ಮೊದಲಿಗೆ ತಾತ್ವಿಕತೆಯಿಂದ ಸಂಶೋಧನೆ ಎಂಬ ಮಾದರಿಯನ್ನು ಗಮನಿಸೋಣ. ಇದನ್ನು ಕನ್ನಡದ ವಿಚಾರ ವಿಮರ್ಶೆಯಲ್ಲಿ ಅನುಗಮನ ವಿಧಾನ ಎಂದು ಕರೆಯಲಾಗಿದೆ. ಒಂದು ವಿಷಯವನ್ನು ಕುರಿತು ಅಧ್ಯಯನ ಮಾಡಲು ಮೊದಲೇ ಕೆಲವು ತೀರ್ಮಾನಗಳನ್ನು ಮಾಡಿಕೊಳ್ಳುವುದು. ಮೊದಲೇ ಸಂಶೋಧನೆಗೆ ಬೇಕಾದಂತಹ ಚೌಕಟ್ಟನ್ನು ರೂಪಿಸಿಕೊಳ್ಳುವುದು. ಅನಂತರ ಆ ಚೌಕಟ್ಟಿಗೆ ಅನುಗುಣವಾದ ಆಕರಗಳನ್ನು, ಮಾಹಿತಿಗಳನ್ನು, ಅಂಕಿಸಂಕಿಗಳನ್ನು ಸಂಗ್ರಹಿಸುವುದು. ಹೀಗೆ ಸಂಗ್ರಹಿಸಿದ ಆಕರಗಳನ್ನು ಮೊದಲೆ ರೂಪಿಸಿಕೊಂಡಿದ್ದ ಚೌಕಟ್ಟಿಗೆ ಜೋಡಿಸುವುದು. ಒಂದು ವೇಳೆ ಮೊದಲೇ ರೂಪಿಸಿಕೊಂಡಿದ್ದ ಚೌಕಟ್ಟಿಗೆ ಸಂಶೋಧನೆಯ ಆಕರಗಳು ಹೊಂದಲಿಲ್ಲ ಎಂದಾದ ಪಕ್ಷದಲ್ಲಿ ಅಂತಹ ಆಕರಗಳನ್ನು ತಮ್ಮ ಸಂಶೋಧನೆಯಿಂದ ಹೊರಗಿಡುವುದು. ಇಲ್ಲಿ ಆಕರಗಳ ಆಯ್ಕೆ ಮತ್ತು ನಿರಾಕರಣೆ ನಡೆಯುತ್ತದೆ. ಜೊತೆಗೆ ಮೊದಲೇ ಹಾಕಿಕೊಂಡಿದ್ದ ವೈಚಾರಿಕ ಪ್ರಮೇಯವನ್ನು ಸಂಶೋಧನೆಯ ಆಕರ ಪ್ರಶ್ನೆ ಮಾಡುವಂತಿದ್ದರೆ, ನಿರಾಕರಿಸುವಂತಿದ್ದರೆ ಅವುಗಳನ್ನು ಪರಿಗಣಿಸುವುದೇ ಇಲ್ಲ. ಮೊದಲೇ ರೂಪಿಸಿಕೊಂಡಿದ್ದ ತಾತ್ವಿಕ ಚೌಕಟ್ಟನ್ನು ಆಕರಗಳ ನೆರವಿನಿಂದ ಸಮರ್ಥಿಸುವುದು ಈ ಸಂಶೋಧನೆಯ ಸಾಮಾನ್ಯ ಸ್ವರೂಪ.

ಸಂಶೋಧನೆಗಾಗಿ ತಾತ್ವಿಕತೆ ಎಂಬ ಆಯಾಮವನ್ನು ಚರ್ಚಿಸಬಹುದು. ಪ್ರತಿಯೊಂದು ಸಂಶೋಧನಾ ವಿಷಯದ ಒಳಗೆಯೇ ಅದನ್ನು ವಿಶ್ಲೇಷಿಸಬಹುದಾದ ಕೆಲವು ವಿಧಾನಗಳಿರುತ್ತವೆ. ಇದನ್ನು ಸಂಶೋಧನೆಯಲ್ಲಿ ನಿಗಮನ ವಿಧಾನ ಎಂದು ಕರೆಯುತ್ತಾರೆ. ಇಲ್ಲಿ ಸಂಶೋಧನೆಗೆ ಪೂರ್ವ ತೀರ್ಮಾನಗಳು ಇರುವುದಿಲ್ಲ. ಸಂಶೋಧನೆ ನಡೆಸುವ ಗುರಿ, ಉದ್ದೇಶಗಳಿರುತ್ತವೆ. ಉದಾಹರಣೆಗೆ ‘ಹಳಗನ್ನಡ ಕಾವ್ಯಗಳಲ್ಲಿ ಯುದ್ಧದ ವರ್ಣನೆಗಳು’ ಎಂಬ ವಿಷಯವನ್ನು ಸಂಶೋಧನೆಗೆ ಆಯ್ಕೆಮಾಡಿಕೊಂಡಿದೆ ಎಂದು ತಿಳಿಯೋಣ. ಇದಕ್ಕೆ ಮೊದಲೇ ಚೌಕಟ್ಟನ್ನು ನಿರ್ಮಿಸಿಕೊಳ್ಳುವ ಅಗತ್ಯವಿಲ್ಲ. ಬದಲಾಗಿ ಹಳಗನ್ನಡ ಕಾವ್ಯಗಳನ್ನು ಪರಿಶೀಲನೆ ಮಾಡುವುದರ ಮೂಲಕ ಯುದ್ಧದ ವರ್ಣನೆಗಳು ಯಾವ ಕಾವ್ಯಗಳಲ್ಲಿ, ಯಾವ ಸ್ವರೂಪದಲ್ಲಿ ಬಂದಿವೆ ಎಂಬುದರ ಹುಡುಕಾಟ ಶುರುವಾಗುತ್ತದೆ. ಯುದ್ಧದ ವರ್ಣನೆಗಳು ಬಾರದೆ ಇರುವ ಕಾವ್ಯಗಳನ್ನು ಈ ಸಂಶೋಧನೆಯಿಂದ ಹೊರಗಿಡುವ ಪ್ರಮೇಯ ಬರುವುದಿಲ್ಲ. ಯಾಕೆಂದರೆ ಇದು ಹಳಗನ್ನಡ ಕಾವ್ಯಗಳನ್ನು ಕುರಿತ ಸಂಶೋಧನೆ. ಒಂದು ವೇಳೆ ಇದಕ್ಕೆ ಮೊದಲೇ ಚೌಕಟ್ಟನ್ನು ಹಾಕಿಕೊಂಡು ಬಿಟ್ಟರೆ ಆಗ, ಚರಿತ್ರೆಯ ಉಲ್ಲೇಖಗಳಿಗೆ ಹೋಗಿ, ಅದು ‘ಯುದ್ಧಗಳ ಕಾಲ’ ಎಂದು ಮೊದಲೇ ತೀರ್ಮಾನ ಮಾಡಬೇಕಾಗುತ್ತದೆ. ನಂತರ ಯುದ್ಧದ ವರ್ಣನೆಯ ಭಾಗಗಳನ್ನು ಆಯ್ಕೆಮಾಡಿಕೊಂಡು ‘ಯುದ್ಧಗಳ ಕಾಲ’ ಎಂಬುದನ್ನು ಸಮರ್ಥಿಸಬೇಕಾಗುತ್ತದೆ. ಹೀಗೆ ಸಮರ್ಥನೆ ಮಾಡಲು ಹೊರಟಾಗ ಯುದ್ಧ ವರ್ಣನೆಗಳಿಲ್ಲದ ಕಾವ್ಯಗಳನ್ನು ಸಂಶೋಧನೆಯಿಂದ ಹೊರಗಿಡಬೇಕಾಗುತ್ತದೆ. ಆದರೆ ಮೊದಲೇ ಹೀಗೆ ‘ಯುದ್ಧಗಳ ಕಾಲ’ ಎಂದು ತೀರ್ಮಾನ ಮಾಡದೇ ಇದ್ದಾಗ, ಕೆಲವು ಕಾವ್ಯಗಳಲ್ಲಿ ಯಾಕೆ ಯುದ್ಧ ವರ್ಣನೆಗಳಿಲ್ಲ ಎಂಬ ಚರ್ಚೆಯನ್ನು ಸಂಶೋಧನೆಯು ಮುಂಚೂಣಿಗೆ ತರುತ್ತದೆ. ಆ ಮೂಲಕ ಹೊಸಬಗೆಯ ತಾತ್ವಿಕತೆಯೊಂದನ್ನು ರೂಪಿಸಲು ಪ್ರಯತ್ನಿಸುತ್ತದೆ.

* * *