ಸಂಶೋಧನೆ ಎಂಬುದನ್ನು ಸಾಹಿತ್ಯದ ಮಟ್ಟಿಗೆ ಹೊಸದಾಗಿ ಕಂಡುಹಿಡಿಯುವುದು ಎನ್ನಲು ಬರುವುದಿಲ್ಲ. ಬದಲಿಗೆ ಇರುವಿಕೆಯ ಆಗುವಿಕೆಯನ್ನು ಅರಿಯುವ ಮತ್ತು ಅರಿಯುವ ಕ್ರಮವನ್ನು ಬದಲಾಯಿಸುವ ಆಲೋಚನ ವಿಧಾನ ಎಂದು ವಿವರಿಸಿ ಕೊಳ್ಳಬಹುದು. ಸಂಶೋಧನೆ ಬಗ್ಗೆ ಚರ್ಚೆ ಮಾಡುವಾಗ ತಾತ್ವಿಕವಾಗಿ ಅಧ್ಯಯನ ಮಾಡಬೇಕು, ತಾತ್ವಿಕವಾಗಿ ನೋಡಬೇಕು, ತಾತ್ವಿಕವಾಗಿ ಗ್ರಹಿಸಬೇಕು, ತಾತ್ವಿಕವಾಗಿ ಮಂಡಿಸಬೇಕು ಎಂಬ ಹೇಳಿಕೆಗಳು ಕೇಳುತ್ತಿರುತ್ತವೆ. ಹಾಗಾದರೆ ಒಂದು ವಿಷಯವನ್ನು ತಾತ್ವಿಕವಾಗಿ ಗ್ರಹಿಸುವುದು ಮತ್ತು ತಾತ್ವಿಕವಾಗಿ ಮಂಡಿಸುವುದು ಎಂದರೆ ಏನು? ಅದರ ಸ್ವರೂಪ ಯಾವುದು ಎಂಬುದನ್ನು ಚರ್ಚಿಸಬಹುದು. ಒಂದು ವಿಷಯವನ್ನು ಇನ್ನೊಬ್ಬರಿಗೆ ಭಾಷಿಕವಾಗಿ ತಲುಪಿಸಲು ಹಲವು ವಿಧಾನಗಳಿಗೆ. ಒಂದು: ವಿಷಯವನ್ನು ಮಾಹಿತಿಗಳ ಮೂಲಕ ತಲುಪಿಸುವುದು. ಎರಡು: ವಿಷಯವನ್ನು ಅಂಕಿಸಂಕಿಗಳ ಮೂಲಕ ತಲುಪಿಸುವುದು. ಮೂರು: ವಿಷಯವನ್ನು ವಿವರಣೆಯ ಮೂಲಕ ತಲುಪಿಸುವುದು. ನಾಲ್ಕು: ವಿಷಯವನ್ನು ವಿಶ್ಲೇಷಣೆಯ ಮೂಲಕ ತಲುಪಿಸುವುದು. ಐದು: ವಿಷಯವನ್ನು ವ್ಯಾಖ್ಯಾನದ ಮೂಲಕ ತಲುಪಿಸುವುದು.

ಮೇಲಿನ ಐದು ಸಂವಹನ ಮಾದರಿಗಳನ್ನು ಉದಾಹರಣೆಗಳ ಮೂಲಕ ವಿವರಿಸೋಣ. ಒಂದು: ಕರ್ನಾಟಕದಲ್ಲಿರುವ ಬುದ್ಧಿಜೀವಿಗಳು ಯಾರೂ ಕೂಡ ಶೋಷಿತರು, ಶೋಷಣೆ, ಹಸಿವುಗಳ ಬಗ್ಗೆ ಬರೆಯುತ್ತಿಲ್ಲ.  ಎರಡು: ಕರ್ನಾಟಕದಲ್ಲಿರುವ ಕನಿಷ್ಠ ಶೇಕಡ ೭೫ ರಷ್ಟು ಜನ ಬುದ್ಧಿಜೀವಿಗಳು ಶೋಷಿತರು, ಶೋಷಣೆ, ಹಸಿವುಗಳ ಬಗ್ಗೆ ಬರೆಯುತ್ತಿಲ್ಲ. ಮೂರು: ಕರ್ನಾಟಕದಲ್ಲಿರುವ ಬುದ್ಧಿಜೀವಿಗಳು ಶೋಷಿತರು, ಶೋಷಣೆ, ಹಸಿವುಗಳ ಬಗ್ಗೆ ಬರೆಯಬೇಕಾಗಿತ್ತು. ಸಮಾಜದಲ್ಲಿ ನಡೆಸುತ್ತಿರುವ ಎಲ್ಲ ಶೋಷಣೆ, ದಮನ, ದಬ್ಬಾಳಿಕೆ, ಅಪಮಾನ, ಅನ್ಯಾಯಗಳ ವಿರುದ್ಧ ಧ್ವನಿ ಎತ್ತುವುದು ಬುದ್ಧಿಜೀವಿಗಳ ಸಾಮಾಜಿಕ ಹೊಣೆಗಾರಿಕೆ. ಖಡ್ಗಕ್ಕಿಂತ ಲೇಖನಿ ಹರಿತ ಎನ್ನುತ್ತಾರೆ. ಸಾಹಿತ್ಯ ರಚನೆ ಮಾಡುವವರು ಸಮಾಜದಲ್ಲಿರುವ ಓರೆಕೋರೆಗಳನ್ನು, ಅನ್ಯಾಯ ಹಾಗೂ ಅಸಮಾನತೆಗಳನ್ನು ವಿರೋಧಿಸಿ ಬರೆಯದಿದ್ದರೆ ಇನ್ಯಾರು ಶೋಷಿತರು ಮತ್ತು ಅಪಮಾನಿತರ ಬಗ್ಗೆ ಬರೆಯಲು ಸಾಧ್ಯ? ನಾಲ್ಕು: ಸಮಾಜದಲ್ಲಿ ಅನ್ಯಾಯ ಹಾಗೂ ಅಸಮಾನತೆಗಳ ವಿರುದ್ಧ ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಸಾಹಿತ್ಯವು ನಿರಂತರವಾಗಿ ಹೋರಾಡುತ್ತಲೆ ಬಂದಿದೆ. ಇದರಲ್ಲಿ ಸಾಹಿತಿಗಳ ಪಾತ್ರವೂ ಇದೆ. ಸಾಹಿತ್ಯದ ಹಾಗೂ ಸಾಹಿತಿಗಳ ಮೂಲ ಆಶಯ ಹಾಗೂ ಅವರ ಸಮಾಜಿಕ ಹೊಣೆಗಾರಿಕೆಯ ಸ್ವರೂಪ ಎಲ್ಲ ಬಗೆಯ ಅಸಮಾನತೆ ಹಾಗೂ ಅನ್ಯಾಯಗಳನ್ನು ವಿರೋಧಿಸುವುದು. ಆದರೆ ಸಾಹಿತಿಗಳ ಮತ್ತು ಸಾಹಿತ್ಯದ ಮೌನವನ್ನು ಗಮನಿಸಿದರೆ ಇದು ಸಮಾಜದಲ್ಲಿ ಯಾಕೆ ನಡೆಯುತ್ತಿಲ್ಲ ಎಂದು ಆಶ್ಚರ್ಯವಾಗುತ್ತದೆ. ಐದು: ಸಾಮಾಜಿಕ ಇರುವಿಕೆ ಹಾಗೂ ಆಗುವಿಕೆಯ ಬಗೆಗಿನ ಸಾಹಿತ್ಯಕ ನಿರೂಪಣೆ ಮತ್ತು ನಿಲುವು ಜೊತೆಗೆ ಇದರಲ್ಲಿ ಸಾಹಿತಿಗಳ ಪಾತ್ರ ಅಷ್ಟೇನೂ ತೃಪ್ತಿಕರವಾಗಿಲ್ಲ.

ಮೇಲಿನ ಐದು ಬಗೆಯ ಸಂವಹನ ಮಾದರಿಗಳನ್ನು ಗಮನಿಸಿದರೆ ಕೊನೆಯದೊಂದನ್ನು ಹೊರತುಪಡಿಸಿ, ಉಳಿದ ನಾಲ್ಕು ತಾತ್ವಿಕವಾಗಿಲ್ಲ ಎಂದು ಗುರುತಿಸಬಹುದು. ಸಂಶೋಧನೆಯಲ್ಲಿ ತಾತ್ವಿಕತೆ ಎಂದರೆ ಅದು ಕಾರಣವನ್ನು ಮಾತ್ರ ಗುರುತಿಸುವ ವಿಧಾನ ಅಲ್ಲ. ಸಂಶೋಧನೆಯಲ್ಲಿ ತಾತ್ವಿಕತೆ ಎಂದರೆ ಅದು ಅದರ ಪರಿಣಾಮವನ್ನು ಗುರುತಿಸುವ ವಿಧಾನ ಮಾತ್ರವಲ್ಲ; ಬದಲಿಗೆ ಅದರ ಒಟ್ಟು ಸ್ವರೂಪದಲ್ಲಿ ನಡೆಯುತ್ತಿರುವ, ಬದಲಾಗುತ್ತಿರುವ ಕ್ರಿಯೆಯನ್ನು ಗುರುತಿಸುವುದು. ಇದನ್ನೇ ಬೇರೆ ಮಾತುಗಳಲ್ಲಿ ಹೇಳುವುದಾದರೆ ಅದು ಪ್ರಕ್ರಿಯೆಯನ್ನು ಗುರುತಿಸುವಂಹದ್ದು. ಅದಕ್ಕೆ ಪದಗಳ ದುಂದುವೆಚ್ಚ ಬೇಕಾಗಿಲ್ಲ; ಅದರ ಗ್ರಹಿಕೆ ಮತ್ತು ಮಂಡನೆ ಸ್ಪಷ್ಟ ಹಾಗೂ ಖಚಿತ. ಭಾಷಿಕ ಆಯಾಮದಿಂದ ಹೇಳುವುದಾದರೆ ಕನಿಷ್ಠ ಪದಗಳಲ್ಲಿ ಗರಿಷ್ಠ ವಿಷಯವನ್ನು ಮಂಡಿಸುವುದು ತಾತ್ವಿಕತೆಯ ಸಾಮಾನ್ಯ ಸ್ವರೂಪ. ಹಾಗಾಗಿ ಯಾರು ತಾತ್ವಿಕವಾಗಿ ಬರೆಯುತ್ತಾರೊ, ಮಾತಾಡುತ್ತಾರೊ ಅವರು ತಮ್ಮ ವಿಚಾರ ಮಂಡನೆಗೆ ಕಡಿಮೆ ಪದಗಳನ್ನು ಬಳಸುತ್ತಾರೆ. ಆದರೆ ಕಡಿಮೆ ಪದಗಳ ಬಳಕೆಯೇ ತಾತ್ವಿಕತೆಯ ಮಂಡನೆಯ ಒಟ್ಟು ಜೀವಾಳ ಅಲ್ಲ.

ಸಾಹಿತ್ಯ ಸಂಶೋಧನೆಯ ತಾತ್ವಿಕತೆ ಎಂಬುದನ್ನು ಬೇರೊಂದು ಆಯಾಮದಲ್ಲಿ ಚರ್ಚೆಗೆ ತೆಗೆದುಕೊಳ್ಳಬಹುದು. ಸಾಹಿತ್ಯ ಸಂಶೋಧನೆಯಲ್ಲಿ ಸಾಹಿತ್ಯ ಪಠ್ಯಗಳೇ ಮುಖ್ಯ ಆಕರಗಳು ಮತ್ತು ದಾರಿಗಳು. ಹೀಗಿರುವುದರಿಂದ ಸಂಶೋಧನೆಯ ತಾತ್ವಿಕತೆ ಎಂಬುದು ಸಾಹಿತ್ಯ ಪಠ್ಯಗಳ ತಾತ್ವಿಕತೆ ಎಂಬ ನೆಲೆಗೆ ಸೂಕ್ಷ್ಮವಾಗಿ ದಾಟುತ್ತದೆ. ಹಾಗಿದ್ದರೆ ಸಾಹಿತ್ಯ ಪಠ್ಯಗಳ ತಾತ್ವಿಕ ಸ್ವರೂಪ ಯಾವುದಾಗಿರಬಹುದು ಎಂಬುದನ್ನು ಚರ್ಚಿಸಬಹುದು. ಸಾಮಾನ್ಯವಾಗಿ ಸಾಹಿತ್ಯ ಕೃತಿಯ ನಿಲುವುಗಳನ್ನೇ ಅದರ ತಾತ್ವಿಕ ನಿಲುವುಗಳು ಎಂದು ಕರೆಯಲಾಗಿದೆ. ಈಗ ಸಮಸ್ಯೆ ಎದುರಾಗುವುದು ಸಾಹಿತ್ಯ ಕೃತಿಯ ನಿಲುವುಗಳು ಎಂದರೆ ಯಾವುವು? ಎಂಬುದು. ಇದನ್ನು ಮೂರು ಆಯಾಮಗಳಲ್ಲಿ ನಿರೂಪಿಸಬಹುದು. ಒಂದು: ಕೃತಿಕಾರರ ನಿಲುವುಗಳೇ ಕೃತಿಯ ತಾತ್ವಿಕ ನಿಲುವುಗಳು. ಎರಡು: ಕೃತಿಯ ನಿಲುವುಗಳೇ ಕೃತಿಯ ತಾತ್ವಿಕ ನಿಲುವುಗಳು. ಮೂರು ಓದುಗ/ಸಂಶೋಧಕರ ನಿಲುವುಗಳೇ ಕೃತಿಯ ತಾತ್ವಿಕ ನಿಲುವುಗಳು.

ಕೃತಿಕಾರರ ನಿಲುವುಗಳೇ ಕೃತಿಯ ತಾತ್ವಿಕ ನಿಲುವುಗಳು ಎಂಬುದನ್ನು ಪರಿಶೀಲನೆ ಮಾಡೋಣ. ಸಾಹಿತ್ಯ ಕೃತಿಗಳನ್ನು ಕುರಿತು ಚರ್ಚಿಸುವಾಗ, ಬರಹಗಾರರ ಹೆಸರನ್ನು ಉಲ್ಲೇಖಿಸಿ, ಇವರು ಹೀಗೆ ಹೇಳುತ್ತಾರೆ ಎಂದು ವಿವರಿಸುವ ಪದ್ಧತಿ ಇದೆ. ಪಂಪನ ಕೃತಿಗಳನ್ನು ಚರ್ಚಿಸುವಾಗ ‘ಪಂಪ ಹೀಗೆ ಹೇಳಿದ್ದಾನೆ’ ಅಂತಲೂ, ಅದೇ ರೀತಿಯಲ್ಲಿ ‘ಬಸವಣ್ಣ ಹೀಗೆ ಹೇಳಿದ್ದಾನೆ’ ಅಂತಲೂ, ‘ಕುವೆಂಪು ಹೀಗೆ ಹೇಳಿದ್ದಾರೆ’, ‘ಬೇಂದ್ರೆ ಹೀಗೆ ಹೇಳಿದ್ದಾರೆ’, ‘ಅಡಿಗರು ಹೀಗೆ ಹೇಳಿದ್ದಾರೆ’ ಈ ಪಟ್ಟಿ ಹೀಗೆ ಮುಂದುವರಿಯುತ್ತದೆ. ಸಮಸ್ಯೆ ಇರುವುದು ಸಾಹಿತ್ಯ ಕೃತಿಯನ್ನು ಓದಿದವರು ಅಥವಾ ಓದುವವರು ತಮ್ಮ ಭಾಷಿಕ ಚೌಕಟ್ಟಿನಲ್ಲಿ ಓದುತ್ತಾರೆ. ಕೃತಿಯ ಭಾಷಿಕ ಚೌಕಟ್ಟು ಓದಿನಲ್ಲಿ ಪರಿವರ್ತನೆಯಾಗುತ್ತದೆ, ಬದಲಾಗುತ್ತದೆ. ಕೃತಿಯ ಭಾಷಿಕ ಶರೀರ ಸಿದ್ಧ ಹೇಳಿಕೆಗಳ ಅಥವಾ ಸುಭಾಷಿತಗಳ ಸಂಕಲನವಲ್ಲ. ಸಾಹಿತ್ಯ ಪಠ್ಯದ ವಸ್ತುಸ್ಥಿತಿ ಹಾಗಿದ್ದರೂ ಕೂಡ ಸಾಹಿತ್ಯವನ್ನು ಸಿದ್ಧ ಹೇಳಿಕೆಗಳ ಅಥವಾ ಸುಭಾಷಿತಗಳ ಸಂಕಲನದಂತೆಯೇ ಓದುವ ಕ್ರಮವಿದೆ. ಈ ಬಗೆಯ ಓದಿಗೆ ಕೃತಿಯ ಸಂಕೀರ್ಣ ಆಯಾಮಗಳಾಗಲಿ, ಓದುಗರ ದೃಷ್ಟಿಕೋನದ ಮೂಲಕ ಸಾಹಿತ್ಯ ಕೃತಿಯೊಂದು ವಿಸ್ತರಿಸುವ ವಿಭಿನ್ನ ಆಯಾಮಗಳಾಗಲಿ ಮುಖ್ಯವಾಗುವುದಿಲ್ಲ. ಅಂದರೆ ಸಾಹಿತ್ಯ ಪಠ್ಯಗಳಲ್ಲಿ ಕೃತಿಕಾರರ ನಿಲುವುಗಳು ನೇರವಾಗಿ ಮತ್ತು ಸಿದ್ಧಮಾದರಿಯಲ್ಲಿ ಇರುತ್ತವೆ, ಅವು ಎಲ್ಲ ಓದುಗಳಿಗೂ ಒಂದೇ ರೀತಿ ಕಾಣುತ್ತವೆ ಎಂಬ ನಂಬಿಕೆ ಈ ಬಗೆಯ ಓದಿನ ಕ್ರಮದಲ್ಲಿದೆ. ಆದರೆ ಸಂಶೋಧನೆಗಾಗಿ ಸಾಹಿತ್ಯವನ್ನು ಓದುವಾಗ ಈ ರೀತಿ ಗ್ರಹಿಸಬಾರದು ಎಂಬುದನ್ನು ಗಮನಿಸಬೇಕು. ‘ಕೃತಿಕಾರರು ಹೀಗೆ ಹೇಳಿದ್ದಾರೆ’ ಎಂದು ಓದುಗರೇ ಹೇಳುತ್ತಿರುವುದೇ ಹೊರತು; ಕೃತಿಕಾರರು ಹಾಗೆ ನೇರವಾಗಿ ಹೇಳುವುದಿಲ್ಲ. ಆದರೆ ಇದಕ್ಕೆ ಅಪವಾದಗಳೆಂದರೆ ವಿಚಾರ, ವಿಮರ್ಶೆ ಮತ್ತು ಕೆಲವು ಗದ್ಯ ಬರಹಗಳು.  ಹಾಗಾಗಿ ಉಳಿದ ಪ್ರಕಾರಗಳಲ್ಲಿ ನೇರವಾಗಿ ಹೇಳುವ ವಿಧಾನದಿಂದ ತಪ್ಪಿಸಿಕೊಳ್ಳುವ ಮೂಲಕವೇ ಸಾಹಿತ್ಯ ಸೃಷ್ಟಿ ಶುರುವಾಗುತ್ತದೆ. ಒಂದು ವೇಳೆ ಬರಹಗಾರರೆಲ್ಲ ತಮ್ಮ ಆಲೋಚನೆಗಳನ್ನೊ, ಚಿಂತನೆಗಳನ್ನೊ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ನೇರವಾಗಿ ದಾಖಲು ಮಾಡುವುದಾಗಿದ್ದರೆ ಸಾಹಿತ್ಯ ಅಭಿವ್ಯಕ್ತಿಗಾಗಿ ಅಷ್ಟೆಲ್ಲ ಮಾಧ್ಯಮಗಳು, ಪ್ರಕಾರಗಳು ಹುಟ್ಟುತ್ತಲೇ ಇರಲಿಲ್ಲ. ಎಲ್ಲವನ್ನೂ ಹೇಳಿಕೆಗಳ ರೂಪದಲ್ಲಿ ಬರೆಯುತ್ತಿದ್ದರು. ಹಾಗಾಗಿ ನೇರವಾಗಿ ಹೇಳುವ ವಿಧಾನದಿಂದ ಬೇರೆಯಾಗುವ ಸಲುವಾಗಿಯೇ ಸಾಹಿತ್ಯ ವಿವಿಧ ಪ್ರಕಾರಗಳು ಹುಟ್ಟಿಕೊಂಡಿವೆ. ಅವುಗಳನ್ನು ಓದುವ ಮೂಲಕ ಓದುಗರು ತಾವು ಅರ್ಥೈಸಿಕೊಂಡಿದ್ದನ್ನು, ತಾವು ಗ್ರಹಿಸಿಕೊಂಡಿದ್ದನ್ನು ಬರಹಗಾರರ ತಲೆಗೆ ಕಟ್ಟಿ ‘ಅವರು ಹೀಗೆ ಹೇಳುತ್ತಾರೆ’, ‘ಇವರು ಹಾಗೆ ಹೇಳುತ್ತಾರೆ’ ಎಂದು ಹೇಳಲಾಗುತ್ತಿದೆ. ಇದು ಸಾಹಿತ್ಯವನ್ನು ಓದುವ ಸಾಂಪ್ರದಾಯಿಕ ಕ್ರಮ. ಕೃತಿಯ ತಾತ್ವಿಕ ನಿಲುವುಗಳು ಕೃತಿಕಾರರವೇ ಎಂದು ಈ ಓದು ತೀರ್ಮಾನಿಸುತ್ತದೆ.

ಕೃತಿಕಾರರ ಧಾರ್ಮಿಕ, ಸಾಮಾಜಿಕ, ಆರ್ಥಿಕ, ಚಾರಿತ್ರಿಕ ಹಿನ್ನೆಲೆಗಳನ್ನು ಸಂಗ್ರಹಿಸಿಕೊಂಡು, ಈ ಸಂಗತಿಗಳ ದಟ್ಟ ಪ್ರಭಾವದಿಂದಲೇ ಕೃತಿಕಾರರು ಸಾಹಿತ್ಯ ರಚನೆ ಮಾಡಿದ್ದಾರೆ. ಆ ಹಿನ್ನೆಲೆಗಳ ಸಂಗತಿಗಳು ಕೃತಿಕಾರರ ಆಶಯಗಳಾಗಿ, ನಿಲುವುಗಳಾಗಿ ಸಾಹಿತ್ಯ ಕೃತಿಯಲ್ಲಿ ಮೈದಾಳಿವೆ ಎಂದು ತೀರ್ಮಾನಿಸಲಾಗುತ್ತದೆ. ಕೃತಿಕಾರರು ಚಾರಿತ್ರಿಕ ಸಂಗತಿಗಳ ಉಪ ಉತ್ಪನ್ನ. ಕೃತಿಗಳು ಕೃತಿಕಾರರ ಅನುಭವದ ಉತ್ಪನ್ನ ಎಂಬ ಸರಳ ಸಮೀಕರಣವನ್ನು ಈ ಬಗೆಯ ಓದಿನ ಕ್ರಮ ಒಪ್ಪುತ್ತದೆ. ಆದರೆ ಎಲ್ಲಾ ಕೃತಿಗಳನ್ನು ಈ ಚೌಕಟ್ಟಿನಲ್ಲಿಯೇ ಓದುವ ಆಗುವುದಿಲ್ಲ. ಕೆಲವು ಕೃತಿಗಳು ತಾವು ಹುಟ್ಟಿದ ದೇಶ, ಭಾಷೆ, ಕಾಲಗಳನ್ನು ಮೀರಿ ಬರುತ್ತವೆ. ಆಗ ಆ ಕೃತಿಗಳನ್ನು ಬೇರೆ ರೀತಿಯಲ್ಲಿ ಓದಬೇಕಾಗುತ್ತದೆ. ಅಲ್ಲಿ ಕೃತಿಕಾರರ ನಿಲುವುಗಳೇ ಕೃತಿಯ ತಾತ್ವಿಕ ನಿಲುವುಗಳು ಎಂದು ಹೇಳಲು ಕಷ್ಟವಾಗುತ್ತದೆ.

ಇದು ಮೇಲಿನ ಚರ್ಚೆಯ ನೇರ ಮುಂದುವರಿಕೆ. ಸಾಹಿತ್ಯ ಕೃತಿಗಳಲ್ಲಿ ಆಶಯಗಳು, ನಿಲುವುಗಳು ಸಿದ್ಧಮಾದರಿಯಲ್ಲಿ ಇರುತ್ತವೆ ಎಂದು ತಿಳಿಯುವುದು ಒಂದು ಕ್ರಮ. ಸಾಹಿತ್ಯದ ಸಂಕೀರ್ಣವಾದ ಭಾರ್ಷಿಕ ಶರೀರವನ್ನು ಅತ್ಯಂತ ಸರಳೀಕರಿಸಿ, ಅದನ್ನು ಸಾರಾಂಶ ರೂಪಕ್ಕೆ, ಸಾರಸಂಗ್ರಹದ ರೂಪಕ್ಕೆ ಇಲ್ಲವೆ ಕಥೆಯ ರೂಪಕ್ಕೆ ಪರಿವರ್ತಿಸುವುದು ಇಲ್ಲಿಯ ವಿಧಾನ. ಸಾಹಿತ್ಯ ಕೃತಿಗಳಲ್ಲಿ ಇವೆ ಎಂದು ಭಾವಿಸುವ ಮತ್ತು ತೀರ್ಮಾನಿಸುವ ಆ ನಿಲುವುಗಳು ಕೃತಿ ಹುಟ್ಟಿದ ಸಾಮಾಜಿಕ ಸಂದರ್ಭಧ ಫಲ ಎಂದು ತಿಳಿಯಲಾಗುವುದು. ಹಾಗಾಗಿ ಕೃತಿಯ ನಿಲುವುಗಳು ಸ್ಪಷ್ಟವಾಗಬೇಕಾದರೆ ಕೃತಿ ಹುಟ್ಟಿದ ಸಾಮಾಜಿಕ ಸಂದರ್ಭವನ್ನೂ ಹಾಗೂ ಕೃತಿಕಾರರ ಹಿನ್ನೆಲೆಗಳನ್ನೂ ಒಟ್ಟೊಟ್ಟಿಗೇ ಪರಿಗಣಿಸಬೇಕು ಎಂದು ತಿಳಿಯಲಾಗುವುದು. ಕೃತಿಯಲ್ಲಿ ಮೈದಾಳಿರುವ ನಿಲುವುಗಳು ಕೃತಿ ಹುಟ್ಟಿದ ಕಾಲದ, ಯುಗದ ಮುಖ್ಯ ನಿಲುವುಗಳ ಮತ್ತೊಂದು ರೂಪ ಎಂದು ತೀರ್ಮಾನಿಸಲಾಗುವುದು. ಹಾಗಾಗಿ ಕೃತಿಗಳು ಹುಟ್ಟುವಾಗ ಆಯಾ ಕಾಲದ ಸಮಾಜದ ನಿಜಸ್ಥಿತಿಯನ್ನು ಬಿಂಬಿಸುತ್ತವೆ ಎಂದು ತಿಳಿಯಲಾಗುವುದು ಹಾಗೂ ಬಿಂಬಿಸಬೇಕು ಎಂದು ಅಪೇಕ್ಷಿಸಲಾಗುವುದು. ಅಥವಾ ಈ ಅಪೇಕ್ಷೆಯಿಂದಲೇ ಓದಲಾಗುವುದು.

ಸಾಹಿತ್ಯ ಕೃತಿಗಳಲ್ಲಿ ತಾತ್ವಿಕತೆಯು ಸಿದ್ಧರೂಪದಲ್ಲಿ ಇರುವುದಿಲ್ಲ. ಅದು ಕರ್ತೃಜನ್ಯ ಸಂಗತಿ ಅಲ್ಲ; ಜೊತೆಗೆ ಕೃತಿಜನ್ಯ ಸಂಗತಿಯೂ ಅಲ್ಲ ಎಂದು ತಿಳಿಯುವ ಮತ್ತೊಂದು ಓದಿನ ಕ್ರಮವಿದೆ. ಹಾಗಿದ್ದರೆ ಸಾಹಿತ್ಯ ಕೃತಿಗಳಲ್ಲಿ ತಾತ್ವಿಕತೆ ಎಂಬುದು ಇರುವುದಿಲ್ಲವೆ ಎಂದರೆ, ಸಾಹಿತ್ಯ ಕೃತಿಗಳಲ್ಲಿ ತಾತ್ವಿಕತೆ ಎಂಬುದು ಇರುವ ಸಂಗತಿಯಲ್ಲ; ಓದುಗರು ಕಾಣುವ ಮತ್ತು ಕಂಡುಕೊಳ್ಳುವ ಸಂಗತಿ ಎಂಬುದು ಇಲ್ಲಿಯ ಗ್ಹರಿಕೆ. ಹಾಗಾಗಿಯೇ ಒಂದು ಕೃತಿಯನ್ನು ಹಲವರು ಓದಿದಾಗ ಹಲವು ಭಿನ್ನ ತಾತ್ವಿಕತೆಗಳು ಕಾಣುತ್ತವೆ. ಹಾಗೆಯೇ ಒಬ್ಬರೇ ಓದುಗರು ಒಂದು ಕೃತಿಯನ್ನು ಬೇರೆ ಬೇರೆ ಉದ್ದೇಶಗಳಿಗೆ ಮತ್ತು ಬೇರೆ ಬೇರೆ ಸಂದರ್ಭಗಳಲ್ಲಿ ಓದಿದಾಗಲೂ ಭಿನ್ನ ತಾತ್ವಿಕತೆಗಳು ಕಾಣುತ್ತವೆ. ಸಾಹಿತ್ಯ ಕೃತಿಗಳಲ್ಲಿ ಮೈದಾಳುವ ತಾತ್ವಿಕತೆಗಳು ಓದಿನ ಮೂಲಕ, ಅಧ್ಯಯನದ ಮೂಲಕ ರೂಪುಗೊಳ್ಳುವ ಸಂಗತಿಗಳು ಎಂಬುದು ಈ ಓದಿನ ಸಾಮಾನ್ಯ ತಿಳುವಳಿಕೆ.

ಸಾಹಿತ್ಯ ಸಂಶೋಧನೆಯಲ್ಲಿ ತಾತ್ವಿಕತೆ ಎಂಬುದು, ಆಯಾ ಸಂಶೋಧಕರು ತಮ್ಮ ಆಯ್ಕೆಯ ವಿಷಯಗಳಿಗೆ ಅನುಗುಣವಾಗಿ ರೂಪಿಸಿಕೊಳ್ಳುವ ಚೌಕಟ್ಟು. ಜೊತೆಗೆ ಸಾಹಿತ್ಯ ಪಠ್ಯಗಳನ್ನು ಓದುವ ಕ್ರಮ. ಸಂಶೋಧಕರ ಧೋರಣೆಗೆ ಅನುಗುಣವಾಗಿ ಇವೆರಡು ರೂಪುಗೊಳ್ಳುತ್ತವೆ. ಸಾಹಿತ್ಯ ಸಂಶೋಧನೆಯಲ್ಲಿ ತಾತ್ವಿಕತೆ ಎಂಬುದು ಮೊದಲೇ ಸ್ಥಾಯಿಯಾಗಿ ಇರುವಂತಹದ್ದಲ್ಲ. ಅದು ನಿರಂತರವಾಗಿ ರೂಪುಗೊಳ್ಳುತ್ತ ಹೋಗುವಂತದ್ದು.