ಸಾಹಿತ್ಯದ ಮುಖ್ಯ ಉದ್ದೇಶವೆ ಅದರ ಸಂವಹನ. ಸಾಹಿತ್ಯವು ಓದುಗರಿಗೆ, ಕೇಳುಗರಿಗೆ, ವಿಮರ್ಶಕರಿಗೆ ಮತ್ತು ಸಂಶೋಧಕರಿಗೆ ಅರ್ಥವಾಗಬೇಕು. ಅದು ಅರ್ಥವಾದಾಗಲೆ ಅದರ ಸಾರ್ಥಕತೆ. ಅದರ ಉದ್ದೇಶ ಈಡೇರಿದಂತೆ. ಈ ಉದ್ದೇಶದಿಂದ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವ, ಅರ್ಥಮಾಡಿಸುವ ಕೆಲಸ ನಡೆಯುತ್ತದೆ. ಸಾಹಿತ್ಯ ಸಂಶೋಧನೆಯಲ್ಲಿ ಸಾಹಿತ್ಯ ಪಠ್ಯ ಅರ್ಥವಾಗಬೇಕಾದುದು ಪ್ರಾಥಮಿಕವಾದ ಅಗತ್ಯ. ಇದು ಕೈಗೂಡಿದ ಮೇಲೆ ಮುಂದಿನ ಕೆಲಸ. ಹಾಗಾಗಿ ಸಾಹಿತ್ಯ ಅಧ್ಯಾಪನದ ಮೊದಲ ಅಥವಾ ಪ್ರಾಥಮಿಕ ಕೆಲಸ ಎಂದರೆ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವುದು ಮತ್ತು ಅರ್ಥಮಾಡಿಸುವುದೇ ಆಗಿದೆ. ಅದೆ ರೀತಿಯಲ್ಲಿ ಸಾಹಿತ್ಯ ಸಂಶೋಧನೆಯ ಮೊದಲ ಅಥವಾ ಪ್ರಾಥಮಿಕ ಕೆಲಸ ಎಂದರೆ ಸಾಹಿತ್ಯವನ್ನು ಅರ್ಥೈಸಿಕೊಂಡು, ಅದನ್ನು ವಿವರಿಸುವುದು ಮತ್ತು ವ್ಯಾಖ್ಯಾನಿಸುವುದೇ ಆಗಿದೆ.

ಸಾಹಿತ್ಯವು ಮುದ್ರಣ (ಕಾಗದ) ಇಲ್ಲವೆ ಟೈಪ್ಡ್ (ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳ ಸ್ಕ್ರೀನ್‌) ರೂಪದಲ್ಲಿರುತ್ತದೆ. ಅದು ಯಾವುದೇ ರೂಪದಲ್ಲಿರಲಿ. ಭಾಷೆಯೇ ಸಾಹಿತ್ಯದ ಜೀವಾಳ. ಸಾಹಿತ್ಯದ ಪಠ್ಯದ ಭಾಷೆಯನ್ನು ಅರ್ಥಮಾಡಿಕೊಳ್ಳುವುದು ಎಂದರೆ, ಅದರ ಪದಗಳನ್ನು, ಪದಗುಚ್ಛಗಳನ್ನು ಅರ್ಥಮಾಡಿಕೊಳ್ಳುವುದು ಎಂದೇ ಅರ್ಥ. ಸಾಹಿತ್ಯ ಪಠ್ಯದ ಭಾಷೆಯು ದೈನಂದಿನ ಬಲಕೆಯ ಭಾಷೆಗಿಂತ ಭಿನ್ನವಾಗಿರುತ್ತದೆ. ಹೀಗೆ ಭಿನ್ನವಾಗುವ ಮೂಲಕವೇ ಅದೊಂದು ಸಾಹಿತ್ಯವಾಗಿ, ಸಾಹಿತ್ಯ ಪಠ್ಯವಾಗಿ ರೂಪುಗೊಳ್ಳುತ್ತದೆ. ಹೀಗೆ ವಿಶಿಷ್ಟವಾಗಿ ರೂಪುಗೊಳ್ಳುವ ಭಾಷೆಯನ್ನು ಅರ್ಥಮಾಡಿಕೊಳ್ಳಬೇಕು ಎಂಬುದು ಎಲ್ಲಾ ಓದುಗಳ ಸಾಮಾನ್ಯ ಅಪೇಕ್ಷೆ ಮತ್ತು ಉದ್ದೇಶ. ಆದರೆ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವುದು ಎಂದರೆ ಏನು ಎಂಬುದನ್ನು ಖಚಿತವಾಗಿ ವಿವರಿಸಲು ಆಗುವುದಿಲ್ಲ.

ಸಾಹಿತ್ಯ ಪಠ್ಯದಲ್ಲಿರುವ ಪದಗಳಿಗೆ ಇಲ್ಲವೆ ‘ಕಠಿಣ ಪದಗಳಿಗೆ’ ಅರ್ಥ ಗೊತ್ತಾದರೆ, ಆ ಸಾಹಿತ್ಯ ಅರ್ಥವಾಗುತ್ತದೆ ಎಂಬುದು ಒಂದು ನಂಬಿಕೆ. ಭಾಷೆ ಸಾಹಿತ್ಯ ಪಠ್ಯದಲ್ಲಿ ಮಾತ್ರವಲ್ಲದೆ ಬೇರೆಬೇರೆ ವಲಯಗಳಲ್ಲಿ ಕೂಡ ಬಳಕೆಯಾಗುತ್ತದೆ. ಒಂದೊಂದು ಭಾಷಿಕ ವಲಯಗಳೂ ತಮ್ಮದೇ ಆದ ನಿರ್ದಿಷ್ಟ ಉದ್ದೇಶಗಳಿಗೆ ಮತ್ತು ಗುರಿಗಳಿಗೆ ಭಾಷೆಯನ್ನು ಬಳಸುತ್ತವೆ. ಅದೇ ರೀತಿ ಸಾಹಿತ್ಯ ಪಠ್ಯವೂ ಕೂಡ ಭಾಷೆಯನ್ನು ಬಳಸುತ್ತದೆ. ಅಥವಾ ಭಾಷೆಯೇ ಸಾಹಿತ್ಯ ಪಠ್ಯವಾಗಿ ರೂಪಾಂತರ ಹೊಂದುತ್ತದೆ. ಈ ರೂಪಾಂತರದ ಪ್ರಕ್ರಿಯೆ ಮೂರ್ತವಾದುದಲ್ಲ; ಭೌತಿಕವಾದುದಲ್ಲ.

ಸಾಹಿತ್ಯ ಕೃತಿಗಳಲ್ಲಿ ಬಳಕೆಯಾಗಿರುವ ‘ಕಠಿಣ ಪದ’ಗಳ ಅರ್ಥ ಗೊತ್ತಾದರೆ ಆ ಕೃತಿ ಅರ್ಥವಾಗುತ್ತದೆ ಎಂಬ ನಂಬಿಕೆಯನ್ನು ಮರುಪರಿಶೀಲಿಸುವ ಅಗತ್ಯವಿದೆ. ಈ ಬಗೆಗೆ ಇರುವ ಕೆಲವು ಅಭಿಪ್ರಾಯಗಳನ್ನು ಗಮನಿಸೋಣ. ‘ಹಳಗನ್ನಡ ಕಾವ್ಯಗಳು ಹಳಗನ್ನಡದಲ್ಲಿ ಇರುವುದರಿಂದ ಅವು ಅರ್ಥವಾಗುವುದಿಲ್ಲ. ನಿಸರ್ಗ, ಬೆಳ್ಯ, ಕುಸುಮ ಬಾಲೆ ಮುಂತಾದ ಕೃತಿಗಳಲ್ಲಿ ಪ್ರಾದೇಶಿಕ ಭಾಷೆಯ ಪ್ರಯೋಗ ಇರುವುದರಿಂದ ಅವು ಅರ್ಥವಾಗುವುದಿಲ್ಲ. ಹಾಗಾಗಿ ಹಳಗನ್ನಡ ಕೃತಿಗಳ ಭಾಷೆಗೆ ಮತ್ತು ಪದಗಳಿಗೆ, ಪ್ರಾದೇಶಿಕ ಭಾಷಾ ಬಳಕೆಯ ಕೃತಿಗಳ ಪದಗಳಿಗೆ ಅರ್ಥಗಳನ್ನು ಕೊಟ್ಟರೆ ಅವು ಅರ್ಥವಾಗುತ್ತವೆ’ ಎಂಬ ಅಭಿಪ್ರಾಯವಿದೆ. ‘ಗೋಪಾಲಕೃಷ್ಣ ಅಡಿಗರ ಕೆಲವು ಪದ್ಯಗಳು, ಬೇಂದ್ರೆಯವರ ಕೆಲವು ಪದ್ಯಗಳು ಅರ್ಥವಾಗುವುದಿಲ್ಲ ಅಥವಾ ಅರ್ಥಮಾಡಿಕೊಳ್ಳಲು ಕಷ್ಟ’ ಎಂಬ ಅಭಿಪ್ರಾಯಗಳಿವೆ. ಹಾಗಿದ್ದರೆ ‘ಅರ್ಥವಾಗುವುದಿಲ್ಲ, ಅರ್ಥಮಾಡಿಕೊಳ್ಳಲು ಕಷ್ಟ’ ಎಂಬ ಅಭಿಪ್ರಾಯಗಳು ಯಾಕೆ ಬರುತ್ತವೆ? ವಾಸ್ತವವಾಗಿ ಅರ್ಥವಾಗುವುದು ಎಂದರೇನು?

ಅರ್ಥ ಮಾಡಿಕೊಳ್ಳುವುದು, ಅರ್ಥ ಮಾಡಿಸುವುದು, ಅರ್ಥ ಆಗುವುದು, ಅರ್ಥ ಆಗದೆ ಇರುವುದು, ಅರ್ಥ ಮಾಡಿಕೊಳ್ಳದೆ ಇರುವುದು, ಅರ್ಥ ಮಾಡಿಸದೆ ಇರುವುದು ಇವುಗಳ ನಡುವೆ ಕೆಲವು ವ್ಯತ್ಯಾಸಗಳಿವೆ. ಈ ಹಿನ್ನೆಲೆಯಲ್ಲಿ ದೈನಂದಿನ ಜೀವನದಲ್ಲಿ ಎದುರಾಗುವ ಕೆಲವು ಅಭಿಪ್ರಾಯ/ಹೇಳಿಕೆಗಳನ್ನು ಚರ್ಚೆಯ ಅನುಕೂಲಕ್ಕಾಗಿ ಸಂಗ್ರಹಿಸಬಹುದು. ‘ನೀವು ಹೇಳಿದ್ದು ನನಗೆ ಅರ್ಥವಾಗಲಿಲ್ಲ’, ‘ನೀವು ಹೇಳುವುದನ್ನು ಸರಿಯಾಗಿ ಅರ್ಥವಾಗುವ ಹಾಗೆ ಹೇಳಿ’, ನೀವು ಹೇಳಿದ ಅರ್ಥ ಏನು ಅಂತ ನನಗೆ ಗೊತ್ತಾಯಿತು’, ‘ಅಯ್ಯೊ ನಾನು ಆ ಅರ್ಥದಲ್ಲಿ ಅದನ್ನು ಹೇಳಲಿಲ್ಲ’, ‘ನಾನು ಹೇಳಿದ ಮಾತನ್ನು ನೀವು ಆ ರೀತಿ ಅರ್ಥಮಾಡಿಕೊಂಡರೆ ನಾನು ಏನೂ ಮಾಡಲು ಸಾಧ್ಯವಿಲ್ಲ’, ‘ನಾನು ಏನೇ ಹೇಳಿದರೂ ಅದಕ್ಕೆ ನೀವು ಮತ್ತೊಂದು ಅರ್ಥವನ್ನು ಕಲ್ಪಿಸಿಕೊಳ್ಳುತ್ತೀರಿ. ಅದಕ್ಕೆ ನಾನೇನು ಮಾಡಲಿ’, ‘ನಾನು ಹೇಳಿದ್ದು ನಿನಗೆ ಅರ್ಥವಾಗಲಿಲ್ಲವಾ?’, ‘ನಾನು ಹೇಳಿದ್ದು ನಿನಗೆ ಪೂರ್ತಿ ಅರ್ಥವಾಗಲಿಲ್ಲವಾ?’ ‘ನಾನು ಹೇಳುವುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ’, ‘ನಾನು ನಿಮಗೆ ಅದನ್ನು ಅರ್ಥ ಮಾಡಿಸುತ್ತೇನೆ’, ‘ನನ್ನಿಂದ ನಿಮಗೆ ಅದನ್ನು ಅರ್ಥ ಮಾಡಿಸಲು ಸಾಧ್ಯವಿಲ್ಲವಪ್ಪ’, ‘ನಿಮಗೆ ಅದನ್ನು ಅರ್ಥ ಮಾಡಿಸಲು ಬ್ರಹ್ಮನೇ ಬಂದರೂ ಆಗುವುದಿಲ್ಲ’, ‘ನಾನು ಹೇಳಿದ್ದೊಂದು ನೀವು ಅರ್ಥಮಾಡಿಕೊಂಡಿದ್ದೊಂದು’, ‘ಓಹೊ ನೀವು ಆ ಅರ್ಥದಲ್ಲಿ ಹೇಳಿದ್ದಾ? ನಾನು ಹಾಗಂತ ಅಂದುಕೊಂಡಿರಲಿಲ್ಲ’, ‘ಓಹೊ ಅವರು ಅಂತವರಾ? ನಾನು ಅವರನ್ನು ಹಾಗಂತ ಅರ್ಥ ಮಾಡಿಕೊಂಡಿರಲಿಲ್ಲ’, – ಇವೇ ಮುಂತಾದ ಅಭಿಪ್ರಾಯ/ಹೇಳಿಕೆಗಳನ್ನು ದಿನನಿತ್ಯ ಕೇಳುತ್ತಿರುತ್ತೇನೆ. ದೈನಂದಿನ ವ್ಯವಹಾರದಲ್ಲಿ ಬಳಸುವ ಭಾಷೆಯನ್ನೆ ಕುರಿತು ಮೇಲಿನ ಹೇಳಿಕೆಗಳು ಸೃಷ್ಟಿಯಾಗಿವೆ. ಹಾಗಾದರೆ ನಿತ್ಯ ಬಳಸುವ ಭಾಷೆಯಲ್ಲಿ ಯಾವ ಕಠಿಣ ಪದಗಳಿವೆ? ಅಲ್ಲಿ ಯಾವ ನಿಘಂಟುಗಳ ನೆರವಿನಿಂದ ಅರ್ಥಮಾಡಿಕೊಳ್ಳುವುದು?

ವಾಸ್ತವವಾಗಿ ಒಂದು ಪದವನ್ನು ಅರ್ಥ ಮಾಡಿಕೊಳ್ಳುವುದು ಅಥವಾ ಒಂದು ಪದವನ್ನು ಅರ್ಥ ಮಾಡಿಸುವುದು ಎಂದರೆ ಏನು? ಉದಾಹರಣೆಗೆ ನಾವು ಕಲ್ಲು ಎಂದು ಹೇಳುತ್ತೇವೆ. ಆಗ ನಮಗೆ ಕಲ್ಲಿನ ಒಂದು ಚಿತ್ರ ಮನಸ್ಸಿನಲ್ಲಿ ಮೂಡುತ್ತದೆ. ಹಾಗೆ ಮನಸ್ಸಿನಲ್ಲಿ ಮೂಡಲು ಮೂಲಕಾರಣ ಕಲ್ಲು ಎಂಬ ಪದವನ್ನು ಆಲಿಸಿಕೊಳ್ಳುವ ಹಾಗೆ ಮೊದಲು ನಾವು ಕಲ್ಲು ಎಂಬ ವಸ್ತುವನ್ನು ನೊಡಿರಬೇಕು. ಆ ಚಿತ್ರ ನಮ್ಮ ಮನಸ್ಸಿನಲ್ಲಿ ದಾಖಲಾಗಿರಬೇಕು. ಹಾಗೆ ದಾಖಲಾಗಿರುವ ಚಿತ್ರಕ್ಕೆ ಈ ಪದ ಒಂದು ಸಣ್ಣ ಸೂಚನೆಯನ್ನು ಕೊಡುತ್ತದೆ. ಆಗ ಈಗಾಗಲೆ ನೋಡಿರುವ ಕಲ್ಲಿನ ಚಿತ್ರ ಮನಸ್ಸಿನಲ್ಲಿ ಮೂಡುತ್ತದೆ. ಸಾಮಾನ್ಯವಾಗಿ ಇದರ ಒಟ್ಟು ಪ್ರಕ್ರಿಯೆಯನ್ನೆ ಅರ್ಥ ಆಗುವುದು, ಅರ್ಥ ಮಾಡಿಸುವುದು ಎಂದು ವಿವರಿಸಲಾಗಿದೆ. ಆದರೆ ಒಟ್ಟು ಪ್ರಕ್ರಿಯೆಸರಳವಾಗಿ, ನೇರವಾಗಿ, ಒಮ್ಮುಖವಾಗಿ ನಡೆಯುತ್ತದೆ ಎಂದು ತಿಳಿಯಬೇಕಿಲ್ಲ. ಯಾಕೆಂದರೆ ಕಲ್ಲು ಎಂದು ಹೇಳಿದಾಗ, ಅದನ್ನು ಕೆಳಿಸಿಕೊಂಡ ಎಲ್ಲರ ಮನಸ್ಸಿನಲ್ಲೂ ಒಂದೇ ಬಗೆಯ ಕಲ್ಲು ಮೂಡುತ್ತದೆಯೆ ಎಂಬುದು ಮುಖ್ಯ ಪ್ರಶ್ನೆ. ಹಾಗಾಗಿ ಕೆಲವರಿಗೆ ಸಣ್ಣ ಕಲ್ಲು, ಕೆಲವರಿಗೆ ದೊಡ್ಡ ಕಲ್ಲು, ಕೆಲವರಿಗೆ ಜಲ್ಲಿ ಕಲ್ಲು, ಕೆಲವರಿಗೆ ಸೈಜುಗಲ್ಲು, ಕೆಲವರಿಗೆ ಬಂಡೆಕಲ್ಲು, ಕೆಲವರಿಗೆ ಉಜ್ಜಿಗಲ್ಲು, ಕೆಲವರಿಗೆ ಬಟ್ಟೆ ತೊಳೆವ ಕಲ್ಲು, ಕೆಲವರಿಗೆ ಮನೆ ಉಜ್ಜುವ ಕಲ್ಲು, ಕೆಲವರಿಗೆ ಕಪ್ಪು ಕಲ್ಲು, ಕೆಲವರಿಗೆ ಕೆಂಪು ಕಲ್ಲು, ಕೆಲವರಿಗೆ ಬಂಗಾರಕ್ಕೆ ಹಾಕುವ ಕಲ್ಲು, ಕೆಲವರಿಗೆ ಕ್ವಾರೆ ಕಲ್ಲು ಹೀಗೆ ಮೂಡಬಹುದು.

ಇದು ಏನೆ ಇರಲಿ. ಅರ್ಥ ಮಾಡಿಸುವುದು, ಅರ್ಥ ಆಗುವುದು ಎನ್ನುವುದರ ಸಾಮಾನ್ಯ ಸ್ವರೂಪ ಅದು ಇಬ್ಬರ ನಡುವೆ, ಎರಡು ಗುಂಪುಗಳ ನಡುವೆ, ಒಬ್ಬರಿಂದ ಅನೇಕರಿಗೆ, ಅನೇಕರಿಂದ ಒಬ್ಬರಿಗೆ ಭಾಷಿಕವಾಗಿ ತಲುಪುವ ಒಂದು ಸಾಮಾನ್ಯ ಸಂದೇಶ. ಅದನ್ನು ತಲುಪಿಸುವವರ ಖಚಿತ ಚಿತ್ರಣ ಏನಿರುತ್ತದೊ ಅದುವೇ ಮಗದೊಬ್ಬರಿಗೆ ತಲುಪಬೇಕು ಎಂಬುದು ಇಲ್ಲಿಯ ಸಾಮಾನ್ಯ ಷರತ್ತು. ಇದು ಇಬ್ಬರ ನಡುವೆ ಅಥವಾ ಎರಡು ಗುಂಪುಗಳ ನಡುವೆ ನಡೆಯುವ ಒಂದು ಬಗೆಯ ಸಾಮಾನ್ಯ ಒಪ್ಪಂದ. ಇದು ಒಂದು ಬಗೆಯ ನಂಬಿಕೆ. ಈ ಮೂಲ ಒಪ್ಪಂದ ಹಾಗೂ ಪೂರ್ವ ನಂಬಿಕೆ ಇಲ್ಲದೆ ಹೋದರೆ ಒಬ್ಬರ ಮಾತು ಮತ್ತೊಬ್ಬರಿಗೆ ಅರ್ಥವಾಗಲು ಸಾಧ್ಯವೇ ಇಲ್ಲ. ಈ ಬಗೆಯ ಸಾಮಾನ್ಯ ಒಪ್ಪಂದ ಹಾಗೂ ಸಾಮಾನ್ಯ ನಂಬಿಕೆಯಿಂದಾಗಿ ಒಬ್ಬರ ಮಾತು ಮತ್ತೊಬ್ಬರಿಗೆ ತಲುಪುತ್ತದೆ; ಉದ್ದೇಶಿತ ಕೆಲಸ ನಡೆಯು‌ತ್ತದೆ. ಮನೆಯ ಒಳಗಡೆ ಕೂತವರು ‘ಸ್ವಲ್ಪ ನೀರು ಕೊಡಿ’ ಎಂದು ಕೇಳಿದರೆ ಅಲ್ಲಿ ಕೆಲವು ಪೂರ್ವ ಒಪ್ಪಂದಗಳು, ಪೂರ್ವ ನಂಬಿಕೆಗಳಿರುತ್ತವೆ. ಇದನ್ನು ಈ ರೀತಿಯಲ್ಲಿ ಗುರುತಿಸಬಹುದು. ಒಂದು: ಕುಡಿಯಲು ನೀರು ಕೇಳಿದ್ದಾರೆ ಎಂದು ತಿಳಿಯುವುದು. ಎರಡು: ಲೋಟದಲ್ಲಿ ನೀರು ಕೊಡುವುದು. ಮೂರು : ಬೇರೆ ಬಳಕೆಗೆ ನೀರು ಕೇಳಿಲ್ಲ ಎಂದು ತಿಳಿಯುವುದು. ನಾಲ್ಕು: ಹಾಗಾಗಿ ಬಕೆಟ್‌ನಲ್ಲೊ ಇನ್ಯಾವುದರಲ್ಲೊ ನೀರು ಕೊಡದೆ ಇರುವುದು. ಅಂದರೆ ಭಾಷಿಕವಾಗಿ ಒಬ್ಬರ ಪದಗಳು ಮತ್ತೊಬ್ಬರಿಗೆ ಅರ್ಥ ಆಗುವುದು ಎಂದರೆ ಇಬ್ಬರ ನಡುವೆ ನಡೆಯುವ ಒಂದು ಸಾಮಾನ್ಯ ಭಾಷಿಕ ಒಪ್ಪಂದ ಜಾರಿಗೆ ಬರುವುದು ಎಂದು ಅರ್ಥ

ಸಾಹಿತ್ಯವನ್ನು ಅರ್ಥಮಾಡುವ ಮತ್ತು ಅರ್ಥಮಾಡಿಸುವ ವಿಧಾನವು ‘ಕಠಿಣ ಪದ’ಗಳ ಅರ್ಥ ತಿಳಿಯುವ ಹಾಗೂ ಭಾಷಿಕ ಒಪ್ಪಂದದ ಮೂಲಕ ನಡೆಯುತ್ತದೆ ಎಂದು ಸರಳೀಕರಿಸಲು ಆಗುವುದಿಲ್ಲ. ಸಾಹಿತ್ಯ ಪಠ್ಯದಲ್ಲಿ ಪದ, ಪದಗುಚ್ಛ ಇವೆಲ್ಲ ತಮ್ಮ ‘ಸ್ವತಂತ್ರ’ ಉದ್ದೇಶದ ವ್ಯಾಪ್ತಿಯಲ್ಲಿ ಪ್ರಯೋಗವಾಗುವುದಿಲ್ಲ. ಹಾಗಾಗಿ ಸಾಹಿತ್ಯ ಪಠ್ಯದಲ್ಲಿ ಪ್ರಯೋಗವಾಗಿರುವ ಪದವೊಂದನ್ನು ಆ ರಚನೆಯಿಂದ ಬಿಡಿಯಾಗಿ ಪ್ರತ್ಯೇಕ ಮಾಡಿ ಅದಕ್ಕೆ ನಿಘಂಟಿನಲ್ಲಿರುವ ‘ಅರ್ಥ’ ಹೇಳುವ ಮೂಲಕ ಸಾಹಿತ್ಯವನ್ನು ಗ್ರಹಿಸಲು ಆಗುವುದಿಲ್ಲ. ಪಠ್ಯದ ಪ್ರತಿಯೊಂದು ಪದ ಹಾಗೂ ಪದಗುಚ್ಛಗಳು ಇಡಿಯಾಗಿ ಸಾಹಿತ್ಯ ಕೃತಿಯ ರಚನೆಯೊಳಗೆ ತಮ್ಮ ಅರ್ಥಸಾಧ್ಯತೆಗಳನ್ನು ಸ್ಪುರಿಸುತ್ತವೆ. ಪದಗಳಿಗೆ ಹಾಗೂ ಪದಗುಚ್ಛಗಳಿಗೆ ನಿಘಂಟಿನ ಅರ್ಥಗಳು ಮಾತ್ರ ನೆರವಿಗೆ ಬರಲಾರವು. ಅವು ಪಠ್ಯ ರಚನೆಯ ವಿನ್ಯಾಸಕ್ಕೆ ಅನುಗುಣವಾಗಿ ತಮ್ಮನ್ನು ತಾವು ಬಿಚ್ಚಿಕೊಳ್ಳುತ್ತವೆ  ಮತ್ತು ವಿಸ್ತರಿಸಿಕೊಳ್ಳುತ್ತವೆ. ಹಾಗಾಗಿ ಪಠ್ಯ ರಚನೆಯ ಸ್ವರೂಪವನ್ನು ಗ್ರಹಿಸದಿದ್ದರೆ ಅದರ ಅರ್ಥದ ಸ್ತರಗಳು ಗ್ರಹಿಕೆಗೆ ಬರುವುದಿಲ್ಲ. ಹಾಗಾಗಿ ಪದಗಳು ನಿತ್ಯ ಬಳಕೆಯಲ್ಲಿ ಒಂದು ರೀತಿ, ನಿಘಂಟುಗಳಲ್ಲಿ ಒಂದು ರೀತಿ ಬಳಕೆಯಾಗುತ್ತವೆ. ಆದರೆ ಇದೇ ಕ್ರಮದಲ್ಲಿ ಸಾಹಿತ್ಯ ಪಠ್ಯದಲ್ಲಿ ಬಳಕೆಯಾಗುವುದಿಲ್ಲ ಎಂಬುದನ್ನು ಗಮನಿಸಬೇಕು. ನಿಘಂಟಿನಲ್ಲಿ ಸೂರ್ಯ ಎಂಬುದಕ್ಕೆ ರವಿ, ಉದಯ, ಬಾನು, ನೇಸರ, ಮೂಡು, ದಿನಕರ, ತೇಜ ಇದೇ ಮುಂತಾದ ಪದಗಳನ್ನು ಕೊಡಾಗಿದೆ. ಹಾಗಿದ್ದರೆ ಸಾಹಿತ್ಯವು ತನ್ನ ರಚನೆಗೆ ಈ ಪದಗಳಲ್ಲಿ ಯಾವುದಾದರೂ ಒಂದು ಪದವನ್ನು ಅಥವಾ ಒಂದೇ ಪದವನ್ನು ತನ್ನ ಅರ್ಥಶರೀರಕ್ಕೆ ತೆಗೆದುಕೊಳ್ಳಬಹುದಲ್ಲ?

ಸಾಹಿತ್ಯದ ಅಭಿವ್ಯಕ್ತಿಗಳಲ್ಲಿ ಇದರ ಪ್ರಯೋಗವನ್ನು ಗಮನಿಸೋಣ. ‘ಉದಯವಾಣಿ’ ನಮ್ಮ ಚೆಲುವ ಕನ್ನಡ ನಾಡು’, ‘ಮೂಡುವನು ರವಿ ಮೂಡುವನು’, ‘ತೇರನೇರಿ ಅಂಬರದಾಗೆ ನೇಸರ ನಗುತಾನೆ’ ಇನ್ನೂ ಮುಂತಾದ ಸಾಲುಗಳನ್ನು ಗಮನಿಸಬಹುದು. ಒಂದು ಪದಕ್ಕೆ ಅದೇ ಅರ್ಥ ಕೊಡುವ ಮತ್ತೊಂದು ಪದ ನಿಘಂಟಿನಲ್ಲಿರುತ್ತದೆ, ಅದರ ಸಹಾಯದಿಂದ ಅರ್ಥಮಾಡಿಕೊಳ್ಳಬಹುದು ಎಂಬುದನ್ನು ಪರಿಶೀಲಿಸೋಣ. ಮೇಲಿನ ಕೆಲವು ಸಾಲುಗಳಲ್ಲಿ ಸೂರ್ಯ ಎಂಬ ಪದಕ್ಕೆ ನಿಘಂಟಿನಲ್ಲಿ ಕೊಡಲಾಗಿರುವ ಕೆಲವು ಬೇರೆ ಪದಗಳಿವೆ. ಹಾಗಿದ್ದರೆ ಆ ಪದಗಳ ನೆರವಿನಿಂದ ಆ ಸಾಲುಗಳನ್ನು ಮುಂದಿನಂತೆ ಬದಲಾಯಿಸಿ ನೋಡೋಣ. ‘ಸೂರ್ಯನಾಗಲಿ ನಮ್ಮ ಚೆಲುವ ಕನ್ನಡ ನಾಡು’, ‘ಮೂಡುವನು ಸೂರ್ಯ ಮೂಡುವು’, ‘ತೇರನೇರಿ ಅಂಬರದಾಗೆ ಸೂರ್ಯ ನಗುತಾನೆ’. ಈ ಸಾಲುಗಳು ಈಗ ನಗೆಪಾಟಲಾಗುತ್ತವೆ. ಯಾಕೆ ಬೇರೆ ಬೇರೆ ಸಾಲುಗಳು ಭಿನ್ನ ಪದಗಳನ್ನು ಆಯ್ಕೆಮಾಡಿಕೊಂಡಿವೆ? ಪ್ರತಿಯೊಂದು ಸಾಲೂ ವಿಶಿಷ್ಟ ಸಾಹಿತ್ಯ ಪ್ರಕಾರದ ಅಭಿವ್ಯಕ್ತಿಗಳು. ಆ ಅಭಿವ್ಯಕ್ತಿಗಳಿಗೆ ಆ ಪದಗಳೇ ಸೂಕ್ತವಾದವು. ಹಾಗೆ ಸೂಕ್ತ ಪದವನ್ನು ಆಯ್ಕೆಮಾಡಿಕೊಂಡು; ಸೂಕ್ತವಲ್ಲದ ಪದಗಳನ್ನು ಹೊರಗಿಟ್ಟು, ಜೋಡಿಸುವ ಮೂಲಕ ಸಾಹಿತ್ಯವನ್ನು ರಚಿಸಲಾಗಿದೆ. ಇಲ್ಲಿ ಕೆಲವು ಪದಗಳ ನಿರಾಕರಣೆ, ಕೆಲವು ಪದಗಳ ಆಯ್ಕೆ, ಅವುಗಳ ಭಾವತರ್ಕ ಹಾಗೂ ವಿಚಾರ ತರ್ಕದ ಜೋಡಣೆ ಮತ್ತು ರಚನೆ ಇವು ಮುಖ್ಯ. ರಚನೆಯು ಪದಗಳ ಜೋಡಣೆಯನ್ನೂ, ಜೋಡಣೆಯು ಪದಗಳ ಆಯ್ಕೆಯನ್ನೂ ನಿರ್ಧರಿಸುತ್ತದೆ. ಬಿಡಿಪದಗಳ ಅರ್ಥದ ಕಡೆಯಿಂದ ಹೊರಟು ಇಡಿ ರಚನೆಯನ್ನು ಅರ್ಥಮಾಡಿಕೊಳ್ಳುವುದು ಒಂದು ಸಾಧ್ಯತೆ. ಇಡಿ ರಚನೆಯ ಕಡೆಯಿಂದ ಹೊರಟು ಬಿಡಿಪದಗಳನ್ನು ಅರ್ಥಮಾಡಿಕೊಳ್ಳುವುದು ಮತ್ತೊಂದು ಸಾಧ್ಯತೆ. ಸಾಹಿತ್ಯವನ್ನು ಅರ್ಥೈಸುವಾಗ ಎರಡನೇ ಸಾಧ್ಯತೆಯೇ ಕೆಲಸ ಮಾಡುವುದು. ಇರುವ ಪದಗಳನ್ನು ಆಯ್ಕೆಮಾಡಿಕೊಳ್ಳುವುದು ಮಾತ್ರವಲ್ಲ; ಅವುಗಳ ಅರ್ಥವಿಸ್ತಾರವೂ ನಡೆಯುತ್ತದೆ. ‘ದಿಗುತಟದಲಿ ತೆರೆಯುತ್ತಿತ್ತು ಹಗಲಿನಕ್ಷಿ’. ಇಲ್ಲಿ ಸೂರ್ಯ ಎಂಬುದನ್ನು ಹಗಲಿನ ಅಕ್ಷಿ ಎಂಬುದಾಗಿ ವಿಸ್ತರಿಸಲಾಗಿದೆ. ಯಾಕೆಂದರೆ ಆಯಾ ಸಾಹಿತ್ಯಕ ಅಭಿವ್ಯಕ್ತಿಗಳು ಪದಗಳ ಆಯ್ಕೆ ಮತ್ತು ನಿರಾಕರಣೆಯನ್ನು ನಿರ್ಧರಿಸುತ್ತವೆ. ಕಾವ್ಯ ತನ್ನ ಅಭಿವ್ಯಕ್ತಿಗೆ ಪದಗಳನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಜೊತೆಗೆ ಅವುಗಳ ಅರ್ಥಸಾಧ್ಯತೆಗಳನ್ನು ವಿಭಿನ್ನ ಆಯಾಮಗಳಿಗೆ ವಿಸ್ತರಿಸುತ್ತದೆ. ಈ ಸ್ವರೂಪದ ಕೆಲಸವನ್ನು ಗದ್ಯ ಮಾಡುವುದಿಲ್ಲ. ಅದು ತನ್ನ ಅಭಿವ್ಯಕ್ತಿಗೆ ಬೇರೆ ಪದಗಳನ್ನು ಆಯ್ಕೆಮಾಡಿಕೊಳ್ಳುತ್ತದೆ. ಹಾಗಾಗಿ ವಿಚಾರ, ವಿಮರ್ಶೆ, ಸಂಶೋಧನೆ ಮುಂತಾದ ಬರವಣಿಗೆಗಳಲ್ಲಿ ರವಿ, ನೇಸರ, ಉದಯ ಮುಂತಾದ ಹಲವು ಪದಗಳು ಪ್ರಯೋಗ ಆಗುವುದಿಲ್ಲ. ಅಲ್ಲಿ ಸೂರ್ಯ ಎಂಬ ಪದವೇ ಪ್ರಯೋಗವಾಗುವುದು. ಯಾಕೆಂದರೆ ಅದು ಆ ಅಭಿವ್ಯಕ್ತಿ ಕ್ರಮದ ಆಯ್ಕೆ.

ಮೇಲಿನ ಚರ್ಚೆಯನ್ನು ಇನ್ನೊಂದು ಆಯಾಮಕ್ಕೆ ತಿರುಗಿಸಬಹುದು. ಅದಕ್ಕೆ ಮುಂದಿನ ಸಾಲುಗಳನ್ನು ಗಮನಿಸಬೇಕು.

ಕೊಲೆಯ ಹಿಂದಿನ ರಾತ್ರಿ ಸೂರ್ಯ ಚಂದ್ರರ ಹಿಡಿದು
ಹಣದ ಪೆಟ್ಟಿಗೆಯಲ್ಲಿ ಕೂಡಿಟ್ಟರೊ
ಭಾರತದ ಬಾವುಟವ ಸುತ್ತಿ ಬಾಯಿಗೆ ತುರುಕಿ
ಕಿತ್ತುಕೊಂಡರು ಅವಳ ಮಾತುಗಳನ್ನು |

ಮೇಲಿನ ಪದ್ಯ ಭಾಗದಲ್ಲಿ ಸೂರ್ಯ ಚಂದ್ರ ಎಂಬ ಪದಗಳು ಪ್ರಯೋಗ ಆಗಿವೆ. ಅವುಗಳ ಅರ್ಥ ತಿಳಿಯಲು ಮತ್ತೆ ನಿಘಂಟಿಗೆ ಹೋಗಬೇಕಿಲ್ಲ. ಜೊತೆಗೆ ಮೇಲಿನ ಪದ್ಯಭಾಗದಲ್ಲಿ ‘ಅರ್ಥವಾಗದ ಕಠಿಣ ಪದ’ಗಳೂ ಇಲ್ಲ. ಹಾಗಾದರೆ ಆ ಪದ್ಯ ಅರ್ಥವಾಯಿತು ಎಂದು ತಿಳಿಯಬಹುದೆ? ಇಲ್ಲ, ಹಾಗೆ ಸರಳೀಕರಿಸಲು ಬರುವುದಿಲ್ಲ. ಯಾಕೆಂದರೆ ಅದನ್ನು ಪದ್ಯ ಭಾಗದ ಧೋರಣೆಯ ನೆಲೆಯನ್ನು ಅರ್ಥೈಸುವ ಮೂಲಕ ಅರಿಯಬೇಕಾಗಿದೆ. ಇದನ್ನು ಮುಂದಿನ ಚರ್ಚೆಯಲ್ಲಿ ಮುಂದುವರಿಸಬಹುದು.