ಸಾಹಿತ್ಯದಲ್ಲಿ ಸಂಶೋಧನೆ ಮಾಡುವವರಿಗೆ ಬಹುಶಃ ಬೇರೆ ಜ್ಞಾನಶಿಸ್ತುಗಳಿಗಿಂತ ಭಿನ್ನವಾದ ಸಮಸ್ಯೆ ಎದುರಾಗುತ್ತದೆ. ಸಂಶೋಧಕರಿಗೆ ಎದುರಾಗುವ ಸಮಸ್ಯೆಯ ಸ್ವರೂಪವನ್ನು ಬಿಡಿಸಿ ನೋಡಬಹುದು. ಸಂಶೋಧಕರು ಸಂಶೋಧನೆಗೆ ಆಯ್ಕೆ ಮಾಡಿಕೊಳ್ಳುವ ಕ್ಷೇತ್ರ ಮತ್ತು ಶೀರ್ಷಿಕೆ ಯಾವುದಾಗಿರಬೇಕು, ಆಕರಗಳನ್ನು ಹೇಗೆ ಸಂಗ್ರಹಿಸಬೇಕು, ಆಕರಗಳನ್ನು ಹೇಗೆ ವಿಂಗಡಿಸಬೇಕು, ಅವನ್ನು ಹೇಗೆ ಅರ್ಥೈಸಿ, ವಿಶ್ಲೇಷಿಸಿ, ವ್ಯಾಖ್ಯಾನಿಸಬೇಕು ಎಂಬುದು ಆ ಸಮಸ್ಯೆಯ ಸಾಮಾನ್ಯ ಸ್ವರೂಪ.ಸಮಸ್ಯೆಯ ಈ ಮಗ್ಗುಲುಗಳಲ್ಲಿ ಮುಖ್ಯವಾಗಿ ಸಂಶೋಧಕರ ತಲೆ ತಿನ್ನುವುದು ‘ಹೇಗೆ ಅರ್ಥೈಸಬೇಕು? ಮತ್ತು ಯಾವ ನಿಲುವು ತಾಳಬೇಕು?’ ಎಂಬುದು. ಹೊಸದಾಗಿ ಸಂಶೋಧನೆಗೆ ಬರುವವರೆಗೆ ‘ಸಾಹಿತ್ಯವನ್ನು ಅರ್ಥೈಸುವ ಬಗ್ಗೆ, ಸಂಶೋಧನೆಯ ವಿಧಾನದ ಬಗ್ಗೆ ಮತ್ತು ಸಂಶೋಧನೆಯನ್ನು ವ್ಯಾಖ್ಯಾನಿಸುವ ಬಗ್ಗೆ ಪ್ರಾಥಮಿಕ ತಿಳುವಳಿಕೆ ಇಲ್ಲವಲ್ಲ’ ಎಂದು ವ್ಯಥೆ ಪಡುವ ಸ್ಥಿತಿ ಇದೆ. ಅದಕ್ಕಾಗಿ ಸಂಶೋಧನ ಕಮ್ಮಟಗಳನ್ನು ನಡೆಸಲಾಗುತ್ತದೆ. ಕಮ್ಮಟಗಳಲ್ಲಿ ‘ಸಾಹಿತ್ಯ ಆಕರಗಳನ್ನು ಅರ್ಥೈಸುವ ಬಗ್ಗೆ, ಸಂಶೋಧನೆಯ ವಿಧಾನಗಳ ಬಗ್ಗೆ’ ಸಂಶೋಧಕರಿಗೆ ‘ಮಾರ್ಗದರ್ಶನ ಮಾಡುವ’ ಪದ್ಧತಿ ಇದೆ. ಅಂತಹ ಕಮ್ಮಟಗಳ ಬಗ್ಗೆ ಇಲ್ಲಿ ವಿಮರ್ಶೆ ಮಾಡುವ ಅಗತ್ಯವಿಲ್ಲ. ಆದರೆ ಪ್ರಶ್ನೆ ಇರುವುದು ಸಾಹಿತ್ಯವನ್ನು ಅರ್ಥೈಸುವ ಮತ್ತು ವ್ಯಾಖ್ಯಾನಿಸುವ ಸಾಮರ್ಥ್ಯ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೆ ಯಾಕೆ ಇರುವುದಿಲ್ಲ? ಯಾಕೆ ಅವರಿಗೆ ಅದು ದಕ್ಕಿರುವುದಿಲ್ಲ? ಎಂಬುದು. ಸಾಹಿತ್ಯವನ್ನು ಅರ್ಥೈಸುವ ಮತ್ತು ವ್ಯಾಖ್ಯಾನಿಸುವ ವಿಷಯದಲ್ಲಿ ಸಂಶೋಧನ ವಿದ್ಯಾರ್ಥಿಗಳನ್ನು ಕಟಕಟೆಯ ಮೇಲೆ ನಿಲ್ಲಿಸಲಾಗುತ್ತಿದೆ. ಕೆಲವು ಮೌಖಿಕ ಪರೀಕ್ಷೆಗಳಲ್ಲೂ ಹೀಗೆ ಕಟಕಟೆಯ ಮೇಲೆ ನಿಲ್ಲಿಸಲಾಗುತ್ತಿದೆ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಔಪಚಾರಿಕವಾಗಿ ಸಂಶೋಧನೆ ಮಾಡುವವರಿಗೆ ಆರಂಭದ ಕೆಲವು ತಿಂಗಳು ಸಂಶೋಧನ ವಿಧಾನಗಳನ್ನು ಹೇಳಿಕೊಡುವ ಪದ್ಧತಿ ಇದೆ. ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗವು ತನ್ನ ೧೧ನೇ ಯೋಜನೆಯಲ್ಲಿ ಇದಕ್ಕೆ ಪ್ರತ್ಯೇಕವಾದ ಒಂದು ಕೋರ್ಸ್‌ವರ್ಕನ್ನು ಜಾರಿಗೊಳಿಸಿದೆ. ಸಂಶೋಧನೆ ಮಾಡಲು ಇಚ್ಛಿಸಿ, ಅದಕ್ಕೆ ಪ್ರವೇಶ ಪಡೆದ ಮೇಲೆ ಅವರಿಗೆ ಸಂಶೋಧನೆ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಡಬೇಕು ಎಂಬುದು ಈಗ ಇರುವ ಸ್ಥಿತಿ. ‘ಸಂಶೋಧನ ವಿದ್ಯಾರ್ಥಿಗಳಿಗೆ ಸಂಶೋಧನೆ ಮಾಡುವುದನ್ನು ಕಲಿಸುತ್ತೇವೆ ಮತ್ತು ಅವರು ಅದನ್ನು ಕಲಿಯುತ್ತಾರೆ. ಹಾಗೆ ಕಲಿತುಕೊಂಡು ಸಂಶೋಧನೆ ಮಾಡುತ್ತಾರೆ’. ಇದು ಇದರಲ್ಲಿರುವ ಪ್ರಾಥಮಿಕ ತರ್ಕ ಮತ್ತು ನಂಬಿಕೆ.

ಸಂಶೋಧನೆಗೆಂದು ಬರುವ ವಿದ್ಯಾರ್ಥಿಗಳಿಗೆ ಸಾಹಿತ್ಯವನ್ನು ಅರ್ಥೈಸಲು ಮತ್ತು ವ್ಯಾಖ್ಯಾನಿಸಲು ಬರುವುದಿಲ್ಲ ಎಂಬುದನ್ನು ವಿದ್ಯಾರ್ಥಿಗಳ ಬೌದ್ಧಿಕ ದೌರ್ಬಲ್ಯ ಮತ್ತು ಬೌದ್ಧಿಕ ಕೊರತೆ ಎಂದು ತೀರ್ಮಾನಿಸಲಾಗಿದೆ. ‘ಬೌದ್ಧಿಕ ಕೊರತೆ’ ಎಂಬುದನ್ನು ಗುರುತಿಸಬಹುದಾದರೂ ಅದನ್ನು ಸರಳೀಕರಿಸಿ, ಏಕಾಏಕಿ ವಿದ್ಯಾರ್ಥಿಗಳ ಮೇಲೆ ಹೊರಿಸುತ್ತಿರುವುದನ್ನು ಮರುವಿಮರ್ಶಿಸುವ ಅಗತ್ಯವಿದೆ. ಶಿಕ್ಷಣದಲ್ಲಿ ಭಾಷಾ ಕಲಿಕೆಯ ಭಾಗವಾಗಿ ‘ಭಾಷೆಯ ಪಠ್ಯ’ವನ್ನು ಪಠ್ಯಕ್ರಮದಲ್ಲಿ ಇಡಲಾಗಿದೆ. ‘ಕಲಿಸುವವರು’ ಮತ್ತು ‘ಕಲಿಯುವವರು’ ಆ ಪಠ್ಯವನ್ನು ಭಾಷಿಕ ಪಠ್ಯವೆಂದೇ ತಿಳಿಯುತ್ತಾರೆ. ‘ಭಾಷೆಯನ್ನು ಕಲಿಸುತ್ತಿದ್ದೇವೆ ಮತ್ತು ಭಾಷೆಯನ್ನು ಕಲಿಯುತ್ತಿದ್ದೇವೆ’ ಎಂಬ ನಂಬಿಕೆಗೆ ತುತ್ತಾಗಿರುವ ಪಠ್ಯ ಮಾತ್ರ ‘ಭಾಷೆಯನ್ನು ಕಲಿಸುವ’ ಪಠ್ಯವಾಗಿರುವುದಿಲ್ಲ. ಅದರಲ್ಲಿ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳ ಕೆಲವು ತುಣುಕುಗಳನ್ನು ಅಳವಡಿಸಲಾಗಿರುತ್ತದೆ. ಆದ್ದರಿಂದ ಅದು ‘ಸಾಹಿತ್ಯಕ ಪಠ್ಯ’ವೇ ಆಗಿರುತ್ತದೆ. ಹಾಗಿದ್ದರೆ ‘ಸಾಹಿತ್ಯಕ ಪಠ್ಯವಾಗಿರುವುದರಿಂದ ‘ಸಾಹಿತ್ಯವನ್ನು ಕಲಿಸುತ್ತಿದ್ದಾರೆಯೆ’ ಎಂದು ಕೇಳಿದರೆ ಅಲ್ಲಿ ಸಾಹಿತ್ಯವನ್ನೂ ಕಲಿಸುತ್ತಿರುವುದಿಲ್ಲ. ಹಾಗಿದ್ದರೆ ‘ಭಾಷಾ ಪಠ್ಯ’ ಎಂಬ ಪಠ್ಯಕ್ರಮದಲ್ಲಿ ನಡೆಯುವ ‘ಕಲಿಕೆ’ಯ ಪ್ರಕ್ರಿಯೆ ಯಾವುದು ಎಂಬುದನ್ನು ವಿವರಿಸಿಕೊಳ್ಳಬೇಕಿದೆ. ಆ ಪಠ್ಯಕ್ರಮದ ಕೆಲವು ಭಾಗಗಳಿಗೆ ಸಂಬಂಧಿಸಿದಂತೆ ಕೆಲವು ಮಾಹಿತಿ ಮತ್ತು ಅಂಕಿಅಂಶಗಳನ್ನು ಹೇಳಿಕೊಡಲಾಗುತ್ತದೆ. ಪಠ್ಯಕ್ರಮದ ಇನ್ನು ಕೆಲವು ಭಾಗಗಳಿಗೆ ಸಂಬಂಧಿಸಿದಂತೆ ಸಾರಾಂಶ ಮತ್ತು ಅಭಿಪ್ರಾಯಗಳನ್ನು ಹೇಳಿಕೊಡಲಾಗುತ್ತದೆ. ಪದ್ಯ ಭಾಗಗಳಿಗೆ ಭಾವಾರ್ಥ ಬರೆಸುವುದು, ಗದ್ಯ ಭಾಗಗಳಿಗೆ ಸಾರಾಂಶ ಬರೆಸುವುದು ಈ ಪಠ್ಯಕ್ರಮ ಬೋಧನೆಯ ಸಂಪ್ರದಾಯವಾಗಿದೆ. ಪದವಿ ಮತ್ತು ಸ್ನಾತಕೋತ್ತರ ಪದವಿಗಳ ಹಂತದಲ್ಲಿಯೂ ಕೂಡ ಇದೇ ಮಾದರಿ ಮುಂದುವರಿಯುತ್ತದೆ. ಸಾಹಿತ್ಯದ ಯಾವುದೆ ಪ್ರಕಾರವಿರಲಿ, ಅದನ್ನು ಸಾರಾಂಶೀಕರಿಸಿ, ಸಂಕ್ಷಿಪ್ತೀಕರಿಸಿ ವಿದ್ಯರ್ಥಿಗಳು ಅದನ್ನು ನೆನಪಿಟ್ಟು ಪರೀಕ್ಷೆಯಲ್ಲಿ ಬರೆಯುವಂತೆ ಸಿದ್ಧಪಡಿಸಲಾಗುತ್ತದೆ. ಹೀಗೆ ತರಗತಿಗಳಲ್ಲಿ ಪರೀಕ್ಷೆ ಬರೆಯಲು ಸಾಹಿತ್ಯಕ ಪಠ್ಯ ಸಿದ್ಧಗೊಳ್ಳುತ್ತದೆ. ಹೇಗೆ ಪ್ರಶ್ನೆ ಕೇಳಿದರೆ ವಿದ್ಯಾರ್ಥಿಗಳು ಉತ್ತರ ಬರೆಯಬಲ್ಲರು ಎಂಬುದನ್ನು ಮೊದಲೇ ಊಹಿಸಿಕೊಂಡು ಸಾಧ್ಯವಾದಷ್ಟೂ ಮಾಹಿತಿ ಪ್ರಧಾನ ಉತ್ತರವೇ ಬರುವಂತಹ ಪ್ರಶ್ನೆ ಕೇಳಲಾಗುತ್ತದೆ. ಇಲ್ಲವೆ ಸಾರಾಂಶ ಬರುವಂತಹ ಪ್ರಶ್ನೆ ಕೇಳಲಾಗುತ್ತದೆ. ಇವೆರಡನ್ನೂ ಸಾಧ್ಯವಾದಷ್ಟೂ ಕಥೆಯ ರೂಪದಲ್ಲಿ ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ಕೊಡಲಾಗುತ್ತದೆ. ವಿದ್ಯಾರ್ಥಿಗಳು ಏನೇನೊ ಕಸರತ್ತು ಮಾಡಿ, ಅದನ್ನು ನೆನಪಿಟ್ಟು, ಪರೀಕ್ಷೆಯಲ್ಲಿ ಉತ್ತರ ಬರೆದು ‘ಪಾಸಾಗುತ್ತಾರೆ’. ಇದೇ ಮಾದರಿಯನ್ನು ಯುಜಿಸಿ, ಕೆಎಎಸ್, ಐಎಎಸ್ ಮುಂತಾದ ಪರೀಕ್ಷೆಗಳಲ್ಲೂ ಕಾಣಬಹುದು. ಪರೀಕ್ಷೆಗಳ ಕಾರಣಕ್ಕಾಗಿ ಒಂದು ಬಗೆಯ ಸಾಹಿತ್ಯ ಪಠ್ಯ ಸಿದ್ಧವಾಗುತ್ತದೆ. ಅದು ಬಹುತೇಕ ಮಾಹಿತಿ ಪ್ರಧಾನ ಸಾರಾಂಶದ ರೂಪದಲ್ಲಿರುತ್ತದೆ. ಈ ಮಾಹಿತಿ ಪ್ರಧಾನ ಸಾರಾಂಶ ರೂಪದ ಪಠ್ಯದಲ್ಲಿ ಸಾಮಾಜಿಕ ಸ್ಥಿತಿಗತಿಗಳ ಮಾಹಿತಿಗಳೂ ಜೊತೆಗೆ ಕೆಲವು ನೈತಿಕ ಮೌಲ್ಯಗಳೂ ಇರುತ್ತವೆ ಎಂದು ನಂಬಲಾಗಿದೆ. ‘ಸಾಹಿತ್ಯ ಕಲಿಕೆ’ಯಲ್ಲಿ ಈ ನಂಬಿಕೆ ಕೂದಲೆಳೆಯಷ್ಟು ಅಲ್ಲಾಡದೆ ಗಟ್ಟಿಯಗಿ ಕೂತು ಬಿಟ್ಟಿದೆ.

ಸ್ನಾತಕೋತ್ತರ ಸಾಹಿತ್ಯಕ ತರಗತಿಗಳಲ್ಲಿ ಪಠ್ಯಕ್ರಮದ ಕೆಲವು ಪಠ್ಯಗಳಿಗೆ ಕೆಲವು ವಿಮರ್ಶೆಗಳು ಬಂದಿದ್ದರೆ ಅವು ಪ್ರಸ್ತಾಪಕ್ಕೆ ಬರುತ್ತವೆ. ಹೀಗೆ ಪ್ರಸ್ತಾಪಕ್ಕೆ ಬರುವಾಗ ಅಲ್ಲಿಯ ಕೆಲವು ನಿಲುವುಗಳಿಗೆ ಸಹಮತ ವ್ಯಕ್ತವಾಗುತ್ತದೆ. ಅದಕ್ಕೆ ಒಪ್ಪಿಗೆ ವ್ಯಕ್ತವಾಗುತ್ತದೆ. ಸ್ನಾತಕೋತ್ತರ ತರಗತಿಗಳಲ್ಲಿ ಈಗಾಗಲೆ ಬಂದಿರುವ ವಿಮರ್ಶೆಗಳ ನೆರವು ಪಡೆಯಲಾಗುತ್ತದೆ. ಹಾಗೆ ನೆರವು ಪಡೆಯುವಾಗ ತಮ್ಮ ಧೋರಣೆಗೆ ಅನುಗುಣವಾದುದನ್ನು ಆಯ್ಕೆ ಮಾಡಿಕೊಂಡು, ಉಳಿದವನ್ನು ನಿರಾಕರಿಸಲಾಗುತ್ತದೆ. ಹೀಗೆ ಕೆಲವು ನಿಲುವುಗಳು ಪುನರಾವರ್ತನೆಯಾಗುತ್ತಾ ಅವು ಸ್ಥಾಪಿತ ನೆಲೆಯನ್ನು ಪಡೆದುಬಿಡುತ್ತವೆ. ಈ ಸ್ಥಾಪಿತ ನಿಲುವುಗಳು ‘ಸಾಹಿತ್ಯ ಕಲಿಕೆ’ಯ ಪಠ್ಯಗಳಾಗಿ ರೂಪಾಂತರ ಪಡೆಯುತ್ತವೆ. ಹಾಗಾಗಿ ಸಾಹಿತ್ಯದ ವಿದ್ಯಾರ್ಥಿಗಳಿಗೆ ‘ಒಂದು ಕೃತಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?’ ಎಂದು ಕೇಳಿದರೆ ಅದಕ್ಕೆ ಉತ್ತರವಾಗಿ ಬೇರೆಯವರ ಅಭಿಪ್ರಾಯ ಮತ್ತು ನಿಲುವುಗಳು ಪ್ರಕಟವಾಗುತ್ತವೆ. ಹೀಗೆ ಬೇರೆಯವರ ಅಭಿಪ್ರಾಯ ಮತ್ತು ನಿಲುವುಗಳಿಗೆ ಸಾಹಿತ್ಯ ವಿದ್ಯಾರ್ಥಿಗಳು ತಮ್ಮನ್ನು ಬದ್ಧಗೊಳಿಸಿಕೊಳ್ಳುತ್ತಾರೆ. ಈ ಕೆಲಸ ಕೇವಲ ಸಾಹಿತ್ಯದ ವಿಷಯದಲ್ಲಿ ಮಾತ್ರ ನಡೆಯುತ್ತದೆ ಎಂದು ಸರಳೀಕರಿಸಬಾರದು. ಎಲ್ಲಾ ವಿಷಯಗಳಲ್ಲಿಯೂ ಇದು ನಡೆಯುತ್ತದೆ. ಹಾಗೆ ನೋಡಿದರೆ ಇಡೀ ಶಿಕ್ಷಣ ಕ್ರಮದಲ್ಲಿ ವಿದ್ಯಾರ್ಥಿಗಳ ಮೇಲೆ ಅವರದಲ್ಲದ ಅಭಿಪ್ರಾಯ ಮತ್ತು ತೀರ್ಮಾನಗಳನ್ನು ಬೇರೆಬೇರೆ ವಿಧಾನಗಳಲ್ಲಿ ಹೇರುವ ಕೆಲಸವೇ ನಡೆಯುತ್ತಿದೆ. ಹಾಗಾಗಿ ಹಾಲಿ ರಾಜಕೀಯ, ನಿರುದ್ಯೋಗ, ಬಡತನ, ಶೋಷಣೆ, ಅನ್ಯಾಯ, ಅಸಮಾನತೆ, ಬೆಲೆ ಏರಿಕೆ, ಭ್ರಷ್ಟಾಚಾರ ಮುಂತಾದವುಗಳ ಬಗ್ಗೆ ‘ನಿಮ್ಮ ಅಭಿಪ್ರಾಯ ಏನು’ ಎಂದು ಅವರನ್ನು ಕೇಳಿದರೆ ಮೊದಲಿಗೆ ಅವರು ತಬ್ಬಿಬ್ಬಾಗುತ್ತಾರೆ. ಕೆಲವರು ತಮ್ಮಲ್ಲದ ಬೇರೆಯವರ ಅಭಿಪ್ರಾಯಗಳನ್ನು ತಮ್ಮವೆಂದೇ ತಿಳಿದು ಪ್ರತಿಕ್ರಿಯಿಸುತ್ತಾರೆ. ಮತ್ತೆ ಕೆಲವರು ಏನೂ ಪ್ರತಿಕ್ರಿಯಿಸದೆ ಸುಮ್ಮನಾಗುತ್ತಾರೆ. ಇಡಿಯಾಗಿ ಹೇಳುವುದಾದರೆ ವಿದ್ಯಾರ್ಥಿ ಸಮೂಹವನ್ನು ಸ್ವತಂತ್ರ ಆಲೋಚನೆ, ಸ್ವತಂತ್ರ ಚಿಂತನೆ ಮಾಡದಂತೆ ಅವರನ್ನು ‘ಪರರ ಆಲೋಚನೆ ವಲಯ’ದಲ್ಲಿ ಇಡಲಾಗಿದೆ. ಹೀಗೆ ‘ಪರರ ಆಲೋಚನೆಗೆ’ ಒಳಗಾಗಿರುವ ವಿದ್ಯಾರ್ಥಿಗಳು ಸಂಶೋಧನೆಗೆ ಬಂದಾಗ, ಅವರಿಂದ ಸ್ವತಂತ್ರ ಆಲೋಚನೆಗಳನ್ನು ನಿರೀಕ್ಷಿಸಲಾಗುತ್ತಿದೆ. ಯಾವುದರಿಂದ ಅವರು ‘ಬಂಧಿತ’ರಾಗಿದ್ದಾರೊ ಅದನ್ನು ಸಂಶೋಧನೆಯ ಸಂದರ್ಭದಲ್ಲಿ ಪರಿಗಣಿಸುತ್ತಿಲ್ಲ; ಯಾವುದರಿಂದ ಅವರು ಪ್ರಭಾವಿತರಾಗಬೇಕಿತ್ತೊ ಅದನ್ನು ಅವರಿಂದ ನಿರೀಕ್ಷಿಸಲಾಗುತ್ತಿದೆ. ಇದನ್ನು ಎಲ್ಲಾ ವಿದ್ಯಾರ್ಥಿಗಳಿಗೂ ಅನ್ವಯಿಸಲಾಗದಿದ್ದರೂ, ಇದು ಬಹುತೇಕ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತದೆ.

ದೀರ್ಘ ಕಾಲದವರೆಗೆ ‘ಪರರ ಆಲೋಚನೆಗಳಿಗೆ’ ತಮ್ಮನ್ನು ತೆತ್ತುಕೊಂಡಿರುವುದರಿಂದ ಒಂದೇ ಸಲ ಅವರಿಂದ ಸ್ವತಂತ್ರ ಆಲೋಚನೆಗಳನ್ನು ನಿರೀಕ್ಷಿಸುವುದು ಕಷ್ಟವಾಗುತ್ತದೆ. ಬೇರೊಂದು ಆಯಾಮವನ್ನು ಬಳಸಿ ಹೇಳುವುದಾದರೆ, ಸಾಹಿತ್ಯದ ಓದು ಎಂಬುದು ಭಿನ್ನ ಭಿನ್ನ ಆಲೋಚನೆಗಳನ್ನು ಹುಟ್ಟಿಸುವ ಮೊದಲ ಮೆಟ್ಟಿಲು. ಸಾಹಿತ್ಯಕ್ಕೆ ಪ್ರಶ್ನಿಸುವ, ಅನುಮಾನಿಸುವ, ಗುಮಾನಿಸುವ ಮತ್ತು ಸಂದೇಹ ಪಡುವ ಗುಣವಿದೆ. ಈ ಗುಣವಿರುವುದರಿಂದಲೆ ಅದು ತನ್ನ ಓದುಗರಲ್ಲಿಯೂ ಇದೇ ಬಗೆಯ ಪ್ರಜ್ಞೆಯನ್ನು ಹಾಗೂ ಆಲೋಚನ ವಿಧಾನವನ್ನು ರೂಪಿಸಬಲ್ಲದು. ಆದರೆ ಕೆಳಹಂತದಿಂದ ಹಿಡಿದು ಸ್ನಾತಕೋತ್ತರ ತರಗತಿಗಳವರೆಗೆ ವಿದ್ಯಾರ್ಥಿಗಳಲ್ಲಿ ಹೊಸ ಪ್ರಜ್ಞೆಯನ್ನು ಹುಟ್ಟಿಸುವ ಹಾಗೆ ಸಾಹಿತ್ಯವನ್ನು ಬೋಧಿಸುವ ಕೆಲಸ ನಡೆಯುತ್ತಿಲ್ಲ. ಅಪವಾದದ ಉದಾಹರಣೆಗಳನ್ನು ಹೊರತುಪಡಿಸಿ.

‘ವಿಚಾರಕ್ಕಿಂತ ವ್ಯಕ್ತಿ ಮುಖ್ಯ, ವಿಚಾರಕ್ಕಿಂತ ವ್ಯಕ್ತಿ ದೊಡ್ಡವರು, ವಿಚಾರಗಳು ವ್ಯಕ್ತಿಯಿಂದಲೇ ಹುಟ್ಟುತ್ತವೆ’ ಇವು ಕೆಲವು ನಂಬಿಕೆಗಳು. ಇವೆಲ್ಲವೂ ತಾತ್ವಿಕವಾಗಿ ಒಂದೇ ರಾಜಕೀಯ ಧೋರಣೆಯಿಂದ ಹುಟ್ಟಿದವು. ಆಳುವ ಮತ್ತು ಆಳಿಸಿಕೊಳ್ಳುವ ರಾಜಕೀಯ ವ್ಯವಸ್ಥೆಯಲ್ಲಿ ‘ವಿಚಾರಕ್ಕಿಂತ ವ್ಯಕ್ತಿ ಮುಖ್ಯ’ ಎಂಬ ಧೋರಣೆ ಕ್ರಿಯಾಶೀಲವಾಗಿರುತ್ತದೆ. ಅದು ರಾಜಮಹಾರಾಜರ ಕಾಲವಿರಬಹುದು; ಆಧುನಿಕ ಪ್ರಜಾಪ್ರಭುತ್ವ ಎಂದು ಕರೆಯಲಾಗುವ ಕಾಲದ್ದಿರಬಹುದು. ಆಳ್ವಿಕೆ ನಡೆಸಲು ಆಡಳಿತ ಯಂತ್ರ, ಮಂತ್ರಿ ಪರಿವಾರ, ಸೈನ್ಯ, ಖಜಾನೆ ಇವೆಲ್ಲ ಬೇಕಾಗುತ್ತವೆ. ಇವೆಲ್ಲ ಇದ್ದ ಮಾತ್ರಕ್ಕೆ ಆಳ್ವಿಕೆ ನಡೆಸುವುದು ಸುಲಭವಲ್ಲ. ಹಾಗೆ ಆಳ್ವಿಕೆ ನಡೆಸಲು ಒಂದು ರಾಜಕೀಯ ಧೋರಣೆ, ರಾಜಕೀಯ ಸಿದ್ಧಾಂತ ಬೇಕಾಗುತ್ತದೆ. ಅದಿಲ್ಲದೆ ಉಳಿದವೆಲ್ಲ ಏನೂ ಕೆಲಸ ಮಾಡಲಾರವು. ಈ ಹಿನ್ನೆಲೆಯಲ್ಲಿ ಆಳುವವರು ಶೋಷಣೆ ಮಾಡುವ ರಾಜಕೀಯ ಧೋರಣೆಯ ಮೂಲಕವೇ ಆಳ್ವಿಕೆ ನಡೆಸುತ್ತಾರೆ. ಆಳ್ವಿಕೆ ನಡೆಸಿದ ವಿವರಗಳನ್ನು ಪರಿಚಯ ಮಾಡುವಾಗ, ಆಳ್ವಿಕೆ ನಡೆಸಿದ ಧೋರಣೆಯನ್ನು ಅನೇಕರು ಗುರುತಿಸಲು ಹೋಗುವುದಿಲ್ಲ. ಅದರ ಜಾಗದಲ್ಲಿ ಯಾರು ಆಳಿದರು ಎಂಬ ಮಾಹಿತಿಯ ವಿವರಗಳನ್ನು ಮಾತ್ರ ಪರಿಚಯಿಸಲಾಗುತ್ತದೆ. ಹಾಗಾಗಿ ಆಳಿದವರ ಹೆಸರುಗಳು ಮಾತ್ರ ಪ್ರಜ್ಞೆಯ ಮತ್ತು ತಿಳುವಳಿಕೆಯ ಭಾಗವಾಗುತ್ತವೆ. ಉದಾಹರಣೆಗೆ ಚರಿತ್ರೆಯ ಬಗೆಗಿನ ವಿವರಗಳನ್ನೆ ಗಮನಿಸಬಹುದು. ಸಾಮ್ರಾಟರು, ಅರಸರು, ರಾಜರು, ದೊರೆಗಳು, ದಿವಾನರು, ಮಂತ್ರಿಗಳು ಹೀಗೆ ಇವರೇ ದೇಶವನ್ನು, ನಾಡನ್ನು ಆಳಿದರು ಎಂಬ ವಿವರಗಳು ಬರುತ್ತವೆ. ಅಥವಾ ಆ ವಿವರಗಳ ಮೂಲಕವೇ ಅದನ್ನು ಪರಿಚಯ ಮಾಡಲಾಗಿದೆ. ನಿಜವಾಗಿ, ಆಳಿದವರು ಯಾರೇ ಇರಲಿ; ಅವರು ಆಳ್ವಿಕೆ ನಡೆಸಿದ ರಾಜಕೀಯ ಧೋರಣೆ ಯಾವುದು? ಎಂಬುದು ಸಹಳ ಮುಖ್ಯವಾದ ತಾತ್ವಿಕ ಪ್ರಶ್ನೆ. ಆದರೆ ಈ ರಾಜಕೀಯ ಧೋರಣೆಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿ ಹಾಕಲಾಗಿದೆ. ಆಳುವ ವರ್ಗದ ಧೋರಣೆಯೇ ಇದನ್ನು ಮುಚ್ಚಿಹಾಕಿದೆ. ಹಾಗಾಗಿ ಅದು ವಿಚಾರವನ್ನು ಹಿಂದಿಟ್ಟು ವ್ಯಕ್ತಿಯನ್ನು ಮುಂದೆ ತರುತ್ತದೆ. ಇದು ಕೇವಲ ಚರಿತ್ರೆಯ ವಿಷಯಕ್ಕೆ ಮಾತ್ರ ಸಂಬಂಧಿಸಿದುದಲ್ಲ. ವರ್ತಮಾನದಲ್ಲೂ ಇದೇ ಸ್ಥಿತಿಯನ್ನು ಕಾಣುತ್ತೇವೆ. ಭಾರತದ ಮತ್ತು ಕರ್ನಾಟಕದ ವರ್ತಮಾನದ ರಾಜಕೀಯದ ಬಗ್ಗೆಯೂ ಇದೇ ಅಭಿಪ್ರಾಯವಿದೆ. ‘ಆ ವ್ಯಕ್ತಿ ಪ್ರಧಾನ ಮಂತ್ರಿ ಆದರೆ ಭಾರತ ಉದ್ಧಾರವಾಗುತ್ತದೆ. ಈ ವ್ಯಕ್ತಿ ಮುಖ್ಯ ಮಂತ್ರಿ ಆದರೆ ಕರ್ನಾಟಕ ಉದ್ಧಾರವಾಗುತ್ತದೆ’ ಎಂಬ ಹುಸಿ ಭ್ರಮೆಗಳನ್ನು ಕೆಲವರು ಹೇಳುತ್ತಿರುತ್ತಾರೆ. ಅದನ್ನು ಹೇಳಿದವರು ಯಾರು ಎಂಬುದನ್ನು ಅವಲಂಬಿಸಿ ಅದನ್ನು ‘ನಿಜ’ವೆಂದು ನಂಬಲಾಗುತ್ತದೆ. ವ್ಯಾಪಕವಾಗಿ ಅದರ ಭಜನೆ ಮಾಡಲಾಗುತ್ತದೆ. ರಾಜಕೀಯ ವಲಯದಲ್ಲಿರುವ ಈ ಮನೋಧರ್ಮವು ವೈಚಾರಿಕ ಮತ್ತು ಅಕಡೆಮಿಕ್ ವಲಯದ ಮೇಲೂ ಪ್ರಭಾವ ಬೀರಿದೆ. ಈ ಹಿನ್ನೆಲೆಯಲ್ಲಿ ರಾಜಕೀಯದ ಬಗ್ಗೆ ಇರುವ ಈ ತಪ್ಪು ತಿಳುವಳಿಕೆಯು ವೈಚಾರಿಕಲಯದಲ್ಲಿ ‘ಶಕ್ತಿಶಾಲಿ’ ಎಂಬ ವೇಶದಲ್ಲಿ ಬಳಕೆಯಲ್ಲಿದೆ. ವೈಚಾರಿಕ ವಲಯದಲ್ಲಿ ಒಂದು ಅಭಿಪ್ರಾಯವನ್ನು ಯಾರು ಹೆಳಿದರು ಎಂಬುದರ ಮೇಲೆಯೇ ಅದನ್ನು ಪರಿಗಣಿಸುವ ರೂಢಿ ಇದೆ. ಹೀಗೆ ವ್ಯಕ್ತಿಗಳ ಮೂಲಕವೆ ವಿಚಾರವನ್ನು ಪರಿಗಣಿಸಿ, ಗೌರವಿಸಿ, ಅದನ್ನು ಮುಖ್ಯವೆಂದು ಒಪ್ಪುವ ಮತ್ತು ನಂಬುವ ಸ್ಥಿತಿ ಅಕಡೆಮಿಕ್ ವಲಯದಲ್ಲಿ ಇದೆ. ಅಂತಹ ಪ್ರಸಿದ್ಧ ಹೇಳಿಕೆಗಳಲ್ಲಿ ಒಂದನ್ನು ಇಲ್ಲಿ ಚರ್ಚಿಸಬಹುದು. ‘ಇಂಗ್ಲಿಷರು ಭಾರತಕ್ಕೆ ಬಾರದಿದ್ದರೆ ನಾನು ಬ್ರಾಹ್ಮಣರ ಮನೆಯಲ್ಲಿ ಸೆಗಣಿ ಎತ್ತುತ್ತಿದ್ದೆ’ ಎಂದು ಕುವೆಂಪು ಅವರು ಒಂದು ಕಡೆ ಹೇಳಿದರು. ಇದರ ಬಗ್ಗೆ ಎರಡು ಆಯಾಮದ ಚರ್ಚೆ ಸಾಧ್ಯ. ಒಂದು: ಈ ಹೇಳಿಕೆಯನ್ನು ಅಂದಿನಿಂದ ಇಂದಿನವರೆಗೆ ತರ್ಕಾತೀತವಾಗಿ ಮತ್ತು ಪ್ರಶ್ನಾತೀತ ಒಪ್ಪಿಕೊಂಡು, ನಂಬಿಕೊಂಡು ಅದನ್ನು ಮೇಲಿಂದ ಮೇಲೆ ಉಲ್ಲೇಖಿಸಿ ವೈಭವೀಕರಿಸಲಾಗುತ್ತಿದೆ. ಯಾಕೆಂದರೆ ಇದನ್ನು ಕುವೆಂಪು ಹೇಳಿದರು ಎಂಬ ಒಂದೆ ಕಾರಣಕ್ಕೆ. ಅಂತಹ ಹೇಳಿಕೆಗಳನ್ನು ಬೇರೆಯವರೂ ಹೇಳಿರಬಹುದು. ಆದರೆ ಅಂತವರ ಹೇಳಿಕೆಗಳು ಮುಖ್ಯವಾಗುವುದಿಲ್ಲ. ಇದು ವಿಚಾರಕ್ಕೆ ಕೊಟ್ಟಿರುವ ಗೌರವ ಅಲ್ಲ. ವ್ಯಕ್ತಿಗೆ ಕೊಟ್ಟಿರುವ ಗೌರವ. ಹೀಗೆ ವಿಚಾರದ ಸ್ವರೂಪ ಮತ್ತು ಸತ್ಯಾಸತ್ಯತೆಯನ್ನು ಕಿಂಚಿತ್ತೂ ಪರಿಶೀಲಿಸಿದೆ ವ್ಯಕ್ತಿಗಳಿಗೆ ಕೊಡುವ ಗೌರವದ ಭಾಗವಾಗಿ ಅವರ ಹೇಳಿಕೆಗಳನ್ನು ತಲೆಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡುವ ವೈಚಾರಿಕ ಗುಮಾತನ ಸಾಕಷ್ಟು ನಡೆಯುತ್ತಿದೆ. ಎರಡು: ಕುವೆಂಪು ಅವರ ಹೇಳಿಕೆಯಲ್ಲಿ ಸತ್ಯಾಸತ್ಯತೆಯ ಸ್ವರೂಪ ಏನಿದೆ ಎಂಬುದನ್ನು ಪರಿಶೀಲಿಸಬೇಕಿದೆ. ಇಂಗ್ಲಿಷರು ಭಾರತಕ್ಕೆ ಬಂದುದರಿಂದ ಇಲ್ಲಿಯ ಜಮೀನ್ದಾರಿ ವರ್ಗ ಮತ್ತು ಬಂಡವಾಳಶಾಹಿ ವರ್ಗಗಳಿಗೆ ಅನುಕೂಲವಾಗಿದ್ದು ನಿಜ. ಆದರೆ ಕೂಲಿ ಕಾರ್ಮಿಕರು ಮಾತ್ರ ಭಾರತದ ಅನೇಕ ಕಡೆ ಕೂಲಿಯಿಲ್ಲದ ಬಿಟ್ಟಿ ಕೆಲಸ ಮಾಡಬೇಕಾಗಿ ಬಂತು. ದುಡಿಯುವ ಜನರ ಮೇಲೆ ಶೋಷಣೆ, ದಮನ, ದಬ್ಬಾಳಿಕೆಗಳು ಊಹೆಯನ್ನೂ ಮೀರಿ ಬೆಳೆದವು. ಇಂಗ್ಲಿಶರು ಭಾರತದ ಸಂಪತ್ತನ್ನು ಲೂಟಿ ಮಾಡಿದ್ದನ್ನು ಮತ್ತೆ ವಿವರಿಸುವ ಅಗತ್ಯವಿಲ್ಲ. ಇದು ಕುವೆಂಪು ಅವರ ಹೇಳಿಕೆಗೆ ಒಂದು ಆಯಾಮದ ಪ್ರತಿಕ್ರಿಯೆ. ಮತ್ತೊಂದು ಮುಖ್ಯ ಪ್ರತಿಕ್ರಿಯೆ ಏನೆಂದರೆ ‘ಇಂಗ್ಲಿಶರು ಭಾರತಕ್ಕೆ ಬಂದುದರಿಂದ ಕುವೆಂಪು ಅಂತವರು ಬ್ರಾಹ್ಮಣದ ಮನೆಯಲ್ಲಿ ಸೆಗಣಿ ಎತ್ತದಂತಹ ಪರಿಸ್ಥಿತಿ’ ಅವರಿಗೆ ದಕ್ಕಿರಬಹುದು. ಆದರೆ ಕುವೆಂಪು ಅವರು ಬದುಕಿದ್ದ ನೆಲದಲ್ಲೆ ಅನೇಕ ಅಸ್ಪೃಶ್ಯ ಸಮುದಾಯಗಳು ದುಷ್ಟ ಮನುಷ್ಯರ ಸೆಗಣಿ ಎತ್ತುವ ಪರಿಸ್ಥಿತಿ ಹೋಗಿಲ್ಲವಲ್ಲ. ಮುಟ್ಟಾದ ಹೆಂಗಸರ ಬಟ್ಟೆ ತೊಳೆಯುವ ಪಸ್ಥಿತಿ ಹೋಗಿಲ್ಲವಲ್ಲ. ಒಂದು ಜಾತಿಯವರು ಉಂಡು ಬಿಟ್ಟ ಎಂಜಲನ್ನು ಕೆಲವು ಅಸ್ಪೃಶ್ಯ ಸಮುದಾಯಗಳು ತಿನ್ನುತ್ತಿವೆಯಲ್ಲ. ಇವನ್ನೆಲ್ಲಾ ನೋಡಿಯೂ ನೋಡದಂತೆ ದಿವ್ಯ ಕುರುಡತನದಲ್ಲಿ ಕುವೆಂಪು ಅವರ ಹೇಳಿಕೆಯನ್ನು ಕೊಂಡಾಡಲಾಗುತ್ತಿದೆ. ಇಂಗ್ಲಿಷರು ಬಂದುದರಿಂದ ಕುವೆಂಪು ಪ್ರತಿನಿಧಿಸುವ ವರ್ಗಕ್ಕೆ ಬಿಡುಗಡೆ ಸಿಕ್ಕಿರಬಹುದು. ಆದರೆ ದುಡಿಯುವ ವರ್ಗ ಮತ್ತು ಅಸ್ಪೃಶ್ಯ ಸಮುದಾಯಗಳಿಗೆ ಸಿಕ್ಕಿದ್ದೇನು? ಇಂತಹ ತಡೆದಿವೆ. ಮೇಲುನೋಟದ ದುರ್ಬಲ ನೆಲೆಯಲ್ಲಿ ಆಳುವ ವರ್ಗವನ್ನು ವಿರೋಧಿಸುವವರೂ ಕೂಡ ವ್ಯಕ್ತಿಯ ಮೂಲಕವೇ ವಿಚಾರವನ್ನು ಎತ್ತಿ ಹಿಡಿಯುತ್ತಿದ್ದಾರೆ. ಆ ಮೂಲಕ ತಮಗೇ ಗೊತ್ತಿಲ್ಲದಂತೆ ಆಳುವ ವರ್ಗದ ಧೋರಣೆಯ ಭಾಗವಾಗುತ್ತಿದ್ದಾರೆ.

ಮೇಲಿನ ಚರ್ಚೆಯಿಂದ ಎರಡು ಅಂಶಗಳನ್ನು ಆಯ್ದುಕೊಂಡು ಅವನ್ನು ಚರ್ಚಿಸಬಹುದು. ಒಂದು : ಚರಿತ್ರೆಯನ್ನು ಪರಿಚಯಿಸುವ ಬಗೆ. ಮತ್ತೊಂದು ವ್ಯಕ್ತಿಯಿಂದಲೇ ಆಲೋಚನೆಗಳು ಹುಟ್ಟುತ್ತವೆ ಎಂಬುದು. ಚರಿತ್ರೆಯ ಪಠ್ಯಪುಸ್ತಕಗಳಲ್ಲಿ ಸಾಮ್ರಾಟರು, ಅರಸರು, ರಾಜರು, ದೊರೆಗಳು, ದಿವಾನರು, ಮಂತ್ರಿಗಳು ಹೀಗೆ ಇವರನ್ನು ಹೆಸರಿಸಿ, ಅವರು ಮಾಡಿಸಿದ (ಮಾಡಿದ ಅಲ್ಲ) ಕೆಲಸಗಳ ಮಾಹಿತಿ ಕೊಡಲಾಗುತ್ತದೆ. ವಿವಿಧ ಪರೀಕ್ಷೆಗಳಿಗೆ ಸಾಹಿತ್ಯವನ್ನು ಓದುವವರು ಸಾಹಿತ್ಯವನ್ನು ಇದೇ ರೀತಿಯಲ್ಲಿ ಓದುತ್ತಾರೆ. ಕೃತಿಕಾರರ ವಿವರ, ಕೃತಿಗಳ ವಿವರ, ಕೃತಿಯೊಳಗಿನ ಪಾತ್ರಗಳು, ಕೆಲವು ಪರಿಚಿತ ಸನ್ನಿವೇಶಗಳು ಇವಿಷ್ಟು ಗಒತ್ತಾದರೆ ಸಾಹಿತ್ಯ ಗೊತ್ತಾದಂತೆ ಎಂಬ ನಂಬಿಕೆ ಇದೆ. ಸಾಹಿತ್ಯ ಪಠ್ಯಪುಸ್ತಕಗಳ ಪರಿಚಯದ ಈ ಕ್ರಮವನ್ನೆ ಸಾಹಿತ್ಯ ಸಂಶೋಧನೆಯಲ್ಲೂ ಮಾಡಿದರಾಯಿತು ಎನ್ನುವುದು ಬಹುತೇಕ ಸಂಶೋಧಕರ ಅಂತಿಮ ತೀರ್ಮಾನ. ಇದನ್ನು ಬಲವಾಗಿ ನಂಬಿದವರಿಗೆ ಮತ್ತು ಈ ರೀತಿ ಬರವಣಿಗೆ ಮಾಡುವವರಿಗೆ ಸಂಶೋಧನೆಯು ಸಮಸ್ಯೆಯೂ ಆಗುವುದಿಲ್ಲ; ಅಲ್ಲಿ ಪ್ರಶ್ನೆಗಳೂ ಏಳುವುದಿಲ್ಲ. ಇಂತಹ ಸಂಶೋಧನೆಗಳೂ ಕೂಡ ನಡೆಯುತ್ತಿವೆ. ಆದರೆ ಸಾಹಿತ್ಯವನ್ನು ಸಂಶೋಧನೆಗಾಗಿ ಓದುವಾಗ ಅದನ್ನು ಮಾಹಿತಿ ಪ್ರಧಾನವಾಗಿ ಮಾತ್ರ ಓದಿ, ಅದರ ವಿವರಗಳನ್ನು ಬರೆದರೆ ಅದು ಗುಣಾತ್ಮಕವಾಗಿ ಸಂಶೋಧನೆ ಎನಿಸುವುದಿಲ್ಲ. ಸಾಹಿತ್ಯ ಕೃತಿಗಳ ಮಾಹಿತಿಗಳು, ಅದರ ಸೂಕ್ಷ್ಮಾತಿಸೂಕ್ಷ್ಮ ಮಾಹಿತಿಗಳು ಸಂಶೋಧನೆಗೆ ಬೇಕು. ಆ ಮಾಹಿತಿಗಳು, ವಿವರಗಳು ಸಾಹಿತ್ಯ ಕೃತಿಯಲ್ಲಿ ಸಂಘಟಿತಗೊಂಡಿರುವ ಕ್ರಮ, ಹಾಗೆ ಸಂಘಟಿತಗೊಳ್ಳಲು ಕೃತಿ ಬಳಸಿರುವ ತರ್ಕಗಳು, ತನ್ನ ಅಭಿವ್ಯಕ್ತಿಗೆ ಬಳಸಿರುವ ಭಾಷಿಕ ಸ್ತರಗಳು, ಅಭಿವ್ಯಕ್ತಿಯ ವಿವಿಧ ಶೈಲಿಗಳು (ಕುಸುಮಬಾಲೆಯೊಂದರಲ್ಲೆ ಕನಿಷ್ಠ ಇಪ್ಪತ್ತಕ್ಕೂ ಹೆಚ್ಚು ಅಭಿವ್ಯಕ್ತಿ ಶೈಲಿಗಳನ್ನು ಗುರುತಿಸಬಹುದು) ಇವೆಲ್ಲವನ್ನೂ ಜೋಡಿಸಿ ಕೃತಿ ರಚನೆ ಮಾಡಲು ಬಳಸಿರುವ ಧೋರಣೆ ಇವೆಲ್ಲವನ್ನೂ ಪರಿಶೀಲನೆ ಮಾಡಬೇಕಾಗುತ್ತದೆ.

ಈಗ ‘ವ್ಯಕ್ತಿಯಿಂದಲೇ ಆಲೋಚನೆಗಳು ಹುಟ್ಟುತ್ತವೆ’ ಎಂಬ ಚರ್ಚೆಯನ್ನು ಮುಂದುವರಿಸೋಣ. ‘ಶಂಖದಿಂದ ಬಂದರೆ ಮಾತ್ರ ತೀರ್ಥ’ ಎಂಬ ಮಾತು ಜನಜನಿತವಾಗಿದೆ. ಆದರೆ ಆ ಮಾತಿನ ಒಳಾರ್ಥ ಎಲ್ಲರಿಗೂ ಗೊತ್ತಿರುವುದೇ ಆಗಿದೆ. ಶಂಖದಿಂದ ಬರುವುದೆಲ್ಲವೂ ತೀರ್ಥವಾಗಿರುವುದಿಲ್ಲ ಎಂಬುದೆ ಅಲ್ಲಿಯ ಮುಖ್ಯ ಧ್ವನಿ. ಹಾಗಿದ್ದರೂ ಕೂಡ ಶಂಖದಿಂದ ಬರುವುದರಿಂದ ಅದನ್ನು ತೀರ್ಥ ಎಂದು ನಂಬಲಿ, ನಂಬುತ್ತಾರೆ ಎಂಬ ಇನ್ನೊಂದು ಆಯಾಮ ಕೂಡ ಅದರಲ್ಲಿದೆ. ಅಂದರೆ ಇದೊಂದು ಕೇವಲ ನಂಬಿಕೆಯ ಸಂಗತಿಯೇ ಹೊರತು ವಾಸ್ತವ ಅಲ್ಲ ಎಂಬುದನ್ನು ಮೇಲಿನ ಮಾತು ಸ್ಪಷ್ಟಪಡಿಸುತ್ತಿದೆ.  ಈ ಹಿನ್ನೆಲೆಯಲ್ಲಿ ಒಂದು ವಿಚಾರವನ್ನು, ಆಲೋಚನೆಯನ್ನು ಯಾರು ಹೇಳಿದರು ಎಂಬುದು ಮುಖ್ಯವಾಗಬೇಕಿಲ್ಲ. ಆ ವಿಚಾರದಲ್ಲಿ, ಆ ಆಲೋಚನೆಯಲ್ಲಿ ಏನಿದೆ ಎಂಬುದು ಮುಖ್ಯವಾಗಬೇಕು. (ಈ ಹಿನ್ನೆಲೆಯಲ್ಲಿ ಕುವೆಂಪು ಅವರ ಹೇಳಿಕೆಯನ್ನು ಆಗಲೆ ಚರ್ಚಿಸಲಾಗಿದೆ). ಆಗ ವ್ಯಕ್ತಿಗಿಂತ ವಿಚಾರ ಮುಖ್ಯವಾಗುತ್ತದೆ. ವ್ಯಕ್ತಿಗಿಂತ ವಿಚಾರ ದೊಡ್ಡದು ಎನಿಸುತ್ತದೆ. ವ್ಯಕ್ತಿಯಿಂದಲೇ ವಿಚಾರಗಳು ಹುಟ್ಟುವುದಿಲ್ಲ ಎಂಬುದು ತಿಳಿಯುತ್ತದೆ. ಆದ್ದರಿಂದ ವ್ಯಕ್ತಿಯಿಂದ ವಿಚಾರಗಳು ಹುಟ್ಟುವುದಿಲ್ಲ ಎಂದೇ ಪರಿಗಣಿಸಬೇಕು. ಆಳುವ ವರ್ಗವು ತನ್ನ ಶೋಷಕ ಆಲೋಚನೆಗಳನ್ನು ಕೆಲವು ವ್ಯಕ್ತಿಗಳ, ಸಂಸ್ಥೆಗಳ ಮತ್ತು ಮಾಧ್ಯಮಗಳ ಮೂಲಕ ಪ್ರಸಾರ ಮಾಡುತ್ತದೆ. ಮೊದಲ ಹಂತದಲ್ಲಿ ಅವನ್ನು ಒಪ್ಪುವಂತೆ, ನಂಬುವಂತೆ ಪ್ರಚೋದಿಸುತ್ತದೆ; ಬದ್ಧಗೊಳಿಸುತ್ತದೆ. ನಂತರ ಅವು ಒಪ್ಪಿತ ಮತ್ತು ಸ್ಥಾಪಿತ ನಂಬಿಕೆಗಳಾಗುತ್ತವೆ. ಆಗ ಅವುಗಳ ಮೂಲಕ ತನ್ನ ಆಲೋಚನೆಗಳನ್ನು ಹರಿಯ ಬಿಡುತ್ತದೆ. ಹಾಗೆ ನೋಡಿದರೆ ಪ್ರತಿಯೊಂದು ಶೋಷಕ ವರ್ಗಕ್ಕೆ, ಆಳುವ ವರ್ಗಕ್ಕೆ ತನ್ನದೇ ಆದ ರಾಜಕೀಯ ಧೋರಣೆ ಇರುತ್ತದೆ. ಅದನ್ನು ಜನರ ಮೇಲೆ ಸುತ್ತುಬಳಸು ವಿಧಾನದಲ್ಲಿ ಇಲ್ಲವೆ ನೇರವಾಗಿ, ನಯವಾಗಿ ಇಲ್ಲವೆ ಬಲಾತ್ಕಾರವಾಗಿ ಹೇರುತ್ತದೆ. ಅದಕ್ಕೆ ಜನರಿಂದ ಸಮ್ಮತಿಯನ್ನು, ಒಪ್ಪಿಗೆಯನ್ನು ಪಡೆಯುತ್ತದೆ. ಹೀಗೆ ತಾನೇ ಪಡೆದುಕೊಂಡ ಒಪ್ಪಿಗೆಯನ್ನು ‘ಅದು ಜನರ ಒಪ್ಪಿಗೆ’ ಎಂದು ಸಾರುತ್ತದೆ. ‘ವಡ್ಡಾರಾಧನೆ’ಯ ‘ಕಾರ್ತಿಕ ಋಷಿಯ ಕಥೆ’ಯಲ್ಲಿ, ಅಗ್ನಿರಾಜನು ತನ್ನ ಮಗಳಾದ ಕೃತ್ತಿಕೆಯನ್ನು ಮೋಹಿಸುತ್ತಾನೆ. ಅದು ಕೈಗೂಡಬೇಕಾದರೆ ತನ್ನ ಮಗಳನ್ನೇ ತಾನು ಮದುವೆಯಾಗಬೇಕು. ಹಾಗೆ ಮದುವೆಯಾದರೆ ಅದಕ್ಕೆ ವಿರೋಧ ಬರಬಹುದು. ಅದಕ್ಕೆ ಅಗ್ನಿರಾಜ ಒಂದು ಪ್ಲ್ಯಾನ್ ಮಾಡುತ್ತಾನೆ. ತನ್ನ ಆಸ್ಥಾನದ ಮಂತ್ರಿಗಳನ್ನು ಕರೆಸಿ, ‘ಈ ರಾಜ್ಯದಲ್ಲಿರುವ ಸುಂದರವಾದ ವಸ್ತು ಯಾರಿಗೆ ಸೇರಬೇಕು?’ ಎಂದು ಕೇಳುತ್ತಾನೆ. ಅದಕ್ಕೆ ಮಂತ್ರಿಗಳು ‘ಆ ವಸ್ತು ಯಾವುದು ಎಂದು ಹೇಳಿ’ ಎನ್ನುತ್ತಾರೆ. ಆಗ ಅಗ್ನಿರಾಜನಿಗೆ ಕೋಪ ಬರುತ್ತದೆ. ಅವನು ‘ಇವರನ್ನು ಈ ಪಟ್ಟಣದಿಂದ ಹೊರಗಟ್ಟಿ’ ಎಂದು ಆಜ್ಞೆ ಮಾಡುತ್ತಾನೆ. ಅಗ್ನಿರಾಜನ ನಿರೀಕ್ಷೆ ಇದ್ದುದು ‘ಆ ವಸ್ತು ರಾಜರಾದ ತಮಗೇ ಸೇರಬೇಕು’ ಎಂಬ ಉತ್ತರ ಬರುತ್ತದೆ ಎಂದು. ಆದರೆ ಅವನ ನಿರೀಕ್ಷೆ ನೆರವೇರಲಿಲ್ಲ. ಇದರಲ್ಲಿ ಎರಡು ಅಂಶಗಳನ್ನು ಗಮನಿಸಬೇಕು. ಒಂದು: ರಾಜನ ವಿಚಾರಗಳನ್ನು ಒಪ್ಪಿಕೊಂಡವರು ಮಾತ್ರ ಆ ರಾಜ್ಯದಲ್ಲಿ ಇರಬೇಕು. ಎರಡು: ರಾಜನ ವಿಚಾರಗಳನ್ನು ಒಪ್ಪಿಕೊಳ್ಳದವರು ಆ ರಾಜ್ಯದಲ್ಲಿ ಇರಬಾರದು. ಇದು ರಾಜನ ಧೋರಣೆ. ಅನಂತರ ಅವನು ಆಸ್ಥಾನದ ಪಂಡಿತರನ್ನು ಕರೆಸುತ್ತಾನೆ. ‘ಈ ರಾಜ್ಯದಲ್ಲಿರುವ ಸುಂದರವಾದ ವಸ್ತು ಯಾರಿಗೆ ಸೇರಬೇಕು?’ ಎಂದು ಕೇಳುತ್ತಾನೆ. ಅದಕ್ಕೆ ಅವರು ‘ಆ ಸುಂದರವಾದ ವಸ್ತು ರಾಜರಾದ ತಮಗೇ ಸೇರಬೇಕು’ ಎನ್ನುತ್ತಾರೆ. ಆಗ ಅಗ್ನಿರಾಜ ಅವರಿಗೆ ಚಿನ್ನಬೆಳ್ಳಿ ಮುಂತಾದುವುಗಳ ಉಡುಗೊರೆ ಕೊಡುತ್ತಾನೆ. ಆ ಮೂಲಕ ಅಗ್ನಿರಾಜ ಅವರಿಗೆ ಚಿನ್ನ ಬೆಳ್ಳಿ ಮುಂತಾದುವುಗಳ ಉಡುಗೊರೆ ಕೊಡುತ್ತಾನೆ. ಆ ಮೂಲಕ ಅಗ್ನಿರಾಜನಿಗೆ ತನ್ನ ಮಗಳನ್ನೇ ಮದುವೆಯಾಗಲು ಸಾಮಾಜಿಕ ಅಭಿಪ್ರಾಯ ರೂಪುಗೊಳ್ಳುತ್ತದೆ. ಅಥವಾ ತನ್ನ ಅಭಿಪ್ರಾಯವನ್ನೆ ಅಗ್ನಿರಾಜ ಆಸ್ಥಾನ ಪಂಡಿತರ ಮೂಲಕ ಸಾಮಾಜಿಕ ಅಭಿಪ್ರಾಯವನ್ನಾಗಿ ಮಾರ್ಪಡಿಸಿದ. ನಂತರ ತನ್ನ ಮಗಳನ್ನು ತಾನೆ ಮದುವೆಯಾದ. ಇದು ಬಹಳ ಮುಖ್ಯವಾದ ಸಂಗತಿ. ಇದು ಕೇವಲ ‘ವಡ್ಡಾರಾಧನೆ’ಯ (ಹತ್ತನೇ ಶತಮಾನ) ಕಾಲಕ್ಕೆ ಮಾತ್ರ ಸೀಮಿತವಾದುದಲ್ಲ. ಪ್ರತಿಯೊಂದು ಆಳುವ ವರ್ಗವೂ ತನ್ನ ಧೋರಣೆಯನ್ನು ಪಂಡಿತರ ಮೂಲಕ ಮತ್ತಿತರೆ ಮಾಧ್ಯಮಗಳ ಮೂಲಕ ಸಮಾಜಿಕ ಧೋರಣೆಯೆಂದು ಬಿಂಬಿಸುತ್ತಿರುತ್ತದೆ. ತನ್ನ ಪೂರ್ವ ತೀರ್ಮಾನವನ್ನು ಕೆಲವು ಬುದ್ಧಿಜೀವಿಗಳ ಮುಂದೆ ಬಿಟ್ಟು ಅವರ ಮೂಲಕ ಸಾಮಾಜಿಕ ಮನ್ನಣೆ ಪಡೆಯುತ್ತಿರುತ್ತದೆ. ಅಂತಹ ಬುದ್ಧಿಜೀವಿಗಳಿಗೆ ಬೇರೆಬೇರೆ ರೂಪದ ಉಡುಗೊರೆಗಳು ಸಿಗುತ್ತವೆ.

ಸಾಮ್ರಾಜ್ಯಶಾಹಿಯು ತನ್ನ ಸುಲಿಗೆಯ ನೀತಿಗಳನ್ನು ‘ಸುಧಾರಣೆ’ಯ ಹೆಸರಿನಲ್ಲಿ ಕಳೆದ ೯೦ರ ದಶಕದಲ್ಲಿ ಜಾರಿಮಾಡಿತು. ಹಾಗೆ ಜಾರಿ ಮಾಡುವ ಪೂರ್ವದಲ್ಲಿ ಕನಿಷ್ಠ ಒಂದು ದಶಕದವರೆಗೆ ವೈಚಾರಿಕ ಮತ್ತು ಅಕಡೆಮಿಕ್ ವಲಯದಲ್ಲಿ ತನ್ನ ಪರವಾದ ರಾಜಕೀಯ ಅಭಿಪ್ರಾಯವನ್ನು ವ್ಯಾಪಕವಾಗಿ ರೂಪಿಸಿಕೊಂಡಿತು. ಇಡೀ ಭಾರತವನ್ನು ಸಾಮ್ರಾಜ್ಯಶಾಹಿ ತನ್ನ ಲೂಟಿಗೆ ನೇರವಾಗಿ ತೆಗೆದುಕೊಂಡಿತು. ಆಗ ‘ಜಾಗತೀಕರಣ ಮತ್ತು ಆಧುನೀಕರಣ’ಗಳ ಚರ್ಚೆಗಳು ವ್ಯಾಪಕವಾಗಿ ನಡೆದವು. ಅಂತಹ ಬಹುತೇಕ ಚರ್ಚೆಗಳು (ಕೆಲವನ್ನು ಹೊರತುಪಡಿಸಿ) ಸಾಮ್ರಾಜ್ಯಶಾಹಿ ಲೂಟಿಯನ್ನು ಸಮರ್ಥಿಸಿದವು. ‘ಅದರಿಂದಲೇ ಭಾರತಕ್ಕೆ ಬಿಡುಗಡೆ’ ಎಂಬಂತೆ ವರ್ಣಿಸಿದರು. ಸಾಮ್ರಾಜ್ಯಶಾಹಿ ಮಾರುಕಟ್ಟೆಯು ಯುದ್ಧ ಅಸ್ತ್ರಗಳನ್ನು ಉತ್ಪಾದಿಸಿದೆ. ಅವುಗಳನ್ನು ವ್ಯಾಪಾರ ಮಾಡುವುದಕ್ಕಾಗಿ ಅದು ಜಗತ್ತಿನ ಬೇರೆಬೇರೆ ದೇಶಗಳ ನಡುವೆ ಯುದ್ಧವನ್ನು ಪ್ರಚೋದನೆ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಅಮೇರಿಕಾ ಸಾಮ್ರಾಜ್ಯಶಾಹಿ ಭಾರತ ಮತ್ತು ಪಾಕಿಸ್ಥಾನಗಳ ನಡುವೆ ಯುದ್ಧವನ್ನು ಪ್ರಚೋದನೆ ಮಾಡುತ್ತದೆ. ಎರಡೂ ದೇಶಗಳಿಗೆ ಯುದ್ಧ ಅಸ್ತ್ರಗಳನ್ನು ಮಾರಾಟ ಮಾಡುತ್ತದೆ. ತನ್ನ ಈ ಮಾರುಕಟ್ಟೆಯ ತಂತ್ರವನ್ನು ಮುಚ್ಚಿಟ್ಟುಕೊಳ್ಳುವ ಸಲುವಾಗಿ ಅದು ಹುಸಿ ದೇಶಪ್ರೇಮವನ್ನು ಹುಟ್ಟುಹಾಕುತ್ತದೆ. ಆಗ ಪಾಕಿಸ್ಥಾನದ ವಿರುದ್ಧ ಭಾರತದಲ್ಲೂ; ಭಾರತದ ವಿರುದ್ಧ ಪಾಕಿಸ್ಥಾನದಲ್ಲೂ ಪರಸ್ಪರ ವಿರೋಧದ ಅಭಿಪ್ರಾಯವನ್ನು ಹುಟ್ಟುಹಾಕುತ್ತದೆ. ಆ ಅಭಿಪ್ರಾಯ ಮಂಡನೆಗೆ ಬೇಕಾದ ನುಡಿಗಟ್ಟನ್ನೂ ಅದು ಕೊಡುತ್ತದೆ.

ಸಾಮ್ರಾಜ್ಯಶಾಹಿಯು ಎನ್.ಜಿ.ಓ.ಗಳನ್ನು ‘ಪ್ರಗತಿಪರ’ ವೇಶದಲ್ಲಿ ಪರಿಚಯ ಮಾಡಿಸಿ, ಅದನ್ನು ಒಪ್ಪಿಸಿದೆ ಮತ್ತು ನಂಬಿಸಿದೆ. ನಂತರ ತನ್ನ ಹಿತಾಸಕ್ತಿಗಳನ್ನು ಎನ್.ಜಿ.ಓ.ಗಳ ಮೂಲಕ ಹರಿಯಬಿಟ್ಟಿದೆ. ಎನ್.ಜಿ.ಓ.ಗಳನ್ನು ಒಪ್ಪುವವರು ಮತ್ತು ನಂಬುವವರು ಅವುಗಳ ವಿಚಾರಗಳನ್ನು ಅನುಮಾನಿಸುವುದಿಲ್ಲ. ಒಪ್ಪಿಯೇ ಒಪ್ಪುತ್ತಾರೆ. ಸ್ವಾಮಿಗಳನ್ನು, ಮಠಾಧೀಶರನ್ನು ವ್ಯಕ್ತಿಯಾಗಿ ಒಪ್ಪುವವರು ಮತ್ತು ನಂಬುವವರು ಅವರ ವಿಚಾರಗಳನ್ನು ಅನುಮಾನಿಸುವುದಿಲ್ಲ. ಒಪ್ಪಿಯೇ ಒಪ್ಪುತ್ತಾರೆ. ಪ್ರಜಾಪ್ರಭುತ್ವವನ್ನು ಒಪ್ಪುವವರು ಮತ್ತು ನಂಬುವವರು ಅದರ ಕಾರ್ಯಕ್ರಮ ಮತ್ತು ನೀತಿಗಳನ್ನು ಅನುಮಾನಿಸುವುದಿಲ್ಲ. ಒಪ್ಪಿಯೇ ಒಪ್ಪುತ್ತಾರೆ. ಅಂದರೆ ಅದರ ರಾಜಕೀಯ ಧೋರಣೆಯನ್ನು ನಂಬುತ್ತಾರೆ, ಒಪ್ಪುತ್ತಾರೆ ಮತ್ತು ಸಮರ್ಥಿಸುತ್ತಾರೆ. ವೈಚಾರಿಕ ಮತ್ತು ಅಕಡೆಮಿಕ್ ವಲಯದಲ್ಲಿ ಈ ಬಗೆಯ ಸಮರ್ಥಕರನ್ನು ಮಾಧ್ಯಮಗಳು ಕೊಂಡಾಡುತ್ತವೆ. ಇದನ್ನು ಉಳಿದವರು ಪ್ರಶ್ನಾತೀತವಾಗಿ ನಂಬುತ್ತಾರೆ. ಅಂತರರಾಷ್ಟ್ರೀಯ ಹಣಕಾಸು ಬಂಡವಾಳಕ್ಕೆ ಸಂಬಂಧಿಸಿದಂತೆ ಏಕಸ್ವಾಮ್ಯ ಬಂಡವಾಳಕ್ಕೆ ಪೂರಕವಾಗಿ ಸೂಕ್ಷ್ಮಬಂಡವಾಳವನ್ನು ಸಮರ್ಥಿಸಿದ ಅಮರ್ತ್ಯಸೇನ್‌ಗೆ ನೋಬೆಲ್ ಪ್ರಶಸ್ತಿ ಕೊಟ್ಟುದನ್ನು ಈ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು.

ಸಾಹಿತ್ಯ ಸಂಶೋಧನೆಯ ಸಂದರ್ಭದಲ್ಲಿಯೂ ಬಹುತೇಕ ಮೇಲಿನ ಕುರುಡು ನಂಬಿಕೆಯೇ ರೂಢಿಯಲ್ಲಿರುವುದನ್ನು ಗುರುತಿಸಬಹುದು. ಬಸವಣ್ಣ, ಕುವೆಂಪು, ಬೇಂದ್ರೆ, ಲಂಕೇಶ್, ಡಿ.ಆರ್. ನಾಗರಾಜ್ ಈ ಯಾರೆ ಇರಲಿ. ಅವರ ಮೇಲೆ ವೈಯಕ್ತಿಕ ನೆಲೆಯಲ್ಲಿ ಅಭಿಮಾನ ಮತ್ತು ಗೌರವಗಳು ಇದ್ದಾಗ ಆ ಪ್ರಜ್ಞೆಯೇ ಅವರ ವಿಚಾರಗಳನ್ನು ಯಾಥಾರ್ಥ ನಂಬುವಂತೆ, ಪ್ರಶ್ನೆ ಮಾಡದಂತೆ ಮಾಡುತ್ತದೆ. ಈ ನಂಬಿಕೆಯೆ ಅವರು ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಗಳ ಬಗ್ಗೆ ಹೇಳಿರುವ ಹೇಳಿಕೆಗಳನ್ನು ಕೇವಲ ಉಲ್ಲೇಖ ಮಾಡುವಂತೆ ಮಾಡುತ್ತದೆ. ಇದು ಕನ್ನಡ ಸಾಹಿತ್ಯ ಸಂಶೋಧನೆಯಲ್ಲಿ ಬಹಳ ಗಟ್ಟಿಯಾಗಿ ಬೇರೂರಿದೆ. ಒಂದು ಕಾಲದಲ್ಲಿ ಜಿ.ಎಚ್. ನಾಯಕರಂತಹ ನವ್ಯ ವಿಮರ್ಶಕರು ಹೇಳಿದ್ದು ವೇದವಾಕ್ಯ ಆಗಿತ್ತು. ಹೀಗೆ ಕೆಲವು ಒಪ್ಪಿತ ವಿಮರ್ಶಕರ ಅಭಿಪ್ರಾಯಗಳನ್ನು ಇಲ್ಲವೆ ಸರಳ ತೀರ್ಮಾನಗಳನ್ನು ಆ ವ್ಯಕ್ತಿಗಳ ಬಗೆಗಿನ ಅಭಿಮಾನದ ಕಾರಣಕ್ಕೆ ಕೆಲವು ಸಂಶೋಧನೆಗಳು ಪ್ರಶ್ನೆ ತರ್ಕ ಮಾಡದೆ ಮತ್ತು ವಿವೇಕ ಇಲ್ಲದೆ ಉಲ್ಲೇಖ ಮಾಡುತ್ತಿವೆ. ಇದರ ಪ್ರಭಾವ ಸಾಂಕ್ರಾಮಿಕ ರೋಗದಂತೆ ಹರಡಿದೆ. ಈ ವ್ಯಕ್ತಿನಿಷ್ಠ ಅಭಿಮಾನದ ಕಾರಣದಿಂದ ಜಾಗತೀಕರಣವನ್ನು ಸಾಮ್ರಾಜ್ಯಶಾಹಿ ರಾಜಕೀಯ ತಿಳುವಳಿಕೆಯ ಕಾರಣದಿಂದ ಏಕಮುಖವಾಗಿ ಸಮರ್ಥಿಸುವ ಪೂರ್ಣಚಂದ್ರ ತೇಜಸ್ವಿ ಅವರ ಅಭಿಪ್ರಾಯ ಮುಖ್ಯವಾಗುತ್ತದೆ. ಮತಾಂತರವನ್ನು ವಿರೋಧಿಸುವ ಎಸ್.ಎಲ್. ಭೈರಪ್ಪನವರ ಅಭಿಪ್ರಾಯ ಮುಖ್ಯವಾಗುತ್ತದೆ. ಹೀಗೆ ಕನ್ನಡ ಎಷ್ಟೊ ಜನ ಬರಹಗಾರರ ಒಂದೊಂದು ಬಿಡಿ ಹೇಳಿಕೆಗೆ ಇನ್ನಿಲ್ಲದ ಮನ್ನಣೆ ಕೊಡಲಾಗಿದೆ. ಆ ಹೇಳಿಕೆಗಳನ್ನು ಪ್ರಶ್ನಾತೀತವಾಗಿ ಮತ್ತು ತರ್ಕಾತೀತವಾಗಿ ಕುರುಡಾಗಿ ನಂಬುತ್ತಾ, ಸಮರ್ಥಿಸುತ್ತಾ ಬರಲಾಗಿದೆ. ಈ ಮೂಲಕ ಸ್ವತಂತ್ರ ಆಲೋಚನೆ ನಡೆಯುವಂತೆ ಮಾಡಲಾಗಿದೆ. ಇದು ಸಂಶೋಧನೆಗೆ ಪಾರ್ಶ್ವಿಕ ರೋಗದಂತೆ ಬಡಿದಿದೆ. ವ್ಯಕ್ತಿನಿಷ್ಠ ಅಭಿಮಾನ ಮುಂದುವರಿದಿದೆ.

‘ಆನು ದೇವಾ ಹೊರಗಣವನು’ ಕೃತಿಗೆ ಬಂದ ಪ್ರಕ್ರಿಯೆಗಳನ್ನು ಈ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು. ವ್ಯಕ್ತಿಯಾಗಿ ಬಸವಣ್ಣನ ಬಗ್ಗೆ ಇಟ್ಟುಕೊಂಡಿದ್ದ ಗೌರವ, ಅಭಿಮಾನ ಮತ್ತು ಪೂಜ್ಯಭಾವನೆಗಳೆಲ್ಲ ಅಲ್ಲಿ ವ್ಯಕ್ತವಾದವು. ವಿಮರ್ಶಕರು, ಸಂಶೋಧಕರು, ಚಿಂತಕರು, ಹೋರಾಟಗಾರರ ಬಗ್ಗೆಯೂ ಅದೇ ಬಗೆಯ ವ್ಯಕ್ತಿಗೌರವ, ಅಭಿಮಾನ, ನಂಬಿಕೆ ಮತ್ತು ಒಪ್ಪಿಗೆಗಳನ್ನು ಸ್ಥಾಪನೆ ಮಾಡಲಾಗಿದೆ. (ಸ್ಥಾಪನೆ ಮಾಡುವುದು ಭೌತಿಕ ವಸ್ತುಪ್ರತಿಮೆಗಳನ್ನು. ಅವುಗಳಿಗೆ ಯಾವತ್ತಿದ್ದರೂ ಅಳಿವು ಇದ್ದೇ ಇದೆ. ಈ ಕಾರಣದಿಂದಲೇ ಇಲ್ಲಿ ಸ್ಥಾಪನೆ ಮಾಡಲಾಗಿದೆ ಎಂಬುದನ್ನು ಬಳಸಲಾಗಿದೆ). ಹೀಗೆ ಸ್ಥಾಪನೆಗೊಂಡಿರುವವರು ಸಾಹಿತ್ಯವನ್ನು ಕುರಿತು ಕೆಲವು ಹೇಳಿಕೆಗಳನ್ನು ನೀಡಿರುತ್ತಾರೆ. ಆ ಹೇಳಿಕೆಗಳ ಹಿಂದೆ ವಿಶ್ಲೇಷಣೆ ಇದ್ದಿರಬಹುದು; ಇಲ್ಲದೆ ಇರಬಹುದು. ಅದು ಬೇರೆ ಪ್ರಶ್ನೆ. ಆದರೆ ಸಾಹಿತ್ಯ ಸಂಶೋಧನೆಯಲ್ಲಿ ಇಂತಹ ಸ್ಥಾಪನೆಗೊಂಡ ಹೇಳಿಕೆಗಳೇ ಬಂಡವಾಳ ಆಗುತ್ತಿರುವ ಪರಿಸ್ಥಿತಿ ಇದೆ. ಅಂತಹ ಹೇಳಿಕೆಗಳಿಗೆ ಯಾವ ಭಿನ್ನಮತವನ್ನೂ ವ್ಯಕ್ತಿಮಾಡದೆ ಅವನ್ನು ಬಳಸಿ ಕೊಳ್ಳಲಾಗುತ್ತದೆ. ಸಂಶೋಧನೆಯಲ್ಲಿ ತಮ್ಮ ವಾದದ ಸಮರ್ಥನೆಗೆ ಹೀಗೆ ಬಳಸಿಕೊಳ್ಳುವುದು ತಪ್ಪೇನಲ್ಲ. ಆದರೆ ಅಂತಹ ತೀರ್ಮಾನಗಳನ್ನು ಮತ್ತು ಹೇಳಿಕೆಗಳನ್ನು ಬಳಸಿಕೊಳ್ಳುವ ಸ್ವರೂಪ ಮತ್ತು ಸ್ವಭಾವ ಯಾವುದಾಗಿರಬೇಕು ಎಂಬುದು ನಮಗಿಲ್ಲಿ ಮುಖ್ಯ. ಉದಾಹರಣೆಗೆ ‘ಇಂತಹ ಒಂದು ಕೃತಿಯ ಬಗ್ಗೆ, ಇಂತಹ ಒಬ್ಬ ವಿಮರ್ಶಕರು, ಇಂತಹ ನಿಲುವು ತಾಳಿದ್ದಾರೆ. ಹಾಗಾಗಿ ಅದು ಪ್ರಶ್ನಾತೀತ ಮತ್ತು ಅದು ಮಾತ್ರ ಅಧಿಕೃತ’ ಎಂಬಂತೆ ಸಂಶೋಧನೆಯಲ್ಲಿ ನಂಬಲಾಗುತ್ತಿದೆ. ಬರವಣಿಗೆಯ ಈ ಸ್ವರೂಪ ಮತ್ತು ಸ್ವಭಾವದಲ್ಲಿ ಅಡಗಿರುವುದು ವಿಚಾರದ ಮನ್ನಣೆ ಅಲ್ಲ; ಬದಲಿಗೆ ವ್ಯಕ್ತಿಗೆ ಕೊಡುತ್ತಿರುವ ಮನ್ನಣೆ. ಹೀಗೆ ವ್ಯಕ್ತಿಗಳಿಗೆ ಕೊಡುತ್ತಿರುವ ಮನ್ನಣೆ, ಅಭಿಮಾನಗಳು ಸಾಹಿತ್ಯ ಚಿಂತನೆಗಳ ವೇಶತೊಟ್ಟು ಬರುತ್ತಿವೆ. ಇದು ಬಹಳ ಅಪಯಕಾರಿ ಸಂಗತಿ. ಇಂತಹ ಸಂಶೋಧನ ಬರವಣಿಗೆಗಳು ಸಾಹಿತ್ಯವನ್ನು ಕುರಿತು ಈಗಾಗಲೆ ಬಂದಿರುವ ಅಭಿಪ್ರಾಯಗಳನ್ನು ಸಂಗ್ರಹಿಸಿ, ಸಮರ್ಥಿಸುವುದನ್ನೆ ತಮ್ಮ ಪ್ರಾಥಮಿಕ ಮತ್ತು ಅಂತಿಮ ಬಂಡವಾಳ ಮಾಡಿಕೊಳ್ಳುತ್ತವೆ. ಇವು ಬೇರೆಯವರ ಅಭಿಪ್ರಾಯಗಳಿಗೆ, ನಿಲುವುಗಳಿಗೆ ಸಹಮತ ತೋರುವುದೇ ಸಂಶೋಧನೆ ಎಂದು ಭಾವಿಸುತ್ತವೆ. ಬೇರೆಯವರ ನಿಲುವಿಗೆ ಭಿನ್ನಮತ ವ್ಯಕ್ತಪಡಿಸಿದರೆ ಅ ಬಗ್ಗೆ ಯಾರ ಏನು ತಪ್ಪು ತಿಳಿದುಬಿಟ್ಟಾರೊ ಎಂಬ ಭಯ ಒಂದು ಕಡೆ. ಜೊತೆಗೆ ಸ್ವತಂತ್ರ ಆಲೋಚನೆ ಮಾಡದಿರುವ ಬೌದ್ಧಿಕ/ವೈಚಾರಿಕ ಬಡತನ ಮತ್ತೊಂದು ಕಡೆ. ಸಂಶೋಧನೆಗೆ ಆರಿಸಿಕೊಳ್ಳುವ ಸಾಹಿತ್ಯ ಪ್ರಕಾರದ ಬಗ್ಗೆ ಕೆಲವು ಹಳಸಲು ಹೇಳಿಕೆಗಳನ್ನು ಬಳಸಿ ಅದರ ಸ್ವರೂಪವನ್ನು ವಿವರಿಸುವುದಿದೆ. ‘ಸಾಹಿತ್ಯ ಎಂದರೆ ಏನು?’ ಎಂಬುದಕ್ಕೆ ರಂ. ಶ್ರೀ. ಮುಗಳಿ ಅವರು ತಮ್ಮ ‘ಕನ್ನಡ ಸಾಹಿತ್ಯ ಚರಿತ್ರೆ’ಯಲ್ಲಿ ಬರೆದಿರುವ ‘ರಸಾನಂದದ ಸುಂದರಾದ ಅಭಿವ್ಯಕ್ತಿಯೇ ಸಾಹಿತ್ಯ’ ಎಂಬುದನ್ನು ಗಟ್ಟಿಯಾಗಿ ನಂಬಲಾಗಿದೆ. ಸಾಹಿತ್ಯದ ಅಭಿವ್ಯಕ್ತಿಗಳು ರಸದ ಆನಂದವನ್ನೂ, ಅಭಿವ್ಯಕ್ತಿಯ ಸುಂದರತೆಯನ್ನೂ ಬಿಟ್ಟು ಇನ್ನೂ ಮುಂದೆ ಬಂದಿವೆ. ಹಾಗಾಗಿ ಕೇವಲ ಸ್ಥಾಪಿತ ಅಭಿಪ್ರಾಯಗಳನ್ನು, ಬಿಟ್ಟು ಇನ್ನೂ ಮುಂದೆ ಬಂದಿವೆ. ಹಾಗಾಗಿ ಕೇವಲ ಸ್ಥಾಪಿತ ಅಭಿಪ್ರಾಯಗಳನ್ನು, ಹೇಳಿಕೆಗಳನ್ನು ಉಲ್ಲೇಖಿಸಿ, ಅವುಗಳಿಗೆ ಸಹಮತ ಸೂಚಿಸುವುದು ಸಂಶೋಧನೆಯಾಗುವುದಿಲ್ಲ. ಯಾಕೆಂದರೆ ಸಂಶೋಧನೆಯಲ್ಲಿ ಎರಡು ಮುಖ್ಯ ಕೊರತೆಯ ಅಂಶಗಳನ್ನು ಇದು ತೋರಿಸುತ್ತದೆ. ಒಂದು: ಕೇವಲ ಸಹಮತಗಳ ಒಮ್ಮುಖ ಆಲೋಚನೆ. ಎರಡು: ಸಂಸೋಧಕರ ಸ್ವತಂತ್ರ ಆಲೋಚನೆಯ ಗೈರುಹಾಜರಿ. ಇವೆರಡೂ ಕೂಡ ಸಾಹಿತ್ಯ ಸಂಶೋಧನೆಯನ್ನು ವ್ಯಾಪಕವಾಗಿ ಆವರಿಸಿವೆ. ಅವು ಸಂಶೋಧನೆಯ ಗುಣಮಟ್ಟವನ್ನು ತೀವ್ರವಾಗಿ ಬಡಕಲಾಗಿಸಿವೆ; ಬಡವಾಗಿಸಿವೆ.

ಸಾಹಿತ್ಯದ ಕೆಲವು ಪ್ರಕಾರ, ಕೆಲವು ವಿಷಯ ಮತ್ತು ಕೆಲವು ಬರಹಗಾರರಿಗೆ ಸಂಬಂಧಿಸಿ ಕೆಲವು ಅಭಿಪ್ರಾಯಗಳು, ಹೇಳಿಕೆಗಳು ಸ್ಥಾಪನೆಯಾಗಿವೆ. ಆ ಅಭಿಪ್ರಾಯಗಳು ವೈಚಾರಿಕ ಮಾರುಕಟ್ಟೆಯಲ್ಲಿ ಅಗ್ಗದ ದರದಲ್ಲಿ ಲಭ್ಯವಾಗುತ್ತಿವೆ. ಯಾವುದೆ ಬೌದ್ಧಿಕ ಶ್ರಮವಿಲ್ಲದೆ ಅವನ್ನು ಪ್ರಶ್ನಾತೀತವಾಗಿ ಬಳಸುವ ರೂಢಿಯೊಂದು ಜಾರಿಯಲ್ಲಿದೆ. ವಚನಗಳನ್ನು ಕುರಿತು ಸಂಶೋಧನೆ ನಡೆಸುವವರು, ಆ ಕುರಿತು ಕೆಲವರು ಒಪ್ಪಿರುವ ತೀರ್ಮಾನಗಳನ್ನು, ನಿಲುವುಗಳನ್ನು ಪ್ರಶ್ನಾತೀತವಾಗಿ ಬಳಸುತ್ತಿದ್ದಾರೆ. ‘ವಚನಗಳು ಎಲ್ಲರಿಗೂ ಅರ್ಥವಾಗುತ್ತವೆ’, ‘ವಚನಕಾರರಲ್ಲಿ ಸಮಾನತೆ ಇತ್ತು’ ಇವೇ ಮುಂತಾದ ಹಳಸಲು ಅಭಿಪ್ರಾಯಗಳು ಪುನರಾವರ್ತನೆಯಗುತ್ತಿವೆ. ಇವು ಸಂಶೋಧನೆಗೆ ವೈಚಾರಿಕವಾಗಿ ಬಹಳ ದೊಡ್ಡ ಶತ್ರುಗಳಾಗಿವೆ. ಇಂತಹ ಅಭಿಪ್ರಾಯಗಳನ್ನು ಸಂಶೋಧನೆಯಲ್ಲಿ ಪ್ರಶ್ನಾತೀತವಾಗಿ ಯಾಕೆ ನಂಬುತ್ತಿದ್ದಾರೆ ಎಂದರೆ ಅವನ್ನು ಹೇಳಿರುವವರು ‘ದೊಡ್ಡವರು’ ಎಂಬ ಕಾರಣಕ್ಕೆ ಅಷ್ಟೆ. ಮತ್ತು ಅವರ ಮೇಲಿನ ಅಭಿಮಾನದ ಕಾರಣಕ್ಕೆ ಅಷ್ಟೆ. ಇದೇ ರೀತಿಯಲ್ಲಿ ‘ನವೋದಯ ಕಾವ್ಯ’ ಎಂದ ತಕ್ಷಣ ‘ನಿಸರ್ಗ ವರ್ನನೆ, ದೇಶಪ್ರೇಮ’ ಎಂದು ಬಿಡುವುದು. ಇದೂ ಕೂಡ ‘ದೊಡ್ಡವರು’ ಹೇಳಿದ ಹೇಳಿಕೆಯಾಗಿ ಸಂಶೋಧಕರಿಗೆ ಅದನ್ನು ನಂಬುವ ಮತ್ತು ಸಮರ್ಥಿಸುವ ದೌರ್ಬಲ್ಯ ಬಂದುಬಿಟ್ಟಿದೆ.

ಈಗಾಗಲೆ ತೀರ್ಮಾನ ಮಾಡಿರುವ ಹೇಳಿಕೆಗಳನ್ನು ಸಂಶೋಧಕರು ಪ್ರಶ್ನೆ ಮಾಡದಿರುವುದಕ್ಕೆ ಇನ್ನೂ ಕೆಲವು ಕಾರಣಗಳಿವೆ. ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಪ್ರಶ್ನೆ ಮಾಡುವ ವಿಧಾನದಲ್ಲಿ ರೂಪಿಸುತ್ತಿಲ್ಲ. ಅಥವಾ ವಿದ್ಯಾರ್ಥಿಗಳು ಪ್ರಶ್ನೆ ಕೇಳಬಹುದಾದ ಸಹಜ ಮಾನವ ಸ್ವಭಾವವನ್ನೆ ನಯವಾಗಿ ಶಮನ ಮಾಡಲಾಗಿದೆ, ಹತ್ತಿಕ್ಕಲಾಗಿದೆ ಇಲ್ಲವೆ ನಾಶ ಮಾಡಲಾಗಿದೆ. ಪ್ರಶ್ನೆ ಕೇಳುವವರು ಏನಿದ್ದರೂ ಶಿಕ್ಷಕರು. ವಿದ್ಯಾರ್ಥಿಗಳ ಕೆಲಸ ಉತ್ತರ ಹೇಳುವುದಷ್ಟೆ ಎಂಬಂತಾಗಿದೆ. ಈ ಉತ್ತರ ಹೇಳುವಾಗಲೂ ಅದಕ್ಕೆ ಅದರದೇ ಆದ ಸ್ವರೂಪ ಮತ್ತು ಸ್ವಭಾವವನ್ನು ಫಿಕ್ಸ್ ಮಾಡಲಾಗಿದೆ. ಶಿಕ್ಷಕರು ಮತ್ತು ಶಿಕ್ಷಣ ವ್ಯವಸ್ಥೆ ‘ಒಪ್ಪುವಂತಹ’ ಉತ್ತರ ಹೇಳಬೇಕು. ಹಾಗಾಗಿ ವಿದ್ಯಾರ್ಥಿಗಳ ಮನೋಧರ್ಮವನ್ನು ಮತ್ತು ಆಲೋಚನ ವಿಧಾನವನ್ನು ‘ಒಪ್ಪಿಸುವ’ ದೃಷ್ಟಿಕೋನವಾಗಿ ಮಾರ್ಪಡಿಸಲಾಗುತ್ತಿದೆ. ಹೀಗೆ ಒಪ್ಪಿಸುವ ದೃಷ್ಟಿಕೋನವನ್ನು ಅವರಲ್ಲಿ ಬೆಳೆಸುತ್ತಲೆ, ಅವರ ಪ್ರಶ್ನಿಸುವ ದೃಷ್ಟಿಕೋನವನ್ನು ಉಪೇಕ್ಷೆ ಮಾಡಲಾಗುತ್ತಿದೆ. ಹೀಗೆ ‘ಒಪ್ಪಿಸುವ’ ಕ್ರಮವು ಶ್ರೇಣೀಕರಣದ ಸಾಮಾಜಿಕ ವಸ್ತುಸ್ಥಿತಿಯ ಬಹಳ ದೊಡ್ಡ ಭಾಗವೇ ಆಗಿದೆ. ದೇವರಿಗೆ ಭಕ್ತರು, ಮಂತ್ರಿಗಳಿಗೆ ಅಧಿಕಾರಿಗಳು, ಅಧಿಕಾರಿಗಳಿಗೆ ನೌಕರರು, ಗಂಡನಿಗೆ ಹೆಂಡತಿ, ತಂದೆ ತಾಯಿಗಳಿಗೆ ಮಕ್ಕಳು, ಶಿಕ್ಷಕರಿಗೆ ವಿದ್ಯಾರ್ಥಿಗಳು, ಮಾರ್ಗದರ್ಶಕರಿಗೆ ಸಂಶೋಧಕರು ‘ಒಪ್ಪಿಸಬೇಕು’. ಈ ‘ಒಪ್ಪಿಸುವ ಧೋರಣೆ’ ಸಂಶೋಧನೆಯಲ್ಲಿ ಕೇವಲ ಶೈಕ್ಷಣಿಕ ತಿಳುವಳಿಕೆಯ ಭಾಗವಾಗಿಲ್ಲ; ಬದಲಿಗೆ ಅದು ಅವರ ಸಾಮಾಜಿಕ ಪ್ರಜ್ಞೆಯ ಭಾಗವಾಗಿದೆ. ಹಾಗಾಗಿ ಸಂಶೋಧನೆಯಲ್ಲಿ ‘ಎಲ್ಲರೂ ಒಪ್ಪುವ ವಿಚಾರಗಳನ್ನು ಬರೆಯಬೇಕು’ ಎನ್ನಲಾಗುತ್ತದೆ. ‘ಬೇರೆ ರೀತಿಯಲ್ಲಿ ಬರೆದರೆ ಯಾರಾದರೂ ಒಪ್ಪದಿದ್ದರೆ ಏನು ಮಾಡುವುದು?’ ಎಂಬ ಪ್ರಶ್ನೆಗಳು ಸಂಶೋಧನೆಯಲ್ಲಿ ಆಗಾಗ ಬರುತ್ತವೆ. ‘ಎಲ್ಲರೂ ಒಪ್ಪುವ ಹಾಗೆ ಬರೆಯಬೇಕು’ ಎಂಬುದನ್ನು ಸಂಶೋಧಕರ ಮೇಲೆ ಹೇರಲಾಗುತ್ತಿದೆ. ಹಾಗಾದರೆ ‘ಎಲ್ಲರೂ ಒಪ್ಪುವ ಹಾಗೆ ಬರೆಯುವುದು ಎಂದರೇನು?’ ಒಂದು ವಿಷಯದ ಬಗ್ಗೆ ಒಂದೇ ರೀತಿಯಲ್ಲಿ ಬಂದಿರುವ ಹಲವು ಅಭಿಪ್ರಾಯಗಳನ್ನು ಮತ್ತೆ ಪುನಾವರ್ತಿಸುವುದು ಎಂದೇ ಇದರ ಅರ್ಥ. ಹಾಗಾಗಿ ‘ಎಲ್ಲರೂ ಒಪ್ಪುವ ಹಾಗೆ ಬರೆಯಲು’ ಸಂಶೋಧಕರು ‘ಈಗಾಗಲೆ ಒಪ್ಪಿತವಾಗಿರುವ’ ಅಭಿಪ್ರಾಯಗಳ, ಹೇಳಿಕೆಗಳ ಮೊರೆ ಹೋಗುತ್ತಿದ್ದಾರೆ. ಅಥವಾ ಮೇಲಿನ ವಿವರಣೆಯನ್ನು ಬಳಸಿ ಹೇಳುವುದಾದರೆ, ಹಿರಿಯರು, ಗುರುಗಳು ಮತ್ತು ಮಾರ್ಗದರ್ಶಕರು ಒಪ್ಪುವಂತೆ ಬರೆಯಬೇಕು ಎಂದು ಅರ್ಥ. ಅಂದರೆ ಮೇಲಿನವರು ಒಪ್ಪುವಂತೆ ಕೆಳಗಿನವರು ಬರೆಯಬೇಕು ಎಂದಂತಾಯಿತು. ಇದು ಕೇವಲ ಒಪ್ಪಿಸುವ ಮಾದರಿ. ಈ ಮಾದರಿಯು ಆಲೋಚನೆಗೆ ಚಲನಶೀಲತೆಯನ್ನು ಕೊಡುವುದಿಲ್ಲ. ಬದಲಾಗಿ ಅದನ್ನು ಸ್ಥಾವರ ಗೊಳಿಸುತ್ತದೆ. ಅನೇಕರಿಗೆ ತಮ್ಮ ಅಭಿಪ್ರಾಯವನ್ನು ಉಲ್ಲೇಖ ಮಾಡಿ, ಅದನ್ನು ಕೊಂಡಾಡಿದರೆ ಖುಷಿಯಾಗುತ್ತದೆ. ಆದರೆ ಉಲ್ಲೇಖ ಮಾಡಿದ್ದನ್ನು ಯಥಾವತ್ತಾಗಿ ಒಪ್ಪಿಕೊಳ್ಳದೆ ಅದನ್ನು ಬೇರೊಂದು ದೃಷ್ಟಿಕೋನದಿಂದ ವಿಮರ್ಶೆ ಮಾಡಿದರೆ ಅಸಮಾಧಾನವಾಗುತ್ತದೆ. ಹೀಗೆ ಸಂಶೋಧನ ಬರವಣಿಗೆಯಲ್ಲಿ ಕೆಲವರನ್ನು ಸಮಾಧಾನ ಮಾಡುವ ಸಲುವಾಗಿ ಉಲ್ಲೇಖ ಮಾಡುವ ಪದ್ಧತಿ ಕೂಡ ಕೆಲವು ಬರವಣಿಗೆಯಲ್ಲಿ ಇದೆ. ಇದು ವೈಚಾರಿಕವಾಗಿ ತುಂಬ ಅಪಾಯಕಾರಿಯಾದುದು.