ಸಂಶೋಧನೆಯ ತಾತ್ವಿಕತೆ ಎಂಬುದನ್ನು ಹೀಗೂ ವಿವರಿಸಿಕೊಳ್ಳಬಹುದು. ಸಂಶೋಧನೆಗೆ ತತ್ವಶಾಸ್ತ್ರದ ತಿಳುವಳಿಕೆಯ ಅಗತ್ಯವಿದೆಯೊ ಇಲ್ಲವೊ? ಒಂದು ವೇಳೆ ತತ್ವಶಾಸ್ತ್ರದ ಅಗತ್ಯವಿದೆ ಎನ್ನುವುದಾದರೆ ಯಾವ ಕಾರಣಕ್ಕೆ ಅದರ ಅಗತ್ಯವಿದೆ? ಎಂಬಂತೆ ಇದು ವಿಸ್ತರಿಸಿಕೊಳ್ಳುತ್ತದೆ. ಅಲ್ಲದೆ ಸಮಶೋಧನೆ ಎಂಬ ಬೌದ್ಧಿಕ ಚಟುವಟಿಕೆಯಲ್ಲಿ ತತ್ವಶಾಸ್ತ್ರದ ತಿಳುವಳಿಕೆಯು ಒಂದು ಪೂರ್ವೋಪಾದಿಯಾಗಿ ಇರುತ್ತದೊ ಅಥವಾ ಸಂಶೋಧನೆಗಳ ವಿಷಯ ಹಾಗೂ ಉದ್ದೇಶ ಮತ್ತು ನಿರ್ವಹಣೆಗೆ ಅನುಗುಣವಾಗಿ ಅದು ರೂಪು ಪಡೆಯುತ್ತಾ ಸಾಗುತ್ತದೊ ಎಂಬ ಪ್ರಶ್ನೆಯ ಇನ್ನೊಂದು ಆಯಾಮ ಕೂಡ ಚರ್ಚೆಗೆ ಬರುತ್ತದೆ.

ಸಂಶೋಧನೆ ಎಂಬುದನ್ನು ಹೇಗೆ ವಿವರಿಸಿಕೊಳ್ಳುತ್ತೇವೆ ಎಂಬುದನ್ನು ಅವಲಂಬಿಸಿ, ಸಂಶೋಧನೆಗೆ ತತ್ವಶಾಸ್ತ್ರದ ಅಗತ್ಯವಿದೆಯೊ, ಇಲ್ಲವೊ ಎಂಬ ಪ್ರಶ್ನೆ ನಿರ್ಧಾರವಾಗುತ್ತದೆ. ಸಂಶೋಧನೆಯ ಮಾತಿರಲಿ, ಸಾಮಾನ್ಯ ಬೌದ್ಧಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಕೂಡ ತತ್ವಶಾಸ್ತ್ರದ ಅಗತ್ಯವಿದೆ. ಇದನ್ನು ಹೀಗೂ ಹೇಳಬಹುದು. ಸಂಶೋಧನೆಯ ಮಾತಿರಲಿ, ಸಾಮಾನ್ಯ ಬೌದ್ಧಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳ ಹಿಂದೆ ಕೂಡ ತತ್ವಶಾಸ್ತ್ರ ಕ್ರಿಯಾಶೀಲವಾಗಿರುತ್ತದೆ. ಹಾಗಿದ್ದರೆ ಅಂತಹ ಚಟುವಟಿಕೆಯಲ್ಲಿ ಭಾಗವಹಿಸುವವರು ತತ್ವಶಾಸ್ತ್ರವನ್ನು ಅಧ್ಯಯನ ಮಾಡಿರುತ್ತಾರೆಯೆ ಎಂದು ಕೇಳಿದರೆ ಉತ್ತರ ಇಲ್ಲ ಎಂಬುದೇ ಆಗಿದೆ. ಹಾಗಿದ್ದರೆ ಒಂದು ಜ್ಞಾನ ಗೊತ್ತಿಲ್ಲದೆಯೂ ಅದನ್ನು ಬಳಸಲು ಸಾಧ್ಯವೇ ಎಂದರೆ ಬಹುಶಃ ಅದರ ಸೂಕ್ಷ್ಮ ಸಾಧ್ಯತೆಗಳ ನೆಲೆಯಲ್ಲಿ ಸಾಧ್ಯ ಎಂದೇ ಹೇಳಬೇಕಾಗುತ್ತದೆ. ತತ್ವಶಾಸ್ತ್ರ ಎಂದರೆ ಅತ್ಯಂತ ಸ್ಥೂಲ ಅರ್ಥದಲ್ಲಿ ಜಗತ್ತನ್ನು ನೋಡುವ ಮತ್ತು ಅದನ್ನು ಬದಲಾಯಿಸುವ ದೃಷ್ಟಿಕೋನ. ಈ ದೃಷ್ಟಿಕೋನವನ್ನು ಬೇರೆ ಬೇರೆ ಹಂತದ ಬೌದ್ಧಿಕ ತಿಳುವಳಿಕೆಯುಳ್ಳವರು, ಭಿನ್ನ ಭಿನ್ನ ಮನೋಧರ್ಮದವರು ಬೇರೆ ಬೇರೆ ಸ್ತರಗಳಲ್ಲಿ ಹೊಂದಿರುತ್ತಾರೆ. ಜಗತ್ತನ್ನು ನೋಡುವ ದೃಷ್ಟಿಕೋನವು ಒಂದು ಕಡೆ ಪ್ರಜ್ಞಾಪೂರ್ವಕವಾದ ಪ್ರಯತ್ನ, ಅಧ್ಯಯನ, ಚಿಂತನೆಗಳಿಂದ ಬರುತ್ತದೆ. ಜೊತೆಗೆ ಸಮಾಜದ ಜೀವಿಗಳಿಗೆ ಸಾಮಾಜಿಕ ಸಂಬಂಧಗಳ ಕಾರಣದಿಂದ ಮತ್ತು ವಿವಿಧ ಬಗೆಯ ಉತ್ಪಾದನೆಗಳಲ್ಲಿ ತೊಡಗಿರುವ ಕಾರಣದಿಂದಲೂ ಬರುತ್ತದೆ. ಇದು ಪರೋಕ್ಷ ವಿಧಾನದ್ದು ಮತ್ತು ಅಪ್ರಜ್ಞಾಪೂರ್ವಕ ವಿಧಾನದ್ದು. ಅಂದರೆ ತಾತ್ವಿಕ ತಿಳುವಳಿಕೆ ಎಂಬುದು ನೇರ ಅನುಭವ ಮತ್ತು ಪರೋಕ್ಷ ಅನುಭವಗಳ ಮೂಲಕ ಬರುತ್ತದೆ ಎಂದು ಹೇಳಬಹುದು.

ಸಮಾಜದ ವಿವಿಧ ಉತ್ಪಾದನ ಚಟುವಟಿಕೆಗಳನ್ನು ಮತ್ತು ಅಲ್ಲಿಯ ಮಾನವ ಸಂಬಂಧಗಳನ್ನು ಗಮನಿಸಿದರೆ ಗೊತ್ತಾಗುತ್ತದೆ. ಊಳಿಗಮಾನ್ಯಶಾಹಿ ಮತ್ತು ಜಮೀನ್ದಾರಿ ಸಮಾಜದಲ್ಲಿ ಭೂಮಾಲೀಕರನ್ನು ದುಡಿಯುವ ಜನರು ದೇವರಂತೆ ಗ್ರಹಿಸುತ್ತಾರೆ. ಭೂಮಾಲಿಕರ ಎಲ್ಲ ಚಟುವಟಿಕೆ, ತಿಳುವಳಿಕೆ, ವರ್ತನೆ, ಸ್ವಭಾವಗಳನ್ನು ದುಡಿಯುವ ಜನರು ಕೊಂಡಾಡುತ್ತಾರೆ. ಇದನ್ನು ಅವರ ಮುಗ್ಧತೆ ಎಂತಲೊ, ಅಸಹಾಯಕತೆ ಎಂತಲೊ, ಜಾಗೃತಗೊಳ್ಳದ ಆಧುನಿಕ ಪೂರ್ವ ಸಾಮಾಜಿಕ ಸ್ಥಿತಿ ಎಂತಲೋ ವಿವರಿಸಬಹುದು. ಅದು ಏನೇ ಇರಲಿ. ಆದರೆ ಭೂಮಾಲಿಕರ ಬಗೆಗೆ ದುಡಿಯುವ ಜನರಿಗಿರುವ ಪ್ರೀತಿ, ಗೌರವ, ಶ್ರದ್ಧೆ, ಭಯ, ಭಕ್ತಿ ಇವೆಲ್ಲವೂ ಆ ಉತ್ಪಾದನ ಸಂಬಂಧಗಳ ನಡುವಿನ ತತ್ವಶಾಸ್ತ್ರದ ಸಾಮಾನ್ಯ ಫಲಗಳೇ ಆಗಿವೆ. ದುಡಿಮೆ ಮಾಡಲು ಭೂಮಿ ಇಲ್ಲದೆ, ಉಳುಮೆ ಮಾಡಲು ಉಪಕರಣಗಳಿಲ್ಲದೆ ಇವುಗಳಿಗೆ ಭೂಮಾಲಿಕರನ್ನು ಅವಲಂಬಿಸಿರುವ ಹಾಗೆ ತಿಳುವಳಿಕೆಗೂ ಅವರನ್ನೇ ಅವಲಂಬಿಸಿರುವ ದೈನೇಸಿ ಸ್ಥಿತಿ ಅಲ್ಲಿಯ ಉತ್ಪಾದನ ಸಂಬಂಧಗಳದ್ದು.  ಒಡೆಯರು ಆಳುಗಳನ್ನು ನೋಡುವ ದೃಷ್ಟಿಕೋನ ಮತ್ತು ಆಳುಗಳು ಒಡೆಯರನ್ನು ನೋಡುವ ದೃಷ್ಟಿಕೋನ ಎರಡೂ ಪರಸ್ಪರ ಅವಲಂಬಿಗಳು. ಒಡೆಯರ ಮನೆಯಲ್ಲಿ ದುಡಿಯುವುದಕ್ಕಾಗಿಯೇ ನಾವಿರುವುದು ಎಂಬುದು ಒಂದು ದೃಷ್ಟಿಕೋನವಾದರೆ; ಆಳುಗಳಿಂದ ದುಡಿಸಿಕೊಳ್ಳುವುದಕ್ಕಾಗಿಯೇ ನಾವಿರುವುದು ಎಂಬುದು ಮತ್ತೊಂದು ದೃಷ್ಟಿಕೋನ. ಈ ದೃಷ್ಟಿಕೋನಗಳು ಎಲ್ಲಾ ಕಾಲಕ್ಕೂ ಜಡವಾಗಿ ಉಳಿಯದೆ ಬದಲಾಗುತ್ತಲೂ ಇರುತ್ತವೆ.

ಸಂಶೋಧನೆಯ ಬೌದ್ಧಿಕ ಚಟುವಟಿಕೆಯಲ್ಲೂ ತತ್ವಶಾಸ್ತ್ರದ ದೃಷ್ಟಿಕೋನಗಳು ಅಪ್ರಜ್ಞಾಪೂರ್ವಕವಾಗಿ ಕ್ರಿಯಾಶೀಲವಾಗಿರುತ್ತವೆ. ಸಂಶೋಧಕರು ಇದನ್ನು ಪ್ರಜ್ಞಾ ಪೂರ್ವಕವಾದ ಮತ್ತು ಪ್ರಯತ್ನಪೂರ್ವಕವಾದ ನೆಲೆಯಲ್ಲಿ ಪಡೆಯಬೇಕಿಲ್ಲ. ಸಂಶೋಧಕರ ಪ್ರಜ್ಞಾಪೂರ್ವಕ ಆಯ್ಕೆಯ ಆಚೆಗೂ ದೃಷ್ಟಿಕೋನಗಳು ಸಂಶೋಧನೆಯಲ್ಲಿ ಕೆಲಸ ಮಾಡುತ್ತವೆ. ಸಂಶೋಧನೆ ಎಂಬುದನ್ನು ಲೋಕ ಚಟುವಟಿಕೆಗಳ ಆಗುವಿಕೆಯ ಪ್ರಕ್ರಿಯೆಯನ್ನು ಅರಿಯುವ ಒಂದು ಸಾಮಾನ್ಯ ಜ್ಞಾನಶಿಸ್ತು ಎಂದು ವಿವರಿಸಿಕೊಂಡರೆ ಇಲ್ಲಿಯ ಚರ್ಚೆಗೆ ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಸಂಶೋಧನೆಗಳು ಪ್ರಜ್ಞಾಪೂರ್ವಕವಾಗಿ ಮತ್ತು ಪ್ರಯತ್ನಪೂರ್ವಕವಾಗಿ ತತ್ವಶಾಸ್ತ್ರದ ನೆರವನ್ನು ಪಡೆಯುವುದು ಒಂದು ಬಗೆ. ಇದು ಸಂಶೋಧಕರ ಅಧ್ಯಯನ ಮತ್ತು ಪರಿಶ್ರಮವನ್ನು ಬೇಡುತ್ತದೆ. ಇಲ್ಲದಿದ್ದರೆ ಸಂಶೋಧನೆ ಮಾಡುವಾಗ ತಾತ್ವಿಕತೆಯ ಬಗ್ಗೆ ನಿರ್ದಿಷ್ಟವಾಗಿ ಎಚ್ಚರವಹಿಸದೆ ಇದ್ದರೆ ಸಮಾಜದ ಸ್ಥಾಪಿತ ಗ್ರಹಿಕೆಗಳು, ಗ್ರಹೀತ ನಿಲುವುಗಳು ಸಂಶೋಧನೆಯನ್ನು ನಡೆಸಿಬಿಡುತ್ತವೆ. ಇದು ಸಂಶೋಧಕರ ಗಮನಕ್ಕೆ ಬರುವುದೇ ಇಲ್ಲ. ಹೀಗೆ ಸಮಾಜದ ಒಪ್ಪಿತ, ಸ್ಥಾಪಿತ ಮತ್ತು ಗೃಹೀತ ಗ್ರಹಿಕೆಗಳು ಆಳುವ ವರ್ಗದ ಪರವಾದ ಹಾಗೂ ಯಜಮಾನಿಕೆಯ ಆಲೋಚನೆ, ಹಿತಾಸಕ್ತಿ ಮತ್ತು ತೀರ್ಮಾನಗಳನ್ನು ಹೊಂದಿದ್ದು ಸಂಶೋಧನೆಗಳಲ್ಲಿ ಅವು ಸಂಶೋಧಕರ ಆಯ್ಕೆ ಇಲ್ಲದೆ ಕ್ರಿಯಾಶೀಲವಾಗುತ್ತವೆ. ಅಂತಹ ಸಂಶೋಧನೆಗಳಲ್ಲಿ ಸಂಶೋಧಕರ ಸ್ವತಂತ್ರ ಆಲೋಚನೆ ಎಂಬುದು ಇರುವುದಿಲ್ಲ. ಇಂತಹ ಸಂಶೋಧನೆಗಳೂ ನಡೆಯುತ್ತಿವೆ.

ಕುಟುಂಬ, ಸಮಾಜ, ವ್ಯವಸ್ಥೆ ಮತ್ತು ದೇಶವನ್ನು ಹೇಗೆ ನೋಡಬೇಕು, ಹೇಗೆ ಅರ್ಥಮಾಡಿಕೊಳ್ಳಬೇಕು ಮತ್ತು ಅವುಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಬಗ್ಗೆ ಸಮಾಜದಲ್ಲಿ ಔಪಚಾರಿಕವಾಗಿ ಮತ್ತು ಅನೌಪಚಾರಿಕವಾಗಿ ಶಿಕ್ಷಣ ಸಿಗುತ್ತದೆ. ಸಂಶೋಧಕರನ್ನು ‘ನೀವು ಸಂಶೋಧನೆ ಮಾಡುತ್ತಿರುವ ವಿಷಯದಲ್ಲಿ ಯಾವ ಸಮಸ್ಯೆಗಳಿವೆ ಎಂತಲೊ, ನೀವು ಯಾವ ಪ್ರಶ್ನೆಗಳನ್ನು ಅಥವಾ ಸಮಸ್ಯೆಗಳನ್ನು ನಿಮ್ಮ ಸಂಶೋಧನೆಯಲ್ಲಿ ಎತ್ತುತ್ತೀರಿ?’ ಎಂದು ಕೇಳುವ ಪರಿಪಾಠವಿದೆ. ಅದಕ್ಕೆ ಸಂಶೋಧಕರು ‘ಸಂಶೋಧನೆ ಮಾಡುತ್ತಿರುವ ವಿಷಯದಲ್ಲಿ ಯಾವುದೆ ಸಮಸ್ಯೆ ಇಲ್ಲ’ ಎಂದು ಸಲೀಸಾಗಿ ಹೇಳುತ್ತಾರೆ. ‘ಹಾಗಿದ್ದರೆ ಸಂಶೋಧನೆ ಯಾಕೆ ಮಾಡುತ್ತೀರಿ?’ ಎಂದು ಕೇಳಿದರೆ ಅದಕ್ಕೆ ಪ್ರತಿಕ್ರಿಯೆ ಕೊಡುವುದಿಲ್ಲ. ಸಂಶೋಧಕರು ಹಾಗೇಕೆ ಹೇಳುತ್ತಾರೆ ಎಂಬ ಬಗ್ಗೆ ಆಲೋಚನೆ ಮಾಡಬೇಕು. ಅವರು ಸಮಾಜ, ವ್ಯವಸ್ಥೆ, ಮತ್ತು ದೇಶವನ್ನು ಹೇಗೆ ನೋಡುತ್ತಾರೊ, ಅದೇ ರೀತಿಯಲ್ಲಿ ಸಂಶೋಧನ ವಿಷಯವನ್ನೂ ನೋಡುತ್ತಾರೆ. ಸಮಾಜದಲ್ಲಿ ಸಮಸ್ಯೆಗಳಿವೆ, ಅವುಗಳ ಚೂಲಮೂಲಗಳನ್ನು ತಿಳಿಯಬೇಕು, ಆ ಸಮಸ್ಯೆಗಳ ಸ್ವರೂಪವನ್ನು ಬದಲಾಯಿಸಲು ಆಲೋಚನೆ ಮಾಡಬೇಕು ಎಂಬುದನ್ನು ಔಪಚಾರಿಕ ಶಿಕ್ಷಣದಲ್ಲಿ ಕಲಿಸಿರುವುದಿಲ್ಲ. ಜೊತೆಗೆ ವಿದ್ಯಾರ್ಥಿಗಳೂ ಕೂಡ ಸಾಮಾಜಿಕ ಹಾಗೂ ರಾಜಕೀಯ ಎಚ್ಚರ ಎಂಬುದನ್ನು ತುಂಬ ದುರ್ಬಲವಾಗಿ ತೆಗೆದುಕೊಂಡಿರುತ್ತಾರೆ. ಅವರು ಘಟನೆಗಳನ್ನು, ಸಮಾಜವನ್ನು ನೋಡುವಾಗ ಸಮಸ್ಯೆಗಳನ್ನು ಗುರುತಿಸುವ ಆಯಾಮದಿಂದ ನೋಡುವುದಿಲ್ಲ. ಹೀಗೆ ನೋಡದೆ ಇರುವುದರಿಂದ ಘಟನೆಗಳನ್ನು ಮತ್ತು ಸಮಾಜವನ್ನು ವರದಿ ಮಾಡುವವರ ರೀತಿಯಲ್ಲಿ ಗ್ರಹಿಸುತ್ತಾರೆ. ಅವರ ಈ ಗ್ರಹಿಕೆ ಅಲ್ಲಾಡದೆ ಗಟ್ಟಿಯಾಗಿರುತ್ತದೆ. ಅಂತವರಿಗೆ ‘ಸಂಶೋಧನ ವಿಷಯದಲ್ಲಿ ಯಾವ ಸಮಸ್ಯೆಗಳಿವೆ’ ಎಂದು ಕೇಳಿದಾಗ ತಬ್ಬಿಬ್ಬಾಗುತ್ತದೆ.

ಹಾಗಾಗಿ ಸಂಶೋಧಕರು ಎಲ್ಲವನ್ನೂ ಪ್ರಶ್ನೆಯ ರೂಪದಲ್ಲಿ, ಭಿನ್ನಮತದ ರೂಪದಲ್ಲಿ, ಸಂದೇಹದಿಂದ, ಅನುಮಾನದಿಂದ ನೋಡಬೇಕಾಗುತ್ತದೆ. ಯಾವುದೇ ಸಂಶೋಧನೆಯಲ್ಲಿ ಆಯ್ಕೆಮಾಡಿಕೊಂಡ ವಿಷಯವನ್ನು ಕುರಿತು ಸಂದೇಹಗಳನ್ನು, ಭಿನ್ನಮತಗಳನ್ನು ತಾಳಬೇಕಾದುದು ಆ ಸಂಶೋಧನೆಯ ಪ್ರಾಥಮಿಕ ಗುಣ. ಈ ಸಂದೇಹ ಮತ್ತು ಭಿನ್ನಮತಗಳನ್ನು ತಾಳದಿದ್ದರೆ ಸಂಶೋಧನೆ ಹುಟ್ಟುವುದೇ ಇಲ್ಲ. ಉದಾಹರಣೆಗೆ ‘ಆಧುನಿಕ ಕನ್ನಡ ಕಾವ್ಯದಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆ’ ಎಂಬ ವಿಷಯವನ್ನು ಸಂಶೋಧನೆಗೆ ಆಯ್ಕೆ ಮಾಡಿಕೊಂಡರು ಎಂದು ತಿಳಿಯೋಣ. ಆ ವಿಷಯದಲ್ಲಿ ಸಂಶೋಧಕರು ಮಾಡಬೇಕಾದ ಮೊದಲ ಕೆಲಸ ‘ಸ್ವಾತಂತ್ರ್ಯ’ ಎಂಬುದರ ಸ್ವರೂಪ ಯಾವುದು? ಎಂಬುದನ್ನು ತಾತ್ವಿಕವಾಗಿ ಚರ್ಚಿಸುವುದು. ಸಮಾಜದಲ್ಲಿ ಎಂತಹವರಿಗೆ ಯಾವ ಬಗೆಯ ಸ್ವಾತಂತ್ರ್ಯವಿದೆ ಮತ್ತು ಎಂತಹವರಿಗೆ ಯಾವ ಬಗೆಯ ಸ್ವಾತಂತ್ರ್ಯವಿಲ್ಲ ಎಂಬ ಪ್ರಶ್ನೆಯನ್ನು ತಾತ್ವಿಕವಾಗಿ ನಿರ್ವಹಿಸಬೇಕಾಗುತ್ತದೆ. ಈ ಕೆಲಸವನ್ನು ಮಾಡದೆ ಹೋದರೆ ಕಾವ್ಯಗಳಲ್ಲಿ ಅಭಿವ್ಯಕ್ತಿಯಾಗಿರುವ ಇಲ್ಲವೆ ಅಭಿವ್ಯಕ್ತಿಯಾಗದೆ ಇರುವ ಸ್ವಾತಂತ್ರ್ಯದ ಸ್ವರೂಪ ತಿಳಿಯುವುದಿಲ್ಲ.