ಹಿಂದಿನ ಅಧ್ಯಾಯಗಳಲ್ಲಿ ಚರ್ಚೆ ಮಾಡುವ ಹಾಗೆ ತಾತ್ವಿಕತೆ ಎಂಬುದು ತತ್ವ ಶಾಸ್ತ್ರದ ನೆರವಿನಿಂದ ಲೋಕವನ್ನು ಸಮಗ್ರವಾಗಿ ಗ್ರಹಿಸುವ ಮತ್ತು ಮಂಡಿಸುವ ಒಂದು ನೋಟಕ್ರಮ. ಇದು ಹೇಗೆ ಹುಟ್ಟುತ್ತದೆ ಎಂಬ ಪ್ರಶ್ನೆ ಸರಳವಾಗಿದ್ದರೂ ಅದಕ್ಕೆ ಉತ್ತರಿಸುವುದು ಅಷ್ಟು ಸರಳವಿಲ್ಲ. ಲೋಕವನ್ನು ನೋಡುವ ನೋಟಕ್ರಮ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ, ಸಮುದಾಯದಿಂದ ಸಮುದಾಯಕ್ಕೆ, ಜಾತಿಯಿಂದ ಜಾತಿಗೆ, ವರ್ಗದಿಂದ ವರ್ಗಕ್ಕೆ ಬದಲಾಗಬಹುದು. ಮಹಿಳೆಯರಿಂದ ಪುರುಷರಿಗೆ ಹಾಗೂ ಪುರುಷರಿಂದ ಮಹಿಳೆಯರಿಗೆ ಬದಲಾಗಬಹುದು. ವೃತ್ತಿಯಿಂದ ವೃತ್ತಿಯವರಿಗೆ ಬದಲಾಗಬಹುದು. ವಯಸ್ಸಿನ ಆಧಾರದ ಮೇಲೆ ಇದು ಬದಲಾಗಬಹುದು. ಇದನ್ನು ಕೆಲವು ಉದಾಹರಣೆಗಳ ಮುಲಕ ವಿವರಿಸಿಕೊಳ್ಳುವ ಪ್ರಯತ್ನ ಮಾಡೋಣ. ಪ್ರತಿಯೊಬ್ಬ ವ್ಯಕ್ತಿಯೂ ಲೋಕವನ್ನು, ಸಮಾಜವನ್ನು, ಘಟನೆಯನ್ನು, ಸನ್ನಿವೇಶವನ್ನು ಬೇರೆ ಬೇರೆ ನೋಟಕ್ರಮಗಳಿಂದ ನೋಡುತ್ತಾರೆ. ಉದಾಹರಣೆಗೆ, ರಾಜಕಾರಣಿಯೊಬ್ಬರು ತೀರಿಕೊಂಡರು ಎಂದು ತಿಳಿಯೋಣ. ಇದನ್ನು ವ್ಯಕ್ತಗತ ನೆಲೆಯಲ್ಲಿ ಎಲ್ಲರೂ ಬೇರೆಬೇರೆಯಾಗಿಯೇ ಗ್ರಹಿಸುತ್ತಾರೆ; ಪ್ರತಿಕ್ರಿಯಿಸುತ್ತಾರೆ; ಪ್ರತಿಕ್ರಿಯಿಸದೆ ಕೂಡ ಇರಬಹುದು. ಆದರೆ ಮಾಧ್ಯಮಗಳು ಮಾತ್ರ ‘ರಾಜಕಾರಣಿಯೊಬ್ಬರ ನಿಧನ; ನಾಡಿಗೆ ತುಂಬಲಾರದ ನಷ್ಟ’ ಎಂದು ಸುದ್ಧಿ ಮಾಡುತ್ತವೆ. ‘ನಾಡಿನ ಜನರೆಲ್ಲ ಕಂಬನಿ ಮಿಡಿದರು’ ಎಂದು ಸುದ್ಧಿ ಮಾಡುತ್ತವೆ. ಆ ರಾಜಕಾರಣಿಯ ಸಾವು ಆತನ ಕುಟುಂಬಕ್ಕೊ, ಆ ಸಮುದಾಯದ ಕೆಲವರಿಗೊ ಭಾವನಾತ್ಮಕವಾಗಿ ಒಂದಷ್ಟು ನಷ್ಟವನ್ನುಂಟುಮಾಡಿರಬಹುದು. ಅದೇ ಕಾಲಕ್ಕೆ ಆತನ ಆಸ್ತಿಗೆ ಕಣ್ಣು ಹಾಕುವವರ ಪಾಲಿಗೆ ಅದು ನಷ್ಟದ ಸಂಗತಿಯಾಗದೆ ಇರಬಹುದು. ರಾಜಕೀಯದಲ್ಲಿ ಆತನಿಂದ ತೆರವಾದ ಸ್ಥಾನಕ್ಕೆ ಆಸೆ ಪಡುವವರ ಪಾಲಿಗೆ ನಷ್ಟದ ಸಂಗತಿ ಆಗಲಾರದು. ಒಂದು ಸಾವಿನ ನಂತರ ಭೌತಿಕ ಲಾಭವನ್ನು ನಿರೀಕ್ಷಿಸುವವರೂ ಇರುತ್ತಾರೆ. ಅಂತವರ ಪಾಲಿಗದು ನಷ್ಟವಲ್ಲ; ಬದಲಿಗೆ ಮುಂದೆ ಬರಲಿರುವ ಲಾಭ. ಮಾಧ್ಯಮಗಳ ಮೂಲಕ ಪ್ರಕಟವಾಗುವ ‘ತುಂಬಲಾರದ ನಷ್ಟ’ ನಂಬಿಕೆ ಒಂದು ಹಂತದವರೆಗೆ ಹಾಗೇ ಮುಂದುವರಿಯುತ್ತದೆ. ಮಾಧ್ಯಮಗಳು ಪ್ರಕಟಿಸುವ ಇಂತಹ ಹುಸಿ ಧೋರಣೆಗಳನ್ನು ಪ್ರಶ್ನಾತೀತವಾಗಿ ನಂಬುವ ಮತ್ತು ಒಪ್ಪುವ ಮನೋಧರ್ಮವಿದೆ. ಈ ಮೂಲಕ ತಾತ್ವಿಕತೆಯೊಂದು ಹುಟ್ಟಿತು ಎನ್ನಲೂ ಬರುವುದಿಲ್ಲ. ಬದಲಾಗಿ ಆಳುವವರ ಬಗೆಗಿನ ನಂಬಿಕೆಗಳನ್ನು ಮಾಧ್ಯಮಗಳು ಗಟ್ಟಿಗೊಳಿಸುವ ಕೆಲಸ ಮಾಡುತ್ತವೆ. ಆ ತಾತ್ವಿಕತೆಯನ್ನು ಬಲಪಡಿಸುವ ಕೆಲಸ ಮಾಡುತ್ತವೆ.

ಸಮಾಜದಲ್ಲಿ ಸ್ಥಾಪಿತ ತಾತ್ವಿಕತೆಗಳು ಒಂದು ಬಗೆಯಲ್ಲಿ ಕ್ರಿಯಾಶೀಲವಾಗಿರುತ್ತವೆ. ಈ ಸ್ಥಾಪಿತ ಇಲ್ಲವೆ ಜಡವಾದ ತಾತ್ವಿಕತೆಗಳನ್ನು ಆಯಾ ಸಮಾಜದ ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಸಂಘ ಸಂಸ್ಥೆಗಳು ತಮ್ಮ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳುವ ಸಲುವಾಗಿ ಗಟ್ಟಿಯಾಗಿ ಅವನ್ನು ಕಾಪಾಡಿಕೊಂಡು ಬರುತ್ತವೆ. ಹೀಗೆ ಇವುಗಳನ್ನು ಕಾಪಾಡಿಕೊಂಡು ಬರುವುದರ ಮೂಲಕ ಎಲ್ಲಾ ಬಗೆಯ ಅಸಮಾನತೆ, ಅನ್ಯಾಯಗಳನ್ನು ಸಾಮಾಜಿಕವಾಗಿ ಇವು ಸಹಜವಾದವು ಎಂದು ಒಪ್ಪಿಸುತ್ತಿರುತ್ತವೆ. ಸಾಮಾಜಿಕವಾಗಿ ಯಾವುದು ಅಸಹಜವೊ ಅದನ್ನು ಸಹಜ ಎಂದು ಹೇಳುವುದು, ಯಾವುದು ಅನ್ಯಾಯವೊ ಅದನ್ನು ನ್ಯಾಯ ಎಂದು ಹೇಳುವುದು, ಯಾವುದು ಅಸಮಾನತೆಯೊ ಅದನ್ನು ಸಮಾನತೆಯೆಂದು ಎಂದು ಹೇಳುವುದು ಈ ಮೂಲಕ ಸಾಮಾಜಿಕ ಸ್ಥಾಪಿತ ತಾತ್ವಿಕತೆಗಳನ್ನು ಬಲಪಡಿಸಲಾಗುತ್ತದೆ.

ಹೀಗೆ ಮೇಲಿಂದ ಮೇಲೆ ಸ್ಥಾಪಿತ ತಾತ್ವಿಕತೆಗಳು ಯಜಮಾನಿಕೆಯನ್ನು ಮುಂದುವರಿಸಿದಾಗ, ಆ ಮೂಲಕ ಎಲ್ಲಾ ಬಗೆಯ ಅಸಮಾನತೆ ಮತ್ತು ಶೋಷಣೆಗಳನ್ನು ಮುಂದುವರಿಸಿದಾಗ, ಅದರ ಗರ್ಭದಲ್ಲೆ ಆ ಯಜಮಾನಿಕೆಯ ತಾತ್ವಿಕತೆಯನ್ನು ವಿರೋಧಿಸುವ ತಾತ್ವಿಕತೆಗಳು ಹುಟ್ಟುತ್ತವೆ. ಏಸುಕ್ರಿಸ್ತ, ಬುದ್ಧ, ಕರ್ನಾಟಕದಲ್ಲಿ ಕೆಲವರು ವಚನಕಾರರು, ಜರ್ಮನಿಯಲ್ಲಿ ಕಾರ್ಲ್‌ಮಾರ್ಕ್ಸ್, ಏಂಗೆಲ್ಸ್, ಚೈನಾದಲ್ಲಿ ಮಾವೊತ್ಸೆ ತುಂಗ್, ಭಾರತದಲ್ಲಿ ಅಂಬೇಡ್ಕರ್ ಇದೇ ಕೆಲಸ ಮಾಡಿದರು. ಇದೆಲ್ಲದರ ಫಲವಾಗಿ ಸ್ಥಾಪಿತ ತಾತ್ವಿಕ ಆಲೋಚನ ಕ್ರಮಗಳನ್ನು ಪ್ರಶ್ನಿಸುವ ಮತ್ತು ಪರ್ಯಾಯಗಳನ್ನು ರೂಪಿಸುವ ಚಾರಿತ್ರಿಕ ವಾತಾವರಣ ನಿರ್ಮಾಣವಾಯಿತು. ಇದರ ಫಲವಾಗಿ ಆವರೆಗೆ ನಂಬಿಕೊಂಡಿದ್ದ ನೋಟಕ್ರಮಗಳು, ದೃಷ್ಟಿಕೋನಗಳು, ತಾತ್ವಿಕತೆಗಳು ತಲೆಕೆಳಕಾಗಿ ಹೊಸಬಗೆಯ ನೋಟಕ್ರಮಗಳು ಸಾಮಾಜಿಕವಾಗಿ ರೂಪುಗೊಳ್ಳತೊಡಗಿದವು. ಆಗ ಆ ಮೊದಲು ಸ್ಥಾಪಿತವಾಗಿದ್ದ ತಾತ್ವಿಕತೆಗಳು ಸುಮ್ಮನೆ ಕೂರುವುದಿಲ್ಲ. ಅವೂ ಕೂಡ ಸಾಮಾಜಿಕ ಶಕ್ತಿಗಳೇ ಆಗಿರುತ್ತವೆ. ಹಾಗಾಗಿ ಆ ಸಾಮಾಜಿಕ ಶಕ್ತಿಗಳು ಹೇಗೆ ತಾನೆ ಸುಮ್ಮನೆ ಕೂತಾವು? ಅವು ಪ್ರತ್ಯಕ್ಷವಾಗಿಯೇ ಇವುಗಳ ವಿರುದ್ಧ ವೈಚಾರಿಕ ಸಂಘರ್ಷಕ್ಕೆ ಇಳಿಯುತ್ತವೆ. ಅಷ್ಟು ಮಾತ್ರವಲ್ಲದೆ ಅವು ವೈಚಾರಿಕ ದಾಳಿಗಳನ್ನು ಸಂಘಟನಾತ್ಮಕವಾಗಿ ರೂಪಿಸುತ್ತವೆ. ‘ನಮ್ಮ ತಾತ್ವಿಕತೆಗಳು ಮಾತ್ರ ಅನುಸರಣೆಗೆ ಯೋಗ್ಯವಾದವು, ನಮ್ಮ ತಾತ್ವಿಕತೆಗಳು ಮಾತ್ರ ನಂಬಿಕೆಗೆ ಯೋಗ್ಯವಾದವು, ಉಳಿದವು ನಿರಾಕರಣೆಗೆ ಮತ್ತು ತಿರಸ್ಕಾರಕ್ಕೆ ಯೋಗ್ಯವಾದವು, ಅವು ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುತ್ತವೆ, ಅವು ಸಾಮಾಜಿಕರನ್ನು ಉಳ್ಳವರ ಮೇಲೆ ಎತ್ತಿ ಕಟ್ಟುತ್ತವೆ, ಆಗ ಸಮಾಜದಲ್ಲಿ ಅಸಹನೆ, ಅಸಮಾಧಾನಗಳು ಹುಟ್ಟುತ್ತವೆ, ಈ ಅಸಮಾಧಾನಗಳು ಇಡೀ ಸಮಾಜವನ್ನು ಅಲ್ಲೋಲ ಕಲ್ಲೋಲ ಮಾಡುತ್ತವೆ’ ಎಂಬ ನೆಪದಲ್ಲಿ ಸ್ಥಾಪಿತ ತಾತ್ವಿಕತೆಗಳ ವಿರುದ್ಧ ಹುಟ್ಟಿದ್ದ ತಾತ್ವಿಕತೆಗಳನ್ನು ಸಮಾಜದಿಂದ ಹೊರಗಿಡುವ ಕುಟಿಲ ತಂತ್ರಗಳನ್ನು, ನೇರ ದಾಳಿಗಳನ್ನು ಮಾಡುತ್ತವೆ. ಅಮೇರಿಕಾದ ವಿಶ್ವ ವಾಣಿಜ್ಯ ಕಟ್ಟಡಗಳ ಧ್ವಂಸದ ನಂತರ ಅಮೇರಿಕಾವು ‘ಜಾಗತಿಕ ಭಯೋತ್ಪಾದನೆ ವಿರೋಧಿ’ ಘೋಷಣೆಯನ್ನು ಹೊರಡಿಸಿತು. ಕರ್ನಾಟಕ ಸರಕಾರವು ‘ಭಯೋತ್ಪಾದನೆ ವಿರೋಧಿ ಸಪ್ತಾಹ’ವನ್ನು ಪದವಿ ಕಾಲೇಜುಗಳ ಮೂಲಕ ನಡೆಸಿತು. ಆರ್ಥಿಕ ಸಾಮಾಜಿಕ ಅಸಮಾನತೆಗಳು ತೀವ್ರವಾಗಿ ಹೆಚ್ಚಾಗುತ್ತಿರುವುದರಿಂದ ಇದರಿಂದ ನಷ್ಟಕ್ಕೆ ಒಳಗಾದ ಜನಸಮುದಾಯಗಳು ರಾಜಿರಹಿತ ಹೋರಾಟಕ್ಕೆ ಮುಂದಾಗಿವೆ. ಅಸಮಾನತೆಯನ್ನು ಕಡಿಮೆ ಮಾಡದ ಹೊರತು ಅಥವಾ ಅದನ್ನು ನಾಶ ಮಾಡದ ಹೊರತು ಅಂತಹ ಹೋರಾಟಗಳನ್ನು ಇಲ್ಲದಂತೆ ಮಾಡಲು ಆಗುವುದಿಲ್ಲ. ಆದರೆ ಪ್ರಭುತ್ವವು ಆರ್ಥಿಕ ಸಾಮಾಜಿಕ ಅಸಮಾನತೆಗಳನ್ನು ಉಳಿಸಿಕೊಂಡು, ಅವನ್ನು ಮುಂದುವರಿಸುವ ಸಲುವಾಗಿ ಅಂತಹ ರಾಜಿ ರಹಿತ ಹೋರಾಟಗಳನ್ನು ಹತ್ತಿಕ್ಕುವ ಕಾರ್ಯಕ್ರಮಗಳನ್ನು ಮತ್ತು ‘ಗ್ರೀನ್ ಹಂಟ್’ ಮುಂತಾದ ಕಾರ್ಯಾಚರಣೆಗಳನ್ನು ಜಾರಿ ಮಾಡಿದೆ. ಇದಕ್ಕೆ ಇವು ಕೆಲವು ಉದಾಹರಣೆಗಳು ಅಷ್ಟೆ.

ತಾತ್ವಿಕತೆಯು ಮನುಷ್ಯರ ಮೆದುಳಿನಲ್ಲಿ ನಿರ್ವಾತ ಪ್ರದೇಶದಲ್ಲಿ ಹುಟ್ಟುವುದಿಲ್ಲ. ವ್ಯವಸ್ಥೆಯೊಂದರ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸಂಘರ್ಷಗಳ ಫಲವಾಗಿ ತಾತ್ವಿಕತೆಗಳು ಹುಟ್ಟುತ್ತವೆ. ಸಾಮಾಜಿಕ ಸಂಘರ್ಷಗಳು ಇಲ್ಲದೆ ಹೋದರೆ ತಾತ್ವಿಕತೆಗಳು ಹೊಸದಾಗಿ ಹುಟ್ಟುವುದಿಲ್ಲ. ಯಾವುದೇ ವ್ಯವಸ್ಥೆಯಲ್ಲಿ ತಾತ್ವಿಕತೆಗಳು ಅಮೂರ್ತ ರೂಪದಲ್ಲಿ ಇರುತ್ತವೆ. ವೈಚಾರಿಕ ಮತ್ತು ಸೈದ್ಧಾಂತಿಕ ವಲಯದಲ್ಲಿ ತಾತ್ವಿಕತೆಗಳನ್ನು ಮೂರ್ತರೂಪದಲ್ಲಿ ಗುರುತಿಸಬಹುದು. ಯಾಕೆಂದರೆ ತಾತ್ವಿಕತೆಗಳ ಕ್ಷೇತ್ರವೇ ಇದು. ಜಾತಿ ಮತ್ತು ವರ್ಗ ಮತ್ತು ಲಿಂಗ ಶ್ರೇಣೀಕರಣಗಳ ಸಾಮಾಜಿಕ ವ್ಯವಸ್ಥೆಯಲ್ಲಿ ತಾತ್ವಿಕತೆಗಳು ಆಯಾ ಗುಂಪಿನ ರಾಜಕೀಯ ಹಿತಾಸಕ್ತಿಯ ಗುರಿಗಾಗಿ ತಾತ್ವಿಕತೆಗಳು ಹುಟ್ಟುತ್ತವೆ. ತಮ್ಮ ತಮ್ಮ ರಾಜಕೀಯ ಗುರಿ ಮತ್ತು ದಾರಿ ಯಾವುದು ಎಂಬುದನ್ನು ಆಧರಿಸಿ ತಾತ್ವಿಕತೆಗಳು ಹುಟ್ಟುತ್ತವೆ. ಹಾಗಾಗಿ ಜಾತಿ ಅಸಮಾನತೆಯನ್ನು ವಿವರಿಸುವ ಮತ್ತು ವಿರೋಧಿಸುವ, ಅದೇ ರೀತಿಯಲ್ಲಿ ವರ್ಗ ಅಸಮಾನತೆಯನ್ನು ವಿವರಿಸುವ ಮತ್ತು ವಿರೋಧಿಸುವ ಹಾಗೂ ಲಿಂಗ ಅಸಮಾನತೆಯನ್ನು ವಿವರಿಸುವ ಮತ್ತು ವಿರೋಧಿಸುವ ತಾತ್ವಿಕತೆಗಳು ಹುಟ್ಟುತ್ತವೆ.

ತಾತ್ವಿಕತೆಗೆ ಎರಡು ಮುಖಗಳಿರುತ್ತವೆ. ಒಂದು ಅದರ ಆಲೋಚನೆ ಸ್ವರೂಪ. ಮತ್ತೊಂದು ಅದರ ಆಚರಣ ಸ್ವರೂಪ. ಇವೆರಡೂ ಒಂದನ್ನೊಂದು ಅವಲಂಬಿಸಿರುತ್ತವೆ. ತಾತ್ವಿಕತೆಯ ಆಲೋಚನ ಸ್ವರೂಪವು ಅದರ ಆಚರಣೆಯನ್ನೂ, ತಾತ್ವಿಕತೆಯ ಆಚರಣೆಯ ಸ್ವರೂಪವು ಅದರ ಆಲೋಚನೆಯನ್ನೂ ಪರಸ್ಪರ ವಿಮರ್ಶಿಸುತ್ತಾ, ಪರಸ್ಪರ ಪ್ರಭಾವಿಸುತ್ತ ಸಾಗುತ್ತವೆ. ಈ ವಿಮರ್ಶೆ ಮತ್ತು ಪ್ರಭಾವದ ಪ್ರಕ್ರಿಯೆಯಲ್ಲಿ ತಾತ್ವಿಕತೆಗಳ ಆಂಶಿಕವಾಗಿ ಬದಲಾಗುತ್ತಾ, ಹೊಸದನ್ನು ಕಾಣುತ್ತ, ವಿಸ್ತರಿಸಿಕೊಳ್ಳುತ್ತಾ ಸಾಗುತ್ತಿವೆ. ಈ ಆಯಾಮದಲ್ಲಿ ಪ್ರತಿಯೊಂದು ತಾತ್ವಿಕತೆಯೂ ಚರಿತ್ರೆಯ ಕಾಲದ ಜೊತೆಯಲ್ಲಿ, ಪ್ರಭುತ್ವದ ಜೊತೆಯಲ್ಲಿ ನಿರಂತರವಾಗಿ ಸೆಣಸುತ್ತಾ ಸಾಗುತ್ತವೆ. ತಮಗೆ ಬೇಡವಾದುದನ್ನು ಆಂಶಿಕವಾಗಿ ಬಿಡುತ್ತಾ, ಬೇಕಾದುದನ್ನು ಸೇರಿಸಿಕೊಳ್ಳುತ್ತಾ ಬರುತ್ತವೆ. ಹೀಗೆ ಬಿಡುವ ಮತ್ತು ಪಡೆಯುವ ಪ್ರಕ್ರಿಯೆಯೆ ತಾತ್ವಿಕತೆಯನ್ನು ನಿರಂತರವಾಗಿ ಸೃಜನಶೀಲಗೊಳಿಸುತ್ತ, ಹೊಸ ಕಾಲಕ್ಕೆ ಹೊಸದಾಗಿಸುತ್ತಾ ಸಾಗಿಸುತ್ತದೆ.

ಒಂದು ಕಡೆ ಆಳುವ ವರ್ಗದ ತಾತ್ವಿಕತೆಯನ್ನು, ಎಲ್ಲಾ ಬಗೆಯ ಯಜಮಾನಿಕೆಯ ತಾತ್ವಿಕತೆಗಳನ್ನು ಪ್ರಭುತ್ವ ಪೋಷಿಸಿ ಬೆಳೆಸುತ್ತದೆ. ತನ್ನ ವಿರುದ್ಧದ ತಾತ್ವಿಕತೆಗಳನ್ನು ದಮನಿಸಲು ಮತ್ತು ಹತ್ತಿಕ್ಕಲು ಪ್ರಯತ್ನಿಸುತ್ತದೆ. ಆದರೆ ಜನತೆಯ ನೆಲೆಯ ತಾತ್ವಿಕತೆ ಬೇರೆಬೇರೆ ಮಾಧ್ಯಮಗಳ ಮುಲಕ ಅಭಿವ್ಯಕ್ತಿ ಪಡೆಯುತ್ತಾ, ತಮ್ಮ ರೂಪ ಸ್ವರೂಪಗಳನ್ನು ಸಂಘಟಿಸಿಕೊಳ್ಳುತ್ತಾ ಅವು ಸಮುದಾಯಗಳ ಧ್ವನಿಯಾಗಿ ಅರಳಲು ನಿರಂತರ ಪ್ರಯತ್ನಿಸುತ್ತವೆ. ಹಾಗಾಗಿ ಆಳುವ ವರ್ಗದ ಯಜಮಾನಿಕೆಯ ತಾತ್ವಿಕತೆಗಳು ಯಾವ ಮಾಧ್ಯಮಗಳ ಮೂಲಕ ತಮ್ಮ ನೆಲೆಗಳನ್ನು ಗಟ್ಟಿಗೊಳಿಸುತ್ತವೆಯೊ, ಆ ದಾರಿಗಳು ಅದರ ಪರ್ಯಾಯ ತಾತ್ವಿಕತೆಗಳ ದಾರಿಗಳಲ್ಲ. ‘ವ್ಯವಸ್ಥೆ ಹೀಗಿದೆ; ಅದು ಹೀಗೇ ಇರಬೇಕು’ ಎಂಬುದು ಆಳುವ ವರ್ಗದ ತಾತ್ವಿಕತೆಯ ಸಾಮಾನ್ಯ ಸ್ವರೂಪ. ಆದರೆ ‘ವ್ಯವಸ್ಥೆ ಹೀಗಿದೆ; ಅದು ಹೀಗೇ ಇರಬಾರದು, ಅದು ಬದಲಾಗಬೇಕು’ ಎಂಬುದು ಅದರ ಪರ್ಯಾಯ ತಾತ್ವಿಕತೆಗಳ ಮತ್ತೊಂದು ರೂಪ.

ಇದುವರೆಗಿನ ಚರ್ಚೆಯಿಂದ ನಮಗೆ ತಿಳಿಯುವುದೇನೆಂದರೆ ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರಧಾನವಾಗಿ ಎರಡು ಬಗೆಯ ಧೋರಣೆಗಳು, ಎರಡು ಬಗೆಯ ತಾತ್ವಿಕತೆಗಳು ನಿರಂತರವಾಗಿ ಕ್ರಿಯಾಶೀಲವಾಗಿರುತ್ತವೆ. ಇವುಗಳನ್ನು ಒಂದು ಕಡೆ; ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ರಾಜಕೀಯ ವ್ಯವಸ್ಥೆಗಳು ಗಟ್ಟಿಗೊಳಿಸುತ್ತಾ ಸಾಗುತ್ತವೆ. ಮತ್ತೊಂದು ಕಡೆ ಇವುಗಳನ್ನು ಜನತೆಯ ನೆಲೆಯಿಂದ ಅಥವಾ ಜನತೆಯ ದೃಷ್ಟಿ ಕೋನದಿಂದ, ಜನತೆಯ ನೋಟಕ್ರಮದಿಂದ ಪ್ರಶ್ನಿಸುವ ಮತ್ತು ಅದಕ್ಕೆ ಪರ್ಯಾಯಗಳನ್ನು ರೂಪಿಸುವ ತಾತ್ವಿಕತೆಗಳೂ ಕೂಡ ನಿರಂತರವಾಗಿ ಹುಟ್ಟುತ್ತಿರುತ್ತವೆ. ಕ್ರಿಯಾಶೀಲವಾಗುತ್ತಿರುತ್ತವೆ. ಈ ಹುಟ್ಟುವಿಕೆಯು ಆಯಾ ಸಮಾಜ, ಸಮುದಾಯಗಳ ಹೊರಗಿನ ಪ್ರಭಾವಗಳಿಂದಲೂ; ಒಳಗಿನ ಒತ್ತಡಗಳಿಂದಲೂ ನಿರಂತರವಾಗಿ ಸಾಗಿರುತ್ತದೆ. ಮಹಿಳಾ ಆಲೋಚನೆಗಳು, ದಲಿತ ಆಲೋಚನೆಗಳನ್ನು ಈ ಹಿನ್ನೆಲೆಯಲ್ಲಿ ವಿಸ್ತರಿಸಿಕೊಳ್ಳಬಹುದು.