ಸಾಮಾನ್ಯವಾಗಿ ಸಂಶೋಧನೆಯ ಚಟುವಟಿಕೆಯಲ್ಲಿ ‘ತಾತ್ವಿಕತೆ’ ಎಂಬ ಪದವನ್ನು ಮೇಲಿಂದ ಮೇಲೆ ಬಳಸಲಾಗುತ್ತಿದೆ. ಸಂಶೋಧನೆ ಹಾಗೂ ವೈಚಾರಿಕ ವಲಯದಲ್ಲಿ ಕೆಲವು ಪದಗಳನ್ನು ಬಹಳ ಸಡಿಲವಾಗಿ ಬಳಸುವುದುಂಟು. ಹೀಗೆ ಸಡಿಲವಾಗಿ ಬಳಸುತ್ತಿರುವುದರಿಂದ ಅವುಗಳಲ್ಲಿ ಯಾವುದು ಪರಿಕಲ್ಪನೆ, ಯಾವುದು ಅಪಕಲ್ಪನೆ ಎಂಬುದನ್ನು ಬೇರ್ಪಡಿಸಿ ನೋಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಕಲ್ಪನೆಯನ್ನು ಅಪಕಲ್ಪನೆಯನ್ನಾಗಿಯೂ, ಅಪಕಲ್ಪನೆಯನ್ನು ಪರಿಕಲ್ಪನೆಯನ್ನಾಗಿಯೂ ಗೊಂದಲಗೊಳಿಸಿ ಬಳಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ‘ತಾತ್ವಿಕತೆ’ ಎಂಬ ಪರಿಕಲ್ಪನೆಯನ್ನು ಅಪಕಲ್ಪನೆಯಾಗಲು ಬಿಡದೆ ಅದರ ಚರ್ಚೆಯನ್ನು ನಡೆಸಬೇಕಾಗಿದೆ. ಕನ್ನಡ ಸಾಹಿತ್ಯ ಸಂಶೋಧನೆಯಲ್ಲಿ ‘ತಾತ್ವಿಕತೆ’ ಎಂಬುದನ್ನು ‘ಸೈದ್ಧಾಂತಿಕತೆ’, ‘ಧೋರಣೆ’ ಮತ್ತು ‘ವಿಧಾನ’ ಇವುಗಳಿಗೆ ಸಂವಾದಿಯಾಗಿ ಬಳಸಲಾಗುತ್ತಿದೆ. ಈ ತಾತ್ವಿಕ ಎಂಬುದನ್ನು ಇಂಗ್ಲಿಶ್‌ನಲ್ಲಿ ಥಿಯಾರ್ಟಿಕಲ್ ಎನ್ನುತ್ತಾರೆ. ಈ ಥಿಯಾರ್ಟಿಕಲ್ ಎನ್ನುವುದು ಥಿಯರಿಯಿಂದ ಬಂದಿದೆ. ಥಿಯರಿ ಎಂದರೆ ಕನ್ನಡದಲ್ಲಿ ತತ್ವ ಎಂದಾಗುತ್ತದೆ. ತತ್ವ ಎಂಬುದು ಮತ್ತೆ ಎರಡು ಮೂರು ಬಗೆಗಳಲ್ಲಿ ಬಳಕೆಯಾಗುತ್ತಿದೆ. ತತ್ವಗಳು ಎಂಬುದನ್ನು ನೋಡಬಹುದು. ಶಿಕ್ಷಣದ ತತ್ವಗಳು, ಸಂಸಾರದ ತತ್ವಗಳು, ಭಕ್ತಿಯ ತತ್ವಗಳು, ಪ್ರಮಾಣದ ತತ್ವಗಳು ಇತ್ಯಾದಿ. ಇಲ್ಲೆಲ್ಲ ತತ್ವ ಎಂಬುದನ್ನು ಮೇಲ್ಮಟ್ಟದ ಲಕ್ಷಣಗಳು ಎಂಬ ಅರ್ಥದಲ್ಲಿ ಬಳಸಲಾಗುತ್ತಿದೆ. ಇನ್ನೊಂದು ಉದಾಹರಣೆ ಗಮನಿಸೋಣ. ಬುದ್ಧನ ತತ್ವಗಳು, ಬಸವಣ್ಣನ ತತ್ವಗಳು, ಗಾಂಧಿ ತತ್ವಗಳು. ಇಲ್ಲೆಲ್ಲ ತತ್ವಗಳು ಎಂಬುದು ಅವರ ವಿಚಾರಗಳು ಎಂದಾಗುತ್ತದೆ. ಆದರೆ ಲಕ್ಷಣ ಎಂಬುದನ್ನು ಮತ್ತು ವಿಚಾರಗಳು ಎಂಬುದನ್ನು ಈ ವಿಷಯಗಳಿಂದ ಬೇರ್ಪಡಿಸಿ ಸಂಶೋಧನೆಯ ತತ್ವಗಳು ಎಂದು ಬದಲಾಯಿಸಿಕೊಂಡಾಗ, ಅದು ಸಂಶೋಧನೆಯ ಲಕ್ಷಣಗಳು ಎಂದು ಅಥವಾ ಸಂಶೋಧನೆಯ ವಿಚಾರಗಳು ಎಂದಾಗುವುದಿಲ್ಲ. ಬದಲಾಗಿ ಅದು ಸಂಶೋಧನೆಯ ತಿರುಳಿನ ಸ್ವರೂಪ ಎಂದಾಗುತ್ತದೆ. ಸಂಶೋಧನೆಯ ತಿರುಳು ಎಂದರೆ ಅದು ನೇರವಾಗಿ ಸಂಶೋಧನೆಯ ಕೇಂದ್ರವನ್ನು ಕುರಿತದ್ದು. ಈ ಕೇಂದ್ರ ಎಂಬುದು ಅಂಚಿನದ್ದಲ್ಲ. ಹಾಗಾಗಿ ಇಲ್ಲಿ ಸಂಶೋಧನೆಯ ತತ್ವ ಎಂದರೆ ಸಂಶೋಧನೆಯಲ್ಲಿ ತತ್ವಶಾಸ್ತ್ರವನ್ನು ಬಳಸುವ ಕ್ರಮವನ್ನು ಕುರಿತದ್ದು ಎಂದಾಗುತ್ತದೆ. ಸಂಶೋಧನೆಯಲ್ಲಿ ತತ್ವಶಾಸ್ತ್ರದ ಜ್ಞಾನದ ಬಳಕೆಯ ಕ್ರಮ ಎಂದಾಗುತ್ತದೆ. ಹಾಗಾದರೆ ಇಲ್ಲಿ ತತ್ವಶಾಸ್ತ್ರ ಎಂದರೆ ಏನು ಎಂಬುದನ್ನು ವಿವರಿಸಿಕೊಳ್ಳಬೇಕಾಗುತ್ತದೆ.

ತತ್ವಶಾಸ್ತ್ರ ಎಂದರೆ ಜ್ಞಾನ ಎಂಬುದರ ಹುಟ್ಟು, ಬೆಳವಣಿಗೆ, ಅದರ ಪ್ರಭಾವ, ಪ್ರೇರಣೆ, ಅದರ ವಿವಿಧ ಧಾರೆಗಳು, ಅದರ ಪರಿಣಾಮ, ಅದರ ಸ್ವರೂಪ ಮುಂತಾದ ವಿಷಯಗಳನ್ನು ವಿವರಿಸುವ ಒಂದು ಶಾಸ್ತ್ರ. ಹಾಗಾಗಿ ಸಂಶೋಧನೆಯ ತಾತ್ವಿಕತೆ ಎಂದರೆ, ಸಂಶೋಧನೆಯಲ್ಲಿ ಜ್ಞಾನದ ಯಾವ ಶಾಸ್ತ್ರವನ್ನು ಬಳಸಲಾಗಿದೆ ಮತ್ತು ಅದನ್ನು ಹೇಗೆ ಬಳಸಲಾಗಿದೆ ಎಂಬುದರ ಗ್ರಹಿಕೆ. ಸಂಶೋಧನೆಯಲ್ಲಿ ತತ್ವಜ್ಞಾನದ ಯಾವ ಆಲೋಚನ ಧಾರೆಯನ್ನು ಬಳಸಲಾಗಿದೆ ಎಂಬುದರ ಸಾಮಾನ್ಯ ಗ್ರಹಿಕೆ. ತತ್ವಜ್ಞಾನ ಎಂಬುದನ್ನು ಬೇರೆ ಮಾತುಗಳಲ್ಲಿ ವಿವರಿಸುವುದಾದರೆ, ಅದು ಲೋಕವನ್ನು ಗ್ರಹಿಸುವ, ಪರಿಭಾವಿಸುವ, ಅಂದಾಜಿಸುವ, ವಿವರಿಸುವ, ವಿಶ್ಲೇಷಿಸುವ, ವ್ಯಾಖ್ಯಾನಿಸುವ, ಮೌಲ್ಯಮಾಪನ ಮಾಡುವ ಹಾಗೂ ಅದನ್ನು ಬದಲಾಯಿಸುವ ತಿಳುವಳಿಕೆ. ಕೆಲವರು ಲೋಕವನ್ನು ವಿವರಿಸುತ್ತಾರೆ. ಮತ್ತೆ ಕೆಲವರು ಅದನ್ನು ವಿಶ್ಲೇಷಣೆ ಮಾಡುತ್ತಾರೆ. ಇನ್ನು ಕೆಲವರು ಅದನ್ನು ವ್ಯಾಖ್ಯಾನಿಸುತ್ತಾರೆ. ಇನ್ನೂ ಕೆಲವರು ಅದನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ. ಉದಾಹರಣೆಗೆ, ಚೌಕಾಕಾರದ ಪೆಟ್ಟಿಗೆಯನ್ನು ಕಲ್ಪಿಸಿಕೊಳ್ಳೋಣ. ಅದಕ್ಕೆ ನಾಲ್ಕು ಕಡೆ ನಾಲ್ಕು ಮಗ್ಗುಲುಗಳಿರುತ್ತವೆ. ಅದರ ಜೊತೆಗೆ ಮೇಲಿನ ಮತ್ತು ಕೆಳಗಿನ ಮಗ್ಗುಲುಗಳು ಸೇರಿ ಆರು ಮಗ್ಗುಲುಗಳು ಆದವು. ಅದನ್ನು ಒಂದು ದಿಕ್ಕಿನಿಂದ ನೋಡಿದಾಗ ಅದರ ಒಂದು ಮಗ್ಗುಲು ಮಾತ್ರ ಕಾಣುತ್ತದೆ. ಅದಕ್ಕಿರುವುದು ಒಟ್ಟು ಆರು ಮಗ್ಗುಲುಗಳು. ಒಂದು ದಿಕ್ಕಿನಿಂದ ನೋಡಿದಾಗ, ಆ ಆರು ಮಗ್ಗುಲುಗಳಲ್ಲಿ ಒಂದು ಮಗ್ಗುಲು ಮಾತ್ರ ಕಾಣುತ್ತದೆ. ಅದರ ಜೊತೆಗೇ ಅದರ ಇನ್ನುಳಿದ ಐದು ಮಗ್ಗುಲುಗಳು ಕಾಣುತ್ತಿಲ್ಲ ಎಂದೇ ಅರ್ಥ. ಆ ಪೆಟ್ಟಿಗೆಯನ್ನು ಯಾವ ಕೋನದಿಂದ ಕಾಣುವುದಿಲ್ಲ. ಯಾಕೆಂದರೆ ಆ ದಿಕ್ಕಿನಿಂದ ಅದರ ಮಗ್ಗುಲನ್ನು ನೋಡಿರುವುದಿಲ್ಲ. ಹಾಗಾಗಿ ಒಂದು ವಸ್ತುವಿನ ಒಂದು ಮಗ್ಗುಲು ಕಾಣುವುದರ ಜೊತೆಗೇ ಅದೇ ವಸ್ತುವಿನ ಇನ್ನು ಉಳಿದ ಐದು ಮಗ್ಗುಲುಗಳು ಕಾಣುತ್ತಿಲ್ಲ ಎಂದಾಯಿತು. ಇದು ಒಂದು ಭೌತಿಕ ವಸ್ತುವನ್ನು ನೋಡುವ, ಗ್ರಹಿಸುವ ಮತ್ತು ಪರಿಭಾವಿಸುವ ಕ್ರಮಕ್ಕೆ ಸಂಬಂಧಿಸಿದುದು. ಇದೇ ರೀತಿಯಲ್ಲಿ ಸಮಾಜವನ್ನು ನೋಡುವ, ಗರಹಿಸುವ ವಿಧಾನ ಇರುತ್ತದೆ. ದೇಶ, ರಾಷ್ಟ್ರ, ಭಾಷೆ, ರಾಜ್ಯ, ಆರ್ಥಿಕತೆ, ರಾಜಕೀಯ, ಸಮಾಜ, ಸಂಸ್ಕೃತಿ, ಸಾಹಿತ್ಯವನ್ನು ತಿಳಿಸುವುದು ನಮ್ಮ ಅರಿವಿನ ಕ್ರಮದ ಸ್ವರೂಪವನ್ನು ವಿವರಿಸುವ ಜ್ಞಾನವಾದ ತತ್ವಶಾಸ್ತ್ರ ಮಾತ್ರವೆ. ಹಾಗಾಗಿ ಉಳಿದೆಲ್ಲ ಜ್ಞಾನಶಾಸ್ತ್ರಗಳಿಗಿಂತ ತತ್ವಶಾಸ್ತ್ರಕ್ಕೆ ಜ್ಞಾನದ ವಲಯದಲ್ಲಿ ವಿಶೇಷ ಮನ್ನಣೆ ಇದೆ. ಯಾಕೆಂದರೆ ಜ್ಞಾನಿಕ ವಲಯದಲ್ಲಿ ತತ್ವಜ್ಞಾನ ಮಾತ್ರವೇ ಸಾಮಾಜಿಕ ಜ್ಞಾನದ, ರಾಜಕೀಯ ಜ್ಞಾನದ ಮೇರುಜ್ಞಾನ ಎಂಬ ಮನ್ನಣೆಯನ್ನು ಪಡೆದಿದೆ. ತತ್ವಜ್ಞಾನವು ಮನುಷ್ಯರ ಜ್ಞಾನಗಳ ಸ್ವರೂಪವನ್ನು ವಿವರಿಸುತ್ತದೆ, ವ್ಯಾಖ್ಯಾನಿಸುತ್ತದೆ, ಮೌಲ್ಯಮಾಪನ ಮಾಡುತ್ತದೆ ಮತ್ತು ಅವುಗಳನ್ನು ಬದಲಾಯಿಸುತ್ತದೆ. ತತ್ವ ಅಥವಾ ತಾತ್ವಿಕತೆ ಎಂಬುದು ಈ ತತ್ವಜ್ಞಾನದಿಂದ ಹುಟ್ಟಿದ್ದು. ಸಂಶೋಧನೆಯಲ್ಲಿ ತಾತ್ವಿಕತೆ ಎಂದರೆ ಸಂಶೋಧನೆಯೊಂದರ ಜ್ಞಾನದ ಸ್ವರೂಪವನ್ನು ರೂಪಿಸುವ, ನಿರ್ಧರಿಸುವ ಮತ್ತು ಪ್ರಭಾವಿಸುವ ವಿಷಯಕ್ಕೆ ಸಂಬಂಧಿಸಿದುದು.