ತಾತ್ವಿಕತೆಯ ಪರಿಣಾಮ ಅಥವಾ ಪರಿಣಾಮಗಳು ಯಾವುವು? ಅವುಗಳ ಸ್ವರೂಪ ಯಾವುದು? ಎಂಬುದನ್ನು ಚರ್ಚೆ ಮಾಡಬಹುದು. ತಾತ್ವಿಕತೆ ಎಂಬುದು ತನ್ನಷ್ಟಕ್ಕೆ ತಾನೆ ನಿರ್ವಾತದಲ್ಲಿ ಹುಟ್ಟುವ ಅಥವಾ ಇರುವ ಒಂದು ಅಮೂರ್ತ ವಿಷಯವಲ್ಲ. ಸಮಾಜದ ಬೇರೆಬೇರೆ ವರ್ಗಹಿತಾಸಕ್ತಿಗಳು ತಮ್ಮ ತಮ್ಮ ತಾತ್ವಿಕತೆಗಳನ್ನು ಸೃಷ್ಟಿ ಮಾಡುತ್ತವೆ. ಜೊತೆಗೆ ಅವನ್ನು ಕಾಯುತ್ತವೆ. ತಾತ್ವಿಕತೆಗಳು ತಮ್ಮಷ್ಟಕ್ಕೆ ತಾವೆ ಸಮಾಜದಲ್ಲಿ ಪರಿಣಾಮಗಳನ್ನು ಉಂಟುಮಾಡುವುದಿಲ್ಲ. ತಾತ್ವಿಕತೆಗಳನ್ನು ಬೇರೆಬೇರೆ ವರ್ಗದವರು ತಮ್ಮ ಹಿತಾಸಕ್ತಿಗೆ ಬಳಸುತ್ತಾರೆ. ಆಗ ಅವು ಭೌತಿಕವೂ, ಅಭೌತಿಕವೂ ಆದ ಪರಿಣಾಮಗಳನ್ನು ಉಂಟುಮಾಡುತ್ತವೆ. ಈ ಹಿನ್ನೆಲೆಯಲ್ಲಿ ತಾತ್ವಿಕತೆಗಳು ಉಂಟುಮಾಡುವ ಪರಿಣಾಮಗಳ ಸ್ವರೂಪ ಕೆಲವು ಕಡೆ ಸರಳವೂ, ನೇರವೂ, ಮೂರ್ತವೂ ಆಗಿರುತ್ತದೆ. ಮತ್ತೆ ಕೆಲವು ಕಡೆ ಸೂಕ್ಷ್ಮವೂ, ಅಮೂರ್ತವೂ, ಪರೋಕ್ಷವೂ, ಸುತ್ತುಬಳಸು ವಿಧಾನದ್ದೂ ಆಗಿರುತ್ತದೆ.  ತಾತ್ವಿಕತೆಗಳು ಬೇರೆಬೇರೆ ವಲಯಗಳಲ್ಲಿ, ಬೇರೆಬೇರೆ ವರ್ಗಗಳಲ್ಲಿ ಬೇರೆ ಬೇರೆ ಪರಿಣಾಮಗಳನ್ನು ಉಂಟುಮಾಡುತ್ತಿವೆ.

ಒಂದು ಸಮೂಹದ, ಒಂದು ಸಮುದಾಯದ, ಒಂದು ಜಾತಿಯ, ಒಂದು ಪ್ರದೇಶದ, ಒಂದು ಧರ್ಮದ, ಒಂದು ಭಾಷೆಯ, ಒಂದು ಕೋಮಿನ, ಒಂದು ಚಳುವಳಿಯ ಭಾವನೆಗಳು, ಅವರವರ ಅಗತ್ಯಗಳಿಗೆ ಅನುಗುಣವಾಗಿ ಸಂಘಟಿತಗೊಂಡು, ಅವು ವೈಚಾರಿಕ ಆಕೃತಿ ಪಡೆಯುತ್ತವೆ. ಈ ವೈಚಾರಿಕ ಆಕೃತಿ ಗಟ್ಟಿಗೊಂಡು ಮುಂದೆ ಅದು ಒಂದು ರಾಜಕೀಯ ದೃಷ್ಟಿಕೋನದ ರೂಪ ಪಡೆಯುತ್ತದೆ. ಈ ದೃಷ್ಟಿಕೋನ ಗಟ್ಟಿಗೊಂಡು ಅದು ತಾತ್ವಿಕತೆಯಾಗಿ ರೂಪ ಪಡೆಯುತ್ತದೆ. ಬೇರೆ ಮಾತುಗಳಲ್ಲಿ ವಿವರಿಸುವುದಾದರೆ, ವಿದ್ಯಾರ್ಥಿ ಸಮೂಹದ, ಒಂದು ಆದಿವಾಸಿ ಬುಡಕಟ್ಟು ಸಮುದಾಯದ, ಹೊಲೆಯ ಅಥವಾ ಮಾದಿಗ ಜಾತಿಯ, ಹೈದ್ರಾಬಾದ್ ಕರ್ನಾಟಕ ಪ್ರದೇಶದ, ಯಾವುದಾದರೂ ಒಂದು ಧರ್ಮದ, ಯಾವುದಾದರೂ ಒಂದು ಭಾಷೆಯ ಜನರು ತಮಗೆ ಅನ್ಯಾಯ ಮಾಡಿರುವುದನ್ನು ಗುರುತಿಸಿಕೊಳ್ಳಲು ಮತ್ತು ಪರ್ಯಾಯ ಹಕ್ಕೊತ್ತಾಯವನ್ನು ಮುಂದಿಡಲು ಒಂದು ಧೋರಣೆಯನ್ನು, ತಾತ್ವಿಕತೆಯನ್ನು ರೂಪಿಸಿಕೊಳ್ಳುತ್ತವೆ. ಅಂತಹ ತಾತ್ವಿಕತೆಯ ಮೂಲಕ ಸಂಬಂಧಿಸಿದ್ದನ್ನು ಪಡೆಯಲು ಮುಂದಾಗುತ್ತವೆ. ಇದೂ ಒಂದು ಬಗೆಯಲ್ಲಿ ತಾತ್ವಿಕತೆಯ ಪರಿಣಾಮವೇ. ಈ ಮೂಲಕ ಭಾವನೆಗಳು ಭೌತಿಕ ಶಕ್ತಿಯಾಗಿ ರೂಪಾಂತರ ಪಡೆಯುತ್ತವೆ.

E = MC2 ಇದು ಭೌತಿಕ ವಿಜ್ಞಾನದ ತತ್ವ. ೨ನೇ ಸಾಮ್ರಾಜ್ಯಶಾಹಿ ಯುದ್ಧದಲ್ಲಿ ಅಮೆರಿಕಾವು ಜಪಾನ್ ಮೇಲೆ ಈ ಸೂತ್ರವನ್ನು ಪರಯೋಗ ಮಾಡಿತು. ನಂತರ ಜಪಾನ್ ದೇಶಕ್ಕಾದ ನಷ್ಟ ಮತ್ತು ಹಿನ್ನಡೆಯನ್ನು ಇಲ್ಲಿ ವಿವರಿಸುವ ಅಗತ್ಯವಿಲ್ಲ. ೧೯೯೨ರ ಡಿಸೆಂಬರ್ ೬ ರಂದು ಬಾಬರಿ ಮಸೀದಿಯನ್ನು ಧ್ವಂಸ ಮಾಡಲಾಯಿತು. ಆ ವಿಧ್ವಂಸಕ ಕೃತ್ಯದ ಹಿಂದೆ ಹಿಂದೂ ಫ್ಯಾಸಿಸ್ಟ್ ತಾತ್ವಿಕತೆ ಇತ್ತು.

ಕೆಲವು ಸಂಶೋಧಕರು, ತಮ್ಮ ಸಂಶೋಧನೆಯೂ ಸೇರಿದಂತೆ, ‘ಸಂಶೋಧನೆಯಿಂದ ಸಮಾಜಕ್ಕೆ ಏನನ್ನಾದರೂ ಕೊಡಬೇಕು. ಸಮಾಜಕ್ಕೆ ಉಪಯೋಗ ಆಗುವಂತಹದ್ದನ್ನು ಕೊಡಬೇಕು. ಇಲ್ಲವಾದರೆ ಸಂಶೋಧನೆಯ ಪ್ರಯೋಜನವಾದರೂ ಏನು?’ ಎಂಬ ಪ್ರಶ್ನೆಯನ್ನು ಮೇಲಿಂದ ಮೇಲೆ ಕೇಳುತ್ತಿರುತ್ತಾರೆ. ಹೀಗೆ ಕೇಳುವುದು ತಪ್ಪೇನೂ ಅಲ್ಲ. ಅಂತವರ ಆಸಕ್ತಿಯನ್ನು ಪರಿಗಣಿಸಲೇಬೇಕು. ಆದರೆ ಅಂತವರ ಅಪೇಕ್ಷೆಯ ಸ್ವರೂಪ ಯಾವುದಾಗಿರುತ್ತದೆ ಎಂಬುದನ್ನು ವಿವರಿಸಿಕೊಳ್ಳಬೇಕು. ಸಂಶೋಧನೆಗೆ ಸಂಬಂಧಿಸಿದಂತೆ ಕೆಲವರು, ‘ಈ ವಿಷಯ ಅಥವಾ ಈ ಜನಸಮುದಾಯದ ಬಗ್ಗೆ ಯಾರಿಗೂ ಗೊತ್ತಿಲ್ಲ. ಇದನ್ನು ಸಮಾಜಕ್ಕೆ ಪರಿಚಯಿಸಬೇಕು. ಇದು ಸಂಶೋಧನೆಯ ಪರಮ ಗುರಿ, ಉದ್ದೇಶ’ ಎಂಬಂತೆ ಹೇಳುತ್ತಾರೆ. ಇದೂ ಇರಬಹುದು. ಆದರೆ ಒಂದು ಜನ ವಸತಿಯ ಬಗ್ಗೆಯೂ, ವಿಶಿಷ್ಟವಾದ ಆಚರಣೆಯೊ, ಜಾತ್ರೆಯೊ ಇನ್ಯಾವುದೊ ಒಂದರ ಮಾಹಿತಿಗಳನ್ನು ಪ್ರಕಟಿಸಿ, ಪರಿಚಯಿಸಿ, ಅದನ್ನೆ ಸಂಶೋಧನೆ ಎಂದು ಕರೆದರೆ ನಿಜವಾಗಿಯೂ ಅದು ಸಂಶೋಧನೆ ಆಗುವುದಿಲ್ಲ. ಹಾಗೆ ಅದನ್ನು ಪ್ರಕಟಿಸಿ, ಪರಿಚಯಿಸಲು ಪತ್ರಿಕಾ ಮಾಧ್ಯಮ ಇಲ್ಲವೆ ಟಿ.ವಿ. ಮಾಧ್ಯಮಗಳು ಸಾಕು. ಆದರೆ ಇಂತಹದ್ದನ್ನೂ ‘ಸಂಶೋಧನೆ’ ಎಂದು ಕರೆಯುವ ರೂಢಿ ಇದೆ.

ಸಾಹಿತ್ಯ ಸಂಶೋಧನ ವಲಯದಲ್ಲಿ ತಾತ್ವಿಕತೆಯಿಂದ ಕೆಲವು ಪರಿಣಾಮಗಳು ಉಂಟಾಗುತ್ತವೆ. ಅಥವಾ ಉಂಟಾಗುವಂತೆಮಾಡಲಾಗುತ್ತದೆ. ಅದರ ಸ್ವರೂಪ ಭೌತಿಕ ರೂಪದಲ್ಲಿ, ಮೂರ್ತರೂಪದಲ್ಲಿ ನಡೆಯುವುದಿಲ್ಲ. ಅದು ಆಲೋಚನೆ, ಚಿಂತನೆ ದೃಷ್ಟಿಕೋನಕ್ಕೆ ಸಂಬಂಧಿಸಿದುದು. ಸಮಾಜ, ಸಂಸ್ಕೃತಿ, ಸಾಹಿತ್ಯ ಇವನ್ನು ಗ್ರಹಿಸುವ ಮತ್ತು ವಿವರಿಸುವ ಸ್ಥಾಪಿತ ಹಾಗೂ ಯಜಮಾನಿಕೆಯ ತಾತ್ವಿಕತೆಗಳನ್ನು ಬುಡಮೇಲು ಮಾಡುವ ವೈಚಾರಿಕ ಕೆಲಸ ಇಲ್ಲಿ ನಡೆಯುತ್ತದೆ. ನಿರ್ಣಾಯಕವಾಗಿ ಇದೊಂದು ವೈಚಾರಿಕ ಸಂಘರ್ಷ ಹಾಗೂ ತಾತ್ವಿಕ ಸಂಘರ್ಷ. ಕುವೆಂಪು ಅವರ ಕೃತಿಗಳನ್ನು ಒಂದೇ ಸಮನೆ ಏಕಮುಖವಾಗಿ ವೈಭವೀಕರಿಸುತ್ತಿದ್ದ ಕಾಲದಲ್ಲಿ ಕರ್ನಾಟಕದಲ್ಲಿ ದಲಿತ ಹೋರಾಟವನ್ನು ಸಂಘಟಿಸಿದ ಪ್ರೊ. ಬಿ. ಕೃಷ್ಣಪ್ಪ ಅವರು ‘ಕುವೆಂಪು ಕಾದಂಬರಿಗಳಲ್ಲಿ ದಲಿತ ಜೀವನ ಚಿತ್ರಣ’ ಎಂಬ ಲೇಖನವನ್ನು ಬರೆದರು. ಕುವೆಂಪು ಅವರು ದಲಿತ ಪಾತ್ರಗಳ ಚಿತ್ರಣಕ್ಕೆ, ಬ್ರಾಹ್ಮಣ ಮತ್ತು ಜಮೀನ್ದಾರಿ ವರ್ಗದ ಪಾತ್ರಗಳ ಚಿತ್ರಣಕ್ಕೆ ಯಾವ ಬಗೆಯ ಭಾಷೆಯನ್ನು ಪ್ರಯೋಗಿಸಿದ್ದಾರೆ, ಹಾಗೆ ಪ್ರಯೋಗಿಸುವ ಮೂಲಕವೇ ಅವರನ್ನು ಅನಾವರಣ ಮಾಡಿರುವ ದೃಷ್ಟಿಕೋನ ಯಾವುದು ಎಂಬುದನ್ನು ಚರ್ಚೆ ಮಾಡಿದರು. ಇದು ಕುವೆಂಪು ಅವರ ಕಾದಂಬರಿಗಳನ್ನು ಮಾತ್ರವಲ್ಲ; ಸಾಹಿತ್ಯವನ್ನು ಅಸ್ಪೃಶ್ಯ ನೆಲೆಯಿಂದ ಹಾಗೂ ಹೋರಾಟದ ನೆಲೆಯಿಂದ ಗ್ರಹಿಸಬಹುದಾದ ವಿಧಾನಕ್ಕೆ, ತಾತ್ವಿಕತೆಗೆ ಭದ್ರವಾದ ಬುನಾದಿಯನ್ನು ಹಾಕಿತು. ಮುಂದಿನ ಅಧ್ಯಯನಗಳಿಗೆ ಬಿ.ಕೃಷ್ಣಪ್ಪ ಅವರ ತಾತ್ವಿಕತೆ ಪ್ರೇರಣೆಯಾಯಿತು. ವಚನಗಳನ್ನು ವೀರಶೈವ ಧರ್ಮದ ಪ್ರಣಾಳಿಕೆಗಳು ಎಂದೂ, ಜೈನ ಕೃತಿಗಳನ್ನು ಜೈನ ಧರ್ಮದ ಪ್ರಣಾಳಿಕೆಗಳು ಎಂದೂ ಗ್ರಹಿಸುವ ತಾತ್ವಿಕತೆ ಕೆಲವು ಸಂಶೋಧನೆಗಳಲ್ಲಿ ಇದೆ. ಆದರೆ ಕಳೆದ ಶತಮಾನದ ೭೦ರ ದಶಕದ ನಂತರದ ಸಾಹಿತ್ಯಕ ಅಧ್ಯಯನಗಳು ಆ ಎರಡೂ ಬಗೆಯ ತಾತ್ವಿಕತೆಗಳ ಮಿತಿಗಳನ್ನು ಗುರುತಿಸಿವೆ. ಕೆಲವು ಸಾಮಾಜಿಕ, ರಾಜಕೀಯ ಪ್ರಶ್ನೆಗಳ ಮೂಲಕ ವಚನಗಳನ್ನೂ, ಜೈನ ಕೃತಿಗಳನ್ನೂ ಓದಲಾಗಿದೆ. ಆ ಮೂಲಕ ಹೊಸ ತಾತ್ವಿಕತೆಗಳನ್ನು ಆ ಅಧ್ಯಯನಗಳಿಗೆ ಸೇರ್ಪಡೆ ಮಾಡಲಾಗಿದೆ. ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ರಾಜಕೀಯ ಪ್ರಶ್ನೆಗಳ ಮೂಲಕ ಮುಖಾಮುಖಿಯಾಗುವ, ರಾಜಕೀಯವಾಗಿ ಪರಿಶೀಲಿಸಿ ಮೌಲ್ಯಮಾಪನ ಮಾಡುವ ಕ್ರಮ ಇದೆ. ಇಲ್ಲಿ ತಾತ್ವಿಕತೆಗಳದ್ದೆ ಮುಖ್ಯ ಕೆಲಸ. ತಾತ್ವಿಕ ಗ್ರಹಿಕೆ ಮತ್ತು ಅದರ ತಿಳುವಳಿಕೆ ಗಟ್ಟಿಯಾಗಿದ್ದಷ್ಟೂ ಸಾಹಿತ್ಯವನ್ನು ಪರಿಶೀಲಿಸಲು ಹಾಗೂ ಮೌಲ್ಯಮಾಪನ ಮಾಡಲು ಶಕ್ತಿಶಾಲಿಯಾದ ಅಧ್ಯಯನದ ಮಾನದಂಡಗಳು ಸೃಷ್ಟಿಯಾಗುತ್ತವೆ. ಓದುಗರ/ಸಂಶೋಧಕರ ಸಾಮಾಜಿಕ, ಆರ್ಥಿಕ ಹಿನ್ನೆಲೆಗಳು ಮತ್ತು ಅವರ ಧೋರಣೆಗಳು ಸಾಹಿತ್ಯ ಅಧ್ಯಯನಗಳಲ್ಲಿ ಹೊಸ ಬಗೆಯ ತಾತ್ವಿಕತೆಗಳನ್ನು ಹುಟ್ಟುಹಾಕಿವೆ. ಆ ಮೂಲಕ ಸಮಾಜ, ಸಂಸ್ಕೃತಿ ಮತ್ತು ಪ್ರಭುತ್ವಗಳನ್ನು ನೋಡುವ ಸ್ಥಾಪಿತ ದೃಷ್ಟಿಕೋನಗಳ ಮಿತಿ ಮತ್ತು ಅಪಾಯಗಳು ತಿಳಿಯುತ್ತಿವೆ. ಜೊತೆಗೆ ಹೊಸ ದಾರಿಗಳು ನಿರ್ಮಾಣವಾಗುತ್ತಿವೆ.

ಸಾಹಿತ್ಯವನ್ನು ಸಂತೋಷಕ್ಕಾಗಿ, ಖುಷಿ ಪಡಲು, ಮಾಹಿತಿ ಪಡೆಯಲು, ಧರ್ಮದ ವಿಚಾರ ತಿಳಿಯಲು, ಸಮಾಜ ಸಮುದಾಯ ಸಂಸ್ಕೃತಿಯ ವಿಶಿಷ್ಟತೆಗಳನ್ನು ತಿಳಿಯಲು, ಬೇರೆಬೇರೆ ಅನುಭವ ಲೋಕಗಳನ್ನು ಪರಿಚಯಿಸಿಕೊಳ್ಳಲು ಹೀಗೆ ಬೇರೆ ಬೇರೆ ಉದ್ದೇಶಗಳಿಗೆ ಓದುವ ಅಭ್ಯಾಸಗಳಿವೆ. ಇವೆಲ್ಲ ಸಾಹಿತ್ಯವನ್ನು ಕುರಿತ ಅತ್ಯಂತ ಮೇಲ್ಮಟ್ಟದ ಗ್ರಹಿಕೆಗಳು. ಆದರೆ ಕೆಲವು ಸಂಶೋಧನೆಗಳು ಇದೇ ಸ್ತರದಲ್ಲಿ ನಡೆಯುತ್ತಿವೆ. ಉನ್ನತ ಹಂತದ ಗಂಭೀರ ಸಂಶೋಧನೆಗಳು ಸಾಹಿತ್ಯವನ್ನು ಅತ್ಯಂತ ಮೇಲ್ಮಟ್ಟದ ಸರಳ ಗ್ರಹಿಕೆಯ ಮೂಲಕ ಸಂಶೋಧನೆ ಮಾಡುವುದನ್ನು ನಿರುಪಯುಕ್ತ ಎಂದು ಹೇಳುತ್ತಿವೆ. ಹಾಗಾಗಿ ಅವು ತಾತ್ವಿಕ ಸಂಶೋಧನೆಗಳನ್ನು ನಡೆಸುತ್ತಿವೆ. ಅಸ್ಪೃಶ್ಯತೆ, ಲಿಂಗ ಸಂಬಂಧ, ಪ್ರತಿರೋಧ, ಸಂಘರ್ಷ ಮುಂತಾದ ರಾಜಕೀಯ ದೃಷ್ಟಿಕೋನಗಳ ತಾತ್ವಿಕ ಸಂಶೋಧನೆಗಳು ನಡೆಯುತ್ತಿವೆ. ಸಂಶೋಧನೆಯಲ್ಲಿ ತಾತ್ವಿಕತೆಯ ಪರಿಣಾಮ ಎಂದರೆ, ಎಲ್ಲಾ ಸ್ಥಾಪಿತ, ಯಜಮಾನಿಕೆಯ, ಆಳುವ ವರ್ಗದ, ಬಂಡವಾಳಶಾಹಿಯ, ಸಾಮ್ರಾಜ್ಯಶಾಹಿಯ ಹಾಗೂ ಧಾರ್ಮಿಕ ಮೂಲಭೂತವಾದದ ತಾತ್ವಿಕತೆಗಳ ವಿರುದ್ಧ ಸಂಘರ್ಷ ಹೂಡುತ್ತಾ, ಅವುಗಳ ಟೊಳ್ಳುತನಗಳನ್ನು ಬಯಲು ಮಾಡುತ್ತಾ, ಪರ್ಯಾಯ ತಾತ್ವಿಕತೆಗಳನ್ನು ಸಾಹಿತ್ಯ ಓದಿನ ಮೂಲಕ ನಿರ್ಮಾಣ ಮಾಡುವುದೆ ಆಗಿದೆ. ಇದು ಸಾಹಿತ್ಯ ಸಂಶೋಧನೆ ಹಾಗೂ ಸಾಹಿತ್ಯ ಸಂಶೋಧಕರ ಮುಂದಿರುವ ತಾತ್ವಿಕ ಸವಾಲು ಹಾಗೂ ತಾತ್ವಿಕ ಜವಾಬ್ದಾರಿಯಾಗಿದೆ.

* * *