು ಮೂರ್ತರೂಪದಲ್ಲಿ ಕ್ರಿಯಾಶೀಲವಾಗಿರುತ್ತದೆ. ಕೆಲವು ಬರವಣಿಗೆಗಳಲ್ಲಿ ಧೋರಣೆಯು ಸರಳ ತೀರ್ಮಾನಗಳ, ಅಭಿಪ್ರಾಯಗಳ ಮತ್ತು ಹೇಳಿಕೆಗಳ ಮಟ್ಟದಲ್ಲಿ ಇರುತ್ತದೆ. ಇನ್ನು ಕೆಲವು ಬರವಣಿಗೆಗಳಲ್ಲಿ ಧೋರಣೆಯು ಸರಳ ತೀರ್ಮಾನಗಳ ಹೇಳಿಕೆಗಳ ರೂಪದಲ್ಲಿ ಇರುವುದಿಲ್ಲ. ಅದು ಆಳವಾದ ವಿಶ್ಲೇಷಣೆಯ ರೂಪದಲ್ಲಿರುತ್ತದೆ. ಕ್ವಚಿತ್ತಾಗಿ ಕೆಲವು ಕಡೆ ಹೇಳಿಕೆಗೂ ಬರಬಹುದು. ಆದರೆ ಈ ಬರವಣಿಗೆಗೆ ಸರಳವಾದ ಅಭಿ‌ಪ್ರಾಯ ಮಟ್ಟದ ತೀರ್ಮಾನಗಳಿಗಿಂತ ಆಳವಾದ ಮತ್ತು ಗಂಭೀರವಾದ ವಿಶ್ಲೇಷಣೆ ಮುಖ್ಯ. ‘ಅರ್ಥವಾಗುವ ಅಥವಾ ಅರ್ಥವಾಗದಿರುವ’ ಗದ್ಯ ಸ್ವರೂಪವನ್ನು ಈ ಮುಂದಿನಂತೆ ಗುರುತಿಸಬಹುದು. ಒಂದು: ಧೋರಣೆಯು ಸರಳವಾದ ಅಭಿಪ್ರಾಯಗಳ, ಹೇಳಿಕೆಗಳ ರೂಪದಲ್ಲಿದ್ದರೆ ಅರ್ಥವಾಗುತ್ತದೆ. ವಿಶ್ಲೇಷಣೆಗಳ ಒಳಗೆ ಧೋರಣೆ ಕ್ರಿಯಾಶೀಲವಾಗಿದ್ದರೆ ಆಗ ಅಂತಹ ಬರವಣಿಗೆ ಅರ್ಥವಾಗುವುದಿಲ್ಲ. ಎರಡು: ಹೇಳಿಕೆಗಳು ಅಭಿಪ್ರಾಯದ ಮಟ್ಟದಲ್ಲಿದ್ದರೆ, ಹೆಚ್ಚು ಜನಪ್ರಿಯವಾಗಿದ್ದರೆ, ಸ್ಥಾಪಿತ ಮತ್ತು ಒಪ್ಪಿತ ಹೇಳಿಕೆಗಳಾಗಿದ್ದರೆ ಅಂತಹ ಬರವಣಿಗೆ ಅರ್ಥವಾಗುತ್ತದೆ. ಹೇಳಿಕೆಗಳು ಜನಪ್ರಿಯವಾಗಿಲ್ಲದಿದ್ದರೆ, ಸ್ಥಾಪಿ ಮತ್ತು ಒಪ್ಪಿತ ಹೇಳಿಕೆಗಳಾಗದಿದ್ದರೆ ಅಂತಹ ಬರವಣಿಗೆ ಅರ್ಥವಾಗುವುಇದಲ್ಲ. ಮೂರು: ಓದುಗರ ಪೂರ್ವ ತೀರ್ಮಾನಗಳನ್ನು, ಪೂರ್ವ ನಂಬಿಕೆಗಳನ್ನು ಪುನಃ ನಂಬಿಸಿ, ಅವನ್ನು ಗಟ್ಟಿಗೊಳಿಸುವಂತಿದ್ದರೆ ಅಂತಹ ಬರವಣಿಗೆ ಅರ್ಥವಾಗುತ್ತದೆ. ಓದುಗರ ತೀರ್ಮಾನಗಳನ್ನು, ಪೂರ್ವ ನಂಬಿಕೆಗಳನ್ನು ಪ್ರಶ್ನಿಸುವಂತಿದ್ದರೆ, ಅವನ್ನು ಬದಲಾಯಿಸುವಂತಿದ್ದರೆ ಅಂತಹ ಬರವಣಿಗೆ ಅರ್ಥವಾಗುವುದಿಲ್ಲ. ನಾಲ್ಕು: ವ್ಯವಸ್ಥೆ ತನ್ನ ಬಗೆಗೆ ಒಪ್ಪಿತ, ಸ್ಥಾಪಿತ ಮತ್ತು ಕೆಲವು ಪೂರ್ವ ತೀರ್ಮಾನಗಳನ್ನು ಮೌಲ್ಯಗಳನ್ನಾಗಿ ಮಾರ್ಪಡಿಸಿರುತ್ತದೆ. ಇವು ವೈಚಾರಿಕ ಮತ್ತು ಅಕಡೆಮಿಕ್ ವಲಯದಲ್ಲಿ ನಂಬಿಕೆಯ ಸಂಗತಿಗಳಾಗಿರುತ್ತವೆ. ಇವುಗಳನ್ನು ಯಾರು ಯಾರಿಗೆ ಹೇಳಿದರೂ ಅರ್ಥವಾಗುತ್ತದೆ. ಜೊತೆಗೆ ಸುಧಾರಣಾವಾದಿ ಆಲೋಚನೆಗಳೂ ಕೂಡ ಈ ಒಪ್ಪಿತ, ಸ್ಥಾಪಿತ ಮತ್ತು ಪೂರ್ವ ತೀರ್ಮಾನಗಳ ಚೌಕಟ್ಟಿನಲ್ಲಿ ಜಾಗ ಪಡೆದಿರುತ್ತವೆ. ಹಾಗಾಗಿ ಸುಧಾರಣವಾದಿ ಆಲೋಚನೆಗಳ ಗದ್ಯವೂ ಕೂಡ ಅರ್ಥವಾಗುತ್ತದೆ. ಬಹಳ ಜನಪ್ರಿಯ ಉದಾಹರಣೆ ಕೊಡುವುದಾದರೆ ‘ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ’ ಈ ಹೇಳಿಕೆ ಬಹಳ ಸಲೀಸಾಗಿ ಬಲಕೆಯಲ್ಲಿದೆ. ಇದು ಎಲ್ಲರಿಗೂ ಅರ್ಥವಾಗುತ್ತದೆ. ಎಲ್ಲರಿಗೂ ಅರ್ಥವಾಗುತ್ತದೆ ಯಾಕೆಂದರೆ ಭಾರತದ ಆಳುವ ವರ್ಗ ‘ಭಾರತಕ್ಕೆ ಸ್ವಾತಂತ್ರ್ಯ ಬಂದಿದೆ’ ಎಂಬುದನ್ನು ನಂಬಿಸಿದೆ, ಒಪ್ಪಿಸಿದೆ ಮತ್ತು ತೀರ್ಮಾನಿಸಿದೆ. ಶೋಷಕ ಪ್ರಭುತ್ವದ ಧೋರಣೆ, ಅದರ ಆಲೋಚನೆ, ಅದರ ನಂಬಿಕೆ ಮತ್ತು ಅದರ ತೀರ್ಮಾನವನ್ನು ‘ಇದು ತಮ್ಮದು’ ಎಂದು ಒಪ್ಪಿಕೊಂಡಿರುವ ಹಾಗೂ ನಮಬಿಕೊಂಡಿರುವ ಬರವಣಿಗೆಗಳು ಯಾವ ತಾತ್ವಿಕ ಮುಜುಗರವೂ ಇಲ್ಲದೆ ‘ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ’ ಎಂಬುದನ್ನು ಬಳಸುತ್ತವೆ. ಈ ಸೂಕ್ಷ್ಮ ಎಳೆಯನ್ನು ಹಿಡಿದು ಇದನ್ನು ಇನ್ನೊಂದಿಷ್ಟು ವಿಸ್ತರಿಸುವುದಾದರೆ, ಆಳುವ ವರ್ಗದ ಧೋರಣೆ, ತೀರ್ಮಾನ ಮತ್ತು ನಂಬಿಕೆಗಳನ್ನು ಅಲ್ಪಸ್ವಲ್ಲಪ ಬದಲಾಯಿಸಿ ಬರೆದರೆ ಅಂತಹ ಗದ್ಯ, ವಿಮರ್ಶೆ, ವೈಚಾರಿಕ ಬರವಣಿಗೆ ಅರ್ಥವಾಗುತ್ತದೆ. ಅಷ್ಟಲ್ಲದೆ ಅದನ್ನು ನಿರೂಪಿಸಲು, ಮಂಡಿಸಲು ಜನಪ್ರಿಯ ಬರವಣಿಗೆಯ ಭಾಷೆಯೂ, ಓದಿದರೆ ಆಹಾ ಓಹೋ ಎಂದು ಆಸ್ವಾದಿಸುವ ಬರವಣಿಗೆಯ ಶೈಲಿಯೂ ನಿರ್ಮಾಣವಾಗಿದೆ. ಹಾಗಾಗಿಯೇ ಅಂತಹ ಬರವಣಿಗೆ ‘ಸುಲಿದ ಬಾಳೆಯ ಹಣ್ಣಿನಂದದಿ’ ಸುಲಲಿತವಾಗಿ ಅರ್ಥವಾಗುತ್ತದೆ. ಆದರೆ ದಮನಿತ ಮತ್ತು ಶೋಷಿತರ ನೆಲೆಯಲ್ಲಿ ನಿಂತು, ಆಳುವ ವರ್ಗದ ಧೋರಣೆ, ತೀರ್ಮಾನ ಮತ್ತು ನಂಬಿಕೆಗಳನ್ನು ಧಿಕ್ಕರಿಸಿ ಬರೆಯಲು ಹೊರಟಾಗ ಎಲ್ಲರೂ ಒಪ್ಪುವ ಧೋರಣೆ, ತೀರ್ಮಾನ ಹಾಗೂ ನಂಬಿಕೆಗಳನ್ನು ಪುನರಾವರ್ತಿಸಲು ಬರುವುದಿಲ್ಲ. ಅದನ್ನು ನಿರೂಪಿಸುವ, ಮಂಡಿಸುವ ಜನಪ್ರಿಯ ಗದ್ಯವೂ ರಡಿಮೇಡ್‌ ಆಗಿ ಸಿಗುವುದಿಲ್ಲ. ಅದನ್ನು ಆಹಾ ಓಹೋ ಎಂದು ಆಸ್ವಾದಿಸುವಂತೆ ಬರೆಯಲೂ ಆಗುವುದಿಲ್ಲ. ಹಾಗಾಗಿ ಅದು ‘ಸುಲಿದ ಬಾಳೆಯ ಹಣ್ಣಿನಂದದಿ’ ಸುಲಲಿತವಾಗಿ ಅರ್ಥವೂ ಆಗುವುದಿಲ್ಲ.

ಸಿದ್ದಲಿಂಗಯ್ಯ ಅವರು ‘ಇಕ್ರರ್ಲಾ ವದಿರ್ಲಾ’ ಎಂದು ಬರೆದಾಗ, ಅದು ಎಲ್ಲರಿಗೂ ಅರ್ಥವಾಯಿತು. ಆದರೆ ‘ಅದು ಕವಿತೆಯೇ ಅಲ್ಲ’ ಎಂದರು. ಅದರಲ್ಲಿದ್ದ ಧಿಕ್ಕಾರದ ಧೋರಣೆಯ ಕಾರಣಕ್ಕಾಗಿಯೇ ಹಾಗೆ ಹೇಳಲಾಯಿತು. ದೇವನೂರು ಮಹದೇವ ‘ಕುಸುಮಬಾಲೆ’ ಬರೆದಾಗ ‘ಅದು ಅರ್ಥ ಆಗಲ್ಲ’ ಎಂದರು. ಈ ಕಾರಣವನ್ನು ಮುಂದುಮಾಡಿ ಅದರ ಮಹತ್ವವನ್ನು ಹೇಳಲಿಲ್ಲ. ಆದರೆ ‘ಅಡಿಗರ ಕವನಗಳು, ಬೇಂದ್ರೆಯವರ ಕವನಗಳು ಅರ್ಥ ಆಗಲ್ಲ’ ಎಂಬುದನ್ನು ಮುಂದುಮಾಡಿ ಅವುಗಳ ಮಹತ್ವವನ್ನು ಹೇಳಲಾಗುತ್ತದೆ. ‘ಕುಸುಮಬಾಲೆ’ ಅರ್ಥ ಆಗಲ್ಲ ಎನ್ನುವುದು ಅದರ ಪ್ರಾದೇಶಿಕ ಭಾಷೆಯ ಕಾರಣಕ್ಕೆ ಎಂಬ ಅಭಿಪ್ರಾಯವಿದೆ. ಇದು ಪೂರ್ಣ ನಿಜವಲ್ಲ. ಬದಲಾಗಿ ‘ಕುಸುಮಬಾಲೆಯ’ ರಚನೆಯ ವಿನ್ಯಾಸ ಇದಕ್ಕೆ ಕಾರಣ. ಅದರ ಕಥೆಯನ್ನು ಒಟ್ಟಾಗಿ ಹೇಳಲು ಆಗುವುದಿಲ್ಲ. ಅದಕ್ಕೆ ಒಂದು ಆರಂಭ, ಒಂದು ಕೊನೆ ಎಂಬುದು ಇಲ್ಲ. ಅದರ ರಚನೆಯ ವಿನ್ಯಾಸ ಬಿಡಿಬಿಡಿಯಾಗಿ ಹರಡಿಕೊಂಡಿದೆ. ಕಾದಂಬರಿ ಎಂದರೆ ನೇರವಾದ ಕಥೆಯ ಹಂದರವನ್ನು ಒಪ್ಪಿಕೊಂಡವರಿಗೆ ಅದು ಅರ್ಥವಾಗುವುದಿಲ್ಲ.

ಧೋರಣೆಯ ನೆಲೆಯಿಂದ ಸಾಹಿತ್ಯವನ್ನು ಅರ್ಥೈಸುವ ಮಿತಿಗಳನ್ನು ಅಥವಾ ಯಾಂತ್ರಿಕ ವಿಧಾನಗಳನ್ನು ಚರ್ಚಿಸುವ ಅಗತ್ಯವಿದೆ. ಸಾಹಿತ್ಯದಲ್ಲಿ ಧೋರಣೆಗಳು, ಆಶಯಗಳು ಇರುತ್ತವೆ, ಇರಬೇಕು ಎಂಬ ಪೂರ್ವ ಅಪೇಕ್ಷೆಯಿಂದ ಸಾಹಿತ್ಯವನ್ನು ಓದುವ ಒಂದು ಕ್ರಮವಿದೆ. ಬರಹಗಾರರೇ ಮುಂದೆ ನಿಂತು ಕೃತಿಯ ಆಶಯಗಳನ್ನು ಮಂಡಿಸಿದ್ದಾರೆ ಎಂಬಂತೆ ಸರಳೀಕರಿಸಿ ಈ ಅಧ್ಯಯನಗಳು ನಡೆಯುತ್ತಿವೆ. ಈ ಬಗೆಯ ಓದುಗಳಿಗೆ ಸಾಹಿತ್ಯ ಕೃತಿಯ ಆಶಯ ಮಾತ್ರ ಮುಖ್ಯವಾಗುತ್ತದೆ. ಆಶಯಗಳನ್ನು ಮಾತ್ರ ಯಾಂತ್ರಿಕವಾಗಿ ಗುರುತಿಸುತ್ತ ಹೋಗುವ ಇಂತಹ ಅಧ್ಯಯನಗಳು ತಾವು ಗುರುತಿಸುವ ತೀರ್ಮಾನಗಳನ್ನು ಬರಹಗಾರರ ತಲೆಗೆ ಅನಾಮತ್ತಾಗಿ ಕಟ್ಟಿಬಿಡುತ್ತವೆ. ಸಾಹಿತ್ಯ ಕೃತಿಯಲ್ಲಿ ಹೇಳಿಕೆಗಳನ್ನು ಹುಡುಕಿ ಇವೇ ಇದರ ಆಶಯಗಳು ಎಂದೂ ಗುರುತಿಸಲಾಗುತ್ತದೆ. ಬರಹಗಾರರ ಮೇಲಿನ ವೈಯಕ್ತಿಕ ಸಂಬಂಧದ ನೆಲೆಯಿಂದಲೂ ಈ ಬಗೆಯ ಅಧ್ಯಯನಗಳು ನಡೆಯುತ್ತಿವೆ. ಈ ಮೊದಲು ಚರ್ಚಿಸಿದ ಉಪಮೆಯನ್ನು ಬಳಿಸಿ ಹೇಳುವುದಾದರೆ, ಇಂತಹ ಅಧ್ಯಯನಗಳು, ಆಶಯವನ್ನು ಗುರುತಿಸುವಾಗ ಸಾಹಿತ್ಯದಲ್ಲಿ ಬೀಜದ ಬಗ್ಗೆ ಚರ್ಚಿಸಿ, ‘ಮರಿ ಇದೆ’ ಎಂಬ ಆಶಯವನ್ನು ಗುರುತಿಸುತ್ತವೆ. ಅದೇ ರೀತಿ ಸಾಹಿತ್ಯದಲ್ಲಿ ಮೊಟ್ಟೆಯ ಬಗ್ಗೆ ಚರ್ಚಿಸಿ, ‘ಸಸಿ ಇದೆ’ ಎಂಬ ಆಶಯವನ್ನು ಗುರುತಿಸುತ್ತವೆ. ಇಂತಹ ಅಧ್ಯಯನಗಳನ್ನು ಧೋರಣೆಯ ನೆಲೆಯಿಂದ ಸಾಹಿತ್ಯವನ್ನು ಅರ್ಥೈಸುವ ಚೌಕಟ್ಟಿನಲ್ಲಿ ಸೇರಿಸಲು ಆಗುವುದಿಲ್ಲ.