ವ್ಯವಸ್ಥೆಯ ಬೇರೆ ಬೇರೆ ಶಕ್ತಿಗಳು ತಮ್ಮ ತಮ್ಮ ತಾತ್ವಿಕತೆಗಳನ್ನು ಹುಟ್ಟಿಸುತ್ತವೆ, ರೂಪಿಸುತ್ತವೆ. ಇವನ್ನು ಸಮಾಜದಲ್ಲಿ ವ್ಯಾಪಕವಾಗಿ ಹರಡಲು, ಒಪ್ಪಿಸಲು ತಮ್ಮ ಶೈಕ್ಷಣಿಕ, ತಾಂತ್ರಿಕ ಹಾಗೂ ವೈಚಾರಿಕ ಯಂತ್ರಾಂಗವನ್ನು ಬಳಸುತ್ತವೆ. ಪ್ರಭುತ್ವ ಮತ್ತು ಆಳುವ ವರ್ಗದ ರಾಜಕೀಯವು ತನ್ನ ತಾತ್ವಿಕತೆಯನ್ನು ವಿವಿಧ ಮಾಧ್ಯಮಗಳ ಮೂಲಕ ಹರಡುತ್ತದೆ ಮತ್ತು ಬಲಪಡಿಸುತ್ತದೆ. ಎಲ್ಲಾ ಬಗೆಯ ಅಸಮಾನತೆ ಹಾಗೂ ಶೋಷಣೆ, ಅನ್ಯಾಯಗಳಿಗೆ ಹೊಂದಿಕೊಂಡು ಹೋಗುವ ಮೌಲ್ಯಪ್ರಜ್ಞೆಯನ್ನು ನಯವಾಗಿ ಜನರ ಮೇಲೆ ಹೇರಲಾಗುತ್ತದೆ. ತನ್ನದಲ್ಲದ ಈ ಮೌಲ್ಯಪ್ರಜ್ಞೆಯನ್ನು ಜನತೆ ತನ್ನದೆಂದೇ ಭಾವಿಸುವಂತೆ ಮಾಡಲಾಗುತ್ತದೆ. ಜನತೆ ತಮ್ಮ ನೆಲೆಯಿಂದ ಪ್ರಭುತ್ವವನ್ನೊ, ಆಳುವ ವರ್ಗವನ್ನೊ ನೋಡಬಹುದಾಗಿದ್ದುದು ಪರಿವರ್ತನೆಗೊಂಡು ಆಳುವವರ ಕಣ್ಣುಗಳ ಮೂಲಕ ತಮ್ಮನ್ನು ಮತ್ತು ಪ್ರಭುತ್ವವನ್ನು ನೋಡುವ ಸಾಧ್ಯತೆ ರೂಪುಗೊಳ್ಳುತ್ತದೆ.

ವಿವಿಧ ಶೈಕ್ಷಣಿಕ ವಲಯ, ವೈಚಾರಿಕ ರಂಗ, ಮಾರುಕಟ್ಟೆ, ಧಾರ್ಮಿಕ ಸಂಸ್ಥೆ ಹಾಗೂ ಪ್ರಭುತ್ವದ ಪಾಳಯದಲ್ಲಿ ಅವುಗಳ ವೈಚಾರಿಕತೆ ಬಹಳ ಗಟ್ಟಿಯಾಗಿ ಕೆಲಸ ಮಾಡುತ್ತಿರುತ್ತದೆ. ಈ ವೈಚಾರಿಕತೆ ಹಾಗೂ ದೃಷ್ಟಿಕೋನವನ್ನು ಸಮಾಜದಲ್ಲಿ ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ ಮಾಡಿ, ಜನತೆ ಅದನ್ನು ತನ್ನದೆಂದೇ ನಂಬಿ ನಡೆಯುವಂತಹ ವಾತಾವರಣವನ್ನು ನಿರ್ಮಾಣ ಮಾಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಿರುತ್ತದೆ.

ಒಂದು ಕಾಲದಲ್ಲಿ ತನ್ನ ತಾತ್ವಿಕತೆಯನ್ನು ಸ್ಥಿರವಾಗಿ ನೆಲೆಯೂರುವಂತೆ ಮಾಡುವುದರಲ್ಲಿ ಮಠಮಾನ್ಯಗಳು, ಸಂಘ ಸಂಸ್ಥೆಗಳು ಹಾಗೂ ಪ್ರಭುತ್ವಪರ ಶಕ್ತಿಗಳು ಮಾತ್ರ ಇದ್ದವು. ಈಗ ಇವುಗಳ ಜೊತೆಗೆ ಮಾರುಕಟ್ಟೆಯ ಶಕ್ತಿಗಳು ತಮ್ಮ ಲಾಭದ ಹಿತವನ್ನು ಕಾಯುವ ತಮ್ಮ ಲಾಭವನ್ನು ಹೆಚ್ಚಿಸುವ ತಾತ್ವಿಕತೆಯನ್ನು ಪ್ರೇಕ್ಷಕರ/ಗ್ರಾಹಕರ ಮೇಲೆ ನಿರಂತರವಾಗಿ  ಆದರೆ ಅತ್ಯಂತ ನಯವಾಗಿ ಹರಿಯಬಿಡುತ್ತಿವೆ. ಇದನ್ನು ಮಾರುಕಟ್ಟೆಯ ಶಕ್ತಿಗಳು ತಮ್ಮ ವ್ಯಾಪಕವಾದ ಮತ್ತು ಪ್ರಭಾವಶಾಲಿಯಾದ ಜಾಹೀರಾತುಗಳ ಮೂಲಕ ಪ್ರಸಾರ ಮಾಡುತ್ತಿವೆ. ಈ ತಾತ್ವಿಕತೆಯನ್ನು ಕೇವಲ ಮಾರುಕಟ್ಟೆಯ ಶಕ್ತಿಗಳು ಮಾತ್ರ ನಿಯಂತ್ರಿಸುತ್ತಿಲ್ಲ. ವ್ಯವಸ್ಥೆಯ ಅಸಮಾನತೆ ಮತ್ತು ಶೋಷಣೆಯ ಪರವಾಗಿರುವ ಎಲ್ಲಾ ಶಕ್ತಿಗಳೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಈ ತಾತ್ವಿಕತೆಗಳನ್ನು ನಿಯಂತ್ರಿಸುತ್ತಿವೆ. ಅವುಗಳನ್ನು ವತ್ಮಾನಕ್ಕೆ ಅನುಗುಣವಾಗಿ ಮಾರ್ಪಾಟು ಮಾಡುತ್ತ, ಅವು ವತ್ಮಾನದ ಎಲ್ಲರಿಗೆ ಹಾಗೂ ಎಲ್ಲಾ ವಿಷಯಗಳಿಗೂ ಅನ್ವಯವಾಗುವ ರೀತಿಯಲ್ಲಿ ಈ ತಾತ್ವಿಕತೆಗಳನ್ನು ವಿಸ್ತರಿಸುತ್ತಿವೆ; ನಿಯಂತ್ರಿಸುತ್ತಿವೆ. ಅವುಗಳನ್ನು ವರ್ತಮಾನಕ್ಕೆ ಅನುಗುಣವಾಗಿ ಮಾರ್ಪಾಟು ಮಾಡುತ್ತ, ಅವು ವರ್ತಮಾನದ ಎಲ್ಲರ ಆಯ್ಕೆ ಆಗುವಂತೆ, ಅವರ ನಂಬಿಕೆಗಳ ಮತ್ತು ಜೀವನ ಕ್ರಮಗಳ ಭಾಗವಾಗುವಂತೆ ರೂಪಿಸಲಾಗುತ್ತದೆ. ತಮ್ಮ ಹಳೆಯ ಕಾಲದ ತಾತ್ವಿಕತೆಯೊಳಗೆ ಸೂಕ್ಷ್ಮಾತಿಸೂಕ್ಷ್ಮ ಬದಲಾವಣೆಗಳನ್ನು ಮಾಡುತ್ತಿರುತ್ತವೆ. ಆ ತಾತ್ವಿಕತೆಗಳ ಆಂತರಿಕವಾದ ಸೂಕ್ಷ್ಮ ಬದಲಾವಣೆಗಳ ಸ್ವರೂಪವನ್ನು ಗುರುತಿಸದೇ ಹೋದರೆ ಅಂತಹ ತಾತ್ವಿಕತೆಗಳು ಸಮಾಜಕ್ಕೆ ಅನಿವಾರ್ಯ ಹಾಗೂ ಅಗತ್ಯ ಎನಿಸಿಬಿಡುತ್ತದೆ. ಇದನ್ನು ಸಾಮಾಜಿಕ, ರಾಜಕೀಯ ಜೀವನದಲ್ಲೂ ಮತ್ತು ಸಾಹಿತ್ಯಕ ಪಠ್ಯಗಳ ರಚನೆ ಹಾಗೂ ಅವುಗಳ ಓದಿನಲ್ಲೂ ಕಾಣಬಹುದು.

ಈ ಹಿನ್ನೆಲೆಯಲ್ಲಿ ‘ಮಂಕುತಿಮ್ಮನ ಕಗ್ಗ’ದ ಒಂದು ಪದ್ಯವನ್ನು ವಿಶ್ಲೇಷಣೆ ಮಾಡಬಹುದು.

ಬಳಲಿ ನೆಲದಲಿ ಮಲಗಿ ಮೈ ಮರೆತು ನಿದ್ರಿಪನ
ಕುಲುಕಿ ಹಾಸಿಗೆಯನು ಅರಸು ಎನುವುದು ಪಕೃತಿಯೇ
ಒಳಿತನೆಸಗುವೆನೆಂದು ನುಂಗದಿರುವ ನೆಮ್ಮದಿಯ
ಸುಲಭವಲ್ಲ ಒಳಿತೆಸೆಗೆಮಂಕುತಿಮ್ಮ

ಮೇಲಿನ ಪದ್ಯವನ್ನು ವಿವರಿಸಿ ನೋಡಬೇಕು. ಬಳಲಿದ ವ್ಯಕ್ತಿಯೊಬ್ಬ ಹಾಸಿಗೆಯಿಲ್ಲದೆ ಆಯಾಸದಿಂದ ಮಲಗಿದ್ದಾನೆ. ಆ ವ್ಯಕ್ತಿಗೆ ಹಾಸಿಗೆಯ ಮೇಲೆ ಮಲಗುವಷ್ಟು ತಾಳ್ಮೆ, ಬಿಡುವು ಇಲ್ಲವಾಗಿದೆ. ಹಾಗಾಗಿ ಬಹಳ ಆಯಾಸಗೊಂಡ ಆ ವ್ಯಕ್ತಿ ಹಾಸಿಗೆಯನ್ನು ಹಾಸದೆ ಕೇವಲ ನೆಲದ ಮೇಲೆ ಮಲಗಿ ನಿದ್ರೆ ಮಾಡುತ್ತಿದ್ದಾನೆ. ಹಾಗೆ ಹಾಸಿಗೆ ಇಲ್ಲದೆ ನೆಲದ ಮೇಲೆ ಮಲಗುವ ಮೂಲಕವೇ ಆ ವ್ಯಕ್ತಿ ತನ್ನ ಆಯಾಸವನ್ನು ಬಳಲಿಕೆಯನ್ನು ಪರಿಹರಿಸಿಕೊಳ್ಳುತ್ತಿದ್ದಾನೆ. ಆದರೆ ಅಂತವರನ್ನು ಗಮನಿಸಿದ ಯಾರಾದರೂ ‘ಅಯ್ಯೊ ಇವರು ಹಾಸಿಗೆಯ ಮೇಲೆ ಮಲಗಿಲ್ಲವಲ್ಲ; ಅವರಿಗೊಂದು ಹಾಸಿಗೆಯನ್ನು ಒದಗಿಸಿ ಅದರ ಮೇಲೆ ಮಲಗುವಂತೆ ಮಾಡಬಹುದಲ್ಲ; ಎಂದು ಆಲೋಚನೆ ಮಾಡಿ, ಅವರನ್ನು ಕುಲುಕಿ ಏಳಿಸಿ, ನೀವು ಹಾಸಿಗೆಯನ್ನು ಹುಡುಕಿಕೊಳ್ಳಿ, ಯಾಕೆ ಬರೀ ನೆಲದ ಮೇಲೆ ಮಲಗಿದ್ದೀರಿ’ ಎಂದು ಹೇಳಬೇಕು ಎಂಬ ಮಾರ್ಗದರ್ಶನ ಕೊಡುವ ದಾರಿ ಯಾರಿಗಾದರೂ ತೋರಬಹುದು. ಆದರೆ ಅದರಿಂದ ಅಲ್ಲಿ ಆಗುವ ಪರಿಣಾಮ ಯಾವುದು ಎಂದರೆ ಬಳಲಿಯೊ, ಸುಸ್ತಾಗಿಯೊ, ಆಯಾಸದಿಂದಲೂ ಹಾಸಿಗೆಯ ಅಗತ್ಯವೇ ಇಲ್ಲದೆ ನೆಲದ ಮೇಲೆ ಮಲಗಿರುವವರನ್ನು ಏಳಿಸಿದರೆ ಅವರ ನೆಮ್ಮದಿಯೇ ಹಾಳಾಗುತ್ತದೆ. ಹಾಗೆ ಹಾಸಿಗೆ ಇಲ್ಲದೆ ನೆಲದ ಮೇಲೆ ಮಲಗಿರುವವರನ್ನು ಏಳಿಸಿ ಹಾಸಿಗೆಯನ್ನು ಅರಸಿಕೊಳ್ಳಿ; ಅಲ್ಲಿ ಮಲಗಿಕೊಳ್ಳಿ ಎಂದು ಸೂಚಿಸಬಹುದು. ಆದರೆ ಇದರಿಂದ ಅವರಿಗೆ ನೆಮ್ಮದಿ ಸಿಗುವುದಿಲ್ಲ; ಬದಲಿಗೆ ಅವರ ನೆಮ್ಮದಿ ಕೆಟ್ಟು ಹೋಗುತ್ತದೆ. ಒಳ್ಳೆಯದನ್ನು ಮಾಡೋಣ ಎಂಬ ಭ್ರಮೆಯಲ್ಲಿ ನೆಮ್ಮದಿಯನ್ನು ನುಂಗುವುದು ಬೇಡ ಎಂಬ ಮೆಸೇಜ್ ಈ ಪದ್ಯದಲ್ಲಿದೆ.

ಬಳಲಿ ನೆಲದಲಿ ಮಲಗಿ ಅಂದರೆ ಹಾಸಿಗೆ ಇಲ್ಲದವರು ಬರಿಯ ನೆಲದಲ್ಲೇ ಮಲಗಿದ್ದಾರೆ. ಮನೆ ಕಟ್ಟಿಕೊಳ್ಳಲಾಗದಂತಹ ಜನರು ಮರದ ಬುಡದಲ್ಲೊ, ಶಾಲಾ ಕಾಲೇಜುಗಳ ಕಾಂಪೌಂಡುಗಳಲ್ಲೊ ಆಶ್ರಯ ಪಡೆದಿದ್ದಾರೆ. ಅಂತರವರನ್ನು ಭೇಟಿ ಮಾಡಿ, ‘ನೀವು ಮರದ ಬುಡದಲ್ಲಿ ಆಶ್ರಯ ಪಡೆದಿರುವುದು ಸರಿಯಲ್ಲ; ನೀವು ಮಳೆಗಾಳಿಗಳಿಂದ ರಕ್ಷಣೆ ಸಿಗುವ ಗುಡಿಸಲುಗಳನ್ನೊ, ಮನೆಗಳನ್ನೊ ನಿರ್ಮಾಣ ಮಾಡಿಕೊಳ್ಳಿ’ ಎಂದು ಹೇಳಬಾರದು. ಯಾಕೆಂದರೆ ಹಾಗೆ ಮಾಡುವ ಮೂಲಕ ಅವರ ನೆಮ್ಮದಿ ಹೆಚ್ಚಾಗುವುದಿಲ್ಲ; ಬದಲಿಗೆ ಅವರ ನೆಮ್ಮದಿ ಹಾಳಾಗುತ್ತದೆ. ಹಾಗೆ ಅವರಿಗೆ  ನೆಮ್ಮದಿಯನ್ನು ತಂದುಕೊಡುವುದು ಅಷ್ಟು ಸುಲಭದ ಮಾತಲ್ಲ ಎಂಬುದಾಗಿ ಮೇಲಿನ ಪದ್ಯವನ್ನು ವಿಸ್ತರಿಸಿ ನೋಡಬಹುದು. ಹೀಗೆ ಶೋಷಣೆ ಮತ್ತು ಅಸಮಾನತೆಯನ್ನು ನಯವಾಗಿ ಸಮರ್ಥಿಸುವ ವಿಚಾರಗಳು ಅತ್ಯಂತ ಜಾಣ್ಮೆಯಿಂದ ಪದ್ಯ ಪ್ರಕಾರದ ಸಾಹಿತ್ಯ ಕೃತಿಗಳಲ್ಲೂ ಕ್ರಿಯಾಶೀಲವಾಗುತ್ತವೆ.

ಸಮಾಜದಲ್ಲಿ ಒಂದು ಕಡೆ ಆಳುವ ಶಕ್ತಿಗಳು, ಆಳುವ ಶಕ್ತಿಗಳ ಪರವಾಗಿರುವ ಶಕ್ತಿಗಳು ತಮ್ಮ ತಾತ್ವಿಕತೆಯನ್ನು ನಿಯಂತ್ರಿಸುತ್ತಿರುತ್ತವೆ. ಮತ್ತೊಂದು ಕಡೆ ಅವುಗಳ ವಿರುದ್ಧ ಪ್ರತಿಭಟಿಸುವ, ಪ್ರತಿರೋಧ ಮಾಡುವ ಶಕ್ತಿಗಳೂ ಕೂಡ ತಮ್ಮ ತಾತ್ವಿಕತೆಯನ್ನು ಕ್ರಿಯಾಶೀಲಗೊಳಿಸುತ್ತಿರುತ್ತವೆ. ಸಾಹಿತ್ಯ ಸಂಶೋಧನೆ ಮಾಡುವವರು ಯಾವ ಬಗೆಯ ತಾತ್ವಿಕತೆಗಳನ್ನು ಅರಿಯಬೇಕು, ಯಾವ ಬಗೆಯ ತಾತ್ವಿಕತೆಗಳನ್ನು ತಮ್ಮ ಸಂಶೋಧನೆಗಳಲ್ಲಿ ಅಳವಡಿಸಿಕೊಳ್ಳಬೇಕು ಎಂಬುದನ್ನು ಮನವರಿಕೆ ಮಾಡಿಕೊಳ್ಳುವ ಅವಶ್ಯಕತೆ ಇದೆ. ಯಜಮಾನಿಕೆಯ ತಾತ್ವಿಕತೆಗಳನ್ನು, ಶೋಷಕ ತಾತ್ವಿಕತೆಗಳನ್ನು, ಅಧಿಕಾರದ ನೆಲೆಗಳನ್ನು ಹಾಗೂ ಅವುಗಳ ಪೂರಕ ಶಕ್ತಿಗಳನ್ನು ಕಾಯುವ ತಾತ್ವಿಕತೆಗಳನ್ನು ನಿರ್ದಾಕ್ಷಿಣ್ಯವಾಗಿ ವಿಮರ್ಶಿಸಬೇಕು, ವಿರೋಧಿಸಬೇಕು. ಅವುಗಳ ಉಂಟುಮಾಡುವ ಅಪಾಯಗಳನ್ನು, ಸಾಹಿತ್ಯಕ ಹಾಗೂ ಸಾಂಸ್ಕೃತಿಕ ದುಷ್ಪರಿಣಾಮಗಳನ್ನು ಬಯಲುಗೊಳಿಸಬೇಕು. ಪರ್ಯಾಯವಾಗಿ, ಸಾಮಾಜಿಕ ಚಲನಶೀಲತೆಯನ್ನು ಗುರುತಿಸುವ ತಾತ್ವಿಕತೆಗಳನ್ನು ಸಂಶೋಧನೆಗಳಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲ ಬಗೆಯ ಅಸಮಾನತೆಗಳನ್ನು ಗುರುತಿಸಿ, ಅವುಗಳನ್ನು ವಿರೋಧಿಸುವ ತಾತ್ವಿಕತೆಗಳನ್ನು ಸಾಹಿತ್ಯ ಸಂಶೋಧನೆಯಲ್ಲಿ ಅಳವಡಿಸಿಕೊಳ್ಳಬೇಕು.